Wednesday, February 27, 2008

ಸಂಬಂಧಿಕರು ಮತ್ತು ನಾವು

ನಮ್ಮ ಮನೆಯಲ್ಲೇ ಸ್ವಲ್ಪ ದಿನ ಉಳಿದುಕೊಂಡಿದ್ದ ನನ್ನ ಸಂಬಂಧಿಕರೊಬ್ಬರು ನಾನು ಟಿವಿ ಚಾನೆಲ್ಲು ಬದಲಾಯಿಸುವುದನ್ನು ನೋಡಿ, "ಅರುಣಂಗೆ ಟಿವಿ ಚಾನೆಲ್ ಬದಲಾಯಿಸೋದು ಬಿಟ್ರೆ ಬೇರೆ ಏನೂ ಕೆಲ್ಸ ಇಲ್ಲ ಅನ್ಸುತ್ತೆ!" ಅಂದಿದ್ದರು.

ನಾನು, "ಹ ಹ್ಹ ಹ್ಹಾ.. ಹೌದು" ಎಂದು ಮುಂದಿನ ಚಾನೆಲ್ ಹಾಕಿದೆ. ನನಗೆ ದರಿದ್ರ ಉದಯಾ ಟಿವಿ ಧಾರಾವಾಹಿ ನೋಡಲು ಇಷ್ಟವಿರಲಿಲ್ಲ. ನನ್ನ ಟಿವಿ, ನಾನು ಏನಾದರೂ ಬದಲಾಯಿಸಿಕೊಳ್ಳುತ್ತೀನಿ!

ಇವೆಲ್ಲಾ ಚಿಕ್ಕ ವಿಷಯ. ಸುಮ್ಮಸುಮ್ಮನೆ ಇಲ್ಲಸಲ್ಲದ ವಿಷಯಗಳಿಗೆ ಮೂಗು ತೂರಿಸಿಕೊಂಡು ಬರುವ 'ಸಂಬಂಧಿಕರ' ಬಗ್ಗೆ ಸಿಟ್ಟಾಗುವುದೋ, ಅಸಹ್ಯ ಪಡುವುದೋ, ಅನುಕಂಪ ಪಡುವುದೋ ಗೊತ್ತಾಗುವುದೇ ಇಲ್ಲ.

ಕಾಲೇಜು ಮುಗಿಸಿದ ಹುಡುಗಿ ಮನೆಯಲ್ಲಿದ್ದಾಳೆಂದರೆ ಮುಗಿಯಿತು. ಊರೂರಿಂದೆಲ್ಲಾ ಸಂಬಂಧಿಕರು ಹುಟ್ಟಿಕೊಂಡುಬಿಡುತ್ತಾರೆ. ಯಾರ್ಯಾರದೋ ಅತ್ತಿಗೆಯರು, ಯಾರ್ಯಾರದೋ ದೊಡ್ಡಪ್ಪಿಂದಿರೆಲ್ಲಾ, "ನಮ್ಮ ಜವಾಬ್ದಾರಿ" ಎಂದು ಮನೆಯೊಳಗೆ, ತೀರ ಒಳಗೆ ಬಂದುಬಿಡುತ್ತಾರೆ - ಅಪ್ಪಣೆಯಿಲ್ಲದೆ! "ಒಳ್ಳೇ ಗಂಡು ಇದೆ ಕಣೆ, ನಮ್ಮ ಯಜಮಾನ್ರು ಇದ್ದಾರಲ್ಲಾ, ಅವರ ತಂಗಿಯ ಓರಗಿತ್ತಿಯ ಬಾಮೈದನ ಸ್ವಂತ ತಮ್ಮನ ಮಗ. ಹೇಗಿದ್ರೂ ನಮಗೂ ಹತ್ತಿರದ ಸಂಬಂಧ." ಅಂತ ದೊಡ್ಡಮ್ಮನ ಕರೆ!

"ಅಪ್ಪಾ, ನಂಗೆ ಮದುವೆ ಈಗಲೇ ಬೇಡ, ನಾನು ಓದಬೇಕು" ಅಂತ ಹೇಳಿದಳೋ ಮುಗಿಯಿತು. "ಯಾರನ್ನಾದರೂ ಇಷ್ಟ ಪಡ್ತಿದಾಳಾ ಕೇಳೋ" ಅಂತ ಅಪ್ಪನ ಭಾವ ಕೇಳಿಬಿಟ್ಟಿರುತ್ತಾನೆ. "ಒಂದು ವೇಳೆ, ಯಾವ್ದೋ ಜಾತಿಯವರನ್ನೆಲ್ಲಾ ಇಷ್ಟ ಪಟ್ಬಿಟ್ರೆ ಕಷ್ಟ ಕಣೋ, ಏನೋ ಈ ಕಾಲದಲ್ಲಿ ಲವ್ ಮ್ಯಾರೇಜ್‍ನ ಸಹಿಸ್ಕೋಬೋದು, ಆದ್ರೆ ಬ್ರಾಹ್ಮಣ್ರೇ ಅಲ್ಲದೇ ಇದ್ರೆ ಹೇಗ್ ಮದುವೆ ಮಾಡ್ತೀಯ ನಿನ್ ಮಗ್ಳ್ನ ಅವನಿಗೆ?" ಅಂತ ಅಪ್ಪನ ತಲೆಯಲ್ಲಿ ಜಾತಿಯ ಗೆದ್ದಲನ್ನು ಬಿಟ್ಟರೆಂದರೆ ಮುಗಿಯಿತು.

ಒಂದು ವೇಳೆ ಯಾರನ್ನಾದರೂ ಇಷ್ಟ ಪಟ್ಟಿದ್ದೇನೆಂದು ಒಪ್ಪಿಕೊಂಡಿದ್ದು, ಆ ಹುಡುಗನನ್ನು ಅಪ್ಪ ಅಮ್ಮ ಇಬ್ಬರೂ ಒಪ್ಪಿ ಆಗಿದ್ದ ನಂತರವೂ ಈ ಸಂಬಂಧಿಕರು ಸುಮ್ಮನಿರುವುದಿಲ್ಲ. ಇನ್ಯಾವುದೋ ಸಂಬಂಧ ಹುಡುಕಿ "ಈ ಹುಡುಗ ಎಂ.ಬಿ.ಎ. ಮಾಡಿದ್ದಾನೆ. ನಮ್ ಹುಡುಗಿಗೆ ತಕ್ಕನಾಗಿದ್ದಾನೆ. ಐವತ್ತು ಸಾವಿರ ಸಂಬಳ. ಇನ್ನೊಂದ್ ಸಲ ಯೋಚನೆ ಮಾಡೋಕೆ ಹೇಳಿ ಮಗಳಿಗೆ. ಒಂದ್ ಸಲ ನೋಡ್ಲಿ. ಒಪ್ಕೊಳೋದು ಬಿಡೋದು ಆಮೇಲೆ. ನೋಡೋಕೇನಂತೆ?" ಸುಮ್ನೆ ನೋಡ್ಬೇಕಂತೆ, ಯಾಕೆ ಅಂತಲೇ ಅರ್ಥ ಆಗೋದಿಲ್ಲ.

ಸಂಬಂಧಿಕರ ಮಗನೋ ಮಗಳೋ ಚೆನ್ನಾಗಿ ಓದುವವನಾಗಿದ್ದು ನಾವು ದಡ್ಡರಾಗಿದ್ದೆವೆಂದರೆ ಮುಗಿಯಿತು. ಪಿ.ಯು.ಸಿ. ಪರೀಕ್ಷೆ ಯಾಕಾದರೂ ಮುಗಿಯಿತಪ್ಪಾ ಅನ್ನಿಸಿಬಿಡುತ್ತೆ. "ನಮ್ ಮಗ ಟ್ಯೂಷನ್‍ಗೇ ಹೋಗ್ಲಿಲ್ಲ. ತೊಂಭತ್ತೆರಡು ಪರ್ಸೆಂಟು! ನೀನು ಓದ್ಲಿಲ್ಲ ಕಣೋ. ಈಗ ಏನ್ ಮಾಡ್ತೀಯ? ನಿಂಗೆ ಇಂಜಿನಿಯರಿಂಗ್ ಸೀಟು ಯಾರ್ ಕೊಡ್ತಾರೆ? ಬಿ.ಎಸ್.ಸಿ. ಓದ್ತೀಯಾ?" ಅಪ್ಪನನ್ನು ಕರೆದು, "ಲೋ, ಇವನನ್ನು ಬಿ.ಎಸ್.ಸಿ. ಎಲ್ಲಾ ಓದಿಸ್ಬೇಡ್ವೋ, ಪೇಮೆಂಟ್ ಸೀಟಾದರೂ ಚಿಂತೆಯಿಲ್ಲ, ಇಂಜಿನಿಯರಿಂಗೇ ಓದ್ಸು." ಆದೇಶ ಕೊಟ್ಟಾಯ್ತು. "ಅಪ್ಪ, ನಾನು ಸಾಹಿತ್ಯ ಓದ್ಬೇಕು, ಆರ್ಟ್ಸ್ ತೊಗೋತೀನಿ" ಅಂತ ಮಗ ಹೇಳಲು ಆಗೋದೇ ಇಲ್ಲ. ಹಾಗೆ ಹೇಳಿದರೂ ಅಪ್ಪನಿಗಾಗುವಷ್ಟು ಖೇದ ಬೇರೆ ಯಾರಿಗೂ ಆಗೋದಿಲ್ಲ. ಯಾಕೆಂದರೆ, ಸಂಬಂಧಿಕರಿಗೆ ಅಪ್ಪ ಹೇಳಲಾರ ತನ್ನ ಮಗ ಬಿ.ಎ. ಓದ್ತಾ ಇದ್ದಾನೆ ಅಂತ.

"ಎಲ್ಲಿ ಕೆಲ್ಸ ಮಾಡ್ತಿದೀಯ?" ನನ್ನ ಕೇಳಿದರು ಅಮ್ಮನ ಕಝಿನ್ ಒಬ್ಬರು. ನಾನು ಆಗಿನ್ನೂ ಶಾಲೆ ಸೇರಿರಲಿಲ್ಲ. ಆರ್.ಹೆಚ್.ಎಂ ನಡೆಸುತ್ತಿದ್ದೆನಷ್ಟೆ. "ಒಂದು ಅಡ್ವೆಂಚರ್ ಸಂಸ್ಥೆಗೆ ಮುಖ್ಯಸ್ಥನಾಗಿದ್ದೀನಿ" ಅಂದೆ. ಮುಖವನ್ನು ಹರಳೆಣ್ಣೆ ಕುಡಿದ ಹಾಗೆ ಮಾಡಿಕೊಂಡರು. "ಯಾಕೆ ಎಲ್ಲೂ ಕೆಲ್ಸಕ್ಕೆ ಸೇರ್ಕೊಳ್ಳಲಿಲ್ವಾ?" ಎಂದರು. ಅಮ್ಮನಿಗೆ ನೋವಾಯಿತೋ, ಅವಮಾನವಾಯಿತೋ ಗೊತ್ತಿಲ್ಲ, "ಇಲ್ಲಾ, ಕೆಲ್ಸ ನೋಡ್ತಾ ಇದ್ದಾನೆ" ಅಂದುಬಿಟ್ಟರು. ಆಗ ನನಗಂತೂ ನೋವಾಗಿತ್ತು.

ಕೆಲವು ಸಂಬಂಧಿಕರು ಮನೆಗೆ ಬಂದರೆ ಯಾಕಾದರೂ ಬಂದರಪ್ಪಾ ಅನ್ನಿಸಿಬಿಡುತ್ತೆ. ಮನೆಯೊಳಗೇನು, ತಮ್ಮ ಉದ್ದನೆಯ ಹರಿತವಾದ ಮೂಗನ್ನು ಕೋಣೆಯೊಳಕ್ಕೂ ತಂದುಬಿಟ್ಟರು ಒಬ್ಬರು.

"ಏನೋ ನಿನ್ ರೂಮು ಇಷ್ಟೊಂದು ಗಲೀಜ್ ಆಗಿದೆ?" ಕೇಳಿದರು.
"ನನ್ ರೂಮಿಗೆ ಯಾಕ್ ಬರೋಕ್ ಹೋದ್ರಿ, ಅಮ್ಮ ಹೊರಗೆ ಇದಾರೆ ನೋಡಿ" ಅಂದುಬಿಟ್ಟೆ.

-ಅ
28.02.2008
12.40AM

11 comments:

 1. ಸಂಬಂಧಿಕರಿಂದ ಈ ರೀತಿ ತೊಂದರೆಗಳು ಇದ್ದಿದ್ದೇ. ಆದರೆ ಅನೇಕ ವೇಳೆ ಅವರಿಂದ ಉಪಕಾರವೂ ಆಗುತ್ತದೆ. ಅವರು ಮಾಡುವ ಉಪಕಾರದಿಂದ ಅವರು ಮೂಗು ತೂರಿಸುತ್ತಿರುವುದೇ ಜಾಸ್ತಿ ಆಯ್ತು ಅನಿಸ್ದ್ರೆ ಅವರಿಂದ ದೂರ ಇದ್ಬಿಡೋದೇ ಒಳ್ಳೇದು - ನನ್ನಂತೆ...

  ReplyDelete
 2. *ಉಪಕಾರದಿಂದ ಬದಲು ಉಪಕಾರಕ್ಕಿಂತ ಅಂತ ಓದಿಕೋ...

  ReplyDelete
 3. ** ಅನಿಸ್ದ್ರೆ ಬದ್ಲು ಅನ್ಸಿದ್ರೆ ಅಂತ ಓದಿಕೋ...

  ಕಣ್ಣೆಳೀತಿದೆ.. ಏನೇನೋ ಟೈಪ್ ಮಾಡ್ತಿದೀನಿ... ಈ ಕಮೆಂಟಲ್ಲೂ ತಪ್ಪಿದ್ರೆ ಮತ್ತೆ ಕಮೆಂಟ್ ಮಾಡಲ್ಲ!

  ReplyDelete
 4. sambhandikaru irodu antaha maatgaLu aadodakke ashTe...sikkaaga ondast preshne keLtaare amele hogthaare ashTe....golimaaaar...

  ReplyDelete
 5. kuLitavara kELuvaru 'neenEke kuLite?'
  malagidare heLuvaru 'ninagilla chinte!'
  ODi hOdare benna hinde ivara Teeke!

  ivaru mecchuva vastu illilla jOke..
  ivaru mecchuva vastu illilla jOke..

  anta hELiddarante narasimha swamigaLu.. eshtu nija alva?

  ReplyDelete
 6. srinivasa commentige ondu dodda karaadathana nan kade indha...sakkath aagidhe padya....
  narasimhaswamigaLige ondu jai... :-) :-) :-) :-)

  ReplyDelete
 7. @sridhara: enO adu karaadathana, nin thale!

  ReplyDelete
 8. @gandabherunda: KSNa avaru bekaadashtu sambandhikara jothe ee karma auhavsirbeku...

  @srikanth: errata bere comments alli!!

  @sridhara: lo, naanu illi chadi heLtaa ilvO, karmakaanda... sumne lOkaaroodhiyaagi heLidini aste..

  ReplyDelete
 9. confucious ಒಂದು ಮಾತು ಹೇಳಿದ್ದಾರೆ..." you can choose friends, but you cant choose relatives " ಅಂತ. ಅವರು By default some "ಬಂಧ" ದವರು !! ಆದರೆ,ನಾವು ಅವರ "ಬಂಧ"ವನ್ನು ಬದಿಗಿಟ್ಟು ಇದ್ದರಾಯಿತು.

  ReplyDelete
 10. hu ... inthavaru hesrige 'relatives' aadre, yaavde reetiyalloo 'relate' maadkolokke aagdene iroru :-)

  ReplyDelete
 11. thumba chennagide blogu. relatives e haage.. odtiddaga percentage istena annadu, odadamele innu kelsa sikkilva?, nantara madve gottagilva innu? amele makkalagilva? matte percentage magu lekkake shuru agatte.. elara mane dosenu thoothe anno hage, ellra relatives u heege ansatte..

  ReplyDelete