Tuesday, December 30, 2008

ಹೇಗೆ ಕಳೆಯಿತೋ?

ಬದುಕಿನ ಮೊದಲ ಇಪ್ಪತ್ತೈದು ವರ್ಷದ್ದು ಒಂದು ತೂಕವಾದರೆ ಈ ವರ್ಷದ್ದೇ ಬೇರೊಂದು ತೂಕ. ಅದುವರೆಗೂ ಪಯಣಿಸುತ್ತಿದ್ದ ಹಾದಿಯನ್ನು ಅಚಾನಕ್ಕಾಗಿ ನಿರ್ದಾಕ್ಷಿಣ್ಯವಾಗಿ ನಿರರ್ಗಳವಾಗಿ ಬದಲಿಸಿಬಿಟ್ಟ ಕೀರ್ತಿ ಈ ವರ್ಷಕ್ಕೆ ಸಲ್ಲಬೇಕು. ಶುಭಾಶುಭಗಳನ್ನು ತೋಲಿಸಲು ಕುಳಿತಿಲ್ಲ. ಹೀಗೇ, ನೆನಪು ಮಾಡಿಕೊಳ್ಳುತ್ತಾ ಕುಳಿತಿದ್ದೇನಷ್ಟೆ.

ಕೊಡಗಿನ ಶಿಖರವು ಮುನ್ನುಡಿಯ ಬರೆದಿರಲು
ಸಂತಸದ ಹೊನ್ನ ಕನಲು
ಒಡಲಿನ ಶಕುತಿಯು ಮಸಣದಲಿ ನೆರೆದಿರಲು
ಚಿತ್ರಿಸಿದ ಶಾಂತ ಕಡಲು
ಕಣ್ಣೆದುರೆ ಭ್ರಾಂತ ಸುಡಲು.

ಮಿತಿಯಿರದೆ ಚಿತೆಗೊಂದರ ತಾ ಹಿಂದೊಂದು
ಶಿಕ್ಷಕನ ಮೊರೆಯೇನಿಹುದು?
ಬೆನ್ನ ಹಿಂದೆಯೇ ಬೆಳಗಿರಲು ಮೊನೆಕಡುಗವು
ರಕ್ಷಕನ ಪೊರೆಯೆಲ್ಲಿಹುದು?
ಈ ಬಾಳು ಧರೆಯಲ್ಲಿಹುದು!

ಗುರಿಯಿರದ ಮಿತಿಯಿರದ ಕಪ್ಪು ಆಗಸದಲಿ
ಭವ್ಯ ತಾರೆಯೊಂದು ಹೊಳೆದು
ಮದುವೆಗೊಮ್ಮೆ ಜನನಕಿನ್ನೊಮ್ಮೆ ಸೆಳೆಯುತ
ರುದ್ರಭೂಮಿಯೆಡೆಗೆ ಬೆಳೆದು
ಮಾಯವಾಯಿತೆಲ್ಲಿ ಕಳೆದು?

ಅಲೆದಾಟ ತೊಳಲಾಟ ಭೀತಿ ಬೀಭತ್ಸದಲಿ
ಶಾಂತಿ ಸಮರಸದಲಿ ನಡೆದು
ಕಂಗೆಡದೆ ಧೃತಿಗೆಡದೆ ಪ್ರೀತಿ ಈ ವಕ್ಷದಲಿ
ಅಪಜಯದ ವರವ ಪಡೆದು
ಶಿರಬಾಗಿ ಸೋಲಗೊಡದು.

ಮುಂದಿರದೆ ಸಕಾಲವು ಹಿಂದೆ ಕಳೆದಂತೆ?
ಮತ್ತೆ ಬೆಳಗದೆ ಗಗನವು ಚಿತ್ರಚಾಪದಿ?
ಬೂದಿ ಭಸ್ಮವೇ ಬಾಳು ಬಿದಿಯ ತಾಪದಿ?
ನಿಜಭ್ರಮೆಯು ಇದು ಬರಿಯೆ.
ಬದುಕೆಂದೂ ಬಲು ಸಿರಿಯೆ!

-ಅ
30.12.2008
9.25AM

Monday, December 22, 2008

ಹಬ್ಬ - ವರದಿ

ಹಿಂದೆ, ಸುಮಾರು ಹದಿನೈದು ವರ್ಷಗಳ ಕೆಳಗೆ ಈ ಪಂಚಮುಖಿ ಛತ್ರದ ಸಮೀಪವೇ ನಾವು ಆರು ವರ್ಷಗಳ ಕಾಲ ಇದ್ದೆವು. ಆ ಮನೆಯನ್ನು ನೆಲಸಮ ಮಾಡುತ್ತಿದ್ದುದನ್ನು ನೋಡಿ ಸ್ವಲ್ಪ ಚುರುಕ್ಕೆಂದಿತು. ಆ ಮನೆಯಲ್ಲಿ ನನ್ನ ತಂದೆಯನ್ನು ನಾನು ಕೊನೆಯ ಬಾರಿಗೆ ನೋಡಿದ್ದು. ಸೆಕೆಂಡ್ ಸ್ಟೇಜು ಬಹಳ ಬದಲಾಗಿದೆ. ಬಿ.ಡಿ.ಎ. ಕಾಂಪ್ಲೆಕ್ಸು ಏಳುಗಂಟೆಗೆ ಕತ್ತಲಾಗಿಹೋಗುತ್ತಿತ್ತು. ಸಂಜೆ ಹೊತ್ತು ಪಾನಿ ಪುರಿ ತಿಂದು, ಒಂದು ಗುಟುಕು ಹಾಕಿ, ಕೈಯಲ್ಲಿ ಸಿಗರೇಟನ್ನು ಹೊತ್ತಿಸಿಕೊಂಡು ಅಡ್ಡಾಡುತ್ತಿದ್ದ ಪುಂಡ ಪೋಕರಿಗಳಿದ್ದ ಜಾಗದಲ್ಲಿ ಇಂದು "ಇದು ನಮ್ಮೂರಾ?" ಎನ್ನುವಷ್ಟರ ಮಟ್ಟಿಗೆ ಬದಲಾಗಿದೆ! ಕೈಯಲ್ಲಿ ಸಿಗರೇಟು, ಹೊಟ್ಟೆಯೊಳಗೆ ಪರಮಾತ್ಮನಿರುವವರನ್ನು ಈಗಲೂ ನೋಡುತ್ತೇವೆ. ಆದರೆ ಬೇರೆಯದೇ ರೀತಿಯಲ್ಲಿ. ಆಗ ಇಲ್ಲಿ ಓಡಾಡುತ್ತಿದ್ದ ಸಂಕೋಚಭರಿತ ಹೆಣ್ಣು ಮಕ್ಕಳನ್ನು ಚುಡಾಯಿಸಲು ನೆರೆದಿರುತ್ತಿದ್ದ ಫುಡಾರಿ ಹುಡುಗರ ಕೈಯಲ್ಲಿರುತ್ತಿತ್ತು. ಈಗ ಭಾರತವೋ ಎಂದೇ ಸಂದೇಹವುಂಟಾಗುವಂತೆ ಮೈಮೇಲೆ ಸಂಪೂರ್ಣ ಬಟ್ಟೆಯೂ ಇರದ ಹುಡುಗಿಯರ ಕೈಯಲ್ಲೇ ನೋಡಬಹುದು. ಇರಲಿ, ಬದಲಾವಣೆ ಅತ್ಯವಶ್ಯ - ಕಣ್ಣ ಮುಂದೆಯೇ ಬದಲಾಗಿದೆ ಈ ಸೆಕೆಂಡ್ ಸ್ಟೇಜು. ಇದರ ಬಗ್ಗೆ ಇನ್ನೊಮ್ಮೆ ನೋಡೋಣ.

ಅಂತೂ ನನ್ನನ್ನು ನನ್ನ ಮೊಮ್ಮಗಳು ಮೀರಿಸಿಬಿಟ್ಟಳು. ಕೊನೆಯ ಮೊಮ್ಮಗಳ ಮದುವೆ ನಿನ್ನೆ ಬನಶಂಕರಿ ಸೆಕೆಂಡ್ ಸ್ಟೇಜಿನ ಪಂಚಮುಖಿಯಲ್ಲಿ ಪೂರ್ಣಗೊಂಡಿತು. ಫೋಟೋಗಳಿಗೆ ಕಾಯುತ್ತಿದ್ದೇನೆ. ಸಿಂಧು ಮದುವೆಯು ಇಷ್ಟು ಬೇಗ ಜರುಗುತ್ತೆಂದು ಭಾವಿಸಿರಲಿಲ್ಲ. ನಮ್ಮ ಗುಂಪಿನಲ್ಲಿ ನಾನೇ ಮೊದಲೆಂದು ಎಲ್ಲರೂ ನಂಬಿದ್ದೆವು. ಸಡನ್ ಆಗಿ ಎಲ್ಲರಿಗೂ ಬೆರಗುಗೊಳಿಸಿದ ಸಿಂಧು ರೇಸಿನಲ್ಲಿ ಮುಂದಾದಳು. ಹಾಳೂ ಮೂಳು ಹೆಚ್ಚು ತಿನ್ನದ ನಾನು, ಗಣೇಶನ ಹಬ್ಬಕ್ಕೆ ಶೋಭಿಸುವ ಮೋದಕದಂತೆ, ಯುಗಾದಿಯ ಒಬ್ಬಟ್ಟಿನಂತೆ, ದೀಪಾವಳಿಯ ಕಜ್ಜಾಯದಂತೆ ಸಿಂಧೂ ಮದುವೆಯಲ್ಲಿದ್ದ ನಿಪ್ಪಟ್ಟನ್ನು ಸವಿದೆ. ನವದಂಪತಿಗಳು - ಸಿಂಧು ಮತ್ತು ಸಂಜೀವ ಸುಖವಾಗಿರಲಿ.

ರಾಹುಲ್ ದ್ರಾವಿಡ್ ಶತಕವನ್ನು ನೋಡಿ ಹಿಗ್ಗುವಂತಾಗಿತ್ತು. ಕಾಲೇಜಿನಲ್ಲಿದ್ದಾಗ ದ್ರಾವಿಡನ ಅಭಿಮಾನದಿಂದಾಗಿ ಸಂಗ್ರಹಿಸಿದ್ದ ಚಿತ್ರಗಳೆಲ್ಲಾ ಕಣ್ಮುಂದೆ ಬಂದವು. ಆದರೆ ಮತ್ತೆ ಇಂದು ಸೊನ್ನೆಗೆ ತೆರೆಳಿದ್ದು ಬೇಸರವುಂಟಾಯಿತು. ಆದರೂ ನಂಬಿಕೆಯಿದೆ, ಮತ್ತೆ ಬರುತ್ತಾನೆಂದು.

ನಿಮ್ಹಾನ್ಸ್ ಆವರಣದಲ್ಲಿ ಲಿಟ್ಲ್ ಫ್ಲವರ್ ಸ್ಕೂಲಿನ ವಾರ್ಷಿಕೋತ್ಸವವು ಇಂದು ಜರುಗಿತು. ನಮ್ಮ ಶಾಲೆಯ ಸೋದರ ಸಂಬಂಧ ಹೊಂದಿರುವ ಈ ಶಾಲೆಯ ಹಬ್ಬಕ್ಕೆ ನಾನೂ ಹೋಗಿದ್ದೆ. ಮಕ್ಕಳ ಪ್ರದರ್ಶನ absolutely brilliant! ಇಡೀ ಕಾರ್ಯಕ್ರಮದ theme "ವಿಕಾಸ". ಮನುಷ್ಯ ಜೀವಿಯ ಜನನ, ನಂತರ ಹೇಗೆ ಕಾಡು ಮನುಷ್ಯನು ನಾಗರಿಕನಾಗಿದ್ದು, ಪ್ರಾಚೀನ ಈಜಿಪ್ತ್ ನಾಗರಿಕತೆ, ಮೆಸಪೊಟಾಮಿಯಾ, ನಂತರ ಬಂದ ನಮ್ಮ ದೇಶದ ವೇದದ ಕಾಲ ಇವೆಲ್ಲವನ್ನೂ ಡೈಲಾಗುಗಳಿಲ್ಲದ ರಂಗಪ್ರದರ್ಶನವನ್ನು ಮಕ್ಕಳು ಅದ್ಭುತವಾಗಿ ಪ್ರದರ್ಶಿಸಿದರು. ರಾಮಾಯಣ ಮಹಾಭಾರತವನ್ನು, ಗೀತೋಪದೇಶವನ್ನೂ ಸಹ ನಿಮಿಷಗಳಲ್ಲೇ ಅಭಿನಯಿಸಿ ಮೈಜುಮ್ಮೆನಿಸಿದರು. ಕಳಿಂಗದ ಯುದ್ಧದ ನಂತರ ಪರಿವರ್ತನೆ ಹೊಂದಿದ ಅಶೋಕ ಚಕ್ರವರ್ತಿಯ ದೃಶ್ಯವು ಎಷ್ಟು ಮನೋಹರವಾಗಿತ್ತೋ, ಸುವರ್ಣಯುಗದ ವಿಜಯನಗರದ ಆಡಳಿತದ ಪ್ರದರ್ಶನವೂ ಅಷ್ಟೇ ಸೊಗಸಾಗಿತ್ತು. ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ನೈತಿಕವಾಗಿ ದಿನೇ ದಿನೇ ಮನುಷ್ಯನು ವಿಕಾಸ ಹೊಂದುತ್ತಿದ್ದರೂ ಆಧುನಿಕ ಯುಗದಲ್ಲಿ ಕೇಡು ಹೆಚ್ಚಾಗಿ ಕಾಣಿಸುತ್ತಿರುವುದು ದುರಂತವೆಂಬುದು ಈ ಪ್ರದರ್ಶನದ ಮೂಲ ಕಥಾವಸ್ತುವಾಗಿತ್ತು. ಆದರೆ, ಕೊನೆಗೆ "ಸರ್ವೇಶಾಂ ಸ್ವಸ್ತಿರ್ಭವತು..." ಎಂದು ಶುಭ ಕೋರಿ ಮುಗಿಸಿದ್ದು ಶ್ಲಾಘನೀಯವಾಗಿತ್ತು. ಮತ್ತೊಮ್ಮೆ - ಮಕ್ಕಳು ಉನ್ನತ ಮಟ್ಟದ ಪ್ರದರ್ಶನ ನೀಡಿದ್ದರೆಂದು ಹೇಳಲು ಹರ್ಷಿಸುತ್ತೇನೆ. ಇದರ ಜೊತೆಗೆ ಆರಂಭದಲ್ಲಿ ಇಪ್ಪತ್ತು ವರ್ಷದಿಂದ ನಡೆದುಕೊಂಡು ಬಂದು, ಯಶಸ್ಸನ್ನು ಗಳಿಸಿರುವ ಲಿಟ್ಲ್ ಫ್ಲವರ್ ಶಾಲೆಯ ಸುಂದರವಾದ ಒಂದು ಪ್ರೆಸೆಂಟೇಷನ್ ತೋರಿಸಿದರು. ಅತಿಥಿ ತಾರಾ ಅವರು ಯುವಕರ ಆಹಾರ ಪದ್ಧತಿ ಬಗ್ಗೆ ಹೇಳಿದಾಗ "ಸಧ್ಯ, ನನ್ನ ಆಹಾರ ಅಷ್ಟೊಂದು ಕೆಟ್ಟಿಲ್ಲ" ಎಂದೆನಿಸದೇ ಇರಲಿಲ್ಲ.

ಭಾರತದ ಸರ್ವ ಶ್ರೇಷ್ಠ ಗಾಯಕರಲ್ಲಿ ಪ್ರಮುಖರಾದ ಮೊಹಮ್ಮದ್ ರಫಿಯ ಎಂಭತ್ನಾಲ್ಕನೇ ಹುಟ್ಟು ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಸಹ ಒಳ್ಳೆಯ ಕಾರ್ಯಕ್ರಮಗಳು ಜರುಗಲಿವೆ. ಆಸಕ್ತರು ಭಾಗವಹಿಸಬಹುದು.

ನಮ್ಮ ಶಾಲೆಯ ಮಕ್ಕಳಿಗೆಲ್ಲಾ ಕ್ರಿಸ್‍ಮಸ್ ಖುಷಿ! ಹಬ್ಬ ಆಚರಿಸುತ್ತೇವೆಂದಲ್ಲ, ರಜೆ ಸಿಗುತ್ತೆಂದು!! ಎಲ್ಲರಿಗೂ ಕ್ರಿಸ್‍ಮಸ್ "ರಜೆಯ" ಶುಭಾಶಯಗಳು!! ನನಗೂ ಕೂಡ!!!

-ಅ
22.12.2008
10PM

Monday, December 15, 2008

ಅಯ್ಯಪ್ಪನ ಪಾಡು

ನಮ್ಮ ದೇಶದಲ್ಲಿ ಎಷ್ಟು ದೇವರುಗಳ ಸೃಷ್ಟಿಯಾಗಿದೆಯೋ ಅಷ್ಟೇ ಭಕ್ತರ ಸೃಷ್ಟಿಯೂ ಆಗಿದೆ. ಸತತವಾಗಿ ಈ ಕಾರ್ಯವು ಯಶಸ್ವಿಯಾಗಿ ನಡೆಯುತ್ತಲೇ ಇದೆ. ಪ್ಲೇಗಮ್ಮ ಮತ್ತು ಏಡ್ಸಮ್ಮ - ಈ ಎರಡು ದೇವತೆಗಳು ಅತ್ಯಂತ ಆಧುನಿಕವಾದವು. ಇವರಿಗೆ ಹೋಲಿಸಿದರೆ ಅಯ್ಯಪ್ಪ ಬಹಳ ಹಳಬ.

ವಿಷಯ ಅದಲ್ಲ.

ಹಿಂದಿನ ಕಾಲದಲ್ಲಿ ವೇದಘೋಶಗಳಿಂದಲೋ, ಹೋಮ ಹವನಗಳಿಂದಲೋ, ತಪಸ್ಸುಗಳಿಂದಲೋ ದೇವತೆಗಳನ್ನು ಒಲಿಸಿಕೊಳ್ಳುತ್ತಿದ್ದರು. ಭಜನೆಗಳು ಮನಸ್ಸಿಗೆ ಆಹ್ಲಾದಕರವಾಗುವಂತೆ ಸಾಗುತ್ತಿತ್ತು. ಈಗಲೂ ಅನೇಕ ಭಜನೆಗಳನ್ನು ಆನಂದಿಸಬಹುದು. ಮೀರಾ ಭಜನೆಯನ್ನು ಕೇಳುತ್ತಿದ್ದರೆ ಕಳೆದು ಹೋಗದೇ ಇರಲು ಸಾಧ್ಯವೇ? ರಾಮಕೃಷ್ಣಾಶ್ರಮದ ನಮ್ಮ ಕಿಟ್ಟಿ ಮೇಷ್ಟ್ರು ಹೇಳಿಕೊಟ್ಟ ಭಜನೆಗಳು ನಾನಿರುವವರೆಗೂ ನನ್ನಲ್ಲಿ ಪ್ರತಿಧ್ವನಿಸದೇ ಇರಲು ಸಾಧ್ಯವೇ? ಆದರೆ ಇಲ್ಲಿ ನಡೆಯುತ್ತಿರುವ ಪ್ರತಿಧ್ವನಿಯೇ ಬೇರೆ!

ಈತ ಬಹಳ ಬೇಗ ಪ್ರಸಿದ್ಧಿಯನ್ನು ಪಡೆದ ದೇವರು. ನೂರೈವತ್ತು ವರ್ಷ ಹಿಂದೆ ಹೋದರೆ ಈತನ ಹೆಸರು ಇಲ್ಲಿನ (ಕರ್ನಾಟಕದ) ದೇವಸ್ಥಾನದ ಚರಿತ್ರೆಗಳಲ್ಲಿ ಕಾಣಸಿಗುವುದಿಲ್ಲ. ಪುರಾಣಗಳಲ್ಲಂತೂ ಈತನ ಹೆಸರೇ ಬರುವುದಿಲ್ಲ. ಈತನೇ ಅಯ್ಯಪ್ಪ. ಅಯ್ಯಪ್ಪನ ಸೃಷ್ಟಿ ಹೇಗಾಯಿತು, ಏಕಾಯಿತು ಎಂಬುದು ಇಲ್ಲಿ ಅಪ್ರಸ್ತುತ. ಆದರೆ ಈತನಿಗಿರುವ ಪ್ರಸಿದ್ಧಿ ಎಷ್ಟರ ಮಟ್ಟಿಗೆ ಈತನಿಗೇ ವ್ಯಸನವಾಗುವಂತಿದೆಯೆಂದರೆ ಇಲ್ಲಿ ಮೈದಾನವೊಂದರಲ್ಲಿ ನಡೆಯುತ್ತಿರುವ ಪ್ರತಿಧ್ವನಿಯೇ ಸಾಕ್ಷಿ. ಇಂಥಾ "ಭಜನೆಗಳು" ನಗರದಲ್ಲಿ ಅದೆಷ್ಟು ಕಡೆ ಭರದಿಂದ ಸಾಗುತ್ತಿದೆಯೋ ಏನೋ..

ಅಯ್ಯಪ್ಪನು ಇನ್ನೂ ಏನೆಲ್ಲಾ ಅನುಭವಿಸಬೇಕೋ, ಆತನ ಪ್ರಾರಬ್ಧ.

ಒಂದಷ್ಟು ಧ್ವನಿಗಳು ಇಲ್ಲಿ....

ಒಂದು.
ಅಯ್ಯಾ ಅಯ್ಯಾ ನೋಡ್ದೆ ನೋಡ್ದೆ
ಅಯ್ಯಪ್ಪ ಸ್ವಾಮಿಯ ನಾನ್ ನೋಡ್ದೆ....

(ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರ್ದನ್ನ ನಾ ನೋಡ್ದೆ....)

ಎರಡು.
ಅಯ್ಯಪ ಸ್ವಾಮಿ, ಅಯ್ಯಪ ಸ್ವಾಮಿ [ಅಯ್ಯಪ್ಪ ಎಂದು ಒತ್ತಕ್ಷರವಿಲ್ಲ]
ಕಟ್ಟಿ ಬಂದೆ ಇರ್ಮುಡೀನ್ನಾ...
ಶಬರಿಮಲೇಗೇ ಹೋಗಲು ಬಂದೆ
ಹರಸು ನಿನ್ನ ಭಕ್ತ್ರನ್ನ...

(ಸುಂಟರಗಾಳಿ, ಸುಂಟರಗಾಳಿ....)

ಮೂರು.
ಹರಿಹರಸುತನೇ ಶಬ್ರಿಗಿರಿ ವಾಸನೇ
ಶರಣಮ್ ಅಯ್ಯಪ್ಪಾ....
ಈ ಮಾಲೆ ಧರಿಸಿ ಭಕ್ತಿಯಿಂದ ಬಂದೇವಪ್ಪಾ...

(ಹೊಡಿ ಮಗ ಹೊಡಿ ಮಗ...)

ನಾಲ್ಕು.
ಅಯ್ಯಪ್ಪಾ ಸ್ವಾಮಿ.. ರತ್ತೋ ರತ್ತೋ (ಇಲ್ಲಿ ರತ್ತೋ ರತ್ತೋ ಯಾಕೆ ಬಂತು ಅಂತ ಗೊತ್ತಿಲ್ಲ)
ಮಣಿಕಂಠ ಸ್ವಾಮಿ.. ಬಿತ್ತೋ ಬಿತ್ತೋ (ಇದಂತೂ ಕರ್ಮಕಾಂಡ)
ಪಂಪಾ ನದಿ, ಸ್ನಾನ ಆಯ್ತೋ
ಇರುಮುಡಿ, ಹೊತ್ತಾಯಿತೋ
ಹೊತ್ತಾಯಿತೋ, ನಡೆದಾಯಿತೋ
ನಾವೆಲ್ಲ ಮಾಲೆಯನ್ನು ಹಾಕಿಕೊಂಡು
ಜುಂ ಜುಂ ಜುಂ ಜು ಜುಂ ಜುಂ.....

(ಯಾವ ಹಾಡು ಅಂತ ಹೇಳಲೇ ಬೇಕಾ? ಸಂಕ್ರಾಂತೀ ಬಂತು....)

ಸ್ವಾಮಿಯೇ ಶರಣಂ ಅಯ್ಯಪ್ಪ.

-ಅ
16.12.2008
12AM

Friday, December 12, 2008

ಬೂಸ್ಟ್ ಈಸ್ ದಿ ಸೀಕ್ರೆಟ್ ಆಫ್....

ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಸೈಕಲ್ಲಿನ ಮೇಲೆ ಹೋಗುತ್ತಿದ್ದೆ ಕತ್ತರಿಗುಪ್ಪೆಯೆಂಬ ಕೊಂಪೆಯನ್ನೂ ದಾಟಿ ಇಟ್ಟುಮಡುವೆಂಬ ಮಡುವಿನಲ್ಲಿದ್ದ ಆಪ್ತ ಗೆಳೆಯ ವರುಣನ ಮನೆಗೆ. ಕತ್ತರಿಗುಪ್ಪೆ ಸ್ವಲ್ಪ ಬೆಳೆಯುವ ಸೂಚನೆಯನ್ನು ಹೊಂದಿದ್ದ ಹಳ್ಳಿಯಂತಿತ್ತು. ಇಟ್ಟುಮಡು ಸ್ವಲ್ಪ ಹಿಂದುಳಿದ ಹಳ್ಳಿಯಂತಿತ್ತು. ರಸ್ತೆಗಳಿಗೆ ದಾಂಬರೆಂದರೆ ಗೊತ್ತಿರಲಿಲ್ಲ. ಈ ಕಡೆ ನಗರಕ್ಕೆ ನಗರವಲ್ಲ, ಹಳ್ಳಿಗೆ ಹಳ್ಳಿಯಲ್ಲ, ಹಾಗಿತ್ತು. ಆದರೂ ಅಬ್ಬಾಯಿನಾಯುಡು ಸ್ಟುಡಿಯೋ ಮಾತ್ರ ಬಹಳ ಕಾಲದಿಂದಲೇ ಅಲ್ಲಿತ್ತು.

ನಾನು ಕಾಫಿಪ್ರಿಯನೆಂಬುವುದು ಕಾಫಿಗೂ ಗೊತ್ತು! ಹಾರ್ಲಿಕ್ಸು, ಬೂಸ್ಟ್, ಬೋರ್ನ್ವೀಟಾ, ವೀವಾ ಇವೆಲ್ಲಾ ವಿಷಪ್ರಾಷನದಂತೆ ನನಗೆ. ವರುಣನೋ ಕಾಫಿ ಕಂಡರೆ ದೂರ ಓಡುವವನು. ಅವರ ಮನೆಗೆ ಹೋದಾಗ ತಪ್ಪದೆ ಬೂಸ್ಟ್ ಕೊಡುತ್ತಿದ್ದರು. ನಾನು ಸಂಕೋಚದಿಂದ ವಿಷಪ್ರಾಷನವನ್ನೇ ಮಾಡುತ್ತಿದ್ದೆ - ಮುಖ ಗಂಟಿಕ್ಕಿಕೊಂಡು! ಅವರ ಮನೆಯಲ್ಲಿ "ಕಾಫಿ ಕೊಡ್ಲಾ?" ಅಂತಲೂ ಕೇಳುತ್ತಿರಲಿಲ್ಲ. "ಬೂಸ್ಟ್ ಕುಡಿ" ಅಂತ ಹೇಳಿ ಕೊಟ್ಟುಬಿಡುತ್ತಿದ್ದರು.

ವರುಣ ಈಗ ಆಸ್ಟ್ರೇಲಿಯಾದಲ್ಲಿದ್ದಾನೆ. ಮೊನ್ನೆ, ಬಹುಮುಖ್ಯ ಕಾರಣವೊಂದಕ್ಕೆ ಅವರ ಇಟ್ಟುಮಡುವಿನ ಮನೆಗೆ ಹೋಗಿದ್ದೆ. ಇಟ್ಟುಮಡು ಶಿವಾಜಿನಗರಕ್ಕಿಂತ ಹೆಚ್ಚು ಬದಲಾಗಿಬಿಟ್ಟಿದೆ. ಅವರ ಮನೆಗೆ ಹೋಗಲು ಹರಸಾಹಸ ಪಡಬೇಕಾಯಿತು. ಊರೆಲ್ಲಾ ಸುತ್ತಬೇಕಾಯಿತು. ಅದೇನೇ ಬದಲಾಗಿದ್ದರೂ ಅವರ ಮನೆಯು ಮಾತ್ರ ಬದಲಾಗಿಲ್ಲ. ಬಾಲ್ಯಗೆಳೆಯನ ನಿರ್ಮಲ ಮನಸ್ಸಿನಂತೆ ಅವನ ಮನೆಯವರ ಅಕ್ಕರೆಯೂ ಹಾಗೇ ಉಳಿದಿದೆ. ನನ್ನನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ಅವರನ್ನು ನೋಡಿ ಎಷ್ಟು ವರ್ಷಗಳಾಗಿದ್ದವೋ ನೆನಪಿಲ್ಲ. ಒಳ್ಳೇ ಹೋದ ಜನ್ಮ ನೆನಪಾದಂತಾಯಿತು ಅವರ ಮನೆಗೆ ಹೋಗಿದ್ದು. ಅದೇ ಮೌನ ವಾತಾವರಣ, ಟಿ.ವಿ. ಸೀರಿಯಲ್ಲುಗಳ ಪ್ರಸಾರ, ಅದೇ ಶೋ ಕೇಸು. ಸ್ವಲ್ಪ ಹೊತ್ತಾದ ಮೇಲೆ ಒಂದು ಸಣ್ಣ ಬದಲಾವಣೆ ಕಾಣಿಸಿತು. "ಕಾಫಿ ಕುಡೀತೀಯಾ?" ಎಂದು ಕೇಳಿದರು. ನಾನು ಮುಖವನ್ನರಳಿಸಿ ಹೌದೆನುವಷ್ಟರಲ್ಲಿ "ಬೂಸ್ಟ್ ಕೊಡ್ತೀನಿ ಇರು" ಎಂದುಬಿಟ್ಟರು. ನಾನು ಯಾಕೆ "ಬೇಡ, ಕಾಫೀನೇ ಕೊಡಿ" ಎನ್ನಲಿಲ್ಲವೋ ಗೊತ್ತೇ ಇಲ್ಲ. ನನ್ನ ಜೀವಮಾನದಲ್ಲೇ ನಾನು ಬೂಸ್ಟ್ ಕುಡಿದಿರುವುದು ಇವರ ಮನೆಯಲ್ಲಿ ಮಾತ್ರ. ಮತ್ತೆ ವರ್ಷಾನುಗಟ್ಟಲೆಯ ನಂತರ ಮೊನ್ನೆಯೂ ಕುಡಿದಾಗ ಬಾಲ್ಯದ ನೆನಪು ಮರುಕಳಿಸಿತು.

Missing ವರುಣ.

......................................................................................

ಸಂಗೀತದ ವಿದ್ಯಾರ್ಥಿಯಾಗಿರುವ ಗೆಳತಿ ಹಾಗೂ ನನ್ನ ಕಝಿನ್ ಭವ್ಯಾ ಹೊಸ ಬ್ಲಾಗನ್ನು ಆರಂಭಿಸಿ ಸಂಗೀತ ಸೇವೆಗೇ ಮುಡಿಪಾಗಿಟ್ಟಿರುವುದು ಬಹಳ ಸಂತಸಕರ ಸಂಗತಿ. ನನ್ನನ್ನೂ contributor ಪಟ್ಟಿಗೆ ಸೇರಿಸಿರುವುದರಿಂದ ನಾನೂ ಆಗಾಗ್ಗೆ ಏನಾದರೂ ಆಕೆಗೆ ಸಹಾಯವಾಗುವಂತಹ "ವಸ್ತು"ಗಳನ್ನು ಕೊಡಲು ಯತ್ನಿಸುತ್ತೇನೆ. ಸಂಗೀತದ ಬಗ್ಗೆ ಏನೇನು ಮಾಹಿತಿಗಳು, ಜ್ಞಾನವು, ಸೂಚನೆಗಳು, ವಿಮರ್ಶೆಗಳು ಹೊರಹೊಮ್ಮುತ್ತವೋ ಎದುರು ನೋಡುತ್ತಿದ್ದೇನೆ. ಸಂಗೀತ ಸುಧೆಯನ್ನು ಸವಿಯಲು ಉತ್ಸುಕನಾಗಿದ್ದೇನೆ.

ಆಲ್ ದಿ ಬೆಸ್ಟ್ ಭವ್ಯಾ..

http://sangeethasudhe.blogspot.com


-ಅ
12.12.2008
12PM

Tuesday, December 9, 2008

ಶುಭದ ಹೂವು

ಮಿನುಗುತಿರುವ ತಾರೆ ಹೊರೆತು
ಉಳಿದೆ ಇಲ್ಲವಿನ್ನಾವ ಬೆಳಕು.
ಶಶಿಯು ಬುವಿಯ ಕೆಳೆಯ ಮರೆತು
ಬುವಿಗೆ ಮಾತ್ರ ಬೆಳಕಿನಳುಕು.
ಜ್ಯೋತ್ಸ್ನೆ ನಕ್ಕು ಬೆಳಗದೇ?

ದಿಕ್ಕು ತೋರಿಸುತಿಹ ತಾರೆ
ತೋರದೇಕೆ ದಾರಿಯ?
ಕಪ್ಪನೊಂದೆ ಕಾಣುತಿದ್ದೂ
ಕಾಣದಿರುವ ಕುರುಡನು!
ಬೆಳಕು ಮೂಡಿ ಬರುವುದೇ?

ಗುರಿಯು ಗರಿಯು ಎಲ್ಲೊ
ಝರಿಗೆ ಸಿಕ್ಕ ಕೀಟವು.
ಹಿರಿದು ಶೂಲದಲ್ಲೆ
ಇರಿವ ಬಾಳು ಮಾಟವು!
ಚೇತನವು ಮೆಟ್ಟಿ ನಿಲುವುದೇ?

ಒಳಿತು ಭವಿಸಲಿ, ಬೆಳಕು ಹರಿಯಲಿ
ಎಂಬುದೊಂದೇ ಕನಲು ಕಣ್ಣಲಿ.
ಕೈಯ ಹಿಡಿದು ಎಡೆಗೆ ಸೆಳೆವ
ಮಿಗಿಲಿನೊಂದೇ ಅಂತ್ಯ ಮಣ್ಣಲಿ.
ಶುಭದ ಹೂವರಳುವುದೇ?

-ಅ
09.12.2008
3.25PM

Thursday, December 4, 2008

ಮೊಹಮ್ಮದ್ ರಫಿ - ಏಕೆ ಅತ್ಯುತ್ತಮ?

ಕೈಯಲ್ಲೊಂದು ತೇಜಸ್ವಿ ಪುಸ್ತಕ, ಬಿಸಿ ಬಿಸಿ ಚಹಾ, ರಫಿಯ ಸಂಗೀತ - ಸ್ವರ್ಗವೆಂದರೆ ಇದೇ!(ಚಿತ್ರ ಕೃಪೆ: ಗೆಳೆಯ ನಾಗೇಶ್)

ರಫಿ ಅಭಿಮಾನಿ ಬಳಗದ ಗುರುಮೂರ್ತಿಯವರು ಯಾಕೆ ಮೊಹಮ್ಮದ್ ರಫಿಯು ಸಮಕಾಲೀನರೆಲ್ಲರಿಗಿಂತಲೂ ಮಿಗಿಲು ಎಂಬುದಕ್ಕೆ ಸೊಗಸಾದ ಸಮರ್ಥನೆಗಳನ್ನೂ ನಿದರ್ಶನಗಳನ್ನೂ ಕೊಡುತ್ತಾರೆ. ಅವರ ಚಿತ್ರಣದೊಂದಿಗೆ ನನ್ನ ಅನಿಸಿಕೆಗಳನ್ನೂ ಇಲ್ಲಿ ಸೇರಿಸಿಕೊಂಡಿದ್ದೇನೆ.* ಕಿಶೋರ್ ಕುಮಾರ್ --> ಬಹುಮುಖ ಪ್ರತಿಭೆ, ಅದ್ಭುತ "ಸಿಹಿ" ಕಂಠ, ಯೂಡಲಿಯ ದೈವ - ಆದರೆ ತಾರಸ್ಥಾಯಿಯಲ್ಲಿ ಹಾಡಲಾಗುತ್ತಿರಲಿಲ್ಲ, ಶಾಸ್ತ್ರೀಯ ಸಂಗೀತ, ಕವ್ವಾಲಿಗಳಿಗೆ ಕಿಶೋರ್ ಧ್ವನಿ ಹೊಂದುತ್ತಿರಲಿಲ್ಲ.
* ಮುಖೇಶ್ --> ಮಂದ್ರಸ್ಥಾಯಿಯಲ್ಲಿ ಶೋಕ ಗೀತೆಗಳಿಗೆ ಹೇಳಿ ಮಾಡಿಸಿದ ಧ್ವನಿ - ಎತ್ತರದ ಶ್ರುತಿಗೆ ಮುಖೇಶ್ ಕಂಠ ಒಗ್ಗುತ್ತಿರಲಿಲ್ಲ, ಶಾಸ್ತ್ರೀಯ ಸಂಗೀತದ ಶೈಲಿ, ಕವ್ವಾಲಿ ಮುಖೇಶನಿಗೆ ಒಪ್ಪುವುದೇ ಇಲ್ಲ.* ಹೇಮಂತ್ ಕುಮಾರ್ --> ಆ ಕಾಲದ ಅತ್ಯುನ್ನತ ಸಂಗೀತ ನಿರ್ದೇಶಕ, ಬಂಗಾಳಿ ಶೈಲಿಯ ಹಾಡುಗಳಲ್ಲಿ ಎತ್ತಿದ ಕೈ - ಎತ್ತರದ ಶ್ರುತಿ, ಶಾಸ್ತ್ರೀಯ ಸಂಗೀತ ಶೈಲಿ, ಕವ್ವಾಲಿ ಉಹ್ಞೂಂ.* ತಲತ್ ಮೆಹ್ಮೂದ್ --> ರಫಿಯ ದನಿಗೆ ಅತ್ಯಂತ ಸನಿಹ. ಆದರೆ ಧ್ವನಿಯು ನಡುಗುತ್ತೆ. ಗಜಲ್‍ಗಳ ಒಡೆಯ. ಆದರೆ ಈತ ಕೂಡ ತಾರಸ್ಥಾಯಿಯಲ್ಲಿ ರಫಿಯೆದುರು ಸೋಲುತ್ತಾರೆ.

* ಆಶಾ ಭೋನ್‍ಸ್ಲೆ --> ಕವ್ವಾಲಿ ಹಾಡುಗಳಲ್ಲಿ ಸೊಗಸಾದ ಪ್ರತಿಭೆ, ಧ್ವನಿಯ ಹಿಡಿತದ ಉನ್ನತ ಸಾಮರ್ಥ್ಯ. ಆದರೆ ಭಾವನಾತ್ಮಕ ಹಾಡುಗಳಲ್ಲಿ ಲತಾ ಮಂಗೇಶ್ಕರ್‍ರನ್ನು ಮೀರಿಸಲಾಗಲಿಲ್ಲ ಆಶಾಗೆ.* ಲತಾ ಮಂಗೇಶ್ಕರ್ --> ಕಂಠವು ಕೋಗಿಲೆಗೇ ಸ್ಪರ್ಧಿಸಬಲ್ಲುದು, ಶಾಸ್ತ್ರೀಯ ಶೈಲಿ, ಭಾವನಾತ್ಮಕ ಗೀತೆಗಳಲ್ಲಿ ಮಿಂಚುವುದು ಲತಾ ಮಂಗೇಶ್ಕರ್ ಧ್ವನಿ. ಆದರೆ ತಾರಸ್ಥಾಯಿಯಲ್ಲಿ ಕೀರಲು ಧ್ವನಿ ಬಂದುಬಿಡುತ್ತೆ.* ಮನ್ನಾ ಡೇ --> ಕಂಠದ ಮೇಲೆ ಅಮೋಘ ಹಿಡಿತ, ಶಾಸ್ತ್ರೀಯ ಸಂಗೀತ, ಕವ್ವಾಲಿಗೆ ಹೇಳಿ ಮಾಡಿಸಿದ ಧ್ವನಿ, ಆದರೆ ನಾಯಕ ನಟರುಗಳಿಗೆ ಮನ್ನಾ ಡೇ ಕಂಠ ಹೊಂದುತ್ತಿರಲಿಲ್ಲ.* ಮಹೇಂದ್ರ ಕಪೂರ್ --> ತಾರಸ್ಥಾಯಿಯಲ್ಲಿ ರಫಿಗೆ ಸಾಟಿಯಾಗಬಲ್ಲ ಗಾಯಕ. ದೇಶಭಕ್ತಿಗೀತೆಗಳೆಂದರೆ ಮಹೇಂದ್ರ ಕಪೂರ್ ಎಂಬಂತೆ. ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಮಾತ್ರ ರಫಿಯ ಮುಂದೆ ಬಹಳ ಎಳೆಸೆಂಬುದಕ್ಕೆ ನವರಂಗ್ ಚಿತ್ರದ ಗೀತೆಗಳನ್ನು ಕೇಳಬಹುದು.

ಮೇಲಿನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದ ಮೊಹಮ್ಮದ್ ರಫಿಯನ್ನು ಅದಕ್ಕೇ ಅತ್ಯುನ್ನತ ಗಾಯಕ ಎನ್ನುವುದು!!

ರಫಿಯ ಎಷ್ಟೋ ಅದ್ಭುತ ಹಾಡುಗಳಲ್ಲಿ ಒಂದನ್ನು ಮಾತ್ರ ಇಲ್ಲಿರಿಸಿದ್ದೇನೆ..-ಅ
04.12.2008
9.45PM

Sunday, November 30, 2008

ಕಾರಂಜಿ

ಇದರ trailer ನೋಡಿ ಖುಷಿಯಾಯಿತು..

--> ಗಿಟಾರ್ ವಿದ್ಯಾರ್ಥಿಯಾಗಿರುವುದರಿಂದ, ಇಲ್ಲಿ ಎಲ್ಲರೂ ಗಿಟಾರ್ ನುಡಿಸುವುದನ್ನು ನೋಡಿಯೇ ರೋಮಾಂಚನವಾಗಿಬಿಟ್ಟಿತು. ಚಿತ್ರದಲ್ಲಿ ಗಿಟಾರಿನ ಬಳಕೆ ಹೇಗಿದೆಯೆಂದು ನೋಡುವ ಕಾತುರತೆಯಿದೆ.

--> ಸಂಗೀತಮಯ ಚಿತ್ರವನ್ನು ನೋಡಿ ಬಹಳ ದಿನಗಳಾಗಿತ್ತು. ನಿರೀಕ್ಷೆ ಅಧಿಕವಾಗಿದೆ ಕಾರಂಜಿಗೆ.

--> ಶಾಸ್ತ್ರೀಯ ಸಂಗೀತದ ಚಿತ್ರಗಳು ಬಂದಾಗಿವೆ, ನಾವು ನೋಡಿಯೂ ಆಗಿದೆ, ಮೆಚ್ಚಿಕೊಂಡೂ ಆಗಿದೆ. ಈಗ ಪಾಶ್ಚಾತ್ಯ ಸಂಗೀತದ ಸರದಿ. ಗುಡ್.

--> ಅನವಶ್ಯಕ ಸೆಂಟಿಮೆಂಟ್ ಸೀನುಗಳು, ಹೊಡೆದಾಟಗಳು ಇಲ್ಲದಿರಲಿ, ಕೆಳಮಟ್ಟದ ಕಾಮಿಡಿ - ಇಲ್ಲದಿರಲೆಂದು ಆಶಿಸುತ್ತೇನೆ.

--> ತುಣುಕೇನೋ ಬಹಳ ಮನೋಹರವಾಗಿದೆ. ಚಿತ್ರವೂ ಮನೋಹರವಾಗಿರುವುದೆಂಬ ನಂಬಿಕೆಯಿದೆ. ಆಲ್ ದಿ ಬೆಸ್ಟ್ ಕಾರಂಜಿ ತಂಡಕ್ಕೆ.

--> "ಆಡಿಸಿ ನೋಡು.. ಬೀಳಿಸಿ ನೋಡು... ಉರುಳಿ ಹೋಗದು........"-ಅ
30.11.2008
10AM

Tuesday, November 25, 2008

ವಿಚಿತ್ರಮಂಜರಿ

ಛೆ! ನಾನೂ ಇರಬೇಕಿತ್ತು!! - ಎನಿಸದೇ ಇರಲು ಸಾಧ್ಯವಿಲ್ಲ. ಆದರೆ ಅನಿವಾರ್ಯ ಕಾರಣ, ನನ್ನುಪಸ್ಥಿತಿ ಇನ್ನೆಲ್ಲೋ ಅವಶ್ಯವಿದೆ.

ಗೆಳೆಯರು ಅರ್ಜುನ, ಹರೀಶ, ಶರತ್ ಹಿಂದೆಂದೋ ಆರಂಭಿಸಿದ ಗುಂಪಿಗೆ ನಾನು ಸೇರ್ಪಡೆಯಾಗಿ ಹೆಚ್ಚು ಕಾಲ ಸಂದಿಲ್ಲ. ಸ್ವರೂಪನ ವಿಶೇಷ ಪ್ರತಿಭೆಯು ಇವರೊಂದಿಗೆ ಕೆಲಕಾಲವಿದ್ದು ಈಗ ಅಮೆರಿಕಾದಲ್ಲಿ ಓದಲು ಸೆಟ್ಲ್ ಆಗಿಬಿಟ್ಟಿದ್ದಾನೆ! ಬೇಗ ಬಾರಯ್ಯ!!

ಅರ್ಜುನನ ಚಾಣಾಕ್ಷತನವನ್ನು ರಂಗದ ಮೇಲೆ ನೋಡುವ ಕಾತುರ ಇಲ್ಲದಿರುತ್ತೆಯೇ? "ಅವರೇನ್ ಕುಕ್ಕರ್ರೇನ್ರೀ, ಒಂದೇ ಥರ ಕೂಗಕ್ಕೆ?" ಎಂದು ಸಾರಾಸಗಟಾಗಿ ಹೇಳುವ ಅರ್ಜುನ ನಾಣಿ ಅರೇನಾದಲ್ಲಿ ಹೇಗೆ ನಟಿಸಿಯಾನು ಎಂದು ನೋಡಲು ಕಾಯುತ್ತಿದ್ದೇನೆ. ಎಸ್.ಕೆ.ಜೈನ್ ಖ್ಯಾತಿಯ ಹರೀಶನ ಅಭಿಮಾನಿ ನಾನು. ಏನು ಮಾಡಲು ಬೇಕಾದರೂ ಸೈ ಎನ್ನುವ ಹರೀಶನು ಸ್ಟೇಜ್ ಮೇಲೆ ಬಂದು ಎಲ್ಲರನ್ನೂ ರಂಜಿಸುವ ಗ್ಯಾರೆಂಟಿಯನ್ನು ನಾನು ವಿಶೇಷವಾಗಿ ಕೊಡಬೇಕಾಗಿಲ್ಲ. ಶರತ್ ಅಂತೂ ಸಂಪೂರ್ಣ ತೊಡಗಿಸಿಕೊಳ್ಳುವ ವ್ಯಕ್ತಿ. ನಾಲಿಗೆಯನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಿರುಗಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಜಯಂತ್, ಸುಜಿತ್ ಮತ್ತು ಪೂಜಾ - ಇವರನ್ನು ನಾನೂ ಭೇಟಿ ಮಾಡಬೇಕು. ಆದರೆ ಇವರ ಪ್ರತಿಭೆಯ ಬಗ್ಗೆ ಸಂಪೂರ್ಣ ವಿಶ್ವಾಸವಿದೆ.ಎಲ್ಲಾ ಸೇರಿ ಉತ್ತಮ "ಶೋ" ನೀಡುತ್ತಾರೆಂಬ ನಂಬಿಕೆ ನನ್ನಲ್ಲಿದೆ.

ಈ ಭಾನುವಾರ - ಮಧ್ಯಾಹ್ನ ಮೂರೂವರೆಗೆ ಮತ್ತು ಸಂಜೆ ಏಳು ಗಂಟೆಗೆ.

ಈ ವಾರದ ಟಿಕೆಟ್ಟುಗಳು ಸೋಲ್ಡ್ ಔಟ್.

ಆಲ್ ದಿ ಬೆಸ್ಟ್, ಗೆಳೆಯರೇ. ಚೆನ್ನಾಗಿ ಮಾಡಿ. ಮುಂದಿನ ಸಲ ನಾನೂ ಜೊತೆಗಿರುತ್ತೇನೆ!! ನನ್ನಿಂದಲೂ ಚೆನ್ನಾಗಿ ಮಾಡಿಸಿ!!!

-ಅ
26.11.2008
12AM

Tuesday, November 18, 2008

ಕಾವ್ಯದ ಸೊಬಗು

ತರ್ಜುಮೆ ಬ್ಲಾಗಿನಲ್ಲಿ ನಾವುಗಳು ಒಂದೇ ಕವನಕ್ಕೋ, ಶ್ಲೋಕಕ್ಕೋ, ಶಾಯರೀಗೋ ಸಣ್ಣ ಪುಟ್ಟ ತರ್ಜುಮೆ ಮಾಡುವ ಯತ್ನದ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ. ಮತ್ತೆ ಅದನ್ನು ಓದಲು ಇನ್ನೂ ಮಜವಾಗಿರುತ್ತೆ. ಯಾಕೆಂದರೆ ನಾನೇ ಒಂದು ರೀತಿ ಬರೆದರೆ, ಶ್ರೀನಿವಾಸ ಇನ್ನೊಂದು ರೀತಿ ಬರೆದಾನು, ಶ್ರೀಕಾಂತ ಲಕುಮಿಯರು ಮತ್ತೊಂದು ರೀತಿ! ಆಹ್, ಓದಲು ಆನಂದ!!

ನಮ್ಮ ತರ್ಜುಮೆಗಳ ಯತ್ನ ಇಲ್ಲಿದೆ.

ನಿಸ್ಸಾರ್ ಅಹ್‍ಮದ್‍ರ ಈ ಕವನ ಓದಿದಾಗ ಎಂಥಾ ಅದ್ಭುತ ಶೋಕರಸದ ಸಾಹಿತ್ಯವೆಂದೆನಿಸದೇ ಇರುವುದಿಲ್ಲ.

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ..

ಈ ಹಿಂದಿ ಹಾಡನ್ನು ಗಮನಿಸಿದರೆ, ನಿಸ್ಸಾರರ ಕವನಕ್ಕೇನು ದೂರವಿಲ್ಲವೆಂದೆನಿಸದೇ ಇರುವುದಿಲ್ಲ.

Bhooli Hui Yaadon
Mujhe Itna Na Sataao
Ab Chain Se Rehne Do
Mere Paas Na Aao

http://in.youtube.com/watch?v=PvTgiiYtVfA

ಎಷ್ಟೊಂದು ಸಾಮ್ಯ!! ಈ ಹಾಡನ್ನು ಕೇಳಿಯೇ ನಿಸ್ಸಾರರು "inspire" ಆಗಿರಬೇಕು! ಯಾಕೆಂದರೆ ಅವರು ಹೀಗೆ insirationಗೆ ಮಣಿದು ಹಲವಾರು ಕವನಗಳನ್ನು ನೀಡಿದ್ದಾರೆ.

Phir Wohi Shaam
Wohi Gahm Wohi Tanhaayee

http://in.youtube.com/watch?v=xfg5nHbH0j4

ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
- ನಿಸ್ಸಾರ್.

ಇರಲಿ. ಈಗ ಇಲ್ಲಿ ಇನ್ನೊಂದು ಸೊಬಗನ್ನು ತೆರೆದಿಡುತ್ತೇನೆ. ಸೊಬಗಿನ ಸೊಗವನ್ನು ಅನುಭವಿಸುವುದು ಓದುಗನ ಸೌಭಾಗ್ಯ!!

ಮೊದಲಿಗೆ ಕನ್ನಡದ ಹಿರಿಯ ಕವಿ ಬಿ.ಎಮ್.ಶ್ರೀ ಅವರ ಈ ಕವನ.

ನನ್ನ ಪ್ರೇಮದ ಹುಡುಗಿ ತಾವರೆಯ ಹೊಸಕೆಂಪು,
ತಾವರೆಯ ಹೊಸ ಅರಳ ಹೊಳೆವ ಕೆಂಪು.
ನನ್ನ ಪ್ರೇಮದ ಹುಡುಗಿ ಕೊಳಲ ಮೆಲುನುಡಿಯಿಂಪು,
ಕೊಳಲು ಮೋಹಿಸಿ ನುಡಿವ ಗಾನದಿಂಪು.

ಬೆಳೆಬೆಳೆಯುತೆಷ್ಟೆಷ್ಟು ಬಿನ್ನಾಣ, ಎಲೆ ಚೆಲುವೆ,
ಮುಳುಗಿದೆನು ಅಷ್ಟು ಪ್ರೇಮದೊಳಗೆ.
ಬತ್ತುವುವು ಕಡಲುಗಳು ಮುಂದಾಗಿ, ಎಲೆ ಚೆಲುವೆ,
ಬತ್ತಲಾರದು ತೊಟ್ಟು ಪ್ರೇಮದೊಳಗೆ.

ಬತ್ತುವುವು ಮುಂದಾಗಿ ಕಡಲುಗಳು, ಎಲೆ ಚೆಲುವೆ,
ಕರಗುವುವು ಬಂಡೆಗಳು ಬಿಸಿಲಿನೊಳಗೆ,
ಕರಗಲಾರದು ಚೂರು ಪ್ರೇಮದೊಳಗೆಲೆ ಚೆಲುವೆ,
ಬೆರೆದಿರಲು ಜೀವಕಳೆ ದೇಹದೊಳಗೆ.

ಹೋಗಿ ಬರುವೆನೆ ಹೆಣ್ಣೆ, ಪ್ರೇಮದೊಂದೇ ಹೆಣ್ಣೆ,
ಹೋಗಿ ಬರುವೆನು ಸಹಿಸು, ಎರಡು ಗಳಿಗೆ.
ಕೋಟಿಯೋಜನವಿರಲಿ, ದಾಟಿ ಬರುವೆನು, ಹೆಣ್ಣೆ,
ಬೇಗ ಬರುವೆನು ಹಾರಿ ನಿನ್ನ ಬಳಿಗೆ.

ಈಗ ನಮ್ಮೊಡನೆಯೇ ಇರುವ ಇನ್ನೊಬ್ಬ ರೊಮ್ಯಾಂಟಿಕ್ ಕವಿ - ಬಿ.ಆರ್.ಲಕ್ಷ್ಮಣರಾವ್ ಅವರ ಕವನ.

ಕೆಂಪು ಕೆಂಪು ಕೆಂಗುಲಾಬಿ, ನನ್ನ ಪ್ರೇಯಸಿ
ಮಧುರವಾದ ವೇಣುನಾದ, ನನ್ನ ಪ್ರೇಯಸಿ.

ನಿನ್ನ ಚೆಲುವಿನಷ್ಟೆ ಗಾಢ ಪ್ರೀತಿ ನನ್ನದು
ಸಾಗರಗಳು ಬತ್ತುವನಕ ಬಾಳುವಂಥದು.

ಬಿಸಿಲ ಝಳಕೆ ಬಂಡೆಕಲ್ಲು ಕರಗುವ ತನಕ
ಕಾಲಪಕ್ಷಿ ರೆಕ್ಕೆ ಮುರಿದು ಬೀಳುವ ತನಕ
ನಿಲ್ಲುವಂಥ ಪ್ರೀತಿ, ನಲ್ಲೆ, ನನ್ನ ನಿನ್ನದು
ಯಾವ ಅಂಕೆ-ಶಂಕೆಗಳು ಇಲ್ಲಿ ಸಲ್ಲದು.

ಹೋಗಿ ಬರುವೆ, ನನ್ನ ನಲ್ಲೆ, ಗಳಿಗೆ ಕಾದಿರು
ಸಾವಿರಾರು ಮೈಲಿ ಇರಲಿ ಮತ್ತೆ ಬರುವೆನು.

ಇವೆರಡರ ಮೂಲವು ಇಂಗ್ಲೀಷಿನಲ್ಲಿದೆ. ರಾಬರ್ಟ್ ಬರ್ನ್ಸ್ ಎಂಬ ಕವಿಯ My Love is like A Red, Red Rose ಎಂಬ ಕವನದ ಕನ್ನಡ ರೂಪಗಳಿದು. ಧನ್ಯ ಕಾವ್ಯರಸಿಕರ ಮನಸ್ಸು!

-ಅ
18.11.2008
1.45PM

Monday, November 10, 2008

ಕಂಟಕ

ನನ್ನ ಜೀವಕ್ಕೆ ಕಂಟಕ.

ಕಾರಣ, ಮೊನ್ನೆ ಗಾಡಿಯಲ್ಲಿ ಹೋಗುತ್ತಿದ್ದಾಗ ಒಂದು ಕಾಗೆ ನನ್ನ ತಲೆಗೆ ರಪ್ಪನೆ ಬಡಿದು ಹೋಯಿತು. ಹೆಗಲ ಮೇಲೆ ಸವಾರಿಯೂ ಮಾಡಿಬಿಡುತ್ತಿತ್ತು ಇನ್ನು ಸ್ವಲ್ಪವಿದ್ದಿದ್ದರೆ!

ಗಾಡಿಯಿಂದ ಬೀಳುವಂತಾದ ನಾನು ನಿಲ್ಲಿಸಿ, "ಅಯ್ಯೋ 'ಗೂಬೆ' ಮುಂಡೇದೆ (ಕಾಗೆಗೆ ಗೂಬೆಯೆಂದು ಬೈಯ್ಯೋದೂ ಉಂಟು!!), ನಾನೇನಾದ್ರೂ ಬಿದ್ದಿದ್ರೆ ನಿನ್ ಮೇಲೆ ಇರೋ ಅಪಶಕುನದ ಆರೋಪ ನಿಜ ಆಗೋಗ್ತಿತ್ತಲ್ಲೋ, ಹೋಪ್‍ಲೆಸ್ ಫೆಲೋ.." ಎಂದು ಬೈದು ಮತ್ತೆ ಹೊರಟೆ!

ಪಾಪ, ಬಡಪಾಯಿ ಕಾಗೆ.

ಹಿಂದೊಂದು ದಿನ ಕಾಗೆಯೊಂದು ಚಲಿಸುತ್ತಿದ್ದ ನನ್ನ ಬೈಕಿನ ಗೇರ್ ಲಿವರ್‍ ಬಳಿಯೇ ಸಿಲುಕಿ, ನನ್ನ ಕಾಲು ಸಂದಿಯಲ್ಲಿಯೇ ಇಂಜಿನ್ನಿನ ಬಿಸಿ ತಗುಲಿ ಪ್ರಾಣ ಬಿಟ್ಟಿತ್ತು! ನನ್ನ ಕೈಯ್ಯಾರೆ ಆ ಕಾಕಶವವನ್ನು ತೆಗೆದು ಮರದ ಕೆಳಗೆ ಬಿಸುಟಿದ್ದೆ. ಅಯ್ಯೋ, ಅನ್ಯಾಯವಾಗಿ ಸತ್ತು ಹೋಯಿತಲ್ಲಾ ಎನ್ನುವ ನೋವೊಂದು ಬಿಟ್ಟರೆ ನನಗೆ ಇನ್ಯಾವ ಅಪಶಕುನವೂ ಆಗಿಲ್ಲ. ಈಗ ತಲೆ ಮೇಲೆ ಕುಳಿತಿರುವ ಕಾಗೆಯು ಏನು ಅಪಶಕುನವನ್ನು ತರುತ್ತೋ ನೋಡಬೇಕು! ನಾನೂ ಕಾಯುತ್ತಲೇ ಇದ್ದೀನಿ.

ನನ್ನ ಜ್ಯೋತಿಷಿ ಮಿತ್ರರು "ಕಂಟಕ ಇದೆ, ಶನಿ ದೇವರ ಪೂಜೆ ಮಾಡು (ಎಷ್ಟೋ ದಿನ), ಎಳ್ಳು ದೀಪ ಹಚ್ಚು" ಎಂದಾಗ ನಾನು ಅವರಿಗೆ ಕೊಟ್ಟ ಉತ್ತರ "ಕಂಟಕವೇ? ನನಗೋ ಕಾಗೆಗೋ??"

-ಅ
10.11.2008
11.15PM

Tuesday, November 4, 2008

ಕೆರೆಯ ಧೋರಣೆ

ಯಾವುದೋ ಗಿರಿಯೊಳು ಹುಟ್ಟಿ
ಕಂದರಗಳ ದಾಟಿ, ಬಂಡೆಗಳ ಮೀಟಿ
ಸುಳಿಯೊಳು ಸಿಲುಕಿಸಿ
ಚಳಿಯೊಳು ಪುಲಕಿಸಿ
ದೊಣ್ಣೆನಾಯಕನಪ್ಪಣೆಯಿಲ್ಲದಿದ್ದರೂ
ಹರಿಯಲು ನಿಲುಕಿಸಿ
ಇನ್ನೆಲ್ಲೋ ಶಾಶ್ವತ ಪಯಣಗೈವ ನದಿಯು ನಾನಲ್ಲ.

ಮಳೆಯೇನು, ಹೊಳೆಯೇನು?
ಬುವಿಯೊಳಗಿನ ಜಳವೇನು?
ಶಾಂತವಾಗಿ ನುಂಗಿ ನುಂಗಿ
ಒಮ್ಮೆ ಜನರನು, ಮತ್ತೊಮ್ಮೆ ಜೀವನವನು
ಶಾಂತವಾಗಿ ನುಂಗಿ ನುಂಗಿ
ಎಂದೂ ಬತ್ತದೆ ತುಂಬಿಯೂ ತುಳುಕದ
ದಿಗಂತದಾಚೆಗಿನ ಮುನ್ನೀರು ನಾನಲ್ಲ.

ಬತ್ತುವುದು ನನ್ನ ಧರ್ಮ
ಕಾಲಕಾಲಕ್ಕೆ!
ಅದು ನಿಮ್ಮದೇ ಕುಕರ್ಮ
ಕೇಡುಗಾಲಕ್ಕೆ!!
ನಾ ಬತ್ತಿದರೆ ನಿಮಗೆ ಮಳೆ
ನನ್ನ ಮೈ ಮಾತ್ರ ಅಶುಚಿ, ಕೊಳೆ.
ಮಳೆಯೆಂದೂ ಕೊಳೆಯಲ್ಲ
ಚಿರಸ್ಫಟಿಕವು!

-ಅ
04.11.2008
10.30PM

Saturday, November 1, 2008

ಇನ್ನೊಂದು ಘಟ್ಟ

ಆ ದಿನಗಳಲ್ಲಿ ನನಗೆ RHM ಹೊರೆತಾಗಿ ಬೇರೆ ಉದ್ಯೋಗವಿರಲಿಲ್ಲ. ಹೆಚ್ಚಾಗಿ ಸಂಪಾದಿಸಲಾಗದೇ ಇದ್ದರೂ ತಕ್ಕ ಮಟ್ಟಿಗೆ ನನ್ನ ಗೌರವವನ್ನು ಕಾಪಾಡಿರುವುದು ಈ ಸಂಸ್ಥೆ. ನಿದ್ದೆಯಲ್ಲೂ RHM ಬಗ್ಗೆ ಯೋಚಿಸಿ ತಲೆ ಕೆಡಿಸಿಕೊಂಡಿದ್ದ ನನಗೆ, ಅರ್ಧ ನಿದ್ದೆಯಲ್ಲೊಮ್ಮೆ "Speak to Nature" ಎಂಬ ಬೈಲೈನು ಹೊಳೆದು, ಮಧ್ಯರಾತ್ರಿಯೇ ನಾಮಕರಣ ಮಾಡಿಬಿಟ್ಟೆ! ನಾನು, ಗೆಳೆಯರೊಡಗೂಡಿ Rambling Holiday Makers ಆರಂಭಿಸಿ ಮೂರು ವರ್ಷಗಳ ನಂತರ ಜಾಹೀರಾತನ್ನು ಅಂತರ್ಜಾಲದಲ್ಲಿ ನೀಡಬೇಕೆಂಬುದು ಹೊಳೆಯಿತು. ಆಗ ಖಾಸಗಿ ವೆಬ್‍ಸೈಟನ್ನಾಗಲೀ, ಉಚಿತ ವೆಬ್‍ಸೈಟುಗಳನ್ನಾಗಲೀ ಮಾಡಲು ನನಗೆ ಅರಿವಿರಲಿಲ್ಲ.

ಈ ಗೂಗಲ್ ಪೇಜಸ್‍ನ ಅರಿವಾಗುವ ಮುಂಚೆ ಕಾರ್ಯಕ್ರಮಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಲು ನನಗೆ ಮೊದಲು ನೆರವಾಗಿದ್ದು ಬ್ಲಾಗರ್.ಕಾಂ. ಜೂನ್ 2006-ರಲ್ಲಿ speaktonature.blogspot.com ಜನಿಸಿದ್ದು ಹೀಗೆ! ಹಲವು ತಿಂಗಳುಗಳ ನಂತರ ಶ್ರೀಕಾಂತನ ಕೃಪೆ, ಗೂಗಲ್ ಪೇಜಸ್‍ನಲ್ಲಿ RHM ಬಂದಿತ್ತು. ಈ speak to nature ಬ್ಲಾಗಿನಲ್ಲಿ ಲೇಖನಗಳಾಗಲೀ, ಅಂಕಣಗಳಾಗಲೀ ಏನೂ ಇರಲಿಲ್ಲ. ಕೇವಲ ಜಾಹೀರಾತುಗಳಿದ್ದವು. ನಾನು ಎಲ್ಲರಿಗೂ ಈಮೇಲ್ ಕಳಿಸುತ್ತೇನಲ್ಲಾ, ಇಂತಿಂಥ ಟ್ರೆಕ್ಕು, ಇಂತಿಂಥ ಕಾರ್ಯಕ್ರಮ - ಹೀಗೆ, ಈ ಎಲ್ಲವನ್ನೂ ಆಮೂಲಾಗ್ರವಾಗಿ ಪ್ರಕಟಿಸುತ್ತಿದ್ದೆ.

ಬರೆಯುವ ಹವ್ಯಾಸ ಚಿಕ್ಕಂದಿನಿಂದಲೂ ಇದ್ದಿದ್ದು, ಅದರಲ್ಲೂ ಕಂಪ್ಯೂಟರಿನಲ್ಲಿ ಕನ್ನಡ ನೋಡಿ ವಿಪರೀತ ಖುಷಿಯಾಗಿ ಹಾಳೆಯ ಮೇಲೆ ಬರೆದಿದ್ದನ್ನು ಅದೇ ಸಮಯದಲ್ಲಿ ಕಂಪ್ಯೂಟರೀಕರಿಸುತ್ತಿದ್ದೆ. esnips.com ಅನ್ನು ನಾನು ಮರೆಯುವಂತಿಲ್ಲ. ಅಂತರ್ಜಾಲದಲ್ಲೂ ಕನ್ನಡ ಬಳಸಿ, ಅಲ್ಲಿ ಲೇಖನಗಳನ್ನು ಪ್ರಕಟಿಸಬಹುದೆಂಬ ಅರಿವೂ ನನಗೆ ಇರಲಿಲ್ಲ. esnipsನಲ್ಲಿ ಮೊದಲ ಲೇಖನ ಬರೆದಿಟ್ಟುಕೊಂಡಾಗ ಏನೋ ಆನಂದ. ನವೆಂಬರ್ ತಿಂಗಳಿನಲ್ಲಿ ಯಾವಾಗ RHMಗೆ ಗೂಗಲ್ ಪೇಜಸ್ ಸಿಕ್ಕಿತೋ, ಆಗ ಅಷ್ಟೇನೂ features ಇಲ್ಲದ esnipsನ ಬರಹವನ್ನು ಬ್ಲಾಗರ್‍ನ speaktonature.blogspot.com ಗೆ ವರ್ಗಾಯಿಸಿಬಿಟ್ಟೆ!

ಅದಕ್ಕೊಂದು ಹೆಸರನ್ನೂ ಕಷ್ಟ ಪಟ್ಟು ಕೊಟ್ಟೆ - ಕ್ಷಿತಿಜದೆಡೆಗೆ ಅಂತ.

ಶ್ರೀನಿವಾಸ, ಮತ್ತು ನಾನು ಆ ದಿನಗಳಲ್ಲಿ ಮಧ್ಯರಾತ್ರಿ ಮೂರುವರೆವರೆಗೂ chat ಮಾಡುತ್ತಿದ್ದೆವು. ಈ ಬ್ಲಾಗರ್.ಕಾಂ ಬಗ್ಗೆ ಐಡಿಯಾ ಕೊಟ್ಟಿದ್ದು ಅವನೇ. ಜೊತೆಗೆ ಒಟ್ಟಿಗೇ ಇಬ್ಬರೂ ಆರಂಭಿಸಿಕೊಂಡೆವು ನಮ್ಮ ನಮ್ಮ ಬ್ಲಾಗನ್ನು! ಆಗ ನನ್ನ ಬ್ಲಾಗಿಗಿದ್ದ ಓದುಗ ಅವನು, ಅವನ ಬ್ಲಾಗಿಗೆ ನಾನು!!

ನಾನು ನನ್ನ ಪ್ರಯಾಣದ ಲೇಖನಗಳನ್ನು ಬರೆಯಲು ಬಹಳ ಇಷ್ಟ ಪಡುತ್ತಿದ್ದೆ. ಆದರೆ, ಜೊತೆಗೆ ಏನೇನೋ ಬೇರೆ ಎಲ್ಲಾ ಬರೀತಾನೂ ಇದ್ದೆ. ಒಂದು ದಿನ, ಒಳ್ಳೇ ಬುದ್ಧನಿಗೆ ಜ್ಞಾನೋದಯವಾದ ಹಾಗೆ ಥಟ್ಟನೆ ಹೊಳೆಯಿತು. ಹೆಸರು ನೋಡಿದರೆ speak to nature ಅಂತ ಇದೆ, ಇದರಲ್ಲಿರುವ ಲೇಖನಗಳು ಹೆಸರಿಗೆ ಪೂರಕವಾಗೇ ಇಲ್ಲವಲ್ಲಾ ಅಂತ. ಆಗ ಕ್ಷಿತಿಜಾನಿಸಿಕೆಯನ್ನು ಆರಂಭಿಸಿ, speak to nature ಅನ್ನು ನೇಚರ್‍ಗೇ ಸೀಮಿತಗೊಳಿಸಿದೆ. ಅಂದಿನಿಂದ ಇಂದಿನವರೆಗೂ - ಎರಡು ವರ್ಷದಲ್ಲಿ ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ, ಪ್ರಕೃತಿಯ ನನ್ನ ಒಲವನ್ನು ಪದಗಳನ್ನಾಗಿಸೋಕೆ!

ಕ್ಷಿತಿಜದೆಡೆಗೆ ಬ್ಲಾಗು ನನಗೆ ಹಲವಾರು ಗೆಳೆಯರನ್ನು ಕೊಟ್ಟಿದೆ. ಈಗ ದಟ್ಸ್ ಕನ್ನಡಕ್ಕೆ ಹೋಗಿ ತನ್ನ ಬ್ಲಾಗನ್ನು ಹೆಚ್ಚು ಗಮನಿಸದೇ ಇರುವ ಶ್ರೀನಿಧಿ (;-)), ಕನ್ನಡ ಬ್ಲಾಗ್ ಪ್ರಪಂಚದಲ್ಲಿ ವಿಖ್ಯಾತನಾಗಿರುವ ಸುಶ್ರುತ, ಶಮರ (ಅಮರ), ಚಿತ್ರಕಾರ ಹರ್ಷ, ಪುಷ್ಪಲತಾ, ಬ್ಲಾಗೋತ್ತಮೆ ಲಕುಮಿ, ಪ್ರವೀಣರಾದ ಅರ್ಜುನ ಮತ್ತು ಹರೀಶ, ರಮೇಶ್, ಶಶಾಂಕ್, ಜಯಶಂಕರ್ ಹೀಗೆ ಹಲವಾರು ಮಿತ್ರರು ನನಗೆ ದೊರಕಿದ್ದು ಬ್ಲಾಗಿನ ದೆಸೆಯಿಂದಲೇ. ಕಗ್ಗದ ಶ್ರೀನಿವಾಸ, ಗೀತೆ ಶ್ರೀಕಾಂತ, ಕಾಪಿ-ಪೇಸ್ಟ್ ಶ್ರೀಧರ - ಇಂಥವರ ಗೆಳೆತನ ದಿನೇ ದಿನೇ ದೃಢವಾಗುತ್ತಿದೆ. ಅಕ್ಕ ವಿಜಯಾಳ ಪ್ರೋತ್ಸಾಹ ಪೊರೆಯುತ್ತಿದೆ.

ಈ ಎರಡು ವರ್ಷದಲ್ಲಿ ಬೆಟ್ಟದಲ್ಲಿ ಸಾವನ್ನಪ್ಪಿದವರ ಬಗ್ಗೆ, ಇಪ್ಪತ್ತು ರೂಪಾಯಿ ನೋಟಿನ ಬಗ್ಗೆ, ವನ್ಯಜೀವಿಗಳ ವಿಶ್ವ ಸೌಂದರ್ಯ ಸ್ಪರ್ಧೆ, ಇಂಥವು ನನಗೇ ಬಹಳ ಇಷ್ಟವಾದ ಲೇಖನಗಳು.

ಅಪ್ಪನ ಕಥೆ ಒಂದಷ್ಟು ಪ್ರಸಿದ್ಧಯನ್ನೂ ತಂದುಕೊಂಡಿತು. ಅದ್ಯಾಕೋ ಗೊತ್ತಿಲ್ಲ. ಅದನ್ನು ರಚಿಸಿದಾಗ ನಾನೂ ಬಹಳ ಥ್ರಿಲ್ ಆಗಿದ್ದೆ. ನಂತರ ಕೆಲವು ಪ್ರಾಣಿಗಳ ಆಯುಷ್ಯದ ಬಗ್ಗೆ ಇದ್ದ "ಅರಸ ಕೇಳ್, ಆಯುಷ್ಯವುಳ್ಳರೆ.." ಎಂಬ ಲೇಖನವನ್ನು ಕನ್ನಡಪ್ರಭದವರು ಭಾನುವಾರದ ಸಂಚಿಕೆಯೊಂದರಲ್ಲಿ ಪ್ರಕಟಿಸಿ ಕ್ಷಿತಿಜದೆಡೆಗೆ ಎಂಬ ಬ್ಲಾಗನ್ನು ಒಂದಷ್ಟು ಮನೆಗಳಿಗೂ ತಲುಪಿಸಿದರು. ಇದಕ್ಕಾಗಿ ನಾನು ಋಣಿ. ಮತ್ತೆ ಪ್ರಕೃತಿಯ ಬಗ್ಗೆ ಹಲವರಂತೆ ನನಗೂ ಇರುವ ಸಂದೇಹಗಳನ್ನೊಳಗೊಂಡ "ಯಾಕೆ" ಲೇಖನವನ್ನು 'ಅವಧಿ'ಯವರು ಗುರುತಿಸಿ ಪ್ರಕಟಿಸಿದ್ದಕ್ಕೆ ಅವರಿಗೂ ಥ್ಯಾಂಕ್ಸ್. ದಟ್ಸ್ ಕನ್ನಡದವರು ಹಿಂದೆ ಒಂದೆರಡು ಬರಹಗಳನ್ನೂ ತಮ್ಮ ವೆಬ್‍ಸೈಟಿನಲ್ಲಿ ಪ್ರಕಟಿಸಿ ಪ್ರಕೃತಿಯ ವಿಷಯಗಳನ್ನು ಹತ್ತು ಹಲವು ಕಡೆಗೆ ಕೊಂಡೊಯ್ದಿದ್ದಾರೆ. ಈ ಎಲ್ಲರಿಗೂ ನಾನು ಕೃತಜ್ಞ.

ಕೆಲವು ಲೇಖನಗಳನ್ನು ಓದಿಕೊಂಡು "ಥೂ! ಏನು ಇಷ್ಟು ಕೆಟ್ಟದಾಗಿದೆ ನಾನ್ ಬರೆದಿರೋದು" ಎಂದುಕೊಂಡಿರುವ ಪ್ರಸಂಗವೂ ಉಂಟು. ಆ ಲೇಖನಗಳ ಹೆಸರುಗಳು ಯಾಕೀಗ! ಮುಂದೆ ಮುಂದೆ ಬರೆಯುವಾಗ ಇನ್ನಷ್ಟು ಕಲಿತು, ಮತ್ತಷ್ಟು ಪಕ್ವವಾಗಿರುವ ಲೇಖನಗಳನ್ನು speak to nature-ನಲ್ಲಿರಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ತಪ್ಪುಗಳನ್ನೂ ಮಾಡಿದ್ದೇನೆ. ಓದುಗರು ತಿದ್ದಿದ್ದಾರೆ. ಇನ್ನು ಮುಂದೆಯೂ ಮಾಡುತ್ತೇನೆ, ಇನ್ನು ಮುಂದೆಯೂ ತಿದ್ದುತ್ತಾರೆ! ತಿದ್ದಿಕೊಳ್ಳುತ್ತೇನೆ.

ಕ್ಷಿತಿಜದೆಡೆಗೆ - ಇದರಿಂದ ನನ್ನ ಪಾಲಿಗೆ ದೊರಕಿದ ಮತ್ತೊಂದು ಭಾಗ್ಯವೆಂದರೆ "ಚಿತ್ರಚಾಪ" ಪುಸ್ತಕ. ಇಂಥಾ ಪುಸ್ತಕದ ರಚನೆಯಲ್ಲಿ ಮತ್ತೂ ಭಾಗವಹಿಸುವಂತಾಗಲಿ ಎಂದು ನಾನು ಪ್ರಾರ್ಥಿಸಿಕೊಳ್ಳುತ್ತೇನೆ.

ಅಂತೂ ಎರಡು ವರ್ಷ ಸಂದಿದೆ.
ಇನ್ನೂ ಕ್ಷಿತಿಜದೆಡೆಗೆ ಪಯಣ ಮುಂದಿದೆ.

ಆಲ್ ದಿ ಬೆಸ್ಟ್, ಅರುಣ. :-)


.....................................................................................

--> ಸಮಸ್ತ ಕನ್ನಡಿಗರಿಗೂ ರಾಜ್ಯೋತ್ಸವದ ಶುಭಾಶಯಗಳು

--> ಒಂದು ಕಾಲದಲ್ಲಿ ನನಗೆ ಅತ್ಯಂತ ಪ್ರಿಯ ನಟನಾಗಿದ್ದ ಶಾಹ್‍ರುಖ್ - ಈಗಲೂ ತಕ್ಕಮಟ್ಟಿಗೆ ಇಷ್ಟವಾಗುತ್ತಾನೆ. ಆದರೆ ರಾಮ್ ಜಾನೇ, ರಾಜು ಬನ್‍ಗಯಾ ಜೆಂಟ್ಲ್‍ಮ್ಯಾನ್, ಕಭೀ ಹಾನ್ ಕಭೀ ನಾ, ದಿಲ್‍ವಾಲೇ - ಕಾಲದ ಶಾಹ್‍ರುಖ್ ಹೆಚ್ಚು ಇಷ್ಟ ಆಗುತ್ತಾನೆ. ಸ್ವದೇಸ್, ಚಕ್ ದೇ ಚಿತ್ರಗಳಲ್ಲಿ ಪರಿಪಕ್ವತೆ ಕಂಡುಬಂದಿದ್ದು ಮೆಚ್ಚುಗೆಯಾದ. ಉತ್ತಮ ಪಾತ್ರಗಳು, ಉತ್ತಮ ಚಿತ್ರಗಳು ಈತನ ಪಾಲಿಗೆ ದೊರಕಲಿ. ಹುಟ್ಟುಹಬ್ಬದ ಶುಭಾಶಯಗಳು ಶಾಹ್‍ರುಖ್.

--> ಕಾಲೇಜಿನಲ್ಲಿ ಡಿಗ್ರಿ ಮಾಡುತ್ತಿದ್ದ ಕಾಲದ ಮಿತ್ರ ಸಂದೀಪ್ ಜನ್ಮದಿನ ಕೂಡ ಇಂದೇ. ಅವನಿಗೊಂದು ಶುಭಾಶಯ!

--> ಶಾಲೆಯಲ್ಲಿ ವಂಡರ್ ಲಾ ಕಿರುಪ್ರವಾಸಕ್ಕೆ ಹತ್ತು ವರ್ಷದ ಒಳಗಿನ ಮಕ್ಕಳನ್ನು ಕರೆದೊಯ್ದ ಬಗ್ಗೆ ನನಗೆ ಅಸಮಾಧಾನವಿದ್ದರೂ ಆ ಮಕ್ಕಳೊಡನೆ ಸುಸಂದರ್ಭದ ಮೆಲುಕು ಹಾಕಲು ಮನಸ್ಸು ಮುದಗೊಳ್ಳುತ್ತೆ. ಒಟ್ಟು 150 ಮಕ್ಕಳನ್ನು ಕರೆದುಕೊಂಡು ಹೋಗಿದ್ದೆವು. ನನ್ನ ಜವಾಬ್ದಾರಿಯಲ್ಲಿ 11 ಮಕ್ಕಳಿದ್ದೂ, "ಹೆದ್ರ್‍ಕೋಬೇಡ್ರೋ, ಹೋಗಿ ಆಟ ಆಡಿ ಎಲ್ಲವನ್ನೂ." ಎಂದು ಹೇಳಿ, ಸಿಕ್ಕಸಿಕ್ಕ ಆಟಗಳನ್ನೆಲ್ಲಾ ಆಡಿಸಿ ಮಕ್ಕಳೂ ಸಂತಸಗೊಂಡು, ನಾನೂ ಸಂತಸಗೊಂಡೆ. ಬೇರೆ ಮಕ್ಕಳಿಗೆ ನನ್ನ ಮಕ್ಕಳು - "ನಾವು ರೋಲರ್ ಕೋಸ್ಟರ್ ಆಡಿದ್ವಿ, ನಾವು ಕೊಲಂಬಸ್ ಆಡಿದ್ವಿ - ನಿಮ್ಮನ್ನ ಕರ್ಕೊಂಡ್ ಹೋಗ್ಲೇ ಇಲ್ಲ ನಿಮ್ ಟೀಚರ್ರು.." ಎಂದು ಆಡಿಕೊಳ್ಳುತ್ತಿದ್ದಾಗ ಏನು ಹೇಳಬೇಕೋ ತೋಚಲೇ ಇಲ್ಲ.

--> ಸರ್ವೇ ಭವಂತು ಸುಖಿನಃ.

-ಅ
02.11.2008
2.45PM

Wednesday, October 29, 2008

ಕವಿಯ ಮನೆಯ ಹಾದಿಯಲ್ಲಿ

ಕವಿಯ ಮನೆಯ ಹಾದಿಯಲ್ಲಿ
ಬಾನ ಪರದೆ ತುಂಬ
ತಾರೆಯು;
ಇರುಳು ಚೆಲುವಿರದು ಇಷ್ಟೊಂದು ಎಂದೂ!
ಇಂದು ಸ್ವರ್ಗ,
ಸುಖದ ಸರ್ಗ
ನಗುತಲಿರಲು ಎಲ್ಲ ತಾರೆಯಲ್ಲು ನನ್ನ
ನೀರೆಯು!

-ಅ
27.10.2008
10PM

Thursday, October 23, 2008

ಹುಟ್ಟುಹಬ್ಬ

ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕು - ಎಷ್ಟೇ ವಯಸ್ಸಾದರೂ! "ಶುಭಾಶಯಗಳು" ಬಹಳ ಸಂತೋಷವನ್ನು ನೀಡುತ್ತೆ. ಉಡುಗೊರೆಗಳೂ ಕೂಡ!!

-ಅ
23.10.2008
5AM

Monday, October 20, 2008

ನೀ ಮುಂದೆ

ಬೆಟ್ಟದ ಮೇಲಿನ ಮಂಜಿನೊಳಗಿನಾಕೃತಿಯಂತೆ
ಕಣ್ಣ ಮುಂದೆ ಮಂಜು ಮಂಜು ನೆನಪು ನಿನ್ನದು
ಎಂದೋ ಎಲ್ಲೋ ನೋಡಿದಂತೆ!

ಕಿವಿಯ ತುಂಬಿಲ್ಲ ದನಿಯು, ಸ್ಪರ್ಶ ತೋಳನು, ನೋಟ ಕಣ್ಣನು.
ಕೈ ಹಿಡಿದು ಆಟವಾಡುವ ಮುನ್ನವೇ ಹೊಕ್ಕೆ ನೀ ಮಣ್ಣನು
ಗಿಡದೊಳೇ ಹೂ ಬಾಡಿ ಉದುರಿದಂತೆ!
ನುಡಿಯಲೆಂಬ ತವಕ ನಾಲಿಗೆಗೆ, ಆಲಿಸಲು ಕಿವಿಗೆ.
ನೋಡಬಯಸಿದ ಕಣ್ಣಿಗೇನು ಉತ್ತರ ಹೇಳಲಿ?
ಚಿತ್ರಪಟವೇನೋ ಮುಂದಿದೆ, ಚಿತ್ರವೇ ಕಲ್ಪನೆ.

ನಾ ಬಂದೆ, ನೀ ಹೋದೆ
ಇಷ್ಟೆ ನನಗೆ ತಿಳಿದುದು.
ನೀನಿರದೆ ಇಂದು ಇಲ್ಲಿ
ಇಷ್ಟೆ ನಾನು ಬೆಳೆದುದು.

ಹೇಳುವರು ಹಿರಿಯರು
ನೂಲಿನಂತೆ ಸೀರೆ, ತಂದೆಯಂತೆ ಮಗನು.
ಉಳಿಸಿಲ್ಲ ನೀನೆನಗೊಂದೂ ಆದರ್ಶವನು
ಬೆಳೆಸಿರಬಹುದು ರಕ್ತದಲಿ, ಅರಿಯೆನು!

ದೇವರು ದಿಂಡರು ಸಾಸಿರ ಜಗಕೆ, ಜನಕೆ
ನಾನು ನಿನ್ನ ಕಲ್ಪಿಸುವಂತೆ!
ಕಾಲುಶತಮಾನ, ಬಂದು ನಾನು ಇಂದಿಗೆ!
ನೀನೆನಗೆ ಮಂಜಿನೊಳಗಿನಾಕೃತಿಯು
ಮಂಜಿನೊಳಗೇ ಮರೆಯಾಗಿ ಹದಿನೆಂಟಾಗಿ ಹೋಯಿತೇ?
ಕಾಲವು ಮುಂದೆ ಮುಂದೆ ಮುಂದೆ ಮುಂದೆ!!!
ನೀ ಮುಂದೆ, ನಾ ಹಿಂದೆ - ಎಂದೋ ಗೊತ್ತಿಲ್ಲವಷ್ಟೆ!

-ಅ
20.10.2008
7.20PM

Sunday, October 12, 2008

ಭುವಿಯೇನು, ಬದುಕೇನು?

ಸಹನೆ, ದಹನೆ ಎರಡೂ ಒಡಲಿನೊಳಗೆ
ನೆಲ ಮಾತ್ರ ಸಮವಿಲ್ಲ.
ಜಲವುಕ್ಕಿ ಹರಿವ ಪ್ರವಾಹವೊಂದೆಡೆ,
ತಳಬಿರಿದು ಬರಿದಿನ್ನೊಂದೆಡೆ
ಭುವಿಯೇನು, ಬದುಕೇನು?

ಭುವಿಯು ಕಂಪಿಸಿ ಕಾಲ ಕಾಲಕೆ
ಇಟ್ಟಿಗಿಟ್ಟಿಗೆ ಜೋಡಿಸಿ ಕಟ್ಟಿದ
ಬೃಹತ್ ಕಟ್ಟಡವನ್ನೆಲ್ಲಾ ಕೆಡವಿ,
ತಲೆಹೊತ್ತು ದೆಸೆಗೆಟ್ಟ ಬಾಳ್ಬಡವಿ.
ನಡುಮಧ್ಯದಲೇ ಮೆರೆದಾಡುತಿಹ
ಕ್ರಿಮಿಕೀಟ ಸರ್ಪಾದಿಗಳ ನೆಲೆಯು
ಕಂಗೊಳಿಸಿ ಕಂಗೆಡಿಸಬಲ್ಲ ದಟ್ಟಡವಿ.

ಹೆಜ್ಜೆಯೊಂದರಲಿ ಹಳ್ಳಕೊಳ್ಳ
ಮರುಹೆಜ್ಜೆ ಬಯಲು ಹಾದಿ.
ಇನ್ನಾವ ಹೆಜ್ಜೆಗಿಹುದೋ ಆಳದ ಬಾವಿಯ ಬುನಾದಿ?
ಬಿರುಕು ನೆಲವೆಂದು ಸಿಡಿಯುವುದೋ ಚೂರು ಚೂರಾಗಿ?
ಭುವಿಯೇನು, ಬದುಕೇನು?
ಎಷ್ಟು ಜೀವವುಳಿವುದೋ ಪಾರಾಗಿ!?!

ಒಣಗಿದೊಂದು ಜಾಲಿಮರದ ಕೆಳಗೆ, ಆರೀತು ದಣಿವೆಂದು ಭ್ರಮಿಸಿ
ಬಳಿಯಲಿರುವ ಹೊಂಗೆಯ ಮರೆವುದೇನು ಬದುಕೇ?
ಜಾಲಿಯೋ ಹೊಂಗೆಯೋ ತಿಳಿಯದೊಂದೂ ದಣಿವಿಗೆ
ಹೆಜ್ಜೆಗೇನು ಸಿಗುವುದೋ ಅದೇ ಆಸರೆ.
ಪುಷ್ಪವೋ ಪರ್ಣವೋ ಮುಳ್ಳೋ ಬಿದ್ದುದ ಸಹಿಸುತ
ಮೌನದಿಂದಿರುವ ಭುವಿಯೇನು, ಬದುಕೇನು!!

-ಅ
12.10.2008
6PM

Tuesday, October 7, 2008

ಶಂಕೆ

ಮಾತು ಮಾತು, ಏನು ಸಾರ?
ಮಾತಿನ ಶಬ್ದದಿ ಹುಟ್ಟುವುದೇ ಕಾವ್ಯ?
ಮೌನದೊಳು ಜೀವದ ಜತೆ
ಕಾವ್ಯ ಬೆರೆವುದೇ ಭಾವದ ಕತೆ
ಎದೆತೆರೆದು,
ಕಣ್ಮುಚ್ಚಿ
ಮನದೊಳಗುದಿಸಿದ ಹಾಡೇ ದಿವ್ಯ.

ಅಲೆಯಲೆಯಾಗಲೆಯುತ್ತಿದ್ದ
ಸಾಗರದೊಡಲಿನಂತೆ ಶಾಂತವಾದ ಚಿತ್ತಕೆ
ದಡದ ಮರಳ ಮೇಲೆ ತೆರೆಯು ಸದ್ದೆಸಗಿದಂತೆ
ತಿಳಿಯಾಗಸದಿಂದ ಮರುಭೂಮಿಗೆ
ಅನಾಮತ್ತು ಮಳೆ ಸುರಿದಂತೆ
ಹರ್ಷವೋ,
ವರ್ಷವೋ?
ಅರಿಯದಾದೆನೊಂದನೂ ಮಿಂಚಿನ ಕಾಲವೇಗದಲಿ.

ನೆನ್ನೆ ವರೆಗೂ ಕನಲ
ಕುದುರೆ ಸವಾರ
ಇಂದು, ಚರ್ಚೆ ಸಂಸಾರ?
ಕಾನನದಿ ಅಲೆವ ಜಿಂಕೆ
ಕುಪ್ಪಳಿಸುತ,
ಸಪ್ಪಳಿಸುತ
ದಿಕ್ಕು ಬದಲಿಪ ಶಂಕೆ.

-ಅ
08.10.2008
1AM

Thursday, October 2, 2008

ಕಗ್ಗಕ್ಕೊಂದು..

ಶ್ರೀನಿವಾಸ ಏನಾದರೂ ಬರೆಯುತ್ತಾನೆಂದರೆ ಅದರಲ್ಲಿ ಕಡೇ ಪಕ್ಷ ಒಂದಾದರೂ ಡಿವಿಜಿಯವರ ಕಗ್ಗದ ಉಲ್ಲೇಖ ಕೊಟ್ಟೇ ಇರುತ್ತಾನೆ. ಅವನಿಗೆ ಕಗ್ಗದ ಮೇಲೆ ಅಷ್ಟು ಒಲವು, ಭಕ್ತಿ.

ಇದುವರೆಗೂ ಇರುವ ಕಗ್ಗದ ವಿವರಣೆ, ವ್ಯಾಖ್ಯಾನ ಇರುವ ಪುಸ್ತಕಗಳನ್ನು ನೋಡಿದರೆ ಹಿರಿಯರು, ಮಹನೀಯರು ಬರೆದಿರುವುದೇ ಇದೆ. ಎಚ್.ಎಸ್. ಲಕ್ಷ್ಮೀನಾರಾಯಣ ಭಟ್ಟರು, ಶ್ರೀಕಾಂತ್, ಡಾ.ವೆಂಕಟರಮಣನ್, - ಹೀಗೆ ದೊಡ್ಡದೊಡ್ಡವರೇ. ಆದರೆ, ಕಗ್ಗವು ನಮ್ಮಂಥ ಸಾಮಾನ್ಯರಿಗೂ, ಪಾಮರರಿಗೂ ತಲುಪುವ 'ವಸ್ತು'ವಲ್ಲವೇ ಎಂದು ಶ್ರೀನಿವಾಸ ಮತ್ತು ನಾನು ಯೋಚಿಸಿ 2007 ಹೊಸವರ್ಷಕ್ಕೇ ಕಗ್ಗದ ಬ್ಲಾಗನ್ನು ತೆರೆದೆವು. ಇನ್ನೂ ಈಗ ಪ್ರಪಂಚವನ್ನು ನೋಡುತ್ತಿರುವ ನಮ್ಮಂಥವರಿಗೆ ಕಗ್ಗ ಹೇಗೆ ಅರ್ಥ ಆಗುತ್ತೆ ಅಂತ ಬರೆದುಕೊಳ್ಳೋದು ಅಂತ ನಮ್ಮ ಉದ್ದಿಶ್ಯ.

ಶ್ರೀನಿವಾಸನಂತೆ ನನಗೂ ಕಗ್ಗ ಬದುಕಿನಲ್ಲಿ ಅನೇಕ ಹಂತದಲ್ಲಿ ಕುಸಿದು ಬಿದ್ದಾಗ ಕೈ ಹಿಡಿದು ಎತ್ತಿದೆ, ದಿಕ್ಕು ಕಾಣದಾದಾಗ ದಾರಿದೀಪವಾಗಿದೆ, ಭಾರ ಹೊರುವುದು ಹೇಗೆಂಬುದನ್ನು ಕಲಿಸಿದೆ. ಕಗ್ಗದ ಬಗ್ಗೆ 'ಹಿರಿಯರು' ಹೇಳಿದ ವಿವರಣೆಗಳೆಲ್ಲಾ ನನಗಂತೂ ಅನೇಕ ಸಲ ನನ್ನ ಪರಿಧಿಯನ್ನು ಮೀರಿದೆಯೆಂದೇ ಅನ್ನಿಸಿದೆ. ಅವರು ಯಾವುದೋ ತತ್ತ್ವ ಹೇಳುತ್ತಿದ್ದಾರೆ, ನನ್ನ ಕೈಗೆ ನಿಲುಕದ್ದು ಎಂದೇ ಅನ್ನಿಸುತ್ತೆ. ಹಾಗಾಗಿ, ನನ್ನ ಕಿಂಚಿತ್ ಅನುಭವಕ್ಕೆ ತಕ್ಕ ಹಾಗೇನೇ ಕಗ್ಗವನ್ನು ಹೇಗೆ ಅರ್ಥೈಸಿಕೊಳ್ಳಬಲ್ಲೆ ಎಂಬುದನ್ನು ಬರೆದಿಟ್ಟುಕೊಳ್ಳುವ ಹಂಬಲ ನನಗೂ ಇತ್ತು.

ಶ್ರೀನಿವಾಸನೊಡನೆ ಕೈ ಸೇರಿಸಿದೆ.

ಈ ಕೃತ್ಯದ ಬಗ್ಗೆ ದಟ್ಸ್ ಕನ್ನಡಕ್ಕೆ 'ಹೋಗಿ'ಬಿಟ್ಟು ಬ್ಲಾಗಿನಲ್ಲಿ ನಾಪತ್ತೆಯಾಗಿರುವ ಶ್ರೀನಿಧಿಯದು ಬಹಳ ದೊಡ್ಡ ಟೀಕೆಯಿತ್ತು ಆಗ. "ರೀ, ಕಗ್ಗಕ್ಕೆಲ್ಲಾ ಯಾರಾದರೂ ಬ್ಲಾಗು ಮಾಡ್ತಾರೇನ್ರೀ, ಅದಕ್ಕೆ ವಿವರಣೆ ಬರೆಯೋದೇ ಅಪರಾಧ" ಎಂದಿದ್ದ. ನನಗೆ ಇದರ ಬಗ್ಗೆ ಸಂಪೂರ್ಣ ಒಪ್ಪಿಗೆಯಿದೆ. ವಿವರಣೆಯು ಇನ್ನೊಬ್ಬರ "reference"ಗೆ ಎಂಬುದಾದರೆ ಕಗ್ಗಕ್ಕೋ, ಗೀತೆಗೋ, ಉಪನಿಷತ್ತಿಗೋ ಹೀಗೆ ವಿವರಣೆಗಳನ್ನು ಬರೆಯಬಾರದು ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಶ್ರೀನಿವಾಸ ಮತ್ತು ನಾನು ಇಲ್ಲಿ ನಮ್ಮ ಅನುಭವವನ್ನು, ಅದಕ್ಕೆ ತಕ್ಕ ಅರಿವನ್ನು ಬರೆದಿಟ್ಟುಕೊಳ್ಳಬೇಕೆಂಬುದೊಂದೇ ಉದ್ದೇಶವಿರುವುದು, ಇದು ಖಂಡಿತ ಯಾವುದೇ ಒಂದು ಮುಕ್ತಕಕ್ಕೆ 'ವಿವರಣೆ' ಅಲ್ಲ ಎಂಬುದನ್ನು ಅವನಿಗೆ ಹೇಳಿದ ಮೇಲೆ, "ಏನೋ ಮಾಡಿ!!" ಅಂದಿದ್ದ.

ಶ್ರೀನಿವಾಸನ ಪ್ರಕಾರ ಕಗ್ಗವು ಕನ್ನಡದ ಭಗವದ್ಗೀತೆ. ನನ್ನ ವಯಕ್ತಿಕ ಅಭಿಪ್ರಾಯದಲ್ಲಿ ಕಗ್ಗವು ಒಮ್ಮೊಮ್ಮೆ ಗೀತೆಯನ್ನೂ ಮೀರಿಸುತ್ತೆ. ವಾಸ್ತವವನ್ನು ಹೆಚ್ಚು ಪ್ರತಿಪಾದಿಸುತ್ತೆ ಎಂಬುದು ನನ್ನ ಅನಿಸಿಕೆ.

ಕೆಲ ಕಾಲ ಅದ್ಯಾವ ದುರ್ವಿಧಿಯಿಂದಲೋ, ಸೋಮಾರಿತನದಿಂದಲೋ, ನಿರ್ಲಕ್ಷ್ಯದಿಂದಲೋ, ಎಂಥದೋ ಹೋಪ್‍ಲೆಸ್‍ ಕಾರಣದಿಂದಲೋ ಕಗ್ಗದ ಬ್ಲಾಗಿನತ್ತ ಸುಳಿದೇ ಇರಲಿಲ್ಲ. ಜಡವಾಗಿದ್ದ ಬ್ಲಾಗಿಗೆ ಮತ್ತೆ ಚಾಲನೆ ಮಾಡಲು ಹೊರಟಿದ್ದೇವೆ. ಕಗ್ಗವನ್ನು ಓದುವುದು ಒಂದು ಸಂತಸವಾದರೆ, ನಮಗಿರುವ ಅಲ್ಪ ಸ್ವಲ್ಪ ಅನುಭವದೊಂದಿಗೆ ಅದನ್ನು ಬೆಸೆದುಕೊಂಡು "ಆಹ್..." ಎಂದು ಆಸ್ವಾದಿಸುವ ಮಜವೇ ಬೇರೆ. ದುಃಖವೂ, ನೋವೂ ಸಹ ಸಂತಸವಾಗಿಬಿಡುತ್ತೆ!

ನೆನ್ನೆ ಥಟ್ಟನೆ ಹೊಳೆದು orkutನಲ್ಲಿ ಕಗ್ಗಕ್ಕೊಂದು ಸಮುದಾಯವನ್ನೂ ಮಾಡಿದೆವು. ನಾನು, ಶ್ರೀನಿವಾಸ - ನಮ್ಮರಿವಿನ ಕಗ್ಗವನ್ನು ಚರ್ಚಿಸಿಕೊಳ್ಳುವಂತೆ, ನಮ್ಮಂತಿರುವವರು ನಮ್ಮ ಜೊತೆ ಸೇರಿ ಆರೋಗ್ಯಪೂರ್ಣ ಚರ್ಚೆ ಮಾಡಿದರೆ 'ಹರಟೆ'ಗೂ ಬೆಲೆಯಿರುತ್ತೆ ಅಲ್ಲವೇ?

-ಅ
02.10.2008
12.40PM

Sunday, September 28, 2008

ಕೋಗಿಲೆ ಹಾಡಿತ್ತು ಕೇಳಿದ್ದೆಯಾ?

ಇಂದಿನ ಬಹಳ ಜನಕ್ಕೆ ಗೊತ್ತಿಲ್ಲ, ಮಹೇಂದ್ರ ಕಪೂರ್ ಯಾರು ಅಂತ.ಮೊಹಮ್ಮದ್ ರಫಿಯಿಂದ ಪ್ರೇರಿತರಾಗಿ ಹಿಂದಿ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಗಳಿಸಿದ್ದ ಮಹೇಂದ್ರ ಕಪೂರ್ ಧ್ವನಿ ನಟ ಮನೋಜ್ ಕುಮಾರ್‍ಗೆ ಹೇಳಿ ಮಾಡಿಸಿದ ಹಾಗಿತ್ತು. ಮನೋಜ್ ಕುಮಾರ್ ಹಾಡುಗಳು ಅಂದರೆ ಅದರಲ್ಲಿ ದೇಶಭಕ್ತಿಗೀತೆಗಳೇ ಹೆಚ್ಚು ಎಂಬುದು ಎಲ್ಲರಿಗೂ ಗೊತ್ತಿರುವುದೇ. ಇವರಿಬ್ಬರ ಜೋಡಿಯಲ್ಲಿ ಬಂದ Mere desh ki dharti, hain preet jahaan ki reet sadaa - ಇಂಥಾ ಹತ್ತಾರು ಹಾಡುಗಳು ಬಹಳ ಪ್ರಸಿದ್ಧಿಯನ್ನು ಪಡೆದಿತ್ತು.

ನನಗೆ ಹಮ್‍ರಾಜ್ ಚಿತ್ರದ ಮಹೇಂದ್ರ ಕಪೂರರ ನೀಲೇ ಗಗನ್ ಕೇ ತಲೇ.... ಹಾಡು ವಿಪರೀತ ಇಷ್ಟ.ಹಾಡಿ, ರಂಜಿಸಿ, ಚಿತ್ರ ರಸಿಕರ ಮನಸನ್ನು ಗೆದ್ದ ಮಹೇಂದ್ರ ಕಪೂರ್ ಅಸುನೀಗಿದ್ದಾರೆ. ಈ ಲೇಖನವನ್ನು ಆ ಮಹಾನ್ ಗಾಯಕನಿಗೆ ಅರ್ಪಿಸಲಿಚ್ಛಿಸುತ್ತೇನೆ.

ತಮ್ಮ ತೀಕ್ಷ್ಣ ಕಣ್ಣುಗಳಿಂದ ಎಲ್ಲರನ್ನೂ ಸೆಳೆದ ಇಂಗ್ಲೀಷ್ ಚಿತ್ರರಂಗದ ಒಬ್ಬ ದೊರೆ ಕೂಡ ಹೋಗಿಬಿಟ್ಟರು. ಪಾಲ್ ನ್ಯೂಮನ್ ಅಂತ. ಸತತ ಐದು ದಶಕಗಳ ಕಾಲ ಹಾಲಿವುಡ್‍ನನ್ನು ಆಳಿದ ಖ್ಯಾತಿ ಇವರದಾಗಿತ್ತು!!


ಮಹೇಂದ್ರ ಕಪೂರ್ ವಿಷಯವನ್ನು ವಿಜಯಾ ಕಳಿಸುತ್ತಿದ್ದಂತೆಯೇ, ಅದೇ ಸಂದೇಶವನ್ನು ನನ್ನಂತೆ ಆಸಕ್ತರಾದ ನಾಗೇಶ್ ಅವರಿಗೂ ಅರ್ಜುನನಿಗೂ, ಹರೀಶನಿಗೂ ಕಳಿಸಿದೆ.

ನಿಮಿಷ ಮಾತ್ರದಲ್ಲೇ ನನಗೆ ಮರುಸಂದೇಶಗಳು ಬಂದವು. ಪಾಲ್ ನ್ಯೂಮನ್ ಬಗ್ಗೆ ಅರ್ಜುನ್ ತಿಳಿಸಿದ. ನಾಗೇಶ್ ಬಹಳ ಚಂದದ ಸಂದೇಶ ಕಳಿಸಿದರು.

Ye kaisa ramzaan ka itafaaq hai
GURU aasmaan pe hai aur
SHAGRID bhi saath hai
(a tribute to MK)

ನಾನೇ ಹುಚ್ಚು ಚಿತ್ರಪ್ರೇಮಿಯೆಂದರೆ ನನ್ನ ಮೀರಿಸಿದವರು ಲಕ್ಷಾಂತರ ಜನರಿದ್ದಾರೆ!!

-ಅ
28.09.2008
9PM

Friday, September 26, 2008

ಸಂತೆ

ಸಾವು ನೋವು ಕರ್ಮವಂತೆ
ಬದುಕು ದೈವಲೀಲೆಯಂತೆ
ಅಂತೆಯೆಂಬ ಸಂತೆಯಲ್ಲಿ ಒಣಗಿ ಹೋದ ಗಿಡಗಳೆಷ್ಟೊ,
ಹಿಸುಕಿ ಬಿಸುಟು ಕೊಳೆತ ಹೂಗಳೆಷ್ಟೊ!
ವಿಧಿಗೆ ಅರಸನ ಪಟ್ಟ ಕಟ್ಟಿ
ಕರ್ಮವದರ ಸಾವಂತನಾಗಿಸಿ
ನೊಂದ ಮನಸಿಗೊಂದು ಸಾಂತ್ವನ
ಬದುಕು ದೈವಲೀಲೆಯಂತೆ
ನೋವು ನಲಿವು ಕರ್ಮವಂತೆ.

ಧರ್ಮ ತೊರೆದು, ಮತವ ಮೆರೆಸುವಂಧ ಸಂತೆಯು
ಚರ್ಮ ಸುಲಿದು ಕಾಲಲಿ ಧರಿಸಿ
ಹೊಣೆಯ ಮಾತ್ರ ಗುಡಿಯಲಿರಿಸಿ
ಶ್ರುತಿಶಾಸ್ತ್ರ ಪುರಾಣದ ಹೆಮ್ಮರದಲ್ಲಿ
ಗೂಡು ಮಾಡಿಕೊಳುವ ಕಾಕ-ಪಿಕ ಹಕ್ಕಿಗಳೆಷ್ಟೊ,
ಅದೇ ಮರಕ್ಕೆ ನೇಣು ಹಾಕಿಕೊಳುವ ಸೊಕ್ಕಿಗಳೆಷ್ಟೊ!

ಹೃದಯ ಹೊರೆದು ಬೆಳೆದ ಬದುಕು
ಉದಯವಾಗುವ ಮುನ್ನವೇ
ಕುಸಿದು ಬಿದ್ದು ಕೊಳೆತು ನಾರುವುದು
ಕರ್ಮವಂತೆ, ವಿಧಿಲೀಲೆಯಂತೆ!
ದೈವದೃಷ್ಟಿಯಲ್ಲಿ ಮಾತ್ರ ತಾನು ಶೀಲೆಯಂತೆ!!
ಹಸುರು ಗಿಡವು, ಕಂಪ ಸೂಸುವ ಹೂಗಳು ತುಂಬಿದ
ಸಗ್ಗವಾಗಲಿ ಈ ಅಂತೆಯೆಂಬ ನಿಜದ ಸಂತೆ!!

-ಅ
26.09.2008
11PM

Monday, September 22, 2008

ಪ್ರಿಸಾರಿಯೋ ಸರ್ಕಸ್

ವಾಷಿಂಗ್ ಮೆಷೀನ್ ಖರೀದಿಸುವಾಗ ಅಂಗಡಿಗೆ ಹೋಗಿ "ಒಂದ್ ವಾಷಿಂಗ್ ಮೆಷೀನ್ ಕೊಡಿ" ಅಂತ ಗಣೇಶ ಫ್ರೂಟ್ ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ ತೆಗೆದುಕೊಂಡ ಹಾಗೆ ಖರೀದಿಸಿದ್ದನ್ನು ಮೊಮ್ಮಗಳು ಶ್ರೀ ಇನ್ನೂ ನೆನೆಸಿಕೊಂಡು ನಗುತ್ತಾಳೆ. ಲ್ಯಾಪ್‍ಟಾಪ್ ಖರೀದಿಸುವಾಗ ಇಂಥಾ ಪರಿಸ್ಥಿತಿ ಒದಗಲಿಲ್ಲ. ಬದಿಯಲ್ಲಿ ಶ್ರೀಕಾಂತನಿದ್ದ. ನಾನೊಬ್ಬನೇ ಇದ್ದಿದ್ದರೆ ಬಹುಶಃ ಕಂಪ್ಯೂಟರ್ ವೇರ್ ಹೌಸ್‍ನವನು ದಂಗಾಗುವಂತೆ, "ಒಂದ್ ಲ್ಯಾಪ್ ಟಾಪ್ ಕೊಡಿ" ಅಂತ ಕೇಳುತ್ತಿದ್ದೆ. ಶ್ರೀಕಾಂತ ಹಾಗಲ್ಲ, ಏನಾದರೂ ಕೆಲಸ ಮಾಡಬೇಕಿದ್ದರೆ ಅದನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಎಲ್ಲವನ್ನೂ ಪರಿಶೋಧಿಸಿದ ನಂತರವೇ ಮುಂದಿನ ಹೆಜ್ಜೆಯಿಡುವುದು. ನನ್ನ ಹಾಗೆ ಕೇರ್‍ಲೆಸ್‍ ಫೆಲೋ ಅಲ್ಲ.

ಶ್ರೀಕಾಂತನ ದೆಸೆಯಿಂದ ಒಂದು ಘಂಟೆಗಳ ಕಾಲ ಪರೀಕ್ಷೆಯ ನಂತರ ಪ್ರಿಸಾರಿಯೋ ಖರೀದಿಸಿದ್ದಾಯಿತು - ಒಂದು ತಿಂಗಳ ಕೆಳಗೆ. ಆದರೆ, ದರಿದ್ರ ವಿಸ್ಟಾ ಹಾಕ್ಕೋಬೇಕು ಎಂದು ಅಂಗಡಿಯವನು ಹೇಳಿದ್ದಾಗ, ಬೇಡವೆಂದು ಹೇಳಿ ನನಗೆ ಡಾಸ್ ಕೊಡಿ ಸಾಕು, ನಾನು XP ಹಾಕ್ಕೋತೀನಿ ಎಂಬ ಧೋರಣೆಯನ್ನು ತೋರಿದ್ದೆ. ಅವನು ಡ್ರೈವರುಗಳನ್ನು ಒಂದು ಸಿ.ಡಿ.ಯಲ್ಲಿ ಹಾಕಿಕೊಟ್ಟ. ಆದರೆ ಮನೆಗೆ ಬಂದು ಹರಸಾಹಸ ಮಾಡಿದರೂ ಈ ಲ್ಯಾಪ್‍ಟಾಪಿನೊಳಗೆ XP ಹೋಗಲೊಲ್ಲದು ಎಂದು ಹಠ ಹಿಡಿದು ಕುಳಿತುಬಿಟ್ಟಿತು. ನಾನು ಇದನ್ನು ತಂದ ಮೊದಲ ದಿನ ಎಲ್ಲರಿಗೂ "ನಾನು ಲ್ಯಾಪ್‍ಟಾಪ್ ತೊಗೊಂಡೆ" ಅಂತ ಬರೀ ಕಪ್ಪು ಪರದೆಯ ಮೇಲಿನ DOS PROMPT ತೋರಿಸಿಕೊಂಡೇ ಬಂದೆ. ಸತ್ಯಪ್ರಕಾಶ್ ಚೆನ್ನಾಗಿದೆ ಎಂದೇನೋ ಅಂದರು, ಆದರೆ ಅವರ ಮುಖ ಈ ಬರೀ ಕಪ್ಪು ಬಣ್ಣ ಏನು ಆಕರ್ಶಣೀಯವಾಗಿಲ್ಲ ಎಂದು ಹೇಳುತ್ತಿತ್ತು.

ನನಗೆ ರಾತ್ರಿ ನಿದ್ದೆಯಿಲ್ಲ. ಹೊಸ ಕಂಪ್ಯೂಟರಿನಲ್ಲಿ ಶೆಮ್ಮಂಗುಡಿ ಸಂಗೀತ ಕೇಳಿಬಿಡಬೇಕು ನಾನು ಎಂಬುದು ನನ್ನ ಹಠ. ಸರಿ, ಹಳೆಯ Linux ಇತ್ತು. ಒಂದೂವರೆಗಂಟೆ ಸತತವಾಗಿ install ಆಗತೊಡಗಿತು. ಶಬ್ದವೂ ಬಂದಿತು. Restart ಮಾಡು ಅಂದಿತು. ಮಾಡಿದರೆ, Display ಬಾರದೆ ಹೋಯಿತು. ನನ್ನ ಮುಖ ಮತ್ತೆ ಸೂರ್ಯನು ಮುಳುಗಿ ಹೋದಾಗ ಬಾಡುವ ಸೂರ್ಯಕಾಂತಿಯಂತಾಯಿತು.

ಕೆಟ್ಟ BIOS Settings ಅನ್ನು ಬದಲಿಸಿದ ನಂತರ XP ಪ್ರತಿಷ್ಠಾಪನೆ ಆಗಿಬಿಟ್ಟಿತು. SATA disable ಮಾಡಿದರೆ work ಆಗೋಯ್ತು!! "ಯಾವ್ ತಲೆಕೆಟ್ ಬೋಳಿಮಗ ಇದಕ್ಕೆ program ಮಾಡಿದಾನೋ" ಎಂದು ಶಪಿಸಿದೆ. ಆದರೂ Windows ಪ್ರತಿಷ್ಠಾಪನೆ ಕಾರ್ಯವು ನೆರವೇರಿದ್ದರಿಂದ ಬೈಗುಳವನ್ನು ಹಿಂತೆಗೆದುಕೊಂಡೆ. ಶ್ರೀಕಾಂತನಿಗೆ ಈ ವಿಷಯ ಹೇಳಿದಾಗ ಅವನೂ ನನ್ನೊಡನೆ ಸೇರಿಕೊಂಡು HP ಕಂಪೆನಿಯವರಿಗೆ ಉಗಿದ. ಮೈಕ್ರೋಸಾಫ್ಟಿಗಂತೂ ವಾಚಾಮಗೋಚರವಾಗಿ ಶಪಿಸಿದೆ ನಾನು. ಯಾಕೆಂದರೆ, XP install ಏನೋ ಆಯಿತು, ಶಬ್ದವೇ ಬರುತ್ತಿಲ್ಲ!! ನನ್ನ ಶೆಮ್ಮಂಗುಡಿ ಹಾಡು ಕೇಳುವ ಕೆಲಸ ಹಾಗೇ ಬಾಕಿಯಾಗಿತ್ತು.

ಗೆಳೆಯ ಶರತ್ ಸಹಾಯ ಮಾಡಿದ. "ದರಿದ್ರ ವಿಂಡೋಸ್ ಯಾಕೆ ಹಾಕ್ಕೋತೀಯ, ಉಬುಂಟು ಹಾಕ್ಕೊ, ಲೈಫು ಆರಾಮ್ ಆಗುತ್ತೆ" ಎಂದು ಒಂದೇ ಮಾತಿನಲ್ಲಿ ಹೇಳಿದ. ಸರಿ, ನಾನು "ನಿನ್ನ ಹತ್ತಿರ ಇದೆಯಾ?" ಎಂದು ಕೇಳಿದಾಗ ಅವನು, ನನ್ನ ದಿಗ್ದರ್ಶಕನಂತೆ ನನ್ನ ಕಣ್ತೆರೆದ. Ubuntu Operating System ನನ್ನು ಮನೇಗೇ ತಂದು ಕೊಡುತ್ತಾರೆ. ಅದೂ ಉಚಿತವಾಗಿ. ಆದರೆ ಸ್ವಲ್ಪ ಸಮಯ ಹಿಡಿಯುತ್ತೆ. ಚಿಂತೆಯಿಲ್ಲ. ವೈರಸ್ ಬರುವುದಿಲ್ಲ. Hang ಆಗುವುದಿಲ್ಲ. ಇತ್ಯಾದಿ. ಸರಿ, ಆರ್ಡರ್ ಮಾಡೇಬಿಟ್ಟೆ! ಅದು ಬರುವುದರೊಳಗಾಗಿ ನನ್ನ ಮೂರನೇ ಮೊಮ್ಮಗಳ ಕೃಪೆಯಿಂದ Ubuntu DVD ದೊರಕಿದ್ದು ನನ್ನ ಭಾಗ್ಯವೆಂದೇ ಬಗೆದೆ. ಸುರಿಯುವ ಮಳೆಯಲ್ಲಿಯೇ ಹೋಗಿ, ಅವಳಿಂದ ಪಡೆದುಕೊಂಡು ಬಂದು ಅಂದು ರಾತ್ರಿಯೇ ಇದರ ಪ್ರತಿಷ್ಠಾಪನೆ ಕೂಡ ಮಾಡಿಬಿಟ್ಟೆ. ಸರಾಗವಾಗಿ ಪ್ರಿಸಾರಿಯೋ ಒಳಹೊಕ್ಕಿತು. ಎಲ್ಲೂ ಯಾವ ಸಮಸ್ಯೆಯಾಗಲೀ ಸಂದೇಹವಾಗಲೀ ಬರಲೇ ಇಲ್ಲ. Ubuntu ವನ್ನು ಕೊಂಡಾಡಿದೆ, Windows ಅನ್ನು ಅವಾಚ್ಯ ಶಬ್ದಗಳಿಂದ ಉಗಿದೆ. ಶೆಮ್ಮಂಗುಡಿ ಹಾಡನ್ನು ಕೇಳಿಯಾದ ನಂತರವಂತೂ ನನ್ನನ್ನು ಹಿಡಿಯುವವರೇ ಇಲ್ಲ!!

ಎಲ್ಲಾ ಮುಗಿದ ಮೇಲೆ, Ubuntu ನಲ್ಲಿ ಕನ್ನಡ ಬರುತ್ತಲೇ ಇರಲಿಲ್ಲ!! ಮದುವೆ ಗಂಡಿಗೆ 'ಅದೇ' ಇಲ್ಲ ಅನ್ನುವ ಹಾಗಾಯಿತು!! ಇಲ್ಲಿ ಕನ್ನಡದಲ್ಲಿ ಬರೆಯುವ ಹಾಗೆ Ubuntu ಉಪಯೋಗಿಸಿಕೊಂಡು ಮಾಡಲಾಗುವುದಿಲ್ಲ. ಆದರ್ ಕನ್ನಡ ಓದಬಹುದು. ಒತ್ತಕ್ಷರಗಳು ಪಕ್ಕದ ಅಕ್ಷರಕ್ಕೆ shift ಆಗಿಬಿಟ್ಟಿರುತ್ತೆ. ಆದರೂ ತೊಂದರೆಯಿಲ್ಲ. ಓದಬಹುದು. ಬರೆಯಲಾಗುವುದಿಲ್ಲವಲ್ಲಾ.. Ubuntu ಗೆ ಬೈಯ್ಯಲು ಮನಸ್ಸಾಗಲಿಲ್ಲ.

ಕನ್ನಡದಲ್ಲಿ ಬರೆಯಬೇಕಾದರೆ XP, ಉಳಿದ ಸಮಯದಲ್ಲಿ Ubuntu - ಹೀಗೆ ಬಳಸುವಂತಾಗಿತ್ತು. XP ಯಲ್ಲಿ ಶಬ್ದ ಬರುತ್ತಿಲ್ಲ, Ubuntu ನಲ್ಲಿ ಕನ್ನಡ ಬರುತ್ತಿಲ್ಲ!! ಒಳ್ಳೇ ಎಡಬಿಡಂಗಿ ಸಹವಾಸ!!! ಹಾಡು ಕೇಳದೆ ಬರೆಯಲು ಆಗದು, ಹಾಡು ಕೇಳುತ್ತಿದ್ದರೆ ಬರೆಯದೆ ಇರಲು ಆಗದು - ಇದು ನನ್ನ ಸ್ಥಿತಿ!!

ನೆನೆಸಿಕೊಂಡರೆ ನನಗೇ ನಗು ಬರುತ್ತೆ. ಕನ್ನಡ ಬರೆಯಲು ಎಷ್ಟು ಹೆಣಗಾಡಿದೆನೆಂದರೆ, Orkut ಅಲ್ಲಿ "Type in Kannada" ಗೆ ಹೋಗಿ, ಅಲ್ಲಿ type ಮಾಡಿ ನಂತರ ಅದನ್ನು Copy - Paste ಮಾಡಿದ್ದೇನೆ.

ಶ್ರೀಕಾಂತನ ದೆಸೆಯಿಂದ XPಗೆ ಕಂಠ ದೊರಕಿತು! ಒಂದು ತಿಂಗಳಿಂದ ಎಲ್ಲೆಲ್ಲೋ ಹುಡುಕುತ್ತಿದ್ದೆ, ದರಿದ್ರ XPಗೆ audio drivers ಅನ್ನು. ಇಂದು ಅವನ ಕೈಗೆ ಸಿಕ್ಕಿಬಿತ್ತು. ನನ್ನಂತೆ ಪ್ರಿಸಾರಿಯೋ ಬಳಸುವವರು XP ಇಂದ ಪೀಡಿತರಾಗಿದ್ದರೆ, ಈ ಕೊಂಡಿಯನ್ನು ಉಪಯೋಗಿಸಬಹುದು. ಇಲ್ಲಿ XP ಗೆ ಬೇಕಾದ ಎಲ್ಲಾ ಡ್ರೈವರುಗಳ ಮಾಹಿತಿಯಿದೆ. ಈ ಬ್ಲಾಗನ್ನು ನಡೆಸುತ್ತಿರುವ ಪ್ರಸಾದ್ ಅವರಿಗೆ ನಾನು ಋಣಿ.

ಆ ಮಾಹಿತಿಗಳೆಲ್ಲವೂ ಅಲ್ಲೇ ಇರುತ್ತೋ ಇಲ್ಲವೋ ಎಂಬ ಅನುಮಾನವೂ ಸಹ ಇದೆ. ನಾಳೆ ಏನಾಗುವುದೋ ಬಲ್ಲೋರು ಯಾರು!! ಅದಕ್ಕೇ ಅಲ್ಲಿರುವುದನ್ನೆಲ್ಲವನ್ನೂ ಇನ್ನೊಂದು documentಗೆ copy ಮಾಡಿಟ್ಟಿದ್ದೇನೆ.

XP ಯಲ್ಲಿ ಶಬ್ದ ಬರುತ್ತಿದೆ. ಹಾಡು ಕೇಳಿಸುತ್ತಿದೆ. ಅಂತೆಯೇ ಆದಷ್ಟು ಬೇಗ Ubuntu ನಲ್ಲಿ ಕನ್ನಡ ಬರೆಯುವಂತಾಗಲಿ. ಆಗ ಈ Windows ಹಂಗು ಎಲ್ಲರಿಂದ ದೂರವಾಗಲಿ. ಸರ್ವೇ ಭವಂತು ಸುಖಿನಃ.

-ಅ
21.09.2008
1.30AM

Wednesday, September 17, 2008

ಪರೀಕ್ಷೆ

ನಾವು ವಿದ್ಯಾರ್ಥಿಗಳಾಗಿದ್ದ ಕಾಲದಲ್ಲಿ ಸಿಕ್ಕಾಪಟ್ಟೆ ಸ್ಪರ್ಧೆ. ಹುಡುಗರಲ್ಲಿ ಹೆಚ್ಚಿರದಿದ್ದರೂ ಹುಡುಗಿಯರಂತೂ ಬೇರೆಯವರಿಗೆ ಅರ್ಧ ಅಂಕ ಹೆಚ್ಚು ಬಂದರೂ ಹೊಟ್ಟೆಯೊಳಗೆ ಸಂಕಟ ಪಟ್ಟುಕೊಳ್ಳುತ್ತಿದ್ದರು. ಹುಡುಗರೋ, "ನೀನೂ ತೂಕಾ? ಕೈ ಕೊಡು ಮಗ, ನಾನೂ ತೂಕು.." ಅನ್ನೋ ಜಾತಿಯವರು. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ rank ಬರುವವರು ನಮ್ಮ ಜೊತೆ ಸೇರುತ್ತಲೇ ಇರಲಿಲ್ಲ.

ತಿಂಗಳಾಯಿತೆಂದರೆ ಪರೀಕ್ಷೆ, ಆಮೇಲೆ ಅರ್ಧವಾರ್ಷಿಕ ಪರೀಕ್ಷೆ, ಮತ್ತು ವಾರ್ಷಿಕ ಪರೀಕ್ಷೆ. Rankಗಳಿಗೆ ಹೋರಾಟ. ಒಂದು ಅಂಕದಿಂದ ಒಂದು rank ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ವಾರಗಟ್ಟಲೆ ಸಪ್ಪಗಿರುತ್ತಿದ್ದರು ಸ್ಪರ್ಧಿಗಳು. ನಾನೂ ಒಂದು ಸಲ ಮೊದಲ rank ಬಂದುಬಿಟ್ಟಿದ್ದೆ, ಆರನೇ ತರಗತಿಯಲ್ಲಿ, ನೆನಪಿದೆ, ಒಂದೇ ಸಲ ಬಂದಿರೋದು ಇದುವರೆಗೂ. ಇಡೀ ಬೇಸಿಗೆ ರಜೆ ಎರಡು ತಿಂಗಳು ಪೂರ್ತಿ ಆಕಾಶದಲ್ಲೇ ಇದ್ದೆ. ಎಂಟನೇ ತರಗತಿಯಲ್ಲೇ ಇಂಗ್ಲಿಷಿನಲ್ಲಿ ಫೇಲಾಗಿದ್ದೆ, ಆಗ ಒಂದು ವಾರ ಉಪವಾಸ ಮಾಡಿದವರ ಹಾಗೆ ಬಡಕಲಾಗಿಬಿಟ್ಟಿದ್ದೆ.

ಬೆಳೆಬೆಳೆಯುತ್ತಾ ಪತ್ರಿಕೆಗಳಲ್ಲಿ "ಕಡಿಮೆ ಅಂಕ ತೆಗೆದುಕೊಂಡ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ" ಎಂಬ ವಾರ್ತೆ ಹೆಚ್ಚು ಹೆಚ್ಚು ಓದತೊಡಗಿದೆ. ಸರ್ಕಾರವೋ, ಇದಕ್ಕೆ ಕಾರಣ ಪರೀಕ್ಷಾವಿಧಾನವೇ ಎಂದು ತೀರ್ಮಾನಿಸಿ, ಈಗ ಮಕ್ಕಳಿಗೆ Rank ಕೊಡುವಂತೆಯೇ ಇಲ್ಲ. ನೂರಕ್ಕೆ ತೊಂಭತ್ತು ತೆಗೆದುಕೊಂಡರೂ A grade, ತೊಂಭತ್ತೊಂಭತ್ತು ತೆಗೆದುಕೊಂಡರೂ A grade-ಏ. ಯುದ್ಧಂ ತ್ಯಜತ... ಸ್ಪರ್ಧಾಂ ತ್ಯಜತ.... ಎಂಬುದನ್ನು ಸರ್ಕಾರದವರು ಹೀಗೆ ಅರ್ಥ ಮಾಡಿಕೊಂಡಂತಿದೆ. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಕಾರಣ ಬೇರೆಯದೇ ಸಿಗುತ್ತಲೇ ಇದೆ. ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಜೊತೆಗೆ ನಮ್ಮ ದೇಶದಲ್ಲಿ ವಿದ್ಯಾರ್ಥಿ ಪಡೆದುಕೊಂಡ ಅಂಕದ ಮೇಲೆ ಅವನ/ಅವಳ ಪ್ರತಿಭೆಯನ್ನು ಅಳೆಯುತ್ತಾರೆ. "ಅವನು ಬಿಡಿ ಬುದ್ಧಿವಂತ ಹುಡುಗ, ಎಲ್ಲಾದರಲ್ಲೂ 90 and above marks ತೊಗೋತಾನೆ." - ಇದು ಎಂಥಾ ಮೂರ್ಖತನ!! ಹಾಡಲು ಚೆನ್ನಾಗಿ ಬರುವವನು ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡರೆ, ಅವನ "ಗಾಯನ" ಪ್ರತಿಭೆಗೆ ಎಳ್ಳಷ್ಟೂ ಬೆಲೆಯಿರುವುದಿಲ್ಲ. ಕಲೆಗಾರನಿಗಂತೂ ಕೊಲೆಗಾರನಿಗಿಂತ ಕೀಳು ಬದುಕು! "ಸುಮ್ನೆ ಬಣ್ಣ ಬಳ್ಕೊಂಡ್ ಕೂತಿರ್ಬೇಡ, ಓದ್ಕೋ.." ಅಂತ ನಮ್ಮ ಮನೆಯಲ್ಲೇ ಬೈಗುಳಗಳನ್ನು ಕೇಳಿದ್ದೇನೆ. ಇನ್ನು, ಮಾರ್ಕ್ಸು ಇಲ್ಲದಿದ್ದರೆ ಹೈಸ್ಕೂಲಿಗೆ ಓಳ್ಳೇ ಕಡೆ ಸಿಗಲ್ಲ. ಎಸ್.ಎಸ್.ಎಲ್.ಸಿ. ಯಲ್ಲಿ ಕಡಿಮೆ ಅಂಕ ಬರದಿದ್ದರೆ "ಒಳ್ಳೇ" ಕಾಲೇಜಿನಲ್ಲಿ ಸೀಟು ಸಿಗುವುದಿಲ್ಲ. 95% ಪಡೆದುಕೊಂಡ ವಿದ್ಯಾರ್ಥಿಗಳನ್ನು ಮಾತ್ರವೇ admit ಮಾಡಿಕೊಂಡು ಆ ಶಾಲೆ/ಕಾಲೇಜು ಮಾಡುವ ಸಾಧನೆಯಾದರೂ ಏನೆಂಬುದು ನನಗೆ ಅರ್ಥವೇ ಆಗಿಲ್ಲ! ಎಲ್ಲೆಲ್ಲಿಂದಲೋ ಎಲ್ಲೆಲ್ಲಿಗೋ ಲಿಂಕುಗಳಿವೆ!!

ಇನ್ನು ಪಾಸು ಮಾಡುವ ವಿಧಾನ. ಕೆಲವು ಶಾಲೆಗಳಲ್ಲಿ ಈಗ ಪರೀಕ್ಷೆಯೇ ಮಾಡುವುದಿಲ್ಲ. ನನಗೆ ಈ ಪದ್ಧತಿ ಬಹಳ ಹಿಡಿಸಿತು. ಪರೀಕ್ಷೆಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ, ಅದನ್ನು ಮೌಲ್ಯ ಮಾಪನ ಮಾಡುವ, ಮತ್ತೆ ಫಲಿತಾಂಶವನ್ನು ದಾಖಲಿಸುವ ಗೋಜು ಇಲ್ಲವೆಂದಲ್ಲ. ಆದರೆ, ಇಂಥಾ ಪದ್ಧತಿಗಳಲ್ಲಿ, ದಿನೇ ದಿನೇ ಪರೀಕ್ಷೆ ಮಾಡಿ, ವಿದ್ಯಾರ್ಥಿಯ ಏಳಿಗೆಯನ್ನು ಪ್ರತಿದಿನ ಪರಿಗಣಿಸುತ್ತಾರೆ. ವರ್ಷವಿಡೀ ಪರೀಕ್ಷೆಯೇ. ಸುಮ್ಮನೆ ಪಾಠ ಹೇಳುವುದು, ನೋಟ್ಸು ಬರೆಸುವುದು, ತಾವು ಕೊಟ್ಟ ನೋಟ್ಸನ್ನು ತಾವೇ ತಿದ್ದುವುದು, ಮಕ್ಕಳು ಅದನ್ನು ಉರು ಹೊಡೆಯುವುದು, ರಿವಿಷನ್ ಅಂತ ಆ ನೋಟ್ಸನ್ನೇ ಓದಿಸುವುದು, ಪರೀಕ್ಷೆಯಲ್ಲಿ ಅದೇ ಪ್ರಶ್ನೆ ಕೇಳುವುದು, ಮಕ್ಕಳು ಉತ್ತರ ಬರೆಯುವುದು, ಮತ್ತೆ ತಾವು ಕೊಟ್ಟ ನೋಟ್ಸನ್ನೇ ಬರೆದ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದು - ಇದು ಪರೀಕ್ಷಾ ವಿಧಾನ ಇನ್ನೂ ಅನೇಕ ಶಾಲೆಗಳಲ್ಲಿ.. ಏಳನೇ ತರಗತಿಯವರೆಗೂ ಪರೀಕ್ಷೆಗಳ ಅವಶ್ಯಕತೆಯೇ ಇಲ್ಲ ಎಂದು ಒಂದು ಪದ್ಧತಿ ಹೇಳುತ್ತೆ, ಆ ಪದ್ಧತಿಗೆ ನನ್ನ ಮತ.

ಇಂಥಾ ಪದ್ಧತಿಗಳು ನಮ್ಮ ಕಾಲದಲ್ಲೂ ಇದ್ದಿದ್ದರೆ ಚೆನ್ನಿರುತ್ತಿತ್ತೆನಿಸುತ್ತೆ.

ಈಗ ನಮ್ಮ ಶಾಲೆಯಲ್ಲಿ ಅರ್ಧವಾರ್ಷಿಕ ಪರೀಕ್ಷೆ ಆರಂಭವಾಗಿದೆ. "ಸರ್, ಈ ಪ್ರಶ್ನೆ ಮುಖ್ಯಾನಾ, ಆ ವಾಕ್ಯ ಕೊಡ್ತೀರಾ, ಇದನ್ನು ಹೀಗೇ ಬರೀಬೇಕಾ.." ಅಂತ ಪರೀಕ್ಷಾ ಕೊಠಡಿಗೆ ಹೊರಡುವ ಕ್ಷಣದವರೆಗೂ ಮಕ್ಕಳು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. "ಅರ್ಥ ಆಗಿರೋದನ್ನು ನಿಮ್ಮ ವಾಕ್ಯಗಳಲ್ಲೆ ಬರೆಯಿರೋ, ಹೋಪ್‍ಲೆಸ್‍ ಫೆಲೋಗಳಾ..." ಅಂತ ಹೇಳಿ ಒಳಕ್ಕೆ ಕಳಿಸುವುದು ನನ್ನ ಸದ್ಯದ ಕೆಲಸವಾಗಿದೆ. ಹಾಳೆಯ ಮೇಲೆ ಎಷ್ಟು ಚೆನ್ನಾಗಿ ಬರೆದರೇನಂತೆ, ಅದನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಅರ್ಥ ಮಾಡಿಕೊಳ್ಳದಿದ್ದರೆ! ನನ್ನ ಪರೀಕ್ಷೆ, ಅವರು ಹೇಗೆ ಹೊರಗೆ ಅಳವಡಿಸುತ್ತಾರೆಂಬುದು. ನನ್ನ ಪುಣ್ಯ, ನನ್ನ ಮಕ್ಕಳು ದೇವರುಗಳು. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ರಾವಣ ಸಂಜಾತರು!

ಪಾಠವನ್ನು ಅರ್ಥ ಮಾಡಿಕೊಂಡು ಒಳ್ಳೇ ಮಾರ್ಕ್ಸು ತೆಗೆದುಕೊಳ್ಳಿ ಮಕ್ಕಳೇ.. All the best!!

-ಅ
17.09.2008
6PM

Saturday, September 13, 2008

ಕಪ್ಪೆ ತಕ್ಕಡಿ

ಶಾಲೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳ ಕಪ್ಪೆ ತಕ್ಕಡಿಯ ಸಹವಾಸವನ್ನು ಅತಿ ಸುಲಭವಾಗಿ ಹತೋಟೆಗೆ ತರುವ ಎಲ್ಲಾ ಪ್ರೈಮರಿ ಸ್ಕೂಲು ಟೀಚರುಗಳಿಗೂ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಅದರಲ್ಲೂ ಒಂದನೇ ಹಾಗೂ ಎರಡನೇ ತರಗತಿಯ ಮಕ್ಕಳಂತೂ ನರಭಕ್ಷಕರೇ ಸರಿ.

ಪಾಠ ಮಾಡುವಾಗ ಬೋರ್ಡಿನ ಕಡೆ ತಿರುಗುವ ಹೊತ್ತಿಗೆ ಇಬ್ಬರು ಮಕ್ಕಳು ಮುಂದೆ ಓಡಿ ಬಂದು, "ಸರ್ ವಾಟ್ ಇಸ್ ದಿಸ್?" ಅಂತ ಪ್ರಶ್ನೆ ಕೇಳ್ತಾರೆ. ನಾನು, ನಿಮ್ ಜಾಗದಲ್ಲಿ ಕೂತ್ಕೊಳ್ರೋ ಹೋಪ್‍ಲೆಸ್‍ ಫೆಲೋಗಳಾ ಅಂತ ಬಯ್ಯೋ ಹಾಗೂ ಇಲ್ಲ. ಈ ಕಾಲದಲ್ಲಿ ಏನಾದರೂ ಮಕ್ಕಳನ್ನು ಶಿಕ್ಷಕರು ಬೈದರೋ ಮುಗಿಯಿತು ಶಿಕ್ಷಕನ ಕಥೆ. ಬೈಯ್ಯದಿದ್ದರೂ ಮುಗಿದ ಹಾಗೆಯೇ. ಆದರೇನು ಮಾಡುವುದು! ನಾನು ಬರೆಯೋ "g" ಮಕ್ಕಳಿಗೆ ಅರ್ಥವಾಗದೆ ಬೋರ್ಡಿನ ಕಡೆ ಓಡಿ ಬಂದು ಅದು ಏನೆಂದು ಕೇಳುತ್ತಾರೆ. ಒಬ್ಬನಿಗೆ ಅದು g ಅಂತ ಹೇಳಿದರೆ ಆಗಲ್ಲ, ಅಲ್ಲಿಗೆ ಓಡಿ ಬರುವ ಎಲ್ಲರಿಗೂ ಅದನ್ನು g - g - g ಅಂತ ಹೇಳಿಕೊಡುವ ಹೊತ್ತಿಗೆ ನನ್ನ G-ವ ಹೊರಟು ಹೋಗಿರುತ್ತೆ!

ಹೇಗೆ ಇವರ ಗಲಾಟೆಯನ್ನು ಹೋಗಲಾಡಿಸುವುದು?

"ಮುಂದಿನ ಪುಟದಲ್ಲಿ ಬರೆದುಕೊಳ್ಳಿ" ಅಂದರೆ ಮುಂದಿನ ಪುಟ ತಿರುಗಿಸಿಕೊಂಡು, "ಸರ್, ಹೀಗಾ?" ಎಂದು ಇಡೀ ಕ್ಲಾಸಿನ ನಲವತ್ತು ಮಕ್ಕಳು ಬೋರ್ಡಿನ ಕಡೆ ಬಂದುಬಿಟ್ಟರೆ ನಾನು ಎಲ್ಲಿ ಹೋಗಲಿ?

ಆ ವಯಸ್ಸಿನ ಮಕ್ಕಳನ್ನು ನೋಡಿಕೊಳ್ಳಲು ತಾಯಂದಿರೇ ಸರಿ! ಅದಕ್ಕೇ ಬಹುಶಃ ಶಿಕ್ಷಕಿಯರು ಈ ವಿಷಯದಲ್ಲಿ ಗೆಲ್ಲುವುದು. ನಾವು ಹೇಳೋದನ್ನೇ ಅವರೂ ಹೇಳಿರುತ್ತಾರೆ. ಆದರೆ ಮಕ್ಕಳು ಅವರ ಮಾತಿಗೆ ಹೆಚ್ಚು ಬೆಲೆ ಕೊಡುತ್ತಾರೆ. ನಮ್ಮ ಕಂಡರೆ, "ಸರ್ ಏನೂ ಮಾಡಲ್ಲ" ಅನ್ನುವ ಉದಾಸೀನ. ಇದು ಕೇವಲ ನನ್ನದೊಬ್ಬನದೇ ಪಾಡಲ್ಲ. ನನ್ನ ಹಾಗೆ ಬೇರೆ ಯಾರಾದರೂ ಪ್ರೈಮರಿ ಶಾಲೆ ಮೇಷ್ಟ್ರಾಗಿದ್ದರೆ ಅವರ ಪಾಡೂ ಇದೇ!

ಒಂದು ದಿನವಂತೂ ಒಂದನೇ ತರಗತಿಯನ್ನು ಕಂಪ್ಯೂಟರ್ ಲ್ಯಾಬಿಗೆ ಕರೆದುಕೊಂಡು ಹೋದಾಗ, ಕರೆಂಟು ಹೋಗಿಬಿಟ್ಟು, UPS ಬೇರೆ ಕೈಕೊಟ್ಟಾಗ ನಾನು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳದೆ ಬೇರೆ ಏನೂ ದಾರೀನೇ ಇರಲಿಲ್ಲ.

ಒಳ್ಳೇ ಮಕ್ಳು!

ಮಾತಾಡದೆ ಸುಮ್ನೆ ಕೂತ್ಕೊಳಿ ಅಂದ್ರೆ, "ಸರ್ ನಾನು ಸುಮ್ಮನೆ ಕೂತಿದೀನಿ..." ಅಂತ ಬೇರೆ ಹೇಳಿ ಗಲಾಟೆ ಮಾಡುತ್ತವೆ. ಬೈದರೆ ಬೈಸಿಕೊಳ್ಳುತ್ತವೆ, ಆಚೆ ಕಳಿಸಿದರೆ ಹೋಗುತ್ತವೆ, ಹೊಡೆದರೆ ಹೊಡೆಸಿಕೊಳ್ಳುತ್ತವೆ.. ಮತ್ತೆ ನಮ್ಮ ಹತ್ತಿರಾನೇ "ಸರ್ ಸರ್..." ಅಂತ ಬರುತ್ತವೆ.. ಆ ಮಕ್ಕಳಿಗೆ ಕಪಟ ಒಂದು ಕೊಂಚವೂ ಅರಿಯದು.

Memorable time with children-ಉ, Miserable time with adults-ಉ.... ಇದು ಒಬ್ಬ ಟೀಚರಿನ ಆತ್ಮಾವಲೋಕನ!

-ಅ
13.09.2008
12.30AM

Tuesday, September 9, 2008

ಕುನ್ನಕ್ಕುಡಿಕುನ್ನಕ್ಕುಡಿಯವರನ್ನು ಒಂದು ಸಲ ಯಾವಾಗಲೋ ಬಾಲ್ಯದಲ್ಲಿ ನೋಡಿದರೂ ಜೀವನ ಪರ್ಯಂತ ಮರೆಯುವಂತೆಯೇ ಇಲ್ಲ. ಅವರ ಮುಖ ಅಂಥದ್ದು. ಹಣೆ ತುಂಬ ವಿಭೂತಿ - ಕುಂಕುಮ. ಪಿಟೀಲು ನುಡಿಸುವಾಗ ಕಣ್ಣು, ಹುಬ್ಬು, ಕೆನ್ನೆ, ಎಲ್ಲವೂ animate ಆಗುವುದು.

ಇವರ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ ನನಗೆ. ಆದರೆ ಇವರ ಸಂಗೀತವನ್ನು ಬೇಕಾದಷ್ಟು ಕೇಳಿದ್ದೇನೆ. ಬಹುಶಃ ಶ್ರೀನಿವಾಸ ಇವರ ಬಗ್ಗೆ ಇನ್ನಷ್ಟು ಚೆನ್ನಾಗಿ ಬರೆಯಬಲ್ಲ.

ಕೀರ್ತನೆಗಳಿಗೆ ಇವರು ಸ್ವರ ಹಾಕುವುದನ್ನು ಕೇಳುವುದೊಂದು ಮಜವಾದರೆ, ನೋಡುವುದು ಮತ್ತೊಂದು ಮಜವಾಗಿತ್ತು ನಾನು ಚಿಕ್ಕವನಾಗಿದ್ದಾಗ.

ಅನೇಕ ಕನ್ನಡ ಸಿನಿಮಾ ಹಾಡುಗಳನ್ನೂ ಪಿಟೀಲಿನಲ್ಲಿ ನುಡಿಸಿದ್ದಾರೆ. ಕೋಟೆ ಪ್ರೌಢ ಶಾಲೆಯ ಆವರಣದಲ್ಲಿ ಪ್ರತಿವರ್ಷವೂ ರಾಮೋತ್ಸವಕ್ಕೆ ಬರುತ್ತಿದ್ದರು, ತಮ್ಮ ಕೈಚಳಕವನ್ನು ತೋರಿಸಿ ಸಂಗೀತ ಸುಧೆಯನ್ನು ರಸಿಕರಿಗೆ ಉಣಿಸುತ್ತಿದ್ದರು.

ಇಂದು ಪೇಪರಿನಲ್ಲಿ ಕುನ್ನಕ್ಕುಡಿಯ ಸಾವಿನ ಸುದ್ದಿ ಪ್ರಕಟವಾಗಿತ್ತು. ಇವರ ಸಂಗೀತವನ್ನು ನೆನೆಸಿಕೊಳ್ಳುತ್ತಲೇ ಇರುತ್ತೇವೆ. ಇಂಥಾ ಸಂಗೀತಗಾರರು ಇನ್ನಷ್ಟು ಮತ್ತಷ್ಟು ಜನ ಹುಟ್ಟಿಬರಲಿ ನಮ್ಮ ದೇಶದಲ್ಲಿ.-ಅ
09.09.2008
8.40PM

Sunday, August 31, 2008

ಚೆಂದದೂರು ಬೆಂಗಳೂರು

ಬೆಂಗಳೂರಿನ ಬಗ್ಗೆ ಟ್ರಾಫಿಕ್ಕು, ಹೊಗೆ, ಧೂಳು, ಕಟ್ಟಡದ ಕಾಡು, ಡ್ರೈನೇಜ್ ಸಮಸ್ಯೆ - ಹೀಗೆ ಸಾಕಷ್ಟು ಅಸಮಾಧಾನ ಇದ್ದರೂ ಒಂದು ವಿಶೇಷವಾದ ಒಲವು ನನ್ನಲ್ಲಿದೆ. ಬೆಂಗಳೂರು ಇಲ್ಲದೆ ಇರಲು ಸಾಧ್ಯವೇ ಇಲ್ಲವೇನೋ ಎಂಬ ಪ್ರೀತಿಯು ಇರುವುದರಿಂದಲೇ ಬಹುಶಃ ಇಷ್ಟೊಂದು "ಅಯ್ಯೋ ಹಾಳಾಗಿ ಹೋಗ್ತಿದೆಯಲ್ಲಪ್ಪಾ.." ಅಂತ ಬೇಸರ ಆಗುತ್ತೆ ಅನ್ನಿಸುತ್ತೆ.

ಇಂಥಾ ಬೆಂಗಳೂರಿನ ನಗರ ವಲಯದ ಒಳಗೆ ನಾನೊಂದಿಷ್ಟು ಜಾಗಗಳನ್ನು ಇಟ್ಟುಕೊಂಡಿದ್ದೇನೆ. ನನಗೆ ಇಷ್ಟವಾಗುವ, ನೋಡಲೇಬೇಕು ಎನ್ನಿಸುವ, ಸಂತಸ ಕೊಡುವ, ತೃಪ್ತಿ ಕೊಡುವ, ಅನೇಕ ಸಲ ಸಮಾಧಾನ ತಾತ್ಕಾಲಿಕವಾಗಿ ನೆಮ್ಮದಿಯನ್ನೂ ಕೊಡುವ ಹಲವು ಸ್ಥಳಗಳು. ಅದರ ಟಾಪ್ 10 ಇಲ್ಲಿ ಬರೆದುಕೊಂಡಿದ್ದೇನೆ. ಈ ರೀತಿ ಟಾಪ್ n ಗಳನ್ನು ಬರೆದುಕೊಂಡು ಬಹಳ ದಿನಗಳಾಗಿತ್ತು.

10 - ಹನುಮಂತ ನಗರ

ಮನೆಯಿರುವುದೂ ಅಲ್ಲಿಯೇ. ಮನೆಯ ಆಸುಪಾಸಿನಲ್ಲೇ ಹಲವು ಸ್ಥಳಗಳು ಮನಸೆಳೆದಿದೆ. ಬಾಲ್ಯವು ಇಲ್ಲೆಯೇ ಕಳೆದಿರುವುದರಿಂದ ಇದು ಹೇಗೆ ಬೆಳೆದಿದೆಯೆಂಬುದನ್ನು ಚೆನ್ನಾಗಿ ಬಲ್ಲೆ ಕೂಡ. ಬಂಡೆಗಳೇ ಇದ್ದ ರಾಮಾಂಜನೇಯ ಗುಡ್ಡ, ಬರೀ ಪೊದೆಗಳೇ ತುಂಬಿರುವ ನರಹರಿರಾಯರ ಗುಡ್ಡ (ಈಗಿನ ಕುಮಾರಸ್ವಾಮಿ ದೇವಸ್ಥಾನ), ಎ.ಬಿ.ಸಿ. ಪಾರ್ಕು, ಗವಿಗಂಗಾಧರೇಶ್ವರ ದೇವಸ್ಥಾನ - ಆಹ್, ಎಂಥಾ ಹಿತಕರ ಸ್ಥಳಗಳು.

ರಾಮಾಂಜನೇಯ ಗುಡ್ಡದಲ್ಲಿ ಬೀದಿನಾಟಕದವರು ಸಾಕ್ಷರತೆಯ ಬಗ್ಗೆ ಪ್ರದರ್ಶನವನ್ನು ಮಾಡುತ್ತಿದ್ದ ಕಾಲದಲ್ಲಿ ಹುಲ್ಲು ಹಾಸಾಗಲೀ, ಡಿಸೈನ್‍ಗಳ ಕಲ್ಲುಗಳಾಗಲೀ, ಬೇಲಿಗಳಾಗಲೀ ಇರಲೇ ಇಲ್ಲ. ಮೆಟ್ಟಿಲಿನ ಪಕ್ಕದಲ್ಲಿ ಬಂಡೆಗಳು, ಪೊದೆಗಳು. ಈ ವಾಕಿಂಗ್ ಸಂಸ್ಕೃತಿ ಬೆಂಗಳೂರಿಗೆ ಕಾಲಿಟ್ಟ ಘಳಿಗೆಯೋ ಏನೋ, ಪಾರ್ಕುಗಳೆಲ್ಲಾ ವಾಕಿಂಗ್ ತಾಣವಾಗಿಬಿಟ್ಟಿದೆ. ದೇವಸ್ಥಾನ ಬಸ್ ನಿಲ್ದಾಣದಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ಈ ನರಹರಿರಾಯರ ಗುಡ್ಡವಿದ್ದೂ, ಇದಕ್ಕೆ ಕೆಲವು ವರ್ಷಗಳಿಂದ ಕುಮಾರಸ್ವಾಮಿ ದೇವಸ್ಥಾನವೆಂದು ಮರುನಾಮಕರಣ ಮಾಡಿದ್ದಾರೆ. ದಕ್ಷಿಣ ಬೆಂಗಳೂರಿನ ಹರೋಹರ ಶುರುವಾಗುವುದು ಇಲ್ಲಿಂದಲೇ. ಇದರ ಹಿಂಭಾಗದ ಗೇಟನ್ನು ಈಗ ಬಂದ್ ಮಾಡಿದ್ದಾರೆ. ಈ ಬಾಗಿಲ ಆಸುಪಾಸಿನಲ್ಲೀಗ ಬರೀ ಪಾರ್ಥೇನಿಯಮ್. ಅಪರೂಪಕ್ಕೊಮ್ಮೆ ಈ ಎರಡು ತಾಣಗಳಲ್ಲಿ ಬಂದು ಕುಳಿತರೆ ಹಳೆಯ ನೆನಪುಗಳೆಲ್ಲಾ ಕಣ್ಣ ಮುಂದೆ ಬಂದು ಪ್ರತಿಷ್ಠಾಪಿಸಿಕೊಳ್ಳುತ್ತೆ.

ಎ.ಬಿ.ಸಿ. ಪಾರ್ಕು - ಇದು ಈಗ ಯಾವುದೋ ಕಾರ್ಪೊರೇಟರ್ ಹೆಸರಿನ ಪಾರ್ಕು ಆಗೋಗಿದೆ. ಇಲ್ಲಿ ಎಲ್ಲೆಲ್ಲೋ ಬೇಲಿಗಳು, ಮೆಟ್ಟಿಲುಗಳು, ಕಾರಂಜಿಗಳು ಇತ್ಯಾದಿಗಳು ವಕ್ಕರಿಸಿದರೂ ಒಂಥರಾ ಚೆಲುವಾಗಿದೆ. ಆದರೆ ಇಲ್ಲೂ ವಾಕರ್ಸ್ ಹಾವಳಿ. ಇಲ್ಲಿ ವಾಕರ್ಸ್ ಟ್ರಾಫಿಕ್ ಜ್ಯಾಮ್ ಆಗುವುದರಿಂದ ಈ ನಡುವೆ ಇಲ್ಲಿ ಹೋಗುವುದು ಬಿಟ್ಟುಬಿಟ್ಟಿದ್ದೇನೆ. ಆ ದಿನಗಳಲ್ಲಿ ನಾವು ಇಲ್ಲಿ ಬಾಡಿಗೆ ಸೈಕಲ್ ಹೊಡೆಯಲು ಬರುತ್ತಿದ್ದೆವು. ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಆಗ ನಿಜವಾಗಿಯೂ ಒಂದು ಗವಿಯಿತ್ತು. ಅದರೊಳಗೆ ಪ್ರದಕ್ಷಿಣೆ ಹಾಕಲು ಏನೋ ಆನಂದ. ಈಗ ಅಲ್ಲಿ ಬಚ್ಚಲು ಮನೆಯೊಳಗೆ ಹಾಕುವ ಟೈಲ್ಸ್ ಹಾಕಿಬಿಟ್ಟು, ಗವಿಯೊಳಗೆ ಟ್ಯೂಬ್ ಲೈಟುಗಳನ್ನು ಹಾಕಿರುವುದು ತೀರ ಕೆಟ್ಟದಾಗಿದ್ದರೂ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಕೂತು ಕೆಂಪೇಗೌಡನ ಕಾಲವನ್ನು ಊಹಿಸಿಕೊಂಡು, MNS ಸರ್ (ಸುರೇಶ್ ಮೂನ - ಬೆಂಗಳೂರು ತಜ್ಞರು) ಅವರ ಪಾಠವನ್ನೂ ನೆನೆಸಿಕೊಂಡು ಕುಳಿತರೆ ಮನೆಗೆ ಫ್ರೆಶ್ ಆಗಿ ಮರಳಬಹುದು. ಗವಿಗಂಗಾಧರೇಶ್ವರನ ಹಿಂಭಾಗದಲ್ಲೇ 400 ವರ್ಷಕ್ಕೂ ಹಳೆಯ ಕೆಂಪೇಗೌಡ ನಿರ್ಮಿತ ಗೋಪುರವೊಂದಿದ್ದು, ಅದರೊಳಗೆ ಕುಳಿತು ಆಟವಾಡಿದ್ದ ದಿನಗಳನ್ನು ನೆನೆಸಿಕೊಳ್ಳಲು ಇಂದು ಆ ಆವರಣದೊಳಕ್ಕೆ ಹೋಗದಂತೆ ಗೇಟು ಬೀಗ ಹಾಕಿರುವುದರಿಂದ ಅಲ್ಲಿಯೇ ನಿಂತು ನೋಡಬೇಕಾಗಿದೆ.

ಗವಿಪುರದ ಹತ್ತಿರವೂ ಒಂದು ಗೋಪರವಿದ್ದು ಕೆಲವರಿಗೆ ಮಾತ್ರ ಗೊತ್ತಿರುವುದಾಗಿದೆ. 400 ವರ್ಷದ ಹಳೆಯ ಸ್ಮಾರಕವು ಗೆದ್ದಲು ಹಿಡಿಯುತ್ತಿದೆ. ಅಲ್ಲಿಯೂ ಹೋಗಿ ಹತ್ತು ನಿಮಿಷ ಕುಳಿತರೆ ಐತಿಹಾಸಿಕ ಪಾತ್ರಗಳಲ್ಲೊಂದಾಗಿಬಿಡುತ್ತೇನೆ.

9 - ಕಬ್ಬನ್ ಪಾರ್ಕು/ ಮ್ಯೂಸಿಯಮ್ಮು

ಒಂದೊಂದು ಸಲ ಒಬ್ಬನೇ ಕಬ್ಬನ್ ಪಾರ್ಕಿನ ರೈಲಿನಲ್ಲಿ ಹೋಗುವುದಕ್ಕೋಸ್ಕರವಾಗಿಯೋ, ಬಾಲಭವನದ ಶೋ ನೋಡುವುದಕ್ಕಾಗಿಯೋ, ಜಯಂಟ್ ವ್ಹೀಲ್ (ಈಗಿಲ್ಲ)ನಲ್ಲಿ ಕೂರುವುದಕ್ಕಾಗಿಯೋ ಹೋಗಿಬಿಡುತ್ತಿದ್ದೆ. ದೋಣಿವಿಹಾರ ಆರಂಭಿಸಿದ ಕಾಲದಲ್ಲಿ ಅದಕ್ಕೆ ರಷ್ಷೋ ರಷ್ಷು. ಈಗ ಕೇಳೋರೇ ಗತಿಯಿಲ್ಲ. ಪಕ್ಕದಲ್ಲಿರುವ ವಸ್ತುಸಂಗ್ರಹಾಲಯದ ಆವರಣದಲ್ಲಿ ಸಿಗುವ ಕೆಂಪು ಸೀಬೆ (ಅದಕ್ಕೆ ಉಪ್ಪುಕಾರ ಹಾಕಿಕೊಡುವ ಪರಿ) ಆಹಾ! ಷಾಟ್ ಪುಟ್ ಚೆಂಡಿಗಿಂತ ದೊಡ್ಡದಾದ ಸೀಬೆಕಾಯಿಗಳು. ಈಗಲೂ ಸಿಗುತ್ತೆ. ಹೋಗಿ ತುಂಬಾ ದಿನವಾಯಿತು. ಹೋಗಲೇ ಬೇಕೆನಿಸುತ್ತೆ. ಯಾವುದೇ ಊರಿಗೆ ಹೋದರೂ ಅಲ್ಲಿಯ ಮ್ಯೂಸಿಯಮ್ಮನ್ನು ನೋಡದೆ ವಾಪಸ್ಸು ಬರಲು ಮನಸ್ಸಾಗುವುದಿಲ್ಲ. ಅಂತೆಯೇ ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಮ್ಮು ಇದುವರೆಗೂ ನೋಡಿರುವ ಎಲ್ಲಾ ಮ್ಯೂಸಿಯಮ್ಮುಗಳಿಗಿಂತ ಇಷ್ಟವಾಗಿದೆ. ಜ್ಞಾನ-ವಿಜ್ಞಾನಗಳು ಬೆರೆತಿದೆ. ಇತ್ತೀಚೆಗೆ ಇಲ್ಲಿ ಅದೆಂಥದೋ ತ್ರಿ-ಡಿ ಚಿತ್ರ ತೋರಿಸುವ ಹೊಸ ವಿಚಾರ ಬಹಳ ಕೆಟ್ಟದಾಗಿದೆ. ಆದರೆ ಇಡೀ ಮ್ಯೂಸಿಯಮ್ಮನ್ನು ಒಂದು ದಿನ ಪೂರ್ತಿ ನೋಡಲು ಮೀಸಲಿಟ್ಟರೆ ಸೀಬೇಕಾಯಿಯನ್ನೂ ನೆಮ್ಮದಿಯಿಂದ ಕಣಕಣವನ್ನೂ ಆಸ್ವಾದಿಸಬಹುದು.

8 - ಸಪ್ನ ಬುಕ್ ಸ್ಟಾಲ್

ಪುಸ್ತಕ ಪ್ರಿಯರಿಗೆ ಸಪ್ನ ಬುಕ್ ಸ್ಟಾಲ್‍ಗಿಂತ ಉತ್ತಮ ಅಂಗಡಿ ನಮ್ಮೂರಲ್ಲಿ ಸಿಗುವುದಿಲ್ಲ. ಗಾಂಧಿನಗರದ ಈ ಸಪ್ನ ಬುಕ್ ಸ್ಟಾಲ್ ತ್ರಿಭುವನ್ ಟಾಕೀಸ್ ಎದುರು ಇದ್ದಾಗ, ನಾನಿನ್ನೂ ಐದನೇ ತರಗತಿಯಲ್ಲಿದ್ದಾಗ ಬಸ್ ಹತ್ತಿಕೊಂಡು ಬಂದುಬಿಟ್ಟಿದ್ದೆ. ಆಗ ಆಲ್ಬರ್ಟ್ ಐನ್‍ಸ್ಟೈನ್ ಎಂದರೆ ನನ್ನ ಪಾಲಿಗೆ ದೇವರು. ಐನ್‍ಸ್ಟೈನ್ ಬಗ್ಗೆ ಅನೇಕ ಮಕ್ಕಳ ಪುಸ್ತಕಗಳನ್ನು ನನಗೆ ಗಣೇಶ ಹಬ್ಬದ್ದೋ, ಹುಟ್ಟು ಹಬ್ಬದ್ದೋ ಮತ್ತೊಂದೋ 'ಕಲೆಕ್ಷನ್' ಹಣದಿಂದ ಖರೀದಿಸುತ್ತಿದ್ದೆ. ಕನ್ನಡ ಪುಸ್ತಕಗಳನ್ನು ಓದಲು ಶುರು ಮಾಡಿದ್ದು ಹೈಸ್ಕೂಲು ಮುಗಿಯುವ ವೇಳೆಗೆ. ಅದಕ್ಕೂ ಮೊದಲು ಆಸರೆಯಾಗಿದ್ದು ಸಪ್ನ ಬುಕ್ ಸ್ಟಾಲೇ. ಮನೆಯ ಹತ್ತಿರವೇ ಅಂಕಿತ ಇದ್ದರೂ, ತಾತರಾಯನ ಕಾಲದ ವೇದಾಂತ ಬುಕ್ ಹೌಸು, ವಿ.ಎಸ್.ಎಂಡ್ ಸನ್ಸ್ ಇವೆಲ್ಲಾ ಇದ್ದರೂ ಸಪ್ನ ಬುಕ್ ಹೌಸ್‍ಗೆ ಹೋಗಿ ಪುಸ್ತಕ ಕೊಂಡರೆ ಏನೋ ಆನಂದ. ಭಾರತದಲ್ಲೇ ಅತಿ ದೊಡ್ದ ಪುಸ್ತಕದಂಗಡಿ ಎಂಬ ಹೆಗ್ಗಳಿಕೆಯಿರುವ ಇದು, ಅಷ್ಟಾದರೂ ಆನಂದ ನೀಡದಿದ್ದರೆ ಹೇಗೆ?

7 - ಕಲಾಸಿಪಾಳ್ಯ

ನಾನು ಹೀಗೆ ಹೇಳಿದಾಗ ಅನೇಕರಿಗೆ ಅಚ್ಚರಿಯೂ ಹಲವರಿಗೆ ಅಸಹ್ಯವೂ ಆದೀತು. ಆದರೆ ನನ್ನ ಪಾಲಿಗೆ ಮಾರ್ಕೆಟ್ಟು ಬಹಳ ಪ್ರಶಸ್ತ. ಬಸ್ ನಿಲ್ದಾಣದ ಎದುರೇ ಇರುವ ಕೋಟೆಗೆ ಮುನ್ನೂರು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದೂ ಟಿಪ್ಪು ಸುಲ್ತಾನ್ ನಿರ್ಮಿತ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇದು ನನ್ನನ್ನು ಆಕರ್ಷಿಸಿಲ್ಲ. ನನ್ನ ಆಕರ್ಷಣೆ ಕೋಟೆ ವೆಂಕಟರಮಣ ದೇವಸ್ಥಾನ ಮತ್ತು ಹಿಂದೆಯೇ ಇರುವ ಟಿಪ್ಪು ಸಮ್ಮರ್ ಪ್ಯಾಲೆಸ್. ಮರ (wood)ದಿಂದಲೇ ನೆಲವನ್ನು ಮಾಡಿರುವ ಮತ್ತು ಗೋಡೆಗಳ ಮೇಲೆ ಅತ್ಯುನ್ನತ ಚಿತ್ರಕಲೆಯನ್ನು ಹೊಂದಿರುವ, ಸದಾ ತಂಪಾಗಿ ಶಾಂತವಾಗಿರುವ ಈ ಅರಮನೆಯ ವಾಸ್ತವ್ಯವೇ ಅನೇಕರಿಗೆ ಗೊತ್ತಿಲ್ಲ. ಕೋಟೆ ವೆಂಕಟರಮಣ ದೇವಸ್ಥಾನದ ಮುಸ್ಲಿಮ್-ಹಿಂದು ಮಿಶ್ರಿತ ಶಿಲ್ಪಕಲೆ ನಿಜಕ್ಕೂ ಆಕರ್ಷಿತವಾದದ್ದು. ಕಟ್ಟಡದ ವಯಸ್ಸು ಹಿರಿದಾದಂತೆ ಅಲ್ಲಿ ಕಲೆಯ ನೈಪುಣ್ಯತೆಯೂ ಹೆಚ್ಚಾಗಿರುತ್ತೆ ಎಂಬುದು ನನ್ನ ಪಯಣದ ಅನುಭವವಷ್ಟೆ.

ಕಾಲಾಸಿಪಾಳ್ಯದ ಇನ್ನೊಂದು ಮೂಲೆಯಲ್ಲಿರುವ ಬೃಹತ್ ಕಟ್ಟಡವೊಂದು ಇಂದು ಪಾಳುಬಿದ್ದಿದೆ. ಕಾರ್ಪೊರೇಷನ್ ಸ್ಕೂಲಿನ ಹಿಂಭಾಗದಲ್ಲಿರುವ ಈ ಕಟ್ಟಡದಲ್ಲಿ, ಸುಮಾರು 200 X 200 ಜಾಗದಷ್ಟಿರುವ ಈ ಕಟ್ಟಡದಲ್ಲಿ, ಅಂದು ಟಿಪ್ಪು ತನ್ನ ಮದ್ದು-ಗುಂಡುಗಳನ್ನು ಶೇಖರಿಸಿಡುತ್ತಿದ್ದ. ಅದನ್ನು ರಕ್ಷಿಸಿಕೊಳ್ಳಲಾಗದವರು ಬೆಂಗಳೂರಿಗರಾದ ನಾವು. ಈ ಕಾರ್ಪೊರೇಷನ್ ಸ್ಕೂಲಿನಲ್ಲಿ ಅತ್ತೆ ಹದಿನೈದಕ್ಕೂ ಹೆಚ್ಚು ವರ್ಷಗಳ ಕಾಲ ಟೀಚರಾಗಿದ್ದರು. ನಾನು ಇನ್ನೂ ಶಾಲೆಗೆ ಸೇರಿರದ ಕಾಲದಲ್ಲಿ ಅತ್ತೆಯ ಜೊತೆ ಇಲ್ಲಿಗೆ ಬರುತ್ತಿದ್ದೆ. ಆಗಿನಿಂದಲೂ ಕಲಾಸಿಪಾಳ್ಯ ಒಂಥರಾ ವಿಸ್ಮಯದ ಜಗತ್ತಿನಂತೆ ನನಗೆ. ಚೋಟುದ್ದ ಹುಡುಗರು ಬಸ್ಸನ್ನು, ಕಾರನ್ನು ರಿಪೇರಿ ಮಾಡುತ್ತಿರುವುದನ್ನು ನೋಡುವುದು, ಶರ್ಮಾ ಟ್ರಾನ್ಸ್ಪೋರ್ಟ್ ಮುಂದೆ ಹೆಚ್ಚಿಟ್ಟಿರುವ ಕಲ್ಲಂಗಡಿ ಹಣ್ಣು, ಅನಾನಸ್ ತಿನ್ನುವುದು, ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ 35A ಗಾಗಿ ಗಂಟೆಗಟ್ಟಲೆ ಕಾಯುವುದು, ಇವೆಲ್ಲಾ ಒಂದು ಕಾಲದ ಹವ್ಯಾಸವಾಗಿತ್ತು. ಈಗಲೂ ಕಲಾಸಿಪಾಳ್ಯ ಸುಂದರವಾಗಿದೆಯೆಂದೇ ಅನ್ನಿಸುತ್ತೆ. ಮಳೆಗಾಲದಲ್ಲಿ ಮಾತ್ರ ಇದರ ಹೆಸರು ಕಛಡಾ ಪಾಳ್ಯ ಎಂದು ಬದಲಿಸಬೇಕಾಗುತ್ತೆ.

6 - ಲಾಲ್ ಬಾಗ್

ಲಾಲ್ ಬಾಗ್ ಎಂದರೆ ಕೆಂಪುತೋಟ. ಒಂದು ಕಾಲದಲ್ಲಿ ಇಲ್ಲಿರುವ ಹಸಿರುಗಿಡಗಳಲ್ಲಿ ಕೆಂಪು ಹೂಗಳು ಬಿಡುತ್ತಿದ್ದವು. ಈಗ ಇಲ್ಲಿ ಹೂಗಿಡಗಳೇ ಇಲ್ಲ. ರೋಸ್ ಗಾರ್ಡನ್‍ನಲ್ಲಿ ಪಾರ್ಥೇನಿಯಮ್ ಕೂಡ ಇಲ್ಲ. ಜಿಂಕೆಗೆ ಕ್ಯಾರೆಟ್, ಸೌತೇಕಾಯಿ ತಿನ್ನಿಸುತ್ತಿದ್ದ ಕಾಲವೂ ಇತ್ತು. ಈಗ ಇಲ್ಲಿ ಜಿಂಕೆಯೂ ಇಲ್ಲ, ಸೌತೇಕಾಯಿಯೂ ಇಲ್ಲ. ಬಂಡೆಯ ಮೇಲಿರುವ ಕೆಂಪೇಗೌಡನ ಮತ್ತೊಂದು ಗೋಪುರವನ್ನು ಹೊಕ್ಕರೆ ಗೋಳಗುಮ್ಮಟದೊಳಕ್ಕೇ ಹೋಗುವಂತೆ ಭಾಸವಾಗುತ್ತಿತ್ತು. ಉತ್ತರ ಬೆಂಗಳೂರೆಲ್ಲಾ ಕಾಣುತ್ತಿತ್ತು. ಈಗ ಅಲ್ಲಿಂದ ಡಬಲ್ ರೋಡಿನ ಬಸ್ ಸ್ಟಾಂಡ್ ಕಾಣಿಸುತ್ತೆ ಅಷ್ಟೆ. ಎತ್ತರದ ಯುಟಿಲಿಟಿ ಕಟ್ಟಡ ಕಾಣ್ಸುತ್ತೆ, ವಿಧಿ ಇಲ್ಲದೆ. ಸ್ವತಃ ಟಿಪ್ಪು ಸುಲ್ತಾನ್ ನೆಟ್ಟ ಬೃಹತ್ ಮರವೂ ಇನ್ನೂ ಜೀವಂತವಾಗಿದೆ. ಲಾಲ್‍ಬಾಗ್‍ಗೆ ಹೋದಾಗ ಈ ಮರವನ್ನು ನೋಡದೆ ಹಿಂದಿರುಗಲು ಸಾಧ್ಯವೇ ಇಲ್ಲ.

ಅದೆಷ್ಟು ಸಾವಿರ ಸಲ ಹೋಗಿದ್ದೀನೋ ಲಾಲ್‍ಬಾಗಿಗೆ, ಇಲ್ಲಿ ಏನಿರಲಿ, ಏನಿರದಿರಲಿ - ಮರಗಳಿವೆ, ತಂಪಿದೆ. ಗಾಜಿನ ಮನೆಯು ಬಾಲ್ಯದಲ್ಲಿ ಆಟವಾಡುತ್ತಿದ್ದ ಜಾಗವಾಗಿತ್ತು. ನಮ್ಮ ತಂದೆಯ ಕಾಲದಲ್ಲಿ ಲಾಲ್‍ಬಾಗ್ ತೋಟದಲ್ಲಿ ಮೃಗಾಲಯವೂ ಇತ್ತು. ಅದನ್ನು ಮೈಸೂರಿಗೆ ವರ್ಗಾಯಿಸಿ ಅಷ್ಟೇನೂ ಹೆಚ್ಚು ಕಾಲ ಸಂದಿಲ್ಲ. ಈಗ ಲಾಲ್‍ಬಾಗ್ ಒಳಕ್ಕೆ ಹೋಗಲು ಶುಲ್ಕ ತೆರಬೇಕಾಗಿದೆ. ಒಳ್ಳೇದೇ.. ಇಲ್ಲಿ ಬರುವ ಹದ್ದು ಮೀರಿದ 'ಪ್ರೇಮಿಗಳು' ಮತ್ತು ಅವರನ್ನು ವೀಕ್ಷಿಸಲೆಂದೇ ಬರುವ 'ಪ್ರೇಕ್ಷಕರು' ಒಳಕ್ಕೆ ಬರುವುದು ತಪ್ಪಿದೆ. ಆದರೆ ನನ್ನಂಥವರು, ಕೇವಲ ಹಾಪ್‍ಕಾಮ್ಸ್ ಹಣ್ಣಿನ ರಸವನ್ನು ಕುಡಿಯಲು,ಖಾರದ ಕಡಲೆ ಪುರಿ ತಿನ್ನಲು ಒಳಕ್ಕೆ ಹೋಗುವವರು ಸ್ವಲ್ಪ ಜೇಬಿನ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ. ಹತ್ತು ರುಪಾಯಿ ಮಾಡಿಬಿಟ್ಟಿದ್ದಾರೆ ಈಗ ಶುಲ್ಕವನ್ನು!! ಬೆಂಗಳೂರು ದಕ್ಷಿಣ ತಂಪಾಗಿದೆ, ಸುಂದರವಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಲಾಲ್‍ಬಾಗು ಎಂದು ನನ್ನ ಅನಿಸಿಕೆ.

5 - ಕಹಳೆ ಬಂಡೆ

ನನಗಿಂತ ನನ್ನ ಕಸಿನ್ ಗುರುನಾಥ, ಮತ್ತೆ ಅಕ್ಕ ಇವರ ಪಾಲಿಗೆ ಕಹಳೆ ಬಂಡೆ ಹೆಚ್ಚು ನೆನಪಿನಾಳದ ಸರೋವರಕ್ಕಿಳಿಸುತ್ತೆ. ಆದರೆ ನನ್ನ ಬಾಲ್ಯದ ಆಟವೂ ಇದೇ ಕಹಳೆ ಬಂಡೆಯ ಆವರಣದಲ್ಲೇ ಇತ್ತಾದ್ದರಿಂದ ಇದರ ಮೇಲಿನ ಒಲವು ಎಳ್ಳಷ್ಟೂ ಕುಂದಿಲ್ಲ. ಇಲ್ಲೊಂದು ಗೂಳಿಯಿತ್ತಂತೆ. ಬಹಳ ರೌಡಿ ಗೂಳಿ. ಹೋಗೋರ್-ಬರೋರಿಗೆಲ್ಲಾ ಕಾಟ ಕೊಡುತ್ತಿದ್ದ ಈ ಗೂಳಿಯ ಸಾವು ಬಸವನಗುಡಿ ನಿವಾಸಿಗಳಿಗೆ ಉಸಿರಾಡುವಂತಾಗಿತ್ತಂತೆ. ಆದರೂ ಗೂಳಿಯ ಮೇಲಿನ ಗೌರವಕ್ಕಾಗಿ ಅದಕ್ಕೊಂದು ಸಮಾಧಿ ಕೂಡ ಕಟ್ಟಿದ್ದಾರೆ. ಆ ಸಮಾಧಿ ಇಂದಿಗೂ ಬ್ಯೂಗಲ್ ರಾಕಿನಲ್ಲಿದೆ. ಸಮಾಧಿಯ ಮೇಲೆ ಒಂದು ಬಸವಣ್ಣನ ವಿಗ್ರಹವನ್ನೂ ಕೂರಿಸಿದ್ದಾರೆ.

ಇಲ್ಲೂ ಕೆಂಪೇಗೌಡನ ಗೋಪುರವಿದ್ದೂ, ಬೆಂಗಳೂರು ದಕ್ಷಿಣ ಪೂರ್ತಿ ಕಾಣಿಸುವಂತಿತ್ತು ಕೇವಲ ಹದಿನೈದು ವರ್ಷದ ಕೆಳಗೆ. ಇಂದು ಗೋಪುರ ಮಾತ್ರ ಇದೆ. ಏನೂ ಕಾಣಿಸುವುದಿಲ್ಲವಷ್ಟೆ. ಆ ಗೋಪುರದ ಕೆಳಗಿರುವ ಬಂಡೆಗಳ ಮೇಲೆ ಆ ಕಾಲದ ಸೈನಿಕರು ದೀಪಕ್ಕಾಗಿ ಬಳಸುತ್ತಿದ್ದ ಗುಳಿಗಳನ್ನು ನೋಡಬಹುದು. ಬಂಡೆಗಳ ಮೇಲೆ ಗುಳಿಗಳನ್ನು ಮಾಡಿ, ಅಲ್ಲಿ ಎಣ್ಣೆ ಸುರಿದು ದೀಪ ಹೊತ್ತಿಸುತ್ತಿದ್ದರಂತೆ. ಕೆಂಪೇಗೌಡನು ಬೆಂಗಳೂರಿನಲ್ಲಿ ನಿರ್ಮಿಸಿರುವ ಎಲ್ಲಾ ಎಂಟು ಗೋಪುರಗಳೂ 'ವಾಚ್ ಟವರ್'ಗಳಾಗಿದ್ದವು. ಅವು ನಾಲ್ಕೇ ಇದೆ, ಬೆಂಗಳೂರಿನ ಮಿತಿಯನ್ನು ಗುರುತಿಸಲು ಕೆಂಪೇಗೌಡ ಅವನ್ನು ನಿರ್ಮಿಸಿದನೆಂಬುದು ಹುಸಿನಂಬಿಕೆಯಷ್ಟೆ. ಬೆಂಗಳೂರಿಗೆ 'ಬೆಂದಕಾಳೂರು' ಎಂಬ ಹೆಸರಿತ್ತು ಎಂಬುದಕ್ಕೂ ಸರಿಯಾದ ಪುರಾವೆಗಳಿಲ್ಲ, ಪ್ರಚಾರಗಳಿವೆಯಷ್ಟೆ.

ಬ್ಯೂಗಲ್ ರಾಕಿನ ತುಂಬಾ ಬರೀ ಬಂಡೆಗಳದೇ ಆರ್ಭಟ. ಪೊದೆಗಳಲ್ಲಿ ಹಾವು ಚೇಳುಗಳಿಗೆ ಕೊರತೆಯೇ ಇರಲಿಲ್ಲ. ಸಂಜೆ ಆರರ ನಂತರ ಇದು ಮಾದಕವಸ್ತು ಮಾರಾಟಗಾರರ ತಾಣವಾಗಿಬಿಡುತ್ತಿತ್ತು. ವ್ಯಭಿಚಾರಕ್ಕೆ, ವ್ಯವಹಾರಕ್ಕೆ ನೆಲೆಯಾಗಿತ್ತು. ಈಗ ಇದು ಉದ್ಯಾನವಾಗಿದೆ. ಒಳ್ಳೆಯ ಬೆಳವಣಿಗೆ, ಆದರೂ ಬಂಡೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬ್ಯೂಗಲ್ ರಾಕಿನಲ್ಲಿ ದೆವ್ವ ಇದೆ ಎಂಬ ಪ್ರತೀತಿಯೂ ಇತ್ತು.

ಡಿ.ವಿ.ಜಿ. ಸ್ಟಾಚು ಮೊನ್ನೆ ಮೊನ್ನೆ ಅಲ್ಲಿ ನಿರ್ಮಿಸಿ, ಬಸವನಗುಡಿ ನಿವಾಸಿಗಳಾಗಿದ್ದ ಹಿರಿಯ ಕವಿಗೆ ಉತ್ತಮ ಗೌರವ ಸಲ್ಲಿಸುವ ಕೆಲಸವದಾಗಿದೆ. ಅದರ ಎದುರು ಸುಂದರ ಮೆಟ್ಟಿಲುಗಳನ್ನು ಮಾಡಿ, ಅದನ್ನು ವೇದಿಕೆಯೆದುರು ಕುಳಿತುಕೊಳ್ಳುವ ಸೀಟುಗಳಂತೆಯೂ ಬಳಸಬಹುದಾಗಿದ್ದು ಒಳ್ಳೆಯ ಯೋಜನೆಯಾಗಿದೆ. ಆಗ (ಕೇವಲ ಹದಿನೈದು ವರ್ಷಗಳ ಹಿಂದೆ) ಇಲ್ಲಿ ಬರೀ ಪೊದೆಗಳಿದ್ದವು.

ಬ್ಯೂಗಲ್ ರಾಕಿನ ಒಳಗೆ ದೊಡ್ಡ ಬಸವಣ್ಣನ ದೇವಸ್ಥಾನ, ದೇಶದಲ್ಲೇ ಐದನೇ ಅತಿ ದೊಡ್ಡ ನಂದಿಯೆಂದು ಖ್ಯಾತಿಯಾಗಿದ್ದಲ್ಲದೆ, ಋಷಭಾವತಿ ನದಿಯ ಉಗಮಸ್ಥಾನ ಕೂಡ ಆಗಿದೆ. ಈಗ ಅಂತರ್ಜಲವಾಗಿರುವ ಋಷಭಾವತಿಯು ಕೆಲವೇ ವರ್ಷಗಳ ಕೆಳಗೆ ಆಚಾರ್ಯ ಪಾಠಶಾಲೆಯ ಪಕ್ಕದಲ್ಲೇ ಇದ್ದ ಕಲ್ಯಾಣಿಯಲ್ಲಿ ಹುಟ್ಟುತ್ತಿತ್ತು. ಪ್ರತಿವರ್ಷವೂ ಆಚಾರ್ಯ ಪಾಠಶಾಲೆಯ ಗಣಪತಿ ಉತ್ಸವವು ಜೋರಾಗಿ ನಡೆದು, ಇಡೀ ಬಸವನಗುಡಿಯೆಲ್ಲಾ ಮೆರವಣಿಗೆಯಾದ ನಂತರ ವಿಸರ್ಜನೆಯನ್ನು ಇದೇ ಕಲ್ಯಾಣಿಯಲ್ಲಿ ಮಾಡುತ್ತಿದ್ದರು. ಈಗ ಆ ಕಲ್ಯಾಣಿ BWSSB ಕಚೇರಿ ಆಗಿದೆ.

ಒಂದು ಕಾಲದಲ್ಲಿ ಆಚಾರ್ಯ ಪಾಠಶಾಲೆ, ಬಿ.ಎಮ್.ಎಸ್. ಕಾಲೇಜು - ಇವಿಷ್ಟೂ ಬ್ಯೂಗಲ್ ರಾಕಿಗೆ ಸೇರಿದ ಆಸ್ತಿಯಾಗಿತ್ತು.

4 - ಆರ್ಮಿ ಸ್ಟೋರು

ಶಿವಾಜಿನಗರ ಎಷ್ಟೊಂದು ಜನರ ಶತ್ರು. ಗಲೀಜು, ಗೂಂಡಾಗಿರಿ, ಡ್ರಗ್ಸು - ಇಂಥದ್ದೇ ರಾರಾಜಿಸುತ್ತಿದ್ದ ಕಾಲವೂ ಇತ್ತು. ಬಹುಶಃ ಈಗಲೂ ಇದೆ. ಅದೇ ರೀತಿ, ಇಲ್ಲಿರುವ ಕಮರ್ಷಿಯಲ್ ಸ್ಟ್ರೀಟು ಬ್ರಿಟಿಷರ ಕಾಲದಿಂದಲೂ ಶಾಪಿಂಗ್‍ಗೆ ಹೇಳಿಮಾಡಿಸಿದ್ದ ಜಾಗ. ಆದರೆ ನನಗೆ ಎಂದೂ ರುಚಿಸಿಲ್ಲ. ಆದರೆ ನನಗೆ ಇಷ್ಟವಾಗಿರುವುದು ಅದರ ಸಮೀಪದಲ್ಲೇ ಇರುವ ಆರ್ಮಿ ಸ್ಟೋರು. ಶಿವಾಜಿನಗರದ ಇನ್ನೊಂದು ಬೀದಿಯಲ್ಲಿ ಮಿಲಿಟರಿ ಬಟ್ಟೆಗಳು, ಕಿಟ್ಟುಗಳು, ಚೀಲಗಳು, ಪೆಟ್ಟಿಗೆಗಳು ದೊರಕುವ ಅಂಗಡಿಗಳ ಸಾಲೇ ಇದೆ. ಈ ಸಾಲಿನಲ್ಲಿ ಶ್ರೇಷ್ಠವೆನಿಸಿರುವುದು ಆರ್ಮಿ ಸ್ಟೋರು.

ಹೈಸ್ಕೂಲಿನಲ್ಲಿ ಎನ್.ಸಿ.ಸಿ.ಯಲ್ಲಿದ್ದಾಗಿಲಿಂದಲೂ ಇಲ್ಲಿಗೆ ಭೇಟಿ ನೀಡುತ್ತಲೇ ಇದ್ದೇನೆ. ಅದು, ಬ್ಯಾಡ್ಜ್ ಖರೀದಿಗಾಗಲೀ, ಮಳೆಯ ಕೋಟಿಗಾಗಲೀ. ಆರ್ಮಿ ಸ್ಟೋರಿನಲ್ಲಿ ಚೌಕಾಸಿ ಮಾಡಿ ಕೊಂಡುಕೊಳ್ಳುವ ಮಜವೇ ಬೇರೆ! ಟ್ರೆಕ್ಕಿಂಗ್ ಶೂ ಕೂಡ (ಹಂಟರ್ ಶೂ) ಏಳುನೂರರಿಂದ ಇನ್ನೂರಕ್ಕೆ ಚೌಕಾಶಿ ಮಾಡಿ ಕೊಂಡಾಗ ಏನೋ ಆನಂದ!

ಶಿವಾಜಿನಗರದ ಬಸ್ ಸ್ಟಾಂಡು ಈಗ ಕೆಲವು ವರ್ಷಗಳಿಂದ ಬಹಳ ಸುಂದರವಾಗಿ ಸುಲಲಿತವಾಗಿ ಮಾಡಿಬಿಟ್ಟಿದ್ದಾರೆ. ಮೊದಲು ಹೀಗಿರಲಿಲ್ಲ. ವಿಪರೀತ ಗೊಂದಲಮಯವಾಗಿತ್ತು. ಕಲಾಸಿಪಾಳ್ಯಕ್ಕಿಂತಲೂ ಅಸಹ್ಯ ತರಿಸುವಂತಿತ್ತು. ಆದರೂ ಬಸ್ ಸ್ಟಾಂಡಿನಲ್ಲೇ ಇರುವ ಹೊಟೆಲು (ಹೆಸರು ಮರೆತುಬಿಟ್ಟಿದ್ದೇನೆ) ಇಡ್ಲಿ ವಡೆ ಕಾಫಿಗೆ ಬಹಳ ಜನಪ್ರಿಯ. ಸೊಗಸಾಗಿಯೂ ಇದೆ.

3 - ಜಿಂಕೆ ಪಾರ್ಕ್

ನಾನು ವಾಸ್ತವವಾಗಿ ಜಿಂಕೆ ಪಾರ್ಕ್ ಬಗ್ಗೆ ಮಾತನಾಡುತ್ತಿಲ್ಲ. ಆ ಪಾರ್ಕು ಈಗ ದರಿದ್ರ ಅಮ್ಯೂಸ್‍ಮೆಂಟ್ ಪಾರ್ಕೊಂದಾಗಿದೆ. ಅದರ ಬದಿಯಲ್ಲೇ ಇರುವುದು ಹಿಂದೂ ರುದ್ರಭೂಮಿ. ಹೆಚ್ಚಿಗೆ ಬರೆಯುವುದಿಲ್ಲ ಇದರ ಬಗ್ಗೆ.

2 - ಗಾಂಧಿ ಬಜಾರ್

ಗಾಂಧಿ ಬಜಾರಿನ ಬಗ್ಗೆ ಹಿರಿಯ ಸಾಹಿತಿಗಳೆಲ್ಲರೂ ಬರೆದುಬಿಟ್ಟಿದ್ದಾರೆ. ಡಿ.ವಿ.ಜಿ.ಯಿಂದ ಹಿಡಿದು ಕೈಲಾಸಂ ವರೆಗೆ, ಮಾಸ್ತಿಯಿಂದ ಹಿಡಿದು ನಿಸಾರ್ ಅಹಮದ್ ವರೆಗೆ, ಬೆಳಗೆರೆಯಿಂದ ಹಿಡಿದು ಶ್ರೀನಿಧಿಯವರೆಗೆ. ಇನ್ನು ನಾನೊಬ್ಬ ಬಾಕಿ. ಹಿರಿಯನೂ ಅಲ್ಲ, ಸಾಹಿತಿಯೂ ಅಲ್ಲ. ಆದರೂ ಗಾಂಧಿಬಜಾರಿನ ಅಭಿಮಾನಿಯಂತೂ ನಿಜ. ಏನೇ ಕೊಂಡುಕೊಳ್ಳಬೇಕಾದರೂ ಮೊದಲು ಗಾಂಧಿಬಜಾರಿಗೇ ಆದ್ಯತೆ. ಇಲ್ಲಿ ಸಿಗದೇ ಹೋದರೆ ನಂತರ ಬೇರೆ ಸ್ಥಳಗಳು. ಒಂದು ಮೊಳ ಹೂವು ಖರೀದಿಸಲೂ ಗಾಂಧೀಬಜಾರೇ ಬೇಕು. ಶೆಮ್ಮಂಗುಡಿ ಸಿ.ಡಿ.ಗೆ ಸಂಗೀತ್ ಸಾಗರ್ರೇ ಆಗಬೇಕು. ಕಾಫಿಗೆ ಬಾಲಾಜಿಯೇ ಆಗಬೇಕು, ಅತಿಮಧುರಕ್ಕೆ ಸರ್ಕಲ್ಲಿನ ಗ್ರಂಧಿಗೆ ಅಂಗಡಿಯೇ ಆಗಬೇಕು (ಮನೆಯ ಕೆಳಗಡೆ ರೆಸ್ತೆಯಲ್ಲೇ ಇದ್ದರೂ), ಫ್ರೂಟ್ ಜ್ಯೂಸಿಗೆ ಇಲ್ಲಿಯ ಗಣೇಶನೇ ಬೇಕು, ದೋಸೆಗೆ ಮಹಾಲಕ್ಷ್ಮಿಯೇ ಬೇಕು, ಲೇಖನಿಗೆ ಸರಸ್ವತಿಯೇ ಆಗಬೇಕು, ಕನ್ನಡ ಪುಸ್ತಕಕ್ಕೆ ಅಂಕಿತವೇ ಬೇಕು, ಬನಿಯನ್ನು ಒಳಚಡ್ಡಗಳಿಗೂ ಗಾಂಧಿಬಜಾರೇ ಆಗಬೇಕು!! (ಯಾವ ಅಂಗಡಿ ಅಂತೆಲ್ಲಾ ಹೇಳಲ್ಲ, ಸಾರಿ).

ಗಾಂಧಿ ಬಜಾರು ತ್ರಿಕರಣಶುದ್ಧವಾಗಿ ನನ್ನನ್ನು ಆಕ್ರಮಿಸಿಕೊಂಡುಬಿಟ್ಟಿದೆ. ಏಳನೇ ತರಗತಿಯವರೆಗೂ ಇಲ್ಲೇ ಇರುವ ವಿಮೆನ್ಸ್ ಪೀಸ್ ಲೀಗಿನಲ್ಲಿ ಓದಿದ ನಾನು ಮಗುವಿನಿಂದಲೂ ಡಿ.ವಿ.ಜಿ.ರಸ್ತೆಯಲ್ಲಿ ಅಡ್ಡಾಡಿದವನು. ಚಡಗನ ಅಂಗಡಿಯ ಬೆಣ್ಣೆ ಗುಲ್ಖನ್ ಮೆಲ್ಲಿದವನು. ಸುಬ್ಬಮ್ಮ ಅಂಗಡಿಯ ತೇಂಗೋಳ್ ಚಕ್ಕುಲಿಯನ್ನು ಕುರುಕಿದವನು. ವಿದ್ಯಾರ್ಥಿ ಭವನದ ಮಸಾಲೆ ದೋಸೆಯನ್ನು ಸವಿದವನು. ಮಾಡರ್ನ್ ಟಿಫನ್ ರೂಮಿನ ದಮ್ರೋಟನ್ನು ಚಪ್ಪರಿಸಿದವನು. ಈಶ್ವರನ ದೇವಸ್ಥಾನದ ಪಕ್ಕದಲ್ಲಿರುವ ಕಾಫಿಪುಡಿ ಅಂಗಡಿಯಿಂದ ಹೊರಹೊಮ್ಮುವ ಸುಗಂಧವನ್ನು ಮೈತುಂಬಿಕೊಂಡವನು. ಕೆನೆರಾ ಬ್ಯಾಂಕಿನ ದೆಸೆಯಿಂದ ನೋಟನ್ನು ಎಣಿಸಲು ಕಲಿತವನು. ಆರ್ಯಭವನದ ಸೋಹಂಪಾಪ್ಡಿಯನ್ನು ತಿಂದವನು. ವಿಟ್ಠಲ್ ಡ್ರೆಸ್ಸಸ್‍ನ ಬಟ್ಟೆಯನ್ನು ತೊಟ್ಟವನು. ವಿ.ಎಸ್. ಎಂಡ್ ಸನ್ಸ್‍ನ ನೋಟ್ ಪುಸ್ತಕಗಳಲ್ಲಿ ಬರೆದವನು. ಮಹಾಲಕ್ಷ್ಮಿಯ ಕಾಫಿಯನ್ನು ಹೀರಿದವನು! ಕಾಯಾ-ವಾಚಾ-ಮನಸಾ ಗಾಂಧಿಬಜಾರು ನನ್ನೊಳಕ್ಕೆ (ಅಥವಾ ತದ್ವಿರದ್ಧ) ಐಕ್ಯವಾಗಿಬಿಟ್ಟಿದೆ.


1 - ಮೆಜೆಸ್ಟಿಕ್ ಬಸ್ ನಿಲ್ದಾಣ


ಬಿ.ಎಂ.ಟಿ.ಸಿ ಬಸ್ ನಿಲ್ದಾಣವಲ್ಲ, ಆದರೆ ಕೆ.ಎಸ್.ಆರ್.ಟಿ.ಸಿ. ನಿಲ್ದಾಣ. ಮನಸ್ಸು ಜಡವಾದಾಗ ದೇಹ ಇಲ್ಲಿ ಬಂದು ಕುಳಿತುಬಿಡುತ್ತೆ. "ಆಸ್ಸನ್ ಬೇಲೂರ್ ಚಿಕ್‍ಮಳೂರ್.." ಅಂತ ಕಂಡಕ್ಟರ್ರು ಕೂಗುತ್ತಿರುವುದನ್ನು ಕೇಳುವುದೇ ಆನಂದ. "ಮಂಗ್ಳೂರ್.. ಉಡುಪಿ... ಕುಂದಾಪುರ" ಎಂದು ಕೇಳಿದೊಡನೆಯೇ ಹತ್ತುಬಿಡಲೇ ಎಂದೆನಿಸುತ್ತೆ. ಇಲ್ಲಾ, ಮನೇಲಿ ಹೇಳಿಲ್ಲ, ಅದೂ ಅಲ್ಲದೆ ನಾಳೆ ಶಾಲೆಗೆ ಹೋಗಬೇಕು. ಇನ್ಯಾವಾಗಲಾದರೂ ಹೋಗೋಣ ಅಂತ ನನಗೆ ನಾನೇ ಹೇಳಿಕೊಂಡು ಮುಂದಿನ ಪ್ಲಾಟ್ ಫಾರಮ್ಮಿನ ಕಡೆ ಹೆಜ್ಜೆ ಹಾಕುತ್ತೇನೆ. ಎಲ್ಲಾ ಊರಿನ ಬಸ್ಸುಗಳನ್ನೂ ಅವುಗಳ ಕಂಡಕ್ಟರುಗಳನ್ನೂ ನೋಡಿ ಅವರ ಬಾಯಿಂದ ಹೊರಡುವ ಊರಿನ ಸಹಸ್ರನಾಮಾರ್ಚನೆಯನ್ನೂ ಕೇಳಿ ಆನಂದಿಸಿ ಮತ್ತೆ ಮನೆಗೆ ಹಿಂದಿರುಗುವ ಹೊತ್ತಿಗೆ ನಾಳಿನ ಕೆಲಸಕ್ಕೆ ಚೈತನ್ಯ ಉಕ್ಕಿ ಬಂದಿರುತ್ತೆ. ಅಂತೆಯೇ ರೈಲ್ವೇ ನಿಲ್ದಾಣ ಕೂಡ. ಪ್ಲಾಟ್‍ಫಾರಂ ಟಿಕೆಟ್ ಖರೀದಿಸಿ, ಎಲ್ಲಾ ಪ್ಲಾಟ್‍ಫಾರಂ‍-ನೂ ನೋಡುತ್ತಾ, ಹತ್ತಿಬಿಡಲೇ ಎಂದೆನಿಸಿದರೂ ನೆಕ್ಸ್ಟ್ ಟೈಮ್ ಎಂದುಕೊಂಡು, ಎಲ್ಲಾ ರೈಲಿಗೂ ಟಾಟಾ ಮಾಡುತ್ತಾ ಒಂದು ಚಹ ಹೀರಿ ಮನೆಗೆ ಹಿಂದಿರುಗುವಾಗ ಅನ್ನಿಸುವುದು "ಆಹ್, ಬದುಕು ಸುಂದರ ಅಲ್ಲವೇ?"

-ಅ
01.09.2008
12AM

Thursday, August 28, 2008

ಇಂಗ್ಲೀಷು

ನ್ನಡ ಚಿತ್ರಗೀತೆಗಳಲ್ಲಿ ಇಂಗ್ಲೀಷು ಮೆರೆಯುತ್ತಿದೆ. ಕನ್ನಡ ಗೀತರಚನಾಕಾರರು 'ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು' ಎನ್ನುವುದರ ಬದಲು, 'ನಿನ್ನ ಲುಕ್ಕು ಬೇರೇನೇ, ನಿನ್ನ ಟಚ್ಚು ಬೇರೇನೇ..' ಅನ್ನೋಕೆ ಶುರು ಮಾಡಿದ್ದಾರೆ. ಕನ್ನಡ ಭಾಷೆಯನ್ನು ಹೊಗಳುವ ಗೀತೆಗಳಿಗೂ ಸಹ ಇಂಗ್ಲೀಷಿನ ಹಂಗು ಬಂದುಬಿಟ್ಟಿದೆ. ಉದಯಶಂಕರರು 'ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ' ಎಂದರೆ ಈಗಿನ ಮಹಾನ್ ಕವಿಯೊಬ್ಬರು 'ಸಿಂಪಲ್ ಆಗ್ ಹೇಳ್ತೀನ್ ಕೇಳೇ ನಮ್ಮೂರ ಭಾಷೆ..' ಅನ್ನುತ್ತಾರೆ.

ಇನ್ನು ಸ್ವಲ್ಪ ಕಾಲ ಆದಮೇಲೆ ಬಹುಶಃ ಈ ಅರ್ಧಂಬರ್ಧ ಇಂಗ್ಲೀಷ್ ಬೆರೆತ ಕನ್ನಡ ಹಾಡುಗಳೂ ಹೊರಟುಹೋಗಿ ಪೂರ್ತಿ ಇಂಗ್ಲೀಷೇ ಆಗಿಬಿಡುತ್ತೇನೋ. ಶ್ರೀನಿವಾಸ, ನಾನು ಆಗಾಗ್ಗೆ ಕನ್ನಡ ಹಾಡುಗಳನ್ನು ಹಾಸ್ಯಕ್ಕೆಂದು ಈ ರೀತಿ ಇಂಗ್ಲೀಷಿಗೆ (ಅರ್ಧಂಬರ್ಧ) ತರ್ಜುಮೆ ಸಹ ಮಾಡುತ್ತಾ ನಗುತ್ತಿರುತ್ತೇವೆ. ಆದರೆ ಚಿತ್ರರಂಗದಲ್ಲಿ ಆ ಕಾಲವೂ ಬಂದರೆ ಅಚ್ಚರಿಯಿಲ್ಲ.

What we speak is ಕನ್ನಡ language.... ಕನ್ನಡಾ language....
the place where we live is beautiful temple.. marvelous temple.. sandalwood temple...

ಈ ರೀತಿ ಹಾಡುಗಳನ್ನು ಬರೆಯುವ ಭೂಪರೂ ಜನಿಸಬಹುದೇನೋ.

sky-ಗೊಂದು limit ಎಲ್ಲಿದೆ?
ನಿನ್ desire-ಗೆಲ್ಲಿ end ಇದೆ?
ಏಕೆ dream ಕಾಣುವೆ?
slow down-ಉ, slow down-ಉ...

ಏನ್ ಮಾಡೋದು, forehead writings ಗೆ responsible ಯಾರು? ಅಂತ ಶ್ರೀನಿವಾಸನನ್ನು ಕೇಳಿದೆ. ಅವನೆಂದ, "ಇನ್ಯಾರು, author-ಏ responsible-ಉ.. " ಅಂತ.

ನಾನು, "ಹೌದು, ನಮ್ಮ forehead writings-ಗೆ ಆ four-headed forehead writer-ಏ responsible-ಉ" ಎಂದೆ.

ಶಾಲೆಯಲ್ಲಿ ಇನ್ನೂ ಒಂದನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ತಮಗೆ ಗೊತ್ತಿರುವ ಕೆಲವೇ ಪದಗಳನ್ನು ಬಳಸಿ ಮುದ್ದುಮುದ್ದಾಗಿ ಮಾತನಾಡುವುದನ್ನು ನೋಡಿದರೆ ಮೈಪುಳಕವಾಗುತ್ತೆ. ಆದರೆ ದೊಡ್ಡವರೂ ಹೀಗೆ ಮಾಡಿಬಿಟ್ಟರೆ ಮೈ ಪರಚಿಕೊಳ್ಳುವಂತಾಗುತ್ತೆ.

"ಸರ್, your lunch bag is ಸೋರಿಂಗ್" ಎಂದ ಒಬ್ಬ ಹುಡುಗ ನನ್ನ ಊಟದ ಚೀಲದಿಂದ ಸೋರುತ್ತಿದ್ದ ಮೊಸರನ್ನು ನೋಡಿ.

"that not sir, this.." ಎಂದು ಹೇಳುವ ಮಗುವಿನ ಭಾವಾರ್ಥ ತಿಳಿದರೆ ಸಾಕು, ಅದಕ್ಕೆ ಗೊತ್ತಿರುವುದು ಮೂರೋ ನಾಲ್ಕೋ ಪದ. ವಾಕ್ಯ ರಚನೆ ಮಾಡಲು ಯತ್ನಿಸುತ್ತವಲ್ಲಾ ಎಂಬ ಖುಷಿ. ತಿದ್ದಬಹುದು.

"ನಿನ್ನ ನಗುವು ಹೂವಂತೆ..." , "ನಗುವೇ ಸ್ನೇಹದ ಹಾಡು.." ತರಹದ ಹಾಡುಗಳು ಹುಟ್ಟಿದ ಈ ಚಿತ್ರರಂಗದಲ್ಲಿ "ವಾಟೆ ಸ್ಮೈಲ್, ವಾಟೆ ಸ್ಮೈಲ್.." ಅಂತ ಒಳ್ಳೇ ಮಾವಿನ ಕಾಯಿ ವಾಟೆ (ಓಟೆ)ಯನ್ನೆಲ್ಲಾ ರೂಪಕಾಲಂಕಾರಕ್ಕೆ ಬಳಸಿಕೊಂಡರೆ ಹೇಗೆ! ಇಂಥಾ ಗೀತರಚನಾಕಾರರಿಗಿಂತ ಒಂದನೇ ತರಗತಿಯ ಮಕ್ಕಳ ಇಂಗ್ಲೀಷ್ ಬೆರೆತ ಕನ್ನಡ ಮುದ್ದು ಮಾತುಗಳು ಸಾವಿರ ಪಾಲು ಮೇಲು.

ಕನ್ನಡ ಮೀಡಿಯಮ್ಮನ್ನು ಕಂಡರೆ ಸಿಡಿಮಿಡಿಗೊಳ್ಳುವ ಜನರು, ಕನ್ನಡ ಮೀಡಿಯಮ್ಮಿನಲ್ಲಿ ಓದುವವರು ಜಗತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲು ಅನರ್ಹರಾಗುತ್ತಾರೆಂಬ ಭ್ರಮೆಯುಳ್ಳ ಜನರು ಇರುವ ತನಕ, ಇಂಗ್ಲೀಷ್ ಹಾವಳಿ ಇದ್ದೇ ಇರುತ್ತೆ.

ಕುವೆಂಪು ಬರೆದ ಈ ಕವನವನ್ನು ಎಷ್ಟು ಸಲ ಓದಿಕೊಂಡು ನೊಂದಿದ್ದೇನೋ ಗೊತ್ತಿಲ್ಲ.

ಸಾಕು ಈ ಬಲಾತ್ಕಾರ

ಇಂಗಿಹೋಗುತಿದೆ ಇಂಗ್ಲಿಷಿನ ಮರುಭೂಮಿಯಲಿ
ನಿನ್ನ ಮಕ್ಕಳ ಶಕ್ತಿ - ಬುದ್ಧಿ - ಪ್ರತಿಭಾ;
ರಾಷ್ಟ್ರನಾಯಕ ಮನದಿ ವಿವೇಕರೂಪದಿ ಮೂಡಿ,
ಓ ರಸಮಯ ಸರಸ್ವತಿಯೆ, ಪೊರೆ ಬಾ!

ಕಲ್ಲ ಕುಂಡದಿ ನೆಟ್ಟ ಅಶ್ವತ್ಥಸಸಿಯಂತೆ
ಕಿಮುಳ್ಚಿ ಗುಜ್ಜಾಗುತಿದೆ ಮೊಳೆವ ಚೈತನ್ಯ;
ಭೂಮಿಯಲಿ ಬೇರೂರಿ, ಬಾನೆಡೆಗೆ ತಲೆಯೆತ್ತಿ
ನಿಲುವವರಿಗೇತಕೀ ದಾಸ್ಯದೈನ್ಯ?

ಗಾಂಧಿಯಿಂದಿಂಗ್ಲಿಷರ ದಾಸ್ಯದಿಂ ಪಾರಾದೆ;
ಅವನ ಕೊಂದಿಂಗ್ಲಿಷಿಗೆ ದಾಸಿಯಾದೆ.
ಓ ತಾಯಿ ಭಾರತಿಯೆ, ಚೀಣೀಯರನೆ ಮೀರಿ
ಹಿಂಡುತಿದೆ ಕಂದರನು ಇಂಗ್ಲಿಷಿನ ಮಾರಿ!

ಬಲಾತ್ಕಾರಕಾಗಿ ಮಾತ್ರವೆ ಹೊರತು ಈ ರೋಷ,
ಭಾಷೆಗಾಗಿಯೆ ನಮ್ಮ ದ್ವೇಷವೇನಿಲ್ಲ;
ತೆಗೆಯಿರಿ ಬಲಾತ್ಕಾರದಂಶವನು; ಆರಿಸಲಿ
ಸರ್ವರೂ ಇಂಗ್ಲಿಷನೆ, ಚಿಂತೆ ಇನಿತಿಲ್ಲ.

ಭಾವಜಲಮೂಲವನೆ ಹೀರುತಿದೆ ಮರುಭೂಮಿ,
ಹಿಂಡೆ ಜೀವವನು ಇಂಗ್ಲಿಷಿನ ಕಲ್ಗಾಣ;
ಕನ್ನಡದ ಕ್ರಿಸ್ತನದೊ ಇಂಗ್ಲಿಷಿನ ಶಿಲುಬೆಯಲಿ
ಸಿಲುಕಿ ಬಾಯ್ವಿಡುತಿಹನು ನೀರಡಸಿ ಪ್ರಾಣ!

ಹೆಣಭಾರ! ಹೆಣಭಾರ! ಸಾಕೀ ಬಲಾತ್ಕಾರ;
ಸಾಕು ನಿಲ್ಲಿಸಿ, ನಿಮಗೆ ಬೇಕಾದರುದ್ಧಾರ.
ಇಂಗ್ಲಿಷಿನ ಚಪ್ಪಡಿಯಡಿಯ ಹಸುಳೆಚೀತ್ಕಾರ
ಕೇಳಿಸದ ಕಿವುಡರಿರ, ನಿಮಗೇಕೆ ಅಧಿಕಾರ?
ಕೇಳಿಯೂ ಧಿಮ್ಮನಿರೆ, ಕೋಟಿ ಧಿಕ್ಕಾರ!

ಬೇಕಾದರಿಗೆ ಕೊಡಿರೊ, ಬೇಡವೆಂದವರಾರೊ?
ಹೇರಿ ಎಲ್ಲರ ಮೇಲೆ ಕೊಲೆಗೈವಿರೇಕೊ?
ಓ ಕಂದ, ಓ ತರುಣ, ಓ ಯುವಕ ಭಾರತೀಯ,
ಮೇಲೆ ಕುಳಿತವರಿಕ್ಕಿದುಕ್ಕುಬಲೆಯನು ಕಿತ್ತು,
ನಿನ್ನ ಸ್ವಾತಂತ್ರ್ಯವನು, ಓ, ನೀನೆ ರಕ್ಷಿಸಿಕೊ!

ಇಂಗ್ಲಿಷಿನ ಜಿಲೊಟಿನ್ನಿನಡಿ ನಿಮ್ಮ ಕೊರಳೊಡ್ಡಿ
ವರುಷವರುಷವು ಕೋಟಿ ಕೊಲೆಯಪ್ಪಿರೇಕೆ?
ನಿಮ್ಮ ಶಕ್ತಿಯ ಕುಂದದಲ್ಲ ಕಾರಣ ಕೊಲೆಗೆ:
ಪರಭಾಷೆ ಚಪ್ಪಡಿ! ಪರೀಕ್ಷೆಯ ನೆವಂ ಬೇಕೆ? -
ಏಳು ಎಚ್ಚರಗೊಳ್ಳು ಓ ಭಾರತಿಯ ಕಂದ,
ನಿನ್ನ ಸ್ವಾತಂತ್ರ್ಯವನು ನೀನೆ ರಕ್ಷಿಸಿಕೊ!

ದೂರದರ್ಶನದ ವಾರ್ತೆಗಳಲ್ಲೂ "ದೇವೇಗೌಡರು ಧಿಡೀರ್ ಅಂತ ಪ್ಲೇಟ್ ಚೇಂಜ್ ಮಾಡ್ಬಿಟ್ರು" ಅನ್ನೋ ಭಾಷೆ ಬಳಸಿದರೆ ಕನ್ನಡಕ್ಕೆಲ್ಲಿ ನೆಲೆ?

ಸಾಹಿತ್ಯವೂ, ಮಾಧ್ಯಮವೂ, ನಮ್ಮ ದೇಶದಲ್ಲಿ ಸಿನಿಮಾ ಕೂಡ ನಮ್ಮ ಮೇಲೆ, ನಮ್ಮ ಭಾಷೆಯ ಮೇಲೆ ಪ್ರಭಾವ ಬೀರುವುದರಿಂದ ನಮ್ಮೊಳಿತಿಗಾಗಿ ಎಲ್ಲಾ ಕಡೆ ನಮ್ಮ ಭಾಷೆಯ ಬಳಕೆ ಚೆನ್ನಾಗಿ ಆಗಲಿ ಎಂದು ಹಾರೈಸುತ್ತೇನೆ.

ಇಂಗ್ಲಿಷು ನನಗೆ ಅನ್ನವನ್ನು ಕೊಡುತ್ತಿದೆ. ಅದರ ಋಣಕ್ಕೆ ನಾನು ಸಿಕ್ಕಿಹಾಕಿಕೊಂಡುಬಿಟ್ಟಿದ್ದೇನೆ. ಈ ಋಣಮುಕ್ತಿ ಎಂದು ಸಿಗುತ್ತೋ ಏನೋ..
"ಲೆನ್ಸ್" ಅನ್ನೋಕೆ ಕನ್ನಡದಲ್ಲಿ ಏನಂತಾರೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿ ಗೂಗಲ್ ಮೊರೆ ಹೋಗುವಂತಾಗಿತ್ತು ಇಂದು ಕಣ್ಣುಗಳ ಬಗ್ಗೆ ಬರೆಯುವಾಗ. ಪರಾಗ ಸ್ಪರ್ಶ ಗೊತ್ತು, ಪರಾಗ ಗೊತ್ತಿಲ್ಲ ಅನ್ನುವಂತಾಗಿದ್ದೆ ಕಳೆದ ವಾರ. ನನ್ನ ಮುಂದಿನ ಪೀಳಿಗೆಯವರು ಹೀಗಾಗದಿರಲಿ ಎಂದು ಆಶಿಸುತ್ತೇನೆ.

-ಅ
28.06.2008
1AM

Friday, August 22, 2008

ಉಪನಿಷತ್ತು - ಭಾಷ್ಯ - ದೇವುಡು

ಮಗೆ ದ್ವೈತಾದ್ವೈತವಿಶಿಷ್ಟಾದ್ವೈತಗಳ ಹೋರಾಟ ಬೇಕಿಲ್ಲ. ಜಗತ್ತೆಲ್ಲವೂ ಒಂದಾಗಬೇಕೆಂಬ ಈ ಕಾಲದಲ್ಲಿ ಗೋಡೆಗಳನ್ನು ಎಬ್ಬಿಸುವುದಕ್ಕಿಂತ ಗೋಡೆಗಳನ್ನು ತೆಗೆಯಬೇಕು ಎಂಬ ಮಾತು ನಮಗೆ ಪ್ರಿಯ; ಹಿತ. ಈ ದೃಷ್ಟಿಯಿಂದ ನೋಡುವಾಗ 'ನಮ್ಮ ತಂದೆಯ ಸಿದ್ಧಾಂತ ನಮ್ಮದು' ಎಂದು ಹೋರಾಡುವುದಕ್ಕಿಂತ 'ನಾವು ಅಧ್ಯಯನ ಮಾಡೋಣ. ಅನಂತರ ಶುದ್ಧವಾದ ಮನೋಬುದ್ಧಿಗಳು ಆತ್ಮಪ್ರೇರಣೆಯಿಂದ ಯಾವ ದಾರಿಯನ್ನು ಹಿಡಿದರೆ, ಆ ಮಾರ್ಗದಲ್ಲಿ ಹೋಗಿ ಗುರು-ದೇವ-ಕೃಪೆಯನ್ನು ಸಂಪಾದಿಸಿ ಕೃತಾರ್ಥರಾಗೋಣ ಎನ್ನುವುದೇ ಸರಿ' ಎಂದು ತೋರುತ್ತದೆ.

-ದೇವುಡು ನರಸಿಂಹಶಾಸ್ತ್ರಿ

('ಉಪನಿಷತ್ತು' ಪುಸ್ತಕದಲ್ಲಿ)

-ಅ
22.08.2008
4AM

Friday, August 15, 2008

ಗಿರೀಶ

ಬನಶಂಕರಿ ಸೆಕೆಂಡ್ ಸ್ಟೇಜು ಆಗ ಇನ್ನೂ ಕಾಡಿನ ಹಾಗಿತ್ತು. ಮಿನಿ ಝೂ ಸ್ಟಾಪಿನಲ್ಲಿ ನಿಂತರೆ ಬೆಟ್ಟಗುಡ್ಡಗಳು, ಸುಬ್ರಹ್ಮಣ್ಯ ದೇವಸ್ಥಾನ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆ ದೇವಸ್ಥಾನದ ಹತ್ತಿರ ಹೋಗಬೇಕೆಂದರೆ ಸಂಜೆ ಐದರೊಳಗೆ ಹೋಗಿ ಬಂದುಬಿಡಬೇಕು. ಯಾಕೆಂದರೆ ಯಾರೂ ಓಡಾಡದ ಜಾಗ ಅದು. ಕತ್ತರಿಗುಪ್ಪೆ ಇನ್ನೂ ಹಳ್ಳಿಯಾಗಿತ್ತು. ಕಾಮಾಕ್ಯ ಟೆಂಟ್ ಆಗಿತ್ತು. ಆ ದಿನಗಳಲ್ಲಿ ನಾವು ಬನಶಂಕರಿ ಸೆಕೆಂಡ್ ಸ್ಟೇಜಿನಲ್ಲಿದ್ದೆವು.

ನನಗಿಂತಲೂ ನಾಲ್ಕು ವರ್ಷ ಹಿರಿಯನಾದ ಗಿರೀಶನ ಜೊತೆ ಈ ಕಾಡಿನಲ್ಲಿ ಅಡ್ಡಾಡುತ್ತಿರುವಾಗ ಮಾತಿಗೆ ಮಾತು ತಿರುಗಿ ವಾಗ್ವಾದ ಶುರುವಾಯಿತು. ನಾನು ಕೈಯಲ್ಲಿ ಕಲ್ಲು ಹಿಡಿದು, ಬೇಡ ನೋಡು ಎಸೆದು ಬಿಡ್ತೀನಿ.. ಎಂದೆ. ಎಸಿ ನೋಡೋಣ? ಎಂದು ಅವನು ಹೇಳಿದ ಮರುಕ್ಷಣವೇ ರೊಯ್ಯನೆ ಬೀಸಿ, ಅವನ ಹಣೆ ಚೂರಾಗಿದ್ದು ನೆನಪಿದೆ ಇನ್ನೂ. ಆಗ ನನಗೆ ಬಹುಶಃ ಏಳು ವರ್ಷ. ಆಮೇಲೆ ನನಗೆ ಬಿದ್ದ ಒದೆಗಳ ಕಥೆ ಬೇರೇನೇ.
........................................................................................

ಬಾಬಾ ಸೆಹ್‍ಗಲ್ ಎಂಬ ಹಾಡುಗಾರ "ಠಂಡಾ ಠಂಡಾ ಪಾನಿ.." ಎಂದು ವಿಖ್ಯಾತನಾದ ಕಾಲದಲ್ಲಿ ಅವನ ಕ್ಯಾಸೆಟ್ಟುಗಳನ್ನೆಲ್ಲಾ ತಂದಿರಿಸಿಕೊಂಡಿದ್ದ ಗಿರೀಶ ನನಗೆ ವಿಪರೀತ ಹೊಟ್ಟೆ ಉರಿಸುತ್ತಿದ್ದ. ಆ ಹಾಡುಗಳನ್ನು ಕೇಳುವುದಕ್ಕೋಸ್ಕರವಾಗಿಯೇ ಅವರ ಮನೆಗೆ ಎಷ್ಟೊಂದು ಸಲ ಹೋಗಿದ್ದುಂಟು ನಾನು. ಇನ್ಯಾವಯಾವುದೋ ಇಂಗ್ಲೀಷ್ ಕ್ಯಾಸೆಟ್ಟುಗಳನ್ನೆಲ್ಲಾ ಖರೀದಿಸಿದ್ದ. ಡಾಕ್ಟರ್ ಆಲ್ಬನ್ ಅಂತೆ, ಇನ್ನೊಂದಂತೆ ಮತ್ತೊಂದಂತೆ. ನನ್ನ ತಲೆಗೆ ಹೋಗುತ್ತಿರಲಿಲ್ಲ. ಆದರೆ ಅದರ ಬಗ್ಗೆ ಬಹಳ ಹೇಳುತ್ತಿದ್ದ. ಇಂಗ್ಲೀಷ್ ಪುಸ್ತಕಗಳನ್ನೂ ವಿಪರೀತ ಓದುತ್ತಿದ್ದ. 'ಗಾಡ್ ಫಾದರ್' ಓದಿಬಿಟ್ಟು ನನಗೆ ಹಲವಾರು ಸಲ ಓದು ಓದು ಎಂದು ಹೇಳಿದ್ದ. ನಾನು ಓದಲು ಯತ್ನಿಸಿ ಸುಸ್ತಾಗಿದ್ದ ಕಥೆ ಬೇರೇನೇ..

......................................................................................

ಮ್ಯಾಡ್ ಸಿಟಿ ಎಂಬ ಒಂದು ಇಂಗ್ಲೀಷ್ ಪಿಚ್ಚರ್‍ಗೆ ಅಂತ ಹೋಗಿ, ಇನ್ನೂ ಸಮಯಾವಕಾಶವಿದ್ದು ಪುಸ್ತಕ ಖರೀದಿಸಲು ಎಂ.ಜಿ.ರಸ್ತೆ ಎಲ್ಲಾ ಸುತ್ತಿದ ನಂತರ ಊಟ ಮಾಡಬೇಕೆಂಬುದನ್ನೇ ಮರೆತುಬಿಟ್ಟಿದ್ದೆವು. ಅಲ್ಲಿ ಸಿಕ್ಕ ಫ್ರೈಡ್ ರೈಸನ್ನೇ ಗಬಗಬ ತಿಂದೆವು. ನಂತರ ರೆಕ್ಸ್ ಥಿಯೇಟರಿಗೆ ಧಾವಿಸಿದೆವು. ರೆಕ್ಸ್ ಥಿಯೇಟರಿನ ಆವರಣದಲ್ಲಿರುವ ಅಂಗಡಿಯಲ್ಲಿ ಚಿಕ್ಕವರಾಗಿದ್ದಾಗ ತಿನ್ನುತ್ತಿದ್ದ ರೋಸ್ ಮಿಂಟು, ಥಿಯೇಟರಿನ ಎದುರೇ ಕೋತಿ ಆಡಿಸುವವನು ಕುಳಿತುಕೊಳ್ಳುತ್ತಿದ್ದುದು ಎಲ್ಲವನ್ನೂ ಕ್ಷಣಮಾತ್ರದಲ್ಲೇ ನೆನಪಿಸಿಕೊಂಡು ಒಳ ಹೊಕ್ಕೊಡನೆಯೇ ನಾನು ನಿದ್ರಾವಶನಾಗಿಬಿಟ್ಟ ಕಥೆ ಬೇರೇನೇ..

.......................................................................................

ಅತಿ ಚಿಕ್ಕ ಬಾಣತಿ ಮಾರಿ ಬೆಟ್ಟ ಟ್ರೆಕ್ಕಿಂಗ್‍ಗೆ ಹೋಗಿ ಬಂದು ಮಾರನೆಯ ದಿನ ರಜೆ ಹಾಕಿದ್ದೂ ಅಲ್ಲದೆ ಸಿಕ್ಕಾಪಟ್ಟೆ ಸುಸ್ತು ಸುಸ್ತು ಎನ್ನುತ್ತಿದ್ದ ಗಿರೀಶನನ್ನು 'ವನಸುಮ'ದಂತೆ ಬಾಡಿ ಹೋಗುತ್ತಾನೆ, ನೀರು ಚುಮುಕ್ಸ್ತಾ ಇರ್ಬೇಕು ಅಂತ ರೇಗಿಸದ ದಿನವೇ ಇಲ್ಲ. ಇದ್ದಕ್ಕಿದ್ದ ಹಾಗೆ ಮಧ್ಯಾಹ್ನ ನಾಲ್ಕುವರೆಗೆ ಒಂದು ಸಲ ಅವರ ಮನೆಯಿಂದ ಬೈಕಿನಲ್ಲಿ ಮೇಕೆದಾಟಿಗೆ ಹೊರಟುಬಿಟ್ಟೆವು. ಅಂದೂ ಹಿಂದಿನ ಸೀಟಿನಲ್ಲಿ ಕುಳಿತುಕೊಂಡೇ ಸುಸ್ತಾಗಿದ್ದ. ಒಂದು ಗಂಟೆಗಳ ಕಾಲ ಟ್ರಾಫಿಕ್ ಅಲ್ಲಿ ನಿಂತು ಬಂದರೆ, "ನಿಂಗೆ ಗೊತ್ತಿಲ್ಲ, ಎಷ್ಟು ಟ್ರಾಫಿಕ್ ಅಂತ.. ಆಗೋದೇ ಇಲ್ಲ.." ಅಂತ ಮಲಗಿಬಿಟ್ಟಿದ್ದನ್ನು ನಾವೆಲ್ಲರೂ ಹಾಸ್ಯ ಮಾಡುತ್ತಲೇ ಇದ್ದೆವು. ಮತ್ತೆ ಮತ್ತೆ ರೇಗಿಸಿಕೊಂಡೂ ಅವನನ್ನೂ ಸೇರಿ ಎಲ್ಲರೂ ನಗುತ್ತಿದ್ದ ಕಥೆ ಬೇರೇನೇ..

.......................................................................................

ಆಚಾರ್ಯ ಪಾಠಶಾಲೆಗೆ ಸೇರಿಕೊಳ್ಳುತ್ತೇನೆಂದಾಗ ಸೂಪರ್ ಸ್ಕೂಲು ಸೇರ್ಕೋ, ಎಂದು ಅಲ್ಲಿ ಹೈಸ್ಕೂಲು ಕಾಲೇಜು ಓದಿದ್ದ ಗಿರೀಶ ನನ್ನನ್ನು ಉತ್ತೇಜಿಸಿದ್ದ. ಇದೊಂದು ಕಡೆ ಮಾತ್ರವಲ್ಲ. ಅವನ ಉತ್ತೇಜನ ನನ್ನ ಎಷ್ಟೊಂದು ನಿರ್ಣಯಗಳಿಗೆ ಹಾದಿಯಾಗಿದೆ. ಹೈಸ್ಕೂಲಿಗೆ ಸೇರಿಕೊಳ್ಳುವುದರಿಂದ ಹಿಡಿದು, ಓದಿ ಐ.ಎ.ಎಸ್. ಆಗು ಅನ್ನುವಷ್ಟು ಮಟ್ಟಿಗೆ ಉತ್ತೇಜಿಸುತ್ತಲೇ ಇದ್ದ. ಅಂದರೆ ನೈಜ ಸಂಗತಿಯಿಂದ ಕಾಲ್ಪನಿಕ ಸಂಗತಿಯವರೆಗೂ!! ಮೊನ್ನೆ ಮೊನ್ನೆ ಬೈಕು ತೊಗೊಂಡಾಗ ಅಪಾಚೆ ಸಕ್ಕತ್ ಬೈಕು ಅಂತ ಅದೆಷ್ಟು ಸಲ ಹೇಳಿದನೋ ಅದರ ಹತ್ತರಷ್ಟು ಸಲ ನಾನು ಹೀರೋಜೆಟ್ ಸೈಕಲ್ ತಗೊಂಡಾಗ ಸೂಪರ್ ಸೈಕಲ್ಲು, ಸೂಪರ್ ಸೈಕಲ್ಲು ಅಂತ ಹೇಳಿದ್ದ. ಎನ್.ಸಿ.ಸಿ.ಗೆ ಸೇರಿಕೊಂಡಾಗ ಮೇಷ್ಟ್ರು ಎಂ.ಎನ್.ಎಸ್ ಬಗ್ಗೆ ಸಾಕಷ್ಟು ಹೇಳಿ ಪ್ರೋತ್ಸಾಹ ಕೊಟ್ಟಿದ್ದ. ಎಂ.ಎನ್.ಎಸ್. ನನ್ನ ಇಂದಿನ ಬದುಕಿನ ಮೇಲೂ ಪರಿಣಾಮ ಬೀರಿರುವುದು ಬೇರೆಯದೇ ಕಥೆ. ಪತ್ರಿಕೆಗೆ ಬರೆಯುತ್ತೇನೆಂದಾಗ ಜ್ವಾಲಾಮುಖಿಯಲ್ಲಿ ಕೇಳುತ್ತೇನೆ, ಅವರ ಜೊತೆ ಮಾತನಾಡುತ್ತೇನೆ ಎಂದು ಇನ್ನಷ್ಟು ಪ್ರೋತ್ಸಾಹ ಕೊಟ್ಟಿದ್ದ.

ಬಿ.ಸಿ.ಎ. ಓದುತ್ತಿದ್ದ ಕಾಲದಲ್ಲಿ ಅವರ ಮನೆಗೆ ಹೋಗಿ C language ಪಾಠ ಹೇಳಿಕೊಡುತ್ತಿದ್ದಾಗ "ನೀನು ಒಳ್ಳೇ ಟೀಚರ್ ಆಗಬಹುದು" ಎಂದು ಆಗ ಅವನು ಹೇಳದಿದ್ದರೆ ಬಹುಶಃ ನಾನು ಟೀಚರ್ ಆಗುವ ವಿಷಯವನ್ನು ಪರಿಗಣಿಸುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಈಗ ನಾನು ಕಂಪ್ಯೂಟರ್ ಅಧ್ಯಾಪಕನಾಗಿರುವ ಕಥೆ ಬೇರೇನೇ..

......................................................................................

ನಮ್ಮನ್ನೆಲ್ಲರನ್ನೂ ಬೆಳೆಸಿದ ಅತ್ತೆ ಆಸ್ಪತ್ರೆಯಲ್ಲಿ ತನ್ನ ಕೊನೆಯ ಉಸುರನ್ನೆಳೆದಾಗ ಅಂದಷ್ಟೇ ಬೆಂಗಳೂರಿಗೆ ಬಂದ ಗಿರೀಶನು ಅತ್ತೆ ನಮ್ಮೆಲ್ಲರನ್ನೂ ಕೆನ್ನೆ ತಟ್ಟಿ ಎಬ್ಬಿಸುತಿದ್ದುದನ್ನು ಥಟ್ಟನೆ ನೆನೆದು, ಉಸುರು ನಿಂತ ಅತ್ತೆಯ ಕೆನ್ನೆ ತಟ್ಟುತ್ತಾ "ದೊಡ್ಡಮ್ಮಾ... (ಗಿರೀಶನಿಗೆ ದೊಡ್ಡಮ್ಮ, ನನಗೆ ಅತ್ತೆ) ದೊಡ್ಡಮ್ಮಾ.." ಎಂದು ನನ್ನ ಕಡೆ ತಿರುಗಿ ಕಣ್ಣೀರ್ಗರೆದ ದೃಶ್ಯ ಹೇಗೆ ತಾನೆ ಮಾಸೀತು? ಅತ್ತೆಯ ಶಾಶ್ವತ ಆಶೀರ್ವಾದ ಗಿರೀಶನ ಮೇಲಿರುತ್ತೆ ಅನ್ನುವ ಕಥೆ ಬೇರೇನೇ...

......................................................................................

ಆಪ್ತಗೆಳತಿ ದೀಪ್ತಿ ಈಗ ಗಿರೀಶನ ಪತ್ನಿಯೆಂಬುದು ಸಂತಸದ ರಸದೌತಣದಂತೆ. ಕಾಲೇಜಿನಲ್ಲಿ ಎಲ್ಲರನ್ನೂ ಬಿಟ್ಟು ಹೊರಹೋಗಬೇಕೆಂಬ ಸಲುವಾಗಿ ಬಿಕ್ಕಿಬಿಕ್ಕಿ ಅತ್ತಿದ್ದಳವಳು. ಇಂದು ಹೊಸ ಹಾದಿ ಹಿಡಿದು ಗಂಡ ಹೆಂಡತಿ ಇಬ್ಬರೂ ಹೊರದೇಶದತ್ತ ನಡೆದು ಸಾಗುತ್ತಿದ್ದಾರೆ. ಬದುಕು ನಿರಂತರ ನದಿಯಂತೆ ಹರಿಯುತ್ತಲಿರುತ್ತೆ. ಗೆಲುವು ಇವರದಾಗಲಿ ಎಂದು ಪ್ರೀತಿಯಿಂದ ಹರಸುತ್ತೇನೆ.

ನೆನ್ನೆ ಗಿರೀಶ ಅಮೆರಿಕೆಗೆ ಹೋಗುತ್ತಿದ್ದೇನೆಂದು ಬೈ ಹೇಳಲು ಮನೆಗೆ ಬಂದಾಗ ಇವೆಲ್ಲವೂ ನೆನಪಾಯಿತು. "ಸೆಂಡ್ ಆಫ್ ಪಾರ್ಟಿ" ಬೇರೆ ಇತ್ತು. ಯಾಕೋ ಅವನಿಗೆ ಬೈ ಹೇಳಲು ಮನಸ್ಸಿರಲಿಲ್ಲ. ಆದರೆ ಅವನು ಯಶಸ್ಸಾಗುವುದರ ಹರಕೆಯಿತ್ತು. ಹರಸಿದೆ. ನನ್ನ ಕಣ್ಣು ಸಣ್ಣದಾಗಿ ಒದ್ದೆಯಾಗಿತ್ತು. ಎಡಬಿಡದೆ ಸುರಿಯುತ್ತಿದ್ದ ಸುದೀರ್ಘ ಮಳೆಯು ಭೂಮಿಯನ್ನೂ ಒದ್ದೆ ಮಾಡಿತ್ತು.

ಆಲ್ ದಿ ಬೆಸ್ಟ್, ಗಿರೀಶ.. :-)

-ಅ
15.08.2008
7PM

Friday, August 8, 2008

ಕಪ್ಪು ಕವಿವುದು

ಭುವಿಯ ಜ್ಯೋತಿಯೆಲ್ಲವ ನುಂಗುವ ತವಕದಿ
ಹೊಂಚು ಹಾಕುತಿಹ ಕರಿ ಮುಗಿಲೇ,
ಅವಳು ಮುನಿದಿಹಳು,
ನನ್ನ ಕಂಬನಿಯ ಹೊತ್ತು ಅವಳು ನೆನೆವೆಡೆ ಮಳೆಯಾಗಿಸು, ಓ ಮುಗಿಲೇ!
ಅವಳಿಗಿಂತ ನನಗೆ ಜಗವು ಮಿಗಿಲೇ?
ಕಪ್ಪು ಕವಿದಿದೆ ಇಲ್ಲಿ, ನನ್ನೆದೆಯೊಳಗೂ,
ಹಾಡು ಹಗಲೇ!

ಪಾಪ ಪುಣ್ಯಗಳೆಂಬ ನನ್ನೆರಡು ಕೈ ಹಿಡಿದವಳು
ಭೀತಿ ನೀತಿಗಳ ಮೀರಿ ಪ್ರೀತಿಯೆದೆ ಮಿಡಿದವಳು
ಅವಳು,
ನಗು ತೊರೆದರೆ
ಹಗೆ ಮೆರೆದರೆ
ಮಿಗೆ ನೊಂದರೆ
ನನಗೆ,
ಕಪ್ಪು ಕವಿವುದು ಹಾಡು ಹಗಲು
ಬೆಪ್ಪು ನಿಲುವುದು ಬಾಳ ಹೆಗಲು.

-ಅ
08.08.2008
12.30AM

Friday, August 1, 2008

ಜ್ವರ - ಸಂಭಾಷಣೆ

Weather ಸಖತ್ತಾಗಿದೆ. ಆದರೆ ನನಗೆ immunity ಇಲ್ಲ. ಅರ್ಥಾತ್ ಯೋಗ್ಯತೆ ಇಲ್ಲ.

"ಮಳೆಯಲ್ಲಿ ನೆಂದೆಯಾ, ಜ್ವರ ಬರೆಸಿಕೊಳ್ಳೋಕೆ?"

"ಮಳೆಯಲ್ಲಿ ನೆಂದಿದ್ದರೆ ಜ್ವರ ಬರುತ್ತಲೇ ಇರಲಿಲ್ಲ."

"ದಕ್ಷಿಣ ಕನ್ನಡ ಜಿಲ್ಲೆಯಲ್ಲೇನಾದರೂ ಟ್ರೆಕ್ಕಿಂಗ್ ಹೋಗಿದ್ದ್ಯಾ?"

"ಹೋಗಿದ್ದಿದ್ದ್ರೆ ಹೀಗ್ಯಾಕೆ ಜ್ವರ ಅಂತ ಮಲಗ್ತಿದ್ದೆ?"

"ಏನ್ ಅರುಣ್ ನೀವು, ಶನಿವಾರ ರಜ ತೊಗೋಬಾರ್ದಿತ್ತಾ?"

"ಏನ್ ಮಾಡ್ಲಿ ಮೇಡಂ, ಜ್ವರಕ್ಕೆ ವಾರಗಳ ಪಾಠ ಹೇಳ್ಕೊಟ್ಟಿಲ್ಲ ಯಾರೂನೂ...."

"ಒಂದು ಮಸಾಲೆ ದೋಸೆ, ಬಜ್ಜಿ ತಿಂದ್ಬಿಡು ಎಲ್ಲಾ ಸರಿ ಹೋಗುತ್ತೆ!"

"ಹೌದು, ಇನ್ನೊಂದ್ ಸಲ ಜ್ವರ ಬರೋದೇ ಇಲ್ಲ. ಯಾಕೆಂದರೆ ನಾನೇ ಇರುವುದಿಲ್ಲ!"

-ಅ
01.08.2008
4PM

Monday, July 28, 2008

ಬಿಗ್ ಬಾಸ್

ಸಂಗೀತ ಕೇಳುವುದು ಬರೀ ಹವ್ಯಾಸವಷ್ಟೆ ಎಂದರೆ ಅದು ತೀರಾ ಕಡಿಮೆಯ ವರ್ಣನೆಯಾಗಿಬಿಡುತ್ತೆ. ಸಂಗೀತವು ಒಂದು ರೀತಿ ನರನಾಡಿಯಲ್ಲೂ ತುಂಬಿಕೊಂಡುಬಿಟ್ಟಿದೆ.

ಶ್ರೀನಿವಾಸ ಮತ್ತು ನಾನು ಅನೇಕ ಸಾಮ್ಯ ಗುಣಗಳನ್ನು (At least ಬಯಕೆಗಳನ್ನು - ಯಾಕೆಂದರೆ ಅವನ ಮುಂದೆ ನಾನು ತುಂಬಾ ಕಿರಿಯ) ಹೊಂದಿದ್ದೇವೆ. ಹಿಂದೆಂದೋ ಅವನು ಪರಿಚಯವಾದ ಹೊಸತರಲ್ಲಿ chat ಮಾಡುತ್ತಿದ್ದಾಗ ತನಗೆ ಮಹಾರಾಜಪುರಂ ಸಂತಾನಂ ಇಷ್ಟವೆಂದು ಹೇಳಿದ್ದ. ನಾನು ಸಂತೋಷಗೊಂಡು ನನಗೂ ಅಷ್ಟೆಯೆಂದಿದ್ದೆ. ನಂತರ ಎಮ್.ಎಸ್.ಸುಬ್ಬುಲಕ್ಷ್ಮಿಯ ಮೇಲೆ ನಾವಿಟ್ಟಿದ್ದ ಅಭಿಮಾನದ ಬಗ್ಗೆ ಚರ್ಚಿಸಿದೆವು. ಬಾಲಮುರಳಿ ಕೃಷ್ಣ, ಯೇಸುದಾಸ್ ಇವರೆಲ್ಲರೂ ಸಂತಾನಂ ಎಮ್.ಎಸ್. ಮುಂದೆ ಏನೇನೂ ಇಲ್ಲವೆಂದು ಕೂಡ ಆಡಿಕೊಂಡೆವು. (ನಾವೇನೋ ದೊಡ್ಡ ವಿದ್ವಾಂಸರೆಂಬಂತೆ!). ಆಗ ಇನ್ನೊಂದು ಹೆಸರು ಬಂದಿತು. ನನಗೆ ಅಷ್ಟು ಪರಿಚಯವಿರಲಿಲ್ಲ. ಕೇಳಿದ್ದೆನಷ್ಟೆ. ಆತ ಎಮ್.ಎಸ್.ಗೆ ಗುರುವಾಗಿದ್ದರು ಒಂದು ಹಂತದಲ್ಲಿ ಎಂದು ಶ್ರೀನಿವಾಸ ಹೇಳಿದ.

ಎಮ್.ಎಸ್.ನ ಬಾಸ್ ಎನ್ನುತ್ತಿದ್ದೆವು. ಬಾಸ್ ಹಾಡು ಕೇಳುತ್ತಿದ್ದರೆ ಮೈಮರೆತು ತಾಳ ಹಾಕಿಕೊಂಡು ಕುಳಿತುಬಿಡುವುದಾಗಿ ಮಾತನಾಡಿಕೊಳ್ಳುತ್ತಿದ್ದೆವು. ಈಗ ಬಾಸ್‍ಗೆ ಗುರುವಾದವರ ಸಂಗೀತವನ್ನು, ಆ ಧ್ವನಿಯನ್ನು ಕೇಳಿದ್ದೇನಾದರೂ ಅದು ತಲೆಯೊಳಗೆ ನಮೂದಿಸಿಲ್ಲವಲ್ಲಾ ಎಂದು ಕೊರಗಿದೆ. ನಂತರ ಆ ಕಂಠ ಕೇಳಿದ ಮೇಲೆ ತಲೆಬಾಗಿ, ತಲೆದೂಗಿ, ತಲೆ ಏನೇನು ಮಾಡಲು ಸಾಧ್ಯವೋ ಎಲ್ಲವನ್ನೂ ಮಾಡಿಬಿಟ್ಟೆ! ಆ ಹೆಸರು - ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್.

ಬಾಸ್‍ಗೆ ಗುರುವಾಗಿದ್ದ ಇವರನ್ನು ನಾವು ಬಿಗ್ ಬಾಸ್ ಎಂದು ಕರೆಯಲು ಆರಂಭಿಸಿದೆವು.ಸನ್ನಿವೇಶ ೧
ಶ್ರೀನಿವಾಸ ಕೇಳುತ್ತಾನೆ: "ಬಿರಾನ ಬ್ರೋವ ಇದೇ..." ಕೇಳಿದೆಯಾ?
ನಾನು ಹೇಳುತ್ತೇನೆ, "ಬಾಸ್‍ದು ಬಿಗ್ ಬಾಸ್‍ದು ಇಬ್ಬರದೂ ಕೇಳಿದ್ದೇನೆ. ಇಬ್ಬರೂ ಒಬ್ಬರಿಗಿಂತ ಒಬ್ಬರು ಸೂಪರ್!"
ಶ್ರೀ: ಛೆ, ನಾನು ಕೇಳ್ಬೇಕು.

ಸನ್ನಿವೇಶ ೨
ಶ್ರೀನಿವಾಸ: ನೀನು ಚಕ್ಕನಿ ರಾಜ ಕೇಳ್ಬೇಕು ನೀನು - ಅದ್ಭುತ!! ಬಿಗ್ ಬಾಸ್ ಎಟ್ ಹಿಸ್ ಬೆಸ್ಟ್!!
ನಾನು: ಅದನ್ನ ನಾನು ಸಂತಾನಂ ಬಾಸ್ ಹಾಡಿರೋದು ಮಾತ್ರ ಕೇಳಿರೋದು.

ಸನ್ನಿವೇಶ ೩
ಶ್ರೀನಿವಾಸ: ಡಿವೈನ್ ಯೂನಿಸನ್ ಆಲ್ಬಂ ಸೂಪರ್ ಅಲ್ವಾ, ಬಿಗ್ ಬಾಸ್ ಮತ್ತೆ ಬಾಸ್ ಇಬ್ಬರದೂ!
ನಾನು: ಹೌದು, ನಮ್ಮದೂ ಒಂದು ಆಲ್ಬಮ್ ಬರಲಿ ಹಾಗೆ.. ;-)

ಮೊನ್ನೆ ಇಪ್ಪತ್ತೈದನೆಯ ತಾರೀಖಿಗೆ ಶೆಮ್ಮಂಗುಡಿ ಅರ್ಥಾತ್ ಬಿಗ್ ಬಾಸ್ ಹುಟ್ಟಿ ನೂರು ವರ್ಷವಾಗುತ್ತೆ. ಆತ ಇದ್ದಾಗ ನಾನು ಇಷ್ಟು ದೊಡ್ಡವನಾಗಿದ್ದರೆ, ಅವರ ಕಚೇರಿಗಳಿಗೆ ತಪ್ಪಿಸದೇ ಹೋಗುತ್ತಿದ್ದೆ. ಈಗ ನನಗೆ ಸಿ.ಡಿಗಳೇ ಗತಿ!

ನೆನಪಿಗೊಂದು ವಿಡಿಯೋ ಇಲ್ಲಿ.


ಇಡೀ ಶಾಸ್ತ್ರೀಯ ಸಂಗೀತ ಪ್ರಪಂಚವೇ ಈ legendಗೆ ನಮನ ಸಲ್ಲಿಸುತ್ತಿದೆ. ಸಂಗೀತ ರಸಿಕರೂ ಸಹ. ನಾನೂ ಸಹ!!

ಶೆಮ್ಮಂಗುಡಿಯವರ ಆತ್ಮಚರಿತ್ರೆ ಇಲ್ಲಿದೆ. http://www.carnaticcorner.com/articles/semmangudi.html

-ಅ
27.07.2008
5.15PM

Friday, July 25, 2008

ನನಗಾಗಲೇ ಇಪ್ಪತ್ತಾರು

ಪ್ಪತ್ತಾರು ವರ್ಷ ವಯಸ್ಸಾದರೂ ಸಾಧನೆಯು ಮಾತ್ರ ಸೊನ್ನೆ ಎಂದು ಅದೆಷ್ಟು ಸಲ ಅನ್ನಿಸಿದೆಯೋ ಏನೋ. ಆದರೂ ಇನ್ನೂ ಅವಕಾಶವಿದೆ, ವಯಸ್ಸಿದೆ ಎಂಬ ನಂಬಿಕೆಯು ಮತ್ತೆ ನಾಳೆಯನ್ನು ಎದುರು ನೋಡುವಂತೆ ಮಾಡುತ್ತಲಿರುತ್ತೆ.

ಸ್ವಾಮಿ ವಿವೇಕಾನಂದರು ಅಸುನೀಗಿದಾಗ ಅವರಿಗೆ ಮೂವತ್ತೊಂಭತ್ತಾಗಿತ್ತು. ಎಷ್ಟೋ ಜನ "ಅಯ್ಯೋ, ನನ್ನ ಮದುವೆ ಇನ್ನೂ ಆಗಿಲ್ಲವಲ್ಲಾ ನಲವತ್ತಾದರೂ" ಎಂದು ತಲೆ ಮೇಲೆ ಕೈ ಹೊತ್ತು ಕೂತಿರುವುದನ್ನು ನೋಡಿದ್ದೇವೆ. ಅವರ ಸಾಧನೆ ಮದುವೆಯಷ್ಟೆ. ಎಲ್ಲಾ ಧರ್ಮ, ಜಾತಿ, ಮತಗಳನ್ನು ಮೀರಿದ ಮನುಜ ಮತವನ್ನು ಬೋಧಿಸಿದ, ಅದರಂತೆ ಬದುಕಿ, ಸತ್ತರೂ ಚಿರಾಯುವಾದ ವಿವೇಕಾನಂದರಂತೆಯಂತೂ ಆಗಲು ಸಾಧ್ಯವಿಲ್ಲ. ಅವರು ಒಬ್ಬರೇ ಜಗತ್ತಿಗೆ!

ಕೇವಲ ಮೂವತ್ತು ಮೂರು ವರ್ಷ ಉಸಿರಾಡಿದ ಶ್ರೀನಿವಾಸ ರಾಮಾನುಜಂ ಮುಂದಿನ ಮೂರು ಸಾವಿರ ವರ್ಷಕ್ಕೂ ಮೀರಿದ ಸಾಧನೆ ಮಾಡಿರುವುದು ಯಾರಿಗೆ ತಾನೆ ಗೊತ್ತಿಲ್ಲ! ಗಣಿತ ಲೋಕವೇ ಬೆರಗಾಗುವಷ್ಟು ಕೆಲಸವನ್ನು ಮಾಡಲು ಇವರಿಗೆ ಮೂವತ್ತು ವರ್ಷ ಆಯುಷ್ಯ ಸಾಕಾಗಿತ್ತು. ಇನ್ನೊಂದು ಮೂವತ್ತಿದ್ದರೆ, ಗಣಿತ ಲೋಕವು ಬದಲಾಗಿಯೇ ಬಿಡುತ್ತಿತ್ತೆನಿಸುತ್ತೆ.

ಮತ್ತೊಂದು ಹೆಸರು ಹೆಚ್ಚಿನ ಜನಕ್ಕೆ ಪರಿಚಯವಿಲ್ಲ. ಸ್ವಾತಿ ತಿರುನಾಳ್ ಮಹಾರಾಜರು. ಇವರು ಹುಟ್ಟುವ ಮುಂಚೆಯೇ ತಿರುವನಂತಪುರದ ಅರಸನ ಪಟ್ಟ ಕಟ್ಟಿಬಿಟ್ಟಿದ್ದರು ಅವರ ತಂದೆ ತಾಯಿಗಳು. ಬಹುಶಃ ಕೇರಳದ ಅತ್ಯಂತ ಶ್ರೇಷ್ಠ ಅರಸು ಆಗಿ ರಾಜ್ಯಭಾರ ಮಾಡಿದವರು ಇವರು. ಸಿಂಹಾಸನವನ್ನೇರಿದಾಗ ಹದಿನಾಲ್ಕಾಗಿತ್ತಷ್ಟೆ.

ಯೌವನದಲ್ಲಿ ಇವರ ಮನಸ್ಸು ಸೆಳೆದದ್ದು ಖಗೋಳಶಾಸ್ತ್ರ. ಆಂಗ್ಲ ಭಾಷೆಯಲ್ಲಿ ಪರಿಣತಿ ಹೊಂದಿದ ಇವರು ಆ ಕಾಲದ (ಹತ್ತೊಂಭತ್ತನೆಯ ಶತಮಾನದ) ಶ್ರೇಷ್ಠ ಖಗೋಳತಜ್ಞರೊಡನೆ ಸ್ನೇಹ ಬೆಳೆಸಿಕೊಂಡು ಹವ್ಯಾಸೀ ಖಗೋಳತಜ್ಞಾರಿಬಿಟ್ಟರು. ಇಂಗ್ಲೀಷಲ್ಲದೆ ಸಂಸ್ಕೃತ, ಕನ್ನಡ, ತಮಿಳು, ಬೆಂಗಾಲಿ, ಹಿಂದಿ, ಮರಾಠಿ ಮತ್ತು ಮಾತೃಭಾಷೆ ಮಲೆಯಾಳಂ‍ನಲ್ಲಿ ಪಾಂಡಿತ್ಯವನ್ನು ಹೊಂದಿದ್ದರು.

ಸಂಗೀತಗಾರರಿಗಂತೂ ಸ್ವಾತಿ ತಿರುನಾಳ್ ಒಬ್ಬ ಆದರ್ಶ ವ್ಯಕ್ತಿ. ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಎಲ್ಲ ಪ್ರಾಕಾರಗಳನ್ನೊಳಗೊಂಡಂತೆ ಮುನ್ನೂರೈವತ್ತಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಸಂಗೀತ ತ್ರಿಮೂರ್ತಿಗಳಾದ ಶ್ಯಾಮಾಶಾಸ್ತ್ರಿಗಳು, ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರು - ಇವರುಗಳು ಸ್ವಾತಿ ತಿರುನಾಳ್ ಸಮಕಾಲೀನರಾಗಿದ್ದೂ ಇವರ ರಚನೆಯನ್ನು ಕೊಂಡಾಡಿದ್ದಾರೆ!

ಸ್ವಾತಿ ತಿರುನಾಳ್‍ರ 'ಸರಸಿಜನಾಭ', 'ದೇವ ದೇವ', ಧನಶ್ರೀ ತಿಲ್ಲಾನ - ಇಂಥಾ ನೂರಾರು ಅದ್ಭುತಗಳನ್ನು ಸಂಗೀತ ಜಗತ್ತಿಗೆ ಕೊಟ್ಟ ಕೀರ್ತಿ ಸ್ವಾತಿ ತಿರುನಾಳ್‍ಗೆ ಸೇರುತ್ತೆ. ಇಷ್ಟು ಕೀರ್ತಿ ಸಂಪಾದನೆ ಮಾಡಲು ಸ್ವಾತಿ ತಿರುನಾಳ್‍ರವರಿಗೆ ಬೇಕಾಗಿದ್ದುದು ಕೇವಲ ಮೂವತ್ತುಮೂರು ವರ್ಷ!

ನನಗೆ ಇಪ್ಪತ್ತಾರಾಗಿದೆ ಆಗಲೇ!! ನಾನು ಸ್ವಾತಿ ತಿರುನಾಳ್ ಅಲ್ಲ. ಶ್ರೀನಿವಾಸ ರಾಮಾನುಜಂ ಅಲ್ಲ. ವಿವೇಕಾನಂದನೂ ಅಲ್ಲ. ಅದಕ್ಕೇ ಇಪ್ಪತ್ತಾರಾಗಿದೆ ಅಷ್ಟೆ.

-ಅ
14.07.2008
9.40PM

Monday, July 21, 2008

ಕನ್ನಡದ ದನಿ
ರಾಜ್‍ಕುಮಾರ್ ಒಬ್ಬರನ್ನು ಹೊರೆತು ಪಡಿಸಿ ಬಹುಶಃ ಕನ್ನಡದ್ದೇ ಸ್ವಂತ ದನಿ ಹೊಂದಿದ ಹಾಡುಗಾರರು ಕನ್ನಡ ಚಿತ್ರರಂಗದಲ್ಲಿ ಇಲ್ಲವೇ ಇಲ್ಲ ಅನ್ನಿಸುತ್ತೆ. ಆ ಕಾಲದಿಂದಲೂ, ಎಸ್.ಪಿ, ಎಸ್.ಜಾನಕಿ, ಪಿ.ಸುಶೀಲ, ವಾಣಿ ಜಯರಾಂ, ಎಲ್.ಆರ್.ಈಶ್ವರಿ ಮುಂತಾದ ಸುಪ್ರಸಿದ್ಧ ಗಾಯಕ ಗಾಯಕಿಯರೆಲ್ಲರೂ ಪರಭಾಷಾ ತಾರೆಯರೇ. ಆದರೂ ಎಲ್ಲೂ ನಮಗೆ ಇವರುಗಳು ಹೊರಗಿನವರೆಂದು ಎಳ್ಳಷ್ಟೂ ಅನ್ನಿಸಿಲ್ಲ. ಅಷ್ಟರ ಮಟ್ಟಿಗೆ ಕನ್ನಡಿಗರ ಮನಸ್ಸನ್ನು ಗೆದ್ದವರು ಈ ಗಾಯಕರು.

ಉತ್ತರ ಭಾರತದ ಹಾಡುಗಾರರು ಕನ್ನಡದಲ್ಲಿ ಹಾಡುವುದು ಹೊಸ ವಿಷಯವೇನಲ್ಲ. ಆ ಕಾಲದಲ್ಲೇ ದ್ವಾರಕೀಶ್ ಕಿಶೋರ್ ಕಂಠದಲ್ಲಿ ಹಾಡಿಸಿದ 'ಆಡೂ.. ಆಟ ಆಡು.....' ಯಾರಿಗೆ ತಾನೆ ಗೊತ್ತಿಲ್ಲ! ರಫಿಯ 'ನೀನೆಲ್ಲಿ ನಡೆವೆ ದೂರ....' ಇನ್ನೂ ಮನಸ್ಸನ್ನು ಕಲಕುತ್ತಲೇ ಇದೆ. ಲತಾ ಮಂಗೇಶ್ಕರ್‍ಳ 'ಬೆಳ್ಳನೆ ಬೆಳಕಾಯಿತು...' ಇನ್ನೂ ರೋಮಾಂಚನವನ್ನುಂಟು ಮಾಡುತ್ತೆ. ಮನ್ನಾ ಡೇ ಹಾಡಿರುವ 'ಕುಹು ಕುಹೂ....' ಎಂಬ ಕೋಗಿಲೆ ಕಂಠ ಕಿವಿಯಲ್ಲಿ ಪ್ರತಿಧ್ವನಿಸುತ್ತಲೇ ಇದೆ.ಹಂಸಲೇಖರಂತಹ ಅಪ್ರತಿಮ ಸಂಗೀತ ನಿರ್ದೇಶಕ ಮೊದಲ ಬಾರಿಗೆ ಕನ್ನಡಕ್ಕೆ ಪರಿಚಯಿಸಿದ ಕುಮಾರ್ ಸಾನು (ಹೊಸ ಕಳ್ಳ ಹಳೇ ಕುಳ್ಳ ಚಿತ್ರದಲ್ಲಿ) ಅಷ್ಟೇನೂ ಹೆಸರು ಮಾಡಲಿಲ್ಲವಾದರೂ, ಅದೇ ಹಂಸಲೇಖ ಸೋನು ನಿಗಮ್‍ರನ್ನು 'ಟೈಟಾನಿಕ್ ಹೀರೋಯಿನ್' ಹಾಡು ಹೇಳಿಸಿ ಕನ್ನಡಕ್ಕೆ ಕರೆತಂದರು. ಈಗ ಕನ್ನಡದಲ್ಲಿ ಬರುವ ಹಾಡುಗಳನ್ನೆಲ್ಲಾ ಸೋನು ನಿಗಮ್ ಹಾಡುತ್ತಿರುವುದು ಗೊತ್ತಿರುವ ವಿಷಯವೇ. ಹಾಡುಗಳು ಕನ್ನಡ ಹಾಡುಗಳಂತಿರುವುದಿಲ್ಲವೆಂಬುದೊಂದು ಸತ್ಯ ಹೊರೆತು ಪಡಿಸಿದರೆ ಸೋನು ಧ್ವನಿ ಅತ್ಯಂತ ಸೊಗಸಾಗಿದೆ.ಸೋನು ಹಿಂದೆಯೇ ಶ್ರೇಯಾ ಘೋಶಾಲ್, ಸುನಿಧಿ ಚೌಹಾನ್, ಕುನಾಲ್ ಗಾಂಜಾವಾಲ, ಉದಿತ್ ನಾರಾಯಣ್ ಎಲ್ಲರೂ ಕನ್ನಡದ ಮಣ್ಣನ್ನು ಮೆಟ್ಟಿಯೇ ಬಿಟ್ಟು 'ಳ'ಕಾರ, 'ಣ'ಕಾರದಲ್ಲಿ ತತ್ತರಿಸಿ ಕನ್ನಡದ ಕೀರ್ತಿಯನ್ನು ಮೆರೆಸಲು ಹೊರಟಿದ್ದಾರೆ.

ರಾಜೇಶ್ ಕೃಷ್ಣನ್ ಅಂತಹ ಹಾಡುಗಾರರಿಗೆ ಈಗ ಮಕ್ಕಳು ಹಾಡುವುದನ್ನು ಕೇಳಿ ಶ್ರುತಿ ಲಯ ತಿದ್ದುವುದೇ ಉದ್ಯೋಗವಾಗಿಬಿಟ್ಟಿದೆ. ಒಳ್ಳೆಯ ಹಾಡುಗಳೆಲ್ಲಾ ಕನ್ನಡ ಉಚ್ಚರಿಸಲು ಬಾರದವರ ಪಾಲಾಗಿ 'ನನ್ನ ಸ್ಟೈಲು ಬೇರೇನೇ....' ಈಥರದ ಹಾಡುಗಳು ಕನ್ನಡಿಗರ ಪಾಲಿಗೆ ಉಳಿದಿದೆಯಷ್ಟೆ.ಹೊಸ ಹೊಸ ಹಾಡುಗಾರರನ್ನು ಹುಡುಕುವ ಕೆಲಸವನ್ನು ಮಾಡುವ ಕಷ್ಟವನ್ನು ಸಿನಿಮಾದವರು ತೆಗೆದುಕೊಳ್ಳಲು ಹೋಗಿಲ್ಲ. ಹಣ ಹೆಚ್ಚು ಖರ್ಚಾದರೂ ಕನ್ನಡ ಬಾರದವರ ಕಂಠವೇ ಪ್ರೀತಿ. ಜಯಂತ್ ಕಾಯ್ಕಿಣಿಯಂಥವರ ಸಾಹಿತ್ಯದಲ್ಲಿ ಉತ್ತಮ ಕನ್ನಡ ಪದಗಳಿದ್ದೂ, ಅದೆಲ್ಲಾ ಈ ಹಾಡುಗಾರರ ಬಾಯಲ್ಲಿ ಅಪಭ್ರಂಶಗಳಾದರೂ ನಿರ್ದೇಶಕ ನಿರ್ಮಾಪಕರಿಗೆ ಇವರುಗಳ ಮೇಲೆಯೇ ಪ್ರೀತಿ. ಇದರ ಜೊತೆಗೆ ಕಳಪೆ ಸಾಹಿತ್ಯಗಳ ಹಾಡುಗಳೂ ಅವರ ಪಾಲೇ ಆಗುವ ಸಾಧ್ಯತೆಯೂ ಇದೆ!ಕರ್ನಾಟಕದ ಹಣೆಬರಹವೇ ಇಷ್ಟು ಅನ್ನಿಸುತ್ತೆ. ಇಲ್ಲಿ ಕನ್ನಡದವರಿಗಿಂತ ಹೊರಗಿನವರಿಗೇ ಅವಕಾಶ ಹೆಚ್ಚು!

ಕನ್ನಡದ ಹಾಡುಗಾರರು ಇಂಥ ಹೊರಗಿನವರ ವಿರುದ್ಧ ಹೋರಾಟ ಮಾಡುತ್ತಿದ್ದಾರಂತೆ. ಕನ್ನಡದ ಹಾಡುಗಾರರು ಚೆನ್ನಾಗಿ ಹಾಡಿ ಪ್ರೂವ್ ಮಾಡಲಿ ಅವಕಾಶ ಸಿಕ್ಕೇ ಸಿಗುತ್ತೆ ಎಂಬುದು ಸೋನು ನಿಗಮ್ ಅಭಿಮಾನಿಗಳ ವಾದ. ಆದರೆ ಅವಕಾಶವೇ ಸಿಗದೆ ಹಾಡುವುದಾದರೂ ಎಲ್ಲಿ ಎಂಬುದು ಗಾಯಕರ ಅಳಲು. ಹೋರಾಟ ಏನಾದರೂ ಆಗಲಿ, ಹಾಡು ಯಾರಾದರೂ ಹಾಡಲಿ, ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಗಾಯಕರು ಸಿಗಲಿ ಎಂದು ನನ್ನ ಹಾರೈಕೆ.

-ಅ
21.07.2008
10.15PM

Thursday, July 17, 2008

ಒಳ್ಳೆಯ ಕೆಟ್ಟವರು?

ರಾಜ್‍ಕುಮಾರ್ ತೀರಿಕೊಂಡಾಗಲೇ ಇವರು ಮಾತನಾಡಿದಾಗ "ಪಾಪ, ಈತಾನೂ ಎಷ್ಟು ಸೋತು ಹೋಗಿದ್ದಾರಲ್ಲಾ.." ಎಂದು ಮಾತನಾಡಿಕೊಂಡಿದ್ದೆವು. ಖಳನಾಯಕನಾಗಿ ಹೇಳಿ ಮಾಡಿಸಿದ ಎಂ.ಪಿ.ಶಂಕರ್ ನನಗೆ ಇಷ್ಟ ಆಗುತ್ತಿದ್ದು, ಮುಸುಕಿನ ಹಿಂದಿನ ಮನುಷ್ಯದ ಪಾತ್ರದಲ್ಲಿ. ಅಂಥಾ ಪಾತ್ರಗಳು ದಿನೇಶ್‍ಗೆ, ಅಥವಾ ಎಂ.ಪಿ.ಶಂಕರ್‍ಗೆ ಸಿಗುತ್ತಿತ್ತು! ಚಿತ್ರದ ಕೊನೆಯವರೆಗೂ ಆ ಮುಸುಕಿನ ಮನುಷ್ಯ ಯಾರು ಎಂದು ಗೊತ್ತಾಗದೆ, ಕೊನೆಗೆ ಹೀರೋ (ಅದು ರಾಜ್‍ಕುಮಾರೇ..) ಜೊತೆ ಗುದ್ದಾಡುವಾಗ ಮುಸುಕು ಕಳಚಿ, "ನೀನಾ?!!!" ಎನ್ನುವ ಪಾತ್ರದಲ್ಲಿ ಎಂ.ಪಿ.ಶಂಕರ್ ಅದೆಷ್ಟು ಸಲ ಕಾಣಿಸಿಕೊಂಡಿದ್ದಾರೋ ಏನೋ.

ಸತ್ಯಹರಿಶ್ಚಂದ್ರದ ಇವರ ವೀರಬಾಹುಕನ ಪಾತ್ರವು ಈಗಾಗಲೇ ದಂತಕಥೆಯಾಗಿದೆ. ಚಿಕ್ಕಂದಿನಿಂದಲೂ ನನ್ನ ಮನಸ್ಸು ಮುಟ್ಟಿದ್ದ "ಹಾವು ಮುಂಗುಸಿ" ಹಾಡಿನ ರಾಮ ಲಕ್ಷ್ಮಣ ಚಿತ್ರವನ್ನು ನೀಡಿದ್ದು ಇವರೇ. ಆ ಕಾಲದಲ್ಲೇ ಕನ್ನಡದಲ್ಲಿ ಅಡ್ವೆಂಚರ್ ಚಿತ್ರಗಳನ್ನೂ ಮಾಡಿದ ಹೆಮ್ಮೆ ಕೂಡ ಇವರದೇ. ಅಂಬರೀಶ್ ನಟನೆಯ ಮೃಗಾಲಯ ಚಿತ್ರ ನಾನು ನೋಡಿದ ಪ್ರಥಮ ಚಿತ್ರವಂತೆ. ಬಂಗಾರದ ಮನುಷ್ಯದಲ್ಲಿ ದ್ವಾರಕೀಶ್ ಜೊತೆ ತಮಟೆಯನ್ನು ಹಿಡಿದುಕೊಂಡು ಕಿತ್ತಾಡುವ ದೃಶ್ಯ ಕಣ್ಣು ಮುಂದೆಯೇ ಇದೆ. ಪ್ರಾಣಿ, ಪಕ್ಷಿ, ಪ್ರಕೃತಿಯ ಬಗ್ಗೆ ಇವರಿಗಿರುವ ಪ್ರೀತಿಯ ಸಾಕ್ಷಿಯಾಗಿ ಇವರ ಚಿತ್ರಗಳು ಎದುರಿವೆ. ಗಂಧದ ಗುಡಿ, ಮೃಗಾಲಯ, ರಾಮ ಲಕ್ಷ್ಮಣ, ಎಲ್ಲವೂ ಅಷ್ಟೆ.

ನನಗೆ ಇವರ ಪಾತ್ರ ಬಹಳ ಇಷ್ಟ ಆಗಿದ್ದು "ರಾಜ ನನ್ನ ರಾಜ" ಚಿತ್ರದಲ್ಲಿ. ದಟ್ಟ ಹಳದಿ ಪ್ಯಾಂಟು, ಹೊಳೆವ ಕೆಂಪು ಶರ್ಟು ತೊಟ್ಟು, ಹಿಪ್ಪಿಯಂತೆ ಕೂದಲು ಬಿಟ್ಟು ಚಂದ್ರಶೇಖರ್‍ಗೆ ಬೆಂಬಲಿಗನಾಗಿ, ರಾಜ್‍ಕುಮಾರ್‍ರಿಂದ ಒದೆ ತಿಂದ ಪಾತ್ರ. ಚಿತ್ರದಲ್ಲಿ ಫೈಟಿಂಗ್ ತೋರಿಸುವುದೇ ಇಲ್ಲ. ಎಂ.ಪಿ.ಶಂಕರ್ ರಾಜ್ ಮೇಲೆ ಹಗ್ಗ ಬೀಸುವುದು, ಆ ಹಗ್ಗ ರಾಜ್‍ನ ಕಟ್ಟಿಹಾಕಿಬಿಡುವುದು. ಅಷ್ಟೇ! ಕ್ಯಾಮೆರಾ ಒಂದು ಸುತ್ತು ಹೊಡೆಯುವಷ್ಟರಲ್ಲಿ, ಹಗ್ಗವು ಎಂ.ಪಿ.ಶಂಕರ್ ಕೊರಳಿಗೆ ಸುತ್ತಿಕೊಂಡಿರುತ್ತೆ. ದರದರನೆ ಎಳೆಯುತ್ತಾ ಇರುವುದು ರಾಜ್!

ಚಿಕ್ಕವನಾಗಿದ್ದಾಗ ಇಂಥಾ 'ಫೈಟಿಂಗ್' ಚಿತ್ರಗಳ ಬಗ್ಗೆ ಬಹಳ ಆಸಕ್ತಿಯಿತ್ತು. ಫೈಟಿಂಗ್ ಇಲ್ಲವೆಂದರೆ ಆ ಚಿತ್ರವನ್ನೇ ನೋಡುವ ಮನಸ್ಸಿರುತ್ತಿರಲಿಲ್ಲ. ಆದರೆ ಆಗ ವಿಲ್ಲನ್‍ಗಳನ್ನು ಶಪಿಸುತ್ತಿದ್ದೆ, ವಿಲ್ಲನ್ನುಗಳು ಕೆಟ್ಟವರೆಂಬ ಭಾವನೆಯಿಂದ. ಇದು ಆ ವಿಲ್ಲನ್ನುಗಳ ಸಾಧನೆಯೇ. ನೋಡುಗನು "ಓಹ್, ರಾಜ್‍ಕುಮಾರ್ ಒಳ್ಳೆಯವರು, ಎಂ.ಪಿ.ಶಂಕರ್ ಕೆಟ್ಟವರು" ಎಂದುಕೊಳ್ಳಬೇಕಾದರೆ ಅವರ ಅಭಿನಯದ ತಾಕತ್ತು ಹೇಗಿರಬೇಕು!! ಈಗ ಅಂಥಾ ಒಬ್ಬ ಅದ್ಭುತ ವಿಲ್ಲನ್ ತೀರಿಕೊಂಡಿದ್ದಾರೆ. ಚಿತ್ರರಂಗದ ಸೇವೆಗೆ ಅವರಿಗೆ ಅಭಿನಂದನೆಗಳು.

(ಅವರ ಫೋಟೋ ಸಿಗಲಿಲ್ಲ.. ಇಂಟರ್‍ನೆಟ್‍ನಲ್ಲಿ.. :-(... )

-ಅ
17.07.2008
8.15PM

Friday, July 11, 2008

ಶಿವಣ್ಣ

ಆರಂಭದ ಚಿತ್ರಗಳಲ್ಲಿ ಯಾರಿಗೂ ಅರ್ಥವಾಗದಷ್ಟು fast forward ಭಾಷೆಯಲ್ಲಿ ಮಾತನಾಡುತ್ತಿದ್ದ ಶಿವಣ್ಣ ಒಂದು ಹದಿನೈದು ವರ್ಷ ಅನುಭವವಾದ ನಂತರ ನಟನೆಯನ್ನು ಕಲಿತದ್ದು ಬಹಳ ಸಂತೋಷದ ಸಂಗತಿ. ಮೊದಲ ಚಿತ್ರಗಳ ಕಥೆಗಳು, ಹಾಡುಗಳು ಅದ್ಭುತವಾಗಿದ್ದ ಕಾರಣ ಚಿತ್ರಗಳು ಇಷ್ಟವಾಗುತ್ತವೆ. ಬಹುಶಃ ಶಿವಣ್ಣರ ಚಿತ್ರಗಳಷ್ಟು flop ಚಿತ್ರಗಳು ಭಾರತದ ಯಾವುದೇ ನಾಯಕ ನಟನೂ ನೀಡಿಲ್ಲ. ಆದರೂ ಶಿವಣ್ಣ ಸೋಲನ್ನೊಪ್ಪಿ ಮನೆ ಸೇರುವಂಥವರಲ್ಲವಾಗಿರುವುದು ಮೆಚ್ಚುಗೆಗೆ ಪಾತ್ರವಾಗಿರುವುದು. ಮರಳಿ ಯತ್ನವ ಮಾಡು ಎಂದು ಹೊಸ ಹೊಸ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಗೆಲ್ಲುತ್ತಾರೆ, ಮತ್ತೆ ಸೋಲುತ್ತಾರೆ. ಆದರೆ, ಧೈರ್ಯದಿಂದ ಮತ್ತೆ ಮೇಲೇಳುತ್ತಾರೆ.
ಆನಂದ್ ಚಿತ್ರದಲ್ಲಾಗಲೀ, ಶಿವ ಮೆಚ್ಚಿದ ಕಣ್ಣಪ್ಪದಲ್ಲಾಗಲೀ ಶಿವಣ್ಣರ ಮಾತನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಅದು ಇಂಪಾಸಿಬಲ್. ಓಂ-ನಲ್ಲಿ ಹೊಸ ಇಮೇಜನ್ನು ಪಡೆದುಕೊಂಡುದಲ್ಲದೆ ಕೆಲವು ವರ್ಗದ ಜನಕ್ಕೆ ಬಹಳ ಹಿಡಿಸಿಬಿಟ್ಟರು. ರೌಡಿ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಕಂಡ ಇವರು ಕೆಲವೇ ಕಾಲದಲ್ಲಿ ತವರಿಗೆ ಬಾ ತಂಗಿಯಂಥಹ ಸಂಪೂರ್ಣ ಫ್ಯಾಮಿಲಿ ಸ್ಟೋರಿಯ ನಾಯಕರಾಗಿ ಮೆರೆದುಬಿಟ್ಟರು. ಕೆಲವು ಕೆಟ್ಟ ಕೆಟ್ಟ ಚಿತ್ರಗಳು ಬಂದು "ಏನಪ್ಪಾ ಶಿವಣ್ಣ ಸಖತ್ ಬೋರ್" ಅನ್ನಿಸುವಷ್ಟರಲ್ಲೇ 'ಚಿಗುರಿದ ಕನಸು'ವಿನಂತಹ ಅದ್ಭುತ ಚಿತ್ರದಲ್ಲಿ ಅದ್ಭುತ ನಾಯಕರಾದರು. ಜೋಗಿಯೆಂಬ ರೌಡಿ ಚಿತ್ರದೊಂದಿಗೆ ಮತ್ತೊಂದು ತವರಿನ ಕಥೆ! ಎರಡರಲ್ಲೂ ಹಿಟ್ ಆಗಿಬಿಟ್ಟರು. ಮತ್ತೆ ಹೆಸರಿಲ್ಲದಂತೆ flop. ಮತ್ತೆ ಬರುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳಿಗೆ ಇದ್ದೇ ಇರುತ್ತೆ.

ಇದುವರೆಗೂ ಒಂದು ವಿವಾದಕ್ಕೂ ಸಿಲುಕಿಕೊಳ್ಳದ ದಾಖಲೆ ಕೂಡ ಶಿವಣ್ಣರದು ಎಂಬುದು ಮತ್ತೊಂದು ಒಳ್ಳೆಯ ಸುದ್ದಿ. ರಾಜ್‍ಕುಮಾರ್ ಹಂಗಿಲ್ಲದೆ ಮೇಲೆ ಬಂದಿರುವುದು ಎಂದು ಅವರ ಅಭಿಮಾನಿಗಳು ಹೇಳಿದರೂ ಅನೇಕ ಕಡೆ ರಾಜ್‍ಕುಮಾರ್ influenceನ ನೋಡುತ್ತೇವೆ. ಆದರೂ ಜನರು ಹೇಳುವುದು, "ಅಪ್ಪನಷ್ಟು ಚೆನ್ನಾಗಿ ಕನ್ನಡ ಮಾತನಾಡುವುದಿಲ್ಲ ಬಿಡಿ, acting ಕೂಡ" ಎಂದು ಹೇಳುತ್ತಾರೆ. ಅದು ನಿಜವೂ ಕೂಡ. ಅದನ್ನು ಶಿವಣ್ಣರೂ ಒಪ್ಪಿಕೊಳ್ಳುತ್ತಾರೆ.
ಶಿವಣ್ಣರ ಹಳೆಯ ಹಾಡುಗಳು ಕೇಳುವುದು ಬಹಳ ಸೊಗಸಾಗಿರುತ್ತೆ. ರಥಸಪ್ತಮಿ, ಆನಂದ್, ರಣರಂಗ, ಶಿವ ಮೆಚ್ಚಿದ ಕಣ್ಣಪ್ಪ, ಅದೇ ರಾಗ ಅದೇ ಹಾಡು, ಸಂಯುಕ್ತ - ಆಹ್, ಎಂಥ ಸೊಗಸಾದ ಸಂಗೀತವುಳ್ಳ ಚಿತ್ರಗಳು.

ಶಿವಣ್ಣರಿಗೆ ನಲವತ್ತೇಳು ವರ್ಷ ಆಯಿತು. ಹುಟ್ಟುಹಬ್ಬದ ಶುಭಾಶಯಗಳು ಶಿವಣ್ಣ. ಅವರ ಹುಟ್ಟು ಹೆಸರು ಪುಟ್ಟ ಸ್ವಾಮಿಯಂತೆ, ಗೊತ್ತೇ ಇರಲಿಲ್ಲ.

Monday, July 7, 2008

ಅಲ್ಲಿಗೆ ಬಂದ ಪೆದ್ದ....

ಒಂದು ದಿನ ಪೆದ್ದನ ಹೆಂಡ್ತಿ ಲಾಡು ಮಾಡಿದ್ಲು
ಯಾರೂ ನೋಡಬಾರ್ದು ಅಂತ ಡಬ್ಬೀಲಿ ಮುಚ್ಚಿಟ್ಲು
ಅಲ್ಲಿಗೆ ಬಂದ ಪೆದ್ದ... ಬಗ್ಗಿ ನೋಡಿದ..
ಚೆಂಡು ಚೆಂಡು ಚೆಂಡು ಎಂದು ಆಟ ಆಡಿದ.

ಇವತ್ತು ನರ್ಸರಿ ಮಕ್ಕಳಿಗೆ ನಮ್ಮ 'ಇಂಗ್ಲೀಷ್' ಶಾಲೆಯಲ್ಲಿ ಹೇಳಿಕೊಡುತ್ತಿದ್ದರು. ಕೇಳಿಕೊಂಡು ಅರ್ಧ ಗಂಟೆ ಅವರ ಕ್ಲಾಸಿನಲ್ಲಿ ಕೂತಿದ್ದೆ.

ನರ್ಸರಿ, ಪ್ರೈಮರಿ ಶಾಲೆಯ ಟೀಚರುಗಳ ಕೆಲಸ ಬಹುಶಃ ಪ್ರಪಂಚದ ಎಲ್ಲಾ ಕೆಲಸಕ್ಕಿಂತಲೂ ಕಷ್ಟ ಮತ್ತು ಮುಖ್ಯ ಎಂದು ನನ್ನ ಅನಿಸಿಕೆ. ಮಕ್ಕಳು ಪ್ರತಿ ಹೆಜ್ಜೆಯನ್ನೂ, ಪ್ರತಿ ಚಲನವಲನವನ್ನೂ, ಪ್ರತಿ ಮಾತನ್ನೂ ಗಮನಿಸುತ್ತಲೇ ಇರುತ್ತಾರೆ. ಮನೆಗೆ ಹೋಗಿ ತಾವೂ ಟೀಚರಿನಂತೆ ನಟಿಸಿ, ಖಾಲಿ ಜಾಗದಲ್ಲೇ ಪಾಠ ಹೇಳುತ್ತಾರೆ, ಪನಿಷ್ಮೆಂಟೂ ಕೊಡತ್ತಾರೆ. ಗಂಡು ಮಕ್ಕಳಿಗೆ ಸಾಮಾನ್ಯವಾಗಿ ಡ್ರೈವರುಗಳಾಗಬೇಕೆನಿಸುತ್ತೆ. ಹೆಣ್ಣು ಮಕ್ಕಳಿಗೆ ಟೀಚರು! ನಮ್ಮ ಶಾಲೆಯಲ್ಲಿ ನಾನು ನಡೆಸಿದ ಸರ್ವೆ ಇದು! ಆದರೂ ಮಕ್ಕಳಿಗೆ ತಮ್ಮ ಟೀಚರು ಹೇಳಿದ್ದು ವೇದವಾಕ್ಯ.

ಇವತ್ತಿಗೂ ನನ್ನ ಪ್ರೈಮರಿ ಶಾಲೆಯ ಟೀಚರುಗಳು ಹೇಳಿಕೊಟ್ಟ ಪಾಠವೇ ನನಗೆ ಸರಿ. ಅವರು ತಪ್ಪು ಹೇಳಲು ಸಾಧ್ಯವೇ ಇಲ್ಲವೆಂಬ ನಂಬಿಕೆ.

ನಮ್ಮ ದೇಶದಲ್ಲಿ ಪ್ರೈಮರಿ ಶಾಲೆಯ ಟೀಚರಿಗೆ ಸಮಾಜದಲ್ಲಿ ಎಷ್ಟು ಬೆಲೆಯಿದೆಯೆಂದು ನೆನೆಸಿಕೊಂಡು ಬೇಸರವಾಯಿತು. ಲ್ಯಾಬಿಗೆ ಹೋದೆ. ಒಂದನೇ ಕ್ಲಾಸಿನ ಮಕ್ಕಳು ಸಿದ್ಧವಾಗಿದ್ದರು.

"Sir, my pencil is not choop. Can i choop it?" ಎಂದು ಮುದ್ದು ಮುದ್ದಾಗಿ ಕೇಳಿದ. ನಾನು ಅವನನ್ನು ಕಳಿಸದೆ ಇರಲು ಆಗಲೇ ಇಲ್ಲ. ತನಗಿರುವ ಅತಿಸಣ್ಣ vocabularyಯನ್ನು ಎಷ್ಟು ಸೊಗಸಾಗಿ ಬಳಸುತ್ತಿದ್ದಾನಲ್ಲಾ ಎಂಬ ಅಚ್ಚರಿ ಸಂತಸವೊಂದೆಡೆಯಾದರೆ, ಅವರ ಕನ್ನಡ ಪದಭಂಡಾರವನ್ನು ನೆನೆಸಿಕೊಂಡರೆ ವಿಪರ್ಯಾಸ ಭಾವನೆಯಿನ್ನೊಂದೆಡೆ.

ಹೈಸ್ಕೂಲಿಗೆ, ಕಾಲೇಜಿನ ಹುಡುಗರಿಗೆ ಪಾಠ ಮಾಡಲು ವಿಷಯ ತಿಳಿದುಕೊಂಡರೆ ಸಾಕು. ಪ್ರೈಮರಿ, ನರ್ಸರಿ ಮಕ್ಕಳಿಗೆ ಪಾಠ ಮಾಡುವವರು ಒಂದು ವ್ಯಕ್ತಿಯನ್ನು, ವ್ಯಕ್ತಿತ್ವವನ್ನೂ ನಿರ್ಮಿಸುವ ಕಲೆಯನ್ನು ಅರಿತಿರಬೇಕು. ಅಂಥವರು ಟೀಚರುಗಳಾಗಲಿ. ನಮ್ಮ ದೇಶದಲ್ಲಿ ಅಂಥವರು ಮನ್ನಣೆಯಾಗಲೀ, ಹಣವಾಗಲೀ ಬಯಸುವುದೂ ಅಪರಾಧ. ಬಹುಶಃ ಅದರ ಅವಶ್ಯವೂ ಅವರಿಗಿರುವುದಿಲ್ಲ. ಶ್ರೀ ಗುರುಭ್ಯೋ ನಮಃ.

-ಅ
07.07.2008
6.45PM

Saturday, June 28, 2008

ಆ ಒಂದು..

ನಮಸ್ಕಾರ ವೀಕ್ಷಕರೇ.. ಮಾರ್ನಿಂಗ್ ಕಾಫಿಗೆ ಸ್ವಾಗತ ಸುಸ್ವಾಗತ..

ಹಾಗೇನೇ, ಬೆಳಿಗ್ಗೆ ಎದ್ದು ಕಾಫಿ ಜೊತೆಗೆ ಒಂದು ಮಾಹಿತಿಗಳನ್ನು ತಿಳಿದುಕೊಳ್ಳುವ ಕಾರ್ಯಕ್ರಮ ನೋಡುವ ನಾವೆಲ್ಲಾ ಎಷ್ಟು ಭಾಗ್ಯವಂತರಲ್ಲವಾ? ನಾನಂತೂ ಭಾಗ್ಯವಂತ ಅಂತ ಎಲ್ಲೋ ಒಂದ್ ಕಡೆ ನನಗೆ ದಿನಾ ಅನ್ಸುತ್ತೆ.

ಮೇರಿ ಕ್ಯೂರಿ ಅವರ ಬಗ್ಗೆ ಮಾತಾಡ್ತಾ ಇದ್ದೆ. ಪಿಯರ್ ಕ್ಯೂರಿಗೂ ಮೇರಿ ಕ್ಯೂರಿಗೂ ಒಂದು ಗಾಢವಾದ ಪ್ರೇಮ ಮೂಡಿತ್ತು. ಆ ಒಂದು ಪ್ರಯೋಗಾಲಯದಲ್ಲಿ ಈ ಒಂದು ಪ್ರೇಮ ಪ್ರಸಂಗ ನಡೆದದ್ದೇ ರೇಡಿಯಮ್‍ನಂಥ ಒಂದು ಆವಿಷ್ಕಾರಕ್ಕೆ ಕಾರಣ ಅಂತ ಹೇಳ್ಬೋದು. ಮೇರಿ ಮತ್ತು ಪಿಯರ್ ಇಬ್ಬರೂ ಎಲ್ಲೋ ಒಂದ್ ಕಡೆ ಕಾಯಕವೇ ಕೈಲಾಸ ಅನ್ನೋ ಮಾತನ್ನು ಅರ್ಥ ಮಾಡ್ಕೊಂಡು ಕೆಲ್ಸ ಮಾಡ್ತಿದ್ರು. ಅವರ ಅಪ್ಪ ಮೇಷ್ಟ್ರು. ಮೇಷ್ಟ್ರಾಗಿದ್ದೂ ಆ ಒಂದು ಕಾಲದಲ್ಲಿ ಮೇರಿಗೆ ಒಳ್ಳೇ ಪ್ರೋತ್ಸಾಹ ಕೊಡೋಕೆ ಸಾಧ್ಯ ಆಗಿತ್ತು ಅಂತ ಹೇಳ್ದ್ರೆ ಅದು ತಪ್ಪಾಗಲಾರದು.

ಬನ್ನಿ ಈಗ ಒಂದು ಹಾಡು ನೋಡೋಣ.

ಬೆಳ್ಳಿ ಮೂಡಿತೋ ಕೋಳಿ ಕೂಗಿತೋ...
ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ.....


ಅಪ್ಪಾಜಿಯವರ ಒಂದು ಅಮೋಘ ಅಭಿನಯದ ಈ ಒಂದು ಹಾಡನ್ನು ನೋಡಿದೆವಲ್ಲಾ, ಬನ್ನಿ ಈಗ ಮೇರಿ ಕ್ಯೂರಿ ಬಗ್ಗೆ ಇನ್ನಷ್ಟು ತಿಳ್ಕೊಳೋಣ.

............................................................................

ಈ ಕಾರ್ಯಕ್ರಮ ಪ್ರತಿ ಬೆಳಿಗ್ಗೆ U2 ಅನ್ನೋ ಚಾನೆಲ್ ಅಲ್ಲಿ ಬರುತ್ತೆ. ನಾನಂತೂ ಈ "ಒಂದು" ಕಾರ್ಯಕ್ರಮವನ್ನು ತಪ್ಪಿಸೋದೇ ಇಲ್ಲ. ಬೆಳಗಾಗೆದ್ದು ಲಾಫಿಂಗ್ ಕ್ಲಬ್‍ಗಳಿಗೆ ಹೋಗುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ ಹಲವರು. ನಾನು ನನ್ನ ಲಾಫಿಂಗ್ ಕ್ಲಬ್ಬನ್ನು ಮನೆಯಲ್ಲೇ ಇಟ್ಟುಕೊಂಡಿದ್ದೇನೆ. ಅಮ್ಮನೂ ಇದಕ್ಕೆ ಸದಸ್ಯೆ. ಏಳಾದರೆ ಸಾಕು, "ಆ ಒಂದು ನೋಡಲ್ವೇನೋ?" ಅಂತಾರೆ!

ಶ್ರೀನಿಧಿಯ ಭಾಷೆಯಲ್ಲಿ ಹೇಳಬೇಕೆಂದರೆ ಇಂಥಾ ಚಾನೆಲ್ಲುಗಳ TRP ಹೆಚ್ಚಾಗುವುದೇ ನಮ್ಮಂಥವರಿಂದ.

-ಅ
28.06.2008
6.15PM

Wednesday, June 11, 2008

ಮಿಂ** ಚಾನೆಲ್

ಆತ್ಮೀಯ ಗೆಳೆಯರ ಗುಂಪೊಂದು ಹೊಸ ಯತ್ನ ಮಾಡಿ ಈಗಾಗಲೇ ಸಾಕಷ್ಟು ಯಶಸ್ಸನ್ನೂ ಗಳಿಸಿದೆ. ವಿಡಂಬನೆಯು ಇವರ ಉದ್ದಿಶ್ಯವೆಂದು ಮೇಲ್ನೋಟಕ್ಕೇ ಅರ್ಥ ಆಗಬಹುದು. ಆದರೆ ಹಾಸ್ಯಪ್ರಜ್ಞೆಯು ತನ್ನ ಉನ್ನತ ಶಿಖರವನ್ನು ತಲುಪಿದಾಗ ಇಂಥದೊಂದು ಹೊಸ ಹಾದಿಯು ಕಾಣಬರದಿರುವುದಿಲ್ಲ. ಬಹಳ ಉತ್ತಮವಾದ ಪ್ರಯತ್ನ. ಭೇಷ್ ಎಂದು ಚಪ್ಪಾಳೆ ತಟ್ಟಿ, ಬೆನ್ನು ತಟ್ಟುವುದಷ್ಟನ್ನು ಮಾತ್ರ ನಾನು ಈ ಕ್ಷಣದಲ್ಲಿ ಮಾಡಬಲ್ಲೆ. ಆದರೆ ಇದಕ್ಕಿಂತ ಹೆಚ್ಚು ಪ್ರಶಂಸೆ ಮಾಡಲು ಮನಸ್ಸಿದೆ. ಇದಕ್ಕಿಂತ ಹೆಚ್ಚು ಉಡುಗೊರೆ ಕೊಡಬೇಕೆನ್ನಿಸುತ್ತೆ. ಆದರೆ ಈ ಕ್ಷಣದಲ್ಲಿ ನಾನು ನಿಸ್ಸಹಾಯಕ.

ಈ ಗುಂಪಿನ ಹಾಸ್ಯಪ್ರಜ್ಞೆಯು ಚಿತ್ರರಂಗದವರ ಹಾಗೆ ಅನೈತಿಕವಾಗಿಲ್ಲ, 'ಪ್ರಸಿದ್ಧ' ಪತ್ರಕರ್ತರ ಹಾಗೆ ಚೀಪ್ ಆಗಿಲ್ಲ, ಹಳೆ ಕಾಲದವರಂತೆಯೂ ಇಲ್ಲ. ಇಲ್ಲಿ ಹೊಸತನವಿದೆ. ವ್ಯಂಗ್ಯವಿದೆ. ಜನರ ಜಗದ ಬಗ್ಗೆ ಯೋಚಿಸಲು ಪ್ರಚೋದಿಸುವ ಶಕ್ತಿಯಿದೆ. ವೆರಿ ಗುಡ್.

ಈ ಗುಂಪಿನಲ್ಲಿ ನಾನಿಲ್ಲವಲ್ಲವೆಂಬ ಒಂದು ಬೇಸರ ಬಿಟ್ಟರೆ ನನಗೆ ಇವರ ಬಗ್ಗೆ ಅತ್ಯಂತ ಹೆಮ್ಮೆಯಿದೆ. ಇನ್ನೂ ಒಳ್ಳೊಳ್ಳೇ 'ಶೋ'ಗಳ ನಿರೀಕ್ಷೆಯಿದೆ. ನಿರೀಕ್ಷೆಯು ಎಂದೂ ಸುಳ್ಳಾಗಲಾರದು ಎಂಬ ಭರವಸೆಯೂ ಇದೆ. ಆಲ್ ದಿ ಬೆಸ್ಟ್ ಕಣ್ರಪ್ಪಾ. ಬೆನ್ನು ತಟ್ಟಿ, ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಲು ನಾನು, ನನ್ನ ಹಾಗೆ ಹಲವರು ಇದ್ದೇವೆ. ನಿಮಗೆ ಒಳ್ಳೆಯದಾಗಲಿ.

ಈ ಇಡೀ ಲೇಖನಕ್ಕೆ ಆಧಾರ ಸ್ತಂಭವು ಇದು:

http://www.youtube.com/user/mindryin

-ಅ
12.06.2008
12.05AM

Saturday, June 7, 2008

ನನ್ನ ದನಿಗೆ ನಿನ್ನ ದನಿಯು - ಸೇರಿದಂತೆ ನಮ್ಮ ಧ್ವನಿಯುಹಿಂದಿ ಚಿತ್ರರಂಗದ ಮೊದಲ ಸಾರ್ವಭೌಮನಾಗಿ ಮೆರೆದ ಕುಂದನ್ ಲಾಲ್ ಸೈಗಲ್ ಕಾಲದಲ್ಲಿ ಈ ನಟರು ಬೇರೆ ಹಾಡುಗಾರರು ಬೇರೆ ಎಂಬ ಪರಿಕಲ್ಪನೆಯೇ ಇರಲಿಲ್ಲ. ಆತ ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಾಯಕನಾಗಿ, ಸಾಹಿತಿಯಾಗಿ, ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ ವರ್ಷಾನುಗಟ್ಟಲೆ ಬಾಲಿವುಡ್‍ನ ಆಳಿದ ಪ್ರಭಾವ ಹೇಗಿತ್ತೆಂದರೆ ಆ ಕಾಲದಲ್ಲಿ ಇನ್ನೂ ಚಿತ್ರರಂಗಕ್ಕೆ ಕಾಲಿಡುತ್ತಿದ್ದ, ಮುಂದೆ ಬೆಳೆದು ಲೆಜೆಂಡ್‍ಗಳಾದ ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಹೇಮಂತ್ ಕುಮಾರ್, ಇವರೆಲ್ಲರೂ ತಾವು ಸೈಗಲ್ ರೀತಿ ಹಾಡಬೇಕು ಎಂದೇ ತಮ್ಮ ಗುರಿಯಾಗಿಟ್ಟುಕೊಂಡಿದ್ದರು. ತನಗೆ ತಾನೇ ಹಾಡಿಕೊಳ್ಳುವ ಸಂಪ್ರದಾಯವನ್ನು ಆರಂಭಿಸಿದ್ದು ಮೊದಲು ಸೈಗಲ್ - ಬಾಲಿವುಡ್‍ನ ಪ್ರಪ್ರಥಮ ಸೂಪರ್ ಸ್ಟಾರ್.ನಂತರದ ದಿನಗಳಲ್ಲಿ ಪ್ಲೇಬ್ಯಾಕ್ ಸಿಂಗಿಂಗ್ ಶುರುವಾಯಿತು. ಬಹಳ ಜನಕ್ಕೆ ಗೊತ್ತಿಲ್ಲ, ಕಿಶೋರ್ ಕುಮಾರ್‍ ಎಂಬ ಮಹಾನ್ ಗಾಯಕನ ಆರಂಭದ ದಿನಗಳಲ್ಲಿ ಅವನಿಗೆ ಮೊಹಮ್ಮದ್ ರಫಿ ಹಾಡುತ್ತಿದ್ದ. ನಮ್ಮಲ್ಲಿ ರಾಜ್‍ಕುಮಾರ್‍ರಂಥ ಅಪ್ರತಿಮ ಗಾಯಕರಿಗೂ ಹಿಂದೆ ಪ್ಲೇಬ್ಯಾಕ್ ಸಿಂಗರುಗಳಿರಲಿಲ್ಲವೇ? ಹಾಗೆಯೇ ರಫಿಯು ನಟ ಕಿಶೋರ್ ಕುಮಾರ್‍ಗೆ ಹಾಡುತ್ತಿದ್ದ. ಮುಂದೆ ಕಿಶೋರ್ ಕುಮಾರ್ ತಾನೇ ಹಾಡಿಕೊಳ್ಳಲು ಶುರು ಮಾಡಿದ. ಮೊಹಮ್ಮದ್ ರಫಿಯ ಧ್ವನಿ ಆಗ ಹೇಳಿ ಮಾಡಿಸಿದಂತೆ ಕುಳಿತಿದ್ದು ದೇವ್ ಆನಂದ್ ಎಂಬ ಹುಡುಗನ ಮುಖಕ್ಕೆ.ಹೇಮಂತ್ ಕುಮಾರ್ ಮತ್ತು ಎಸ್.ಡಿ. ಬರ್ಮನ್ ಸಂಗೀತ ನಿರ್ದೇಶನದಲ್ಲಿ ದೇವ್ ರಫಿ ಜೋಡಿಯಲ್ಲಿ ಬೇಕಾದಷ್ಟು ಹಾಡುಗಳು ಜನರ ಮನಸೆಳೆದವು. ಈ ಕಾಲದಲ್ಲಿ ಕಿಶೋರ್ ಕುಮಾರ್ ಹಾಡುತ್ತಿದ್ದ, ಆದರೆ ತನ್ನ ನಟನೆಯಿರುವ ಚಿತ್ರದಲ್ಲಿ ಮಾತ್ರ. ಬೇರೆ ಯಾರ ಅಭಿನಯದಲ್ಲೂ ಅಷ್ಟು ಹುಚ್ಚುತನವಿರಲಿಲ್ಲ.ಕಿಶೋರ್ ಕುಮಾರ್ ಬೇರೆ ನಟರಿಗೆ ಹಾಡಲು ಆರಂಭಿಸಿದ ದಿನದಿಂದಲೇ ರಫಿಗೆ ಒಬ್ಬ ನಿಜವಾದ ಸ್ಪರ್ಧಿಯಾಗಿದ್ದ. ಆದರೂ ಜನ ಇಬ್ಬರನ್ನೂ ಅಷ್ಟೇ ಆದರ ಮತ್ತು ಪ್ರೀತಿಯಿಂದ ಸ್ವೀಕರಿಸಿದರು. ಮುಂದೆ ಎಪ್ಪತ್ತರ ದಶಕದಲ್ಲಿ ಇಬ್ಬರ ಸ್ಪರ್ಧೆ ಬಹಳ ಎತ್ತರಕ್ಕೆ ಹೋಯಿತು. ಎಷ್ಟೆಂದರೆ ಒಂದೇ ಚಿತ್ರದಲ್ಲಿ ಒಂದೇ ಹಾಡನ್ನು ಇಬ್ಬರೂ ಹಾಡಿದ್ದು ಎಷ್ಟೋ ಉದಾಹರಣೆಗಳಿವೆ.

Tum bin jaaoon kahaan...
ದೇವ್ ಆನಂದ್ ಮತ್ತು ಕಿಶೋರ್ ಕುಮಾರ್ ತುಂಬಾ ಹತ್ತಿರದ ಗೆಳೆಯರೆಂದು ದೇವ್ ಆನಂದನು ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾನೆ. ರಫಿಯಾದರೋ ಹಿರಿಯ ಗಾಯಕ. ಮೇಷ್ಟ್ರಿದ್ದ ಹಾಗೆ. ಅಷ್ಟು ಸಲಿಗೆಯಿಲ್ಲ. ದೇವ್ ಆನಂದ್ ಅಭಿನಯಕ್ಕೆ ಕಿಶೋರ್ ಧ್ವನಿ ಹೆಚ್ಚು ಹೆಚ್ಚು ಕೂಡಿತು. ಬಹಳ ಪ್ರಸಿದ್ಧಿಯನ್ನೂ ಸಹ ಪಡೆಯಿತು, ದೇವ್-ಕಿಶೋರ್ ಜೋಡಿ. ಆಗ ರಫಿಯ ಧ್ವನಿ ಹೋಗಿ ಸೇರಿಕೊಂಡಿದ್ದು ಶಮ್ಮಿ ಕಪೂರ್‍ನನ್ನು! ಈಗಲೂ ರಫಿಯ ಹಾಡುಗಳನ್ನು ಕೇಳಿದರೆ ರಫಿಯ ಮುಖ ನೆನಪಾಗುವುದೇ ಇಲ್ಲ, ಶಮ್ಮಿ ಕಪೂರ್ ಮುಖವೇ ನೆನಪಾಗುತ್ತೆ. ಅಷ್ಟರ ಮಟ್ಟಿಗೆ ಇವರಿಬ್ಬರ ಜೋಡಿ ಪ್ರಭಾವ ಬೀರಿದೆ. ಶಮ್ಮಿ ನಟಿಸುವುದನ್ನು ಬಿಟ್ಟು ಕಾವಿ ತೊಡುವ ದಿನದವರೆಗೂ ಇವರಿಬ್ಬರ ಜೋಡಿಯನ್ನು ಎಲ್ಲರೂ ಕೊಂಡಾಡಿದರು.ದಿನಗಳುರುಳಿದಂತೆ ಎವರ್ ಗ್ರೀನ್ ಹೀರೋ ದೇವ್ ಆನಂದ್‍ನನ್ನು ಮೀರಿಸಿದ, ಮತ್ತು ಅಂದಿನಿಂದ ಇಂದಿನವರೆಗೂ ಯಾರೂ ಅಷ್ಟು ಮೆರೆಯಲು ಸಾಧ್ಯವೇ ಆಗಲಿಲ್ಲವೆಂಬ ನಟ ಪರದೆಯ ಮೇಲೆ ಬಂದ. ಈಗಿನ ಶಾಹ್‍ರುಖ್ ಆಗಲೀ, ಬಚ್ಚನ್ ಆಗಲೀ ಇಷ್ಟು ಮೆರೆದಿರಲು ಸಾಧ್ಯವೇ ಇಲ್ಲ. ಚೆಲುವ ಕೂಡ. ಆತ ರಾಜೇಶ್ ಖನ್ನಾ ಅಲ್ಲದೆ ಬೇರೆ ಯಾರೂ ಆಗಿರುವುದಕ್ಕೆ ಸಾಧ್ಯವಿಲ್ಲ. ರಾಜೇಶ್ ಖನ್ನಾ ಕಾಲದಲ್ಲಿ ಚಿತ್ರಕಥೆಗಳು ಎಷ್ಟು ಮಧುರಮಯವಾಗಿತ್ತೋ ಸಂಗೀತ ನಿರ್ದೇಶನ ಕೂಡ ಹಾಗೇ ಇತ್ತು. ಹಾಡು ಬರೆಯುವವರೂ ಕೂಡ ಅಷ್ಟೇ ಪರಿಣತರಾಗಿದ್ದರು. ಎಸ್.ಡಿ. ಬರ್ಮನ್, ಆರ್.ಡಿ. ಬರ್ಮನ್, ಶಂಕರ್ ಜೈಕಿಶನ್, ಓ.ಪಿ.ನಯ್ಯರ್ - ಇಂಥಾ ಘಟಾನುಘಟಿಗಳು ತಮ್ಮ ಉನ್ನತ ಶಿಖರದಲ್ಲಿದ್ದ ಕಾಲದಲ್ಲಿ ರಾಜೇಶ್ ಖನ್ನಾ ಮತ್ತು ಕಿಶೊರ್ ಧ್ವನಿ ಎರಡೂ ಒಂದೇ ಎಂದು ಭಾಸವಾಗುವಂತಾಯಿತು.ಇವೆಲ್ಲಾ ಚಿತ್ರರಂಗದ ಒಂದು ದಿಕ್ಕಿನಲ್ಲಿ ಸಾಗುತ್ತಿದ್ದರೆ, ಇನ್ನೊಂದು ದಿಕ್ಕಿನಲ್ಲಿ ಈ ಯಾರ ಹಂಗೂ ಇಲ್ಲದೆ ಮೊದಲಿಂದ ಕೊನೆಯವರೆಗೂ, ಇಪ್ಪತ್ತೈದು ವರ್ಷಗಳೂ ಒಟ್ಟಿಗೆ ಇದ್ದ ಜೋಡಿಯೊಂದು ಎಲ್ಲರ ಮನಸೂರೆಗೊಂಡಿತ್ತು. ರಾಜ್ ಕಪೂರ್ ಮತ್ತು ಮುಖೇಶ್ ಜೋಡಿಯನ್ನು ಯಾರು ತಾನೇ ಮರೆಯಲಾದೀತು? ರಾಜ್ ಕಪೂರನೇ ಹೇಳಿದಂತೆ, "ನಾನು ಇಲ್ಲಿದ್ದೇನಷ್ಟೆ. ನನ್ನ ಧ್ವನಿ ಅಲ್ಲಿ ನಿಂತಿದೆ ನೋಡಿ..." ಮುಖೇಶನು ಬದುಕಿರುವವರೆಗೂ ರಾಜ್‍ಕಪೂರ್‍ಗೆ ಧ್ವನಿಯಾಗಿದ್ದ. ಇವರಿಗೆ ದಾರಿದೀಪವಾಗಿ ಶಂಕರ್ ಜೈಕಿಶನ್ ಸದಾ ಇರುತ್ತಿದ್ದರು.ರಾಜೇಶ್ ಖನ್ನಾ ಕಾಲ ಮುಗಿದಿದ್ದು ಎಪ್ಪತ್ತರ ದಶಕದ ಅಂತ್ಯದಲ್ಲಿ. ಆಗ ಕಿಶೋರ್ ಕುಮಾರ್ ಧ್ವನಿಯು ರಾಜೇಶ್ ಖನ್ನಾ‍ನಿಂದ ಅಮಿತಾಭ್ ಬಚ್ಚನ್‍ಗೆ ವರ್ಗವಾಯಿತು. ಎಸ್.ಡಿ. ಬರ್ಮನ್ ಸತ್ತು ಹೋಗಿದ್ದ. ಹೇಮಂತ್ ಕುಮಾರ್, ಓ.ಪಿ.ನಯ್ಯರ್ ಎಲ್ಲಾ ನಿವೃತ್ತರಾಗಿದ್ದರು. ಆರ್.ಡಿ. ಬರ್ಮನ್ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದ. ಮೊಹಮ್ಮದ್ ರಫಿ, ಮನ್ನಾ ಡೇ, ಅಂಥವರೇ ಅವಕಾಶಗಳಿಗೆ ಪರದಾಡುತ್ತಿದ್ದರು. ಬಪ್ಪಿ ಲಹರಿಯಂಥವರು ಮೆರೆಯಲೂ ಶುರು ಮಾಡಿದರು. ಅರವತ್ತನೆಯ ಇಸವಿಯ ಕಿಶೋರನ ಹಾಡುಗಳಿಗೂ ಎಂಭತ್ತರ ದಶಕದ ಕಿಶೋರನದೇ ಹಾಡುಗಳಿಗೂ ಅಜಗಜಾಂತರ! ಹುಚ್ಚು ಹುಚ್ಚಾಗಿ ಹಾಡುವುದನ್ನು ಕಿಶೋರ್ ರಾಜೇಶ್ ಖನ್ನಾ era ಮುಗಿಯುವ ಕಾಲಕ್ಕೇ ಬಿಟ್ಟು ಬಿಟ್ಟಿದ್ದ. ಗಂಭೀರವಾದ ಹಾಡುಗಳು ಅವನ ಪಾಲಿಗಾಗಿತ್ತು. ಅಮಿತಾಭ್ ಬಚ್ಚನ್‍ಗೆ ಕಿಶೋರನ ಧ್ವನಿ ಹೇಳಿ ಮಾಡಿಸಲಾಗಿತ್ತು. ಕಿಶೋರ್ ಕುಮಾರ್ ಇರುವವರೆಗೂ ಬೇರೆ ಗಾಯಕರು ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಳ್ಲಲಾಗಲಿಲ್ಲ. ಇಂದಿಗೂ ಅಮಿತಾಭ್ ಬಚ್ಚನ್‍ಗೆ ಕಿಶೋರನ ಧ್ವನಿಯಷ್ಟು ಚೆನ್ನಾಗಿ ಬೇರೆ ಧ್ವನಿ ಹೋಲಿಕೆಯೇ ಆಗುವುದಿಲ್ಲವೆಂಬುದು ಸತ್ಯವಷ್ಟೆ.ಲತಾ ಮಂಗೇಶ್ಕರ್ ಮತ್ತು ಆಶಾ ಭೋನ್ಸ್ಲೇ ಮಾತ್ರ ಈ ರೀತಿ ಯಾವುವೇ ಛಾಪುಗಳನ್ನು ನಟಿಯರೊಡನೆ ಸ್ಥಾಪಿಸಿಕೊಳ್ಳಲಿಲ್ಲ. ಅವರಿಬ್ಬರದು ಸಾರ್ವಭೌಮತನವಿದ್ದ ಹಾಗೆ. ನಲವತ್ತನೆಯ, ಐವತ್ತನೆಯ, ಅರವತ್ತನೆಯ, ಮತ್ತು ಎಪ್ಪತ್ತನೆಯ ಕೊನೆಗೆ ಎಂಭತ್ತರ ದಶಕವನ್ನೂ ಸೇರಿಸಿ ಎಲ್ಲಾ ನಟಿಯರಿಗೂ ಈ ಇಬ್ಬರೂ ಗಾಯಕಿಯರು ಹಾಡಿದ್ದಾರೆ. ಜೊತೆಗೆ ಇವರಿಗೆ ಸ್ಪರ್ಧಿಯಾಗಿದ್ದ ಸುರಯ್ಯಾ, ಗೀತಾ ದತ್ ಅಂಥವರನ್ನು ಸೋಲಿಸಿ, ಹೊಸ ಗಾಯಕಿಯರೂ ಸಹ ಚಿತ್ರರಂಗಕ್ಕೆ ಕಾಲಿಡಲು ಅಂಜುವಂತೆ ಮಾಡಿದ್ದ ಕೀರ್ತಿ ಇವರಿಬ್ಬರಿಗೆ ಸಲ್ಲುತ್ತೆ.ಅರವತ್ತರ ನಂತರ ಸುಮಾರು ಮೂವತ್ತು ವರ್ಷ ಇವರಿಬ್ಬರೆದುರು ನಿಲ್ಲುವವರೂ ಇರಲಿಲ್ಲ. ಹೆಣ್ಣು ಧ್ವನಿಯೆಂದರೆ ಅದು ಲತಾ ಆಗಿರಬೇಕು ಇಲ್ಲವೇ ಆಶಾ ಆಗಿರಬೇಕಷ್ಟೆ. ಇವರಿಬ್ಬರಿಗೂ ತೀರ ವಯಸ್ಸಾದ ಮೇಲೆಯೇ ಕವಿತಾ ಕೃಷ್ಣಮೂರ್ತಿಯಾಗಲೀ ಅಲ್ಕಾ ಯಾಗ್ನಿಕ್ ಆಗಲೀ ಹಾಡಲು ಬಂದಿದ್ದು, ಹೆಸರು ಗಳಿಸಿದ್ದು.ಕಿಶೋರ್ ಕುಮಾರ್ ಸತ್ತ ನಂತರ ಬಂದ ಗಾಯಕರ ಬಗ್ಗೆ ಅಷ್ಟೇನೂ ಆಸಕ್ತಿಯಿಲ್ಲ ನನಗೆ. ಉದಿತ್ ನಾರಾಯಣ್ ಆಮೀರ್ ಖಾನ್ ಜೋಡಿ ಕೆಲಕಾಲ ಪ್ರಸಿದ್ಧವಾಗಿತ್ತಾದರೂ ಆ ಮಟ್ಟದಲ್ಲಿ ಹೆಸರು ಮಾಡಲಿಲ್ಲ. ಸಲ್ಮಾನ್ ಖಾನ್ (ಈ ಹೆಸರು ಬರೆಯಲು ನನಗೆ ಮನಸ್ಸಿಲ್ಲ, ಆದರೂ ಬರೆದೆ) ಕೂಡ ಎಸ್.ಪಿ.ಬಾಲಸುಬ್ರಮಣ್ಯಂ ಧ್ವನಿಗೆ ಅಭಿನಯವನ್ನು ಹೊಂದಿಸಿಕೊಂಡುಬಿಟ್ಟಿದ್ದ. ಶಾಹ್‍ರುಖ್ ಖಾನನು ಕುಮಾರ್ ಸಾನು ಮತ್ತು ಅಭಿಜಿತ್‍ರ ಧ್ವನಿಗೆ ತನ್ನ ಅಭಿನಯವನ್ನು ಟ್ಯೂನ್ ಮಾಡಿಕೊಂಡಿದ್ದ. ಇವೆಲ್ಲಾ ಯಾವುದೂ ಅಂಥ ಹೇಳಿಕೊಳ್ಳುವಂಥದ್ದೇನಲ್ಲ ಅನ್ನಿಸುತ್ತೆ ನನಗೆ. ಅಲ್ಪಾಯುಷಿಗಳೆನಿಸುತ್ತೆ.
ಬೆಳಿಗ್ಗೆಯಿಂದ ಹಳೆಯ ಹಾಡನ್ನು ಕೇಳುತ್ತಿದ್ದ ನನಗೆ ಎಲ್ಲಾ ಗಾಯಕರುಗಳಿಗೂ, ನಟ ನಟಿಯರಿಗೂ ಒಂದು ನಮನ ಸಲ್ಲಿಸಬೇಕೆನಿಸಿತು. ಅದಕ್ಕಾಗಿ ಬರೆದನಷ್ಟೆ. ಇಲ್ಲಿ ಎಲ್ಲರನ್ನೂ ಏಕವಚನದಲ್ಲಿ ಹೆಸರಿಸಿರುವುದು ಅವರುಗಳ ಮೇಲಿನ ಪ್ರೀತಿಯಿಂದಷ್ಟೆ, ಅಗೌರವದಿಂದಲ್ಲ. ಅವರುಗಳ ಹಾಡುಗಳೆಲ್ಲವೂ ಮನದೊಳಗೆ ಮನೆ ಮಾಡಿಬಿಟ್ಟಿವೆ. ಜಗತ್ತಿಗೆ, ಜನಕ್ಕೆ, ನನ್ನಂಥವರಿಗೆ ಬೆಲೆಕಟ್ಟಲಾರದ ಉಡುಗೊರೆಯನ್ನು ಅಂದಿನವರು ಕೊಟ್ಟಿದ್ದಾರೆ. ಎಲ್ಲರಿಗೂ ಚಿರಋಣಿ. ಈ ಬರಹವು ಎಲ್ಲ ಕಲಾವಿದರಿಗೂ ಅರ್ಪಿತವಾಗಿದೆ.

-ಅ
07.06.2008
11.25AM