Tuesday, August 28, 2007

ಮೊನ್ನೆ.. ಇಂದು... ನಾಳೆ...

ಮೂರು ದಿನದ ಕೆಳಗೆ ಭೀಮರಾಯರ ಜನ್ಮದಿನದಂದು ಬೆಳಗಾವಿಯ, ಗೋಕಾಕಿನ ಮಳೆಗಳಲ್ಲಿದ್ದೆ. ಭೇಟಿಯಾಗಲೂ ಆಗಲಿಲ್ಲ. ಫೋನು ಎಂಬ ಸಾಧನವಿರುವವರೆಗೂ ಶುಭಾಶಯ ತಲುಪಿಸಲು ಯಾವ ತೊಂದರೆಯೂ ಆಗುವುದಿಲ್ಲವಾದ್ದರಿಂದ ಅಷ್ಟೇನೂ ಪ್ರಯಾಸವೇ ಆಗಲಿಲ್ಲ. ಶುಕ್ರವಾರದ ಸಂಪ್ರದಾಯದಂತೆ ಗೆಳೆಯರ conference call-ಉ ಶನಿವಾರಕ್ಕೆ ಮುಂದೂಡಿತ್ತು, ಕಾರಣ, ನಾನು ಪಯಣಿಸುತ್ತಿದ್ದೆ. ಅಂದೇ ಭೀಮರಾಯರ ಅಲಿಯಾಸ್ ಶುಭಾಳ ಹುಟ್ಟುಹಬ್ಬವಾಗಿತ್ತು. ಹನ್ನೆರಡಕ್ಕೆ ಕರೆ ಮಾಡಿ ವಿಷ್ ಮಾಡುವುದು ವಾಡಿಕೆ. ಅಷ್ಟು ಹೊತ್ತಿನಲ್ಲಿ ಕರೆ ಮಾಡಲು ಅದೇಕೋ ನನಗೆ ಮನಸ್ಸಾಗುವುದಿಲ್ಲ, ಹಾಗಾಗಿ ಸಂದೇಶ ಕಳಿಸಿಬಿಡುವುದು ನನ್ನ ಅಭ್ಯಾಸ. ಹಾಗೇ ಮಾಡಿದೆ. ಇಲ್ಲೊಂದು ಸಲ ವಿಶ್ ಮಾಡ್ತಿದೀನಿ. ಹುಟ್ಟುಹಬ್ಬದ ಶುಭಾಶಯಗಳು ಶುಭಾ!!

ಶ್ರೀನಿಧಿ ಹೊಸ ಕೆಲಸಕ್ಕೆ ಸೇರಿಕೊಂಡಿದ್ದಾನಾದ್ದರಿಂದ ಅವನಿಗೆ ನಮ್ಮೊಡನೆ ಅಂಬೋಲಿ, ಗೋಕಾಕದ ಪಯಣಕ್ಕೆ ಬರಲಾಗಲಿಲ್ಲ. We missed him a lot. ಅವನು ಪ್ರತೀ ಚಾರಣಕ್ಕೂ ತಪ್ಪಿಸಿಕೊಳ್ಳಲು ಏನಾದರೂ ಒಂದು ಕಾರಣ ಬರುತ್ತಲೇ ಇದೆ. ಆದರೆ ಯಶಸ್ಸಿನ ಹಾದಿಯತ್ತ ಸಾಗುತ್ತಿರುವ ಶ್ರೀನಿಧಿಯು ಎತ್ತೆತ್ತೆತ್ತರೆಕ್ಕೆ ಬೆಳೆದು ನಿಲ್ಲಲೆಂದು ಆಶಿಸುತ್ತಾ, ತನ್ನ ಹೊಸ ಬದುಕಿನಲ್ಲಿ ಗೆಲುವಾಗಲೆಂದು ಹರಸುತ್ತೇನೆ.

ಇಂದು ಯಜುರುಪಾಕರ್ಮ. ಯಜ್ಞೋಪವೀತಂ ಪರಮಂ ಪವಿತ್ರಂ ಎಂದು ಹೇಳಿ ಜನಿವಾರ ಬದಲಿಸಿಕೊಳ್ಳುವ ದಿನ. ಜನಿವಾರವು ಯಾವುದೋ ಚಾರಣದಲ್ಲಿ ಯಾವುದೋ ಜಾನುವಾರದ ಪಾಲಾಗಿತ್ತು. ಹೊಸ ಜನಿವಾರ ಧರಿಸುವಾಗ ಮಂತ್ರ ತಂತ್ರಗಳನ್ನಳವಡಿಸಿಕೊಳ್ಳಲೇ ಇಲ್ಲ. ಅಂತೂ ದೇಹಕ್ಕೊಂದು ಹೊಸ ಜನಿವಾರ ಬಂತು!

ಉಪಾಕರ್ಮದೊಂದಿಗೆ ರಕ್ಷಾಬಂಧನ! ಅಕ್ಕನೇ ಮೊದಲ ರಕ್ಷೆಯನ್ನು ಕಟ್ಟುವುದು. ಉಡುಗೊರೆ ಮಾತ್ರ ನಾನು ಅವಳಿಗೇ ಕೊನೆಯಲ್ಲಿ ಕೊಡುವುದು! ಆದರೆ ಎದೆತಟ್ಟಿ ಹೇಳಿಕೊಳ್ಳುತ್ತೇನೆ, ನಮ್ಮದು ಉಡುಗೊರೆಗಳಿಗೆ ರಕ್ಷೆಗಳಿಗೆ ಮೀರಿದ ಬಾಂಧವ್ಯವೆಂದು!! ಕಂದಾ (ಸ್ಮಿತಾ) ಶೀಗೋಳಿನಿಂದ ರಕ್ಷೆಯನ್ನು ಅಂಚೆಯಲ್ಲಿ ಕಳಿಸಿದ್ದನ್ನು ಪಡೆದುಕೊಳ್ಳುವಾಗ ಕಣ್ಣಿನಲ್ಲಿ ಎರಡು ಹನಿ ಮೂಡಿ ಮರೆಯಾಯಿತು. ಅವಳು ಸುಖವಾಗಿರಲಿ. ನನ್ನಾಶೀರ್ವಾದದ ಉಡುಗೊರೆ ಅವಳನ್ನು ಸೇರಾಯಿತು. ಸೌಮ್ಯ ತಾನೇ ಹೆಣೆದ ರಕ್ಷೆಯನ್ನು ಕಟ್ಟಿದಾಗ ಏನೋ ಆನಂದ. ಹೋದ ವರ್ಷ ತಾನೇ ಮಾಡಿದ ಬೊಂಬೆಯೊಂದನ್ನು ರಕ್ಷಾಬಂಧನಕ್ಕೆ ನನಗೆ ಉಡುಗೊರೆಯಾಗಿ ಕೊಟ್ಟಿದ್ದಳು. ಈ ಬಾರಿ ಸ್ವರಚಿತ ರಾಖಿ! ಜೊತೆಗೆ ರಮ್ಯ ಭವ್ಯರು ಕಟ್ಟಿದ ರಕ್ಷೆಗಳಿಗೆ ನಾನು ಸಂತುಷ್ಟ! ಮೂರೂ ಜನರ ಬಾಂಧವ್ಯ ಚಿರವಾಗಿರಲೆಂದಾಶಿಸುತ್ತಾ ರಕ್ಷೆಯನ್ನು ಮತ್ತೆ ಮತ್ತೆ ನೋಡಿಕೊಳ್ಳುತ್ತಿದ್ದೇನೆ.

ನಾಳೆ ಬೆಳಗಾಯ್ತೆಂದರೆ ಶಾಲೆ. ಮಕ್ಕಳೊಡನೆಯ ಸುಂದರ ಬದುಕು. ಪಾಠ ಮಾಡುವ ಸುಂದರ ಕೆಲಸ. ಹೊಸ ಹೆಡ್ ಮಾಸ್ಟರು ಬಂದಿದ್ದಾರೆ. ತಿಳಿದವರು, ಡಿಗ್ನಿಫೈಡು, ನೇರವಂತರು, ವಿಚಾರವಂತರು, ಸಮಚಿತ್ತರು, ಸ್ನೇಹಿ. ಮಸ್ಕಟ್ ಇಂದ ಬಂದಿದ್ದಾರೆ. ಕನ್ನಡ ನಾಡಿನಲ್ಲಿ ಜಸ ದೊರಕಲಿ. ಎಲ್ಲರಿಗೂ ಒಳ್ಳೇದಾಗಲಿ.. ನನಗೂ ಒಳ್ಳೇದಾಗಲಿ!!

-ಅ
28.08.2007
11.20PM

5 comments:

 1. ನನಗೂ ಒಳ್ಳೇದಾಗಲಿ!!
  ..he he chennagidhe..idhu....khanditha aagutte.. :-)

  ReplyDelete
 2. ಹ್ಞೂ ಕಣಪ್ಪಾ.. ನನಗೆ ಮೊದಲು ಒಳ್ಳೇದಾಗ್ಬೇಕು ನೋಡು!!

  ReplyDelete
 3. adellla gothilla ... nange gift beku!

  ReplyDelete
 4. sridharanige maatra na? nange oLLedaagodu beDva? :O nangu oLLedaagli ;-) he he he

  ReplyDelete
 5. ivattu odtaa ideeni ee barahana!:(! naanu innu sumar kaala yav charanakku hogo haagilla kanayya:( bhanvaara rajane illa! harayike ge dhanya.

  ReplyDelete