Thursday, October 25, 2007

ತುಡಿತ..

ಎಷ್ಟೋ ವರ್ಷ ಆಗೋಯ್ತು... ನಾನು ಟ್ರೆಕ್ಕಿಂಗ್‍ಗೆ ತುರ್ತಾಗಿ ಹೋಗಬೇಕು... ಯಾರಾದರೂ ಕರ್ಕೊಂಡ್ ಹೋಗಿ ಪ್ಲೀಸ್...

ಹೊಗೆಯ ಹಗೆಯನು ಬಿಟ್ಟೋಡಿ
ಖಗಸಖ್ಯ ಪಡೆವ ಹಂಬಲದಿ..
ರಾಜಕೀಯದ ಚಕ್ರವ್ಯೂಹದಿಂದ
ಹೊರತಪ್ಪಿಸುವ ಹಸಿರು ಬೆಂಬಲದಿ..
ಕಾನನವ ಹೊಕ್ಕು ನೆಲೆಸುವ ತವಕದಲಿ ಬಳಲುತಿಹೆನು

- ಅ
25.10.2007
2.30PM

Sunday, October 21, 2007

ಅರ್ಧದಾಯುಷ್ಯ..

ಅಕ್ಕನ ಮನೆಯ ಗೃಹಪ್ರವೇಶ - ಅವಳಿಗೆ ಮತ್ತು ಭಾವನಿಗೆ ಶುಭಾಶಯ... ಅವಳ ಮನೆಯ ಹೆಸರನ್ನೇ ಕದ್ದು ನಾನು ನನ್ನಂಕಣನಾಮವನ್ನಾಗಿಸಿಕೊಂಡಿದ್ದೇನೆ. ಅದಕ್ಕೊಂದು ವಿಶೇಷ ಕೃತಜ್ಞತೆ. ಮನೆಯು ಸ್ವರ್ಗವಾಗಲಿ.

ಕವಿಯ ಹೃದಯದಿ
ದಿವಿಯೇ ತುಂಬಿಹುದು
ಸವಿಯ ಕ್ಷಿತಿಜದಿ
ಭುವಿಯನಿಂಪನನುಭವಿಸುವ ಒಳಮನದ
ಕಿವಿಯೇ ತುಂಬಿಹುದು
ರವಿಶಶಿಯೊಡನಾಟದಂತೆ..

ನನ್ನ ಹುಟ್ಟುಹಬ್ಬ.. ಕೆಲವು ಗಳಿಗೆಗಳು ಉಳಿದಿವೆ.. ನನ್ನ ಅರ್ಧದಾಯುಷ್ಯ ಮುಗಿಯಿತೆನಿಸುತ್ತೆ - ಸಾಯುವವರೆಗೂ ಬದುಕಿದ್ದರೆ. ಹಾಗಾಗಿ, ನನಗೂ ಒಂದು ಶುಭಾಶಯ. ಒಳ್ಳೇದಾಗ್ಲಿ ನನಗೆ.. Happy Birthday to Me... ನನಗೆ ನನ್ನದೇ ಮೊದಲ ವಿಷ್!

ಹುಟ್ಟಿದ ದಿನ ಅಪ್ಪನ ನೆನಪಾಗುತ್ತೆ. ಹೆಚ್ಚಿಗೆ ಮಾತಾಡಿಲ್ಲ ಅಪ್ಪನ ಜೊತೆ, ಹೆಚ್ಚಿಗೆ ಓಡಾಡಿಲ್ಲ. ಮುದ್ದು ಮಾಡಿಸಿಕೊಂಡ ನೆನಪಿಲ್ಲ, ಬೈಸಿಕೊಂಡ ನೆನಪೂ ಇಲ್ಲ. ಹುಟ್ಟಿದ ಹಬ್ಬದ ದಿನದಂದೇ ನಡೆದ ಶವಯಾತ್ರೆ ಮಾತ್ರ ನೆನಪಿನಲ್ಲಿದೆ. ಕಣ್ಣಲ್ಲಿ ನೀರು ಬರುತ್ತೆ. ಮತ್ತೆ ಒರೆಸಿಕೊಳ್ಳುತ್ತೇನೆ. ದೀಪಾವಳಿಯನ್ನು ಶಪಿಸುತ್ತೇನೆ. ಬೆಂಗಳೂರನ್ನು ಬೈಯ್ಯುತ್ತೇನೆ. ಕಣ್ಮುಂದೆ ಬಂದು ನಿಲ್ಲುವ ಇಂದಿನ 'ನನ್ನನ್ನು' ನೋಡಿ, ಏನೂ ಪ್ರಯೋಜನವಿಲ್ಲವೆಂದು ತಲೆಯಾಡಿಸಿ ಮತ್ತೆ ಕನಸಿನ ಕುದುರೆಯ ಬೆನ್ನಟ್ಟಿ ಓಡಲೆತ್ನಿಸುತ್ತೇನೆ. ಅಕ್ಕ, ಗುರುನಾಥ ಗಿರೀಶರು ಅಪ್ಪನ ಸಾಮಿಪ್ಯದಲ್ಲಿದ್ದವರು, ಅವರನ್ನು ನೋಡಿ ಸಂತಸಪಡುತ್ತೇನೆ. ಅತ್ತೆಯು ಬದುಕಿನ ಸೌಂದರ್ಯವನ್ನು ಸವಿಯುವಂತೆ ಆದರ್ಶದ ಪುಟಗಳನ್ನು ಹರಡಿರುತ್ತಾರೆ. ಅಮ್ಮ ಮರೆವನ್ನು ಪರಿಚಯಿಸುತ್ತಿರುತ್ತಾರೆ. ಮತ್ತೊಂದು ಹುಟ್ಟುಹಬ್ಬ ಬರುತ್ತದೆ. ಮತ್ತದೇ ನೆನಪು, ಮತ್ತದೇ ಬಾಷ್ಪ!!

-ಅ
21.10.2007
3.20AM

Friday, October 19, 2007

ಇವೆಲ್ಲಾ ಇರದಿದ್ದರೆ...

ಬದುಕಿನಲ್ಲಿ ಕೆಲವು ವಿಷಯಗಳನ್ನು "ಹೇಟ್" ಮಾಡಬೇಕು ಅನ್ಸುತ್ತೆ ನಂಗೆ.. ಮೈಯೆಲ್ಲಾ ಉರಿದು ಹೋಗುವಂಥಾ ಕೆಲವು ವಿಷಯಗಳು ಈ ಕೆಳಕಂಡಂತಿವೆ.

--> ಆಟೋ ಪ್ರಯಾಣ

--> ಮೊಬೈಲ್ ಫೋನ್‍ ಹರಟೆ

--> ಧೂಮಾಪಾನ ಮಾಡುವವರ ಸಾಮೀಪ್ಯ, ಸಹವಾಸ

--> ಪಾರ್ಕ್ ಅಲ್ಲಿ ಮೈ ಮೇಲೆ ದೇವರು ಬಂದವರಂತೆ ವಾಕಿಂಗ್ ಮಾಡೋದು

--> ಹಾರ್ಲಿಕ್ಸು, ಬೋರ್ನ್ವೀಟಾ

--> ಮೈಸೂರ್ ಪಾಕ್ ಅನ್ನೋ ಸ್ವೀಟು

--> ಗಾಡಿ ನಿಲ್ಲಿಸಿ ಇಪ್ಪತ್ತು ರೂಪಾಯಿಗೂ ಬರಗೆಟ್ಟ ಕೆಲ ಸಂಚಾರಿ ನಾಯಿಗಳು ಅಲಿಯಾಸ್ ಪೋಲೀಸರು

--> ಟಿ.ವಿ. ಎಲ್ಲಾ ಮೈಲಿಗೆಯಾಗುವಂತೆ ದಿನಾ ಕಾಣಿಸಿಕೊಳ್ಳುವ "ಹೊಲಸು ಚೇತನ"ದ ರಾಜಕಾರಣಿಗಳು

--> ಗಂಡು - ಹೆಣ್ಣು ಭೇದ, ಸ್ತ್ರೀವಾದ - ಪುರುಷವಾದ (ಶಾವನಿಸಂ)

--> ಜಾತೀಯತೆ, ಮತೀಯತೆ, ಧರ್ಮಾಂಧತೆ

--> ವ್ಯಕ್ತಿ ಪೂಜೆ, ಗೊಡ್ಡು ಸಂಪ್ರದಾಯ

--> ಗಾಡಿಯ ಹಾರ್ನ್, ಹೊಗೆ

--> ದೀಪಾವಳಿ ಹಬ್ಬ, ಗಣೇಶ ಹಬ್ಬ, ಹೋಳಿ ಹಬ್ಬ

--> ಮದುವೆ ಊಟ, ತಿತಿ ಊಟ, ಪೀಡ್ಜಾ ಇತ್ಯಾದಿ ಮಣ್ಣು ಮಸಿಗಳು, ಪಾರ್ಟಿಗಳು

--> ಅರಣ್ಯದಲ್ಲಿ ಮ್ಯೂಸಿಕ್ ಸಿಸ್ಟಮ್ ಬಳಸುವುದು

--> ಪುಸ್ತಕದ ಪುಟಗಳನ್ನು ಗುರುತಿಗಾಗಿ ಮೇಲಿನ ತುದಿಯನ್ನು ಮಡಚುವುದು

--> ಬೆಟ್ಟ ಹತ್ತುವಾಗಲೂ ಬಿಸೆಲೆರಿ ನೀರು ಕುಡಿಯುವುದು

--> ಅನೃತದೊಡೆತನ

--> ರಾಕ್ ಮ್ಯೂಸಿಕ್ಕು

--> ಸರ್ವಕಂಪ್ಯೂಟರೀಕರಣ

--> ಪುಸ್ತಕಗಳನ್ನು ಎರವಲು ಕೊಡುವುದು

--> ಸಂಗೀತವನ್ನು ಪೈರಸಿ ಮಾಡುವುದು (ವೀರಪ್ಪನ್ ವಾಸಿ ಅನ್ಸುತ್ತೆ ಈ ಕೆಲಸ ಮಾಡುವವರಿಗಿಂತ)

--> ಭಿಕ್ಷೆ ನೀಡುವುದು

--> ಪಯಣ ಮುಗಿಸಿ ಬೆಂಗಳೂರಿಗೆ ಮರಳುವುದು

--> ಹೊರಗಿನವನು ಬೆಂಗಳೂರನ್ನು ಬೈಯ್ಯುವುದು

--> ಕನ್ನಡ/ಸಂಸ್ಕೃತ ಪದಗಳನ್ನು ಕೆಟ್ಟದಾಗಿ ಉಚ್ಚಾರಣೆ ಮಾಡುವವರ ಜೊತೆ ಮಾತನಾಡುವುದು

--> ದುಡ್ಡಿಗೋಸ್ಕರ ಯಾವ ದೇಶಕ್ಕೂ ಹೋಗಲು ಸಿದ್ಧವಾಗುವ ಮನೋಭಾವನೆ

--> "ಇಲ್ಲೇನಿದೆ?" ಅನ್ನುವ ಅವಹೇಳನದ ಮಾತುಗಳು

--> "ನೀನೊಬ್ಬ ಹೀಗಿದ್ರೆ ದೇಶ ಉದ್ಧಾರ ಆಗುತ್ತಾ?" ಅನ್ನೋ ನಾಲಿಗೆಗಳು

--> ನಾಯಿಗಳನ್ನು ಕಟ್ಟಿ ಹಾಕುವುದು

--> ಪ್ರಾಣಿಗಳನ್ನು ಕೀಳಾಗಿ ನೋಡುವುದು

--> ಮರ ಕಡಿಯುವ ಕೈ

--> ಹಾವು ಹೊಡೆಯುವ ಕೈ

--> ಹೂವು ಕೀಳುವ ಕೈ

--> ಪ್ಲಾಸ್ಟಿಕ್ ಬಿಸಾಡುವ ಕೈ

--> ಪರ್ಸನಾಲಿಟಿ ಡೆವೆಲೆಪ್ಮೆಂಟ್ ಪುಸ್ತಕಗಳು

--> ಹೈ ಹೀಲ್ಡ್ಸ್ ಚಪ್ಪಲಿ ಹಾಕ್ಕೊಂಡು ಟ್ರೆಕ್ಕಿಂಗ್‍ಗೆ ಬರುವ ಹೆಂಗಸರು

--> ಬಾಯಲ್ಲಿ ಬೀಡಾ ಹಾಕ್ಕೊಂಡು ಬಸ್ಸಲ್ಲಿ ಪಕ್ಕದ ಸೀಟಿನಲ್ಲಿ ಬಂದು ಕೂರುವವರು

--> ಗಾಡಿ ಓಡಿಸಲು ಹೆಲ್ಮೆಟ್

--> ಬೀಟ್‍ರೂಟ್ ಪಲ್ಯ/ಸಾರು/ ಇತ್ಯಾದಿ ಬೀಟ್‍ರೂಟ್ ಇಂದ ಮಾಡಿದ ತ್ಯಾಜ್ಯ (ತಿನಿಸು ಅಂತಾರೆ ಜನ)..

- ಅ
20.10.2007
12.30AM

Tuesday, October 16, 2007

ಹುಚ್ ಬಿಲ್ಲು

ಹೀಗೊಂದು ಬಿಲ್ ಸಂದೇಶ ನನ್ನ ಮೊಬೈಲ್‍ಗೆ ಬಂದಿತು. ಹೇಗೆ ಪಾವತಿ ಮಾಡಲಿ ಅನ್ನೋದು ನನ್ನ ಸಮಸ್ಯೆಯಾಗಿದೆ.

Dear Customer, the total outstanding as on 16-OCT-07 is Rs. -314.9 in which the billed amt is Rs. -361. and the approx unbilled amt is 46.1 which does not include any discounts, rental charges and service tax. Credit limit of Rs.1417 has been assigned for your Vodaphone mobile a/c no. . Your bill due date is 30-OCT-07.

ಮೊದಲಿಗೆ ಈ ದರಿದ್ರ ಸಂದೇಶ ಯಾವ ಪಂಡಿತನಿಗೆ ಅರ್ಥ ಆಗುತ್ತೆ?

-314.9 ರೂಪಾಯಿಗಳಲ್ಲಿ -361 ರೂಪಾಯಿ ಬಿಲ್ ಮಾಡಿದೀವಿ ಅಂದ್ರೆ ಏನರ್ಥ?

ಹಾಳಾಗಿ ಹೋಗಲಿ, ಈ ಮೈನಸ್ ಹಣ ಪಾವತಿ ಮಾಡೋಕೆ ಡ್ಯೂ ಡೇಟ್ ಬೇರೆ ಬೇಕಾ ಕರ್ಮಕಾಂಡ!!!

ಆ ಮೈನಸ್ ಹಣಕ್ಕೆ ಡಿಸ್ಕೌಂಟ್ ಏನೂ ಕೊಡಲ್ವಂತೆ ಬೇರೆ!

-ಅ
16.10.2007
10.25PM

Wednesday, October 10, 2007

ಲತಾಂಗಿ..

ಲತಾಂಗಿ..
ನಿನ್ನೆ ಮನೆಮಟ್ಟದಲ್ಲೇ ಅಮ್ಮನ (ನಮ್ಮ) ಮೊದಲ ಸಿಡಿಯನ್ನು ಬಿಡುಗಡೆ ಮಾಡಿದೆವು. ಅತಿಥಿಗಳು - ಅಮ್ಮ, ಅತ್ತೆ, ನಾನು, ಅಕ್ಕ, ಭಾವ, ಅಶೋಕ, ಶಾರದಾ ಅತ್ತೆ, ಪೃಥ್ವಿ, ಪರ್ಣಿಕಾ. ಮನಸ್ಸಿನಲ್ಲಿ ಏನೋ ಆನಂದ. ಅಮ್ಮನಿಗೆ ಶುಭಾಶಯ.

ವಿದುಷಿಯಾಗಿ ಎಷ್ಟೋ ವರ್ಷಗಳಾದ ಮೇಲೆ, ಸಿ.ಡಿ. ಮಾಡುವ ಕಾಲ ಇಂದು ಬಂದಿದೆ! ಯಾವಾಗ ಏನೇನು ಆಗಬೇಕೋ ಆಗಲೇ ಬೇಕು. ಗೆಳೆಯರಿಗೆಲ್ಲಾ "ನಮ್ಮಮ್ಮಂದು ವೀಣಾವಾದನ ಸಿ.ಡಿ." ಎಂದು ಯಾವಾಗ ಕೊಡುತ್ತೇನೋ ಅಂತ ಕಾಯುತ್ತಾ ಇದ್ದೇನೆ. ಮನಸ್ಸಿನಲ್ಲಿ ಹೆಮ್ಮೆಯಿರುತ್ತೆ ಅಲ್ಲವೇ?


ಸ್ವಂತ ತಾತನ ಕೃತಿಗಳನ್ನು ಅಮ್ಮನ ವೀಣಾವಾದನದಲ್ಲಿ ಕೇಳೋಕಿಂತ ಹೆಮ್ಮೆಯ ಭಾವನೆ ಬೇರೇನಿದೆ? ಜೊತೆಗೆ ಸಾಮಜವರಗಮನ, ಮನವ್ಯಾಲಗಿಂಚರಾದಟೇ, ರಘುವಂಶಸುಧಾ, ಧನಶ್ರೀ ತಿಲ್ಲಾನ - ಇವೆಲ್ಲಾ ಬಹಳ ಚೆನ್ನಾಗಿ ಮೂಡಿ ಬಂದಿರೋದನ್ನು ಹೆಡ್ ಫೋನ್ ಹಾಕಿಕೊಂಡು ಕೇಳಿದಾಗ ಒಳಗೇ ಏನೋ ಒಂದು ತೆರನಾದ ಸಂತಸದ ಸಂಗೀತ ಉಲಿಯುತ್ತೆ. ನಮ್ಮಮ್ಮ ನುಡಿಸಿರೋದು!!

'ಲತಾಂಗಿ'ಯನ್ನು ಫೀಸ್ ಕೊಟ್ಟು ಕೊಂಡುಕೊಳ್ಳುವವರಿಗೆ ವಿಶೇಷವಾದ ಕೃತಜ್ಞತಾಪೂರ್ವಕ ವಂದನೆಗಳನ್ನರ್ಪಿಸುತ್ತೇನೆ. ಕಲಾವಿದರಿಗೆ ಪ್ರೋತ್ಸಾಹಿಸೋದೇ ಇಂಥಾ ಸಣ್ಣ ಸಣ್ಣ ಫೀಸುಗಳು ಅಲ್ಲವೇ?

ಶ್ರೀ ಶ್ರೀ ಶ್ರೀ..

ನಾಳೆ ಆಪ್ತ ಗೆಳತಿ ಶ್ರೀ ಹುಟ್ಟು ಹಬ್ಬ. ಅವಳ ಪರಿಚಯ ಆದಮೇಲೆ ಇದು ಮೂರನೇ ಹುಟ್ಟು ಹಬ್ಬ. ಸಕಲ ಶ್ರೀ ಅವಳಿಗೆ ಸಿಗಲಿ. ಮುದ್ದಿನ ಮೊಮ್ಮಗು ಅದು, ಚೆನ್ನಾಗಿ ಮುಂದೆ ಬರಲಿ - ದೊಡ್ಡ ದೊಡ್ಡ ಪ್ರಾಜೆಕ್ಟುಗಳನ್ನು ಹಾಕಿಕೊಂಡಿದೆ. ಎಲ್ಲದರಲ್ಲೂ ಯಶಸ್ಸು ಸಿಗಲಿ ಎಂದು ಮನದಾಂತರಾಳದಿಂದ ಹರಸುತ್ತೇನೆ. All the best, ಶ್ರೀ!


ಇದು ನಿನಗೊಂದು ಸಣ್ಣ ಉಡುಗೊರೆ..

ನದಿಚೆಲುವಿನಂತೆ ಎದೆಯೊಳಡಗಿ
ಹುದುಗಿ ಉಳಿದಿದ್ದ ಚೈತನ್ಯವನಗೆದು
ಬದುಕ ಹಂತದಿ ನಗುವ ತಂದ
ಚದುರಂಗದರಸಿ ಬಾಳಲಿ
ಮುದವಿರಲಿ ಚಿರವಾಗಿ..

-ಅ

ಶ್ರೇಯಸ್ ಹುಟ್ಟುಹಬ್ಬ
ಗೆಳೆಯ ಶ್ರೇಯಸ್ ಹುಟ್ಟುಹಬ್ಬ ಹದಿನಾಲ್ಕನೇ ತಾರೀಖು. ಅವನ ಮನೆಯಲ್ಲೇ ಇರ್ತೀನಿ. ತೀರ್ಥಹಳ್ಳಿಯಲ್ಲಿ. ಈ ಪ್ರವಾಸದ ಯೋಜನೆಗೂ ಹುಟ್ಟುಹಬ್ಬ - ಒಂದು ವರ್ಷದ್ದು. ಸೋ, ಶ್ರೇಯಸ್ ಹಾಗೂ ಅವನ ಮನೆಯ ಪ್ರವಾಸ ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯಗಳು. ಶ್ರೇಯಸ್ ದೆಸೆಯಿಂದ ಅನೇಕ ಸಾಧನೆಯ ಪ್ರಯತ್ನಕ್ಕೆ ಕೈ ಹಾಕಿದ್ದೀನಿ ನಾನು. ಕೃತಾರ್ಥ ನಾನು! ತೀರ್ಥಹಳ್ಳಿಯಲ್ಲಿ ಮಿಕ್ಕಿದ್ ಭಾಷಣ!

-ಅ

10.10.2007

11PMMonday, October 8, 2007

ಹುಟ್ಟಿದವರೆಲ್ಲ ಸಾಯದೇ ನಿಲ್ಲೆ..

ಶೃಂಗೇರಿಯಿಂದ ಬರುವಾಗ ಐ-ಪಾಡ್ ಅಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿಯವರ "ನಿನ್ನುವಿನಾ ನಾಮದೆಂದು..." ಕೇಳುತ್ತಾ ಇದ್ದಾಗ ಯಾವುದೋ ಲೋಕದೊಳಗೆ ಕಳೆದು ಹೋಗಿದ್ದಾಗ ಕೆಲವು ಆಲೋಚನೆಗಳು ಬಂದವು.

ಈ ವಿಶ್ವವು ಯಾರ ಹುಟ್ಟನ್ನೂ, ಯಾರ ಸಾವನ್ನೂ ಲೆಕ್ಕವಿಟ್ಟಿಲ್ಲ. No one is indespensible in this universe. ಬದಿಗಿಡೋಣ ಈ ವಿಷಯವನ್ನು.

ಈ ಕೆಲವರಿಗೆ ಸಾವು ಯಾಕೆ ಬರುತ್ತೋ ಅಂತ ಅನ್ನಿಸುತ್ತೆ. ದೇಶಕ್ಕಾಗಿ ನಿಜವಾಗಿಯೂ ದುಡಿದ ಮೇಜರ್ ಸಾವಿನ ವಿಷಯವನ್ನು ಪತ್ರಿಕೆಯಲ್ಲಿ ಮೊನ್ನೆ ಓದಿದಾಗ, ಈ ಹಾಳಾದ್ದು ಸಾವು ಅಧಿಕಾರ ಕೊಡಿ ಅಧಿಕಾರ ಕೊಡಿ ಅಂತ ಅರಚಾಡುತ್ತಿರುವವನನ್ನು, ಅಧಿಕಾರ ಕೊಡಲ್ಲ ಅಧಿಕಾರ ಕೊಡಲ್ಲ ಅಂತ ತನ್ನ ತಾತನ ಮನೆಯ ಆಸ್ತಿಯಂತೆ ವರ್ತಿಸುತ್ತಿರುವವನನ್ನು, ನಿದ್ದೆ-ಮುದ್ದೆಗಳೇ ಸಾಧನೆಯೆಂದು ಇಷ್ಟ ಬಂದ ಹಾಗೆ ನಿರ್ಣಯಗಳನ್ನು ತೆಗೆದುಕೊಳ್ಳುತಿರುವ ದಡ್ಡಶಿರೋಮಣಿಯನ್ನು ಏಕೆ ಕೊಂಡೊಯ್ಯುತಿಲ್ಲ? ಪಾಪಿ ಚಿರಾಯು!! ಆದರೆ ಯಾವಾಗ್ಲಾದ್ರೂ ಬಂದೇ ಬರುತ್ತೆ ಸಾವು. ನನ್ನ ಪ್ರಶ್ನೆಯೆಂದರೆ, ಈ ಅಕಾಲ ಮೃತ್ಯು ಇವರುಗಳಿಗೆ ಬರೋದೇ ಇಲ್ಲ. ಕಡೇ ಪಕ್ಷ ಒಂದು ಸಣ್ಣ ಹೃದಯ ಬೇನೆ? ಛೆ!! ಆದಷ್ಟು ಬೇಗ ಬರಲಿ.

ಈ ಸಾವು ಕೆಲವು ವ್ಯಕ್ತಿಗಳಿಗೆ ಯಾಕಾದರೂ ಬಂದಿತೋ ಏನೋ! ಎಂ.ಎಸ್. ಸುಬ್ಬುಲಕ್ಷ್ಮಿ, ಮಹಾತ್ಮಾ ಗಾಂಧಿ, ಆಲ್ಬರ್ಟ್ ಐಸ್ಟೈನ್, ಕುವೆಂಪು, ರಾಜ್‍ಕುಮಾರ್, ಇವರೆಲ್ಲಾ ಯಾಕೆ ಸತ್ತರು? ಛೆ, ಸಾವು ಬರಲೇ ಬಾರದಿತ್ತು ಇವರುಗಳಿಗೆಲ್ಲಾ ಅಂತ ಆಗಾಗ್ಗೆ ಅನ್ನಿಸುತ್ತಿರುತ್ತೆ. ಆದರೆ ಸೃಷ್ಟಿನಿಯಮ!!

ನೀವೂ ಸಾಯಬೇಕು, ನಾನೂ ಸಾಯಬೇಕು..

ಹುಟ್ಟಿದವರೆಲ್ಲ ಸಾಯದೇ ನಿಲ್ಲೆ, ಹೊಸತಾಗಿ ಹುಟ್ಟುವರ್ಗೆಡೆಯೆಲ್ಲಿ - ಮಂಕುತಿಮ್ಮ!

-ಅ
08.10.2007
6.50AM

Thursday, October 4, 2007

ಚತುರ್ಮುಖ..

ಇಬ್ಬರೊಡಗೂಡಿಸಿದರೆ.....

ನಾನು - ಶ್ರೀಧರ

ಪ್ರಯಾಣ ಬಹು ಮುಖ್ಯವಾದ ಹವ್ಯಾಸ, ಕಾಫಿ ಎಂದರೆ ಮೈಯೆಲ್ಲಾ ಬಾಯಿ, ಪುಸ್ತಕ ಓದೋದು ಬದುಕಿನ ಬಹು ದೊಡ್ಡ ಆದ್ಯತೆಗಳಲ್ಲೊಂದು, ಶ್ರೀಧರನ ನ್ಯಾಷನಲ್ ಕಾಲೇಜಿನ ಭಾಷೆಗೂ ನನ್ನ ಆಚಾರ್ಯ ಪಾಠಶಾಲೆ ಭಾಷೆಗೂ ಅಷ್ಟೇನೂ ವ್ಯತ್ಯಾಸ ಇಲ್ಲ.

ಶ್ರೀಧರ - ಶ್ರೀಕಾಂತ

ಸ್ವಚ್ಛ ಕನ್ನಡ ಬರಹಗಾರರು, ಮೌನ ಸಮಯದಲ್ಲಿ ಬಲುಮೌನಿಗಳು, ಚಾರಣಾಸಕ್ತರು, ತಮ್ಮ ಲೋಕದಲ್ಲಿ ತಾವು ಲೀನವಾಗುವ ಸಾಮರ್ಥ್ಯವುಳ್ಳವರು.

ಶ್ರೀಕಾಂತ - ಶ್ರೀನಿವಾಸ

ಸಕ್ಕದಪ್ರಿಯರು, ತತ್ವಶಾಸ್ತ್ರಾಭಿಮಾನಿಗಳು, ಚಾರಣಾಸಕ್ತರು, ಅಪ್ರತಿಮ ಲೇಖಕರು, ತರ್ಕಸ್ವಭಾವದವರು, ಮೇಲ್ಪೇಳ್ದಂತೆ ತಮ್ಮ ಲೋಕದಲ್ಲಿ ತಾವು ಲೀನವಾಗುವ ಸಾಮರ್ಥ್ಯವುಳ್ಳವರು.

ಶ್ರೀನಿವಾಸ - ಶ್ರೀಧರ

ಒಟ್ಟಿಗೇ ವ್ಯಾಸಂಗ ಮಾಡಿದವರು, ಉತ್ತಮ ಬರಹಗಾರರು, ಕನ್ನಡಾಭಿಮಾನಿಗಳು, ಪ್ರೇಮಚಿತ್ತರು, ಚಾರಣಾಸಕ್ತರು, ಒಬ್ಬ ಕಾಫಿ ಇನ್ನೊಬ್ಬ ಟೀ - ಒಟ್ಟಿನಲ್ಲಿ ಉತ್ತೇಜನಾರ್ಥಿಗಳು.

ಶ್ರೀಕಾಂತ - ನಾನು

ಒಟ್ಟಿಗೇ ಪಾಠ ಕಲಿತವರು, ಒಟ್ಟಿಗೇ ಪಾಠ ಹೇಳಿಕೊಟ್ಟವರು, ಒಟ್ಟಿಗೇ ಚಾರಣ ಮಾಡುವವರು, ಬರೆಯುವ, ಓದುವ ಹಂಬಲವನ್ನು ಹೊತ್ತವರು.

ಶ್ರೀನಿವಾಸ - ನಾನು

ಕಾವ್ಯಪ್ರೇಮಿಗಳು, ಚಾರಣ ಪ್ರೇಮಿಗಳು, ಸಂಗೀತಾಭಿಮಾನಿಗಳು, ಸಾಹಿತ್ಯಾಭಿಮಾನಿಗಳು.

ಇಬ್ಬಿಬ್ಬರನೊಡಗೂಡಿಸಿದರೆ...

ಶ್ರೀಕಾಂತ, ಶ್ರೀಧರ - ಶ್ರೀನಿವಾಸ, ನಾನು

ಇವರು ರಾತ್ರಿ ಎಷ್ಟು ಹೊತ್ತು ಬೇಕಾದರೂ ಎದ್ದಿರುತ್ತಾರೆ, ನಾವು ಹಾಗಲ್ಲ ನಮಗೆ ಅಷ್ಟೊಂದು ತಾಕತ್ ಇಲ್ಲ ಬಿಡಿ. ಇವರಿಬ್ಬರಿಗೂ ವೃತ್ತಿಯಿಂದ ರಾತ್ರಿ ಕೆಲಸ ಮಾಡಿ ಅನುಭವವಿದೆ. ಅವರು ಗದ್ಯದಲ್ಲಿ ಹೆಚ್ಚು comfortable ಆಗಿದ್ದರೆ ನಾವು ಗದ್ಯಕ್ಕಿಂತ ಪದ್ಯದಲ್ಲಿ ಹೆಚ್ಚು ಆನಂದ ಪಡುವುದು ಅಭ್ಯಾಸ.

ಶ್ರೀಧರ, ಶ್ರೀನಿವಾಸ - ನಾನು, ಶ್ರೀಕಾಂತ

ಒಟ್ಟಿಗೇ ಓದಿದವರು ಇವರು, ಒಟ್ಟಿಗೇ ಒಂದು ವರ್ಷ ಐ ಐ ಎಚ್ ಟಿ ಅಲ್ಲಿದ್ದೂ ನಂತರ ಇನ್ಸ್ಟಿಟ್ಯೂಟ್ ನಡೆಸಿದವರು ನಾವು. ನಾವು ಇವರಿಬ್ಬರಿಗೆ ಹೋಲಿಸಿದರೆ ಅನೇಕ ಚಾರಣಗಳನ್ನು ಮಾಡಿದ್ದೇವೆ, ಕಾಲು ಹೊರಗೆ ಚಾಚಲು ಸದಾ ಸಿದ್ಧ!

ಶ್ರೀನಿವಾಸ, ಶ್ರೀಕಾಂತ - ಶ್ರೀಧರ, ನಾನು

ಎರಡು ಗುಂಪೂ ಸಂಸ್ಕೃತಪ್ರಿಯರು - ಆದರೆ ಅವರ ಸಂಸ್ಕೃತವೇ ಬೇರೆ, ನಮ್ಮ ಸಂಸ್ಕೃತವೇ ಬೇರೆ!!


-ಅ
04.10.2007
1.40AM