Monday, March 17, 2008

ಬೆಳಗಲಿ ಹೀಗೆ..

ಎರಡನೆಯ ಮೆಟ್ಟಿಲು ಯಶಸ್ವಿಯಾಗಿ ಹತ್ತಿದ ಖುಷಿಯಲ್ಲಿ ಏನೇನು ಬರೆಯಬೇಕೋ ತೋಚುತ್ತಿಲ್ಲ. ಕನಸಿನ ಮೂಲ ವಿಜಯಾಳ ಹುಚ್ಚು ಮನಸ್ಸಾದರೂ ಆ ನಿಟ್ಟಿನ ಶ್ರಮ ಎಲ್ಲರದ್ದೂ. 'ಪ್ರಣತಿ' ಬಗ್ಗೆ ಒಂದು ಬರಹವನ್ನು ಸಿದ್ಧ ಮಾಡುತ್ತಿದ್ದೇನೆ, ಯಾವಾಗ ಪ್ರಕಟಿಸುತ್ತೀನೋ ಗೊತ್ತಿಲ್ಲ, ಅಥವಾ ಪ್ರಕಟಿಸುತ್ತೀನೋ ಇಲ್ಲವೋ ಅದು ಕೂಡ ಗೊತ್ತಿಲ್ಲ.

ಬ್ಲಾಗಿಗರಲ್ಲಿ ನನಗೆ ಪರಿಚಯವಿರುವವರು ಬಹಳ ಕಡಿಮೆ ಜನ. ನನ್ನ ಬ್ಲಾಗನ್ನು ಓದುವವರೂ ಕೂಡ ಕಡಿಮೆ ಜನ. ನನಗೆ ಶ್ರೀನಿಧಿ, ಸುಶ್ರುತರ ಹಾಗೆ ಬ್ಲಾಗ್ ಪ್ರಪಂಚದಲ್ಲಿ ಪ್ರಸಿದ್ಧಿಯಿಲ್ಲ. ಅಂತೆಯೇ ನಾನು ಕೂಡ ಹೆಚ್ಚು ಬ್ಲಾಗುಗಳನ್ನು ಓದುವವನಲ್ಲ. ನನ್ನ ಮಿತ್ರರು, ಮತ್ತು ನನಗೆ 'ಇದು ನನ್ನ ಬ್ಲಾಗು' ಅಂತ ಹೇಳಿದವರ ಬರಹಗಳನ್ನು ಮಾತ್ರ ಓದಿದ್ದೇನೆ. ಅಂದು ಸುಶ್ರುತ ಬ್ಲಾಗಿಗರ ಪಟ್ಟಿಯನ್ನು ಕಳಿಸಿದಾಗ ನಿಜಕ್ಕೂ ಇಷ್ಟೊಂದು ಜನರಿದ್ದಾರಾ? ಎಂದೆನಿಸಿತು. ಇದ್ದರೂ ಅವರೆಲ್ಲರೂ ಬರುತ್ತಾರಾ? ಎಂದೂ ಅನ್ನಿಸಿತು. ನಿನ್ನೆಯ ಇರುಳಲ್ಲಿ ತಿಳಿಯಿತು, ಬ್ಲಾಗ್ ಪ್ರಪಂಚ ಎಷ್ಟು ದೊಡ್ಡದು ಎಂದು.

ಅನೇಕ ಮೊದಲುಗಳನ್ನು 'ಪ್ರಣತಿ' ನೀಡುತ್ತಿದೆ. 'ಚಿತ್ರಚಾಪ' ಪುಸ್ತಕದಿಂದ ಆರಂಭ. ಕನ್ನಡ ಸಾಹಿತ್ಯದಲ್ಲಿ ಮೊದಲಿಗೆ ಆ ರೀತಿಯ ಪುಸ್ತಕ ಬಂದಿರುವುದು ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಆ ಪುಸ್ತಕಕ್ಕೆ ವಸುಧೇಂದ್ರ ತಮ್ಮ ಮೊದಲ ಮುನ್ನುಡಿ ಬರೆದಿದ್ದಾರೆ. ಮೊಟ್ಟ ಮೊದಲ ಬಾರಿಗೆ 'ಚಿತ್ರಚಾಪ' ಎಂಬ ಪದ ಬಳಕೆಯಾಗಿದೆ ಒಂದು ಶೀರ್ಷಿಕೆಗೆ. ಈಗ ಮೊಟ್ಟ ಮೊದಲ ಬಾರಿಗೆ ಅಂತರ್ಜಾಲ ಕನ್ನಡಿಗರ ಸಮಾವೇಷ. ಇನ್ನೂ ಏನೇನು ಮೊದಲುಗಳಿಗೆ ಮೊದಲಾಗಿದೆಯೋ ಪ್ರಣತಿಯು.

ಶ್ಯಾಮ್ ತಮಾಷೆ ಮಾಡಿದರು ನಿನ್ನೆ. "ಪ್ರಾರ್ಥನೆ ಗೀತೆಯನ್ನು ಯಾವಾಗಲೂ ಹೆಣ್ಣು ಮಕ್ಕಳೇ ಹಾಡಬೇಕೆಂಬ ಸಂಪ್ರದಾಯವನ್ನು ಮೊಟ್ಟ ಮೊದಲ ಬಾರಿಗೆ ಮುರಿದಿದೆ ಪ್ರಣತಿ" ಅಂತ. ಮನಸ್ಸಿನಲ್ಲಿ ಆನಂದ ಆಯಿತು, ಓಹೋ, ನಾನು, ಶ್ರೀನಿವಾಸ ಹಾಡಿದ್ದು ಚೆನ್ನಾಗಿತ್ತು ಅಂತ.

ನಿನ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರಣತಿಯ ಪರವಾಗಿ, ವಿಜಯಾಳ ಪರವಾಗಿ, ನನ್ನ ವಂದನೆಗಳು . ವಸು ಗೆ ಒಂದು ವಿಶೇಷವಾದ ಧನ್ಯವಾದ ಇದ್ದೇ ಇರುತ್ತೆ. ನಮಗೂ ನಾನು ಆಲ್ ದಿ ಬೆಸ್ಟ್ ಹೇಳಿದ್ದೆ, ಈಗ ಥ್ಯಾಂಕ್ಸ್ ಹೇಳ್ತೀನಿ. ಶ್ರೀನಿಧಿ, ಸುಶ್ರುತ, ಅಮರ, ರೇಖಾ, ಶ್ರೀಕಾಂತ್, ಶ್ರೀನಿವಾಸ್, ಲಕ್ಷ್ಮಿ, ಡೀನ್, ಅನ್ನಪೂರ್ಣ, ಹರ್ಷ, ದಿವ್ಯಾ, ಶ್ರೀಧರ, ರಾಜಣ್ಣ ಮಾವ, ಗಿರೀಶ, ಗುರುನಾಥ, ಜಿ.ವಿ., ಹಾಗೂ ನಾನು. ಎಲ್ಲರಿಗೂ ಥ್ಯಾಂಕ್ಸ್.

ಅಮ್ಮನಿಗೆ ಕಿ.ರಂ.ನಾಗರಾಜ ಹಳೆಯ ಪರಿಚಯವಂತೆ. ನನಗೆ ಗೊತ್ತೇ ಇರಲಿಲ್ಲ. ಅಮ್ಮನ ದೆಸೆಯಿಂದ ಅವರ ಪರಿಚಯವಾಯಿತು. ಅದೇನೋ, ಅಮ್ಮ ವಿಜಯಾ ಮಾತನಾಡುತ್ತಿದ್ದಾಗ ತುಂಬಾ ಭಾವುಕರಾಗಿ ಅಳುತ್ತಿದ್ದರು. ನಾನು ಹಿಂದಿನ ಸಾಲಿನಲ್ಲಿ ಕುಳಿತಿದ್ದರೂ ಅದನ್ನು ಗಮನಿಸಿ ಸುಮ್ಮನಾದೆನಷ್ಟೆ. ಅಮ್ಮ ಹಾಗೇ ಅಂತ ನನಗೆ ಗೊತ್ತಲ್ಲ!

ಕೊನೆಯಲ್ಲಿ ಸುಶ್ರುತ ಹೇಳಿದ ಮಾತು ಬಹಳ ಪ್ರಶಂಸನೀಯ. "ಇಂಥಾ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ಬರಲಿ, ಬೇರೆಯವರೂ ನಿರ್ವಹಿಸಲಿ, ನಾವೂ ಭಾಗವಹಿಸುತ್ತೇವೆ.." ಎಷ್ಟೇ ಆದರೂ ನಾವೆಲ್ಲರೂ ಕನ್ನಡದಲ್ಲಿ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವವರಲ್ಲವೇ?

ಹೊತ್ತಿದ ಹಣತೆಯು ನಿರಂತರವಾಗಿ ಬೆಳಗಲಿ..

ನಿನ್ನೆಯ ಕಾರ್ಯಕ್ರಮ ಈಟೀವಿಯಲ್ಲಿ ಬರುತ್ತಂತೆ ಇವತ್ತು. ನೋಡಲು ಕಾತುರನಾಗಿದ್ದೇನೆ.

-ಅ
17.03.2008
4.30PM

4 comments:

 1. ...... ಸದಾ ಬೆಳಗಲಿ ಪ್ರಣತಿ.

  ReplyDelete
 2. ನನಗೂ ನಿನ್ನೆ ಹಾಲ್ ತುಂಬಿ ಕುರ್ಚಿಗಳು ಸಾಲದೇ ಹೋದಾಗ ಬೆರಗಾಯಿತು - ಅಂತರ್ಜಾಲದ ಕನ್ನಡಿಗರು ಎಷ್ಟೊಂದು ಜನ!

  ಬಂದವರೆಲ್ಲಾ ತಮ್ಮ ಹೆಸರು, ವೆಬ್ಸೈಟ್ ಮತ್ತು ಈ-ಮೇಲ್ ಬರೆಯುತ್ತಿದ್ದ ಪುಸ್ತಕ ನೋಡಿ ಇನ್ನಷ್ಟು ಬೆರಗಾಯಿತು. ಕನ್ನಡ ಬ್ಲಾಗಿಗರಲ್ಲಿ ನಾನು ನೋಡುತ್ತಿರುವುದು ಕಾಲು ಭಾಗವಷ್ಟೇ ಎಂದು ತಿಳಿದಾಗ!

  ಕಾರ್ಯಕ್ರಮ ಚೆನ್ನಾಗಿ ನಡೀತು. ಪ್ರಣತಿ ತಂಡದೋರ್ಗೆಲ್ಲಾ ಅಭಿನಂದನೆಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆಲ್ಲಾ ಧನ್ಯವಾದಗಳು.

  ಹೀಗೇ ಮೇಲೇರ್ತಿರ್ಲಿ ಪ್ರಣತಿಯ ಕೀರ್ತಿ!

  ReplyDelete
 3. ಈಟೀವಿಲಿ ಬಂದಿತ್ತಾ ?

  ReplyDelete
 4. [ಜೋಯ್] ಗೊತ್ತಿಲ್ಲ. :-(

  [ಶ್ರೀಕಾಂತ್] ಇನ್ನಷ್ಟು ಜನ ಬರುವಂತಾಗಲಿ ಮುಂದೆ.

  [ಅಮರ] 'ಅಮರ' ಜ್ಯೋತಿಯಂತೆ!

  ReplyDelete