Thursday, May 31, 2007

ಪ್ರಾಸ - ಪ್ರವಾಸ

ದಾಟುತಲೇ ಕನ್ನಡದ ಹೊಸಿಲು
ನೆತ್ತಿಯ ಸುಡಲೆರಗಿತು ತೆಲುಗಿನ ಬಿಸಿಲು
ಭಾಷೆ ಗೊತ್ತಿಲ್ಲ
ದೇಶ ಸುತ್ತಿಲ್ಲ
ಆದರೂ ಮಾನವೀಯತೆಯಿನ್ನೂ ಸತ್ತಿಲ್ಲ

ಗುಂತಕಲ್ಲಿನಿಂದ ಗುತ್ತಿ
ಗುಹೆಯ ಹಂಬಲದಲ್ಲಿ ಸುತ್ತಿ
ರವಿಯ ಕ್ರೋಧ ಸುಡಲು ನೆತ್ತಿ


ಗುತ್ತಿಯಿಂದ ತಾಡಿಪತ್ರಿ, ಮನವು
ಗಹ್ವರಕೆ ಕಾದಿತ್ತು ವಿರಹದೆದೆಯಂತೆ
ಗಹ್ವರವೂ ಕಾದಿತ್ತು ಧಗೆಯಲಿ
ಹವ್ಯವಾಹನನ ಹೊತ್ತ ಹೆದೆಯಂತೆ

ಎತ್ತ ನೋಡಿದರತ್ತ ಬಯಲು
ಬಯಲ ಮೇಲೆ ಸುಡುವ ಬಿಸಿಲು
ಎಲ್ಲ ಕಡೆ ಬರಿಯೆ ಕಡಪ
ಊರ ತುಂಬ ಇದರ ಹಡಪ
ನದಿಯು ಪೆನ್ನಾ ಬರಿದು ಬರಿದು
ಬಾರದೇ ಮಳೆಯು ಇಳೆಗೆ ಸುರಿದು

ಗವಿಯೊಳು ಕವಿಗಳೈವರು
ದಿವಿಯ ಕಾಣ ಹೊರಟೆವು
ದೂರ ದೂರ
ಆಳ ಆಳ
ಇಳಿದಿಳಿದು ತೆವಳಿದೆವು


ಕತ್ತಲೆಯೊಳಿರಲು ಕೃತಕ ದೀಪ
ನೋಡಿ ಇತ್ತೆವವರಿಗೆ ಶಾಪ
ಶಾಪ ಪಾಪಗಳು ನಿಲುಕುವುದೆಂತು ಆಳುವವಗೆ
ಕೂಪ ಧೂಪಗಳಲ್ಲೇ ಇಳಿದರಿಯದವಗೆ


ಮೂರು ಗಂಟೆ - ಹಳೆಯ ಗವಿಯು
ನೂರು ಕನಸಿನಾಳ ಸವಿಯು
ಬೇರಿನಂತೆ ಜೋತ ಬಂಡೆ
ಹೇರಿಕೊಂಡ ಸೊಬಗ ಕಂಡೆ

ಒಳಗೆ ಕೊರತೆಯಾದ ಉಸಿರು
ಸುರಿಸಿ ನೆನೆಸಿತೆಮಗೆ ಬೆವರು
ತೆವಳಿ ಗವಿಯೊಳು ಮೈ-ಕೈ ಕೆಸರು
ಇದಲ್ಲವೇ ಸಾಹಸಿಗಳ ತವರು?
ಗಾಳಿಗಾಗಿ ಕಾದ ಕಾಯಕೆದ್ದಿತು ನವಿರು!

ಬಂಡೆ ಮೇಲೆ ರಂಗೋಲಿ ಗೆರೆಯು
ಬೇಲುಂ ಗವಿಯ ಆಳದ ಕರೆಯು
ಬೇಳಂ ಬೆಳ್ಳಂ
ಬಿಲಂ ಬಿಳ್ಳಂ
ಹೆಸರರಿಯದೇ ಇಟ್ಟ ಕಾಲು
ಫಲಕ ನೋಡಿದೊಡನೆ ಅರಿತು
ಬೇಲುಂ ಎಂಬ ನಾಮಪಾಲು
ಪಯಣ ಸೊಗಸು ಆದರೂ ಹರಿತು

ಬಸ್ಸಿಗಾಗಿ ಕಾಯ್ವ ದೇಹ
ಮೆರೆಸಿತೆಲ್ಲರೊಡನೆ ನೇಹ
ಕಿಶೋರ ಮುಖೇಶ ರಫಿಯ ಹಾಡು
ಉಲಿಯುತ್ತಲಿತ್ತು ಐ-ಪಾಡು

ದೋಸೆ ಮಾವು ಇರುಳ ಉಟದಡಿಗೆ
ಎಳನೀರು ತಂಪನೆಸಗಿ ಅಡಿಗಡಿಗೆ
ಬಸ್ಸು ಆಟೋ ಪಯಣದೆಮ್ಮ ಪಾಡಿಗೆ
ರೈಲು ಮತ್ತೆ ಮರಳಿತೆಮ್ಮ ಗೂಡಿಗೆ

ಬಯಲ ಝಳದೊಳು
ಗುಹೆಯ ಜಳಕೆ
ಶುಭ ಹಾರೈಕೆಯೆಮ್ಮದು
ಶ್ರೀನಿಧಿಯ ಜನುಮ ದಿನಕೆ!

- ಅ
೧೪.೦೫.೨೦೦೭
ಮಧ್ಯಾಹ್ನ ೨ ಗಂಟೆ..