Sunday, June 17, 2007

ತೋಟದ ಹೂ ನಾನು..


ನಮ್ಮ ಚಾರಣದ ಟೀಮಿನ ಬಗ್ಗೆ ಬರೆದು ಶತಮಾನಗಳೇ ಕಳೆದಿವೆ. ಈಗ ಅದೇ ರೀತಿಯ ಇನ್ನೊಂದು ಗುಂಪಿನ ಬಗ್ಗೆ ಬರೆಯುವ ಮನಸ್ಸಾಗಿದೆ.

ಇಲ್ಲಿ ಆ ಗುಂಪಿನ ಒಬ್ಬೊಬ್ಬ ಸದಸ್ಯರ ಬಗ್ಗೆ ಬರೆಯದೇ, ಇಡೀ ತಂಡದ ಬಗ್ಗೆ ಬರೆಯುತ್ತಿದ್ದೇನೆ. ಮತ್ತೆ ನಾನು ಹೇಗೆ ಎಲ್ಲಿಂದಲೋ ಬಂದು ಎಲ್ಲಿಗೋ ಅಂಟುಕೊಂಡಿದ್ದೇನೆಂಬುದನ್ನು ಚಿತ್ರಿಸಲೆತ್ನಿಸುತ್ತಿದ್ದೇನೆ. ಅವರುಗಳಿಗೆಲ್ಲಾ ಇದು ಗೊತ್ತಿರುವ ಸಂಗತಿಯೇ. ಆದರೆ ನನಗೆ ಇದನ್ನೆಲ್ಲಾ ಬರೆದಿಡಬೇಕೆನಿಸಿತು. ಆದಕಾರಣ ಬರೆಯುತ್ತಿದ್ದೇನಷ್ಟೆ.

ಗುಂಪಿನ ಮನುಜ


ನಾನು ಗುಂಪಿನ ಮನುಜ ಅಲ್ಲವೇ ಅಲ್ಲ ಎಂದು ತೀರ್ಮಾನಿಸಿಬಿಟ್ಟಿದ್ದೆ. ನನ್ನ ಇಡೀ ಪ್ರೈಮರಿ ಸ್ಕೂಲಿನಲ್ಲಿ ನನಗಿದ್ದುದು ಒಬ್ಬನೇ ಮಿತ್ರ. ಮಿಡ್ಲ್ ಸ್ಕೂಲಿನಲ್ಲಿ ಒಂದಿಬ್ಬರು ಮೂರು ಜನರು ನನ್ನ ಗೆಳೆಯರಾದರೇ ಹೊರೆತು, ಯಾರೂ ಹತ್ತಿರವಾಗಲಿಲ್ಲ. ನಂತರ ಹೈಸ್ಕೂಲಿನಲ್ಲಿ ಇಬ್ಬರು ಮಿತ್ರರು, ಪಿಯುಸಿಯಲ್ಲಿ ಒಬ್ಬ, ಡಿಗ್ರಿಯಲ್ಲಿ ಇಬ್ಬರು ಮಿತ್ರರು. ನಾನಾಯ್ತು, ಶಾಲೆ (ಕಾಲೇಜು) ಆಯ್ತು, ಮನೆಯಾಯ್ತು, ನನ್ನ ಈ ಸ್ನೇಹಿತರಾಯ್ತು.. ಇಷ್ಟೆ ನನ್ನ ಪ್ರಪಂಚ. "ಅರುಣನ ಗೆಳೆಯರು" ಅಂತ ಯಾರೂ ಹೇಳ್ತಾನೇ ಇರಲಿಲ್ಲ. "ಅದೇ ಅರುಣನ ಫ್ರೆಂಡು" ಅಂದ ತಕ್ಷಣ ಎಲ್ಲರಿಗೂ ಗೊತ್ತಾಗಿಬಿಡುತ್ತಿತ್ತು ಇರೋದು ಒಬ್ಬನೇ, ಅವನ ಬಗ್ಗೆಯೇ ಎಲ್ಲರೂ ಮಾತನಾಡುತ್ತಿರುವುದು ಎಂದು.

ಚಿಕ್ಕಂದಿನಿಂದಲೂ ನಾನು ಎಂದೂ ಗುಂಪು ಕಟ್ಟಿಕೊಂಡು ಓಡಾಡುವ ಹುಡುಗನಾಗಿರಲಿಲ್ಲ. ಗುಂಪಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಕಾಲೇಜಿನಲ್ಲಿ ಎಲ್ಲರೂ ಒಂದಾದರೆ, ನಾನೇ ಒಂದಾಗಿದ್ದೆ. ನನ್ನ ಪಾಡಿಗೆ ನಾನಿದ್ದೆ. ಅವರೆಲ್ಲಾ ಸಿನಿಮಾಕ್ಕೆ ಹೋದರೆ ನಾನು ಅವರಿಂದ ತಪ್ಪಿಸಿಕೊಂಡರೆ ಸಾಕು ಎಂಬಂತೆ ನನ್ನ ಬೈಕನ್ನೇರಿ ಮನೆಗೆ ಹೊರಟುಬಂದುಬಿಡುತ್ತಿದ್ದೆ. ಗುಂಪೆಂದರೆ ಅಲರ್ಜಿ. ನನಗೆ ಗುಂಪಿನಲ್ಲಿ ಭಾಗವಹಿಸಲು ಬರುತ್ತಲೂ ಇರಲಿಲ್ಲ. ಹತ್ತು ಜನರಿದ್ದರೆ ಸಾಕು, ನಾನು ಮೌನಿಯಾಗಿಬಿಡುತ್ತಿದ್ದೆ. ನನ್ನ ಅನಿಸಿಕೆಗಳನ್ನು, ಐಡಿಯಾಗಳನ್ನು ಎಂದಿಗೂ ಹಂಚಿಕೊಂಡವನಾಗಿರಲಿಲ್ಲ. ನನ್ನ ಸಂತಸವು, ನನ್ನ ದುಃಖವು, ನನ್ನ ಹಿಂಸೆಯು, ನನ್ನ ಬೀಭತ್ಸಗಳು, ನನ್ನ ಪ್ರೀತಿಯು, ನನ್ನ ಆಸೆಯು, ನನ್ನ ಸೋಲು, ನನ್ನ ಗೆಲುವು - ನನ್ನೊಳಗೇ ಇದ್ದುವು. ಗುಂಪೆಂದರೆ ಹೆದರೋಡುವಂತಿದ್ದೆ.

ಇಂಟ್ರೊಡಕ್ಷನ್ನು


Rambling Holiday Makers ಮಾಡುವ ಮುಂಚೆ ನಾನು ನನ್ನ ವಯಸ್ಸಿನ ಗುಂಪಿನವರಿಂದ ಸಂಪೂರ್ಣವಾಗಿ ದೂರವಾಗಿದ್ದೆ ಎಂದರೂ ತಪ್ಪಿಲ್ಲ. ನನ್ನ ಸ್ನೇಹವರ್ಗದವರೆಲ್ಲಾ ಏನಿದ್ದರೂ ಹಿರಿಯ ನಾಗರೀಕರಾದ ಸತ್ಯಪ್ರಕಾಶರು, ನನಗಿಂತ ಹಿರಿಯರಾದ ಅಥವಾ ಕಿರಿಯರಾದ ನನ್ನ ಕಝಿನ್ನುಗಳು, ನನ್ನ ಅಕ್ಕ - ಭಾವ, ಅಡ್ವೆಂಚರ್ ಗುರುಗಳಾದ ರಾಜೇಶ್ - ಇಷ್ಟಕ್ಕೇ ಸೀಮಿತವಾಗಿತ್ತು. ನಂತರ ಶ್ರೀನಗರದ ಹುಡುಗರೆಲ್ಲಾ ಒಟ್ಟಾಗಿ ಗುಂಪಾಯಿತು. ಛಿದ್ರವಾಗಿದ್ದ ಗುಂಪನ್ನು ಒಂದು ಮಾಡಿದ್ದಕ್ಕೆ ಯಾಹೂ ಗ್ರೂಪ್ಸ್‍ಗೆ ಒಂದು ಥ್ಯಾಂಕ್ಸ್ ಹೇಳಬೇಕು. ಶ್ರೀನಗರದ ಬಹುಪಾಲು ಸದಸ್ಯರು ನನ್ನ ಬಾಲ್ಯಸಖಸಖಿಯರೇ.


ಅನ್ನಪೂರ್ಣ, ಡೀನ್‍ರಂಥಹ ಎರಡು ರತ್ನಗಳನ್ನು ಕರುಣಿಸಿದ್ದು ಚಾರಣವೆಂಬ ಹವ್ಯಾಸ. ಗೋವಿಂದ್ ರಾಜ್ ಎಂಬ ಹಿರಿಯರು, ಪರಿಚಿತರಾಗಿದ್ದು, ಅನೇಕ ಪಯಣಗಳನ್ನು ಮಾಡಿದ್ದಾಯ್ತು ಅವರ ಜೊತೆ. ಶ್ರೀಕಾಂತನು ಕಂಪ್ಯೂಟರಿನ ದೆಸೆಯಿಂದ ಪರಿಚಿತನಾದನಾದರೂ, ಟ್ರೆಕ್ಕಿಂಗ್ ಇಂದ ಸ್ನೇಹಿತನಾದ. ಶ್ರೀನಿಧಿಯೆಂಬ 'ಕಲೆ'ಯು ಸಹ ಚಾರಣದ ತಂಡಕ್ಕೆ ಸೇರಿ ತಂಡದ ಅವಿಭಾಜ್ಯವಾಗಿರುವುದು ನನ್ನ ಪುಣ್ಯ! ಈ ಲೇಖನದ introduction ಇಷ್ಟು! ಮುಂದಿದೆ ಮುಖ್ಯ ಕಥೆ!

ಮೊಮ್ಮಕ್ಕಳಾಗಮನ


ಒಂದು ವಯಕ್ತಿಕ, ಅನಿವಾರ್ಯ ಸಮಸ್ಯೆಯಲ್ಲಿದ್ದಾಗ ಚಾರಣದ ಸದಸ್ಯರಾಗಿ ಬಂದಿದ್ದು ಶ್ರೀ, ಶೃತಿ ಹಾಗೂ ಸಿಂಧು. ಮೊಮ್ಮಕಳೆಂದೇ ಕರೆಯುತ್ತೇನೆ! ಇವರು ಚಾರಣದ ಸದಸ್ಯರಷ್ಟೇ ಆಗಿದ್ದಿದ್ದರೆ ನಾನು ಈ ಲೇಖನವನ್ನು ಬರೆಯುತ್ತಲೇ ಇರಲಿಲ್ಲ. ಒಂದು ಬಗೆಯ ನಗೆಯನ್ನು ತಂದ ಹೂಗಳು ಇವರು. ಇವರ ಮೈತ್ರಿ ಬಳಗ ಹಿರಿದೆಂದು ನನಗೆ ಅರಿವಾಗಿದ್ದೇ ಇವರ ಪರಿಚಯವಾಗಿ ಎರಡು ವರ್ಷ ಸಂದ ನಂತರ. ನಾನೆಂದೂ ಕಂಡರಿಯದಂಥ ಬಾಡಲರಿಯದಂಥ ಹೂಗಳ ತೋಟ ಈ ಗುಂಪು. ಇವರುಗಳ ಜೊತೆಯಿದ್ದರೆ, ನಾನು ಇವರುಗಳ ಜೊತೆಗೇನೇ ಓದುತ್ತಿದ್ದೇನೇನೋ ಕಾಲೇಜಿನಲ್ಲಿ ಎಂದೆನಿಸುತ್ತೆ. ವಯಸ್ಸಿನಲ್ಲಿ ಅಂಥ ವ್ಯತ್ಯಾಸವಿಲ್ಲದೇ ಇದ್ದರೂ ನನ್ನ ಸಹಪಾಠಿಗಳಂತೆಯಂತೂ ಇವರುಗಳಿಲ್ಲ. ಆದರೆ, ನಾನು ಇವರುಗಳ ಸಹಪಾಠಿಯಾಗಲಿಲ್ಲವಲ್ಲಾ ಎಂಬ ಕೊರತೆಯ ನೆರಳೊಂದು ಬದುಕಿನುದ್ದಕ್ಕೂ ನನ್ನೊಡನೆ ನಡೆಯುತ್ತಿರುತ್ತೆ.

ಕೊಡಚಾದ್ರಿಯ ಪ್ರವಾಸವು ಇವರ ಒಕ್ಕೂಟಕ್ಕೆ ಮೊದಲ ಹೆಜ್ಜೆಯಂತೆ. ನನಗೆ ಗೊತ್ತಿಲ್ಲ. ನಾನು ಆ ಅವರೊಡನೆ ಪಯಣಕ್ಕೆ ಹೋಗಲು 'ಓ ಮನಸೇ.." ಬಿಡಲಿಲ್ಲ. ಹೋಗಿದ್ದಿದ್ದರೆ, ಆರು ತಿಂಗಳುಗಳ ಮುನ್ನವೇ ಒಂದು ಗುಂಪಿನ ಸದಸ್ಯನಾಗಿಬಿಡುತ್ತಿದ್ದೆನೆಂದೆನಿಸುತ್ತೆ. I was never a team man. ಟೀಮಿನಲ್ಲಿ ಹೇಗಿರಬೇಕೆಂಬುದೇ ನನಗೆ ತಿಳಿಯದ ವಿಷಯವಾಗಿತ್ತು. ಇದನ್ನು ಕಲಿಸಿಕೊಟ್ಟಿದ್ದೇ ಈ ಹುಡುಗರು - ಕೊಡಗಿನ ಪ್ರವಾಸದಲ್ಲಿ. ಆರ್.ಎಚ್.ಎಮ್.ನ ನಾಯಕನಾಗಿದ್ದರೂ ಟೀಮ್ ಮನುಷ್ಯನಾಗಿ ನಾನು ಅಂಥ ಸಾಧನೆಗಳೇನೂ ಮಾಡಿರಲಿಲ್ಲವೆಂದೆನಿಸುತ್ತೆ. ನನ್ನನ್ನು follow ಮಾಡುವ ಚಾರಣಿಗರಿರುತ್ತಿದ್ದರು, ಇಲ್ಲವೇ ನನ್ನನ್ನು lead ಮಾಡುವಂಥ ಡೀನ್, ಅನ್ನಪೂರ್ಣರಂಥ ಹಿರಿಯರಿರುತ್ತಿದ್ದರು. ಪಯಣಗಳು ನನಗೆ ಹೊಸತಾಗಿರಲಿಲ್ಲ, ಆದರೆ, ಅಂಥ ಪಯಣವು ಹಿಂದೆಂದೂ ಕೈಗೊಂಡಿರಲಿಲ್ಲ. ನನ್ನ ಪಯಣಗಳೇನಿದ್ದರೂ ಒಂದು ಅಚ್ಚುಕಟ್ಟಾದ ಸಾಹಸಭರಿತ ಕಾರ್ಯಕ್ರಮಗಳಿಂದ ಕೂಡಿದ್ದು, ಜವಾಬ್ದಾರಿಗಳನ್ನು ಹೆಗಲ ಮೇಲೆ ಹಾಕಿಕೊಳ್ಳುವುದಾಗಿತ್ತು. ಕೊಡಗಿನ ಪ್ರವಾಸ ಅಂತಿರಲಿಲ್ಲ. ಜವಾಬ್ದಾರಿಗಳ ಬೇತಾಳ ನನ್ನೊಡನೆ ಇದ್ದರೂ, ನಾನು ಪಯಣದಲ್ಲಿ ಇವರೆಲ್ಲರಿಗಿಂತ ಅನುಭವಿಯೆಂಬ ಭೂತ ನನ್ನ ಮೆದುಳಿನಲ್ಲಿದ್ದರೂ ನನಗೊಂದು ವಿರಾಮವನ್ನು ಕರುಣಿಸಿತು. ನಾನು ನನ್ನ ತಮ್ಮ ತಂಗಿಯರ ಜೊತೆಗೆ ಸಂತೋಷಕೂಟದಲ್ಲಿದ್ದೇನೇನೋ ಎಂಬ ಭಾವನೆ ಮೂಡಿಸುತ್ತಿತ್ತು. ಇರುಳಲ್ಲಿ ಮಕ್ಕಳಂತೆ ಆಡಿದ ಗುಟ್ಟಾಟ, ಕೊಡಗಿನ ಮಳೆಯಲ್ಲಿ ಸುತ್ತಿದ್ದು, ಹುಣಸೂರಿನ ಗಂಭೀರ ಚರ್ಚೆ, ದಿಲ್ ಆಜ್ ಶಾಯರ್ ಹೈ, ಇವೆಲ್ಲಾ ನನ್ನನ್ನೂ ಇವರುಗಳನ್ನೂ ಹತ್ತಿರಕ್ಕೆ ಕರೆದೊಯ್ಯಿತು.

ಶ್ರೀನಿವಾಸನ ಮನೆಯ ಹರಟೆ ಪ್ರವಾಸವಂತೂ ಅದ್ಭುತವಾಗಿತ್ತು. ಎಲ್ಲರ ಮನಸ್ಸೂ ತೆರೆದ ಪುಸ್ತಕಗಳಾಗಿದ್ದವು. ಆಡದ ವಿಷಯಗಳಿಲ್ಲ, ಹಾಡದ ಗೀತೆಗಳಿಲ್ಲ. ಮುಂದಿನ ಪ್ರವಾಸಕ್ಕೂ ಪ್ಲಾನ್ ಮಾಡುವ ಮಟ್ಟಿಗೆ ಹೋಗಿಬಿಟ್ಟಿದ್ದೆವು.

ತಡಿಯಾಂಡಮೋಳ್ ಚಾರಣದಲ್ಲಿ ಹೊಸವರ್ಷ ಮಾತ್ರ ಆಚರಿಸಲಿಲ್ಲ, ಹೊಸ ಜ್ಯೋತಿಯನ್ನೇ ಬೆಳಗುವಂತಿತ್ತು. ಪ್ರವಾಸಗಳ ಯೋಜನಾಪಟ್ಟಿಯು ಹಿರಿದಿದೆ. ದಿನದಿಂದ ದಿನಕ್ಕೆ ಸಕಲರೂ ಹತ್ತಿರ ಹತ್ತಿರರಾಗುತ್ತಿದ್ದಾರೆ ಎದೆಯಾಳಕ್ಕೆ! ಪ್ರವಾಸಗಳು ಸ್ನೇಹವನ್ನು ಬೆಳೆಸುತ್ತೆ. ಜೊತೆಗೆ ಇಂಟರ್‍ನೆಟ್ಟು ಕೂಡ!ಸಿನೆಮಾಕ್ಕೆ ಹೋಗ್ತಾ ಇದ್ದೀವಿ, ಬರ್ತೀಯಾ?, ನಮ್ಮ ಮನೆಯಲ್ಲಿ ಫಂಕ್ಷನ್ನು, ತಪ್ಪದೇ ಬಾ, ನನ್ನ ಟ್ರೀಟು ಬರ್ಬೇಕಪ್ಪಾ.. ಹೀಗೆಲ್ಲಾ ಕರೆದಾಗ ಅನ್ನಿಸುತ್ತಿತ್ತು, "ನನ್ನನ್ನು ಇವರು ಕರೆಯುವಂಥದ್ದಾದರೂ ಏನಿದೆ? ವಾಸ್ತವವಾಗಿ ನಾನು ಯಾರು?" ಎಂದೆಲ್ಲಾ! ಆದರೆ, ಆ ಪ್ರೆಶ್ನೆಯು ಹರ್ಷದ ಉತ್ತರವನ್ನು ನೀಡತೊಡಗಿತ್ತು. ನನ್ನನ್ನೂ ತಮ್ಮವನೆಂದು ಪರಿಗಣಿಸುತ್ತಾರಲ್ಲಾ, ನಾನೇ ಧನ್ಯ ಎಂದು. ನಾನು ಇವರ್ಯಾರಿಗೂ ಬಾಲ್ಯಸಖನಲ್ಲ, ಸಹಪಾಠಿಯಲ್ಲ. ಬಹಳ ಅಪರೂಪದ ಮೈತ್ರಿಯೆಂದು ಮನದೊಳಗೇ ಮುದಗೊಳ್ಳುವಂತಾಗುತ್ತೆ! ನಾನು ಇವೆಲ್ಲಾ ಅವರುಗಳಿಗೆ ಹೇಳಬೇಕೋ ಕೂಡದೋ ಗೊತ್ತಿಲ್ಲ. ಆದರೆ ಬರೆಯಬೇಕೆಂದು ಅನ್ನಿಸಿತು, ಬರೆದುಬಿಟ್ಟೆ. ಎಲ್ಲಾ ಗೊತ್ತಿರೋ ವಿಷಯವೇ.


ಅನೇಕ ವಿಷಯಗಳನ್ನು ಹೇಳಲು ಪದಗಳಿಲ್ಲ. ಅನುಭವಗಳನ್ನು ಮಾತ್ರ ಹಂಚಿಕೊಳ್ಳಬಹುದು. ಅಂದು ಇದ್ದ ನಾಕು ಜನರು ಮೂರು ಗಾಡಿಯಲ್ಲಿ ಹೋಗಿದ್ದೆವು (ಶ್ರೀ, ನಾನು, ಶೃತಿ, ಸಿಂಧು). ನಾನೊಂದು ಗಾಡಿ. ಶೃತಿ - ಸಿಂಧು ಒಂದು ಗಾಡಿ, ಶ್ರೀ ಒಂದು ಗಾಡಿ. ಅದೇನೋ ಸಂಕೋಚ! ಇಂದು ಅದನ್ನೆಲ್ಲಾ ನೆನೆಸಿಕೊಂಡರೆ ನಗು ಬರುತ್ತೆ. ಈಗ ಯಾವುದೋ ಜನ್ಮದಿಂದ ಒಟ್ಟಿಗೇ ಇದ್ದೇವೇನೋ ಅಂದೆನಿಸುತ್ತೆ. ಶ್ರೀಧರನನ್ನು "ಬನ್ನಿ-ಹೋಗಿ" ಅನ್ನುತ್ತಿದ್ದೆ. ಈಗ ಸಕಲ ಸಕ್ಕದವನ್ನೂ ಆಡುತ್ತಿರುತ್ತೇವೆ ಒಟ್ಟಿಗೆ ಸೇರಿ ಕಾಫಿ ಹೀರುತ್ತ. 'ಸ್ವರೂಪ ನನ್ನ ಸಂಬಂಧಿಕನಂತೆ' ಎಂಬ ಅಂಕಣ ನಾನು ಸಹಾರ ಪತ್ರಿಕೆಗೆ ಬರೆದಾಗ ಅವನ ಬಗ್ಗೆ ಅಷ್ಟೇ ಗೊತ್ತಿದ್ದು. ತಿಳಿವಿನೋದದ ಸ್ವರೂಪನೀಗ ಸ್ನೇಹಿತ, ಸಂಬಂಧಿಕನಲ್ಲ. ಪುಣೆಗೆ ಹೊರಟಿದ್ದ ಶ್ರೇಯಸ್ಸಿಗೆ ಪುಸ್ತಕ ಕೊಡಲು ನಾನು ಹಾತೊರೆದು ಹೋಗಿದ್ದನ್ನು ಹೇಗೆ ಮರೆಯಲಿ! ಆತನಿಗೆ ಆ ಪುಸ್ತಕಗಳನ್ನು ಅಂದೇ ಕೊಡಬೇಕೆಂದು ಮನಸ್ಸು ಹೇಳಿತ್ತು. ಹಾರ್ಡ್-ಡಿಸ್ಕ್ ಭೀಮರಾಯರ ಪರಿಚಯದ ಹೊಸತರಲ್ಲಿ ಎಷ್ಟೊಂದು ಆಡಿಕೊಂಡಿದ್ದರೂ, ಆಕೆಯ ಸಾಹಸಪ್ರವೃತ್ತಿಯನ್ನು ನಿಜಕ್ಕೂ ಮೆಚ್ಚುತ್ತೇನೆ. ಯಾವುದಕ್ಕೆ, ಯಾವ ಹೊತ್ತಿನಲ್ಲಿ ಬೇಕಿದ್ದರೂ ಸೈ! ಸಿಂಗರ್ ಶೃತಿಯ ಹಾಡನ್ನು ಮರೆತರೆ ಕೊಡಗಿನ ಪ್ರವಾಸವನ್ನೇ ಮರೆತಂತೆ. ಮಾತಿಲ್ಲದಿದ್ದರೂ ಮೌನದಿಂದ ಗೌರವಿಸುವ ವಿವೇಕನನ್ನು, ಸಂತೋಷನನ್ನು ನಾನೂ ಅಷ್ಟೇ ಗೌರವಿಸುತ್ತೇನೆ. ಕನ್ನಡ ಕಣ್ಮಣಿಯ ನುಡಿಮುತ್ತುಗಳನ್ನು ಮರೆಯುವುದಾದರೂ ಹೇಗೆ! ಸರ್ಕಲ್ ಮಾರಮ್ಮನ ಅಪರಾವತಾರವೆಂದು ಕರೆಯಲ್ಪಟ್ಟರೂ ಶಿಶುಕಳೆಯ ಸ್ಮಿತೆಯ ಸ್ಮಿತೆಯು ಸರಸತಿಯ ಕಳೆಯನ್ನು ಮುಖದಲ್ಲಿ ಮೂಡಿಸುತ್ತೆ! ಸಾಹಿತ್ಯ, ಪಯಣ, ಸಂಗೀತ, ಸಮಚಿತ್ತ, ಚರ್ಚೆ, ವಿನೋದ, ಚಹಾ, ಸಕಲದಲ್ಲೂ ಭಾಗಿಯಾಗಿರುವ ಗಂಡಭೇರುಂಡ ಹಾಗೂ ಶ್ರೀಧರನ ಗೆಳೆತನದ ಪುಣ್ಯ ನನ್ನದಾಗಿದೆ. ಲೆಕ್ಕವಿಲ್ಲದಷ್ಟನ್ನು ಕಲಿತಿದ್ದೇನೆ ಎಲ್ಲರಿಂದಲೂ. ಅನೇಕ ಕೊರತೆಗಳನ್ನು ನೀಗಿಸುವ ಪುಣ್ಯ ಅವರುಗಳದ್ದಾಗಿದೆ! ಈ ಎಲ್ಲಾ ಅಮರ್ದುಗಳು ನನ್ನ ವಿಶ್ವದಲ್ಲಿ ರಾರಾಜಿಸಲು ಆ ಮೂರು 'ಮೊಮ್ಮಕ್ಕಳಿಗೆ' ನಾನು ಸಕಲ ಒಲವಿನ ನಮನಗಳನ್ನು ಸಲ್ಲಿಸುತ್ತೇನೆ. ಇದನ್ನು ಬರೆಯಬೇಕು ಅಂತ ಅದೇಕೋ ಅನ್ನಿಸಿತು. ಅವರುಗಳು ಓದಲೆಂದಲ್ಲ. ಅವರುಗಳಿಗೆ ಗೊತ್ತಿರೋ ವಿಷಯಗಳೇ. ಯಾರಿಗೂ ಏನೂ ಉಡುಗೊರೆಯನ್ನು ನಾನು ಕೊಟ್ಟಿಲ್ಲ. ಈ ಲೇಖನವನ್ನು ಅರ್ಪಿಸುತ್ತಿದ್ದೇನೆ ಸಕಲ ಅಮರ್ದುಗಳಿಗೆ!ಸ್ನೇಹ ಸೇತುವೆಗಳು ಅನೇಕವಿವೆ. ಆದರೆ, ನನ್ನನ್ನು ಈ ಸೇತುವೆಯನ್ನು ದಾಟಿಸಿ ತಮ್ಮ ತೀರದೆಡೆಗೆ ಕರೆದೊಯ್ಯುವ ಅನಿವಾರ್ಯತೆ ಅವರುಗಳಿಗಿರಲಿಲ್ಲ. ಆದರೂ ಹಾಗೆ ಮಾಡಿದ್ದಾರೆ. ಹೊರಗಿನವನೆಂದು ಎಂದೂ ಪರಿಗಣಿಸಿಲ್ಲ. ಆ ದಡಕ್ಕೆ ಹೋಗುವಂಥ ಅರ್ಹತೆಗಳಾದರೂ ಏನಿದೆ ನನಗೆ ಎಂಬ ಅಲೋಚನೆ ಅನೇಕ ಬಾರಿ ನನ್ನನ್ನು ಕಾಡಿದೆ. ನನ್ನ 'ಕಚ್ಚುವಿಕೆ', ದುರಹಂಕಾರ, ಹುಚ್ಚುತನ, ಬಡಬಡಿಕೆ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ. ಈ ಸಹಿಷ್ಣುತೆ, ಒಲವು, ಪ್ರೀತಿ ಶಾಶ್ವತವಾಗಿ ಇರುತ್ತೆಂಬ ನಂಬಿಕೆಯ ಹಡಗಿನಲ್ಲಿ ಪಯಣಿಸುತ್ತಿದ್ದೇನೆ. ವಿಧಿಸಾಗರವು ಉಕ್ಕದಿರಲಿ! ಈ ಮೈತ್ರಿತೋಟವು ಹಸಿರಾಗಿದ್ದು ಬಣ್ಣ ಬಣ್ಣದ ಗೆಳೆಯರೆಂಬ ಹೂಗಳಿಂದ ಕೂಡಿದೆ. ನಾನೂ ಒಂದು ಹೂವು ಈ ತೋಟದಲ್ಲಿ. ಬಾಡದಿರಲಿ ಹೂಗಳು!

- ಅ
30.06.2007
11.50PM

7 comments:

 1. ಹೇಗೆ ಪ್ರತಿಕ್ರಿಯೆ ತೋರಬೇಕೋ, ಗೊತ್ತಾಗ್ತಿಲ್ಲ man... ಅದಕ್ಕೇ ಹೇಳಿರೋದು -
  "ಬಾಳ ಪಯಣದಿ ಮರೆಯಲಾಗದು ಮಧುರನೆನಪನದೆಂದಿಗೂ,
  ಚಿರವು ಆಗಲಿ ನಮ್ಮ ಬಂಧವು - ಸ್ನೇಹ ಶಾಶ್ವತವೆಂದಿಗೂ" ಅಂತ.. :)

  ReplyDelete
 2. Tumba touching aagittu. I literally started weeping when i read this. akka tamma aadroo naanu neenu tumba different. I was always a 'team' person. nange yaavagloo chikkandinalli dandu dandu friends. Nange nenpide ... nin degree friends (adralloo 4 jana hudgeeru) nin birthday ge chennammanakere achchukattu manege bandaaga ammange sikkapatte aashcharya. Life U-turn thogondbittide ansutte. Naanu neenagideeni, neenu naanagideeya ansutte ... friends vishyadalli :-)

  ReplyDelete
 3. lekhana tumba touchy aagidhe.....
  nammellara sneha sadaakaala heege irali.... :-)... snehave heege..

  ReplyDelete
 4. idhara title "ತೋಟದ ಹೂವು ನಾನು" annodhu
  baala ishta aithu. heege iroNa naavellaru :)

  ReplyDelete
 5. samaya kaDme iddaaga idannu gadibidiyalli vodi system shutdown maaDidde. adeko gottilla, matte vodabeku anstu... erdne sarti vodidmele yerd sarti heLtideeni "bahaLa chennaagide... bahaLa chennaagide..." anta...

  ReplyDelete
 6. ಅರುಣಾ,

  ಒಳ್ಳೆಯ ಘಮಗ ಹೂ ದಂಡೆ ಕಟ್ಟಿಕೊಟ್ಟಿದ್ದೀಯಾ ಇಲ್ಲಿ. ನಿನಗೆ ನಮಸ್ತೇ. ಬೇರೇn ಹೇಳೋದೋ.. ಯಾಪಾಟಿ ಹೊಗ್ಳಿದೀಯಾ ಮಾರಾಯ! ಭಾವ ಸಾಗರ!.

  ReplyDelete
 7. [ಗಂಡಭೇರುಂಡ] ದಿಟಮ್ ದಿಟಮ್..

  [ವಿಜಯಾ] ಯೂ ಟರ್ನ್ ಅಂತ ನೀನು ಹೇಳಿದರೆ, "ನಾನು ಟರ್ನ್" ತೊಗೊಂಡಿದೀನಿ ಅಂತಲೇ? ;-)

  [ಶ್ರೀಧರ] "ಎಲ್ಲಿ" ಟಚ್ ಆಯ್ತು ಶ್ರೀಧರ?

  [ಶ್ರೀಕಾಂತ್] ಎಖೋ ಥರಾ... :-) (ಥ್ಯಾಂಕ್ಸ್ ಕಣೋ)

  [ಶ್ರೀನಿಧಿ] ಒಂದೊಂದು ಸಲ ಹೊನಲು ಉಕ್ಕುತ್ತೆ ನೋಡು..

  ReplyDelete