Friday, June 22, 2007

ಪ್ರೆಶ್ನಾತೀತ..

ಕಂಪ್ಯೂಟರು ಎಲ್ಲೆಲ್ಲೂ ರಾರಾಜಿಸುತ್ತಿರುವ ಈ ಕಾಲದಲ್ಲೂ ಅದರ ಬಗ್ಗೆ ಏನೇನೂ ತಿಳಿಯದವರೂ ಇದ್ದಾರೆಂಬುದು ಸತ್ಯ. ಆದರೆ ಅವರನ್ನು ನಾನು ದಡ್ಡರೆನ್ನುತ್ತಿಲ್ಲ. ಅವರುಗಳು ಅದನ್ನು ತಿಳಿದುಕೊಳ್ಳಲೇ ಬೇಕು ಎಂದೂ ಹೇಳುತ್ತಿಲ್ಲ. ಆದರೆ, ಇಂಥವರ ನಡುವೆ "ಹಾರ್ಡ್‍ವೇರ್ ಇಂಜಿನಿಯರುಗಳ" ಪಾಡು ಏನು ಎಂಬುದನ್ನು ಹಾ.ಇಂ.ಗಳೇ ಬಲ್ಲರು. ಯಾಕೆಂದರೆ ಇಂಥವರಿಗೆ ಕಂಪ್ಯೂಟರಿನ ಗಂಧವಿರುವುದಿಲ್ಲವಾದರೂ, ತಮ್ಮ ಮಕ್ಕಳಿಗೆಂದೋ, ತಮ್ಮ ಕಚೇರಿಯ ಕೆಲಸಕ್ಕೆಂದೋ ಕಂಪ್ಯೂಟರನ್ನು ಖರೀದಿಸುವ, ತಮ್ಮ ಮನೆಗಳಲ್ಲಿ (ಕಚೇರಿಗಳಲ್ಲಿ) ಪ್ರತಿಷ್ಠಾಪಿಸುವ ನೆಪದಲ್ಲಿ ಹಾ.ಇಂ. ಗಳ ಮೆದುಳನ್ನು ತಮ್ಮ ಮಧ್ಯಾಹ್ನದ ಊಟಕ್ಕೆ ನೆಂಚಿಕೊಂಡು ತಿಂದುಬಿಡುತ್ತಾರೆ.

ಮೊನ್ನೆ ಶ್ರೀ ಹೇಳಿದಳು, "ನೀನು ಯಾಕೆ ಈ ಕೆಲಸ ಮಾಡೋಕೆ ಬೇಜಾರು ಅಂತೀಯ ಅಂತ ನಂಗೆ ಈಗ ಅರ್ಥ ಆಗ್ತಾ ಇದೆ" ಎಂದು. "ಯಾಕೆ ಏನಾಯ್ತು?" ಎಂದೆ. Actually, ಅವಳ ತಂದೆಯ ಗೆಳೆಯರೊಬ್ಬರ ಮನೆಗೆ ಆಗಮಿಸಿದ ಹೊಸ ಕಂಪ್ಯೂಟರಿಗೆ Windowsನ ಪ್ರತಿಷ್ಠಾಪಿಸಲು ನಾನು ಹೋಗಬೇಕಿತ್ತು. ಆ ಜವಾಬ್ದಾರಿಯನ್ನು ಶ್ರೀ ಹೆಗಲ ಮೇಲೆ ಹಾಕಿ ನಾನು ಪಾರಾದೆ!

"ಯಾಕೆ ಏನಾಯ್ತು?" ನಾನು ಪುನಃ ಕೇಳಿದೆ.

"ವಿಂಡೋಸ್ ಎಲ್ಲಾ install ಆಯ್ತು. ಅವರ ಪ್ರೆಶ್ನೆಗೆ ನನ್ನ ಹತ್ತಿರ ಉತ್ತರವೇ ಇಲ್ಲ"

"ಅದೆಂಥಾ ಪ್ರೆಶ್ನೆ?"

"Software ಎಲ್ಲಾ install ಮಾಡಿದ್ ಆಯ್ತು, hardwareನ ಎಲ್ಲಿ install ಮಾಡೋದು? ಅಂದ್‍ಬಿಟ್ರು!"

.....................................................................................

ಒಬ್ಬರಿಗೆ ಉಚ್ಚಾರಣೆಯ ಸಮಸ್ಯೆ. ಒಂದು ಥರದ ಮಾಲಪ್ರೋಪಿಸಂ. ಅವರು ಕೇಳುವ ಪ್ರೆಶ್ನೆ ಬಹಳ ಆಭಾಸಕಾರಿಯಾಗಿರುತ್ತಿತ್ತು. ಸಧ್ಯ, ಅವರ ಕಾಂಟ್ರಾಕ್ಟ್ ಕಾಟ ಮುಗೀತು. "Arun, I have more data. i have to increase my hard diks" (hard disk) ಎಂದಿದ್ದರು ಒಮ್ಮೆ. ನಗಲೋ ಅಳಲೋ!

.....................................................................................

ಸಂಕೇತಿ ಸಂಘದ ಕಾರ್ಯದರ್ಶಿಗಳು ಆಗ ತಾನೆ ಅರ್ಧ ಗಂಟೆಯ ಮುನ್ನ Windows 2000 ಹಾಕಿಕೊಟ್ಟು ಬಂದಿದ್ದ ನನಗೆ tension ಮಾಡಿಕೊಂಡು ಕರೆ ಮಾಡಿದರು. "ಅರುಣ್, system-ಉ hang ಆಗಿದೆ." ನನಗೆ ಆಶ್ಚರ್ಯ ಆಯಿತು. ಇದೇನಪ್ಪಾ, ಈಗ ತಾನೆ ಹಾಕಿಬಂದಿದೀನಿ, ಇಷ್ಟ್ ಬೇಗ hang-ಆ? Microsoft-ಉ ಅಷ್ಟೊಂದು ಹೋಪ್‍ಲೆಸ್ ಅಲ್ವಲ್ಲಾ, ಎಂದುಕೊಂಡು, "ಯಾವ ಹಂತದಲ್ಲಿ hang ಆಗಿದೆ ಸರ್?" ಎಂದೆ.

"getting started ಅಂತ hang ಆಗಿದೆ".

ಯಾವುದಪ್ಪಾ ಇದು ಎಂದು ಯೋಚಿಸತೊಡಗಿದೆ. ಆಮೇಲೆ ಹೊಳೆಯಿತು. Windows install ಮಾಡಿದ ಮೇಲೆ, ಸಹಾಯಕ್ಕೆಂದು ಬರುವ ವಿಂಡೋ-ನ ಇವರು hang ಅಂತಾ ಇದ್ದಾರೆ ಎಂದು. ಸಹಾಯ ಮಾಡುವವರನ್ನು ಬೈತಾರೆ ಜನ!

ನಾನು ಹೇಳಿದೆ, "ಅದನ್ನ ಕ್ಲೋಸ್ ಮಾಡ್ಬಿಡಿ" ಅಂತ.

ಅವರು ತಮ್ಮ ಆಫೀಸಿನಲ್ಲಿ ಲೆಕ್ಕಪರಿಶೋಧನಾ ಕೆಲಸವನ್ನು ಮಾಡುವುದರಿಂದ ಅವರಿಗೆ ಕಡೇಪಕ್ಷ ತೆರೆದ ವಿಂಡೋ ಕ್ಲೋಸ್ ಮಾಡೋಕೆ ಬರುತ್ತೆ ಎಂದು ನಂಬಿದ್ದೆ. ನನ್ನ ನಂಬಿಕೆ ಸುಳ್ಳು ಮಾಡಲು ಅವರು ಕಾಯುತ್ತಲಿದ್ದರು. "ಹೇಗೆ ಕ್ಲೋಸ್ ಮಾಡೋದು?"

"(ನಿಟ್ಟುಸಿರು ಬಿಟ್ಟು) ಅಲ್ಲಿ, ಕ್ಲೋಸ್ ಬಟನ್ ಇಲ್ವಾ?"

"ಎಕ್ಸ್ (X) ಒತ್ತಬೇಕಾ?"

"ಒತ್ತಿ"

ಅದು ಯಾವುದೋ ಕಾರಣಕ್ಕೆ ಕ್ಲೋಸ್ ಆಗಲಿಲ್ಲ. "ಆಗ್ತಾನೇ ಇಲ್ಲ?"

"ಸರಿ, ಅಲ್ಲಿ exit ಅಂತ ಇದೆ ನೋಡಿ ಅದನ್ನು ಒತ್ತಿ"

"exit ಅಂತ ಇಲ್ವೇ ಇಲ್ಲ ಇಲ್ಲಿ. close ಅಂತ ಇದೆ"

"ಅದನ್ನೇ ಒತ್ತಿ"

"ಹಾಂ ಈಗ ಆಯ್ತು ನೋಡಿ. ನೀವು ಇದನ್ನೆಲ್ಲಾ ಸರೀಗೆ ಮಾಡಿಕೊಡ್ಬೇಕು ನೋಡಿ. ನಿಮ್ಗೆ ದುಡ್ಡು ಕೊಡ್ತೀವಲ್ಲಾ ನಾವು!"
.....................................................................................

ನಮ್ಮ ಶಾಲೆಯಲ್ಲಿ ಹೊಸ ಕಂಪ್ಯೂಟರುಗಳನ್ನು ತರಿಸಿದ್ದಾರೆ. ಹಳೆಯ ಕಂಪ್ಯೂಟರುಗಳಿಂದ data ಎಲ್ಲಾ ಪುನರ್ಬಳಕೆಗೆ ತೆಗೆದುಕೊಳ್ಳಬೇಕೆಂದು ಹಳೆಯ ಹಾ.ಇಂ.ನ ಕರೆಸಿದ್ದರು. ನಾನು ಲ್ಯಾಬಿನಲ್ಲಿ ಏನೋ ಒಂದಷ್ಟು ಮೌಲ್ಯಮಾಪನ ಮಾಡುತ್ತಿದ್ದೆ.

ಹಾ.ಇಂ. ಕೇಳಿದರು, "ಯಾವ systemನಲ್ಲಿದೆ data?"

ಲ್ಯಾಬಿನಲ್ಲಿ ಹತ್ತು ಕಂಪ್ಯೂಟರುಗಳಿವೆ. ಹಳೆಯ ಐದು ಕಂಪ್ಯೂಟರುಗಳು ಕನೆಕ್ಷನ್ ಇಲ್ಲದೆ ಅನಾಥವಾಗಿ ಪೆಟ್ಟಿಗೆ ಸೇರಿವೆ. ಆದರೆ ಹಳೆಯ ಮಾನೀಟರುಗಳು ಮಾತ್ರ ಮೇಜಿನ ಮೇಲೆ ಹೀರೋಗಳಂತೆ ಮೆರೆಯುತ್ತಿವೆ. ಕಛೇರಿಯವರು "ಈ ಎರಡು system ಗಳಲ್ಲೇ ಇವೆ" ಎಂದು ಆ ಮಾನೀಟರುಗಳನ್ನು ತೋರಿಸಿದರು.

"ಅಲ್ಲಲ್ಲಾ.. ಯಾವ ಕಂಪ್ಯೂಟರಿನಲ್ಲಿವೆ ಎಂದು ಕೇಳಿದ್ದು ನಾವು!"

"ಇದೇ ಸರ್.. ಇಲ್ಲೇ ಇವೆ" ಎಂದು ಆ ಮಾನೀಟರಿನ ಹತ್ತಿರ ಹೋಗಿ, ಅದರ ತಲೆಯ ಮೇಲೆ ನಾಯಿಯನ್ನು ಸವರಿದಂತೆ ಸವರಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.

"ಅಯ್ಯೋ, ಇವರಿಗೆ ಹೇಗೆ ತಿಳ್ಸೋದು" ಎಂದು ಜೋರಾಗಿಯೇ ಗೊಣಗಿದ ಹಾ.ಇಂ. "ಅಲ್ಲಾ, ಮೇಡಂ. ಅದು ಬರೀ ಮಾನೀಟರು, ಯಾವ ಕಂಪ್ಯೂಟರಿನಲ್ಲಿದೆ ಅಂತ ಕೇಳ್ತಾ ಇರೋದು!!!" ಎಂದು ಧ್ವನಿಯನ್ನು ಇಡೀ ಶಾಲೆಗೇ ಕೇಳಿಸುವಂತೆ ಏರಿಸಿ ಕೇಳಿದ.

ಆಕೆ ತುಂಬಾ ನಿರಾಶರಾಗಿಬಿಟ್ಟರು. "ಹೌದಾ, ಅದು ಬರೀ ಮಾನೀಟರಾ? ಕಂಪ್ಯೂಟರ್ ಅಲ್ವಾ? ಇರಿ, ಹತ್ತು ನಿಮಿಷ ಆಫೀಸಿನಲ್ಲಿ ಕೇಳ್ಕೊಂಡ್ ಬರ್ತೀನಿ.." ಎಂದು ಹೇಳಿ ಹೊರಟು ಹೋದರು. ಆಮೇಲೆ, ಇವರುಗಳೂ ಲ್ಯಾಬಿನಿಂದ ಹೊರಗೆ ಹೋಗಿಬಿಟ್ಟರು.

.....................................................................................

"ಅರುಣ್, ನನ್ನ ಈ ಮೈಲ್ ಅಲ್ಲಿ ಬರುವ attachmentಗಳನ್ನು ನಾನು open ಮಾಡೋಕೆ ಆಗ್ತಾ ಇಲ್ಲ. ಅರ್ಜೆಂಟಾಗಿ ಮನೆಗೆ ಬನ್ನಿ." ಮೇಡಮ್ ಒಬ್ಬರು ಕರೆ ಮಾಡಿ ಗಾಬರಿಪಡಿಸಿದರು. ನಾನು ಏನೋ ವೈರಸ್ ಇರಬಹುದೆಂದುಕೊಂಡೆ. ಅವರ ಮನೆಗೆ ಹೋಗುವ ಪುರುಸೊತ್ತು ಇರಲಿಲ್ಲ.

"ನಿಮ್ಮ ಈ ಮೈಲ್ ಅನ್ನು ನನಗೆ forward ಮಾಡಿ, ನಾನು ನೋಡ್ತೀನಿ"

ಮೈಲ್ forward ಮಾಡಿದರು. ನಾನು ನೋಡಿದರೆ, ನನ್ನ ಕಂಪ್ಯೂಟರಿನಲ್ಲಿ open ಆಗ್ತಾ ಇದೆ. ಆಮೇಲೆ ತಿಳಿಯಿತು, ಅವರ ಈ ಮೈಲ್ service providerಉ, attachment ಅಲ್ಲಿ text, documents ಎಲ್ಲಾ ಬಿಡೊಲ್ಲ ಅಂತ. ನಾನು ಹೇಳಿದೆ, "msn ಬೇಡ, ಯಾಹೂ ಗೆ ಕಳಿಸಿಕೊಳ್ಳಿ ಸರಿ ಹೋಗುತ್ತೆ"

"ಆದರೆ ನಾನು ಅದರ password ಮರೆತು ಹೋಗಿದ್ದೀನಿ"

"ಹೊಸ account ಮಾಡಿಕೊಳ್ಳಿ"

"ಏನೋಪ್ಪಾ, ಇಪ್ಪತ್ತು ಸಾವಿರ ರೂಪಾಯಿ ಕೊಟ್ಟು ಹೊಸ ಕಂಪ್ಯೂಟರ್ ಖರೀದಿಸಿದರೂ ನನ್ನ ಕಂಪ್ಯೂಟರಿನಲ್ಲಿ ಎಷ್ಟೊಂದು ಸಮಸ್ಯೆ! ನೀವುಗಳೆಲ್ಲಾ ಹೀಗೇನೇ!!"

.....................................................................................

"ನಮ್ಮ ಮನೇಲಿ ಒಂದು ಹಳೆಯ ಕಂಪ್ಯೂಟರ್ ಇದೆ, ಅದನ್ನು ಮಾರಬೇಕು, ಯಾರಾದ್ರೂ ಕೊಂಡುಕೊಳ್ಳೋರು ಇದ್ರೆ ಹೇಳ್ತೀರಾ?" ಇದು ಹಾ.ಇಂ.ಗಳಿಗೆ ಬರುವ ಸಾಮಾನ್ಯ ಕರೆಗಳಲ್ಲೊಂದು. ಆಮೇಲೆ ಅಲ್ಲಿಗೆ ಹೋಗಿ ನೋಡಿದರೆ, ಅದು pIIನೋ, pIನ್ನೋ ಆಗಿರುತ್ತೆ. ಅದನ್ನು ಮಾರಿಸುವ ಬಗೆಯಾದರೂ ಹೇಗೆಂದು ಹಾ.ಇಂ.ಗೆ ಸಮಸ್ಯೆಯಾಗುತ್ತೆ. ಹೀಗೊಮ್ಮೆ ನನಗೊಂದು ಕರೆ ಬಂದಿತ್ತು. ಅಲ್ಲಿಗೆ ಹೋಗಿ ನೋಡಿದರೆ ಅದು ಹರಪ್ಪಾ ಮೊಹೆಂಜೊದಾರೋ ಕಾಲದ ಕಂಪ್ಯೂಟರಿನಂತೆ ಕಂಡಿತು. ಅದು 486 ಕಂಪ್ಯೂಟರು!

"ಇದನ್ನು ಮಾರಿಸಿಕೊಡಬೇಕಾ?" ಎಂದೆ.

"ಎಷ್ಟು ಬರಬಹುದು?" ಅವರು ಕೇಳಿದರು.

"ನೀವು ಎಷ್ಟು ನಿರೀಕ್ಷೆ ಮಾಡುತ್ತಿದ್ದೀರ?"

"ಇದನ್ನು ತೊಗೊಂಡಾಗ ತುಂಬಾ ಖರ್ಚು ಮಾಡಿದ್ದೆ. ಎಲ್ಲಾ ಸೇರಿ ಒಟ್ಟು ಒಂದು ಲಕ್ಷದ ಹತ್ತಿರ!"

ನಾನು ತಲೆ ಸುತ್ತಿ ಬೀಳಲು ಇನ್ನು ಕೆಲವೇ ಕ್ಷಣಗಳಿದ್ದವು. ಅವರು ಮುಂದುವರೆಸಿದರು. "ಈಗ at least ಒಂದು ಇಪ್ಪತ್ತು ಸಾವಿರ ಬರುತ್ತಾ?"

ಆಶಾವಾದಿಗಳು. ಆದರೆ ಅವರಿಗೆ ನಿರಾಶೆಗೊಳಿಸುವುದಾದರೂ ಹೇಗೆ? ಪಾಪ,ಲಕ್ಷ ಖರ್ಚು ಮಾಡಿದ್ದಾರೆ. ನಾನು, "ಅಷ್ಟೊಂದು ಬರೋದು ಡೌಟು ಸರ್, ಇನ್ನೊಂದ್ ಸ್ವಲ್ಪ ಕಡಿಮೆ ಆಗುತ್ತೆ"

"ಕಡಿಮೆ ಅಂದ್ರೆ? ಹತ್ತು ಸಾವಿರ?"

"ನಂಗೇನೋ ಡೌಟು!"

"ಹೋಗಲಿ ಐದು ಸಾವಿರ?"

"ಹುಡುಕ ಬೇಕು ಸರ್.."

"ಹೌದಾ? ಎರಡು ಸಾವಿರ?"

"ವಿಚಾರಿಸುತ್ತೀನಿ, ಸಿಕ್ಕರೆ ಹೇಳ್ತೀನಿ, ಒಂದು ತಿಂಗಳಾಗಬಹುದು, ಅಥವಾ ಎರಡು ತಿಂಗಳಾಗ ಬಹುದು ಅಥವಾ ಆರು ತಿಂಗಳೂ ಆಗಬಹುದು, ಗಿರಾಕಿ ಸಿಗೋಕೆ!

"ಹೌದಾ? ಒಂದು ಸಾವಿರಕ್ಕಾದರೂ ಹೋಗುತ್ತ?"

"Actually, ಈ ಕಂಪ್ಯೂಟರು free ಆಗಿ ಕೊಟ್ಟರೂ ಹೋಗಲ್ಲ ಸರ್.. ಕ್ಷಮಿಸಿ.."

"ಬೇಡಾ ರೀ, ನಾನು ಮಾರೋದೇ ಇಲ್ಲ. ಇನ್ನು ಹತ್ತು ಲಕ್ಷ ಆದರೂ ಸರಿ, ನಾನು ಹೊಸ ಕಂಪ್ಯೂಟರನ್ನು ತರ್ತೀನಿ, ಲೇಟೆಸ್ಟು. ನಿಮ್ ಹತ್ರ ಅಂತೂ ತೊಗೋಳಲ್ಲ.." ಎಂದು ಸಿಟ್ಟು ಮಾಡಿಕೊಂಡರು. ನಾನು, "ತೊಗೊಳಿ ಸರ್. ಹದಿನೈದು ಸಾವಿರ ಖರ್ಚಿ ಮಾಡಿ ಸಾಕು ಹತ್ತು ಲಕ್ಷ ಬೇಡ." ಎಂದು ಹೇಳಿ ಈ ಹಾ.ಇಂ. ಕೆಲಸದ ಸಹವಾಸವೇ ಸಾಕೆಂದು ಅವರ ಮನೆಯಿಂದ ಹೊರಟುಬಂದೆ.

.....................................................................................

- ಅ
15.07.2007
2AM

ಅಮ್ಮನಿಗೆ ಕಂಟ್ರಿ ಕ್ಲಬ್ಬಿನ ಕರೆ..

ಅಮ್ಮನ ಮೊಬೈಲ್‍ಗೆ ಕಂಟ್ರಿ ಕ್ಲಬ್ಬಿನವರು ಕರೆ ಮಾಡಿದ್ದರಂತೆ.. ಡೈಲಾಗುಗಳು ಈ ರೀತಿಯಿವೆ.. ಅವರು ಏನು ಹೇಳಿದ್ದರು ಅನ್ನೋಕಿಂತ ಅಮ್ಮ ಏನು ಅರ್ಥ ಮಾಡಿಕೊಂಡರು ಅನ್ನೋದು ಮುಖ್ಯ. ಅಮ್ಮನ ದೃಷ್ಟಿಕೋನದಲ್ಲೇ ಬರೆಯುತ್ತೇನೆ. ಅಮ್ಮ ಹೇಳಿದ ಹಾಗೇ...

ಕಂ.ಕ್ಲ: "ಹಲೋ, ಕಂಟ್ರಿ ಕ್ಲಬ್ಬಿನಿಂದ ಫೋನ್ ಮಾಡ್ತಾ ಇದ್ದೀವಿ, free offer ಇದೆ, ಬೇಕಾ?"

ಅಮ್ಮ: "ಫ್ರೀ offer-ಆ? ಏನು ?"

"ಗೋವಾ ಫ್ರೀ"

"ಓಹ್.."

"ಬಂಡಿಪುರ.. ಫ್ರೀ"

"ಫ್ರೀ ನಾ?"

"ನಲವತ್ತು ಸಾವಿರದಷ್ಟು ಫ್ರೀ.."

"ಓಹ್.. ಎಲ್ಲಾ ಫ್ರೀನಾ?"

"ಹೌದು ಮೇಡಂ, ನೀವು member ಆಗ್ಬೇಕು.."

"ಏನ್ ಮಾಡ್ಬೇಕು?"

"ಒಂದು ಲಕ್ಷದ ಇಪ್ಪತ್ತೈದು ಸಾವಿರ ಕೊಟ್ಟು member ಆಗ್ಬೇಕು.. ಆಗ ಎಲ್ಲಾ ಫ್ರೀ.."

"ಫ್ರೀ ಏನ್ ಬಂತು ಮತ್ತೆ?"

"ಈ ಈವೆಂಟ್‍ಗಳನ್ನೆಲ್ಲಾ ಫ್ರೀಯಾಗಿ ಕೊಡ್ತೀವಿ.."

"ಎಲ್ಲಾ ಫ್ರೀ ಅಂದ್ರಿ?

"ಮೆಂಬರ್‍ಗಳಿಗೆ ಎಲ್ಲಾ ಫ್ರೀ ಮೇಡಂ, ನಲವತ್ತು ಸಾವಿರ ರೂಪಾಯಿ worth-ಉ"

"ಅಯ್ಯೋ ಆಗಲ್ಲಮ್ಮಾ..."

"ನೋಡಿ ಮೇಡಂ ಒಳ್ಳೇ ಆಫರ್ರು.."

"ಫ್ರೀ ಅಂದು ಲಕ್ಷ ಕೊಡಿ ಅಂದ್ರೆ ಹೇಗೆ? ಆಗಲ್ಲ.."

"ಸರಿ ಮೇಡಂ.."

Sunday, June 17, 2007

ತೋಟದ ಹೂ ನಾನು..


ನಮ್ಮ ಚಾರಣದ ಟೀಮಿನ ಬಗ್ಗೆ ಬರೆದು ಶತಮಾನಗಳೇ ಕಳೆದಿವೆ. ಈಗ ಅದೇ ರೀತಿಯ ಇನ್ನೊಂದು ಗುಂಪಿನ ಬಗ್ಗೆ ಬರೆಯುವ ಮನಸ್ಸಾಗಿದೆ.

ಇಲ್ಲಿ ಆ ಗುಂಪಿನ ಒಬ್ಬೊಬ್ಬ ಸದಸ್ಯರ ಬಗ್ಗೆ ಬರೆಯದೇ, ಇಡೀ ತಂಡದ ಬಗ್ಗೆ ಬರೆಯುತ್ತಿದ್ದೇನೆ. ಮತ್ತೆ ನಾನು ಹೇಗೆ ಎಲ್ಲಿಂದಲೋ ಬಂದು ಎಲ್ಲಿಗೋ ಅಂಟುಕೊಂಡಿದ್ದೇನೆಂಬುದನ್ನು ಚಿತ್ರಿಸಲೆತ್ನಿಸುತ್ತಿದ್ದೇನೆ. ಅವರುಗಳಿಗೆಲ್ಲಾ ಇದು ಗೊತ್ತಿರುವ ಸಂಗತಿಯೇ. ಆದರೆ ನನಗೆ ಇದನ್ನೆಲ್ಲಾ ಬರೆದಿಡಬೇಕೆನಿಸಿತು. ಆದಕಾರಣ ಬರೆಯುತ್ತಿದ್ದೇನಷ್ಟೆ.

ಗುಂಪಿನ ಮನುಜ


ನಾನು ಗುಂಪಿನ ಮನುಜ ಅಲ್ಲವೇ ಅಲ್ಲ ಎಂದು ತೀರ್ಮಾನಿಸಿಬಿಟ್ಟಿದ್ದೆ. ನನ್ನ ಇಡೀ ಪ್ರೈಮರಿ ಸ್ಕೂಲಿನಲ್ಲಿ ನನಗಿದ್ದುದು ಒಬ್ಬನೇ ಮಿತ್ರ. ಮಿಡ್ಲ್ ಸ್ಕೂಲಿನಲ್ಲಿ ಒಂದಿಬ್ಬರು ಮೂರು ಜನರು ನನ್ನ ಗೆಳೆಯರಾದರೇ ಹೊರೆತು, ಯಾರೂ ಹತ್ತಿರವಾಗಲಿಲ್ಲ. ನಂತರ ಹೈಸ್ಕೂಲಿನಲ್ಲಿ ಇಬ್ಬರು ಮಿತ್ರರು, ಪಿಯುಸಿಯಲ್ಲಿ ಒಬ್ಬ, ಡಿಗ್ರಿಯಲ್ಲಿ ಇಬ್ಬರು ಮಿತ್ರರು. ನಾನಾಯ್ತು, ಶಾಲೆ (ಕಾಲೇಜು) ಆಯ್ತು, ಮನೆಯಾಯ್ತು, ನನ್ನ ಈ ಸ್ನೇಹಿತರಾಯ್ತು.. ಇಷ್ಟೆ ನನ್ನ ಪ್ರಪಂಚ. "ಅರುಣನ ಗೆಳೆಯರು" ಅಂತ ಯಾರೂ ಹೇಳ್ತಾನೇ ಇರಲಿಲ್ಲ. "ಅದೇ ಅರುಣನ ಫ್ರೆಂಡು" ಅಂದ ತಕ್ಷಣ ಎಲ್ಲರಿಗೂ ಗೊತ್ತಾಗಿಬಿಡುತ್ತಿತ್ತು ಇರೋದು ಒಬ್ಬನೇ, ಅವನ ಬಗ್ಗೆಯೇ ಎಲ್ಲರೂ ಮಾತನಾಡುತ್ತಿರುವುದು ಎಂದು.

ಚಿಕ್ಕಂದಿನಿಂದಲೂ ನಾನು ಎಂದೂ ಗುಂಪು ಕಟ್ಟಿಕೊಂಡು ಓಡಾಡುವ ಹುಡುಗನಾಗಿರಲಿಲ್ಲ. ಗುಂಪಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಕಾಲೇಜಿನಲ್ಲಿ ಎಲ್ಲರೂ ಒಂದಾದರೆ, ನಾನೇ ಒಂದಾಗಿದ್ದೆ. ನನ್ನ ಪಾಡಿಗೆ ನಾನಿದ್ದೆ. ಅವರೆಲ್ಲಾ ಸಿನಿಮಾಕ್ಕೆ ಹೋದರೆ ನಾನು ಅವರಿಂದ ತಪ್ಪಿಸಿಕೊಂಡರೆ ಸಾಕು ಎಂಬಂತೆ ನನ್ನ ಬೈಕನ್ನೇರಿ ಮನೆಗೆ ಹೊರಟುಬಂದುಬಿಡುತ್ತಿದ್ದೆ. ಗುಂಪೆಂದರೆ ಅಲರ್ಜಿ. ನನಗೆ ಗುಂಪಿನಲ್ಲಿ ಭಾಗವಹಿಸಲು ಬರುತ್ತಲೂ ಇರಲಿಲ್ಲ. ಹತ್ತು ಜನರಿದ್ದರೆ ಸಾಕು, ನಾನು ಮೌನಿಯಾಗಿಬಿಡುತ್ತಿದ್ದೆ. ನನ್ನ ಅನಿಸಿಕೆಗಳನ್ನು, ಐಡಿಯಾಗಳನ್ನು ಎಂದಿಗೂ ಹಂಚಿಕೊಂಡವನಾಗಿರಲಿಲ್ಲ. ನನ್ನ ಸಂತಸವು, ನನ್ನ ದುಃಖವು, ನನ್ನ ಹಿಂಸೆಯು, ನನ್ನ ಬೀಭತ್ಸಗಳು, ನನ್ನ ಪ್ರೀತಿಯು, ನನ್ನ ಆಸೆಯು, ನನ್ನ ಸೋಲು, ನನ್ನ ಗೆಲುವು - ನನ್ನೊಳಗೇ ಇದ್ದುವು. ಗುಂಪೆಂದರೆ ಹೆದರೋಡುವಂತಿದ್ದೆ.

ಇಂಟ್ರೊಡಕ್ಷನ್ನು


Rambling Holiday Makers ಮಾಡುವ ಮುಂಚೆ ನಾನು ನನ್ನ ವಯಸ್ಸಿನ ಗುಂಪಿನವರಿಂದ ಸಂಪೂರ್ಣವಾಗಿ ದೂರವಾಗಿದ್ದೆ ಎಂದರೂ ತಪ್ಪಿಲ್ಲ. ನನ್ನ ಸ್ನೇಹವರ್ಗದವರೆಲ್ಲಾ ಏನಿದ್ದರೂ ಹಿರಿಯ ನಾಗರೀಕರಾದ ಸತ್ಯಪ್ರಕಾಶರು, ನನಗಿಂತ ಹಿರಿಯರಾದ ಅಥವಾ ಕಿರಿಯರಾದ ನನ್ನ ಕಝಿನ್ನುಗಳು, ನನ್ನ ಅಕ್ಕ - ಭಾವ, ಅಡ್ವೆಂಚರ್ ಗುರುಗಳಾದ ರಾಜೇಶ್ - ಇಷ್ಟಕ್ಕೇ ಸೀಮಿತವಾಗಿತ್ತು. ನಂತರ ಶ್ರೀನಗರದ ಹುಡುಗರೆಲ್ಲಾ ಒಟ್ಟಾಗಿ ಗುಂಪಾಯಿತು. ಛಿದ್ರವಾಗಿದ್ದ ಗುಂಪನ್ನು ಒಂದು ಮಾಡಿದ್ದಕ್ಕೆ ಯಾಹೂ ಗ್ರೂಪ್ಸ್‍ಗೆ ಒಂದು ಥ್ಯಾಂಕ್ಸ್ ಹೇಳಬೇಕು. ಶ್ರೀನಗರದ ಬಹುಪಾಲು ಸದಸ್ಯರು ನನ್ನ ಬಾಲ್ಯಸಖಸಖಿಯರೇ.


ಅನ್ನಪೂರ್ಣ, ಡೀನ್‍ರಂಥಹ ಎರಡು ರತ್ನಗಳನ್ನು ಕರುಣಿಸಿದ್ದು ಚಾರಣವೆಂಬ ಹವ್ಯಾಸ. ಗೋವಿಂದ್ ರಾಜ್ ಎಂಬ ಹಿರಿಯರು, ಪರಿಚಿತರಾಗಿದ್ದು, ಅನೇಕ ಪಯಣಗಳನ್ನು ಮಾಡಿದ್ದಾಯ್ತು ಅವರ ಜೊತೆ. ಶ್ರೀಕಾಂತನು ಕಂಪ್ಯೂಟರಿನ ದೆಸೆಯಿಂದ ಪರಿಚಿತನಾದನಾದರೂ, ಟ್ರೆಕ್ಕಿಂಗ್ ಇಂದ ಸ್ನೇಹಿತನಾದ. ಶ್ರೀನಿಧಿಯೆಂಬ 'ಕಲೆ'ಯು ಸಹ ಚಾರಣದ ತಂಡಕ್ಕೆ ಸೇರಿ ತಂಡದ ಅವಿಭಾಜ್ಯವಾಗಿರುವುದು ನನ್ನ ಪುಣ್ಯ! ಈ ಲೇಖನದ introduction ಇಷ್ಟು! ಮುಂದಿದೆ ಮುಖ್ಯ ಕಥೆ!

ಮೊಮ್ಮಕ್ಕಳಾಗಮನ


ಒಂದು ವಯಕ್ತಿಕ, ಅನಿವಾರ್ಯ ಸಮಸ್ಯೆಯಲ್ಲಿದ್ದಾಗ ಚಾರಣದ ಸದಸ್ಯರಾಗಿ ಬಂದಿದ್ದು ಶ್ರೀ, ಶೃತಿ ಹಾಗೂ ಸಿಂಧು. ಮೊಮ್ಮಕಳೆಂದೇ ಕರೆಯುತ್ತೇನೆ! ಇವರು ಚಾರಣದ ಸದಸ್ಯರಷ್ಟೇ ಆಗಿದ್ದಿದ್ದರೆ ನಾನು ಈ ಲೇಖನವನ್ನು ಬರೆಯುತ್ತಲೇ ಇರಲಿಲ್ಲ. ಒಂದು ಬಗೆಯ ನಗೆಯನ್ನು ತಂದ ಹೂಗಳು ಇವರು. ಇವರ ಮೈತ್ರಿ ಬಳಗ ಹಿರಿದೆಂದು ನನಗೆ ಅರಿವಾಗಿದ್ದೇ ಇವರ ಪರಿಚಯವಾಗಿ ಎರಡು ವರ್ಷ ಸಂದ ನಂತರ. ನಾನೆಂದೂ ಕಂಡರಿಯದಂಥ ಬಾಡಲರಿಯದಂಥ ಹೂಗಳ ತೋಟ ಈ ಗುಂಪು. ಇವರುಗಳ ಜೊತೆಯಿದ್ದರೆ, ನಾನು ಇವರುಗಳ ಜೊತೆಗೇನೇ ಓದುತ್ತಿದ್ದೇನೇನೋ ಕಾಲೇಜಿನಲ್ಲಿ ಎಂದೆನಿಸುತ್ತೆ. ವಯಸ್ಸಿನಲ್ಲಿ ಅಂಥ ವ್ಯತ್ಯಾಸವಿಲ್ಲದೇ ಇದ್ದರೂ ನನ್ನ ಸಹಪಾಠಿಗಳಂತೆಯಂತೂ ಇವರುಗಳಿಲ್ಲ. ಆದರೆ, ನಾನು ಇವರುಗಳ ಸಹಪಾಠಿಯಾಗಲಿಲ್ಲವಲ್ಲಾ ಎಂಬ ಕೊರತೆಯ ನೆರಳೊಂದು ಬದುಕಿನುದ್ದಕ್ಕೂ ನನ್ನೊಡನೆ ನಡೆಯುತ್ತಿರುತ್ತೆ.

ಕೊಡಚಾದ್ರಿಯ ಪ್ರವಾಸವು ಇವರ ಒಕ್ಕೂಟಕ್ಕೆ ಮೊದಲ ಹೆಜ್ಜೆಯಂತೆ. ನನಗೆ ಗೊತ್ತಿಲ್ಲ. ನಾನು ಆ ಅವರೊಡನೆ ಪಯಣಕ್ಕೆ ಹೋಗಲು 'ಓ ಮನಸೇ.." ಬಿಡಲಿಲ್ಲ. ಹೋಗಿದ್ದಿದ್ದರೆ, ಆರು ತಿಂಗಳುಗಳ ಮುನ್ನವೇ ಒಂದು ಗುಂಪಿನ ಸದಸ್ಯನಾಗಿಬಿಡುತ್ತಿದ್ದೆನೆಂದೆನಿಸುತ್ತೆ. I was never a team man. ಟೀಮಿನಲ್ಲಿ ಹೇಗಿರಬೇಕೆಂಬುದೇ ನನಗೆ ತಿಳಿಯದ ವಿಷಯವಾಗಿತ್ತು. ಇದನ್ನು ಕಲಿಸಿಕೊಟ್ಟಿದ್ದೇ ಈ ಹುಡುಗರು - ಕೊಡಗಿನ ಪ್ರವಾಸದಲ್ಲಿ. ಆರ್.ಎಚ್.ಎಮ್.ನ ನಾಯಕನಾಗಿದ್ದರೂ ಟೀಮ್ ಮನುಷ್ಯನಾಗಿ ನಾನು ಅಂಥ ಸಾಧನೆಗಳೇನೂ ಮಾಡಿರಲಿಲ್ಲವೆಂದೆನಿಸುತ್ತೆ. ನನ್ನನ್ನು follow ಮಾಡುವ ಚಾರಣಿಗರಿರುತ್ತಿದ್ದರು, ಇಲ್ಲವೇ ನನ್ನನ್ನು lead ಮಾಡುವಂಥ ಡೀನ್, ಅನ್ನಪೂರ್ಣರಂಥ ಹಿರಿಯರಿರುತ್ತಿದ್ದರು. ಪಯಣಗಳು ನನಗೆ ಹೊಸತಾಗಿರಲಿಲ್ಲ, ಆದರೆ, ಅಂಥ ಪಯಣವು ಹಿಂದೆಂದೂ ಕೈಗೊಂಡಿರಲಿಲ್ಲ. ನನ್ನ ಪಯಣಗಳೇನಿದ್ದರೂ ಒಂದು ಅಚ್ಚುಕಟ್ಟಾದ ಸಾಹಸಭರಿತ ಕಾರ್ಯಕ್ರಮಗಳಿಂದ ಕೂಡಿದ್ದು, ಜವಾಬ್ದಾರಿಗಳನ್ನು ಹೆಗಲ ಮೇಲೆ ಹಾಕಿಕೊಳ್ಳುವುದಾಗಿತ್ತು. ಕೊಡಗಿನ ಪ್ರವಾಸ ಅಂತಿರಲಿಲ್ಲ. ಜವಾಬ್ದಾರಿಗಳ ಬೇತಾಳ ನನ್ನೊಡನೆ ಇದ್ದರೂ, ನಾನು ಪಯಣದಲ್ಲಿ ಇವರೆಲ್ಲರಿಗಿಂತ ಅನುಭವಿಯೆಂಬ ಭೂತ ನನ್ನ ಮೆದುಳಿನಲ್ಲಿದ್ದರೂ ನನಗೊಂದು ವಿರಾಮವನ್ನು ಕರುಣಿಸಿತು. ನಾನು ನನ್ನ ತಮ್ಮ ತಂಗಿಯರ ಜೊತೆಗೆ ಸಂತೋಷಕೂಟದಲ್ಲಿದ್ದೇನೇನೋ ಎಂಬ ಭಾವನೆ ಮೂಡಿಸುತ್ತಿತ್ತು. ಇರುಳಲ್ಲಿ ಮಕ್ಕಳಂತೆ ಆಡಿದ ಗುಟ್ಟಾಟ, ಕೊಡಗಿನ ಮಳೆಯಲ್ಲಿ ಸುತ್ತಿದ್ದು, ಹುಣಸೂರಿನ ಗಂಭೀರ ಚರ್ಚೆ, ದಿಲ್ ಆಜ್ ಶಾಯರ್ ಹೈ, ಇವೆಲ್ಲಾ ನನ್ನನ್ನೂ ಇವರುಗಳನ್ನೂ ಹತ್ತಿರಕ್ಕೆ ಕರೆದೊಯ್ಯಿತು.

ಶ್ರೀನಿವಾಸನ ಮನೆಯ ಹರಟೆ ಪ್ರವಾಸವಂತೂ ಅದ್ಭುತವಾಗಿತ್ತು. ಎಲ್ಲರ ಮನಸ್ಸೂ ತೆರೆದ ಪುಸ್ತಕಗಳಾಗಿದ್ದವು. ಆಡದ ವಿಷಯಗಳಿಲ್ಲ, ಹಾಡದ ಗೀತೆಗಳಿಲ್ಲ. ಮುಂದಿನ ಪ್ರವಾಸಕ್ಕೂ ಪ್ಲಾನ್ ಮಾಡುವ ಮಟ್ಟಿಗೆ ಹೋಗಿಬಿಟ್ಟಿದ್ದೆವು.

ತಡಿಯಾಂಡಮೋಳ್ ಚಾರಣದಲ್ಲಿ ಹೊಸವರ್ಷ ಮಾತ್ರ ಆಚರಿಸಲಿಲ್ಲ, ಹೊಸ ಜ್ಯೋತಿಯನ್ನೇ ಬೆಳಗುವಂತಿತ್ತು. ಪ್ರವಾಸಗಳ ಯೋಜನಾಪಟ್ಟಿಯು ಹಿರಿದಿದೆ. ದಿನದಿಂದ ದಿನಕ್ಕೆ ಸಕಲರೂ ಹತ್ತಿರ ಹತ್ತಿರರಾಗುತ್ತಿದ್ದಾರೆ ಎದೆಯಾಳಕ್ಕೆ! ಪ್ರವಾಸಗಳು ಸ್ನೇಹವನ್ನು ಬೆಳೆಸುತ್ತೆ. ಜೊತೆಗೆ ಇಂಟರ್‍ನೆಟ್ಟು ಕೂಡ!ಸಿನೆಮಾಕ್ಕೆ ಹೋಗ್ತಾ ಇದ್ದೀವಿ, ಬರ್ತೀಯಾ?, ನಮ್ಮ ಮನೆಯಲ್ಲಿ ಫಂಕ್ಷನ್ನು, ತಪ್ಪದೇ ಬಾ, ನನ್ನ ಟ್ರೀಟು ಬರ್ಬೇಕಪ್ಪಾ.. ಹೀಗೆಲ್ಲಾ ಕರೆದಾಗ ಅನ್ನಿಸುತ್ತಿತ್ತು, "ನನ್ನನ್ನು ಇವರು ಕರೆಯುವಂಥದ್ದಾದರೂ ಏನಿದೆ? ವಾಸ್ತವವಾಗಿ ನಾನು ಯಾರು?" ಎಂದೆಲ್ಲಾ! ಆದರೆ, ಆ ಪ್ರೆಶ್ನೆಯು ಹರ್ಷದ ಉತ್ತರವನ್ನು ನೀಡತೊಡಗಿತ್ತು. ನನ್ನನ್ನೂ ತಮ್ಮವನೆಂದು ಪರಿಗಣಿಸುತ್ತಾರಲ್ಲಾ, ನಾನೇ ಧನ್ಯ ಎಂದು. ನಾನು ಇವರ್ಯಾರಿಗೂ ಬಾಲ್ಯಸಖನಲ್ಲ, ಸಹಪಾಠಿಯಲ್ಲ. ಬಹಳ ಅಪರೂಪದ ಮೈತ್ರಿಯೆಂದು ಮನದೊಳಗೇ ಮುದಗೊಳ್ಳುವಂತಾಗುತ್ತೆ! ನಾನು ಇವೆಲ್ಲಾ ಅವರುಗಳಿಗೆ ಹೇಳಬೇಕೋ ಕೂಡದೋ ಗೊತ್ತಿಲ್ಲ. ಆದರೆ ಬರೆಯಬೇಕೆಂದು ಅನ್ನಿಸಿತು, ಬರೆದುಬಿಟ್ಟೆ. ಎಲ್ಲಾ ಗೊತ್ತಿರೋ ವಿಷಯವೇ.


ಅನೇಕ ವಿಷಯಗಳನ್ನು ಹೇಳಲು ಪದಗಳಿಲ್ಲ. ಅನುಭವಗಳನ್ನು ಮಾತ್ರ ಹಂಚಿಕೊಳ್ಳಬಹುದು. ಅಂದು ಇದ್ದ ನಾಕು ಜನರು ಮೂರು ಗಾಡಿಯಲ್ಲಿ ಹೋಗಿದ್ದೆವು (ಶ್ರೀ, ನಾನು, ಶೃತಿ, ಸಿಂಧು). ನಾನೊಂದು ಗಾಡಿ. ಶೃತಿ - ಸಿಂಧು ಒಂದು ಗಾಡಿ, ಶ್ರೀ ಒಂದು ಗಾಡಿ. ಅದೇನೋ ಸಂಕೋಚ! ಇಂದು ಅದನ್ನೆಲ್ಲಾ ನೆನೆಸಿಕೊಂಡರೆ ನಗು ಬರುತ್ತೆ. ಈಗ ಯಾವುದೋ ಜನ್ಮದಿಂದ ಒಟ್ಟಿಗೇ ಇದ್ದೇವೇನೋ ಅಂದೆನಿಸುತ್ತೆ. ಶ್ರೀಧರನನ್ನು "ಬನ್ನಿ-ಹೋಗಿ" ಅನ್ನುತ್ತಿದ್ದೆ. ಈಗ ಸಕಲ ಸಕ್ಕದವನ್ನೂ ಆಡುತ್ತಿರುತ್ತೇವೆ ಒಟ್ಟಿಗೆ ಸೇರಿ ಕಾಫಿ ಹೀರುತ್ತ. 'ಸ್ವರೂಪ ನನ್ನ ಸಂಬಂಧಿಕನಂತೆ' ಎಂಬ ಅಂಕಣ ನಾನು ಸಹಾರ ಪತ್ರಿಕೆಗೆ ಬರೆದಾಗ ಅವನ ಬಗ್ಗೆ ಅಷ್ಟೇ ಗೊತ್ತಿದ್ದು. ತಿಳಿವಿನೋದದ ಸ್ವರೂಪನೀಗ ಸ್ನೇಹಿತ, ಸಂಬಂಧಿಕನಲ್ಲ. ಪುಣೆಗೆ ಹೊರಟಿದ್ದ ಶ್ರೇಯಸ್ಸಿಗೆ ಪುಸ್ತಕ ಕೊಡಲು ನಾನು ಹಾತೊರೆದು ಹೋಗಿದ್ದನ್ನು ಹೇಗೆ ಮರೆಯಲಿ! ಆತನಿಗೆ ಆ ಪುಸ್ತಕಗಳನ್ನು ಅಂದೇ ಕೊಡಬೇಕೆಂದು ಮನಸ್ಸು ಹೇಳಿತ್ತು. ಹಾರ್ಡ್-ಡಿಸ್ಕ್ ಭೀಮರಾಯರ ಪರಿಚಯದ ಹೊಸತರಲ್ಲಿ ಎಷ್ಟೊಂದು ಆಡಿಕೊಂಡಿದ್ದರೂ, ಆಕೆಯ ಸಾಹಸಪ್ರವೃತ್ತಿಯನ್ನು ನಿಜಕ್ಕೂ ಮೆಚ್ಚುತ್ತೇನೆ. ಯಾವುದಕ್ಕೆ, ಯಾವ ಹೊತ್ತಿನಲ್ಲಿ ಬೇಕಿದ್ದರೂ ಸೈ! ಸಿಂಗರ್ ಶೃತಿಯ ಹಾಡನ್ನು ಮರೆತರೆ ಕೊಡಗಿನ ಪ್ರವಾಸವನ್ನೇ ಮರೆತಂತೆ. ಮಾತಿಲ್ಲದಿದ್ದರೂ ಮೌನದಿಂದ ಗೌರವಿಸುವ ವಿವೇಕನನ್ನು, ಸಂತೋಷನನ್ನು ನಾನೂ ಅಷ್ಟೇ ಗೌರವಿಸುತ್ತೇನೆ. ಕನ್ನಡ ಕಣ್ಮಣಿಯ ನುಡಿಮುತ್ತುಗಳನ್ನು ಮರೆಯುವುದಾದರೂ ಹೇಗೆ! ಸರ್ಕಲ್ ಮಾರಮ್ಮನ ಅಪರಾವತಾರವೆಂದು ಕರೆಯಲ್ಪಟ್ಟರೂ ಶಿಶುಕಳೆಯ ಸ್ಮಿತೆಯ ಸ್ಮಿತೆಯು ಸರಸತಿಯ ಕಳೆಯನ್ನು ಮುಖದಲ್ಲಿ ಮೂಡಿಸುತ್ತೆ! ಸಾಹಿತ್ಯ, ಪಯಣ, ಸಂಗೀತ, ಸಮಚಿತ್ತ, ಚರ್ಚೆ, ವಿನೋದ, ಚಹಾ, ಸಕಲದಲ್ಲೂ ಭಾಗಿಯಾಗಿರುವ ಗಂಡಭೇರುಂಡ ಹಾಗೂ ಶ್ರೀಧರನ ಗೆಳೆತನದ ಪುಣ್ಯ ನನ್ನದಾಗಿದೆ. ಲೆಕ್ಕವಿಲ್ಲದಷ್ಟನ್ನು ಕಲಿತಿದ್ದೇನೆ ಎಲ್ಲರಿಂದಲೂ. ಅನೇಕ ಕೊರತೆಗಳನ್ನು ನೀಗಿಸುವ ಪುಣ್ಯ ಅವರುಗಳದ್ದಾಗಿದೆ! ಈ ಎಲ್ಲಾ ಅಮರ್ದುಗಳು ನನ್ನ ವಿಶ್ವದಲ್ಲಿ ರಾರಾಜಿಸಲು ಆ ಮೂರು 'ಮೊಮ್ಮಕ್ಕಳಿಗೆ' ನಾನು ಸಕಲ ಒಲವಿನ ನಮನಗಳನ್ನು ಸಲ್ಲಿಸುತ್ತೇನೆ. ಇದನ್ನು ಬರೆಯಬೇಕು ಅಂತ ಅದೇಕೋ ಅನ್ನಿಸಿತು. ಅವರುಗಳು ಓದಲೆಂದಲ್ಲ. ಅವರುಗಳಿಗೆ ಗೊತ್ತಿರೋ ವಿಷಯಗಳೇ. ಯಾರಿಗೂ ಏನೂ ಉಡುಗೊರೆಯನ್ನು ನಾನು ಕೊಟ್ಟಿಲ್ಲ. ಈ ಲೇಖನವನ್ನು ಅರ್ಪಿಸುತ್ತಿದ್ದೇನೆ ಸಕಲ ಅಮರ್ದುಗಳಿಗೆ!ಸ್ನೇಹ ಸೇತುವೆಗಳು ಅನೇಕವಿವೆ. ಆದರೆ, ನನ್ನನ್ನು ಈ ಸೇತುವೆಯನ್ನು ದಾಟಿಸಿ ತಮ್ಮ ತೀರದೆಡೆಗೆ ಕರೆದೊಯ್ಯುವ ಅನಿವಾರ್ಯತೆ ಅವರುಗಳಿಗಿರಲಿಲ್ಲ. ಆದರೂ ಹಾಗೆ ಮಾಡಿದ್ದಾರೆ. ಹೊರಗಿನವನೆಂದು ಎಂದೂ ಪರಿಗಣಿಸಿಲ್ಲ. ಆ ದಡಕ್ಕೆ ಹೋಗುವಂಥ ಅರ್ಹತೆಗಳಾದರೂ ಏನಿದೆ ನನಗೆ ಎಂಬ ಅಲೋಚನೆ ಅನೇಕ ಬಾರಿ ನನ್ನನ್ನು ಕಾಡಿದೆ. ನನ್ನ 'ಕಚ್ಚುವಿಕೆ', ದುರಹಂಕಾರ, ಹುಚ್ಚುತನ, ಬಡಬಡಿಕೆ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ. ಈ ಸಹಿಷ್ಣುತೆ, ಒಲವು, ಪ್ರೀತಿ ಶಾಶ್ವತವಾಗಿ ಇರುತ್ತೆಂಬ ನಂಬಿಕೆಯ ಹಡಗಿನಲ್ಲಿ ಪಯಣಿಸುತ್ತಿದ್ದೇನೆ. ವಿಧಿಸಾಗರವು ಉಕ್ಕದಿರಲಿ! ಈ ಮೈತ್ರಿತೋಟವು ಹಸಿರಾಗಿದ್ದು ಬಣ್ಣ ಬಣ್ಣದ ಗೆಳೆಯರೆಂಬ ಹೂಗಳಿಂದ ಕೂಡಿದೆ. ನಾನೂ ಒಂದು ಹೂವು ಈ ತೋಟದಲ್ಲಿ. ಬಾಡದಿರಲಿ ಹೂಗಳು!

- ಅ
30.06.2007
11.50PM

Friday, June 8, 2007

ಬಿ.ಎಸ್.ಎನ್.ಎಲ್‍ಗೊಂದು ಪತ್ರ...

ಗೆ,
ಕನ್ನಡ ಓದಲು ಬರುವ ಸಂಬಂಧ ಪಟ್ಟ ಅಧಿಕಾರಿಗಳು
ಬಿ.ಎಸ್.ಎನ್.ಎಲ್.

ಭಾರತದ ಅತಿದೊಡ್ಡ ನೆಟ್‍ವರ್ಕು ನಮ್ಮದು ಎಂದು ಜಾಹೀರಾತು ನೋಡಿದಾಗ ಬಹಳ ಸಂತಸ ಪಟ್ಟು ಆಶಾವಾದಿಗಳಾಗಿ ಬಿ.ಎಸ್.ಎನ್.ಎಲ್ ಬ್ರಾಡ್ ಬ್ಯಾಂಡ್ ಅಂತರ್ಜಾಲವನ್ನು ಬಳಸುತ್ತಿರುವ ನಮ್ಮಂಥವರ ಪಾಡು ಇಂದು ಏನಾಗಿದೆ?

ರಾತ್ರಿ ಹನ್ನೊಂದಾದರೆ ಸಾಕು, ಬರುತ್ತೆ ಏನೋ ರೋಗ. ನೆಟ್ ಕೆಲಸವೇ ಮಾಡಲೊಲ್ಲದು. ಸಂಪೂರ್ಣ ಡಿಸ್‍ಕನೆಕ್ಟ್! ಬೆಳಿಗ್ಗೆವರೆಗೂ.. ಮೂರು ದಿನದಿಂದ ಇದೇ ಪಾಡು ಆದ್ದರಿಂದ , ಅದ್ಯಾವುದೋ ಟೋಲ್ ಫ್ರೀ ನಂಬರ್ ಅಂತ ಕೊಟ್ಟಿದೀರಲ್ಲಾ, 1800 424 1600 ಅಂತ, ಇದಕ್ಕೆ ಕರೆ ಮಾಡಿದರೆ ಕರ್ಕಶದ ದನಿಯುಳ್ಳವಳು (ರೆಕಾರ್ಡೆಡ್) "ನಿಮ್ಮ ಕರೆಯು ನಮಗೆ ಅತ್ಯಮೂಲ್ಯ, ದಯವಿಟ್ಟು ನಿರೀಕ್ಷಿಸಿ.." ಎಂದು ಹತ್ತು ನಿಮಿಷಗಳ ಕಾಲ ಬಡಕೊಳ್ಳುತ್ತಾಳೆಯೇ ಹೊರೆತು ನಿರೀಕ್ಷಿಸಿ ನಿರೀಕ್ಷಿಸಿ ಬೇಸತ್ತು ಹೋಗುವುದಂತೂ ದಿಟ. ಇನ್ನೊಂದು ಸಂಖ್ಯೆಯಿದೆ, 25514444 ಅಂತ. ಇದಕ್ಕೆ ಕರೆ ಮಾಡಿದರೆ ಬ್ಯುಸಿ ರಾಗದ ಸಂಗೀತ ಬರುತ್ತಲೇ ಇರುತ್ತೆ. ಹಗಲಲ್ಲಿ ಈ ನಂಬರಿನ ಫೋನನ್ನು ಯಾರೋ ಸಿಟ್ಟಾಗಿಯೋ, ಬೇಸರದಿಂದಲೋ ಎತ್ತುತ್ತಾರೆ, ಇನ್ನೊಂದು ಸಂಖ್ಯೆ ಕೊಟ್ಟು ಅದಕ್ಕೆ ಕರೆ ಮಾಡಿ ಅಂತಾರೆ, ಆ ನಂಬರಿಗೆ ಕರೆ ಮಾಡಿದರೆ ಅವರು ಪುನಃ ಹಳೆಯ ಸಂಖ್ಯೆಯನ್ನೇ ಕೊಡುತ್ತಾರೆ.

ಸರ್ವರ್ ಡೌನ್:

ಗ್ರಾಹಕ ಸೇವೆಗೆಂದು ಕುಳಿತಿರುವ ಅಧಿಕಾರಿಗೆ ಟ್ರೈನಿಂಗ್ ಕೊಟ್ಟಿರುವುದು ಬಹುಶಃ ಇದೊಂದೇ ಪದ ಅನ್ನಿಸುತ್ತೆ. ಯಾವಾಗ ಕೇಳಿದರೂ "ಸರ್ವರ್ ಡೌನ್ ಇದೆ ಸರ್" ಎಂದು ಹಾಡಿದ್ದೇ ಹಾಡುವ ದಾಸರಂತೆ ಒದರುತ್ತಿರುತ್ತಾರೆ. ಒಂದು ಸರ್ವರ್ ಅಪ್ ಆಗೋಕೆ ಒಂದು ವಾರ ಬೇಕಾಗುತ್ತಾ? ವಾಸ್ತವವಾಗಿ ಕನೆಕ್ಷನ್ ಎಂಬ ಕನೆಕ್ಷನ್ನು ತಿಂಗಳಾನುಗಟ್ಟಲೆಯಿಂದ ತೊಂದರೆ ಕೊಡುತ್ತಲೇ ಇದೆ. ನಾವು ತೊಂದರೆ ಕೊಟ್ಟಾಗಲೆಲ್ಲಾ ಕಂಪ್ಲೆಂಟು ಕೊಡಲು ಪ್ರಯತ್ನಿಸುತ್ತಲೇ ಇದ್ದೇವೆ. ಸರ್ವರ್ ಡೌನ್ ಎಂಬ ಹಾಕಿದ್ದೇ ಸಿ.ಡಿ.ಯನ್ನು ಅವರು ಹಾಕುತ್ತಲೇ ಇದ್ದಾರೆ. ನಾವು ಅದೇ ಹಾಡನ್ನು ಕೇಳುತ್ತಲೇ ಇದ್ದೇವೆ. ಬೇರೆ ಏನಾದರೂ ಕಾರಣ ಕಂಡುಕೊಳ್ಳೋಕೆ ನಿಮ್ಮ ಗ್ರಾಹಕ ಸೇವೆಯ ಮಂಡಳಿಗೆ ಟ್ರೈನಿಂಗ್ ಕೊಡುವುದೊಳಿತು.

ಒಂಭೈನೂರು ರೂಪಾಯಿಗೆ ಅನಿರ್ದಿಷ್ಟಿತ ಡೌನ್‍ಲೋಡಿಂಗ್ ಸೌಲಭ್ಯ ಒದಗಿಸುತ್ತೇವೆಂದು ಜಾಹೀರಾತು ನೀಡಿದಾಕ್ಷಣವೇ ಅದರ ಮೊರೆ ಹೋದ ನಾವು ಮೂರ್ಖರಾದೆವು ಎಂದು ಈಗ ಅನ್ನಿಸುತ್ತಿದೆ. "ಏರ್ಟೆಲ್ ನನಗೆ ಇದುವರೆಗೂ ಒಂದು ಸಲವೂ ತೊಂದರೆ ಕೊಟ್ಟಿಲ್ಲ" ಎಂದು ಶ್ರೀಕಾಂತ್ ಹೇಳಿದ್ದನ್ನೂ ಕೇಳಿಸಿಕೊಳ್ಳದಾದೆನೇ ಎಂದೆನಿಸುತ್ತಿದೆ. "ಸುಮ್ಮನೆ ಒಂಭೈನೂರು ರುಪಾಯಿ ಯಾಕೆ ಕೊಡ್ತೀಯ? ಕಡಿಮೆ ಸ್ಪೀಡ್ ಆದರೂ ಗ್ಯಾರೆಂಟಿ ಕನೆಕ್ಷನ್ ಕೊಡ್ತಾ ಇದೆ ನಮ್ಮ ಮನೆಯಲ್ಲಿ ಸಿಫಿ ನೆಟ್‍ವರ್ಕು. ಅದನ್ನೇ ತೊಗೊ. ಎಂದು ಬಾಲಾಜಿ ಇನ್ನಿಲ್ಲದಾಗಿ ಹೇಳಿದರೂ ಬಿ.ಎಸ್.ಎನ್.ಎಲ್ ಕಡೆ ಹೋಗಿದ್ದು ಯಾಕೆ ಎಂದು ಈಗ ಪಶ್ಚಾತ್ತಾಪವಾಗುತ್ತಿದೆ. ಇಲ್ಲಿ ಸರ್ವರ್ ಡೌನ್ ಆದರೆ ಅದನ್ನು ಸರಿಪಡಿಸಲು ಒಂದು ತಿಂಗಳೇ ಬೇಕಾದೀತು ಎಂದು ಯಾರಿಗೆ ತಾನೇ ಕನಸು ಬಿದ್ದೀತು!

ಲೋಡ್ ಶೆಡ್ಡಿಂಗ್:

ನಮ್ಮ ಕೆ.ಪಿ.ಟಿ.ಸಿ.ಎಲ್‍ರವರು ಆಗಾಗ್ಗೆ ಲೋಡ್ ಶೆಡ್ಡಿಂಗ್ ಅಂತ ಹೇಳಿ ಕರೆಂಟು ತೆಗೆಯೋದಿಲ್ವೇ, ಹಾಗೆ ಅಂತರ್ಜಾಲವು ತನಗೆ ಬೇಕಾದಾಗ ಶೆಡ್ ಆಗುತ್ತಿರುತ್ತಲ್ಲಾ. ಇದಕ್ಕೆ ಕಾರಣವೇನು? ಹೆಚ್ಚು ಕಡಿಮೆ ಒಂದು ವರ್ಷದಿಂದ ಬಳಸುತ್ತಿದ್ದೇನೆ, ಪ್ರತಿದಿನವೂ ಈ ಗೋಳನ್ನು ಅನುಭವಿಸುತ್ತಲೇ ಇದ್ದೇನೆ. ಡಿಸ್‍ಕನೆಕ್ಟ್ ಆಗೋದು ಅಭ್ಯಾಸವಾಗಿ ಹೋಗಿದೆ. "ಯಾವುದೇ ಫೈಲ್‍ಗಳನ್ನು ಚಾಟಿಂಗ್ ಅಲ್ಲಿ ಕಳಿಸಬೇಡ, ಯಾವಾಗ ಡಿಸ್‍ಕನೆಕ್ಟ್ ಆಗುತ್ತೋ ಈ ಬೋಳಿಮಗಂದು ನೆಟ್" ಅಂತ ಗೆಳೆಯರೂ ಸಹ ಅಭ್ಯಾಸ ಹೊಂದಿದವರಾಗಿ ಹೇಳುವುದು ಸಾಮಾನ್ಯ ಸಂಭಾಷಣೆಯಾಗಿದೆ. ಆದರೆ ಕಳೆದ ಒಂದು ವಾರದಿಂದಂತೂ ಈ ಲೋಡ್ ಶೆಡ್ಡಿಂಗು ಗಂಟೆಗಟ್ಟಲೆಗೆ ವಿಸ್ತಾರವಾಗಿ ಹೋಗಿದೆ. ಮೊದಲಾದರೆ ಕೆಲವು ನಿಮಿಷಗಳ ಕಾಲ ಕಟ್ ಆಗಿ, ಮತ್ತೆ ಕನೆಕ್ಟ್ ಆಗುತ್ತಿತ್ತು. ಮತ್ತೆ ಹತ್ತು ನಿಮಿಷಗಳ ಕಾಲವಾದ ಮೇಲೆ ಕಟ್! ಹೀಗೇ ಆಟ!! ಇದು ತಿಂಗಳಾನುಗಟ್ಟಲೆಯಿಂದ ನಮ್ಮೊಡನೆ ಆಟ ಆಡುತ್ತಿರುವುದು ಬಿ.ಎಸ್.ಎನ್.ಎಲ್. ಅಂತರ್ಜಾಲ. ಈ ಪತ್ರ ಬರೆಯುತ್ತಿರುವಾಗಲೇ ಏನಲ್ಲಾ ಅಂದರೂ ಸುಮಾರು ಐದು ಸಲ ಕನೆಕ್ಟ್ - ಡಿಸ್‍ಕನೆಕ್ಟ್ ಆಗಿದೆ. ಹೀಗೇ ಇನ್ನೂ ಎಷ್ಟು ದಿನ ಆಗುತ್ತೆ ಎಂದು ಕೃಪೆ ತೋರಿ ಉತ್ತರಿಸಿದರೆ, ಅಷ್ಟು ದಿನದವರೆಗೂ ಅಂತರ್ಜಾಲವನ್ನು ಹೇಗೆ ಬಳಸುವುದು ಎಂದು ಯೋಜನೆ ಹಾಕಿಕೊಳ್ಳಬಹುದು.


ನನ್ನಂತೆ ಬಿ.ಎಸ್.ಎನ್.ಎಲ್ ಬೇಜವಾಬ್ದಾರಿ ತನಕ್ಕೆ ತುತ್ತಾಗಿರುವವರು ಇಲ್ಲಿ ಕಮೆಂಟಿಸಬೇಕೆಂದು ಕೇಳಿಕೊಳ್ಳುತ್ತೇನೆ. ಈ ಪತ್ರದ ಪ್ರತಿಯನ್ನು ಬಿ.ಎಸ್.ಎನ್.ಎಲ್ ಹಾಗೂ ಕನ್ನಡ ಪತ್ರಿಕಾ ಕಛೇರಿಗಳಿಗೆ ಕಳಿಸುವ ಉದ್ದೇಶ.

Wednesday, June 6, 2007

ಭಾಸಾ(ಷಾ)ಭಾಸ..

ಅತ್ತೆ ಹೇಳುತ್ತಿರುತ್ತಾರೆ, " ನಾವೆಲ್ಲಾ ಸರ್ಕಾರಿ ಶಾಲೆಯಲ್ಲಿ ಓದಿದ್ದು. ನಮಗೆಲ್ಲ ಎಂಥ ಒಳ್ಳೇ ಸಾಹಿತ್ಯ ಹೇಳಿಕೊಡುತ್ತಿದ್ದರು. ಈ ಇಂಗ್ಲೀಷ್ ಸ್ಕೂಲ್ ಮುಂಡೇವಕ್ಕೆ ಈ ಕಡೆ ಇಂಗ್ಲೀಷೂ ನೆಟ್ಟಗೆ ಬರಲ್ಲ, ಆ ಕಡೆ ಕನ್ನಡವೂ ಬರಲ್ಲ. ಎಡಬಿಡಂಗಿ ಮುಂಡೇವು!!" ಎಂದು. ಕೆಲವು ಉಪಾಧ್ಯಾರುಗಳೂ ಇದೇ ಕ್ಯಾಟೆಗರಿ ಎಂಬುದು ಶಾಲೆಯಲ್ಲಿನ ಎರಡನೇ ದಿನಕ್ಕೇ ಅರಿವಾಗಿ ಹೋಯಿತು..

ಮಜ ಕೇಳಿ..

ನಾನು ಕನ್ನಡ ಮೀಡಿಯಮ್ಮು.. ನಾನೇ ವಾಸಿಯೆಂದೆನಿಸಿತು..

ಒಬ್ಬ ಟೀಚರು, ಒಂದು ಹುಡುಗಿಯನ್ನು ನಿಲ್ಲಿಸಿ, "Where your uniform?" ಎಂದರು. ಆ ಹುಡುಗಿ ಪಾಪ, ಇವರ ಶಿಷ್ಯೆ, "no mam.." ಎಂದು ತೆಪ್ಪಗಾದಳು. ಆ ಟೀಚರು ಮಾತ್ರ ಸುಮ್ಮನಿರಲೊಲ್ಲರು. "your old uniform where?" ಎಂದರು. ಆ ಶಿಷ್ಯೆ ಪಾಪ, "yes mam" ಎಂದು ಆಚೆ ನಿಂತುಕೊಂಡು ಶಿಕ್ಷೆ ಅನುಭವಿಸಿತು.

ಇವತ್ತು ಇನ್ಯಾರೋ ಒಬ್ಬ ವಿದ್ಯಾರ್ಥಿ ಸಮವಸ್ತ್ರ ಧರಿಸಿರಲಿಲ್ಲ. ಆ ಹುಡುಗಿಯನ್ನು ನೋಡಿ ಅತಿ ಕೆಂಡಾಮಂಡಲ ಆದ ಅದೇ ಟೀಚರು, ಮುಖ ಕೆಂಪಗೆ ಮಾಡಿ, ಧ್ವನಿಯನ್ನು ಮುಗಿಲೆತ್ತರಕ್ಕೇರಿಸಿ, ಹಲ್ಲು ಕಡಿಯುತ್ತ, ಕ್ರೋಧಗೊಂಡು ಆ ಹುಡುಗಿಯನ್ನು ಕರೆದಿದ್ದು ಹೇಗೆ ಗೊತ್ತಾ? "My dear Aishwarya... come here.." ಎಂದು. ಧ್ವನಿಯಲ್ಲಿ ಕೋಪ ರಾರಾಜಿಸುತ್ತಿತ್ತು. ಆದರೆ ಪದಗಳ ಆಯ್ಕೆ ಮಾತ್ರ ಮೈ ಡಿಯರ್... ಅದ್ಯಾಕೆ ಹಾಗಿತ್ತೋ ಅವರೇ ಬಲ್ಲರು!

ಇನ್ನೊಂದು ಆಭಾಸ ಕೇಳಿ! ಇದು ವಯಸ್ಕರಿಗೆ ಮಾತ್ರ: ಹೊಸ ಸಮವಸ್ತ್ರ ಧರಿಸದ ವಿದ್ಯಾರ್ಥಿಯನ್ನು ಕರೆದು ಈಕೆ ಹೇಳಿದ್ದು ಏನು ಗೊತ್ತೇ? "ಟಿಲ್ ಯು ಗೆಟ್ ನ್ಯೂ ಯೂನಿಫಾರಂ, ವೇರ್ ಓಲ್ಡ್ ಯೂನಿಫಾರಂ ಟು ಕಂ!" ಎಂದುಬಿಟ್ಟರು. ಪಾಪ ಆ ಹುಡುಗ ಇನ್ನೂ ಚಿಕ್ಕವನು. ಇವರು "ಕಂ" ಎಂದಿದ್ದರ ಸ್ಪೆಲ್ಲಿಂಗ್ ಕೇಳಲು ಹೋಗಲಿಲ್ಲ.

ಒಂದು ಹುಡುಗಿಯ ಕನ್ನಡ ನೋಟ್ ಪುಸ್ತಕದಲ್ಲಿ ತಾನು ಬರೆದಿದ್ದನ್ನು ಟೀಚರು "ಸರಿ" ಎಂದು ಗುರುತಿಸಿದ್ದರು. ಅದು ಹೀಗಿತ್ತು:
"ಅರ್ಥಗಳು:-
ಸಿಂಹಾಸನ = ರಾಜನು ಕೂರುವ ಸ್ತನ"

ಕರ್ಮಕಾಂಡ! ಕೂರೋದ್ ಏನು ಬಂತು!! ಅದಕ್ಕೆ "ಸಿಂಹ" ಅಂತ ಬೇರೆ ಕರೀಬೇಕೇ?

Sorry, vulgarity ಹೆಚ್ಚಾಯಿತೆನಿಸುತ್ತೆ. ಆದರೂ ಇವೆಲ್ಲಾ ಸತ್ಯವಾಗಿಯೂ ನಡೆದಿರುವುದಪ್ಪಾ!!

ಕಂಪ್ಯೂಟರ್ ಲ್ಯಾಬ್‍ಗೆ ನನ್ನ ಕರೆದೊಯ್ದ ಹಿರಿಯ ಅಧ್ಯಾಪಕಿಯೊಬ್ಬರು ಕಂಪ್ಯೂಟರುಗಳನ್ನು ನನಗೆ ತೋರಿಸಿ, ಒಡೆದ ಕಿಟಕಿಯನ್ನೂ ತೋರಿಸಿ, "We will cover this. Otherwise dust will come and spoil the computer" ಎಂದರು. ನಾನು ಅಹುದಹುದೆಂದೆ!

ನೆನ್ನೆ ಪರಿಸರದ ದಿನದಂದು ಭಾಷಣಗೈದ ಮೈ ಡಿಯರ್ ಖ್ಯಾತಿಯ ಟೀಚರು, "Children, who knows what is an envirointment?" ಎಂದು ಆರಂಭಿಸಿದರು. Environmentನ ಆಯಿಂಟ್ಮೆಂಟ್ ಅಂತಲೂ ಅನ್ನುತ್ತಾರೆ ಎಂದು ಆಗಲೇ ಅರ್ಥ ಆಗಿದ್ದು ನಂಗೆ!

ಪಿ.ಟಿ. ಮೇಷ್ಟ್ರು ಪಾಪ, ಹಳ್ಳಿ ಶಾಲೆಯಿಂದ ಬಂದವರು, ಇಂಗ್ಲೀಷಿಗೆ ಕಷ್ಟ ಪಡುತ್ತಾರೆ. ಆದರೆ ಆಭಾಸಗಳಿಗೇನೂ ಮೋಸ ಮಾಡೋದಿಲ್ಲ. "Dont keep your concentrate outside, keep your concentrate in the field" ಎಂದು mass PT-ಯಲ್ಲಿ ಹೇಳಿದಾಗ ನನಗೆ ನಗಬೇಕೋ ಓಡಿಹೋಗಬೇಕೋ ಗೊತ್ತಾಗಲಿಲ್ಲ.

ಇಂಥವರ ನಡುವೆ ಅನೇಕ ಪಂಡಿತರುಗಳು ನನ್ನ ಸಹೋದ್ಯೋಗಿಗಳಾಗಿದ್ದಾರೆ. ಅವರುಗಳ ಜೊತೆ ಮಾತನಾಡುತ್ತಿದ್ದರೆ ನನ್ನ ಮೇಷ್ಟ್ರುಗಳ ಜೊತೆಗೇ ಮಾತನಾಡುತ್ತಿದ್ದೇನೇನೋ ಎಂಬ ಅನಿಸಿಕೆಯಾಗುತ್ತೆ. ಇವರ ಇಂಗ್ಲೀಷು ಬ್ಯಾರಿಸ್ಟರಿನಂಥದ್ದು! ಇವರ ಕನ್ನಡ ಕುವೆಂಪು ಬೇಂದ್ರೆಯಂಥದ್ದು! ಅಂಥವರಿಂದ ಮಕ್ಕಳು "ಎಡಬಿಡಂಗಿ" ಸ್ಥಾನ (ಕಾಗುಣಿತ ಸರಿಯಾಗಿದೆ ಎಂದುಕೊಳ್ಳುತ್ತೇನೆ)ದಿಂದ ಮೇಲಕ್ಕೇರಬಲ್ಲರು.

ಮಕ್ಕಳೊಡನೆಯ ಒಡನಾಟ ಬಹಳ ಸೊಗಸಾಗಿದೆ. ಬದುಕು ಸೊಗಸಾಗಿದೆ.

- ಅ
06.06.2007
11.13PM

Monday, June 4, 2007

ಶಾಲೆಯ ಮೊದಲ ದಿನ..

ಈ ಹಿಂದೆ ಶಾಲಾ ಮಕ್ಕಳಿಗೆ ಪಾಠ ಮಾಡಿದ್ದೇನಾದರೂ ಶಾಲೆಯಲ್ಲಿ ಫುಲ್ ಟೈಮ್ ಮೇಷ್ಟ್ರಾಗಿ ಪಾಠ ಮಾಡಿರಲಿಲ್ಲ. ಒಂದು ಖಾಸಗಿ ಸಂಸ್ಥೆಯಲ್ಲಿ ಟ್ಯೂಷನ್ ಮಾಡಿದ್ದೆನಷ್ಟೆ. ಅದು ಬಿಟ್ಟರೆ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೆ, ಕನಕ ಕಾಲೇಜಿನಲ್ಲಿ.

ಇಂದು ಆರನೇ ತರಗತಿ ಹಾಗೂ ನಾಲ್ಕನೇ ತರಗತಿಯವರಿಗೆ ಪಾಠ ಮಾಡುವುದರಿಂದ ಒಂದು ಅರಿತಿದ್ದೇನಪ್ಪಾ ಅಂದರೆ, ಮಕ್ಕಳಿಗೆ ಪಾಠ ಹೇಳುವುದು ಯಾರೋ ಕರೆ ಮಾಡಿ, "ನಮ್ಮ ಸರ್ವರ್ ಡೌನ್ ಆಗಿದೆ, ಸರಿ ಮಾಡಿಕೊಡಿ" ಎಂಬುವುದಕ್ಕಿಂತ, ಅಥವಾ ಇಡೀ ಸಂಸ್ಥೆಗೆ ನೆಟ್ವರ್ಕ್ ಮಾಡಿಕೊಡುಡುವುದಕ್ಕಿಂತ, ಅಥವಾ ಪತ್ರಿಕೆಗೆ ಅಂಕಣ/ವರದಿ ಬರೆಯುವುದಕ್ಕಿಂತ, ಅಥವಾ ಹದಿಮೂರು ಸಾವಿರ ಅಡಿ ಎತ್ತರದ ಪರ್ವತದ ಚಾರಣ ಮಾಡಿದ್ದಕ್ಕಿಂತ ಜವಾಬ್ದಾರಿಯುತ ಕೆಲಸ ಎಂದೆನಿಸಿತು. ಅವಲ್ಲಕ್ಕಿಂತ ಕಷ್ಟದ ಕೆಲಸ ಅನ್ನಿಸಿತು. ಅವೆಲ್ಲಕ್ಕಿಂತ ಸಾಹಸಮಯ ಕೆಲಸ ಎಂದೆನಿಸಿತು. ಅಂತೂ ಹೊಸ ಅಡ್ವೆಂಚರ್ ಚೆನ್ನಾಗಿ ಆರಂಭವಾಗಿದೆ.

ಮಕ್ಕಳ ಹಠಮಾರಿತನ, ಗಜಿಬಿಜಿ ಚಾಡಿಕೋರತನ, ತುಂಟತನ, ಮುಗ್ಧತೆ, ನಿಶ್ಕಲ್ಮಶತನ, ಮೇಷ್ಟ್ರು ಮೇಡಮ್ಮುಗಳ ಹಾಸ್ಯಮಯ ಇಂಗ್ಲೀಷು (ಇದರ ಬಗ್ಗೆ ಬರೆಯುತ್ತೇನೆ ಮುಂದೆ), ಹಿರಿಯನಂತೆ ಜವಾಬ್ದಾರಿ ತೆಗೆದುಕೊಳ್ಳುವುದು, ಎಲ್ಲವೂ ಮೊದಲ ದಿನದ ಮಟ್ಟಿಗೆ ರಂಜನಾತ್ಮಕವಾಗಿದೆ. ಇನ್ನೂ ಮೊದಲ ದಿನ. ಹೀಗೇ ಒಳ್ಳೇ ರೀತಿಯಲ್ಲಿ ಬೆಳೆಯಲೆಂದು ಆಶಿಸುತ್ತಾ ಮೇಷ್ಟ್ರೆಂದು ಕರೆಸಿಕೊಳ್ಳುವುದನ್ನು ಆನಂದಿಸುತ್ತಿದ್ದೇನೆ..

- ಅ
04.06.2007
8.30PM

Friday, June 1, 2007

ಸಾಹಿತಿಗಳ ನಡುವೆ ಹ್ಯಾರಿ ಪಾಟರ್..
"ಭೈರಪ್ಪ ಕಾದಂಬರಿಕಾರರೇ ಅಲ್ಲ, ಚರ್ಚಾಪಟು" - ಯು.ಆರ್. ಅನಂತಮೂರ್ತಿ.

ಭೈರಪ್ಪನವರು ಮಾತ್ರ ಮಾತೇ ಆಡಿಲ್ಲ ಇನ್ನೂ.

ಭೈರಪ್ಪನವರ ಮೇಲೆ ಸ್ಪರ್ಧೆ ಇರುವ ಸಾಹಿತಿಗಳಾದರೆ, ಅದನ್ನು ತಮ್ಮ ಕೃತಿಗಳಲ್ಲಿ ತೋರಿಸುವರೇ ಹೊರೆತು ಹೇಳಿಕೆಗಳ "ಕೃತ್ಯ"ಗಳಲ್ಲಲ್ಲ ಎಂದು ಭೈರಪ್ಪನವರ ಅಭಿಮಾನಿಗಳೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ।ಅಂಕಿತದಲ್ಲಿ 'ಆವರಣ'ದ ಪುಸ್ತಕದ ರಾಶಿಯ ಪಕ್ಕದಲ್ಲೇ, 'ಆವರಣ-ಅನಾವರಣ'ದ ರಾಶಿಯನ್ನೂ ಇಟ್ಟಿದ್ದನ್ನು ನೋಡಿ ನಗು ಬಂತು. ಪುಸ್ತಕದ ಅಂಗಡಿಗಳಿಗೆ ಪುಸ್ತಕ ಮಾರಾಟ ಆದರೆ ಸಾಕು. ಒಂದು ಸಣ್ಣ ಹಸ್ತಪ್ರತಿಯಂತಿರುವ ಈ ಪುಸ್ತಕವನ್ನು ಬರೆಯುವ ಅಗತ್ಯವೂ ಇರಲಿಲ್ಲವೆನಿಸುತ್ತೆ. ಬಹುಶ: ಬೇರೆ ಸಬ್ಜೆಕ್ಟು ಸಿಗಲಿಲ್ಲವೇನೋ ಶಂಕರ್ ಅವರಿಗೆ.

ಆವರಣದಂಥಹ ಕಾದಂಬರಿಗಳ ಬಗ್ಗೆ ಹೀಗೆ ಸಾಹಿತಿಗಳ ಮಟ್ಟದಲ್ಲಿ ವಾದ ವಿವಾದಗಳು ನಡೆಯುತ್ತಿದ್ದರೆ, ಇದರ ಅರಿವೇ ಇಲ್ಲವೆಂಬಂತೆ ನಮ್ಮ ಯುವ 'ಮಿತ್ರ'ರು ಸಾವಿರಾರು ರೂಪಾಯಿ ಖರ್ಚು ಮಾಡಿ (ನನಗೆ ಅದರ ಬೆಲೆ ಗೊತ್ತಿಲ್ಲ, ಆದ್ರೆ ವಿಪರೀತ ಜಾಸ್ತಿ ಅಂತ ಮಾತ್ರ ಗೊತ್ತು) ಹ್ಯಾರಿ ಪಾಟರ್-ನತ್ತ ಕಣ್ಣು ಹಾಯಿಸುತ್ತ ಕುಳಿತಿದ್ದಾರೆ। ಅದೂ ಅಲ್ಲದೇ, ಆ ಪುಸ್ತಕ ಇನ್ನೂ ಬಿಡುಗಡೆ ಸಹ ಆಗಿಲ್ಲವಂತೆ. ಬುಕ್‍ನ ಬುಕ್ ಮಾಡಬೇಕಂತೆ. ಇದು ಬೆಂಗಳೂರಿನ ಬಹುಪಾಲು ಯುವಕರ ಸ್ಥಿತಿ. ಅವರುಗಳಿಗೆ 'ಆವರಣ'ದ ಬೆಲೆ ಗತ್ತಿಲ್ಲ ಬಿಡಿ.


- ಅ

01.06.2007

5.30AM

ಉದರ ನಿಮಿತ್ತಮ್..

ಜಟಿಲೋ ಮುಂಡೀ ಲುಂಚಿತ ಕೇಶಃ
ಕಾಷಾಯಾಂಬರ ಬಹುಕೃತ ವೇಷ:
ಪಶ್ಯನ್ನಪಿ ಚ ನ ಪಶ್ಯತಿ ಮೂಢೋ-
ಹ್ಯುದರ ನಿಮಿತ್ತಮ್ ಬಹುಕೃತ ವೇಷ:

ಈಗ ನನ್ನ ವೇಷ ಮೇಷ್ಟ್ರಾಗಿ! ಮೂಢನೋ ಅಲ್ಲವೋ ಗೊತ್ತಿಲ್ಲ..

ಬೆಂಗಳೂರಿನೊಂದು ಶಾಲೆಯಲ್ಲಿ ಪಾಠ ಹೇಳುವ ಮೇಷ್ಟ್ರಾಗಿ ಹುದ್ದೆಯನ್ನಾರಿಸಿಕೊಂಡಿದ್ದೇನೆ. ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸವನ್ನು ಇದೇ ಮೊದಲ ಸಲ ಮಾಡಹೊರಟಿರುವುದು. ಹಿಂದೆ ಹೈಸ್ಕೂಲು ಮಕ್ಕಳಿಗೆ ಮೂರು ವರ್ಷಗಳ ಕಾಲ ಪಾಠ ಮಾಡಿದ್ದೇನಾದರೂ ಅದು ಶಾಲೆಯಲ್ಲಲ್ಲ. ಇನ್ಸ್ಟಿಟ್ಯೂಟಿನಲ್ಲಿ. ಕಾಲೇಜು ಹುಡುಗರಿಗೆ ಪಾಠ ಮಾಡಿದ್ದೆ. ಒಂದು ವರ್ಷ. ಅದು ಬೇರೆಯದೇ ಅನುಭವ. ಅವರಿಗೆ ಪಾಠ ಮಾಡುವುದೇ ಬೇರೆ, ಮಕ್ಕಳಿಗೆ ಹೇಳಿಕೊಡುವುದೇ ಬೇರೆ. ಈಗ ಫುಲ್ ಟೈಮ್ ಟೀಚರ್! ಅದೂ ಸಿ.ಬಿ.ಎಸ್.ಈ. ಶಾಲೆಯಲ್ಲಿ. ಈ ವೇಷ ಕೇವಲ ಉದರನಿಮಿತ್ತವಲ್ಲವೆಂದು ನನ್ನ ನಿಲುವು.

RHM, ಮತ್ತು ಪತ್ರಿಕೋದ್ಯಮ ಎರಡರಿಂದಲೂ ನಾನು ಇನ್ನಷ್ಟು ಭವಿತವ್ಯವನ್ನು ಎದುರು ನೋಡುತ್ತಿದ್ದೇನೆ. ಇದಕ್ಕೆ ಈ ಹೊಸ ಸಾಹಸದ ವೃತ್ತಿ ಪೂರಕವಾಗಿರುತ್ತೆಂದು ನಂಬಿದ್ದೇನೆ..

- ಅ
01.06.2007
3.45AM