Friday, July 6, 2007

ಗ್ರೇಟ್ ಕನ್ನಡಿಗ!ಇದನ್ನು ಕೇಳದಿರುವವರು ನಿಜಕ್ಕೂ ದುರ್ಭಾಗ್ಯವಂತರು. ಇದು ಗುರುದತ್‍ನ ಚೌದ್ವೀ ಕಾ ಚಾಂದ್ ಚಿತ್ರದ ಹಾಡು!

ಗುರುದತ್ ಕನ್ನಡದವನೆಂದು ಬಹಳ ಕಡಿಮೆ ಜನಕ್ಕೆ ಗೊತ್ತಿರೋ ವಿಷಯ. ಉತ್ತಮ ದರ್ಜೆಯ ಹಿಂದಿ ಚಿತ್ರ ಪ್ರೇಮಿಗಳಾದ ಕನ್ನಡಿಗರಿಗೆ ಗೊತ್ತಿರುತ್ತೆ ಅಷ್ಟೇ. ಮೈಸೂರು ಹುಟ್ಟೂರು, ಕಲಕತ್ತೆ ಬೆಳದೂರು, ಮುಂಬೈ ಬದುಕಿದ್ದೂರು.

ಗುರುದತ್ - ದೇವ್ ಇವರ ಜೋಡಿಯನ್ನು ಆಗಿನ ಜನರು ಕಾದಿದ್ದು ನೋಡುತ್ತಿದ್ದರು. ಗುರುದತ್ ನಿರ್ದೇಶನದ ಚಿತ್ರವೆಂದರೆ ಅದರಲ್ಲಿ ದೇವ್ ಆನಂದ್ ನಾಯಕನಾಗಿ ಇರಲೇ ಬೇಕಿತ್ತು. ಅವರಿಬ್ಬರೂ ಸ್ನೇಹಿತರಾದ ಕಥೆಯಂತೂ ಇಂಟರೆಸ್ಟಿಂಗ್. ಪ್ರಭಾತ್ ಸ್ಟುಡಿಯೋ ಸೇರಿದ್ದ ಇಬ್ಬರ ಅಂಗಿಗಳೂ ಅದಲು ಬದಲಾಗಿದ್ದು, ಮತ್ತೆ ಅದನ್ನು ವಾಪಸ್ ಪಡೆದುಕೊಳ್ಳುವಾಗ ಪರಿಚಯವಾಗಿ, ಪರಿಚಯ ಸ್ನೇಹವಾಗಿ ಬಹಳ ಕಾಲ ಸಿನಿಮಾ ರಂಗದಲ್ಲಿ ಮಿಂಚಿದರು. ಆದರೆ ಕೆಲವರ್ಷಗಳು ಸಂದ ನಂತರ ಏನಾಯಿತೋ ಏನೋ, ಗುರುದತ್ ಪರದೆಯ ಮೇಲೆ ತಾನೇ ಕಾಣಿಸಿಕೊಳ್ಳತೊಡಗಿದ. ನಿರ್ದೇಶಕ ಹಾಗೂ ನಟ ಎರಡೂ ಗುರುದತ್ತೇ ಆಗತೊಡಗಿದ. ದೇವ್ ಆನಂದ್ ನಿರ್ದೇಶಕನ ಮಾತನ್ನಾಗಲೀ ಮನಸ್ಸನ್ನಾಗಲೀ ಅರಿತವನಾಗೇ ಇರಲಿಲ್ಲ. ತಾನು ತಲೆಯಾಡಿಸಿಕೊಂಡೇ ಎಲ್ಲಾ ಪಾತ್ರಗಳನ್ನೂ ಮಾಡುತ್ತಿದ್ದರೆ ಗುರುದತ್‍ಗೆ ಅದು ಹಿಡಿಸಲಿಲ್ಲ. ನಿರ್ದೇಶಕನ ಮನಸ್ಸು, ಕಲ್ಪನೆ ನಟನಿಗೆ ಅರ್ಥ ಆಗದಿದ್ದರೆ, ಕಥೆಯ ನಿರೂಪಣೆ ಚೆನ್ನಾಗಿ ಬರುವುದು ಹೇಗೆ ತಾನೆ ಸಾಧ್ಯ! ಗುರುದತ್‍ಗೆ ಚಿತ್ರರಂಗದಲ್ಲಿ ಮೊದಲ ನಿಜವಾದ ಅವಕಾಶ ಕೊಟ್ಟಿದ್ದು ದೇವ್ ಆನಂದನೇ - ತಾನು 'ನವ್‍ಕೇತನ್' ಮಾಡಿದಾಗ - ಬಾಜಿ ಎಂಬ ಚಿತ್ರದಲ್ಲಿ - ಐವತ್ತೊಂದನೇ ಇಸವಿಯಲ್ಲಿ!

ಆ ಕಾಲದ ಟಾಪ್ ಸಿಂಗರ್ ಗೀತಾ ರಾಯ್ ಎಂಬಾಕೆಯನ್ನು ವರಿಸಿ ಅವಳನ್ನು ಗೀತಾ ದತ್ ಆಗಿಸಿದ. ನಂತರದ ದಿನಗಳಲ್ಲಿ ವಹೀದಾ ರೆಹ್‍ಮಾನ್ ಎಂಬ ಚೆಲುವೆಯೊಬ್ಬಳು ಸಿನಿಮಾಕ್ಕೆ ಕಾಲಿಟ್ಟಾಗ ಆಕೆಯತ್ತಾ ವಾಲಿದ. ಗೀತಾ ದತ್ ಜೊತೆಗಿನ ಸಂಬಂಧದಲ್ಲಿ ಬಿರುಕಾಯಿತು. ಬಿರುಕೆಷ್ಟೇ ಇದ್ದರೂ ಗುರುದತ್ ನಿರ್ದೇಶನದಲ್ಲಿ, ನಾಯಕತ್ವದಲ್ಲಿ ವಹೀದಾ ರೆಹ್‍ಮಾನ್ ನಾಯಕಿಯಾಗಿದ್ದೂ, ಸ್ವತಃ ಗೀತಾ ದತ್ ಹಾಡಿರುವುದೂ ಉಂಟು. ಅದು ಅವರುಗಳ ಪ್ರೊಫೆಷನಲಿಸಂ. ಅರವತ್ನಾಲ್ಕನೇ ಇಸವಿಯಲ್ಲಿ ವಹೀದಾ ರೆಹ್‍ಮಾನ್ ಮತ್ತು ಗೀತಾ ದತ್ ಇಬ್ಬರೂ ಗುರುದತ್‌ನ ಕಳೆದುಕೊಂಡರು.

ಗುರುದತ್‍ ಒಬ್ಬ ಸಾಧಾರಣ ನಿರ್ದೇಶಕನಾಗಿರಲಿಲ್ಲ. ಗುರುದತ್ ಚಿತ್ರಗಳಲ್ಲಿ ನೈಜತೆ ರಾರಾಜಿಸುವುದನ್ನು ಆ ಕಾಲದಲ್ಲೇ ಹಿಂದಿ ಚಿತ್ರರಂಗ ನೋಡಿತ್ತು. ನಿರ್ದೇಶಕರುಗಳ ಗುರು ಆಗಿದ್ದ ಗುರುದತ್! ಪುಟ್ಟಣ್ಣ ಕಣಗಾಲ್ ಅಂಥವರೇ ಗುರುದತ್‍ನಿಂದ ಅನೇಕ ಬಾರಿ ಪ್ರೇರೇಪಿತಗೊಂಡಿದ್ದಾರೆ. ವಿ. ಶಾಂತಾರಾಂ, ಸತ್ಯಜಿತ್ ರೇ ಇಂಥವರ ಸಾಲಿನಲ್ಲಿ ಸೇರುತ್ತೆ ಗುರುದತ್ ಹೆಸರು. ವಿ.ಕೆ. ಮೂರ್ತಿಯೆಂಬ ಮತ್ತೊಬ್ಬ ಕನ್ನಡಿಗ ಇವನೊಡನೆ ಕೆಲಸ ಮಾಡಿದ್ದು ಛಾಯಾಗ್ರಾಹಕನಾಗಿ. ಕೊನೆಯವರೆಗೂ ಜೊತೆಗಿದ್ದರು. ಗುರುದತ್‍ನ ಚಿತ್ರಗಳಲ್ಲಿ ಬರುವ ಅಪೂರ್ವ ಅಮೋಘ ಛಾಯಾಗ್ರಹಣದ ಚೆಲುವಿನ ಹಿಂದೆ ವಿ.ಕೆ. ಮೂರ್ತಿಯ ಕೈಚಳಕವಲ್ಲದೆ ಇನ್ನೇನೂ ಇಲ್ಲ. ಗುರುದತ್‍ನ ಚಿತ್ರದ ಹೆಸರುಗಳೂ ಅಷ್ಟೇ ಅದ್ಭುತವಾಗಿರುತ್ತಿದ್ದವು - ಪ್ಯಾಸಾ, ಮಿಸ್ಟರ್ ಎಂಡ್ ಮಿಸಸ್ ೫೫, ಆರ್-ಪಾರ್ ಹೀಗೆ. ಮಾಡಿದ ಚಿತ್ರಗಳೆಲ್ಲವೂ ಬಾಕ್ಸ್ ಆಫೀಸಿನಲ್ಲಿ ಗೆದ್ದವು. ಒಂದೇ ಒಂದು ಚಿತ್ರ - ಕಾಗಜ್ ಕೆ ಫೂಲ್ ಸೋತಿತು. ಭಾರತದ ಪ್ರೇಕ್ಷಕ ಅದೇಕೋ ಅದನ್ನು ತಿರಸ್ಕರಿಸಿಬಿಟ್ಟ. ಹಠಾತ್ತನೆ ಬಂದ ಸೋಲನ್ನು ತಡೆಯಲಾಗಲಿಲ್ಲ ಗುರುದತ್‍ಗೆ. ನಿರ್ದೇಶಿಸುವುದನ್ನೇ ನಿಲ್ಲಿಸಿಬಿಟ್ಟ! ಆದರೆ, ನಿರ್ಮಾಣ ಮಾಡುವುದರಲ್ಲಿ ಒಂದಷ್ಟು ಸಿನಿಮಾಗಳಿಂದ ಹಣ ಏನೋ ಗಳಿಸಿದ. ಅವಾರ್ಡುಗಳಿಗೆ ಲೆಕ್ಕವೇ ಇಲ್ಲ.ಇಂದು ಗುರುದತ್‍ನ ಹುಟ್ಟು ಹಬ್ಬ. ಬದುಕಿದ್ದಿದ್ದರೆ ಎಂಭತ್ತೆರಡು ವಯಸ್ಸಾಗುತ್ತಿತ್ತು. ತಲೆಯಾಡಿಸಿಕೊಂಡು ನಾಯಕನಾಗುವ ಹಿರಿಯ ದೇವ್‍ ಆನಂದ್‍ಗೆ ಮತ್ತೊಂದು ಜೀವನ ಕೊಡಬಹುದಿತ್ತು. ಅಂಥಾ ನಿರ್ದೇಶಕನನ್ನು ನೆನೆಸಿಕೊಳ್ಳುವ ಇಂದು ಸೌಭಾಗ್ಯ ನನ್ನದಾಗಿದೆ. ಗುರುದತ್‍ ಚಿತ್ರಗಳ ಹಾಡುಗಳು ಅಜರಾಮರ! ಅಂಥಾ ನಿರ್ದೇಶಕ ಮತ್ತೆ ಬರುವುದಿಲ್ಲ. ಆತನ ಕನಸುಗಳು, ಆತನ ಭಾವನೆಗಳು ಇವೆಲ್ಲಾ ಅರ್ಥ ಮಾಡಿಕೊಳ್ಳುವ ನಟನೂ ಸಹ ಬರಲಿಲ್ಲ, ಬರುವುದೂ ಇಲ್ಲ. ಅವನದೇ ಚಿತ್ರವೊಂದರ ಹಾಡು:

ಸುಹಾನೀ ರಾತ್ ಢಲ್‍ ಚುಕೀ..
ನ ಜಾನೇ ತುಮ್ ಕಬ್ ಆಓಗೇ.......

ಕಾಯಬೇಕಷ್ಟೆ.- ಅ
06.07.2007
11.45pm

6 comments:

 1. Naanu Gurudutt films nodirodakkinta haadu keLirode hechchu ... A remembrance from me too on his birthday!!

  ReplyDelete
 2. ಚೆನ್ನಾಗಿದೆ.. ಇವತ್ತಿನ ದಿವಸಕ್ಕೆ ಒಳ್ಳೆಯ ನೆನಪು...ಇವತ್ತು ಸುಚಿತ್ರಾದಲ್ಲಿ ಡಾಕ್ಯುಮೆಂಟರಿ ಇದೆ ಗುರುದತ್ ಮೇಲೆ.. In search of gurudath..

  ReplyDelete
 3. intahavarobru idhru antha nange gottirlilla..seriously.. avru kannadigaru antha keLi innu santhosha aaythu... :-)...

  nimme lekhanadina nan GK update aaythu..thank you arun avre.... :-)

  ReplyDelete
 4. ivaru kannadogaru endu nanage tiLidiralilla. kalkattadavaru ankonDidde. bahaLa santosha aaytu keLi.

  ReplyDelete
 5. Gurudat nam maisoor boy anta tiLkoMDahaMgAytu!! dv'gaLu Arun...

  chaudhvi ka chaand ho...
  yaa aftaab ho...
  jo bhi ho tum khudhaah ki kasam
  laajawaab ho.....

  ReplyDelete
 6. [ವಿಜಯಾ] ಗುರುದತ್ ಅಂಥಾ ಉನ್ನತ ನಟನೆಯನ್ನೇನೂ ಮಾಡುತ್ತಿರಲಿಲ್ಲ. ಆದರೆ, ಹಾಡುಗಳು, ನಿರ್ದೇಶನ ಎಲ್ಲಾ ಅತ್ಯದ್ಭುತ!

  [ಶ್ರೀ] ಹೋಗಿದ್ರಾ ಸುಚಿತ್ರಾಗೆ?

  [ಶ್ರೀಧರ] ಜೆನರಲ್ ನಾಲೆಡ್ಜ್ ಇಂಪ್ರೂವ್ ಮಾಡ್ಕೋ ಬೇಕು ತಾವು.

  [ಹರೀಶ್] ಕನ್ನಡದವರಾದರೂ ಬೆಂಗಾಲಿಗಳಾಗಿದ್ದರು. ಬೆಂಗಾಲಿಗಳಾಗಿದ್ದರೂ ಹಿಂದಿಯವರಾಗಿದ್ದರು.. ವಿಶೇಷ!

  [ಸುಸಂಕೃತ] dv'galu - ಪದಪ್ರಯೋಗ ಸಖತ್!

  ReplyDelete