Thursday, July 26, 2007

ಕತ್ತು ನೋವು.. :-(

ಶಾಪ

ಇದು ಬರಿಯೆ ನೋವಲ್ಲ
ಶಾಪವಿದು ಘೋರ ಶಾಪವಿದು
ದೇಹದ ನೇಹದ ಕ್ರೂರ ಕೋಪವಿದು
ಜವಸಂಕಟದ ನಂಜಿನ ಕೂಪವಿದು
ನೋವಲ್ಲವೆನ್ನ ಪಾಪವಿದು

ಕಸಕೆ ತಳ್ಳಿದ ಸಮಯದಲಿ ಸಿಡುಕಾಗಿ
ಅನ್ನ ಪರಬೊಮ್ಮನ ಶಾಪವಿದು
ಸೋತು ತಲೆತಗ್ಗಿಸದೆ ವಿದ್ಯೆಗೆಡುಕಾಗಿ
ಸರಸತಿಯ ಸಾಕ್ಷಾತ್ ಶಾಪವಿದು
ಬರಿಯೆ ನೋವಲ್ಲವೆನ್ನ ಪಾಪವಿದು

ಜಗವ ಪ್ರೀತಿಸಿದ ಜನರ ಪ್ರೀತಿಸಿದ
ಜಲವ ಪ್ರೀತಿಸಿದ ಜಂತುವ ಪ್ರೀತಿಸಿದ
ಜತೆಗಾರರ ಪ್ರೀತಿಸಿದ ಎನ್ನ ಪ್ರೀತಿಯ ಶಾಪವಿದು
ಕರುಳ ನೋಯಿಸುತ ಕೊರಳ ಬಾಧಿಸುತ
ಮರಳುಗಾಡಿನಿರುಳ ಶಾಪವಿದು

ಶಾಪವೇನು ಕೋಪವೇನು
ಏನಿಹುದು ಪಾಪಪುಣ್ಯದಲಿ
ಬಂದವರ ಬಾರೆಂದು ಸೇರಿಸದಂತೆ
ಕಾಲು ಕೊರಳ ನೋವಿನ ಭೂಪವೇನು
ಸುಸ್ವಾಗತವೆನ್ನ ದೇಹದಾರಣ್ಯದಲಿ

- ಅ
23.11.2004
12AM

Tuesday, July 24, 2007

Belated Birthday Wishes..


ದಿಲ್ ಕೋ ತೇರಿ ಹೀ ತಮನ್ನಾ
ದಿಲ್ ಕೋ ಹೈ ತುಝ್‍ಸೇ ಹೀ ಪ್ಯಾರ್..
ಚಾಹೆ ತು ಆಏ ನ ಆಏ
ಹಮ್ ಕರೇಂಗೇ ಇಂತ್‍ಜ಼ಾರ್...

ಇಂಥಾ ಸಾಹಿತ್ಯ ಇರೋ ಹಾಡು ಇನ್ಯಾರು ತಾನೇ ಹಾಡಲು ಸಾಧ್ಯ? ಮುಖೇಶ್ ಅಲ್ಲದೆ ಬೇರಾವ ಹಾಡುಗಾರನಿಗೆ ತಾನೇ ಒಪ್ಪುತ್ತೆ?

ಮೊನ್ನೆ ಜುಲೈ ಇಪ್ಪತ್ತೆರಡಕ್ಕೆ ಮುಖೇಶ್ ಬದುಕಿದ್ದಿದ್ದರೆ ಎಂಭತ್ನಾಲ್ಕು ವರ್ಷ ವಯಸ್ಸಾಗುತ್ತಿತ್ತು. ಮೊನ್ನೆಯೇ ವಿಷ್ ಮಾಡಬೇಕಿತ್ತು. ಅದೇನೋ ಅದ್‍ಹೇಗೋ ಮರೆತು ಹೋಯಿತು.

ಬಾಲಿವುಡ್‍ನ ಮೊದಲ ದೊರೆ ಕೆ.ಎಲ್. ಸೈಗಲ್‍ನ ಅನುಸರಿಸಲು ಯತ್ನಿಸದವರು ಆ ಕಾಲದಲ್ಲಿ ಯಾರೂ ಇರಲಿಲ್ಲ. ಕಿಶೋರ್, ರಫಿ, ಲತಾ, ಶಂಶದ್ ಬೇಗಮ್, ನೂರ್ ಜಹಾನ್, ಗೀತಾ ದತ್, ಮಹೇಂದ್ರ ಕಪೂರ್, ಮನ್ನಾ ಡೇ, ಎಲ್ಲರೂ ಸೈಗಲ್‍ನಂತೆಯೇ ಹಾಡಬೇಕು ಎಂದುಕೊಳ್ಳುತ್ತಿದ್ದರು. ಮುಖೇಶ್ ಕೂಡ ಇದರಿಂದ ಹೊರೆತುಪಡಿಸಿಲ್ಲ. ಮುಖೇಶರ ಮೊಟ್ಟಮೊದಲ ಹಾಡು,

ದಿಲ್ ಜಲ್ತಾ ಹೈ ತೋ ಜಲ್‍ನೇ ದೇ..

ಕೇಳದಿರುವರು ಯಾರು? ಖುದ್ದು ಸೈಗಲ್‍ ಈ ಹಾಡನ್ನು ಕೇಳಿ, ತನ್ನ ದನಿಯಂತೆಯೇ ಇದೆಯಲ್ಲಾ ಎಂದು ಅಚ್ಚರಿಗೊಂಡಿದ್ದರು. ಆಗ ಸೈಗಲ್ ಸೂಪರ್ ಸ್ಟಾರ್. ಸೈಗಲ್‍ ಇಂದ ಈ ಕಾಂಪ್ಲಿಮೆಂಟು ಸಿಕ್ಕ ಮೇಲೆ ಮುಖೇಶ್ ದರ್ದ್ ಭರೇ ಗೀತ್‍ಗಳ ಅರಸರಾಗಿಬಿಟ್ಟರು. ಮುಖೇಶರ ದನಿಯಲ್ಲಿಯೇ ಒಂದು ನೋವಿತ್ತು ಎಂದು ಸಂಗೀತ ರಸಿಕರು ಹೇಳುತ್ತಾರೆ. ಮುಖೇಶ್ ಹಾಡುಗಳನ್ನು ಕೇಳುತ್ತಿದ್ದರೆ ಈ ಜಗತ್ತಿನಿಂದ ಬೇರೆ ಜಗತ್ತಿಗೆ ಪಯಣ ಮಾಡಿರುವಂತಾಗುತ್ತೆ. ಕಣ್ಣಲ್ಲಿ ನೀರು ತುಂಬಿ ಬರುತ್ತೆ.

ಜಾನೇ ಕಹಾಂ ಗಏ ಒ ದಿನ್...ರಾಜ್‍ಕಪೂರ್ ಹಾಗೂ ಮುಖೇಶ್‍ಗೆ ಇದ್ದ ನಂಟು ಎಲ್ಲರಿಗೂ ಗೊತ್ತಿರೋದೇ. ಕನ್ನಡದಲ್ಲಿ ರಾಜ್‍ಕುಮಾರ್‍ಗೆ ಪಿ.ಬಿ.ಶ್ರೀನಿವಾಸ್ ಹೇಗೆ ಹೇಳುಮಾಡಿಸಿದ ಹಾಡುಗಾರರಾಗಿದ್ದರೋ ಹಾಗೆಯೇ ರಾಜ್ ಕಪೂರ್ ಚಿತ್ರ ಎಂದರೆ ಮುಖೇಶ್ ಹಾಡುಗಳು ಇರಲೇ ಬೇಕು. ಮುಖೇಶರ ಸಾವು ಅಮೆರಿಕೆಯಲ್ಲಿ ಬರೆದಿತ್ತು. ಸಂಗೀತ ಕಾರ್ಯಕ್ರಮಕ್ಕೆಂದು ಅಲ್ಲಿಗೆ ಹೋಗಿದ್ದ ಅವರು ಅಲ್ಲಿ ಕೊನೆಯುಸಿರೆಳೆದರು. ಕೊನೆಯುಸಿರೆಳೆದಿದ್ದು ಅವರ ದೇಹ ಮಾತ್ರ. ಅವರ ಹಾಡುಗಳು ಆಚಂದ್ರಾರ್ಕ! ಅವರ ಸಾವನ್ನು ಕೇಳಿದ ರಾಜ್ ಕಪೂರ್ ಹೇಳಿದ್ದು, "ನಾನು ನನ್ನ ಧ್ವನಿಯನ್ನು ಕಳೆದುಕೊಂಡುಬಿಟ್ಟೆ!" ಎಂದು.

ಕಹೀಂ ದೂರ್ ಜಬ್ ದಿನ್ ಢಲ್ ಜಾಏ...

ನೋವಿನ ಸವಿಯನ್ನು ಅನುಭವಿಸಲು ಈ ವಿಡಿಯೋಗಳು..

ಈ ಹಾಡುಗಳನ್ನು ಇಲ್ಲಿ ಪೋಸ್ಟ್ ಮಾಡುವ ಮುನ್ನ ನೋಡಿದಾಗ ಸಣ್ಣಗೆ ಕಣ್ಣು ತುಂಬಿ ಬಂತು..

- ಅ
24.07.2007
7.30PM

Sunday, July 22, 2007

ಟಾಪ್ 5 ನಿಷ್ಪ್ರಯೋಜಕ ಸ್ಥಳಗಳು - ಬೆಂಗಳೂರಿನಲ್ಲಿ..

ಹೋಗಲು ಅಯೋಗ್ಯಕರ ಸ್ಥಳಗಳು ಬೆಂಗಳೂರಿನಲ್ಲಿ ಅನೇಕವಿದೆ. ಅದರಲ್ಲಿ ಟಾಪ್ 5 ನ್ನು ಬರೆದಿಟ್ಟುಕೊಂಡಿರುವುದು ನನ್ನ ಹಿತದೃಷ್ಟಿಯಿಂದ. ಈ ಜಾಗಗಳಿಗೇ ಹೋಗದೇ ಇರೋರು ಪುಣ್ಯವಂತರು.

ಟಾಪ್ 5 - ಭನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಲ್ಲಿ ನೂರಾರು ಪ್ರಾಣಿಗಳಿವೆ - ಬಂಧನದಲ್ಲಿ. ಮರದಿಂದ ಮರಕ್ಕೆ ಜಿಗಿದು ಕಾಡೆಲ್ಲ ಅಲೆವ ಚಿರತೆಗಳು 100 X 100 ಸೈಟಿನೊಳಗೆ ಪಂಜರದಲ್ಲಿ, ಸಾವಿರಾರು ಮೈಲಿಗಳು ನಡೆದು ಸಾಗುತ್ತಾ ಕಾಡಿನ ಸೊಬಗನ್ನು ಬೆಳಗಿಸುವ ಆನೆಗಳು ಮರವೊಂದಕ್ಕೆ ಕಟ್ಟಿದ ಸರಪಳಿಯ ಸೆರೆಯಲ್ಲಿ, ಆಗಸವನ್ನು ರಂಗಾಗಿಸುವ ಬಣ್ಣ ಬಣ್ಣದ ಹಕ್ಕಿಗಳು ರೆಕ್ಕೆ ಬಡಿದರೆ ಇನ್ನೊಂದು ಹಕ್ಕಿಗೆ ತಾಕುವಂತಿರುವ ಸಣ್ಣ ಪಂಜರದಲ್ಲಿ ಬದುಕುತ್ತಾ ಸಾಯುತ್ತಿವೆ. ಬಿಲವನ್ನು ತೋಡುವ ನರಿಗಳನ್ನು ಕಾನ್‍ಕ್ರೀಟು ನೆಲದ ಪಂಜರದೊಳಗೆ ಹಾಕಿದ್ದಾರೆ. ಆಗುಂಬೆಯ ಕಾಡಿನಲ್ಲಿ ರಾಜನಂತೆ ಹೆಡೆಯೆತ್ತಿ ಬದುಕಬೇಕಾಗಿರುವ ಕಾಳಿಂಗನು ಕೆಳಗೆ, ಮೇಲೆ, ಎಡಕ್ಕೆ ಬಲಕ್ಕೆ ಎಲ್ಲಾ ಕಡೆಯೂ ಆವೃತಗೊಂಡ ಬೋನಿನಲ್ಲಿದ್ದಾನೆ.ಸಫಾರಿಯಲ್ಲಿ ಕಾಣಿಸುವ ಸಿಂಹ ಹುಲಿಗಳೋ, ವಾಹನಗಳಿಗೆ ಎಳ್ಳಷ್ಟೂ care ಮಾಡುವುದಿಲ್ಲ. ನವಿಲುಗಳು ಜನಸಮೂಹದಲ್ಲೇ ಗರಿಕೆದರುತ್ತವೆ. ಹಿಮಾಲಯದ ಕರಡಿಗಳೂ ಬೆಂಗಳೂರಿನ ಪಂಜರದೊಳಗೆ ಯಾಕೆ ಬಂತು ಎಂದು ಯಾರೂ ಪ್ರೆಶ್ನಿಸುವಂತಿಲ್ಲ. ಹುಲ್ಲು ತಿನ್ನುವ ಜಿಂಕೆಗಳು ತಿಳಿಗೇಡಿಗಳು ಕೊಡುವ ಪಾಪ್ ಕಾರ್ನ್ ಗೆ ಹಪಹಪಿಸುತ್ತವೆ. ಇಪ್ಪತ್ತೈದು ಮಕರಿಗಳು ಸಂಪಿನಂಥ ಒಂದು ಕೊಳಕು ಕೊಳದಲ್ಲಿ ಎಂದೋ ಬಿದ್ದ ಮೀನನ್ನು ತಿನ್ನುತ್ತಾ ಬಿದ್ದಿರುತ್ತವೆ.

"ಟಾಯ್ಲೆಟ್ ಎಲ್ಲಿದೆ?" ಎಂದು ಯಾರಾದರೂ ಕೇಳಿದರೆ, "ಇದೇ ವಾಸನೆಯ ಜಾಡು ಹಿಡಿದು ನಡೆದು ಸಾಗಿ. ವಾಸನೆ ಹೆಚ್ಚಾಗುತ್ತಾ ಆಗುತ್ತಾ ಟಾಯ್ಲೆಟ್ಟು ನಿಮ್ಮ ಮುಂದೆ ಪ್ರತ್ಯಕ್ಷ ಆಗುತ್ತೆ. ಒಳಗೆ ಹೋಗಿ ಹೊರ ಬಂದ ಮೇಲೆ ನೀವು ಮೂರ್ಛೆ ಹೋಗಿರದಿದ್ದರೆ ಮನೆಗೆ ಹೋಗಿ ಸ್ನಾನ ಮಾಡಿ" ಎಂದಷ್ಟೂ ಹೇಳಬೇಕಾಗುತ್ತೆ. ಸಿಗುವ ಆಹಾರಗಳೋ ಆಹಾ, ಭಗವಂತನಿಗೇ ಪ್ರೀತಿ. ಪ್ರಾಣಿಗಳ ಪಾಯಿಖಾನೆಯನ್ನೆಲ್ಲಾ ಬೆರೆಸಿ ಚಿತ್ರಾನ್ನ ಮೊಸರನ್ನಗಳನ್ನು ಮಾರುವ ಹಾಗಿರುತ್ತೆ. ಮಿಕ್ಕಿದ್ದೆಲ್ಲಾ ಪ್ಲಾಸ್ಟಿಕ್ ಮಯ. ಎಂಟ್ರೆನ್ಸಿನಲ್ಲಿ ಪ್ಲಾಸ್ಟಿಕ್‍ ಚೀಲಗಳಲ್ಲಿ ತಂದ ಆಹಾರಗಲನ್ನೆಲ್ಲಾ ಕಾಗದದ ಪೊಟ್ಟಣಕ್ಕೆ ಹಾಕಿಕೊಡುವ ಒಂದು ಒಳ್ಳೇ ಕೆಲಸ ಮಾಡುತ್ತಾರೆ, ಆದರೆ, ಒಳಗೇ ಇರುವ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರುಗಳ ಜಾತ್ರೆಯನ್ನು ಮಾತ್ರ ನಿಲ್ಲಿಸಿಲ್ಲ.

ಈ ಜಾಗಕ್ಕೆ ಹೋಗಿ ಪ್ರಯೋಜನವಿಲ್ಲ. ಪ್ರಾಣಿಗಳು ನಿಮ್ಮನ್ನು ಶಪಿಸುತ್ತವೆ ಅಷ್ಟೆ.

ಟಾಪ್ 4 - ಉಪಗ್ರಹ ನಿಲ್ದಾಣ

ಮೈಸೂರು ರಸ್ತೆಯಲ್ಲಿ ಉಪಗ್ರಹ ನಿಲ್ದಾಣವೆಂದು ಒಂದು ಬೃಹತ್ ನಿಲ್ದಾಣವಿದೆಯೆಂದು ದಕ್ಷಿಣ ಬೆಂಗಳೂರಿಗರಿಗಲ್ಲದೆ ಬೇರಾರಿಗೂ ಗೊತ್ತಿಲ್ಲ ಬಿಡಿ. ಬೆಂಗಳೂರು ವಿಮಾನ ನಿಲ್ದಾಣಕ್ಕಿಂತ ಥಳುಕಿನಿಂದಿರುವ ಈ ಬಸ್ ನಿಲ್ದಾಣವನ್ನು ನಿರ್ಮಿಸಿ ಎರಡು ವರ್ಷಕ್ಕೂ ಹೆಚ್ಚಾಯಿತೆನಿಸುತ್ತೆ. ಮೈಸೂರು ಕಡೆಗೆ ಹೋಗುವ ಬಸ್ಸೆಲ್ಲಾ ಇಲ್ಲಿಂದಲೇ ಹೊರಡುತ್ತಂತೆ. So what? ಮುಖ್ಯ ನಿಲ್ದಾಣದಿಂದಲೂ ಹೊರಡುತ್ತೆ! ಇಲ್ಲಿಗೆ ಬರುವ ಅವಷ್ಯವಾದರೂ ಏನಿದೆ? ಇದನ್ನು ಕಟ್ಟಿದ್ದು ಟ್ರಾಫಿಕ್ ಜ್ಯಾಮ್‍ನ ತಡೆಗಟ್ಟುವ ಉಪಾಯದಿಂದಂತೆ! ಆದರೆ ಇದು ಬಿಗ್ ಬಜಾರ್‍ಗೆ ನೆಲೆಯಾಗಲೇ ಕಟ್ಟಿರೋದು ಎಂದು ಎಲ್ಲರಿಗೂ ಗೊತ್ತಿರೋ ವಿಷಯವೇ! ಚೆಲುವಾದ ಕಕ್ಕಸು ಮನೆಯೊಂದನ್ನು ಹೊರೆತುಪಡಿಸಿ ಇಲ್ಲಿ ಇನ್ನೇನೂ ವ್ಯವಸ್ಥೆಯಿಲ್ಲ. "ವಿಚಾರಣೆ" ಕೌಂಟರಿನಲ್ಲೂ ಯಾರೂ ಹೇಳೋರಾಗಲೀ ಕೇಳೋರಾಗಲೀ ಇರೋದಿಲ್ಲ.ಇಲ್ಲಿಗೆ ಹೋಗೋದರಿಂದ ಏನೂ ಲಾಭವಿಲ್ಲ.

ಟಾಪ್ 3 - ಗರುಡ ಮಾಲ್

ಅವಘಡಗಳು, ಪ್ರಾಣ ಹಾನಿ ಎಂಬುದು ಈ ಸ್ಥಳ ಮಹಾತ್ಮೆ! ಪತ್ರಿಕೆಗಳಲ್ಲಿ ಮುಖ್ಯಾಂಶಗಳಲ್ಲಿ ಇದರದೇ ಸುದ್ದಿ. ಹುಡುಗ ಮೇಲಿಂದ ಬಿದ್ದು ಸತ್ತಿದ್ದು, ಲಿಫ್ಟು ಕೆಟ್ಟು ಕೆಳಗುರುಳಿದ್ದು ಹೀಗೇ. ವಾಸ್ತು ಹೋಮ ಬೇರೆ ಮಾಡಿಸಿದರಂತೆ. ಮೆಟ್ಟಿಲುಗಳನ್ನು ಹತ್ತಿಳಿಯಲು ಬೆಂಗಳೂರಿಗರು ಸೋಮಾರಿಗಳೆಂದೇ ಲಿಫ್ಟುಗಳು, ಎಸ್ಕಲೇಟರುಗಳು ನಿರ್ಮಿಸುತ್ತಾರೆ. ಆ ಸೋಮಾರಿ ತನದ ಪ್ರೋತ್ಸಾಹವನ್ನಾದರೂ ಸರಿಯಾಗಿ ಮಾಡುತ್ತಾರೆಯೇ? ಇಲ್ಲ. ಬಿದ್ದು ಸಾಯುವಂಥ ಲಿಫ್ಟುಗಳು, ಗೋಡೆಗಳು. ಹಣವೊಂದೇ ಮಾಲೀಕರ ಆದ್ಯತೆಯಿರುವಾಗ ಪ್ರಾಣಕ್ಕೆಲ್ಲಿ ಬೆಲೆ? ಈ ಗರುಡ ಮಾಲ್‍ನ ಗ್ರಹಚಾರ ಸರಿಯಿಲ್ಲ.


ಶನಿವಾರ ಭಾನುವಾರ ಬಂತೆಂದರೆ ಮುಗಿಯಿತು. ಅರ್ಧ ಬೆಂಗಳೂರು (ಇದರಲ್ಲಿ ಶೇ. ೯೦ ಶುದ್ಧ ಬೆಂಗಳೂರಿಗರಾಗಿರೋದಿಲ್ಲ) ಯಾವುದೋ ಒಂದು ಶಾಪಿಂಗ್ ಮಾಲ್‍ನಲ್ಲಿ ಇರುತ್ತೆ. ಹೋಟೆಲುಗಳಲ್ಲಿ ಕಾಯಲೂ ಸಹ ಜಾಗ ಇರೋದಿಲ್ಲ. ಸಿನಿಮಾಗಳು ಎಷ್ಟೇ ಕೆಟ್ಟದಾಗಿದ್ದರೂ ಹೌಸ್ ಫುಲ್! ಬಟ್ಟೆ ಅಂಗಡಿಗಳು ಶನಿವಾರಸಂತೆಯನ್ನು ಮೀರಿಸಿರುತ್ತವೆ. ಜನಮರುಳೋ ಜಾತ್ರೆ ಮರುಳೋ! ಕಲಿಕೆ ಮಾತ್ರ ಸೊನ್ನೆ. ಜನಜಂಗುಳಿಗಳಲ್ಲಿ ಸಿಕ್ಕು ಒದ್ದಾಡುವುದು ಆರೋಗ್ಯಕ್ಕೆ ಒಳ್ಳೇದಲ್ಲ ನೋಡಿ.

ಟಾಪ್ 2 - ಫನ್ ವರ್ಲ್ಡ್

ಅರಮನೆ ಆವರಣದಲ್ಲಿ ಇಂಥದ್ದೊಂದು ವರ್ಲ್ಡ್ ಇದೆ. ಇಲ್ಲಿನ fun ಮಾಯ ಆಗೋದು ಟಿಕೀಟು ಕೌಂಟರಿನಲ್ಲೇ. ಆ ಪಾಟಿ ಹಣ ಕೀಳುತ್ತಾರೆ. ಒಳಗೆ ಹೊಕ್ಕರೆ ಇರೋದು ಮೂರು ಮತ್ತೊಂದು ಮಕ್ಕಳಾಟಿಕೆ. ಕಪ್ಪೆಯಾಕಾರದ ರೈಲು, ಆಮೆಗಿಂತ ನಿಧಾನಕ್ಕೆ ಚಲಿಸುವ ಜಯಂಟ್ ವೀಲು, ಎರಡೇ ಎರಡು ಸುತ್ತು ಸುತ್ತುವ ರೋಲರ್ ಕೋಸ್ಟರು, ಕೊಳಕು ತುಂಬಿದ ನೀರಿನ ಉದ್ಯಾನ! ಇಷ್ಟು ಬಿಟ್ಟರೆ ಇಲ್ಲಿ ಇನ್ನೇನೂ ಇಲ್ಲ. ಹಣ ಹೆಚ್ಚಾಗಿರೋರು ಇಲ್ಲಿಗೆ ಹೋಗಬಹುದು. ಹಣ ಹೆಚ್ಚಾದರೂ ಮಜ ಬೇಕು ಎನ್ನುವವರು ವಂಡರ್ ಲಾ ಗೆ ಹೋಗಬಹುದು.


ಟಾಪ್ 1 - ನಿರ್ಮಲ


ಸುಮ್ಮನೆ ಒಂದು ರೂಪಾಯಿ ದಂಡ - ಬಾಗಿಲು ತೆಗೆದಿದ್ದರೆ. ಇದಕ್ಕೆ ಕೆಲಸದ ಸಮಯ ಬೇರೆ ಇರುತ್ತೆ. ಆ ಸಮಯ ಮೀರಿದ ನಂತರ ಏನಾದರೂ ಅರ್ಜೆಂಟಾದರೆ ದೇವರೇ ಗತಿ. ಒಂದು ರೂಪಾಯಿ ಕೊಡೋದಲ್ಲದೆ ಶೌಚಾಲಯದ ಅಶೌಚಗಳನ್ನು ಬೇರೆ ಸಹಿಸಿಕೊಂಡಿರಬೇಕು. ಅರ್ಜೆಂಟಾದರೆ ಮನೆಗೆ ಬೇಗ ಧಾವಿಸಿ, ಇಲ್ಲವೇ ಪೊದೆಗಳನ್ನು ಹುಡುಕಿ. ನಿರ್ಮಲ ಕೇವಲ ನಿಷ್ಪ್ರಯೋಜಕ.

- ಅ
22.07.2007
11.45PM

Thursday, July 19, 2007

ಅಪನಂಬಿಕೆಯ ಪರಮಾವಧಿ

Spam Mailಗಳ ಬಗ್ಗೆ ಅಂತರ್ಜಾಲವನ್ನು ಬಳಸುವವರಿಗೆಲ್ಲಾ ಗೊತ್ತೇ ಇರುತ್ತೆ. ಯಾವುದೋ ಕಂಪ್ಯೂಟರು ಈ ರೀತಿಯ ಅಂಚೆಗಳನ್ನು ಕಳಿಸುವಂತೆ ಮಾಡುವ ದುಷ್ಕೃತ್ಯವೆಸಗುವವರಿಗೊಂದು ಧಿಕ್ಕಾರ ಹೇಳುತ್ತಾ ಆರಂಭಿಸುತ್ತೇನೆ.

ಕೆಲವು spamಗಳು ಯಾವುದೇ ನೇರ ಉದ್ದೇಶವಿಲ್ಲದೆ ಸಂಪೂರ್ಣ ಆತ್ಮಾಪನಂಬಿಕೆಯಿಂದ ಬಂದಿರುತ್ತವೆ.

MOTHER IS GOD" send this to 20 people(+me)with in 2 days u will get good news from ur mother 100% true. if u neglect ur life will not success

ಹೀಗೊಂದು ಈ ಮೈಲ್ ಬಂತು ನೆನ್ನೆ. ಸಿಟ್ಟಾಗದೇ ಇರಲು ಸಾಧ್ಯವೇ? ಸಿಟ್ಟಾದರೇನಂತೆ, ಭಗವಂತ ಒಂದಷ್ಟು ತಾಳ್ಮೆ ಕೊಟ್ಟಿದ್ದಾನೆ. ಯಾರು ಕಳಿಸಿದರೋ ಅವರ ಎಲ್ಲಾ ID-ಗಳಿಗೂ ಇಪ್ಪತ್ತು ಇಪ್ಪತ್ತು ಸಲ ಕಳಿಸಿದೆ. "send ಒತ್ತೋದು, back ಒತ್ತೋದು.."

Mother is God ಅನ್ನೋದು ಗೊತ್ತಿರೋ ವಿಷಯವೇ. ಅದನ್ನೇನು ಈ ಮೈಲ್ ಮುಖಾಂತರ ಹೇಳೋದು. ಅದನ್ನು ಇಪ್ಪತ್ತು ಜನಕ್ಕೆ ಕಳಿಸಿದರೇನೇನಾ ಒಳ್ಳೇ ಸುದ್ದಿ ಬರೋದು. ನಾನ್‍ಸೆನ್ಸ್! ಇಲ್ಲ ಅಂದ್ರೆ ಸಕ್ಸೆಸ್ ಇರಲ್ವಂತೆ!!

ತಿರುಪತಿ ವೆಂಕಟರಮಣನ ಚಿತ್ರವಂತೂ ನನ್ನ inboxಗೆ ಅದೆಷ್ಟು ಸಲ ಬಂದಿದೆಯೋ ನೆನಪೇ ಇಲ್ಲ. ನಿರ್ದಾಕ್ಷಿಣ್ಯವಾಗಿ ಅದನ್ನು delete ಮಾಡಿದ್ದೇನೆ. ಅದನ್ನು delete ಮಾಡಿದರೆ ಏನೂ ಕೆಟ್ಟದ್ದು ಆಗೋದಿಲ್ಲ, inbox ಅಲ್ಲಿ 1MB ಜಾಗ ಖಾಲಿ ಆಗುತ್ತೆ, ಇನ್ನೂ ಒಳ್ಳೇದೇ.

ಎಸ್ಸೆಮ್ಮೆಸ್ ಅಲ್ಲಿ ಕೂಡ ಈ ಪೀಡೆ ವಕ್ಕರಿಸುತ್ತೆ!

"Om venkateshaaya namah - send this to 15 people to hear good news"

ನನಗೆ ನಿನ್ನ ಗುಡ್ ನ್ಯೂಸೂ ಬೇಡ, ನಿನ್ನ ವೆಂಕಿಯೂ ಬೇಡ ಎಂದು ರಿಪ್ಲೈ ಮಾಡಿದ್ದೀನಿ. ವೆಂಕಟೇಶ ಒಳ್ಳೇದು ಮಾಡೋ ಹಾಗಿದ್ರೆ, ಎಸ್ಸೆಮ್ಮೆಸ್ ಕಳಿಸು ಅಂತ ಹೇಳುತ್ತಾನೆಯೇ? ಒಳ್ಳೇಯ ಕೆಲಸ ಮಾಡಿದರೆ, ಇನ್ನೊಬ್ಬರಿಗೆ ಒಳಿತನ್ನು ಮಾಡಿದರೆ, ನಮಗೆ ಒಳ್ಳೇದು ಆಗೇ ಆಗುತ್ತೆ ಅನ್ನೋ ನಂಬಿಕೆ ನಮ್ಮಲ್ಲಿದ್ದರೆ ಸಾಕು. ಅದು ಬಿಟ್ಟು, ಮಾಡೋ ಕೆಟ್ಟ ಕೆಲಸ ಎಲ್ಲಾ ಮಾಡಿಬಿಟ್ಟು, ಹೆದರಿಕೆಯಿಂದ ಈ ರೀತಿ ಸಂದೇಶಗಳನ್ನು ಕಳಿಸಿದರೆ ಅದು ಇನ್ನೊಬ್ಬರಿಗೆ ತೊಂದರೆ ಮಾಡಿದ ಪಾಪ ಕೃತ್ಯವಲ್ಲದೆ ಬೇರೇನೂ ಅಲ್ಲ.

"........................ ಹುಡುಗಿಗೆ A+ ರಕ್ತ ಬೇಕು, ಈ ................... ಸಂಖ್ಯೆಗೆ ಕರೆ ಮಾಡಿ..."

ಅನೇಕ ಸಲ ಇಂಥಾ ಸಂದೇಶ ಕಳಿಸುವವರಿಗೆ ಆ ಹುಡುಗಿಯ ಪರಿಚಯವೂ ಇರೋದಿಲ್ಲ, ಆ ಸಂಖ್ಯೆಯು ಚಾಲನೆಯಲ್ಲಿದೆಯೋ ಇಲ್ಲವೋ ಎಂಬುದೂ ತಿಳಿದಿರೋದಿಲ್ಲ. ಸುಮ್ಮನೆ ತಾವೇನೋ ಉಪಕಾರ ಮಾಡುತ್ತಿದ್ದೇವೆ ಎಂಬ ಭಾವನೆಯಿಂದ ಕಳಿಸುತ್ತಾರೆ. ಆ ಸಂಖ್ಯೆಗಳಿಗೆ ಕರೆ ಮಾಡಿ ನೋಡಿದರೆ, ಆ ಸಂಖ್ಯೆ ಸತ್ಯವಾದದ್ದೇ ಆದರೆ, "ರಕ್ತವೂ ಬೇಡ ಮಾಂಸವೂ ಬೇಡ" ಎಂಬ ಉತ್ತರ ಬಂದೀತು. ಅಥವಾ, "ಅದು ಮೂರು ವರ್ಷಗಳ ಹಿಂದೆ ಬೇಕಿತ್ತು ಸರ್, ಈಗಲ್ಲ" ಎಂದು ಹೇಳಿದರೂ ಅಚ್ಚರಿಯಿಲ್ಲ. ಆ ರೀತಿಯ ಸಂದೇಶಗಳು service providerಗಳ ಹುನ್ನರವಾದರೂ ಆಗಿರಬಹುದೆಂಬ ಅರಿವೂ ಇರೋದಿಲ್ಲ ಕೆಲವು ಜನಕ್ಕೆ.

ಇನ್ನೂ ವಿಚಿತ್ರ ಸಂದೇಶ ಎಂದರೆ ಯಾರಿಗೋ ಏನೋ ಕೆಟ್ಟ ಕುಲಗೆಟ್ಟ ದೊಡ್ಡ ರೋಗವಂತೆ, ಆ ಸಂದೇಶವನ್ನು forward ಮಾಡಿದರೆ ಹತ್ತು ಪೈಸೆಯನ್ನು ಹಚ್ (ಅಥವಾ ಯಾವುದೋ ಒಂದು ಮಣ್ಣಂಗಟ್ಟಿ service provider) ಕೊಡುತ್ತಂತೆ ಅವರಿಗೆ. ಇದು ಸಾಧ್ಯವೇ? ಸಿಂಪಲ್ ಕಾಮನ್ ಸೆನ್ಸ್ ಉಪಯೋಗಿಸಿದರೂ ಸಾಕು. ಇಂಥಾ ಸಂದೇಶಗಳನ್ನು ಕಳಿಸುವವರಿಗೆ ಅಷ್ಟೊಂದು ತಾಳ್ಮೆ ಇರೋದಿಲ್ಲ. ಆದರೆ, ನನ್ನಂಥೋರಿಗೆ ಅದೇ ಸಂದೇಶವನ್ನು ಅವರಿಗೇನೇ ಇಪ್ಪತ್ತು ಸಲ forward ಮಾಡುವ ತಾಳ್ಮೆ ಹಾಗೂ ಸಾಮರ್ಥ್ಯವಿದೆ. ಯಾಕೆಂದರೆ ಎಸ್ಸೆಮ್ಮೆಸ್ಸು ಫ್ರೀ!!

ಮುಂಚೆ, ನಾನೇ ನೋಡಿದ್ದೇನೆ, ಅಂಚೆಯಲ್ಲಿ - i mean, post ಅಲ್ಲಿ ಬರುತ್ತಿತ್ತು ಈ ಥರದ ಸಂದೇಶಗಳು. ಏನೇನೋ ಬಡಬಡಿಕೆಯನ್ನು ಬರೆದು, ಅದೆಲ್ಲೋ ಪ್ಲೇಗ್ ಬಂದಿತ್ತು, ಅದ್ಯಾವನೋ ತಲೆಮಾಸಿದ ಬಾಬನದೋ ಸ್ವಾಮಿಯದೋ ಕೃಪೆಯಿಂದ ಎಲ್ಲಾ ನೀಗಿತು, ಇದನ್ನು ಓದಿದವರು ಕನಿಷ್ಟ ನೂರು ಪ್ರತಿ ಅಚ್ಚು ಮಾಡಿಸಿ post ಮಾಡಬೇಕು ಅಂತ. ಮಾಡದೇ ಇದ್ದರೆ ನಮಗೂ ಪ್ಲೇಗ್ ಬರುತ್ತಂತೆ. ನರಳಿ ವಿಲ ವಿಲ ಒದ್ದಾಡಿ ರಕ್ತ ಕಾರಿ ಸಾಯುತ್ತೇವಂತೆ! ಅವನ ಪಿಂಡ!!

ಮನುಷ್ಯ ಎಷ್ಟು insecure ಅಲ್ಲವೇ?

ಜೀವ ಜಡರೂಪ ಪ್ರಪಂಚವನದಾವುದೋ
ಆವರಿಸಿಕೊಂಡುಮೊಳನೆರೆದುಮಿಹುದಂತೆ
ಭಾವಕೊಳಪಡದಂತೆ ಅಳತೆಗಳವಡದಂತೆ
ಆ ವಿಶೇಷಕೆ ಮಣಿಯೊ - ಮಂಕುತಿಮ್ಮ!!

ಎಂದು ನಮ್ಮನ್ನು ಭೂಮಿಗೆ ತಂದ, ನಮಗೆ ಇಲ್ಲಿರಲು ಅವಕಾಶ ಮಾಡಿಕೊಟ್ಟ, ಬುದ್ಧಿ ಕೊಟ್ಟ, ಯೋಚನಾ ಶಕ್ತಿ ಕೊಟ್ಟ ಬದುಕು ಕೊಟ್ಟ, ಜೀವ ಕೊಟ್ಟ ವಿಶೇಷ ಶಕ್ತಿಯೆಂಬ ದೇವರಿಗೆ ನಮಸ್ಕರಿಸಬೇಕೇ ವಿನಾ, ಕೊಟ್ಟ ಬುದ್ಧಿಯನ್ನು ಕೆಟ್ಟದಾಗಿ ಬಳಸಿಕೊಂಡು, ನಂತರ ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಂಡು, ಅದನ್ನು ತಿದ್ದಲು ಹೋಗಿ, ಒಳ್ಳೇದಾಗುತ್ತೆ ಎಂಬ ಭ್ರಮೆಯಿಂದ ಅನವಶ್ಯಕ ಪತ್ರಗಳನ್ನು, ಸಂದೇಶಗಳನ್ನು ಇನ್ನ್ನೊಬ್ಬರಿಗೆ ಕಳಿಸಿ ತೊಂದರೆ ಮಾಡುವುದರಿಂದ ಯಾರಿಗೂ ಏನೂ ಪ್ರಯೋಜನವಿಲ್ಲ. ತಂತ್ರಜ್ಞಾನವಿರುವುದು ಇಂಥಾ ಕೆಲಸಗಳಿಗಲ್ಲ. ನಮ್ಮ ಮೇಲೆ ನಮಗೆ ನಂಬಿಕೆಯಿರಲಿ. ಗುಡ್ ನ್ಯೂಸ್ ತಾನಾಗಿ ತಾನೇ ಬರುತ್ತೆ.

- ಅ
19.07.2007
5.30AM

Friday, July 6, 2007

ಗ್ರೇಟ್ ಕನ್ನಡಿಗ!ಇದನ್ನು ಕೇಳದಿರುವವರು ನಿಜಕ್ಕೂ ದುರ್ಭಾಗ್ಯವಂತರು. ಇದು ಗುರುದತ್‍ನ ಚೌದ್ವೀ ಕಾ ಚಾಂದ್ ಚಿತ್ರದ ಹಾಡು!

ಗುರುದತ್ ಕನ್ನಡದವನೆಂದು ಬಹಳ ಕಡಿಮೆ ಜನಕ್ಕೆ ಗೊತ್ತಿರೋ ವಿಷಯ. ಉತ್ತಮ ದರ್ಜೆಯ ಹಿಂದಿ ಚಿತ್ರ ಪ್ರೇಮಿಗಳಾದ ಕನ್ನಡಿಗರಿಗೆ ಗೊತ್ತಿರುತ್ತೆ ಅಷ್ಟೇ. ಮೈಸೂರು ಹುಟ್ಟೂರು, ಕಲಕತ್ತೆ ಬೆಳದೂರು, ಮುಂಬೈ ಬದುಕಿದ್ದೂರು.

ಗುರುದತ್ - ದೇವ್ ಇವರ ಜೋಡಿಯನ್ನು ಆಗಿನ ಜನರು ಕಾದಿದ್ದು ನೋಡುತ್ತಿದ್ದರು. ಗುರುದತ್ ನಿರ್ದೇಶನದ ಚಿತ್ರವೆಂದರೆ ಅದರಲ್ಲಿ ದೇವ್ ಆನಂದ್ ನಾಯಕನಾಗಿ ಇರಲೇ ಬೇಕಿತ್ತು. ಅವರಿಬ್ಬರೂ ಸ್ನೇಹಿತರಾದ ಕಥೆಯಂತೂ ಇಂಟರೆಸ್ಟಿಂಗ್. ಪ್ರಭಾತ್ ಸ್ಟುಡಿಯೋ ಸೇರಿದ್ದ ಇಬ್ಬರ ಅಂಗಿಗಳೂ ಅದಲು ಬದಲಾಗಿದ್ದು, ಮತ್ತೆ ಅದನ್ನು ವಾಪಸ್ ಪಡೆದುಕೊಳ್ಳುವಾಗ ಪರಿಚಯವಾಗಿ, ಪರಿಚಯ ಸ್ನೇಹವಾಗಿ ಬಹಳ ಕಾಲ ಸಿನಿಮಾ ರಂಗದಲ್ಲಿ ಮಿಂಚಿದರು. ಆದರೆ ಕೆಲವರ್ಷಗಳು ಸಂದ ನಂತರ ಏನಾಯಿತೋ ಏನೋ, ಗುರುದತ್ ಪರದೆಯ ಮೇಲೆ ತಾನೇ ಕಾಣಿಸಿಕೊಳ್ಳತೊಡಗಿದ. ನಿರ್ದೇಶಕ ಹಾಗೂ ನಟ ಎರಡೂ ಗುರುದತ್ತೇ ಆಗತೊಡಗಿದ. ದೇವ್ ಆನಂದ್ ನಿರ್ದೇಶಕನ ಮಾತನ್ನಾಗಲೀ ಮನಸ್ಸನ್ನಾಗಲೀ ಅರಿತವನಾಗೇ ಇರಲಿಲ್ಲ. ತಾನು ತಲೆಯಾಡಿಸಿಕೊಂಡೇ ಎಲ್ಲಾ ಪಾತ್ರಗಳನ್ನೂ ಮಾಡುತ್ತಿದ್ದರೆ ಗುರುದತ್‍ಗೆ ಅದು ಹಿಡಿಸಲಿಲ್ಲ. ನಿರ್ದೇಶಕನ ಮನಸ್ಸು, ಕಲ್ಪನೆ ನಟನಿಗೆ ಅರ್ಥ ಆಗದಿದ್ದರೆ, ಕಥೆಯ ನಿರೂಪಣೆ ಚೆನ್ನಾಗಿ ಬರುವುದು ಹೇಗೆ ತಾನೆ ಸಾಧ್ಯ! ಗುರುದತ್‍ಗೆ ಚಿತ್ರರಂಗದಲ್ಲಿ ಮೊದಲ ನಿಜವಾದ ಅವಕಾಶ ಕೊಟ್ಟಿದ್ದು ದೇವ್ ಆನಂದನೇ - ತಾನು 'ನವ್‍ಕೇತನ್' ಮಾಡಿದಾಗ - ಬಾಜಿ ಎಂಬ ಚಿತ್ರದಲ್ಲಿ - ಐವತ್ತೊಂದನೇ ಇಸವಿಯಲ್ಲಿ!

ಆ ಕಾಲದ ಟಾಪ್ ಸಿಂಗರ್ ಗೀತಾ ರಾಯ್ ಎಂಬಾಕೆಯನ್ನು ವರಿಸಿ ಅವಳನ್ನು ಗೀತಾ ದತ್ ಆಗಿಸಿದ. ನಂತರದ ದಿನಗಳಲ್ಲಿ ವಹೀದಾ ರೆಹ್‍ಮಾನ್ ಎಂಬ ಚೆಲುವೆಯೊಬ್ಬಳು ಸಿನಿಮಾಕ್ಕೆ ಕಾಲಿಟ್ಟಾಗ ಆಕೆಯತ್ತಾ ವಾಲಿದ. ಗೀತಾ ದತ್ ಜೊತೆಗಿನ ಸಂಬಂಧದಲ್ಲಿ ಬಿರುಕಾಯಿತು. ಬಿರುಕೆಷ್ಟೇ ಇದ್ದರೂ ಗುರುದತ್ ನಿರ್ದೇಶನದಲ್ಲಿ, ನಾಯಕತ್ವದಲ್ಲಿ ವಹೀದಾ ರೆಹ್‍ಮಾನ್ ನಾಯಕಿಯಾಗಿದ್ದೂ, ಸ್ವತಃ ಗೀತಾ ದತ್ ಹಾಡಿರುವುದೂ ಉಂಟು. ಅದು ಅವರುಗಳ ಪ್ರೊಫೆಷನಲಿಸಂ. ಅರವತ್ನಾಲ್ಕನೇ ಇಸವಿಯಲ್ಲಿ ವಹೀದಾ ರೆಹ್‍ಮಾನ್ ಮತ್ತು ಗೀತಾ ದತ್ ಇಬ್ಬರೂ ಗುರುದತ್‌ನ ಕಳೆದುಕೊಂಡರು.

ಗುರುದತ್‍ ಒಬ್ಬ ಸಾಧಾರಣ ನಿರ್ದೇಶಕನಾಗಿರಲಿಲ್ಲ. ಗುರುದತ್ ಚಿತ್ರಗಳಲ್ಲಿ ನೈಜತೆ ರಾರಾಜಿಸುವುದನ್ನು ಆ ಕಾಲದಲ್ಲೇ ಹಿಂದಿ ಚಿತ್ರರಂಗ ನೋಡಿತ್ತು. ನಿರ್ದೇಶಕರುಗಳ ಗುರು ಆಗಿದ್ದ ಗುರುದತ್! ಪುಟ್ಟಣ್ಣ ಕಣಗಾಲ್ ಅಂಥವರೇ ಗುರುದತ್‍ನಿಂದ ಅನೇಕ ಬಾರಿ ಪ್ರೇರೇಪಿತಗೊಂಡಿದ್ದಾರೆ. ವಿ. ಶಾಂತಾರಾಂ, ಸತ್ಯಜಿತ್ ರೇ ಇಂಥವರ ಸಾಲಿನಲ್ಲಿ ಸೇರುತ್ತೆ ಗುರುದತ್ ಹೆಸರು. ವಿ.ಕೆ. ಮೂರ್ತಿಯೆಂಬ ಮತ್ತೊಬ್ಬ ಕನ್ನಡಿಗ ಇವನೊಡನೆ ಕೆಲಸ ಮಾಡಿದ್ದು ಛಾಯಾಗ್ರಾಹಕನಾಗಿ. ಕೊನೆಯವರೆಗೂ ಜೊತೆಗಿದ್ದರು. ಗುರುದತ್‍ನ ಚಿತ್ರಗಳಲ್ಲಿ ಬರುವ ಅಪೂರ್ವ ಅಮೋಘ ಛಾಯಾಗ್ರಹಣದ ಚೆಲುವಿನ ಹಿಂದೆ ವಿ.ಕೆ. ಮೂರ್ತಿಯ ಕೈಚಳಕವಲ್ಲದೆ ಇನ್ನೇನೂ ಇಲ್ಲ. ಗುರುದತ್‍ನ ಚಿತ್ರದ ಹೆಸರುಗಳೂ ಅಷ್ಟೇ ಅದ್ಭುತವಾಗಿರುತ್ತಿದ್ದವು - ಪ್ಯಾಸಾ, ಮಿಸ್ಟರ್ ಎಂಡ್ ಮಿಸಸ್ ೫೫, ಆರ್-ಪಾರ್ ಹೀಗೆ. ಮಾಡಿದ ಚಿತ್ರಗಳೆಲ್ಲವೂ ಬಾಕ್ಸ್ ಆಫೀಸಿನಲ್ಲಿ ಗೆದ್ದವು. ಒಂದೇ ಒಂದು ಚಿತ್ರ - ಕಾಗಜ್ ಕೆ ಫೂಲ್ ಸೋತಿತು. ಭಾರತದ ಪ್ರೇಕ್ಷಕ ಅದೇಕೋ ಅದನ್ನು ತಿರಸ್ಕರಿಸಿಬಿಟ್ಟ. ಹಠಾತ್ತನೆ ಬಂದ ಸೋಲನ್ನು ತಡೆಯಲಾಗಲಿಲ್ಲ ಗುರುದತ್‍ಗೆ. ನಿರ್ದೇಶಿಸುವುದನ್ನೇ ನಿಲ್ಲಿಸಿಬಿಟ್ಟ! ಆದರೆ, ನಿರ್ಮಾಣ ಮಾಡುವುದರಲ್ಲಿ ಒಂದಷ್ಟು ಸಿನಿಮಾಗಳಿಂದ ಹಣ ಏನೋ ಗಳಿಸಿದ. ಅವಾರ್ಡುಗಳಿಗೆ ಲೆಕ್ಕವೇ ಇಲ್ಲ.ಇಂದು ಗುರುದತ್‍ನ ಹುಟ್ಟು ಹಬ್ಬ. ಬದುಕಿದ್ದಿದ್ದರೆ ಎಂಭತ್ತೆರಡು ವಯಸ್ಸಾಗುತ್ತಿತ್ತು. ತಲೆಯಾಡಿಸಿಕೊಂಡು ನಾಯಕನಾಗುವ ಹಿರಿಯ ದೇವ್‍ ಆನಂದ್‍ಗೆ ಮತ್ತೊಂದು ಜೀವನ ಕೊಡಬಹುದಿತ್ತು. ಅಂಥಾ ನಿರ್ದೇಶಕನನ್ನು ನೆನೆಸಿಕೊಳ್ಳುವ ಇಂದು ಸೌಭಾಗ್ಯ ನನ್ನದಾಗಿದೆ. ಗುರುದತ್‍ ಚಿತ್ರಗಳ ಹಾಡುಗಳು ಅಜರಾಮರ! ಅಂಥಾ ನಿರ್ದೇಶಕ ಮತ್ತೆ ಬರುವುದಿಲ್ಲ. ಆತನ ಕನಸುಗಳು, ಆತನ ಭಾವನೆಗಳು ಇವೆಲ್ಲಾ ಅರ್ಥ ಮಾಡಿಕೊಳ್ಳುವ ನಟನೂ ಸಹ ಬರಲಿಲ್ಲ, ಬರುವುದೂ ಇಲ್ಲ. ಅವನದೇ ಚಿತ್ರವೊಂದರ ಹಾಡು:

ಸುಹಾನೀ ರಾತ್ ಢಲ್‍ ಚುಕೀ..
ನ ಜಾನೇ ತುಮ್ ಕಬ್ ಆಓಗೇ.......

ಕಾಯಬೇಕಷ್ಟೆ.- ಅ
06.07.2007
11.45pm