Tuesday, November 6, 2007

ವರ ಪಡೆದ ತಪಸ್ವಿ ನಾನು

ವರವೆಂದು ಹೆಸರು ಕೊಟ್ಟಿದ್ದೇವೆ ಶಾಪಕ್ಕೆ
ಅಂತರ್ಜಾಲವೆಂಬ ಜಾಲದೊಳು ಸಿಲುಕಿದ ಬಿ.ಎಸ್.ಎನ್.ಎಲ್ ಎಂಬ
ಶುದ್ಧ ಅಪ್ರಬುದ್ಧ ಅಬದ್ಧ ಅಸಂಬದ್ಧ ಅಶುದ್ಧ
ಜಾಲದಾಯಕನೆಂಬ ನಂಜಿನ ಕೂಪಕ್ಕೆ
ಎಲ್ಲಾ ಬಿಟ್ಟು, ಬಿ.ಎಸ್.ಎನ್.ಎಲ್ಲೇ ಬೇಕೆಂದು ಅರಸಿದ ಪಾಪಕ್ಕೆ!

ಜಾಲವರ್ಪಿಸಿ ಮರೆಯಾಗುವುದು, ಮರೆಯಾದರೆ ಮತ್ತೆ ಹಿಂದಿರುಗುವುದದೆಂದಿಗೋ ಅರಿಯೆ
ಒಟ್ಟಿನಲ್ಲಿ ನಮಗಿದೊಂದು ನಿಜವಾದ ಅರಿಯೇ
ಜನರ ಹಣ ನುಂಗಿ, ತದಕಾರಣವವರ ತಾಳ್ಮೆ ಇಂಗಿ
ಮೊಗದಿ ಮೊಳಗುವುದು ಕ್ರೋಧೋರಗವ ಕೆರಳಿಸುವ ಪುಂಗಿ
ಹೇಳು, ನೀನು ಮಾಡುತ್ತಿರುವುದು ಸರಿಯೇ, ಇದನ್ನು ನಾನರಿಯೆ, ನೀನೆನ್ನ ಸಧ್ಯದ ಅರಿಯೇ!

ಜಾಲದ ಕಥೆಯೊಂದೆಡೆ. ಜ್ಯೋತಿಯಿಂದ ತಮಸ್ಸಿಗೆ ಕರೆದೊಯ್ವ ವಿದ್ಯುದಿಲಾಖೆಯ ವರವೋ ಧಿಡೀರ್ ಅತಿಥಿ
ಬರೆಯುತಲಿದ್ದ ಅಂಕಣವನುಳಿಸಿ ಬೆಳೆಸುವುದರೊಳಗಾಗದೇ ಇರುವುದೇ ನಮ್ಮ ತಿತಿ?
ಒಟ್ಟಿನಲ್ಲಿ ಈ ಎರಡು ಸಂಸ್ಥೆಯನು ನಂಬಿದವರಿಗೆ ಶೂನ್ಯ ಮತಿ
ಅರಸುವಂತಾಗಿಹೆನು ತಂತ್ರಜ್ಞಾನದ ಜಾಲದ ಹಿಂಡಿನೊಡಗೂಡಿದ
ಸರ್ವಕಾಲವೂ ಸದಾ ಸಂತಸವೀವ ವಿದ್ಯುಜ್ಜಾಲದಾಯಕವೆಂಬ ರತಿ

ರತಿಯನರಸಿ ಕರೆಗೈದರೆ ಚಲನವಾಣಿಯದೊಂದು ವರ, ಆಡುವುದು ಕೇಳದು, ಕೇಳಲು ತಾನಾಡದು
ಕರೆಯನೆಸೆದು ಕಾನನವ ಸೇರಲು ಕಾಯ್ದಿರಿಸುವೆಡೆಗೆ ಹೋದರಿನ್ನೊಂದು ಕಡೆ ಪ್ರತ್ಯಕ್ಷವು ಜಾಲದಾಯಕನ ವರ
ಹೇಗೋ ಟಿಕೀಟು ದೊರಕಿತೆಂದು ಬಸ್ಸಿಗೆ ಹೋಗೋಣವೆಂದು ಕಾದೆ, ಪುಣ್ಯಕ್ಕೆ ವರವಿರಲಿಲ್ಲ
ಬಿ.ಎಸ್.ಎನ್.ಎಲ್, ಕೆ.ಪಿ.ಟಿ.ಸಿ.ಎಲ್., ವೋಡಾಫೋನ್‍ಗಳ ವರಹಗೆಯಿಂದ ತಲೆತಪ್ಪಿಸಿ ಕಾಡಿನೊಳು ಮರೆಯಾಗಲು ಹೊರಟವನಿಗೆ
ಮೆಜೆಸ್ಟಿಕ್ಕಿನಲ್ಲಿ ಹನ್ನೆರಡಾದರೂ ಬಾರದ ಕೆ.ಎಸ್.ಆರ್.ಟಿ.ಸಿ. ವರ ಕಾದಿತ್ತು!! ಅಯ್ಯೋ ವರವಿಲ್ಲದ ಬದುಕಿಲ್ಲವೇ?

- ಅ
06.11.2007
1.30AM

4 comments:

 1. ವರಪ್ರಾಪ್ತಿ ತಪಸ್ವಿಯೇ... ವರದಮೇಲೆ ವರವೇ.....??!! ಕಾಡುತ್ತಿರುವ ಕೋಪವೇ.. ಚಿಂತಿಸದಿರಿ!!
  ಉಪಾಯ ನಮ್ಮಲ್ಲಿದೆ!!
  ನಿಮ್ಮದಾಗಿಸಿಕೊಳ್ಳಿ Airtel!!!!
  ಇನ್ನು KPTCL, KSRTC ವರಗಳು----- from being ಅಥಿತಿ to ತಿತಿ....... ಕಳೆಯಲಾರದ ನಂಟು! ವಿಮೋಚನೆಯಿಲ್ಲದ ವರಗಳು!!!
  hahaa..
  "huge vara" ಅಂತ ನಿಮ್ಮ message ಓದಿ ನಗುವ ಕ್ಷಣಗಳು ನೆನಪಾಗುತ್ತವೆ!! :-)

  ReplyDelete
 2. ಅಲ್ಲಯ್ಯ... bsnl connection ತೊಗೋಬೇಕಾದ್ರೆ ಅವ್ರ form alli "ಸ್ಥಾಪಿತೋ ಭವ.. ಸನ್ನಿಹಿತೋ ಭವ.. ಸುಪ್ರಸನ್ನೋ ಭವ... ವರದೋ ಭವ..." ಅಂತ ಎಲ್ಲ ಬರೆದು ಕೊಟ್ಬಿಟ್ಟು ಈಗ ಅವರು ವರ ಕೊಟ್ಟಾಗ ಆದರ ಮೇಲೆ ಕವನ ಬರೀತಿಯಲ್ಲ! ಏನ್ ಹೇಳೋಣ!... ;)

  ReplyDelete
 3. ಉತ್ತಿಷ್ಠೋತ್ತಿಷ್ಠ ಬಿಎಸೆನ್ನೆಲ್, ಉತ್ತಿಷ್ಠ ರಿಲಯನ್ಸ್ ಚ
  ಉತ್ತಿಷ್ಠ ಕೆಪಿಟಿಸಿಎಲ್, ಉತ್ತಿಷ್ಠ ವೊಡಾಫೋನಪಿ
  ಉತ್ತಿಷ್ಠೋತ್ತಿಷ್ಠ ಗನ್ತವ್ಯಂ ಗಚ್ಚ ಗಚ್ಚಾಮಂಗಲಂ ಸರ್ವಂ
  ಪುನರಾಗಮನಂ ನ ಕುರು ಯೂಯಮಅಸ್ಮದ್ಗೃಹೇ ಸದಾ

  (ಸಮಾಸ, ಅಲಂಕಾರ, ಛಂದಸ್ಸು, ಇತ್ಯಾದಿಗಳಲ್ಲಿರುವ ಅನೇಕಾನೇಕ ಲೋಪದೋಷಗಳಿಗೆ ಕ್ಷಮೆ ಇರಲಿ)

  ReplyDelete