Tuesday, August 28, 2007

ಮೊನ್ನೆ.. ಇಂದು... ನಾಳೆ...

ಮೂರು ದಿನದ ಕೆಳಗೆ ಭೀಮರಾಯರ ಜನ್ಮದಿನದಂದು ಬೆಳಗಾವಿಯ, ಗೋಕಾಕಿನ ಮಳೆಗಳಲ್ಲಿದ್ದೆ. ಭೇಟಿಯಾಗಲೂ ಆಗಲಿಲ್ಲ. ಫೋನು ಎಂಬ ಸಾಧನವಿರುವವರೆಗೂ ಶುಭಾಶಯ ತಲುಪಿಸಲು ಯಾವ ತೊಂದರೆಯೂ ಆಗುವುದಿಲ್ಲವಾದ್ದರಿಂದ ಅಷ್ಟೇನೂ ಪ್ರಯಾಸವೇ ಆಗಲಿಲ್ಲ. ಶುಕ್ರವಾರದ ಸಂಪ್ರದಾಯದಂತೆ ಗೆಳೆಯರ conference call-ಉ ಶನಿವಾರಕ್ಕೆ ಮುಂದೂಡಿತ್ತು, ಕಾರಣ, ನಾನು ಪಯಣಿಸುತ್ತಿದ್ದೆ. ಅಂದೇ ಭೀಮರಾಯರ ಅಲಿಯಾಸ್ ಶುಭಾಳ ಹುಟ್ಟುಹಬ್ಬವಾಗಿತ್ತು. ಹನ್ನೆರಡಕ್ಕೆ ಕರೆ ಮಾಡಿ ವಿಷ್ ಮಾಡುವುದು ವಾಡಿಕೆ. ಅಷ್ಟು ಹೊತ್ತಿನಲ್ಲಿ ಕರೆ ಮಾಡಲು ಅದೇಕೋ ನನಗೆ ಮನಸ್ಸಾಗುವುದಿಲ್ಲ, ಹಾಗಾಗಿ ಸಂದೇಶ ಕಳಿಸಿಬಿಡುವುದು ನನ್ನ ಅಭ್ಯಾಸ. ಹಾಗೇ ಮಾಡಿದೆ. ಇಲ್ಲೊಂದು ಸಲ ವಿಶ್ ಮಾಡ್ತಿದೀನಿ. ಹುಟ್ಟುಹಬ್ಬದ ಶುಭಾಶಯಗಳು ಶುಭಾ!!

ಶ್ರೀನಿಧಿ ಹೊಸ ಕೆಲಸಕ್ಕೆ ಸೇರಿಕೊಂಡಿದ್ದಾನಾದ್ದರಿಂದ ಅವನಿಗೆ ನಮ್ಮೊಡನೆ ಅಂಬೋಲಿ, ಗೋಕಾಕದ ಪಯಣಕ್ಕೆ ಬರಲಾಗಲಿಲ್ಲ. We missed him a lot. ಅವನು ಪ್ರತೀ ಚಾರಣಕ್ಕೂ ತಪ್ಪಿಸಿಕೊಳ್ಳಲು ಏನಾದರೂ ಒಂದು ಕಾರಣ ಬರುತ್ತಲೇ ಇದೆ. ಆದರೆ ಯಶಸ್ಸಿನ ಹಾದಿಯತ್ತ ಸಾಗುತ್ತಿರುವ ಶ್ರೀನಿಧಿಯು ಎತ್ತೆತ್ತೆತ್ತರೆಕ್ಕೆ ಬೆಳೆದು ನಿಲ್ಲಲೆಂದು ಆಶಿಸುತ್ತಾ, ತನ್ನ ಹೊಸ ಬದುಕಿನಲ್ಲಿ ಗೆಲುವಾಗಲೆಂದು ಹರಸುತ್ತೇನೆ.

ಇಂದು ಯಜುರುಪಾಕರ್ಮ. ಯಜ್ಞೋಪವೀತಂ ಪರಮಂ ಪವಿತ್ರಂ ಎಂದು ಹೇಳಿ ಜನಿವಾರ ಬದಲಿಸಿಕೊಳ್ಳುವ ದಿನ. ಜನಿವಾರವು ಯಾವುದೋ ಚಾರಣದಲ್ಲಿ ಯಾವುದೋ ಜಾನುವಾರದ ಪಾಲಾಗಿತ್ತು. ಹೊಸ ಜನಿವಾರ ಧರಿಸುವಾಗ ಮಂತ್ರ ತಂತ್ರಗಳನ್ನಳವಡಿಸಿಕೊಳ್ಳಲೇ ಇಲ್ಲ. ಅಂತೂ ದೇಹಕ್ಕೊಂದು ಹೊಸ ಜನಿವಾರ ಬಂತು!

ಉಪಾಕರ್ಮದೊಂದಿಗೆ ರಕ್ಷಾಬಂಧನ! ಅಕ್ಕನೇ ಮೊದಲ ರಕ್ಷೆಯನ್ನು ಕಟ್ಟುವುದು. ಉಡುಗೊರೆ ಮಾತ್ರ ನಾನು ಅವಳಿಗೇ ಕೊನೆಯಲ್ಲಿ ಕೊಡುವುದು! ಆದರೆ ಎದೆತಟ್ಟಿ ಹೇಳಿಕೊಳ್ಳುತ್ತೇನೆ, ನಮ್ಮದು ಉಡುಗೊರೆಗಳಿಗೆ ರಕ್ಷೆಗಳಿಗೆ ಮೀರಿದ ಬಾಂಧವ್ಯವೆಂದು!! ಕಂದಾ (ಸ್ಮಿತಾ) ಶೀಗೋಳಿನಿಂದ ರಕ್ಷೆಯನ್ನು ಅಂಚೆಯಲ್ಲಿ ಕಳಿಸಿದ್ದನ್ನು ಪಡೆದುಕೊಳ್ಳುವಾಗ ಕಣ್ಣಿನಲ್ಲಿ ಎರಡು ಹನಿ ಮೂಡಿ ಮರೆಯಾಯಿತು. ಅವಳು ಸುಖವಾಗಿರಲಿ. ನನ್ನಾಶೀರ್ವಾದದ ಉಡುಗೊರೆ ಅವಳನ್ನು ಸೇರಾಯಿತು. ಸೌಮ್ಯ ತಾನೇ ಹೆಣೆದ ರಕ್ಷೆಯನ್ನು ಕಟ್ಟಿದಾಗ ಏನೋ ಆನಂದ. ಹೋದ ವರ್ಷ ತಾನೇ ಮಾಡಿದ ಬೊಂಬೆಯೊಂದನ್ನು ರಕ್ಷಾಬಂಧನಕ್ಕೆ ನನಗೆ ಉಡುಗೊರೆಯಾಗಿ ಕೊಟ್ಟಿದ್ದಳು. ಈ ಬಾರಿ ಸ್ವರಚಿತ ರಾಖಿ! ಜೊತೆಗೆ ರಮ್ಯ ಭವ್ಯರು ಕಟ್ಟಿದ ರಕ್ಷೆಗಳಿಗೆ ನಾನು ಸಂತುಷ್ಟ! ಮೂರೂ ಜನರ ಬಾಂಧವ್ಯ ಚಿರವಾಗಿರಲೆಂದಾಶಿಸುತ್ತಾ ರಕ್ಷೆಯನ್ನು ಮತ್ತೆ ಮತ್ತೆ ನೋಡಿಕೊಳ್ಳುತ್ತಿದ್ದೇನೆ.

ನಾಳೆ ಬೆಳಗಾಯ್ತೆಂದರೆ ಶಾಲೆ. ಮಕ್ಕಳೊಡನೆಯ ಸುಂದರ ಬದುಕು. ಪಾಠ ಮಾಡುವ ಸುಂದರ ಕೆಲಸ. ಹೊಸ ಹೆಡ್ ಮಾಸ್ಟರು ಬಂದಿದ್ದಾರೆ. ತಿಳಿದವರು, ಡಿಗ್ನಿಫೈಡು, ನೇರವಂತರು, ವಿಚಾರವಂತರು, ಸಮಚಿತ್ತರು, ಸ್ನೇಹಿ. ಮಸ್ಕಟ್ ಇಂದ ಬಂದಿದ್ದಾರೆ. ಕನ್ನಡ ನಾಡಿನಲ್ಲಿ ಜಸ ದೊರಕಲಿ. ಎಲ್ಲರಿಗೂ ಒಳ್ಳೇದಾಗಲಿ.. ನನಗೂ ಒಳ್ಳೇದಾಗಲಿ!!

-ಅ
28.08.2007
11.20PM

Monday, August 27, 2007

ಫೋಟೋ ಯುಗ..

ಒಂಭತ್ತನೆಯ ತರಗತಿಯಲ್ಲಿದ್ದಾಗ ಪಯಣಿಸಲು ಆರಂಭಿಸಿದೆ. ಆಗಲಿಂದಲೂ ಫೋಟೋ ತೆಗೆಯುವ ಹುಚ್ಚು.

ಕಾರ್ಯಕ್ರಮದ ಎರಡು ದಿನದ ಮುಂಚೆಯೇ ಸ್ಟುಡಿಯೋಗೆ ಹೋಗಿ, ನೂರು ರೂಪಾಯಿ ತೆತ್ತು KODAK ರೀಲನ್ನು ತಂದು, ಅಕ್ಕ ಕೊಟ್ಟಿದ್ದ KODAK ಕ್ಯಾಮೆರಾಗೆ ನಾನೇ ನನ್ನ ಕೈಯ್ಯಾರೆ ಲೋಡ್ ಮಾಡಿ ಸಿದ್ಧವಿಟ್ಟುಕೊಳ್ಳುತ್ತಿದ್ದೆ. ಜೊತೆಗೆ ಎರಡು ಸ್ಪೇರ್ ಬ್ಯಾಟೆರಿ ಕೂಡಾ!

ಕ್ಯಾಮೆರಾಗೆ ಒಂದು ಸಾವಿರ ರೂಪಾಯಿ ಆಗಿತ್ತೇನೋ ಅನ್ನಿಸುತ್ತೆ, zoom ಇರಲಿಲ್ಲ, display screen ಇರಲಿಲ್ಲ. ಮೆಗಾ ಪಿಕ್ಸೆಲ್ ಎಂಬ ಪದಗಳ ಪರಿಚಯವೂ ನನಗಿರಲಿಲ್ಲ.

ಮುವ್ವತ್ತಾರು ಫೋಟೋ ಬರುತ್ತೆ, ನಾವೇ ಲೋಡ್ ಮಾಡಿದರೆ ನಲವತ್ತೂ ಬರಬಲ್ಲದು. ಫೋಟೋ ಕ್ಲಿಕ್ಕಿಸುವ ಮುನ್ನ ಸಾವಿರ ಸಲ ಯೋಚಿಸಬೇಕಾಗಿತ್ತು. "ಈ ಫೋಟೋ ಬರಲ್ಲ, ಸುಮ್ಮನೆ ಕ್ಲಿಕ್ ಮಾಡಿ ದಂಡ ಮಾಡ್ಬೇಡ!" ಅನ್ನೋದು ಸಾಮಾನ್ಯ ಸಲಹೆಯಾಗಿತ್ತು.

ನೂರು ರೂಪಾಯಿ ಕೊಟ್ಟು ತಂದ ರೋಲಿನಲ್ಲಿ ನಲವತ್ತು ಚಿತ್ರಗಳನ್ನು ತೆಗೆದು ರೀಲನ್ನು ಹುಷಾರಾಗಿ ಕ್ಯಾಮೆರಾ ಇಂದ 'ಅನ್‍ಲೋಡ್' ಮಾಡಿ ಪುನಃ ಗುಂಡನೆಯ ಪ್ಲಾಸ್ಟಿಕ್ ಡಬ್ಬಿಯೊಳಗಿರಿಸಿ ಅದನ್ನು ಮನೆಗೆ ತಂದು ಸ್ಟುಡಿಯೋಗೆ ಹೋಗಿ, "ಗುಡ್ ಪ್ರಿಂಟ್ಸ್ ಹಾಕಿ, ಮ್ಯಾಕ್ಸಿ ಸೈಝ್" ಎಂದು ಸ್ಟುಡಿಯೋದವನಿಗೆ ಹೇಳಿ, ನೂರು ರೂಪಾಯಿ ಅಡ್ವಾನ್ಸ್ ಕೊಟ್ಟು ಮನೆಗೆ ಬರುತ್ತಿದ್ದೆ.

ಎಲ್ಲಾ ಕೇಳೋರು, "ಫೋಟೋಗಳು ಬಂದ್ವಾ? ಯಾವಾಗ ತೋರಿಸುತ್ತೀಯಾ?" ಅಂತ. ನಾನು "ಪ್ರಿಂಟಿಂಗ್‍ಗೆ ಕೊಟ್ಟಿದ್ದೀನಿ, ನಾಳೆ ಬರುತ್ತೆ" ಎಂದು ಹೇಳುತ್ತಿದ್ದೆ. ಗೆಳೆಯರ ಮುಖದಲ್ಲಿ ನಾಳೆಯಾವಾಗ ಆಗುತ್ತೋ ಎಂಬ ಕಾತುರತೆ! ಹೇಗೆ ಬಂದಿರುತ್ತೋ ಏನೋ ಫೋಟೋಗಳು ಎಂಬ ಸಂದೇಹ ಬೇರೆ ಇರುತ್ತಿತ್ತು.

ನಾಳೆಯಾಗುತ್ತಿತ್ತು. ನಲವತ್ತು ಫೋಟೋಗಳ ಜೊತೆಗೆ ಒಂದು ಆಲ್ಬಮ್ಮನ್ನೂ ಕೊಡುತ್ತಿದ್ದ ಸ್ಟುಡಿಯೋದವನು. ಇನ್ನೂ ನೂರು ರೂಪಾಯಿ ಕೊಟ್ಟ ಮೇಲೆ ಫೋಟೋಗಳು ನನ್ನ ವಶವಾಗುತ್ತಿದ್ದವು. ಅಲ್ಲಿ ಒಂದು ಸಲ ಎಲ್ಲಾ ಫೋಟೋಗಳನ್ನೂ 'ಚೆಕ್' ಮಾಡಿ, "ಹಾಗೆ ಬಂದಿದೆ, ಹೀಗೆ ಬಂದಿದೆ" ಎಂದು ನಕ್ಕು ನಲಿದು, ಗೆಳೆಯರಿಗೆ, ಮನೆಯವರಿಗೆ ತೋರಿಸಲು ಕಾತುರನಾಗಿ ಮನೆಗೆ ಹಿಂದಿರುಗುತ್ತಿದ್ದೆ. ನೋಡಿದ ಫೋಟೋಗಳನ್ನೇ ನಲವತ್ತು ಸಲ ನೋಡಿದರೂ ತೃಪ್ತಿಯಿಲ್ಲ. ಪುಟಗಳನ್ನು ತಿರುವಿ ಹಾಕಲು ಬೇಸರವೇ ಇಲ್ಲ.

ಅಯ್ಯೋ ನಲವತ್ತೇ ಫೋಟೋಗಳು ತೆಗೆಯಲು ಆಗೋದು ಎಂದು ಕೊರಗುತ್ತಿದ್ದೆ.

ಅಪ್ಪನಿಗೂ ಫೋಟೋ ತೆಗೆಯುವ ಹುಚ್ಚಿತ್ತು. ಮನೆಯಲ್ಲಿ ಅದೆಷ್ಟು ಫೋಟೋಗಳು ಇವೆಯೋ ಲೆಕ್ಕವಿಲ್ಲ. ಆದರೆ ಪ್ರತಿಯೊಂದು ಫೋಟೋವನ್ನೂ ಲಕ್ಷ ಬಾರಿಯಾದರೂ ನೋಡಿಯಾಗಿದೆ. ಕಪ್ಪು ಬಿಳುಪು ಫೋಟೋ ಅಂತಲೂ ಎಂದೂ ಬೇಸರವಾಗಿಲ್ಲ. ಆಲ್ಬಮ್ಮುಗಳ ಪುಟಗಳು ಹರಿದಿವೆಯೇ ಹೊರೆತು ಆ ಫೋಟೋಗಳನ್ನು ನೋಡುವ ಆಸಕ್ತಿ ಮಾತ್ರ ಎಂದೂ ಕುಗ್ಗಿಲ್ಲ.

ಈಗ ಡಿಜಿಟಲ್ ಕ್ಯಾಮೆರಾ ಬಂದ ಮೇಲೆ, ಅದಕ್ಕೆ memory stick-ಉ ಭಾರಿ ಭಾರಿ ಪ್ರಮಾಣದಲ್ಲಿ ಹಾಕಿಕೊಳ್ಳುವುದರಿಂದ ಎಷ್ಟು ಬೇಕೋ, ಏನು ಬೇಕೋ ಆ ಫೋಟೋ ತೆಗೆಯಬಹುದು!! ಒಂದು ಪಯಣದಲ್ಲಿ ಸಾವಿರ ಫೋಟೋ! ನಿಂತ ಹಾಗೆ ನಾಕು, ಕೂತ ಹಾಗೆ ಐದು! ಕೈ ಮೇಲೆ ಮಾಡಿ ಒಂದು, ಅಡ್ಡ ಮಾಡಿ ಇನ್ನೊಂದು. ಗಿಡದ ಎಲೆಯ ಮೇಲಿನ ಹನಿಯ ನಾಲ್ಕು ಫೋಟೋಗಳು. ಜಿರಲೆಯ ಮೀಸೆಯನ್ನೂ ಬಿಡೋದಿಲ್ಲ. ಆದರೆ, ಅದೇ ಫೋಟೋಗಳನ್ನು ಮತ್ತೆ ಮತ್ತೆ ನೋಡುವ ಹಂಬಲವಾಗಲೀ, ಆಸೆಯಾಗಲೀ ಹೆಚ್ಚು ದಿನ ಇರೋದೇ ಇಲ್ಲ! ಎಷ್ಟೊಂದು ಬಾರಿ ಫೋಟೋಗಳು ಮೆಮೊರಿ ಸ್ಟಿಕ್ಕಿನಲ್ಲೇ ಉಳಿದುಬಿಟ್ಟಿರುತ್ತೆ. ಕಂಪ್ಯೂಟರಿಗೆ ಸಹ ವರ್ಗಾಯಿಸಿರುವುದಿಲ್ಲ.

ಇಲ್ಲವೇ, ಯಾವುದಾದರೂ ಪಯಣ ಮಾಡುವುದು, ಸಾವಿರ ಫೋಟೋ ತೆಗೆಯುವುದು, ಅದನ್ನು ಯಾವುದಾದರೂ ವೆಬ್‍ಸೈಟಿನಲ್ಲಿ ಹಾಕುವುದು, ನಂತರ ಎಲ್ಲರಿಗೂ ಕಳಿಸುವುದು. ಅವರೆಲ್ಲರೂ ಒಂದು ಸಲ ನೋಡುತ್ತಾರೆ (ಬಹುಶಃ ಸಂಪೂರ್ಣವಾಗಿ ನೋಡಿರೋದಿಲ್ಲ). ಆಮೇಲೆ ಮರೆತುಹೋಗುತ್ತೆ.

ಈ ಡಿಜಿಟಲ್ ಕ್ಯಾಮೆರಾ ಅನ್ನುವುದು ನನ್ನ ಪ್ರಕಾರ ಅತಿಯಾದ ಅಮೃತದಂತಾಗಿ ಹೋಗಿದೆ.

ಆ ದಿನಗಳೇ ಚೆನ್ನಾಗಿತ್ತೆಂದೆನಿಸುತ್ತಿದೆ.

Tuesday, August 21, 2007

ಎಲ್ಲಡಗಿತ್ತೋ ಏನೋ..

ನೂರು ವರ್ಷ ಬೇಕಾಯ್ತು ಇಂಥದೊಂದು ಚಿತ್ರ ಪರದೆಯ ಮೇಲೆ ಕಾಣಿಸಿಕೊಳ್ಳಲು. ಹಿಂದಿ ಸಿನೆಮಾ ಬೆಳೆಯುತ್ತಿದೆ ಎಂದು ಖಚಿತವಾಯ್ತು, at least ನೂರು ವರ್ಷಗಳಾದ ಮೇಲೆ.

ಕ್ಲಿಫ್ ಹ್ಯಾಂಗರ್, ವರ್ಟಿಕಲ್ ಲಿಮಿಟ್, ದಿ ಗುಡ್ ದಿ ಬ್ಯಾಡ್ ಎಂಡ್ ದಿ ಅಗ್ಲಿ ಇಂಥಾ ಚಿತ್ರಗಳನ್ನು ನೋಡಿದಾಗ ನಮ್ಮಲ್ಲಿ ಯಾಕೆ ಇಂಥದೊಂದು ಚಿತ್ರ ಬಂದಿಲ್ಲವಲ್ಲಾ ಎಂದೆನಿಸದೇ ಇರಲು ಸಾಧ್ಯವಿಲ್ಲ. ಖಾನ್ ಎಂಬ ನಾಯಕನು ಬಹುಶಃ ತನ್ನ ಇಪ್ಪತ್ತು ವರ್ಷ ಅನುಭವದಲ್ಲಿ ಈ ರೀತಿಯ ಅಭಿನಯವನ್ನು ಮಾಡಿರಲಾರ, ನನ್ನ ಪ್ರಕಾರ ಮುಂದೂ ಮಾಡಲಾರ.

ಕಥೆಯನ್ನಾಗಲೀ ಕಥೆಯ ಬಗ್ಗೆ ಅನಿಸಿಕೆಯಾಗಲೀ ನಾನು ಬರೆಯಲಿಚ್ಛಿಸುವುದಿಲ್ಲ. ಅದನ್ನು ನೋಡೇ ಆನಂದಿಸಬೇಕು. ಆನಂದಿಸುವುದಕ್ಕಿಂತ ಹೆಚ್ಚಾಗಿ ಅನುಭವಿಸಬೇಕು. ಇಲ್ಲಿ ಶಾರುಖ್ ಒಬ್ಬ ಹೀರೋ ಅಲ್ಲ. ಹಾಕಿ ಆಡಿದ ಹದಿನಾಲ್ಕು ಹುಡುಗಿಯರೂ ಅಲ್ಲ. ಚಿತ್ರಕ್ಕೆ ಚಿತ್ರವೇ ಹೀರೋ. ಖಳನಾಯಕನಿಲ್ಲ. ಮನದ ಅಹಮ್ಮೇ ಖಳನಾಯಕ. ರೊಮಾನ್ಸಿಲ್ಲ, ಸೆಕ್ಸಿಲ್ಲ, ವಲ್ಗಾರಿಟಿ ಇಲ್ಲ. ಅದು ಚಿತ್ರ ಚೆನ್ನಾಗಿರಬೇಕೆಂದರೆ ಅನಿವಾರ್ಯವೂ ಅಲ್ಲ. ನನ್ನ ವಯಕ್ತಿಕ ಅನಿಸಿಕೆಯೆಂದರೆ, ಇಂಥದ್ದೊಂದು ಚಿತ್ರಕ್ಕೆ ನಾನು ಕಾಯುತ್ತಿದ್ದೆ, ಅದನ್ನು ಶಾರುಖ್‍ನಂತಹ ಅಪ್ರತಿಮ ನಟನನ್ನೂ ಸೇರಿಸಿ, ಮನೋಜ್ಞ ಅಭಿನಯ ಮಾಡಿದ, ಮಾಡಿಸಿದ ಸಕಲ ಕಲಾವಿದರಿಗೂ ಹೃತ್ಪೂರ್ವಕ ವಂದನೆಗಳು.ಎಲ್ಲಾ ಭಾಷೆಗಳಲ್ಲೂ ಇಂಥಾ ಚಿತ್ರಗಳು ಬರಲಿ. ತವರುಗಳು, ಮಳೆಗಳ ಕೊರೆತವು, ಮಚ್ಚಿನ ಕಿಚ್ಚುಗಳು ನೋಡಿ ನೋಡಿ ಕಣ್ಣು ಮನಸ್ಸುಗಳೆಲ್ಲಾ ಬೇಸತ್ತು ಹೋಗಿವೆ.

ಚಕ್ ದೇ!!

- ಅ
21.08.2007
10.35PM

Monday, August 20, 2007

ಶುಭಾಶಯದ ನೆನಪು..

ಇಂದು ಭಾವ ಪ್ರಸನ್ನನ ಹುಟ್ಟು ಹಬ್ಬ.

"ಬಾ, ಹೋಗು" ಎಂದು ಕರೆಯುತ್ತಿದ್ದ ಕಾಲ. ಪ್ರಸನ್ನ ಇನ್ನೂ ಭಾವ ಆಗಿರಲಿಲ್ಲ. ಆದರೆ ಅಕ್ಕನಲ್ಲಿ 'ಭಾವ'ದ ಹೂ ಅರಳಿಯಾಗಿತ್ತು. ನಾನು ಮೂರನೇ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಪ್ರಸನ್ನನ ಹುಟ್ಟು ಹಬ್ಬಕ್ಕೆ "ಹ್ಯಾಪಿ ಬರ್ತ್ ಡೇ" ಎಂದು ಲೂನಾ ಮೇಲೆ ಬಂದವನಿಗೆ ನಿಂಬೇ ಹುಳಿ ಕೊಟ್ಟಿದ್ದೆವು, ಬನಶಂಕರಿ ಸೆಕೆಂಡ್ ಸ್ಟೇಜ್ ಕ್ರಿಕೆಟ್ ಟೀಮಿನವರೆಲ್ಲರು. ಅದ್ಯಾಕೆ ಅಂತ ನೆನಪಿಲ್ಲ, ಬಹುಶಃ ಕ್ರಿಕೆಟ್ಟಿನಲ್ಲಿ ನಮ್ಮಂಥ ಚಿಕ್ಕ ಹುಡುಗರಿಗೆ ತೊಂದರೆಯುಂಟು ಮಾಡುತ್ತಿದ್ದ ಕಾರಣ ಅನ್ನಿಸುತ್ತೆ, ನಾವೆಲ್ಲರೂ ಪ್ರಸನ್ನಂಗೆ ಬುದ್ಧಿ ಕಲಿಸಬೇಕೆಂದು ಪ್ಲಾನ್ ಮಾಡುತ್ತಿದ್ದೆವು. ನಿಂಬೇ ಹುಳಿಯನ್ನು ಖುಷಿಯಿಂದ ಬಾಯಿಗಿಳಿಸಿದ ಪ್ರಸನ್ನಂಗೆ ಬುದ್ಧಿ ಕಲಿಸಿದೆವು ಎಂದು ನಾನು, ನನ್ನ ಅಂದಿನ ಮಿತ್ರರಾದ ಸುದರ್ಶನ್, ಚಿಕ್ಕ ರಘು (ಅವನು ಕುಳ್ಳಗಿದ್ದ, ಇನ್ನೊಬ್ಬ ರಘು ಎಂಬುವನು ಉದ್ದ ಇದ್ದ, ಹೆನ್ಸ್ ದಿ ನೇಮ್ ಚಿಕ್ಕ ರಘು, ಕನ್ಫ್ಯೂಷನ್ ಆಗದಿರಲಿ ಎಂದು) ಹಿಗ್ಗಿದ್ದೆವು. ಅದೇನು ಬುದ್ಧಿ ಕಲಿಸಿದ್ದೆವೋ ಇನ್ನೂ ಗೊತ್ತಿಲ್ಲ. ಆದರೆ ಪ್ರಸನ್ನನಂತೂ ನಿಂಬೇಹುಳಿಯನ್ನು ಸಂತಸದಿಂದ ಸ್ವೀಕರಿಸಿದ್ದು ನೆನಪಿದೆ.


"ಬನ್ನಿ ಹೋಗಿ ಅನ್ನಲೋ, ಬಾ ಹೋಗು ಅನ್ನಲೋ" ಎಂಬ ಗೊಂದಲದ ಕಾಲ. ಕಾರಣಾಂತರದಿಂದ ನಾನು ಭಾವ (ಪ್ರಸನ್ನ)ನೊಡನೆ ಮಾತನಾಡುತ್ತಿರಲಿಲ್ಲ. (ಅದ್ಯಾವುದೋ ಸಿಲ್ಲಿ ಕಾರಣ, ನೆನಪಿಲ್ಲ.) ಭಾವನಾಗಿ ಒಂದು ವರ್ಷವೂ ಆಗಿರಲಿಲ್ಲ. ಅಕ್ಕನಲ್ಲಿ ಭಾವನು ಮನಮನೆಯಾಗಿದ್ದನು/ರು. ಎಂಟನೇ ತರಗತಿಯಲ್ಲಿದ್ದೆನೆನಿಸುತ್ತೆ. ಆಚಾರ್ಯ ಪಾಠಶಾಲೆಯಲ್ಲಿ ಸೈಕಲ್ ಸವಾರಿಯನ್ನೇರ್ಪಡಿಸಿದ್ದರು. ನರಸಿಂಹ ರಾಜ ಕಾಲೋನಿಯಿಂದ ಭನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಅಲ್ಲಿಂದ ವಾಪಸ್. ಪ್ರಸನ್ನನ ಬಳಿ ಒಂದು ಕಪ್ಪನೆಯ ಬಿ.ಎಸ್.ಎ. ಸೈಕಲ್ ಇತ್ತು. ಪ್ರಸನ್ನ ಟಿ.ವಿ.ಎಸ್.ಗೆ ಬೆಳೆದ ಕಾರಣ, ಆ ಸೈಕಲ್ಲು ನನಗೆ inherit ಆಗಿತ್ತು. ಅದೇ ಸೈಕಲ್ಲಿನಲ್ಲೇ ಸವಾರಿಗೆ ಹೊರಟಿದ್ದೆ. ಅವತ್ತೂ ಆಗಸ್ಟ್ ಇಪ್ಪತ್ತು. ವಾಪಸ್ ಬರುತ್ತಾ, ಸೈಕಲ್ಲಿನ ಪೆಡಲ್ ಕಿತ್ತು ಕೆಳಗೆ ಬಿತ್ತು. ಕೋಣನಕುಂಟೆಯ ಬಳಿ!! ನನಗೆ ಆ ಏರಿಯಾ ಎಲ್ಲಾ ಹೊಸತು. ಕೋಣನಕುಂಟೆಯಿಂದ ಬನಶಂಕರಿಯ ಬಳಿಯಿರುವ ಹುಣಸೇ ಮರದ ವರೆಗೂ ಸೈಕಲ್ಲನ್ನು ತಳ್ಳಿಕೊಂಡು ಬಂದಿದ್ದೆ. ನಾನು ಎಂಟನೇ ತರಗತಿಯಲ್ಲಿದ್ದಾಗ ಬನಶಂಕರಿ ದೇವಸ್ಥಾನದ ಆಚೆಗೆ ಸಕಲವೂ ಕಾಡಿನಂತಿತ್ತು. ಈಗ ಕನಕಪುರದ ವರೆಗೂ ಸಿಟಿಯೇ ಬಿಡಿ! ಆ ಕಾಡಿನಲ್ಲಿ, ಏನೂ ಗೊತ್ತಿಲ್ಲದವನಾಗಿ ಸೈಕಲ್ಲನ್ನು ತಳ್ಳಿಕೊಂಡು ಬಂದು ಜೇಬಿನಲ್ಲಿದ್ದ ಐದೇ ಐದು ರೂಪಾಯಿಯಲ್ಲಿ ಅದೇ ಪೆಡಲ್‍ನ ಫ್ಹಿಟ್ ಮಾಡಿಸಿಕೊಂಡು ವಿದ್ಯಾಪೀಠದಲ್ಲಿದ್ದ ಅಕ್ಕನ ಮನೆಗೆ ಹೋದೆ. ಅವರ ಮನೆಯಲ್ಲಾದರೂ ಸ್ವಲ್ಪ ವಿರಮಿಸಿಕೊಳ್ಳಬಹುದೆಂದು. ಆದರೆ, ಗಂಡ ಹೆಂಡತಿಯಿಬ್ಬರೂ ಎಲ್ಲಿಗೋ ಹೊರಟಿದ್ದರು. ನನ್ನ ಜೇಬು ಖಾಲಿಯಾಗಿತ್ತು. ಸೈಕಲ್ ತುಳಿಯಲು ಎಳ್ಳಷ್ಟೂ ಚೈತನ್ಯವಿರಲಿಲ್ಲ. "ಇವತ್ತು ಪ್ರಸನ್ನನ ಹುಟ್ಟು ಹಬ್ಬ ಕಣೋ, ಅದಕ್ಕೆ ಹೊರಗೆ ಹೊರಟಿದ್ದೇವೆ" ಎಂದಳು ಅಕ್ಕ. ನಾನು ಏದುಸಿರು ಬಿಡುತ್ತಲೇ "ಹ್ಯಾಪಿ ಬರ್ತ್‍ ಡೇ.." ಎನ್ನದೇ ಹಾಗೇ ನಕ್ಕೆ. ಬೀಗ ಹಾಕಿದ್ದವಳು ಮತ್ತೆ ಬಾಗಿಲು ತೆಗೆದು ಒಳಗೆ ಕರೆದೊಯ್ದು ಮಾಡಿದ್ದ ಜಾಮೂನನ್ನು ಕೊಟ್ಟಳು. ಅವರಿಬ್ಬರು ಮದುವೆಯಾದ ಮೇಲೆ ಮೊದಲನೆಯ ಹುಟ್ಟುಹಬ್ಬವನ್ನು ಪ್ರಸನ್ನ ಆಚರಿಸಿಕೊಳ್ಳುತ್ತಿದ್ದುದು. ಹಾಗಾಗಿ "ನೀನೂ ಬರ್ತೀಯಾ?" ಅಂತ ಕರೆಯಲಿಲ್ಲ ಅನ್ನಿಸುತ್ತೆ.

ಮಾತನಾಡುತ್ತಿರಲಿಲ್ಲವಾದರೂ ಪ್ರಸನ್ನ, "ಪಾಪ ಸುಸ್ತಾಗಿದ್ದಾನೆ, ಒಂದು ಹತ್ತು ರೂಪಾಯಿ ಕೊಡು, ಆಟೋಲಿ ಹೋಗಲಿ" ಎಂದು ಹೇಳಿ ಕಿಸೆಯಿಂದ ಹತ್ತು ರೂಪಾಯಿ ತೆಗೆದು ವಿಜಾಯಳ ಕೈಗಿತ್ತ(ರು). ಅವರಿಬ್ಬರೂ ಹೊರಟು ಹೋದರು ಟಿ.ವಿ.ಎಸ್. 50 ಏರಿ!!
ನಾನು ಹತ್ತು ನಿಮಿಷ ವಿರಮಿಸಿ ಹೊರಟೆ ಆಟೋಲಿ.

ಈಗ ಪ್ರಸನ್ನ ತನ್ನ ಮೂವ್ವತ್ತಾರನೆಯ ವರ್ಷದ ಹುಟ್ಟುಹಬ್ಬವನ್ನು ನಮ್ಮ ಮನೆಯಲ್ಲಿಯೇ ಆಚರಿಸಿಕೊಳ್ಳುತ್ತಿದ್ದಾನೆ(ರೆ). ಆ ಟಿವಿಯೆಸ್ಸೂ ಇಲ್ಲ, ಆ ಕಪ್ಪನೆಯ ಸೈಕಲ್ಲೂ ಇಲ್ಲ, ಆ ಮುನಿಸುಗಳು ನಮ್ಮ ನಡುವೆಯಿಲ್ಲ. ಆದರೆ ಹುಡುಗು ತನ ಹಾಗೇ ಇದೆ. ಒಲುಮೆ ಹಾಗೇ ಇದೆ. ಹಾಗೇ ಇರಬೇಕು! ಹಾಗೇ ಇರಲಿ!! ಕೇಕುಗಳನ್ನು ಮೆತ್ತುಕೊಂಡು ಆಟವಾಡಬಹುದು.. ಹೆಂಡತಿಯೊಂದಿಗೆ ಊಟಕ್ಕೆ ಹೊರಟುಬಿಡುವ ಕಾಲವಿದಲ್ಲ. ಹೋದರೆ ಮನೆಮಂದಿಯೆಲ್ಲಾ ಕಝಿನ್ನುಗಳ ಸಮೇತರಾಗಿ ಹೋಗುತ್ತೇವೆ. ಬುದ್ಧಿ ಕಲಿಸುವ ಕಾಲವೂ ಇದಲ್ಲ.. ಏಳಿಗೆಯತ್ತಾ ಬದುಕು ಸಾಗುತ್ತಿದೆ. ಮಾತು ಮುನಿಸುಗಳ ಕಾಲವೂ ಇದಲ್ಲ. ನಕ್ಕು ನಲಿವ ಕಾಲವಷ್ಟೇ!!

ಹ್ಯಾಪಿ ಬರ್ತ್ ಡೇ, ಪ್ರಸನ್ನ!!

- ಅ
20.08.2007
8PM

Friday, August 17, 2007

ಯಾಕೆ ತಿನ್ನಬಾರದು?

೧. ಆಲೂಗೆಡ್ಡೆ - ವಾಯು ಸರಿ. ಆದರೆ ಈರುಳ್ಳಿ, ಶುಂಠಿಯ ಜೊತೆ ಬೆರೆತರೆ ವಾಯುದೋಷ ಒಡೆಯುತ್ತೆ. ಶೇ. ೫೦ ವಿಟಮಿನ್ ಬಿ ೬ ಕೊಡುತ್ತೆ.


Solanum tuberosum

೨. ಈರುಳ್ಳಿ - ಕಣ್ಣಿಗೆ ಒಳ್ಳೇದು. ಲೈಂಗಿಕ ಶಕ್ತಿವರ್ಧಕ. ಕೊಬ್ಬು ಮತ್ತು ಕೊಲೆಸ್ಟ್ರಾಲ್ ದೂರ ಮಾಡುತ್ತೆ. ಅತಿ ಹೆಚ್ಚು ನಾರನ್ನು ಹೊಂದಿರುತ್ತೆ. ವಿಟಮಿನ್ ಸಿ ನೆಲ್ಲಿಕಾಯಿ, ಕಿತ್ತಲೆ ಮೂಸಂಬಿಗಳನ್ನು ಹೊರೆತು ಪಡಿಸಿದರೆ ಈರುಳ್ಳಿಯಲ್ಲಿಯೇ ಹೆಚ್ಚು ಸಿಗೋದು.

Allium cepa.


೩. ಬಟಾಣಿ - ಪ್ರೋಟೀನು ಸಂಪತ್ಭರಿತ.


Pisum sativum

೪. ಶುಂಠಿ - ವಾಯುನಿರೋಧಕ. ಸಾರಜನಕ (Nitrogen) ಸಿಗಬೇಕು ದೇಹಕ್ಕೆ ಅಂದರೆ ಶುಂಠಿಗಿಂತ ಒಳ್ಳೇ ರೈಜೋಮು ಸಿಗೋದಿಲ್ಲ.

Zingiber officinale Roscoe

೫. ಕೊತ್ತಂಬರಿ ಸೊಪ್ಪು - ನಾಟಿ ಪದ್ಧತಿಗಳಲ್ಲಿ, ಆಯುರ್ವೇದದಲ್ಲಿ ಮನಸಿನುದ್ವೇಗ, ಜಠರಾಗ್ನಿ (Acidity) ಹಾಗೂ ನಿದ್ರಾಹೀನತೆಯನ್ನು ತಡೆಗಟ್ಟಲು ಆಹಾರದಲ್ಲಿ ಕೊತ್ತಂಬರಿ ಸೊಪ್ಪು ಬಳಸಿ ಎಂದು ಹೇಳುತ್ತಾರೆ.

Coriandrum sativum


೬. ಹುಣಸೇ ಹಣ್ಣು - ಹಸಿವನ್ನು ಹೆಚ್ಚಿಸುತ್ತೆ, ಜೀರ್ಣಶಕ್ತಿಯನ್ನು ವೃದ್ಧಿಸುತ್ತೆ. ಹುಳಿ, ಸಿಹಿ ಎರಡನ್ನೂ ಸೇರಿಸಿದ ವಿಶೇಷ ರುಚಿಯನ್ನು ಕೊಡುತ್ತೆ.

Tamarindus indica೭. ಬೆಳ್ಳುಳ್ಳಿ - ಹೃದಯ ಕಲ್ಲಿನಂತೆ ಗಟ್ಟಿಯಾಗುತ್ತೆ. ಒಟ್ಟಿನಲ್ಲಿ ಗಟ್ಟಿಪಿಂಡ ಆಗುತ್ತೇವೆ ಬೆಳ್ಳುಳ್ಳಿ ತಿಂದರೆ.


Allium sativum

೮. ಕಪ್ಪುಪ್ಪು - ಬೆಳ್ಳುಳ್ಳಿಯ ಅತ್ಯಂತ ಸನಿಹ ಸ್ನೇಹಿತ. ಹೃದಯಕ್ಕೆ ಒಳಿತನ್ನು ಮಾಡುವ ಸಾಮಗ್ರಿ. ಜೊತೆಗೆ ಆಹಾರಕ್ಕೆ ರುಚಿಯನ್ನೂ ಕೊಡುತ್ತೆ.


೯. ಮಸಾಲೆ ಪುಡಿ - ಮೆಣಸು, ಲವಂಗ, ಚಕ್ಕೆ, ದಾಲ್ಚಿನ್ನಿ, ಅರಿಶಿನ ಮುಂತಾದ ಶಕ್ತಿದಾಯಕಗಳಿಂದ ಮಾಡಲ್ಪಟ್ಟಿರುವುದು. ದೇಹವನ್ನು ಗಟ್ಟಿಯಾಗಿಸಲು ಈ spices ಬೇಕೇ ಬೇಕು!


೧೦. ಎಣ್ಣೆಯಲ್ಲಿ ಕರೆದ ಪೂರಿ - ಒಳ್ಳೆ ಎಣ್ಣೆಯಲ್ಲಿ ಕರೆದ ಪೂರಿಯಲ್ಲಿ ತಕ್ಕ ಮಟ್ಟಿಗೆ ಕೊಲೆಸ್ಟಿರಾಲ್ ಇರುತ್ತೆ. ಆದರೆ ಮೇಲಿರುವ ಸಕಲ ಸಾಮಗ್ರಿಗಳೂ ಆ ಕೊಲೆಸ್ಟಿರಾಲ್‍ನ್ನು ಶಮನಗೊಳಿಸುವ ಸಾಮರ್ಥ್ಯವುಳ್ಳದ್ದು. ಮತ್ತು ದೇಹಕ್ಕೆ ತಕ್ಕಮಟ್ಟಗಿನ ಕೊಲೆಸ್ಟ್ರಾಲ್‍ನ ಅವಶ್ಯಕತೆಯೂ ಸಹ ಇದೆ ಎಂಬುದು ಅನೇಕರಿಗೆ ಗೊತ್ತೇ ಇಲ್ಲ.


ಎಣ್ಣೆಯಲ್ಲಿ ಕರೆದ ಪೂರಿಗೆ ಮೇಲಿನ ಸಾಮಗ್ರಿಗಳನ್ನು ಬೆರೆಸಿದಾಗ (ನೇರವಾಗಿ ಅಲ್ಲ, ಕೆಲವನ್ನು ಬೇಯಿಸಿ, ಕೆಲವನ್ನು ಹಸಿಯಾಗಿ, ಮತ್ತೆ ಕೆಲವನ್ನು ಅರೆ ಬೇಯಿಸಿ) ಪಾನಿ ಪೂರಿ ಎಂಬ 'ಚಾಟ್' ನಮ್ಮೆದುರು ಇರುತ್ತೆ. ಎಲ್ಲಾ ಸಾಮಗ್ರಿಗಳೂ ಆರೋಗ್ಯಕ್ಕೆ ಒಳಿತನ್ನು ಮಾಡುವಾಗ, ಅದು ಪಾನಿಪೂರಿ ಆದಾಗ ಮಾತ್ರ ಆಹಾರತಜ್ಞರಿಂದ "ಜಂಕ್ ಫುಡ್" ಎಂಬ ಅಪಖ್ಯಾತಿಗೆ ಗುರಿಯಾಗಿರುವುದು ಯಾವ ನ್ಯಾಯ?
- ಅ

17.08.2007

4.30AM

Tuesday, August 14, 2007

ಅರ್ಥವೈರುಧ್ಯ!

ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಗಾಂಧೀಜಿಗೆ ಸಂಬಂಧಿಸಿರುವುದು ಪ್ರತಿಮೆಯೊಂದಲ್ಲದೇ ಬೇರೇನಾದರೂ ಇದೆಯಾ?

’ಶಿವಾಜಿ’ನಗರದಲ್ಲಿ ಹಿಂದುಗಳನ್ನು ಸರ್ಚ್ ಲೈಟ್ ಹಾಕೊಂಡ್ ಹುಡುಕಬೇಕು.

’ಹೊಸಕೋಟೆ’ಯೆಂಬ ಊರು ವಿಪರೀತ ಹಳೆಯದೆಂದು ಯಾವಾಗಲೋ ಗೊತ್ತಾಗಿತ್ತು.

ಬೆಂಗಳೂರು ಜನಕ ಕೆಂಪೇಗೌಡ ಕಪ್ಪಗಿದ್ದವನು.

ದೇವೇಗೌಡರು ಪ್ರತಿಯೊಂದು ಕೋನದಿಂದಲೂ ಭೀಕರವಾಗಿ ಕಾಣುತ್ತಾರಲ್ಲಾ? ದೇವರ ಹಾಗೆ ಕಾಣೋದೇ ಇಲ್ಲವಲ್ಲಾ?

ಚಾಮರಾಜಪೇಟೆಯಲ್ಲಿ ಪೋಲಿಸ್ ಇಲಾಖೆಯವರ ಒಂದು ಕಚೇರಿಯಿದೆ. ಅದರ ಹೆಸರು, "Central Crime Branch" ಅಂತ. ಪೋಲಿಸ್‍ನವರೇ ಕ್ರೈಮ್ ಮಾಡ್ತಾರೇನೂ?

ಬಿಳಿಗಿರಿರಂಗನ ಬೆಟ್ಟದ ಹತ್ತಿರ ಚಾರಣ ಮಾಡುತ್ತಿದ್ದಾಗ ಒಂದು ಸೂಚನಾ ಫಲಕ ಈ ರೀತಿಯಿತ್ತು, " ಇದು ವೀರಪ್ಪನ್ ಕಾರ್ಯಾಚರಣೆಯಿರುವ ಪ್ರದೇಶ, ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ" ಅಂತ. ಈ ಫಲಕವನ್ನು ಹಾಕಿದ್ದು ವೀರಪ್ಪನ್ ಅಲ್ಲ, ಕರ್ನಾಟಕ ಅರಣ್ಯ ಇಲಾಖೆ.

ನಾನು ಕಾಲೇಜಿನಲ್ಲಿದ್ದಾಗ ಒಬ್ಬಳು ಹುಡುಗಿ ಇದ್ದಳು, ಆಕೆಯ ಹೆಸರು ಹಂಸ. ಆದರೆ ಅವಳು ಕಾಡೆಮ್ಮೆಗೆ ಪ್ರತಿಸ್ಪರ್ಧಿಯಾಗಿದ್ದರೂ ಹೆಸರು ಬದಲಿಸಿಕೊಂಡಿರಲಿಲ್ಲ.

ನನ್ನ ವಿದ್ಯಾರ್ಥಿಯೊಬ್ಬ ಇದ್ದಾನೆ, ಆತನ ಹೆಸರು ವಿವೇಕಾನಂದ ಅಂತ. ಕಳೆದ ಎರಡು ಪರೀಕ್ಷೆಗಳಲ್ಲಿ ಆತನ ಅಂಕ ಸರಾಸರಿ ಶೇ. ಇಪ್ಪತ್ತು.

ಕೃಷ್ಣ ರಾವ್ ಅಂತ ಒಬ್ಬರು ಬ್ರಹ್ಮಚಾರಿ ನನಗೆ ಮೊನ್ನೆ ಮೊನ್ನೆ ತಾನೇ ಪರಿಚಿತರಾದರು.

ನನ್ನ ಹೈಸ್ಕೂಲ್ ಸಹಪಾಠಿ ಜಯೇಶ್ ಎಂಬುವನು ಎಸ್.ಎಸ್.ಎಲ್.ಸಿ ಯಲ್ಲಿ ಮೂರು ಸಲ ಡುಮ್ಕಿ, ಪಿಯುಸಿಯಲ್ಲಿ ಎರಡು ಸಲ.

ನಾವು ಎಷ್ಟು ಜನರನ್ನು ನೋಡಿಲ್ಲ, ಶ್ವೇತ ಅಂತ ಹೆಸರಿಟ್ಟುಕೊಂಡು ದ್ರೌಪದಿ ಥರ ಇರೋರನ್ನು, ಸೌಮ್ಯ ಅಂತ ಹೆಸರಿಟ್ಟುಕೊಂಡ ಜಗಳಗಂಟಿಯರನ್ನು, ಆನಂದ್ ಅಂತ ಹೆಸರಿಟ್ಟುಕೊಂಡ ದೇವದಾಸ್‍ಗಳನ್ನು, ರಾಮ್ ಅಂತ ಹೆಸರಿಟ್ಟುಕೊಂಡ ಪರಮ flirt ಗಳನ್ನು, ಕಾಮೇಶ್ ಅಂತ ಹೆಸರಿಟ್ಟುಕೊಂಡಿರುವ ಬ್ರಹ್ಮಚಾರಿಗಳನ್ನು, ತೇಜಸ್ವಿಯೆಂದು ಹೆಸರಿಟ್ಟುಕೊಂಡಿರುವ ಮಂಕುದಿಣ್ಣೆಯರನ್ನು, ಸ್ಮಿತಾ ಅಂತ ಹೆಸರಿಟ್ಟುಕೊಂಡಿರುವ ಅಳುಮುಂಜಿಯರನ್ನು, ಲಕ್ಷ್ಮಿ ಅಂತ ಹೆಸರಿಟ್ಟುಕೊಂಡ ಗುಡಿಸಲುವಾಸಿಯರನ್ನು, ಹರಿಶ್ಚಂದ್ರ ಎಂದು ಹೆಸರಿಟ್ಟುಕೊಂಡ ಪರಮ ವಂಚಕರನ್ನು, ಗಾಂಧಿಯೆಂದು ಹೆಸರಿಗೆ ಸೇರಿಸಿಕೊಂಡ ಅಧಿಕಾರವ್ಯಾಮೋಹಿಗಳನ್ನು!

ಭಾರತಕ್ಕೆ ಸ್ವಾತಂತ್ರ್ಯ ಬಂದಿದೆಯೆಂದು ಹೇಳಿಕೊಳ್ಳುತ್ತೇವೆ, ಆದರೆ ಸ್ವಾವಲಂಬನೆ ಭಾರತೀಯರಿಗೆ ಬಂದಿದೆಯಾ? Freedom ಬಂದಿದೆಯೇ ಹೊರೆತು Independence ಪಡೆದುಕೊಂಡಿದ್ದೇವಾ?

ವಿಶ್ವಮಾನವ ಸಂದೇಶ ಸಾರುವ ಈ ಹಾಡನ್ನು ಅರವತ್ತನೇ ಸ್ವಾತಂತ್ರ್ಯೋತ್ಸವದಲ್ಲಿ ನೆನೆಸಿಕೊಳ್ಳುವ ಮನಸ್ಸಾಗುತ್ತಿದೆ.
- ಅ
14.08.2007
11.15PM

Sunday, August 12, 2007

ಹರಕೆಯೊಲವು..

ಒಂದು ಎಸ್ಸೆಮ್ಮೆಸ್ ಶಾಯರಿ.. ಕನ್ನಡಕ್ಕಿಳಿಸುವ ಪ್ರಯತ್ನ ಮಾಡಿದೆ.

kisi ki dhadkan ke peeche koi baat hoti hai..
har dard ke peeche kisi ki yaad hoti hai..
aap ko pata ho na ho
aap ki har khushi ke peeche hamari dua hoti hai..

ಎದೆಖಗದ ಕಲರವಕಿಹುದು ಮಿಡಿವ ಹೃದಯದ ಬಲವು.
ನೋವಿನ ಬಾಷ್ಪಕಿಹುದು ನೆನಪಿನ ನಲವು.
ನೀ ಬಲ್ಲೆಯೇನು?
ನಿನ್ನ ನಿಜ ಸಂತಸದ ಪ್ರತಿ ಕಣದಲಿಹುದು
ಎನ್ನ ಪ್ರೀತಿಯ ಹರಕೆಯೊಲವು!

- ಅ
12.12.2007
1.20AM

Monday, August 6, 2007

ಮೂರು ಹಾರೈಕೆಗಳು...

ಮೂರನೆಯ ಮೊಮ್ಮಗಳು ಸಿಂಧುವಿನ ಹುಟ್ಟುಹಬ್ಬಕ್ಕೆಂದೇ ಬರೆಯಬೇಕೆಂದಿದ್ದೆ. ಬಿ.ಎಸ್.ಎನ್.ಎಲ್ ಕೊಟ್ಟ ವರವನ್ನು ಅನುಭವಿಸದೇ ಬೇರೆ ವಿಧಿಯಿರಲಿಲ್ಲವಾದ್ದರಿಂದ ಇವತ್ತು ಮೂರು ಹಾರೈಕೆಗಳನ್ನೂ ಒಟ್ಟಿಗೇ ಬರೆಯುತ್ತಿದ್ದೇನೆ.

ಕಳೆದ ವಾರ ಸಿಂಧು ಹುಟ್ಟುಹಬ್ಬ. ಅವಳಿಗೆಂದು ಚಕ್ಕುಲಿ ಕೋಡುಬಳೆಗಳ ಉಡುಗೊರೆ ಕೊಡಬೇಕೆಂದೆನಿಸಿತ್ತು. ಆದರೆ ಅದೆಲ್ಲಾ ಒಳ್ಳೇದಲ್ಲ ನೋಡಿ, ಹಣ್ಣು ತಿನ್ನಿ ಅಂತ ಬೋಧಿಸುತ್ತಾ ಈ ಒಂದು ಸಣ್ಣ ಅಂಕಣವನ್ನು ಅವಳಿಗರ್ಪಿಸುತ್ತಿದ್ದೇನೆ. ಹುಟ್ಟುಹಬ್ಬಕ್ಕೆಂದು ಕೇಕ್ ಕಟ್ ಮಾಡುತ್ತಿದ್ದೇನೆಂದು ಹೇಳಿದ ಅವಳಿಗೆ ಫೋನಿನಲ್ಲಿ ನಾನು ಲೆಕ್ಚರ್ ಕೊಟ್ಟಿದ್ದು ಏನು ಗೊತ್ತಾ? "ಕೇಕ್ ಎಲ್ಲಾ ತಿನ್ಬೇಡ್ರೀ, ಹಣ್ ತಿನ್ರೀ.. ಹುಟ್ಟು ಹಬ್ಬಕ್ಕೆ ಕೇಕ್ ಕಟ್ ಮಾಡೋದರ ಬದಲು ಯಾವುದಾದರೂ ಹಣ್ಣು ಕತ್ತರಿಸಿದರೆ ಚೆನ್ನಾಗಿರುತ್ತೆ. ಆರೋಗ್ಯಕ್ಕೂ ಒಳ್ಳೇದು, ವಿಭಿನ್ನ ಶೈಲಿಯ ಆಚರಣೆ ಕೂಡ ಆಗಿರುತ್ತೆ." ಎಂದು ಹೇಳಿ ನನ್ನ ಇನ್ನೋವೇಷನ್ ತಲೆಯನ್ನು ನಾನೇ ಪ್ರಶಂಸಿಸಿಕೊಂಡೆ.
ಈ ಆಪ್ತ ಗೆಳತಿಯ ಬಾಳು ಹಸನಾಗಿರಲಿ. ಬದುಕಿನ ಬನದಲ್ಲಿ ಕೋಗಿಲೆ ನಿನಾದ ಸದಾ ಕೇಳಿ ಬರುತ್ತಿರಲಿ ಎಂದು ಹಾರೈಸುತ್ತೇನೆ.
ಸಿಂಧು ಹುಟ್ಟುಹಬ್ಬದ ಆಚರಣೆಗೆಂದು ಸಂಜೆ ಅವರ ಮನೆಗೆ ಹೋಗುವ ಕಾರ್ಯಕ್ರಮವೇನೋ ಇತ್ತು. ಆದರೆ ಮನಸ್ಸು ಮಾತ್ರ ಅಷ್ಟು ಚೆನ್ನಿರಲಿಲ್ಲ. ಅದಕ್ಕೂ ಕಾರಣ ಇತ್ತು. ಶಾಲೆಯಲ್ಲಿ ನೋವಾಗಿತ್ತು.

ಯಾರೂ ಏನೂ ಅನ್ನಲಿಲ್ಲ. ಆದರೆ ನಮ್ಮೆಲ್ಲರ ಪ್ರಿಯರಾಗಿದ್ದ ಮುಖ್ಯೋಪಾಧ್ಯಾಯಿನಿ ಆಗಿದ್ದ ಸುನಂದಾ ಮೇಡಂ ಶಾಲೆಯಿಂದ ಹೊರಟುಬಿಟ್ಟಿದ್ದರು. ನಾನು ಹಾಗೆಲ್ಲಾ ಸುಮ್ಮಸುಮ್ಮನೆ ಬೇಸರ ಪಟ್ಟುಕೊಳ್ಳುವವನಲ್ಲ. ಆದರೆ, "ಅರುಣ್ ಸರ್, ನಾನು ಹೊರಡುತ್ತಿದ್ದೇನೆ, hope everything will be alright, take care" ಎಂದು ಅವರು ಕಂಪ್ಯೂಟರ್ ಲ್ಯಾಬಿಗೆ ಅವರು ಬಂದು ನನಗೆ ಹೇಳಿದಾಗ ನಾನು ಗದ್ಗದಿತನಾಗಿದ್ದು ಮಾತ್ರ ಸತ್ಯ. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಟೀಚರುಗಳ ಮನಸ್ಸುಗಳನ್ನು ಗೆದ್ದವರಾಗಿದ್ದರು. ಇಂಥವರೊಬ್ಬರು ನನಗೂ ಟೀಚರಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ನನಗೆ ಅನ್ನಿಸಿತ್ತು. ಅಷ್ಟರ ಮಟ್ಟಿಗೆ ಅವರು ಇಂಪ್ರೆಸ್ ಮಾಡಿದ್ದರು.

ಇನ್ನೊಂದು ವಿಶೇಷವೆಂದರೆ ಅವರು ಶಾಲೆಯ ಹೊಸಲು ದಾಟಿ ಸಕಲ ರಾಜಕೀಯಗಳಗೆ ಸ್ವಸ್ತಿ ಹೇಳಿ, ದಕ್ಷಿಣಾಭಿಮುಖವಾಗಿ ಹೊರಟಿದ್ದು ಇಡೀ ಶಾಲೆಯಲ್ಲಿ ನನ್ನ ಹೊರೆತು ಇನ್ನಾರಿಗೂ ಗೊತ್ತಿರಲಿಲ್ಲ. ವಾಸ್ತವವಾಗಿ ಈಗಲೂ ಗೊತ್ತಿಲ್ಲ. ಪಿ.ಟಿ. ಮೇಷ್ಟ್ರ ಹೊರೆತುಪಡಿಸಿ ನಾನೂ ಇನ್ಯಾರಿಗೂ ಹೇಳಿಲ್ಲ. ಎಲ್ಲರೂ ಹೆಚ್ ಎಮ್ ವಾಪಸ್ ಬರ್ತಾರೆ ಎಂದೇ ನಂಬಿದ್ದಾರೆ. Actually, ನನಗೆ ವಿಷಯ ಗೊತ್ತಿದ್ದರೂ ನಾನೂ ಅದನ್ನೇ ನಂಬಿದ್ದೇನೆ. ಅವರು ವಾಪಸ್ ಶಾಲೆಗೆ ಬರ್ತಾರೆ ಅಂತ.

ಅವರ ಬೀಗದಕೈ ಗೊಂಚಲು ನನ್ನಲ್ಲೇ ಉಳಿದಿದೆ. ಅವರ ಫೋಟೋ ಇಲ್ಲ. ಹೆಚ್ಚು ಕಾಲ ಒಟ್ಟಿಗೇ ಕೆಲಸ ಮಾಡಲಿಲ್ಲ, ಆದರೂ ಕೆಲಸ ಮಾಡಿದಷ್ಟು ದಿನಗಳೂ ನೆನಪಿನಲ್ಲಿ ಉಳಿಯುವಂಥದ್ದು. ಅವರು ಹೊರಡಲು ಸಿದ್ಧರಾಗುತ್ತಾ ಕಂಪ್ಯೂಟರನ್ನು Shut Down ಮಾಡುತ್ತಿದ್ದ ಗಳಿಗೆಯಲ್ಲಿ ಕಾರಣವಿರದಿದ್ದರೂ ನೆಪ ಹೇಳಿಕೊಂಡು ಅವರನ್ನು ಮಾತನಾಡಿಸಿಕೊಂಡು ಬರಲು ಅವರ ಛೇಂಬರಿಗೆ ಹೋದಾಗ ನನ್ನ ಕಣ್ಣ ರೆಪ್ಪೆಯೊಳಗೇ ಅಡಗಿಕೊಂಡ ಒಂದೆರಡು ಬಾಷ್ಪಗಳ ಹನಿಗಳೂ ಸಹ ನೆನಪಿನಲ್ಲುಳಿಯುವಂಥದ್ದು.

ಆಕೆಗೆ ಒಳಿತಾಗಲಿ. ಜಸ ಸಿಗಲಿ.

ಈ ಬೇಸರದ ಛಾಯೆಯೊಂದಿಗೆ ಸಿಂಧು ಹುಟ್ಟುಹಬ್ಬಕ್ಕೆ ಹೋಗಿದ್ದೆ. ಆದರೆ ಅಲ್ಲಿ ಸ್ವರೂಪನ, ಸ್ಮಿತೆ ಅಲಿಯಾಸ್ ಸರ್ಕಲ್ ಮಾರಮ್ಮನ, ಮೊದಲ ಮೊಮ್ಮಗಳು ಶೃತಿಯ, ಸಿಂಗರ್ ಶೃತಿಯ, ಸಂಗಡವು ಮನಸ್ಸಿಗೆ ಕೊಂಚ ಮುದವುಂಟು ಮಾಡಿ ಸಮಾಧಾನವಾಯಿತು.
ಇನ್ನೊಬ್ಬರ ಹುಟ್ಟುಹಬ್ಬಕ್ಕೂ ವಿಶ್ ಮಾಡೋದ್ ಇದೆ. ಚಿತ್ರರಂಗ ಕಂಡ ಅತ್ಯಂತ ವಿಚಿತ್ರ ಹುಚ್ಚನ ಹುಟ್ಟುಹಬ್ಬ. ಆತ ಬೇರಾರೂ ಅಲ್ಲ. ಸಕಲಕಲಾಭೂಷಣ ಕಿಶೋರ್ ಕುಮಾರ್. ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಸಾಹಿತಿ ಎಲ್ಲವೂ ಆಗಿದ್ದ ಕಿಶೋರ್ ಕುಮಾರ್ ಜನರ ಮನಸ್ಸಿನಲ್ಲಿ ಉಳಿದಿದ್ದು ಹಾಡುಗಾರನಾಗಿ. ಮೊನ್ನೆ ಆಗಸ್ಟ್ ನಾಲ್ಕು ಕಿಶೋರ್ ಇದ್ದಿದ್ದರೆ ಎಪ್ಪತ್ತೇಳಾಗಿರುತ್ತಿತ್ತು. ದೇವ್ ಆನಂದ್ ಇಂದ ಹಿಡಿದು ಅನಿಲ್ ಕಪೂರ್ ವರೆಗೂ ಹಿನ್ನೆಲೆ ಗಾಯನ ಮಾಡಿದ್ದನಾದರೂ, ವಿಶೇಷ ಏನಪ್ಪ ಅಂದ್ರೆ, ಯಾರಿಗೆ ಹಾಡಿದರೂ ಅವರ ಮುಖ ನೆನಪಾಗುವಂತಿದೆ. ರಾಜೇಶ್ ಖನ್ನಾ, ಅಮಿತಾಭ್, ಮತ್ತು ದೇವ್ ಆನಂದ್‍ಗೆ ಅತಿ ಹೆಚ್ಚು ಹಾಡು ಹಾಡಿದ್ದಾನಾದರೂ ಹಾಡನ್ನು ಕೇಳಿದ ತಕ್ಷಣ ರಾಜೇಶ್ ಖನ್ನಾ, ಅಮಿತಾಭ್ ಅಥವಾ ದೇವ್ ನೆನಪಾಗದೇ ಇರುವುದಿಲ್ಲ.
ಸೈಗಲ್‍ನನ್ನು ತನ್ನ ಗುರುವೆಂದು ಹೇಳಿಕೊಳ್ಳುತ್ತಿದ್ದ ಕಿಶೋರ್ ಆರಂಭದಲ್ಲಿ ಸೈಗಲ್‍ನನ್ನೇ ಅನುಕರಿಸಲು ಪ್ರಯತ್ನಿಸುತ್ತಿದ್ದ. ರಫಿಯೂ ಕೂಡ ಕಿಶೋರ್‍ಗೆ ಹಿನ್ನೆಲೆ ಗಾಯಕನಾಗಿ ಒಂದಷ್ಟು ಹಾಡುಗಳನ್ನು ಹಾಡಿದ್ದಾನೆ. ಹಿರಿಯಣ್ಣ ಅಶೋಕ್ ಕುಮಾರ್ (ದಾದಾ ಮೋನಿ) ಹಾಕಿದ ಗೆರೆ ದಾಟುತ್ತಿರಲಿಲ್ಲವಂತೆ ಕಿಶೋರ್. ಆತ "ನೀನು ನಟನೆ ಚೆನ್ನಾಗಿ ಮಾಡಲ್ಲ, ಸಾಕು ನೀನು ನಟನೆ ಮಾಡಿದ್ದು, ಹಾಡು ಹೇಳು ಸಾಕು" ಎಂದಿದ್ದಕ್ಕೆ, ನಟನೆಯನ್ನು ನಿಲ್ಲಿಸೇ ಬಿಟ್ಟನಂತೆ. ಕಿಶೋರ್ ಕುಮಾರ್‍ನಷ್ಟು ಹುಚ್ಚು ಹುಚ್ಚಾದ ಹಾಡುಗಳನ್ನು ಬಹುಶಃ ಯಾರೂ ಹಾಡಿಲ್ಲ ಅನ್ಸುತ್ತೆ. ಉಡ್ಲಿಗಳನ್ನು ಮಾಸ್ಟರ್ ಮಾಡಿಕೊಂಡಿದ್ದ. ಹಾಡು ಎಷ್ಟು ಹುಚ್ಚು ಹುಚ್ಚಾಗಿತ್ತೋ ಆತನ ನಟನೆಯಲ್ಲೂ ಅಷ್ಟೇ ಇನ್ವಾಲ್ವ್ಮೆಂಟ್ ಇರುತ್ತಿತ್ತು. ಹುಚ್ಚು ಹಾಡುಗಳ ಸಾಲು ಒಂದಾದರೆ, ರೊಮಾಂಟಿಕ್ ಹಾಡುಗಳನ್ನು ಕಿಶೋರ್ ಹಾಡಿದ್ದಾನೆಂದರೆ ಅದನ್ನು ಕೇಳಲು ಪುಣ್ಯ ಮಾಡಿರಬೇಕು. ಅಷ್ಟು ರೊಮಾಂಟಿಕ್ ಆಗಿರುತ್ತೆ.
ಜೀವನ್ ಸೇ ಭರೀ ತೇರೀ ಆಂಖೇ
ಮಜ್ಬೂರ್ ಕರೇ ಜೀನೇ ಕೇ ಲಿಏ...
ಆದರೆ ನನಗೆ ಕಿಶೋರ್ ತುಂಬಾ ಹಿಡಿಸೋದು ಶೋಕದ ಹಾಡುಗಳಲ್ಲಿ. ಮುಖೇಶ್‍ನಂತೆಯೇ ಶೋಕವನ್ನು ಅನುಭವಿಸಿ ಹಾಡುವವನು ಕಿಶೋರ್. ಕಿಶೋರ್ ಬಗ್ಗೆ ಎಲ್ಲಾ ಬರೆಯುವಷ್ಟು ಅನುಭವ, ಪರಿಣತಿ ನನಗಿಲ್ಲ. ಮೊನ್ನೆ ಅವನ ಹುಟ್ಟುಹಬ್ಬ.
ಅವನಿಗೊಂದು ವಿಶ್...
ಆತ ಇನ್ನೂ ಇರಬೇಕಿತ್ತು. ಆತನ ದನಿಯು ನೆನ್ನೆಗಳನ್ನು ಇಂದಿಗೆ ತರುತ್ತವೆ. ಆದರೆ ಆತನ ನೆನ್ನೆಗಳು ಮಾತ್ರ ಇಂದು ಸಿಗುವುದಿಲ್ಲ. ಇಂದಿನ ಚಿತ್ರರಂಗದ ಸಂಗೀತ ಸಾಹಿತ್ಯ ಹಾಡುಗಾರಿಕೆ ಹದಗೆಟ್ಟು ಹೋಗಿದೆ.
ಕೋಇ ಲೌಟಾದೇ ಮೇರೆ ಬೀತೇ ಹುಏ ದಿನ್.. ಎಂದು ಹಾಡುತ್ತಿದ್ದರೆ ತನ್ನ ಹಾಡೇ ಇದ್ದಂತಿದೆ.
ತನ್ನ ಹಾಡುಗಳಿಂದ ಸ್ವರ್ಗವನ್ನು ಸೃಷ್ಟಿ ಮಾಡಿ ತಾನು ಸ್ವರ್ಗ ಸೇರಿಕೊಂಡ ಕಿಶೋರ್‍ಗೆ ಹುಟ್ಟು ಹಬ್ಬದ ಶುಭಾಶಯಗಳು.
ಎಷ್ಟು versatile ಎಂಬುದನ್ನು ಈ ಕೆಳಗಿನ ಹಾಡುಗಳನ್ನು ಕೇಳಿ ನೋಡಿ..


- ಅ
06.08.2007
11.30PM