Thursday, September 27, 2007

ಪಯಣದ ಹಾದಿಯಲ್ಲಿ..

ಪಯಣ ಮಾಡಲು ಆರಂಭಿಸಿ ಏಳು ವರ್ಷಗಳಾಗುತ್ತಾ ಬಂತು. ಎಷ್ಟೆಷ್ಟು, ಏನೇನು ಜಾಗಗಳಿಗೆ ಪಯಣ ಮಾಡಿದ್ದೇನೆ ಅಂತ ಒಂದು ಪಟ್ಟಿ ಮಾಡಿಲ್ಲ. ಮಾಡ್ಬೇಕು. ಬಹುಶಃ ಇನ್ನೊಂದು ನಲವತ್ತು ವರ್ಷದಲ್ಲಿ ಮಾಡಿ ಮುಗಿಸ್ಬಿಡ್ತೀನಿ ಆ ಲಿಸ್ಟ್ ಅನ್ನು.

ಪಯಣದ ಹಾದಿಯಲ್ಲಿ ಪ್ರಕೃತಿಯ ಸೊಬಗನ್ನು ಸವಿದಿದ್ದೇನೆ, ಬೆಟ್ಟ-ಗುಡ್ಡ-ಗಿಡ-ಮರ-ಹಕ್ಕಿ-ಪ್ರಾಣಿ-ಹುಳು-ಜಿಗಣೆ-ಜಲಧಾರೆ-ನದಿ-ಕಡಲು-ಹಿಮ-ಮಂಜು-ಹೂವು-ಮುಗ್ಧ ಜನ- ಎಲ್ಲದರ ವಿಸ್ಮಯವನ್ನು ಮನಗಂಡಿದ್ದೇನೆ, ಮನುಷ್ಯನ ಕಲೆಯ ವೈಭವವನ್ನು ಕಂಡು ಬೆರಗಾಗಿದ್ದೇನೆ, ಪ್ರಾಣಾಪಾಯದಿಂದ ಪಾರಾಗಿದ್ದೇನೆ, ಸಾಹಸ ಮಾಡಿದ್ದೇನೆ - ಮಾಡಿಸಿದ್ದೇನೆ - ಇನ್ನು ಮುಂದೆಯೂ ಇವೆಲ್ಲವೂ ಸಾಗುತ್ತಿರುತ್ತೆ. ಉಸಿರಿರುವ ವರೆಗೂ.. ಜಗತ್ತಿನ ವಿಸ್ಮಯವನ್ನು ಬಾಳಿನುದ್ದಕ್ಕೂ ಬದುಕಿನುದ್ದಕ್ಕೂ ನನ್ನ ಸಹಪಯಣಿಗನನ್ನಾಗಿಸಿಕೊಂಡಿರುತ್ತೇನೆ. ಪಯಣದ ಹಾದಿ ಸಾಹಸಮಯವಾದಷ್ಟೂ ಆಕರ್ಷಣೆ ಹೆಚ್ಚುತ್ತೆ. ಸಾಹಸಮಯ ಪಯಣವು ನನ್ನೊಡಲಲ್ಲಿ ಲೀನವಾಗಿ ಹೋಗಲಿ!

ಇಂದು ವಿಶ್ವ ಪ್ರವಾಸೋದ್ಯಮ ದಿನ!

ಪ್ರವಾಸೋದ್ಯಮವು ನನಗೆ ಅನ್ನ ಕೊಟ್ಟಿದೆ, ಮನಸ್ಸಿಗೆ ಮುದವನ್ನು ಕೊಟ್ಟಿದೆ, ಜನ್ಮಬಂಧುಗಳನ್ನು ಕೊಟ್ಟಿದೆ - ಇದಕ್ಕೆ ನಾನು ಈ ಉದ್ಯಮಕ್ಕೆ ಚಿರಋಣಿ.

ಇಡೀ ವಿಶ್ವವೇ ನಮ್ಮ ಪಯಣದ ಪರಿಧಿಯಾಗಿರಲಿ.. ನಾವು ಪಯಣಿಗರೂ ಇಡೀ ವಿಶ್ವಕ್ಕೆ ಸೇರಿದವರು, ಜಗತ್ತು ಎಲ್ಲರನ್ನೂ ಹರಸಲಿ!!

-ಅ
27.09.2007
10.20PM

ನಮಸ್ಕಾರ.. ವಾರ್ತಾ ವಿವರ..

ಇದು ವಾರ್ತೆಯ ವಿವರ..

CHENNAI, September 26: Irked by the step-motherly treatment meted out to the Indian hockey players by the central and four state governments, when compared to the sops given to cricketers after their win in the Twenty20 World Cup, the team members have decided to go on a 'hunger strike'.

Speaking to reporters, National Chief Coach, Joaquim Carvalho strongly objected to the announcement of cash awards by the Civil Aviation Minister Praful Patel and the state governments of Maharashtra, Haryana, Jharkhand and Karnataka to the cricketers while ignoring the victory of his wards in the Asian Continental Championship early this month.

"Why our hockey players are orphaned and why our politicians are biased towards Hockey, the national game?", Carvalho asked.

However, "we are grateful ever to the President of India for her sending individual letters congratulating the hockey players for their Asia cup win, without losing a match".

He declared that one coach and four players have planned to go on hunger strike before the Karnataka Chief Minister's house for his announcing Rs five lakh each to the members of the cricket team, while "treating the state hockey players like dust".

Carvalho said "Karnataka CM has not till date congratulated his state hockey players for the Asia Cup win".

"Coach, Ramesh Parameswaran, manager R K Shetty and four players (Vikram Kanth, V R Rahunath, S V Sunil and Ignace Tirkey, who was recently adjudged for the Ekalaywa Award by the Karnataka Government) are to go on hunger strike before the Karnataka Chief Minister's house', he said.


ಇವರಿಗೆ ನಮ್ಮ "ವಾರ್ತಾ" ತಂಡದವರಿಂದ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದೇವೆ. ಮುಖ್ಯಮಂತ್ರಿ ಎಂಬ ಖುರ್ಚಿಬಾಕನಿಗೆ ಬಹುಶಃ ಹಾಕಿ ಆಟದಲ್ಲಿ ನಮ್ಮ ದೇಶದವರು ಗೆದ್ದರು ಎಂಬ ಪರಿವೇ ಇಲ್ಲ ಅನ್ನಿಸುತ್ತೆ, ಅಥವಾ ಹಾಕಿ ಅಂತ ಒಂದು ಆಟ ಇದೆ ಅನ್ನೋದೂ ಗೊತ್ತಿಲ್ಲ ಅನ್ನಿಸುತ್ತೆ.

ಕ್ರಿಕೆಟ್ಟನ್ನು ಅಟ್ಟದ ಮೇಲೆ ಕೂರಿಸೋ ಅವಶ್ಯಕತೆ ಇಲ್ಲ. ಅವರು ಚೆನ್ನಾಗಿ ಆಡಿದರು, ಅದಕ್ಕೆ ಗುಡ್. ಚಪ್ಪಾಳೆ. ಅವರಿಗೆ ಏನು, ಹೇಗೆ ಪಾಲನೆ ಪೋಷಣೆ ಮಾಡುತ್ತಿದೆಯೋ ಸರ್ಕಾರ, ಅದೇ ಪಾಲನೆ ಪೋಷಣೆಯನ್ನು ಎಲ್ಲಾ ಆಟಗಳಿಗೂ ಮಾಡಲಿ.

ಹಾಕಿ ಒಂದೇ ಅಲ್ಲ, ಅಥ್ಲೆಟಿಕ್ಸು, ಈಜುಗಾರಿಕೆ, ಟೆನ್ನಿಸ್ಸು, ಫುಟ್‍ಬಾಲ್ - ಎಲ್ಲಕ್ಕೂ ಸಮವಾದ ಪ್ರೋತ್ಸಾಹ ನೀಡಲಿ. ಚದುರಂಗದಲ್ಲಿ ಎಷ್ಟೋ ವರ್ಷದಿಂದ ನಮ್ಮ ದೇಶದ ವಿಶ್ವನಾಥನ್ ಆನಂದ್ ಅಗ್ರಸ್ಥಾನದಲ್ಲಿದ್ದಾರೆ. ಅವರ ಬಗ್ಗೆ ಒಮ್ಮೆಯೂ ದೇಶದ ನಾಯಕರೆನಿಸಿಕೊಂಡ ಗೋಮುಖ ವ್ಯಾಘ್ರರು ಮಾತನಾಡಿಲ್ಲ. ಬಾಯ್ತೆರೆಯಲು ಆ ಆಟದ ಬಗ್ಗೆ ಗೊತ್ತಿದ್ದರಲ್ಲವೇ. ಕ್ರಿಕೆಟ್ಟು ಮನರಂಜನೆ ನೀಡುತ್ತೆ, ಅದಕ್ಕೆ ಬಾಯ್ ಬಾಯಿ ಬಿಟ್ಕೊಂಡು ನೋಡಿರ್ತಾರೆ, ಹಣ ಇವರ ತಾತನ ಮನೇದು ಅನ್ನೋ ಥರ ಸ್ಯಾಂಕ್ಷನ್ ಮಾಡ್ಬಿಡ್ತಾರೆ - ಅದೂ ಕೋಟಿ ಲೆಕ್ಕದಲ್ಲಿ!!

ಇಲ್ಲಿಗೆ ವಾರ್ತಾ ಪ್ರಸಾರ ಸಧ್ಯಕ್ಕೆ ಮುಕ್ತಾಯವಾಯಿತು, ಮುಂದೆ ಈ 'ನಾಯಕರ' ಸರ್ವನಾಶ ಆದಷ್ಟು ಬೇಗ ಆಗಲಿ ಎಂದು ಆಶಿಸುತ್ತಾ ಮತ್ತೆ ಭೇಟಿ ಆಗೋಣ, ಮುಂದಿನ ವಾರ್ತಾ ಪ್ರಸಾರದಲ್ಲಿ. ಅಲ್ಲಿಯ ವರೆಗೂ ಹ್ಯಾವ್ ಎ ನೈಸ್ ಟೈಮ್.. (ಬೆಳಗೆರೆ ಧ್ವನಿಯಲ್ಲಿ ಓದ್‍ಬೇಡಿಪ್ಪಾ...)

-ಅ
27.09.2007
12.45AM

Sunday, September 23, 2007

ಮಿಲನ

ಚಿತ್ರ ಚೆನ್ನಾಗಿದೆ. ಇಪ್ಪತ್ತೈದು ವರ್ಷಗಳ ಮುಂಚಿತವಾಗಿ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

ಪುನೀತ್ ರಾಜ್‍ಕುಮಾರ್ ಚಿತ್ರ ಅಂದ ಮೇಲೆ, ಲೈವ್ಲಿ ಡಯಲಾಗ್‍ಗಳು, ಪವರ್ ಫೈಟಿಂಗುಗಳು ಇರಲೇ ಬೇಕೆಂಬ ಸಂಪ್ರದಾಯವು ಮುಂದುವರೆದಿದೆ. ಜೊತೆಗೆ ಹಳೆಯ ಕಥೆಯಾದರೂ ಉತ್ತಮ ಕಥೆಯಿರಬೇಕೆಂಬುದು ರಾಜ್‍ಕುಮಾರ್ ಹಿಸ್ಟರಿಯು ರಿಪೀಟ್ ಆಗಿದೆ.

ಮನೋಮೂರ್ತಿಯವರು ಮುಂಗಾರು ಮಳೆಯ ಸಂಗೀತವನ್ನು ಮುಂದುವರೆಸಿದ್ದಾರೆ. ಕನ್ನಡದ ಹಾಡುಗಾರರು ಅವರಿಗೆ ಸಿಕ್ಕೇ ಇಲ್ಲ. ಸೋನು ನಿಗಮ್ "ನಿಂತಲ್ಲೇ ಹಾಳಾದೆ ನಾ" ಎಂದರೇನೇ ಅವರಿಗೆ ಸಂತೋಷ ಅನ್ನಿಸುತ್ತೆ.

ರಂಗಾಯಣ ರಘು ಭಿಕ್ಷುಕನ ಪಾತ್ರವನ್ನು ಭಿಕ್ಷುಕನಂತೆ ಚೆನ್ನಾಗಿ ಮಾಡಿದ್ದಾರೆ. ಮುಖ್ಯಮಂತ್ರಿ ಚಂದ್ರು ಕ್ಲಾಸ್ ನಟನೆಂಬುದು ಗೊತ್ತಿರುವ ಸಂಗತಿಯೇ ಎಂಬುದನ್ನು ನಿರೂಪಿಸಲು ಅವರಿಗೆ ಅಷ್ಟೊಂದು ಅವಕಾಶವಿಲ್ಲ. ಗಾಂಧಿಗೆ ಎರಡೇ ಡಯಲಾಗ್ ಪಾಪ. ಹೊಸ ನಾಯಕಿ (ಹೆಸರು ಗೊತ್ತಿಲ್ಲ) ಉತ್ತಮವಾದ ಪ್ರಯತ್ನ ಮಾಡಿದ್ದಾರೆ.

ಮ್ಯಾಗಿ ಇಂದ ಹಿಡಿದು ರೇಡಿಯೋ ಮಿರ್ಚಿ ವರೆಗೆ ಸಾಕಷ್ಟು ಜಾಹೀರಾತುಗಳಿಗೆ ಪ್ಲಾಟ್‍ಫಾರಂ ಆಗಿದೆ ಮಿಲನ. ಒಳ್ಳೇದು. ಜಾಹೀರಾತುಗಳಿಂದ ಚಿತ್ರಕ್ಕೆ ಹಣ ಸಿಗುತ್ತೆ, ಹಣದಿಂದ ಒಳ್ಳೇ ಚಿತ್ರಗಳನ್ನು ತೆಗೆಯಬಹುದು. ಆಲ್ ದಿ ಬೆಸ್ಟ್, ಕನ್ನಡ ಚಿತ್ರರಂಗ.(chitraloka.com ಇಂದ ಈ ಚಿತ್ರವನ್ನು ತೆಗೆದುಕೊಂಡಿದ್ದೇನೆ. ಆ ತಂಡಕ್ಕೆ ಥ್ಯಾಂಕ್ಸ್.)

-ಅ
23.09.2007
11PM

Saturday, September 22, 2007

ಹಚ್?

ನಮ್ಮ ಹಚ್ ಈಗ ವೊಡಾಫೋನ್ ಅಂತೆ. ಕೇಳೋಕೆ ಒಳ್ಳೇ ವಡಾಪಾವ್ ಅನ್ನೋ ಥರ ಇದೆ, ಕರ್ಮಕಾಂಡ!

-ಅ
22.09.2007
1 AM

Tuesday, September 18, 2007

ಇಂದಿನ ಬುಲೆಟೆಡ್ ಲಿಸ್ಟು..

ನಮಸ್ಕಾರ.. ಮೊದಲಿಗೆ ಕೆಟ್ಟ ಸುದ್ದಿಗಳು..

--> ಇವತ್ತು ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಮಳೆ ವಾತಾವರಣದಲ್ಲಿ ಸಿಗರೇಟು ಸೇದುತ್ತಾ, ಹೊಗೆಯನ್ನು ನನ್ನ ಮೂಗಿಗೇ ಬಿಡುತ್ತಿದ್ದ. ಅವನ ನಾಲಿಗೆಗೆ ಲಕ್ವಾ ಹೊಡೆಯಲಿ. ಪಬ್ಲಿಕ್ ಸ್ಥಳಗಳಲ್ಲಿ ಸಿಗರೇಟು ಸೇದುವವರಿಗೆಲ್ಲರ ನಾಲಿಗೆಗೂ ಲಕ್ವಾ ಹೊಡೆಯಲಿ.

--> ಮೆಜೆಸ್ಟಿಕ್‍ನಲ್ಲಿ ಬಸ್ ಇಳಿದ ತಕ್ಷಣ ಪ್ರಯಾಣಿಕನೊಬ್ಬ ಟ್ರಿಮ್ಮಾಗಿ ದಿರಿಸನ್ನು ಹಾಕಿಕೊಂಡು ಬಾಯಿಂದ ಮುಷ್ಟಿಗಾತ್ರ ಕಫವನ್ನು ಪ್ಲಾಟ್‍ಫಾರಂ‍ ಅಲ್ಲೇ ಉಗುಳಿದ. ಪುಣ್ಯಕ್ಕೆ ನನ್ನ ಕಾಲಿಗೆ ಹಾರಲಿಲ್ಲ. ಅವನ ಬಾಯಿಗೆ ಲಕ್ವಾ ಹೊಡೆಯಲಿ.

--> ಸಂಜೆ ಹನುಮಂತನಗರದಿಂದ ಶ್ರೀನಿವಾಸನಗರಕ್ಕೆ ಹೋಗುವ ದಾರಿಯಲ್ಲಿ ನಡೆದು ಹೋಗುತ್ತಿದ್ದೆ. ಪೋಸ್ಟ್ ಆಫೀಸ್ ಮುಂದೆ ಒಂದು ಖಾಲಿ ನಿವೇಷನವಿದೆ. ಎತ್ತರದ ಕಾಂಪೌಂಡು ಕಟ್ಟಿದ್ದಾರೆ. ಆ ಕಾಂಪೌಂಡಿಗೆ ಹತ್ತು ಆದಿ ಮುಂಚೆಯೇ ಮೂತ್ರದ ಕಂಪು ಹರಿದು ಬರುವುದು. ಜನರೆಲ್ಲರೂ ಓಡಾಡುತ್ತಿರುವ ಮುಖ್ಯರಸ್ತೆ ಅದು, ಅಲ್ಲೇ ನಿಂತು ಒಬ್ಬ ಮೂತ್ರವಿಸರ್ಜನೆ ಮಾಡುತ್ತಿದ್ದ. ಅವನ, -- ಬೇಡ ಬಿಡಿ.

ಈಗ ಒಳ್ಳೇ ವಿಷಯಗಳಿಗೆ ಬರೋಣ. ಒಳ್ಳೆಯ ವಿಷಯ ಎಂದು ನಾನು ಪ್ರಾಮಿಸ್ ಮಾಡೋದಿಲ್ಲ. ಯಾರಿಗೋ ಒಳ್ಳೇದಾದರೆ ಇನ್ಯಾರಿಗೋ ಕೆಟ್ಟದ್ದಾಗಿರಬಹುದು.

--> ಸತ್ಯಪ್ರಕಾಶರ ಮನೆಗೆ ಗೂಬೆ ಬಂದುಬಿಟ್ಟಿದೆ ಎಂದು ಬೆಳಿಗ್ಗೆ ಫೋನಿನಲ್ಲಿ ಹೇಳಿದರು. ಪಾಪ, ಗೂಬೆಯ ಗ್ರಹಚಾರ ಚೆನ್ನಾಗಿಲ್ಲ, ತನ್ನ ಮನೆಯನ್ನು ಮನುಷ್ಯ ಸರ್ವನಾಶ ಮಾಡಿದ್ದಾನೆ, ಈಗ ಮನುಷ್ಯರ ಜಾಗಗಳಿಗೇ ಬರಬೇಕಾಗಿದೆ, ಅಲ್ಲದೆ, ಮನುಷ್ಯರಿಂದ "ಅಪಶಕುನ" ಎಂದು ಬೈಸಿಕೊಳ್ಳಬೇಕಾಗಿ ಬೇರೆ! ಮನುಷ್ಯನು ಪ್ರಕೃತಿಯ ಬಹಳ ದೊಡ್ಡ ಅಪಶಕುನ, ಆದರೆ ಅನ್ನುವುದು ಮಾತ್ರ ಎಲ್ಲಾ ಪ್ರಾಣಿಗಳಿಗೆ! ಜೈ ಗೂಬೆ!

--> ಸಾಹಸ ಸಿಂಹನ ಹುಟ್ಟುಹಬ್ಬ. ಸಿಂಹ ನಾಯಕನಾಗಿ ಸುಸ್ತು ಹೊಡೆಯುತ್ತಿರುವುದರಿಂದ ಪೋಷಕ ನಟನ ಕಾರ್ಯ ವಹಿಸಿದರೆ ತನಗಿರುವ ಅತ್ಯದ್ಭುತ ಕಲೆಯನ್ನು ಜಗತ್ತಿನೊಂದಿಗೆ ಹಂಚಿಕೊಂಡು ಇನ್ನಷ್ಟು ಹುಟ್ಟುಹಬ್ಬಗಳನ್ನು ಹೆಮ್ಮೆಯಿಂದ ಆಚರಿಸಿಕೊಳ್ಳಬಹುದು. ಆಲ್ ದಿ ಬೆಸ್ಟ್, ಸಿಂಹ!

--> ಉಪ್ಪಿಯ ಹುಟ್ಟುಹಬ್ಬ. ತೋಪೆದ್ದು ಸುಣ್ಣವಾಗಿರುವ ಉಪೇಂದ್ರ ಹುಟ್ಟುಹಬ್ಬದೊಂದಿಗೆ ತಾಳ್ಮೆಯಿಂದ ಒಳ್ಳೆಯ ಚಿತ್ರದ ಬಗ್ಗೆ ಯೋಚಿಸಿ ನಿರ್ದೇಶಿಸಿ, ಮರೆತೇ ಹೋಗಿರುವ ಯಶಸ್ಸಿನ ರುಚಿಯನ್ನು ಮತ್ತೆ ಕಂಡರೆ ಕನ್ನಡ ಚಿತ್ರರಂಗಕ್ಕೆ ಒಳಿತು. ಆಲ್ ದಿ ಬೆಸ್ಟ್, ಉಪ್ಪಿ.

--> ನಟಿ ಶೃತಿಯ ಹುಟ್ಟುಹಬ್ಬ. ಅಳಿಸಿ, ನಗಿಸಿ ಸಾಕಾಗಿ ರಿಟೈರ್ ಆಗಿದ್ದಾರೆ. ಎಲ್ಲರಿಗೂ ಒಳ್ಳೇದಾಗಲಿ ಎಂಬ ಇವರ ಮನೋಭಾವನೆ ಮೆಚ್ಚಬೇಕಾದ್ದು. ಆಲ್ ದಿ ಬೆಸ್ಟ್, ಕನ್ನಡಿಗರೇ, ಮತ್ತೆ ಬಂದಾರು ಇವರು!

-ಅ
18.09.2007
11PM

Saturday, September 15, 2007

ಗಣಪತಿ ಕೂರ್ಸಿದೀರಾ?

ಬಾಲ್ಯದ ನೆನಪು.

"ಆಂಟಿ, ಗಣಪತಿ ಕೂರ್ಸಿದೀರಾ?" ಗುಂಪಿನವರಲ್ಲಿ ಒಬ್ಬರು ಹಿಂದಿನ ಬೀದಿಯ ಸಾವಿತ್ರಿ ಆಂಟಿಯನ್ನು ಕೇಳುವುದು.

"ಬನ್ನಿಪ್ಪಾ.." ಅವರಿಗೆ ನಮ್ಮನ್ನು ಮನೆಯೊಳಗೆ ಕರೆಯುವುದು ಏನೋ ಖುಷಿ.

ಅಕ್ಷತೆಯನ್ನು ಗಣೇಶನ ಮೇಲೆ ಹಾಕಿ, ನಮಸ್ಕರಿಸುವ ವೇಳೆಗೆ ಸಾವಿತ್ರಿ ಆಂಟಿ ಕಡಲೇ ಕಾಳು ಉಸಿಲಿ, ಬಾಳೆ ಹಣ್ಣನ್ನು ನಾವು ಎಂಟು ಜನಕ್ಕೂ ಕೊಡಲು ತರುವುದು. "ಆಂಟಿ ಏನ್ ಕೊಡ್ತಾರೋ ಏನೋ.." ಎಂದು ರಘು ಕಿವಿಯಲ್ಲೇ ಅವರಿಗೂ ಕೇಳುವಂತೆ ಗುಟ್ಟು ಹೇಳುವುದು.

ಅಲ್ಲಿ ಉಸಿಲಿ ತಿಂದು, ಮುಂದಿನ ಮನೆಗೆ ಹೋಗಿ, "ಗಣಪತಿ ಕೂರ್ಸಿದೀರಾ ಆಂಟಿ?" ಎಂದು ಕೇಳುವುದು. ಆಗ ಪ್ರತ್ಯಕ್ಷ ಆದ ಆರ್.ಟಿ.ಓ. ಅಂಕಲ್ಲು, ದಪ್ಪನೆಯ ದೇಹ, ದಪ್ಪನೆಯ ಮೀಸೆಯ ಅಧಿಪತಿಗಳಾಗಿದ್ದು, "ನಾನು ಆಂಟಿ ಥರ ಕಾಣ್ಸ್ತಿದೀನೇನ್ರೋ ಕತ್ತೆಗಳಾ?" ಎಂದಾಗ, ಮುಖ ಸಪ್ಪಗೆ ಮಾಡಿಕೊಂಡಾದರೂ "ಗಣೇಶ ಕೂರ್ಸಿದೀರಾ ಅಂಕಲ್?" ಎಂದು ಕೇಳುವುದು. ಅವರು, "ಹ್ಞೂ, ಬನ್ನಿ, ಚಪ್ಪಲಿ ಗೇಟಿನ ಹೊರಗೇ ಬಿಡಿ.." ಎಂದು ಗದರಿದರೂ ಚಿಂತೆಗೊಳ್ಳದೆ ಒಳಗೆ ಹೋಗುವುದು. ಅವರ ಮನೆಯಲ್ಲಿ ಗಣಪನ ಮೂರ್ತಿಗೇ ಐದು ಸಾವಿರ ರೂಪಾಯಿ ಖರ್ಚು ಮಾಡಿದ್ದೂ, ಸೀರಿಯಲ್ ಸೆಟ್ಟುಗಳಿಗೆ ಇನ್ನೈದು ಸಾವಿರ ಖರ್ಚು ಮಾಡಿದ್ದರೂ ತಿನ್ನಲು ಒಂದು ಕಡುಬನ್ನೂ ಕೊಡದೇ ಇದ್ದುದನ್ನು ಶಪಿಸುವುದು.

ಅವರ ಮನೆಯಿಂದ ಹೊರಗೆ ಬಂದು ಪೋಲೀಸ್ ಅಂಕಲ್ ಮನೆಗೆ ಹೋಗುವುದು. ಹೆಂಡತಿ ಮಕ್ಕಳು ಎಲ್ಲರೂ ಧರ್ಮಸ್ಥಳದಿಂದ ಹಿಂದಿರುಗುವಾಗ ಮಂಜುನಾಥನ ಸನ್ನಿಧಿ ಸೇರಿದ್ದ ಕಾರಣ ನಮ್ಮೇರಿಯಾ ಮಕ್ಕಳೆಂದರೆ ಪ್ರೀತಿ. ಅವರು ನಮಗೋಸ್ಕರ ಗೇಟಿನಲ್ಲೇ ಕಾಯುವುದು. ನಾವು ಹೋದ ತಕ್ಷಣ ಒಳಗೆ ಕೈ ಹಿಡಿದು ಕರೆದೊಯ್ವುದು. "ಅರುಣ ಒಂದು ಹಾಡು ಹೇಳೋ.." ಎಂದಾಗ, ನನಗೆ ಗೊತ್ತಿದ್ದ ಒಂದೇ ಒಂದು ಹಾಡು, "ನಾವಿಂದು ಹಾಡೋ ಹಾಡಿಗೆ ಕೊನೆಯಿಲ್ಲಾ.." ಎಂದು ರಣಧೀರ ಚಿತ್ರದ ಹಾಡನ್ನು ಗಣೇಶನ ಮೂರ್ತಿಯ ಎದುರು ಕುಳಿತು ಹಾಡುವುದು. ಅದನ್ನು ಎಲ್ಲರೂ ತಲೆದೂಗಿ ಕೇಳುವುದು. ನಂತರ ಅವರ ಮನೆಯಲ್ಲಿ ಕೂರಿಸಿದ ಪೈಂಟ್ ಮಾಡದ ಮಣ್ಣಿನ ಗಣೇಶನಿಗೆ ವಂದಿಸಿ ಕುಸರಿಕಾಳು, ಬಾಳೆ ಹಣ್ಣು, ಕಡುಬು, ಪಾಯಸ ಸೇವಿಸಿ, "ಬಾಯ್ ಅಂಕಲ್" ಎಂದು ಹೇಳಿ ಹೊರಟು ಬರುವಾಗ ಏನೋ ಆನಂದ.

ನೂರೆಂಟು ಮನೆಗಳಿಗೆ ಹೋಗಬೇಕೆಂದು ಹೊರಡುತ್ತಿದ್ದೆವು, ಆದರೆ ಇಪ್ಪತ್ತೆಂಟಕ್ಕೇ ಸುಸ್ತು ಹೊಡೆದುಬಿಡುತ್ತಿದ್ದೆವು.ಮನೆ ತಲುಪುವ ಹೊತ್ತಿಗೆ ಸಂಜೆಯಾಗಿರುತ್ತಿತ್ತು. ಜೇಬಿನ ತುಂಬಾ ಪ್ರಸಾದಗಳು. ಕೈ ತುಂಬಾ ಕವರುಗಳು.

ಈಗ ಆ ದಿನಗಳಿಲ್ಲ. ನಮ್ಮ ಮನೆಗೂ ಯಾರೂ ಬರೋದಿಲ್ಲ. ಹಾಗೆ ಹೋಗುವ ಹುಡುಗರನ್ನೂ ನಾನು ನೋಡಿಲ್ಲ.

ಎಂಥಾ ದಿನಗಳವು.. ಮರೆಯಾಗಿ ಹೋದವು...

-ಅ
15.09.2007
11.15PM

Friday, September 14, 2007

ಧಿಡೀರ್ ನಿರ್ಧಾರ?

ಈಗಾಗಲೇ ಮುಂದಿನ ನಾಯಕನಾರು ಎಂದು ಚರ್ಚೆ ನಡೆಸುತ್ತಿದ್ದಾರೆ ತಜ್ಞರೆಲ್ಲರೂ.

ದ್ರಾವಿಡ್ ಧಿಡೀರ್ ನಿರ್ಧಾರ ನಮ್ಮಂಥ ಅಭಿಮಾನಿಗಳಿಗೆ ಸ್ವಲ್ಪ ಬೇಸರ ತರಿಸಿದೆ. ಆದರೆ ತಮ್ಮ ಆಶಯ, ತಮ್ಮ ಗುರಿ ಸಾಧನೆಯತ್ತ ಸಾಗಲು ಅನುವಾಗುವುದಾದರೆ, ಆಲ್ ದಿ ಬೆಸ್ಟ್, ದ್ರಾವಿಡ್..
-ಅ
14.09.2007
11.15PM

Tuesday, September 11, 2007

ಈಗ ಜಪಾನಿನಲ್ಲಿ..

ಪ್ರತಿ ವರ್ಷವೂ ಹುಟ್ಟುಹಬ್ಬಕ್ಕೆ ತನ್ನ ಮನೆಗೆ ಊಟಕ್ಕೆ ಕರೆಯುತ್ತಿದ್ದ ಬಾಲಾಜಿ, ಈಗ ಜಪಾನಿನಲ್ಲಿದ್ದಾನೆ. ಇಂದು ಅವನ ಜನ್ಮದಿನ. ಅವರ ಮನೆಗೆ ಹೋಗಲಾಗಲಿಲ್ಲ. ಅವನಿಗೆ ಒಂದು ಈಮೈಲ್ ಮಾಡಿ ವಿಷ್ ಮಾಡಿದ್ದೇನಷ್ಟೇ.

ಪಿಯುಸಿಯಲ್ಲಿ ನನಗಿದ್ದ ಮೂರೇ ಜನ ಮಿತ್ರರಲ್ಲಿ ಇವನೂ ಒಬ್ಬನಾಗಿದ್ದ. ಆದರೆ ಇವನು ಹತ್ತಿರವಾಗಿದ್ದು ಪಿಯುಸಿ ಮುಗಿದ ಮೇಲೇಯೇ. ಇವನ ತಂದೆ ತಾಯಿಯು ಇವನೊಡನೆ ಎಷ್ಟು ಮೈತ್ರಿಯಿಂದಿರುವರೆಂದರೆ ಇಂಥಾ ತಂದೆತಾಯಂದಿರಬೇಕಪ್ಪಾ ಅನ್ನಿಸುತ್ತೆ. ಹುಟ್ಟುಹಬ್ಬದ ದಿನ ಜೋಕುಗಳನ್ನು ಹೇಳಿಕೊಂಡು ಅವರ ಮನೆಯಲ್ಲಿ ಅಂದು ಕಳೆದ ಸಂಜೆಯನ್ನು ಮರೆಯಲಾಗುವುದಿಲ್ಲ.

ಮನೆಗೆ ಹೋದಾಗ ರೋಬೋಟಿಕ್ಸ್ ಬಗ್ಗೆಯೆಲ್ಲಾ ಹೇಳುತ್ತಿರುತ್ತಾನೆ, ಯಾವುದೋ ಹೊಸ ತಂತ್ರಜ್ಞಾನ ಏರೋನಾಟಿಕ್ಸ್ ಅಲ್ಲಿ ಬಂದಿದೆಯೆಂದರೆ ಅದರ ಬಗ್ಗೆ ನನಗೆ ವಿವರಿಸುತ್ತಾ ಕುಳಿತಿರುತ್ತಾನೆ ಗಂಟೆಗಟ್ಟಲೆ. "ಈ ಪ್ರಾಜೆಕ್ಟ್ ಮಾಡಿದೆ ಕಣೋ.. ನೋಡು ರಿಪೋರ್ಟು.." ಎಂದು ಒಮ್ಮೆ ಒಂದು ರಿಪೋರ್ಟು ತೋರಿಸಿದ್ದ. ಅದರಲ್ಲಿ ಅವನ ಸಹಿ ಬಿಟ್ಟರೆ ನನಗೆ ಇನ್ನೇನೂ ಅರ್ಥವಾಗಿರಲಿಲ್ಲ. ಆದರೂ ಅವನು ಏನು ಹೇಳಿದನೋ ಎಲ್ಲಾ ಕೇಳಿದೆ, ಏನಾದರೂ ಅರ್ಥ ಆಗುತ್ತೇನೋ ಅಂತ. ಆಗಲೇ ಇಲ್ಲ. ಅವನಿಗೂ ತಾಳ್ಮೆ. ನಿಧಾನವಾಗಿ ವಿವರಿಸಿ, ನಂತರ "ಇವನಿಗೆ ಹೇಳಿ ಏನು ಪ್ರಯೋಜನ" ಎಂದು ಹೇಳದಿದ್ದರೂ ಸುಮ್ಮನಾಗಿದ್ದ.

"ಅರುಣ, ಬೇಜಾರ್ ಆಗಿದೆ ಬಾರೋ ಎಲ್ಲಾದರೂ ಹೋಗೋಣ" ಎಂದು ಕರೆಯುತ್ತಾನೆ, ನಾನು ಅನೇಕ ಸಲ ಹೋಗಲಾಗದೇ ಇದ್ದಾಗ ಬೇಸರ ಪಟ್ಟುಕೊಳ್ಳದೆ "ಇರಲಿ ಬಿಡೋ, ನೀನು ಬಿಡುವಾಗೋದು ಬಹಳ ಕಷ್ಟ ಅಂತ ಗೊತ್ತು" ಎಂದು ಹೇಳುತ್ತಾನೆ. ಅವರ ಮನೆಗೆ ಹೋದಾಗ ಅದ್ಭುತವಾದ ಒಂದು ಅಮೃತದಂಥ ಕಾಫಿಯಂತೂ ಗ್ಯಾರೆಂಟಿ. "ನಮ್ಮ ಮನೆಯಲ್ಲಿ ನೀರಿಗಿಂತ ಜಾಸ್ತಿ ಕಾಫಿಯನ್ನೇ ಕುಡಿಯೋದು" ಎಂದು ಹೇಳುತ್ತಿರುತ್ತಾನೆ.

ಹುಟ್ಟಿದಾಗಿನಿಂದ ನನ್ನ ಗೆಳೆಯನಿವನು ಎಂಬ ಭಾಸವಾಗುತ್ತಿರುತ್ತೆ. ಈಗ ಜಪಾನಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ. ಅವನಿಗೆ ಕನ್ನಡದ ಉಡುಗೊರೆಯನ್ನು ನೀಡಬಯಸುತ್ತಿದ್ದೇನೆ.

ಹುಟ್ಟುಹಬ್ಬದ ಶುಭಾಶಯಗಳು, ಬಾಲಾಜಿ..

-ಅ
11.09.2007
6.30PM

Monday, September 10, 2007

ಆದರ್ಶ ಮಹಿಳೆಯರು..

ಶಾಲೆಯಲ್ಲಿ ಮಕ್ಕಳಿಗೆ ಭಾರತದ ಆದರ್ಶ ಮಹಿಳೆಯರ ಬಗ್ಗೆ ಚಾರ್ಟ್ ಮಾಡೋಕೆ ಕೊಟ್ಟಿದ್ದೆ, ಸಾಮಾನ್ಯ ಶಿಕ್ಷಣ ತರಗತಿಯಲ್ಲಿ. ಮಕ್ಕಳು ತಂದ ಚಿತ್ರಗಳನ್ನು ನೋಡಿ ನನಗೂ ಒಂದು ಚಾರ್ಟ್ ಮಾಡಬೇಕೆಂದೆನಿಸಿತು. ನಾನೂ ಒಂದಷ್ಟು ಅತ್ಯುತ್ತಮ, ಅತ್ಯುನ್ನತ, ಅದ್ಭುತ ಸಾಧನೆಗೈದ, ಸ್ವಾವಲಂಬಿ, ಧೈರ್ಯವಂತ, ಪುಣ್ಯವಂತ ಮಹಿಳೆಯರ ಚಿತ್ರಗಳನ್ನು ಸಂಗ್ರಹಿಸಿಕೊಂಡೆ.
ನಾನು ಇವರ ಆದರ್ಶಗಳನ್ನು ಅನೇಕ ರೀತಿಯಲ್ಲಿ ಪರಿಪಾಲಿಸಲೆತ್ನಿಸುತ್ತಿದ್ದೇನೆ. ಗ್ರೇಟ್ ವಿಮೆನ್ ಇವರುಗಳು.

ಈ ಮಹಿಳೆಯರೆಲ್ಲರಿಗೂ ನನ್ನ ಪ್ರಣಾಮಗಳು. ಇವರಂತೆ ಎಲ್ಲಾ ಮಹಿಳೆಯರೂ ಸಾಧಿಸಲಿ. "ನೀವ್ ಬಿಡಿಪ್ಪಾ ಗಂಡಸರು ಏನ್ ಬೇಕಾದ್ರೂ ಮಾಡ್ತೀರ.. ನಾವು ಹೆಂಗಸರು, ನಮಗೆ ಅವಕಾಶ ಕೊಡಲ್ಲ" ಅನ್ನೋ ಹೆಣ್ಣು ಮಕ್ಕಳು ಇವರುಗಳನ್ನು ಆದರ್ಶವಾಗಿಟ್ಟುಕೊಳ್ಳಬಹುದು.


ಇವರೆಲ್ಲರಿಗಿಂತಲೂ ನನ್ನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿರುವ ಮಹಿಳೆಯೆಂದರೆ ನನ್ನನ್ನು ಬೆಳೆಸಿದ ನನ್ನ ಅತ್ತೆ, ನನಗೆ ಬದುಕಿನ ಪಾಠ ಹೇಳಿಕೊಟ್ಟ ನನ್ನ ಪ್ರೈಮರಿ ಶಾಲೆಯ ಶ್ಯಾಮಲಾ ಮಿಸ್ಸು. ಕಾರಣಾಂತರದಿಂದ ಅವರ ಫೋಟೋಗಳನ್ನು ಪ್ರಕಟಿಸುತ್ತಿಲ್ಲ.

ನನ್ನ ನಮನಗಳು..

-ಅ
10.09.2007
10.15PM

Monday, September 3, 2007

ಪಂಚಸಂತಸಸೂತ್ರ..

--> ಮಕ್ಕಳೆಲ್ಲರು ತಮ್ಮ ಕಕ್ಷೆಗೆ ಕರೆದು ಸಿಹಿಯನ್ನು ಹಂಚಿ ಶುಭಾಶಯವನ್ನು ಹೇಳುವಾಗ ಮನದಲ್ಲಿ ಆಗುವ ಸಂತಸವನ್ನು ಒಬ್ಬ ಶಿಕ್ಷಕನಷ್ಟೇ ಅನುಭವಿಸಲು ಸಾಧ್ಯ! ನಾನೊಬ್ಬ ಶಿಕ್ಷಕ..

--> ಅಮ್ಮನ ವೀಣಾವಾದನವನ್ನು ಪಕ್ಕವಾದ್ಯಗಳೊಂದಿಗೆ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಿ ಅದನ್ನು ಸಿಡಿಯಲ್ಲಿ ಹಾಕಿಕೊಂಡು ಕೇಳುವಾಗ ಆಗುವ ಮುದವನ್ನು ಸಂಗೀತ ರಸಿಕನಷ್ಟೇ ಅನುಭವಿಸಲಾಗುವುದಿಲ್ಲ, ಮಗನೂ ಆಗಿರಬೇಕು. ನಾನು ಮಗನೂ ಸಂಗೀತ ರಸಿಕನೂ..

--> ಜೂನ್‍ನಲ್ಲೇ ಮುಗಿಸಬೇಕಿದ್ದ ಶ್ರೀನಿಧಿಯ, ಶ್ರೀನಿವಾಸನ, ಸುಶ್ರುತನ, ಅನ್ನಪೂರ್ಣರ, ನನ್ನ ಪುಸ್ತಕದ ಪ್ರಾಜೆಕ್ಟು ಕೊನೆಗೂ ಮೊದಲ ಹೆಜ್ಜೆಯನ್ನು ಇಟ್ಟಿದೆ. ಎಲ್ಲಾ ಅಂಕಣಗಳೂ ಮುಗಿದವು. ಮುಂದಿನ ಸಲದಿಂದ ಇಷ್ಟು ತಡವಾಗಬಾರದೆಂದು ಶಪಥಗೈದೆ. ಈ ಸಂತಸವನ್ನು ಅನುಭವಿಸಲು ಕೆಲಸವೇ ಮುಂದುವರೆಯದ ನನ್ನಂಥವನಂತೆ ಸೋಲನ್ನು ಅನುಭವಿಸಿರಬೇಕು. ಈಗ ನಾನು ವಿಜಯೀ..

--> ಸ್ಕಂದಗಿರಿಯಲ್ಲಿ ಕೊಳಕೇ ಹೆಚ್ಚಿದ್ದರೂ ಮಳೆಯಲ್ಲಿ ನೆನೆಯುವಾಗ, ಬಂಡೆಯ ಮೇಲೆ ನಿಂತ ನೀರನ್ನು ಬಗ್ಗಿ ಪ್ರಾಣಿಗಳಂತೆ ಕುಡಿಯುವಾಗ, ಒದ್ದೆಯಾದ ಬಂಡೆಯನ್ನಿಳಿಯುವಾಗ ಜಾರಿ ಬಿದ್ದರೂ ಮತ್ತೆ ಮತ್ತೆ ಅದೇ ಬಂಡೆಯತ್ತಾ ಹೋಗುವಾಗ ಆಗುವ ಸಂತೋಷವನ್ನು ಅನುಭವಿಸಲು ಚಾರಣದ ಮೇಲೆ ಅಪಾರ ಪ್ರೀತಿಯಿರಲೇ ಬೇಕು. ಅಂಥವರಿಗೆ ಮಾತ್ರ ಆ ಸಂತಸದ ಅರಿವಾಗುತ್ತೆ. ನಾನು ಚಾರಣಪ್ರೇಮಿ..

--> 'ಸಹಾರ' ಪತ್ರಿಕೆಯ ಸರ್ಕ್ಯುಲೇಷನ್ನು ಮೂರುಸಾವಿರದತ್ತ ಹೋಗುತ್ತಿದೆ ಎಂದು ಕೇಳುವಾಗ ಆಗುವ ಆನಂದ ಅರ್ಥವಾಗಬೇಕಾದರೆ ಯಾವ 'ದೊಡ್ಡ' ಹೆಸರಿನ, ಹಣದ ಸಪೋರ್ಟ್ ಇಲ್ಲದೇ ಪತ್ರಿಕೋದ್ಯಮದಲ್ಲಿರಬೇಕು. ನಾನೊಬ್ಬ ಪತ್ರಕರ್ತನಲ್ಲದ ಪತ್ರಕರ್ತ..

ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..

- ಅ
03.09.2007
3PM