Thursday, January 31, 2008

ವಿರಹ ಮರಣಚುಕ್ಕಿ ಮಿನುಗೆ ಹಕ್ಕಿ ಗುನುಗೆ
ನಿನ್ನ ರೂಪವೆದೆಯಲಿ
ನಕ್ಕು ನಲಿಯೆ ಬಿಕ್ಕು ಹಳಿಯೆ
ನಿನ್ನ ಸ್ಪರ್ಶ ಸ್ಮೃತಿಯಲಿ.

ಇರುಳು ಹದದ ಶೃತಿಯ ವೀಣೆ
ಸುಧೆಯ ಹರಿಸಿದೆ ಬಾನಲಿ
ರಾಗದಿಂದಲೆ ನಿನ್ನ ಆಣೆ
ಚಿಗುರು ಹಸುರೆದೆ ಕಾನಲಿ.

ನಿನ್ನ ನೋಟವದಕೆ ತನಿಯು
ಮೇಳ ಮೆರೆಸಿದೆ ತನುವಲಿ
ಎನ್ನ ಹೃದಯವದಕೆ ದನಿಯು
ಬಾಳ ಧರಿಸಿದೆ ಧನುವಲಿ.

ಬೆಳಕ ಕಿರಣದಿ ಜಳಕ ದೇಹ
ಪುಳಕ ಮನವು ನಿನ್ನೊಲವ ನೇಹ
ಕೊರೆವ ಚಳಿಯಲಿ 'ಕಾದ' ಹರಣ
ನಿನ್ನ ಬಳಿಯಲೆ ವಿರಹ ಮರಣ.

-ಅ
31.01.2008
10PM

Wednesday, January 30, 2008

ಇನ್ಯಾವತ್ತಾದ್ರೂ...

ಹುಡುಕಿದ್ದೆ.
ಮುಂದೆಂದಾರೂ ತೆರೆದಿಡುವೆ
ಆ ಪುಟಗಳನ್ನು.

ಸಿಡುಕಿದ್ದೆ.
ನಾಳೆಯೊಂದು ದಿನ ತಿಳಿಸುವೆ
ಸಿಟ್ಟೇಕೆಂದು.

ಮೋಸಗೊಳಿಸಲಾರೆ ನನಗೆ ನಾನು
ದೈವನಿಹನಲ್ಲವೆ ಎನ್ನೊಳಗೆ?
ದುಡುಕಿದ್ದೆ.
ಇನ್ಯಾವತ್ತಾದರೂ ಬಿತ್ತರಿಸುವೆ
ಏನಾಯಿತೆಂದು.

-ಅ
30.01.2008
11PM

Wednesday, January 9, 2008

ಮುಖೇಶ್ ಹಾಡು

ಅಮರ ಪ್ರೇಮಿ..

Dil Ko Teri Hi Tamanna
Dil Ko Hai Tujhse Hi Pyar
Chahe Tu Aaye Na Aaye
Hum Karenge Intezar..

ಎನ್ನೆದೆಗೆ ನಿನ್ನೆದೆಯದೊಂದೇ ತವಕವು
ಇಹುದೊಂದೇ ನಿನ್ನೆಡೆಗಿನೊಲವು
ಬಂದರೂ ಬಾರದಿದ್ದರೂ ನೀನು ನಿನಗಾಗಿ
ನಿರಂತರವಾಗಿ ಕಾಯಲಿಹುದೆನಗೆ ದೃಢ ಛಲವು!

-ಅ
09.01.2008
11.40PM

Monday, January 7, 2008

ನಿಮಗೇಕೆ ಕೊಡಬೇಕು ಕಪ್ಪ..

ಈ ವಿಷಯದ ಬಗ್ಗೆ ನೆನಪು ಮಾಡಿದ ಈಟಿವಿಗೆ ಥ್ಯಾಂಕ್ಸ್.

ಇಂದು ಬಿ.ಸರೋಜಾ ದೇವಿಯವರ ಹುಟ್ಟು ಹಬ್ಬ ಅಂತೆ. ಶುಭಾಶಯಗಳು.1955ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ಹೊನ್ನಪ್ಪ ಭಾಗವತರ್ ಆಗ ಕನ್ನಡದ ಸೂಪರ್ ಸ್ಟಾರ್ ಆಗಿದ್ದರು. ಅವರ 'ಮಹಾಕವಿ ಕಾಳಿದಾಸ'ದಲ್ಲಿ ಇವರು ಮೊದಲು ತೆರೆ ಮೇಲೆ ಕಂಡರು. ಹೀಗೆ ಪೌರಾಣಿಕ ಪಾತ್ರಗಳಲ್ಲಿ ಪರಿಣತಿ ಹೊಂದಿದರು.

ಸರೋಜಾದೇವಿಯೆಂದೊಡನೆ ಕನ್ನಡದ ಚಿತ್ರರಸಿಕರಿಗೆ ನೆನಪಾಗೋದು ಮೊದಲಿಗೆ ಕಿತ್ತೂರು ಚೆನ್ನಮ್ಮ ಚಿತ್ರ. ಅದರಲ್ಲಿ ಅವರ ಅಮೋಘವಾದ ಡೈಲಾಗು. "ಕಪ್ಪ.. ನಿಮಗೇಕೆ ಕೊಡಬೇಕು ಕಪ್ಪ... ನೀವೇನು ನಮ್ಮನ್ನು ಹೆತ್ತವರೇ, ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ.. ನಿಮಗೇಕೆ ಕೊಡಬೇಕು ಕಪ್ಪ.. ನೀವೇನು ಉತ್ತಿರೇ ಬಿತ್ತಿರೇ.. ನಿಮಗೇಕೆ ಕೊಡಬೇಕು ಕಪ್ಪ.." ವಿಭೂತಿ ಬಳಿದುಕೊಂಡ ವೀರ ಮಹಿಳೆಯ ತದ್ರೂಪಿ ಸರೋಜಾದೇವಿ ಚೆನ್ನಮ್ಮನಾಗಿಯೇ ಹೆಸರುವಾಸಿಯಾದಂತಿತ್ತು. ಈ ಡೈಲಾಗು ಈಗಲೂ ಶಾಲೆಗಳಲ್ಲಿ ಮಕ್ಕಳು ಚೆನ್ನಮ್ಮನ ಪಾತ್ರ ಮಾಡುವಾಗ ಹೇಳುತ್ತಾರೆ.

ಸರೋಜಾದೇವಿಯವರ ಇನ್ನೊಂದು ಚಿತ್ರ ಥಟ್ ಅಂತ ಕನ್ನಡಿಗನ ಮನಸ್ಸಿಗೆ ಬರುವುದು ಭಾಗ್ಯವಂತರು. ಸ್ವಲ್ಪ ಅತಿನಟನೆ ಎಂದು ಈ ಕಾಲದವರಿಗೆ ಅನ್ನಿಸದೇ ಇರುವುದಿಲ್ಲ. ಆದರೂ ಆ ಕಾಲಕ್ಕೆ ಅದು ಅತ್ಯಂತ ಯಶಸ್ವಿಯಾಗಲು ರಾಜ್ ಜೊತೆಗೆ ಸರೋಜಾದೇವಿಯೂ ಕಾರಣ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು.

ನಿನ್ನ ನನ್ನ ಮನವು ಸೇರಿತು..
ನನ್ನ ನಿನ್ನ ಹೃದಯ ಹಾಡಿತು..ಈ ಹಾಡನ್ನು ಯಾರು ತಾನೇ ಮರೆಯಲಾದೀತು!

ನನಗೆ ಸರೋಜಾದೇವಿಯ ಇನ್ನೊಂದು ಹಾಡು ಬಹಳ ಇಷ್ಟ. ಹಿಂದಿ ಹಾಡು.. ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದೆ..

Teri Pyari Pyari Surat Ko
Kisi Ki Nazar Na Lage
Chashme Baddur...-ಅ
07.01.2008
8.45PM

Sunday, January 6, 2008

ಕಾಣೆಯಾದವರ ಬಗ್ಗೆ ಪ್ರಕಟಣೆ..

ಈ ಚಿತ್ರದಲ್ಲಿ ಕಾಣಿಸುತ್ತಿರುವವಳ ಹೆಸರು ದೀಪ್ತಿ.. ಎರಡು ತಿಂಗಳಿಂದ 'ಸಂಘ'ದಿಂದ ಕಾಣೆಯಾಗಿದ್ದಾಳೆ. ತಕ್ಕಮಟ್ಟಿಗೆ ಕೋಲು ಮುಖ, ಸಾಯಿ ಬಾಬಾ ಕೇಶವಿನ್ಯಾಸ, ಕುಳ್ಳು ಶರೀರ, ನೇರ ಶಾರೀರ! ಈಗ್ಗೆ ಕೆಲ ತಿಂಗಳ ಕೆಳಗೆ ಅಮೆರಿಕೆಗೆ ಅಂತ ಹೋದವಳು ಈಮೈಲ್‍ನಲ್ಲಿ ಆಗಲೀ, ಫೋನ್‍ನಲ್ಲಿ ಆಗಲೀ, ಮೆಸೆಂಜರಿನಲ್ಲಾಗಲೀ ಪತ್ತೆ ಇಲ್ಲ. ಈಕೆ ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯನ್ನು ಸರಾಗವಾಗಿ ಮಾತನಾಡಬಲ್ಲಳು. ಇವಳ ಸುಳಿವು ಸಿಕ್ಕಲ್ಲಿ ತಕ್ಷಣ ತಿಳಿಸುವುದು.ಸುನಿಲ ಎಂಬ ಯುವಕ ಬೆಂಗಳೂರಿನ 'ಶ್ರೀನಗರ'ದಿಂದ ಕಾಣೆಯಾಗಿದ್ದಾನೆ. ಗುಂಡು ಮುಖ, ಗೋದಿ ಮೈಬಣ್ಣ, ಗಡುಸು ಧ್ವನಿ, ಮಾನಸಿಕವಾಗಿ ಸಂಪೂರ್ಣ ಸ್ವಸ್ಥ. ಈತ ಕನ್ನಡ, ಕೊಂಕಣಿ ಹಾಗೂ ಹಿಂದಿ ಭಾಷೆಯನ್ನು ಮಾತನಾಡಬಲ್ಲ. ಶ್ರೀನಗರದ ತಂಡದಲ್ಲಿ ಗೂಢಾಚಾರರಿಗೆ, ಚಾಡಿಕೋರರಿಗೆ, ಅಸೂಯಾರಸರಿಗೆ, ಪರರ ವಯಕ್ತಿಕ ಸಂಗತಿಗೆ ನುಗ್ಗುವವರಿಗೆ ಏನೂ ಕಡಿಮೆಯಿರದಿದ್ದರೂ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲದ ಸುನಿಲ ಎಲ್ಲರಿಗೂ ಆತಂಕ ಮೂಡಿಸಿದ್ದಾನೆ. ಇವನ ಸುಳಿವು ಸಿಕ್ಕಲ್ಲಿ ನಮ್ಮದೊಂದು ಹಲೋ ಹೇಳುವುದು.ಶಿಲ್ಪಾ ಎಂಬ ಹುಡುಗಿಯು 'ಹರಟೆ ಕಟ್ಟೆ'ಯಿಂದ ಸುಮಾರು ಒಂದು ವರ್ಷದಿಂದ ಕಾಣೆಯಾಗಿದ್ದಾಳೆ. ಶ್ವೇತವರ್ಣ, ಗುಂಡು ಮುಖವಿದ್ದು, ಕೊಂಕಣಿ, ಬಂಗಾಳಿ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯನ್ನು ಮಾತನಾಡಬಲ್ಲಳು. ಕನ್ನಡ ಭಾಷೆಯಲ್ಲಿ ಪ್ರವೀಣತೆಯನ್ನು ಹೊಂದಿರುವುದರಿಂದ ಕನ್ನಡ ಮಾತನಾಡುವುದು ವಿರಳ. ಈಕೆ ಪ್ಯಾಂಟ್-ಶರ್ಟ್ ಧರಿಸುತ್ತಾಳೆ. ದ್ವಿಚಕ್ರವಾಹನವನ್ನು ಚಲಿಸಬಲ್ಲಳು. ಸುಳಿವು ಸಿಕ್ಕಲ್ಲಿ ಕೂಡಲೇ 'ಹರಟೆ ಕಟ್ಟೆ'ಗೆ ತಿಳಿಸುವುದು.
ಈ ಮೇಲ್ಕಂಡವರ ಸುಳಿವು ಸಿಕ್ಕಲ್ಲಿ ಕೂಡಲೇ ತಿಳಿಸಬೇಕಾದ ವಿಳಾಸ
ಪೋಲಿಸ್ ಇನ್ಸ್ಪೆಕ್ಟರ್
ಪೋಲಿಸ್ ಕಂಟ್ರೋಲ್ ರೂಮ್
ಬೆಂಗಳೂರು - ೦೧

ಅಥವಾ

ಖ್ಯಾತ ಅಬ್ಸ್ಕಾಂಡಿಂಗ್ ತಜ್ಞ ಡಾ||ಪರಿಸರಪ್ರೇಮಿಯವರನ್ನು ಭೇಟಿಯಾಗಬಹುದು.

ಮುಂದಿನ ಕಾರ್ಯಕ್ರಮ - ಕನ್ನಡ ಚಿತ್ರಮಂಜರಿ, ಪ್ರಾಯೋಜಕರು ಡಾಬರ್!!

-ಅ
06.01.2008
11.05PM

Friday, January 4, 2008

ನೆನಪು - ಹರಕೆ

ರಾಹುಲ್ ದ್ರಾವಿಡ್ ಕೊನೆಗೂ ಅರ್ಧ ಶತಕ ಹೊಡೆದು ತಾನು ಕ್ರಿಕೆಟ್ಟಿಗೇ ಸೇರಿದವನೆಂದು ನಿರೂಪಿಸಲೆತ್ನಿಸಿದ. ಸಚ್ಚಿನ್ ತೆಂಡೂಲ್ಕರ್ ಕೊನೆಗೂ ಶತಕ ಪೂರೈಸಿ ತನಗೆಂದೇ ಶತಕಗಳಿರೋದು ಎಂದು ನಿರೂಪಿಸಿದ. ಇಬ್ಬರಿಗೂ ಒಳ್ಳೇದಾಗಲಿ ಅಂತ ಹರಸುವೆ.ಆರ್.ಡಿ. ಬರ್ಮನ್ (ಪಂಚಮ್ ದಾ) ಎಂಬ ಲೆಜೆಂಡ್ ಸಂಗೀತ ನಿರ್ದೇಶಕ ಐವತ್ತು ವರ್ಷಗಳ ಕಾಲ ಬಾಲಿವುಡ್ಡಿಗೆ ಸಂಗೀತದ ಕೊಡುಗೆ ಕೊಟ್ಟು ಜನವರಿ ನಾಲ್ಕು ತೊಂಭತ್ನಾಲ್ಕರಲ್ಲಿ (ಇವತ್ತಿಗೆ ಸರಿಯಾಗಿ ಹದಿನಾಲ್ಕು ವರ್ಷಗಳ ಕೆಳಗೆ) ಕೇವಲ ದೈಹಿಕವಾಗಷ್ಟೇ ಅಗಲಿದರು. ಅವರ ಸಂಗೀತ, ಅವರ ಹಾಡುಗಳು ಚಿರಾಯು..

Tere Bina Zindagi Se Koi
Shikwa Toh Nahi.. Shikwa Nahi..ಮೊನ್ನೆ ಸೀತು, ಮಹೇಂದ್ರ ಇಬ್ಬರೂ ಹುಟ್ಟು ಹಬ್ಬ ಆಚರಿಸಿಕೊಂಡರು. ಸೀತು-ನ ಭೇಟಿ ಆಗಿ ಯಾವುದೋ ಕಾಲ ಆಯ್ತು. ಮಹೇಂದ್ರನನ್ನು ಬಹಳ ತಿಂಗಳುಗಳ ನಂತರ ನೆನ್ನೆ ಭೇಟಿ ಮಾಡಿದೆ. ಇಬ್ಬರಿಗೂ ಹುಟ್ಟು ಹಬ್ಬದ ಶುಭಾಶಯಗಳು. ಟ್ರೀಟ್‍ಗೆ ಪ್ರತೀ ಸಲ ಪರ್ಸ್ ಮರೆಯುವಂತೆ ಈ ಸಲ ಮರೀಬೇಡ ಸೀತು.. ಮಹೇಂದ್ರ, ಹೊಸ ಬೈಕ್ ತೊಗೊಂಡಿದೀಯ ಅಂತ ಇನ್ನೂ ವೇಗವಾಗಿ ಚಲಿಸೀಯೆ. ಇಬ್ಬರಿಗೂ ಆಲ್ ದ ಬೆಸ್ಟ್.

ಗೆಳೆಯ ಕರುಣ್ ಹುಟ್ಟು ಹಬ್ಬ ಅಂತ ಅವನ ಜಾತಕ ಮತ್ತು ಆರ್ಕುಟ್ ಎರಡೂ ಹೇಳ್ತಿದೆ. ಅವನಿಗೆ ಶುಭಾಶಯಗಳು. ನನ್ನ ಹುಟ್ಟುಹಬ್ಬಕ್ಕೆ ಕಳೆದ ಎರಡು ವರ್ಷಗಳಲ್ಲೂ ನನಗೆ ಮಧ್ಯರಾತ್ರಿ ಫೋನಾಯಿಸಿ ಪ್ರಪ್ರಥಮವಾಗಿ ವಿಷ್ ಮಾಡಿರುವ ದಾಖಲೆ ಕರುಣ್‍ಗೆ ಸೇರುತ್ತೆ. ಇದನ್ನು ನಾನು ಪ್ರತಿ ಬಾರಿಯೂ ಹರ್ಷದಿಂದ ನನ್ನೊಡನಿದ್ದವರಿಗೆ ಹೇಳಿ ಸಂತಸವನ್ನು ಹಂಚಿಕೊಳ್ಳುತ್ತೇನೆ. ಇವನ ಕನಸುಗಳು ಹಿರಿದಾಗಿವೆ. ಎಲ್ಲವೂ ನನಸಾಗಲಿ ಎಂದು ಹಾರೈಸುತ್ತೇನೆ. ಆಲ್ ದ ಬೆಸ್ಟ್ ಕರುಣ್.'ಚಿತ್ರಚಾಪ'ದ ಬಿಡುಗಡೆ ಜನವರಿ ಆರರಿಂದ ಫೆಬ್ರುವರಿ ಹತ್ತಕ್ಕೆ ಮುಂದೂಡಿದ್ದೇವೆ. ಆದರೆ ನಿರ್ಣಯಿಸಿದ್ದೇವೆ. ಎಲ್ಲರೂ ಬರಬೇಕು. ಆವತ್ತು ಅಮ್ಮನ ವೀಣೆಯ ಕಚೇರಿ ಇದೆ. ಜೊತೆಗೆ ಐದು ಜನರ 'ಪ್ರಕೃತಿಗೊಂದು ಕೃತಿ - ಚಿತ್ರಚಾಪ' ಕೂಡ ಬಿಡುಗಡೆ ಆಗುತ್ತೆ. ಅದರ ಜೊತೆಗೆ ಕನಸಿನ 'ಪ್ರಣತಿ' ಸಂಸ್ಥೆ ಕೂಡ ನಂದಾದೀಪವನ್ನು ಬೆಳಗಲಿದೆ. ನಮಗೆ ಶುಭವಾಗಲಿ!-ಅ
04.01.2008
8.40PM

ಆಶ್ರಮದೊಳಗೆ

ಪ್ರಾಯಶಃ ಇದು ಎರಡನೇ ಸಲ ಅನ್ನಿಸುತ್ತೆ ನಾನು ರಾಮಕೃಷ್ಣ ಆಶ್ರಮದೊಳಕ್ಕೆ ಹೋಗುತ್ತಿರೋದು. ಕಳೆದ ಬಾರಿ ಹೋದಾಗ ನಾನು ಐದನೇ ತರಗತಿಯಲ್ಲೋ ಆರನೇ ತರಗತಿಯಲ್ಲೋ ಇದ್ದೆ.

ಇವತ್ತು ಅಲ್ಲಿ ಪುಸ್ತಕ ಮಾರಾಟ ಮಳಿಗೆಗಳನ್ನು ಹಾಕಿಕೊಂಡಿದ್ದರು. ಇನ್ನೂ ಕೆಲಕಾಲ ಇರುತ್ತೆ. ಅದ್ಭುತವಾದ ಪುಸ್ತಕಳು ಇವೆ. ಸೊಗಸಾದ ಕ್ಯಾಲೆಂಡರುಗಳು, ಸಿ.ಡಿ.ಗಳು, ಫೋಟೋಗಳು ಮಾರಾಟಕ್ಕಿವೆ. ಬೆಲೆ ಅಂತೂ ವಿಪರೀತ ಕಡಿಮೆ ಇದೆ. ಗೆಳೆಯರೇ ಒಮ್ಮೆ ಹೋಗಿ ಬನ್ನಿ...

-ಅ
03.01.2008
12.48AM

Tuesday, January 1, 2008

ಹೊಸ ವರ್ಷದ ಪಯಣ..

ಕೋಟೆ ಬೆಟ್ಟ

ಸೌಂದರ್ಯವು ಕೊಂಚವೂ ಕಮ್ಮಿಯಾಗಿಲ್ಲ. ನೀರನ್ನು ಹೆಚ್ಚು ನಿರೀಕ್ಷಿಸಿದ್ದೆ ತೊರೆಗಳಲ್ಲಿ. ಹಟ್ಟಿಹೊಳೆಯಲ್ಲಿ ಇಳಿಯದೇ ಇದ್ದದ್ದು ಒಳಿತಾಯಿತು, ಆದರೂ ಮೂರು ಜನ ನದಿಗಿಳಿದು ಪಾವನರಾದರು. ರಾತ್ರಿ ಅಗಣಿತ ತಾರೆಗಳನ್ನು ಹೊದ್ದು ಮಲಗಿದ್ದು ಬಹಳ ರೋಮಾಂಚನಕಾರಿಯಾಗಿತ್ತು. ಉಪಗ್ರಹಗಳು, ಉಲ್ಕೆಗಳು, ನಿಧಾನಕ್ಕೆ ಹುಟ್ಟಿ ಬಂದ ಶಶಿ, ನಕ್ಷತ್ರಪುಂಜಗಳು, ಚಳಿಯನ್ನು ಹೊತ್ತು ತಂದ ತಂಗಾಳಿ - ಆಗಸದ ಪರದೆಗೆ ವಿಶೇಷ ಬೆರಗನ್ನು ಕೊಟ್ಟಿತ್ತು. ಹೊಸ ಹೊಸ ಆಟಗಳನ್ನು ಕಲಿತ ಮನಸ್ಸಿಗೆ ಬಹಳ ಮುದವಾಯಿತು. ಕ್ಯಾಂಪ್ ಫೈರ್ ಮುಂದೆ ತಿಂದ ಅದ್ಭುತ ಚಪಾತಿ ಮತ್ತು ಈರುಳ್ಳಿ ಟೊಮೇಟೋ ಗೊಜ್ಜು ನಾಲಿಗೆಯ ಜೀವಕೋಶಗಳನ್ನು ಪ್ರಚೋದಿಸಿತ್ತು. ಬಹಳ ಸುಲಭದ ಚಾರಣಕ್ಕೆ ಬಹಳ ಸಮಯ ತೆಗೆದುಕೊಂಡು ಆಡಾಡ್ತಾ ಹೋಗಿದ್ದು ಈ ಪಯಣದ ಮತ್ತೊಂದು ವೈಶಿಷ್ಟ್ಯ. ದಾರಿಯಲ್ಲೊಂದೆಡೆ ಬಂಡೆಯಿಂದ ನೀರು ಹರಿದು ಬರುತ್ತಿದ್ದೆಡೆ ಬಂಡೆಗೇ ಬಾಯಿಟ್ಟು ನೀರು ಕುಡಿದಿದ್ದು ಅವಿಸ್ಮರಣೀಯ. 'ಕುರುಡ' ಎಂಬ ಅತಿಥೇಯರು ನಮ್ಮನ್ನೆಲ್ಲ ಬಹಳ ಚೆನ್ನಾಗಿ ನೋಡಿಕೊಂಡು ತಲೆಯ ಮೇಲೆ, ಕಿವಿಯ ಮೇಲೆ, ಬೆನ್ನ ಮೇಲೆ, ಕೈ ಬೆರಳುಗಳ ಮೇಲೆ, ಅಧರಗಳ ಮೇಲೂ ಸಹ ಮುತ್ತನ್ನಿಟ್ಟು ಜನ್ಮ ಜನ್ಮಕ್ಕೂ ಮರೆಯಲಾಗದಂತ ಉಡುಗೊರೆಯನ್ನು ನೀಡಿದವು. ಹಟ್ಟಿ ಹೊಳೆಯ ಜನಕ್ಕೆ ಕಾಫಿ ಮಾಡುವುದನ್ನು ಕಲಿಸಬೇಕಾಗಿದೆ.

ಸೋಮವಾರ ಪೇಟೆ - ಬೀದಳ್ಳಿ

ಸೋಮವಾರಪೇಟೆಯ ಹಳೆಯ ಮಿತ್ರ ಗೋವಿಂದಪ್ಪನವರು ಕಾಸಿಗೆ ಎಳ್ಳಷ್ಟೂ ಆಸೆ ಪಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರು. ಕಾಫಿಯ ಹಣವನ್ನೂ ಪಡೆದುಕೊಳ್ಳಲಿಲ್ಲ. ತಾವೇ ಓಡಾಡಿ ಹೊಟೆಲು ರೂಮು ವ್ಯವಸ್ಥೆಯೆಲ್ಲಾ ಮಾಡಿಕೊಟ್ಟರು. "ಬಸ್ಸು ಬಂದಿದೆ, ನಿಮಗೆ ಕಾಯುತ್ತಿದೆ" ಎಂದು ಹೊಟೆಲಿಗೇ ಫೋನು ಮಾಡಿ ಕರೆದರು. ಅಚ್ಚರಿ!

ಬೀದಳ್ಳಿಯಲ್ಲಿ ಟಾರು ರಸ್ತೆ ಬಹಳ ಮುಂದುವರಿದುಬಿಟ್ಟಿದ್ದು ಕಾಡಿಗೆ ಶೋಭೆ ತರುವಂತಿಲ್ಲ. ಅಲ್ಲಲ್ಲಿ ಹೋಮ್ ಸ್ಟೇ ಹಾವಳಿಗಳಿದ್ದರೂ ಈ ಹಾವಳಿಯೇ ನಮಗೆ ಕವಳ ಹಾಕಿದ್ದು. ಮಲ್ಲಳ್ಳಿ ಜಲಧಾರೆಯತ್ತ ಪುಂಡರ ತಂಡವೊಂದು ಹೊರಟಿದ್ದ ಕಾರಣ ನಾವು ಧಾರೆಗಿಂತ ಹೊಳೆಯೇ ಉತ್ತಮ ಎಂದು ನಿರ್ಣಯಿಸಿಬಿಟ್ಟು ಹೊಳೆಗೇ ಹೋದೆವು. ಸ್ಫಟಿಕದಷ್ಟೇ ನಿಷ್ಕಳಂಕವಾಗಿತ್ತು ನೀರು. ನೀರಿನಲ್ಲಿ ತೋಯಲು ನನ್ನ ಆರೋಗ್ಯ ಅನುಮತಿ ನೀಡದೇ ಇದ್ದಿದ್ದು ಬೇಸರ ತರಿಸಿತ್ತು. ಆದರೆ ಮಿತ್ರರು ನೀರಿನಲ್ಲಿ ಆಟವಾಡುತ್ತಾ ಸಂತಸ ಪಟ್ಟಿದ್ದನ್ನು ನೋಡಿ, ಅವರಿಗೆ 'ಮಸಾಜ್' ಮಾಡಿ ನಾನು ಆನಂದಗೈದೆ.

ಸೋಮವಾರಪೇಟೆಯ ಲಾಡ್ಜಿನಲ್ಲಿ ರಾತ್ರಿ ಬಹಳ ಹೊತ್ತಿನವರೆಗೂ ಎದ್ದಿದ್ದು ಮಾರನೇ ದಿನ ತೂಕಡಿಕೆಗೆ ಆಹ್ವಾನವಾಗಿತ್ತು. ಆದರೂ ಅದನ್ನೇ ಆಸ್ವಾದಿಸಿದೆವು.

ಕುರುಡ

ಹಾರುವ ಗೊದ್ದದಂತಿರುವ ಅತಿ ವಿಸ್ಮಯದ ಸೃಷ್ಟಿ. ಜೇನಿನಂತೆ ಗುಂಪಿನಲ್ಲಿ ಶತ್ರುವಿನ ಮೇಲೆ ದಾಳಿ ಮಾಡುವುದರಲ್ಲಿ ನಿಸ್ಸೀಮ. ಕಚ್ಚಿದ ನಂತರ ಉರಿ, ನವೆ, ಊತ, ನೋವು, ನೆನಪು - ಎಲ್ಲವೂ ಪ್ರಸಾದವಾಗಿ ಬರುತ್ತೆ. ಪಟಪಟನೆ ಮುಖ ಮೂತಿಗೆ ಬಡಿದ 'ಕುರುಡ'ಗಳು ಈ ಚಾರಣದ ವಿಶೇಷ ಅತಿಥಿಗಳು.

ಶ್ರೀನಿವಾಸ

ನನ್ನ ಅನಾರೋಗ್ಯಕ್ಕೆ ಸ್ಪರ್ಧಿಯಾಗಿದ್ದ ಶ್ರೀನಿವಾಸ ಕೋಟೆಬೆಟ್ಟ ಚಾರಣ ಮುಗಿಸಿಕೊಂಡು ಮೈಸೂರಿಗೆ ತೆರಳಿಬಿಟ್ಟ. ಮೂರನೇ ದಿನದ ಪಯಣದಲ್ಲೂ ಜೊತೆಯಿದ್ದಿದ್ದರೆ ಚೆನ್ನಾಗಿರುತ್ತಿತ್ತು. ತನ್ನ ಯೋಗಪ್ರತಿಭೆಯನ್ನು ಇನ್ನಷ್ಟು ನಮಗೆ ಪ್ರದರ್ಶಿಸಿ ಚಪ್ಪಾಳೆಯನ್ನೂ ಸೋಜಿಗವನ್ನೂ ಗಿಟ್ಟಿಸಿಕೊಳ್ಳಬಹುದಿತ್ತು. ಸಿಂಹಗರ್ಜನೆಯಿಂದ ಒಂದು ನಾಯಿಯನ್ನು ಆಜನ್ಮಪರ್ಯಂತ ತಾಯತ ಕಟ್ಟಿಸಿಕೊಳ್ಳುವಷ್ಟು ಹೆದರಿಸಿದ್ದು ನಮ್ಮೆಲ್ಲರ ನಡುವೆ ಬಹಳ ಪ್ರಸಿದ್ಧವಾಯಿತು. ಇಳಿಯುವಾಗ ನೀರನ್ನು ಬೇಗ ತಲುಪಿದ ಮೂರು ಜನರಲ್ಲಿ ಶ್ರೀನಿವಾಸನೂ ಒಬ್ಬನಾಗಿದ್ದ. ಮಿಕ್ಕವರಿಗೆ ಕಾಮನಬಿಲ್ಲು ರಾಜ್‍ಕುಮಾರ್ ಅಪರಾವತಾರವನ್ನು ತೋರಿಸಿ ನಿಧಾನಕ್ಕೆ ಬಂದ ನಮಗೆಲ್ಲರಿಗೂ ಅದರ ಫೋಟೋ ತೋರಿಸಿ, "ಹಾಂ?" ಎನ್ನುವಂತೆ ಚಕಿತರನ್ನಾಗಿಸಿಬಿಟ್ಟ.

ಶ್ರೀನಿವಾಸನಿಗೆ ಗಂಟಲು ಕಟ್ಟಿಸಿಕೊಂಡಿದ್ದು ಬಹಳ ಬೇಸರ ತರಿಸಿತ್ತು. ಒಂದೆರಡು ಹಾಡುಗಳನ್ನು ನಾನೂ - ಅವನೂ ಒಟ್ಟಿಗೇ ಹಾಡಬೇಕೆಂದು ಯೋಚಿಸಿದ್ದೆವು. ಆದರೆ ಖರ್ಗೆ ಧ್ವನಿ ಅದಕ್ಕೆ ಅನುಮತಿ ಕೊಡಲಿಲ್ಲ. ಆದರೂ ಅದನ್ನೇ fine tuning ಮಾಡಿ 'ಕೆರೆಯ ನೀರನು ಕೆರೆಗೆ' ಚೆಲ್ಲಿಯೇ ಬಿಟ್ಟ. ಚಪ್ಪಾಳೆ ಗಿಟ್ಟಿಸಿಕೊಂಡೇಬಿಟ್ಟ. ಭೇಷ್.

ಸಿಂಗರ್ ಶೃತಿ

ಹಾಡಲೇ ಇಲ್ಲದಿದ್ದುದು ವಿಷಾದನೀಯ. ನಿರೀಕ್ಷಿಸಿದ್ದೆ ಏನಾದರೂ ಹಾಡುತ್ತಾಳೇನೋ ಎಂದು. 'ಕುರುಡ'ನ ಮೇಲೆ ಬಹಳ ಸಿಟ್ಟಾಗಿದ್ದು ಬಹುಶಃ ಇವಳೇ ಅನ್ನಿಸುತ್ತೆ. "ಅದರ ಪಾಡಿಗೆ ಅದು ಇರಬಾರದಾ? ಥೂ.. ನಮ್ಮ ಪಾಡಿಗೆ ನಾವು ಹೋಗ್ತಾ ಇರ್ಲಿಲ್ವಾ?" ಎಂದು ಆಜನ್ಮಶತ್ರುವಿನಂತೆ ಮನಬಂದಂತೆ ಶಪಿಸಿದಳು. ಆಗಾಗ್ಗೆ ನನ್ನ ಕರೆದು, "ನಿಂಗೂ ನವೆ ಆಗ್ತಿದ್ದೀಯಾ? ನಿಂಗೂ ನೋವಾಗ್ತಾ ಇದೆಯಾ? ನಿಂಗೂ ಊತ ಇದೆಯಾ?" ಎಂದು ತನಗಾಗುತ್ತಿದ್ದ ಬೇನೆಯು 'ಕುರುಡ'ನ ದಾಳಿಗೆ ಸಿಲುಕಿದ ನನಗೂ ಆಗುತ್ತಿದೆಯಾ ಎಂದು ಕೇಳಿ ತಿಳಿದುಕೊಳ್ಳುತ್ತಿದ್ದಳು.

ವಿವೇಕ್

ಚಾರಣದ ಅತ್ಯಂತ ಮೌನಿ. ಆದರೂ ನಾನೂ ಇವನೂ ಕೇದಾರನಾಥ್ ಬಗ್ಗೆ, ವೈನಾಡಿನ ಬಗ್ಗೆ, ಮುಂತಾದ ಚಾರಣಸ್ಥಳಗಳ ಬಗ್ಗೆ ಸಾಕಷ್ಟು ಚರ್ಚಿಸಿದೆವು. ಮಿಕ್ಕ ಸಮಯಗಳಲ್ಲಿ ಶಾಂತ ಮೂರ್ತನಾಗಿ ತನ್ನ ಕ್ಯಾಮೆರಾದಲ್ಲಿ ಕೊಡಗಿನ ಸೊಬಗನ್ನು ಸೆರೆ ಹಿಡಿಯುತ್ತಿದ್ದ. ಅದಲ್ಲದೆ ಆಗಾಗ್ಗೆ ಚೆಲುವಿಗೆ ದೃಷ್ಟಿಬೊಟ್ಟೆಂಬಂತೆ ನಮ್ಮ ಮುಖಗಳನ್ನೂ ಕ್ಲಿಕ್ಕಿಸಿದ.

ಸಂತೋಷ್

ಫೋಟೋ ತೆಗೆಯುವುದು ಬಹುಶಃ ಇವನಿಗೆ ಅತ್ಯಂತ ಪ್ರಿಯವಾದ ಕೆಲಸ ಅನ್ನಿಸುತ್ತೆ. ಕ್ಯಾಮೆರಾಗೆ ಸುಸ್ತಾಗುವವರೆಗೂ ಇವನಿಗೆ ಸುಸ್ತಾಗೋದಿಲ್ಲ. ಫೋಟೋ ತೆಗೆಯುವಷ್ಟೇ ಅಚ್ಚುಕಟ್ಟಾಗಿ, ಅಷ್ಟೇ ತೆರೆದ ಹೃದಯದಿಂದ ತನ್ನ ಅಕ್ಷಯ ಬತ್ತಳಿಕೆಯಿಂದ ಕಳೆದು ಹೋಗಿದ್ದ ಬಾಲ್ಯದ ಹಾಡುಗಳ ಬಾಣಗಳನ್ನೆಲ್ಲಾ ಒಂದಾದ ಮೇಲೊಂದರಂತೆ ಬಿಡುತ್ತಲೇ ಇದ್ದ. "ಭೋಲಿ ಭಾಲಿ ಲಡ್‍ಕಿ...." ಎಲ್ಲಾ ಕೇಳಿ ಯಾವ ಶತಮಾನ ಆಗಿತ್ತೋ!!

ಇವನು ಇನ್ನೊಂದು ವಿಷಯಕ್ಕೆ ಹೆಸರುವಾಸಿ. ಬಹುಶಃ ಪ್ರಪಂಚದಲ್ಲೇ ಅತ್ಯಂತ ವೇಗವಾಗಿ 'ಡೌನ್‍ಲೋಡ್' ಮಾಡಬಲ್ಲ ಪುರುಷ ಎಂಬ ಬಿರುದಿಗೆ ಪಾತ್ರನಾದ. ಇವನ ನಗು ವಿಶ್ವವಿಖ್ಯಾತ. ಒಮ್ಮೆ ನಗಲಾರಂಭಿಸಿದರೆ ಹರಿಹರಬ್ರಹ್ಮಾದಿಗಳೂ ಸುಸ್ತು ಹೊಡೆಯಬೇಕು ಅದನ್ನು ನಿಲ್ಲಿಸಲು. ಹೀಗೇ ನಗುತ್ತಲೇ ಇರುವಂತಾಗಲಿ ಇವನ ಬದುಕು.

ಭೀಮ್ಸ್

ಶುಭಾ ತರುವ ಚಾಕೊಲೇಟು ಇಲ್ಲದೇ ಇದ್ದರೆ ಪ್ರವಾಸದಲ್ಲಿ ಬಹು ಮುಖ್ಯ ವಸ್ತುವನ್ನು ಕಳೆದುಕೊಂಡಂತೆ. ಏನಪ್ಪಾ ಈ ಸಲ ಕೊಡಲೇ ಇಲ್ಲವಲ್ಲಾ ಎಂದುಕೊಳ್ಳುತ್ತಿದ್ದಂತೆಯೇ ಹೊಸವರ್ಷದ ಇರುಳಲ್ಲಿ ಹಿಂದಿರುಗುತ್ತಿದ್ದ ಬಸ್ಸಿನಲ್ಲಿ ಕೊಟ್ಟೇಬಿಟ್ಟಳು. ಸಂಪ್ರದಾಯವನ್ನುಳಿಸಿದಳು. "ನೀನ್ ಎಷ್ಟ್ ಹಾಡ್ ಕೇಳ್ತೀಯೋ ಅಷ್ಟ್ ಹೇಳ್ತೀನಿ" ಎಂದು ಇವಳಿಗೆ ಮಾತು ಕೊಟ್ಟು ಬಹುಶಃ ಉಳಿಸಿಕೊಂಡೆ ಅನ್ನಿಸುತ್ತೆ. ಸ್ಲೀಪಿಂಗ್ ಬ್ಯಾಗನ್ನು ಹೊದ್ದು ಮಲಗಿದ್ದವಳನ್ನು ಎಬ್ಬಿಸಲು ನಾನು ಹರಸಾಹಸ ಮಾಡಬೇಕಾಯ್ತು. ಶ್ರೀನಿವಾಸನೆಂಬ ಶ್ರೀನಿವಾಸನನ್ನು ಎಬ್ಬಿಸಬೇಕಾದರೂ ಇಷ್ಟು ತ್ರಾಸಾಗಿರಲಿಲ್ಲ. "ಐದು ನಿಮಿಷ, ಎರಡು ನಿಮಿಷ" ಎಂದು ಚೌಕಾಶಿ ಮಾಡುತ್ತಲೇ ಇದ್ದಳು. "ಏಳ್ತೀನಿ, ಏಳ್ತಾ ಇದ್ದೀನಿ, ಎದ್ದೆ.." ಎಂದೆಲ್ಲಾ ಹೇಳಿ ಹೇಳಿ ಕೊನೆಗೂ ಎದ್ದಳು. ಬದುಕ್ಕೋತು ಬಡಜೀವ. ಕಳೆದ ಬಾರಿ ಈಕೆ ಅದ್ಭುತ ಚಾರಣಿಗಳಂತಿದ್ದಳು. ಈ ಬಾರಿ ಚಳಿಯ ಕಾರಣವೋ, ಆಹಾರದ ಕಾರಣವೋ, ನಿದ್ರಾಹೀನತೆಯ ಕಾರಣವೋ, ಹೊಸ ವರ್ಷದ ಕಾರಣವೋ, "ನಿಧಾನಕ್ಕೆ ಆರಾಮಾಗಿ ಹೋಗಬಹುದು" ಎಂದು ನಾನು ಆರಂಭದಲ್ಲಿ ಹೇಳಿದ್ದ ಕಾರಣವೋ ಏನೋ ಚಾರಣದಲ್ಲಿ ಸೋತಂತೆ ಇವಳ ಕಣ್ಣುಗಳು ಹೇಳುತ್ತಿದ್ದವು. ಆದರೂ ಛಲಗಾರ್ತಿ ಬಿಡಲಿಲ್ಲ.

ಇವಳು ಮಾತ್ರ ಕ್ಲಚ್ಚು ಬಿಟ್ಟು ನಗುತ್ತಾಳೆಂದು ತಿಳಿದಿದ್ದೆ. ಇವಳ ತಮ್ಮನೂ ಅದೇ ಶೈಲಿಯಲ್ಲಿ ನಗುವುದನ್ನು ನೋಡಿ ಅಚ್ಚರಿಯಾಯಿತು.

ಆದಿ
ಶುಭಾಳ ತಮ್ಮ. ಇವನೊಟ್ಟಿಗೆ ಇದು ಮೊದಲ ಚಾರಣ. ಎರಡನೇ ಭೇಟಿ. ಆದರೂ ಬಹುಕಾಲದ ಗೆಳೆಯನಂತೆ ತೋರುತ್ತಿದ್ದ. ನನ್ನ ಹಾಗೇ ಧೃತರಾಷ್ಟ್ರನ ಪಂಗಡಕ್ಕೆ ಸೇರಿದವನು. 'ಕುರುಡ' ದಾಳಿ ಮಾಡಿದ ವೇಳೆಯಲ್ಲಿ ಕನ್ನಡಕವನ್ನು ಕಳೆದುಕೊಂಡು ಇವನೂ ಕುರುಡನಾಗಿಬಿಟ್ಟಿದ್ದ. ನಾವು ಕುರುಡರಂತೆ ಓಡತೊಡಗಿದ್ದೆವು. ಇವನು ಓಡಲಾರದೆ ಇನ್ನೊಂದಿಬ್ಬರೊಡನೆ ಅಲ್ಲೇ ನಿಂತಿದ್ದು ಆತಂಕಕ್ಕೆ ಈಡು ಮಾಡಿತ್ತು. ನಂತರ ಕನ್ನಡಕ ಸಿಕ್ಕ ನಂತರ ವೀರನಾಗಿಹೋದ. Popeyeಗೆ spinach ಸಿಕ್ಕ ಹಾಗೆ ಶಕ್ತಿ ಸಂಚರಿಸಿಬಿಟ್ಟಿತ್ತು ಇವನ ದೇಹದ ಕಣಕಣಗಳಲ್ಲೂ.

ಈತನೊಬ್ಬ ಅತ್ಯದ್ಭುತ ಚರ್ಚಾಪಟು. ತರ್ಕಬದ್ಧವಾಗಿ ಚರ್ಚಿಸುವುದು ಈತನ ಅತಿದೊಡ್ಡ ಸಾಮರ್ಥ್ಯ. ಇವನ ಅಕ್ಕನೇನು ಸಾಮಾನ್ಯಳಲ್ಲ. ಇವನ ಪ್ರತಿಸ್ಪರ್ಧಿ ಅವಳು. ಚಾರಣದುದ್ದಕ್ಕೂ ನಾನಾ ಸಂಗತಿಗಳ ಬಗ್ಗೆ ಚರ್ಚಿಸುತ್ತಲೇ ಇದ್ದೆವು. ನಾನು ಚರ್ಚಿಸುವ ತನಕ ಚರ್ಚಿಸಿ ನಂತರ ಸೋಲನ್ನೊಪ್ಪಿಕೊಳ್ಳಲು ಸಾಧ್ಯವಾಗದೇ ಇದ್ದಾಗ, "ಹೋಗಲಿ ಬಿಡು" ಎಂದುಬಿಡುತ್ತಿದ್ದೆ. ಸಂಗೀತದಿಂದ ಹಿಡಿದು ರಾಮಾಯಣ ಮಹಾಭಾರತದವರೆಗೆ, ಶಾಲೆಯಿಂದ ಹಿಡಿದು ತಂತ್ರಜ್ಞಾನದವರೆಗೆ ಎಲ್ಲಾ ವಿಷಯಗಳನ್ನೂ ಮಾತನಾಡಿದೆವು.

ಮಾತಿನಲ್ಲಿ ಎಷ್ಟು ಸಮರ್ಥನೋ ಚಾರಣದಲ್ಲೂ ಅಷ್ಟೇ ಸಮರ್ಥನಾಗಿದ್ದ. ಸುಸ್ತು ಇವನ ಕಣ್ಣಲ್ಲಿ ಕಾಣುತ್ತಿತ್ತೇ ವಿನಾ ಕಾಲುಗಳಲ್ಲಿ ಕಾಣುತ್ತಿರಲಿಲ್ಲ. ಕೋಟೆಬೆಟ್ಟವನ್ನು ಒಮ್ಮೆಲೇ ಹತ್ತಲೂ ಇವನ ಕಾಲುಗಳು ಸಿದ್ಧವಾದಂತಿತ್ತು.

ಬೆಟ್ಟದ ಮೇಲೆ ಸೊಗಸಾದ ನೂತನ ಆಟವೊಂದನ್ನು ಹೇಳಿಕೊಟ್ಟು ಆಟ ಆಡಿಸಿದ ನಮ್ಮೆಲ್ಲರನ್ನೂ ಕೂಡಿಸಿ. ಮನರಂಜನೆಯ ಪರಮಾವಧಿಯಂತಿತ್ತು ಆ ಆಟ. ಆದರೆ ನನಗೆ ತುಂಬಿದ ಸಭೆಯಲ್ಲಿ ದೂಷಣೆಯುಂಟಾಗಿದ್ದು (ಆಟದ ರೂಪವೇ ಹಾಗೆ) ಬೇರೆ ವಿಷಯ. ಆಮೇಲೆ ಹೇಳ್ತೀನಿ.

ಸ್ವರೂಪ

ನಗಿಸುವುದು ಇವನ ಕಲೆ. ಹಾಸ್ಯಪ್ರಜ್ಞೆಯನ್ನು ನಾನು ಮೆಚ್ಚಿಕೊಂಡ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಇವನೂ ಒಬ್ಬ. ನನ್ನಂತೆ ಹೋಪ್‍ಲೆಸ್ ಜೋಕುಗಳನ್ನು ಹೇಳದಿದ್ದರೂ ತಕ್ಕ ಮಟ್ಟಿಗೆ 'ಹೋಪ್‍ಲೆಸ್' ಬೆಳವಣಿಗೆಗಳು ಆಗಿವೆ. ಕೋಟೆಬೆಟ್ಟ ಎಂಬ ಸಣ್ಣದೊಂದು ಬೆಟ್ಟವನ್ನು "ತುಂಬಾ ದೊಡ್ಡ ಬೆಟ್ಟ, ನೀನು ಬಹಳ ಸುಳ್ಳು ಹೇಳ್ತೀಯ" ಅಂತ ಆಗಾಗ್ಗೆ ಹೇಳುತ್ತಿದ್ದ ಸ್ವರೂಪ. ಏನೇ ಹೇಳಿದರೂ ಸಾರಾಸಗಟಾಗಿ ಚಾರಣಗೈದು, ನಂತರ ಕ್ಯಾಂಪ್‍ಫೈರ್ ಕ್ರಿಯೆಯಲ್ಲಿ ಬಹಳ ಮುಖ್ಯಪಾತ್ರವನ್ನು ವಹಿಸಿದ. ಚಳಿಯಲ್ಲಿ ಬೆಂಕಿ ಕಾವು ಕೊಟ್ಟಿತ್ತಲ್ಲದೇ ಬೆಳಕನ್ನೂ ಕೊಟ್ಟಿತ್ತು ಊಟ ಮಾಡಲು. ಚಪಾತಿ - ಟೊಮೇಟೋ ಈರುಳ್ಳಿ ಗೊಜ್ಜನ್ನು ಮನಸಾರೆ ಕೊಂಡಾಡಿದ. ಎಲ್ಲರೂ ಅಹುದೆಂದು ತಲೆದೂಗಿದರು.

ಬೀದಳ್ಳಿ ಹೊಳೆಯಲ್ಲಿ ನಡುಗುತ್ತ ನಡುಗುತ್ತಲೇ ಮುಳುಗೇಳುತ್ತಾ ಮಜ್ಜನ ಮಾಡಿಕೊಂಡು ಹರ್ಷಪಟ್ಟ. ಚಾರಣದಲ್ಲಿ 'ಕುರುಡ'ನ ಹಲ್ಲೆಗೆ ಇವನೂ ಸಿಲುಕಿದ್ದರೂ ನನ್ನಂತೆ, ಶೃತಿಯಂತೆ ಊದಿಕೊಳ್ಳುವುದಾಗಲೀ, ಉರಿ ನವೆಗಳಾಗಲೀ ಇವನಿಗೆ ಇರಲಿಲ್ಲ. ಪುಣ್ಯವಂತ. ನೀರು ಕೊರೆಯುತ್ತಿತ್ತು. ಕಾಲಿಟ್ಟರೆ ಮಾಗಟ್ಟುತ್ತಿತ್ತು. ಅಂಥಾ ತಣ್ಣನೆಯ ನೀರಿನಲ್ಲೂ ಎಲ್ಲರೂ ಇಳಿದಿದ್ದು ನಮ್ಮ ಡೆಸ್ಪರೇಷನ್ ತೋರಿಸಿತ್ತು. ನಾನು ಇಳಿದಿರಲಿಲ್ಲ. ಎಲ್ಲರಿಗೂ ಬಂಡೆಯೊಂದರ ಮೇಲೆ ಕುಳಿತು ಬೆನ್ನನ್ನೊತ್ತಿ 'ಮಸಾಜ್' ಮಾಡಿಕೊಡುವುದರಲ್ಲೇ ಆನಂದ ಹೊಂದಿದೆ. ಸ್ವರೂಪನು ನಡುಗುತ್ತಲೇ ಮಸಾಜು ಮಾಡಿಸಿಕೊಂಡಿದ್ದು ಕೊಂಚ ಹಾಸ್ಯಮಯವಾಗಿತ್ತು.

ಹೊಳೆಗೆ ಹೋಗುವ ದಿನದಂದು ಮಧ್ಯಾಹ್ನದ ಊಟದ ಸಮಸ್ಯೆಯೆದುರಾದಾಗ ಅಲ್ಲೇ ಬಳಿಯಲ್ಲಿದ್ದ ಮನೆಯೊಂದರಲ್ಲಿ ಊಟದ ವ್ಯವಸ್ಥೆಯನ್ನು ವಿವೇಕನೊಂದಿಗೆ ಹೋಗಿ ಮಾಡಿಕೊಂಡು ಬಂದು ಎಲ್ಲರ ಮೆಚ್ಚುಗೆಗೆ ಪಾತ್ರನಾದ. ಹಸಿದ ಹೊಟ್ಟೆಗೆ ಅನ್ನ ಹಾಕಿಸಿದ ಇವನ ಹೊಟ್ಟೆ ತಣ್ಣಗಿರಲಿ.

ಚಾರಣದ ಹಾದಿಯಲ್ಲಿ "ಜೀನಾ ಯಹಾಂ ಮರ್‍ನಾ ಯಹಾಂ..." ಅಂತ ಹಾಡಿ ನನ್ನ ಬದುಕಿನ ಚಿತ್ರಣವನ್ನು ಕಣ್ಣ ಮುಂದೆ ತಂದಿಟ್ಟ. ಕಾಡಿನಲ್ಲೇ ಬದುಕಬೇಕು, ಕಾಡಿನಲ್ಲೇ ಸಾಯಬೇಕೆಂದು ಯಾವತ್ತೋ ತೀರ್ಮಾನಿಸಿ ಆಗಿತ್ತು. ಇವನು ಹಾಡುವುದನ್ನು ಕೇಳಿದರೆ ನನಗೆ ಬೇಸರ ಆಗುತ್ತೆ. ಇಷ್ಟು ಒಳ್ಳೇ ಕಂಠ ಇಟ್ಟುಕೊಂಡಿರುವವನು ಅದನ್ನು ಸರಿಯಾಗಿ ಉಪಯುಕ್ತಪಡೆಸಿಕೊಳ್ಳದೇ ವೃಥಾ ಸುಮ್ಮನಿದ್ದಾನಲ್ಲಾ ಅಂತ. ಕಂಠ, ಶೃತಿ ಜ್ಞಾನ ಎರಡೂ ಒಟ್ಟಿಗೇ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಿದವರು ಅದನ್ನು ವ್ಯರ್ಥಗೊಳಿಸುವುದು ವಿಪರ್ಯಾಸ ಎನ್ನಿಸುತ್ತೆ. ಸಮಯ ಮಾಡಿಕೊಂಡು ಸ್ವರೂಪ ಹಾಡುಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ತಾನು ಸಲ್ಲಿಸಬೇಕಾದ ಗೌರವ ಸೇವೆಗಳನ್ನು ಸಲ್ಲಿಸುತ್ತಾನೆಂಬ ನಂಬಿಕೆಯಿದೆ ನನಗೆ.

ಶ್ರೇಯಸ್

ಕಾಡಿನ ವಿಷಯಗಳಲ್ಲಿ, ಹೊತ್ತಿಗೆಗಳ ವಿಷಯದಲ್ಲಿ, ಮಾತಿನ ವಿಷಯದಲ್ಲಿ ಅನೇಕ ಕಡೆ ನನ್ನ ಇವನ ತರಂಗಗಳು ಒಂದೇ ಸಮನೆ ಇರುವುದರಿಂದ ಮಾತುಗಳು ಸರಾಗವಾಗಿ ಹರಿದುಬರುತ್ತೆ. ಕರ್ವಾಲೋ ಬಗ್ಗೆ, ಅಶ್ವಥ್ ಬಗ್ಗೆ, ಅಬಚೂರಿನ ಪೋಸ್ಟಾಫೀಸಿನ ಬಗ್ಗೆ, ಸಾಕಷ್ಟು ಮಾತನಾಡಿದೆವು.

ಕ್ಯಾಂಪ್‍ಫೈರ್ ಬಗ್ಗೆ ಇವನಿಗಿರುವಷ್ಟು ಆಸಕ್ತಿ ಬಹುಶಃ ಪ್ರಪಂಚದಲ್ಲಿ ಯಾರಿಗೂ ಇಲ್ಲ. ಮುಂದಾಳತ್ವ ತೆಗೆದುಕೊಂಡು ಶ್ರೀನಿವಾಸ ಸ್ವರೂಪರೊಡನೆ ಜ್ಯೋತಿಯನ್ನು ಬೆಳಗಿಸಿದ್ದರ ಬಗ್ಗೆ ಇವನಿಗೆ ಬಹಳ ಹೆಮ್ಮೆಯಿತ್ತು. ಯಾವುದಾದರೂ ಕೆಲಸ ಮಾಡಿದರೆ, ಆ ಕೆಲಸ ಮಾಡಿದವರಿಗಷ್ಟೇ ಅದರ ನೈಜ ಬೆಲೆ ಗೊತ್ತಿರೋದು. ಆ ಕೆಲಸ ಯಶಸ್ವಿಯಾದರೆ ಕೆಲಸ ಮಾಡಿರೋರಿಗೇ ಅತ್ಯಂತ ಹೆಚ್ಚು ಸಂತಸ ಆಗೋದು.

ತನ್ನ 'ಬೂಮರ್' ಕೈಕಾಲುಗಳಿಂದ ಈ ಬಾರಿ ಯಾರಿಗೂ ತೊಂದರೆ ಕೊಡಲಿಲ್ಲ ಇವನು. ಆಫೀಸಿನ ಒತ್ತಡದ ಮಡುವಲ್ಲಿ ಸಿಲುಕಿದ್ದ ಇವನು ಚಾರಣಕ್ಕೆ ಬರುವುದು ಕ್ಲಿಷ್ಟವಾಗಿತ್ತು. ದೈವ ಸಂಕಲ್ಪದಿಂದ ಕೆಲಸ ಮಧ್ಯರಾತ್ರಿಯೇ ಮುಗಿದಿದ್ದರಿಂದ ಶ್ರೀನಿವಾಸನೊಡನೆ ಮೈಸೂರಿನಿಂದ ಮಡಿಕೇರಿಗೆ ಆ ಅಹೋರಾತ್ರಿಯೇ ಹೊರಟು ಬಂದುಬಿಟ್ಟರು.

ಕೊಡಗಿನ ಚಳಿಯನ್ನು ಎಲ್ಲರೂ ತಡಿಯಾಂಡಮೋಳ್ ಅಲ್ಲಿ ಈಗಾಗಲೇ ಅನುಭವಿಸಿ ಆಗಿದ್ದರಿಂದ ಇಲ್ಲೂ ಅಷ್ಟೇ ಚಳಿಯನ್ನು ನಿರೀಕ್ಷೆ ಮಾಡಿದ್ದೆವು. ಆ ಚಳಿ ಇಲ್ಲಿ ಇರದೇ ಇದ್ದುದು ಶ್ರೇಯಸ್ ಖಂಡಿಸಿದ. ಆದರೆ ಬೀದಳ್ಳಿಯ ಕುಮಾರಧಾರಾ ನದಿಯ ನೀರು ಆ ಚಳಿಯನ್ನು ದಯಪಾಲಿಸಿತು. ಆ ಚಳಿಯಲ್ಲೇ ಸೌಂದರ್ಯದ ಒಡೆತನವನ್ನು ಪಡೆದ ಹಕ್ಕಿಗಳನ್ನು ನಮ್ಮ ಸುತ್ತಲೂ ಹಾರಿಸಿತು. ಇದನ್ನು ನೋಡಿದ ಎಲ್ಲರೂ ನಡುಗುತ್ತಲೇ ಖುಷಿ ಪಟ್ಟೆವು.

ಶೃತಿ

'ಕುರುಡ'ನಿಂದ ರಟ್ಟೆಗೆ ಕಚ್ಚಿಸಿಕೊಂಡಿದ್ದರಿಂದ ಮತ್ತು ಇವಳ ಬಣ್ಣನಾತೀತ 'ಚರಿತೆ'ಯಿಂದ ಇವಳಿಗೆ 'ಟೈಗರ್ ಪ್ರಭಾಕರ್' ಎಂಬ ಹೆಸರು ದೊರಕಿತು. ಇವಳ ದಂತಕಥೆಯಂತಾ "ಅಪ್ಪಪ್ಪಪ್ಪಪ್ಪಾ.. ಪಪ್ಪಪ್ಪಾಪ್ಪಾ..." ಉದ್ಗಾರವನ್ನು ಲೆಕ್ಕವಿಲ್ಲದಷ್ಟು ಬಾರಿ ಶ್ರೇಯಸ್, ನಾನು ಇಬ್ಬರೂ ಹೇಳುತ್ತಾ ಹೇಳುತ್ತಾ ನಗುತ್ತಾ ನಗುತ್ತಾ ನಗಿಸುತ್ತಾ ನಗಿಸುತ್ತಾ ಮುದಗೊಂಡೆವು. ಸಾಕಷ್ಟು ಚಾರಣಗಳ ಅನುಭವವಿದ್ದ ಈಕೆ ಈ ಕೋಟೆಬೆಟ್ಟವನ್ನು ಸಲೀಸಾಗಿ ಹತ್ತಿದ್ದರೂ ಆಯಾಸದ ಸೂಚನೆ ಮಾತ್ರ ಕಂಗಳಲ್ಲಿ ಬೀರುತ್ತಲೇ ಇದ್ದದ್ದು ಯಾಕೆಂದು ಅರಿಯದಾದೆ. ಬಹುಶಃ ಇವಳ ಚೀಲದ ತೂಕ ಹೊರಲಾರದಷ್ಟಿತ್ತೇನೋ. ಬ್ಯಾಗನ್ನು ಹಾಕಿಕೊಂಡು ಹಾಕಿಕೊಂಡು ನನಗಾದಂತೆಯೇ ಇವಳಿಗೂ ಭುಜವೆಲ್ಲಾ ನೋವಾಗಿತ್ತು. ಇನ್ನು ಕೆಲವರಿಗೂ ಆಗಿತ್ತಾದರೂ ನಮ್ಮಿಬ್ಬರಿಗೆ ತುಸು ಹೆಚ್ಚೇ ನೋಯುತ್ತಿತ್ತು.

ಸಣ್ಣ ಪುಟ್ಟ ವಿಷಯಗಳಿಗೆ ಹೆದರುವ ಹೆಣ್ಣು ಮಗಳು ಇವಳಲ್ಲ ಎಂಬುದಕ್ಕೆ ಸೋಮವಾರಪೇಟೆಯ ಹೊಟೆಲಿನಲ್ಲಿ ರಾತ್ರಿ ನಡೆದ ದೆವ್ವ ಭೂತದ ಚರ್ಚೆಯ ನಂತರದ ಕ್ಷಣಗಳೇ ಹೇಳಿದವು. ಬಹಳ ಸಂತಸವಾಯಿತು. ಬಸ್ಸಿನಲ್ಲಿ ಪಯಣಿಸುವಾಗ ಕೊಡಗಿನ ಘಾಟಿಗಳಲ್ಲಿ ಬಸ್ಸು ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ತಿರುಗುತ್ತಿದ್ದಂತೆಯೇ ಇವಳ ಹೊಟ್ಟೆಯಲ್ಲಿರುವ ಕೋಶಗಳೂ ಸಹ ಸುತ್ತುತ್ತಾ ಸುತ್ತುತ್ತಾ ನಿಂಬೆ ಹಣ್ಣಿಗೆ ಶರಣಾಗುವಂತೆ ಮಾಡಿಬಿಟ್ಟಿತು. ನೋವನ್ನು ತಾಳಲಾರದೆ ಕಣ್ಣೀರು ಹಾಕಿಕೊಂಡಿತು ಪಾಪ. ನನ್ನ ಮನಸ್ಸು ಚುರುಕೆಂದರೂ ಆ ವ್ಯಾಧಿಗೇನೂ ಮದ್ದಿಲ್ಲದ ಕಾರಣ ಸಮಾಧಾನ ಮಾಡಲೆತ್ನಿಸಿದೆ. ನಂತರ ಬೀದಳ್ಳಿಯಿಂದ ಮಡಿಕೇರಿಗೆ ಬರುವಾಗಲೂ ಇದೇ ಸಮಸ್ಯೆ ಎದುರಾದಾಗ 'ಅವಾಮಿನ್' ನೆನಪಾಗಿ ಅದನ್ನು ತರಲು ಸ್ವರೂಪನಿಗೆ ಹೇಳಿದೆ. ಆಗ "ಅಯ್ಯೋ ಅದು ನನ್ನ ಹತ್ತಿರವೇ ಇದೆ" ಎಂದು ಶುಭಾ ನೆನಪು ಮಾಡಿಕೊಂಡು ಕೊಟ್ಟಳು. ಮಡಿಕೇರಿಯಿಂದ ಹೊರಟಾಗ ಸಧ್ಯ ಏನೂ ಆಗಲಿಲ್ಲ. 'ಪಯಣ' ಎಂಬುದು ಹೀಗೆಯೇ. ಯಾರಿಗೆ ಯಾವಾಗ ಯಾಕೆ ಹೇಗೆ ಬೇಕಾದರೂ ಕೈಕೊಡಬಹುದು.

ಕೋಟೆಬೆಟ್ಟದ ಚಾರಣದ ಹಾದಿಯಲ್ಲಿ ಆಲಿಸಿದ ನವಿಲ ಧ್ವನಿಯನ್ನು, ಬೀದಳ್ಳಿ ಹೊಳೆಯ ಹಾದಿಯಲ್ಲಿ ಕಂಡ ಸೂರ್ಯ ರಶ್ಮಿಯನ್ನು, ನೀರಿನ ಚಳಿಯನ್ನು, ಪ್ರಕೃತಿಯ ಪ್ರತಿ ಸೊಬಗನ್ನು ಬಹಳ ಸೊಗಸಾಗಿ ಸವಿಯಬಲ್ಲವಳು ಇವಳು.

ಮೂರು ವರ್ಷಗಳ ಕೆಳಗೆ ಬಾಣತಿ ಮಾರಿ ಬೆಟ್ಟದ ಚಾರಣ ಮಾಡಿದಾಗ ಖಂಡಿತ ಎಣಿಸಿರಲಿಲ್ಲ - ಮುಂದೊಂದು ದಿನ ಮನಸ್ಸಿನ ಬಹಳ ಹತ್ತಿರದ ಸಖ್ಯ ಪಡೆದು ಬದುಕಿನ ಮುಖ್ಯ ದಿನಗಳ ಭಾಗಿಯಾಗಿರುತ್ತಾಳೆ ಇವಳು ಎಂದು. ನನ್ನ ಬದುಕಿನ ಅನೇಕ ಸಂಗತಿಗಳಿಗೆ ಈಕೆಗೆ ನಾನು ಕೃತಜ್ಞನಾಗಿದ್ದೇನೆ.

ಸೀಮಾ

ಇವಳೊಂದಿಗೆ ಇದು ನನ್ನ ಮೊದಲ ಚಾರಣ. ಆದಿಯಂತೆ ಈಕೆಯೂ ಸಹ ಹೊಸಬಳೆಂದು ಯಾವ ಕ್ಷಣದಲ್ಲೂ ಅನ್ನಿಸಲಿಲ್ಲ. ಸ್ವರೂಪನ ಅಕ್ಕ ಅನ್ನುವುದಕ್ಕೆ ಸಹಸ್ರ ಸಾಕ್ಷಿಗಳು ಇವಳ ಮಾತಿನಲ್ಲಿ, ನಗುವಿನಲ್ಲಿ, ಸಂಗೀತಾಭಿರುಚಿಯಲ್ಲಿ, ಭಾಷೆಯಲ್ಲಿ, ಮೈತ್ರಿಯಲ್ಲಿ ಎದ್ದು ಕಾಣುತ್ತಿತ್ತು.

ಬೆಟ್ಟದ ಮೇಲೆ ಆದಿ ಹೇಳಿಕೊಟ್ಟ ಆಟ ಆಡುತ್ತಿದ್ದೆವು. ಆ ಆಟದ ಬಗ್ಗೆ ಹೆಚ್ಚು ಬರೆಯಲು ಗೊತ್ತಿಲ್ಲ. ಸಾರಾಂಶವೆಂದರೆ, ಗುಂಪಿನಲ್ಲಿ ಒಬ್ಬರನ್ನು 'ಕಳ್ಳ' ಎಂದು ಪರಿಗಣಿಸಿ ಆತ/ಆಕೆಯನ್ನು eliminate ಮಾಡಬೇಕು. ನಾನು ಆಟದಲ್ಲಿ 'ಕಳ್ಳ' ಆಗಿರಲಿಲ್ಲ. ಈಕೆಯ ಮುಂದಾಳತ್ವದಲ್ಲಿ ನನ್ನನ್ನು ಕಳ್ಳನೆಂದು ದೃಢವಾಗಿ ನಿರ್ಣಯಿಸಿ ಆಟದಲ್ಲಿ ನನ್ನನ್ನು ಸೋಲಿಸಿದರು. ತುಂಬಿದ ಸಭೆಯಲ್ಲಿ ನನ್ನನ್ನು ಕಳ್ಳ ಎಂದು ಪರಿಗಣಿಸಿಬಿಟ್ಟರು ನೋಡಿ. ಹೀಗೇ ಒಬ್ಬೊಬ್ಬರೇ ಆಟಗಾರರು ಕಳ್ಳರಲ್ಲದೇ ಇದ್ದರೂ ಕಳ್ಳರಾಗಿ ಸೋತು ಹೋಗಿ, ಕೊನೆಗೆ ಅಸಲು ಕಳ್ಳಿ ಶುಭಾ ಗೆದ್ದು ಬಿಟ್ಟಳು. ಒಳ್ಳೆಯವರಿಗೆ ಕಾಲವಿದಲ್ಲ.

ಸೀಮಾ ವೀಣೆಯಲ್ಲಷ್ಟೇ ಚಾಕಚಕ್ಯತೆಯನ್ನು ಹೊಂದಿಲ್ಲ, ಹಾಡಿನಲ್ಲೂ ಹೊಂದಿದ್ದಾಳೆಂಬುದಕ್ಕೆ ಕೋಟೆಬೆಟ್ಟದ ತಪ್ಪಲಿನ ತೊರೆಯ ಮುಂದೆ ಕುಳಿತಾಗ ಇವಳ ಕಂಠಸಿರಿಯಲ್ಲಿ ಹೊರ ಹೊಮ್ಮಿದ ಹಾಡೇ ಸಾಕ್ಷಿ.

"ಲಾಡ್ಜಿನಲ್ಲಿ ಉಳಿದುಕೊಳ್ಳುವುದು ಟ್ರೆಕ್ಕಿಗೆ ಜಾಸ್ತಿ ಆಯಿತು" ಎಂಬ ಮಾತನ್ನು ಹೇಳಿದಳು ನನಗೆ. ಆಗ ನನಗೂ ಅನ್ನಿಸಿತು - ಈ ನಗರಿಕತೆಯ ಹಾವಳಿಯ ಆರ್ಭಟಕ್ಕೆ ಎಷ್ಟು ಸೋತು ಹೋಗಿದ್ದೇವಲ್ಲಾ ನಾವು ಎಂದು. ಕೆಲವರು ತುರ್ತಾಗಿ ಸ್ನಾನ ಮಾಡಲೇ ಬೇಕಾಗಿತ್ತೆಂದು ನನಗೆ ಹೇಳಿದ್ದರು. ಜೊತೆಗೆ ಬೀದಳ್ಳಿಯ ಹೊಳೆಯ ಪಕ್ಕ ಬಿಡಾರ ಹೂಡಿದರೆ ನಮ್ಮ ಗಲಾಟೆಗೆ ಅರಣ್ಯ ಇಲಾಖೆಯರು ಗಲಾಟೆ ಮಾಡಿಯಾರು ಎಂಬ ಯೋಚನೆಯೊಂದೆಡೆಯಿತ್ತು. ಅಲ್ಲದೆ ಈ ನಮ್ಮ 'ಮನುಷ್ಯ' ಸಹಜ ಗಲಾಟೆಯು ಸಸ್ಯಪಶುಪಕ್ಷಿಮೃಗಗಳಿಗೆ ಬಹಳ ಹಿಂಸೆಯಾಗುತ್ತೆ ಎಂಬ ಪರಿಗಣನೆಯೂ ಮತ್ತೊಂದೆಡೆ ನನ್ನಲ್ಲಿತ್ತು. ಬೀದಳ್ಳಿಯ ಬಿಡಾರ ಸ್ಥಳ ದಟ್ಟ ಅರಣ್ಯದ ನಡುವೆ ಇತ್ತಾದರಿಂದ ಈ ಯೋಚನೆಗಳೆಲ್ಲಾ ನನ್ನ ತಲೆಯಲ್ಲಿ ಸುಳಿಯಿತು. ಕೋಟೆ ಬೆಟ್ಟದ ಮೇಲೆ ಉಳಿಯಲು ಈ ಯೋಚನೆಗಳು ಬರದಿರಲು ಕಾರಣ ಮೇಲೆ ಹೇಳಿದ ದಟ್ಟ ಅರಣ್ಯ ಸಂಪತ್ತಿಲ್ಲದಿರುವುದು.

ಶ್ರೀ

"ಯಾಕೆ ಅಷ್ಟು ಕಷ್ಟ ಆಯ್ತು?" ಎಂಬ ಪ್ರಶ್ನೆ ಇವಳನ್ನು ಹಲವಾರು ಬಾರಿ ಕಾಡಿತ್ತೆನಿಸುತ್ತೆ. ಚಾರಣ ದೊಡ್ಡದಾಗಿತ್ತೆಂದು ಅನಿಸಿಕೆ ಕೊಟ್ಟಳು. ಆದರೆ ಚಾರಣದ ಅನುಭವ ಇದ್ದಿದ್ದರಿಂದ ಆಯಾಸಗಳನ್ನು ನುಂಗಿಕೊಳ್ಳುವ ಸಮರ್ಥಳಾಗಿದ್ದಳು. ಬಹುಪಾಲು ಮಂದಿಯಲ್ಲಿ ನಾನು ಗಮನಿಸಿರುವ ಒಂದಂಶವೆಂದರೆ ಚಾರಣ ಮಾಡುವಾಗ "ಇನ್ನೂ ಎಷ್ಟು ದೂರ ಹೋಗಬೇಕು?" ಎಂಬ ಪ್ರಶ್ನೆ ಕೇಳುವುದು. ಶ್ರೀ ಕೂಡ ಹಲವಾರು ಸಲ ಈ ಪ್ರಶ್ನೆ ಕೇಳುತ್ತಿದ್ದಳು. ಚಾರಣವನ್ನು ಶಿಕ್ಷೆಯೆಂದು ತಿಳಿದರೆ ಈ ಪ್ರಶ್ನೆ ಹೊರಬಂದೀತು. ನಡೆಯುವುದನ್ನು, ಸಾಹಸವನ್ನು, ಪ್ರಾಣಿಗಳನ್ನು, ಪಕ್ಷಿಗಳನ್ನು, ಮೌನವನ್ನು ಒಬ್ಬ ಚಾರಣಿಗನು ಮನಸಾರೆ enjoy ಮಾಡುತ್ತಾನೆ. ನನಗೆ ಅತ್ಯಂತ ಪ್ರೀತಿ ಪಾತ್ರರಾದ ಜನರು ಚಾರಣಗೈಯ್ಯುವುದೇ ನನ್ನ ಭಾಗ್ಯ ಎಂದು ನಾನು ಅನೇಕ ಬಾರಿ ಸಂತಸ ಪಟ್ಟಿದ್ದೇನೆ. ಬರಬರುತ್ತಾ ಇವರುಗಳೂ enjoy ಮಾಡುವಂತಾಗುತ್ತಾರೆಂಬ ಭರವಸೆ ನನಗಿದೆ. ಎಷ್ಟೇ ಆಗಲಿ ನನ್ನ ಮಿತ್ರರಲ್ಲವೇ!

ನೀರೆಂದರೆ ಹಪಹಪಿಸುತ್ತಾಳಾದರೂ ಎರಡು ಮನಸ್ಸು ಬಂದಿದ್ದು ಕುಮಾರಧಾರ ಮಂಜುಗೆಡ್ಡೆಯಂತೆ ಕೊರೆಯುತ್ತಿದ್ದ ಕಾರಣ. ಆದರೂ ಕೊನೆಗೆ ತಡೆಯಲಾರದೆ ಇಳಿದೇಬಿಟ್ಟಳು. ಆ ನೀರಿನ ಮಹತ್ವವೇ ಹಾಗೆ. ನನ್ನಂಥವನಿಗೇ ಅಲ್ಲಿ ಇಳಿಯಬೇಕೆನಿಸುತ್ತೆ. ನಾನು ಸಾಧಾರಣವಾಗಿ ನೀರಿನಲ್ಲಿಳಿಯುವವನಲ್ಲ. ಆದರೆ ಇಲ್ಲಿ ಮಾತ್ರ ಇಳಿಯದಿರುವುದಿಲ್ಲ. ಇವಳಿಂದಲೂ ಒಂದು ಹಾಡನ್ನು ನಿರೀಕ್ಷಿಸಿದ್ದೆ. ಆದರೆ ಹಾಡಲಿಲ್ಲ. ಮುಂದಿನ ಸಲ ಹಾಡುತ್ತಾಳೆ ಅನ್ನಿಸುತ್ತೆ.

ಎಲ್ಲರೂ, ಎಲ್ಲವೂ

ನಮ್ಮ ಗುಂಪಿನಲ್ಲಿ ಹಾಡುಗಾರರು ಬಹಳ ಮಂದಿಯಿದ್ದಾರೆಂಬುದು ಅಚ್ಚರಿ ಹಾಗೂ ಅದ್ಭುತ ಸಂಗತಿಯೆಂದು ಆದಿ ಅಭಿಪ್ರಾಯ ಪಟ್ಟ ನಂತರವೇ ನನಗೆ ಹೊಳೆದದ್ದು. ಹೌದಲ್ವಾ, ಇದು ಬಹಳ ಅಪರೂಪ ಅಲ್ವಾ? ಅಂತ.

ಸ್ಲೀಪಿಂಗ್ ಬ್ಯಾಗು, ಕ್ಯಾರಿ ಮ್ಯಾಟು, ತಿಂಡಿ ತೀರ್ಥ - ಎಲ್ಲಾ ಸರಿಯಾಗಿ ತಂದಿದ್ದು ಎಲ್ಲೂ ಯಾವ ರೀತ್ಯಾ ತೊಂದರೆಯಾಗದೇ ಇದ್ದದ್ದಕ್ಕೆ ನಾನು ಎಲ್ಲರಿಗೂ ಆಭಾರಿಯಾಗಿದ್ದೇನೆ.

ಮುಂದಿನ ಚಾರಣವನ್ನು ಇದಕ್ಕಿಂತ ಚೆನ್ನಾಗಿ ಆಚರಿಸಬೇಕೆಂಬ ಹೆಬ್ಬಯಕೆ.

ಕೋಟೆಬೆಟ್ಟದ ಸುಗಮ ಹಾದಿ, ಬೀದಳ್ಳಿ ಹೊಳೆಯ ಕೊರೆವ ಸ್ಫಟಿಕದಂತಹ ನೀರು, ರಾತ್ರಿಯ ಚಪಾತಿ ಗೊಜ್ಜು ಊಟ, 'ಕುರುಡ'ನ ಆತಿಥ್ಯ, ಸೋಮವಾರಪೇಟೆಯ ಗೋವಿಂದಪ್ಪನವರ ಸೌಜನ್ಯ, ಕತ್ತಲಲ್ಲಿ ಆಟವಾಡಿದ್ದು, ರಸ್ತೆಯಲ್ಲಿ ಕುಳಿತು ಮೂಕಾಭಿನಯದಾಟ ಆಡಿದ್ದು, ಬಹಳ ದಿನಗಳ ನಂತರ ಚಾರಣ ಮಾಡಿದ್ದರಿಂದ ಕಾಲು ಕತ್ತು ಭುಜ ನೋಯುತ್ತಿದ್ದುದು, ದೆವ್ವ ಭೂತಗಳ, ಮಾಟ ಮದ್ದುಗಳ ಚರ್ಚೆ, ಹಾಡುಗಾರಿಕೆ, "ವಡೆಯ ಕೊಡೇ ಚಾಮುಂಡಿ", ಹೋಪ್ಲೆಸ್ ಚರ್ಚೆಗಳು ಚಿರಕಾಲ ಮನಸ್ಸಿನಲ್ಲುಳಿಯುವಂಥದು.

ಸಾರಾಂಶ

ಹೊಸವರ್ಷದ ಸಲುವಾಗಿ ಪ್ರಯಾಣ ಮಾಡಲು ಈ ಬಾರಿಯೂ ನಾವು ಆರಿಸಿಕೊಂಡಿದ್ದು ಕೊಡಗು ಜಿಲ್ಲೆಯನ್ನೇ. ಆದರೆ ಈ ಸಲ ಚಾರಣವೊಂದು ಮತ್ತು ರಿಲಾಕ್ಸಿಂಗ್ ಪ್ರವಾಸ ಇನ್ನೊಂದು ಮಾಡಿ ಮೂರು ದಿನಗಳಲ್ಲಿ ಮೂರು ಜನ್ಮಗಳಿಗಾಗುವಷ್ಟು ನೆನಪುಗಳ ಮೂಟೆಯನ್ನು ಭರಿಸಿದೆವು. ಮಡಿಕೇರಿಯಲ್ಲಿ ನಮ್ಮನೊಡಗೂಡಿಸ ಶ್ರೀನಿವಾಸ ಮತ್ತು ಶ್ರೇಯಸ್ ಮಧ್ಯರಾತ್ರಿ ಮೈಸೂರಿನಿಂದ ಹೊರಟಿದ್ದರು. ಬೆಂಗಳೂರಿನಿಂದ ನಾವು ಒಂಭತ್ತು ಜನ ಹೊರಟಿದ್ದು, ಆ ಸಂಖ್ಯೆಯಲ್ಲಿ ನಮ್ಮ ಸ್ನೇಹಿತರ ಗುಂಪು ಪಯಣಿಸಿ ಬಹುಕಾಲ ಸಂದಿತ್ತು. ಮಡಿಕೇರಿಯಿಂದ ಹಟ್ಟಿಹೊಳೆಗೆ ದಟ್ಟಡವಿಯ ಹಾದಿಯಲ್ಲಿ ಬಸ್ಸು ಚಲಿಸುತ್ತಿರಲು ನಾನು ಕಿಟಕಿಯಾಚೆ ಕಣ್ಣನ್ನೂ ಮನಸ್ಸನ್ನೂ ನೆಟ್ಟಿದ್ದೆ. ಹಟ್ಟಿಹೊಳೆಯೊಳಗೆ ಇಳಿಯದಿದ್ದರೂ ತೂಗು ಸೇತುವೆಯನ್ನು ದಾಟಿ ಹೊಳೆಯ ಮುಂದೆ ಒಂದು ಘಂಟೆಗಳ ಕಾಲ ವಿರಮಿಸಿ ಮುಗಿಯದ ಹರಟೆಯ ಕೊಡವನ್ನು ತುಂಬುತ್ತಾ ಹೊರಟೆವು. ತಂದಿದ್ದ ಬಿಸ್ಕೆಟ್ಟುಗಳನ್ನು ಇಡೀ ಪ್ರವಾಸದಲ್ಲಿ ತಿಂದು ತಿಂದು ದೇಹವೆಲ್ಲಾ ಬಿಸ್ಕೆಟ್ಟುಮಯವಾಗಿ ಹೋಗಿತ್ತು.

ಟಾರು ರಸ್ತೆ ಮುಗಿದು ಕಲ್ಲು ರಸ್ತೆ ಆರಂಭ ಆಗುವ ಹೊತ್ತಿಗಾಗಲೇ ಎಲ್ಲರ ಹೊಟ್ಟೆಯೂ ಊಟವನ್ನು ಕೇಳುತ್ತಿದ್ದವು. ಹಾಗೂ ಅದನ್ನು ಮುಂದೂಡಿ ಒಂದು ನೀರಿರುವ ಸ್ಥಳದಲ್ಲಿ ಕುಳಿತು ಮಡಿಕೇರಿಯಲ್ಲಿ ಕಟ್ಟಿಸಿಕೊಂಡ ಪೂರಿಯನ್ನೂ ಬನ್ಸನ್ನೂ ಷಡ್ರಸೋಪೇತ ಮೃಷ್ಟಾನ್ನ ಭೋಜನದಂತೆ ಮೆಲುಗಿದೆವು. ಶಿಖರವನ್ನು ಮುಟ್ಟುವ ವೇಳೆಗಾಗಲೇ ವಿರಮಿಸಿದ ಸಂಖ್ಯೆ ಇಪ್ಪತ್ತು ಮೀರಿತ್ತು. ಇಷ್ಟೊಂದು ವಿರಮಿಸಿಕೊಂಡು ಮಾಡಿದ ಏಕೈಕ ಚಾರಣ ನನ್ನದಾಗಿದ್ದು ಇದೇ ಮೊದಲು. ಒಂಥರಾ ಚೆನ್ನಾಗಿತ್ತು. ಶಿಖರದ ಮೇಲೆ ಸೂರ್ಯನು ಕೆಂಪಗೆ ಕೊಡಗಿನ ಪಟ್ಟಣಕ್ಕೆ ಇಳಿದ. ಆಗಸವನ್ನೆಲ್ಲಾ ಕೆಂಪಾಗಿಸಿದ್ದ. ಕೆಲವೇ ಹೊತ್ತಿಗೆ ಆಗಸ ಕಪ್ಪಾಗ ತೊಡಗಿತು. ಅಷ್ಟರಲ್ಲಿ ನಮ್ಮ ಕ್ಯಾರಿ ಮ್ಯಾಟು, ಸ್ಲೀಪಿಂಗ್ ಬ್ಯಾಗುಗಳು ಹಾಸಲ್ಪಟ್ಟಿದ್ದವು. ಆದಿ ಹೇಳಿಕೊಟ್ಟ ಆಟವನ್ನಾಡಿ, ಮನಸ್ತೃಪ್ತಿಯಾಗುವಷ್ಟು ನಕ್ಕು ನಕ್ಕು ಕೊನೆಗೆ ಶ್ರೇಯಸ್ ಸ್ವರೂಪ್ ಮತ್ತು ಶ್ರೀನಿವಾಸ ನಮಗಾಗಿ ರೆಡಿ ಮಾಡಿದ್ದ ಕ್ಯಾಂಪ್ ಫೈರ್ ಮುಂದೆ ಕುಳಿತು ಚಪಾತಿ ಗೊಜ್ಜನ್ನು ಸವಿದೆವು. ಎಲ್ಲರೂ ಅಮೃತವನ್ನೇ ಸವಿದಂತೆ ತಲೆದೂಗುತ್ತಿದ್ದರು.

ಬೆಳಿಗ್ಗೆ ಬೇಗ ಎದ್ದು ಮತ್ತೆ ಕೆಂಪಾಗಿ ಮಡಿಕೇರಿಯ ಪೇಟೆಯಲ್ಲಿಳಿದಿದ್ದ ಸೂರ್ಯನು ಸೋಮವಾರಪೇಟೆಯಿಂದ ಮೇಲೆ ಬಂದ. ಅವನಿಗೆ ಗುಡ್ ಮಾರ್ನಿಂಗ್ ಹೇಳಿ ಮತ್ತೆ ಬಿಸ್ಕೆಟ್ಟು ಹಣ್ಣು ತಿಂದು ಕೆಳಗಿಳಿಯಲು ಆರಂಭಿಸಿದೆವು. ಇಳಿಯುವಾಗ ಹತ್ತಿದಷ್ಟು ಆಯಾಸವಾಗಲೀ ಪ್ರಯಾಸವಾಗಲೀ ವಿಳಂಬವಾಗಲೀ ಆಗಲಿಲ್ಲ. ಸರಾಗವಾಗಿ ನಡೆಯಿತು. ಶ್ರೀನಿವಾಸ, ಸಂತೋಷ ಮತ್ತು ವಿವೇಕ ನೀರಿನಲ್ಲಿಳಿಯುವ ಸಲುವಾಗಿ ಬೇಗ ಬೇಗ ಚಾರಣ ಮಾಡಿಕೊಂಡು ಹೋದರು. ಮಿಕ್ಕವರು ಸಾಧಾರಣ ವೇಗದಲ್ಲಿ ನಡೆದು ಸಾಗುತ್ತಿರಲು ಅರಣ್ಯದಲ್ಲೊಂದು ಕಡೆ ಕುರುಡನ ಆತಿಥ್ಯಕ್ಕೆ ಗುರಿಯಾದೆವು. ಮೊದಲು ಶ್ರೀ ಕೈಗೆ ಕಚ್ಚಿತು. ಆಮೇಲೆ ಶೃತಿಯ ಕೈಗೆ. ಆಮೇಲೆ ನನಗೆ. ಗುಂಪು ಗುಂಪಲ್ಲಿ ಜೇನಿನಂತೆ ಬಂದು ನಮ್ಮ ಮುಖ ಮೂತಿ ನೋಡದೆ ರಪರಪನೆ ಬಾರಿಸಿದವು. ಎದ್ದೆನೋ ಬಿದ್ದೆನೋ ಎಂದು ಓಡಿದೆವು. ಒಂದು ಕಿ.ಮೀ. ದೂರ ಓಡಿಸಿಕೊಂಡು ಬಂದವು. ಕನ್ನಡಕವನ್ನು ಬೀಳಿಸಿಕೊಂಡ ಆದಿಯು ಸೀಮಾ ಮತ್ತು ಸಿಂಗರ್ ಶೃತಿಯೊಡನೆ ಹಿಂದುಳಿದಿದ್ದು ಆತಂಕವನ್ನು ಹೆಚ್ಚು ಮಾಡಿತು. ನಂತರ ನಾನು ಮತ್ತು ಶ್ರೇಯಸ್ ಹಿಂದೆ ಹೋಗೆ ಅವರನ್ನು ಕರೆದುಕೊಂಡು ಬಂದೆವು. ಪುಣ್ಯಕ್ಕೆ ಅವನ ಕನ್ನಡಕ ಸಿಕ್ಕಿತು.

ಹಟ್ಟಿಹೊಳೆಯಿಂದ ಶ್ರೀನಿವಾಸನು ಮಡಿಕೇರಿಗೆ ತೆರಳಿ ಅಲ್ಲಿಂದ ಮೈಸೂರಿಗೆ ಹೊರಟ. ನಾವೆಲ್ಲರೂ ಸೋಮವಾರಪೇಟೆಗೆ ಹೋಗಿ ಅಲ್ಲಿ ಲಾಡ್ಜೊಂದರಲ್ಲಿ ಇಳಿದುಕೊಂಡೆವು. ಗೋವಿಂದಪ್ಪನವರು ಬಹಳ ಸಹಾಯ ಮಾಡಿ ಲಾಡ್ಜು ಕೊಡಿಸಿದರು. ಅವರಿಗೆ ಕೃತಜ್ಞ. ರಾತ್ರಿ ಬಹಳ ಹೊತ್ತು ಹರಟುತ್ತಾ ಕುಳಿತಿದ್ದೆವು. ಸಿಂಗರ್ ಶೃತಿ ಮತ್ತು ಶ್ರೀ ಅದ್ಯಾಕೋ ತುಂಬಾ ಭಯ ಪಡುತ್ತಿದ್ದರು. ಕತ್ತಲನ್ನೋದೇ ಹೀಗೆ. ಸುಮ್ಮಸುಮ್ಮನೆ ಹೆದರಿಸಿಬಿಡುತ್ತೆ. ಶ್ರೀ ಪಕ್ಕದಲ್ಲೇ ಕುಳಿತಿದ್ದೆ. ಅವಳು ಬೆಳಗಿನವರೆಗೂ ಬೆಚ್ಚುತ್ತಿರಲು ನನಗೆ ಮಗುವೊಂದು ನೆನಪಾಗುತ್ತಿತ್ತು. ಬೇಸರವಾಯಿತು. ಬೆಳಿಗ್ಗೆ ಎಲ್ಲರನ್ನೂ ಎಬ್ಬಿಸಲು ನಾನು ಹರಸಾಹಸ ಪಟ್ಟೆನಾದರೂ ಸಫಲನಾದೆ. ಬೆಳಿಗ್ಗೆ ಎದ್ದು ಸೋಮವಾರಪೇಟೆಯಿಂದ ಬೀದಳ್ಳಿಗೆ ಹೋಗಿ, ಅಲ್ಲಿಂದ ಹೊಳೆಯತ್ತ ಕಾಲು ಹಾಕಿದೆವು. ಶೃತಿಗೆ ಹೊಟ್ಟೆ ತೊಳೆಸಲಾರಂಭಿಸಿ ಬಹಳ ಒದ್ದಾಡಿದಳು. ಪುನಃ ಮಗುವೊಂದು ನೆನಪಾಯಿತು. ಬೇಸರವಾಯಿತು. ಹಾಗೇ ಸಮಾಧಾನಳಾದಳು. ಹೊಳೆಯಂತೂ ಎಲ್ಲರಿಗೂ ಬಹಳ ಖುಷಿ ಕೊಟ್ಟಿತ್ತು. ಅಲ್ಲಿಂದ ಹಿಂದಿರುಗುವ ವೇಳೆಗೆ ಎಲ್ಲರ ಹೊಟ್ಟೆಯೂ ಕಾದಿದ್ದು, ಅಲ್ಲೇ ಒಂದು ಮನೆಯಲ್ಲಿ ಊಟ ಮಾಡಿ ಸೋಮವಾರಪೇಟೆಗೆ ಹಿಂದಿರುಗಿದೆವು. ಹಿಂದಿರುಗುವ ಬಸ್ಸಿನಲ್ಲಿ ಒಂದು ವರ್ಷದ ಕೆಳಗೆ ಬೆಟ್ಟಿಯಾದ ಚಾರಣಿಗರ ಗುಂಪೊಂದು ಸಿಕ್ಕಿತು. ಅವರನ್ನು ಮಾತನಾಡಿಸಿ ಬಹಳ ಸಂತಸವಾಯಿತು. ಮಡಿಕೇರಿಗೆ ಹೋಗುವ ಹೊತ್ತಿಗೆ ಸಂಜೆಯಾಗಿತ್ತು. ರಾತ್ರಿ ಹನ್ನೊಂದರವರೆಗೆ ಊಟವಾದ ನಂತರ ಪ್ರವಾಸದ feedback ಚರ್ಚಿಸುತ್ತಾ ಕುಳಿತಿದ್ದೆವು.

ಎಲ್ಲರ ಮನಸ್ಸೂ ಇನ್ನೂ ಕೊಡಗಿನಲ್ಲೇ ಇದೆ ಎಂದು ನಾನು ಖಡಾಖಂಡಿತವಾಗಿ ಹೇಳಬಲ್ಲೆ. ಇದು ಕೇವಲ ಕಾಲಿನ ಚಾರಣವಾಗಿರಲಿಲ್ಲ. ಪ್ರಕೃತಿಯನ್ನಾರಾಧಿಸುವ ಚಾರಣ ಮಾತ್ರವಾಗಿರಲಿಲ್ಲ. ಮನಸ್ಸು ಮನಸ್ಸುಗಳ ಮಿಲನದ ಪಯಣವಾಗಿತ್ತು. ಎಲ್ಲರೂ ಎಲ್ಲರನ್ನೂ ಅಷ್ಟರ ಮಟ್ಟಿಗೆ ಹಚ್ಚಿಕೊಂಡಿರುವುದು ಎಲ್ಲರ ಕಂಗಳಲ್ಲೂ ಕಾಣುತ್ತಿತ್ತು. ನನ್ನ ಕಣ್ಣಲ್ಲಿ ಕೂಡ!

ನಾನು

ಸೋಮವಾರಪೇಟೆಯ ಲಾಡ್ಜಿನಲ್ಲಿ ಕೈ ನೋಡಿ ಫಲ ಹೇಳಿದ್ದು, ಚಾರಣದಲ್ಲಿ ಒಂದೆರಡು ಹಾಡನ್ನು ಹೇಳಿದ್ದು, ಚಪಾತಿಯನ್ನು ಬಡಿಸಿದ್ದು, ಬೀದಳ್ಳಿಯ ಹೊಳೆಯಲ್ಲಿ ಬೆನ್ನೊತ್ತಿಕೊಟ್ಟಿದ್ದು, ರಾತ್ರಿ ಆದಿ ಹೇಳಿಕೊಟ್ಟ ಆಟದಲ್ಲಿ ಸೋತು ಅದನ್ನು ಖಂಡಿಸಿದ್ದು, ವಡೆಯನ್ನು ನೆನೆಸಿಕೊಳ್ಳುತ್ತಿದ್ದುದು - ಇಷ್ಟನ್ನು ಬಿಟ್ಟರೆ ನನ್ನ ಬಗ್ಗೆ ಏನೂ ವಿಶೇಷವಿಲ್ಲ. ನಾನು ಅಮುಖ್ಯ.

ಇವರೂ ಕೂಡ..

ಸ್ಮಿತೆ, ಸಿಂಧು ಹಾಗೂ ಶ್ರೀಧರ ಬರಬೇಕಿತ್ತು ಎಂದು ಅನೇಕ ಬಾರಿ ಅನ್ನಿಸಿತು. ಅವರ ಬಗ್ಗೆಯೂ ಸಾಕಷ್ಟು ಬಾರಿ ಮಾತನಾಡುತ್ತಿದ್ದೆವು. ಬಹಳ ಮಿಸ್ ಮಾಡಿಕೊಂಡೆವು.

ಧನ್ಯವಾದಗಳು

ನನಗೆ ಯಾರು ಉಡುಗೊರೆ ಕೊಟ್ಟರೋ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸುತ್ತೇನೆ. ನನ್ನ ಉಡುಗೊರೆಯೊಂದು ತಲುಪಬೇಕಾದವರಿಗೆ ಇನ್ನೂ ತಲುಪಿಲ್ಲ ಎಂಬುದನ್ನು ನಾನು ಅರಿತಿದ್ದೇನೆ. ನನ್ನ ಹೆಸರು ಇರುವುದರಿಂದ ಅದು ಅವರಿಗೆ ಸುಲಭವಾಗಿ ತಲುಪುತ್ತೆ.

-ಅ
01.01.2008
11PM