Thursday, December 20, 2007

ಧನ್ ಧನಾ ಧನ್ 'ಗೋಳ್'

ಕಥೆ - ೧

ಗೋಲ್ ಚಿತ್ರವನ್ನು ನೋಡಿದವರು 'ಚಕ್ ದೇ'ಗೆ ಹೋಲಿಕೆ ಮಾಡದೇ ಇರೋದಕ್ಕೆ ಸಾಧ್ಯವೇ ಇಲ್ಲ. ಹಾಗೆ ಹೋಲಿಸಿ, ನಂತರ ಈ ನಾಯಿ ಎಲ್ಲಿ, ಆ ಸಿಂಹ ಎಲ್ಲಿ ಎಂದು ಬೈಯ್ಯುತ್ತಾರೆ ಕೂಡ. ಚಿತ್ರಕಥಾವಸ್ತುವನ್ನು ಆಗಾಗ್ಗೆ ಬಿಟ್ಟು ಬೇರೆಲ್ಲೆಲ್ಲೋ ಸುತ್ತುವುದೇ ಈ ಗೋಳು ಚಿತ್ರ - ಧನ್ ಧನಾ ಧನ್ ಗೋಲ್.

ಜಾನ್ ಅಬ್ರಹಮ್‍ಗೆ ಅಳಲು ಬರೋದಿಲ್ಲ ಎಂದು ಅವನನ್ನು ಹೆತ್ತಾಗಲೇ ಅವನ ತಾಯಿಗೆ ಗೊತ್ತಿತ್ತಾದರೂ ಈ ಚಿತ್ರದಲ್ಲಿ ಅವನನ್ನು ಅಳಿಸಿದ ಬೃಹತ್ ಆಭಾಸವನ್ನು ನಿರ್ದೇಶಕ ಮಾಡಿದ್ದಾರೆ. ಬೊಮನ್ ಇರಾನಿ ಅದ್ಭುತ ನಟರಾದರೂ ಅವರ ನಟನಾ ಸಾಮರ್ಥ್ಯಕ್ಕೆ ಇಲ್ಲಿ ಅವಕಾಶ ಬಹಳ ಕಡಿಮೆ. ಬಿಪಾಷಾ ಬಸು ತಾನು ಸೆಕ್ಸಿ ಸೆಕ್ಸಿ ಅಂತ ಹೇಳಿಕೊಂಡೇ ಇನ್ನು ಅದೆಷ್ಟು ವರ್ಷ ಇರಬಹುದೆಂದು ನಿರ್ಣಯಿಸಿದ್ದಾಳೋ ಗೊತ್ತಿಲ್ಲ. ಅರ್ಷದ್ ವಾರ್ಸಿ ಎಂಬ ಪ್ರತಿಭಾಸಂಪನ್ನನನ್ನು ಬಳಸಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ.


ಇವರು ಆರಿಸಿಕೊಂಡ ವಿಷಯವೇ ಸೂಕ್ತವಾಗಿಲ್ಲ. ಫುಟ್‍ಬಾಲ್ ಆಡುವವರು ಇಂಗ್ಲೆಂಡಿಗರು ಹೆಚ್ಚು. ಇಂಗ್ಲೆಂಡಿನಲ್ಲಿ ಫುಟ್‍ಬಾಲ್ ಅನ್ನು ದೇವರಿಗಿಂತ ಹೆಚ್ಚು ಪೂಜಿಸುತ್ತಾರೆ. ನಮ್ಮ ನಾಯಕ ತಂಡ ಕೂಡ ಇಂಗ್ಲೆಂಡಿನ ಒಂದು ಕ್ಲಬ್ಬಿನ ಆಟಗಾರರು. ಸೋಲುತ್ತಲಿದ್ದವರು ಗೆಲ್ಲುವುದೇ ಈ ಕಥೆ. ಚಕ್ ದೇ ನೋಡಿದ ಮೇಲೆ ಅದಕ್ಕಿಂತಲೂ ಚೆನ್ನಾಗಿ ತೆಗೆದಿರುತ್ತಾರೆಂಬ ಭರವಸೆಯಿಟ್ಟುಕೊಂಡೇ ಥಿಯೇಟರಿನೊಳಗೆ ಹೋಗುತ್ತೇವೆ. ನಿರಾಶರಾಗುತ್ತೇವೆ. ಮೈದಾನದ ಒತ್ತೆಯಿಂದ ಶುರುವಾಗಿ ಬಿಪಾಷಾ ಬಸು - ಜಾನ್ ಅಬ್ರಹಮ್‍ರ ಪ್ರಣಯದಲ್ಲಿ ಮುಂದುವರೆದು, ಬೊಮನ್ ಇರಾನಿಯ ಎಂಭತ್ತರ ದಶಕದ ಕಥೆಗೆ ಹಿಂತಿರುಗಿ ವಿಪರೀತ ಗೋಳಿನಿಂದ ಬೆಳೆದು ಕೊನೆಗೆ ಎಲ್ಲೋ ಸ್ವಲ್ಪ ಫುಟ್‍ಬಾಲ್ ಶೋ ನಮಗೆ ತೋರಿಸುತ್ತಾರೆ. ಇದು ಧನ್ ಧನಾ ಧನ್ 'ಗೋಳ್'.

ಕಥೆ - ೨

ಕೆಲವು ದಿನಗಳ ಮುಂಚೆ ಬಿಡುಗಡೆಯಾಯಿತು 'ಆ ದಿನಗಳು'. ಹೆಸರು ಕೇಳಿದ ತಕ್ಷಣ ಯಾವುದೋ ಸೆಕ್ಸ್ ಪಿಚ್ಚರ್ ಥರ ಇದೆ ಎಂದು ನಾನು ಶ್ರೀಧರ ನಕ್ಕಿದ್ದೆವು. ಆದರೆ ಪೋಸ್ಟರುಗಳನ್ನು ನೋಡಿ ಸ್ವಲ್ಪ ಖುಷಿ ಆಯಿತು, ಸೊಗಸಾಗಿದೆ ಎಂದು. ಇದರ ಜೊತೆಗೆ ಅಗ್ನಿ ಶ್ರೀಧರ್ ಅವರ 'ದಾದಾಗಿರಿಯ ದಿನಗಳು' ಪುಸ್ತಕವನ್ನು ಎರಡು ವರ್ಷದ ಕೆಳಗೇ ಓದಿ ಆಗಿತ್ತು. ಬಹಳ ಹಿಡಿಸಿತ್ತಾದರೂ ಬೆಳಗೆರೆಯ 'ಪಾಪಿಗಳ ಲೋಕದಲ್ಲಿ'ಯಷ್ಟು ಇಷ್ಟ ಆಗಿರಲಿಲ್ಲ. ಬೆಳಗೆರೆಯ ವೈಭವೀಕರಣ ಎಲ್ಲಿ, ಶ್ರೀಧರರ ಸತ್ಯಾಂಶಗಳೆಲ್ಲಿ! 'ಜಯರಾಜ ಮಚ್ಚನ್ನು ಬೀಸಿದಾಗ ಅವನ ಕೈ ಕೆಳಗುರುಳಿ ಬೀದಿಯುದ್ದಕ್ಕೂ ಹೊಳೆಯಂತೆ ರಕ್ತ ಹರಿಯುತ್ತಿತ್ತು' ಎಂಬ ಬೆಳಗೆರೆಯ ಬರಹವೆಲ್ಲಿ, 'ಜಯರಾಜ ಅವನನ್ನು ಕೊಂದನು' ಎಂಬ ಶ್ರೀಧರ್ ಬರಹ ಎಲ್ಲಿ ಎಂದೆನಿಸಿತ್ತು. ಆದರೆ 'ಆ ದಿನಗಳು' ಚಿತ್ರ ನೋಡಿದ ಮೇಲೆ ಶ್ರೀಧರ್ ಶೈಲಿ ಬಹಳ ಇಷ್ಟ ಆಗಿಬಿಡುತ್ತೆ.ಎಪ್ಪತ್ತು-ಎಂಭತ್ತನೆಯ ದಶಕದಲ್ಲಿ ಬೆಂಗಳೂರನ್ನು ನಡುಗಿಸಿದ ಭೂಗತ ಲೋಕದ ದೊರೆ ಕೊತ್ವಾಲ್ ರಾಮಚಂದ್ರನ ಕಥೆ ಇದು. ಹುಡುಗರು ಹೇಗೆ ಕೊತ್ವಾಲನನ್ನು ಪ್ಲಾನ್ ಮಾಡಿ ಕೊಲೆ ಮಾಡುತ್ತಾರೆ, ಮತ್ತು ಜಯರಾಜ್ ಅಂತಹ ದೊಡ್ಡ ರೌಡಿಯ ಸಹಾಯ ಇವರಿಗೆ ಹೇಗೆ ಮತ್ತು ಯಾಕೆ ಸಿಗುತ್ತೆ ಎಂಬುದು ಮುಖ್ಯ ಕಥಾವಸ್ತು ಒಂದೆಡೆಯಿದ್ದರೆ, ಒಬ್ಬ ವಿದ್ಯಾವಂತನೂ ಹೇಗೆ ರೌಡಿಸಂ‍ಗೆ ಇಳಿಯಬಹುದು ಎಂಬುದು ಇನ್ನೊಂದು ಕಡೆ. ಮತ್ತೊಂದು ಕಡೆ ತಮ್ಮ ಪಾಡಿಗೆ ತಾವು ಪ್ರೀತಿಸಿಕೊಂಡು ಪ್ರಣಯಲೋಕದಲ್ಲಿ ಮೈಮರೆತಿರುವವರಿಗೂ ಕೊತ್ವಾಲನ ಕ್ರೋಧಾಗ್ನಿಯ ಹೊಗೆ ತಗುಲಿ, ಆ ಹುಡುಗನೂ ಸಹ ಹೇಗೆ ಭೂಗತಲೋಕದೊಳಕ್ಕೆ ಎಳೆಯಲ್ಪಡುತ್ತಾನೆಂಬುದು ಮತ್ತೊಂದು ವಸ್ತು. ಎಲ್ಲವನ್ನೂ ಬಹಳ ನೀಟಾಗಿ ನಿರ್ವಹಿಸಿದ್ದಾರೆ ಈ ಚಿತ್ರತಂಡ. ವೆರಿ ಗುಡ್.ಒಂದು ರೌಡಿಸಂ ಚಿತ್ರವನ್ನು ಹಿಂಸಾಚಾರವಿಲ್ಲದೆ, ಅಶ್ಲೀಲ ಡೈಲಾಗುಗಳಿಲ್ಲದೆ, vulgarity ಇಲ್ಲದೆ, ಅಬ್ಬರಗಳಿಲ್ಲದೆ ತೋರಿಸಿರುವುದು, ಅದ್ಭುತವಾಗಿ ಚಿತ್ರಿಸಿರಿವುದು ಪ್ರಶಂಸನೀಯ. ಕೊತ್ವಾಲ್ ರಾಮಚಂದ್ರನಾಗಿ ಶರತ್ ಲೋಹಿತಾಶ್ವ, ಜಯರಾಜನಾಗಿ ಆಶೀಶ್ ವಿದ್ಯಾರ್ಥಿ ಉತ್ತಮವಾಗಿ ನಟಿಸಿದ್ದಾರೆ. ಜೊತೆಗೆ ಕಥೆಯ ಆಧಾರ ಸ್ತಂಭಗಳಾದ 'ಚೇತನ್', 'ಬಚ್ಚನ್', 'ಶೆಟ್ಟಿ', 'ಶ್ರೀಧರ್' - ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. ಯಾವುದನ್ನೂ ಅಧಿಕವಾಗಿಸದೆ, ಹದವಾಗಿ ಪ್ರೇಕ್ಷಕನ ಮುಂದೆ ಸೊಗಸಾಗಿ ನಿರೂಪಿಸುವ ಉತ್ತಮ ಪ್ರಯತ್ನವನ್ನು ಈ ಚಿತ್ರತಂಡ ಪ್ರಾಮಾಣಿಕವಾಗಿ ಮಾಡಿದೆ.

ಚಿತ್ರ ನೋಡಿ ಬಂದ ಮೇಲೆ, 'ದಾದಾಗಿರಿಯ ದಿನಗಳು' ಮೂರು ಭಾಗಗಳನ್ನೂ ಓದಿದೆ. ಬಹಳ ಹಿಡಿಸಿದುವು. ಜೊತೆಗೆ ಮೇಷ್ಟ್ರಾದ ಹೆಚ್. ಎಸ್. ಆರ್. ಅವರ ಮುನ್ನುಡಿ ನೋಡಿ ಕೊಂಚ ಚಕಿತನೂ ಆದೆ. ಬೆಳಗೆರೆಯ 'ಪಾಪಿಗಳ ಲೋಕದಲ್ಲಿ' ಕೂಡ ಓದಿದೆ ಎರಡನೇ ಬಾರಿ. Uncomparable with Sridhar's great book ಎನ್ನಿಸಿತು. ಪಕ್ಕಕ್ಕಿಟ್ಟು ಬೇರೆ ಪುಸ್ತಕ ಕೈಗೆತ್ತಿಕೊಂಡೆ.

ಕಥೆ - ೩

ಮೂರು ಗಂಟೆಗಳ ಕಾಲ ನಿಜವಾದ ಮನರಂಜನೆ ಬೇಕೆನಿಸಿದರೆ 'ಓಮ್ ಶಾಂತಿ ಓಮ್' ನೋಡಲು ಹೋಗಬೇಕು. ಹೋಗುವ ಮುಂಚೆ ಎಪ್ಪತ್ತರ ದಶಕದ ಕೆಲವು ಚಿತ್ರಗಳನ್ನು ನೋಡಿದ್ದರೆ ಒಳಿತು. ಇಲ್ಲವಾದರೆ ಮನೋಜ್ ಕುಮಾರ್, ಜೀತೇಂದ್ರ ಇವರ ಬಗ್ಗೆ ಎಲ್ಲಾ ತೋರಿಸಿದಾಗ ಉಳಿದವರು ನಗುತ್ತಿರುವುದನ್ನು ನೋಡಿ ನಗಬೇಕಾಗುತ್ತೆ. ಹಾಡುಗಳು ಗಬ್ಬಾಗಿದ್ದರೂ ಮನರಂಜನೆಗೆ ಏನೂ ಕಡಿಮೆಯಿಲ್ಲ. ಒಂದು ಹಾಡಲ್ಲಂತೂ ಬಾಲಿವುಡ್ಡಿನ ಎಲ್ಲಾ ನಟನಟಿಯರೂ ಬಂದು ಹೋಗಿ ಹೊಸ ರಂಗನ್ನು ಮೂಡುತ್ತಾರೆ. ಶಾಹ್‍ರುಖ್ ಖಾನ್ ತಾನು ಉತ್ತಮ ನಟ ಎಂದು ಆಗಾಗ್ಗೆ ನಿರೂಪಿಸುತ್ತಿದ್ದಾರೆ. 'ಕರ್ಜ್' ಚಿತ್ರದಿಂದ ಪ್ರೇರೇಪಿತರಾಗಿದ್ದರೂ ಕಥೆ ಅಸಂಬದ್ಧವಾಗಿದ್ದರೂ ಮನರಂಜನೆಯನ್ನು ನೀಡಲು ಯಶಸ್ವಿಯಾಗಿದೆ 'ಓಮ್ ಶಾಂತಿ ಓಮ್'.

ಕಥೆ - ೪

ಚಿತ್ರ ಬಿಡುಗಡೆಯಾಗಿ ಸುಮಾರು ಮುವ್ವತ್ತು ವರ್ಷ ಆಯಿತೆನಿಸುತ್ತೆ. 'ದೇವ್‍ದಾಸ್' ಇಂದ ಸ್ವಲ್ಪ ಮಟ್ಟಿಗೆ ಪ್ರೇರಿತವಾಗಿತ್ತಂತೆ ನಿರ್ದೇಶಕ ಶಕ್ತಿ ಸಾಮಂತ್‍ಗೆ. ಆ ಪಾತ್ರವನ್ನು ರಾಜೇಶ್ ಖನ್ನ ಅತ್ಯದ್ಭುತವಾಗಿ ನಿರ್ವಹಿಸಿ ಹಿಂದಿ ಚಿತ್ರರಂಗದಲ್ಲಿ ಅಮರರಾಗುತ್ತಾರೆ. ಚಿತ್ರದ ಹೆಸರು 'ಅಮರ್ ಪ್ರೇಮ್'. ಇಲ್ಲಿ ಅಮರರಾಗಿರುವುದು ರಾಜೇಶ್ ಖನ್ನಾ ಒಬ್ಬರೇ ಅಲ್ಲ, ಅವರ ನಟನೆ ಮಾತ್ರವಲ್ಲ, ಅವರ ಡೈಲಾಗುಗಳು ಮಾತ್ರವಲ್ಲ. ಶರ್ಮಿಳಾ ಟ್ಯಾಗೋರ್ ಎಂಬ ಅದ್ವಿತೀಯ ನಟಿ ಕೂಡ ಅಮರಳಾದಳು. ಆಕೆ ಬಿಪಾಷಾಳಂತೆ ಬರಿ ಚೆಲುವನ್ನು ಮಾತ್ರ ಹೊಂದಿರಲಿಲ್ಲ, ಅಪ್ರತಿಮ ಚೆಲುವಿನ ಜೊತೆಗೆ ಉನ್ನತ ಮಟ್ಟದ ನಟನಾ ಸಾಮರ್ಥ್ಯವನ್ನೂ ಹೊಂದಿದ್ದಳು ಎಂಬುದು ತಿಳಿಯಬೇಕು ಎಂದರೆ 'ಅಮರ್ ಪ್ರೇಮ್' ನೋಡಬೇಕು.ಮತ್ತೊಬ್ಬರು ಇಲ್ಲಿ ಅಮರರಾಗಿರೋದು ಆರ್.ಡಿ.ಬರ್ಮನ್. ಅಮರ್ ಪ್ರೇಮ್ ಹಾಡುಗಳನ್ನು ಯಾರು ತಾನೇ ಮರೆಯಲಾದೀತು! ಎಸ್.ಡಿ.ಬರ್ಮನ್ ಹಾಡಿರೋ 'ಡೋಲಿ ಮೇ ಬಿಠಾಯಿ ಕೇ ಕಹಾರ್..', ಲತಾ ಮಂಗೇಶ್ಕರರ 'ರೈನಾ ಬೀತಿ ಜಾಯೇ..', ಕಿಶೋರ್ ಕುಮಾರರ 'ಕುಛ್ ತೋ ಲೋಗ್ ಕಹೇಂಗೇ..', 'ಯೇ ಕ್ಯಾ ಹುವಾ..' ಮತ್ತು ಬಹಳ ಜನಪ್ರಿಯವಾದ 'ಚಿಂಗಾರಿ ಕೋಯಿ ಭಡ್‍ಕೇ..' ಎಲ್ಲವೂ ಅಮರಗೀತೆಗಳು. ಜೊತೆಗೆ ರಾಜೇಶ್ ಖನ್ನ ನಾಯಕಿಯನ್ನು ಕರೆಯುವ ರೀತಿಯೇ ವಿಪರೀತ ಪ್ರಸಿದ್ದ. 'ಪುಷ್ಪಾ...." ಅಂತ. ಮತ್ತು ಅವನ ಡೈಲಾಗು, "I hate tears.." ಎಂದು.


ಪುಷ್ಪಾ (ಶರ್ಮಿಳಾ ಟ್ಯಾಗೋರ್) ವೇಶ್ಯೆ ಹೇಗಾಗುತ್ತಾಳೆ, ವೇಶ್ಯೆಯ ಬಳಿ 'ಆನಂದ್ ಬಾಬು' (ರಾಜೇಶ್ ಖನ್ನಾ) ಅಂಥವರು ಯಾಕೆ ಬರ್ತಾರೆ, ನಂತರ ಅವರು ಹೇಗೆ ಬೇರಾಗುತ್ತಾರೆ, ಬೇರಾದರೂ ಹೇಗೆ ಒಂದಾಗಿರುತ್ತಾರೆ, ಮಗನಂತೆ (ವಿನೋದ್ ಮೆಹ್‍ರಾ) ಸಾಕಿದ್ದ ಹುಡುಗ ದೊಡ್ಡವನಾಗಿ ಇವಳ ಪ್ರೀತಿಯನ್ನು ಹೇಗೆ ತೀರಿಸುತ್ತಾನೆ, ಮತ್ತು ವೇಶ್ಯೆಯಾಗಿ ಬದುಕಿದ್ದವಳು ವಯಸ್ಸಾದ ಮೇಲೆ ಮಾಡಬೇಕಾದ ಕೆಲಸಗಳು ಎಲ್ಲವನ್ನೂ ಬಹಳ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಇಲ್ಲಿ ಇನ್ನೊಂದು ಮೆಚ್ಚಿಕೊಳ್ಳಬೇಕಾದ ವಿಷಯ ಅಂದರೆ ವೇಶ್ಯೆಯ ಚಿತ್ರವನ್ನು ಅಶ್ಲೀಲತೆಯಿಲ್ಲದೆ ತೋರಿಸಿರುವುದು. ಎಲ್ಲೂ ಲೈಂಗಿಕತೆ ಕೂಡ ತೋರಿಸುವ ಅವಶ್ಯಕತೆ ಕಥಾವಸ್ತುಗೆ ದೊರಕಿಲ್ಲ.ಆ ಚಿತ್ರ ಬಿಡುಗಡೆ ಆದಾಗ ನಾನು ಹುಟ್ಟಿರಲಿಲ್ಲ. ಆದರೆ ಥ್ಯಾಂಕ್ಸ್ ಟು ಟೆಕ್ನಾಲಜಿ, ಈಗ ಎಲ್ಲವೂ ಮನೆಯಲ್ಲೇ ನೋಡಬಹುದು. ಅಂತ ಅದ್ಭುತ ಚಿತ್ರವನ್ನು ಸೃಷ್ಟಿಸಿದ ಎಲ್ಲರಿಗೂ ಒಂದು ಥ್ಯಾಂಕ್ಸ್!

- ಅ
21.12.2007
11.15PM

Friday, December 7, 2007

ಕಾಮ??

ವಿಶ್ವಾಮಿತ್ರಪರಾಶರಪ್ರಭೃತಯೋ
ವಾತಾಂಬುಪರ್ಣಾಶನಾಃ
ತೇSಪಿ ಸ್ತ್ರೀಮುಖಪಂಕಜಂ ಸುಲಲಿತಂ
ದೃಷ್ಟ್ವಾSಪಿ ಮೋಹಂಗತಾಃ

ಬೇಲೂರಿನಲ್ಲಿ ನಮ್ಮ ಗೈಡು ವಿಶ್ವವಿಖ್ಯಾತ ಶಾಂತಲೆಯ ಶಿಲ್ಪಕಲೆಯನ್ನು ತೋರಿಸಿ, ಚೆನ್ನಕೇಶವನ ಮೂರ್ತಿಯನ್ನು ದರ್ಶನ ಮಾಡಿಸಿ ದೇವಸ್ಥಾನದ ಎಲ್ಲಾ ಶಿಲ್ಪವನ್ನೂ ಆಸ್ವಾದಿಸುವಂತೆ ಮಾಡಿ ಕೊನೆಗೆ ಹೊರಗೆ ಕರೆತಂದು,ಗೋಪುರದಲ್ಲಿ ಕೆತ್ತಲಾದ ಶಿಲ್ಪವನ್ನು ತೋರಿಸಿದ. ಬಹಳ erotic. ವಾತ್ಸ್ಯಾಯನ ಕಾಮಸೂತ್ರವೇ ಕೆತ್ತಲಾಗಿದೆ. ಜೊತೆಗೆ ವಿಭಿನ್ನ ಭಂಗಿಗಳಲ್ಲಿ ಸಂಭೋಗಿಸುವ ಶಿಲ್ಪಗಳು ಕೂಡ. 'ಅವಳು' ಶೀರಸಾಸನ, 'ಅವನು' ವೀರಭದ್ರಾಸನ - ಇಂಥಾ ಭಂಗಿಯಲ್ಲೂ ಸಂಭೋಗ. ನನ್ನ ಬಾಯಿ ಸುಮ್ಮನಿರುತ್ತದೆಯೇ? "Don't try this at home ಅಂತ ನೀವು ಇಲ್ಲಿ ಬೋರ್ಡು ಹಾಕ್ಬೇಕು ನೋಡಿ" ಎಂದುಬಿಟ್ಟೆ. ದೊಡ್ಡದೊಡ್ಡವರೆಲ್ಲಾ ಇದ್ದರು. ಗೈಡಿಗೆ ಮುಜುಗರ ಆಯಿತು. ಆದರೂ ನಕ್ಕ. ಆ ಹಿರಿಯರೆಲ್ಲಾ ನನ್ನೇ ದಿಟ್ಟಿಸಿದರು. ನಾನು ನಕ್ಕುಬಿಟ್ಟು ಸುಮ್ಮನಾದೆ. (ಆ ಫೋಟೋ ತೆಗೆಯಲಾಗಲಿಲ್ಲ. ಬೇಲೂರು/ಹಳೆಬೀಡಿಗೆ ಹೋದರೆ ಕಂಡೀತು.)ನಮ್ಮ ಅನೇಕ ಹಿಂದು ದೇವಾಲಯಗಳಲ್ಲಿ ಈ ಕಾಮರೂಪದ ಶಿಲ್ಪಕಲೆಗಳು ಇರುವುದು ಏಕೆ?

ಗೈಡು ಹೇಳಿದ, ಆ ಕಾಲದಲ್ಲಿ ದೇವಸ್ಥಾನ ಪಾಠಶಾಲೆ ಕೂಡ ಆಗಿತ್ತು. ಸೆಕ್ಸ್ ಎಜುಕೇಶನ್ ಕೂಡ ಕೊಡ್ತಿದ್ರು ಎಂದ. ನಂಗೇನೋ ಅನುಮಾನ. ಅವರುಗಳು ಆ ಕೆತ್ತನೆಗಳನ್ನು ಬಳಸುವುದಕ್ಕೆ ಎರಡು ಕಾರಣ ಇರಬಹುದು. ಒಂದು ಆ ಕಾಲದಲ್ಲಿ ನಮಗಿರುವ ಸೌಲಭ್ಯಗಳಾದ ಟಿವಿ, ರೇಡಿಯೋ, ಸಿನೆಮಾ ಇಂಥಾ ಮನರಂಜನೆಗಳಿರಲಿಲ್ಲ. ನಾಟಕ, ನೃತ್ಯ, ಸಂಗೀತ, ಕಲೆ - ಇದ್ದುವು. ಬಹುಶಃ ಅವರಿಗೆ ಕಾಮವೂ ಸಹ ಮನರಂಜನೆಗಳಲ್ಲಿ ಒಂದು. ಈ ಕಾರಣ ಅಲ್ಲದೇ ಇದ್ದರೆ, ಆ ಕಾಲದ ರಾಜರುಗಳು ಅತ್ಯಂತ ಹಿರಿಯ ವಿದ್ವಾಂಸರನ್ನು ತಮ್ಮ ಆಸ್ಥಾನದಲ್ಲಿಟ್ಟುಕೊಂಡಿದ್ದರು. ವೇದೋಪನಿಷತ್ತುಗಳಲ್ಲಿ ಅವರುಗಳು ನಿಪುಣರು. ವೇದದಲ್ಲಿ ಹೇಳಿರುವುದನ್ನೆಲ್ಲಾ ಪಾಲಿಸಬೇಕೆಂಬುದು ಅವರ ನಂಬುಗೆಯಾಗಿತ್ತೆನಿಸುತ್ತೆ.ಪ್ರಜಾಪತಿಃ ಸ್ತ್ರಿಯಾಂ ಯಶಃ ....
ಕಾಮಸ್ಯ ತೃಪ್ತಿರಾನಂದಮ್
ಪುರಂಧಿರ್ಯೋಷೇತ್ಯಾಹ ಯೋಷಿತ್ಯೇವ ರೂಪಂ
ದಧಾತಿ ತಸ್ಮಾತ್ ಸ್ತ್ರೀ ಯುವತಿಃ ಪ್ರಿಯಾ ಭಾವುಕಾ

ನಂದಾಮ ಶರದಶ್ಯತಮ್
ಮೋದಾಮ ಶರದಶ್ಯತಮ್ .....
ಅಜೀತಾಸ್ಸ್ಯಾಮ ಶರದಶ್ಯತಮ್


ಹೀಗೆ ವೇದದಲ್ಲೇ ಹೇಳಿರುವಾಗ ನಾವು ಅದನ್ನು ಕೇಳದಿರಲಾದೀತೇ ಎಂಬುದು ಕಾಮಪರರ ವಾದ. ಕಾಮವಿಲ್ಲದವನು ಯಶಸ್ಸು ಪಡೆಯಲು ಸಾಧ್ಯವೇ ಇಲ್ಲವಂತೆ!

ಆದರೂ ನನ್ನ ಪ್ರಶ್ನೆಗೆ ಉತ್ತರ ಸರಿಯಾಗಿ ಸಿಕ್ಕಿಲ್ಲ. ಕಾಮವನ್ನು ಹೇಗೇ ಹೇಳಿರಲಿ, ಒಳ್ಳೇದು ಅಂತಲಾಗಲಿ, ಕೆಟ್ಟದ್ದು ಅಂತಾದರೂ ಆಗಲಿ, ಆದರೆ ಅವುಗಳು ದೇವಸ್ಥಾನದ ಗೋಡೆಗಳ ಮೇಲೆ, ಗೋಪುರಗಳ ಮೇಲೆ ಹೇಗೆ ಬಂದವು? ಯಾಕೆ ಬಂದವು??

-ಅ
08.12.2007
1AM

Wednesday, December 5, 2007

ತಿಂಗಳು

ಅಬ್ಧಿಯಾಳಕಿಳಿವ ಸಂಧ್ಯೆಯ ಕಂಡ ಎನ್ನೆದೆ-
ಯಾಗಸವು ಹಣತೆಯ ಜ್ಯೋತಿಯಂತೆ
ಅಚಲದಂಚಿನಿಂದ ಉದಿಸುವರುಣನ ಕಂಡ ಎನ್ನೆದೆ-
ಪೃಥಿವಿಯು ಶಶಿಯಂಬುಧಿಯ ಪ್ರೀತಿಯಂತೆ
ಒಂದಾಗುವ ಮನಗಳೊಂದಾಗುವುದು ಜಗದ ನೀತಿಯಂತೆ!

ನದಿ ಕಡಲೆಡೆಗೆ ಹರಿವಲ್ಲಿ ಪಯಣಿಸಿ
ಮಳೆಯಾಗುವ ಮುಗಿಲಿನ ನೆಳಲಲಿ ಪ್ರಣಯಿಸಿ
ಮಾಮರದ ಹಂಬಲದಿ ಪಿಕವೊಮ್ಮೊಮ್ಮೆ
ಸಲಿಲದ ಹಂಬಲದಿ ಮಂಡೂಕವೊಮ್ಮೊಮ್ಮೆ
ಎನ್ನ ಹಂಬಲದಿ ಬರುವ ಸವಿಸಂಗತಿಯ ಹೊತ್ತ ಸಖನೊಮ್ಮೊಮ್ಮೆ!

ಕರವು ಹರಸಿಹುದು
ಕರವು ಅರಸಿಹುದು
ಹರಸಿದ ಕರಗಳೇ ಕ್ಷಣ ಮಾತ್ರದ ಮುನ್ನ ಮರೆಸಿಹುದು
ಭರಿಸಿದ್ದೆದೆಯೊಲವು ತಂದ ನೋವಿನ ಹನಿಯನು
ಸರಿಯದೆನ್ನಡಿಗಡಿಗೆ ದಂಡಿಸುತಿಹ ಶನಿಯನು!

ಹೊಸಶಶಿಯು ಹೊಸಬೆಳಕ ಚೆಲ್ಲುವುದನೀಕ್ಷಿಸಲು
ಹೊಸ ದಿಟ್ಟಿಯ ಹೊತ್ತ ಹಳೆ ಕಂಗಳು
ಬೆಳಕಿನೂಟವ ಬಡಿಸುತಿಹುದೊಂದೆಡೆ ನವ ತಿಂಗಳು
ಎನ್ನಳಿವುಳಿವನ್ನೇ ಎದೆಯೊಡ್ಡಿ ಪರೀಕ್ಷಿಸಲು
ಬಡಿಸುತಿಹುದೆನಗೆ ಮಾತ್ರ ಬದಿಯಲ್ಲಿ ತಂಗಳು!!

-ಅ
06.12.2007
12.30AM

Sunday, December 2, 2007

ಬಾಳು ಬೆಳಗಲಿ

ಶ್ರೀನಿವಾಸ, ಅಲಿಯಾಸ್ ಗಂಡಭೇರುಂಡ ಅಲಿಯಾಸ್ ಶ್ರೀನಿವಾಸ್ ರಾಜನ್ ಅಲಿಯಾಸ್ ಶ್ರೀನಿವಾಸ ತೆರಕಣಂಬಿಗೆ ಇಂದು ಅದೆಷ್ಟೋ ವರ್ಷ ತುಂಬಿದೆ. ಅಂತೂ ಬಹಳ ಬೆಳೆದು ನಿಂತ ....... ಆಗಿದ್ದಾನೆ. ಇನ್ನೂ ಹೀಗೆ ಹುಟ್ಟು ಹಬ್ಬಗಳನ್ನಾಚರಿಸಿಕೊಳ್ಳುತ್ತ ..... ............ ಎಲ್ಲಾ ಆಗಿ ಬೆಳೆದು ನಿಲ್ಲಲಿ.

Once again, all the best, ಶ್ರೀನಿವಾಸ!

-ಅ
02.12.2007
12.05AM

Saturday, December 1, 2007

ಡೇ-ಗಳು.ಇವತ್ತು ವಿಶ್ವ ಏಯ್ಡ್ಸ್ ದಿನ. ಹೆಚ್ಚು ಬರೆಯುವ ಗೋಜಿಗೆ ಹೋಗುವುದಿಲ್ಲ. ನಮ್ಮ ನಾಡು ವಿನಲ್ಲಿ ಡೈನಮಿಕ್ ದಿವ್ಯಾ ಸಾಕಷ್ಟು ಬರೆಯಲಿದ್ದಾಳೆ ಈ ಬಗ್ಗೆ. ವಿಭಿನ್ನವಾಗಿ ಹೇಳಲೆತ್ನಿಸಿದ್ದಾಳೆ. ಸದ್ಯದಲ್ಲೇ ಪಬ್ಲಿಷ್ ಮಾಡಲಿದ್ದಾಳೆ. ಅದಲ್ಲದೆ ಟಿವಿಯಲ್ಲಿ, ಪತ್ರಿಕೆಗಳಲ್ಲಿ, ಸಿರಿಂಜನ್ನು ಕಾಂಡೋಮ್‍ಗಳನ್ನು, ಮಾದಕ ದ್ರವ್ಯಗಳನ್ನು ನೋಡಿ ನೋಡಿ ಸಾಕಾಗಿದೆ ಜನಕ್ಕೆ. ಏಯ್ಡ್ಸ್ ಹೇಗೆ ಬರುತ್ತೆ, ಹೇಗೆ ಬರೋದಿಲ್ಲ ಅಂತ ಹತ್ತಾರು ವರ್ಷದಿಂದ ಸಿನಿಮಾ ನಟರು, ಆರೋಗ್ಯಸಚಿವರು, ರೂಪದರ್ಶಿಗಳು, ಕ್ರಿಕೆಟ್ ಆಟಗಾರರು ಟಿವಿಯಲ್ಲಿ ರೇಡಿಯೋದಲ್ಲಿ ಪಾಠ ಮಾಡುವ ಟೀಚರುಗಳ ಥರ ಹೇಳುತ್ತಲೇ ಬರುತ್ತಿದ್ದಾರೆ. ವಿಶ್ವ ಏಯ್ಡ್ಸ್ ದಿನದ ಆಫಿಷಿಯಲ್ ವೆಬ್‍ಸೈಟು ಕೂಡ ಒಂದಿದೆ ಎಂದು ನನಗೆ ತಿಳಿದಿರಲಿಲ್ಲ ಮೊನ್ನೆ ಮೊನ್ನೆಯವರೆಗೂ. http://www.worldaidsday.org/

.........................................................................................................................................................
ಮೊನ್ನೆ ಇನ್ನೊಂದು "ಡೇ" ಆಯಿತು. ಒಬ್ಬ ಮಹಾನ್ ಕಲಾವಿದನ ಬರ್ತ್‍ ಡೇ!! ಅವನೊಬ್ಬ ಹಾಸ್ಯನಟನಾಗಿದ್ದ. ಅವನು ನಟಿಸುತ್ತಿದ್ದಾನೆಂದರೆ ಆ ಕಾಲದ ಸ್ಟಾರ್‍ಗಳಾದ ದಿಲೀಪ್ ಕುಮಾರ್, ದೇವ್ ಆನಂದ್, ಸುನಿಲ್ ದತ್, ಸಿಲ್ವರ್ ಜುಬಿಲಿ ಹೀರೋ ರಾಜೇಂದ್ರ ಕುಮಾರ್ ಇಂಥಾ ಘಟಾನುಘಟಿಯರೆಲ್ಲಾ ಹೆದರುತ್ತಿದ್ದರು. ತಮ್ಮ ಚಿತ್ರ ಹಿಟ್ ಆಗೋದಂತೂ ಗ್ಯಾರೆಂಟಿ. ಆದರೆ ಚಿತ್ರದ ಹೀರೋಗಿಂತ ಈ ಹಾಸ್ಯನಟನಿಗೆ ಜನ ಹೆಚ್ಚು ಕ್ರೆಡಿಟ್ ಕೊಟ್ಟುಬಿಡುತ್ತಿದ್ದರು. ಈ ಭೀತಿ ಆ ಕಾಲದ ಪ್ರತಿಯೊಬ್ಬ ನಟನಿಗೂ ಇತ್ತು. ಆ ಹಾಸ್ಯನಟ ಯಾರು ಗೊತ್ತೇ? ಆತನ ಹೆಸರು ಮೆಹ್‍ಮೂದ್!!ಈ ಹಾಡು ಕೇಳದ ಹಿಂದಿ ಚಿತ್ರರಸಿಕರು ಯಾರಿದ್ದಾರೆ? ಬಾಂಬೇ ಟು ಗೋಆ‍ದಲ್ಲಿನ ಕಂಡಕ್ಟರ್, ಗುಮ್‍ನಾಮ್‍ನಲ್ಲಿ ಹೆಲೆನ್ ಜೊತೆ (ಪಾತ್ರದ ಹೆಸರು ನೆನಪಿಲ್ಲ), Aao twist kare.., ಇದರೆಲ್ಲೆಲ್ಲಾ ಕಡೆ ಮೆಹ್‍ಮೂದ್ ಮೆರೆದಿದ್ದಾನೆ.ಅತ್ಯಂತ ಜನಪ್ರಿಯವಾದ ಪಡೋಸನ್‍ನ ಟೀಚರಿನ ಪಾತ್ರವನ್ನು ಮರೆಯಲಾದೀತೇ? ಸಾಕ್ಷಾತ್ ಕಿಶೋರ್ ಕುಮಾರ್ ಮೆಹ್‍ಮೂದ್ ಬಗ್ಗೆ ಒಮ್ಮೆ ಹೇಳಿದ್ದ. ಆಗಿನ್ನೂ ಮೆಹ್‍ಮೂದ್ ಬಂದ ಹೊಸತು. "ನನ್ನ ಜೊತೆಗೆ ಸ್ಪರ್ಧಿಸಲು ಬಂದವನು ನೀನು. ನಿನಗೆ ನಾನು ಅವಕಾಶ ಹೇಗೆ ಕೊಡಲಿ ನಟಿಸೋದಕ್ಕೆ?" ಅಂತ. ಮೆಹ್‍ಮೂದ್ ಚಿತ್ರದಲ್ಲಷ್ಟೇ ಕಾಮೀಡಿಯನ್ ಆಗಿರಲಿಲ್ಲ. ನಿಜ ಜೀವನದಲ್ಲೂ ಆತನಿಗೆ ಒಳ್ಳೇ ಹಾಸ್ಯಪ್ರಜ್ಞೆಯಿತ್ತು. "ನಾನು ದೊಡ್ಡ ನಿರ್ದೇಶಕ, ನಿರ್ಮಾಪಕ ಆಗ್ತೀನಲ್ಲಾ ಮುಂದೆ, ಆಗ ನಿಮಗೆ ನಾನು ಅವಕಾಶ ಕೊಡ್ತೀನಿ ಸರ್" ಎಂದು ಕಿಶೋರ್‍ಗೆ ಉತ್ತರವಿತ್ತು ಕಾಲ್ಕಿತ್ತಿದ್ದ. ಪಡೋಸನ್ ಚಿತ್ರ ತಯಾರಾದಾಗ ನಟನೆಯಿಂದ ವರ್ಷಾನುಗಟ್ಟಲೆ ದೂರವಿದ್ದ ಕಿಶೋರ್ ಕುಮಾರ್‍ಗೆ ಅವಕಾಶ ಕೊಟ್ಟಿದ್ದು ಅದೇ ಮೆಹ್‍ಮೂದ್!!ನಗಿಸುತ್ತಾ ನಗಿಸುತ್ತಾ ಒಂದು ದಿನ ನಗಲಿರಲಿ, ಮಾತೂ ಆಡಲಾಗದಂತೆ, ಮಾತಿರಲಿ, ಉಸಿರೂ ಆಡಲಾಗದಂತಾಗಿ ಹೋದ ಮೆಹ್‍ಮೂದ್. ಎಲ್ಲಿ ಹೋದರೂ ಆಕ್ಸಿಜನ್ ಸಿಲಿಂಡರನ್ನೂ ಜೊತೆಗೊಯ್ಯಬೇಕಾಗಿತ್ತು. ಮೂರು ವರ್ಷಗಳ ಕೆಳಗೆ ಕೊನೆಯುಸಿರೆಳೆದ. ಆದರೆ ಚಿತ್ರರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದ.
.........................................................................................................................................................
ಡಿಸೆಂಬರ್ ಮೂರು, ವಿಶ್ವ ಅಂಗವಿಕಲರ ದಿನ. ಅವರನ್ನು ಅಂಗ"ವಿಕಲರು" ಎಂದು ಕರೆಯಲು ಏಕೋ ಮನಸ್ಸಿಲ್ಲ. ಅಂಗವಿಕಲರು ಸಾಮಾನ್ಯವಾಗಿ ನಮಗಿಂತಲೂ ಬೇರಾವ ವಿಷಯದಲ್ಲೋ ಉನ್ನತ ಸಾಮರ್ಥ್ಯ ಹೊಂದಿರುವುದನ್ನು ನಾವು ಎಷ್ಟೋ ಸಲ ನೋಡಿದ್ದೇವೆ. ಅಂಗವಿಕಲರನ್ನು ನೋಡಿ ಯಾರೂ ಕನಿಕರ ಪಡಬೇಕಿಲ್ಲ, ಕರುಣೆ ತೋರಿಸಬೇಕಿಲ್ಲ. ಕನಿಕರ, ಕರುಣೆಗಿಂತ ಹಿರಿದಾದ ಶಿಕ್ಷೆ ಮತ್ತೊಂದಿಲ್ಲ. ಕನಿಕರ ತೋರಿಸುವುದೆಂದರೆ ಪದೇ ಪದೇ ಅವರಿಗೆ ನೀನು ಅಂಗವಿಕಲ ಎಂದು ಹೇಳಿದಂತೆ. ಅವರನ್ನೂ ಸಾಮಾನ್ಯರಂತೆಯೇ ಕಾಣೋಣ. ಅಂಗವಷ್ಟೇ ವೈಕಲ್ಯತೆಯಿಂದಿರುತ್ತೆ ಹೊರೆತು ಮನಸ್ಸಲ್ಲ. ಕಣ್ಣಿದ್ದೂ ಪ್ರಕೃತಿಯಲ್ಲಿ ವಿಕೃತಿ ಕಾಣುವ ಕುರುಡರು, ಕಿವಿಯಿದ್ದೂ ಜಗದ ಕೂಗು ಕೇಳದ ಕಿವುಡರು, ಕಾಲಿದ್ದೂ ಪಕ್ಕದ ಮನೆಗೂ ಕಾರಿನಲ್ಲೇ ಹೋಗಬಯಸುವ ಕುಂಟರು, ನಮ್ಮಲ್ಲಿ ಅನೇಕರಿದ್ದಾರೆ. ಅವರುಗಳು ನಿಜವಾದ ಅಂಗವಿಕಲರು. ಅವರಿಗೂ ಒಂದು "ಡೇ" ಮೀಸಲಿಡೋಣ.

.........................................................................................................................................................
ಕೊನೆಯ ವಿಷಯ. ನಾಡಿದ್ದು, ಕಡೇ ಕಾರ್ತಿಕ ಸೋಮವಾರ. ಬಸವನಗುಡಿ ನಿವಾಸಿಗಳಿಗೆ ಬಹುದೊಡ್ಡ ಹಬ್ಬ. ನಾನ್ನೂರು ವರ್ಷಗಳಿಂದ ಆಚರಿಸಿಕೊಂಡು ಬಂದ ಕಡಲೆಕಾಯಿ ಪರ್ಶೆ. ಪರಿಶೆ ಅನ್ನಬೇಕೋ, ಪರಿಷೆ ಅನ್ನಬೇಕೋ, ಪರ್ಸೆ ಅನ್ನಬೇಕೋ, ಪರ್ಶೆ ಅನ್ನಬೇಕೋ ನನಗೆ ಗೊತ್ತಿಲ್ಲ. ಚಿಕ್ಕಂದಿನಿಂದಲೂ ಪರ್ಶೆ ಪರ್ಶೆ ಎಂದೇ ಅಭ್ಯಾಸ ಆಗಿಹೋಗಿದೆ. ಈ ಕಡಲೆ ಕಾಯಿ ಪರ್ಶೆ ಎಂದರೇನೆಂದು ಇಲ್ಲಿ ಬರೆಯಲು ಕಷ್ಟ. ಅದನ್ನು ಅನುಭವಿಸಿದರೇನೇ ಗೊತ್ತಾಗೋದು. ಬಸವನಗುಡಿಗೆ ಬನ್ನಿ. ಬೆಂಗಳೂರಲ್ಲೂ ಜಾತ್ರೆಯಾಗುತ್ತೆ ಅಂತ ಎಷ್ಟೊಂದು ಬೆಂಗಳೂರಿಗರಿಗೆ (?) ಗೊತ್ತೇ ಇಲ್ಲ.

ಪರ್ಶೆಯಲ್ಲಿ ಹುಂಡಿ ಖರೀದಿಸುವುದು ನನ್ನ ಪ್ರತಿವರ್ಷದ ಡ್ಯೂಟಿ. ಜೊತೆಗೆ ಬಣ್ಣ ಬಣ್ಣದ ಬತ್ತಾಸು, ಕಲ್ಯಾಣ ಸೇವೆ, ಕಡಲೆ ಪುರಿ, ಚೌ-ಚೌ, ಮತ್ತು ಬಹಳ ಮುಖ್ಯವಾಗಿ ಹಸಿ ಕಡಲೆ ಕಾಯಿ. ದೊಡ್ಡ ಬಸವಣ್ಣನ ದೇವಸ್ಥಾನದ ಮುಂದೆ, ಕಹಳೆ ಬಂಡೆ ಉದ್ಯಾನದಲ್ಲಿ, ಬುಲ್ ಟೆಂಪಲ್ ರಸ್ತೆಯಲ್ಲಿ, ಗಣೇಶ್ ಭವನ ರಸ್ತೆಯಲ್ಲಿ, ದೊಡ್ಡ ಗಣೇಶ ದೇವಸ್ಥಾನದಲ್ಲಿ, ಮಲ್ಲಿಕಾರ್ಜುನ ದೇವಸ್ಥಾನದಲ್ಲಿ, ಆಚಾರ್ಯ ಪಾಠಶಾಲೆಯ ಉದ್ಯಾನದಲ್ಲಿ, ತ್ಯಾಗರಾಜ ನಗರ ಮುಖ್ಯರಸ್ತೆಯಲ್ಲಿ ಎಲ್ಲೆಡೆ ಈ ಪರ್ಶೆಯು ಮೆರೆದಾಡುತ್ತಿರುತ್ತೆ. ಈ ಬಾರಿ ಹೋಗಲು ಕಾತುರನಾಗಿದ್ದೇನೆ. ಒಂದು ಪೀಪಿ ಕೊಂಡುಕೊಳ್ಳುವ ಬಯಕೆ!

-ಅ
01.12.2007
4PM