Saturday, November 10, 2007

ದೀಪಾವಳಿ

ಬೆಳಕಿನ ಹಬ್ಬದ ಬಗ್ಗೆ ಬರೆಯದ ಕವಿಗಳೇ ಇಲ್ಲ, ಸಾಹಿತಿಯೇ ಇಲ್ಲ. ಅವರೆಲ್ಲಾ ಬರವಣಿಗೆಯ ದಾರಿಯಲ್ಲಿ ನಡೆದು ಹೋದ ಜಾಡನ್ನು ಹಿಡಿದೇ ನಾವೆಲ್ಲಾ ನಡೆಯಬೇಕೆನುವಷ್ಟು ಬರೆದಿದ್ದಾರೆ. ಆದರೂ ಹೊಸತು ಹೊಸತು ಮೂಡುತ್ತಲೇ ಇರುತ್ತೆಂಬುದು ಕನ್ನಡ ಸಾಹಿತ್ಯಕ್ಕೆ ಹೆಮ್ಮೆ ತರುವ ವಿಷಯ.

ಅಡಿಗರ ಈ ಸಾಲುಗಳನ್ನು ಯಾರು ತಾನೇ ಮರೆಯಲಾದೀತು?

ಇದೊ ಬಂತು ದೀಪಾವಳಿಯ ಹಬ್ಬವಿಂದು; ಹ
ಬ್ಬಿದೆ ನಾಡೊಳುತ್ಸವಂ; ದೀಪಾಳಿ ಬೆಳಗಿ ತೊಳ
ಗಿದೆ ದಿಗ್ದಿಗಂತವಂ; ಚೆದುರುತಿದೆ ತಿಮಿರವಗ್ಗಳಿಸುತಿದೆ ಜಗದ ಸೊಬಗು.
ಮುದಮಲ್ಲಿ ಮುದಮಿಲ್ಲಿ ತುಂಬಿತುಳುಕಿದೆ; ನಾಡಿ
ನೆದೆಯೊಳಾವುದೊ ನವ್ಯತೇಜಮುಗ್ಗಡಿಸುವಂ -
ತಿದೆ ಹಾಸಪರಿಹಾಸವಿಭ್ರಮವಿಲಾಸಂಗಳಿಂದೊಸಗೆ ಮಸುಗುತಿರಲು.


ದೀಪಾವಳಿ ಅನ್ನೋದು ಬರೀ ಪಟಾಕಿ ಹೊಡೆದು ಸಿಹಿ ತಿನ್ನುವ ಹಬ್ಬವಲ್ಲ. "ಹಾಸಪರಿಹಾಸವಿಭ್ರಮವಿಲಾಸ" ಗಳನ್ನು ಕೂಡಿ ಆನಂದದ ಶಿಖರವನ್ನು ತಲುಪಿಸುವ ಹಬ್ಬ. ಹಬ್ಬ ಅಂದರೇನೇ ಸಂತೋಷ ಅಂತ ಅರ್ಥ. ಹೃದಯದಲ್ಲಿ ಹೊಸ ಚೇತನವನ್ನು ತುಂಬುವ ಹಬ್ಬ. ಕತ್ತಲನ್ನು ಅಳಿಸಿಹಾಕುವ ಹಬ್ಬ.

ಆದರೆ..

ಇಂದದೇನೊಸಗೆ ಕನ್ನಡಕೆ? ಕನ್ನಡತಾಯ
ಬಂಧನಂ ಕಳೆದುದೇ? ಶೋಕವಡಗಿತೇ? ನಾಡ
ನೊಂದಿರ್ದ ಘೋರತಿಮಿರಂ ತೊಲಗಿತೇ? ನವ್ಯಜೀವನಂ ಸ್ಫುರಿಸುತಿಹುದೇ?
ಒಂದಾಗಿ ಕನ್ನಡಿಗರು ನಿಂದರೇ? ನಿಂದು ತರಿ
ಸಂದು ತಮ್ಮುದ್ಧಾರಕಾಗಿ ಹೋರಾಡುವರೆ?
ಹಂದೆಗಳ ತೆರದೊಳನಿತೊಂದನೆಸಗದೆ ವೃಥಾ ನಕ್ಕು ನಗೆಗೀಡಾಗರೇ?
ಒಂದಿರುಳಿನೊಸಗೆಯಿದು; ಬರಿಯ ಕಣ್ಮನಗಳಿಗೆ
ಹೊಂದಿ ಮರೆಯಾಗುವಾನಂದವಿದು; ಜೀವನದ
ಸಿಂಧುವಿನ ಮೇಲ್ಮೆಯ್ಯೊಳೊಗೆವ ತೆರೆ; ಮಿಂಚಿಮರೆಯಾಗುತಿರುವೊಂದು ಕನಸು
ಇಂದೆಮ್ಮ ಬಾಳು ಕಳ್ತಲೆಯ ಬಿಣ್ಪೊರೆಗೆ ಕಳೆ
ಗುಂದುತಿದೆ; ನಂದುತಿದೆ ಪೌರುಷಂ; ದೀನತೆಗೆ
ಸಂದುಹೋಗಿದೆ ಜೀವಮಿಂತಿರಲದೇನೊಸಗೆಯೋ ನಮ್ಮ ನಾಡಜನಕೆ?


ಕನ್ನಡದ ಜನತೆಗೆ ಎಷ್ಟೊಂದು ಪ್ರಶ್ನೆಗಳು! ನಾವು ನಿಜಕ್ಕೂ ಒಗ್ಗಟ್ಟಿನಿಂದ ಇದ್ದೇವಾ? ನಿಜಕ್ಕೂ ದೀಪಾವಳಿಯು ನಾಡಿನ ಕತ್ತಲನ್ನು ದೂರ ಮಾಡುತ್ತದೆಯೇ? ಕನ್ನಡಿಗರು ಕರ್ನಾಟಕವನ್ನು ಉದ್ಧಾರ ಮಾಡುವ ಪ್ರಯತ್ನ ಮಾಡುತ್ತಿದ್ದಾರಾ? ಹೇಡಿಗಳ ರೀತಿ ಒಂದು ಸಾಧನೆಯನ್ನೂ ಮಾಡದೆ, ಎಲ್ಲರನ್ನೂ ನೋಡಿ ನಕ್ಕು ನಾವೂ ನಗೆಗೆ ಈಡಾಗುತ್ತಿದ್ದೇವಾ?

ನಾವು ನಿಜಕ್ಕೂ ಸಂತೋಷ ಪಡುವಂಥ ಅರ್ಹತೆಯನ್ನು ಹೊಂದಿದ್ದೀವಾ ಅನ್ನೋದು ಒಂದು ಪ್ರಶ್ನೆಯಾಗಿದೆ. ವಾಸ್ತವವಾಗಿ ಸಂತೋಷ ಮತ್ತು ದುಃಖ ಪಡುವ ಅಧಿಕಾರ ಮನುಷ್ಯನಾಗಿ ಹುಟ್ಟಿದ ಎಲ್ಲವನಿಗೂ ಇದೆ. ಆದರೆ ನಾವು ಇಂದು ಸಂತೋಷ ಪಟ್ಟುಕೊಳ್ಳುವ ಕೆಲಸಗಳನ್ನು ಮಾಡಿದ್ದೇವಾ? ಈ ಸಂತೋಷ ನಮ್ಮ ನಾಡಿನಲ್ಲಿ ಸದಾ ಇರುತ್ತದೆಯೇ? ಇದು ಬರಿ ಒಂದಿರುಳಿನೊಸಗೆ, ಅಂದರೆ ದೀಪಾವಳಿ ಹಬ್ಬದ ಇರುಳಿನಲ್ಲಿ ಮಾತ್ರ ಸಂತಸ. ನಂತರ, ಮತ್ತೆ ಅದೇ ಜಂಜಾಟ, ಕಾವೇರಿ ಗಲಾಟೆ, ಆ ಗಲಾಟೆ - ಈ ಗಲಾಟೆ, ರಾಜಕೀಯ, ಟ್ರಾಫಿಕ್ಕು, ಮಾಲಿನ್ಯ, ಪರಭಾಷಾ ಹಾವಳಿ, ನಕ್ಸಲೀಯರ ಗಲಾಟೆ, ಅಂತ ನಾಡಿನ ತುಂಬಾ ಇಂಥಾ ಕಪ್ಪು ಸುದ್ದಿಗಳೇ. ಅಡಿಗರು ಹೇಳಿರುವಂತೆ ಬಾಳು ಕತ್ತಲೆಯ ಬಿಣ್ಪೊರೆಗೆ ಕಳೆಗುಂದುತಿದೆ, ನಂದುತಿದೆ ಪೌರುಷಂ - ಭಾಷೆ, ಭಾವ ಎಲ್ಲವೂ ನಮಗೆ ಇಂದು ಇಂಗ್ಲೀಷ್ ಅವಲಂಬಿತವಾಗುವಂತಹ ವಿಪರ್ಯಾಸವೊದಗಿಬಿಟ್ಟಿದೆ. ನಮ್ಮಲ್ಲಿನ ಪೌರುಷವನ್ನು ಇಂಗ್ಲೀಷರಿಗೆ, ಅಮೆರಿಕನ್ನರಿಗೆ ಮಾರಿಕೊಳ್ಳುತ್ತಿದ್ದೇವೆ. ನಮ್ಮ ಜನರಿಗೆ ಶತ್ರುಗಳು ನಮ್ಮವರೇ ಆಗಿಬಿಟ್ಟಿದ್ದಾರೆ. ರೈತ ಅತಿವೃಷ್ಟಿ ಅನಾವೃಷ್ಟಿಯಿಂದ ಸಾಯುತ್ತಿದ್ದಾನೆ. ಯೋಧ ನಾಡನ್ನು ಕಾಯುತ್ತಿದ್ದೇನೆಂಬ ಸದ್ಭಾವನೆಯಿಂದ ಪ್ರಾಣವನ್ನರ್ಪಿಸುತ್ತಿದ್ದಾನೆ. ಜನರಕ್ಷರು ಬಹುಪಾಲು ಮಂದಿ ನರಭಕ್ಷಕರಾಗಿಬಿಟ್ಟಿದ್ದಾರೆ. ಆಡಳಿತವರ್ಗದವರು ಕುರ್ಚಿಬಾಕರಾಗಿದ್ದಾರೆ. ಸಾಮಾನ್ಯ ಪ್ರಜೆ ಅತಿ ಸಾಮಾನ್ಯವಾಗಿ ತನ್ನ ಬೆಲೆಯನ್ನೇ ಕಳೆದುಕೊಳ್ಳುವಂತಾಗಿದ್ದಾನೆ. ಇವೆಲ್ಲಾ ಇರುವಾಗ ದೀಪಾವಳಿಯ ಸಂತಸ ಪಡುವ ಹಕ್ಕು ಜನತೆಗಿದೆಯೇ?

ಬರಿಯ ಬಯಲಾಡಂಬರದ ದೀಪಗಳ ಸಾಲ
ನುರಿಸುವಿರದೇಕೆ ಕನ್ನಡರೆ? ನೀವಿಂದು ಸಿಂ
ಗರಿಸಿರೈ ಕರ್ಣಾಟಕಾಭಿಮಾನಜ್ಯೋತಿಯಿಂದೆ ನಿಮ್ಮದೆವನೆಯನು.
ಹರಿದು ಹಸಗೆಟ್ಟ ನಾಡಿದನೊಂದುಗೂಡಿಸುತೆ
ನೆರೆನಾಡಿಗರ ಕೂಡೆ ತಲೆಯೆತ್ತಿನಿಂತು ಬಿ
ತ್ತರಿಸಿರೊಸಗೆಗಳನಂದೇ ಸಾರ್ಥಮಹುದು ದೀವಳಿಗೆ ನಮ್ಮೀ ನಾಡಿಗೆ.


ನಾವು ಸಂತೋಷ ಪಡಲೇ ಬಹುದಾದ ಅರ್ಹತೆಯನ್ನು ಪಡೆದುಕೊಳ್ಳುವುದು ಹೇಗೆ? ಅಡಿಗರ ವೈಶಿಷ್ಟ್ಯವೆಂದರೆ ಇದೇ. ಅವರು ಎಂದೂ ಸಮಸ್ಯೆಗಳನ್ನು ವೈಭವೀಕರಿಸಿ ಅವನ್ನು ಗೆಲ್ಲಲು ಬಿಡುವುದಿಲ್ಲ. ಬದಲಿಗೆ ಪ್ರತಿಯೊಂದು ಸಮಸ್ಯೆಗಳಿಗೂ ಉಪಾಯ ಕೊಡುತ್ತಾರೆ, ಪ್ರತಿಯೊಂದು ನೋವಿಗೂ ಸಾಂತ್ವನ ಹೇಳುತ್ತಾರೆ, ಪ್ರತಿಯೊಂದು ಬಂಧನಕ್ಕೂ ಸ್ವಾತಂತ್ರ್ಯವನ್ನು ಕರುಣಿಸುತ್ತಾರೆ. ಇವರ ಕಾವ್ಯದಲ್ಲಿ "ಪಾಸಿಟಿವ್" ಭಾವನೆ ಎದ್ದು ಕಾಣುತ್ತೆ. ಬರೀ ದೀಪ ಹಚ್ಚಿದರೆ ಸಾಲದು, ಕರ್ನಾಟಕದ ಅಭಿಮಾನದ ಜ್ಯೋತಿಯನ್ನು ಬೆಳಗ ಬೇಕು. ಆಗ ನಿಜವಾದ ಸಂತಸ ಇರಲು ಸಾಧ್ಯ ಕನ್ನಡಿಗರಿಗೆ. ಇಲ್ಲಿ ಆಡಂಬರಗಳು ಬಹಳ ಹೆಚ್ಚು. "ನಾವು ಖನ್ನಡಿಗರು..." ಅಂತ ಆಂದೋಲನ ಮಾಡುವ ಚಳುವಳಿಗಾರರು, "ರಾಜ್ಯೋಸ್ತವ" ಆಚರಿಸುವ ಕನ್ನಡ ಸಂಘಗಳು, ಎಲ್ಲಾ ದೇವಸ್ಥಾನಗಳಿಗೂ ತಪ್ಪದೇ ಕಾಣಿಕೆಗಳನ್ನರ್ಪಿಸುವ ಕ್ರಿಮಿನಲ್ಲುಗಳು, ಗೋಮುಖವ್ಯಾಘ್ರರು, "ಹೊಡಿ ಮಗ ಹೊಡಿ ಮಗ.." ಅಂತ ಗಣೇಶನ ಮುಂದೆ ಹಾಡುವ ಗಣೇಶನ ಭಕ್ತರು, ಬೂಟಾಟಿಕೆ ದಾಸನಿಗೆ "ಎಲ್ಲೆಲ್ಲೋ" ನಾಮ ಅನ್ನುವಂತೆ ಮೈಯೆಲ್ಲಾ ವಿಭೂತಿ, ಮುದ್ರೆ, ನಾಮಾದಿಗಳನ್ನು ಬಳೆದುಕೊಂಡಿರುವ ಅಲ್ಪಜ್ಞ ಆಚಾರಿಗಳು, ಇವರೇ ತುಂಬಿಕೊಂಡು ಎಲ್ಲವನ್ನೂ ಸರ್ವನಾಶ ಮಾಡುತ್ತಿದ್ದಾರೆ. ಇದರ ಜೊತೆಗೆ, ಹೊರದೇಶಕ್ಕೆ ಗುಲಾಮಗಿರಿತನ ಇನ್ನೂ ಮಾಡುತ್ತಿದೆ ನಮ್ಮ ನಾಡು. ಅದೆಲ್ಲವನ್ನೂ ಮೀರಿ, ನಮ್ಮ ನಮ್ಮಲ್ಲೇ ಜಗಳಗಳು. ಕೊಡಗಿನವರು, ಮಂಗಳೂರಿಗರು, ಬೆಳಗಾವಿಯವರು, ಮೈಸೂರಿನವರು ಅಂತ ನಮ್ಮ ನಮ್ಮಲ್ಲೇ ಭೇದ. ನಮಗೆ ಬೇರೆ ರಾಜ್ಯ ಕೊಡಿ, ನಮ್ಮ ಆಡಳಿತ ಭಾಷೆ ಬದಲಾಯಿಸಿ ಅಂತ ಬೇರೆ ಆಗ್ರಹಗಳು. ನಾಡು "ಹರಿದು ಹಸಗೆಟ್ಟಿದೆ" ಎಂದು ಅಡಿಗರು ಹೇಳಿರುವುದು ಇಂದಿನ ನಾಡಿಗೂ ಅನ್ವಯಿಸದೇ ಇರುವುದಿಲ್ಲ. ಈ ಹರಿದು ಹಸಗೆಟ್ಟಿರುವ ನಾಡನ್ನು ಒಂದುಗೂಡಿಸುವ ನಿಟ್ಟಿನಲ್ಲಿ ನಮ್ಮ ನೆರೆಹೊರೆಗಳಾದ ರಾಜ್ಯಗಳ ಜೊತೆ ನಗುನಗುತ್ತ, "ನಾವೂ ನಿಮ್ಮ ಸಮ" ಎಂದು ತಲೆಯೆತ್ತುವಂತಾಗಲೆಂದು ಆಶಿಸುತ್ತಾ, ಜ್ಯೋತಿಯನ್ನು ಬೆಳಗಿದರೆ ಆಗ ನಾವು "ಕನ್ನಡರು" ಆಚರಿಸುವ ದೀಪಾವಳಿಯು ಸಾರ್ಥಕತೆಯನ್ನು ಪಡೆದುಕೊಳ್ಳುತ್ತೆ.

ಅಡಿಗರು ಇಲ್ಲಿ "ಕನ್ನಡಿಗರು" ಅನ್ನುವ ಬದಲು "ಕನ್ನಡರು" ಎಂದು ಬಳಸುತ್ತಾರೆ. ಕನ್ನಡಿಗ ಅಂದರೆ ಕನ್ನಡ ಮಾತನಾಡುವವನು. ಆದರೆ "ಕನ್ನಡರು" ಎಂದರೆ ಕನ್ನಡವನ್ನೇ ತಮ್ಮ ತನವನ್ನಾಗಿಸಿಕೊಂಡಿರುವವರು ಎಂದು ಅರ್ಥೈಸಿಕೊಳ್ಳಬಹುದು.
ಇಂಥಾ ದೀಪಾವಳಿಯು ಸಮಸ್ತ ಕನ್ನಡಿಗರ ಪಾಲಿಗೆ ಬರಲಿ ಎಂದು ಆಶಿಸೋಣ.
ದೀಪಾವಳಿಯ ಶುಭಾಶಯಗಳು.

-ಅ
28.10.2007
10PM

1 comment:

 1. :-) :-) :-)
  ಇಷ್ಟು ಒಳ್ಳೆ ಬರವಣಿಗೆಗೆ comment ಮಾಡೋ ಅರ್ಹತೆ ನನಗಿಲ್ಲ!
  ನನ್ನ ಮನದಾಳದ ನಮನ.. ನಿಮಗೆ ,ಅತೀ ಸುಂದರ ವಿಮರ್ಶೆ!.. ಹಾಗು ಎಲ್ಲ 'ಕನ್ನಡರಿಗೂ'!!!! :-)

  ಕನ್ನಡಳಾಗಿ ಹುಟ್ಟಿದಕ್ಕೆ ಹೆಮ್ಮೆ ಪಡುತ್ತೇನೆ!
  ಇನ್ನೊಂದು ಹೆಮ್ಮೆ ವಿಷ್ಯ ಅಂದ್ರೆ ನಿಮ್ಮ student ಆಗಿದ್ದು!! ಯಾವಾಗಲು ಬೈತಾ ಇರಿ! ಕಲಿಸುತ್ತಾ ಇರಿ!
  :-)
  ಮತ್ತೆ ತಲೆ ಬಾಗಿ ಇನ್ನೊಂದು ನಮನ!

  ReplyDelete