Wednesday, April 30, 2008

ಶುಕ್ರದೆಶೆ - ಕೇತುಭುಕ್ತಿ

ದೈವ ಸಂಕಲ್ಪದಂತೆ ಫಲಗಳನ್ನನುಭವಿಸಿಯಾಯ್ತು. ಇನ್ನು ವರದಿಯಷ್ಟೆ ಉಳಿದಿರುವುದು.

ಏಪ್ರಿಲ್ ತಿಂಗಳು ನನ್ನ ಪಾಲಿಗೆ ಒಂದು ವರ್ಷವೇ ಆದಂತಿದೆ. ಕ್ಷಣಗಳು ಗಂಟೆಗಳಾಗಿವೆ.. ಅಂತೂ ಮುಗಿಯಿತಲ್ಲಾ ಎಂಬ ತುಸು ಸಮಾಧಾನ, ನಿರಾಳ ಒಂದು ಕಡೆಯಾದರೆ, ಮೇ ಬಗ್ಗೆ ಸ್ವಲ್ಪ ಧೈರ್ಯ ಮತ್ತೊಂದು ಕಡೆ.

ಮೂರ್ಖರ ದಿನದಂದು ನನ್ನನ್ನು ಯಾರೂ ಮೂರ್ಖನನ್ನಾಗಿಸಲಿಲ್ಲ; ನಂತರದ ದಿನಗಳಲ್ಲಿ ನಾನೇ ಮೂರ್ಖನಾದೆ.

ಬದುಕಿನಲ್ಲಿ ಯಾವುದು ನನಗೆ ಕಲ್ಪಿಸ್ಸಲೂ ಸಹ ಸಾಧ್ಯವೇ ಇಲ್ಲ ಎಂಬ ನಿರ್ಣಯದಲ್ಲಿ ನಾನು ಪಾಲ್ಗೊಂಡಿದ್ದೆ. ಈ ನಿರ್ಣಯದಲ್ಲಿ ಕಿಂಚಿತ್ತೂ ತಪ್ಪಿಲ್ಲವೆಂದು ತಿಳಿದಿದ್ದರೂ ಅಳುಕಿದ ಮನಸ್ಸಿಗೆ ಧೃತಿ ಕೊಡಲು ನನ್ನ ಮಿತ್ರಸಮೂಹವೇ ನನ್ನೊಂದಿಗೆ ಬೆನ್ನೆಲುಬಾಗಿ ನಿಂತಿದ್ದು ನನ್ನ ಪುಣ್ಯವೇ ಸರಿ.

ನನಗಾಗಿ, (ನಾನು, ವಿಜಯಾ, ಗುರು, ಗಿರೀಶ, ಅಶೋಕ) ತನ್ನ ಜೀವಮಾನವನ್ನು ತೆತ್ತ ಅತ್ತೆಯ ಕೊನೆಯ ಉಸಿರನ್ನು ಎಣಿಸುತ್ತಾ ಕುಳಿತಿರುವ ದಿನವನ್ನೂ ಅನುಭವಿಸಿದೆ.

ಬದುಕಿನ ಅತ್ಯಂತ ಕ್ರಿಟಿಕಲ್ ಇರುಳಿನಲ್ಲಿ ಒಂದು ಅನಿರೀಕ್ಷಿತ ಹಲ್ಲೆಗೊಳಗಾದೆ - ಮರಣಾಂತಿಕವಾದದ್ದೇನಲ್ಲ, ದೇಹದ ಗಾಯವು ಮನಸ್ಸಿನ ಗಾಯವು ಕೆಲ ಸಮಯದಲ್ಲೇ ಮಾಗಿಯಾಯ್ತು ಎಂದು ಭಾವಿಸುತ್ತೇನೆ.

ಅತ್ತೆಯ ನಿರ್ಜೀವ ಚೇತನದೊಂದಿಗೆ ಒಬ್ಬನೇ ವಾಹನದಲ್ಲಿ ಆಸ್ಪತ್ರೆಯಿಂದ ರುದ್ರಭೂಮಿಯವರೆಗೂ ಪಯಣಿಸುವಾಗಲೂ ಕಣ್ಣಲ್ಲಿ ಒಂದು ಹನಿ ನೀರೂ ಗೋಚರಿಸಲಿಲ್ಲ.

ಶ್ರೀರಂಗಪಟ್ಟಣದ ಬಳಿ ನಾನು ಪಯಣಿಸುತ್ತಿದ್ದ ಬಸ್ಸು ಅವಘಡಕ್ಕೊಳಗಾಯಿತು; ಬಹುಶಃ ಕ್ಷಣಮಾತ್ರದಲ್ಲಿ ಬಸ್ಸಿನಲ್ಲಿದ್ದ ಎಲ್ಲರ ಜೀವ ಉಳಿಯಿತು. ಬಸ್ಸು ಮೂರು ಪಲ್ಟಿ ಹೊಡೆದು ಸೇತುವೆಯಿಂದ ನದಿಗೆ ಉರುಳಲು ಒಂದೆರಡು ಅಡಿ ದೂರವಿತ್ತು, ಇಲ್ಲವೇ ಎದುರು ಸಡನ್ ಆಗಿ ಬ್ರೇಕ್ ಹಾಕಿದ ಲಾರಿಗೆ ಅಪ್ಪಳಿಸಿ ತಲೆ ಒಡೆದುಕೊಳ್ಳಲು ಎರಡು ಸೆಕೆಂಡು ಮಾತ್ರವೇ ಸಮಯವಿತ್ತು.

'ಅವಳ' ಜೊತೆ ಪ್ರಯಾಣ ಮಾಡಿದೆ. ಮಡಿಕೇರಿಯ ಸೂರ್ಯಾಸ್ತ ನೋಡಬೇಕೆಂದಿದ್ದೆ, ಮೇಘರಾಜನ ಆತಿಥ್ಯದಿಂದ ಸಾಧ್ಯವಾಗಲಿಲ್ಲ. 'ಅವಳ' ಬಂಧುಗಳ ಮನೆಯ ಆದರಾತಿಥ್ಯಗಳಿಂದ ಬೆಕ್ಕಸ ಬೆರಗಾಗಿ ಹೊಟ್ಟೆಯುಬ್ಬರ ಮಾಡಿಕೊಂಡು ಇನ್ನೂ ಜೀರ್ಣಿಸಿಕೊಳ್ಳುತ್ತಿದ್ದೇನೆ.

ಅತ್ಯಾತ್ಮೀಯರೊಡನೆ ಕಟುವಾಗಿ ನಡೆದುಕೊಳ್ಳುವಂತಾಯಿತು. ಗುಂಡಿಗೆಯನ್ನು ಬಂಡೆಯಾಗಿಸಿಕೊಂಡು ನಡೆದುಕೊಂಡುಬಿಟ್ಟೆ.

ಇನ್ನೂ ಕೆಲವು ಸಾಲಗಳನ್ನು ಬಾಕಿಯುಳಿಸಿಕೊಂಡಿದ್ದೇನೆ. ತೀರಿಸುತ್ತೇನೆ. ಧನಸಾಲವಲ್ಲ - ವಸ್ತುಸಾಲಗಳು, ವಾಕ್ಸಾಲಗಳು.

ದೀಪ್ತಿ, ಪ್ರಶಾಂತ, ದಿವ್ಯಾ, ಮೊಮ್ಮಗಳು ಶೃತಿ, ಅಂಬೇಡ್ಕರ್, ರಾಜ್‍ಕುಮಾರ್, ಸಚಿನ್ ತೆಂಡುಲ್ಕರ್, ವರುಣ, ಅಶ್ವಿನಿ, ಗುರುನಾಥ, ಸಂತೋಷ್, ಮಧು - ಎಲ್ಲರಿಗೂ ಕ್ರಮವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿಯಾಯಿತಾದರೂ ಬ್ಲಾಗಿನಲ್ಲೂ ಹರಸುವ ಮನಸ್ಸಾಗಿದೆ. ಹುಟ್ಟು ಹಬ್ಬದ ಶುಭಾಶಯಗಳು.

ಪ್ರೀತಿಪಾತ್ರಳಾದ ಅಕ್ಕನ ಸೋಲುಗೆಲುವುಗಳನ್ನರಿತ ನಾನು, ಆಕೆಯ ಬದುಕಿನ ನಿಷ್ಕಲ್ಮಶ ಸುಗಮ ಹಾದಿಗೆ ನಾಂದಿಯಾಗಲು ಸರ್ವಸ್ವವನ್ನೂ ಅರ್ಪಿಸಲು ಸಿದ್ಧನಿದ್ದು, ಆ ನಿಟ್ಟಿನಲ್ಲಿ ನಡೆದು ಹರ್ಷವನ್ನನುಭವಿಸುತ್ತಿದ್ದೇನೆ.

ಮನೆಗೆ ಬಂದಿರುವ ಹೊಸ ಲ್ಯಾಬ್ರಡಾರ್ ಮರಿ, ಮತ್ತು ಬೆಕ್ಕಿನ ಮರಿಯು ಬದುಕು ಅತ್ಯಂತ ಸುಂದರ ಎಂಬುದನ್ನು ಸಾರಿ ಹೇಳಲು ಬಂದಂತಿದೆ.

ಕೇತುವಿನ ಕೆಲಸ ಇನ್ನೂ ಮುಂದಿದೆ, ಒಂಭತ್ತು ತಿಂಗಳು ಉಳಿದಿದೆ. ತಾನು ಮಾಡಬೇಕಾದ ಕೆಲಸವನ್ನು ಮಾಡಿಯಾಗಿದೆ. ಅವಮಾನ, ಅನುಮಾನ, ಅಭಿಮಾನ ಎಂದರೇನು ಎಂಬುದನ್ನು ತಿಳಿಸಿಕೊಟ್ಟಿದ್ದಾನೆ. ಇನ್ನು 'ಸನ್ಮಾನ' ಬಾಕಿಯಿದೆ. ಅಲ್ಲಿಗೆ ಶುಕ್ರದೆಶೆ ಮುಗಿದು ರವಿಯ ಆಟಪಾಠಗಳೇನು ಎಂದು ನೋಡುವ ಸಮಯ ಬಂದಿರುತ್ತೆ.

ಒಳ್ಳೆಯವರು ಸುಖವಾಗಿರಲಿ. ಕೆಟ್ಟವರು ಒಳ್ಳೆಯವರಾಗಲಿ.

-ಅ
30.04.2008
10.45AM

4 comments:

 1. शुभम् भूयात्

  ReplyDelete
 2. ಬದುಕಿನ ಅತ್ಯಂತ ಕ್ರಿಟಿಕಲ್ ಇರುಳಿನಲ್ಲಿ ಒಂದು ಅನಿರೀಕ್ಷಿತ ಹಲ್ಲೆಗೊಳಗಾದೆ ....eno idhu??

  onthara idhe article -u....hmmm

  ReplyDelete
 3. [ಶ್ರೀಧರ] ಹೌದು, ಅದು ನಡೀತು. ಎಲ್ಲಾ ಮುಗಿದಾಗಿದೆ. ಈಗ ಹೊಸ ತಿಂಗಳು, ಹೊಸ ಚಾಪ್ಟರ್ರು!!

  ReplyDelete