Thursday, March 27, 2008

ದಿ ಬಕೆಟ್ ಲಿಸ್ಟ್"ಆತ ಸತ್ತಾಗ ಅವನ ಕಣ್ಣು ಮುಚ್ಚಿತ್ತು.. ಆದರೆ ಹೃದಯ ತೆರೆದಿತ್ತು..." ಈ ಡೈಲಾಗಿನಿಂದ ಆರಂಭವಾಗುತ್ತೆ ಚಿತ್ರ.

ಒಂದು ಕಾಲನ್ನು ಸಾವಿನ ಹೊಸಿಲನ ಆಚೆ ಇಟ್ಟುಕೊಂಡಿರುವವರ ಕಥೆ ಇದು. ತಮ್ಮದೆಂದು ಉಳಿದ ಕಾಲದಲ್ಲಿ, 'ಬಾಕಿ' ಉಳಿಸಿಕೊಂಡ ಕೆಲಸಗಳನ್ನು ಮಾಡಬೇಕೆಂಬ ಪಟ್ಟಿಯನ್ನು ಮಾಡಿಕೊಂಡು ಅದರಂತೆ ಕೊನೆಗಾಲದಲ್ಲಿ ಅವರಿಬ್ಬರೂ 'ಬದುಕುತ್ತಾರೆ'.

ಡೈಲಾಗುಗಳು ಹಾಸ್ಯಮಯವೆನಿಸಿದರೂ ಆ ತಿಳಿಹಾಸ್ಯದಲ್ಲಿ ಗಂಭೀರತೆಯು ಅಡಗಿರುವುದು ಕಂಡುಬರುತ್ತೆ. ಡೈಲಾಗುಗಳಿಗೆ ಪೂರ್ಣ ಅಂಕಗಳು.

ಸ್ಕೈ ಡೈವಿಂಗು, ಪರ್ವತಾರೋಹಣ, ಕಾಫಿ ಹೀರುವಿಕೆ - ಚಿತ್ರದಲ್ಲಿ ನನಗೆ ಇನ್ನಷ್ಟು ಹೆಚ್ಚು ಮನಸೆಳೆದಿದ್ದು ವಯಕ್ತಿಕವಾಗಿ.

ಚಿತ್ರದ ಮುಖ್ಯ ತಾರಾಗಣದ ಜ್ಯಾಕ್ ನಿಕೋಲ್ಸನ್ ಮತ್ತು ಮೋರ್ಗನ್ ಫ್ರೀಮನ್ ಇಬ್ಬರೂ ಬಹಳ ಪಳಗಿದ ನಟರಾಗಿರೋದರಿಂದಲೂ, ಮತ್ತು ಅನುಭವಿಗಳಾಗಿರುವುದರಿಂದಲೂ, ಆಸ್ಕರ್ ಪ್ರಶಸ್ತಿಯು ಇಬ್ಬರಿಗೂ ಅಭ್ಯಾಸವಾಗಿರುವುದರಿಂದಲೂ, ತಮ್ಮ ತಮ್ಮ ಪಾತ್ರಗಳನ್ನು ಅತ್ಯಂತ ಸೊಗಸಾಗಿ ನಿರ್ವಹಿಸಿ ಪ್ರೇಕ್ಷಕರ ಮನಸೆಳೆದಿರುವುದಂತೂ ಸತ್ಯ.ಬದುಕು ಮತ್ತು ಸಾವಿನ ಬಗ್ಗೆ ಹಸನಾದ ವಿನೋದದಿಂದ ನಗಿಸುತ್ತ ಬಾಷ್ಪ ತುಂಬಿಸುವ ಚಿತ್ರ ದಿ ಬಕೆಟ್ ಲಿಸ್ಟ್.

"ಅವನ ಕೊನೆಯ ದಿನಗಳು.... ನನ್ನ ಅತ್ಯುತ್ತಮ ದಿನಗಳಾಗಿದ್ದುವು...." ಹೀಗೆ ಮುಕ್ತಾಯವಾಗುತ್ತೆ. ಬಹುಶಃ ಚಿತ್ರವನ್ನು ವೀಕ್ಷಿಸಿದ ಸ್ನೇಹಜೀವಿಗಳಿಗೆಲ್ಲಾ ಕಣ್ಣಲ್ಲಿ ಒಂದು ಹನಿ ತುಂಬಿಕೊಂಡಿರುತ್ತೆ..

ಅಂದಹಾಗೆ ಚಿತ್ರದಲ್ಲಿ ತಾಜಮಹಲ್‍ನೂ ಸಹ ನೋಡಬಹುದು!!

-ಅ
28.03.2008
10PM

Thursday, March 20, 2008

ನನ್ನ ಮೊಬೈಲು

ನಾನು ಊರಲ್ಲಿಲ್ಲದಿರುವಾಗ, ಚಾರಣದಲ್ಲಿರುವಾಗ, ಗಾಡಿ ಓಡಿಸುತ್ತಿರುವಾಗ, ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ, ಪುಸ್ತಕ ಓದುತ್ತಿರುವಾಗ, ಅಮ್ಮ ವೀಣೆ ನುಡಿಸುತ್ತಿರುವಾಗ ನಾನು ತಾಳ ಹಾಕುತ್ತಿರುವಾಗ, ಊಟ ಮಾಡುತ್ತಿರುವಾಗ, ನಿದ್ದೆ ಮಾಡುತ್ತಿರುವಾಗ, ಸಿನಿಮಾ ಥಿಯೇಟರಿನಲ್ಲಿದ್ದಾಗ, ನಾಟಕ ನೋಡುತ್ತಿರುವಾಗ, ಲೈಬ್ರರಿಯಲ್ಲಿರುವಾಗ, ರುದ್ರಭೂಮಿಯಲ್ಲಿರುವಾಗ, ಆಸ್ಪತ್ರೆಯಲ್ಲಿರುವಾಗ, 'ಅವಳ' ಜೊತೆ ಇರುವಾಗ, ಶಾಲೆಯಲ್ಲಿರುವಾಗ ಮತ್ತು ನನಗಾಗಿ ಸಮಯವನ್ನು ಕೊಟ್ಟುಕೊಳ್ಳುವಾಗ ನನ್ನ ಫೋನು ಆಫ್ ಆಗಿರುತ್ತೆ, ಅಥವಾ ರೀಚ್ ಆಗಲ್ಲ, ಅಥವಾ ಫೋನ್ ಎತ್ತಲ್ಲ. ನನ್ನವರು ನನ್ನ ಅರ್ಥ ಮಾಡಿಕೊಂಡಿದ್ದಾರೆ. :-)

-ಅ
20.03.2008
5.25PM

Monday, March 17, 2008

ಜನ್ಮೋತ್ಸವ

ಅನ್ತಃಪುರಗೀತೆಯನ್ನು ಓದಿ ಮುಗಿಸಿ ಎರಡು ದಿನವಾಯಿತಷ್ಟೆ. ರಾಜ್‍ಕುಮಾರ್ ಅವರು ಸಿಕ್ಕು, ಗಾಯನಸಮಾಜದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದೀವಿ, ಡಿ.ವಿ.ಜಿ. ಹುಟ್ಟುಹಬ್ಬ, ಎಂದಿದ್ದರು. ಹೋಗಲಾಗಲಿಲ್ಲ ಇವತ್ತು. ಅನ್ತಃಪುರಗೀತೆಯನ್ನು ಹಾಡಿನ ರೂಪದಲ್ಲಿ ಬಿಡುಗಡೆ ಮಾಡಬೇಕೆಂದಿದ್ದೇವೆ ಎಂದೂ ಹೇಳಿದ್ದರು. ಬಹಳ ಖುಷಿಯ ವಿಷಯ ಎಂದಿದ್ದೆ.

ಡಿವಿಜಿಯ ೧೨೧ನೇ ಹುಟ್ಟುಹಬ್ಬ! ಶ್ರೀನಿವಾಸ ಏನು ಬರೆದಾನೆಂಬ ಕುತೂಹಲ, ಓದುವ ತವಕ. ಡಿವಿಜಿಯ ಕಟ್ಟಾ ಅಭಿಮಾನಿಯಲ್ಲವೇ ಅವನು? ಡಿವಿಜಿಯ ಹುಟ್ಟುಹಬ್ಬಕ್ಕೆ ನಾನು ಅವರಿಗೆ ಕೊಡುತ್ತಿರುವ ಉಡುಗೊರೆಯೆಂದರೆ, ಅವರು ಅನುವಾದಿಸಿರುವ 'ಪುರುಷ ಸೂಕ್ತ' ಪುಸ್ತಕವನ್ನು ಓದಿ ಅರ್ಥೈಸಿಕೊಳ್ಳಲು ಯತ್ನಿಸುವುದು. ನೋಟ್ಸ್ ಕೂಡ ಮಾಡಿಕೊಳ್ಳುತ್ತೇನೆ.

ಈಟಿವಿಯವರಿಗೆ ಡಿವಿಜಿ ಹುಟ್ಟುಹಬ್ಬ ನೆನಪಾಗಲಿಲ್ಲ ಅನ್ನಿಸುತ್ತೆ. ಅವರ ಕ್ಯಾಮೆರಾ ಕಣ್ಣು ಪುನೀತ್ ರಾಜ್‍ಕುಮಾರ್, ಜಗ್ಗೇಶ್ ಹುಟ್ಟುಹಬ್ಬವನ್ನು ನೋಡುವುದರಲ್ಲಿ ಬ್ಯುಸಿಯಾಗಿತ್ತು. ಆ ಇಬ್ಬರೂ ನಟರಿಗೂ ಹುಟ್ಟುಹಬ್ಬದ ಶುಭಾಶಯಗಳು.

ಜಗ್ಗೇಶ್ ನನ್ನ ಅತ್ಯಂತ ಪ್ರಿಯ ನಟರಲ್ಲಿ ಒಬ್ಬ. ಆದರೆ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲವೆಂಬುದು ನಿರಾಶೆಯ ವಿಷಯ. ಪ್ರತಿಭೆಯನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರಲ್ಲಾ ಎಂಬ ಬೇಸರ. ಈಗಲೂ ಬಿಡುವಾದಾಗ ಶಿವಣ್ಣ, ಸೂಪರ್ ನನ್ ಮಗ, ತರ್ಲೆ ನನ್ ಮಗ, ಗಡಿಬಿಡಿ ಗಂಡ, ಸಿ.ಬಿ.ಐ. ಶಿವ, ನೋಡುತ್ತಾ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತೇನೆ. ಮೊನ್ನೆಮೊನ್ನೆ ಮಠ ನೋಡಿದೆ. ಹಿಡಿಸಿತು. ನಕ್ಕೆ. ನಗಿಸುವ ಜಗ್ಗೇಶ್‍ಗೆ ನಗುವಿನ ಶುಭಾಶಯಗಳು.

ಪುನೀತ್ ರಾಜ್‍ಕುಮಾರ್ ಚಿತ್ರಗಳನ್ನು ನೋಡುವುದು ಅವರ ನಟನಾ ಸಾಮರ್ಥ್ಯಕ್ಕೋಸ್ಕರವಲ್ಲವಾದರೂ ಅವರ ಚಿತ್ರ ತುಂಬಾ ಹಗುರವಾಗಿರುತ್ತೆ. ತಿಳಿಹಾಸ್ಯದಿಂದ ಕೂಡಿರುತ್ತೆ. ಹಾಡುಗಳು ಚೆನ್ನಾಗಿರುತ್ತವೆ, ಕಥೆ, ನಿರೂಪಣೆ ಸೊಗಸಾಗಿರುತ್ತೆ. ಎಲ್ಲೋ ಅಪರೂಪಕ್ಕೊಮ್ಮೆ ಕೆಟ್ಟ ಚಿತ್ರಗಳು ಎಲ್ಲರದೂ ಬರುವಂತೆ ಇವರದೂ ಬಂದಿದೆಯಷ್ಟೆ. ಆದರೂ ಒಳ್ಳೊಳ್ಳೇ ಚಿತ್ರಗಳನ್ನು ನಿರೀಕ್ಷಿಸುತ್ತಾ ಇವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತೇನೆ.

ಇಬ್ಬರಿಗೂ ಆಲ್ ದಿ ಬೆಸ್ಟ್.

-ಅ
17.03.2008
10PM

ಬೆಳಗಲಿ ಹೀಗೆ..

ಎರಡನೆಯ ಮೆಟ್ಟಿಲು ಯಶಸ್ವಿಯಾಗಿ ಹತ್ತಿದ ಖುಷಿಯಲ್ಲಿ ಏನೇನು ಬರೆಯಬೇಕೋ ತೋಚುತ್ತಿಲ್ಲ. ಕನಸಿನ ಮೂಲ ವಿಜಯಾಳ ಹುಚ್ಚು ಮನಸ್ಸಾದರೂ ಆ ನಿಟ್ಟಿನ ಶ್ರಮ ಎಲ್ಲರದ್ದೂ. 'ಪ್ರಣತಿ' ಬಗ್ಗೆ ಒಂದು ಬರಹವನ್ನು ಸಿದ್ಧ ಮಾಡುತ್ತಿದ್ದೇನೆ, ಯಾವಾಗ ಪ್ರಕಟಿಸುತ್ತೀನೋ ಗೊತ್ತಿಲ್ಲ, ಅಥವಾ ಪ್ರಕಟಿಸುತ್ತೀನೋ ಇಲ್ಲವೋ ಅದು ಕೂಡ ಗೊತ್ತಿಲ್ಲ.

ಬ್ಲಾಗಿಗರಲ್ಲಿ ನನಗೆ ಪರಿಚಯವಿರುವವರು ಬಹಳ ಕಡಿಮೆ ಜನ. ನನ್ನ ಬ್ಲಾಗನ್ನು ಓದುವವರೂ ಕೂಡ ಕಡಿಮೆ ಜನ. ನನಗೆ ಶ್ರೀನಿಧಿ, ಸುಶ್ರುತರ ಹಾಗೆ ಬ್ಲಾಗ್ ಪ್ರಪಂಚದಲ್ಲಿ ಪ್ರಸಿದ್ಧಿಯಿಲ್ಲ. ಅಂತೆಯೇ ನಾನು ಕೂಡ ಹೆಚ್ಚು ಬ್ಲಾಗುಗಳನ್ನು ಓದುವವನಲ್ಲ. ನನ್ನ ಮಿತ್ರರು, ಮತ್ತು ನನಗೆ 'ಇದು ನನ್ನ ಬ್ಲಾಗು' ಅಂತ ಹೇಳಿದವರ ಬರಹಗಳನ್ನು ಮಾತ್ರ ಓದಿದ್ದೇನೆ. ಅಂದು ಸುಶ್ರುತ ಬ್ಲಾಗಿಗರ ಪಟ್ಟಿಯನ್ನು ಕಳಿಸಿದಾಗ ನಿಜಕ್ಕೂ ಇಷ್ಟೊಂದು ಜನರಿದ್ದಾರಾ? ಎಂದೆನಿಸಿತು. ಇದ್ದರೂ ಅವರೆಲ್ಲರೂ ಬರುತ್ತಾರಾ? ಎಂದೂ ಅನ್ನಿಸಿತು. ನಿನ್ನೆಯ ಇರುಳಲ್ಲಿ ತಿಳಿಯಿತು, ಬ್ಲಾಗ್ ಪ್ರಪಂಚ ಎಷ್ಟು ದೊಡ್ಡದು ಎಂದು.

ಅನೇಕ ಮೊದಲುಗಳನ್ನು 'ಪ್ರಣತಿ' ನೀಡುತ್ತಿದೆ. 'ಚಿತ್ರಚಾಪ' ಪುಸ್ತಕದಿಂದ ಆರಂಭ. ಕನ್ನಡ ಸಾಹಿತ್ಯದಲ್ಲಿ ಮೊದಲಿಗೆ ಆ ರೀತಿಯ ಪುಸ್ತಕ ಬಂದಿರುವುದು ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಆ ಪುಸ್ತಕಕ್ಕೆ ವಸುಧೇಂದ್ರ ತಮ್ಮ ಮೊದಲ ಮುನ್ನುಡಿ ಬರೆದಿದ್ದಾರೆ. ಮೊಟ್ಟ ಮೊದಲ ಬಾರಿಗೆ 'ಚಿತ್ರಚಾಪ' ಎಂಬ ಪದ ಬಳಕೆಯಾಗಿದೆ ಒಂದು ಶೀರ್ಷಿಕೆಗೆ. ಈಗ ಮೊಟ್ಟ ಮೊದಲ ಬಾರಿಗೆ ಅಂತರ್ಜಾಲ ಕನ್ನಡಿಗರ ಸಮಾವೇಷ. ಇನ್ನೂ ಏನೇನು ಮೊದಲುಗಳಿಗೆ ಮೊದಲಾಗಿದೆಯೋ ಪ್ರಣತಿಯು.

ಶ್ಯಾಮ್ ತಮಾಷೆ ಮಾಡಿದರು ನಿನ್ನೆ. "ಪ್ರಾರ್ಥನೆ ಗೀತೆಯನ್ನು ಯಾವಾಗಲೂ ಹೆಣ್ಣು ಮಕ್ಕಳೇ ಹಾಡಬೇಕೆಂಬ ಸಂಪ್ರದಾಯವನ್ನು ಮೊಟ್ಟ ಮೊದಲ ಬಾರಿಗೆ ಮುರಿದಿದೆ ಪ್ರಣತಿ" ಅಂತ. ಮನಸ್ಸಿನಲ್ಲಿ ಆನಂದ ಆಯಿತು, ಓಹೋ, ನಾನು, ಶ್ರೀನಿವಾಸ ಹಾಡಿದ್ದು ಚೆನ್ನಾಗಿತ್ತು ಅಂತ.

ನಿನ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರಣತಿಯ ಪರವಾಗಿ, ವಿಜಯಾಳ ಪರವಾಗಿ, ನನ್ನ ವಂದನೆಗಳು . ವಸು ಗೆ ಒಂದು ವಿಶೇಷವಾದ ಧನ್ಯವಾದ ಇದ್ದೇ ಇರುತ್ತೆ. ನಮಗೂ ನಾನು ಆಲ್ ದಿ ಬೆಸ್ಟ್ ಹೇಳಿದ್ದೆ, ಈಗ ಥ್ಯಾಂಕ್ಸ್ ಹೇಳ್ತೀನಿ. ಶ್ರೀನಿಧಿ, ಸುಶ್ರುತ, ಅಮರ, ರೇಖಾ, ಶ್ರೀಕಾಂತ್, ಶ್ರೀನಿವಾಸ್, ಲಕ್ಷ್ಮಿ, ಡೀನ್, ಅನ್ನಪೂರ್ಣ, ಹರ್ಷ, ದಿವ್ಯಾ, ಶ್ರೀಧರ, ರಾಜಣ್ಣ ಮಾವ, ಗಿರೀಶ, ಗುರುನಾಥ, ಜಿ.ವಿ., ಹಾಗೂ ನಾನು. ಎಲ್ಲರಿಗೂ ಥ್ಯಾಂಕ್ಸ್.

ಅಮ್ಮನಿಗೆ ಕಿ.ರಂ.ನಾಗರಾಜ ಹಳೆಯ ಪರಿಚಯವಂತೆ. ನನಗೆ ಗೊತ್ತೇ ಇರಲಿಲ್ಲ. ಅಮ್ಮನ ದೆಸೆಯಿಂದ ಅವರ ಪರಿಚಯವಾಯಿತು. ಅದೇನೋ, ಅಮ್ಮ ವಿಜಯಾ ಮಾತನಾಡುತ್ತಿದ್ದಾಗ ತುಂಬಾ ಭಾವುಕರಾಗಿ ಅಳುತ್ತಿದ್ದರು. ನಾನು ಹಿಂದಿನ ಸಾಲಿನಲ್ಲಿ ಕುಳಿತಿದ್ದರೂ ಅದನ್ನು ಗಮನಿಸಿ ಸುಮ್ಮನಾದೆನಷ್ಟೆ. ಅಮ್ಮ ಹಾಗೇ ಅಂತ ನನಗೆ ಗೊತ್ತಲ್ಲ!

ಕೊನೆಯಲ್ಲಿ ಸುಶ್ರುತ ಹೇಳಿದ ಮಾತು ಬಹಳ ಪ್ರಶಂಸನೀಯ. "ಇಂಥಾ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ಬರಲಿ, ಬೇರೆಯವರೂ ನಿರ್ವಹಿಸಲಿ, ನಾವೂ ಭಾಗವಹಿಸುತ್ತೇವೆ.." ಎಷ್ಟೇ ಆದರೂ ನಾವೆಲ್ಲರೂ ಕನ್ನಡದಲ್ಲಿ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವವರಲ್ಲವೇ?

ಹೊತ್ತಿದ ಹಣತೆಯು ನಿರಂತರವಾಗಿ ಬೆಳಗಲಿ..

ನಿನ್ನೆಯ ಕಾರ್ಯಕ್ರಮ ಈಟೀವಿಯಲ್ಲಿ ಬರುತ್ತಂತೆ ಇವತ್ತು. ನೋಡಲು ಕಾತುರನಾಗಿದ್ದೇನೆ.

-ಅ
17.03.2008
4.30PM

Wednesday, March 12, 2008

ನಾನು ಗುಣಮುಖ

ಅಧಿಕೃತವಾಗಿ ಇಂದು ನಾನು ಕ್ರಾನಿಕ್ ಅರ್ಟಿಕೇರಿಯಾದಿಂದ ಗುಣಮುಖನಾಗಿದ್ದೇನೆ. ವೈದ್ಯೋ ನಾರಾಯಣೋ ಹರಿಃ.

-ಅ
12.03.2008
11.40PM

Tuesday, March 11, 2008

ಹುಟ್ಟುಹಬ್ಬವನ್ನು ಮರೆತಿಲ್ಲ.

ಸಲ ಈ ಒಬ್ಬರ ಹುಟ್ಟುಹಬ್ಬವನ್ನು ಮರೆತಿಲ್ಲ. ಫೋನಿನಲ್ಲಿ ಹೇಳುವ ಮನಸ್ಸಾಗಲಿಲ್ಲ ಅಷ್ಟೆ.

ಇನ್ನೊಬ್ಬರ ಹುಟ್ಟುಹಬ್ಬವನ್ನೇನು, ಅವರು ಹುಟ್ಟಿರುವುದನ್ನೇ ಮರೆಯಲಿಚ್ಛಿಸುತ್ತೇನೆ. ಆದರೂ ನೆನ್ನೆ ಅವರದೂ ಹುಟ್ಟುಹಬ್ಬವಾಯಿತು. ಇಬ್ಬರಿಗೂ ಶುಭವಾಗಲಿ.

-ಅ
10.03.2008
11.45PM

Thursday, March 6, 2008

ಬಿಂದಾಸ್

ನಾಯಕ ಸೂಪರ್ ಮ್ಯಾನ್, ನಾಯಕಿ ಕಿತ್ತೂರು ರಾಣಿ ಚೆನ್ನಮ್ಮ. ಒಟ್ಟಿನಲ್ಲಿ ಕನ್ನಡದಲ್ಲೊಂದು ಕ್ರಾಂತಿಯ ಚಿತ್ರ.

ನಾಯಕಿಯು ನಾಯಕನನ್ನು ಪ್ರೀತಿಸುವುದಿಲ್ಲ. ನಂತರ ಒಂದು ಫೈಟು. ನಾಯಕಿಯನ್ನು ಕೆಡಿಸೋಕೆ ಬಂದವನ ವಿರುದ್ಧ. ಆಮೇಲೆ ನಾಯಕಿ ಪ್ರೀತಿಸುತ್ತಾಳೆ. ನಾಯಕಿಯ ಅಪ್ಪನಿಗೆ ಒಪ್ಪಿಗೆ ಇರೋದಿಲ್ಲ. ಇದರ ಮಧ್ಯೆ ಭಯೋತ್ಪಾದಕ ಖಳನಾಯಕರು. ದೊಡ್ಡ ದೊಡ್ಡ ಫೈಟುಗಳು. ಕೊನೆಗೆ ಕೆಟ್ಟವರೆಲ್ಲಾ ಸಾಯುತ್ತಾರೆ, ಒಳ್ಳೆಯವರೆಲ್ಲಾ ಸಂತೋಷವಾಗಿರುತ್ತಾರೆ. ಇದೇ 'ಹೊಸ' ಕಥೆಯನ್ನು ಸಿನಿಮಾ ಮಾಡಿ ಬಿಂದಾಸ್ ಎಂದು ಹೆಸರಿಟ್ಟಿದ್ದಾರಾದ್ದರಿಂದ ಉಮಾ ಥಿಯೇಟರಿನಲ್ಲಿ ಮೂರನೇ ವಾರದಲ್ಲೇ ಮೂರು ಮತ್ತೊಂದು ಜನ ಇದ್ದರಷ್ಟೆ.

ಒಂದು ಹಾಡು ಹೀಗೆ: 'ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ.. ಆಡೋಣ ನಾನು ನೀನು ಕುಚ್ಚಿ ಕುಚ್ಚಿ..' ಧನ್ಯ ಕನ್ನಡಾಂಬೆ!

ನಾನು ಅರ್ಜೆಂಟಾಗಿ ಒಂದು ಒಳ್ಳೇ ಚಿತ್ರ ನೋಡಬೇಕು. ಏಳನೇ ಸಲ 'ಆ ದಿನಗಳು' ನೋಡುವುದೋ, 'ಬಕೆಟ್ ಲಿಸ್ಟ್' ನೋಡುವುದೋ, ಗೊತ್ತಿಲ್ಲ. ಶಿವಪ್ರೇರಣೆ ಏನಾಗುತ್ತೋ ನೋಡೋಣ!

-ಅ
06.03.2008
12.20AM

Tuesday, March 4, 2008

ಕವಿಯ ಎದೆ - ರೂಪಕಾಲಂಕಾರ

ಕವಿಗಳಿಗೆ ದೇಹದ ಎಲ್ಲಾ ಅಂಗಗಳಿಗಿಂತಲೂ ಎದೆಯ ಬಗ್ಗೆ ಹೆಚ್ಚು ಒಲವು. ಅದರಲ್ಲೂ ಸಿನಿಮಾ ಕವಿಗಳಿಗಂತೂ ಎದೆಯ ಮೇಲೆ ವಿಪರೀತ ಮೋಹ. ತರಹೆವಾರಿ ರೂಪಕಗಳನ್ನು ಸೇರಿಸಿ 'ಅಲಂಕಾರ' ಮಾಡುತ್ತಾರೆ. ಉಪಮೆಗಳು ಬಹಳ ಕಡಿಮೆ, ರೂಪಕಗಳೇ ಹೆಚ್ಚು.

ನರಸಿಂಹಸ್ವಾಮಿಯವರ ಅತ್ಯಂತ ರೊಮ್ಯಾಂಟಿಕ್ ರಚನೆಯಿಂದ ಆರಂಭಿಸೋಣ.
ನನ್ನವಳು, ನನ್ನೆದೆಯ ಹೊನ್ನಾಡನಾಳುವಳು, ಬೆಳಗು ಕೆನ್ನೆಯ ಚನ್ನೆ ನನ್ನ ಮಡದಿ..

ಕಲ್ಲುವೀಣೆ ನುಡಿಯಿತು ಎಂದು ಚಿತ್ರದ ಹೆಸರಾದರೂ ಈ ಹಾಡಿನಲ್ಲಿ ನುಡಿದಿರುವುದು ಬೇರೆಯದೇ ವೀಣೆ.
ನನ್ನೆದೆ ವೀಣೆಯು ಮಿಡಿಯುವುದು, ಹೊಸ ರಾಗದಲಿ ಹೊರಹೊಮ್ಮುವುದು....

ಇನ್ನು ಕೆಲವು ಸಾಮಾನ್ಯ ಕ್ಲೀಷೆಯ ರೂಪಕಗಳು.
ನನ್ನೆದೆಯ ತೋಟದಲಿ ಅರಳಿದ ಹೂ ನೀನಾದೆ..
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೆ..
ನನ್ನೆದೆಯ ಕಡಲಿಗೆ ನದಿಯಾದೆ ನೀನು
ನನ್ನೆದೆಯಾಗಸಕೆ ಶಶಿಯು ನೀನು!
ನನ್ನೆದೆ ಬಾನಲಿ ರೆಕ್ಕೆಯ ಪಡೆದ ಬಣ್ಣದ ಹಕ್ಕಿಗಳೇ....

ಪಾಪ ಹುಡುಗಿಯು ಯಾರಯಾರ ಎದೆಗೆ ಏನೇನಾಗಬೇಕೋ ಏನೋ!! ಸಾಮಾನ್ಯವಾಗಿ ಗೀತರಚನಕಾರರ ಎದೆಯು 'ಆಕಾಶ'ವಾಗಿದೆ. ವಿಶ್ವದಲ್ಲಿ ಆಕಾಶಕ್ಕಿಂತ ಪ್ರಿಯವಾದದ್ದು ಕವಿಗೆ ಬೇರೊಂದಿಲ್ಲ ಅನ್ನಿಸುತ್ತೆ.

ಎದೆಗೆ ಹೋಲಿಕೆಯಾಗಿ ಪಂಚಭೂತಗಳು, ಅರಿಷಡ್ವರ್ಗಗಳು, ಸಂಗೀತ ವಾದ್ಯಗಳು, ಇಡೀ ವಿಶ್ವವನ್ನೇ ಹೋಲಿಸಿ ಬರೆಯುತ್ತಾರೆ. ಭಾವಗೀತೆಗಳಲ್ಲೂ ಎದೆಯನ್ನು ಬಿಟ್ಟಿಲ್ಲ.
ಪ್ರೀತಿಗೆ ಎಲ್ಲೆ ಎಲ್ಲಿದೆ ನಲ್ಲೆ, ಹೋಗುವೆಯಲ್ಲೆ ನಿನ್ನೆದೆ ಕಲ್ಲೆ?

'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದಲ್ಲಿ ಒಂದು ಇಂಪಾದ ಹಾಡಿನ ಮಧ್ಯದೊಳಗೆ ಈ ರೀತಿ ಸಾಹಿತ್ಯವಿದೆ. (ಗೆಳತಿ.. ಓ ಗೆಳತಿ..)
ಜಗದ ಗೊಂದಲ ಬೇಡ ನಿನಗೆ, ಎದೆಯ ಹಾಡು ನೀನು ನನಗೆ..

ಹಂಸಲೇಖ ಅಂತೂ ನ ಭೂತೋ ನ ಭವಿಷ್ಯತಿ ಎಂಬ ರೂಪಕಗಳನ್ನೇ ಕೊಟ್ಟಿದ್ದಾರೆ.
ನಿನ್ನ ಎದೆಯ ಸಿ.ಡಿ. ಒಳಗೆ ನಂದೇ ಮ್ಯೂಸಿಕ್ ತಾನೆ?
ಎದೆ ಚಿಪ್ಪಿನಲ್ಲಿ ಜೋಪಾನ ಮಾಡಿ ಕೂಡಿಟ್ಟ ಕನಸ ಕದಿಯೋನಿಗಾಗಿ ಹದಿನಾರು ವರುಷ ಕಾದೆ...
ಸಾವಿರಾರು ದಿನಗಳ ಕೆಳಗೆ, ನನ್ನೆದೆಯ ಗರ್ಭದ ಒಳಗೆ, ಉಸಿರಾಡಿತು ಆಸೆಯ ಭ್ರೂಣ!!
ಇಂಥ ಹೋಲಿಕೆಗಳನ್ನು ಪಂಪರನ್ನಾದಿ ಜನ್ನರೂ ಬಳಸಿಲ್ಲ, ಮುಂದೆ ಹಂಸಲೇಖರೂ ಬಳಸುವುದಿಲ್ಲ. ಜಗದೇಕ ರೂಪಕ!

ಹಂಸಲೇಖರ ನಂತರ ಜಯಂತ್ ಕಾಯ್ಕಿಣಿಯವರು ಮತ್ತೆರಡು ಹೊಸ ರೂಪಕಗಳನ್ನು ಕೊಟ್ಟಿರುವುದನ್ನು ಮೊನ್ನೆ ಮೊನ್ನೆ ತಾನೇ ನೋಡಿದ್ದೇವೆ.
ಎದೆಯ ದೂರವಾಣಿಯ ಕರೆಯ ರಿಂಗಣ..
ಎದೆಯ ಜೋಪಡಿಯೊಳಗೆ ಕಾಲಿಡದೆ ಕುಲುಕಿದೆ ಒಲವು...

ಇವಿಷ್ಟೂ ಎದೆಯ ರೂಪಕಗಳಾದರೆ, ಮುಂದೆ ಎದೆಯಿಂದ, ಎದೆಗೆ, ಎದೆಯ ದೆಸೆಯಿಂದ, ಎದೆಯಲ್ಲಿ.... ಹೀಗೆ ಮುಂತಾದ ವಿಭಕ್ತಿ ಪ್ರತ್ಯಯ ಬಳಸಿ ಏನೇನು ಸಾಧ್ಯವಾಗಿಸಿದರೋ ನಮ್ಮ ಕವಿಗಳು ಅದನ್ನು ಇನ್ಯಾವತ್ತಾದರೂ ಪರಿಚಯ ಮಾಡಿಕೊಳ್ಳೋಣ.

ವಿ.ಸೂ: 'ಎದೆ' ಎಂದರೆ ಹೃದಯ ಎಂದರ್ಥ. ಬೇರೇನೋ ಅರ್ಥೈಸಿಕೊಂಡು ಈ ಲೇಖನ ಓದಿದರೆ ಯಡವಟ್ಟಾದೀತು.

-ಅ
04.03.2008
10AM