Monday, August 27, 2007

ಫೋಟೋ ಯುಗ..

ಒಂಭತ್ತನೆಯ ತರಗತಿಯಲ್ಲಿದ್ದಾಗ ಪಯಣಿಸಲು ಆರಂಭಿಸಿದೆ. ಆಗಲಿಂದಲೂ ಫೋಟೋ ತೆಗೆಯುವ ಹುಚ್ಚು.

ಕಾರ್ಯಕ್ರಮದ ಎರಡು ದಿನದ ಮುಂಚೆಯೇ ಸ್ಟುಡಿಯೋಗೆ ಹೋಗಿ, ನೂರು ರೂಪಾಯಿ ತೆತ್ತು KODAK ರೀಲನ್ನು ತಂದು, ಅಕ್ಕ ಕೊಟ್ಟಿದ್ದ KODAK ಕ್ಯಾಮೆರಾಗೆ ನಾನೇ ನನ್ನ ಕೈಯ್ಯಾರೆ ಲೋಡ್ ಮಾಡಿ ಸಿದ್ಧವಿಟ್ಟುಕೊಳ್ಳುತ್ತಿದ್ದೆ. ಜೊತೆಗೆ ಎರಡು ಸ್ಪೇರ್ ಬ್ಯಾಟೆರಿ ಕೂಡಾ!

ಕ್ಯಾಮೆರಾಗೆ ಒಂದು ಸಾವಿರ ರೂಪಾಯಿ ಆಗಿತ್ತೇನೋ ಅನ್ನಿಸುತ್ತೆ, zoom ಇರಲಿಲ್ಲ, display screen ಇರಲಿಲ್ಲ. ಮೆಗಾ ಪಿಕ್ಸೆಲ್ ಎಂಬ ಪದಗಳ ಪರಿಚಯವೂ ನನಗಿರಲಿಲ್ಲ.

ಮುವ್ವತ್ತಾರು ಫೋಟೋ ಬರುತ್ತೆ, ನಾವೇ ಲೋಡ್ ಮಾಡಿದರೆ ನಲವತ್ತೂ ಬರಬಲ್ಲದು. ಫೋಟೋ ಕ್ಲಿಕ್ಕಿಸುವ ಮುನ್ನ ಸಾವಿರ ಸಲ ಯೋಚಿಸಬೇಕಾಗಿತ್ತು. "ಈ ಫೋಟೋ ಬರಲ್ಲ, ಸುಮ್ಮನೆ ಕ್ಲಿಕ್ ಮಾಡಿ ದಂಡ ಮಾಡ್ಬೇಡ!" ಅನ್ನೋದು ಸಾಮಾನ್ಯ ಸಲಹೆಯಾಗಿತ್ತು.

ನೂರು ರೂಪಾಯಿ ಕೊಟ್ಟು ತಂದ ರೋಲಿನಲ್ಲಿ ನಲವತ್ತು ಚಿತ್ರಗಳನ್ನು ತೆಗೆದು ರೀಲನ್ನು ಹುಷಾರಾಗಿ ಕ್ಯಾಮೆರಾ ಇಂದ 'ಅನ್‍ಲೋಡ್' ಮಾಡಿ ಪುನಃ ಗುಂಡನೆಯ ಪ್ಲಾಸ್ಟಿಕ್ ಡಬ್ಬಿಯೊಳಗಿರಿಸಿ ಅದನ್ನು ಮನೆಗೆ ತಂದು ಸ್ಟುಡಿಯೋಗೆ ಹೋಗಿ, "ಗುಡ್ ಪ್ರಿಂಟ್ಸ್ ಹಾಕಿ, ಮ್ಯಾಕ್ಸಿ ಸೈಝ್" ಎಂದು ಸ್ಟುಡಿಯೋದವನಿಗೆ ಹೇಳಿ, ನೂರು ರೂಪಾಯಿ ಅಡ್ವಾನ್ಸ್ ಕೊಟ್ಟು ಮನೆಗೆ ಬರುತ್ತಿದ್ದೆ.

ಎಲ್ಲಾ ಕೇಳೋರು, "ಫೋಟೋಗಳು ಬಂದ್ವಾ? ಯಾವಾಗ ತೋರಿಸುತ್ತೀಯಾ?" ಅಂತ. ನಾನು "ಪ್ರಿಂಟಿಂಗ್‍ಗೆ ಕೊಟ್ಟಿದ್ದೀನಿ, ನಾಳೆ ಬರುತ್ತೆ" ಎಂದು ಹೇಳುತ್ತಿದ್ದೆ. ಗೆಳೆಯರ ಮುಖದಲ್ಲಿ ನಾಳೆಯಾವಾಗ ಆಗುತ್ತೋ ಎಂಬ ಕಾತುರತೆ! ಹೇಗೆ ಬಂದಿರುತ್ತೋ ಏನೋ ಫೋಟೋಗಳು ಎಂಬ ಸಂದೇಹ ಬೇರೆ ಇರುತ್ತಿತ್ತು.

ನಾಳೆಯಾಗುತ್ತಿತ್ತು. ನಲವತ್ತು ಫೋಟೋಗಳ ಜೊತೆಗೆ ಒಂದು ಆಲ್ಬಮ್ಮನ್ನೂ ಕೊಡುತ್ತಿದ್ದ ಸ್ಟುಡಿಯೋದವನು. ಇನ್ನೂ ನೂರು ರೂಪಾಯಿ ಕೊಟ್ಟ ಮೇಲೆ ಫೋಟೋಗಳು ನನ್ನ ವಶವಾಗುತ್ತಿದ್ದವು. ಅಲ್ಲಿ ಒಂದು ಸಲ ಎಲ್ಲಾ ಫೋಟೋಗಳನ್ನೂ 'ಚೆಕ್' ಮಾಡಿ, "ಹಾಗೆ ಬಂದಿದೆ, ಹೀಗೆ ಬಂದಿದೆ" ಎಂದು ನಕ್ಕು ನಲಿದು, ಗೆಳೆಯರಿಗೆ, ಮನೆಯವರಿಗೆ ತೋರಿಸಲು ಕಾತುರನಾಗಿ ಮನೆಗೆ ಹಿಂದಿರುಗುತ್ತಿದ್ದೆ. ನೋಡಿದ ಫೋಟೋಗಳನ್ನೇ ನಲವತ್ತು ಸಲ ನೋಡಿದರೂ ತೃಪ್ತಿಯಿಲ್ಲ. ಪುಟಗಳನ್ನು ತಿರುವಿ ಹಾಕಲು ಬೇಸರವೇ ಇಲ್ಲ.

ಅಯ್ಯೋ ನಲವತ್ತೇ ಫೋಟೋಗಳು ತೆಗೆಯಲು ಆಗೋದು ಎಂದು ಕೊರಗುತ್ತಿದ್ದೆ.

ಅಪ್ಪನಿಗೂ ಫೋಟೋ ತೆಗೆಯುವ ಹುಚ್ಚಿತ್ತು. ಮನೆಯಲ್ಲಿ ಅದೆಷ್ಟು ಫೋಟೋಗಳು ಇವೆಯೋ ಲೆಕ್ಕವಿಲ್ಲ. ಆದರೆ ಪ್ರತಿಯೊಂದು ಫೋಟೋವನ್ನೂ ಲಕ್ಷ ಬಾರಿಯಾದರೂ ನೋಡಿಯಾಗಿದೆ. ಕಪ್ಪು ಬಿಳುಪು ಫೋಟೋ ಅಂತಲೂ ಎಂದೂ ಬೇಸರವಾಗಿಲ್ಲ. ಆಲ್ಬಮ್ಮುಗಳ ಪುಟಗಳು ಹರಿದಿವೆಯೇ ಹೊರೆತು ಆ ಫೋಟೋಗಳನ್ನು ನೋಡುವ ಆಸಕ್ತಿ ಮಾತ್ರ ಎಂದೂ ಕುಗ್ಗಿಲ್ಲ.

ಈಗ ಡಿಜಿಟಲ್ ಕ್ಯಾಮೆರಾ ಬಂದ ಮೇಲೆ, ಅದಕ್ಕೆ memory stick-ಉ ಭಾರಿ ಭಾರಿ ಪ್ರಮಾಣದಲ್ಲಿ ಹಾಕಿಕೊಳ್ಳುವುದರಿಂದ ಎಷ್ಟು ಬೇಕೋ, ಏನು ಬೇಕೋ ಆ ಫೋಟೋ ತೆಗೆಯಬಹುದು!! ಒಂದು ಪಯಣದಲ್ಲಿ ಸಾವಿರ ಫೋಟೋ! ನಿಂತ ಹಾಗೆ ನಾಕು, ಕೂತ ಹಾಗೆ ಐದು! ಕೈ ಮೇಲೆ ಮಾಡಿ ಒಂದು, ಅಡ್ಡ ಮಾಡಿ ಇನ್ನೊಂದು. ಗಿಡದ ಎಲೆಯ ಮೇಲಿನ ಹನಿಯ ನಾಲ್ಕು ಫೋಟೋಗಳು. ಜಿರಲೆಯ ಮೀಸೆಯನ್ನೂ ಬಿಡೋದಿಲ್ಲ. ಆದರೆ, ಅದೇ ಫೋಟೋಗಳನ್ನು ಮತ್ತೆ ಮತ್ತೆ ನೋಡುವ ಹಂಬಲವಾಗಲೀ, ಆಸೆಯಾಗಲೀ ಹೆಚ್ಚು ದಿನ ಇರೋದೇ ಇಲ್ಲ! ಎಷ್ಟೊಂದು ಬಾರಿ ಫೋಟೋಗಳು ಮೆಮೊರಿ ಸ್ಟಿಕ್ಕಿನಲ್ಲೇ ಉಳಿದುಬಿಟ್ಟಿರುತ್ತೆ. ಕಂಪ್ಯೂಟರಿಗೆ ಸಹ ವರ್ಗಾಯಿಸಿರುವುದಿಲ್ಲ.

ಇಲ್ಲವೇ, ಯಾವುದಾದರೂ ಪಯಣ ಮಾಡುವುದು, ಸಾವಿರ ಫೋಟೋ ತೆಗೆಯುವುದು, ಅದನ್ನು ಯಾವುದಾದರೂ ವೆಬ್‍ಸೈಟಿನಲ್ಲಿ ಹಾಕುವುದು, ನಂತರ ಎಲ್ಲರಿಗೂ ಕಳಿಸುವುದು. ಅವರೆಲ್ಲರೂ ಒಂದು ಸಲ ನೋಡುತ್ತಾರೆ (ಬಹುಶಃ ಸಂಪೂರ್ಣವಾಗಿ ನೋಡಿರೋದಿಲ್ಲ). ಆಮೇಲೆ ಮರೆತುಹೋಗುತ್ತೆ.

ಈ ಡಿಜಿಟಲ್ ಕ್ಯಾಮೆರಾ ಅನ್ನುವುದು ನನ್ನ ಪ್ರಕಾರ ಅತಿಯಾದ ಅಮೃತದಂತಾಗಿ ಹೋಗಿದೆ.

ಆ ದಿನಗಳೇ ಚೆನ್ನಾಗಿತ್ತೆಂದೆನಿಸುತ್ತಿದೆ.

3 comments:

  1. ಡಿಜಿಟಲ್ ಕ್ಯಾಮರಾ ಒಳ್ಳೆಯ ಉಪಯೋಗಕ್ಕೆ ಬರುತ್ತದೆ ನಿಜ. ಆದರೆ ಜೀವನ ಸುಲಭವಾದಷ್ಟು ತಲೆನೋವು ಜಾಸ್ತಿ. ಬ್ರಹ್ಮಗಿರಿಲಿ ಮೆಮೊರೀ ಸ್ಟಿಕ್ ಜಾಗದಲ್ಲಿ ಒಂದು ರೋಲ್ ಇದ್ದಿದ್ರೆ...

    ReplyDelete
  2. ninnodondu black and white photo ... ade key chain hidkondirodu ... gunguru gunguru koodlu bitkondu, bochchu baayalli nagta ideeyalla ... aa photo nan hatrane ide ....ninge kodolla ... :-)

    ReplyDelete
  3. ene aagli...reel haakbittu..jopaanavaagi photo tegyodrallidda maja ee digital camera dalli baralla....aa reel studio ge kottu... yavag photos nam kyge kodthaaro antha kaaytidvi.. :-) aa kaatharathe chennagittu.... :-)

    ReplyDelete