Saturday, September 15, 2007

ಗಣಪತಿ ಕೂರ್ಸಿದೀರಾ?

ಬಾಲ್ಯದ ನೆನಪು.

"ಆಂಟಿ, ಗಣಪತಿ ಕೂರ್ಸಿದೀರಾ?" ಗುಂಪಿನವರಲ್ಲಿ ಒಬ್ಬರು ಹಿಂದಿನ ಬೀದಿಯ ಸಾವಿತ್ರಿ ಆಂಟಿಯನ್ನು ಕೇಳುವುದು.

"ಬನ್ನಿಪ್ಪಾ.." ಅವರಿಗೆ ನಮ್ಮನ್ನು ಮನೆಯೊಳಗೆ ಕರೆಯುವುದು ಏನೋ ಖುಷಿ.

ಅಕ್ಷತೆಯನ್ನು ಗಣೇಶನ ಮೇಲೆ ಹಾಕಿ, ನಮಸ್ಕರಿಸುವ ವೇಳೆಗೆ ಸಾವಿತ್ರಿ ಆಂಟಿ ಕಡಲೇ ಕಾಳು ಉಸಿಲಿ, ಬಾಳೆ ಹಣ್ಣನ್ನು ನಾವು ಎಂಟು ಜನಕ್ಕೂ ಕೊಡಲು ತರುವುದು. "ಆಂಟಿ ಏನ್ ಕೊಡ್ತಾರೋ ಏನೋ.." ಎಂದು ರಘು ಕಿವಿಯಲ್ಲೇ ಅವರಿಗೂ ಕೇಳುವಂತೆ ಗುಟ್ಟು ಹೇಳುವುದು.

ಅಲ್ಲಿ ಉಸಿಲಿ ತಿಂದು, ಮುಂದಿನ ಮನೆಗೆ ಹೋಗಿ, "ಗಣಪತಿ ಕೂರ್ಸಿದೀರಾ ಆಂಟಿ?" ಎಂದು ಕೇಳುವುದು. ಆಗ ಪ್ರತ್ಯಕ್ಷ ಆದ ಆರ್.ಟಿ.ಓ. ಅಂಕಲ್ಲು, ದಪ್ಪನೆಯ ದೇಹ, ದಪ್ಪನೆಯ ಮೀಸೆಯ ಅಧಿಪತಿಗಳಾಗಿದ್ದು, "ನಾನು ಆಂಟಿ ಥರ ಕಾಣ್ಸ್ತಿದೀನೇನ್ರೋ ಕತ್ತೆಗಳಾ?" ಎಂದಾಗ, ಮುಖ ಸಪ್ಪಗೆ ಮಾಡಿಕೊಂಡಾದರೂ "ಗಣೇಶ ಕೂರ್ಸಿದೀರಾ ಅಂಕಲ್?" ಎಂದು ಕೇಳುವುದು. ಅವರು, "ಹ್ಞೂ, ಬನ್ನಿ, ಚಪ್ಪಲಿ ಗೇಟಿನ ಹೊರಗೇ ಬಿಡಿ.." ಎಂದು ಗದರಿದರೂ ಚಿಂತೆಗೊಳ್ಳದೆ ಒಳಗೆ ಹೋಗುವುದು. ಅವರ ಮನೆಯಲ್ಲಿ ಗಣಪನ ಮೂರ್ತಿಗೇ ಐದು ಸಾವಿರ ರೂಪಾಯಿ ಖರ್ಚು ಮಾಡಿದ್ದೂ, ಸೀರಿಯಲ್ ಸೆಟ್ಟುಗಳಿಗೆ ಇನ್ನೈದು ಸಾವಿರ ಖರ್ಚು ಮಾಡಿದ್ದರೂ ತಿನ್ನಲು ಒಂದು ಕಡುಬನ್ನೂ ಕೊಡದೇ ಇದ್ದುದನ್ನು ಶಪಿಸುವುದು.

ಅವರ ಮನೆಯಿಂದ ಹೊರಗೆ ಬಂದು ಪೋಲೀಸ್ ಅಂಕಲ್ ಮನೆಗೆ ಹೋಗುವುದು. ಹೆಂಡತಿ ಮಕ್ಕಳು ಎಲ್ಲರೂ ಧರ್ಮಸ್ಥಳದಿಂದ ಹಿಂದಿರುಗುವಾಗ ಮಂಜುನಾಥನ ಸನ್ನಿಧಿ ಸೇರಿದ್ದ ಕಾರಣ ನಮ್ಮೇರಿಯಾ ಮಕ್ಕಳೆಂದರೆ ಪ್ರೀತಿ. ಅವರು ನಮಗೋಸ್ಕರ ಗೇಟಿನಲ್ಲೇ ಕಾಯುವುದು. ನಾವು ಹೋದ ತಕ್ಷಣ ಒಳಗೆ ಕೈ ಹಿಡಿದು ಕರೆದೊಯ್ವುದು. "ಅರುಣ ಒಂದು ಹಾಡು ಹೇಳೋ.." ಎಂದಾಗ, ನನಗೆ ಗೊತ್ತಿದ್ದ ಒಂದೇ ಒಂದು ಹಾಡು, "ನಾವಿಂದು ಹಾಡೋ ಹಾಡಿಗೆ ಕೊನೆಯಿಲ್ಲಾ.." ಎಂದು ರಣಧೀರ ಚಿತ್ರದ ಹಾಡನ್ನು ಗಣೇಶನ ಮೂರ್ತಿಯ ಎದುರು ಕುಳಿತು ಹಾಡುವುದು. ಅದನ್ನು ಎಲ್ಲರೂ ತಲೆದೂಗಿ ಕೇಳುವುದು. ನಂತರ ಅವರ ಮನೆಯಲ್ಲಿ ಕೂರಿಸಿದ ಪೈಂಟ್ ಮಾಡದ ಮಣ್ಣಿನ ಗಣೇಶನಿಗೆ ವಂದಿಸಿ ಕುಸರಿಕಾಳು, ಬಾಳೆ ಹಣ್ಣು, ಕಡುಬು, ಪಾಯಸ ಸೇವಿಸಿ, "ಬಾಯ್ ಅಂಕಲ್" ಎಂದು ಹೇಳಿ ಹೊರಟು ಬರುವಾಗ ಏನೋ ಆನಂದ.

ನೂರೆಂಟು ಮನೆಗಳಿಗೆ ಹೋಗಬೇಕೆಂದು ಹೊರಡುತ್ತಿದ್ದೆವು, ಆದರೆ ಇಪ್ಪತ್ತೆಂಟಕ್ಕೇ ಸುಸ್ತು ಹೊಡೆದುಬಿಡುತ್ತಿದ್ದೆವು.ಮನೆ ತಲುಪುವ ಹೊತ್ತಿಗೆ ಸಂಜೆಯಾಗಿರುತ್ತಿತ್ತು. ಜೇಬಿನ ತುಂಬಾ ಪ್ರಸಾದಗಳು. ಕೈ ತುಂಬಾ ಕವರುಗಳು.

ಈಗ ಆ ದಿನಗಳಿಲ್ಲ. ನಮ್ಮ ಮನೆಗೂ ಯಾರೂ ಬರೋದಿಲ್ಲ. ಹಾಗೆ ಹೋಗುವ ಹುಡುಗರನ್ನೂ ನಾನು ನೋಡಿಲ್ಲ.

ಎಂಥಾ ದಿನಗಳವು.. ಮರೆಯಾಗಿ ಹೋದವು...

-ಅ
15.09.2007
11.15PM

7 comments:

 1. yes yes..sooper dinagaLu avu..naanu hogtidde mane manege gumpu kattikondu... maneg vaapas baro hottige jeb tumba choclates :-)...
  eega aathara oodaado hudgurna node illa... :-|

  ReplyDelete
 2. ಚಾಕೊಲೇಟ್ ಎಲ್ಲಾ ಕೊಡೋರಾ?? ನಮಗೆ ಕೊಡ್ತಿರ್ಲಿಲ್ಲ..

  ReplyDelete
 3. ನಾನೂ ಹಾಗೇ ಗುಂಪಲ್ಲಿ ಹೋಗ್ತಿದ್ದೆ.. ಇದನ್ನ ಓದ್ತಾ ಆ ದಿನಗಳು ನೆನಪಾದುವು.. ಸೂಪರ್ ದಿನಗಳವು! ನಿಜ.. ಎಲ್ಲಿ ಮರೆಯಾದುವೋ ಏನೋ!

  ReplyDelete
 4. [Parisarapremi]: hoonappa nam gauribidanaur nalli chocolate, uShli ella kodtidru mane manege hodaaaga ...bengLur nalle kodtirlilla ansutte... :-)

  ReplyDelete
 5. nimma post odhi tumba senti agbitte solpa nimishagalige. Nanu ee reethi yaara manegu hogthirlilla but nammamma avara kathegalannu eeglu helthare. But for sure avagiddidda maja ivaga ganeshana habbake illa.Ee sathi namdu americanalli ganesha habba. adhu ondu tarah chennagithu. post barithini.

  ReplyDelete
 6. 1DerFul post.
  Naavu saha Domlur nalli iro baro maneg ella hogi idhe prashne kelthidvi. Nan jothe namma anna irthida. So I was brave. Enu aagalla antha gotthu. Also avaga we could eat a lot! These days one meal thindu enadru bere thinnoshtu hotthige we will be done.
  Ganesha habbada shubashayagalu.

  ReplyDelete
 7. [ಸಿರಿ] ನೀವು ಎಮೋಷನಲ್ ಆಗಿದ್ದು ಒಳ್ಳೇದೇ ಆಯ್ತು ನೋಡಿ. ಆ ದಿನಗಳು ಮರುಕಳಿಸುವುದು ಬಹುಶಃ ಮುಂದಿನ ಹಬ್ಬಗಳಲ್ಲಿ.. ಅಮೆರಿಕೆಯಲ್ಲೂ "ಗಣೇಶ ಕೂರ್ಸಿದೀರಾ?" ಅಂತ ಮನೆಗೆ ಬರಲ್ವಾ ಯಾರೂನೂ?

  [ತಣೈ] (ಕ್ಷಮಿಸಿ, ತಮ್ಮ ಹೆಸರಿನುಚ್ಚಾರವನ್ನು ನಾನು ಅರಿಯದಾದೆ..)
  ದೊಮ್ಮಲೂರನ್ನು ಈಗಲೂ ರಂಗಾಗಿಸಿ.. ಈಗಲೂ ಹೋಗಬಹುದಪ್ಪ!!!

  ReplyDelete