Saturday, May 31, 2008

ವರುಷದಿಂದವರ್ಷದಿಂ ಪಯಣ
ಹರ್ಷದೆಡೆಗೋ, ಕ್ಷಿತಿಜದ ಸ್ಪರ್ಷದೆಡೆಗೋ?

ಮೊದಲ ವರ್ಷದ ಈ ಪೋಸ್ಟ್ ಅನ್ನು ನನ್ನ ಸಾಕಿ ಬೆಳೆಸಿ ವ್ಯಕ್ತಿತ್ವ ರೂಪಿಸಿ ಕ್ಷಿತಿಜದೆಡೆಗೆ ಹೊರಟು ಬಿಟ್ಟ ಅತ್ತೆಗೆ ಅರ್ಪಿಸುತ್ತೇನೆ.

-ಅ
31.05.2008
12.30AM

Friday, May 16, 2008

ನಮಸ್ಕಾರ

ಲ್ಲಿ ನಲಿವಿಲ್ಲ, ಗೆಲುವಿಲ್ಲ.
ಅಂದಿನಿಂದ ಇಂದಿನವರೆಗೂ ಕಂಡ ಕನಸುಗಳ ಮುಗಿಸಿ ಎಚ್ಚರ;
ಉಸುರು, ಹೃದಯ, ಕೈಕಾಲುಗಳೆಲ್ಲಾ ಅಚರ.
ಯಾರುಯಾರೋ ಬಂಧುಗಳು ಕೂಗುತ ಅಳುತಿಹರು, ಹೋದವರು ಮೌನ.
ಅತ್ತವರು ಆಗರು ಎಂದೆಂದಿಗೂ ಸಹಚರ.
ಇಲ್ಲಿ ನಲಿವಿಲ್ಲ, ಸ್ಮಶಾನವಿದು, ಗೆಲುವೂ ಇಲ್ಲ.
ನಿರ್ಜೀವ ನಿರ್ಭಾವ ದೇಹಕ್ಕೆ ಸಂಸ್ಕಾರ
ದುಡಿದ ತಣಿದ ಚೇತನಕ್ಕೆ ನಮಸ್ಕಾರ.

-ಅ
16.05.2008
1PM

Thursday, May 15, 2008

ಆಮೀರ್ ಖಾನ್ - ಶಾಹ್‍ರುಖ್

ಆಮೀರ್ ಖಾನ್ ಅವರ ನಾಯಿಯ ಹೆಸರು ಶಾಹ್‍ರುಖ್ ಅಂತೆ!!

http://www.aamirkhan.com/blog.htm

-ಅ
15.05.2008
11.10PM

Wednesday, May 14, 2008

ಮೂಕಂ ಕರೋತಿ ವಾಚಾಲಂ

ಕ್ಷಿತಿಜಾನಿಸಿಕೆಯ ನೂರನೇ ಪೋಸ್ಟಿಗೆ ಒಳ್ಳೇ ಕಥಾವಸ್ತುವೆಂದು ಭಾವಿಸುತ್ತೇನೆ.

ಈ ಎಸ್ಸೆಮ್ಮೆಸ್ಸಲ್ಲಿ ಕಗ್ಗ ಶ್ಲೋಕ ಇವನ್ನೆಲ್ಲಾ ಕಳಿಸುವ ಹವ್ಯಾಸ ಎಂಥಾ ಸೊಗಸು!!

ಹೊಸ ಹವ್ಯಾಸವೆಂದರೆ ಯಾವುದಾದರೊಂದು ಶ್ಲೋಕವನ್ನು ಕನ್ನಡದಲ್ಲಿ ಬರೆಯುವುದು. ಮನಸ್ಸಿಗೆ ಒಳ್ಳೆಯ ಮುದ ನೀಡುತ್ತೆ ಈ ಹವ್ಯಾಸ. ಶ್ರೀನಿವಾಸನ ಈ ಅಂಕಣದಿಂದ ಆರಂಭವಾಗಿದ್ದು ಇದು. ಒಂದು ಬಗೆಯ ರಚನಾತ್ಮಕ ಸ್ಪರ್ಧೆಯೂ ಇತ್ತೆಂದರೆ ತಪ್ಪಾಗಲಾರದು. ವೆರಿ ಗುಡ್.

ಮೂಕಂ ಕರೋತಿ ವಾಚಾಲಂ
ಪಂಗುಂ ಲಂಘಯತೇ ಗಿರಿಂ |
ಯತ್ಕೃಪಾ ತಮಹಂ ವಂದೇ
ಪರಮಾನಂದ ಮಾಧವಂ ||

ಶ್ರೀಕಾಂತ, ಶ್ರೀನಿವಾಸ, ಲಕುಮಿ ಎಲ್ಲರೂ ಸಕ್ಕದವನ್ನು ಓದಿ, ಓದಿಸುವುದರಲ್ಲಿ ಎತ್ತಿದ ಕೈ. ಶ್ರೀಕಾಂತನಂತೂ ಅಕ್ಷರಕ್ಷರ ಬಿಡಿಸಿ ಹೇಳುವುದರಲ್ಲಿ ನಿಸ್ಸೀಮ. ಲಕುಮಿಗೆ ಕೊಂಚ ಸಂಕೋಚವಾದರೂ ತಿಳಿವಳಿಕೆಗೇನೂ ಕಮ್ಮಿಯಿಲ್ಲ. ಶ್ರೀನಿವಾಸನ ಬಗೆಯನ್ನು ಬಣ್ಣಿಸಲೇ ಬೇಕಿಲ್ಲ.

ಈ ಎಸ್ಸೆಮ್ಮೆಸ್ಸು ಗೆಳೆಯರ ಮೊಬೈಲನ್ನು ಹೊಕ್ಕಿದ್ದೇ ತಡ ಸ್ಮಿತೆಯಿಂದ ಮರುಸಂದೇಶ ಬಂದೇ ಬಿಟ್ಟಿತು. ನಾನು ಅರ್ಥವನ್ನು ನಿರೀಕ್ಷಿಸುತ್ತಿದ್ದೆ. ಆದರೆ ಸ್ಮಿತೆಯ ಸಂದೇಶ ಸೊಗಸಾಗಿತ್ತು.

ಹಾಂ ಬ್ರೀಂ ಠುಸ್
ನಿಂಗೆ ಟೈಮ್ ಪಾಸ್ ಆಗ್ತಿಲ್ಲ ಅನ್ಸತ್ತೆ
ಅದಕ್ಕೆ ತಲೇಗ್ ಬಂದಿದ್ದೆಲ್ಲಾ ಕಳಿಸ್ತಿದ್ದೀಯ.

ಒಳ್ಳೇ ಸ್ಮಿತೆ.

ಶ್ರೀಕಾಂತನ ವ್ಯಾಖ್ಯಾನ ಯಾವಾಗಲೂ ಎಲ್ಲರಿಗಿಂತಲೂ ಭಿನ್ನವಾಗಿರುತ್ತೆ. ತರ್ಕಬದ್ಧವಾಗಿಯೂ ಕೂಡ ಇರುತ್ತೆ.

ಯಾರ ಕೃಪೆಯು ಮೂಕನನ್ನು ವಾಕ್ಪಟುವಾಗಿಸಬಲ್ಲದೋ
ಕಾಲಿಲ್ಲದವನನ್ನು ಬೆಟ್ಟ ಹಾರುವಂತೆ ಮಾಡಬಲ್ಲದೋ
ಆ ಪರಮಾನಂದವೇ ಆಗಿರುವ ಮಾಧವನಿಗೆ ನಮಸ್ಕರಿಸುತ್ತೇನೆ.

ಪದ್ಯರೂಪದಲ್ಲಿ ಬರೆಯಲು ತಯಾರಿರಲಿಲ್ಲ ಶ್ರೀಕಾಂತ. ಯಾಕೆ ತರ್ಕಬದ್ಧವಾಗಿಯೂ ಇರುತ್ತೆ ಎಂದು ನಾನು ಹೇಳಿದೆನೆಂದರೆ, ಇನ್ನೊಂದು ವ್ಯಾಖ್ಯಾನ ಕೊಟ್ಟ. ಸಮಾಸವನ್ನು ಜೋಡಿಸಿದರೆ ಹೀಗಾಗುತ್ತೆಂದ.

ಯಾರ ವಾಕ್ಪಟುತ್ವವು ಕೇಳುಗರನ್ನು ಮೂಕರಾಗಿಸುತ್ತದೋ
ಯಾರು ಬೆಟ್ಟವನ್ನು ಹಾರಿಕೊಂಡೇ ದಾಟಿಸಬಲ್ಲರೋ
ಯಾರು ಮಾಧವನಿಗೆ ಪರಮಾನಂದವೇ ಆಗಿರುವನೋ
ಅಂಥಾ ದಯಾಮೂರ್ತಿಗೆ (ಹನುಮಂತನಿಗೆ) ನಮಸ್ಕರಿಸುತ್ತೇನೆ.

ಇದರ ಬಗ್ಗೆ ಬಹುಶಃ ಲಕುಮಿ ಮತ್ತು ಶ್ರೀನಿವಾಸನ ವಿವರಣೆಯಿರುತ್ತೆಂದುಕೊಂಡಿದ್ದೇನೆ.

ಲಕುಮಿಯಂತೂ ಹಳೆಗನ್ನಡದ ಕವಿತೆಯ ಶೈಲಿಯನ್ನು ಚೆನ್ನಾಗಿ ಅನುಸರಿಸಿದ್ದಾಳೆ.

ಮೆಲುನಗೆಯಿಂ ಮೂಕನಂ ವಾಗ್ಮಿಯಾಗಿಪನ
ಕರುಣದಿಂ ಕುಂಟನಂ ಬೆಟ್ಟ ದಾಂಟಿಪನ
ಪಾಪನಾಶನ, ಪರಮನಂದನನ
ವಂದಿಪೆ ನಾ ಆ ಮಾಧವನ.

ಶ್ರೀನಿವಾಸನು ನನಗೆ ಬರೆಯಲು ಹೇಳಿ, ಬರೆಯದಿದ್ದರೆ ಈ ಬಾರಿ ಪತ್ರಿಕೆಯ obituary columnನಲ್ಲಿ ನನ್ನ ಹೆಸರು ಬರುತ್ತೆಂದು ಹೇಳಿ, ಈ ಸೌಂದರ್ಯವನ್ನು ನನ್ನ ಮೊಬೈಲಿಗೆ ಕಳಿಸಿದ:

ಆವಾತನ ಕರುಣೆಯಲಿ ಮೂಗನರುಪುವನೋ
ಆವಾತನೊಲುಮೆಯಲಿ ಕುಂಟ ನಡೆಯುವನೋ
ಆ ವಾಗತೀತ ಕೃಪೆಯುಳ್ಳ ಮಾಧವನಿಗೆ
ನಾ ವಂದಿಸುವೆ ನಯದಿ - ಗಂಡಭೇರುಂಡ.

ಇನ್ನು ನನ್ನ ಸರದಿ. ಬರೆಯದಿದ್ದರೆ ಪತ್ರಿಕೆಯಲ್ಲಿ ಫೋಟೋ. ಭೀತಿಯಿಂದಲೇ ಇರುವಾಗ ಹ್ಯಾತ್‍ವೇ ವರ ಬೇರೆ ಕೊಡಬೇಕೆ, ಕರ್ಮಕಾಂಡ!! ಆದರೂ ಅರೆರಾತ್ರಿ ಸರಿ ಹೋದಮೇಲೆ ಟೈಪಿಸಿಯೇ ಬಿಟ್ಟೆ, ಈ ಸಾಲುಗಳನ್ನು. ಬರೀ ಗಂಭೀರ ಸಾಲುಗಳನ್ನೇ ನೋಡಿ ನೋಡಿ ನನಗೂ ತರಲೆಯ ಅಗತ್ಯವಿದೆಯೆನಿಸಿತು. ಮಾಧವನ ಕ್ಷಮೆಯಿರುತ್ತೆ.

ನೀ bless-ಇಸಲು ಮಾಧವನೇ
ಒಟಗುಟ್ಟುವನು dumb-ಉ
trek-ಇಸುವನು lame-ಉ
ಓ great-ಅನೇ,
ಜೋಡಿಸಿ ನನ್ನ ಬೆರಳುಗಳು five-ಉ
ನಿನಗೆ ಹೊಡೆಯುವೆನು ಮನಸಾರೆ dive-ಉ!

-ಅ
14.05.2008
11.45PM

Thursday, May 8, 2008

ಓಟು ಕೊಟ್ಟು ಕಾಪಾಡಿ...

ಭವ್ಯಾ ಜೊತೆ ವಿಜಯನಗರದ ಒಂದು ಸ್ಟುಡಿಯೋಗೆ ಹೋಗಿದ್ದೆ. ಹಾಡು ರೆಕಾರ್ಡಿಂಗ್ ಸಲುವಾಗಿ. "ಯಾವ ತರಹದ ರೆಕಾರ್ಡಿಂಗ್ ಆದ್ರೂ ಭಾಗವಹಿಸು, ಹಾಗೇನೇ ಬೆಳೆಯೋದು, ಯಾವುದಕ್ಕೂ ಹಿಂಜರಿಯಲೇ ಬೇಡ" ಅಂತ ನಾನೇ ಅವಳಿಗೆ ಹೇಳಿದ್ದು ತಪ್ಪಾಯಿತೆಂದು ನನಗೇ ಅನ್ನಿಸತೊಡಗಿತು. ಅಲ್ಲಿ ಇದ್ದ ರೆಕಾರ್ಡಿಂಗು ಕರ್ಮಕ್ಕೆ ಎಲೆಕ್ಷನ್ ಕ್ಯಾಂಪೇನ್ ಹಾಡುಗಳದು!! ಸರಿ, ಒಪ್ಪಿಕೊಂಡಿದ್ದ ಕರ್ಮಕ್ಕೆ ಎರಡು ಹಾಡು ಹೇಳಿ ಬಂದಳು.

ಆ ಸ್ಟುಡಿಯೋ ಒಳಗೆ ಕಾಲಿಟ್ಟ ತಕ್ಷಣ ಅಲ್ಲೊಬ್ಬ ಕೂತಿದ್ದ ವ್ಯಕ್ತಿಯನ್ನು ನೋಡಿ, ರೆಕಾರ್ಡಿಂಗ್ ಎಷ್ಟು ಹೊತ್ತಿಗೆ ಎಂದು ಕೇಳಿ ತಿಳಿದುಕೊಳ್ಳೋಣವೆಂದು ಅವನ ಹತ್ತಿರ ಹೋದೆ. ಆತ ಏನನ್ನೋ ಬರೆಯುತ್ತಿದ್ದ. ನಾನಂದುಕೊಂಡೆ ಆತ ಯಾವುದೋ ಬಿಲ್ ಸೆಟಲ್ಮೆಂಟ್‍ಗೆ ಬಂದಿದ್ದಾನೇನೋ ಅಂತ. ಅವನನ್ನು ಡಿಸ್ಟರ್ಬ್ ಮಾಡಲಿಲ್ಲ. ನಂತರ ಕೆಲವೇ ನಿಮಿಷದಲ್ಲೇ ಗೊತ್ತಾಯಿತು, ಆತನೇ ಸಂಗೀತ ನಿರ್ದೇಶಕ ಹಾಗೂ ಸಾಹಿತಿ ಅಂತ. ನಾನು ಭವ್ಯಾಳ ಕಡೆ ಮುಖ ತಿರುಗಿಸಿ, "ಇನ್ನು ನೀವಿಬ್ರೂ ಹಾಡಿದ ಹಾಗೇ!!" ಅಂದೆ.

ಆತ ಏನು ಬರೆದಿದ್ದಾನೋ ಅಂತ ನೋಡೋಣ ಅಂತ ತುಂಬಾ tempt ಆಗುತ್ತಿತ್ತು. ಆದರೆ ಪುಣ್ಯಾತ್ಮ ಟ್ಯೂನ್ ಹಾಕುತ್ತಿದ್ದ ಕಾರಣ, ಆತನಿಗೆ ಡಿಸ್ಟರ್ಬ್ ಮಾಡಬಾರದೆಂದು ಸುಮ್ಮನಿದ್ದೆ. ಹಾಗೆಲ್ಲಾ ವ್ಯಕ್ತಿಗಳನ್ನು ವೇಷಭೂಷಣದಿಂದಾಗಲೀ, ಮುಖಸೌಂದರ್ಯದಿಂದಾಗಲೀ ಅಳೆಯಬಾರದೆಂದು ನಂಬಿರುವ ಕಾರಣ ಅವನೊಳಗೂ ಒಬ್ಬ ಉದಯಶಂಕರ ಇರಬಹುದೇನೋ ಎಂದುಕೊಂಡೆ. ಆಮೇಲೆ ಗೊತ್ತಾಯಿತು, ಅದು ಉದಯಶಂಕರನ ತುಂಡಲ್ಲ, ಅಸ್ತಮಶಂಕರನ ಅಪರಾವತಾರ ಅಂತ.

"ಸರ್, ಎರಡು ಸಿನಿಮಾ ಹಾಡಿನ ಟ್ಯೂನ್‍ನೇ ನೇರವಾಗಿ ಕಂಪೋಸ್ ಮಾಡಿದ್ದೀನಿ ಈ ಹಾಡುಗಳಿಗೆ.. ಮಿಕ್ಕಿದ್ದ್ ಆರು ಹಾಡುಗಳಿಗೆ ನಂದು ಓನ್ ಟ್ಯೂನ್ - ತಮಿಳು, ತೆಲುಗು, ಮಲೆಯಾಳಿ ಚಿತ್ರಗಳಿಂದ ತೊಗೊಂಡಿರೋದು.." ಎಂದು ವಿವರಿಸಿದ.

ಅರ್ರೇ, ಇನ್ನು ಇವನ ಸ್ವಂತಿಕೆಯೇನಿದೆ ಕರ್ಮ?

ಸಿತಾರ್ ಕಲಾವಿದೆಯು ರೆಕಾರ್ಡಿಂಗ್ ಹಾಲ್‍ನಿಂದ ಹಠಾತ್ತೆನೆ ಹೊರಗೆ ಧಾವಿಸಿದರು. ಹೊರಗೆ ಕುಳಿತಿದ್ದ ನನಗೆ ಗಾಬರಿಯಾಯ್ತು. ಏನಾಯಿತಪ್ಪಾ ಇವರಿಗೆ, ಆ ರಾಜಕಾರಣಿಯ ದೂತನೊಡನೆ ಜಗಳ ಆಡಿಕೊಂಡುಬಿಟ್ಟರೇನೋ ಎಂದುಕೊಂಡೆ. ಹೊರಗೆ ಬಂದೊಡನೆ ಜ್ವಾಲಾಮುಖಿಯಂತೆ ನಗುವನ್ನು ಸಿಡಿಸಿಬಿಟ್ಟರು. "ನನಗೆ ಆಗಲ್ಲಾ ರೀ ನುಡಿಸೋಕೆ.." ಎಂದು ಹೇಳಿ ಕಣ್ಣಲ್ಲಿ ಗಳಗಳ ನೀರು ಸುರಿಸಿದರು. ಆ ನೀರು ನಗುವು ಅಧಿಕವಾಗಿರುವುದಕ್ಕೆ ಕಾರಣ ಎಂದು ಆಮೇಲೆ ಅರ್ಥವಾಯಿತು. ಅವರ ನಗುವಿಗೆ ಕಾರಣ ಈ ಸಾಹಿತ್ಯ:

ನಮಗಾಗಿ ಮುರುಗೇಶಣ್ಣ BJPಗೆ ನಿಂತಾರ
ಕಮಲಕ್ಕ ಓಟ ಹಾಕಿ ಆರಿಸಿ ತರ್ರಿ ಅಂದಾರ
ರೈತನ ಮಗನಾಗ ಹುಟ್ಯಾರ ಇವರು
ಇಂಜಿನಿಯssರ ಪದವಿ ಪಡೆದವರು
ನಿಂತಾರ ಇವರು ಕಮಲಕ್ಕ
ಮುರುಗೇಶ ಮಂತ್ರಿ ಆಗಾಕ
ಒಮ್ಮೆ BJPಗೆ ಬಹುಮತ ಕೊಟ್ಟ ನಾವು ನೋಡಬೇಕ...

ಇದು ಪಲ್ಲವಿ ಅಂತೆ.

ಇಂಥಾ ಹಾಡನ್ನೆಲ್ಲಾ ಹಾಡಲು ಶಾಸ್ತ್ರೀಯ ಸಂಗೀತ ಕಲಿಯಬೇಕೇ? ಭವ್ಯಾ ಅಲ್ಲಿಂದ ಯಾವಾಗ ಎದ್ದು ಬರುತ್ತಾಳೋ ಎಂದು ಕಾಯುತ್ತಿದ್ದೆ. ಯಾವನೋ ಎಲ್ಲೋ ಓಟಿನ ಭಿಕ್ಷೆ ಕೇಳಲು ಕಲಾವಿದರ ಕಂಠವಾಗಬೇಕಾ? ಅವನ ಕರ್ಕಶ ಕಂಠದಲ್ಲೇ ಕೇಳಿಕೊಳ್ಳಲಿ. ಎಂದು ಆ ದೂರದ ರಾಜಕಾರಣಿಗೆ ಹಿಡಿಶಾಪವನ್ನು ನಗುತ್ತಲೇ ಹಾಕಿದೆ. ಭವ್ಯಾ ಎದ್ದು ಬಂದ ತಕ್ಷಣ ನಿರಾಳವಾಯಿತು.

...........................................................................

ಮನೆಗೆ ಕೆಜಿಗಟ್ಟಲೆ "ನಾವು ಬಸವನಗುಡಿಯಲ್ಲಿ ಅದು ಮಾಡಿದ್ದೇವೆ, ಇದು ಮಾಡಿದ್ದೇವೆ, ಪರಿಸರ ಉಳಿಸುತ್ತಿದ್ದೇವೆ" ಎಂದು laminated paperನ brochureಗಳು ಬಂದು ಬೀಳುತ್ತಿವೆ. ಇವರು "ಪರಿಸರ ಹಬ್ಬ" ಎಂಬ ಬಸವನಗುಡಿಯ ಕಾರ್ಯಕ್ರಮ ಮಾಡಿ, ಪಟಾಕಿ ಸಿಡಿಸಿದ್ದ ಹೊಗೆ ಇನ್ನೂ ಆರಿಲ್ಲ. ಇನ್ನೇನು ಪರಿಸರ ಕಾಪಾಡ್ತಾರೋ.. ಓಟು ಕೊಟ್ಬಿಡಿ ಪಾಪ..

ಯಾವುದೋ ಚಾನೆಲ್ಲಿನಲ್ಲಿ ಶ್ರೀಮತಿ ಸುಶ್ಮಾ ಸ್ವರಾಜ್ ಅವರು ಓಟಿಗಾಗಿ ಕೆಟ್ಟ ಕನ್ನಡದಲ್ಲಿ ಮಾತನಾಡುತ್ತಿದ್ದುದು ಕೇಳಿ ಅಸಹ್ಯವಾಯಿತು. ಕೆಟ್ಟದಾಗಿದೆ ಆ ಜಾಹೀರಾತು. ಓಟು ಕೊಟ್ಟು ಇವರಿಂದ ಜನರನ್ನು ಕಾಪಾಡಿಪ್ಪಾ..

ಎಸ್ಸೆಮ್ಮೆಸ್ಸಲ್ಲಿ ಕೂಡ ಕ್ಯಾಂಪೇನ್ ಮಾಡೋಕೆ ಶುರು ಮಾಡ್ಬಿಟಿದ್ದಾರೆ. ವೋಡಾಫೋನ್‍ ಮೇಲೆ ಕೇಸು ಹಾಕೋ ಅಷ್ಟು ತಾಳ್ಮೆ ಇಲ್ಲ ನನ್ನ ಹತ್ತಿರ. ನನ್ನ ದಡ್ಡತನ, ಆ ಎಸ್ಸೆಮ್ಮೆಸ್ಸಿಗೆ "ನಿಮ್ಮಜ್ಜಿ ತಲೆ" ಅಂತ ಮರುಸಂದೇಶ ಕಳಿಸಿ ಮೂರು ರೂಪಾಯಿ ಕಳೆದುಕೊಂಡೆ.

ಹಿರಿಯ ಮಿತ್ರ ಗೋವಿಂದ್ ರಾಜ್ ಒಂದು ಟ್ರೆಕ್ಕಿನಲ್ಲಿ ಹೇಳಿದ್ದರು. ಈ ರಾಜಕಾರಣಿಗಳೆಂದರೆ ಹೇಲನ್ನು ಮೂರು ತುಂಡು ಮಾಡಿದ ಹಾಗೆ. They are all parts of same shit!!

ನನ್ನ ಕೈಗೆ ಇನ್ನೂ ಮತದಾರನ ಚೀಟಿ ಬಂದೇ ಇಲ್ಲ. ಈ ಸಲ ಬರುವ ರಾವಣನೋ ರಾಘವನೋ ಅವನಿಗೆ ನನ್ನ ಮತ ಇರುವುದಿಲ್ಲ.

-ಅ
08.05.2008
11.15PM

Sunday, May 4, 2008

ಬದುಕು ಗಂಗೆ

ಬದುಕು ಗಂಗಾನದಿ ಥರ ಇದೆ.

ಪವಿತ್ರ ಆದರೂ ಕೊಳಕುಮಯ. ಭೂತ ಪ್ರೇತಗಳನ್ನು ಹೊತ್ತಿವೆ. ಎಲ್ಲಾ ಕಶ್ಮಲಗಳನ್ನೂ ನುಂಗಿ ಅಜೀರ್ಣಿಸಿಕೊಳ್ಳುತ್ತಿದ್ದರೂ ಭಕ್ತರಿಗೇನೂ ಕಡಿಮೆಯಿಲ್ಲ. ಯಾವುದೋ ಶಿಖರದಲ್ಲಿ ಹುಟ್ಟಿ ಇನ್ಯಾವುದೋ ಸಾಗರ ಸೇರುವ ನಿಟ್ಟಿನಲ್ಲಿ ನಿರಂತರವಾಗಿ ಹರಿಯುತ್ತಲಿದೆ.

ಬತ್ತಿ ಹೋಗಲಿ ಗಂಗೆಯೊಂದು ಸಲ ತಳ ಬಿರಿದು......

-ಅ
04.05.2008
5.50AM