Saturday, December 1, 2007

ಡೇ-ಗಳು.ಇವತ್ತು ವಿಶ್ವ ಏಯ್ಡ್ಸ್ ದಿನ. ಹೆಚ್ಚು ಬರೆಯುವ ಗೋಜಿಗೆ ಹೋಗುವುದಿಲ್ಲ. ನಮ್ಮ ನಾಡು ವಿನಲ್ಲಿ ಡೈನಮಿಕ್ ದಿವ್ಯಾ ಸಾಕಷ್ಟು ಬರೆಯಲಿದ್ದಾಳೆ ಈ ಬಗ್ಗೆ. ವಿಭಿನ್ನವಾಗಿ ಹೇಳಲೆತ್ನಿಸಿದ್ದಾಳೆ. ಸದ್ಯದಲ್ಲೇ ಪಬ್ಲಿಷ್ ಮಾಡಲಿದ್ದಾಳೆ. ಅದಲ್ಲದೆ ಟಿವಿಯಲ್ಲಿ, ಪತ್ರಿಕೆಗಳಲ್ಲಿ, ಸಿರಿಂಜನ್ನು ಕಾಂಡೋಮ್‍ಗಳನ್ನು, ಮಾದಕ ದ್ರವ್ಯಗಳನ್ನು ನೋಡಿ ನೋಡಿ ಸಾಕಾಗಿದೆ ಜನಕ್ಕೆ. ಏಯ್ಡ್ಸ್ ಹೇಗೆ ಬರುತ್ತೆ, ಹೇಗೆ ಬರೋದಿಲ್ಲ ಅಂತ ಹತ್ತಾರು ವರ್ಷದಿಂದ ಸಿನಿಮಾ ನಟರು, ಆರೋಗ್ಯಸಚಿವರು, ರೂಪದರ್ಶಿಗಳು, ಕ್ರಿಕೆಟ್ ಆಟಗಾರರು ಟಿವಿಯಲ್ಲಿ ರೇಡಿಯೋದಲ್ಲಿ ಪಾಠ ಮಾಡುವ ಟೀಚರುಗಳ ಥರ ಹೇಳುತ್ತಲೇ ಬರುತ್ತಿದ್ದಾರೆ. ವಿಶ್ವ ಏಯ್ಡ್ಸ್ ದಿನದ ಆಫಿಷಿಯಲ್ ವೆಬ್‍ಸೈಟು ಕೂಡ ಒಂದಿದೆ ಎಂದು ನನಗೆ ತಿಳಿದಿರಲಿಲ್ಲ ಮೊನ್ನೆ ಮೊನ್ನೆಯವರೆಗೂ. http://www.worldaidsday.org/

.........................................................................................................................................................
ಮೊನ್ನೆ ಇನ್ನೊಂದು "ಡೇ" ಆಯಿತು. ಒಬ್ಬ ಮಹಾನ್ ಕಲಾವಿದನ ಬರ್ತ್‍ ಡೇ!! ಅವನೊಬ್ಬ ಹಾಸ್ಯನಟನಾಗಿದ್ದ. ಅವನು ನಟಿಸುತ್ತಿದ್ದಾನೆಂದರೆ ಆ ಕಾಲದ ಸ್ಟಾರ್‍ಗಳಾದ ದಿಲೀಪ್ ಕುಮಾರ್, ದೇವ್ ಆನಂದ್, ಸುನಿಲ್ ದತ್, ಸಿಲ್ವರ್ ಜುಬಿಲಿ ಹೀರೋ ರಾಜೇಂದ್ರ ಕುಮಾರ್ ಇಂಥಾ ಘಟಾನುಘಟಿಯರೆಲ್ಲಾ ಹೆದರುತ್ತಿದ್ದರು. ತಮ್ಮ ಚಿತ್ರ ಹಿಟ್ ಆಗೋದಂತೂ ಗ್ಯಾರೆಂಟಿ. ಆದರೆ ಚಿತ್ರದ ಹೀರೋಗಿಂತ ಈ ಹಾಸ್ಯನಟನಿಗೆ ಜನ ಹೆಚ್ಚು ಕ್ರೆಡಿಟ್ ಕೊಟ್ಟುಬಿಡುತ್ತಿದ್ದರು. ಈ ಭೀತಿ ಆ ಕಾಲದ ಪ್ರತಿಯೊಬ್ಬ ನಟನಿಗೂ ಇತ್ತು. ಆ ಹಾಸ್ಯನಟ ಯಾರು ಗೊತ್ತೇ? ಆತನ ಹೆಸರು ಮೆಹ್‍ಮೂದ್!!ಈ ಹಾಡು ಕೇಳದ ಹಿಂದಿ ಚಿತ್ರರಸಿಕರು ಯಾರಿದ್ದಾರೆ? ಬಾಂಬೇ ಟು ಗೋಆ‍ದಲ್ಲಿನ ಕಂಡಕ್ಟರ್, ಗುಮ್‍ನಾಮ್‍ನಲ್ಲಿ ಹೆಲೆನ್ ಜೊತೆ (ಪಾತ್ರದ ಹೆಸರು ನೆನಪಿಲ್ಲ), Aao twist kare.., ಇದರೆಲ್ಲೆಲ್ಲಾ ಕಡೆ ಮೆಹ್‍ಮೂದ್ ಮೆರೆದಿದ್ದಾನೆ.ಅತ್ಯಂತ ಜನಪ್ರಿಯವಾದ ಪಡೋಸನ್‍ನ ಟೀಚರಿನ ಪಾತ್ರವನ್ನು ಮರೆಯಲಾದೀತೇ? ಸಾಕ್ಷಾತ್ ಕಿಶೋರ್ ಕುಮಾರ್ ಮೆಹ್‍ಮೂದ್ ಬಗ್ಗೆ ಒಮ್ಮೆ ಹೇಳಿದ್ದ. ಆಗಿನ್ನೂ ಮೆಹ್‍ಮೂದ್ ಬಂದ ಹೊಸತು. "ನನ್ನ ಜೊತೆಗೆ ಸ್ಪರ್ಧಿಸಲು ಬಂದವನು ನೀನು. ನಿನಗೆ ನಾನು ಅವಕಾಶ ಹೇಗೆ ಕೊಡಲಿ ನಟಿಸೋದಕ್ಕೆ?" ಅಂತ. ಮೆಹ್‍ಮೂದ್ ಚಿತ್ರದಲ್ಲಷ್ಟೇ ಕಾಮೀಡಿಯನ್ ಆಗಿರಲಿಲ್ಲ. ನಿಜ ಜೀವನದಲ್ಲೂ ಆತನಿಗೆ ಒಳ್ಳೇ ಹಾಸ್ಯಪ್ರಜ್ಞೆಯಿತ್ತು. "ನಾನು ದೊಡ್ಡ ನಿರ್ದೇಶಕ, ನಿರ್ಮಾಪಕ ಆಗ್ತೀನಲ್ಲಾ ಮುಂದೆ, ಆಗ ನಿಮಗೆ ನಾನು ಅವಕಾಶ ಕೊಡ್ತೀನಿ ಸರ್" ಎಂದು ಕಿಶೋರ್‍ಗೆ ಉತ್ತರವಿತ್ತು ಕಾಲ್ಕಿತ್ತಿದ್ದ. ಪಡೋಸನ್ ಚಿತ್ರ ತಯಾರಾದಾಗ ನಟನೆಯಿಂದ ವರ್ಷಾನುಗಟ್ಟಲೆ ದೂರವಿದ್ದ ಕಿಶೋರ್ ಕುಮಾರ್‍ಗೆ ಅವಕಾಶ ಕೊಟ್ಟಿದ್ದು ಅದೇ ಮೆಹ್‍ಮೂದ್!!ನಗಿಸುತ್ತಾ ನಗಿಸುತ್ತಾ ಒಂದು ದಿನ ನಗಲಿರಲಿ, ಮಾತೂ ಆಡಲಾಗದಂತೆ, ಮಾತಿರಲಿ, ಉಸಿರೂ ಆಡಲಾಗದಂತಾಗಿ ಹೋದ ಮೆಹ್‍ಮೂದ್. ಎಲ್ಲಿ ಹೋದರೂ ಆಕ್ಸಿಜನ್ ಸಿಲಿಂಡರನ್ನೂ ಜೊತೆಗೊಯ್ಯಬೇಕಾಗಿತ್ತು. ಮೂರು ವರ್ಷಗಳ ಕೆಳಗೆ ಕೊನೆಯುಸಿರೆಳೆದ. ಆದರೆ ಚಿತ್ರರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದ.
.........................................................................................................................................................
ಡಿಸೆಂಬರ್ ಮೂರು, ವಿಶ್ವ ಅಂಗವಿಕಲರ ದಿನ. ಅವರನ್ನು ಅಂಗ"ವಿಕಲರು" ಎಂದು ಕರೆಯಲು ಏಕೋ ಮನಸ್ಸಿಲ್ಲ. ಅಂಗವಿಕಲರು ಸಾಮಾನ್ಯವಾಗಿ ನಮಗಿಂತಲೂ ಬೇರಾವ ವಿಷಯದಲ್ಲೋ ಉನ್ನತ ಸಾಮರ್ಥ್ಯ ಹೊಂದಿರುವುದನ್ನು ನಾವು ಎಷ್ಟೋ ಸಲ ನೋಡಿದ್ದೇವೆ. ಅಂಗವಿಕಲರನ್ನು ನೋಡಿ ಯಾರೂ ಕನಿಕರ ಪಡಬೇಕಿಲ್ಲ, ಕರುಣೆ ತೋರಿಸಬೇಕಿಲ್ಲ. ಕನಿಕರ, ಕರುಣೆಗಿಂತ ಹಿರಿದಾದ ಶಿಕ್ಷೆ ಮತ್ತೊಂದಿಲ್ಲ. ಕನಿಕರ ತೋರಿಸುವುದೆಂದರೆ ಪದೇ ಪದೇ ಅವರಿಗೆ ನೀನು ಅಂಗವಿಕಲ ಎಂದು ಹೇಳಿದಂತೆ. ಅವರನ್ನೂ ಸಾಮಾನ್ಯರಂತೆಯೇ ಕಾಣೋಣ. ಅಂಗವಷ್ಟೇ ವೈಕಲ್ಯತೆಯಿಂದಿರುತ್ತೆ ಹೊರೆತು ಮನಸ್ಸಲ್ಲ. ಕಣ್ಣಿದ್ದೂ ಪ್ರಕೃತಿಯಲ್ಲಿ ವಿಕೃತಿ ಕಾಣುವ ಕುರುಡರು, ಕಿವಿಯಿದ್ದೂ ಜಗದ ಕೂಗು ಕೇಳದ ಕಿವುಡರು, ಕಾಲಿದ್ದೂ ಪಕ್ಕದ ಮನೆಗೂ ಕಾರಿನಲ್ಲೇ ಹೋಗಬಯಸುವ ಕುಂಟರು, ನಮ್ಮಲ್ಲಿ ಅನೇಕರಿದ್ದಾರೆ. ಅವರುಗಳು ನಿಜವಾದ ಅಂಗವಿಕಲರು. ಅವರಿಗೂ ಒಂದು "ಡೇ" ಮೀಸಲಿಡೋಣ.

.........................................................................................................................................................
ಕೊನೆಯ ವಿಷಯ. ನಾಡಿದ್ದು, ಕಡೇ ಕಾರ್ತಿಕ ಸೋಮವಾರ. ಬಸವನಗುಡಿ ನಿವಾಸಿಗಳಿಗೆ ಬಹುದೊಡ್ಡ ಹಬ್ಬ. ನಾನ್ನೂರು ವರ್ಷಗಳಿಂದ ಆಚರಿಸಿಕೊಂಡು ಬಂದ ಕಡಲೆಕಾಯಿ ಪರ್ಶೆ. ಪರಿಶೆ ಅನ್ನಬೇಕೋ, ಪರಿಷೆ ಅನ್ನಬೇಕೋ, ಪರ್ಸೆ ಅನ್ನಬೇಕೋ, ಪರ್ಶೆ ಅನ್ನಬೇಕೋ ನನಗೆ ಗೊತ್ತಿಲ್ಲ. ಚಿಕ್ಕಂದಿನಿಂದಲೂ ಪರ್ಶೆ ಪರ್ಶೆ ಎಂದೇ ಅಭ್ಯಾಸ ಆಗಿಹೋಗಿದೆ. ಈ ಕಡಲೆ ಕಾಯಿ ಪರ್ಶೆ ಎಂದರೇನೆಂದು ಇಲ್ಲಿ ಬರೆಯಲು ಕಷ್ಟ. ಅದನ್ನು ಅನುಭವಿಸಿದರೇನೇ ಗೊತ್ತಾಗೋದು. ಬಸವನಗುಡಿಗೆ ಬನ್ನಿ. ಬೆಂಗಳೂರಲ್ಲೂ ಜಾತ್ರೆಯಾಗುತ್ತೆ ಅಂತ ಎಷ್ಟೊಂದು ಬೆಂಗಳೂರಿಗರಿಗೆ (?) ಗೊತ್ತೇ ಇಲ್ಲ.

ಪರ್ಶೆಯಲ್ಲಿ ಹುಂಡಿ ಖರೀದಿಸುವುದು ನನ್ನ ಪ್ರತಿವರ್ಷದ ಡ್ಯೂಟಿ. ಜೊತೆಗೆ ಬಣ್ಣ ಬಣ್ಣದ ಬತ್ತಾಸು, ಕಲ್ಯಾಣ ಸೇವೆ, ಕಡಲೆ ಪುರಿ, ಚೌ-ಚೌ, ಮತ್ತು ಬಹಳ ಮುಖ್ಯವಾಗಿ ಹಸಿ ಕಡಲೆ ಕಾಯಿ. ದೊಡ್ಡ ಬಸವಣ್ಣನ ದೇವಸ್ಥಾನದ ಮುಂದೆ, ಕಹಳೆ ಬಂಡೆ ಉದ್ಯಾನದಲ್ಲಿ, ಬುಲ್ ಟೆಂಪಲ್ ರಸ್ತೆಯಲ್ಲಿ, ಗಣೇಶ್ ಭವನ ರಸ್ತೆಯಲ್ಲಿ, ದೊಡ್ಡ ಗಣೇಶ ದೇವಸ್ಥಾನದಲ್ಲಿ, ಮಲ್ಲಿಕಾರ್ಜುನ ದೇವಸ್ಥಾನದಲ್ಲಿ, ಆಚಾರ್ಯ ಪಾಠಶಾಲೆಯ ಉದ್ಯಾನದಲ್ಲಿ, ತ್ಯಾಗರಾಜ ನಗರ ಮುಖ್ಯರಸ್ತೆಯಲ್ಲಿ ಎಲ್ಲೆಡೆ ಈ ಪರ್ಶೆಯು ಮೆರೆದಾಡುತ್ತಿರುತ್ತೆ. ಈ ಬಾರಿ ಹೋಗಲು ಕಾತುರನಾಗಿದ್ದೇನೆ. ಒಂದು ಪೀಪಿ ಕೊಂಡುಕೊಳ್ಳುವ ಬಯಕೆ!

-ಅ
01.12.2007
4PM

6 comments:

 1. ನಾನೂ ಬರ್ತೀನಿ, ಹೋದ್ ವರ್ಷ ಹೋಗ್ಲೇ ಇಲ್ಲ :-(

  ReplyDelete
 2. ಐಡ್ಸ್ ದಿನದ ಬಗ್ಗೆ ಮತ್ತು ಐಡ್ಸ್-ನ ಬಗ್ಗೆ ಡೈನಮಿಕ್ ಬರೆಯುವ ಲೇಖನವನ್ನೆದುರು ನೋಡುತ್ತಿದ್ದೇನೆ.

  ಮಹ್ಮೂದನ ವೀಡಿಯೋ ನೋಡಲಾಗಲಿಲ್ಲ... ನೋಡಿದರೆ ನನ್ನ ನೆಟ್ ಕನೆಕ್ಷನ್ ಬಾಯ್ ಬಡ್ಕೋಳತ್ತೆ!!

  ಅಂಗವಿಕಲರು ಎಂದು ಕರೆಯುವುದು ತಪ್ಪು ನಿಜ, ಆದರೆ ಅಂಗವೈಕಲ್ಯವನ್ನೇ ನೆಪವಾಗಿಟ್ಟುಕೊಂಡು ದುಡ್ಡು ಕೀಳುವ ನೂರಾರು ಜನರನ್ನು ನೋಡಿದ್ದೇನೆ. ಅವರಿಗೇನು ಹೇಳಬೇಕು?

  ಕೊನೆಯದಾಗಿ ಕಡಲೇಕಾಯಿ ಪರಿಷೆ ಬಗ್ಗೆ... ಸ್ವಲ್ಪ ಕಡ್ಲೇಕಾಯಿ ನಂಗೆ ಪಾರ್ಸಲ್ ಮಾಡು... ಪ್ಲೀಸ್ ಕಣೋ... ಪ್ಲೀಸ್... :-)

  ReplyDelete
 3. [ಶ್ರೀಕಾಂತ್] ಹೌದು ನಾನೂ ನೋಡಿದ್ದೇನೆ. ಆದರೆ ಅಂಗವೈಕಲ್ಯವನ್ನೇ ಬಂಡವಾಳವಾಗಿಟ್ಟುಕೊಂಡು ಅತ್ಯುನ್ನತ ಕಲಾಕೃತಿಯನ್ನು ಸೃಷ್ಟಿಸುವವರನ್ನೂ ನೋಡಿದ್ದೇವಲ್ಲವೇ?

  ಕಡಲೇ ಕಾಯಿ ಕೊರಿಯರ್ ಮಾಡ್ಬಿಡ್ಲಾ?

  [ವಿಜಯಾ] ಧಾರಾಳವಾಗಿ!!

  ReplyDelete
 4. mahmood anno commedy actor ge ast demand ittu antha nange eegle gottagiddu...adhe tara kannadalli Narasimharaju nu idru antha gnapaka banthu....

  Ninna angavikalara bagegina lekhana artha poorNavaagidhe

  Kadlekaay parshe...hmmm...naanu parshege 8th std inda miss ilde prathi varsha hogthideeni.... :-)

  ReplyDelete
 5. [ಶ್ರೀಧರ] ಮೆಹ್ಮೂದ್ ಮತ್ತು ನರಸಿಂಹರಾಜು. ಸೂಪರ್!! ಹಾಗೇ ಇನ್ನೊಬ್ಬ ಇದ್ದ ಹಿಂದಿಯಲ್ಲಿ ಮೆಹ್ಮೂದ್‍ಗೆ ಸ್ಪರ್ಧಿ. ಆತನ ಹೆಸರು ಜಾನಿ ವಾಕರ್ ಅಂತ. ಬಹಳ ದೊಡ್ಡ ಹೆಸರು ಅವನದು.

  ಕಡಲೆಕಾಯಿ ಪರ್ಶೆಗೆ ಈ ಸಲ ಒಟ್ಟಿಗೇ ಹೋಗುವ.

  ReplyDelete
 6. ಅಂಗವಿಕಲತೆ ಬಗ್ಗೆ ಬರ್ದಿರೋದು ಚೆನ್ನಾಗಿದೆ. ನಿಜ ಕೂಡ..

  ಮೆಹ್‌ಮೂದ್ ಬಗ್ಗೆ ಈವತ್ತೇ ಮ್ಯಾನ್ ಗೊತ್ತಾಗಿದ್ದು.. thank you :)

  ReplyDelete