Monday, July 21, 2008

ಕನ್ನಡದ ದನಿ
ರಾಜ್‍ಕುಮಾರ್ ಒಬ್ಬರನ್ನು ಹೊರೆತು ಪಡಿಸಿ ಬಹುಶಃ ಕನ್ನಡದ್ದೇ ಸ್ವಂತ ದನಿ ಹೊಂದಿದ ಹಾಡುಗಾರರು ಕನ್ನಡ ಚಿತ್ರರಂಗದಲ್ಲಿ ಇಲ್ಲವೇ ಇಲ್ಲ ಅನ್ನಿಸುತ್ತೆ. ಆ ಕಾಲದಿಂದಲೂ, ಎಸ್.ಪಿ, ಎಸ್.ಜಾನಕಿ, ಪಿ.ಸುಶೀಲ, ವಾಣಿ ಜಯರಾಂ, ಎಲ್.ಆರ್.ಈಶ್ವರಿ ಮುಂತಾದ ಸುಪ್ರಸಿದ್ಧ ಗಾಯಕ ಗಾಯಕಿಯರೆಲ್ಲರೂ ಪರಭಾಷಾ ತಾರೆಯರೇ. ಆದರೂ ಎಲ್ಲೂ ನಮಗೆ ಇವರುಗಳು ಹೊರಗಿನವರೆಂದು ಎಳ್ಳಷ್ಟೂ ಅನ್ನಿಸಿಲ್ಲ. ಅಷ್ಟರ ಮಟ್ಟಿಗೆ ಕನ್ನಡಿಗರ ಮನಸ್ಸನ್ನು ಗೆದ್ದವರು ಈ ಗಾಯಕರು.

ಉತ್ತರ ಭಾರತದ ಹಾಡುಗಾರರು ಕನ್ನಡದಲ್ಲಿ ಹಾಡುವುದು ಹೊಸ ವಿಷಯವೇನಲ್ಲ. ಆ ಕಾಲದಲ್ಲೇ ದ್ವಾರಕೀಶ್ ಕಿಶೋರ್ ಕಂಠದಲ್ಲಿ ಹಾಡಿಸಿದ 'ಆಡೂ.. ಆಟ ಆಡು.....' ಯಾರಿಗೆ ತಾನೆ ಗೊತ್ತಿಲ್ಲ! ರಫಿಯ 'ನೀನೆಲ್ಲಿ ನಡೆವೆ ದೂರ....' ಇನ್ನೂ ಮನಸ್ಸನ್ನು ಕಲಕುತ್ತಲೇ ಇದೆ. ಲತಾ ಮಂಗೇಶ್ಕರ್‍ಳ 'ಬೆಳ್ಳನೆ ಬೆಳಕಾಯಿತು...' ಇನ್ನೂ ರೋಮಾಂಚನವನ್ನುಂಟು ಮಾಡುತ್ತೆ. ಮನ್ನಾ ಡೇ ಹಾಡಿರುವ 'ಕುಹು ಕುಹೂ....' ಎಂಬ ಕೋಗಿಲೆ ಕಂಠ ಕಿವಿಯಲ್ಲಿ ಪ್ರತಿಧ್ವನಿಸುತ್ತಲೇ ಇದೆ.ಹಂಸಲೇಖರಂತಹ ಅಪ್ರತಿಮ ಸಂಗೀತ ನಿರ್ದೇಶಕ ಮೊದಲ ಬಾರಿಗೆ ಕನ್ನಡಕ್ಕೆ ಪರಿಚಯಿಸಿದ ಕುಮಾರ್ ಸಾನು (ಹೊಸ ಕಳ್ಳ ಹಳೇ ಕುಳ್ಳ ಚಿತ್ರದಲ್ಲಿ) ಅಷ್ಟೇನೂ ಹೆಸರು ಮಾಡಲಿಲ್ಲವಾದರೂ, ಅದೇ ಹಂಸಲೇಖ ಸೋನು ನಿಗಮ್‍ರನ್ನು 'ಟೈಟಾನಿಕ್ ಹೀರೋಯಿನ್' ಹಾಡು ಹೇಳಿಸಿ ಕನ್ನಡಕ್ಕೆ ಕರೆತಂದರು. ಈಗ ಕನ್ನಡದಲ್ಲಿ ಬರುವ ಹಾಡುಗಳನ್ನೆಲ್ಲಾ ಸೋನು ನಿಗಮ್ ಹಾಡುತ್ತಿರುವುದು ಗೊತ್ತಿರುವ ವಿಷಯವೇ. ಹಾಡುಗಳು ಕನ್ನಡ ಹಾಡುಗಳಂತಿರುವುದಿಲ್ಲವೆಂಬುದೊಂದು ಸತ್ಯ ಹೊರೆತು ಪಡಿಸಿದರೆ ಸೋನು ಧ್ವನಿ ಅತ್ಯಂತ ಸೊಗಸಾಗಿದೆ.ಸೋನು ಹಿಂದೆಯೇ ಶ್ರೇಯಾ ಘೋಶಾಲ್, ಸುನಿಧಿ ಚೌಹಾನ್, ಕುನಾಲ್ ಗಾಂಜಾವಾಲ, ಉದಿತ್ ನಾರಾಯಣ್ ಎಲ್ಲರೂ ಕನ್ನಡದ ಮಣ್ಣನ್ನು ಮೆಟ್ಟಿಯೇ ಬಿಟ್ಟು 'ಳ'ಕಾರ, 'ಣ'ಕಾರದಲ್ಲಿ ತತ್ತರಿಸಿ ಕನ್ನಡದ ಕೀರ್ತಿಯನ್ನು ಮೆರೆಸಲು ಹೊರಟಿದ್ದಾರೆ.

ರಾಜೇಶ್ ಕೃಷ್ಣನ್ ಅಂತಹ ಹಾಡುಗಾರರಿಗೆ ಈಗ ಮಕ್ಕಳು ಹಾಡುವುದನ್ನು ಕೇಳಿ ಶ್ರುತಿ ಲಯ ತಿದ್ದುವುದೇ ಉದ್ಯೋಗವಾಗಿಬಿಟ್ಟಿದೆ. ಒಳ್ಳೆಯ ಹಾಡುಗಳೆಲ್ಲಾ ಕನ್ನಡ ಉಚ್ಚರಿಸಲು ಬಾರದವರ ಪಾಲಾಗಿ 'ನನ್ನ ಸ್ಟೈಲು ಬೇರೇನೇ....' ಈಥರದ ಹಾಡುಗಳು ಕನ್ನಡಿಗರ ಪಾಲಿಗೆ ಉಳಿದಿದೆಯಷ್ಟೆ.ಹೊಸ ಹೊಸ ಹಾಡುಗಾರರನ್ನು ಹುಡುಕುವ ಕೆಲಸವನ್ನು ಮಾಡುವ ಕಷ್ಟವನ್ನು ಸಿನಿಮಾದವರು ತೆಗೆದುಕೊಳ್ಳಲು ಹೋಗಿಲ್ಲ. ಹಣ ಹೆಚ್ಚು ಖರ್ಚಾದರೂ ಕನ್ನಡ ಬಾರದವರ ಕಂಠವೇ ಪ್ರೀತಿ. ಜಯಂತ್ ಕಾಯ್ಕಿಣಿಯಂಥವರ ಸಾಹಿತ್ಯದಲ್ಲಿ ಉತ್ತಮ ಕನ್ನಡ ಪದಗಳಿದ್ದೂ, ಅದೆಲ್ಲಾ ಈ ಹಾಡುಗಾರರ ಬಾಯಲ್ಲಿ ಅಪಭ್ರಂಶಗಳಾದರೂ ನಿರ್ದೇಶಕ ನಿರ್ಮಾಪಕರಿಗೆ ಇವರುಗಳ ಮೇಲೆಯೇ ಪ್ರೀತಿ. ಇದರ ಜೊತೆಗೆ ಕಳಪೆ ಸಾಹಿತ್ಯಗಳ ಹಾಡುಗಳೂ ಅವರ ಪಾಲೇ ಆಗುವ ಸಾಧ್ಯತೆಯೂ ಇದೆ!ಕರ್ನಾಟಕದ ಹಣೆಬರಹವೇ ಇಷ್ಟು ಅನ್ನಿಸುತ್ತೆ. ಇಲ್ಲಿ ಕನ್ನಡದವರಿಗಿಂತ ಹೊರಗಿನವರಿಗೇ ಅವಕಾಶ ಹೆಚ್ಚು!

ಕನ್ನಡದ ಹಾಡುಗಾರರು ಇಂಥ ಹೊರಗಿನವರ ವಿರುದ್ಧ ಹೋರಾಟ ಮಾಡುತ್ತಿದ್ದಾರಂತೆ. ಕನ್ನಡದ ಹಾಡುಗಾರರು ಚೆನ್ನಾಗಿ ಹಾಡಿ ಪ್ರೂವ್ ಮಾಡಲಿ ಅವಕಾಶ ಸಿಕ್ಕೇ ಸಿಗುತ್ತೆ ಎಂಬುದು ಸೋನು ನಿಗಮ್ ಅಭಿಮಾನಿಗಳ ವಾದ. ಆದರೆ ಅವಕಾಶವೇ ಸಿಗದೆ ಹಾಡುವುದಾದರೂ ಎಲ್ಲಿ ಎಂಬುದು ಗಾಯಕರ ಅಳಲು. ಹೋರಾಟ ಏನಾದರೂ ಆಗಲಿ, ಹಾಡು ಯಾರಾದರೂ ಹಾಡಲಿ, ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಗಾಯಕರು ಸಿಗಲಿ ಎಂದು ನನ್ನ ಹಾರೈಕೆ.

-ಅ
21.07.2008
10.15PM

8 comments:

 1. sonu nigam du kannada haadugala album bartaa idyante ... adakke Jayant kaikini lyrics anthe!!!
  nange ond kaaladalli ... ade ... Tu ... tu.... anta Sonu Nigam haadtiddaga avnu tumba ishta idda ... naanu avana dodda fan ... aagidde anbahudu ansatte.

  ReplyDelete
 2. "ಕರ್ನಾಟಕದ ಹಣೆಬರಹವೇ ಇಷ್ಟು ಅನ್ನಿಸುತ್ತೆ. ಇಲ್ಲಿ ಕನ್ನಡದವರಿಗಿಂತ ಹೊರಗಿನವರಿಗೇ ಅವಕಾಶ ಹೆಚ್ಚು!"

  - ಈ ಮಾತನ್ನಂತೂ ನಾನು ೨೦೦ ಶೇಕಡಾ ಒಪ್ಪುತ್ತೇನೆ... ಹೊರಗಿನವರಿಗೆ ಅವಕಾಶ ಹೆಚ್ಚುವುದಕ್ಕೆ ಕಾರಣವೂ ಇದೆ... ಇಲ್ಲಿನ ಜನಕ್ಕೆ ಇಲ್ಲಿನ ನೆಲ-ಜಲ-ಮನುಷ್ಯರು-ಭಾಷೆ-ಸಂಸ್ಕೃತಿ - ಯಾವುದರ ಬಗ್ಗೆಯೂ ಅಕ್ಕರೆಯಿಲ್ಲ. ನಮ್ಮಂತಹ ಗಡಿನಾಡಿನ ಜನ ಕನ್ನಡ-ಕನ್ನಡ ಅಂತ ಸಾಯ್ತಿರಬೇಕಾದರೆ ಇಲ್ಲಿಯ ಸಭ್ಯಸ್ತ ಜನರಲ್ಲಿ ಹೆಚ್ಚಿನವರು ಹೋರಾಟಗಳನ್ನೆಲ್ಲ ರಕ್ಷಣಾ ಅಥ್ವಾ ಭಕ್ಷಣಾ ವೇದಿಕೆಗಳಿಗೆ, ರಾಜಕಾರಣಿಗಳಿಗೆ ಬಿಟ್ಕೊಟ್ಟು ತೆಪ್ಪಗೆ ಕೂರ್ತಾರೆ.

  ReplyDelete
 3. kannadadalli parabhasha gayakaradde melugai anta helebahudu, adre pratibhege bhasheya gadi illa anno maatu kuda nenpagutte, e hindella kannadadalli hadida parabhasha gayakaru tamma madhuryada jotage bhashaya shuddhategu gamana needuttiddaru, adreega ella commercial, savirakke siguva kannadiganiginta laksha eniso parabhasha gayakane melu embantagide, adre kelugarige ultimate agi bekagirodu manssige muda kivige impu,adannu kodtiroru ide parabhasha gayakaru,idu sadyada paristiti, adre ivaru kannada da shreemantikeyannu kolladante hadisuvudu music directr na kartavyavu howdu, adene irli kannadadallobba sonu nigam, kunal ganjawala, shreya barabeku athava khuddu avare hadabeku anno hagagide, adru samanya janaru avara svaravannu aasvadistiddare andre tappu yaradu? helodu kashta, adre kannada dallu intaha gaana kogilegalu adashtu bage udayisali annodu nanna haraike....

  ReplyDelete
 4. This comment has been removed by the author.

  ReplyDelete
 5. ಒಳ್ಳೆಯ ಸಂಗೀತಕ್ಕೆ ಭಾಷೆಯ ಹಂಗೇಕೆ?
  ಹಾಡೋರು ರಾಜೇಶ್ ಕೃಷ್ಣನ್,ಹೇಮಂತ್,ಪಲ್ಲವಿ,ಚೈತ್ರಾ ಆದ್ರೂ ಸರಿಯೇ ಕುಣಾಲ್ ಗಾಂಜಾವಾಲಾ,ಉದಿತ್,ಸೋನು,ಸುನಿಧಿ,ಶ್ರೇಯಾ ಆದ್ರೂ ಸರಿಯೆ ಇಲ್ಲ ನಮ್ಮ ಗುರುರಾಜ ಹೊಸಕೋಟೆ ಆದ್ರೂ ಸರಿಯೆ!ಕನ್ನಡ ಹಾಡುಗಾರರ ಹೋರಾಟ-ವಿರೋಧ ನೋಡ್ತಿದ್ರೆ ಇದ್ಯಾಕೋ ಇಲ್ಲೂ ಕನ್ನಡ ಹಾಡುಗಾರರಿಗೆ ಪ್ರತಿ ಕನ್ನಡ ಸಿನಿಮಾದಲ್ಲೂ ಶೇಕಡ ೩೩ ಮೀಸಲಾತಿ ಬೇಕೇ ಬೇಕು ಅನ್ನೋ ಕಾಲ ದೂರ ಇಲ್ಲ ಅನ್ಸತ್ತೆ! ಇದು ಹೀಗೇ ಮುಂದುವರೆದರೆ ಉತ್ತರ ಕನ್ನಡದ ಹಿಂದೂಸ್ಥಾನಿ ಸಂಗೀತ ತಿಳಿದಿರೋರಿಗೆ ಶೇಕಡಾ ೧೦, ಮೈಸೂರಿನ ಕರ್ನಾಟಿಕ್ ಸಂಗೀತದ ಹಿನ್ನೆಲೆಯವರಿಗೆ ಶೇಕಡಾ ೧೦, ಮಂಗಳೂರಿನವರಿಗೆ ೧೦ ಹೀಗೇ ಇನ್ನೂ ಏನೇನು ಕಾದಿದ್ಯೋ!
  ಕರ್ಮಕಾಂಡ!

  ಒಂದು ಇಂಟರ್ವ್ಯೂನಲ್ಲಿ ಯೋಗರಾಜ್ ಭಟ್ಟರಿಗೆ ಇದೇ ಪ್ರಶ್ನೆ ಕೇಳಲಾಯ್ತು - ಸಾರ್, ಅಷ್ಟೆಲ್ಲ ಕನ್ನಡ ಹಾಡುಗಾರರಿರೋವಾಗ ಸೋನು ಕೈಲಿ 'ಅನಿಸುತಿದೆ ಯಾಕೋ ಇಂದು' ಹಾಡಿಸಿದ್ದು ಯಾಕೆ ಅಂತ.
  ಭಟ್ಟರ ಉತ್ತರ -"'ಅನಿಸುತಿದೆ' ಹಾಡು ಕೇಳಿದ್ರ?ಹೇಗಿದೆ?"
  ಇವರು - "ಓಹ್! ಬೇಕಾದಷ್ಟು ಸಲ ಕೇಳಿದೀನಿ,ಕೇಳ್ತಾನೆ ಇರ್ತೀನಿ..ಯಾವುದೋ ಬೇರೆ ಲೆವೆಲ್ಲಿಗಿದೆ ಸಾರ್ ಆ ಹಾಡು-ಸೂಪರ್"
  ಭಟ್ಟರಂದಿದ್ದು-"ಅದಕ್ಕೇ ಸಾರ್ ಅದನ್ನ ಸೋನು ಕೈಲಿ ಹಾಡಿಸಿದ್ದು.ಬೇರೆ ಒಂದು ಲೆವೆಲ್ಲಿಗೆ ತಗೊಂಡ್ ಹೋಗಕ್ಕೆ!" ಅಂತ :)

  ReplyDelete
 6. ಗುರುಗಳೇ, ಟಾಲೆಂಟಿಗೆ ಬೌಂಡರಿಗಳಿರಬಾರ್ದಲ್ವ ? ನನಗನ್ನಿಸತ್ತೆ, ನಮ್ಮವರು ಇನ್ನೂ ಸಾಧನೆ ಮಾಡಿ, ಚಳಿ ಬಿಟ್ಟು ನೀರಿಗಿಳಿದು, ಹೋರಾಡಿ ಮುಂದೆ ಬರಬೇಕಿದೆ.

  ReplyDelete
 7. [ಲಕುಮಿ] ಟ್ಯಾಲೆಂಟಿಗೆ ಬೌಂಡರಿಗಳಿರಬಾರದು.
  ನಮ್ಮವರು ಸಾಧನೆ ಮಾಡಲು ಅವಕಾಶ ಕೊಡಿ ಅಂತ ಕೇಳುವುದಷ್ಟೆ ನನ್ನ ಉದ್ದೇಶ. "ಅವನು ಎಲ್ಲಿ ಹಾಡ್ತಾನೆ!" ಅಂತ ಹಳಿಯುವುದರ ಬದಲು, ಹಾಡುಗಾರರನ್ನು ಹುಡುಕಿ, ಅವರಿಗೆ ತರಬೇತಿ ಕೊಡುವುದು ನಮ್ಮ 'ನಿರ್ಮಾಪಕ ನಿರ್ದೇಶಕರ ಕೆಲಸವಾಗಬೇಕಲ್ಲವೇ? ನಮ್ಮಲ್ಲಿ ಇಲ್ಲ ಅಂತ ಹೊರಗಿನ ಮೊರೆ ಹೋಗುವುದು ಸರಿಯೋ? ನಮ್ಮಲ್ಲಿ ಉತ್ಪತ್ತಿ ಮಾಡುವುದು ಸರಿಯೋ?

  [ಸುಶೀಲ್] ಒಳ್ಳೇ ರಿಸರ್ವೇಷನ್ನು!! ಬಿಬಿನ!!!
  ಆದ್ರೂ.. ಯೋಗರಾಜಭಟ್ಟರಿಗೆ ಸೋನು ನಿಗಮ್‍ಗಿಂತ ಒಳ್ಳೇ ಹಾಡುಗಾರ ಕನ್ನಡದಲ್ಲಿ ಇಲ್ಲವೆಂಬ ಕಲ್ಪನೆ ಬಂದಿದ್ದು ಯಾಕೆ ಎಂದು ಯೋಚನೆ ಇದೆ ರೀ ನಂಗೆ. ಪಂಚಕೋಟಿ ಕನ್ನಡಿಗರಲ್ಲಿ ಕೇವಲ ಒಬ್ಬನೇ ಸಿನಿಮಾ ಹಾಡುಗಾರ, ಅದೂ 'ಲುಕ್ಕು ಬೇರೇನೇ.. ಟಚ್ಚು ಬೇರೇನೇ.." ಅಂತ ಹಾಡುವವನು ಎಂದರೆ ಇದಕ್ಕೆ ಏನು ಹೇಳಬೇಕೋ ತೋಚದು.

  ಒಳ್ಳೆಯ ಸಂಗೀತಕ್ಕೆ ಭಾಷೆಯ ಹಂಗಿಲ್ಲವೇ ಇಲ್ಲ. ನಾನು ಸುಬ್ಬುಲಕ್ಷ್ಮಿ, ಶೆಮ್ಮಂಗುಡಿ, ಜಿ.ಎನ್.ಬಿ. ಇಂಥವರ ಸಂಗೀತವನ್ನೇ ಅಹ್ಲಾದಿಸುವವನು. ಸಂಗೀತವಷ್ಟೆ ಅವರ ಗುರಿಯಾಗಿರುತ್ತೆ. ಆದರೆ ಕನ್ನಡ ಚಿತ್ರರಂಗಕ್ಕೆ ಭಾಷೆಯ ಹಂಗಿದೆ. ಇಲ್ಲಿ 'ಹಣ' ಎಂಬ ಎಂಟಿಟಿ ಇದೆ. ಬದುಕನ್ನು ನಡೆಸುವವರಿದ್ದಾರೆ. ಹಾಡುಗಾರಿಕೆಯು ವೃತ್ತಿಯಾಗಿದೆ. ಹಾಗೇ ಹೊರಗಿನವರೂ ಕೂಡ ತಮ್ಮ ವೃತ್ತಿಯನ್ನು ಮಾಡುತ್ತಿದ್ದಾರಷ್ಟೆ.

  [ಸಪ್ನಾ] ಸರಿಯಾದ ಮಾತುಗಳನ್ನೇ ಆಡಿದ್ದೀರಿ.. :-)

  [ಶ್ರೀ] ಹೋರಾಟ ಮಾಡುವ ಅವಶ್ಯಕತೆಯೇ ಇಲ್ಲ ನನ್ನ ಪ್ರಕಾರ. ಪ್ರೀತಿಸಿದರೆ ಸಾಕು. :-)

  [ವಿಜಯಾ] ನಾನೂ ಅಷ್ಟೆ. ದೊಡ್ಡ ಫ್ಯಾನು!! ಅದ್ಭುತ ಗಾಯಕ. ದಿಲ್ ಚಾಹ್ತಾ ಹೈ, ಪರ್ದೇಸ್, ಇಂಥಾ ಚಿತ್ರದ ಹಾಡುಗಳನ್ನು ಮರೆಯುವುದಾದರೂ ಹೇಗೆ!!

  ReplyDelete
 8. [ಆರುಣ್]: ನನ್ನನಿಸಿಕೆ ಇಷ್ಟೇ - ಇಲ್ಲಿ ಸೋನು ಒಳ್ಳೇ ಹಾಡುಗಾರನಾ ಇಲ್ಲ ರಾಜೇಶ್ ಕೃಷ್ಣನ್ ಒಳ್ಳೇ ಹಾಡುಗಾರನಾ ಅನ್ನೋ ಪೈಪೋಟಿ ಇಲ್ಲ. ಯೋಗರಾಜ್ ಭಟ್ಟರಿಗೆ ಹಾಗೆ ಮನೋ ಮೂರ್ತಿಗೆ ಪ್ರಾಯಶಃ 'ಅನಿಸುತಿದೆ ಯಾಕೋ ಇಂದು' ಹಾಡನ್ನು ಸೋನು ಕೈಲಿ ಹಾಡಿಸಿದರೆ ಚೆನ್ನಾಗಿ ಮೂಡಿಬರಬಹುದು ಅನ್ನೋ ಭಾವನೆ ಇರ್ಬೋದು ಅಷ್ಟೇ!
  ರಾಜೇಶ್ ಕೃಷ್ಣನ್ ಸೋನು ಕಂಡ್ರೆ ಹರಿಹಾಯೋಕೆ ಮತ್ತೊಂದು ಕಾರಣ ಅಂದ್ರೆ ಈ ಹಿಂದೆ 'ಹುಚ್ಚ' ಸಿನಿಮಾಗೆ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನದಲ್ಲಿ 'ಉಸಿರೇ ಉಸಿರೇ' ಅನ್ನೋ ಹಾಡನ್ನ ಸೋನು, ರಾಜೇಶ್ ಇಬ್ಬರ ಕೈಲೂ ಹಾಡಿಸಲಾಗಿತ್ತು. ಕ್ಯಾಸೆಟ್/ಸಿಡಿಯಲ್ಲಿ ಎರಡೂ ವರ್ಶನ್ ಇದೆಯಾದರೂ ಸಿನಿಮಾದಲ್ಲಿ ಮಾತ್ರ ಸೋನು ಹಾಡನ್ನು ಉಳಿಸಿಕೊಳ್ಳಲಾಯಿತು.
  ಇದೇ ರೀತಿ'ನೀನೆಲ್ಲಿ ನಡೆವೆ ದೂರಾ' ಅನ್ನೋ ಹಾಡನ್ನ ರಫಿ ಬದಲಿಗೆ ಪಿಬಿಎಸ್ ಕೈಲೂ ಹಾಡಿಸಬಹುದಾದ ಎಲ್ಲ ಛಾನ್ಸಸ್ ಇದ್ಚು ತಾನೆ?ಆದ್ರೂ ಅದೊಂದು ಪ್ರಯೋಗ ನಡೀತು...ಹಾಗೇ ಈಗಲೂ ಕೂಡಾ...

  ಇನ್ನು ನೀವು ಹೇಳಿದ ಭಾಷೆ,ಹಣವೆಂಬೋ ಎಂಟಿಟಿ, ಹಾಡುಗಾರಿಕೆಯ ವೃತ್ತಿ ಬಗ್ಗೆ ಮಾತನಾಡಬೇಕು ಅಂದ್ರೆ ಇದು ಭಾರತಕ್ಕೆ ಬರುತ್ತಿರುವ/ಬರಬೇಕಾದ ಐಟಿ ಪ್ರಾಜೆಕ್ಟುಗಳು ಚೀನಾಕ್ಕೆ ಹೋದಾಗ ಆಗುವ ಕೋಲಾಹಲದ ರೀತಿ ಇದೆ!

  ReplyDelete