Monday, August 6, 2007

ಮೂರು ಹಾರೈಕೆಗಳು...

ಮೂರನೆಯ ಮೊಮ್ಮಗಳು ಸಿಂಧುವಿನ ಹುಟ್ಟುಹಬ್ಬಕ್ಕೆಂದೇ ಬರೆಯಬೇಕೆಂದಿದ್ದೆ. ಬಿ.ಎಸ್.ಎನ್.ಎಲ್ ಕೊಟ್ಟ ವರವನ್ನು ಅನುಭವಿಸದೇ ಬೇರೆ ವಿಧಿಯಿರಲಿಲ್ಲವಾದ್ದರಿಂದ ಇವತ್ತು ಮೂರು ಹಾರೈಕೆಗಳನ್ನೂ ಒಟ್ಟಿಗೇ ಬರೆಯುತ್ತಿದ್ದೇನೆ.

ಕಳೆದ ವಾರ ಸಿಂಧು ಹುಟ್ಟುಹಬ್ಬ. ಅವಳಿಗೆಂದು ಚಕ್ಕುಲಿ ಕೋಡುಬಳೆಗಳ ಉಡುಗೊರೆ ಕೊಡಬೇಕೆಂದೆನಿಸಿತ್ತು. ಆದರೆ ಅದೆಲ್ಲಾ ಒಳ್ಳೇದಲ್ಲ ನೋಡಿ, ಹಣ್ಣು ತಿನ್ನಿ ಅಂತ ಬೋಧಿಸುತ್ತಾ ಈ ಒಂದು ಸಣ್ಣ ಅಂಕಣವನ್ನು ಅವಳಿಗರ್ಪಿಸುತ್ತಿದ್ದೇನೆ. ಹುಟ್ಟುಹಬ್ಬಕ್ಕೆಂದು ಕೇಕ್ ಕಟ್ ಮಾಡುತ್ತಿದ್ದೇನೆಂದು ಹೇಳಿದ ಅವಳಿಗೆ ಫೋನಿನಲ್ಲಿ ನಾನು ಲೆಕ್ಚರ್ ಕೊಟ್ಟಿದ್ದು ಏನು ಗೊತ್ತಾ? "ಕೇಕ್ ಎಲ್ಲಾ ತಿನ್ಬೇಡ್ರೀ, ಹಣ್ ತಿನ್ರೀ.. ಹುಟ್ಟು ಹಬ್ಬಕ್ಕೆ ಕೇಕ್ ಕಟ್ ಮಾಡೋದರ ಬದಲು ಯಾವುದಾದರೂ ಹಣ್ಣು ಕತ್ತರಿಸಿದರೆ ಚೆನ್ನಾಗಿರುತ್ತೆ. ಆರೋಗ್ಯಕ್ಕೂ ಒಳ್ಳೇದು, ವಿಭಿನ್ನ ಶೈಲಿಯ ಆಚರಣೆ ಕೂಡ ಆಗಿರುತ್ತೆ." ಎಂದು ಹೇಳಿ ನನ್ನ ಇನ್ನೋವೇಷನ್ ತಲೆಯನ್ನು ನಾನೇ ಪ್ರಶಂಸಿಸಿಕೊಂಡೆ.
ಈ ಆಪ್ತ ಗೆಳತಿಯ ಬಾಳು ಹಸನಾಗಿರಲಿ. ಬದುಕಿನ ಬನದಲ್ಲಿ ಕೋಗಿಲೆ ನಿನಾದ ಸದಾ ಕೇಳಿ ಬರುತ್ತಿರಲಿ ಎಂದು ಹಾರೈಸುತ್ತೇನೆ.
ಸಿಂಧು ಹುಟ್ಟುಹಬ್ಬದ ಆಚರಣೆಗೆಂದು ಸಂಜೆ ಅವರ ಮನೆಗೆ ಹೋಗುವ ಕಾರ್ಯಕ್ರಮವೇನೋ ಇತ್ತು. ಆದರೆ ಮನಸ್ಸು ಮಾತ್ರ ಅಷ್ಟು ಚೆನ್ನಿರಲಿಲ್ಲ. ಅದಕ್ಕೂ ಕಾರಣ ಇತ್ತು. ಶಾಲೆಯಲ್ಲಿ ನೋವಾಗಿತ್ತು.

ಯಾರೂ ಏನೂ ಅನ್ನಲಿಲ್ಲ. ಆದರೆ ನಮ್ಮೆಲ್ಲರ ಪ್ರಿಯರಾಗಿದ್ದ ಮುಖ್ಯೋಪಾಧ್ಯಾಯಿನಿ ಆಗಿದ್ದ ಸುನಂದಾ ಮೇಡಂ ಶಾಲೆಯಿಂದ ಹೊರಟುಬಿಟ್ಟಿದ್ದರು. ನಾನು ಹಾಗೆಲ್ಲಾ ಸುಮ್ಮಸುಮ್ಮನೆ ಬೇಸರ ಪಟ್ಟುಕೊಳ್ಳುವವನಲ್ಲ. ಆದರೆ, "ಅರುಣ್ ಸರ್, ನಾನು ಹೊರಡುತ್ತಿದ್ದೇನೆ, hope everything will be alright, take care" ಎಂದು ಅವರು ಕಂಪ್ಯೂಟರ್ ಲ್ಯಾಬಿಗೆ ಅವರು ಬಂದು ನನಗೆ ಹೇಳಿದಾಗ ನಾನು ಗದ್ಗದಿತನಾಗಿದ್ದು ಮಾತ್ರ ಸತ್ಯ. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಟೀಚರುಗಳ ಮನಸ್ಸುಗಳನ್ನು ಗೆದ್ದವರಾಗಿದ್ದರು. ಇಂಥವರೊಬ್ಬರು ನನಗೂ ಟೀಚರಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ನನಗೆ ಅನ್ನಿಸಿತ್ತು. ಅಷ್ಟರ ಮಟ್ಟಿಗೆ ಅವರು ಇಂಪ್ರೆಸ್ ಮಾಡಿದ್ದರು.

ಇನ್ನೊಂದು ವಿಶೇಷವೆಂದರೆ ಅವರು ಶಾಲೆಯ ಹೊಸಲು ದಾಟಿ ಸಕಲ ರಾಜಕೀಯಗಳಗೆ ಸ್ವಸ್ತಿ ಹೇಳಿ, ದಕ್ಷಿಣಾಭಿಮುಖವಾಗಿ ಹೊರಟಿದ್ದು ಇಡೀ ಶಾಲೆಯಲ್ಲಿ ನನ್ನ ಹೊರೆತು ಇನ್ನಾರಿಗೂ ಗೊತ್ತಿರಲಿಲ್ಲ. ವಾಸ್ತವವಾಗಿ ಈಗಲೂ ಗೊತ್ತಿಲ್ಲ. ಪಿ.ಟಿ. ಮೇಷ್ಟ್ರ ಹೊರೆತುಪಡಿಸಿ ನಾನೂ ಇನ್ಯಾರಿಗೂ ಹೇಳಿಲ್ಲ. ಎಲ್ಲರೂ ಹೆಚ್ ಎಮ್ ವಾಪಸ್ ಬರ್ತಾರೆ ಎಂದೇ ನಂಬಿದ್ದಾರೆ. Actually, ನನಗೆ ವಿಷಯ ಗೊತ್ತಿದ್ದರೂ ನಾನೂ ಅದನ್ನೇ ನಂಬಿದ್ದೇನೆ. ಅವರು ವಾಪಸ್ ಶಾಲೆಗೆ ಬರ್ತಾರೆ ಅಂತ.

ಅವರ ಬೀಗದಕೈ ಗೊಂಚಲು ನನ್ನಲ್ಲೇ ಉಳಿದಿದೆ. ಅವರ ಫೋಟೋ ಇಲ್ಲ. ಹೆಚ್ಚು ಕಾಲ ಒಟ್ಟಿಗೇ ಕೆಲಸ ಮಾಡಲಿಲ್ಲ, ಆದರೂ ಕೆಲಸ ಮಾಡಿದಷ್ಟು ದಿನಗಳೂ ನೆನಪಿನಲ್ಲಿ ಉಳಿಯುವಂಥದ್ದು. ಅವರು ಹೊರಡಲು ಸಿದ್ಧರಾಗುತ್ತಾ ಕಂಪ್ಯೂಟರನ್ನು Shut Down ಮಾಡುತ್ತಿದ್ದ ಗಳಿಗೆಯಲ್ಲಿ ಕಾರಣವಿರದಿದ್ದರೂ ನೆಪ ಹೇಳಿಕೊಂಡು ಅವರನ್ನು ಮಾತನಾಡಿಸಿಕೊಂಡು ಬರಲು ಅವರ ಛೇಂಬರಿಗೆ ಹೋದಾಗ ನನ್ನ ಕಣ್ಣ ರೆಪ್ಪೆಯೊಳಗೇ ಅಡಗಿಕೊಂಡ ಒಂದೆರಡು ಬಾಷ್ಪಗಳ ಹನಿಗಳೂ ಸಹ ನೆನಪಿನಲ್ಲುಳಿಯುವಂಥದ್ದು.

ಆಕೆಗೆ ಒಳಿತಾಗಲಿ. ಜಸ ಸಿಗಲಿ.

ಈ ಬೇಸರದ ಛಾಯೆಯೊಂದಿಗೆ ಸಿಂಧು ಹುಟ್ಟುಹಬ್ಬಕ್ಕೆ ಹೋಗಿದ್ದೆ. ಆದರೆ ಅಲ್ಲಿ ಸ್ವರೂಪನ, ಸ್ಮಿತೆ ಅಲಿಯಾಸ್ ಸರ್ಕಲ್ ಮಾರಮ್ಮನ, ಮೊದಲ ಮೊಮ್ಮಗಳು ಶೃತಿಯ, ಸಿಂಗರ್ ಶೃತಿಯ, ಸಂಗಡವು ಮನಸ್ಸಿಗೆ ಕೊಂಚ ಮುದವುಂಟು ಮಾಡಿ ಸಮಾಧಾನವಾಯಿತು.
ಇನ್ನೊಬ್ಬರ ಹುಟ್ಟುಹಬ್ಬಕ್ಕೂ ವಿಶ್ ಮಾಡೋದ್ ಇದೆ. ಚಿತ್ರರಂಗ ಕಂಡ ಅತ್ಯಂತ ವಿಚಿತ್ರ ಹುಚ್ಚನ ಹುಟ್ಟುಹಬ್ಬ. ಆತ ಬೇರಾರೂ ಅಲ್ಲ. ಸಕಲಕಲಾಭೂಷಣ ಕಿಶೋರ್ ಕುಮಾರ್. ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಸಾಹಿತಿ ಎಲ್ಲವೂ ಆಗಿದ್ದ ಕಿಶೋರ್ ಕುಮಾರ್ ಜನರ ಮನಸ್ಸಿನಲ್ಲಿ ಉಳಿದಿದ್ದು ಹಾಡುಗಾರನಾಗಿ. ಮೊನ್ನೆ ಆಗಸ್ಟ್ ನಾಲ್ಕು ಕಿಶೋರ್ ಇದ್ದಿದ್ದರೆ ಎಪ್ಪತ್ತೇಳಾಗಿರುತ್ತಿತ್ತು. ದೇವ್ ಆನಂದ್ ಇಂದ ಹಿಡಿದು ಅನಿಲ್ ಕಪೂರ್ ವರೆಗೂ ಹಿನ್ನೆಲೆ ಗಾಯನ ಮಾಡಿದ್ದನಾದರೂ, ವಿಶೇಷ ಏನಪ್ಪ ಅಂದ್ರೆ, ಯಾರಿಗೆ ಹಾಡಿದರೂ ಅವರ ಮುಖ ನೆನಪಾಗುವಂತಿದೆ. ರಾಜೇಶ್ ಖನ್ನಾ, ಅಮಿತಾಭ್, ಮತ್ತು ದೇವ್ ಆನಂದ್‍ಗೆ ಅತಿ ಹೆಚ್ಚು ಹಾಡು ಹಾಡಿದ್ದಾನಾದರೂ ಹಾಡನ್ನು ಕೇಳಿದ ತಕ್ಷಣ ರಾಜೇಶ್ ಖನ್ನಾ, ಅಮಿತಾಭ್ ಅಥವಾ ದೇವ್ ನೆನಪಾಗದೇ ಇರುವುದಿಲ್ಲ.
ಸೈಗಲ್‍ನನ್ನು ತನ್ನ ಗುರುವೆಂದು ಹೇಳಿಕೊಳ್ಳುತ್ತಿದ್ದ ಕಿಶೋರ್ ಆರಂಭದಲ್ಲಿ ಸೈಗಲ್‍ನನ್ನೇ ಅನುಕರಿಸಲು ಪ್ರಯತ್ನಿಸುತ್ತಿದ್ದ. ರಫಿಯೂ ಕೂಡ ಕಿಶೋರ್‍ಗೆ ಹಿನ್ನೆಲೆ ಗಾಯಕನಾಗಿ ಒಂದಷ್ಟು ಹಾಡುಗಳನ್ನು ಹಾಡಿದ್ದಾನೆ. ಹಿರಿಯಣ್ಣ ಅಶೋಕ್ ಕುಮಾರ್ (ದಾದಾ ಮೋನಿ) ಹಾಕಿದ ಗೆರೆ ದಾಟುತ್ತಿರಲಿಲ್ಲವಂತೆ ಕಿಶೋರ್. ಆತ "ನೀನು ನಟನೆ ಚೆನ್ನಾಗಿ ಮಾಡಲ್ಲ, ಸಾಕು ನೀನು ನಟನೆ ಮಾಡಿದ್ದು, ಹಾಡು ಹೇಳು ಸಾಕು" ಎಂದಿದ್ದಕ್ಕೆ, ನಟನೆಯನ್ನು ನಿಲ್ಲಿಸೇ ಬಿಟ್ಟನಂತೆ. ಕಿಶೋರ್ ಕುಮಾರ್‍ನಷ್ಟು ಹುಚ್ಚು ಹುಚ್ಚಾದ ಹಾಡುಗಳನ್ನು ಬಹುಶಃ ಯಾರೂ ಹಾಡಿಲ್ಲ ಅನ್ಸುತ್ತೆ. ಉಡ್ಲಿಗಳನ್ನು ಮಾಸ್ಟರ್ ಮಾಡಿಕೊಂಡಿದ್ದ. ಹಾಡು ಎಷ್ಟು ಹುಚ್ಚು ಹುಚ್ಚಾಗಿತ್ತೋ ಆತನ ನಟನೆಯಲ್ಲೂ ಅಷ್ಟೇ ಇನ್ವಾಲ್ವ್ಮೆಂಟ್ ಇರುತ್ತಿತ್ತು. ಹುಚ್ಚು ಹಾಡುಗಳ ಸಾಲು ಒಂದಾದರೆ, ರೊಮಾಂಟಿಕ್ ಹಾಡುಗಳನ್ನು ಕಿಶೋರ್ ಹಾಡಿದ್ದಾನೆಂದರೆ ಅದನ್ನು ಕೇಳಲು ಪುಣ್ಯ ಮಾಡಿರಬೇಕು. ಅಷ್ಟು ರೊಮಾಂಟಿಕ್ ಆಗಿರುತ್ತೆ.
ಜೀವನ್ ಸೇ ಭರೀ ತೇರೀ ಆಂಖೇ
ಮಜ್ಬೂರ್ ಕರೇ ಜೀನೇ ಕೇ ಲಿಏ...
ಆದರೆ ನನಗೆ ಕಿಶೋರ್ ತುಂಬಾ ಹಿಡಿಸೋದು ಶೋಕದ ಹಾಡುಗಳಲ್ಲಿ. ಮುಖೇಶ್‍ನಂತೆಯೇ ಶೋಕವನ್ನು ಅನುಭವಿಸಿ ಹಾಡುವವನು ಕಿಶೋರ್. ಕಿಶೋರ್ ಬಗ್ಗೆ ಎಲ್ಲಾ ಬರೆಯುವಷ್ಟು ಅನುಭವ, ಪರಿಣತಿ ನನಗಿಲ್ಲ. ಮೊನ್ನೆ ಅವನ ಹುಟ್ಟುಹಬ್ಬ.
ಅವನಿಗೊಂದು ವಿಶ್...
ಆತ ಇನ್ನೂ ಇರಬೇಕಿತ್ತು. ಆತನ ದನಿಯು ನೆನ್ನೆಗಳನ್ನು ಇಂದಿಗೆ ತರುತ್ತವೆ. ಆದರೆ ಆತನ ನೆನ್ನೆಗಳು ಮಾತ್ರ ಇಂದು ಸಿಗುವುದಿಲ್ಲ. ಇಂದಿನ ಚಿತ್ರರಂಗದ ಸಂಗೀತ ಸಾಹಿತ್ಯ ಹಾಡುಗಾರಿಕೆ ಹದಗೆಟ್ಟು ಹೋಗಿದೆ.
ಕೋಇ ಲೌಟಾದೇ ಮೇರೆ ಬೀತೇ ಹುಏ ದಿನ್.. ಎಂದು ಹಾಡುತ್ತಿದ್ದರೆ ತನ್ನ ಹಾಡೇ ಇದ್ದಂತಿದೆ.
ತನ್ನ ಹಾಡುಗಳಿಂದ ಸ್ವರ್ಗವನ್ನು ಸೃಷ್ಟಿ ಮಾಡಿ ತಾನು ಸ್ವರ್ಗ ಸೇರಿಕೊಂಡ ಕಿಶೋರ್‍ಗೆ ಹುಟ್ಟು ಹಬ್ಬದ ಶುಭಾಶಯಗಳು.
ಎಷ್ಟು versatile ಎಂಬುದನ್ನು ಈ ಕೆಳಗಿನ ಹಾಡುಗಳನ್ನು ಕೇಳಿ ನೋಡಿ..


- ಅ
06.08.2007
11.30PM

6 comments:

 1. ಸಿಂಧು ಹುಟ್ಟುಹಬ್ಬ ಇದ್ದದ್ದು ತಿಳಿದಿರಲೇ ಇಲ್ಲ :( ಇರಲಿ, ಆಕೆಗೆ ನನ್ನ ಶುಭಾಶಯಗಳಿರಲಿ.
  ಮೇಡಂ ಬಗ್ಗೆ ನನಗೆ ಗೊತ್ತಿಲ್ಲ.
  ಇನ್ನು ಕಿಶೋರ್ ಕುಮಾರ್- ಹಾಡುತ್ತಾನೆಂದಷ್ಟೇ ತಿಳಿದಿತ್ತು. ಹಾಗೆ ಅವನು ಬಹುಮುಖ ಪ್ರತಿಭೆ ಎಂದು ಇದನ್ನೋದಿದ ಮೇಲೆಯೇ ತಿಳಿದದ್ದು.

  ಕಲಾತಪಸ್ವಿಗಳು... ಕಲಾತಪಸ್ವಿಗಳು..

  ReplyDelete
 2. --> ಬೈಸ್ಕೋ ಸಿಂಧು ಹತ್ರ, ಚಾಡಿ ಹೇಳ್ತೀನಿ.
  --> ಮೇಡಮ್ ಬಗ್ಗೆ ಗೊತ್ತಾಗ್ಲಿ ಅಂತಾನೇ ಬರ್ದಿರೋದು. ಮರ್ಯಾದೆಯಿಂದ ಅದರ ಬಗ್ಗೆ ಕಮೆಂಟ್ ಬರೆದೆಯೋ ಸರಿ, ಇಲ್ಲಾಂದ್ರೆ ನಿನ್ ಜೊತೆ ಟು.
  --> ನಿನ್ನ ಹಾಡು - ಆಪ್ ಕೇ ಅನುರೋಧ್ ಹಾಕ್ಬೇಕು ಅಂದ್ಕೊಂಡೆ, ಆದರೆ, ಸುಮ್ನೆ ಟೈಮ್ ಪಾಸ್‍ಗೆ ಹಾಕ್ಲಿಲ್ಲ. ಕಿಶೋರ್‍ದು ಹಾಡುಗಳನ್ನು ಹಾಕ್ಬೇಕು ಅಂದ್ರೆ ಬ್ಲಾಗ್ ಸ್ಪಾಟ್ ಸಾಲಲ್ಲ ನೋಡು.

  ReplyDelete
 3. kishore kumar na huccha andbitre hege?? Avara bagge ondhu lekhana yaak bareebaardhu neenu?? Madam bagge nanagu saha tiLidilla...ee blog neen haakiro photos tumba chennagidhe.....just sooooper... :-)

  ReplyDelete
 4. ಹೌದು, ಕಿಶೋರ್ ಒಬ್ಬ ಹುಚ್ಚನೇ. ಸಂಗೀತ ನಿರ್ದೇಶಕರು ನಮ್ ಚಿತ್ರಕ್ಕೆ ಹಾಡ್ತೀರಾ ಅಂತ ಕೇಳೋಕೆ ಹೋದ್ರೆ, ಒಪ್ಪಿಕೊಂಡು ನಂತರ ಸ್ಟುಡಿಯೋನಲ್ಲಿ, ನೀನು ಕುಣಿದರೇನೇ ನಾನು ಹಾಡೋದು ಎಂದು ಪಟ್ಟು ಹಿಡಿಯುತ್ತಿದ್ದ. ಸುಮ್ಮಸುಮ್ಮನೆ ಎಸ್ ಡಿ ಬರ್ಮನ್ ಮನೆಗೆ ಹೋಗಿ ನಂಗೊಂದು ಚಾನ್ಸ್ ಕೊಡ್ತೀರಾ ನಾನು ಹಾಡ್ತೀನಿ ಅಂತ ಕೇಳುತ್ತಿದ್ದ. ಇದ್ದಕ್ಕಿದ್ದ ಹಾಗೆ ಮೌನಿಯಾಗಿಬಿಡುತ್ತಿದ್ದ. ಹಾಡುವಾಗ ಹಾಡಿನಲ್ಲಿ ಕುಣಿತ ಇದ್ದರೆ ತಾನೂ ಕುಣಿಯುತ್ತಿದ್ದ. ಹೀಗೆ ಅವನ ಕಥೆ.

  ReplyDelete
 5. ಹೋ.. ಸಿಂಧು ಅವರ ಹುಟ್ಟಿದಹಬ್ಬ ವೆಂದು ನನಗೂ ತಿಳಿದಿರಲಿಲ್ಲ

  ಭಾವನಾತ್ಮಕ ಜೀವಿಗಳು ಹೀಗೆ ತುಂಬ ಬೇಗ ತಮ್ಮ ಸುತ್ತಮುತ್ತಲಿನವರನ್ನು ಹಚ್ಚಿಕೊಂಡಿರುತ್ತಾರೆ ನಿಮಗು ಅದೇ ಆದದ್ದು ಮೇಡಂ ವಿಷಯದಲ್ಲಿಯೆಂಬುವುದು ನನ್ನ ಅನಿಸಿಕೆ.
  ಇನ್ನು ಕಿಶೋರ್ ಜಿ ವಾರೆ ವಾಹ್......
  ಮತ್ತೆ ನನ್ನ ಅಚ್ಚುಮೆಚ್ಚಿನ ಗೀತೆ:ತಂಡಿ ಹವ ಹೇ ಚಾದ್ ನೀಸೊಹಾನಿ ಹೇ ಮೇರಾ ದಿನ್ ಸುನಾ ಕೋಯಿ ಕಹಾನಿ.....
  ......ಹಾಡನ್ನ ಇಲ್ಲಿ ಕೇಳಿ ಸಕ್ಕತ್ ಖುಷಿ ಆಯ್ತು
  ಆದರೆ ಕಿಶೋರ್ ಜಿ ನ ಹುಚ್ಚ ಅನ್ನಬಾರದಿತ್ತು.

  ReplyDelete
 6. Nija. Shokada haaDugaLalli adeko tumba chennaagirutte. Kishore-de aagli, Mukesh-de aagli, Rafi-de aagli, aa haaDugaLu koDo aanandave bere.

  ReplyDelete