Tuesday, March 4, 2008

ಕವಿಯ ಎದೆ - ರೂಪಕಾಲಂಕಾರ

ಕವಿಗಳಿಗೆ ದೇಹದ ಎಲ್ಲಾ ಅಂಗಗಳಿಗಿಂತಲೂ ಎದೆಯ ಬಗ್ಗೆ ಹೆಚ್ಚು ಒಲವು. ಅದರಲ್ಲೂ ಸಿನಿಮಾ ಕವಿಗಳಿಗಂತೂ ಎದೆಯ ಮೇಲೆ ವಿಪರೀತ ಮೋಹ. ತರಹೆವಾರಿ ರೂಪಕಗಳನ್ನು ಸೇರಿಸಿ 'ಅಲಂಕಾರ' ಮಾಡುತ್ತಾರೆ. ಉಪಮೆಗಳು ಬಹಳ ಕಡಿಮೆ, ರೂಪಕಗಳೇ ಹೆಚ್ಚು.

ನರಸಿಂಹಸ್ವಾಮಿಯವರ ಅತ್ಯಂತ ರೊಮ್ಯಾಂಟಿಕ್ ರಚನೆಯಿಂದ ಆರಂಭಿಸೋಣ.
ನನ್ನವಳು, ನನ್ನೆದೆಯ ಹೊನ್ನಾಡನಾಳುವಳು, ಬೆಳಗು ಕೆನ್ನೆಯ ಚನ್ನೆ ನನ್ನ ಮಡದಿ..

ಕಲ್ಲುವೀಣೆ ನುಡಿಯಿತು ಎಂದು ಚಿತ್ರದ ಹೆಸರಾದರೂ ಈ ಹಾಡಿನಲ್ಲಿ ನುಡಿದಿರುವುದು ಬೇರೆಯದೇ ವೀಣೆ.
ನನ್ನೆದೆ ವೀಣೆಯು ಮಿಡಿಯುವುದು, ಹೊಸ ರಾಗದಲಿ ಹೊರಹೊಮ್ಮುವುದು....

ಇನ್ನು ಕೆಲವು ಸಾಮಾನ್ಯ ಕ್ಲೀಷೆಯ ರೂಪಕಗಳು.
ನನ್ನೆದೆಯ ತೋಟದಲಿ ಅರಳಿದ ಹೂ ನೀನಾದೆ..
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೆ..
ನನ್ನೆದೆಯ ಕಡಲಿಗೆ ನದಿಯಾದೆ ನೀನು
ನನ್ನೆದೆಯಾಗಸಕೆ ಶಶಿಯು ನೀನು!
ನನ್ನೆದೆ ಬಾನಲಿ ರೆಕ್ಕೆಯ ಪಡೆದ ಬಣ್ಣದ ಹಕ್ಕಿಗಳೇ....

ಪಾಪ ಹುಡುಗಿಯು ಯಾರಯಾರ ಎದೆಗೆ ಏನೇನಾಗಬೇಕೋ ಏನೋ!! ಸಾಮಾನ್ಯವಾಗಿ ಗೀತರಚನಕಾರರ ಎದೆಯು 'ಆಕಾಶ'ವಾಗಿದೆ. ವಿಶ್ವದಲ್ಲಿ ಆಕಾಶಕ್ಕಿಂತ ಪ್ರಿಯವಾದದ್ದು ಕವಿಗೆ ಬೇರೊಂದಿಲ್ಲ ಅನ್ನಿಸುತ್ತೆ.

ಎದೆಗೆ ಹೋಲಿಕೆಯಾಗಿ ಪಂಚಭೂತಗಳು, ಅರಿಷಡ್ವರ್ಗಗಳು, ಸಂಗೀತ ವಾದ್ಯಗಳು, ಇಡೀ ವಿಶ್ವವನ್ನೇ ಹೋಲಿಸಿ ಬರೆಯುತ್ತಾರೆ. ಭಾವಗೀತೆಗಳಲ್ಲೂ ಎದೆಯನ್ನು ಬಿಟ್ಟಿಲ್ಲ.
ಪ್ರೀತಿಗೆ ಎಲ್ಲೆ ಎಲ್ಲಿದೆ ನಲ್ಲೆ, ಹೋಗುವೆಯಲ್ಲೆ ನಿನ್ನೆದೆ ಕಲ್ಲೆ?

'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದಲ್ಲಿ ಒಂದು ಇಂಪಾದ ಹಾಡಿನ ಮಧ್ಯದೊಳಗೆ ಈ ರೀತಿ ಸಾಹಿತ್ಯವಿದೆ. (ಗೆಳತಿ.. ಓ ಗೆಳತಿ..)
ಜಗದ ಗೊಂದಲ ಬೇಡ ನಿನಗೆ, ಎದೆಯ ಹಾಡು ನೀನು ನನಗೆ..

ಹಂಸಲೇಖ ಅಂತೂ ನ ಭೂತೋ ನ ಭವಿಷ್ಯತಿ ಎಂಬ ರೂಪಕಗಳನ್ನೇ ಕೊಟ್ಟಿದ್ದಾರೆ.
ನಿನ್ನ ಎದೆಯ ಸಿ.ಡಿ. ಒಳಗೆ ನಂದೇ ಮ್ಯೂಸಿಕ್ ತಾನೆ?
ಎದೆ ಚಿಪ್ಪಿನಲ್ಲಿ ಜೋಪಾನ ಮಾಡಿ ಕೂಡಿಟ್ಟ ಕನಸ ಕದಿಯೋನಿಗಾಗಿ ಹದಿನಾರು ವರುಷ ಕಾದೆ...
ಸಾವಿರಾರು ದಿನಗಳ ಕೆಳಗೆ, ನನ್ನೆದೆಯ ಗರ್ಭದ ಒಳಗೆ, ಉಸಿರಾಡಿತು ಆಸೆಯ ಭ್ರೂಣ!!
ಇಂಥ ಹೋಲಿಕೆಗಳನ್ನು ಪಂಪರನ್ನಾದಿ ಜನ್ನರೂ ಬಳಸಿಲ್ಲ, ಮುಂದೆ ಹಂಸಲೇಖರೂ ಬಳಸುವುದಿಲ್ಲ. ಜಗದೇಕ ರೂಪಕ!

ಹಂಸಲೇಖರ ನಂತರ ಜಯಂತ್ ಕಾಯ್ಕಿಣಿಯವರು ಮತ್ತೆರಡು ಹೊಸ ರೂಪಕಗಳನ್ನು ಕೊಟ್ಟಿರುವುದನ್ನು ಮೊನ್ನೆ ಮೊನ್ನೆ ತಾನೇ ನೋಡಿದ್ದೇವೆ.
ಎದೆಯ ದೂರವಾಣಿಯ ಕರೆಯ ರಿಂಗಣ..
ಎದೆಯ ಜೋಪಡಿಯೊಳಗೆ ಕಾಲಿಡದೆ ಕುಲುಕಿದೆ ಒಲವು...

ಇವಿಷ್ಟೂ ಎದೆಯ ರೂಪಕಗಳಾದರೆ, ಮುಂದೆ ಎದೆಯಿಂದ, ಎದೆಗೆ, ಎದೆಯ ದೆಸೆಯಿಂದ, ಎದೆಯಲ್ಲಿ.... ಹೀಗೆ ಮುಂತಾದ ವಿಭಕ್ತಿ ಪ್ರತ್ಯಯ ಬಳಸಿ ಏನೇನು ಸಾಧ್ಯವಾಗಿಸಿದರೋ ನಮ್ಮ ಕವಿಗಳು ಅದನ್ನು ಇನ್ಯಾವತ್ತಾದರೂ ಪರಿಚಯ ಮಾಡಿಕೊಳ್ಳೋಣ.

ವಿ.ಸೂ: 'ಎದೆ' ಎಂದರೆ ಹೃದಯ ಎಂದರ್ಥ. ಬೇರೇನೋ ಅರ್ಥೈಸಿಕೊಂಡು ಈ ಲೇಖನ ಓದಿದರೆ ಯಡವಟ್ಟಾದೀತು.

-ಅ
04.03.2008
10AM

7 comments:

 1. sakala bhaavagaLigoo 'edhe' a.k.a 'hrudaya' thaane mooola swaami...adke adra bagge kavigaLige hecchu olavu..adke aa "edhe" sthaanada bagge sampannavaada roopaka kruShi aagidhe antha nanna amboNa...

  ReplyDelete
 2. nallana edemele thale ittu malgdaaga nallege sigo nemmadi berelloo sigolla ... idu ... hrudayada bagge heltilla ... ede bagge ne ... world's best pillow.

  ReplyDelete
 3. [ಶ್ರೀಧರ] ರೂಪಕ ಕೃಷಿ.. ಹೌದು.. ಈ ಪದಕೃಷಿ ಚೆನ್ನಾಗಿದೆ.

  [ವಿಜಯಾ] ನನ್ನಂಥವನ ಎದೆ ಮೇಲೆ ಮಲಗಿದರೆ ಕಲ್ಲು ಬಂಡೆ ಮೇಲೆ ಮಲಗಿದಂತಾದೀತು!

  ReplyDelete
 4. ಜಿಂದಗಿ : ಹೃದಯದಿಂದಲೇ ಅಲ್ಲವೇ ಕವಿಯನ್ನು ಗುರುತಿಸೋದು ಗುರುಸ್ವರೂಪ ಅರುಣರೆ ? ರವಿ ಕಾಣದ್ದನ್ನು ಕವಿ ಕಾಣಲು ಹೃದಯವೇ ಚಕ್ಷು ! ನೀವೇನೆ ಹೇಳಿ, ಎದೆಗೆ ಈ ಎಲ್ಲ ರೂಪಕಾಲಂಕಾರಗಳು ಕಡಿಮೆಯೆ !

  head ruled :

  ಮುಂದೆ ಎದೆಯಿಂದ, ಎದೆಗೆ, ಎದೆಯ ದೆಸೆಯಿಂದ, ಎದೆಯಲ್ಲಿ.... ಹೀಗೆ ಮುಂತಾದ ವಿಭಕ್ತಿ ಪ್ರತ್ಯಯ ಬಳಸಿ ಏನೇನು ಸಾಧ್ಯವಾಗಿಸಿದರೋ ನಮ್ಮ ಕವಿಗಳು ಅದನ್ನು ಇನ್ಯಾವತ್ತಾದರೂ ಪರಿಚಯ ಮಾಡಿಕೊಳ್ಳೋಣ.

  excellent analysis ಗುರುಸ್ವರೂಪರೆ !! "ಪ್ರೀತಿ" ಅನ್ನೋ ಶಬ್ದಕ್ಕೆ ಎಲ್ಲ ವಿಭಕ್ತಿ ಪ್ರತ್ಯಯ ಸೇರಿಸಿ ಚಿತ್ರಗಳನ್ನ ಮಾಡಿ "ಮುಗಿಸಿ"ದ್ದಾಯಿತು. ಇನ್ನು ಎದೆಯ ಸರದಿ. ಬೇಗ ಪರಿಚಯ ಮಾಡಿಸಿಕೊಡಿ. ತಲೆ ತನಕ ಬರದೇ ಇರಲಿ ಈ ಪ್ರತ್ಯಯ ಜೋಡಣೆ...ತಲೆ ಸತ್ಯಾನಾಶವಾಗೋದ್ರೆ ನನ್ಗೆ ಕಷ್ಟ !!

  ReplyDelete
 5. ಒಳ್ಳೆ ಎದೆ!

  ಇನ್ನೊಂದಷ್ಟು...

  ವಿರಹದ ಬೇಗೆ ಸುಡಲು, ಎದೆಯಲ್ಲಿ ಬೇಸಿಗೆ ಕಾಲ (ವಿರಹದಿಂದ ತಲೆ ಬಿಸಿಯಾಗತ್ತೋ? ಎದೆ ಬಿಸಿಯಾಗತ್ತೋ?)

  ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ, ನನ್ನೆದೆಯ ಕಡಲೇಕೆ ಬೀಗುತಿಹುದು (ಬೀಗೋದು ಮನಸ್ಸೋ? ಎದೆಯೋ?)

  ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ (ಇಲ್ಲಿ ಹೃದಯ, for a change!)

  ಎದೆ ತುಂಬಿ ಹಾಡಿದೆನು ಅಂದು ನಾನು (ಎದೆ ತುಂಬಿ ಹಾಡೋದು ಹೇಗೆ ಅಂತ ದೇವರಾಣೇಗೂ ಗೊತ್ತಿಲ್ಲ)  ಇನ್ನೊಂದು ವಿಚಾರ -

  "ಎದೆಯ ಜೋಪಡಿಯೊಳಗೆ ಕಾಲಿಡದೆ ಕುಲುಕಿದೆ ಒಲವು..." - ಇದನ್ನು ಬರದಿರೋದು ಯೋಗರಾಜ ಭಟ್ರು. ಜಯಂತ ಕಾಯ್ಕಿಣಿ ಅಲ್ಲ! ಆಮೇಲೆ ಸಾಹಿತ್ಯ ಇರೋದು "ಕಾಲಿಡದೆ ಕೊಲುತಿದೆ ಒಲವು" ಅಂತ.

  ReplyDelete
 6. ಶ್ರೀಧರ - ಎಲ್ಲಾ ಭಾವಗಳಿಗೂ ಮನಸ್ಸು ಮೂಲ. ಎದೆ ಅಲ್ಲ. ಈ ರೀತಿಯ 'ಅಂಬೋಣ'ಗಳಿಗೆ 'ಕರಡತನ' ಮಾಡ್ಬೇಕು ಅಷ್ಟೇ!!!

  ReplyDelete
 7. [ಲಕುಮಿ] 'ಗುರುಸ್ವರೂಪ' ಪದ ಬಳಕೆ ಒಂದ್ ಥರಾ ಇದ್ಯಲ್ಲಾ...

  [ಶ್ರೀಕಾಂತ್] ಕರೆಕ್ಷನ್‍ಗೆ ಧನ್ಯವಾದಗಳು.

  ReplyDelete