Saturday, November 24, 2007

ಆಕಾಶವಾಣಿ - ಐವತ್ತು ವರ್ಷಗಳಿಂದ...

Ajeeb Daastaan Hain Ye
Kahaan Shuru Kahaan Khatam
Ye Manzilen Hai Kaun Si
Na Wo Samajh Sake Na Hum


ಈ ಹಾಡು ಮಧ್ಯಾಹ್ನ ರೇಡಿಯೋಲಿ ಉಲಿಯುತ್ತಿತ್ತು. ಅದು ಬೇರಾವ ಸ್ಟೇಷನ್ ಆಗಿರೋಕೆ ಸಾಧ್ಯವೇ ಇಲ್ಲ. ಅದು 'ಬಾನುಲಿ'ಯೇ ಆಗಿರಬೇಕು ಎಂದು ಖಾತ್ರಿಯಾಗಲು ಹೆಚ್ಚು ಸಮಯ ಬೇಕಿಲ್ಲ. ಒಳ್ಳೇ ಸಂಗೀತವನ್ನು ಆಕಾಶವಾಣಿಯಲ್ಲಲ್ಲದೇ ಇನ್ನೆಲ್ಲಿ ಪ್ರಸಾರ ಮಾಡುತ್ತಾರೆ!!

ಇಂದಿಗೆ ಆಕಾಶವಾಣಿಯು ಹುಟ್ಟಿ ಐವತ್ತು ವರ್ಷ ಆಯಿತು. ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

1927ನಲ್ಲೇ ಹುಟ್ಟಿದ್ದರೂ ಆಗ ಅದಕ್ಕೆ ಆಗ 'ಇಂಡಿಯನ್ ಬ್ರಾಡ್‍ಕಾಸ್ಟಿಂಗ್ ಸರ್ವೀಸ್' ಎನ್ನುತ್ತಿದ್ದರು. ನಂತರ ಐವತ್ತೇಳರಲ್ಲಿ "ಆಕಾಶವಾಣಿ" ಅನ್ನುವ ನಾಮಕರಣ ಆಯಿತು. ಅಂದಿನಿಂದ ಇಂದಿನವರೆಗೂ ಒಳ್ಳೆಯ ಹೆಸರನ್ನು ಸಂಪಾದಿಸಿದಲ್ಲದೇ, ಅದನ್ನು ಉಳಿಸಿಕೊಂಡು ಬಂದಿದ್ದಾರೆ ಆಕಾಶವಾಣಿಯವರು. ಅಬ್ಬರವಿಲ್ಲ, ಹೊಲಸಿಲ್ಲ, ಭಾಷೆಯ ಅಪಭ್ರಂಶಗಳಿಲ್ಲ! ಈಗಲೂ ಆಕಾಶವಾಣಿಯಲ್ಲಿ ಮಾತನಾಡುವವರು ಸ್ಪಷ್ಟ ಭಾಷೆಯನ್ನು ಬಳಸುವುದು ಹೆಮ್ಮೆಯ ವಿಷಯ. ರೋಡಿಯೋ ಸಿಟಿ, ಮಿರ್ಚಿ, ಎಸ್ಸೆಫ್ಫೆಮ್, ರೇಡಿಯೋ ಒನ್ - ಈ ರೀತಿ ಹೆಸರುಗಳೆಲ್ಲಿ, "ಆಕಾಶವಾಣಿ" ಎಂಬ ಚೆಂದದ ಹೆಸರೆಲ್ಲಿ? ಹೆಸರಿನಲ್ಲೇ ಸೌಮ್ಯತೆ, ಶುದ್ಧತೆ ಅಡಗಿಲ್ಲವೇ?

ಬೆಳಗಾಗೆದ್ದರೆ ಆಕಾಶವಾಣಿಯ ಶಿವರಂಜಿನಿ ರಾಗವು ಮನೆಯಲ್ಲಿ ಅಲಾರಂ ಆಗಿತ್ತು. ಅದಾದ ನಂತರ "ವಂದೇ ಮಾತರಂ". ತದನಂತರ ಸಂಸ್ಕೃತದಲ್ಲಿ ವಾರ್ತೆ! ಮಧ್ಯೇ ಮಧ್ಯೇ ಜಾಹೀರಾತುಗಳು.. ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ... ಆಹ್!! ಎಂಥಾ ಮಧುರ ನೆನಪುಗಳನ್ನು ಕೊಟ್ಟಿವೆ ಆಕಾಶವಾಣಿಯು! ಮಧುರ ಸಂಗೀತವನ್ನು ಬಿತ್ತರಿಸುತ್ತಾ ಬಂದಿದೆ. ರೇಡಿಯೋ ಕೆಳುತ್ತಲೇ ಬೆಳೆದವನು ನಾನು. ನನ್ನಿಂದ ಒಂದು ಶುಭಾಶಯ ಆಕಾಶವಾಣಿಗೆ!! ಇನ್ನೈವತ್ತು ವರ್ಷ ಆದಮೇಲೆ, ಬದುಕಿದ್ದರೆ ಮತ್ತೆ ಶುಭಾಶಯ ಬರೀತೀನಿ.

-ಅ
24.11.2007
9PM

Thursday, November 22, 2007

ಗಂಡಭೇರುಂಡನ ಬ್ಲಾಗು..

ನೆನ್ನೆ 'ಕ್ಷಿತಿಜದೆಡೆಗೆ'ಗೆ ಒಂದು ವರ್ಷ ತುಂಬಿತೆಂದು ಶುಭಾಶಯಗಳನ್ನು ಬರೆದುಕೊಂಡುಬಿಟ್ಟೆ. ಆ ಕಥೆ ಹಾಗಿರಲಿ. ಅದರಲ್ಲಿ ಒಂದು ಕಮೆಂಟು ಮಿತ್ರ ಶ್ರೀನಿವಾಸನದು ಇರಲೇ ಬೇಕಲ್ಲವೇ? ಇತ್ತು. ಅವನ ಕಮೆಂಟು ಓದಿದ ತಕ್ಷಣ ನೆನಪಾಯಿತು, ಅದೇ ದಿನ ಶ್ರೀನಿವಾಸನ ಬ್ಲಾಗಿಗೂ ಒಂದು ವರ್ಷ ಆಯಿತು ಅಂತ. ಶ್ರೀನಿವಾಸನೇ ಗಂಡಭೇರುಂಡನೆಂದು ಕರೆದುಕೊಂಡವನೆಂದು ನಮಗೆಲ್ಲ ಗೊತ್ತಿರೋದೇ.


ಅವನ ಮೊದಲ ಬ್ಲಾಗ್ ಬರಹವನ್ನೋದಿದೆ ಪುನಃ - ಖುಷಿಯಾಯಿತು - ತನ್ನ ಉದ್ದಿಶ್ಯವನ್ನು ಸ್ಪಷ್ಟವಾಗಿ ಬರೆದಿದ್ದನ್ನು ನೋಡಿ, ನನ್ನ ಕಮೆಂಟನ್ನು ಓದಿ. ಓಹ್, ನಾನೂ ಕವಿತೆಯ ರೂಪದಲ್ಲಿ ಏನೋ ಬರೆದಿದ್ದೀನಿ ಅಂತ ಓದಿ ಸಂತಸ ಆಯಿತು. ಎರಡನೆಯದನ್ನು ಓದಿ ಮತ್ತಷ್ಟು ಸಂತಸ ಆಯಿತು. ಅವನೇ ನನ್ನ ಹೆಸರನ್ನು ಬರೆದಿದ್ದಾನೆ - "Why Gandabherunda of all?" ಅನ್ನೋ ಶೀರ್ಷಿಕೆ ಕೊಟ್ಟು!! http://gandabherunda.blogspot.com/2006/11/why-ganda-bherunda-of-all.html

'ಕ್ಷಿತಿಜದೆಡೆಗೆ' ಮತ್ತು 'ಗಂಡಭೇರುಂಡ' ಎರಡೂ ನವೆಂಬರ್ ಇಪ್ಪತ್ತೆರಡೇ ಬ್ಲಾಗರ್‍ ಡಾಟ್ ಕಾಮ್‍ಗೆ ಕಾಲಿಟ್ಟಿದ್ದು. ಅಂದಿನಿಂದ ಇಂದಿನವರೆಗೂ ಶ್ರೀನಿವಾಸ ಕಲಿತಿದ್ದನ್ನು ಮೌನವಾಗಿ ಬರೆಯುತ್ತ ಮತ್ತಷ್ಟು ಕಲಿಯುತ್ತ ಬೆಳೆಯುತ್ತಿದ್ದಾನೆ. ಅವನ ಬಗ್ಗೆ ಸಂತಸಕ್ಕಿಂತ ಹೆಚ್ಚಾಗಿ ಹೆಮ್ಮೆಯಿದೆ. ನನ್ನ ಬಗ್ಗೆ ಅದಕ್ಕಿಂತಲೂ ಹೆಮ್ಮೆ ಇದೆ, ಶ್ರೀನಿವಾಸನು ನನ್ನ ಗೆಳೆಯ ಎಂದು!ಬರವಣಿಗೆಯೆಂಬ ವಿಧಿಯು ನಮ್ಮಿಬ್ಬರನ್ನು ಪರಸ್ಪರ ಪರಿಚಯಿಸಿತು, ಮೈತ್ರಿಯ ಹೂವನ್ನರಳಿಸಿತು. ಆ ಮೈತ್ರಿಯೆಂಬ ವಿಧಿಯು ಬರವಣಿಗೆಯೆಂಬ ಮರವನ್ನು ಬೆಳೆಸುತ್ತಿದೆ. ಇವನಿಂದ ಕಲಿತದ್ದು ಸಾವಿರವಿದೆ, ಕಲಿಯಬೇಕಾದ್ದು ಲಕ್ಷವಿದೆಯೆಂದೆನಿಸುತ್ತಿರುತ್ತೆ. ಕಲಿತು, ಕಲಿಸುವ ಗುಣ ಇವನ ಬರವಣಿಗೆಯ ಮೇಲೆ ಮತ್ತು ಬೆಳವಣಿಗೆಯ ಮೇಲೆ ಒಳ್ಳೆಯ ಪ್ರಭಾವ ಬೀರಿದೆ.

ಬ್ಲಾಗಿಗೆ ವರ್ಷ ತುಂಬಿದ ಸಂದರ್ಭದಲ್ಲಿ ನಿನಗೆ ನಾನು ಹೇಳೋದು - All the best, ಶ್ರೀನಿವಾಸ.

ನಿನಗೆ ಹೇಳಿದ್ದಾಯ್ತು. ನನಗೆ ಒಂದನ್ನು ಹೇಳಿಕೊಳ್ಳಬೇಕು. ವರ್ಷವಾಯಿತು ಅಂತ 'ಕ್ಷಿತಿಜದೆಡೆಗೆ'ಯಲ್ಲಿ ಬರೆದುಕೊಂಡೆ. ಆದರೆ ಈ ನನ್ನ ಬರಹ ನನಗೆ ಮನವರಿಕೆ ಮಾಡಿಕೊಟ್ಟಿದೆ - ತುಂಬಿದ ಕೊಡ ತುಳುಕುವುದಿಲ್ಲ ಅನ್ನೋದು.

-ಅ
23.11.2007
10PM

Wednesday, November 21, 2007

ಪ್ರೀತಿಯ ಬಾಳು

ಜನಿಸಿದಂದು ನೀತಿ ಮೀರಿ
ಮಾತು ಕಣ್ಣಲಿ ಮೌನ ತುಟಿಯಲಿ
ಬನಕೆ ಹೊರಟ ಹಕ್ಕಿಯಂತೆ ಎದೆಗೆ ಹೊರಟ ಪ್ರೀತಿಯು
ಗುರಿಯು ಗರಿಯ ತೆರೆಯಲೆಂದು
ಮೀರಿ ಸಕಲ ನೀತಿ-ಭೀತಿಯು!

ಮಾತು ಮಾತು
ಅದಕೆ ಸೋತು
ಒಲುಮೆಯೊಸಗೆಯೆಮ್ಮ ಧಾತು
ತುಟಿಯು ಬಿಗಿಯದು ಕಣ್ಣು ಬಾಡದು
ಸುಳಿಯದೆಂದೂ ವಿರಸದ ಕೇತು.

ಬಾಳ್ವೆ ಪ್ರೀತಿಯದೆದೆಯಲಿ ಮೌನದಂಬುಗಳ
ಕಣ್ಚಿತ್ರಚಾಪದಿಂದ ಕಣ್ಣೆದೆಗಪ್ಪಳಿಸುತಿರೆ
ಮೌನದೊಸಗೆಯಿಂದ ಬದುಕು ನಲವು, ಕನಸು ಹಲವು
ಥಳಿಸುವ ಚಕ್ಷುಗಳಲಿ ಪ್ರಣಯದೊಲವು
ಪ್ರಣಯದಲೆಂದಿಗೂ ಮೌನವೇ ಚೆಲುವು!

ಪ್ರೀತಿ ಮಸಣದ ಪಯಣಕೆ ಹೊರಟಾಗ
ಮಾತೂ ಸಾಯ್ವುದು ಮೌನವೂ ಸಾಯ್ವುದು
ಮಸಣದ ಶವಗಳ ಮೇಲೆ ಮತ್ತೆ ಮೌನ ಮಾತುಗಳೆಂಬ
ಹಸುರು ಗಿಡವೊಂದುಸುರುವುದೋ?
ಸಂಶಯದ ವಿರಹದೊಲವಿನ ನೆಲವು ಕಾಯ್ವುದು.

-ಅ
21.11.2007
10.40PM

Sunday, November 18, 2007

ಹಾಡುಗಳು.. ಅಂದು - ಇಂದುಯಾವುದು ಚೆನ್ನಾಗಿದೆ ಯಾವುದು ಚೆನ್ನಾಗಿಲ್ಲ ಅನ್ನೋ ಪ್ರಶ್ನೆ ಅರ್ಥಹೀನ.. ಒಂದಷ್ಟು ಹಾಡುಗಳು ಇಲ್ಲಿವೆ..

ಅಂದು:
ಕನ್ನಡನಾಡಿನ ವೀರರಮಣಿಯ
ಗಂಡು ಭೂಮಿಯ ವೀರನಾಡಿನ
ಚರಿತೆಯ ನಾನು ಹಾಡುವೆ..

ಇಂದು:
ಧೂಳ್ ಮಗ ಧೂಳ್
ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ಲು ಮಗ ದಿಲ್
ದಿನಕ್ ದಿನಕ್ ದಿಲ್
ಮೀಟರ್ ಇಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ..

ಇಂದು ಇಂದಿನ ಚರಿತೆ! ಚಿತ್ರದುರ್ಗದ ಬದಲು ಕಲಾಸಿಪಾಳ್ಯ ಅಷ್ಟೇ..

ಅಂದು:
ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ.. ಮರೆವೆ ಈ ಸಂಚು..

ಕ್ಯಾಬೆರೇ ಹಾಡಲ್ಲೂ ಶೃಂಗಾರ!!

ಇಂದು:
ಕುಲುಕ ಬೇಡ ಕುಲುಕ ಬೇಡ ಸಿಲ್ಕು
ನೀನ್ ಕುಲ್ಕೋಕ್ ಮುಂಚೆ ಯಾಕಂಥ್ ಹೇಳಿ ಕುಲ್ಕು
ಬಳುಕ ಬೇಡ ಬಳುಕ ಬೇಡ ಸಿಲ್ಕು
ನೀನ್ ಎಲ್ಲಿಂದ್ ಬಂದೆ ಹೇಳ್ಬಿಟ್ ಹೋಗಿ ಬಳ್ಕು..

ಕುಲುಕೋಕೆ, ಬಳುಕೋಕೆ ಕಾರಣ ಬೇರೆ ಕೊಡಬೇಕಂತೆ..

ಅಂದು:
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೋ ಏನೋ ನನ್ನ ಮನದ ಗುಡಿಯಲಿ..

ರೂಪಕಾಲಂಕಾರ ಎಟ್ ಇಟ್ಸ್ ಬೆಸ್ಟ್..

ಇಂದು:
ಹಾರ್ಟ್ ಅನ್ನೋ ಅಡ್ಡಾದಲ್ಲಿ
ಲವ್ ಅನ್ನೋ ಲಾಂಗು ಹಿಡಿದು
ನನ್ನನ್ ಅಟಾಕ್ ಮಾಡೋ ಶಿವ ಶಿವಾ..

ಉಪಮಾಲಂಕಾರ ಎಟ್ ಇಟ್ಸ್ ವರ್ಸ್ಟ್..

ಅಂದು:
ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ ಕಂಡೆ ಪ್ರೇಮ ದೀಪ..
ನಿನ್ನ ತುಂಟ ಹೂ ನಗೆಯಲ್ಲಿ ಏನೋ ಏನೋ ಭಾವ
ನಗೆಯು ತಂದ ಮೋಡಿಯಲ್ಲಿ ನಲಿಯಿತೆನ್ನ ಜೀವ..

ಹೆಣ್ಣಿನ ಕಣ್ಣು ಏನೇನೆಲ್ಲಾ ಆಗಬಹುದು, ಏನೇನೆಲ್ಲಾ ಮಾಡಬಹುದು? ಪ್ರೇಮದ ದೀಪವನ್ನೇ ಬೆಳಗುತ್ತೆ!!

ಇಂದು:
ನಿನ್ನ ಕಣ್ಣು ಕುಂಬ್ಳೆ ಸ್ಪಿನ್ನು
ಕ್ಲೀನು ಬೋಲ್ಡ್ ಆದೆ ನಾ
ನಿಂಗೆ ಔಟ್ ಆದೆ ನಾ..

ಹೆಣ್ಣಿನ ಕಣ್ಣನ್ನು ಹೀಗೂ ಹೋಲಿಸಬಹುದು ಅಂತ ನಮ್ಮ ಕವಿಗಳಿಗೆ ಗೊತ್ತೇ ಇರಲಿಲ್ಲ..

ಅಂದು:
ಇವಳು ಯಾರು ಬಲ್ಲೆಯೇನು?
ಇವಳ ಹೆಸರ ಹೇಳಲೇನು?
ಇವಳ ದನಿಗೆ ತಿರುಗಲೇನು?
ಇವಳು ಏತಕೋ ಬಂದು ನನ್ನ ಸೆಳೆದಳು..

ಪ್ರೇಮಕವಿ ನರಸಿಂಹಸ್ವಾಮಿ ಬರೆದ ಸಾಲುಗಳು..

ಇಂದು:
ಹೇ ಹೇ.. ಹೋ ಹೋ..
ಏನಾಯ್ತೋ ನಿಂಗೆ..
ಹೇ ಹೇ.. ಹೋ ಹೋ..
ಯಾಕಿಂಗ್ ಆಡ್ತೀಯೋ..
ಟಟ್ಟಾಡಡಾಔಡಾಔ ಟಟ್ಟಾಡಡಾಔಡಾಔ
ಟಟ್ಟಾಡಡಾಔಡಾಔ ಹಂಗದಂದ್ರೇನೋ?
ಟಟ್ಟಾಡಡಾಔಡಾಔ ಜಾರಿಬಿದ್ದೆ ನಾನು
ಪ್ರೀತಿಯಲ್ಲಿ..

ಪ್ರೇಮದ ಬಗ್ಗೆಯೇ ಚಿತ್ರ ಮಾಡುವ ರವಿ ಅಂಕಲ್ ಬರೆದ ಹಾಡು..ಅಂದು:
ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗಶಯನ ಪಾವನಚರಣ
ನಂಬಿಹೆ ನಿನ್ನ..

ನಮಗೆ ಯಾರ ರಕ್ಷೆ ಬೇಕು ಅಂತ ಜನಕ್ಕೆ ಗೊತ್ತಿತ್ತು..

ಇಂದು:
ಬಿನ್ ಲ್ಯಾಡೆನ್ನು ನನ್ ಮಾವ..
ಬಿಲ್ ಕ್ಲಿಂಟನ್ನು ನನ್ ಭಾವ..
ನಮ್ಮಪ್ಪ ಲಾಲೂ ಮುಟ್ಟಿದ್ರೆ ಡೀಲು
ಕೈಕಾಲ್ ಕಟ್ಟಿ ಮೂಟೆ ಕಟ್‍ತಾರೋ..

ಇವರಿಗೂ ಗೊತ್ತು ಯಾರ ರಕ್ಷೆ ಬೇಕು ಅಂತ..

ಅಂದು:
ಬಾನಲ್ಲೂ ನೀನೇ ಬುವಿಯಲ್ಲೂ ನೀನೇ
ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ...

ನಲ್ಲನನ್ನು ಕಾಣದೆಡೆಯೇ ಇಲ್ಲ ನಲ್ಲೆ..

ಇಂದು:
ಬಾರೋ ಬಾರೋ
ಹೀರೋ ಹೀರೋ..
ಕಾಫಿಲೂ ಟೀವಿಲೂ ಕಾದಂಬ್ರಿ ಸ್ಟೋರೀಲೂ ನೀನೇ
ವಾಕಲ್ಲೂ ಟಾಕಲ್ಲೂ ಸ್ಮೋಕಿಂಗು ಸ್ಮೋಕಲ್ಲೂ ನೀನೇ..

ಆಗ ನಲ್ಲೆ ಸಿಗರೇಟು ಸೇದುತ್ತಿರಲಿಲ್ಲ.. ಈಗ ಸೇದ್ತಾಳೆ ಅನ್ಸುತ್ತೆ..

ಅಂದು:
ಸೋಲನೆಂದು ಕಾಣದಂಥ ವೀರಪಾರ್ಥನು
ನಿನ್ನ ಕಣ್ಣ ಬಾಣದಿಂದ ಸೋತುಹೋದನು..

ನಾನು ವೀರನೆಂಬ ಭಾವನೆ ಪ್ರಣಯದೊಂದಿಗೆ ಬೆರೆಸೋದು ಹೇಗೆ? ನಾಯಕ ಹೀಗೆ ಹೇಳುತ್ತಿರಲು ನಾಯಕಿ ನಾಚುತ್ತಾಳೆ.. ಹುಣಸೂರರಿಗಿಂತ ಚೆನ್ನಾಗಿ ಬರೆಯಲು ಸಾಧ್ಯವೇ?

ಇಂದು:
ಅವನು: ಅಡ್ಡದಲ್ಲಿ ಕಿಂಗು ನಾನು ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ
ಅವಳು: ಬಾಯಿ ಬಿಟ್ಟು ಯಾಕೆ ಹಿಂಗೆ ಹೇಳ್ತೀರಿ
ಡೌವ್ವು ಮಾಡ್ದೆ ಲವ್ವು ಮಾಡ್ರೀ ಡೌಟ್ ಯಾಕ್ರೀ..

ವೀರಕನ್ನಡಿಗ "ಮುಚ್ಕೊಂಡ್ ಲವ್ ಮಾಡ್ರೀ.." ಅಂತ ಅವಳ ಕೈಲಿ ಬೈಸ್ಕೊಂಡ ಇಲ್ಲಿ.

ಅಂದು:
ಚಂದ್ರ ಮಂಚಕೆ ಬಾ ಚಕೋರಿ
ಚಂದ್ರ ಮಂಚಕೆ ಬಾ
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ ಚಕೋರಿ..

ಕುವೆಂಪು ಸಾಹಿತ್ಯ. ಚುಂಬಿಸುವ ಹಂಬಲ, ಪ್ರಣಯದ ಕಾತುರತೆ, ಪ್ರೇಮವು ಕಾಮವೂ ಚಿಲುಮೆಯಂತೆ ಉಕ್ಕಿಬರುತ್ತಿರಲು ಸೊಗಸಾದ ರೋಮಾಂಚಕಾರಿ ಸಾಹಿತ್ಯವೂ ಹೊರಬಂದಿತು ಅವರ ಲೇಖನಿಯಿಂದ..

ಇಂದು:
ನಖ್‍ರಾ ಗಿಖ್‍ರಾ ಬ್ಯಾಡ
ಡವ್ವು ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಪೋಸು..
ಕೊಡೇ ಕಿಸ್ಸು.. ಲೇ.. ಕೊಡೇ ಕಿಸ್ಸು..

ಕಿಸ್ ಮಾಡೋದ್ರಲ್ಲೂ ದಬ್ಬಾಳಿಕೆಯೇ?

ಅಂದು:
ಜೇನಿನ ಹೊಳೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿನುಡಿಯೋ..

ಜೈ ಕರ್ನಾಟಕ ಮಾತೆ! ಕನ್ನಡದ ಬಾವುಟ ಮೇಲಕ್ಕೆ ಹಾರುತ್ತಿದೆ..

ಇಂದು:
ಸಿಂಪಲ್ಲಾಗ್ ಹೇಳ್ತೀನ್ ಕೇಳೇ ನಮ್ಮೂರ ಭಾಷೆ
ದಿಲ್ಲಿಗೂ ಬೇಕು ನಮ್ಮ ಕನ್ನಡ ಭಾಷೆ..

ಕನ್ನಡದ ಕಂಬಕ್ಕೆ ಇಂಗ್ಲೀಷ್ ಬಾವುಟ ಹಾರಿಸಿದ್ದಾರಲ್ಲಾ..

ಅಂದು:
ಮಿಂಚಂತೆ ಸುಳಿದು ನೀನು ಮರೆಯಾಗಿ ಹೋದರೇನು
ಸುಳಿವನ್ನು ತಿಳಿಯಬಲ್ಲ ಹೊಸಮೋಡಿ ಬಲ್ಲೆ ನಾನು
ಬಾಳಲ್ಲಿ ಬಿಡಿಸದಂಥ ಎಂದೆಂದೂ ಮುರಿಯದಂಥ
ಬಂಧನದಿ ಹಿಡಿವೆ ನಿನ್ನ..

ನಲ್ಲೆಯನ್ನು ಬಂಧನದಲ್ಲಿರಿಸಿಕೊಳುವೆನೆಂದು ಹೇಳಲು ಏನೆಲ್ಲಾ ಸರ್ಕಸ್ಸು...

ಇಂದು:
ರಾತ್ರಿಯೆಲ್ಲಾ ಸ್ವರ್ಗದಲಿ ತಿನಿಸಿದೆ ವೀಳ್ಯ
ನಾ ಬೆಳಗೆದ್ದು ಕಣ್ಬಿಟ್ರೆ ಕಲಾಸಿಪಾಳ್ಯ..

ರಾತ್ರಿಗೂ, ವೀಳ್ಯಕ್ಕೂ ಕಲಾಸಿಪಾಳ್ಯಕ್ಕೂ ಏನು ಸಂಬಂಧ??

ಅಂದು:
ಸಿಗಿವೆಂ ಕ್ಷಣದಲಿ ನಿನ್ನ ನಾಂ
ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ
ಮದೋನ್ಮತ್ತ ದುರುಳ ದುಷ್ಟ ಧೂರ್ತನೇ..

ಗತ್ತು ಗಮ್ಮತ್ತು ಬರೀ ಸಾಹಿತ್ಯದಲ್ಲಿಲ್ಲ, ಹಾಡನ್ನು ನೋಡಬೇಕು, ಕೇಳಬೇಕು.. ಮೈ ಜುಂ ಅನ್ನೋದಂತೂ ಸತ್ಯ..

ಇಂದು:
ಹೊಡಿ ಮಗ ಹೊಡಿ ಮಗ ಬಿಡಬೇಡ ಅವ್‍ನ್ನಾ..

ಮೈ ಜುಂ ಅನ್ನಲ್ಲ, ತಲೆ ದಿಂ ಅನ್ನುತ್ತೆ..ಅಂದು:
ನೀನ್ ಯಾರೋ ತಿಳಿಯದಿದ್ದರೂ
ನನಗೆ ನೀ ರಾಧೆ
ಕಲ್ಲಾಗಿ ನಾನು ನಿಂತರೂ
ಕರಗಿ ನೀರಾದೆ..

ಇಡೀ ಕನ್ನಡ ಚಿತ್ರರಂಗದಲ್ಲಿ ಬಹುಶಃ ಹಂಸಲೇಖರಷ್ಟು ರೊಮ್ಯಾಂಟಿಕ್ ಲಿರಿಸಿಸ್ಟ್ ಇನ್ನೊಬ್ಬರಿಲ್ಲ ಅನ್ನಿಸುತ್ತೆ..

ಇಂದು:
ಪ್ರೀತಿಯೇಕೆ ಭೂಮಿ ಮೇಲಿದೆ?
ಬೇರೆ ಎಲ್ಲೂ ಜಾಗವಿಲ್ಲದೆ!!
ನನ್ನೇ ಏಕೆ ಪ್ರೀತಿ ಮಾಡಿದೆ?
ನಿನ್ನ ಹಾಗೆ ಯಾರೂ ಇಲ್ಲದೆ!!

ಎಂಥಾ ಪ್ರಶ್ನೆಗೆ ಎಂಥಾ ಉತ್ತರ!!

ಅಂದು:
ದಿನಕೊಂದು ಬಣ್ಣ ಕ್ಷಣಕೊಂದು ಬಣ್ಣ
ಏನೇನೋ ವೇಷ ಮಾತಲ್ಲಿ ಮೋಸ
ಆ ಮಾತನೆಲ್ಲಾ ನಿಜವೆಂದು ನಂಬಿ
ಮನದಾಸೆಯೇ ಮಣ್ಣಾಯಿತೇ..
ಮನನೆಮ್ಮದಿ ದೂರಾಯಿತೇ..

ನಂಬಿದ ನಲ್ಲೆ ಮೋಸ ಮಾಡಿ ಹೋದಾಗ ಆಗುವ ದುಃಖ ಹೀಗೇ ಇರುತ್ತೆ ಅನ್ನೋದು ಮೋಸಕ್ಕೊಳಗಾದ ಹುಡುಗರಿಗೆ ಮಾತ್ರ ಅರ್ಥ ಆಗುತ್ತೆ.

ಇಂದು:
ಪ್ರೇಮ ಕನಸಾಯ್ತಲ್ಲಾ.. ಬಣ್ಣ ಮಾಸಿ ಹೋಯ್ತಲ್ಲಾ
ಮೋಸ ಮಾಡೋಕೆ ನಿಂಗೆ ಬೇರೆ ಯಾರೂ ಸಿಗ್ಲಿಲ್ವಾ?
ಏಕಾಂಗಿ ನಾನಮ್ಮ..

ಬೇರೆ ಯಾರಿಗಾದರೂ ಮೋಸ ಮಾಡಿದ್ದಿದ್ದರೆ ಪರವಾಗಿಲ್ಲ, ತನಗೆ ಮೋಸ ಆಗಬಾರದು ಅಷ್ಟೇ..

ಅಂದು:
ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ..

ಒಲವಿಗೆ ಕೊಟ್ಟ ಅತ್ಯಂತ ಉನ್ನತ ಮಟ್ಟದ ದೆಫನಿಷನ್ನು ಇದು..

ಇಂದು:
ಒಲವೇ ವಿಸ್ಮಯ.. ಒಲವೇ ವಿಸ್ಮಯ..

ತನಗೆ ಸಿಗಲು ಅರ್ಹತೆಯಿರದಿದ್ದರೂ ಹೇಗೋ ಸಿಕ್ಬಿಟಿದೆ ಅನ್ಸುತ್ತೆ.. ಅದಕ್ಕೆ ವಿಸ್ಮಯ ಆಗೋಗಿದೆ.. ಓಹ್ ಒಲವು ಸಿಕ್ಕಿದೆ ಅಂತ!!

ಅಂದು:
ಮನವೇ ಮಂದಿರ ನ್ಯಾಯ ದೇಗುಲ
ಚೆಲುವೇ ದೇವರು ಒಲವೇ ದೀವಿಗೆ..

ಒಂದೊಂದೂ ಒಂದೊಂದನ್ನು ಸೂಚಿಸುತ್ತಲ್ಲವೇ??

ಇಂದು:
ಮನಸೇ ಓ ಮನಸೇ.. ಎಂಥಾ ಮನಸೇ..
ಒಳ ಮನಸೇ.. ಹೊರ ಮನಸೇ..
ಮನಸಿನಿಂದ ಮನಸಿನೊಳಗೆ ಮನಸಿನಾಚೆ....

ಈ ಕವಿ 'ಮನಸು' ಅನ್ನೋ ಪದ ಬಿಟ್ಟು ಆಚೆ ಬಂದೇ ಇಲ್ಲ, ಮನಸ್ಸಿನಲ್ಲೇ ಕಳೆದು ಹೋಗಿದ್ದಾರೆ.. ಎಲ್ಲರಿಗೂ ಕನ್ಫ್ಯೂಸು..

ಅಂದು:
ವಿರಹಾಗ್ನಿ ನಿನ್ನೆದೆ ಸುಡಲು
ಬೆಳದಿಂಗಳಾಯಿತು ಬಿಸಿಲು..

ಪ್ರಣಯದಲ್ಲಿ ಒಡಲಿನ ಮಧುವನ್ನು ಸವಿದ ರಸಿಕ ಹಾಡುವ ಬಗೆಯನ್ನು ಸೂಚಿಸುವುದಿಲ್ಲವೇ?

ಇಂದು:
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾನ್ ನೋಡ್ದೆ..
ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ಮಾಡ್ಬಾರ್ದನ್ನ ನಾನ್ ಮಾಡ್ದೆ!!

ನೋಡಿದ್ದೇ ಉಂಟಂತೆ, ಮಾಡಿದ್ದೇ ಉಂಟಂತೆ.. ನೋಡ್ಬಾರ್ದು ಮಾಡ್ಬಾರ್ದು ಅಂದ್ರೆ ಅದರಲ್ಲಿ ರಸಿಕತೆ ಏನ್ ಬಂತು? ನಾಯಕ ನಾಯಕಿಯರು ಏನ್ ಏನ್ ನೋಡಿದಾರೋ ಏನ್ ಏನ್ ಮಾಡಿದಾರೋ ಅದು ಅವರಿಗೇನೇ ಅಸಹ್ಯ ಆಗೋಗಿ ನೋಡ್ಬಾರ್ದು ಮಾಡ್ಬಾರ್ದು ಅಂತಿದ್ದಾರಲ್ಲಾ??

ಅಂದು:
ನಿನ್ನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯು ತುಂಬಿದೆ ನನ್ನಲಿ.. ನನ್ನಲಿ...

ನಲ್ಲೆಯನ್ನು ನೋಡುವ ತವಕ.. ಕಾತುರತೆ..


ಇಂದು:
ಆಕಳಿಕೆ ಬಂದಾಗ ಜಸ್ಟ್ ಸೇ ಹೈ
ತೂಕಡಿಕೆ ಬಂದಾಗ ಜಸ್ಟ್ ಸೇ ಹೈ
ಬಿಕ್ಕಳಿಕೆ ಬಂದಾಗ ಜಸ್ಟ್ ಸೇ ಹೈ..

ಇದಕ್ಕಿಂತ ಕಳಪೆ ಸಾಹಿತ್ಯ (ಸಾಹಿತ್ಯ ಅನ್ನೋ ಪದ ತುಂಬಾ ದೊಡ್ಡದು ಈ ಸಾಲುಗಳಿಗೆ) ನಾನು ನೋಡೇ ಇಲ್ಲ. ಆಕಳಿಕೆ ತೂಕಡಿಕೆ ಬಿಕ್ಕಳಿಕೆ ಬಂದಾಗ ಹೈ ಅನ್ಬೇಕಂತೆ! ನಿಜ ಹೇಳ್ಬೇಕು ಅಂದ್ರೆ "ಹಾಯ್" ಅನ್ನುವ ಹಾಗೆ ಆಗುತ್ತೆ - ಹೊಟ್ಟೆ ಕೆಟ್ಟು ತಡೆದಿಟ್ಟುಕೊಂಡು ತುಂಬಾ ಹೊತ್ತಾದ ಮೇಲೆ ಅಪಾನವಾಯು ಬಂದರೆ!! ಅದನ್ನು ಸೇರಿಸಿಲ್ಲ ಈ ಹಾಡಿನಲ್ಲಿ ಪುಣ್ಯ!!ಹಳೆಯ ಹಾಡೆಲ್ಲಾ ಚೆನ್ನಾಗಿತ್ತು ಈಗ ಬರುವ ಹಾಡೆಲ್ಲಾ ಗಬ್ಬು ಅಂತ ನಾನು ಹೇಳುತ್ತಿಲ್ಲ. ಈಗಲೂ ಅದ್ಭುತ ಸಾಹಿತ್ಯ ಸಂಗೀತ ರಚನೆ ನಡೆಯುತ್ತಿದೆ. ಇತ್ತೀಚೆಗೆ ಕನ್ನಡ ಚಿತ್ರಗಳು ಸಂಗೀತ-ಸಾಹಿತ್ಯದ ಸಲುವಾಗೇ ಓಡುತ್ತಿವೆ ಕಥೆ ಸುಮಾರಾಗಿ ಇದ್ದರೂ! ಅವರೆಲ್ಲರಿಗೂ ಶುಭವಾಗಲಿ. ಕಳಪೆ ಸಾಹಿತ್ಯ ದೂರವಾಗಲಿ ಚಿತ್ರರಂಗದಿಂದ.. ಯಾರಿಗೂ ಇಷ್ಟ ಆಗಲ್ಲ ಕೆಟ್ಟ ಕೆಟ್ಟ ಸಾಹಿತ್ಯ ಇದ್ದರೆ!! ಚಿತ್ರಸಾಹಿತಿಗಳೇ, ನಿಮಗೂ ಇಷ್ಟ ಆಗಿರಲ್ಲ, ಆದರೂ ಯಾಕೆ ಬರೀತೀರ ಹೀಗೆಲ್ಲಾ?

-ಅ
18.11.2007
6AM

Saturday, November 17, 2007

ಸುಸ್ವಾಗತ..

ಕನ್ನಡ ಭಾಷೆಯಲ್ಲಿ ಎಷ್ಟು ಸ್ವಾತಂತ್ರ್ಯ ಇದೆ ಎಂದರೆ ಅನ್ಯಭಾಷೆಯ ಪದಗಳನ್ನು ಬಹಳ ಸಲೀಸಾಗಿ ಸ್ವೀಕರಿಸುತ್ತೆ. ಒಂದೇ ಒಂದು ಅಕ್ಷರವನ್ನು ಬದಲಿಸಿದರೆ ಸಾಕು ಇಂಗ್ಲೀಷು ಕನ್ನಡ ಆಗಿಬಿಡುತ್ತೆ.

ಟೇಬಲ್ಲು, ಚೇರು, ಸೀಟು, ಬಸ್ಸು.. ಹೀಗೆ.. ಸಕ್ಕತ್ ಅಲ್ವಾ? ಭಾಷೆ ಬೆಳೆಯೋದೇ ಹೀಗೆ. ಬೇರೆ ಭಾಷೆಗಳ ಜೊತೆ ಬೆರೆತು, ಅರ್ಥ ವ್ಯತ್ಯಾಸ ಆಗದ ಹಾಗೆ ಸ್ವಲ್ಪ ಅಕ್ಷರಗಳಲ್ಲಿ ಬದಲಿಸಿಕೊಂಡರೆ ಸ್ವಭಾಷೆಯಾದಾಗ ಮಾತ್ರ.

ಮೇಜು, ಸಾಬೂನು.. ಇಂಥಾ ಪದಗಳು ಪಾರ್ಸಿಯಿಂದ ಬಂದಿದ್ದು ಅಂತ ಎಲ್ಲರಿಗೂ ಗೊತ್ತಿರೋದೇ. ಒಂದು "ಉ" ಸಾಕು ಅದು ಕನ್ನಡ ಆಗೋಕೆ.

ಕೈಲಾಸಂ ನಾಟಕಗಳನ್ನು ಓದ್ತಾ ಇದ್ರೆ, ಅಥವಾ ಅವರ ಬರಹಗಳನ್ನು ಓದ್ತಾ ಇದ್ರೆ ಈ "ಉ" ಬಳಕೆ ಬಹಳ ಸೊಗಸಾಗಿ ಮನಮುಟ್ಟುತ್ತೆ.

--> "beer and bread-ಉ keeps the man healthy and good-ಉ.."

--> "shadow of my son-ಉ, on this earth-ಉ.. is called the eclipse of the earth-ಉ!"

ಈ ಥರದ ಲಕ್ಷ ಉದಾಹರಣೆ ಸಿಗುತ್ತೆ.

ಸಂಸ್ಕೃತ ಭಾಷೆ ಇದರಲ್ಲಿ ಅನುತ್ತೀರಣ ಆಗೋಯ್ತು. ಅದನ್ನು ಸಾಹಿತ್ಯ ಲೋಕದಲ್ಲಿ "ಮೃತಭಾಷೆ" ಎಂದು ಕರೆಯುತ್ತಾರೆ, ಕಾರಣವಿಷ್ಟೇ, ಬೇರೆ ಭಾಷೆಯೊಡನೆ ಅದು ಬೆರೆಯಲು ಒಪ್ಪದು. ಭಾರತೀಯ ಭಾಷೆಗಳ ತಾಯಿಯೆನಿಸಿಕೊಂಡ ಸಂಸ್ಕೃತವನ್ನು ಮಾತನಾಡುವವರಿಲ್ಲ. ಯಾಕೆಂದರೆ ಅದು ತನ್ನದೇ ಪರಿಧಿಯೊಳಗೆ ಅಡಗಿಕೊಂಡುಬಿಟ್ಟಿದೆ. ಬೇರೆ ಭಾಷೆಯೊಡನೆ ಬೆರೆಯಲು ಅದರ ರೂಲ್ಸು ರೆಗ್ಯುಲೇಷನ್ಸು ಒಪ್ಪೋದಿಲ್ಲ.

ಅವೆಲ್ಲಾ ಹಾಗಿರಲಿ. ಬೇರೆ ಭಾಷೆಯ ಪದಕ್ಕೆ "ಉ" ಸೇರಿಸಿದರೆ ಕನ್ನಡವಾಯಿತೆಂದು ನಾನು ಯೋಚಿಸುತ್ತಾ, ಇರೋ ಬರೋ ಇಂಗ್ಲೀಷು, ಪಾರ್ಸಿ, ಹಿಂದಿ, ಎಲ್ಲಕ್ಕೂ "ಉ" ಸೇರಿಸಿ ಪ್ರಯೋಗ ಮಾಡ್ತಾ ಇದ್ದೆ. ಬಸ್ ಅಲ್ಲಿ ಸ್ಕೂಲಿನಿಂದ ಮೆಜೆಸ್ಟಿಕ್ ವರೆಗೂ ಬರಬೇಕಲ್ಲಾ, ಬೋರು. ಏನ್ ಮಾಡೋದು! ಈ ಥರ ಸರ್ಕಸ್ ಮಾಡ್ತಾ ಇದ್ದೆ. ಪಕ್ಕದಲ್ಲಿ ಹೊಸದಾಗಿ ಶಾಲೆಗೆ ಬಂದಿದ್ದ ಕನ್ನಡ ಮೇಷ್ಟ್ರು ಕುಳಿತಿದ್ದರು.

ಶಾಲೆಯಲ್ಲಿ ಒಂದು ಪದ್ಧತಿ. ಎಲ್ಲಾ ಟೀಚರುಗಳು ಒಂದೊಂದು ದಿನ ಒಬ್ಬೊಬ್ಬರಂತೆ "assembly duty" ಅಂತ ಮಾಡಬೇಕು. ಅಂದರೆ, ಮಕ್ಕಳ ಕೈಲಿ ವಾರ್ತೆ ಓದಿಸೋದು, thought for the day ಓದಿಸೋದು, pledge ಹೇಳಿಸೋದು, ಐದೈದು quiz ಪ್ರಶ್ನೆಗಳನ್ನು ಕೇಳುವುದು ಹೀಗೆ. ಹೊಸತಾಗಿ ಬಂದ ಮೇಷ್ಟ್ರಿಗೆ ಇದನ್ನೆಲ್ಲಾ ವಿವರಿಸಿದೆ. ಅವರು ನನ್ನ ಹತ್ತಿರ confirm ಮಾಡಿಕೊಳ್ಳಲು, "ಸರ ಅಸೆಂಬ್ಲಿ ಡ್ಯೂಟಿ ಅಂದ್ರ, ಕ್ವಿಜ್ಜ, ಪ್ಲೆಜ್ಜ, ನ್ಯೂಸ ಇದೇನಾ?" ಅಂದ್ರು. ಆಗ ನನಗನ್ನಿಸಿದ್ದು, "ಓಹ್.. ಬರೀ "ಉ" ಸೇರಿಸಿದರೆ ಬೇರೆ ಭಾಷೆಯ ಪದ ತೊಗೋಬೋದು ಕನ್ನಡಕ್ಕೆ ಅನ್ನೋದು ಸುಳ್ಳು, ಈ ರೀತಿಯೂ ಸಾಧ್ಯ.." ಎಂದು ಬಿಜಾಪುರದ ಮೇಷ್ಟ್ರ ಕಡೆ ತಿರುಗಿ ನಕ್ಕು, "ಹೌದು, ಕ್ವಿಜ್ಜ - ಪ್ಲೆಜ್ಜ ನೇ!!" ಎಂದೆ.

- ಅ
17.11.2007
11.40PM

Tuesday, November 13, 2007

ಮಕ್ಕಳ ದಿನಾಚರಣೆ

J'adore les enfants.. et vous??

-ಅ
13.11.2007
8.45PM

Saturday, November 10, 2007

ದೀಪಾವಳಿ

ಬೆಳಕಿನ ಹಬ್ಬದ ಬಗ್ಗೆ ಬರೆಯದ ಕವಿಗಳೇ ಇಲ್ಲ, ಸಾಹಿತಿಯೇ ಇಲ್ಲ. ಅವರೆಲ್ಲಾ ಬರವಣಿಗೆಯ ದಾರಿಯಲ್ಲಿ ನಡೆದು ಹೋದ ಜಾಡನ್ನು ಹಿಡಿದೇ ನಾವೆಲ್ಲಾ ನಡೆಯಬೇಕೆನುವಷ್ಟು ಬರೆದಿದ್ದಾರೆ. ಆದರೂ ಹೊಸತು ಹೊಸತು ಮೂಡುತ್ತಲೇ ಇರುತ್ತೆಂಬುದು ಕನ್ನಡ ಸಾಹಿತ್ಯಕ್ಕೆ ಹೆಮ್ಮೆ ತರುವ ವಿಷಯ.

ಅಡಿಗರ ಈ ಸಾಲುಗಳನ್ನು ಯಾರು ತಾನೇ ಮರೆಯಲಾದೀತು?

ಇದೊ ಬಂತು ದೀಪಾವಳಿಯ ಹಬ್ಬವಿಂದು; ಹ
ಬ್ಬಿದೆ ನಾಡೊಳುತ್ಸವಂ; ದೀಪಾಳಿ ಬೆಳಗಿ ತೊಳ
ಗಿದೆ ದಿಗ್ದಿಗಂತವಂ; ಚೆದುರುತಿದೆ ತಿಮಿರವಗ್ಗಳಿಸುತಿದೆ ಜಗದ ಸೊಬಗು.
ಮುದಮಲ್ಲಿ ಮುದಮಿಲ್ಲಿ ತುಂಬಿತುಳುಕಿದೆ; ನಾಡಿ
ನೆದೆಯೊಳಾವುದೊ ನವ್ಯತೇಜಮುಗ್ಗಡಿಸುವಂ -
ತಿದೆ ಹಾಸಪರಿಹಾಸವಿಭ್ರಮವಿಲಾಸಂಗಳಿಂದೊಸಗೆ ಮಸುಗುತಿರಲು.


ದೀಪಾವಳಿ ಅನ್ನೋದು ಬರೀ ಪಟಾಕಿ ಹೊಡೆದು ಸಿಹಿ ತಿನ್ನುವ ಹಬ್ಬವಲ್ಲ. "ಹಾಸಪರಿಹಾಸವಿಭ್ರಮವಿಲಾಸ" ಗಳನ್ನು ಕೂಡಿ ಆನಂದದ ಶಿಖರವನ್ನು ತಲುಪಿಸುವ ಹಬ್ಬ. ಹಬ್ಬ ಅಂದರೇನೇ ಸಂತೋಷ ಅಂತ ಅರ್ಥ. ಹೃದಯದಲ್ಲಿ ಹೊಸ ಚೇತನವನ್ನು ತುಂಬುವ ಹಬ್ಬ. ಕತ್ತಲನ್ನು ಅಳಿಸಿಹಾಕುವ ಹಬ್ಬ.

ಆದರೆ..

ಇಂದದೇನೊಸಗೆ ಕನ್ನಡಕೆ? ಕನ್ನಡತಾಯ
ಬಂಧನಂ ಕಳೆದುದೇ? ಶೋಕವಡಗಿತೇ? ನಾಡ
ನೊಂದಿರ್ದ ಘೋರತಿಮಿರಂ ತೊಲಗಿತೇ? ನವ್ಯಜೀವನಂ ಸ್ಫುರಿಸುತಿಹುದೇ?
ಒಂದಾಗಿ ಕನ್ನಡಿಗರು ನಿಂದರೇ? ನಿಂದು ತರಿ
ಸಂದು ತಮ್ಮುದ್ಧಾರಕಾಗಿ ಹೋರಾಡುವರೆ?
ಹಂದೆಗಳ ತೆರದೊಳನಿತೊಂದನೆಸಗದೆ ವೃಥಾ ನಕ್ಕು ನಗೆಗೀಡಾಗರೇ?
ಒಂದಿರುಳಿನೊಸಗೆಯಿದು; ಬರಿಯ ಕಣ್ಮನಗಳಿಗೆ
ಹೊಂದಿ ಮರೆಯಾಗುವಾನಂದವಿದು; ಜೀವನದ
ಸಿಂಧುವಿನ ಮೇಲ್ಮೆಯ್ಯೊಳೊಗೆವ ತೆರೆ; ಮಿಂಚಿಮರೆಯಾಗುತಿರುವೊಂದು ಕನಸು
ಇಂದೆಮ್ಮ ಬಾಳು ಕಳ್ತಲೆಯ ಬಿಣ್ಪೊರೆಗೆ ಕಳೆ
ಗುಂದುತಿದೆ; ನಂದುತಿದೆ ಪೌರುಷಂ; ದೀನತೆಗೆ
ಸಂದುಹೋಗಿದೆ ಜೀವಮಿಂತಿರಲದೇನೊಸಗೆಯೋ ನಮ್ಮ ನಾಡಜನಕೆ?


ಕನ್ನಡದ ಜನತೆಗೆ ಎಷ್ಟೊಂದು ಪ್ರಶ್ನೆಗಳು! ನಾವು ನಿಜಕ್ಕೂ ಒಗ್ಗಟ್ಟಿನಿಂದ ಇದ್ದೇವಾ? ನಿಜಕ್ಕೂ ದೀಪಾವಳಿಯು ನಾಡಿನ ಕತ್ತಲನ್ನು ದೂರ ಮಾಡುತ್ತದೆಯೇ? ಕನ್ನಡಿಗರು ಕರ್ನಾಟಕವನ್ನು ಉದ್ಧಾರ ಮಾಡುವ ಪ್ರಯತ್ನ ಮಾಡುತ್ತಿದ್ದಾರಾ? ಹೇಡಿಗಳ ರೀತಿ ಒಂದು ಸಾಧನೆಯನ್ನೂ ಮಾಡದೆ, ಎಲ್ಲರನ್ನೂ ನೋಡಿ ನಕ್ಕು ನಾವೂ ನಗೆಗೆ ಈಡಾಗುತ್ತಿದ್ದೇವಾ?

ನಾವು ನಿಜಕ್ಕೂ ಸಂತೋಷ ಪಡುವಂಥ ಅರ್ಹತೆಯನ್ನು ಹೊಂದಿದ್ದೀವಾ ಅನ್ನೋದು ಒಂದು ಪ್ರಶ್ನೆಯಾಗಿದೆ. ವಾಸ್ತವವಾಗಿ ಸಂತೋಷ ಮತ್ತು ದುಃಖ ಪಡುವ ಅಧಿಕಾರ ಮನುಷ್ಯನಾಗಿ ಹುಟ್ಟಿದ ಎಲ್ಲವನಿಗೂ ಇದೆ. ಆದರೆ ನಾವು ಇಂದು ಸಂತೋಷ ಪಟ್ಟುಕೊಳ್ಳುವ ಕೆಲಸಗಳನ್ನು ಮಾಡಿದ್ದೇವಾ? ಈ ಸಂತೋಷ ನಮ್ಮ ನಾಡಿನಲ್ಲಿ ಸದಾ ಇರುತ್ತದೆಯೇ? ಇದು ಬರಿ ಒಂದಿರುಳಿನೊಸಗೆ, ಅಂದರೆ ದೀಪಾವಳಿ ಹಬ್ಬದ ಇರುಳಿನಲ್ಲಿ ಮಾತ್ರ ಸಂತಸ. ನಂತರ, ಮತ್ತೆ ಅದೇ ಜಂಜಾಟ, ಕಾವೇರಿ ಗಲಾಟೆ, ಆ ಗಲಾಟೆ - ಈ ಗಲಾಟೆ, ರಾಜಕೀಯ, ಟ್ರಾಫಿಕ್ಕು, ಮಾಲಿನ್ಯ, ಪರಭಾಷಾ ಹಾವಳಿ, ನಕ್ಸಲೀಯರ ಗಲಾಟೆ, ಅಂತ ನಾಡಿನ ತುಂಬಾ ಇಂಥಾ ಕಪ್ಪು ಸುದ್ದಿಗಳೇ. ಅಡಿಗರು ಹೇಳಿರುವಂತೆ ಬಾಳು ಕತ್ತಲೆಯ ಬಿಣ್ಪೊರೆಗೆ ಕಳೆಗುಂದುತಿದೆ, ನಂದುತಿದೆ ಪೌರುಷಂ - ಭಾಷೆ, ಭಾವ ಎಲ್ಲವೂ ನಮಗೆ ಇಂದು ಇಂಗ್ಲೀಷ್ ಅವಲಂಬಿತವಾಗುವಂತಹ ವಿಪರ್ಯಾಸವೊದಗಿಬಿಟ್ಟಿದೆ. ನಮ್ಮಲ್ಲಿನ ಪೌರುಷವನ್ನು ಇಂಗ್ಲೀಷರಿಗೆ, ಅಮೆರಿಕನ್ನರಿಗೆ ಮಾರಿಕೊಳ್ಳುತ್ತಿದ್ದೇವೆ. ನಮ್ಮ ಜನರಿಗೆ ಶತ್ರುಗಳು ನಮ್ಮವರೇ ಆಗಿಬಿಟ್ಟಿದ್ದಾರೆ. ರೈತ ಅತಿವೃಷ್ಟಿ ಅನಾವೃಷ್ಟಿಯಿಂದ ಸಾಯುತ್ತಿದ್ದಾನೆ. ಯೋಧ ನಾಡನ್ನು ಕಾಯುತ್ತಿದ್ದೇನೆಂಬ ಸದ್ಭಾವನೆಯಿಂದ ಪ್ರಾಣವನ್ನರ್ಪಿಸುತ್ತಿದ್ದಾನೆ. ಜನರಕ್ಷರು ಬಹುಪಾಲು ಮಂದಿ ನರಭಕ್ಷಕರಾಗಿಬಿಟ್ಟಿದ್ದಾರೆ. ಆಡಳಿತವರ್ಗದವರು ಕುರ್ಚಿಬಾಕರಾಗಿದ್ದಾರೆ. ಸಾಮಾನ್ಯ ಪ್ರಜೆ ಅತಿ ಸಾಮಾನ್ಯವಾಗಿ ತನ್ನ ಬೆಲೆಯನ್ನೇ ಕಳೆದುಕೊಳ್ಳುವಂತಾಗಿದ್ದಾನೆ. ಇವೆಲ್ಲಾ ಇರುವಾಗ ದೀಪಾವಳಿಯ ಸಂತಸ ಪಡುವ ಹಕ್ಕು ಜನತೆಗಿದೆಯೇ?

ಬರಿಯ ಬಯಲಾಡಂಬರದ ದೀಪಗಳ ಸಾಲ
ನುರಿಸುವಿರದೇಕೆ ಕನ್ನಡರೆ? ನೀವಿಂದು ಸಿಂ
ಗರಿಸಿರೈ ಕರ್ಣಾಟಕಾಭಿಮಾನಜ್ಯೋತಿಯಿಂದೆ ನಿಮ್ಮದೆವನೆಯನು.
ಹರಿದು ಹಸಗೆಟ್ಟ ನಾಡಿದನೊಂದುಗೂಡಿಸುತೆ
ನೆರೆನಾಡಿಗರ ಕೂಡೆ ತಲೆಯೆತ್ತಿನಿಂತು ಬಿ
ತ್ತರಿಸಿರೊಸಗೆಗಳನಂದೇ ಸಾರ್ಥಮಹುದು ದೀವಳಿಗೆ ನಮ್ಮೀ ನಾಡಿಗೆ.


ನಾವು ಸಂತೋಷ ಪಡಲೇ ಬಹುದಾದ ಅರ್ಹತೆಯನ್ನು ಪಡೆದುಕೊಳ್ಳುವುದು ಹೇಗೆ? ಅಡಿಗರ ವೈಶಿಷ್ಟ್ಯವೆಂದರೆ ಇದೇ. ಅವರು ಎಂದೂ ಸಮಸ್ಯೆಗಳನ್ನು ವೈಭವೀಕರಿಸಿ ಅವನ್ನು ಗೆಲ್ಲಲು ಬಿಡುವುದಿಲ್ಲ. ಬದಲಿಗೆ ಪ್ರತಿಯೊಂದು ಸಮಸ್ಯೆಗಳಿಗೂ ಉಪಾಯ ಕೊಡುತ್ತಾರೆ, ಪ್ರತಿಯೊಂದು ನೋವಿಗೂ ಸಾಂತ್ವನ ಹೇಳುತ್ತಾರೆ, ಪ್ರತಿಯೊಂದು ಬಂಧನಕ್ಕೂ ಸ್ವಾತಂತ್ರ್ಯವನ್ನು ಕರುಣಿಸುತ್ತಾರೆ. ಇವರ ಕಾವ್ಯದಲ್ಲಿ "ಪಾಸಿಟಿವ್" ಭಾವನೆ ಎದ್ದು ಕಾಣುತ್ತೆ. ಬರೀ ದೀಪ ಹಚ್ಚಿದರೆ ಸಾಲದು, ಕರ್ನಾಟಕದ ಅಭಿಮಾನದ ಜ್ಯೋತಿಯನ್ನು ಬೆಳಗ ಬೇಕು. ಆಗ ನಿಜವಾದ ಸಂತಸ ಇರಲು ಸಾಧ್ಯ ಕನ್ನಡಿಗರಿಗೆ. ಇಲ್ಲಿ ಆಡಂಬರಗಳು ಬಹಳ ಹೆಚ್ಚು. "ನಾವು ಖನ್ನಡಿಗರು..." ಅಂತ ಆಂದೋಲನ ಮಾಡುವ ಚಳುವಳಿಗಾರರು, "ರಾಜ್ಯೋಸ್ತವ" ಆಚರಿಸುವ ಕನ್ನಡ ಸಂಘಗಳು, ಎಲ್ಲಾ ದೇವಸ್ಥಾನಗಳಿಗೂ ತಪ್ಪದೇ ಕಾಣಿಕೆಗಳನ್ನರ್ಪಿಸುವ ಕ್ರಿಮಿನಲ್ಲುಗಳು, ಗೋಮುಖವ್ಯಾಘ್ರರು, "ಹೊಡಿ ಮಗ ಹೊಡಿ ಮಗ.." ಅಂತ ಗಣೇಶನ ಮುಂದೆ ಹಾಡುವ ಗಣೇಶನ ಭಕ್ತರು, ಬೂಟಾಟಿಕೆ ದಾಸನಿಗೆ "ಎಲ್ಲೆಲ್ಲೋ" ನಾಮ ಅನ್ನುವಂತೆ ಮೈಯೆಲ್ಲಾ ವಿಭೂತಿ, ಮುದ್ರೆ, ನಾಮಾದಿಗಳನ್ನು ಬಳೆದುಕೊಂಡಿರುವ ಅಲ್ಪಜ್ಞ ಆಚಾರಿಗಳು, ಇವರೇ ತುಂಬಿಕೊಂಡು ಎಲ್ಲವನ್ನೂ ಸರ್ವನಾಶ ಮಾಡುತ್ತಿದ್ದಾರೆ. ಇದರ ಜೊತೆಗೆ, ಹೊರದೇಶಕ್ಕೆ ಗುಲಾಮಗಿರಿತನ ಇನ್ನೂ ಮಾಡುತ್ತಿದೆ ನಮ್ಮ ನಾಡು. ಅದೆಲ್ಲವನ್ನೂ ಮೀರಿ, ನಮ್ಮ ನಮ್ಮಲ್ಲೇ ಜಗಳಗಳು. ಕೊಡಗಿನವರು, ಮಂಗಳೂರಿಗರು, ಬೆಳಗಾವಿಯವರು, ಮೈಸೂರಿನವರು ಅಂತ ನಮ್ಮ ನಮ್ಮಲ್ಲೇ ಭೇದ. ನಮಗೆ ಬೇರೆ ರಾಜ್ಯ ಕೊಡಿ, ನಮ್ಮ ಆಡಳಿತ ಭಾಷೆ ಬದಲಾಯಿಸಿ ಅಂತ ಬೇರೆ ಆಗ್ರಹಗಳು. ನಾಡು "ಹರಿದು ಹಸಗೆಟ್ಟಿದೆ" ಎಂದು ಅಡಿಗರು ಹೇಳಿರುವುದು ಇಂದಿನ ನಾಡಿಗೂ ಅನ್ವಯಿಸದೇ ಇರುವುದಿಲ್ಲ. ಈ ಹರಿದು ಹಸಗೆಟ್ಟಿರುವ ನಾಡನ್ನು ಒಂದುಗೂಡಿಸುವ ನಿಟ್ಟಿನಲ್ಲಿ ನಮ್ಮ ನೆರೆಹೊರೆಗಳಾದ ರಾಜ್ಯಗಳ ಜೊತೆ ನಗುನಗುತ್ತ, "ನಾವೂ ನಿಮ್ಮ ಸಮ" ಎಂದು ತಲೆಯೆತ್ತುವಂತಾಗಲೆಂದು ಆಶಿಸುತ್ತಾ, ಜ್ಯೋತಿಯನ್ನು ಬೆಳಗಿದರೆ ಆಗ ನಾವು "ಕನ್ನಡರು" ಆಚರಿಸುವ ದೀಪಾವಳಿಯು ಸಾರ್ಥಕತೆಯನ್ನು ಪಡೆದುಕೊಳ್ಳುತ್ತೆ.

ಅಡಿಗರು ಇಲ್ಲಿ "ಕನ್ನಡಿಗರು" ಅನ್ನುವ ಬದಲು "ಕನ್ನಡರು" ಎಂದು ಬಳಸುತ್ತಾರೆ. ಕನ್ನಡಿಗ ಅಂದರೆ ಕನ್ನಡ ಮಾತನಾಡುವವನು. ಆದರೆ "ಕನ್ನಡರು" ಎಂದರೆ ಕನ್ನಡವನ್ನೇ ತಮ್ಮ ತನವನ್ನಾಗಿಸಿಕೊಂಡಿರುವವರು ಎಂದು ಅರ್ಥೈಸಿಕೊಳ್ಳಬಹುದು.
ಇಂಥಾ ದೀಪಾವಳಿಯು ಸಮಸ್ತ ಕನ್ನಡಿಗರ ಪಾಲಿಗೆ ಬರಲಿ ಎಂದು ಆಶಿಸೋಣ.
ದೀಪಾವಳಿಯ ಶುಭಾಶಯಗಳು.

-ಅ
28.10.2007
10PM

Thursday, November 8, 2007

ಶೂಟ್ ಮಾಡ್ಬೇಕಾದ್ರೆ...

ನಾನು ನೋಡಿರುವ ಅತ್ಯಂತ ಅತ್ಯದ್ಭುತ ಚಿತ್ರಗಳಲ್ಲಿ ಇದೂ ಒಂದು.. ಈ ಡೈಲಾಗು ವಿಶ್ವವಿಖ್ಯಾತ..

ಈ ಚಿತ್ರದ ಬಗ್ಗೆ ಬರೆಯೋ ಅಷ್ಟು ಸಾಮರ್ಥ್ಯ ಬಹಳ ಕಡಿಮೆ ಜನಕ್ಕೆ ಇರೋದು. ಗ್ರೇಟೆಸ್ಟ್ ಮೂವಿ ಆಫ್ ಹಾಲಿವುಡ್ ಅಂತ ಒಂದು ಪತ್ರಿಕೆ ಹೇಳಿದೆ. ಅದನ್ನೇ ನಾನು ಹೇಳಲು ಸಂತೋಷಿಸುತ್ತೇನೆ. ಸುಮಾರು ಇಪ್ಪತ್ತು ಸಲ ನೋಡಿ ಆಗಿದೆ..-ಅ
08.11.2007
1.40AM

Tuesday, November 6, 2007

ವರ ಪಡೆದ ತಪಸ್ವಿ ನಾನು

ವರವೆಂದು ಹೆಸರು ಕೊಟ್ಟಿದ್ದೇವೆ ಶಾಪಕ್ಕೆ
ಅಂತರ್ಜಾಲವೆಂಬ ಜಾಲದೊಳು ಸಿಲುಕಿದ ಬಿ.ಎಸ್.ಎನ್.ಎಲ್ ಎಂಬ
ಶುದ್ಧ ಅಪ್ರಬುದ್ಧ ಅಬದ್ಧ ಅಸಂಬದ್ಧ ಅಶುದ್ಧ
ಜಾಲದಾಯಕನೆಂಬ ನಂಜಿನ ಕೂಪಕ್ಕೆ
ಎಲ್ಲಾ ಬಿಟ್ಟು, ಬಿ.ಎಸ್.ಎನ್.ಎಲ್ಲೇ ಬೇಕೆಂದು ಅರಸಿದ ಪಾಪಕ್ಕೆ!

ಜಾಲವರ್ಪಿಸಿ ಮರೆಯಾಗುವುದು, ಮರೆಯಾದರೆ ಮತ್ತೆ ಹಿಂದಿರುಗುವುದದೆಂದಿಗೋ ಅರಿಯೆ
ಒಟ್ಟಿನಲ್ಲಿ ನಮಗಿದೊಂದು ನಿಜವಾದ ಅರಿಯೇ
ಜನರ ಹಣ ನುಂಗಿ, ತದಕಾರಣವವರ ತಾಳ್ಮೆ ಇಂಗಿ
ಮೊಗದಿ ಮೊಳಗುವುದು ಕ್ರೋಧೋರಗವ ಕೆರಳಿಸುವ ಪುಂಗಿ
ಹೇಳು, ನೀನು ಮಾಡುತ್ತಿರುವುದು ಸರಿಯೇ, ಇದನ್ನು ನಾನರಿಯೆ, ನೀನೆನ್ನ ಸಧ್ಯದ ಅರಿಯೇ!

ಜಾಲದ ಕಥೆಯೊಂದೆಡೆ. ಜ್ಯೋತಿಯಿಂದ ತಮಸ್ಸಿಗೆ ಕರೆದೊಯ್ವ ವಿದ್ಯುದಿಲಾಖೆಯ ವರವೋ ಧಿಡೀರ್ ಅತಿಥಿ
ಬರೆಯುತಲಿದ್ದ ಅಂಕಣವನುಳಿಸಿ ಬೆಳೆಸುವುದರೊಳಗಾಗದೇ ಇರುವುದೇ ನಮ್ಮ ತಿತಿ?
ಒಟ್ಟಿನಲ್ಲಿ ಈ ಎರಡು ಸಂಸ್ಥೆಯನು ನಂಬಿದವರಿಗೆ ಶೂನ್ಯ ಮತಿ
ಅರಸುವಂತಾಗಿಹೆನು ತಂತ್ರಜ್ಞಾನದ ಜಾಲದ ಹಿಂಡಿನೊಡಗೂಡಿದ
ಸರ್ವಕಾಲವೂ ಸದಾ ಸಂತಸವೀವ ವಿದ್ಯುಜ್ಜಾಲದಾಯಕವೆಂಬ ರತಿ

ರತಿಯನರಸಿ ಕರೆಗೈದರೆ ಚಲನವಾಣಿಯದೊಂದು ವರ, ಆಡುವುದು ಕೇಳದು, ಕೇಳಲು ತಾನಾಡದು
ಕರೆಯನೆಸೆದು ಕಾನನವ ಸೇರಲು ಕಾಯ್ದಿರಿಸುವೆಡೆಗೆ ಹೋದರಿನ್ನೊಂದು ಕಡೆ ಪ್ರತ್ಯಕ್ಷವು ಜಾಲದಾಯಕನ ವರ
ಹೇಗೋ ಟಿಕೀಟು ದೊರಕಿತೆಂದು ಬಸ್ಸಿಗೆ ಹೋಗೋಣವೆಂದು ಕಾದೆ, ಪುಣ್ಯಕ್ಕೆ ವರವಿರಲಿಲ್ಲ
ಬಿ.ಎಸ್.ಎನ್.ಎಲ್, ಕೆ.ಪಿ.ಟಿ.ಸಿ.ಎಲ್., ವೋಡಾಫೋನ್‍ಗಳ ವರಹಗೆಯಿಂದ ತಲೆತಪ್ಪಿಸಿ ಕಾಡಿನೊಳು ಮರೆಯಾಗಲು ಹೊರಟವನಿಗೆ
ಮೆಜೆಸ್ಟಿಕ್ಕಿನಲ್ಲಿ ಹನ್ನೆರಡಾದರೂ ಬಾರದ ಕೆ.ಎಸ್.ಆರ್.ಟಿ.ಸಿ. ವರ ಕಾದಿತ್ತು!! ಅಯ್ಯೋ ವರವಿಲ್ಲದ ಬದುಕಿಲ್ಲವೇ?

- ಅ
06.11.2007
1.30AM

Thursday, November 1, 2007

ರಾಜ್ಯೋತ್ಸವ

ಕನ್ನಡ ನಾಡ ಹಬ್ಬ ಕನ್ನಡಿಗರೆದೆ ಬೆಳಗಲಿ.

ಸಕ್ಕದಮಂ ಪೇಳ್ದೊಡೆ ನೆರೆ
ಸಕ್ಕದಮಂ ಪೆರ್ಗೆ ಶುದ್ಧ ಕನ್ನಡದೊಳ್ ತಂ
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ
- ನಯನಸೇನನ ಧರ್ಮಾಮೃತ
-ಅ
01.11.2007
10.30AM