Thursday, April 10, 2008

ಹದಿನೈದು ಚಿತ್ರಗಳು

ನಾನು ನೋಡಿರುವ ನೂರಾರು ಚಿತ್ರಗಳಲ್ಲಿ ಕೆಲವನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುವಂಥದ್ದು. ಕೆಲವನ್ನು ಮಾತ್ರ ಪದೇ ಪದೇ ನೋಡಲು ಇಷ್ಟವಾಗುವುದು. ಅಂಥಾ ಚಿತ್ರಗಳ ಬಗ್ಗೆ ಒಂದು "ಟಾಪ್ 15" ನಾನೇ ಸಿದ್ಧ ಪಡಿಸಿಕೊಂಡಿದ್ದೇನೆ.

15. ಸಿ.ಬಿ.ಐ. ಶಿವ

ನಾಯಕನಾದ ಟೈಗರ್ ಪ್ರಭಾಕರ್ ಚಿತ್ರದ ಇಂಟರ್ವೆಲ್ ಆದ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರಾದರೂ, ಇಡೀ ಚಿತ್ರ ಸಾಗುವುದು ಸುನಿಲ್, ರಮೇಶ್ ಮತ್ತು ಜಗ್ಗೇಶ್‍ರ ಬದುಕಿನೊಂದಿಗೆ. ಮೂರೂ ಜನ ಅಮಾಯಕ ಹುಡುಗರು ಯಾವುದೋ ಕೊಲೆಯ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತಾರೆ. ಹಾಸ್ಯ ಮತ್ತು ಸಸ್ಪೆನ್ಸು ಎರಡನ್ನೂ ಬಹಳ ಸೊಗಸಾಗಿ ಚಿತ್ರಿಸಿರುವ ನಿರ್ದೇಶಕರು (ಹೆಸರು ಗೊತ್ತಿಲ್ಲ) ರಮೇಶ್, ಮತ್ತು ಜಗ್ಗೇಶ್‍ರಲ್ಲಿರುವ ಸಂಪೂರ್ಣ ಪ್ರತಿಭೆಯನ್ನು ಬಳಸಿಕೊಂಡಿದ್ದಾರೆ.

Mood: ಬೇಸರವಾಗಿದ್ದಾಗ ಈ ಚಿತ್ರ ನೋಡಿದರೆ ನಕ್ಕೂ ನಕ್ಕೂ ಮನಸನ್ನು ಹಗುರ ಮಾಡಿಕೊಳ್ಳಬಹುದು.

ಪ್ರಮುಖ ಪಾತ್ರ: ಟೈಗರ್ ಪ್ರಭಾಕರ್, ರಮೇಶ್, ಜಗ್ಗೇಶ್, ಸುನಿಲ್

14. ಸೀತಾ

'ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲಿ..
ಬಂದು ನಿಂತೆ ಹೇಗೋ ಏನೋ
ನನ್ನ ಮನದ ಗುಡಿಯಲಿ..'

ಈ ಹಾಡು ಕೇಳದವರು ಯಾರಿದ್ದಾರೆ! ಆ ಕಾಲಕ್ಕೆ ಈ ಚಿತ್ರದ concept ಮತ್ತು theme ಬಹಳ ಮುಂದುವರೆದಂತಿತ್ತು. ನಾಯಕಿಯು ನಾಯಕನ ಸ್ನೇಹಿತನ ಪಕ್ಕದಲ್ಲಿ ಮಲಗಿಕೊಂಡರೂ ತಾನು ತಪ್ಪು ತಿಳಿಯದಿರುವುದು, ಹೃದ್ರೋಗದ ತನ್ನ ಸ್ನೇಹಿತನು ತನ್ನ ಬದುಕು ಸಾವಿನ ಬಗ್ಗೆ ನಿರಾಳವಾಗಿ ಹಾಸ್ಯಮಯವಾಗಿ ಚರ್ಚಿಸುವುದು ಎಲ್ಲವೂ ಆ ಕಾಲಕ್ಕೆ ಮೀರಿದ್ದೆನಿಸುತ್ತೆ. ನಂತರ ನಾಯಕ ಕಳೆದು ಹೋಗುವುದು, ಅವನ ಸ್ನೇಹಿತನ ಜೊತೆ ನಾಯಕಿಯು ಸಮಾಜ ಸೇವೆ ಅಂತ ಓಡಾಡುವುದು, ನಂತರ ನಾಯಕನು ಮರಳುವುದು, ದೊಡ್ಡ ಕಥೆ!

Mood: ಒಳ್ಳೆಯ ಸಂಗೀತ, ನಟನೆ, ಸಾಹಿತ್ಯವನ್ನು enjoy ಮಾಡುವ ಮನಸ್ಸಿದ್ದಾಗ.

ಪ್ರಮುಖ ಪಾತ್ರ: ಗಂಗಾಧರ್, ರಮೇಶ್, ಕಲ್ಪನಾ, ಅಶ್ವಥ್

ವಿ.ಸೂ.: ಅಶ್ವಥ್ ಅಭಿನಯ ಅತ್ಯದ್ಭುತ!!

13. ನೋಡಿ ಸ್ವಾಮಿ ನಾವಿರೋದು ಹೀಗೆ

ಬಹುಶಃ ಶಂಕರ್‍ನಾಗ್ ಅಭಿಮಾನಿಗಳಿಗೆಲ್ಲಾ ಈ ಚಿತ್ರ ಫೇವರಿಟ್! ನಾಟಕವನ್ನು ಚಲನಚಿತ್ರವಾಗಿಸುವಾಗ ಮಾಡಿಕೊಂಡಿರುವ ಕೆಲವು ಬದಲಾವಣೆಯನ್ನು ಬಿಟ್ಟರೆ ಚಿತ್ರದ ನಿರೂಪಣೆಯಂತೂ ಪ್ರಶಂಸನೀಯ. 'ಜಯಾ ಜಾಗಿರ್ದಾರ್' - 'ಕಲ್ಲೇಶ್ ನುಗ್ಗೇಹಳ್ಳಿ'ಯ ಸುಪ್ರಸಿದ್ಧ ಸಂಭಾಷಣೆಯನ್ನು ಯಾರು ತಾನೆ ಮರೆತಾರು! ಮಧ್ಯಮವರ್ಗದ ಜೀವನಾಶೈಲಿಯನ್ನು ಶಂಕರ್‍ನಾಗ್‍ಗಿಂತ ಚೆನ್ನಾಗಿ ಚಿತ್ರಿಸಲು ಅನ್ಯರಿಗೆ ಇನ್ನೂ ಸಾಧ್ಯವಾಗಿಲ್ಲವೆನ್ನಬಹುದು. ಸಂಗೀತಗಾರನಾದ ನಾಯಕನ ಅಣ್ಣನಿಗೆ ಹುಚ್ಚು ಹಿಡಿದಿರುತ್ತೆ. ಇವನ ವೃತ್ತಿ ಬದುಕು, ವಯಕ್ತಿಕ ಬದುಕು ಎರಡನ್ನೂ ವಿಭಿನ್ನವಾಗಿ maintain ಮಾಡುತ್ತಾನೆ.

Mood: ಆಗಾಗ್ಗೆ ಚಿತ್ರಗಳ ತಾಂತ್ರಿಕಾಂಶಗಳ ಬಗ್ಗೆ ಆಸಕ್ತಿ ಮೂಡುತ್ತೆ. Technically perfect ಚಿತ್ರಗಳನ್ನು ಕೊಡುತ್ತಿದ್ದುದು ಶಂಕರ್‍ನಾಗ್.

ಪ್ರಮುಖ ಪಾತ್ರ: ಶಂಕರ್ ನಾಗ್, ಅನಂತ್ ನಾಗ್, ಲಕ್ಷ್ಮೀ, ಮಾಸ್ಟರ್ ಮಂಜುನಾಥ್, ಅರುಂಧತಿ ನಾಗ್, ರಮೇಶ್ ಭಟ್

ವಿ.ಸೂ. ರಮೇಶ್ ಭಟ್ ಮತ್ತು ಅರುಂಧತಿ ನಾಗ್ ಜೋಡಿ ಸೂಪರ್.

12. ಸುಪ್ರಭಾತ

ಗಿಡ ಮರ, ಬೆಟ್ಟ ಗುಡ್ಡ, ನದಿ ತೊರೆ, ಕೊನೆಗೆ ತನ್ನ ಬೈಕಿನೊಂದಿಗೂ ಮಾತನಾಡುವ ಹೀರೋ ಪೆಟ್ರೋಲ್ ಬಂಕಿನ ಮಾಲೀಕನಾಗಿದ್ದೂ, ಫ್ಲಾಷ್ ಬ್ಯಾಕಿನಲ್ಲಿ ಉಗ್ಗುತ್ತಿರುತ್ತಾನೆ. ಅನ್ಯಾಯವಾಗಿದ್ದ ನಾಯಕಿಯ ಬದುಕಿಗೆ ಬೆಳಕಾಗಿ ತನ್ನ ಬದುಕನ್ನು ಬೆಳಗಿಸಿಕೊಳ್ಳುತ್ತಾನೆ. ತೂಕಭರಿತ ಕಥೆಯನ್ನು ದಿನೇಶ್ ಬಾಬು ಸರಳವಾಗಿ ನೀಡಿದ್ದಾರೆ. ಹಾಡುಗಳು ಅಜರಾಮರ. 'ಈ ಹೃದಯ ಹಾಡಿದೆ, ಆಸೆಗಳ ತಾಳದೆ...' ಈ ಹಾಡಂತೂ ಅದೆಷ್ಟು ಸಲ ಕೇಳಿದ್ದೀನೋ ಏನೋ. ಹಾಸ್ಯವನ್ನು ಸೃಷ್ಟಿಸಲು ಹೋಗಿಲ್ಲ. ಕಥೆಯೊಂದಿಗೆ ಹಾಸ್ಯವೂ ಸಹ ಬೆಳೆದಿದೆ.

Mood: ಖಾಲಿ ಮನಸ್ಸು

ಪ್ರಮುಖ ಪಾತ್ರ: ವಿಷ್ಣುವರ್ಧನ, ಸುಹಾಸಿನಿ, ಮಾನು

11. ಭಕ್ತ ಪ್ರಹ್ಲಾದಪೌರಾಣಿಕ ಚಿತ್ರಗಳನ್ನು ಕನ್ನಡ, ತೆಲುಗು ಮತ್ತು ತಮಿಳು ಮೂರೂ ಭಾಷೆಗಳಲ್ಲಿ ಸ್ಪರ್ಧೆಯೊಂದಿಗೆ ಅರವತ್ತು ಎಪ್ಪತ್ತು ದಶಕದಲ್ಲಿ ನಮಗೆ ನೀಡಿದರು. ಚಿತ್ರವಿಮರ್ಶಕರು ಭಕ್ತ ಪ್ರಹ್ಲಾದ ಚಿತ್ರವನ್ನು ಅಷ್ಟೇನೂ ಹೊಗಳದೇ ಇದ್ದರೂ ಕನ್ನಡ ಚಿತ್ರರಸಿಕರಿಗಂತೂ ಇದು ಅತ್ಯುನ್ನತ ಪೌರಾಣಿಕ ಚಿತ್ರವಾಗಿತ್ತು. ರಾಜ್‍ಕುಮಾರ್ ತನ್ನ ನಟನೆಯ ಶಿಖರದಲ್ಲಿದ್ದೂ, ಪುನೀತ್ (ಆಗ ಲೋಹಿತ್) ಬದಲು ಮಾಸ್ಟರ್ ಮಂಜುನಾಥ್‍ರಂಥ ನಟನಾ ಸಾಮರ್ಥ್ಯ ಇದ್ದವರು ಇದ್ದಿದ್ದರೆ ಚಿತ್ರ ಇನ್ನೂ ಅದ್ಭುತವಾಗಿರುತ್ತಿತ್ತು. ಇಡೀ ಚಿತ್ರ ಅಣ್ಣಾವ್ರ ಅಭಿನಯದ ತಳಹದಿಯ ಮೇಲಿದೆ.

Mood: ರಸಿಕತೆ.. ;-)

ಪ್ರಮುಖ ಪಾತ್ರ: ಡಾ||ರಾಜ್‍ಕುಮಾರ್, ಸರಿತಾ, ಅನಂತ್ ನಾಗ್, ಪುನೀತ್ ರಾಜ್‍ಕುಮಾರ್, ತೂಗುದೀಪ ಶ್ರೀನಿವಾಸ್, ಶ್ರೀನಿವಾಸ ಮೂರ್ತಿ, ಕಾಂಚನಾ, ಬ್ರಹ್ಮಾವರ್

10. ಹೆಂಡ್ತೀಗ್ಹೇಳ್ಬೇಡಿ

ಸಸ್ಪೆನ್ಸ್ ಚಿತ್ರಗಳು ಸಾಮಾನ್ಯವಾಗಿ ತುಂಬಾ ಜನಕ್ಕೆ ಇಷ್ಟವಾಗುತ್ತೆ. ಆದರೆ ಸಸ್ಪೆನ್ಸು ಅನೇಕ ಸಲ ಕ್ಲೀಷೆಯಾಗಿರುತ್ತೆ. ಕ್ಲೀಷೆಯನ್ನು ಮೀರಿದ ಈ ಚಿತ್ರದಲ್ಲಿ ಹೆಚ್ಚು ಪಾತ್ರಗಳಾಗಲೀ, ಹೆಚ್ಚು ಲೊಕೇಷನ್ನುಗಳಾಗಲೀ ಇಲ್ಲವೇ ಇಲ್ಲ. ನಾಲ್ಕೈದು ಜನರಿಂದಲೇ ಸಸ್ಪೆನ್ಸನ್ನು ನಮ್ಮ ಮುಂದಿಟ್ಟಿದ್ದಾರೆ. ಕೊಲೆಯಾಗುವುದು, ಅದನ್ನು ಪತ್ತೆ ಹಚ್ಚುವುದು, ಜೊತೆಗೆ ಹೆಜ್ಜೆ ಹೆಜ್ಜೆಗೂ ಅನುಮಾನಿಸುವ ಹೆಂಡತಿ - ಒಟ್ಟಿನಲ್ಲಿ ಸೊಗಸಾದ ನಿರೂಪಣೆಯು ಮುದ ನೀಡುತ್ತೆ.

Mood: ಕೆಟ್ಟ ಕೆಟ್ಟ ಸಿನಿಮಾಗಳನ್ನು ನೋಡಿ ತಲೆ ಕೆಟ್ಟಾಗ ಇಂಥಾ ಚಿತ್ರವೊಂದನ್ನು ನೋಡಬೇಕು!

ಪ್ರ.ಪಾ: ಅನಂತ್ ನಾಗ್, ಮಹಾಲಕ್ಷ್ಮೀ, ಸುಂದರ ಕೃಷ್ಣ ಅರಸ್, ಬೆಂಗಳೂರ್ ನಾಗೇಶ್

9. ಅಮೃತವರ್ಷಿಣಿ

ಇನ್ನೊಂದು ಸಸ್ಪೆನ್ಸ್ ಚಿತ್ರ. ಆದರೆ ಇದು ಒಂದು ಥರಾ romantic, family, suspense, thriller ಸಿನಿಮಾ. ಹಾಲಿನಂಥಹ ಬಾಂಧವ್ಯದಲ್ಲಿದ್ದ Anti ನಾಯಕನ ಗೆಳಯನ ಪತ್ನಿಯೊಡನೆ ಮೋಹಕ್ಕೆ ಗುರಿಯಾಗುವವನಿಗೆ ತಾನು ಏನೇ ಮಾಡಿದರೂ ಪ್ರೀತಿಗಲ್ಲವೇ ಎಂಬ ಸಮಝಾಯಿಷಿ ಬೇರೆ ಇರುತ್ತೆ. ಈ ಚಿತ್ರದಲ್ಲಿ ಸಸ್ಪೆನ್ಸು ಪ್ರೇಕ್ಷಕನಿಗಿರದೆ ಅದರೊಳಗಿನ ಪಾತ್ರಗಳಿಗಿರುತ್ತೆ. ಕೊಲೆಗಾರನನ್ನು ಪತ್ತೆ ಹಚ್ಚಿದಾಗ ಪ್ರೀತಿಗಾಗಿ ಏನು ಬೇಕಾದರೂ ಮಾಡಬಹುದು ಎಂಬುದು ಸುಳ್ಳಾಗುತ್ತೆ ಎಂದು ಚಿತ್ರದ ತಾತ್ಪರ್ಯ. ಎಲ್ಲರೂ ಸಾಯುವುದು ಚಿತ್ರದ ಅಂತ್ಯವಾದರೂ ನೀತಿಯೇನಪ್ಪಾ ಅಂದರೆ ಪ್ರೀತಿಯು ನಮ್ಮನ್ನು ಬೆಳಸಬೇಕೇ ವಿನಾ ಅಳಿಸಬಾರದು. ನಮ್ಮ ಪ್ರೀತಿಯು ಇನ್ನೊಬ್ಬರನ್ನು ಹಾಳು ಮಾಡುವಂತಿರಬಾರದು.

ಚಿತ್ರೀಕರಣಕ್ಕೆ ಬಳಸಿಕೊಂಡ ಸ್ಥಳಗಳು ಸುಂದರವಾಗಿದೆ. ಕೊಡೈಕೆನಾಲ್‍ನ ನಾನು ಮೊದಲು ನೋಡಿದ್ದು ಇದೇ ಚಿತ್ರದಲ್ಲಿ.

Mood: ಬೇಸರವಾದಾಗ ನೋಡಿದರೆ ಮತ್ತಷ್ಟು ತಲೆ ಕೆಟ್ಟೀತು. ಮನಸ್ಸು ಖಾಲಿ ಇದ್ದಾಗ ನೋಡುವುದು.

ಪ್ರ.ಪಾ: ಸುಹಾಸಿನಿ, ಶರತ್ ಬಾಬು, ರಮೇಶ್, ವಿನಾಯಕ ಜೋಷಿ

8. ಸತ್ಯ ಹರಿಶ್ಚಂದ್ರ

ಕಥೆಯ ತಾತ್ಪರ್ಯ ಬರೆಯುವುದು ಅನಗತ್ಯ. ಪಾತ್ರಗಳಿಗೆ ಆಯ್ಕೆ ಮಾಡಿಕೊಂಡಿರುವ ಹುಣಸೂರು ಕೃಷ್ಣಮೂರ್ತಿಯವರು perfect ಆಗಿ ಕಾರ್ಯನಿರ್ವಹಿಸಿದ್ದಾರೆ.

Mood: ಖಿನ್ನನಾಗಿದ್ದಾಗ ಹರಿಶ್ಚಂದ್ರ ನೋಡಿದಾಗ ನನ್ನ ಖಿನ್ನತೆಗೆ ಅರ್ಥವೇ ಇಲ್ಲ ಎನ್ನಿಸುತ್ತೆ.

ಪ್ರ.ಪ್ರಾ: ಡಾ|| ರಾಜ್‍ಕುಮಾರ್, ಪಂಡರಿಬಾಯಿ, ಅಶ್ವಥ್, ಉದಯ್‍ಕುಮಾರ್, ನರಸಿಂಹರಾಜು, ಎಂ.ಪಿ.ಶಂಕರ್

7. ತ್ರಿಮೂರ್ತಿ

ರಾಜ್‍ಕುಮಾರ್‍ರನ್ನು GREAT ACTOR ಅಂತ ಅನ್ನೋದು ಯಾಕೆ ಎಂದು ಅರಿವಾಗಬೇಕಾದರೆ ತ್ರಿಮೂರ್ತಿಯನ್ನು ನೋಡಬೇಕು. ತ್ರಿಪಾತ್ರವಲ್ಲದಿದ್ದರೂ ಮೂರು ಪಾತ್ರದಂತೆ ನಟಿಸುವ ನಾಯಕನಿಗೆ ಮೂರು ಅಜಗಜಾಂತರ ಪಾತ್ರಗಳು! ಒಬ್ಬ ಪೋಲೀಸು, ಇನ್ನೊಬ್ಬ ಹಿಪ್ಪಿ, ಮತ್ತೊಬ್ಬ ಮುದುಕ. ಪ್ರೇಕ್ಷಕನಿಗೆ ಗೊತ್ತು ಆ ಮೂರೂ ಜನ ಒಬ್ಬನೇ ಅಂತ. ಆದರೆ ಅದೇ ಪ್ರೇಕ್ಷಕನಿಗೆ ಮೂರೂ ನಟರು ಬೇರೆ ಬೇರೆ ಎಂದು ಅನ್ನಿಸುತ್ತೆ! ಇದು ಹಾಸ್ಯಭರಿತ ಸಸ್ಪೆನ್ಸ್ ಚಿತ್ರ. ಎಂದಿನಂತೆಯೇ ರಾಜ್ ಚಿತ್ರವೆಂದ ಮೇಲೆ ಉನ್ನತ ಮಟ್ಟದ ಸಾಹಿತ್ಯ ಸಂಗೀತ ತುಂಬಿದ ಹಾಡುಗಳು.

Mood: ಹೇಗೇ ಇದ್ದರೂ ಈ ಚಿತ್ರ ನೋಡಿದಾಗ ಒಂಥರಾ josh ಬರುತ್ತೆ.

ಪ್ರ.ಪಾ: ಡಾ||ರಾಜ್‍ಕುಮಾರ್, ಡಾ||ರಾಜ್‍ಕುಮಾರ್, ಡಾ||ರಾಜ್‍ಕುಮಾರ್

6. ಗೌರಿ ಗಣೇಶ/ ಮಿಂಚಿನ ಓಟ

ಅತ್ಯಂತ ಗಂಭೀರ ಪಾತ್ರಗಳಲ್ಲಿ, ದುರಂತ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಅನಂತ್ ನಾಗ್ ತಾವು ಉತ್ತಮವಾದ ಹಾಸ್ಯನಟನೂ ಕೂಡ ಎಂಬುದನ್ನು 'ಗಣೇಶನ ಮದುವೆ'ಯಲ್ಲೇ ನಿರೂಪಿಸಿದ್ದಾರಾದರೂ 'ಗೌರಿ ಗಣೇಶ'ದಲ್ಲಿ ಅನಂತ್‍ರ ನಟನೆಯ ಪರಿಪಕ್ವತೆ ಕಂಡುಬರುತ್ತೆ. ಚಿತ್ರ ಸಾಕಷ್ಟು ನಗಿಸಿದರೂ ಒಮ್ಮೆಮ್ಮೆ ಕೆಲವು ಮನಕಲಕುವ ದೃಶ್ಯಗಳನ್ನೊಳಗೊಂಡಿದೆ. ಸುಳ್ಳು ಹೇಳಿಕೊಂಡು ಕಾಲ ತಳ್ಳುತ್ತಾ ಹಣ ಸಂಪಾದಿಸಿಕೊಳ್ಳುತ್ತಾ ಬದುಕುತ್ತಿದ್ದವನಿಗೆ ಇದ್ದಕ್ಕಿದ್ದ ಹಾಗೆ ಆಸ್ಪತ್ರೆಯೊಂದರಲ್ಲಿ ಹುಡುಗಿಯೊಬ್ಬಳ ಹೆಣದ ಪಕ್ಕ ಸಿಕ್ಕ ಡೈರಿಯನ್ನೋದಿ, ಆ ಹುಡುಗಿಯ ಬದುಕಲ್ಲಿ ಬಂದು ಹೋದ ಗಂಡಸರನ್ನು ಆಟವಾಡಿಸಿ ಹಣ ಕೀಳಲು ಹೋದ ನಾಯಕನು ತಾನೂ ಚಳ್ಳೆ ಹಣ್ಣು ತಿನ್ನುವುದನ್ನು ಫಣಿ ರಾಮಚಂದ್ರ ವಿನೋದಮಯವಾಗಿ ನಿರೂಪಿಸಿದ್ದಾರೆ.

Mood: ಮನಸ್ಸನ್ನು ತೊಳೆದು ಬೆಳಗಿಸಿಕೊಳ್ಳಬೇಕಾದಾಗ ಈ ಚಿತ್ರ ನೋಡಬೇಕು.

ಪ್ರ.ಪಾ: ಅನಂತ್ ನಾಗ್, ವಿನಯ ಪ್ರಸಾದ್, ಮಾಸ್ಟರ್ ಆನಂದ್, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ರಮೇಶ್ ಭಟ್, ಶೃತಿ

ವಿ.ಸೂ.: 'ಎಲ್ಲಿಯವರೆಗೂ ಟೋಪಿ ಹಾಕಿಸಿಕೊಳ್ಳೋರು ಇರ್ತಾರೋ, ಅಲ್ಲಿವರೆಗೂ ಟೋಪಿ ಹಾಕೋರೂ ಇರ್ತಾರೆ' ಎನ್ನುವುದು ತಾತ್ಪರ್ಯ.

Techinacally Perfect ಮನುಷ್ಯನ ಮತ್ತೊಂದು ಚಿತ್ರ 'ಮಿಂಚಿನ ಓಟ'. ಮೂರು ಜನ ಕಳ್ಳರು. ಕಾರು ಕದಿಯುವುದರಲ್ಲಿ specialization ಮಾಡಿಕೊಂಡಿರುವವರು. ಜೈಲು ವಾಸವನ್ನೂ ಅನುಭವಿಸುತ್ತಾರೆ. ಹೇಗೆ ಕಳ್ಳರಾಗುತ್ತಾರೆಂಬುದು ಒಂದು ಸಣ್ಣ ಫ್ಲ್ಯಾಷ್ ಬ್ಯಾಕ್ ಜೊತೆಗೆ ತಲೆ ತಪ್ಪಿಸಿಕೊಂಡು ತಿರುಗುವಾಗಲೇ ನಡೆಯುವ ಪ್ರೇಮಪ್ರಕರಣವೂ ನಡೆಯುತ್ತೆ. ಕಳ್ಳತನ ಸುಳ್ಳತನ ಮಾಡಿಕೊಂಡು ಹೆಚ್ಚು ದಿನ ಬದುಕಲಾರದು ಎಂಬುದು ಸಾರಾಂಶವೊಂದೆಡೆಯಾದರೆ, ಕಳ್ಳನ ಬದುಕಿನಲ್ಲೂ ಸಾಮಾನ್ಯನಂತೆ ನಡೆಯಬಲ್ಲ ಘಟನೆಗಳೂ ಇವೆಯೆಂಬುದು ಇನ್ನೊಂದು ಅರ್ಥ.

Mood: ತಾಳ್ಮೆ, ಸಹನೆ ಮೀರಿದಾಗ ನೋಡುವುದು ಕಷ್ಟ.

ಪ್ರ.ಪಾ: ಶಂಕರ್ ನಾಗ್, ಅನಂತ್ ನಾಗ್, ಲೋಕನಾಥ್

ವಿ.ಸೂ: ಒಂದು ಹಾಡನ್ನು ಸ್ವತಃ ಶಂಕರ್, ಅನಂತ್ ಮತ್ತು ಲೋಕನಾಥ್‍ರೇ ಹಾಡಿದ್ದಾರೆ!

5. ಶ್...

ದೆವ್ವದ ಕಥೆಯ ಆಧಾರದಿಂದ ಬೆಳೆದು ಬಂದ 'ಶ್..' ಚಿತ್ರದಲ್ಲಿ ಬರುವ ಎಲ್ಲಾ ಪಾತ್ರದ ಮೇಲೂ 'ಈತನೇ ದೆವ್ವ/ ಕೊಲೆಗಾರ'ಎಂಬ ಸಂಶಯವನ್ನುಂಟು ಮಾಡಿಸುತ್ತೆ. ನಿರ್ದೇಶನದ ಗುರುವಿನೊಡನೆ ಕೆಲಸ ಮಾಡುವ ಕಾರ್ಯವನ್ನು ಉಪೇಂದ್ರ ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಜೊತೆಗೆ ಪಳಗಿದ ಸುರೇಶ್ ಹೆಬ್ಳಿಕರ್ ಕೂಡ. ಒಟ್ಟಿನಲ್ಲಿ ದೆವ್ವವು ದೆವ್ವವೋ ಅಲ್ಲವೋ ಎಂಬ ಕುತೂಹಲ ಭರಿತ ಸೊಗಸಾಗಿ ನಿರ್ಮಿತವಾದ ಚಿತ್ರ ಶ್.. ಆ ಕಾಲದಲ್ಲಿ ಒಂದು ಅಕ್ಷರದ ಹೆಸರಿನ ಚಿತ್ರಗಳು ಬಹಳ ಪ್ರಸಿದ್ಧಿಯೂ ಪಡೆದಿತ್ತು ಶ್.. ನ ದೆಸೆಯಿಂದ. ಚಿತ್ರವು ಬಹಳ ಜನಕ್ಕೆ ಬಾಳು ಕೊಟ್ಟಿತು.

Mood: ಧೈರ್ಯ.

ಪ್ರ.ಪಾ: ಕುಮಾರ್ ಗೋವಿಂದ್, ಕಾಶಿನಾಥ್, ಸುರೇಶ್ ಹೆಬ್ಳಿಕರ್

4. ಆ ದಿನಗಳು

ಈ ಮಟ್ಟದ ವಿಭಿನ್ನತೆ ಇರುವ ಚಿತ್ರ ಬೆಳ್ಳೆತೆರೆಯ ಇತಿಹಾಸದಲ್ಲೇ ಇಲ್ಲ. ಭೂಗತ ಜಗತ್ತಿನ ಕಥೆಯನ್ನು ಸುಂದರವಾಗಿ ಚಿತ್ರಿಸಲು ಶ್ರೀಧರ್ ಮತ್ತು ಚೇತನ್‍ರಿಗೇ ಸಾಧ್ಯವಾಗುವುದು. ರಕ್ತಪಾತವಿಲ್ಲದೆ ರೌಡಿ ಕಥೆಯನ್ನು ಹೇಳಿರುವುದು ಮೊದಲು, ಜೊತೆಗೆ ಇಡೀ ಕಥೆಯಲ್ಲಿ ಒಂದು ಕ್ಷಣವೂ ಬೋರ್ ಆಗದ ಹಾಗೆ ಕಥೆಯನ್ನು ಕಟ್ಟಿರುವ ರೀತಿ ಅತ್ಯುತ್ತಮ. ಇಡೀ ಚಿತ್ರದಲ್ಲಿರುವ ಇಳಯರಾಜರ ಎರಡೇ ಎರಡು ಹಾಡುಗಳಂತೂ ಸುಮಧುರ. ಕೊತ್ವಾಲ್, ಜಯರಾಜ್, ಆಯಿಲ್ ಕುಮಾರ್, ಶಿವರಾಜ್, ಶ್ರೀಧರ್, ಬಚ್ಚನ್ - ಪಾತ್ರಕ್ಕೆ ತಕ್ಕ ವ್ಯಕ್ತಿಗಳನ್ನಾರಿಸಿದ್ದಾರೆ ನಿರ್ದೇಶಕರು.Mood: ಯಾವಾಗ ಬೇಕಾದರೂ..

ಪ್ರ.ಪಾ: ಶರತ್ ಲೋಹಿತಾಶ್ವ, ಆಶೀಶ್ ವಿದ್ಯಾರ್ಥಿ

ವಿ.ಸೂ: ಕಳೆದ ವರ್ಷದಲ್ಲಿ 'ದಿ ವೀಕ್' ಪತ್ರಿಕೆ ನಡೆಸಿದ ಸರ್ವೇದಲ್ಲಿ 'ಆ ದಿನಗಳು' ಭಾರತದ ಚಿತ್ರಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ.

3. ಮಾನಸ ಸರೋವರ

ಪುಟ್ಟಣ್ಣ ಕಣಗಾಲ್ ಕನ್ನಡಕ್ಕೆ ಕೊಟ್ಟಿರುವ ಅಪಾರ ಕೊಡುಗೆಯಲ್ಲಿ ಬಹುಶಃ ಇದು ಅತ್ಯಂತ ಮನ ಕಲಕುವ ಚಿತ್ರ. ಮನಶ್ಶಾಸ್ತ್ರಜ್ಞನೊಬ್ಬನು ತನ್ನ ಮನಸ್ಸಿನ ಬದುಕನ್ನು ಕಟ್ಟಿಕೊಂಡು ನಶಿಸಿಕೊಳ್ಳುವ ಕಥೆ. ಖ್ಯಾತರಲ್ಲದ ನಟರನ್ನು ಹಾಕಿಕೊಂಡು ಅದ್ಭುತ ಕೆಲಸವನ್ನು ಮಾಡಿಸಿದ್ದಾರೆ ಪುಟ್ಟಣ್ಣ, ಅದು ಅವರ usual style. ಚಿತ್ರವನ್ನು ನೋಡಿ ಒಂದು ವಾರ ಗುಂಗು ಹೋಗುವುದು ಅನುಮಾನ. ಮನೋರೋಗಿಯೊಬ್ಬಳನ್ನು ಚಿಕಿತ್ಸೆ ಮಾಡಲು ಹೊರಟ ಮನಶ್ಶಾಸ್ತ್ರಜ್ಞನು ಆ ರೋಗಿಯೊಡನೆ ಪ್ರೀತಿಗೊಳಗಾಗುತ್ತಾನೆ. ಆ ಹುಡುಗಿಯು ಹುಷಾರಾದ ಮೇಲೆ ಬೇರೊಬ್ಬನನ್ನು ಇಷ್ಟ ಪಡುತ್ತಾಳೆ. ಹಗಲಿರುಳೂ ಅವಳಿಗಾಗಿ ಮುಡುಪಿಟ್ಟ ಡಾಕ್ಟರು ಏನಾಗುತ್ತಾನೆಂಬ ಕಥೆಯೇ ಮಾನಸ ಸರೋವರ.

Mood: ಬಿಡುವಾಗಿದ್ದಾಗ, ಮನಸ್ಸು ಕೆಟ್ಟ ಯೋಚನೆಗಳಿಂದ ಮುಕ್ತವಾಗಿದ್ದಾಗ ನೋಡುವುದೊಳಿತು.

ಪ್ರ.ಪಾ: ಶ್ರೀನಾಥ್, ಪದ್ಮಾ ವಾಸಂತಿ, ರಾಮಕೃಷ್ಣ

2. ಚಿಗುರಿದ ಕನಸು

ಕಾರಂತರ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ಒಂದು ಕನಸಿರುತ್ತೆ. ಮೊದಲ ನಾಯಕಿಗೆ ವಿದೇಶದ ಕನಸು, ನಾಯಕನಿಗೆ ತನ್ನ ಮೂಲದ ಕನಸು, ಅಜ್ಜಿಗೆ ಮನೆಯ ಕನಸು, ಅಪ್ಪನಿಗೆ ಬೊಂಬಾಯಿಯ ಕನಸು, ಅಮ್ಮನಿಗೆ ನಗರದ ಕನಸು, ಎರಡನೆಯ ನಾಯಕಿಗೆ ನಾಯಕನ ಕನಸು... ಈ ಕನಸುಗಳನ್ನು ಹೊತ್ತು ಚಿತ್ರವು ಕರ್ನಾಟಕದ ಅದ್ಭುತ ಸ್ಥಳಗಳಲ್ಲೊಂದಾದ 'ಬಾಂಗಾಡಿ'ಯಲ್ಲಿ ಚಿತ್ರಿತವಾಗಿದೆ. ದಕ್ಷಿಣ ಕನ್ನಡದ ಸಂಸ್ಕೃತಿ, ದೆಹಲಿಯ ಜೀವನ ಶೈಲಿ ಎರಡನ್ನೂ ಚೆನ್ನಾಗಿ ಬ್ಯಾಲೆನ್ಸ್ ಮಾಡಿದ್ದಾರೆ ನಾಗಾಭರಣ. ಎಷ್ಟು ಸಲ ನೋಡಿದರೂ ಮತ್ತೆ ನೋಡಬೇಕೆನ್ನಿಸುವ ಚಿತ್ರ.

Mood: Anytime!!

ಪ್ರ.ಪಾ: ಶಿವರಾಜ್ ಕುಮಾರ್, (ನಾಯಕಿಯರ ಹೆಸರು ಗೊತ್ತಿಲ್ಲ), ಅನಂತ್ ನಾಗ್

1. ಕಾಮನಬಿಲ್ಲು

ರಾಜಣ್ಣ ಇಂಥಾ ಸಾಮಾಜಿಕ issue ಇರುವ ಚಿತ್ರವನ್ನು ಮಾಡಿರುವುದು ಇದೊಂದರಲ್ಲೇ ಅನ್ನಿಸುತ್ತೆ. ಎಲ್ಲಾ ಚಿತ್ರಗಳಲ್ಲೂ ಯಾವುದಾದರೂ ಹೋರಾಟವೋ, ಕಾದಾಟವೋ ಇರುತ್ತಿತ್ತು. ಕಾಮನಬಿಲ್ಲಿನಲ್ಲಿ ಕನಸಿದೆ, ಹಳ್ಳಿಯ ಸಂಸ್ಕೃತಿಯಿದೆ, ಅಲ್ಲಿಯ ಜೀವನವಿದೆ, ಜಾತೀಯತೆಯಿದೆ. 'ಇಷ್ಟು ದಿನ ಊರಿನಲ್ಲಿರುವ ಬಡತನ ನನ್ನ ಕಣ್ಣಿಗೆ ಕಾಣುತ್ತಿತ್ತು, ನಮ್ಮ ಮನೆಯಲ್ಲಿರುವ ದರಿದ್ರ ನನ್ನ ಕಣ್ಣಿಗೆ ಬಿದ್ದಿರಲಿಲ್ಲ!!' ಎಂದು ರಾಜ್ ಹೇಳುವ ಡೈಲಾಗನ್ನು ಕೇಳುವ ಯಾವುದೇ ಚಿತ್ರರಸಿಕನಿಗೂ ಕಣ್ಣು ಒದ್ದೆಯಾಗದಿರುವುದಿಲ್ಲ. ಪ್ರೀತಿ ಪ್ರೇಮ ಪ್ರಣಯ ಕೊನೆಯಲ್ಲಿ ತ್ಯಾಗ! ಇವೆಲ್ಲವನ್ನೂ ಅಮೋಘ ಅಭಿನಯದೊಂದಿಗೆ ನಮಗೆ ಕೊಟ್ಟಿರುವ ಈ ಚಿತ್ರದ ತಂಡಕ್ಕೆ ಒಂದು ಥ್ಯಾಂಕ್ಸ್.

Mood: ಬೇಸರ

ಪ್ರ.ಪಾ: ಡಾ|| ರಾಜ್‍ಕುಮಾರ್, ಅನಂತ್ ನಾಗ್, ಸರಿತಾ, ಅಶ್ವಥ್, ಬಾಲಣ್ಣ

ಇನ್ನೂ ಹಲವಾರು ಚಿತ್ರಗಳಿವೆ. ಇದು ನನ್ನ ಟಾಪ್ 10 ಅಷ್ಟೇ. Generalize ಮಾಡ್ತಿಲ್ಲ ನಾನು... :-)

ಕನ್ನಡ ಚಿತ್ರಗಳನ್ನು ಹಣ ಕೊಟ್ಟು ಕೊಂಡುಕೊಂಡು ನೋಡುವುದರಲ್ಲಿ ಸಂತೋಷವಿದೆ. ಕನ್ನಡಕ್ಕಾಗಿ ಅಷ್ಟು ಕೆಲಸ ಮಾಡುತ್ತಿದ್ದೇನೆಂಬ ಹೆಮ್ಮೆಯಿದೆ.

-ಅ
10.04.2008
11PM

8 comments:

 1. ಹ್ಮ್.. ನಾನು ಈ ಚಿತ್ರಗಳಲ್ಲಿ ಕೆಲವನ್ನು ಮಾತ್ರ ನೋಡಿದ್ದೀನಿ. ಉಳಿದವನ್ನು ಸಾಧ್ಯವಾದಾಗ ನೋಡುತ್ತೀನಿ.

  ReplyDelete
 2. ಒಳ್ಳೆ information ಕೊಟ್ಟಿದೀರ....

  ಚಿಗುರಿದ ಕನಸು ಚಿತ್ರದ ನಟಿಯರು "ವಿದ್ಯಾ ವೆಂಕಟೇಶ್" ಮತ್ತು "ರಾಧಾ ತ್ರಿಪಾಠಿ" :-)

  ReplyDelete
 3. ಅಮೃತ ವರ್ಷಿಣಿಯ ಹಾಡುಗಳ ಬಗ್ಗೆ ಬರೆಯದೇ ಇದ್ದಿದ್ದು ಅಪರಾಧ!!:)

  ReplyDelete
 4. alla, mele yop15, kelage top 10 yaake? :-)
  trimurty pra paa chennagide :-)

  ReplyDelete
 5. naanu ee list nalli CBI shiva and Seetha nodilla....nodtheeni...athi sheegradalli :-)

  Trimurthi :
  ಪ್ರ.ಪಾ: ಡಾ||ರಾಜ್‍ಕುಮಾರ್, ಡಾ||ರಾಜ್‍ಕುಮಾರ್, ಡಾ||ರಾಜ್‍ಕುಮಾರ್
  ee line hidisthu...
  oLLe information -u....

  ReplyDelete
 6. @ಶ್ರೀಕಾಂತ್: ನೋಡಪ್ಪಾ ಬೇಗ!! ಹಾಗೇ ನಿನ್ ಟಾಪ್ x ನೂ ಬರಿ. (where, x>=0 and x belongs to Z)

  @ಹರೀಶ್: ನಿಮ್ಗೂ ಧನ್ಯವಾದಗಳು, ನಾಯಕಿಯರ ಹೆಸರನ್ನು ಹೇಳಿದ್ದಕ್ಕೆ.

  @ಶ್ರೀನಿಧಿ: ಅಮೃತವರ್ಷಿಣಿ - ಮನಸೇ... ಬದುಕು ನಿನಗಾಗಿ.. ನಂಗೆ ತುಂಬಾ ಇಷ್ಟ ಈ ಹಾಡು.

  @ವಿಜಯಾ: ತಿದ್ದುಪಡಿ. ಇಂಗ್ಲೀಷಲ್ಲಿ ಎರಾಟ (ಒಳ್ಳೇ ವಿರಾಟ ಅನ್ನೋ ಥರಾ ಇದೆ). "ಇನ್ನೂ ಹಲವಾರು ಚಿತ್ರಗಳಿವೆ. ಇದು ನನ್ನ ಟಾಪ್ 15 ಅಷ್ಟೇ. Generalize ಮಾಡ್ತಿಲ್ಲ ನಾನು... :-)"

  @ಶ್ರೀಧರ: ಸಿ.ಬಿ.ಐ. ಶಿವ ಒಳ್ಳೇ ಮಜ ಇದೆ ಕಣೋ. ನೋಡು. ತ್ರಿಮೂರ್ತಿಯಲ್ಲಿ ಹೆಸರು ತೋರಿಸುವಾಗ ಹಾಗೇ ತೋರಿಸೋದು. ಮೂರು ಸಲ ರಾಜ್‍ಕುಮಾರ್ ಹೆಸ್ರು ತೋರ್ಸ್ತಾರೆ. ಅದ್ರಿಂದಾನೇ ನಂಗೆ ಈ ಐಡಿಯಾ ಬಂದಿದ್ದು.

  ReplyDelete
 7. gurugaLe....naanU ee paTTiyalliruva ella chitragalannu innu nOdabEkide !! calypso ge daaLi maaDOde naaLe !! tale keTTu dikaapaalaagi hogittu....neevu bindaas aada idea koTTiddEri...sikk sikkaapaTTe thanks !!

  ReplyDelete
 8. Hi, I am jay, journalist from Hassan. You are giving very good info regarding movies.Thanks again keep it up. write more about culture and nature.

  ReplyDelete