Monday, August 20, 2007

ಶುಭಾಶಯದ ನೆನಪು..

ಇಂದು ಭಾವ ಪ್ರಸನ್ನನ ಹುಟ್ಟು ಹಬ್ಬ.

"ಬಾ, ಹೋಗು" ಎಂದು ಕರೆಯುತ್ತಿದ್ದ ಕಾಲ. ಪ್ರಸನ್ನ ಇನ್ನೂ ಭಾವ ಆಗಿರಲಿಲ್ಲ. ಆದರೆ ಅಕ್ಕನಲ್ಲಿ 'ಭಾವ'ದ ಹೂ ಅರಳಿಯಾಗಿತ್ತು. ನಾನು ಮೂರನೇ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಪ್ರಸನ್ನನ ಹುಟ್ಟು ಹಬ್ಬಕ್ಕೆ "ಹ್ಯಾಪಿ ಬರ್ತ್ ಡೇ" ಎಂದು ಲೂನಾ ಮೇಲೆ ಬಂದವನಿಗೆ ನಿಂಬೇ ಹುಳಿ ಕೊಟ್ಟಿದ್ದೆವು, ಬನಶಂಕರಿ ಸೆಕೆಂಡ್ ಸ್ಟೇಜ್ ಕ್ರಿಕೆಟ್ ಟೀಮಿನವರೆಲ್ಲರು. ಅದ್ಯಾಕೆ ಅಂತ ನೆನಪಿಲ್ಲ, ಬಹುಶಃ ಕ್ರಿಕೆಟ್ಟಿನಲ್ಲಿ ನಮ್ಮಂಥ ಚಿಕ್ಕ ಹುಡುಗರಿಗೆ ತೊಂದರೆಯುಂಟು ಮಾಡುತ್ತಿದ್ದ ಕಾರಣ ಅನ್ನಿಸುತ್ತೆ, ನಾವೆಲ್ಲರೂ ಪ್ರಸನ್ನಂಗೆ ಬುದ್ಧಿ ಕಲಿಸಬೇಕೆಂದು ಪ್ಲಾನ್ ಮಾಡುತ್ತಿದ್ದೆವು. ನಿಂಬೇ ಹುಳಿಯನ್ನು ಖುಷಿಯಿಂದ ಬಾಯಿಗಿಳಿಸಿದ ಪ್ರಸನ್ನಂಗೆ ಬುದ್ಧಿ ಕಲಿಸಿದೆವು ಎಂದು ನಾನು, ನನ್ನ ಅಂದಿನ ಮಿತ್ರರಾದ ಸುದರ್ಶನ್, ಚಿಕ್ಕ ರಘು (ಅವನು ಕುಳ್ಳಗಿದ್ದ, ಇನ್ನೊಬ್ಬ ರಘು ಎಂಬುವನು ಉದ್ದ ಇದ್ದ, ಹೆನ್ಸ್ ದಿ ನೇಮ್ ಚಿಕ್ಕ ರಘು, ಕನ್ಫ್ಯೂಷನ್ ಆಗದಿರಲಿ ಎಂದು) ಹಿಗ್ಗಿದ್ದೆವು. ಅದೇನು ಬುದ್ಧಿ ಕಲಿಸಿದ್ದೆವೋ ಇನ್ನೂ ಗೊತ್ತಿಲ್ಲ. ಆದರೆ ಪ್ರಸನ್ನನಂತೂ ನಿಂಬೇಹುಳಿಯನ್ನು ಸಂತಸದಿಂದ ಸ್ವೀಕರಿಸಿದ್ದು ನೆನಪಿದೆ.


"ಬನ್ನಿ ಹೋಗಿ ಅನ್ನಲೋ, ಬಾ ಹೋಗು ಅನ್ನಲೋ" ಎಂಬ ಗೊಂದಲದ ಕಾಲ. ಕಾರಣಾಂತರದಿಂದ ನಾನು ಭಾವ (ಪ್ರಸನ್ನ)ನೊಡನೆ ಮಾತನಾಡುತ್ತಿರಲಿಲ್ಲ. (ಅದ್ಯಾವುದೋ ಸಿಲ್ಲಿ ಕಾರಣ, ನೆನಪಿಲ್ಲ.) ಭಾವನಾಗಿ ಒಂದು ವರ್ಷವೂ ಆಗಿರಲಿಲ್ಲ. ಅಕ್ಕನಲ್ಲಿ ಭಾವನು ಮನಮನೆಯಾಗಿದ್ದನು/ರು. ಎಂಟನೇ ತರಗತಿಯಲ್ಲಿದ್ದೆನೆನಿಸುತ್ತೆ. ಆಚಾರ್ಯ ಪಾಠಶಾಲೆಯಲ್ಲಿ ಸೈಕಲ್ ಸವಾರಿಯನ್ನೇರ್ಪಡಿಸಿದ್ದರು. ನರಸಿಂಹ ರಾಜ ಕಾಲೋನಿಯಿಂದ ಭನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಅಲ್ಲಿಂದ ವಾಪಸ್. ಪ್ರಸನ್ನನ ಬಳಿ ಒಂದು ಕಪ್ಪನೆಯ ಬಿ.ಎಸ್.ಎ. ಸೈಕಲ್ ಇತ್ತು. ಪ್ರಸನ್ನ ಟಿ.ವಿ.ಎಸ್.ಗೆ ಬೆಳೆದ ಕಾರಣ, ಆ ಸೈಕಲ್ಲು ನನಗೆ inherit ಆಗಿತ್ತು. ಅದೇ ಸೈಕಲ್ಲಿನಲ್ಲೇ ಸವಾರಿಗೆ ಹೊರಟಿದ್ದೆ. ಅವತ್ತೂ ಆಗಸ್ಟ್ ಇಪ್ಪತ್ತು. ವಾಪಸ್ ಬರುತ್ತಾ, ಸೈಕಲ್ಲಿನ ಪೆಡಲ್ ಕಿತ್ತು ಕೆಳಗೆ ಬಿತ್ತು. ಕೋಣನಕುಂಟೆಯ ಬಳಿ!! ನನಗೆ ಆ ಏರಿಯಾ ಎಲ್ಲಾ ಹೊಸತು. ಕೋಣನಕುಂಟೆಯಿಂದ ಬನಶಂಕರಿಯ ಬಳಿಯಿರುವ ಹುಣಸೇ ಮರದ ವರೆಗೂ ಸೈಕಲ್ಲನ್ನು ತಳ್ಳಿಕೊಂಡು ಬಂದಿದ್ದೆ. ನಾನು ಎಂಟನೇ ತರಗತಿಯಲ್ಲಿದ್ದಾಗ ಬನಶಂಕರಿ ದೇವಸ್ಥಾನದ ಆಚೆಗೆ ಸಕಲವೂ ಕಾಡಿನಂತಿತ್ತು. ಈಗ ಕನಕಪುರದ ವರೆಗೂ ಸಿಟಿಯೇ ಬಿಡಿ! ಆ ಕಾಡಿನಲ್ಲಿ, ಏನೂ ಗೊತ್ತಿಲ್ಲದವನಾಗಿ ಸೈಕಲ್ಲನ್ನು ತಳ್ಳಿಕೊಂಡು ಬಂದು ಜೇಬಿನಲ್ಲಿದ್ದ ಐದೇ ಐದು ರೂಪಾಯಿಯಲ್ಲಿ ಅದೇ ಪೆಡಲ್‍ನ ಫ್ಹಿಟ್ ಮಾಡಿಸಿಕೊಂಡು ವಿದ್ಯಾಪೀಠದಲ್ಲಿದ್ದ ಅಕ್ಕನ ಮನೆಗೆ ಹೋದೆ. ಅವರ ಮನೆಯಲ್ಲಾದರೂ ಸ್ವಲ್ಪ ವಿರಮಿಸಿಕೊಳ್ಳಬಹುದೆಂದು. ಆದರೆ, ಗಂಡ ಹೆಂಡತಿಯಿಬ್ಬರೂ ಎಲ್ಲಿಗೋ ಹೊರಟಿದ್ದರು. ನನ್ನ ಜೇಬು ಖಾಲಿಯಾಗಿತ್ತು. ಸೈಕಲ್ ತುಳಿಯಲು ಎಳ್ಳಷ್ಟೂ ಚೈತನ್ಯವಿರಲಿಲ್ಲ. "ಇವತ್ತು ಪ್ರಸನ್ನನ ಹುಟ್ಟು ಹಬ್ಬ ಕಣೋ, ಅದಕ್ಕೆ ಹೊರಗೆ ಹೊರಟಿದ್ದೇವೆ" ಎಂದಳು ಅಕ್ಕ. ನಾನು ಏದುಸಿರು ಬಿಡುತ್ತಲೇ "ಹ್ಯಾಪಿ ಬರ್ತ್‍ ಡೇ.." ಎನ್ನದೇ ಹಾಗೇ ನಕ್ಕೆ. ಬೀಗ ಹಾಕಿದ್ದವಳು ಮತ್ತೆ ಬಾಗಿಲು ತೆಗೆದು ಒಳಗೆ ಕರೆದೊಯ್ದು ಮಾಡಿದ್ದ ಜಾಮೂನನ್ನು ಕೊಟ್ಟಳು. ಅವರಿಬ್ಬರು ಮದುವೆಯಾದ ಮೇಲೆ ಮೊದಲನೆಯ ಹುಟ್ಟುಹಬ್ಬವನ್ನು ಪ್ರಸನ್ನ ಆಚರಿಸಿಕೊಳ್ಳುತ್ತಿದ್ದುದು. ಹಾಗಾಗಿ "ನೀನೂ ಬರ್ತೀಯಾ?" ಅಂತ ಕರೆಯಲಿಲ್ಲ ಅನ್ನಿಸುತ್ತೆ.

ಮಾತನಾಡುತ್ತಿರಲಿಲ್ಲವಾದರೂ ಪ್ರಸನ್ನ, "ಪಾಪ ಸುಸ್ತಾಗಿದ್ದಾನೆ, ಒಂದು ಹತ್ತು ರೂಪಾಯಿ ಕೊಡು, ಆಟೋಲಿ ಹೋಗಲಿ" ಎಂದು ಹೇಳಿ ಕಿಸೆಯಿಂದ ಹತ್ತು ರೂಪಾಯಿ ತೆಗೆದು ವಿಜಾಯಳ ಕೈಗಿತ್ತ(ರು). ಅವರಿಬ್ಬರೂ ಹೊರಟು ಹೋದರು ಟಿ.ವಿ.ಎಸ್. 50 ಏರಿ!!
ನಾನು ಹತ್ತು ನಿಮಿಷ ವಿರಮಿಸಿ ಹೊರಟೆ ಆಟೋಲಿ.

ಈಗ ಪ್ರಸನ್ನ ತನ್ನ ಮೂವ್ವತ್ತಾರನೆಯ ವರ್ಷದ ಹುಟ್ಟುಹಬ್ಬವನ್ನು ನಮ್ಮ ಮನೆಯಲ್ಲಿಯೇ ಆಚರಿಸಿಕೊಳ್ಳುತ್ತಿದ್ದಾನೆ(ರೆ). ಆ ಟಿವಿಯೆಸ್ಸೂ ಇಲ್ಲ, ಆ ಕಪ್ಪನೆಯ ಸೈಕಲ್ಲೂ ಇಲ್ಲ, ಆ ಮುನಿಸುಗಳು ನಮ್ಮ ನಡುವೆಯಿಲ್ಲ. ಆದರೆ ಹುಡುಗು ತನ ಹಾಗೇ ಇದೆ. ಒಲುಮೆ ಹಾಗೇ ಇದೆ. ಹಾಗೇ ಇರಬೇಕು! ಹಾಗೇ ಇರಲಿ!! ಕೇಕುಗಳನ್ನು ಮೆತ್ತುಕೊಂಡು ಆಟವಾಡಬಹುದು.. ಹೆಂಡತಿಯೊಂದಿಗೆ ಊಟಕ್ಕೆ ಹೊರಟುಬಿಡುವ ಕಾಲವಿದಲ್ಲ. ಹೋದರೆ ಮನೆಮಂದಿಯೆಲ್ಲಾ ಕಝಿನ್ನುಗಳ ಸಮೇತರಾಗಿ ಹೋಗುತ್ತೇವೆ. ಬುದ್ಧಿ ಕಲಿಸುವ ಕಾಲವೂ ಇದಲ್ಲ.. ಏಳಿಗೆಯತ್ತಾ ಬದುಕು ಸಾಗುತ್ತಿದೆ. ಮಾತು ಮುನಿಸುಗಳ ಕಾಲವೂ ಇದಲ್ಲ. ನಕ್ಕು ನಲಿವ ಕಾಲವಷ್ಟೇ!!

ಹ್ಯಾಪಿ ಬರ್ತ್ ಡೇ, ಪ್ರಸನ್ನ!!

- ಅ
20.08.2007
8PM

4 comments:

 1. Happy Birthday Prasanna avre. :-)

  ReplyDelete
 2. huTTuhabbada haardika shubhaashayagaLu prasanna avrige..

  [arun] lekhana tumba vibhinnavaagi, chennagi mooDi bandide... :)

  ReplyDelete
 3. Super aagi bardideeya kano ... Thank you ... haLe kaLdhogid CD mathe play maadidahaage ittu :-)...
  neenu nanna bhavamaida alla kano ... life na meshtru!! devru oLLedu maadli ... chennagi bardideeya.
  Wish maadiro ella abhimaani devrugaligoo thanks!
  --- Pachu

  ReplyDelete
 4. [ಶ್ರೀಧರ] ಮೇಲಿನ pachu ಕಮೆಂಟನ್ನು ಓದಬೇಕಾಗಿ ವಿನಂತಿ.

  [ಗಂಡಭೇರುಂಡ] ಮೇಲಿನದು ಓದಿದ ನಂತರ ಕೆಳಗಿನ ಕಮೆಂಟನ್ನು ಓದಬೇಕಾಗಿ ವಿನಂತಿ.

  ವಿಭಿನ್ನತೆಯನ್ನು ಗುರುತಿಸಿದ್ದಕ್ಕೆ ಹಿಗ್ಗಾಗುತ್ತಿದೆ. ಇದೆಲ್ಲಾ ತಮ್ ಆಶೀರ್ವಾದ ಅಂತ ಡೈಲಾಗ್ ಹೊಡೆಯಲ್ಲ!! ;-)

  [ಪ್ರಸನ್ನ] ಕಳೆದು ಹೋಗಿದ್ದ ಸಿಡಿ ಸಂಪೂರ್ಣ ಸಿಗಲಿಲ್ಲವಲ್ಲಾ.. ನೆನ್ನೆ ಹಳೆಯ ಫೋಟೋಗಳನ್ನು ನಾನು ಕೇಳಿದ್ದು ಈ ಕಾರಣಕ್ಕಾಗಿಯೇ!!

  ReplyDelete