Wednesday, May 14, 2008

ಮೂಕಂ ಕರೋತಿ ವಾಚಾಲಂ

ಕ್ಷಿತಿಜಾನಿಸಿಕೆಯ ನೂರನೇ ಪೋಸ್ಟಿಗೆ ಒಳ್ಳೇ ಕಥಾವಸ್ತುವೆಂದು ಭಾವಿಸುತ್ತೇನೆ.

ಈ ಎಸ್ಸೆಮ್ಮೆಸ್ಸಲ್ಲಿ ಕಗ್ಗ ಶ್ಲೋಕ ಇವನ್ನೆಲ್ಲಾ ಕಳಿಸುವ ಹವ್ಯಾಸ ಎಂಥಾ ಸೊಗಸು!!

ಹೊಸ ಹವ್ಯಾಸವೆಂದರೆ ಯಾವುದಾದರೊಂದು ಶ್ಲೋಕವನ್ನು ಕನ್ನಡದಲ್ಲಿ ಬರೆಯುವುದು. ಮನಸ್ಸಿಗೆ ಒಳ್ಳೆಯ ಮುದ ನೀಡುತ್ತೆ ಈ ಹವ್ಯಾಸ. ಶ್ರೀನಿವಾಸನ ಈ ಅಂಕಣದಿಂದ ಆರಂಭವಾಗಿದ್ದು ಇದು. ಒಂದು ಬಗೆಯ ರಚನಾತ್ಮಕ ಸ್ಪರ್ಧೆಯೂ ಇತ್ತೆಂದರೆ ತಪ್ಪಾಗಲಾರದು. ವೆರಿ ಗುಡ್.

ಮೂಕಂ ಕರೋತಿ ವಾಚಾಲಂ
ಪಂಗುಂ ಲಂಘಯತೇ ಗಿರಿಂ |
ಯತ್ಕೃಪಾ ತಮಹಂ ವಂದೇ
ಪರಮಾನಂದ ಮಾಧವಂ ||

ಶ್ರೀಕಾಂತ, ಶ್ರೀನಿವಾಸ, ಲಕುಮಿ ಎಲ್ಲರೂ ಸಕ್ಕದವನ್ನು ಓದಿ, ಓದಿಸುವುದರಲ್ಲಿ ಎತ್ತಿದ ಕೈ. ಶ್ರೀಕಾಂತನಂತೂ ಅಕ್ಷರಕ್ಷರ ಬಿಡಿಸಿ ಹೇಳುವುದರಲ್ಲಿ ನಿಸ್ಸೀಮ. ಲಕುಮಿಗೆ ಕೊಂಚ ಸಂಕೋಚವಾದರೂ ತಿಳಿವಳಿಕೆಗೇನೂ ಕಮ್ಮಿಯಿಲ್ಲ. ಶ್ರೀನಿವಾಸನ ಬಗೆಯನ್ನು ಬಣ್ಣಿಸಲೇ ಬೇಕಿಲ್ಲ.

ಈ ಎಸ್ಸೆಮ್ಮೆಸ್ಸು ಗೆಳೆಯರ ಮೊಬೈಲನ್ನು ಹೊಕ್ಕಿದ್ದೇ ತಡ ಸ್ಮಿತೆಯಿಂದ ಮರುಸಂದೇಶ ಬಂದೇ ಬಿಟ್ಟಿತು. ನಾನು ಅರ್ಥವನ್ನು ನಿರೀಕ್ಷಿಸುತ್ತಿದ್ದೆ. ಆದರೆ ಸ್ಮಿತೆಯ ಸಂದೇಶ ಸೊಗಸಾಗಿತ್ತು.

ಹಾಂ ಬ್ರೀಂ ಠುಸ್
ನಿಂಗೆ ಟೈಮ್ ಪಾಸ್ ಆಗ್ತಿಲ್ಲ ಅನ್ಸತ್ತೆ
ಅದಕ್ಕೆ ತಲೇಗ್ ಬಂದಿದ್ದೆಲ್ಲಾ ಕಳಿಸ್ತಿದ್ದೀಯ.

ಒಳ್ಳೇ ಸ್ಮಿತೆ.

ಶ್ರೀಕಾಂತನ ವ್ಯಾಖ್ಯಾನ ಯಾವಾಗಲೂ ಎಲ್ಲರಿಗಿಂತಲೂ ಭಿನ್ನವಾಗಿರುತ್ತೆ. ತರ್ಕಬದ್ಧವಾಗಿಯೂ ಕೂಡ ಇರುತ್ತೆ.

ಯಾರ ಕೃಪೆಯು ಮೂಕನನ್ನು ವಾಕ್ಪಟುವಾಗಿಸಬಲ್ಲದೋ
ಕಾಲಿಲ್ಲದವನನ್ನು ಬೆಟ್ಟ ಹಾರುವಂತೆ ಮಾಡಬಲ್ಲದೋ
ಆ ಪರಮಾನಂದವೇ ಆಗಿರುವ ಮಾಧವನಿಗೆ ನಮಸ್ಕರಿಸುತ್ತೇನೆ.

ಪದ್ಯರೂಪದಲ್ಲಿ ಬರೆಯಲು ತಯಾರಿರಲಿಲ್ಲ ಶ್ರೀಕಾಂತ. ಯಾಕೆ ತರ್ಕಬದ್ಧವಾಗಿಯೂ ಇರುತ್ತೆ ಎಂದು ನಾನು ಹೇಳಿದೆನೆಂದರೆ, ಇನ್ನೊಂದು ವ್ಯಾಖ್ಯಾನ ಕೊಟ್ಟ. ಸಮಾಸವನ್ನು ಜೋಡಿಸಿದರೆ ಹೀಗಾಗುತ್ತೆಂದ.

ಯಾರ ವಾಕ್ಪಟುತ್ವವು ಕೇಳುಗರನ್ನು ಮೂಕರಾಗಿಸುತ್ತದೋ
ಯಾರು ಬೆಟ್ಟವನ್ನು ಹಾರಿಕೊಂಡೇ ದಾಟಿಸಬಲ್ಲರೋ
ಯಾರು ಮಾಧವನಿಗೆ ಪರಮಾನಂದವೇ ಆಗಿರುವನೋ
ಅಂಥಾ ದಯಾಮೂರ್ತಿಗೆ (ಹನುಮಂತನಿಗೆ) ನಮಸ್ಕರಿಸುತ್ತೇನೆ.

ಇದರ ಬಗ್ಗೆ ಬಹುಶಃ ಲಕುಮಿ ಮತ್ತು ಶ್ರೀನಿವಾಸನ ವಿವರಣೆಯಿರುತ್ತೆಂದುಕೊಂಡಿದ್ದೇನೆ.

ಲಕುಮಿಯಂತೂ ಹಳೆಗನ್ನಡದ ಕವಿತೆಯ ಶೈಲಿಯನ್ನು ಚೆನ್ನಾಗಿ ಅನುಸರಿಸಿದ್ದಾಳೆ.

ಮೆಲುನಗೆಯಿಂ ಮೂಕನಂ ವಾಗ್ಮಿಯಾಗಿಪನ
ಕರುಣದಿಂ ಕುಂಟನಂ ಬೆಟ್ಟ ದಾಂಟಿಪನ
ಪಾಪನಾಶನ, ಪರಮನಂದನನ
ವಂದಿಪೆ ನಾ ಆ ಮಾಧವನ.

ಶ್ರೀನಿವಾಸನು ನನಗೆ ಬರೆಯಲು ಹೇಳಿ, ಬರೆಯದಿದ್ದರೆ ಈ ಬಾರಿ ಪತ್ರಿಕೆಯ obituary columnನಲ್ಲಿ ನನ್ನ ಹೆಸರು ಬರುತ್ತೆಂದು ಹೇಳಿ, ಈ ಸೌಂದರ್ಯವನ್ನು ನನ್ನ ಮೊಬೈಲಿಗೆ ಕಳಿಸಿದ:

ಆವಾತನ ಕರುಣೆಯಲಿ ಮೂಗನರುಪುವನೋ
ಆವಾತನೊಲುಮೆಯಲಿ ಕುಂಟ ನಡೆಯುವನೋ
ಆ ವಾಗತೀತ ಕೃಪೆಯುಳ್ಳ ಮಾಧವನಿಗೆ
ನಾ ವಂದಿಸುವೆ ನಯದಿ - ಗಂಡಭೇರುಂಡ.

ಇನ್ನು ನನ್ನ ಸರದಿ. ಬರೆಯದಿದ್ದರೆ ಪತ್ರಿಕೆಯಲ್ಲಿ ಫೋಟೋ. ಭೀತಿಯಿಂದಲೇ ಇರುವಾಗ ಹ್ಯಾತ್‍ವೇ ವರ ಬೇರೆ ಕೊಡಬೇಕೆ, ಕರ್ಮಕಾಂಡ!! ಆದರೂ ಅರೆರಾತ್ರಿ ಸರಿ ಹೋದಮೇಲೆ ಟೈಪಿಸಿಯೇ ಬಿಟ್ಟೆ, ಈ ಸಾಲುಗಳನ್ನು. ಬರೀ ಗಂಭೀರ ಸಾಲುಗಳನ್ನೇ ನೋಡಿ ನೋಡಿ ನನಗೂ ತರಲೆಯ ಅಗತ್ಯವಿದೆಯೆನಿಸಿತು. ಮಾಧವನ ಕ್ಷಮೆಯಿರುತ್ತೆ.

ನೀ bless-ಇಸಲು ಮಾಧವನೇ
ಒಟಗುಟ್ಟುವನು dumb-ಉ
trek-ಇಸುವನು lame-ಉ
ಓ great-ಅನೇ,
ಜೋಡಿಸಿ ನನ್ನ ಬೆರಳುಗಳು five-ಉ
ನಿನಗೆ ಹೊಡೆಯುವೆನು ಮನಸಾರೆ dive-ಉ!

-ಅ
14.05.2008
11.45PM

6 comments:

 1. heLbekaaddella SMS alle heLideeni... adaralli selected content maatra illi haakideeya... modala 2 line ilve illa... mosa!!

  ReplyDelete
 2. ಶ್ರೀನಿವಾಸ ಹಾಗೂ ನಿಮ್ಮ ಕಂಗ್ಲಿಷ್ ವ್ಯಾಖ್ಯಾನ ಇಷ್ಟವಾಯಿತು...

  ತತ್ರಾಪಿ ಚ ಗಂಡಭೇರುಂಡೋವಾಚಂ ಅತ್ಯುತ್ತಮಂ :)

  ReplyDelete
 3. ಅರುಣ್,

  ನೂರನೆ ಪೋಸ್ಟಿಗೆ ಅಭಿನಂದನೆಗಳು.... :) :)

  ನಿಮ್ಮ ಕಂಗ್ಲಿಷ್ ಕವನ ಚೆನ್ನಾಗಿದೆ.
  ಶ್ರೀ,ಶ್ರೀ,ಲ ಅವರ ಕವನಗಳೂ ಚೆನ್ನಾಗಿದೆ.

  ReplyDelete
 4. lo.. ninna noorane post ge nanna hearty congratulations man.. :) heege bareetiru.. next century na innu bega complete maaDo haagaagli bhagavantaa anta aa devralli keLko :P

  PS:: aadru ninge bhaari kobbu man.. ee comment na post maaDko andre aaglilla alla ninge? irli irli.. ninna aamele vichaarskotini

  ReplyDelete
 5. mEshtre heArty congrajulations:-)

  vibbinavAgidhe I nimma 100nE posting!nimma150nE posting adashtu bega aagli !

  ReplyDelete