Saturday, June 28, 2008

ಆ ಒಂದು..

ನಮಸ್ಕಾರ ವೀಕ್ಷಕರೇ.. ಮಾರ್ನಿಂಗ್ ಕಾಫಿಗೆ ಸ್ವಾಗತ ಸುಸ್ವಾಗತ..

ಹಾಗೇನೇ, ಬೆಳಿಗ್ಗೆ ಎದ್ದು ಕಾಫಿ ಜೊತೆಗೆ ಒಂದು ಮಾಹಿತಿಗಳನ್ನು ತಿಳಿದುಕೊಳ್ಳುವ ಕಾರ್ಯಕ್ರಮ ನೋಡುವ ನಾವೆಲ್ಲಾ ಎಷ್ಟು ಭಾಗ್ಯವಂತರಲ್ಲವಾ? ನಾನಂತೂ ಭಾಗ್ಯವಂತ ಅಂತ ಎಲ್ಲೋ ಒಂದ್ ಕಡೆ ನನಗೆ ದಿನಾ ಅನ್ಸುತ್ತೆ.

ಮೇರಿ ಕ್ಯೂರಿ ಅವರ ಬಗ್ಗೆ ಮಾತಾಡ್ತಾ ಇದ್ದೆ. ಪಿಯರ್ ಕ್ಯೂರಿಗೂ ಮೇರಿ ಕ್ಯೂರಿಗೂ ಒಂದು ಗಾಢವಾದ ಪ್ರೇಮ ಮೂಡಿತ್ತು. ಆ ಒಂದು ಪ್ರಯೋಗಾಲಯದಲ್ಲಿ ಈ ಒಂದು ಪ್ರೇಮ ಪ್ರಸಂಗ ನಡೆದದ್ದೇ ರೇಡಿಯಮ್‍ನಂಥ ಒಂದು ಆವಿಷ್ಕಾರಕ್ಕೆ ಕಾರಣ ಅಂತ ಹೇಳ್ಬೋದು. ಮೇರಿ ಮತ್ತು ಪಿಯರ್ ಇಬ್ಬರೂ ಎಲ್ಲೋ ಒಂದ್ ಕಡೆ ಕಾಯಕವೇ ಕೈಲಾಸ ಅನ್ನೋ ಮಾತನ್ನು ಅರ್ಥ ಮಾಡ್ಕೊಂಡು ಕೆಲ್ಸ ಮಾಡ್ತಿದ್ರು. ಅವರ ಅಪ್ಪ ಮೇಷ್ಟ್ರು. ಮೇಷ್ಟ್ರಾಗಿದ್ದೂ ಆ ಒಂದು ಕಾಲದಲ್ಲಿ ಮೇರಿಗೆ ಒಳ್ಳೇ ಪ್ರೋತ್ಸಾಹ ಕೊಡೋಕೆ ಸಾಧ್ಯ ಆಗಿತ್ತು ಅಂತ ಹೇಳ್ದ್ರೆ ಅದು ತಪ್ಪಾಗಲಾರದು.

ಬನ್ನಿ ಈಗ ಒಂದು ಹಾಡು ನೋಡೋಣ.

ಬೆಳ್ಳಿ ಮೂಡಿತೋ ಕೋಳಿ ಕೂಗಿತೋ...
ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ.....


ಅಪ್ಪಾಜಿಯವರ ಒಂದು ಅಮೋಘ ಅಭಿನಯದ ಈ ಒಂದು ಹಾಡನ್ನು ನೋಡಿದೆವಲ್ಲಾ, ಬನ್ನಿ ಈಗ ಮೇರಿ ಕ್ಯೂರಿ ಬಗ್ಗೆ ಇನ್ನಷ್ಟು ತಿಳ್ಕೊಳೋಣ.

............................................................................

ಈ ಕಾರ್ಯಕ್ರಮ ಪ್ರತಿ ಬೆಳಿಗ್ಗೆ U2 ಅನ್ನೋ ಚಾನೆಲ್ ಅಲ್ಲಿ ಬರುತ್ತೆ. ನಾನಂತೂ ಈ "ಒಂದು" ಕಾರ್ಯಕ್ರಮವನ್ನು ತಪ್ಪಿಸೋದೇ ಇಲ್ಲ. ಬೆಳಗಾಗೆದ್ದು ಲಾಫಿಂಗ್ ಕ್ಲಬ್‍ಗಳಿಗೆ ಹೋಗುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ ಹಲವರು. ನಾನು ನನ್ನ ಲಾಫಿಂಗ್ ಕ್ಲಬ್ಬನ್ನು ಮನೆಯಲ್ಲೇ ಇಟ್ಟುಕೊಂಡಿದ್ದೇನೆ. ಅಮ್ಮನೂ ಇದಕ್ಕೆ ಸದಸ್ಯೆ. ಏಳಾದರೆ ಸಾಕು, "ಆ ಒಂದು ನೋಡಲ್ವೇನೋ?" ಅಂತಾರೆ!

ಶ್ರೀನಿಧಿಯ ಭಾಷೆಯಲ್ಲಿ ಹೇಳಬೇಕೆಂದರೆ ಇಂಥಾ ಚಾನೆಲ್ಲುಗಳ TRP ಹೆಚ್ಚಾಗುವುದೇ ನಮ್ಮಂಥವರಿಂದ.

-ಅ
28.06.2008
6.15PM

Wednesday, June 11, 2008

ಮಿಂ** ಚಾನೆಲ್

ಆತ್ಮೀಯ ಗೆಳೆಯರ ಗುಂಪೊಂದು ಹೊಸ ಯತ್ನ ಮಾಡಿ ಈಗಾಗಲೇ ಸಾಕಷ್ಟು ಯಶಸ್ಸನ್ನೂ ಗಳಿಸಿದೆ. ವಿಡಂಬನೆಯು ಇವರ ಉದ್ದಿಶ್ಯವೆಂದು ಮೇಲ್ನೋಟಕ್ಕೇ ಅರ್ಥ ಆಗಬಹುದು. ಆದರೆ ಹಾಸ್ಯಪ್ರಜ್ಞೆಯು ತನ್ನ ಉನ್ನತ ಶಿಖರವನ್ನು ತಲುಪಿದಾಗ ಇಂಥದೊಂದು ಹೊಸ ಹಾದಿಯು ಕಾಣಬರದಿರುವುದಿಲ್ಲ. ಬಹಳ ಉತ್ತಮವಾದ ಪ್ರಯತ್ನ. ಭೇಷ್ ಎಂದು ಚಪ್ಪಾಳೆ ತಟ್ಟಿ, ಬೆನ್ನು ತಟ್ಟುವುದಷ್ಟನ್ನು ಮಾತ್ರ ನಾನು ಈ ಕ್ಷಣದಲ್ಲಿ ಮಾಡಬಲ್ಲೆ. ಆದರೆ ಇದಕ್ಕಿಂತ ಹೆಚ್ಚು ಪ್ರಶಂಸೆ ಮಾಡಲು ಮನಸ್ಸಿದೆ. ಇದಕ್ಕಿಂತ ಹೆಚ್ಚು ಉಡುಗೊರೆ ಕೊಡಬೇಕೆನ್ನಿಸುತ್ತೆ. ಆದರೆ ಈ ಕ್ಷಣದಲ್ಲಿ ನಾನು ನಿಸ್ಸಹಾಯಕ.

ಈ ಗುಂಪಿನ ಹಾಸ್ಯಪ್ರಜ್ಞೆಯು ಚಿತ್ರರಂಗದವರ ಹಾಗೆ ಅನೈತಿಕವಾಗಿಲ್ಲ, 'ಪ್ರಸಿದ್ಧ' ಪತ್ರಕರ್ತರ ಹಾಗೆ ಚೀಪ್ ಆಗಿಲ್ಲ, ಹಳೆ ಕಾಲದವರಂತೆಯೂ ಇಲ್ಲ. ಇಲ್ಲಿ ಹೊಸತನವಿದೆ. ವ್ಯಂಗ್ಯವಿದೆ. ಜನರ ಜಗದ ಬಗ್ಗೆ ಯೋಚಿಸಲು ಪ್ರಚೋದಿಸುವ ಶಕ್ತಿಯಿದೆ. ವೆರಿ ಗುಡ್.

ಈ ಗುಂಪಿನಲ್ಲಿ ನಾನಿಲ್ಲವಲ್ಲವೆಂಬ ಒಂದು ಬೇಸರ ಬಿಟ್ಟರೆ ನನಗೆ ಇವರ ಬಗ್ಗೆ ಅತ್ಯಂತ ಹೆಮ್ಮೆಯಿದೆ. ಇನ್ನೂ ಒಳ್ಳೊಳ್ಳೇ 'ಶೋ'ಗಳ ನಿರೀಕ್ಷೆಯಿದೆ. ನಿರೀಕ್ಷೆಯು ಎಂದೂ ಸುಳ್ಳಾಗಲಾರದು ಎಂಬ ಭರವಸೆಯೂ ಇದೆ. ಆಲ್ ದಿ ಬೆಸ್ಟ್ ಕಣ್ರಪ್ಪಾ. ಬೆನ್ನು ತಟ್ಟಿ, ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಲು ನಾನು, ನನ್ನ ಹಾಗೆ ಹಲವರು ಇದ್ದೇವೆ. ನಿಮಗೆ ಒಳ್ಳೆಯದಾಗಲಿ.

ಈ ಇಡೀ ಲೇಖನಕ್ಕೆ ಆಧಾರ ಸ್ತಂಭವು ಇದು:

http://www.youtube.com/user/mindryin

-ಅ
12.06.2008
12.05AM

Saturday, June 7, 2008

ನನ್ನ ದನಿಗೆ ನಿನ್ನ ದನಿಯು - ಸೇರಿದಂತೆ ನಮ್ಮ ಧ್ವನಿಯುಹಿಂದಿ ಚಿತ್ರರಂಗದ ಮೊದಲ ಸಾರ್ವಭೌಮನಾಗಿ ಮೆರೆದ ಕುಂದನ್ ಲಾಲ್ ಸೈಗಲ್ ಕಾಲದಲ್ಲಿ ಈ ನಟರು ಬೇರೆ ಹಾಡುಗಾರರು ಬೇರೆ ಎಂಬ ಪರಿಕಲ್ಪನೆಯೇ ಇರಲಿಲ್ಲ. ಆತ ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಾಯಕನಾಗಿ, ಸಾಹಿತಿಯಾಗಿ, ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ ವರ್ಷಾನುಗಟ್ಟಲೆ ಬಾಲಿವುಡ್‍ನ ಆಳಿದ ಪ್ರಭಾವ ಹೇಗಿತ್ತೆಂದರೆ ಆ ಕಾಲದಲ್ಲಿ ಇನ್ನೂ ಚಿತ್ರರಂಗಕ್ಕೆ ಕಾಲಿಡುತ್ತಿದ್ದ, ಮುಂದೆ ಬೆಳೆದು ಲೆಜೆಂಡ್‍ಗಳಾದ ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಹೇಮಂತ್ ಕುಮಾರ್, ಇವರೆಲ್ಲರೂ ತಾವು ಸೈಗಲ್ ರೀತಿ ಹಾಡಬೇಕು ಎಂದೇ ತಮ್ಮ ಗುರಿಯಾಗಿಟ್ಟುಕೊಂಡಿದ್ದರು. ತನಗೆ ತಾನೇ ಹಾಡಿಕೊಳ್ಳುವ ಸಂಪ್ರದಾಯವನ್ನು ಆರಂಭಿಸಿದ್ದು ಮೊದಲು ಸೈಗಲ್ - ಬಾಲಿವುಡ್‍ನ ಪ್ರಪ್ರಥಮ ಸೂಪರ್ ಸ್ಟಾರ್.ನಂತರದ ದಿನಗಳಲ್ಲಿ ಪ್ಲೇಬ್ಯಾಕ್ ಸಿಂಗಿಂಗ್ ಶುರುವಾಯಿತು. ಬಹಳ ಜನಕ್ಕೆ ಗೊತ್ತಿಲ್ಲ, ಕಿಶೋರ್ ಕುಮಾರ್‍ ಎಂಬ ಮಹಾನ್ ಗಾಯಕನ ಆರಂಭದ ದಿನಗಳಲ್ಲಿ ಅವನಿಗೆ ಮೊಹಮ್ಮದ್ ರಫಿ ಹಾಡುತ್ತಿದ್ದ. ನಮ್ಮಲ್ಲಿ ರಾಜ್‍ಕುಮಾರ್‍ರಂಥ ಅಪ್ರತಿಮ ಗಾಯಕರಿಗೂ ಹಿಂದೆ ಪ್ಲೇಬ್ಯಾಕ್ ಸಿಂಗರುಗಳಿರಲಿಲ್ಲವೇ? ಹಾಗೆಯೇ ರಫಿಯು ನಟ ಕಿಶೋರ್ ಕುಮಾರ್‍ಗೆ ಹಾಡುತ್ತಿದ್ದ. ಮುಂದೆ ಕಿಶೋರ್ ಕುಮಾರ್ ತಾನೇ ಹಾಡಿಕೊಳ್ಳಲು ಶುರು ಮಾಡಿದ. ಮೊಹಮ್ಮದ್ ರಫಿಯ ಧ್ವನಿ ಆಗ ಹೇಳಿ ಮಾಡಿಸಿದಂತೆ ಕುಳಿತಿದ್ದು ದೇವ್ ಆನಂದ್ ಎಂಬ ಹುಡುಗನ ಮುಖಕ್ಕೆ.ಹೇಮಂತ್ ಕುಮಾರ್ ಮತ್ತು ಎಸ್.ಡಿ. ಬರ್ಮನ್ ಸಂಗೀತ ನಿರ್ದೇಶನದಲ್ಲಿ ದೇವ್ ರಫಿ ಜೋಡಿಯಲ್ಲಿ ಬೇಕಾದಷ್ಟು ಹಾಡುಗಳು ಜನರ ಮನಸೆಳೆದವು. ಈ ಕಾಲದಲ್ಲಿ ಕಿಶೋರ್ ಕುಮಾರ್ ಹಾಡುತ್ತಿದ್ದ, ಆದರೆ ತನ್ನ ನಟನೆಯಿರುವ ಚಿತ್ರದಲ್ಲಿ ಮಾತ್ರ. ಬೇರೆ ಯಾರ ಅಭಿನಯದಲ್ಲೂ ಅಷ್ಟು ಹುಚ್ಚುತನವಿರಲಿಲ್ಲ.ಕಿಶೋರ್ ಕುಮಾರ್ ಬೇರೆ ನಟರಿಗೆ ಹಾಡಲು ಆರಂಭಿಸಿದ ದಿನದಿಂದಲೇ ರಫಿಗೆ ಒಬ್ಬ ನಿಜವಾದ ಸ್ಪರ್ಧಿಯಾಗಿದ್ದ. ಆದರೂ ಜನ ಇಬ್ಬರನ್ನೂ ಅಷ್ಟೇ ಆದರ ಮತ್ತು ಪ್ರೀತಿಯಿಂದ ಸ್ವೀಕರಿಸಿದರು. ಮುಂದೆ ಎಪ್ಪತ್ತರ ದಶಕದಲ್ಲಿ ಇಬ್ಬರ ಸ್ಪರ್ಧೆ ಬಹಳ ಎತ್ತರಕ್ಕೆ ಹೋಯಿತು. ಎಷ್ಟೆಂದರೆ ಒಂದೇ ಚಿತ್ರದಲ್ಲಿ ಒಂದೇ ಹಾಡನ್ನು ಇಬ್ಬರೂ ಹಾಡಿದ್ದು ಎಷ್ಟೋ ಉದಾಹರಣೆಗಳಿವೆ.

Tum bin jaaoon kahaan...
ದೇವ್ ಆನಂದ್ ಮತ್ತು ಕಿಶೋರ್ ಕುಮಾರ್ ತುಂಬಾ ಹತ್ತಿರದ ಗೆಳೆಯರೆಂದು ದೇವ್ ಆನಂದನು ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾನೆ. ರಫಿಯಾದರೋ ಹಿರಿಯ ಗಾಯಕ. ಮೇಷ್ಟ್ರಿದ್ದ ಹಾಗೆ. ಅಷ್ಟು ಸಲಿಗೆಯಿಲ್ಲ. ದೇವ್ ಆನಂದ್ ಅಭಿನಯಕ್ಕೆ ಕಿಶೋರ್ ಧ್ವನಿ ಹೆಚ್ಚು ಹೆಚ್ಚು ಕೂಡಿತು. ಬಹಳ ಪ್ರಸಿದ್ಧಿಯನ್ನೂ ಸಹ ಪಡೆಯಿತು, ದೇವ್-ಕಿಶೋರ್ ಜೋಡಿ. ಆಗ ರಫಿಯ ಧ್ವನಿ ಹೋಗಿ ಸೇರಿಕೊಂಡಿದ್ದು ಶಮ್ಮಿ ಕಪೂರ್‍ನನ್ನು! ಈಗಲೂ ರಫಿಯ ಹಾಡುಗಳನ್ನು ಕೇಳಿದರೆ ರಫಿಯ ಮುಖ ನೆನಪಾಗುವುದೇ ಇಲ್ಲ, ಶಮ್ಮಿ ಕಪೂರ್ ಮುಖವೇ ನೆನಪಾಗುತ್ತೆ. ಅಷ್ಟರ ಮಟ್ಟಿಗೆ ಇವರಿಬ್ಬರ ಜೋಡಿ ಪ್ರಭಾವ ಬೀರಿದೆ. ಶಮ್ಮಿ ನಟಿಸುವುದನ್ನು ಬಿಟ್ಟು ಕಾವಿ ತೊಡುವ ದಿನದವರೆಗೂ ಇವರಿಬ್ಬರ ಜೋಡಿಯನ್ನು ಎಲ್ಲರೂ ಕೊಂಡಾಡಿದರು.ದಿನಗಳುರುಳಿದಂತೆ ಎವರ್ ಗ್ರೀನ್ ಹೀರೋ ದೇವ್ ಆನಂದ್‍ನನ್ನು ಮೀರಿಸಿದ, ಮತ್ತು ಅಂದಿನಿಂದ ಇಂದಿನವರೆಗೂ ಯಾರೂ ಅಷ್ಟು ಮೆರೆಯಲು ಸಾಧ್ಯವೇ ಆಗಲಿಲ್ಲವೆಂಬ ನಟ ಪರದೆಯ ಮೇಲೆ ಬಂದ. ಈಗಿನ ಶಾಹ್‍ರುಖ್ ಆಗಲೀ, ಬಚ್ಚನ್ ಆಗಲೀ ಇಷ್ಟು ಮೆರೆದಿರಲು ಸಾಧ್ಯವೇ ಇಲ್ಲ. ಚೆಲುವ ಕೂಡ. ಆತ ರಾಜೇಶ್ ಖನ್ನಾ ಅಲ್ಲದೆ ಬೇರೆ ಯಾರೂ ಆಗಿರುವುದಕ್ಕೆ ಸಾಧ್ಯವಿಲ್ಲ. ರಾಜೇಶ್ ಖನ್ನಾ ಕಾಲದಲ್ಲಿ ಚಿತ್ರಕಥೆಗಳು ಎಷ್ಟು ಮಧುರಮಯವಾಗಿತ್ತೋ ಸಂಗೀತ ನಿರ್ದೇಶನ ಕೂಡ ಹಾಗೇ ಇತ್ತು. ಹಾಡು ಬರೆಯುವವರೂ ಕೂಡ ಅಷ್ಟೇ ಪರಿಣತರಾಗಿದ್ದರು. ಎಸ್.ಡಿ. ಬರ್ಮನ್, ಆರ್.ಡಿ. ಬರ್ಮನ್, ಶಂಕರ್ ಜೈಕಿಶನ್, ಓ.ಪಿ.ನಯ್ಯರ್ - ಇಂಥಾ ಘಟಾನುಘಟಿಗಳು ತಮ್ಮ ಉನ್ನತ ಶಿಖರದಲ್ಲಿದ್ದ ಕಾಲದಲ್ಲಿ ರಾಜೇಶ್ ಖನ್ನಾ ಮತ್ತು ಕಿಶೊರ್ ಧ್ವನಿ ಎರಡೂ ಒಂದೇ ಎಂದು ಭಾಸವಾಗುವಂತಾಯಿತು.ಇವೆಲ್ಲಾ ಚಿತ್ರರಂಗದ ಒಂದು ದಿಕ್ಕಿನಲ್ಲಿ ಸಾಗುತ್ತಿದ್ದರೆ, ಇನ್ನೊಂದು ದಿಕ್ಕಿನಲ್ಲಿ ಈ ಯಾರ ಹಂಗೂ ಇಲ್ಲದೆ ಮೊದಲಿಂದ ಕೊನೆಯವರೆಗೂ, ಇಪ್ಪತ್ತೈದು ವರ್ಷಗಳೂ ಒಟ್ಟಿಗೆ ಇದ್ದ ಜೋಡಿಯೊಂದು ಎಲ್ಲರ ಮನಸೂರೆಗೊಂಡಿತ್ತು. ರಾಜ್ ಕಪೂರ್ ಮತ್ತು ಮುಖೇಶ್ ಜೋಡಿಯನ್ನು ಯಾರು ತಾನೇ ಮರೆಯಲಾದೀತು? ರಾಜ್ ಕಪೂರನೇ ಹೇಳಿದಂತೆ, "ನಾನು ಇಲ್ಲಿದ್ದೇನಷ್ಟೆ. ನನ್ನ ಧ್ವನಿ ಅಲ್ಲಿ ನಿಂತಿದೆ ನೋಡಿ..." ಮುಖೇಶನು ಬದುಕಿರುವವರೆಗೂ ರಾಜ್‍ಕಪೂರ್‍ಗೆ ಧ್ವನಿಯಾಗಿದ್ದ. ಇವರಿಗೆ ದಾರಿದೀಪವಾಗಿ ಶಂಕರ್ ಜೈಕಿಶನ್ ಸದಾ ಇರುತ್ತಿದ್ದರು.ರಾಜೇಶ್ ಖನ್ನಾ ಕಾಲ ಮುಗಿದಿದ್ದು ಎಪ್ಪತ್ತರ ದಶಕದ ಅಂತ್ಯದಲ್ಲಿ. ಆಗ ಕಿಶೋರ್ ಕುಮಾರ್ ಧ್ವನಿಯು ರಾಜೇಶ್ ಖನ್ನಾ‍ನಿಂದ ಅಮಿತಾಭ್ ಬಚ್ಚನ್‍ಗೆ ವರ್ಗವಾಯಿತು. ಎಸ್.ಡಿ. ಬರ್ಮನ್ ಸತ್ತು ಹೋಗಿದ್ದ. ಹೇಮಂತ್ ಕುಮಾರ್, ಓ.ಪಿ.ನಯ್ಯರ್ ಎಲ್ಲಾ ನಿವೃತ್ತರಾಗಿದ್ದರು. ಆರ್.ಡಿ. ಬರ್ಮನ್ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದ. ಮೊಹಮ್ಮದ್ ರಫಿ, ಮನ್ನಾ ಡೇ, ಅಂಥವರೇ ಅವಕಾಶಗಳಿಗೆ ಪರದಾಡುತ್ತಿದ್ದರು. ಬಪ್ಪಿ ಲಹರಿಯಂಥವರು ಮೆರೆಯಲೂ ಶುರು ಮಾಡಿದರು. ಅರವತ್ತನೆಯ ಇಸವಿಯ ಕಿಶೋರನ ಹಾಡುಗಳಿಗೂ ಎಂಭತ್ತರ ದಶಕದ ಕಿಶೋರನದೇ ಹಾಡುಗಳಿಗೂ ಅಜಗಜಾಂತರ! ಹುಚ್ಚು ಹುಚ್ಚಾಗಿ ಹಾಡುವುದನ್ನು ಕಿಶೋರ್ ರಾಜೇಶ್ ಖನ್ನಾ era ಮುಗಿಯುವ ಕಾಲಕ್ಕೇ ಬಿಟ್ಟು ಬಿಟ್ಟಿದ್ದ. ಗಂಭೀರವಾದ ಹಾಡುಗಳು ಅವನ ಪಾಲಿಗಾಗಿತ್ತು. ಅಮಿತಾಭ್ ಬಚ್ಚನ್‍ಗೆ ಕಿಶೋರನ ಧ್ವನಿ ಹೇಳಿ ಮಾಡಿಸಲಾಗಿತ್ತು. ಕಿಶೋರ್ ಕುಮಾರ್ ಇರುವವರೆಗೂ ಬೇರೆ ಗಾಯಕರು ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಳ್ಲಲಾಗಲಿಲ್ಲ. ಇಂದಿಗೂ ಅಮಿತಾಭ್ ಬಚ್ಚನ್‍ಗೆ ಕಿಶೋರನ ಧ್ವನಿಯಷ್ಟು ಚೆನ್ನಾಗಿ ಬೇರೆ ಧ್ವನಿ ಹೋಲಿಕೆಯೇ ಆಗುವುದಿಲ್ಲವೆಂಬುದು ಸತ್ಯವಷ್ಟೆ.ಲತಾ ಮಂಗೇಶ್ಕರ್ ಮತ್ತು ಆಶಾ ಭೋನ್ಸ್ಲೇ ಮಾತ್ರ ಈ ರೀತಿ ಯಾವುವೇ ಛಾಪುಗಳನ್ನು ನಟಿಯರೊಡನೆ ಸ್ಥಾಪಿಸಿಕೊಳ್ಳಲಿಲ್ಲ. ಅವರಿಬ್ಬರದು ಸಾರ್ವಭೌಮತನವಿದ್ದ ಹಾಗೆ. ನಲವತ್ತನೆಯ, ಐವತ್ತನೆಯ, ಅರವತ್ತನೆಯ, ಮತ್ತು ಎಪ್ಪತ್ತನೆಯ ಕೊನೆಗೆ ಎಂಭತ್ತರ ದಶಕವನ್ನೂ ಸೇರಿಸಿ ಎಲ್ಲಾ ನಟಿಯರಿಗೂ ಈ ಇಬ್ಬರೂ ಗಾಯಕಿಯರು ಹಾಡಿದ್ದಾರೆ. ಜೊತೆಗೆ ಇವರಿಗೆ ಸ್ಪರ್ಧಿಯಾಗಿದ್ದ ಸುರಯ್ಯಾ, ಗೀತಾ ದತ್ ಅಂಥವರನ್ನು ಸೋಲಿಸಿ, ಹೊಸ ಗಾಯಕಿಯರೂ ಸಹ ಚಿತ್ರರಂಗಕ್ಕೆ ಕಾಲಿಡಲು ಅಂಜುವಂತೆ ಮಾಡಿದ್ದ ಕೀರ್ತಿ ಇವರಿಬ್ಬರಿಗೆ ಸಲ್ಲುತ್ತೆ.ಅರವತ್ತರ ನಂತರ ಸುಮಾರು ಮೂವತ್ತು ವರ್ಷ ಇವರಿಬ್ಬರೆದುರು ನಿಲ್ಲುವವರೂ ಇರಲಿಲ್ಲ. ಹೆಣ್ಣು ಧ್ವನಿಯೆಂದರೆ ಅದು ಲತಾ ಆಗಿರಬೇಕು ಇಲ್ಲವೇ ಆಶಾ ಆಗಿರಬೇಕಷ್ಟೆ. ಇವರಿಬ್ಬರಿಗೂ ತೀರ ವಯಸ್ಸಾದ ಮೇಲೆಯೇ ಕವಿತಾ ಕೃಷ್ಣಮೂರ್ತಿಯಾಗಲೀ ಅಲ್ಕಾ ಯಾಗ್ನಿಕ್ ಆಗಲೀ ಹಾಡಲು ಬಂದಿದ್ದು, ಹೆಸರು ಗಳಿಸಿದ್ದು.ಕಿಶೋರ್ ಕುಮಾರ್ ಸತ್ತ ನಂತರ ಬಂದ ಗಾಯಕರ ಬಗ್ಗೆ ಅಷ್ಟೇನೂ ಆಸಕ್ತಿಯಿಲ್ಲ ನನಗೆ. ಉದಿತ್ ನಾರಾಯಣ್ ಆಮೀರ್ ಖಾನ್ ಜೋಡಿ ಕೆಲಕಾಲ ಪ್ರಸಿದ್ಧವಾಗಿತ್ತಾದರೂ ಆ ಮಟ್ಟದಲ್ಲಿ ಹೆಸರು ಮಾಡಲಿಲ್ಲ. ಸಲ್ಮಾನ್ ಖಾನ್ (ಈ ಹೆಸರು ಬರೆಯಲು ನನಗೆ ಮನಸ್ಸಿಲ್ಲ, ಆದರೂ ಬರೆದೆ) ಕೂಡ ಎಸ್.ಪಿ.ಬಾಲಸುಬ್ರಮಣ್ಯಂ ಧ್ವನಿಗೆ ಅಭಿನಯವನ್ನು ಹೊಂದಿಸಿಕೊಂಡುಬಿಟ್ಟಿದ್ದ. ಶಾಹ್‍ರುಖ್ ಖಾನನು ಕುಮಾರ್ ಸಾನು ಮತ್ತು ಅಭಿಜಿತ್‍ರ ಧ್ವನಿಗೆ ತನ್ನ ಅಭಿನಯವನ್ನು ಟ್ಯೂನ್ ಮಾಡಿಕೊಂಡಿದ್ದ. ಇವೆಲ್ಲಾ ಯಾವುದೂ ಅಂಥ ಹೇಳಿಕೊಳ್ಳುವಂಥದ್ದೇನಲ್ಲ ಅನ್ನಿಸುತ್ತೆ ನನಗೆ. ಅಲ್ಪಾಯುಷಿಗಳೆನಿಸುತ್ತೆ.
ಬೆಳಿಗ್ಗೆಯಿಂದ ಹಳೆಯ ಹಾಡನ್ನು ಕೇಳುತ್ತಿದ್ದ ನನಗೆ ಎಲ್ಲಾ ಗಾಯಕರುಗಳಿಗೂ, ನಟ ನಟಿಯರಿಗೂ ಒಂದು ನಮನ ಸಲ್ಲಿಸಬೇಕೆನಿಸಿತು. ಅದಕ್ಕಾಗಿ ಬರೆದನಷ್ಟೆ. ಇಲ್ಲಿ ಎಲ್ಲರನ್ನೂ ಏಕವಚನದಲ್ಲಿ ಹೆಸರಿಸಿರುವುದು ಅವರುಗಳ ಮೇಲಿನ ಪ್ರೀತಿಯಿಂದಷ್ಟೆ, ಅಗೌರವದಿಂದಲ್ಲ. ಅವರುಗಳ ಹಾಡುಗಳೆಲ್ಲವೂ ಮನದೊಳಗೆ ಮನೆ ಮಾಡಿಬಿಟ್ಟಿವೆ. ಜಗತ್ತಿಗೆ, ಜನಕ್ಕೆ, ನನ್ನಂಥವರಿಗೆ ಬೆಲೆಕಟ್ಟಲಾರದ ಉಡುಗೊರೆಯನ್ನು ಅಂದಿನವರು ಕೊಟ್ಟಿದ್ದಾರೆ. ಎಲ್ಲರಿಗೂ ಚಿರಋಣಿ. ಈ ಬರಹವು ಎಲ್ಲ ಕಲಾವಿದರಿಗೂ ಅರ್ಪಿತವಾಗಿದೆ.

-ಅ
07.06.2008
11.25AM

Monday, June 2, 2008

ಹೀಗಾಗಬಾರದಿತ್ತು

ಸಿಟ್ಟು ಒಳ್ಳೆಯದಂತೆ

ಆ ಹುಡುಗಿ ನನ್ನ ಹತ್ತಿರ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದಳು. ಕಳೆದವಾರ ತಾನೇ ಮನೆಗೆ ಬಂದು ಮದುವೆ ಮುಗಿಸಿಕೊಂಡು ಪಾಠಕ್ಕೆ ಬರ್ತೀನಿ ಎಂದು ಅವಳು ಹೇಳಿದ್ದಾಗ, ಅವಳು, ಆ ಹುಡುಗಿ ಅಶ್ವಿನಿ, ನಾಲ್ಕನೆಯ ತರಗತಿಯ ಚಿಕ್ಕ ಹುಡುಗಿಯೆಂಬುದನ್ನೂ ಮರೆತು ಅವಳ ಮೇಲೆ ಗುಡುಗಿದ್ದೆ.

“ಬರೀ, ಇಷ್ಟೇ ಆಯಿತು ನಿಂದು, ಮದುವೆ ಮುಂಜಿ ಅಂದುಕೊಂಡು ತಿರುಗಾಡ್ತಾ ಇರು. ಓದ್ಕೋಬೇಡ!”

ಹಾಗೆ ಸಿಟ್ಟು ಮಾಡಿಕೊಳ್ಳುವ ಅಧಿಕಾರವೂ ನನಗಿತ್ತು. ಅವಳಿಗೆ ಪಾಠ ಹೇಳುವ ಟೀಚರು ನಾನು ಎಂಬುದು ಒಂದಾದರೆ, ಇನ್ನೊಂದು, ತುಂಬು ಬಡತನದ ಮನೆಯಲ್ಲಿ ಹುಟ್ಟಿದ್ದ ಅವಳಿಗೆ ಓದಲು ಬರೆಯಲು ಪುಸ್ತಕ, ಚೀಲ, ಶಾಲೆಯ ಸಮವಸ್ತ್ರ ಎಲ್ಲವನ್ನೂ ಕೊಡಿಸಿದ್ದೆ. ಅವೆಲ್ಲಾ ವ್ಯರ್ಥವಾಗಬಾರದೆಂಬ ಧೋರಣೆಯು ಸಹ ನನ್ನಲ್ಲಿದ್ದುದರಿಂದ ಹಾಗೆ ಸಿಟ್ಟು ಮಾಡಿಕೊಂಡ ನಟನೆಗೈದೆ. ಆರೋಗ್ಯಕರವಾದ ಸಿಟ್ಟು ಒಳ್ಳೆಯದಂತೆ.

ಅವಳ ಮನೆ

ಭೀತಿಯಿಂದ ಅವಳ ಮನೆಯನ್ನು ಹೊಕ್ಕೆ. ಕಳೆದ ಎರಡು ತಿಂಗಳಿಂದ ಸಾವು, ನೋವು, ಸೋಲು, ಹಿಂಸೆಯನ್ನು ನೋಡಿ ಕೇಳಿ ಅನುಭವಿಸಿ ತೇಜೋವಧೆಯಾದಂತಿದ್ದ ಅಳುಕಿದ ಮನಸ್ಸಿನಿಂದಲೇ ಅವಳ ಮನೆಯ ಬಾಗಿಲನ್ನು ತಟ್ಟಿದೆ.

ಆ ಹುಡುಗಿ ಮನೆಯ ಹಾಲ್‌ನಲ್ಲೇ ಚಾಪೆಯ ಮೇಲೇ ಮಲಗಿದ್ದಳು.

ತಪ್ಪು. ಆ ಹುಡುಗಿಯನ್ನು ಆ ಚಾಪೆಯ ಮೇಲೆ ಮಲಗಿಸಿದ್ದರು ಅವರ ಮನೆಯವರು.

ಅದೂ ತಪ್ಪು. ಆ ಹುಡುಗಿಯ ಶವವನ್ನು ಆ ಚಾಪೆಯ ಮೇಲೆ ಇಟ್ಟಿದ್ದರು ಅವರ ಮನೆಯವರು.

ಆ ಹುಡುಗಿಯ ತಂದೆ ಮನೆಯ ಸೂರನ್ನೇ ನೋಡುತ್ತಾ ಕುಳಿತಿದ್ದರು. ತಾಯಿ ತಲೆಗೆದರಿಕೊಂಡು ಅಳುತ್ತಿದ್ದರು. ನನ್ನ ಕಂಡ ಕ್ಷಣವೇ ಬಳಿ ಬಂದು,

“ಊರಿಂದ ಬಂದ ತಕ್ಷಣ ಪಾಠಕ್ಕೆ ಹೋಗ್ಬೇಕುಮ್ಮಾ, ಇಲ್ಲಾಂದ್ರೆ ಬೈತಾರೆ ಅಂತಿದ್ಲು, ಈಗ ಯಾವ್ ಪಾಠಕ್ಕೆ ಕಳಿಸಲಿ?” ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಹೆಗಲ ಮೇಲೆ ತಲೆಯಿಟ್ಟರು. ನಾನು ಸಮಾಧಾನ ಹೇಗೆ ಮಾಡಲಿ? ಬಲಕ್ಕೆ ತಿರುಗಿದೆ. ಆ ಹುಡುಗಿಯ ಅಜ್ಜಿಯನ್ನು ಮಂಚದ ಮೇಲೆ ಮಲಗಿಸಿದ್ದರು. ಮಂಡಿಯಿಂದ ಕೆಳಗೆ ಎರಡು ಕಾಲೂ ಮುರಿದುಬಿಟ್ಟಿತ್ತು. ಪಕ್ಕದಲ್ಲೇ ಇನ್ನೊಂದು ಮಂಚ, ಆ ಹುಡುಗಿಯ ಇನ್ನೊಬ್ಬ ಅಜ್ಜಿಯ (ಈ ಅಜ್ಜಿಯ ತಂಗಿ) ತೊಡೆಯ ಮೂಳೆ ಮುರಿದು ನಡೆಯಲಾರದಂತಾಗಿ ಮಲಗಿಸಿದ್ದರು. ಎಲ್ಲರ ಕಣ್ಣಲ್ಲೂ ನೀರು. ನನ್ನ ಕಣ್ಣಲ್ಲಿ ಬಂದ ಕೇವಲ ಒಂದೆರಡು ಹನಿಗಳನ್ನು ಹಾಗೇ ಒರೆಸಿಕೊಂಡುಬಿಟ್ಟೆ. ಎರಡು ತಿಂಗಳುಗಳ ಕೆಳಗಾಗಿದ್ದರೆ ನಾನೂ ಇವರೊಡನೆ ಅಳುತ್ತಾ ಕುಳಿತಿರುತ್ತಿದ್ದೆನೇನೋ ಅನ್ನಿಸುತ್ತೆ.

ಇನ್ನೂ ಭೀಕರ

ಇವರ ಮನೆಯಿರುವ ಬೀದಿಯು ಸ್ಮಶಾನವೇ ಆಗಿದ್ದಂತಿತ್ತು. ಎದುರು ಮನೆಯಲ್ಲಿ ಇಬ್ಬರು ಹೋಗ್ಬಿಟ್ಟಿದ್ರು. ಎದುರು ಮನೆಂii ಪಕ್ಕದಲ್ಲಿ ಒಂದು ಹೆಂಗಸು, ಅವರ ಪಕ್ಕದ ಮನೆಯಲ್ಲಿ ಮೂರು ಜನ, ಈ ಅಶ್ವಿನಿ ಮನೆಯ ಎಡಗಡೆ ಪಕ್ಕದ ಮನೆಯವರೆಲ್ಲರೂ ಹೋಗಿಬಿಟ್ಟಿದ್ದರು ಶವಗಳನ್ನು ಒಂದೇ ಸಾವಾಗಿದ್ದ ಬಲಗಡೆಯ ಪಕ್ಕದ ಮನೆಯಲ್ಲಿರಿಸಿದ್ದರು. ಬೀದಿಯ ಕೊನೆಯ ಮನೆಯಲ್ಲಂತೂ ಏಳು ಜನ ಸತ್ತುಹೋಗಿದ್ದರು. ಆ ಮನೆಯಲ್ಲಿದ್ದುದೇ ಎಂಟು ಜನ. ಕಾಲೇಜು ಹುಡುಗ ಒಬ್ಬನೇ ಕೂತು ಎಲ್ಲರ ಶವಗಳನ್ನೂ ನೋಡುತ್ತಿದ್ದ.

“ನಾನು ಆ ತೋಟದ ಮಾಲೀಕ. ಇಷ್ಟು ಜನ ನನ್ನ ತೋಟದಲ್ಲಿ ಸತ್ತು ಹೋಗಿದ್ದಾರೆ. ನಾನು ಆ ತೋಟವನ್ನು ಮಾರಿಬಿಡುತ್ತೇನೆ. ಅಲ್ಲಿ ದಯ್ಯ ಇದೆ. ಪ್ರತಿ ವರ್ಷಾನೂ ಹೀಗೇ ಆಗುತ್ತೆ. ಹೋದ ವರ್ಷ ಮುವ್ವತ್ತು ಜನ ಸತ್ತು ಹೋಗಿದ್ರು. ಆ ದಯ್ಯಕ್ಕೆ ವರ್ಷವರ್ಷವೂ ಬಲಿಯಾಗಬೇಕು.” ಎಂದು ಹೇಳಿದವನು ತೋಟದ ಮಾಲೀಕ.

ನಾನು, “ಹೇಗಾಯಿತು ಇದೆಲ್ಲಾ?” ಎಂದು ಕೇಳುವ ಅವಷ್ಯಕತೆಯಿರಲಿಲ್ಲ. ಎಲ್ಲಾ ದಿನಪತ್ರಿಗಳ ಮುಖಪುಟದಲ್ಲೇ ಪ್ರಕಟಿತವಾಗಿತ್ತು. ಆದರೂ ಕೇಳಿದೆ.

ಅವನು ಗದ್ಗದಿಸುತ್ತಲೇ ಹೇಳಿದ.

“ಲಾರಿಯಲ್ಲಿ ಅರವತ್ತು ಜನ ಹೋಗುತ್ತಿದ್ದರು, ಕರೆಂಟ್ ವೈರನ್ನು ನೋಡಿದವರೇ ಕೂಗಲು ಆರಂಭಿಸಿದರು ತಮಗೆ ತಾಕುತ್ತೆ ಅಂತೆ. ಡ್ರೈವರು ಲಾರಿಯನ್ನು ನಿಲ್ಲಿಸಿ, ರಿವರ್ಸ್ ತೆಗೆದುಕೊಂಡ. ಅಷ್ಟೊಂದಾ ರಿವರ್ಸ್ ಬರೋದು? ಏರಿಯ ಕೆಳಗಿದ್ದ ನನ್ನ ತೋಟದೊಳಕ್ಕೆ ಮೊಗುಚಿ ಬಿದ್ದೇ ಬಿಟ್ಟಿತು ಲಾರಿ. ಮೂರು ಪಲ್ಟಿ ಹೊಡೆದದ್ದನ್ನು ನಾನು ನೋಡಿದೆ. ಇಂಥಾ ಕೆಟ್ಟ ದೃಶ್ಯಾನ ನಾನು ಇದೇ ಮೊದಲು ನೋಡಿದ್ದು.”

ಇಬ್ಬರು ಹುಡುಗರು ಬಂದರು. ಮಾಲೀಕನ ಕೆಲಸಗಾರರು.

“ನೀವ್ ಬಂದಿದ್ರಲ್ಲಾ, ಆ ಮನೆ ಹುಡುಗಿ ಇನ್ನೂ ಬದುಕಿತ್ತು. ತೆಂಗಿನ ಮರದ ಮೇಲೆ ಸಿಕ್ಕಿಕೊಂಡುಬಿಟ್ಟಿತ್ತು. ಎಲ್ಲರನ್ನೂ ಆಚೆ ತೆಗೆದ ಮೇಲೆ ಆ ಮಗಿ ಮೇಲಿಂದಾನೇ ಕೈ ಆಡಿಸ್ತು. ಮರ ಹತ್ತಕ್ಕೆ ನಮ್ಗೆ ದಿಗಿಲಾಯ್ತು, ಆದ್ರೂ ಹತ್ತಿ ಕೆಳಕ್ಕಿಳ್ಸ್ದ್ವಿ. ಮುಖಕ್ಕೆ ನೀರ್ ಹಾಕಿ, ಒಂದು ಗುಟುಕು ನೀರು ಕುಡಿಸೋ ಅಷ್ಟ್ರಲ್ಲಿ ಹೋಗ್ಬಿಡ್ತು ಮಗಿ.” ಎಂದ ಆ ಕೆಲಸಗಾರರಲ್ಲೊಬ್ಬ.

ಛೆ! ಹೀಗಾಗಬಾರದಿತ್ತು..

ಅಂದು ಅರಕಲಗೂಡಿನ ಬಸವನಹಳ್ಳಿ (ಬಸವೇನಹಳ್ಳಿ)ಯಲ್ಲಿ ಮದುವೆಗೆಂದು ಹೊರಟ ಅರವತ್ತು ಜನರನ್ನು ಹೊತ್ತ ಲಾರಿಯು ಕೆಳಗುರುಳಿ, ಪಲ್ಟಿ ಹೊಡೆದು ಮೂವತ್ತು ಜನರ ಜೀವವನ್ನು ಬಲಿ ತೆಗೆದುಕೊಂಡು, ಮಿಕ್ಕವರ ಅಂಗಗಳನ್ನು ಬಲಿ ತೆಗೆದುಕೊಂಡಿತು. ಅಂಗಳದಲ್ಲಿ ಆಟವಾಡುತ್ತಿದ್ದ ಹುಡುಗಿ, ನನ್ನ ವಿದ್ಯಾರ್ಥಿನಿ, ನಾಲ್ಕನೇ ಕ್ಲಾಸಿನ ಅಶ್ವಿನಿ ತಾನು ಮದುವೆಗೆ ಬರಲ್ಲ ಎಂದು ಎಷ್ಟು ಹೇಳಿದರೂ ಕೇಳದೆ ಮನೆಯವರು ಬಲವಂತ ಮಾಡಿ ಕರೆದುಕೊಂಡು ಹೋಗಿ, ಕೊನೆಗೆ ಹೀಗಾಯಿತು. ಇದು ಆಪಾದನೆಯಷ್ಟೆ. ಆದರೆ ಆ ಹುಡುಗಿಯ ಸಾವು ಅಲ್ಲಿ ಬರೆದಿತ್ತೆಂಬುದು ವಿಧಿಯಾಟ. ಅಂದು ಅಲ್ಲಿ ಮಡಿದವರ ಎಲ್ಲರ ವಿಧಿಯೂ ಹಾಗೇ.

ಮದುವೆಗೋ ಮಸಣಕೋ, ಅವನು ಪೇಳ್ದ ಕಡೆಗೋಡು.. ಎಂದು ಕಗ್ಗದಲ್ಲಿ ಹೇಳಿರುವಂತೆ, ಅವರು ಮದುವೆಗೆಂದು ಹೊರಟವರು ವಿಧಿಯೆಂಬ ಸಾಹೇಬನ ಆಣತಿಯಂತೆ ಮಸಣಕ್ಕೆ ಹೊರಡುವಂತಾಯ್ತು.

ಮಾನವರಾಗಿ ನಾವು “ಛೆ! ಹೀಗಾಗಬಾರದಿತ್ತು” ಎನ್ನಲು ಸಾಧ್ಯವಷ್ಟೆ. ಮೃತರ ಮನೆಯವರಿಗೆ ಧೈರ್ಯ ದೊರಕಿಸಿಕೊಡಲಿ ವಿಧಿಸಾಹೇಬ.

ಈ ಇಡೀ ಪ್ರಸಂಗವನ್ನು ನನ್ನ ಮುಂದೆ ತೋಡಿಕೊಂಡ ರೇಖಾಳ ಕಣ್ಣಲ್ಲಿ ಮತ್ತೆ ಎರಡು ಹನಿ ಮೂಡಿತ್ತು. ಈಗ ಆ ಹನಿಗಳನ್ನು ನಾನು ಒರೆಸಿದೆ..

-ಅ
02.06.2008
11AM