Wednesday, April 30, 2008

ಶುಕ್ರದೆಶೆ - ಕೇತುಭುಕ್ತಿ

ದೈವ ಸಂಕಲ್ಪದಂತೆ ಫಲಗಳನ್ನನುಭವಿಸಿಯಾಯ್ತು. ಇನ್ನು ವರದಿಯಷ್ಟೆ ಉಳಿದಿರುವುದು.

ಏಪ್ರಿಲ್ ತಿಂಗಳು ನನ್ನ ಪಾಲಿಗೆ ಒಂದು ವರ್ಷವೇ ಆದಂತಿದೆ. ಕ್ಷಣಗಳು ಗಂಟೆಗಳಾಗಿವೆ.. ಅಂತೂ ಮುಗಿಯಿತಲ್ಲಾ ಎಂಬ ತುಸು ಸಮಾಧಾನ, ನಿರಾಳ ಒಂದು ಕಡೆಯಾದರೆ, ಮೇ ಬಗ್ಗೆ ಸ್ವಲ್ಪ ಧೈರ್ಯ ಮತ್ತೊಂದು ಕಡೆ.

ಮೂರ್ಖರ ದಿನದಂದು ನನ್ನನ್ನು ಯಾರೂ ಮೂರ್ಖನನ್ನಾಗಿಸಲಿಲ್ಲ; ನಂತರದ ದಿನಗಳಲ್ಲಿ ನಾನೇ ಮೂರ್ಖನಾದೆ.

ಬದುಕಿನಲ್ಲಿ ಯಾವುದು ನನಗೆ ಕಲ್ಪಿಸ್ಸಲೂ ಸಹ ಸಾಧ್ಯವೇ ಇಲ್ಲ ಎಂಬ ನಿರ್ಣಯದಲ್ಲಿ ನಾನು ಪಾಲ್ಗೊಂಡಿದ್ದೆ. ಈ ನಿರ್ಣಯದಲ್ಲಿ ಕಿಂಚಿತ್ತೂ ತಪ್ಪಿಲ್ಲವೆಂದು ತಿಳಿದಿದ್ದರೂ ಅಳುಕಿದ ಮನಸ್ಸಿಗೆ ಧೃತಿ ಕೊಡಲು ನನ್ನ ಮಿತ್ರಸಮೂಹವೇ ನನ್ನೊಂದಿಗೆ ಬೆನ್ನೆಲುಬಾಗಿ ನಿಂತಿದ್ದು ನನ್ನ ಪುಣ್ಯವೇ ಸರಿ.

ನನಗಾಗಿ, (ನಾನು, ವಿಜಯಾ, ಗುರು, ಗಿರೀಶ, ಅಶೋಕ) ತನ್ನ ಜೀವಮಾನವನ್ನು ತೆತ್ತ ಅತ್ತೆಯ ಕೊನೆಯ ಉಸಿರನ್ನು ಎಣಿಸುತ್ತಾ ಕುಳಿತಿರುವ ದಿನವನ್ನೂ ಅನುಭವಿಸಿದೆ.

ಬದುಕಿನ ಅತ್ಯಂತ ಕ್ರಿಟಿಕಲ್ ಇರುಳಿನಲ್ಲಿ ಒಂದು ಅನಿರೀಕ್ಷಿತ ಹಲ್ಲೆಗೊಳಗಾದೆ - ಮರಣಾಂತಿಕವಾದದ್ದೇನಲ್ಲ, ದೇಹದ ಗಾಯವು ಮನಸ್ಸಿನ ಗಾಯವು ಕೆಲ ಸಮಯದಲ್ಲೇ ಮಾಗಿಯಾಯ್ತು ಎಂದು ಭಾವಿಸುತ್ತೇನೆ.

ಅತ್ತೆಯ ನಿರ್ಜೀವ ಚೇತನದೊಂದಿಗೆ ಒಬ್ಬನೇ ವಾಹನದಲ್ಲಿ ಆಸ್ಪತ್ರೆಯಿಂದ ರುದ್ರಭೂಮಿಯವರೆಗೂ ಪಯಣಿಸುವಾಗಲೂ ಕಣ್ಣಲ್ಲಿ ಒಂದು ಹನಿ ನೀರೂ ಗೋಚರಿಸಲಿಲ್ಲ.

ಶ್ರೀರಂಗಪಟ್ಟಣದ ಬಳಿ ನಾನು ಪಯಣಿಸುತ್ತಿದ್ದ ಬಸ್ಸು ಅವಘಡಕ್ಕೊಳಗಾಯಿತು; ಬಹುಶಃ ಕ್ಷಣಮಾತ್ರದಲ್ಲಿ ಬಸ್ಸಿನಲ್ಲಿದ್ದ ಎಲ್ಲರ ಜೀವ ಉಳಿಯಿತು. ಬಸ್ಸು ಮೂರು ಪಲ್ಟಿ ಹೊಡೆದು ಸೇತುವೆಯಿಂದ ನದಿಗೆ ಉರುಳಲು ಒಂದೆರಡು ಅಡಿ ದೂರವಿತ್ತು, ಇಲ್ಲವೇ ಎದುರು ಸಡನ್ ಆಗಿ ಬ್ರೇಕ್ ಹಾಕಿದ ಲಾರಿಗೆ ಅಪ್ಪಳಿಸಿ ತಲೆ ಒಡೆದುಕೊಳ್ಳಲು ಎರಡು ಸೆಕೆಂಡು ಮಾತ್ರವೇ ಸಮಯವಿತ್ತು.

'ಅವಳ' ಜೊತೆ ಪ್ರಯಾಣ ಮಾಡಿದೆ. ಮಡಿಕೇರಿಯ ಸೂರ್ಯಾಸ್ತ ನೋಡಬೇಕೆಂದಿದ್ದೆ, ಮೇಘರಾಜನ ಆತಿಥ್ಯದಿಂದ ಸಾಧ್ಯವಾಗಲಿಲ್ಲ. 'ಅವಳ' ಬಂಧುಗಳ ಮನೆಯ ಆದರಾತಿಥ್ಯಗಳಿಂದ ಬೆಕ್ಕಸ ಬೆರಗಾಗಿ ಹೊಟ್ಟೆಯುಬ್ಬರ ಮಾಡಿಕೊಂಡು ಇನ್ನೂ ಜೀರ್ಣಿಸಿಕೊಳ್ಳುತ್ತಿದ್ದೇನೆ.

ಅತ್ಯಾತ್ಮೀಯರೊಡನೆ ಕಟುವಾಗಿ ನಡೆದುಕೊಳ್ಳುವಂತಾಯಿತು. ಗುಂಡಿಗೆಯನ್ನು ಬಂಡೆಯಾಗಿಸಿಕೊಂಡು ನಡೆದುಕೊಂಡುಬಿಟ್ಟೆ.

ಇನ್ನೂ ಕೆಲವು ಸಾಲಗಳನ್ನು ಬಾಕಿಯುಳಿಸಿಕೊಂಡಿದ್ದೇನೆ. ತೀರಿಸುತ್ತೇನೆ. ಧನಸಾಲವಲ್ಲ - ವಸ್ತುಸಾಲಗಳು, ವಾಕ್ಸಾಲಗಳು.

ದೀಪ್ತಿ, ಪ್ರಶಾಂತ, ದಿವ್ಯಾ, ಮೊಮ್ಮಗಳು ಶೃತಿ, ಅಂಬೇಡ್ಕರ್, ರಾಜ್‍ಕುಮಾರ್, ಸಚಿನ್ ತೆಂಡುಲ್ಕರ್, ವರುಣ, ಅಶ್ವಿನಿ, ಗುರುನಾಥ, ಸಂತೋಷ್, ಮಧು - ಎಲ್ಲರಿಗೂ ಕ್ರಮವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿಯಾಯಿತಾದರೂ ಬ್ಲಾಗಿನಲ್ಲೂ ಹರಸುವ ಮನಸ್ಸಾಗಿದೆ. ಹುಟ್ಟು ಹಬ್ಬದ ಶುಭಾಶಯಗಳು.

ಪ್ರೀತಿಪಾತ್ರಳಾದ ಅಕ್ಕನ ಸೋಲುಗೆಲುವುಗಳನ್ನರಿತ ನಾನು, ಆಕೆಯ ಬದುಕಿನ ನಿಷ್ಕಲ್ಮಶ ಸುಗಮ ಹಾದಿಗೆ ನಾಂದಿಯಾಗಲು ಸರ್ವಸ್ವವನ್ನೂ ಅರ್ಪಿಸಲು ಸಿದ್ಧನಿದ್ದು, ಆ ನಿಟ್ಟಿನಲ್ಲಿ ನಡೆದು ಹರ್ಷವನ್ನನುಭವಿಸುತ್ತಿದ್ದೇನೆ.

ಮನೆಗೆ ಬಂದಿರುವ ಹೊಸ ಲ್ಯಾಬ್ರಡಾರ್ ಮರಿ, ಮತ್ತು ಬೆಕ್ಕಿನ ಮರಿಯು ಬದುಕು ಅತ್ಯಂತ ಸುಂದರ ಎಂಬುದನ್ನು ಸಾರಿ ಹೇಳಲು ಬಂದಂತಿದೆ.

ಕೇತುವಿನ ಕೆಲಸ ಇನ್ನೂ ಮುಂದಿದೆ, ಒಂಭತ್ತು ತಿಂಗಳು ಉಳಿದಿದೆ. ತಾನು ಮಾಡಬೇಕಾದ ಕೆಲಸವನ್ನು ಮಾಡಿಯಾಗಿದೆ. ಅವಮಾನ, ಅನುಮಾನ, ಅಭಿಮಾನ ಎಂದರೇನು ಎಂಬುದನ್ನು ತಿಳಿಸಿಕೊಟ್ಟಿದ್ದಾನೆ. ಇನ್ನು 'ಸನ್ಮಾನ' ಬಾಕಿಯಿದೆ. ಅಲ್ಲಿಗೆ ಶುಕ್ರದೆಶೆ ಮುಗಿದು ರವಿಯ ಆಟಪಾಠಗಳೇನು ಎಂದು ನೋಡುವ ಸಮಯ ಬಂದಿರುತ್ತೆ.

ಒಳ್ಳೆಯವರು ಸುಖವಾಗಿರಲಿ. ಕೆಟ್ಟವರು ಒಳ್ಳೆಯವರಾಗಲಿ.

-ಅ
30.04.2008
10.45AM

Sunday, April 27, 2008

ಸತ್ಯಹರಿಶ್ಚಂದ್ರ - ಕಲರ್

ಉತ್ತಮವಾದ ಪ್ರಯತ್ನ. ಎಲ್ಲಾ ತಂತ್ರಜ್ಞರಿಗೂ ಅಭಿನಂದನೆಗಳು.

ಕತ್ತರಿಪ್ರಯೋಗದಿಂದ ಸ್ವಲ್ಪ ಬೇಸರವಾಯಿತು, ಆದರೆ ಅರ್ಥ ಆಗುತ್ತೆ, ಮೂರುವರೆಗಂಟೆಗಳ ಚಿತ್ರವನ್ನು ಈಗ ನೋಡಲು ಪ್ರೇಕ್ಷಕ ಸಿದ್ಧನಿರೋದಿಲ್ಲ ಅಂತ.

'ಆನಂದ ಸದನ, ಅರವಿಂದ ನಯನ' ಹಾಡು ಮಿಸ್ಸಿಂಗು.

'ಏನಿದೀ ಗ್ರಹಚಾರವೋ...' ಈ ಹಾಡು ಪೂರ್ತಿ ಇಲ್ಲ.

'ಶ್ರಾದ್ಧದೂಟ ಸುಮ್ಮನೆ..' ಈ ಹಾಡು ಕೂಡ.

ತೊಂದರೆಯಿಲ್ಲ. ಡಿಜಿಟಲ್ ಸೌಂಡ್ ಮಿಕ್ಸಿಂಗ್ ಕೆಲಸವನ್ನು ಸೊಗಸಾಗಿ ಮಾಡಿದ್ದಾರೆ.

ಆದಷ್ಟು ಬೇಗ ಮನೆಮಂದಿಯೆಲ್ಲಾ ಚಿತ್ರಮಂದಿರಕ್ಕೆ ಹೋಗಿ ಹರಿಶ್ಚಂದ್ರನನ್ನೂ, ವಿಶ್ವಾಮಿತ್ರನನ್ನೂ, ನಕ್ಷತ್ರಿಕನನ್ನೂ, ವಸಿಷ್ಠನನ್ನೂ, ಚಂದ್ರಮತಿಯನ್ನೂ, ಲೋಹಿತಾಸ್ಯನನ್ನೂ, ಕಾಲಕೌಶಿಕನನ್ನೂ, ವೀರಬಾಹುಕನನ್ನೂ ನೋಡಿ ಬನ್ನಿಪ್ಪಾ..

-ಅ
27.04.2008
11.20PM

Friday, April 25, 2008

ಸ್ವೀಕರಿಸು ಓ ಗುರುವೆ

ಪ್ರಾರ್ಥನೆ ೧: ದೇವ್ರೇ, ನಂಗೆ ಒಳ್ಳೇದ್ ಮಾಡಪ್ಪಾ.. ವಿದ್ಯಾ ಬುದ್ಧಿ ಕೊಡಪ್ಪಾ ನಂಗೆ...

'ನಾನು' ಅನ್ನೋ ಹಮ್ಮಿನ ಕಡೆ ದೇವರು ಇರುತ್ತಾನೆಯೇ?

ಪ್ರಾರ್ಥನೆ ೨: ದೇವ್ರೇ, 'ಅವಳಿಗೆ' ಒಳ್ಳೇದ್ ಮಾಡಪ್ಪಾ, ಅವಳ ಕಷ್ಟ ಎಲ್ಲಾ ನೀಗಲಿ

ಇದೇನು ದೊಡ್ಡ ನಿಸ್ವಾರ್ಥದ ಪ್ರಾರ್ಥನೆಯೇ? 'ಅವಳು' ನನ್ನವಳು ಆಗಿರೋದರಿಂದಲೇ ಪ್ರಾರ್ಥಿಸುತ್ತಿರೋದು. ದೇವರಿಗೆ ಸ್ವಾರ್ಥ ಇಷ್ಟ ಆಗುತ್ತಾ?

ಪ್ರಾರ್ಥನೆ ೩: ದೇವರೇ (ನೀನಿದ್ದರೆ), ನನ್ನ ಆತ್ಮವನ್ನು (ಅದಿದ್ದರೆ) ರಕ್ಷಿಸು (ಬಲವಿದ್ದರೆ)

ತನ್ನ ಬಗ್ಗೆಯೇ ಸಂದೇಹ ಇರೋನಿಗೆ ಪಾಪ ದೇವರು ತಾನೇ ಏನು ಸಹಾಯ ಮಾಡಿಯಾನು.

ಪ್ರಾರ್ಥನೆ ೪: ದೇವ್ರೇ, ಎಲ್ಲರಿಗೂ ಒಳ್ಳೇದ್ ಮಾಡಪ್ಪಾ..

ದೇವರ ಕರ್ತವ್ಯವನ್ನು ದೇವರಿಗೇ ನೆನಪಿಸೋದು ಯಾವ ನ್ಯಾಯ? ಅವನು ತನ್ನ ಕೆಲಸ ಸರಿಯಾಗಿ ಮಾಡ್ತಿಲ್ಲ, ಕರ್ತವ್ಯಭ್ರಷ್ಟ ಅಂತಾದರೆ ಈ ಪ್ರಾರ್ಥನೆ ಅಗತ್ಯ.

ಪ್ರಾರ್ಥನೆ ೫: ನಾಕವಿದೆ ನರಕವಿದೆ, ಪಾಪವಿದೆ ಪುಣ್ಯವಿದೆ, ಸ್ವೀಕರಿಸು ಓ ಗುರುವೆ ಅಂತರಾತ್ಮ..

ಮಿಕ್ಕಿದ್ದು ದೇವರಿಗೆ ಬಿಟ್ಟಿದ್ದು!!!

[ವಿಶೇಷ ಧನ್ಯವಾದಗಳು: ರಾಷ್ಟ್ರಕವಿ ಕುವೆಂಪುರವರಿಗೆ, ಅವರ ಸಾಲುಗಳನ್ನು ಬಳಸಿಕೊಂಡಿದ್ದಕ್ಕೆ]

-ಅ
25.04.2008
7PM

Saturday, April 19, 2008

ಬರಹ ದಿರೆಚ್ತ್

ಇಫ಼್ ಯೌ ಫ಼ೊರ್ಗೆತ್ ತೊ ಸ್ವಿತ್ಚ್ ಒಫ಼್ಫ಼್ ಥೆ ಬರಹ ದಿರೆಚ್ತ್ ವ್ಹಿಲೆ ತ್ಯ್ಪಿನ್ಗ್ ಎನ್ಗ್ಲಿಶ್ ಇನ್ ಉನಿಚೊದೆ, ಥಿಸ್ ಇಸ್ ವ್ಹೆರೆ ಯೌ ಎನ್ದ್ ಉಪ್ ಇನ್.

ಯೌ ಚನ್ ಉಸೆ ಥಿಸ್ ತೆಚ್ನೊಲೊಗ್ಯ್ ಇನ್ ಮನ್ಯ್ ಅರೆಅಸ್, ಲಿಕೆ,

೧. ಬ್ಲೊಗ್ಗಿನ್ಗ್
೨. ಗೂಗ್ಲೆ ತಲ್ಕ್ - ಚತ್ತಿನ್ಗ್
೩. ಎಮೈಲ್
೪. ದೊಚುಮೆನ್ತತಿಒನ್
ಎತ್ಚ್..

ಯೌ ಚನ್ನೊತ್ ಉಸೆ ಥಿಸ್ ಇನ್ ಯಹೂ ಮೆಸ್ಸೆನ್ಗೆರ್, ಮ್.ಸ್.ಔತ್ಲೂಕ್, ನೊತೆಪದ್, ಸೊ ಒನ್ ಅನ್ದ್ ಸೊ ಫ಼ೊರ್ತ್.

ನೊವ್ ಗೊ ಅಹೆಅದ್ ಅನ್ದ್ ಚೊಮ್ಮೆನ್ತ್ ತೊ ಥಿಸ್ ಪೊಸ್ತ್.

-ಅ
19.04.2008
12.40AM

Wednesday, April 16, 2008

ಬಾ ಮಳೆಯೇ ಬಾ..

ಕನ್ನಡದಲ್ಲಿ ಇದುವರೆಗೂ ಕೇಳಿರುವ ಅತ್ಯಂತ romantic ಹಾಡುಗಳಲ್ಲಿ ಇದು ಪ್ರಮುಖವಾದದ್ದು ಎಂದು ಯಾವಾಗ ಎಲ್ಲಿ ಬೇಕಾದರೂ ಹೇಳಬಲ್ಲೆ.

ಬಿ.ಆರ್.ಲಕ್ಷ್ಮಣರಾವ್ ಬರೆದಿರೋದು ಅಂದರೆ ಅದು ಎಷ್ಟರ ಮಟ್ಟಿಗೆ ಮೈ ಪುಳಕವನ್ನುಂಟು ಮಾಡಬಹುದು ಎಂದು ವಿವರಿಸಬೇಕಿಲ್ಲ.

ಬೇಸರದ ಸಂಗತಿಯೆಂದರೆ ಈಗಾಗಲೇ ಕನ್ನಡದ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಪ್ರತಿಷ್ಠಾಪಿಸಿಕೊಂಡಿರುವ ಸೋನು ನಿಗಮ್ ಅವರು ಈ 'ಬಾ ಮಳೆಯೇ ಬಾ' ಹಾಡನ್ನು ಹಾಡಿರುವ ರೀತಿ. ಕನ್ನಡದಲ್ಲಿ ಹಾಡುಗಾರರ ಕೊರತೆಯನ್ನು ಕಾಣುತ್ತಿರುವ ಸಂಗೀತ ನಿರ್ದೇಶಕರಿಗೆ ಮನದಟ್ಟಾಗುವುದು ಯಾವಾಗ ಅಂತ ಗೊತ್ತಿಲ್ಲ. ಲಕ್ಷ್ಮಣರಾಯರಿಗೆ ಸಂತೋಷವಾಯಿತೋ ಇಲ್ಲವೋ ಗೊತ್ತಿಲ್ಲ, ಈ ಹಾಡು ಕೇಳಿ; ಅವರ ಅಭಿಮಾನಿಯಾದ ನನಗಂತೂ ವಿಪರೀತ ಬೇಸರ ತರಿಸಿತು.


ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ
ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ
ನಲ್ಲೆ ಹಿಂತಿರುಗಿ ಹೋಗದಂತೆ...

ಸೋನು ನಿಗಮ್ ಧ್ವನಿಯಲ್ಲಿ ಕೇಳಬೇಕೆಂದರೆ ಈ ಲಿಂಕಿನಲ್ಲಿದೆ. http://www.kannadaaudio.com/Songs/Moviewise/home/Accident.php

ಇದೇ ಹಾಡಿನ 'Club Mix' version ಕೂಡ ಇದೆ. ಮೇಲ್ಕಂಡ ಲಿಂಕಿನಲ್ಲೇ ಅದೂ ಕೂಡ ದೊರಕಲಿದೆ. ಕೇಳದಿದ್ದರೇನೇ ಒಳ್ಳೇದು.
ಇದೇ ಹಾಡನ್ನು ಕನ್ನಡದ ಹಾಡಿನಂತೆಯೇ ಕೇಳಬೇಕು ಎಂದರೆ ಈ ಲಿಂಕಿನಲ್ಲಿದೆ.
http://www.kannadaaudio.com/Songs/Bhaavageethe/home/HrudayavaNinageNeedide.php

http://www.kannadaaudio.com/Songs/Bhaavageethe/home/MadhuMaale.php

-ಅ
16.04.2008
12.20PM

Thursday, April 10, 2008

ಹದಿನೈದು ಚಿತ್ರಗಳು

ನಾನು ನೋಡಿರುವ ನೂರಾರು ಚಿತ್ರಗಳಲ್ಲಿ ಕೆಲವನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುವಂಥದ್ದು. ಕೆಲವನ್ನು ಮಾತ್ರ ಪದೇ ಪದೇ ನೋಡಲು ಇಷ್ಟವಾಗುವುದು. ಅಂಥಾ ಚಿತ್ರಗಳ ಬಗ್ಗೆ ಒಂದು "ಟಾಪ್ 15" ನಾನೇ ಸಿದ್ಧ ಪಡಿಸಿಕೊಂಡಿದ್ದೇನೆ.

15. ಸಿ.ಬಿ.ಐ. ಶಿವ

ನಾಯಕನಾದ ಟೈಗರ್ ಪ್ರಭಾಕರ್ ಚಿತ್ರದ ಇಂಟರ್ವೆಲ್ ಆದ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರಾದರೂ, ಇಡೀ ಚಿತ್ರ ಸಾಗುವುದು ಸುನಿಲ್, ರಮೇಶ್ ಮತ್ತು ಜಗ್ಗೇಶ್‍ರ ಬದುಕಿನೊಂದಿಗೆ. ಮೂರೂ ಜನ ಅಮಾಯಕ ಹುಡುಗರು ಯಾವುದೋ ಕೊಲೆಯ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತಾರೆ. ಹಾಸ್ಯ ಮತ್ತು ಸಸ್ಪೆನ್ಸು ಎರಡನ್ನೂ ಬಹಳ ಸೊಗಸಾಗಿ ಚಿತ್ರಿಸಿರುವ ನಿರ್ದೇಶಕರು (ಹೆಸರು ಗೊತ್ತಿಲ್ಲ) ರಮೇಶ್, ಮತ್ತು ಜಗ್ಗೇಶ್‍ರಲ್ಲಿರುವ ಸಂಪೂರ್ಣ ಪ್ರತಿಭೆಯನ್ನು ಬಳಸಿಕೊಂಡಿದ್ದಾರೆ.

Mood: ಬೇಸರವಾಗಿದ್ದಾಗ ಈ ಚಿತ್ರ ನೋಡಿದರೆ ನಕ್ಕೂ ನಕ್ಕೂ ಮನಸನ್ನು ಹಗುರ ಮಾಡಿಕೊಳ್ಳಬಹುದು.

ಪ್ರಮುಖ ಪಾತ್ರ: ಟೈಗರ್ ಪ್ರಭಾಕರ್, ರಮೇಶ್, ಜಗ್ಗೇಶ್, ಸುನಿಲ್

14. ಸೀತಾ

'ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲಿ..
ಬಂದು ನಿಂತೆ ಹೇಗೋ ಏನೋ
ನನ್ನ ಮನದ ಗುಡಿಯಲಿ..'

ಈ ಹಾಡು ಕೇಳದವರು ಯಾರಿದ್ದಾರೆ! ಆ ಕಾಲಕ್ಕೆ ಈ ಚಿತ್ರದ concept ಮತ್ತು theme ಬಹಳ ಮುಂದುವರೆದಂತಿತ್ತು. ನಾಯಕಿಯು ನಾಯಕನ ಸ್ನೇಹಿತನ ಪಕ್ಕದಲ್ಲಿ ಮಲಗಿಕೊಂಡರೂ ತಾನು ತಪ್ಪು ತಿಳಿಯದಿರುವುದು, ಹೃದ್ರೋಗದ ತನ್ನ ಸ್ನೇಹಿತನು ತನ್ನ ಬದುಕು ಸಾವಿನ ಬಗ್ಗೆ ನಿರಾಳವಾಗಿ ಹಾಸ್ಯಮಯವಾಗಿ ಚರ್ಚಿಸುವುದು ಎಲ್ಲವೂ ಆ ಕಾಲಕ್ಕೆ ಮೀರಿದ್ದೆನಿಸುತ್ತೆ. ನಂತರ ನಾಯಕ ಕಳೆದು ಹೋಗುವುದು, ಅವನ ಸ್ನೇಹಿತನ ಜೊತೆ ನಾಯಕಿಯು ಸಮಾಜ ಸೇವೆ ಅಂತ ಓಡಾಡುವುದು, ನಂತರ ನಾಯಕನು ಮರಳುವುದು, ದೊಡ್ಡ ಕಥೆ!

Mood: ಒಳ್ಳೆಯ ಸಂಗೀತ, ನಟನೆ, ಸಾಹಿತ್ಯವನ್ನು enjoy ಮಾಡುವ ಮನಸ್ಸಿದ್ದಾಗ.

ಪ್ರಮುಖ ಪಾತ್ರ: ಗಂಗಾಧರ್, ರಮೇಶ್, ಕಲ್ಪನಾ, ಅಶ್ವಥ್

ವಿ.ಸೂ.: ಅಶ್ವಥ್ ಅಭಿನಯ ಅತ್ಯದ್ಭುತ!!

13. ನೋಡಿ ಸ್ವಾಮಿ ನಾವಿರೋದು ಹೀಗೆ

ಬಹುಶಃ ಶಂಕರ್‍ನಾಗ್ ಅಭಿಮಾನಿಗಳಿಗೆಲ್ಲಾ ಈ ಚಿತ್ರ ಫೇವರಿಟ್! ನಾಟಕವನ್ನು ಚಲನಚಿತ್ರವಾಗಿಸುವಾಗ ಮಾಡಿಕೊಂಡಿರುವ ಕೆಲವು ಬದಲಾವಣೆಯನ್ನು ಬಿಟ್ಟರೆ ಚಿತ್ರದ ನಿರೂಪಣೆಯಂತೂ ಪ್ರಶಂಸನೀಯ. 'ಜಯಾ ಜಾಗಿರ್ದಾರ್' - 'ಕಲ್ಲೇಶ್ ನುಗ್ಗೇಹಳ್ಳಿ'ಯ ಸುಪ್ರಸಿದ್ಧ ಸಂಭಾಷಣೆಯನ್ನು ಯಾರು ತಾನೆ ಮರೆತಾರು! ಮಧ್ಯಮವರ್ಗದ ಜೀವನಾಶೈಲಿಯನ್ನು ಶಂಕರ್‍ನಾಗ್‍ಗಿಂತ ಚೆನ್ನಾಗಿ ಚಿತ್ರಿಸಲು ಅನ್ಯರಿಗೆ ಇನ್ನೂ ಸಾಧ್ಯವಾಗಿಲ್ಲವೆನ್ನಬಹುದು. ಸಂಗೀತಗಾರನಾದ ನಾಯಕನ ಅಣ್ಣನಿಗೆ ಹುಚ್ಚು ಹಿಡಿದಿರುತ್ತೆ. ಇವನ ವೃತ್ತಿ ಬದುಕು, ವಯಕ್ತಿಕ ಬದುಕು ಎರಡನ್ನೂ ವಿಭಿನ್ನವಾಗಿ maintain ಮಾಡುತ್ತಾನೆ.

Mood: ಆಗಾಗ್ಗೆ ಚಿತ್ರಗಳ ತಾಂತ್ರಿಕಾಂಶಗಳ ಬಗ್ಗೆ ಆಸಕ್ತಿ ಮೂಡುತ್ತೆ. Technically perfect ಚಿತ್ರಗಳನ್ನು ಕೊಡುತ್ತಿದ್ದುದು ಶಂಕರ್‍ನಾಗ್.

ಪ್ರಮುಖ ಪಾತ್ರ: ಶಂಕರ್ ನಾಗ್, ಅನಂತ್ ನಾಗ್, ಲಕ್ಷ್ಮೀ, ಮಾಸ್ಟರ್ ಮಂಜುನಾಥ್, ಅರುಂಧತಿ ನಾಗ್, ರಮೇಶ್ ಭಟ್

ವಿ.ಸೂ. ರಮೇಶ್ ಭಟ್ ಮತ್ತು ಅರುಂಧತಿ ನಾಗ್ ಜೋಡಿ ಸೂಪರ್.

12. ಸುಪ್ರಭಾತ

ಗಿಡ ಮರ, ಬೆಟ್ಟ ಗುಡ್ಡ, ನದಿ ತೊರೆ, ಕೊನೆಗೆ ತನ್ನ ಬೈಕಿನೊಂದಿಗೂ ಮಾತನಾಡುವ ಹೀರೋ ಪೆಟ್ರೋಲ್ ಬಂಕಿನ ಮಾಲೀಕನಾಗಿದ್ದೂ, ಫ್ಲಾಷ್ ಬ್ಯಾಕಿನಲ್ಲಿ ಉಗ್ಗುತ್ತಿರುತ್ತಾನೆ. ಅನ್ಯಾಯವಾಗಿದ್ದ ನಾಯಕಿಯ ಬದುಕಿಗೆ ಬೆಳಕಾಗಿ ತನ್ನ ಬದುಕನ್ನು ಬೆಳಗಿಸಿಕೊಳ್ಳುತ್ತಾನೆ. ತೂಕಭರಿತ ಕಥೆಯನ್ನು ದಿನೇಶ್ ಬಾಬು ಸರಳವಾಗಿ ನೀಡಿದ್ದಾರೆ. ಹಾಡುಗಳು ಅಜರಾಮರ. 'ಈ ಹೃದಯ ಹಾಡಿದೆ, ಆಸೆಗಳ ತಾಳದೆ...' ಈ ಹಾಡಂತೂ ಅದೆಷ್ಟು ಸಲ ಕೇಳಿದ್ದೀನೋ ಏನೋ. ಹಾಸ್ಯವನ್ನು ಸೃಷ್ಟಿಸಲು ಹೋಗಿಲ್ಲ. ಕಥೆಯೊಂದಿಗೆ ಹಾಸ್ಯವೂ ಸಹ ಬೆಳೆದಿದೆ.

Mood: ಖಾಲಿ ಮನಸ್ಸು

ಪ್ರಮುಖ ಪಾತ್ರ: ವಿಷ್ಣುವರ್ಧನ, ಸುಹಾಸಿನಿ, ಮಾನು

11. ಭಕ್ತ ಪ್ರಹ್ಲಾದಪೌರಾಣಿಕ ಚಿತ್ರಗಳನ್ನು ಕನ್ನಡ, ತೆಲುಗು ಮತ್ತು ತಮಿಳು ಮೂರೂ ಭಾಷೆಗಳಲ್ಲಿ ಸ್ಪರ್ಧೆಯೊಂದಿಗೆ ಅರವತ್ತು ಎಪ್ಪತ್ತು ದಶಕದಲ್ಲಿ ನಮಗೆ ನೀಡಿದರು. ಚಿತ್ರವಿಮರ್ಶಕರು ಭಕ್ತ ಪ್ರಹ್ಲಾದ ಚಿತ್ರವನ್ನು ಅಷ್ಟೇನೂ ಹೊಗಳದೇ ಇದ್ದರೂ ಕನ್ನಡ ಚಿತ್ರರಸಿಕರಿಗಂತೂ ಇದು ಅತ್ಯುನ್ನತ ಪೌರಾಣಿಕ ಚಿತ್ರವಾಗಿತ್ತು. ರಾಜ್‍ಕುಮಾರ್ ತನ್ನ ನಟನೆಯ ಶಿಖರದಲ್ಲಿದ್ದೂ, ಪುನೀತ್ (ಆಗ ಲೋಹಿತ್) ಬದಲು ಮಾಸ್ಟರ್ ಮಂಜುನಾಥ್‍ರಂಥ ನಟನಾ ಸಾಮರ್ಥ್ಯ ಇದ್ದವರು ಇದ್ದಿದ್ದರೆ ಚಿತ್ರ ಇನ್ನೂ ಅದ್ಭುತವಾಗಿರುತ್ತಿತ್ತು. ಇಡೀ ಚಿತ್ರ ಅಣ್ಣಾವ್ರ ಅಭಿನಯದ ತಳಹದಿಯ ಮೇಲಿದೆ.

Mood: ರಸಿಕತೆ.. ;-)

ಪ್ರಮುಖ ಪಾತ್ರ: ಡಾ||ರಾಜ್‍ಕುಮಾರ್, ಸರಿತಾ, ಅನಂತ್ ನಾಗ್, ಪುನೀತ್ ರಾಜ್‍ಕುಮಾರ್, ತೂಗುದೀಪ ಶ್ರೀನಿವಾಸ್, ಶ್ರೀನಿವಾಸ ಮೂರ್ತಿ, ಕಾಂಚನಾ, ಬ್ರಹ್ಮಾವರ್

10. ಹೆಂಡ್ತೀಗ್ಹೇಳ್ಬೇಡಿ

ಸಸ್ಪೆನ್ಸ್ ಚಿತ್ರಗಳು ಸಾಮಾನ್ಯವಾಗಿ ತುಂಬಾ ಜನಕ್ಕೆ ಇಷ್ಟವಾಗುತ್ತೆ. ಆದರೆ ಸಸ್ಪೆನ್ಸು ಅನೇಕ ಸಲ ಕ್ಲೀಷೆಯಾಗಿರುತ್ತೆ. ಕ್ಲೀಷೆಯನ್ನು ಮೀರಿದ ಈ ಚಿತ್ರದಲ್ಲಿ ಹೆಚ್ಚು ಪಾತ್ರಗಳಾಗಲೀ, ಹೆಚ್ಚು ಲೊಕೇಷನ್ನುಗಳಾಗಲೀ ಇಲ್ಲವೇ ಇಲ್ಲ. ನಾಲ್ಕೈದು ಜನರಿಂದಲೇ ಸಸ್ಪೆನ್ಸನ್ನು ನಮ್ಮ ಮುಂದಿಟ್ಟಿದ್ದಾರೆ. ಕೊಲೆಯಾಗುವುದು, ಅದನ್ನು ಪತ್ತೆ ಹಚ್ಚುವುದು, ಜೊತೆಗೆ ಹೆಜ್ಜೆ ಹೆಜ್ಜೆಗೂ ಅನುಮಾನಿಸುವ ಹೆಂಡತಿ - ಒಟ್ಟಿನಲ್ಲಿ ಸೊಗಸಾದ ನಿರೂಪಣೆಯು ಮುದ ನೀಡುತ್ತೆ.

Mood: ಕೆಟ್ಟ ಕೆಟ್ಟ ಸಿನಿಮಾಗಳನ್ನು ನೋಡಿ ತಲೆ ಕೆಟ್ಟಾಗ ಇಂಥಾ ಚಿತ್ರವೊಂದನ್ನು ನೋಡಬೇಕು!

ಪ್ರ.ಪಾ: ಅನಂತ್ ನಾಗ್, ಮಹಾಲಕ್ಷ್ಮೀ, ಸುಂದರ ಕೃಷ್ಣ ಅರಸ್, ಬೆಂಗಳೂರ್ ನಾಗೇಶ್

9. ಅಮೃತವರ್ಷಿಣಿ

ಇನ್ನೊಂದು ಸಸ್ಪೆನ್ಸ್ ಚಿತ್ರ. ಆದರೆ ಇದು ಒಂದು ಥರಾ romantic, family, suspense, thriller ಸಿನಿಮಾ. ಹಾಲಿನಂಥಹ ಬಾಂಧವ್ಯದಲ್ಲಿದ್ದ Anti ನಾಯಕನ ಗೆಳಯನ ಪತ್ನಿಯೊಡನೆ ಮೋಹಕ್ಕೆ ಗುರಿಯಾಗುವವನಿಗೆ ತಾನು ಏನೇ ಮಾಡಿದರೂ ಪ್ರೀತಿಗಲ್ಲವೇ ಎಂಬ ಸಮಝಾಯಿಷಿ ಬೇರೆ ಇರುತ್ತೆ. ಈ ಚಿತ್ರದಲ್ಲಿ ಸಸ್ಪೆನ್ಸು ಪ್ರೇಕ್ಷಕನಿಗಿರದೆ ಅದರೊಳಗಿನ ಪಾತ್ರಗಳಿಗಿರುತ್ತೆ. ಕೊಲೆಗಾರನನ್ನು ಪತ್ತೆ ಹಚ್ಚಿದಾಗ ಪ್ರೀತಿಗಾಗಿ ಏನು ಬೇಕಾದರೂ ಮಾಡಬಹುದು ಎಂಬುದು ಸುಳ್ಳಾಗುತ್ತೆ ಎಂದು ಚಿತ್ರದ ತಾತ್ಪರ್ಯ. ಎಲ್ಲರೂ ಸಾಯುವುದು ಚಿತ್ರದ ಅಂತ್ಯವಾದರೂ ನೀತಿಯೇನಪ್ಪಾ ಅಂದರೆ ಪ್ರೀತಿಯು ನಮ್ಮನ್ನು ಬೆಳಸಬೇಕೇ ವಿನಾ ಅಳಿಸಬಾರದು. ನಮ್ಮ ಪ್ರೀತಿಯು ಇನ್ನೊಬ್ಬರನ್ನು ಹಾಳು ಮಾಡುವಂತಿರಬಾರದು.

ಚಿತ್ರೀಕರಣಕ್ಕೆ ಬಳಸಿಕೊಂಡ ಸ್ಥಳಗಳು ಸುಂದರವಾಗಿದೆ. ಕೊಡೈಕೆನಾಲ್‍ನ ನಾನು ಮೊದಲು ನೋಡಿದ್ದು ಇದೇ ಚಿತ್ರದಲ್ಲಿ.

Mood: ಬೇಸರವಾದಾಗ ನೋಡಿದರೆ ಮತ್ತಷ್ಟು ತಲೆ ಕೆಟ್ಟೀತು. ಮನಸ್ಸು ಖಾಲಿ ಇದ್ದಾಗ ನೋಡುವುದು.

ಪ್ರ.ಪಾ: ಸುಹಾಸಿನಿ, ಶರತ್ ಬಾಬು, ರಮೇಶ್, ವಿನಾಯಕ ಜೋಷಿ

8. ಸತ್ಯ ಹರಿಶ್ಚಂದ್ರ

ಕಥೆಯ ತಾತ್ಪರ್ಯ ಬರೆಯುವುದು ಅನಗತ್ಯ. ಪಾತ್ರಗಳಿಗೆ ಆಯ್ಕೆ ಮಾಡಿಕೊಂಡಿರುವ ಹುಣಸೂರು ಕೃಷ್ಣಮೂರ್ತಿಯವರು perfect ಆಗಿ ಕಾರ್ಯನಿರ್ವಹಿಸಿದ್ದಾರೆ.

Mood: ಖಿನ್ನನಾಗಿದ್ದಾಗ ಹರಿಶ್ಚಂದ್ರ ನೋಡಿದಾಗ ನನ್ನ ಖಿನ್ನತೆಗೆ ಅರ್ಥವೇ ಇಲ್ಲ ಎನ್ನಿಸುತ್ತೆ.

ಪ್ರ.ಪ್ರಾ: ಡಾ|| ರಾಜ್‍ಕುಮಾರ್, ಪಂಡರಿಬಾಯಿ, ಅಶ್ವಥ್, ಉದಯ್‍ಕುಮಾರ್, ನರಸಿಂಹರಾಜು, ಎಂ.ಪಿ.ಶಂಕರ್

7. ತ್ರಿಮೂರ್ತಿ

ರಾಜ್‍ಕುಮಾರ್‍ರನ್ನು GREAT ACTOR ಅಂತ ಅನ್ನೋದು ಯಾಕೆ ಎಂದು ಅರಿವಾಗಬೇಕಾದರೆ ತ್ರಿಮೂರ್ತಿಯನ್ನು ನೋಡಬೇಕು. ತ್ರಿಪಾತ್ರವಲ್ಲದಿದ್ದರೂ ಮೂರು ಪಾತ್ರದಂತೆ ನಟಿಸುವ ನಾಯಕನಿಗೆ ಮೂರು ಅಜಗಜಾಂತರ ಪಾತ್ರಗಳು! ಒಬ್ಬ ಪೋಲೀಸು, ಇನ್ನೊಬ್ಬ ಹಿಪ್ಪಿ, ಮತ್ತೊಬ್ಬ ಮುದುಕ. ಪ್ರೇಕ್ಷಕನಿಗೆ ಗೊತ್ತು ಆ ಮೂರೂ ಜನ ಒಬ್ಬನೇ ಅಂತ. ಆದರೆ ಅದೇ ಪ್ರೇಕ್ಷಕನಿಗೆ ಮೂರೂ ನಟರು ಬೇರೆ ಬೇರೆ ಎಂದು ಅನ್ನಿಸುತ್ತೆ! ಇದು ಹಾಸ್ಯಭರಿತ ಸಸ್ಪೆನ್ಸ್ ಚಿತ್ರ. ಎಂದಿನಂತೆಯೇ ರಾಜ್ ಚಿತ್ರವೆಂದ ಮೇಲೆ ಉನ್ನತ ಮಟ್ಟದ ಸಾಹಿತ್ಯ ಸಂಗೀತ ತುಂಬಿದ ಹಾಡುಗಳು.

Mood: ಹೇಗೇ ಇದ್ದರೂ ಈ ಚಿತ್ರ ನೋಡಿದಾಗ ಒಂಥರಾ josh ಬರುತ್ತೆ.

ಪ್ರ.ಪಾ: ಡಾ||ರಾಜ್‍ಕುಮಾರ್, ಡಾ||ರಾಜ್‍ಕುಮಾರ್, ಡಾ||ರಾಜ್‍ಕುಮಾರ್

6. ಗೌರಿ ಗಣೇಶ/ ಮಿಂಚಿನ ಓಟ

ಅತ್ಯಂತ ಗಂಭೀರ ಪಾತ್ರಗಳಲ್ಲಿ, ದುರಂತ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಅನಂತ್ ನಾಗ್ ತಾವು ಉತ್ತಮವಾದ ಹಾಸ್ಯನಟನೂ ಕೂಡ ಎಂಬುದನ್ನು 'ಗಣೇಶನ ಮದುವೆ'ಯಲ್ಲೇ ನಿರೂಪಿಸಿದ್ದಾರಾದರೂ 'ಗೌರಿ ಗಣೇಶ'ದಲ್ಲಿ ಅನಂತ್‍ರ ನಟನೆಯ ಪರಿಪಕ್ವತೆ ಕಂಡುಬರುತ್ತೆ. ಚಿತ್ರ ಸಾಕಷ್ಟು ನಗಿಸಿದರೂ ಒಮ್ಮೆಮ್ಮೆ ಕೆಲವು ಮನಕಲಕುವ ದೃಶ್ಯಗಳನ್ನೊಳಗೊಂಡಿದೆ. ಸುಳ್ಳು ಹೇಳಿಕೊಂಡು ಕಾಲ ತಳ್ಳುತ್ತಾ ಹಣ ಸಂಪಾದಿಸಿಕೊಳ್ಳುತ್ತಾ ಬದುಕುತ್ತಿದ್ದವನಿಗೆ ಇದ್ದಕ್ಕಿದ್ದ ಹಾಗೆ ಆಸ್ಪತ್ರೆಯೊಂದರಲ್ಲಿ ಹುಡುಗಿಯೊಬ್ಬಳ ಹೆಣದ ಪಕ್ಕ ಸಿಕ್ಕ ಡೈರಿಯನ್ನೋದಿ, ಆ ಹುಡುಗಿಯ ಬದುಕಲ್ಲಿ ಬಂದು ಹೋದ ಗಂಡಸರನ್ನು ಆಟವಾಡಿಸಿ ಹಣ ಕೀಳಲು ಹೋದ ನಾಯಕನು ತಾನೂ ಚಳ್ಳೆ ಹಣ್ಣು ತಿನ್ನುವುದನ್ನು ಫಣಿ ರಾಮಚಂದ್ರ ವಿನೋದಮಯವಾಗಿ ನಿರೂಪಿಸಿದ್ದಾರೆ.

Mood: ಮನಸ್ಸನ್ನು ತೊಳೆದು ಬೆಳಗಿಸಿಕೊಳ್ಳಬೇಕಾದಾಗ ಈ ಚಿತ್ರ ನೋಡಬೇಕು.

ಪ್ರ.ಪಾ: ಅನಂತ್ ನಾಗ್, ವಿನಯ ಪ್ರಸಾದ್, ಮಾಸ್ಟರ್ ಆನಂದ್, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ರಮೇಶ್ ಭಟ್, ಶೃತಿ

ವಿ.ಸೂ.: 'ಎಲ್ಲಿಯವರೆಗೂ ಟೋಪಿ ಹಾಕಿಸಿಕೊಳ್ಳೋರು ಇರ್ತಾರೋ, ಅಲ್ಲಿವರೆಗೂ ಟೋಪಿ ಹಾಕೋರೂ ಇರ್ತಾರೆ' ಎನ್ನುವುದು ತಾತ್ಪರ್ಯ.

Techinacally Perfect ಮನುಷ್ಯನ ಮತ್ತೊಂದು ಚಿತ್ರ 'ಮಿಂಚಿನ ಓಟ'. ಮೂರು ಜನ ಕಳ್ಳರು. ಕಾರು ಕದಿಯುವುದರಲ್ಲಿ specialization ಮಾಡಿಕೊಂಡಿರುವವರು. ಜೈಲು ವಾಸವನ್ನೂ ಅನುಭವಿಸುತ್ತಾರೆ. ಹೇಗೆ ಕಳ್ಳರಾಗುತ್ತಾರೆಂಬುದು ಒಂದು ಸಣ್ಣ ಫ್ಲ್ಯಾಷ್ ಬ್ಯಾಕ್ ಜೊತೆಗೆ ತಲೆ ತಪ್ಪಿಸಿಕೊಂಡು ತಿರುಗುವಾಗಲೇ ನಡೆಯುವ ಪ್ರೇಮಪ್ರಕರಣವೂ ನಡೆಯುತ್ತೆ. ಕಳ್ಳತನ ಸುಳ್ಳತನ ಮಾಡಿಕೊಂಡು ಹೆಚ್ಚು ದಿನ ಬದುಕಲಾರದು ಎಂಬುದು ಸಾರಾಂಶವೊಂದೆಡೆಯಾದರೆ, ಕಳ್ಳನ ಬದುಕಿನಲ್ಲೂ ಸಾಮಾನ್ಯನಂತೆ ನಡೆಯಬಲ್ಲ ಘಟನೆಗಳೂ ಇವೆಯೆಂಬುದು ಇನ್ನೊಂದು ಅರ್ಥ.

Mood: ತಾಳ್ಮೆ, ಸಹನೆ ಮೀರಿದಾಗ ನೋಡುವುದು ಕಷ್ಟ.

ಪ್ರ.ಪಾ: ಶಂಕರ್ ನಾಗ್, ಅನಂತ್ ನಾಗ್, ಲೋಕನಾಥ್

ವಿ.ಸೂ: ಒಂದು ಹಾಡನ್ನು ಸ್ವತಃ ಶಂಕರ್, ಅನಂತ್ ಮತ್ತು ಲೋಕನಾಥ್‍ರೇ ಹಾಡಿದ್ದಾರೆ!

5. ಶ್...

ದೆವ್ವದ ಕಥೆಯ ಆಧಾರದಿಂದ ಬೆಳೆದು ಬಂದ 'ಶ್..' ಚಿತ್ರದಲ್ಲಿ ಬರುವ ಎಲ್ಲಾ ಪಾತ್ರದ ಮೇಲೂ 'ಈತನೇ ದೆವ್ವ/ ಕೊಲೆಗಾರ'ಎಂಬ ಸಂಶಯವನ್ನುಂಟು ಮಾಡಿಸುತ್ತೆ. ನಿರ್ದೇಶನದ ಗುರುವಿನೊಡನೆ ಕೆಲಸ ಮಾಡುವ ಕಾರ್ಯವನ್ನು ಉಪೇಂದ್ರ ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಜೊತೆಗೆ ಪಳಗಿದ ಸುರೇಶ್ ಹೆಬ್ಳಿಕರ್ ಕೂಡ. ಒಟ್ಟಿನಲ್ಲಿ ದೆವ್ವವು ದೆವ್ವವೋ ಅಲ್ಲವೋ ಎಂಬ ಕುತೂಹಲ ಭರಿತ ಸೊಗಸಾಗಿ ನಿರ್ಮಿತವಾದ ಚಿತ್ರ ಶ್.. ಆ ಕಾಲದಲ್ಲಿ ಒಂದು ಅಕ್ಷರದ ಹೆಸರಿನ ಚಿತ್ರಗಳು ಬಹಳ ಪ್ರಸಿದ್ಧಿಯೂ ಪಡೆದಿತ್ತು ಶ್.. ನ ದೆಸೆಯಿಂದ. ಚಿತ್ರವು ಬಹಳ ಜನಕ್ಕೆ ಬಾಳು ಕೊಟ್ಟಿತು.

Mood: ಧೈರ್ಯ.

ಪ್ರ.ಪಾ: ಕುಮಾರ್ ಗೋವಿಂದ್, ಕಾಶಿನಾಥ್, ಸುರೇಶ್ ಹೆಬ್ಳಿಕರ್

4. ಆ ದಿನಗಳು

ಈ ಮಟ್ಟದ ವಿಭಿನ್ನತೆ ಇರುವ ಚಿತ್ರ ಬೆಳ್ಳೆತೆರೆಯ ಇತಿಹಾಸದಲ್ಲೇ ಇಲ್ಲ. ಭೂಗತ ಜಗತ್ತಿನ ಕಥೆಯನ್ನು ಸುಂದರವಾಗಿ ಚಿತ್ರಿಸಲು ಶ್ರೀಧರ್ ಮತ್ತು ಚೇತನ್‍ರಿಗೇ ಸಾಧ್ಯವಾಗುವುದು. ರಕ್ತಪಾತವಿಲ್ಲದೆ ರೌಡಿ ಕಥೆಯನ್ನು ಹೇಳಿರುವುದು ಮೊದಲು, ಜೊತೆಗೆ ಇಡೀ ಕಥೆಯಲ್ಲಿ ಒಂದು ಕ್ಷಣವೂ ಬೋರ್ ಆಗದ ಹಾಗೆ ಕಥೆಯನ್ನು ಕಟ್ಟಿರುವ ರೀತಿ ಅತ್ಯುತ್ತಮ. ಇಡೀ ಚಿತ್ರದಲ್ಲಿರುವ ಇಳಯರಾಜರ ಎರಡೇ ಎರಡು ಹಾಡುಗಳಂತೂ ಸುಮಧುರ. ಕೊತ್ವಾಲ್, ಜಯರಾಜ್, ಆಯಿಲ್ ಕುಮಾರ್, ಶಿವರಾಜ್, ಶ್ರೀಧರ್, ಬಚ್ಚನ್ - ಪಾತ್ರಕ್ಕೆ ತಕ್ಕ ವ್ಯಕ್ತಿಗಳನ್ನಾರಿಸಿದ್ದಾರೆ ನಿರ್ದೇಶಕರು.Mood: ಯಾವಾಗ ಬೇಕಾದರೂ..

ಪ್ರ.ಪಾ: ಶರತ್ ಲೋಹಿತಾಶ್ವ, ಆಶೀಶ್ ವಿದ್ಯಾರ್ಥಿ

ವಿ.ಸೂ: ಕಳೆದ ವರ್ಷದಲ್ಲಿ 'ದಿ ವೀಕ್' ಪತ್ರಿಕೆ ನಡೆಸಿದ ಸರ್ವೇದಲ್ಲಿ 'ಆ ದಿನಗಳು' ಭಾರತದ ಚಿತ್ರಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ.

3. ಮಾನಸ ಸರೋವರ

ಪುಟ್ಟಣ್ಣ ಕಣಗಾಲ್ ಕನ್ನಡಕ್ಕೆ ಕೊಟ್ಟಿರುವ ಅಪಾರ ಕೊಡುಗೆಯಲ್ಲಿ ಬಹುಶಃ ಇದು ಅತ್ಯಂತ ಮನ ಕಲಕುವ ಚಿತ್ರ. ಮನಶ್ಶಾಸ್ತ್ರಜ್ಞನೊಬ್ಬನು ತನ್ನ ಮನಸ್ಸಿನ ಬದುಕನ್ನು ಕಟ್ಟಿಕೊಂಡು ನಶಿಸಿಕೊಳ್ಳುವ ಕಥೆ. ಖ್ಯಾತರಲ್ಲದ ನಟರನ್ನು ಹಾಕಿಕೊಂಡು ಅದ್ಭುತ ಕೆಲಸವನ್ನು ಮಾಡಿಸಿದ್ದಾರೆ ಪುಟ್ಟಣ್ಣ, ಅದು ಅವರ usual style. ಚಿತ್ರವನ್ನು ನೋಡಿ ಒಂದು ವಾರ ಗುಂಗು ಹೋಗುವುದು ಅನುಮಾನ. ಮನೋರೋಗಿಯೊಬ್ಬಳನ್ನು ಚಿಕಿತ್ಸೆ ಮಾಡಲು ಹೊರಟ ಮನಶ್ಶಾಸ್ತ್ರಜ್ಞನು ಆ ರೋಗಿಯೊಡನೆ ಪ್ರೀತಿಗೊಳಗಾಗುತ್ತಾನೆ. ಆ ಹುಡುಗಿಯು ಹುಷಾರಾದ ಮೇಲೆ ಬೇರೊಬ್ಬನನ್ನು ಇಷ್ಟ ಪಡುತ್ತಾಳೆ. ಹಗಲಿರುಳೂ ಅವಳಿಗಾಗಿ ಮುಡುಪಿಟ್ಟ ಡಾಕ್ಟರು ಏನಾಗುತ್ತಾನೆಂಬ ಕಥೆಯೇ ಮಾನಸ ಸರೋವರ.

Mood: ಬಿಡುವಾಗಿದ್ದಾಗ, ಮನಸ್ಸು ಕೆಟ್ಟ ಯೋಚನೆಗಳಿಂದ ಮುಕ್ತವಾಗಿದ್ದಾಗ ನೋಡುವುದೊಳಿತು.

ಪ್ರ.ಪಾ: ಶ್ರೀನಾಥ್, ಪದ್ಮಾ ವಾಸಂತಿ, ರಾಮಕೃಷ್ಣ

2. ಚಿಗುರಿದ ಕನಸು

ಕಾರಂತರ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ಒಂದು ಕನಸಿರುತ್ತೆ. ಮೊದಲ ನಾಯಕಿಗೆ ವಿದೇಶದ ಕನಸು, ನಾಯಕನಿಗೆ ತನ್ನ ಮೂಲದ ಕನಸು, ಅಜ್ಜಿಗೆ ಮನೆಯ ಕನಸು, ಅಪ್ಪನಿಗೆ ಬೊಂಬಾಯಿಯ ಕನಸು, ಅಮ್ಮನಿಗೆ ನಗರದ ಕನಸು, ಎರಡನೆಯ ನಾಯಕಿಗೆ ನಾಯಕನ ಕನಸು... ಈ ಕನಸುಗಳನ್ನು ಹೊತ್ತು ಚಿತ್ರವು ಕರ್ನಾಟಕದ ಅದ್ಭುತ ಸ್ಥಳಗಳಲ್ಲೊಂದಾದ 'ಬಾಂಗಾಡಿ'ಯಲ್ಲಿ ಚಿತ್ರಿತವಾಗಿದೆ. ದಕ್ಷಿಣ ಕನ್ನಡದ ಸಂಸ್ಕೃತಿ, ದೆಹಲಿಯ ಜೀವನ ಶೈಲಿ ಎರಡನ್ನೂ ಚೆನ್ನಾಗಿ ಬ್ಯಾಲೆನ್ಸ್ ಮಾಡಿದ್ದಾರೆ ನಾಗಾಭರಣ. ಎಷ್ಟು ಸಲ ನೋಡಿದರೂ ಮತ್ತೆ ನೋಡಬೇಕೆನ್ನಿಸುವ ಚಿತ್ರ.

Mood: Anytime!!

ಪ್ರ.ಪಾ: ಶಿವರಾಜ್ ಕುಮಾರ್, (ನಾಯಕಿಯರ ಹೆಸರು ಗೊತ್ತಿಲ್ಲ), ಅನಂತ್ ನಾಗ್

1. ಕಾಮನಬಿಲ್ಲು

ರಾಜಣ್ಣ ಇಂಥಾ ಸಾಮಾಜಿಕ issue ಇರುವ ಚಿತ್ರವನ್ನು ಮಾಡಿರುವುದು ಇದೊಂದರಲ್ಲೇ ಅನ್ನಿಸುತ್ತೆ. ಎಲ್ಲಾ ಚಿತ್ರಗಳಲ್ಲೂ ಯಾವುದಾದರೂ ಹೋರಾಟವೋ, ಕಾದಾಟವೋ ಇರುತ್ತಿತ್ತು. ಕಾಮನಬಿಲ್ಲಿನಲ್ಲಿ ಕನಸಿದೆ, ಹಳ್ಳಿಯ ಸಂಸ್ಕೃತಿಯಿದೆ, ಅಲ್ಲಿಯ ಜೀವನವಿದೆ, ಜಾತೀಯತೆಯಿದೆ. 'ಇಷ್ಟು ದಿನ ಊರಿನಲ್ಲಿರುವ ಬಡತನ ನನ್ನ ಕಣ್ಣಿಗೆ ಕಾಣುತ್ತಿತ್ತು, ನಮ್ಮ ಮನೆಯಲ್ಲಿರುವ ದರಿದ್ರ ನನ್ನ ಕಣ್ಣಿಗೆ ಬಿದ್ದಿರಲಿಲ್ಲ!!' ಎಂದು ರಾಜ್ ಹೇಳುವ ಡೈಲಾಗನ್ನು ಕೇಳುವ ಯಾವುದೇ ಚಿತ್ರರಸಿಕನಿಗೂ ಕಣ್ಣು ಒದ್ದೆಯಾಗದಿರುವುದಿಲ್ಲ. ಪ್ರೀತಿ ಪ್ರೇಮ ಪ್ರಣಯ ಕೊನೆಯಲ್ಲಿ ತ್ಯಾಗ! ಇವೆಲ್ಲವನ್ನೂ ಅಮೋಘ ಅಭಿನಯದೊಂದಿಗೆ ನಮಗೆ ಕೊಟ್ಟಿರುವ ಈ ಚಿತ್ರದ ತಂಡಕ್ಕೆ ಒಂದು ಥ್ಯಾಂಕ್ಸ್.

Mood: ಬೇಸರ

ಪ್ರ.ಪಾ: ಡಾ|| ರಾಜ್‍ಕುಮಾರ್, ಅನಂತ್ ನಾಗ್, ಸರಿತಾ, ಅಶ್ವಥ್, ಬಾಲಣ್ಣ

ಇನ್ನೂ ಹಲವಾರು ಚಿತ್ರಗಳಿವೆ. ಇದು ನನ್ನ ಟಾಪ್ 10 ಅಷ್ಟೇ. Generalize ಮಾಡ್ತಿಲ್ಲ ನಾನು... :-)

ಕನ್ನಡ ಚಿತ್ರಗಳನ್ನು ಹಣ ಕೊಟ್ಟು ಕೊಂಡುಕೊಂಡು ನೋಡುವುದರಲ್ಲಿ ಸಂತೋಷವಿದೆ. ಕನ್ನಡಕ್ಕಾಗಿ ಅಷ್ಟು ಕೆಲಸ ಮಾಡುತ್ತಿದ್ದೇನೆಂಬ ಹೆಮ್ಮೆಯಿದೆ.

-ಅ
10.04.2008
11PM

Wednesday, April 9, 2008

ನೃತ್ಯ

ಣ್ಣ ಮುಂದೆ ಒಂದು ನೃತ್ಯ
ಭವಿಷ್ಯದ ಕಟು ಸತ್ಯ
ಬೆಲ್ಲವೋ ಬೇವೋ?
ಬದುಕೋ ಸಾವೋ?
ವಿಧಿ ಕೇಳದ ಹರನ ನೃತ್ಯ
ನನ್ನ ಎದುರು ನಿತ್ಯ ನಿತ್ಯ!

-ಅ
09.04.2008
7.30PM

Sunday, April 6, 2008

ಮೈಸೂರು

ಮೈಸೂರು ಎಂದಿನಂತೆ ಅದ್ಭುತವಾಗಿದೆ.. ಮನಸ್ಸನ್ನು ನಿರಾಳಗೊಳಿಸುವುದರಲ್ಲಿ ಯಶಸ್ವಿಯಾಗಿದೆ.

-ಅ
06.04.2008
11.20PM

Friday, April 4, 2008

ಪ್ರಾರ್ಥನೆ

* ಬಿ.ಎಂ.ಟಿ.ಸಿ., ಅದರಲ್ಲೂ 45G ಬಸ್ಸಿಗೆ ವಿಶೇಷವಾದ ಥ್ಯಾಂಕ್ಸ್ ಹೇಳಬೇಕು. ಎರಡು ವರ್ಷಗಳ ಕಾಲ ನನ್ನನ್ನು ಕೈ ಹಿಡಿದಿದ್ದಕ್ಕೆ. ಬಸ್ ಪಾಸು ಗೋಳಿಡುತ್ತಿದೆ. ಬೆಂಗಳೂರಿನ ಟ್ರಾಫಿಕ್ಕು ಕಡಿಮೆಯಾಗಲಿ..

* ಬೈಕು ತೊಗೊಂಡು ಹದಿನೈದು ದಿನವೂ ಆಗಿಲ್ಲ, ಆರುನೂರು ಕಿಲೋಮೀಟರು ಎಲ್ಲಿಗೆ ಸುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ.

* ಕೊನೆಗೂ ಅಶೋಕನ ಕೃಪೆಯಿಂದ ನನ್ನ ಹಳೆಯ 7250i ಮೊಬೈಲಿಗೆ ಪ್ಯಾನೆಲ್ ಬಂದಿತು. ಬ್ಯಾಟೆರಿ ಕೆಳಗೆ ಬಿದ್ದು ಬಿದ್ದು ಹೋಗುವುದು ತಪ್ಪಿತು.

* ಟ್ರೆಕ್ಕಿಂಗ್ ಇಲ್ಲದೆ ಬದುಕು ಶೂನ್ಯವಾಗುವಂತೆ ಭಾಸವಾಗುತ್ತಿದೆ.

* ನಾಡಿದ್ದು, ಆರನೇ ತಾರೀಖು, ಗೆಳೆಯ ಜಯರಾಮ್ ಹುಟ್ಟುಹಬ್ಬ.. ಅವನಿಗೆ ಗೆಲುವು ಸಿಗಲಿ. ಆಲ್ ದಿ ಬೆಸ್ಟ್ ಜಯಣ್ಣ.

* 'ಪ್ರಣತಿ'ಯ ಮುಂದಿನ ಹೆಜ್ಜೆ ಇನ್ನಷ್ಟು ಎತ್ತರಕ್ಕಿರಲಿ. ಸಂಗೀತ ಸಾಹಿತ್ಯ ಸಂಸ್ಕೃತಿ ಬಿಂಬಿಸಲಿ.

* ಬಾಲ್ಯಾವಸ್ಥೆಯಿಂದ ತರುಣಿ - ಅವಸ್ಥೆ (?)ಗೆ ಬೆಳೆದ ಸ್ವೀಟಿಯು ತನ್ನ ಪ್ರೇಮ ಜೀವನವನ್ನು ಸುಖಮಯವಾಗಿ ಕಳೆದು ನಾಲ್ಕೈದು ಮರಿಗಳ ತಾಯಾದರೆ ತಾನು ಧನ್ಯ.

* ನಾನು ಬೆಂಗಳೂರಲ್ಲಿ, ಅವಳು ದೂರದ ಹಳ್ಳಿಯಲ್ಲಿ - ಬದುಕು ಹೇಗೋ ಸಾಗುತ್ತಿದೆ. ಇಬ್ಬರೂ ಒಂದೇ ಕಡೆಯಿರುವ ಕಾಲವೆಂದು ಕೂಡಿ ಬರುತ್ತೋ!

* ನನ್ನನ್ನು ಸಾಕಿ, ಬೆಳೆಸಿ, ಸಲಹಿ 'ಅರುಣ'ನನ್ನಾಗಿಸಿದ ಚೇತನ, ನನ್ನ ಅಪ್ಪ - ಅಮ್ಮ ಎರಡೂ ಆದ ನನ್ನ ಅತ್ತೆಯು ಆಸ್ಪತ್ರೆಯ ICUನಲ್ಲಿ ಮಲಗಿರುವಾಗ, ಇರುಳಲ್ಲಿ ನನಗೆ ನಿದ್ದೆ ಮಾಯವಾಗಿಬಿಟ್ಟಿದೆ. ಅತ್ತೆಯ ಪರವಾಗಿ ವಿಶೇಷ ಪ್ರಾರ್ಥನೆ. ವೈದ್ಯೋ ನಾರಾಯಣೋ ಹರಿಃ..

-ಅ
04.04.2008
3AM

Wednesday, April 2, 2008

ಅಂದಿನ ಜೊತೆಗಾರರು...

ಕಾಲೇಜಿನಲ್ಲಿ ಓದುವಾಗ ನನಗಿದ್ದ ಇಬ್ಬರೇ ಮಿತ್ರರು ಪ್ರಶಾಂತ ಮತ್ತು ದೀಪ್ತಿ. ಅದು ಹೇಗೆ ಮೂರು ವರ್ಷಗಳ ಕಾಲ ನಾನು ಸ್ನೇಹವಲಯವನ್ನು ಕಟ್ಟಿಕೊಳ್ಳದೆ ಇದ್ದೆನೋ ನನಗೇ ಗೊತ್ತಿಲ್ಲ. ಆದರೆ ಅದು ನನ್ನ ಬದುಕಾಗಿತ್ತು ಅಂದು.

ಪಕ್ಕದ ಮನೆಯಲ್ಲೇ ಇದ್ದ ಪ್ರಶಾಂತ. ಚಿಕ್ಕ ಮನೆಯೊಂದರಲ್ಲಿ. ಬಹುಶಃ ಇವನನ್ನು ಗೋಳು ಹುಯ್ಕೊಂಡಷ್ಟು ನಾನು ಯಾರನ್ನೂ ಗೋಳ್ಹುಯ್ಕೊಂಡಿಲ್ಲ ಅನ್ಸುತ್ತೆ. ಈಗ ಎಷ್ಟೋ ಬಾರಿ ಅದೆಲ್ಲಾ ಅನ್ಯಾಯ ಅನ್ಸುತ್ತೆ. ಆದರೆ, ಅವೆಲ್ಲಾ ಆ ವಯಸ್ಸಿನಲ್ಲಿ ನಡೆಯಬೇಕಿತ್ತು. ಮೈತ್ರಿ, ಜಗಳ, ಒಡನಾಟ, ವಿರಸ!!

ಪ್ರಶಾಂತ ನನಗೆ ಬೈಕ್ ಹೇಳಿಕೊಟ್ಟ ಗುರು. ನನಗೆ ಇನ್ನೂ ನೆನಪಿದೆ. ಸಮುರೈ ಖರೀದಿಸಿ ಆದಮೇಲೆ ಮೊದಲ ಬಾರಿ ನಾನು ಬೈಕ್ ಓಡಿಸುವಾಗ ಅವನು ಹಿಂದೆ ಕೂತು, ಗೇರ್ ಹೇಗೆ ಹಾಕಬೇಕು ಅಂತ ಹೇಳುತ್ತಿದ್ದುದು. ಆಶ್ರಮ ಸರ್ಕಲ್‍ನಲ್ಲಿ ಬೈಕನ್ನು ಆಫ್ ಮಾಡಿಕೊಂಡುಬಿಟ್ಟೆ. ಆಗ ಬಸ್ಸೊಂದು ನನ್ನ ಹಿಂದೆಯೇ ಬಂದು ಜೋರಾಗಿ ಹಾರ್ನ್ ಮಾಡಿತು. ನನಗೆ ವಿಪರೀತ ಭಯವಾದಾಗ ಅವನು, "ಬೈಕ್ ಓಡಿಸುವಾಗ ಭಯ ಪಟ್ಕೋಬೇಡ. ಅವನು ಹಾರ್ನ್ ಮಾಡ್ತಾನೆ, ಕಾಯ್ತಾನೆ. ನಿನ್ನ ಪಾಡಿಗೆ ನೀನು ಸ್ಟಾರ್ಟ್ ಮಾಡು. ಅವನಿಗೂ ಆಫ್ ಮಾಡದೆ ಓಡಿಸೋಕೆ ಸಾಧ್ಯವೇ ಇಲ್ಲ!" ಎಂದಿದ್ದ.

ಆ ದಿನಗಳಲ್ಲಿ ಇಬ್ಬರೂ ಐ.ಎ.ಎಸ್., ಐ.ಪಿ.ಎಸ್. ಓದಬೇಕೆಂದುಕೊಂಡೆಲ್ಲಾ ಒಟ್ಟಿಗೆ ಓದುತ್ತಿದ್ದೆವು. ನಮ್ಮ ಡಬ್ಬಾ ಪಿ.ಯು.ಸಿ. ಅಂಕಗಳು ನಮ್ಮನ್ನು ಬೇರಾವ ಹಾದಿಗೋ ಸೇರಿಸಿದೆ. ಪ್ರಶಾಂತನು ಬಹಳ ದೃಢಕಾಯ. ನಾನು ಲೋಥರ್ ಎಂದೇ ರೇಗಿಸುತ್ತಿದ್ದೆ. ಅವನು ಬದಿಯಲ್ಲಿದ್ದರೆ ಏನೋ ರಕ್ಷಣಾಕವಚವನ್ನು ಧರಿಸಿರುವಂತಿತ್ತು. ಐದು ವರ್ಷಗಳ ಕಾಲ ಒಟ್ಟಿಗೆ ಪಿಚ್ಚರ್ ನೋಡಿದ್ದೇವೆ, ಓದಿಕೊಂಡಿದ್ದೇವೆ, ಕ್ರಿಕೆಟ್ ಆಡಿದ್ದೇವೆ, ಜಗಳ ಆಡಿಕೊಂಡಿದ್ದೇವೆ, ಮತ್ತೆ ಒಂದಾಗಿದ್ದೇವೆ, ಮತ್ತೆ ಬೇರಾಗಿದ್ದೇವೆ, ಕನಸು ಕಂಡಿದ್ದೇವೆ, ಕ್ಷಿತಿಜದೆಡೆಗೆ ಪಯಣ ಮಾಡಿದ್ದೇವೆ!!

ನನ್ನ ಜೊತೆ ಅವನ ಹುಂಬತನವು ಸ್ಪರ್ಧಿಸುವಂತಿತ್ತು. ಈಗ ಆ ದಿನಗಳನ್ನು ನೆನೆಸಿಕೊಂಡರೆ ನಗು ಬರುತ್ತೆ. ಒಮ್ಮೊಮ್ಮೆ ಕಣ್ಣೀರೂ ಬರುತ್ತೆ...

ಈಗ ಇಬ್ಬರೂ ಬೇರೆ ಬೇರೆ ಹಾದಿಯಲ್ಲಿದ್ದೇವೆ. ಅವನ ಬದುಕಿನ ಬಂಡಿಯು ಯಾವುದೋ ಸ್ಟೇಷನ್ನಿನಲ್ಲಿದೆ, ನನ್ನದಿನ್ನೆಲ್ಲೋ ಇದೆ. ಬಾಳು ಬಾಳಿಸದೆ ಬಿಡದು ಮಂಕುತಿಮ್ಮ....

I miss him.. ಹುಟ್ಟು ಹಬ್ಬದ ಶುಭಾಶಯಗಳು, ಪ್ರಶಾಂತ.ಬೆಳಿಗ್ಗೆ ಐದುಗಂಟೆಗೆಲ್ಲಾ ದೀಪ್ತಿಯ ಮನೆಯ ಕಾಲಿಂಗ್ ಬೆಲ್ ರಿಂಗ್ ಆಗುತ್ತಿತ್ತು. ಅವಳ ತಮ್ಮ ಚೇತನ್, ನಾನು, ಕೆಲವೊಮ್ಮೆ ದೀಪ್ತಿ ಮತ್ತೆ ಕೆಲವೊಮ್ಮೆ ಗಿರೀಶ ಜಾಗಿಂಗ್‍ ಮಾಡುತ್ತಿದ್ದೆವು. ಆಗಿನ್ನೂ ನಾನು ನ್ಯಾಷನಲ್ ಕಾಲೇಜಿನಲ್ಲಿ ಡಿಗ್ರಿಗೆ ಸೇರಿಕೊಂಡಿದ್ದೆ. ದೀಪ್ತಿಯೂ ಕೂಡ.

ಇಡೀ ಬಿ.ಸಿ.ಎ. ಬದುಕಿನಲ್ಲಿ ನನಗೆ ನಿಜವಾಗಿಯೂ ಗೆಳೆಯರು ಎಂದಿದ್ದವರು ಪ್ರಶಾಂತ ಮತ್ತು ದೀಪ್ತಿಯಿಬ್ಬರೇ. ಕಾಲೇಜು ಆರಂಭವಾಗುವ ಹೊತ್ತಿಗೆ ಅಲ್ಲಿರುತ್ತಿದ್ದೆ, ಬಿಟ್ಟ ನಂತರ ಮನೆಯಲ್ಲಿರುತ್ತಿದ್ದೆ. ಯಾವುದರಲ್ಲೂ ಭಾಗವಹಿಸುತ್ತಿರಲಿಲ್ಲ. ನನಗೆ ನಮ್ಮ ಕ್ಲಾಸಿನಲ್ಲಿದ್ದವರ ಹೆಸರುಗಳೇ ಗೊತ್ತಿರಲಿಲ್ಲ. ದೀಪ್ತಿಯ ಬಳಿ ಅನೇಕ ಸಂಗತಿಗಳನ್ನು ಚರ್ಚಿಸುತ್ತಿದ್ದೆ. ನಂತರ ಮೂರನೇ ಸೆಮೆಸ್ಟರ್ ಹೊತ್ತಿಗೆ ಪ್ರಾಜೆಕ್ಟ್ ಸಲುವಾಗಿ ದೀಪ್ತಿ ಇನ್ನಷ್ಟು ಹತ್ತಿರದ ಗೆಳತಿಯಾಗತೊಡಗಿದಳು. ದೀಪ್ತಿಯ ಮನೆ ಕೋರಮಂಗಲದಲ್ಲಿದ್ದೂ, ನಾನು ಜೀವಮಾನದಲ್ಲೇ ಕೋರಮಂಗಲಕ್ಕೆ ಹೋಗಿಲ್ಲದೆ, ಒಮ್ಮೆ ಹೋಗಿ ಬಂದಾಗ ಯಾವುದೋ ಪ್ರವಾಸ ಕೈಗೊಂಡ ಭಾವನೆಯುಂಟಾಗಿತ್ತು. ಅದರ ಪ್ರವಾಸಕಥನ ಸಹ ಬರೆದಿದ್ದೆ. ಈಗ ಕೋರಮಂಗಲ ಬಹಳ ಹತ್ತಿರ. ಆಗ ತುಂಬಾ ದೂರ!!

ಕೊನೆಯ ಸೆಮೆಸ್ಟರ್‍ನಲ್ಲಿ ಕೂಡ ಒಟ್ಟಿಗೆ ಪ್ರಾಜೆಕ್ಟು ಮಾಡಿದೆವು. ಆಗ ನನ್ನ ಬೈಕು ಕಾಲೇಜಿನಿಂದ ತಾನೇ ತಾನಾಗಿ ಇವಳ ಮನೆ ಕಡೆ ತಿರುಗಿಬಿಡುತ್ತಿತ್ತು. ಹಿಂದೆ ಅವಳು ಕುಳಿತಿರುತ್ತಿದ್ದಳು, ನಾನು ಚಾಲಕ! ಈಗಲೂ ರೇಗಿಸುತ್ತಿರುತ್ತೇನೆ, ಅದೆಷ್ಟು ಬಾರಿ ನಾನು ನಿನ್ನ ಮನೆಗೆ ಸೇರಿಸಿದ್ದೀನಿ, ಆ ಋಣ ನಿನ್ನ ಮೇಲಿದೆ ಅಂತ.

ನಂತರ ಅವಳು, ಅವಳ ಕುಟುಂಬ ನಮ್ಮ 'ಸಂಘ'ದ ವಲಯಕ್ಕೆ ಬಹಳ ಹತ್ತಿರವಾಗ ತೊಡಗಿತು. ಸಂಘ ಎಂದರೆ ನಾನು, ಅಕ್ಕ, ನನ್ನ ಕಝಿನ್ನುಗಳು.

ಇನ್ನೇನು ಸಧ್ಯದಲ್ಲೇ ಇವಳು ನನ್ನ ಸಂಬಂಧಿಕಳಾಗುತ್ತಿದ್ದಾಳೆ, ಗಿರೀಶನನ್ನು ವರಿಸಿ. ಸ್ನೇಹ ಚಿರವಾಗಿರಲು ಇದೊಂದು ವಿಶೇಷ ಹೆಜ್ಜೆಯೆಂದು ನನ್ನ ಆನಂದ.

ನಾಳೆ ಇವಳೂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾಳೆ, ಅಮೆರಿಕೆಯಲ್ಲಿ. ಇವಳಿಗೊಂದು ಪ್ರೀತಿಪೂರ್ವಕ ಶುಭಾಶಯಗಳು.

ಪ್ರಶಾಂತ ಮತ್ತು ದೀಪ್ತಿ ಇಬ್ಬರ ಬಾಳು ಹಸನಾಗಲಿ. ಆಲ್ ದಿ ಬೆಸ್ಟ್.

-ಅ
02.04.2008
12.30AM