Wednesday, April 2, 2008

ಅಂದಿನ ಜೊತೆಗಾರರು...

ಕಾಲೇಜಿನಲ್ಲಿ ಓದುವಾಗ ನನಗಿದ್ದ ಇಬ್ಬರೇ ಮಿತ್ರರು ಪ್ರಶಾಂತ ಮತ್ತು ದೀಪ್ತಿ. ಅದು ಹೇಗೆ ಮೂರು ವರ್ಷಗಳ ಕಾಲ ನಾನು ಸ್ನೇಹವಲಯವನ್ನು ಕಟ್ಟಿಕೊಳ್ಳದೆ ಇದ್ದೆನೋ ನನಗೇ ಗೊತ್ತಿಲ್ಲ. ಆದರೆ ಅದು ನನ್ನ ಬದುಕಾಗಿತ್ತು ಅಂದು.

ಪಕ್ಕದ ಮನೆಯಲ್ಲೇ ಇದ್ದ ಪ್ರಶಾಂತ. ಚಿಕ್ಕ ಮನೆಯೊಂದರಲ್ಲಿ. ಬಹುಶಃ ಇವನನ್ನು ಗೋಳು ಹುಯ್ಕೊಂಡಷ್ಟು ನಾನು ಯಾರನ್ನೂ ಗೋಳ್ಹುಯ್ಕೊಂಡಿಲ್ಲ ಅನ್ಸುತ್ತೆ. ಈಗ ಎಷ್ಟೋ ಬಾರಿ ಅದೆಲ್ಲಾ ಅನ್ಯಾಯ ಅನ್ಸುತ್ತೆ. ಆದರೆ, ಅವೆಲ್ಲಾ ಆ ವಯಸ್ಸಿನಲ್ಲಿ ನಡೆಯಬೇಕಿತ್ತು. ಮೈತ್ರಿ, ಜಗಳ, ಒಡನಾಟ, ವಿರಸ!!

ಪ್ರಶಾಂತ ನನಗೆ ಬೈಕ್ ಹೇಳಿಕೊಟ್ಟ ಗುರು. ನನಗೆ ಇನ್ನೂ ನೆನಪಿದೆ. ಸಮುರೈ ಖರೀದಿಸಿ ಆದಮೇಲೆ ಮೊದಲ ಬಾರಿ ನಾನು ಬೈಕ್ ಓಡಿಸುವಾಗ ಅವನು ಹಿಂದೆ ಕೂತು, ಗೇರ್ ಹೇಗೆ ಹಾಕಬೇಕು ಅಂತ ಹೇಳುತ್ತಿದ್ದುದು. ಆಶ್ರಮ ಸರ್ಕಲ್‍ನಲ್ಲಿ ಬೈಕನ್ನು ಆಫ್ ಮಾಡಿಕೊಂಡುಬಿಟ್ಟೆ. ಆಗ ಬಸ್ಸೊಂದು ನನ್ನ ಹಿಂದೆಯೇ ಬಂದು ಜೋರಾಗಿ ಹಾರ್ನ್ ಮಾಡಿತು. ನನಗೆ ವಿಪರೀತ ಭಯವಾದಾಗ ಅವನು, "ಬೈಕ್ ಓಡಿಸುವಾಗ ಭಯ ಪಟ್ಕೋಬೇಡ. ಅವನು ಹಾರ್ನ್ ಮಾಡ್ತಾನೆ, ಕಾಯ್ತಾನೆ. ನಿನ್ನ ಪಾಡಿಗೆ ನೀನು ಸ್ಟಾರ್ಟ್ ಮಾಡು. ಅವನಿಗೂ ಆಫ್ ಮಾಡದೆ ಓಡಿಸೋಕೆ ಸಾಧ್ಯವೇ ಇಲ್ಲ!" ಎಂದಿದ್ದ.

ಆ ದಿನಗಳಲ್ಲಿ ಇಬ್ಬರೂ ಐ.ಎ.ಎಸ್., ಐ.ಪಿ.ಎಸ್. ಓದಬೇಕೆಂದುಕೊಂಡೆಲ್ಲಾ ಒಟ್ಟಿಗೆ ಓದುತ್ತಿದ್ದೆವು. ನಮ್ಮ ಡಬ್ಬಾ ಪಿ.ಯು.ಸಿ. ಅಂಕಗಳು ನಮ್ಮನ್ನು ಬೇರಾವ ಹಾದಿಗೋ ಸೇರಿಸಿದೆ. ಪ್ರಶಾಂತನು ಬಹಳ ದೃಢಕಾಯ. ನಾನು ಲೋಥರ್ ಎಂದೇ ರೇಗಿಸುತ್ತಿದ್ದೆ. ಅವನು ಬದಿಯಲ್ಲಿದ್ದರೆ ಏನೋ ರಕ್ಷಣಾಕವಚವನ್ನು ಧರಿಸಿರುವಂತಿತ್ತು. ಐದು ವರ್ಷಗಳ ಕಾಲ ಒಟ್ಟಿಗೆ ಪಿಚ್ಚರ್ ನೋಡಿದ್ದೇವೆ, ಓದಿಕೊಂಡಿದ್ದೇವೆ, ಕ್ರಿಕೆಟ್ ಆಡಿದ್ದೇವೆ, ಜಗಳ ಆಡಿಕೊಂಡಿದ್ದೇವೆ, ಮತ್ತೆ ಒಂದಾಗಿದ್ದೇವೆ, ಮತ್ತೆ ಬೇರಾಗಿದ್ದೇವೆ, ಕನಸು ಕಂಡಿದ್ದೇವೆ, ಕ್ಷಿತಿಜದೆಡೆಗೆ ಪಯಣ ಮಾಡಿದ್ದೇವೆ!!

ನನ್ನ ಜೊತೆ ಅವನ ಹುಂಬತನವು ಸ್ಪರ್ಧಿಸುವಂತಿತ್ತು. ಈಗ ಆ ದಿನಗಳನ್ನು ನೆನೆಸಿಕೊಂಡರೆ ನಗು ಬರುತ್ತೆ. ಒಮ್ಮೊಮ್ಮೆ ಕಣ್ಣೀರೂ ಬರುತ್ತೆ...

ಈಗ ಇಬ್ಬರೂ ಬೇರೆ ಬೇರೆ ಹಾದಿಯಲ್ಲಿದ್ದೇವೆ. ಅವನ ಬದುಕಿನ ಬಂಡಿಯು ಯಾವುದೋ ಸ್ಟೇಷನ್ನಿನಲ್ಲಿದೆ, ನನ್ನದಿನ್ನೆಲ್ಲೋ ಇದೆ. ಬಾಳು ಬಾಳಿಸದೆ ಬಿಡದು ಮಂಕುತಿಮ್ಮ....

I miss him.. ಹುಟ್ಟು ಹಬ್ಬದ ಶುಭಾಶಯಗಳು, ಪ್ರಶಾಂತ.ಬೆಳಿಗ್ಗೆ ಐದುಗಂಟೆಗೆಲ್ಲಾ ದೀಪ್ತಿಯ ಮನೆಯ ಕಾಲಿಂಗ್ ಬೆಲ್ ರಿಂಗ್ ಆಗುತ್ತಿತ್ತು. ಅವಳ ತಮ್ಮ ಚೇತನ್, ನಾನು, ಕೆಲವೊಮ್ಮೆ ದೀಪ್ತಿ ಮತ್ತೆ ಕೆಲವೊಮ್ಮೆ ಗಿರೀಶ ಜಾಗಿಂಗ್‍ ಮಾಡುತ್ತಿದ್ದೆವು. ಆಗಿನ್ನೂ ನಾನು ನ್ಯಾಷನಲ್ ಕಾಲೇಜಿನಲ್ಲಿ ಡಿಗ್ರಿಗೆ ಸೇರಿಕೊಂಡಿದ್ದೆ. ದೀಪ್ತಿಯೂ ಕೂಡ.

ಇಡೀ ಬಿ.ಸಿ.ಎ. ಬದುಕಿನಲ್ಲಿ ನನಗೆ ನಿಜವಾಗಿಯೂ ಗೆಳೆಯರು ಎಂದಿದ್ದವರು ಪ್ರಶಾಂತ ಮತ್ತು ದೀಪ್ತಿಯಿಬ್ಬರೇ. ಕಾಲೇಜು ಆರಂಭವಾಗುವ ಹೊತ್ತಿಗೆ ಅಲ್ಲಿರುತ್ತಿದ್ದೆ, ಬಿಟ್ಟ ನಂತರ ಮನೆಯಲ್ಲಿರುತ್ತಿದ್ದೆ. ಯಾವುದರಲ್ಲೂ ಭಾಗವಹಿಸುತ್ತಿರಲಿಲ್ಲ. ನನಗೆ ನಮ್ಮ ಕ್ಲಾಸಿನಲ್ಲಿದ್ದವರ ಹೆಸರುಗಳೇ ಗೊತ್ತಿರಲಿಲ್ಲ. ದೀಪ್ತಿಯ ಬಳಿ ಅನೇಕ ಸಂಗತಿಗಳನ್ನು ಚರ್ಚಿಸುತ್ತಿದ್ದೆ. ನಂತರ ಮೂರನೇ ಸೆಮೆಸ್ಟರ್ ಹೊತ್ತಿಗೆ ಪ್ರಾಜೆಕ್ಟ್ ಸಲುವಾಗಿ ದೀಪ್ತಿ ಇನ್ನಷ್ಟು ಹತ್ತಿರದ ಗೆಳತಿಯಾಗತೊಡಗಿದಳು. ದೀಪ್ತಿಯ ಮನೆ ಕೋರಮಂಗಲದಲ್ಲಿದ್ದೂ, ನಾನು ಜೀವಮಾನದಲ್ಲೇ ಕೋರಮಂಗಲಕ್ಕೆ ಹೋಗಿಲ್ಲದೆ, ಒಮ್ಮೆ ಹೋಗಿ ಬಂದಾಗ ಯಾವುದೋ ಪ್ರವಾಸ ಕೈಗೊಂಡ ಭಾವನೆಯುಂಟಾಗಿತ್ತು. ಅದರ ಪ್ರವಾಸಕಥನ ಸಹ ಬರೆದಿದ್ದೆ. ಈಗ ಕೋರಮಂಗಲ ಬಹಳ ಹತ್ತಿರ. ಆಗ ತುಂಬಾ ದೂರ!!

ಕೊನೆಯ ಸೆಮೆಸ್ಟರ್‍ನಲ್ಲಿ ಕೂಡ ಒಟ್ಟಿಗೆ ಪ್ರಾಜೆಕ್ಟು ಮಾಡಿದೆವು. ಆಗ ನನ್ನ ಬೈಕು ಕಾಲೇಜಿನಿಂದ ತಾನೇ ತಾನಾಗಿ ಇವಳ ಮನೆ ಕಡೆ ತಿರುಗಿಬಿಡುತ್ತಿತ್ತು. ಹಿಂದೆ ಅವಳು ಕುಳಿತಿರುತ್ತಿದ್ದಳು, ನಾನು ಚಾಲಕ! ಈಗಲೂ ರೇಗಿಸುತ್ತಿರುತ್ತೇನೆ, ಅದೆಷ್ಟು ಬಾರಿ ನಾನು ನಿನ್ನ ಮನೆಗೆ ಸೇರಿಸಿದ್ದೀನಿ, ಆ ಋಣ ನಿನ್ನ ಮೇಲಿದೆ ಅಂತ.

ನಂತರ ಅವಳು, ಅವಳ ಕುಟುಂಬ ನಮ್ಮ 'ಸಂಘ'ದ ವಲಯಕ್ಕೆ ಬಹಳ ಹತ್ತಿರವಾಗ ತೊಡಗಿತು. ಸಂಘ ಎಂದರೆ ನಾನು, ಅಕ್ಕ, ನನ್ನ ಕಝಿನ್ನುಗಳು.

ಇನ್ನೇನು ಸಧ್ಯದಲ್ಲೇ ಇವಳು ನನ್ನ ಸಂಬಂಧಿಕಳಾಗುತ್ತಿದ್ದಾಳೆ, ಗಿರೀಶನನ್ನು ವರಿಸಿ. ಸ್ನೇಹ ಚಿರವಾಗಿರಲು ಇದೊಂದು ವಿಶೇಷ ಹೆಜ್ಜೆಯೆಂದು ನನ್ನ ಆನಂದ.

ನಾಳೆ ಇವಳೂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾಳೆ, ಅಮೆರಿಕೆಯಲ್ಲಿ. ಇವಳಿಗೊಂದು ಪ್ರೀತಿಪೂರ್ವಕ ಶುಭಾಶಯಗಳು.

ಪ್ರಶಾಂತ ಮತ್ತು ದೀಪ್ತಿ ಇಬ್ಬರ ಬಾಳು ಹಸನಾಗಲಿ. ಆಲ್ ದಿ ಬೆಸ್ಟ್.

-ಅ
02.04.2008
12.30AM

2 comments:

 1. Happy Birthday...Happy Birthday..
  Deepthi and Prashanth... :-)

  ReplyDelete
 2. nange ond round flash black ... oops ... flash back aaytu yella :-)
  Avattu Prashantha pranatiya udghaatanege bandiddu nijavaaglu santhosha aaytu ... choti si hai duniya, pehchaane raaste hai, kabhi to miloge, kahin to miloge ... ante ne bye helbeku ellrigoo! Happy Birthday Prashanth...

  Deepthi, sadhyakke international porki ... Happy Birthday Deepthi ... have a blast!! manelidre neenu sanghada sadasye aagi waste :-)

  ReplyDelete