Friday, February 29, 2008

ಗಾಳಿಪಟ - ಅನಿಸಿಕೆಯಷ್ಟೆ

--> 'ಮುಂಗಾರು ಮಳೆ ಭಾಗ ಎರಡು' ಅಂತ ಹೆಸರಿಡಬಹುದಿತ್ತು.

--> ಗಣೇಶ ಒಬ್ಬನೇ ಮಾತನಾಡುತ್ತಾನೆ ಇಡೀ ಚಿತ್ರದಲ್ಲಿ. ಒಂದು ಥರಾ ಏಕಪಾತ್ರಾಭಿನಯ ಇದ್ದ ಹಾಗಿದೆ.

--> ದಿಗಂತ್ ಸ್ವಲ್ಪ ಬೆಳೆದರೆ 'ಹುಡುಗ'ನ ಹಾಗೆ ಕಾಣಿಸುತ್ತಾನೆ, ಆದರೆ ಹೀರೋ ಆಗಬೇಕೆಂದರೆ ಕಷ್ಟ ಇದೆ. ಫೇರ್ ಎಂಡ್ ಲವ್ಲಿ ಜಾಹೀರಾತಿಗೆ ಸರಿ ಎನಿಸುತ್ತಷ್ಟೆ.

--> ರಾಜೇಶ್ ಬಹಳ ಎತ್ತರದ ಶೃತಿಯಲ್ಲಿ ಮಾತನಾಡುವುದರಿಂದ ಮಾತೆಲ್ಲಾ ಹಾಡಿನಂತೆ. ಆದರೆ ನೋಡಲು ತುಂಬಾ ಸ್ಮಾರ್ಟ್.

--> ಬೋಪಣ್ಣ ಮೌನವ್ರತಿ. ಶೋಲೆಯ ಜಯಬಾಧುರಿ ಒಮ್ಮೆ ನೆನಪಾದಳು.

--> ಉಳಿದಿಬ್ಬರು ನಟಿಯರು ರುದ್ರಭಯಂಕರ.

--> ಅನಂತ್ ನಾಗ್ ಅತ್ಯುನ್ನತ ನಟನೆಂಬುವುದರಲ್ಲಿ ಶಂಕೆಯೇ ಇಲ್ಲ. ಅದರಲ್ಲೂ ಕೆನೆತ್ ಆಂಡರ್‍ಸನ್ ಪುಸ್ತಕ ಓದುತ್ತಾ ಇರುತ್ತಾರೆಂದರೆ ನನ್ನಂಥವನಿಗೆ ವಿಪರೀತ ಸಂತೋಷ.

--> ರಂಗಾಯಣ ರಘು ಅನಂತ್ ನಾಗ್‍ರಂತೆಯೇ ಇನ್ನೊಬ್ಬ ಉತ್ತಮ ನಟ ಎಂಬುದನ್ನು ಪದೇ ಪದೇ ನಿರೂಪಿಸುತ್ತಲೇ ಇದ್ದಾರೆ. ಸೊಗಸಾಗಿ ನಗಿಸುತ್ತಾರೆ.

--> ಮಿಕ್ಕ ನಟರ ಡೈಲಾಗುಗಳನ್ನೆಲ್ಲಾ ಗಣೇಶನಿಗೆ ಕೊಟ್ಟುಬಿಟ್ಟಿದ್ದಾರೆ ನಿರ್ದೇಶಕರು.

--> ಹಾಡುಗಳು ಬಹಳ ಮಧುರ ಮತ್ತು ಉತ್ತಮ ಸಾಹಿತ್ಯದಿಂದ ಕೂಡಿವೆ.

--> ಚಿತ್ರೀಕರಣದ locationಗಳು ಹಸಿರಾಗಿದೆ, ಸೊಗಸಾಗಿದೆ. ಸ್ಕ್ರೀನ್‍ಪ್ಲೇ ಮಾತ್ರ ಹತ್ತಕ್ಕೆ ಒಂದು ಅಂಕ ತೆಗೆದುಕೊಂಡರೆ ಹೆಚ್ಚು.

--> ಡೈಲಾಗುಗಳು ಮನಮುಟ್ಟುವಂತೇನೂ ಇಲ್ಲ. ಕೆಲವು ಸಲ ನಗು ಬರುತ್ತೆ, ಮತ್ತೆ ಕೆಲವು ಸಲ ಅಸಹ್ಯ ಆಗುತ್ತೆ, ಮತ್ತೆ ಕೆಲವು ಸಲ ಈ ಡೈಲಾಗು ಯಾಕಿದೆ ಎಂದು ಯೋಚಿಸುವಂತಾಗುತ್ತೆ.

--> ಈ ಚಿತ್ರಕ್ಕೆ "ವರಾಹ ಮಹಾತ್ಮೆ" ಎಂಬ ಹೆಸರನ್ನು ಕೂಡ ಇಡಬಹುದಿತ್ತು. ಆಗಾಗ್ಗೆ ಬಂದು ಹೋಗಿ ಕೊನೆಗೆ ಹೀರೋ ಥರ ಮೆರೆಯುವ ಕಾರ್ಟೂನ್ ಹಂದಿಯು ಲಯನ್ ಕಿಂಗ್ ಚಿತ್ರದ ಪೂಂಬಾ-ದ ನೆನಪು ಮಾಡುತ್ತೆ. ಆದರೆ ಹಂದಿಯು ಸಿಂಹ ಗರ್ಜನೆ ಮಾಡುವುದನ್ನು ಕಂಡು ವರಾಹಾವತಾರದ ಕಾರ್ಟೂನಿರಬೇಕೆಂದು ಅನ್ನಿಸದೇ ಇರುವುದಿಲ್ಲ.

--> ಗಾಳಿಪಟ - ಯೋಗರಾಜ 'ಭಟ' - ಬಹಳ ಆರ್ಭಟ - ಸಿನಿಮಾ ನೋಡುವ ಚಟ ಇದ್ದರೆ ನೋಡಬಹುದು. ದುಡ್ಡು ಸಮಯ ಪೋಲು ಮಾಡಲು ಸಿದ್ಧವಿದ್ದರೆ!! ನಾನು ಮಾಡಿದೆ!!

-ಅ
29.02.2008
8.40PM

Wednesday, February 27, 2008

ಸಂಬಂಧಿಕರು ಮತ್ತು ನಾವು

ನಮ್ಮ ಮನೆಯಲ್ಲೇ ಸ್ವಲ್ಪ ದಿನ ಉಳಿದುಕೊಂಡಿದ್ದ ನನ್ನ ಸಂಬಂಧಿಕರೊಬ್ಬರು ನಾನು ಟಿವಿ ಚಾನೆಲ್ಲು ಬದಲಾಯಿಸುವುದನ್ನು ನೋಡಿ, "ಅರುಣಂಗೆ ಟಿವಿ ಚಾನೆಲ್ ಬದಲಾಯಿಸೋದು ಬಿಟ್ರೆ ಬೇರೆ ಏನೂ ಕೆಲ್ಸ ಇಲ್ಲ ಅನ್ಸುತ್ತೆ!" ಅಂದಿದ್ದರು.

ನಾನು, "ಹ ಹ್ಹ ಹ್ಹಾ.. ಹೌದು" ಎಂದು ಮುಂದಿನ ಚಾನೆಲ್ ಹಾಕಿದೆ. ನನಗೆ ದರಿದ್ರ ಉದಯಾ ಟಿವಿ ಧಾರಾವಾಹಿ ನೋಡಲು ಇಷ್ಟವಿರಲಿಲ್ಲ. ನನ್ನ ಟಿವಿ, ನಾನು ಏನಾದರೂ ಬದಲಾಯಿಸಿಕೊಳ್ಳುತ್ತೀನಿ!

ಇವೆಲ್ಲಾ ಚಿಕ್ಕ ವಿಷಯ. ಸುಮ್ಮಸುಮ್ಮನೆ ಇಲ್ಲಸಲ್ಲದ ವಿಷಯಗಳಿಗೆ ಮೂಗು ತೂರಿಸಿಕೊಂಡು ಬರುವ 'ಸಂಬಂಧಿಕರ' ಬಗ್ಗೆ ಸಿಟ್ಟಾಗುವುದೋ, ಅಸಹ್ಯ ಪಡುವುದೋ, ಅನುಕಂಪ ಪಡುವುದೋ ಗೊತ್ತಾಗುವುದೇ ಇಲ್ಲ.

ಕಾಲೇಜು ಮುಗಿಸಿದ ಹುಡುಗಿ ಮನೆಯಲ್ಲಿದ್ದಾಳೆಂದರೆ ಮುಗಿಯಿತು. ಊರೂರಿಂದೆಲ್ಲಾ ಸಂಬಂಧಿಕರು ಹುಟ್ಟಿಕೊಂಡುಬಿಡುತ್ತಾರೆ. ಯಾರ್ಯಾರದೋ ಅತ್ತಿಗೆಯರು, ಯಾರ್ಯಾರದೋ ದೊಡ್ಡಪ್ಪಿಂದಿರೆಲ್ಲಾ, "ನಮ್ಮ ಜವಾಬ್ದಾರಿ" ಎಂದು ಮನೆಯೊಳಗೆ, ತೀರ ಒಳಗೆ ಬಂದುಬಿಡುತ್ತಾರೆ - ಅಪ್ಪಣೆಯಿಲ್ಲದೆ! "ಒಳ್ಳೇ ಗಂಡು ಇದೆ ಕಣೆ, ನಮ್ಮ ಯಜಮಾನ್ರು ಇದ್ದಾರಲ್ಲಾ, ಅವರ ತಂಗಿಯ ಓರಗಿತ್ತಿಯ ಬಾಮೈದನ ಸ್ವಂತ ತಮ್ಮನ ಮಗ. ಹೇಗಿದ್ರೂ ನಮಗೂ ಹತ್ತಿರದ ಸಂಬಂಧ." ಅಂತ ದೊಡ್ಡಮ್ಮನ ಕರೆ!

"ಅಪ್ಪಾ, ನಂಗೆ ಮದುವೆ ಈಗಲೇ ಬೇಡ, ನಾನು ಓದಬೇಕು" ಅಂತ ಹೇಳಿದಳೋ ಮುಗಿಯಿತು. "ಯಾರನ್ನಾದರೂ ಇಷ್ಟ ಪಡ್ತಿದಾಳಾ ಕೇಳೋ" ಅಂತ ಅಪ್ಪನ ಭಾವ ಕೇಳಿಬಿಟ್ಟಿರುತ್ತಾನೆ. "ಒಂದು ವೇಳೆ, ಯಾವ್ದೋ ಜಾತಿಯವರನ್ನೆಲ್ಲಾ ಇಷ್ಟ ಪಟ್ಬಿಟ್ರೆ ಕಷ್ಟ ಕಣೋ, ಏನೋ ಈ ಕಾಲದಲ್ಲಿ ಲವ್ ಮ್ಯಾರೇಜ್‍ನ ಸಹಿಸ್ಕೋಬೋದು, ಆದ್ರೆ ಬ್ರಾಹ್ಮಣ್ರೇ ಅಲ್ಲದೇ ಇದ್ರೆ ಹೇಗ್ ಮದುವೆ ಮಾಡ್ತೀಯ ನಿನ್ ಮಗ್ಳ್ನ ಅವನಿಗೆ?" ಅಂತ ಅಪ್ಪನ ತಲೆಯಲ್ಲಿ ಜಾತಿಯ ಗೆದ್ದಲನ್ನು ಬಿಟ್ಟರೆಂದರೆ ಮುಗಿಯಿತು.

ಒಂದು ವೇಳೆ ಯಾರನ್ನಾದರೂ ಇಷ್ಟ ಪಟ್ಟಿದ್ದೇನೆಂದು ಒಪ್ಪಿಕೊಂಡಿದ್ದು, ಆ ಹುಡುಗನನ್ನು ಅಪ್ಪ ಅಮ್ಮ ಇಬ್ಬರೂ ಒಪ್ಪಿ ಆಗಿದ್ದ ನಂತರವೂ ಈ ಸಂಬಂಧಿಕರು ಸುಮ್ಮನಿರುವುದಿಲ್ಲ. ಇನ್ಯಾವುದೋ ಸಂಬಂಧ ಹುಡುಕಿ "ಈ ಹುಡುಗ ಎಂ.ಬಿ.ಎ. ಮಾಡಿದ್ದಾನೆ. ನಮ್ ಹುಡುಗಿಗೆ ತಕ್ಕನಾಗಿದ್ದಾನೆ. ಐವತ್ತು ಸಾವಿರ ಸಂಬಳ. ಇನ್ನೊಂದ್ ಸಲ ಯೋಚನೆ ಮಾಡೋಕೆ ಹೇಳಿ ಮಗಳಿಗೆ. ಒಂದ್ ಸಲ ನೋಡ್ಲಿ. ಒಪ್ಕೊಳೋದು ಬಿಡೋದು ಆಮೇಲೆ. ನೋಡೋಕೇನಂತೆ?" ಸುಮ್ನೆ ನೋಡ್ಬೇಕಂತೆ, ಯಾಕೆ ಅಂತಲೇ ಅರ್ಥ ಆಗೋದಿಲ್ಲ.

ಸಂಬಂಧಿಕರ ಮಗನೋ ಮಗಳೋ ಚೆನ್ನಾಗಿ ಓದುವವನಾಗಿದ್ದು ನಾವು ದಡ್ಡರಾಗಿದ್ದೆವೆಂದರೆ ಮುಗಿಯಿತು. ಪಿ.ಯು.ಸಿ. ಪರೀಕ್ಷೆ ಯಾಕಾದರೂ ಮುಗಿಯಿತಪ್ಪಾ ಅನ್ನಿಸಿಬಿಡುತ್ತೆ. "ನಮ್ ಮಗ ಟ್ಯೂಷನ್‍ಗೇ ಹೋಗ್ಲಿಲ್ಲ. ತೊಂಭತ್ತೆರಡು ಪರ್ಸೆಂಟು! ನೀನು ಓದ್ಲಿಲ್ಲ ಕಣೋ. ಈಗ ಏನ್ ಮಾಡ್ತೀಯ? ನಿಂಗೆ ಇಂಜಿನಿಯರಿಂಗ್ ಸೀಟು ಯಾರ್ ಕೊಡ್ತಾರೆ? ಬಿ.ಎಸ್.ಸಿ. ಓದ್ತೀಯಾ?" ಅಪ್ಪನನ್ನು ಕರೆದು, "ಲೋ, ಇವನನ್ನು ಬಿ.ಎಸ್.ಸಿ. ಎಲ್ಲಾ ಓದಿಸ್ಬೇಡ್ವೋ, ಪೇಮೆಂಟ್ ಸೀಟಾದರೂ ಚಿಂತೆಯಿಲ್ಲ, ಇಂಜಿನಿಯರಿಂಗೇ ಓದ್ಸು." ಆದೇಶ ಕೊಟ್ಟಾಯ್ತು. "ಅಪ್ಪ, ನಾನು ಸಾಹಿತ್ಯ ಓದ್ಬೇಕು, ಆರ್ಟ್ಸ್ ತೊಗೋತೀನಿ" ಅಂತ ಮಗ ಹೇಳಲು ಆಗೋದೇ ಇಲ್ಲ. ಹಾಗೆ ಹೇಳಿದರೂ ಅಪ್ಪನಿಗಾಗುವಷ್ಟು ಖೇದ ಬೇರೆ ಯಾರಿಗೂ ಆಗೋದಿಲ್ಲ. ಯಾಕೆಂದರೆ, ಸಂಬಂಧಿಕರಿಗೆ ಅಪ್ಪ ಹೇಳಲಾರ ತನ್ನ ಮಗ ಬಿ.ಎ. ಓದ್ತಾ ಇದ್ದಾನೆ ಅಂತ.

"ಎಲ್ಲಿ ಕೆಲ್ಸ ಮಾಡ್ತಿದೀಯ?" ನನ್ನ ಕೇಳಿದರು ಅಮ್ಮನ ಕಝಿನ್ ಒಬ್ಬರು. ನಾನು ಆಗಿನ್ನೂ ಶಾಲೆ ಸೇರಿರಲಿಲ್ಲ. ಆರ್.ಹೆಚ್.ಎಂ ನಡೆಸುತ್ತಿದ್ದೆನಷ್ಟೆ. "ಒಂದು ಅಡ್ವೆಂಚರ್ ಸಂಸ್ಥೆಗೆ ಮುಖ್ಯಸ್ಥನಾಗಿದ್ದೀನಿ" ಅಂದೆ. ಮುಖವನ್ನು ಹರಳೆಣ್ಣೆ ಕುಡಿದ ಹಾಗೆ ಮಾಡಿಕೊಂಡರು. "ಯಾಕೆ ಎಲ್ಲೂ ಕೆಲ್ಸಕ್ಕೆ ಸೇರ್ಕೊಳ್ಳಲಿಲ್ವಾ?" ಎಂದರು. ಅಮ್ಮನಿಗೆ ನೋವಾಯಿತೋ, ಅವಮಾನವಾಯಿತೋ ಗೊತ್ತಿಲ್ಲ, "ಇಲ್ಲಾ, ಕೆಲ್ಸ ನೋಡ್ತಾ ಇದ್ದಾನೆ" ಅಂದುಬಿಟ್ಟರು. ಆಗ ನನಗಂತೂ ನೋವಾಗಿತ್ತು.

ಕೆಲವು ಸಂಬಂಧಿಕರು ಮನೆಗೆ ಬಂದರೆ ಯಾಕಾದರೂ ಬಂದರಪ್ಪಾ ಅನ್ನಿಸಿಬಿಡುತ್ತೆ. ಮನೆಯೊಳಗೇನು, ತಮ್ಮ ಉದ್ದನೆಯ ಹರಿತವಾದ ಮೂಗನ್ನು ಕೋಣೆಯೊಳಕ್ಕೂ ತಂದುಬಿಟ್ಟರು ಒಬ್ಬರು.

"ಏನೋ ನಿನ್ ರೂಮು ಇಷ್ಟೊಂದು ಗಲೀಜ್ ಆಗಿದೆ?" ಕೇಳಿದರು.
"ನನ್ ರೂಮಿಗೆ ಯಾಕ್ ಬರೋಕ್ ಹೋದ್ರಿ, ಅಮ್ಮ ಹೊರಗೆ ಇದಾರೆ ನೋಡಿ" ಅಂದುಬಿಟ್ಟೆ.

-ಅ
28.02.2008
12.40AM

Tuesday, February 26, 2008

ಹೊಸ ದ್ವೀಪಗಳಿಗೆ ಹೊರಟಾನ..

--> ಬೇಂದ್ರೆ ಮನೆಯೊಳಕ್ಕೆ ಹೋಗಲಾಗಲೇ ಇಲ್ಲ. ನಾಲ್ಕು ಮನೆಗಳ ಪಕ್ಕದಲ್ಲಿದ್ದೆ. ಹೊರಗಿನಿಂದ ನೋಡಿದ್ದಾಯಿತಷ್ಟೆ. ಬೇಂದ್ರೆ ಸಾಹಿತ್ಯವನ್ನು ಓದೇ ಇಲ್ಲ, ಕಡೇ ಪಕ್ಷ ಅವರ ಮನೆಯನ್ನಾದರೂ ನೋಡಬಹುದೇನೋ ಬೆಳಿಗ್ಗೆ ಎದ್ದು ಎಂದುಕೊಂಡಿದ್ದೆ. ಅಷ್ಟೂ ದೂರ ಹೋಗಿದ್ದು ವ್ಯರ್ಥವಾಗಿ ಹೋಯಿತು. ಇಂದಿನಿಂದ ದಿನಕ್ಕೊಂದು ಕವನದಂತೆ ಬೇಂದ್ರೆ ಕವನವನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗದಿದ್ದರೂ ಓದಬೇಕೆಂದುಕೊಂಡಿದ್ದೇನೆ.

ಗೊತ್ತಿರುವ ಕವನದಿಂದಲೇ ಆರಂಭ...

ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ.. ಅಂದದೋ ಅಂದದ..

--> ಇಂದು 'ವಿಹಾ' ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾ ಹೊಸ ದ್ವೀಪಕ್ಕೆ ಕಾಲಿಡುತ್ತಿದ್ದಾಳೆ. ಅವಳಿಗೆ ಆಶೀರ್ವಾದದ ಶುಭ ಹಾರೈಕೆಗಳು. ಬಾಳು ಬೆಳಗಲಿ.
-->ಇನ್ನೊಂದು ಹೊಸದ್ವೀಪಕ್ಕೆ ನನ್ನನ್ನು ಕರೆದೊಯ್ಯಲು ನನ್ನ 'ಅವಳು' ತುದಿಗಾಲಲ್ಲಿ ಕಾದಿದ್ದಾಳೆ. ನಾನೂ ಅಷ್ಟೇ!

--> ನಾನು ಕವಿತೆ ಎಂಬುವುದನ್ನು 'ಬರೆಯೋಕೆ' ಆರಂಭಿಸಿದ್ದು ಕಾಗದದ ಮೇಲೆ. ಅದೇ ನನಗೆ ಸಂತಸ ಕೊಟ್ಟಿದ್ದು. ಯಾಕೆಂದರೆ ಅದನ್ನು ನಾನಷ್ಟೇ ಓದುತ್ತಿದ್ದೆ. ಬ್ಲಾಗಿನಲ್ಲಿ ಬರೆಯಲು ಒಂದು ವರ್ಷದಿಂದಷ್ಟೇ ಆರಂಭಿಸಿದ್ದು. ಮುಂಬರೆಯುವ ಕವಿತೆಗಳಿಗೆ ಪುನಃ ಸಂತಸದ ದಾರಿ ತೋರಿಸಬೇಕಾಗಿದೆ. ಹೊಸ ದ್ವೀಪಕ್ಕೆ ಕವಿತೆಗಳು..

-ಅ
26.02.2008
10AM

Saturday, February 23, 2008

ಉತ್ತರವಿಲ್ಲ

ಉತ್ತರವಿಲ್ಲ ನಿನ್ನ ಪ್ರಶ್ನೆಗಳಿಗೆ,
ಉಸಿರಿದೆಯಷ್ಟೇ -
ನಿನ್ನ ಹೆಸರ ಹೇಳುವ
ಉಛ್ವಾಸ ನಿಶ್ವಾಸ
ಬದುಕುಳಿದಿರಲದೊಂದೇ ವಿಶ್ವಾಸ.

ಕನಲುಗಳು ನಿನಗೂ ನನಗೂ
ಇಹುದೆಂಬುದಂತೂ ದಿಟ.
ಕನಲು ನಿನಗೆ ನಾನು
ನನಗೆ ನೀನು, ಆದರೂ ಕೊಲ್ಲುವ ಹಟ.
ಎತ್ತರಕೆ ದುಡಿದು
ಹತ್ತಿರವ ತೊರೆವೆನೇ?

ತಪ್ಪು ನಾ ಮಾಡೆನೆಂಬ ಹಮ್ಮು
ಒಪ್ಪಿ ನೀ ನಡೆಯೆನೆಂಬ ಸಂದೆಯ
ತುಂಬಿರಲು ಪ್ರಶ್ನೆಯಲ್ಲದಿನ್ನೇನು ಬಾಳಲಿ?
ಉತ್ತರವು ಎಲ್ಲಿಹುದು?
ನಾಕವು ನರಕವಾಗಲು ಸಾಲದೆ
ಪ್ರಶ್ನೆಯು?

-ಅ
23.02.2008
12.30AM

Wednesday, February 20, 2008

ನಿನ್ನ ಮುನಿಸು

ಹಗೆ ಸಾಧಿಸುವರಿಹರು ಸಹಸ್ರರು
ಬಗೆಯಿವರದೇನೆಂದೇ ಅರ್ಥೈಸಲು ಆಗುತ್ತಿಲ್ಲ
ಧಗೆಯೇಕಿವರ ಶಸ್ತ್ರ? ನನ್ನ ಮೇಲೆ?
ಭಗತಾಪದಿಂದ ಕೊಲ್ಲಲೇ?
ನಗುವೊಂದೇ ನನ್ನಸ್ತ್ರ ಇವರೆಡೆಗೆ.

ಅಜಯವಿಲ್ಲ ನನಗೆಂದೂ ಹಗೆಯೆದುರು.
ಆದರೆ,
ನಿನ್ನ ಮುನಿಸೊಂದು ನನ್ನ ಕುಗ್ಗಿಸಿ
ಯಶದ ಅರಿಯೆದುರು ಬಗ್ಗಿಸಿ
ಮೌನದ ಗವಿಯೊಳು ನುಗ್ಗಿಸಿ
ಕೊಲದೇ ಉಳಿಸದೇ ಉಸುರಿಸುತಿದೆ.

-ಅ
20.02.2008
11.50PM

ಸ್ವರೂಪಹೊಸ ಸಾಲು, ಬರೆಯಲು ನಾನು
ನಿನ್ನೆದುರು ನಿಂತ ಹೊಸ ಸಾಲಿಗೆ
ಬಯಸುತ ಎಂದೆಂದೂ
ಮೈತ್ರಿಯೆದೆಯ ಪಾಲಿಗೆ
ಸವಿಸಕ್ಕರೆಯಂತದು ಬಾಳ ಹಾಲಿಗೆ.

ಹೊಸ ಬಾಳು, ಮುಂದಿರಲು
ನಿನ್ನೆದುರು ನಿಂತ ಹೊಸ ದಿನವು
ಹರಸುತ ಎಂದೆಂದೂ
ಸೊಗಸಂಧ್ಯೆಯ ತುಂಬಿದಿನವು
ಬೆಳಗೆ ಏರಲಿನ್ನೂ ನಿನ್ನ ಘನವು.

ಹುಟ್ಟುಹಬ್ಬದ ಶುಭಾಶಯಗಳು ಸ್ವರೂಪ.

-ಅ
19.02.2008
5PM

Thursday, February 14, 2008

ಉದರನಿಮಿತ್ತಂ - ಭಾಗ ೨

ಇಲ್ಲಿದೆ ಫ್ಲಾಷ್ ಬ್ಯಾಕ್

ಈಗ ಯಾವ ಭವಿತವ್ಯದ ಪಯಣದ ಆಣತಿಗೋ ಏನೋ, 'ಪಾರ್ಥ ಕರ್ಣ'ರ ಪ್ರೇರೇಪಣೆಯಿಂದಲೋ ಏನೋ, ಇಂದು ನಾನಿದ್ದ ಶಾಲೆಗೆ ರಾಜಿನಾಮೆ ಸಲ್ಲಿಸಿಬಿಟ್ಟೆ.

ಮಕ್ಕಳನ್ನು ತುಂಬಾ ಮಿಸ್ ಮಾಡ್ಕೋತೀನಿ.

ಜೊತೆಗೆ 'ಇಂಗ್ಲಿಷ್' ಪಂಡಿತರನ್ನು ಕೂಡ!! ಅವರುಗಳ ಅಮೃತವಾಣಿಯನ್ನು ಕೂಡ..

ಹೊಸಹಾದಿಯತ್ತ ಪಯಣ ಹೊರಟಿರುವೆ. ಜಗದ ಶುಭ ಹಾರೈಕೆಯೊಂದಿಗೆ.. (ಹೊಸಹಾದಿ = ಪಶ್ಚಿಮ ಕಾರ್ಡ್ ರಸ್ತೆಯ ಬದಲು ಬನ್ನೇರುಘಟ್ಟ ರಸ್ತೆ! ಇದಕ್ಕೆ ಶ್ರೀನಿಧಿಯಿಂದ 'ಗೊಳ್' ಎಂಬ ಉತ್ತರ ಬಂದೀತು.)

ಮತ್ತೆ ಇನ್ನೊಂದು ವಿಷಯ. ಎಲ್ಲರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು. ಮಿತ್ರರೆಲ್ಲರೂ ಕವಿತೆಗಳ ಸುರಿಮಳೆಯನ್ನೇ ಚೆಲ್ಲಿದ್ದಾರೆ. ಎಲ್ಲರಿಗೂ ಅಭಿನಂದನೆಗಳು.

೧. ಶ್ರೀಧರ ಮೊದಲ ಬಾರಿಗೆ ಕವನ ಬರೆದಿದ್ದಾನೆ. ಉತ್ತಮವಾದ ಪ್ರಯತ್ನ. ನನ್ನ ಮೊದಲ ಕವನ ನೋಡ್ಕೊಂಡೆ. ಶ್ರೀಧರನನ್ನು ನೋಡಿ ಕಲಿಯಬೇಕಿತ್ತೆನಿಸಿತು. - ನಾನು ಕವಿಯಲ್ಲ.

೨. ಶ್ರೀಕಾಂತ ಅಪರೂಪಕ್ಕೆ ಕವನ ಬರೆದಿದ್ದಾನೆ. ಕವಿತೆಯು ಇವನ ಪ್ರಕಾರವಲ್ಲ. ಆದರೆ ಅತಿ ಸೊಗಸಾದ ಪ್ರಯತ್ನ ಮಾಡಿದ್ದಾನೆ. ಕವಿತೆಗೆ ಹಾಡಿನ ರೂಪ ಕೊಡುವಂತೆ ಇಂಪಾಗಿದೆ. - ಒಲವೇ...

೩. ಗಂಡಭೇರುಂಡನ ಕವಿತೆಗಳ ಬಗ್ಗೆ ವಿಶೇಷವಾಗಿ ಹೇಳಬೇಕೇ? ಕವಿತೆಗಳಿಗೇನಾದರೂ ಗುರು ಆದರೆ ನಾನು ಇವನ ಪ್ರಥಮ ಶಿಷ್ಯನಾಗ ಬಯಸುತ್ತೇನೆ. ಪದಗಳ ಮೇಲೆ ಇವನಿಗಿರುವ ಹಿಡಿತ ಬಹಳ ಮೆಚ್ಚುವಂತದ್ದು. - ನೀ ಎಲ್ಲಿರುವೆ?

೪. ಶ್ರೀನಿಧಿ ಎಂಥಾ ಭಾವಕವಿ ಎಂಬುದನ್ನು ಈಗಾಗಲೇ ಇಡೀ ಕನ್ನಡ ಬ್ಲಾಗ್ ಸಮೂಹ ಕಂಡಾಗಿದೆ. ಇವನು ಕವಿತೆಗಳನ್ನು ಕೇವಲ ಬರೆಯುವುದಿಲ್ಲ, ಅದಕ್ಕೆ ಜೀವವನ್ನು ತುಂಬುತ್ತಾನೆ. ನಿಜಕ್ಕೂ ಮೈ ಮನಸ್ಸು "ಜುಂ" ಎನ್ನುವಂತಾಗಿದೆ ಅನೇಕ ಸಲ. ಈ ಸಾರಿಯದಂತೂ ನನಗೆ ತುಂಬಾ ತುಂಬಾ ಹಿಡಿಸಿಬಿಟ್ಟಿತು. ವೆರಿ ಗುಡ್ ಶ್ರೀನಿಧಿ. ಕಡಲ ಬಯಕೆಯಂತೆ ನನ್ನ ಬಯಕೆಯೂ ತೀರದು. ನಿನ್ನ ಕವಿತೆಯೆಂಬ ನದಿಯು ಹರಿಯುತ್ತಿರಲಿ. - ಅರ್ಧ ಕವಿತೆಗಳು

ಪ್ರಮಾಣ ವಚನ: ನಾನೂ ಯಾವತ್ತಾದರೂ ಉತ್ತಮ ಕವಿತೆಯನ್ನು ಬರೆಯುವ ಪ್ರಯತ್ನ ಮಾಡುತ್ತೇನೆ.

ಈಗ ನನ್ನ ಮುಂದಿನ ಮೇಜಿನ ಮೇಲೆ ತಿನ್ನಲು ಬಹಳ ತಿನಿಸುಗಳಿವೆ. ಉದರನಿಮಿತ್ತಂ ಬಹುಕೃತ ರೇಷನ್!! ಕವಿತೆ ಆಮೇಲೆ, ಮೊದಲು ಹೊಟ್ಟೆ.

-ಅ
14.02.2008
11.50PM

Wednesday, February 13, 2008

ಜಾವದಂತೆ..

ಆವ ಚಣದೊಳು
ಆವ ವರ್ಣ
ಕಾವ ಧಗೆಗೆ ಹಸುರು ಪರ್ಣ
ಅರಿಯದಾದೆನಲ್ಲ ಜಗವು
ಜಾವ ಜಾವಕೆ ಪಾರ್ಥ ಕರ್ಣ

-ಅ
13.02.2008
11.10PM

Sunday, February 10, 2008

ಬದುಕು ಸುಂದರ

ಒಣಗಿ ಕರಕಲು ಎದೆಯ ಗಿಡದಿ
ಮತ್ತೆ ಹಸಿರೆಲೆ ಚಿಗುರಿದೆ
ಬರಡು ಬತ್ತಿದ ಮನದ ನೆಲಕೆ
ಪುಷ್ಪವೃಷ್ಟಿಯ ಸುರಿಸಿದೆ.

'ಇರುಳು' ಸರಿದು ಬೆಳಕು ಮೂಡೆ
ಭಾಗ್ಯ ರೇಖೆಯ ರಚಿಸಿದೆ
ಕನಸ ಬೆಳಗಲು ಬರಿದ ಹೃದಯಕೆ
ಮತ್ತೆ ಪ್ರೀತಿಯು ಸೃಜಿಸಿದೆ.

-ಅ
10.02.2008
10PM

Friday, February 8, 2008

ಚಿಟಟಚಿಚಿಣಚಿಣಚಿಟ

ಮೆಜೆಸ್ಟಿಕ್ ಸೇತುವೆಯ ಮೇಲೆ ನಾನು, ಶ್ರೀನಿಧಿ, ಸುಶ್ರುತ 'ಚಿತ್ರಚಾಪ'ದ ಕನಸಿನ ಅಡಿಪಾಯ ಹಾಕಿದ್ದನ್ನು ಜನ್ಮೇಪಿ ಮರೆಯುವಂತಿಲ್ಲ. ಆದರೆ ಗಣೇಶನ ಮದುವೆಯಂತೆ ವಿಘ್ನಗಳು ಹಲವು ಬಂದವು.

ಎಲ್ಲರೂ ಈ ಮೈಲ್ ಕಳಿಸಿಕೊಂಡಿದ್ದೆವು ತಮ್ಮ ತಮ್ಮ ಪ್ರಬಂಧಗಳನ್ನು. ಆದರೆ ನನ್ನ ಬರಹ ಮಾತ್ರ ಶ್ರೀನಿಧಿಗೆ "ಈ.." ಅಷ್ಟೇ ಹೋಗಿತ್ತು. ಅರ್ರೆ, ಇದೇನಪ್ಪಾ ಅಂದುಕೊಳ್ಳುತ್ತಿದ್ದಂತೆಯೇ ಬಿ.ಎಸ್.ಎನ್.ಎಲ್ ಎಲ್ಲಾ ರೀತಿಯ 'ವರ'ಗಳನ್ನು ನನಗೆ ದಯಪಾಲಿಸಿಬಿಟ್ಟಿತು.

ಸುಶ್ರುತ ಅಂತೂ ನನ್ನ ಮೇಲೆ, ಶ್ರೀನಿಧಿ ಮೇಲೆ ಕೆಂಡಾಮಂಡಲವಾಗಿದ್ದ. ಜೂನ್ ಐದಕ್ಕೆ ಬರಬೇಕಾದ ಚಿತ್ರಚಾಪ ಆಗಸ್ಟ್ ಆದರೂ ಏನೂ ಆಗಿಲ್ಲ ಅಂದ್ರೆ ಹೇಗೆ! ಕೊನೆಗೂ ಪ್ರಣತಿಯ ಜನ್ಮದ ಯೋಜನೆಯನ್ನು ವಿಜಯಾ ಹಾಕಿಕೊಂಡ ಮೇಲೆ ಚಿತ್ರಚಾಪಕ್ಕೆ ಸೂಕ್ತ ನೆಲೆ ಸಿಕ್ಕಂತಾಯಿತು. ಅಲ್ಲಿಯವರೆಗೂ ನಾವು ಮುಂದಿಟ್ಟ ಒಂದು ಹೆಜ್ಜೆಯನ್ನು ಹಿಂದಕ್ಕೂ ತೆಗೆದುಕೊಂಡಿರಲಿಲ್ಲ, ಮುಂದಕ್ಕೂ ಇಟ್ಟಿರಲಿಲ್ಲ. ಈಗ ಆ ಹೆಜ್ಜೆಗುರುತಿನ ಜಾಡು ಹಿಡಿದು ಹೋದಾಗ ಮನಸ್ಸಿಗೆ ಹಿತವೆನಿಸುತ್ತೆ.

ಶ್ರೀನಿಧಿಯು "ನಮ್ಮ ಪುಸ್ತಕ ಓದ್ತಾರಾ?" ಅಂತ ಕೇಳಿದ್ದಾಗ ಅನ್ನಪೂರ್ಣ, "ಶ್ರೀನಿಧಿ, ಅರುಣ ಸುಶ್ರುತ ಎಲ್ಲಾ ಬರೆದಿದ್ದರೆ ಓದದೇ ಇರುತ್ತಾರಾ?" ಎಂದು ಕೇಳಿದ್ದರು. ಈಗ ಅದು ಗೊತ್ತಾಗುವುದರಲ್ಲಿದೆ.

ಮೊನ್ನೆ ಪುಸ್ತಕದ ಬರಹಗಳನ್ನು 'ಪ್ರೂಫ್ ಕರೆಕ್ಷನ್' ಮಾಡುತ್ತಿರುವಾಗ ನಕ್ಕಿದ ಬಗೆಯು ಬಹಳ ವರ್ಷಗಳಾಗಿದ್ದವು.

ಅದ್ಯಾವ ತಂತ್ರಾಂಶವೋ ಗೊತ್ತಿಲ್ಲ, ಕನ್ನಡಕ್ಕೂ ಅದಕ್ಕೂ ಅದ್ಯಾವ ಜನ್ಮದ ಹಗೆಯೋ ಏನೋ! ಕನ್ನಡದ ಮಧ್ಯೆ ಇಂಗ್ಲೀಷನ್ನು ಬಳಸಗೊಡಿಸುವುದೇ ಇಲ್ಲ.
"ನೀವು ಪ್ರಾಣಿಗಳಿಗೆ ಚಿಟಟಚಿಚಿಣಚಿಣಚಿಟ ಕೊಡ್ತೀರಾ ಅನ್ಸುತ್ತೆ, ನಿಮ್ಮ ಮನೆ ಒಂದ್ ಥರಾ ಚಿಟಟಚಿಚಿಣಚಿಣಚಿಟ ಇದ್ದ ಹಾಗೆ" ಅಂತ ಒಂದು ಕಡೆ ಇತ್ತು. ಇದೇನಪ್ಪಾ ಒಳ್ಳೇ ಸೆನ್ಸಾರ್ ಮಂಡಳಿಯವರು ಕೆಟ್ಟ ಶಬ್ದಗಳನ್ನು ತಡೆಗಟ್ಟಲು ಬಳಸುವಂತಿದೆಯಲ್ಲಾ ಅಂತ ಅನ್ನಿಸುವಂತಿತ್ತು. ಇನ್ನೊಂದು ಕಡೆ ಇದೇ ಥರ."ಅರುಣ, ನೀನು ತುಂಬಾ ಚಿಟಟಚಿಚಿಣಚಿಣಚಿಟ". ಇದನ್ನು ಪ್ರೂಫ್ ಮಾಡುತ್ತಿದ್ದ ಶ್ರೀನಿಧಿ, "ನೀವು ಏನು ಅನ್ನೋದನ್ನ ನೀವೇ ಹೇಳ್ಬಿಡಿಪ್ಪಾ" ಅಂದ. ಶ್ರೀನಿವಾಸನ ಬರಹದಲ್ಲಿ ಕಳೆದು ಹೋಗಿದ್ದ ನನ್ನನ್ನು ಇದ್ದಕ್ಕಿದ್ದಂತೆ ತಲೆಕೊಡವಿಕೊಳ್ಳುವಂತೆ ಮಾಡಿದ್ದು, "ಆ ಹೋಟೆಲ್‍ನ ಫಲಕ ಇಂತಿತ್ತು: ಚಿಟಟಚಿಚಿಣಚಿಣಚಿಟಚಿಟಟಚಿಚಿಣಚಿಣಚಿಟಚಿಟಟಚಿಚಿಣಚಿಣಚಿಟ ಚಿಟಟಚಿಚಿಣಚಿಣಚಿಟ" ಅಂತ ಓದಿದಾಗ. ಏನಿತ್ತಪ್ಪಾ ಹೊಟೆಲ್ ಮೇಲೆ!!

ಇದನ್ನೋದುತ್ತಿದ್ದಾಗ ಹೊಟ್ಟೆ ಹುಣ್ಣಾಗುವಂತೆ ನಗು ಬರುತ್ತಿತ್ತಾದರೂ ಓದುವುದನ್ನು ನಿಲ್ಲಿಸಲಿಲ್ಲ. ಕರೆಂಟಿರದೇ ಇದ್ದರೂ ಕ್ಯಾಂಡ್ಲ್ ದೀಪದಲ್ಲೇ ಓದುತ್ತಾ ಕುಳಿತಿದ್ದವರು ಶ್ರೀನಿಧಿ ಮತ್ತು ಸುಶ್ರುತ.

ಎಲ್ಲರೂ ಮೌನದಿಂದ ಓದುತ್ತಿರಲು ಶ್ರೀನಿಧಿ ತನ್ನ ದೊಡ್ಡ ದನಿಯಲ್ಲಿ ಇದ್ದಕ್ಕಿದ್ದ ಹಾಗೆ ಕೂಗ ತೊಡಗಿದ. " ಓಓಓಓಓಓಓ.... ಛೇಏಏಏಏಏ!!!!!!!!" ಅಂತ. ನನಗೆ ಏನೂ ಅರ್ಥ ಆಗಲಿಲ್ಲ. ಅದು ಒಂದು ಬರಹದಲ್ಲಿದ್ದ ಸಾಲುಗಳು ಎಂದು ನನಗೆ ಆಮೇಲೆ ಅರ್ಥ ಆದಾಗ ಅದೆಷ್ಟು ನಕ್ಕೆನೋ ನನಗೆ ಮಾತ್ರ ಗೊತ್ತು. ಮರುದಿನ ಬೆಳಿಗ್ಗೆ ಕೂಡ ಬಸ್ಸಲ್ಲಿ ಒಬ್ಬೊಬ್ಬನೇ ನಗುತ್ತಿದ್ದೆ.

ಅಂತೂ ಎಲ್ಲವೂ ಮುಗಿದು ಈಗ ಬಿಡುಗಡೆಯ ಹಂತದಲ್ಲಿ ಚಿತ್ರಚಾಪ ನಿಂತಿದೆ. ನಮಗೆ ಆಲ್ ದಿ ಬೆಸ್ಟ್!

-ಅ
07.02.2008
12.30AM

Tuesday, February 5, 2008

ನೀನದಕೆ...ಬದುಕು ಪಗಡೆ ಹಾಸು
ರಕ್ಷೆಯಿರದ ಕಾಯಿ ನಾನು.
ಅಕ್ಷ ನೀನದಕೆ.

ಬಾಳು ತಮಸಿನಿರುಳು
ಬೆಳಗೆ ನಾನು 'ಇಂದು'.
ರವಿಯು ನೀನದಕೆ.

ಬದುಕಾಸೆಯ ಹೆಮ್ಮರವು
ಬರಿಯೆ ಬೇರಷ್ಟೆ ನಾನು.
ನೀರು ನೀನದಕೆ.

ಬಾಳು ಸ್ವಪ್ನದ ಕಡಲು
ತೆರೆಯಂತಪ್ಪಳಿಸುವೆ ನಾನು.
ತಿರೆಯು ನೀನದಕೆ.

ಬದುಕು ಗೆಲುವಿರದ ಮಸಣವು
ಮೌನದಿಂ ಮಲಗಿಹ ಶವವು ನಾನು.
ಸಂಜೀವಿನಿಯು ನೀನದಕೆ.

-ಅ
05.02.2008
11PM

Sunday, February 3, 2008

ನೂರಾನೆ ಬಲ..

Rambling Holiday Makers ಗೆ ಜನ್ಮ ಕೊಟ್ಟಿದ್ದು ನಾನಾದರೆ ಜೀವ ಕೊಟ್ಟವರು ಡೀನ್.

ನಾಲ್ಕನೇ ತಾರೀಖಿಗೆ ಇವರಿಗೆ ಮುವ್ವತ್ತು ವರ್ಷ ತುಂಬುತ್ತೆ.

ಪರಿಚಯವಾದ ದಿನ ಇವರು ನನ್ನ ಅಡ್ವೆಂಚರ್ ಬದುಕಿನ ಅವಿಭಾಜ್ಯ ಅಂಗವಾಗುತ್ತಾರೆಂಬ ಪರಿವೆಯಿರಲಿಲ್ಲ. ಆದರೆ ಇಂದು ಯಾರು ಏನೆಂಬುದನ್ನು ಕಾಲ ನಿರ್ಣಯಿಸಿ ಆಗಿದೆ. ಡೀನ್ ಜೊತೆಗಿದ್ದರೆ ನೂರಾನೆ ಬಲದಂತೆ ಎಂದು ಎಲ್ಲಿ ಬೇಕಾದರೂ ಹೇಳಬಲ್ಲವನಾಗಿದ್ದೇನೆ. ಬರೀ ಅಡ್ವೆಂಚರ್‍ನಲ್ಲಲ್ಲ, ಬದುಕಿನ ಹಾದಿಯಲ್ಲಿ!

ಡೀನ್ ಸಾಮರ್ಥ್ಯ ಶಕ್ತಿಗಳ ಬಗ್ಗೆ ಇಲ್ಲಿ ಬರೆಯುವುದಿಲ್ಲ. ಹಾಗೆ ಕುಳಿತರೆ ಒಂದು ಬಯಾಗ್ರಫಿ ಬರೆಬೇಕಾದೀತು. ಅಥವಾ ನನ್ನ ಆತ್ಮಚರಿತ್ರೆ ಬರೆಯಲು ಹೋದಾಗ ಹಲವು ಪುಟಗಳು ಡೀನ್‍ಗೆಂದು ಮುಡಿಪಾಗಿಡುತ್ತೇನಲ್ಲಾ, ಅಲ್ಲಿ ಎಲ್ಲಾ ಬರೆದಿರುತ್ತೇನೆ.

ಹಾಸ್ಯ, ಧೈರ್ಯ, ಮೈತ್ರಿ, ಅಗಾಧ ನೆನಪಿನ ಶಕ್ತಿ - ಇವುಗಳು ಡೀನ್‍ರನ್ನು ತಕ್ಕಮಟ್ಟಿಗೆ ವಿವರಿಸಬಲ್ಲುದು. ಜೊತೆಗೆ ಇವರೊಬ್ಬ ನಡೆದಾಡುವ ಅಟ್ಲಾಸ್. ಮತ್ತೊಂದು ಹೆಮ್ಮೆಯೆಂದರೆ ನನ್ನ ಬದುಕಲ್ಲಿ ಅತಿ ಹತ್ತಿರವಾಗಿರುವ ಕೆಲವೇ ಕೆಲವು ಜನರಲ್ಲಿ ಇವರು ಬಹು ಮುಖ್ಯರು.

ನಮ್ಮ ಸ್ನೇಹದ ಚಾರಣ ಎಂದೂ ಸಮಿಟ್ ಹಂತದಲ್ಲೇ ಇರಲಿ.. ಅಲ್ಲೇ ನಿರಂತರ ಬಿಡಾರ ಹೂಡಿರೋಣ..

ಆಲ್ ದಿ ಬೆಸ್ಟ್ ಡೀನ್.. ನಿಮ್ಮ ಕನಸುಗಳೆಲ್ಲವೂ ಹಸನಾಗಿ ನನಸಾಗಲಿ..

ಡೀನ್‍ಗೆ ಏನು ಗಿಫ್ಟು ಕೊಡಬೇಕೆಂದು ಯೋಚಿಸುತ್ತಿದ್ದೆ. ಇವರು "ರೀ ಸ್ಕ್ಯಾನ್ ಮಾಡ್ಕೊಡ್ರೀ" ಅಂತ ಒಂದು ಫೋಟೋ‍ವನ್ನು ನನಗೆ ಕೊಟ್ಟು ಸುಮಾರು ಆರೇಳು ತಿಂಗಳುಗಳಾದುವೆನಿಸುತ್ತೆ. ಅಂಗಡಿಗೆ ಹೋಗಿದ್ದಿದ್ದರೆ ಆರೇಳು ನಿಮಿಷದಲ್ಲಿ ಸಿಗುತ್ತಿತ್ತು. ಆದರೂ ನನ್ನಂಥ ನನಗೆ ಕೊಟ್ಟು 'ಕರ್ಮ' ಎಂದುಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಕ್ಷಮೆ ಕೇಳುವುದಿಲ್ಲ. ಕೇಳಿದರೆ, ಈ ಗಿಫ್ಟಿಗೆ ಬೆಲೆಯಿರುವುದಿಲ್ಲವಲ್ಲವೇ? ಇಲ್ಲಿದೆ ಆ ಫೋಟೋ! ಜಗತ್ತೇ ನೋಡಲಿ!ಡೀನ್, ಹುಟ್ಟು ಹಬ್ಬದ ಶುಭಾಶಯಗಳು..

ಗೌರವ ಪ್ರೀತಿಗಳೊಡನೆ ನಿಮ್ಮ ಗೆಳೆಯ
- ಅ
04.02.2008
12AM