Sunday, August 31, 2008

ಚೆಂದದೂರು ಬೆಂಗಳೂರು

ಬೆಂಗಳೂರಿನ ಬಗ್ಗೆ ಟ್ರಾಫಿಕ್ಕು, ಹೊಗೆ, ಧೂಳು, ಕಟ್ಟಡದ ಕಾಡು, ಡ್ರೈನೇಜ್ ಸಮಸ್ಯೆ - ಹೀಗೆ ಸಾಕಷ್ಟು ಅಸಮಾಧಾನ ಇದ್ದರೂ ಒಂದು ವಿಶೇಷವಾದ ಒಲವು ನನ್ನಲ್ಲಿದೆ. ಬೆಂಗಳೂರು ಇಲ್ಲದೆ ಇರಲು ಸಾಧ್ಯವೇ ಇಲ್ಲವೇನೋ ಎಂಬ ಪ್ರೀತಿಯು ಇರುವುದರಿಂದಲೇ ಬಹುಶಃ ಇಷ್ಟೊಂದು "ಅಯ್ಯೋ ಹಾಳಾಗಿ ಹೋಗ್ತಿದೆಯಲ್ಲಪ್ಪಾ.." ಅಂತ ಬೇಸರ ಆಗುತ್ತೆ ಅನ್ನಿಸುತ್ತೆ.

ಇಂಥಾ ಬೆಂಗಳೂರಿನ ನಗರ ವಲಯದ ಒಳಗೆ ನಾನೊಂದಿಷ್ಟು ಜಾಗಗಳನ್ನು ಇಟ್ಟುಕೊಂಡಿದ್ದೇನೆ. ನನಗೆ ಇಷ್ಟವಾಗುವ, ನೋಡಲೇಬೇಕು ಎನ್ನಿಸುವ, ಸಂತಸ ಕೊಡುವ, ತೃಪ್ತಿ ಕೊಡುವ, ಅನೇಕ ಸಲ ಸಮಾಧಾನ ತಾತ್ಕಾಲಿಕವಾಗಿ ನೆಮ್ಮದಿಯನ್ನೂ ಕೊಡುವ ಹಲವು ಸ್ಥಳಗಳು. ಅದರ ಟಾಪ್ 10 ಇಲ್ಲಿ ಬರೆದುಕೊಂಡಿದ್ದೇನೆ. ಈ ರೀತಿ ಟಾಪ್ n ಗಳನ್ನು ಬರೆದುಕೊಂಡು ಬಹಳ ದಿನಗಳಾಗಿತ್ತು.

10 - ಹನುಮಂತ ನಗರ

ಮನೆಯಿರುವುದೂ ಅಲ್ಲಿಯೇ. ಮನೆಯ ಆಸುಪಾಸಿನಲ್ಲೇ ಹಲವು ಸ್ಥಳಗಳು ಮನಸೆಳೆದಿದೆ. ಬಾಲ್ಯವು ಇಲ್ಲೆಯೇ ಕಳೆದಿರುವುದರಿಂದ ಇದು ಹೇಗೆ ಬೆಳೆದಿದೆಯೆಂಬುದನ್ನು ಚೆನ್ನಾಗಿ ಬಲ್ಲೆ ಕೂಡ. ಬಂಡೆಗಳೇ ಇದ್ದ ರಾಮಾಂಜನೇಯ ಗುಡ್ಡ, ಬರೀ ಪೊದೆಗಳೇ ತುಂಬಿರುವ ನರಹರಿರಾಯರ ಗುಡ್ಡ (ಈಗಿನ ಕುಮಾರಸ್ವಾಮಿ ದೇವಸ್ಥಾನ), ಎ.ಬಿ.ಸಿ. ಪಾರ್ಕು, ಗವಿಗಂಗಾಧರೇಶ್ವರ ದೇವಸ್ಥಾನ - ಆಹ್, ಎಂಥಾ ಹಿತಕರ ಸ್ಥಳಗಳು.

ರಾಮಾಂಜನೇಯ ಗುಡ್ಡದಲ್ಲಿ ಬೀದಿನಾಟಕದವರು ಸಾಕ್ಷರತೆಯ ಬಗ್ಗೆ ಪ್ರದರ್ಶನವನ್ನು ಮಾಡುತ್ತಿದ್ದ ಕಾಲದಲ್ಲಿ ಹುಲ್ಲು ಹಾಸಾಗಲೀ, ಡಿಸೈನ್‍ಗಳ ಕಲ್ಲುಗಳಾಗಲೀ, ಬೇಲಿಗಳಾಗಲೀ ಇರಲೇ ಇಲ್ಲ. ಮೆಟ್ಟಿಲಿನ ಪಕ್ಕದಲ್ಲಿ ಬಂಡೆಗಳು, ಪೊದೆಗಳು. ಈ ವಾಕಿಂಗ್ ಸಂಸ್ಕೃತಿ ಬೆಂಗಳೂರಿಗೆ ಕಾಲಿಟ್ಟ ಘಳಿಗೆಯೋ ಏನೋ, ಪಾರ್ಕುಗಳೆಲ್ಲಾ ವಾಕಿಂಗ್ ತಾಣವಾಗಿಬಿಟ್ಟಿದೆ. ದೇವಸ್ಥಾನ ಬಸ್ ನಿಲ್ದಾಣದಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ಈ ನರಹರಿರಾಯರ ಗುಡ್ಡವಿದ್ದೂ, ಇದಕ್ಕೆ ಕೆಲವು ವರ್ಷಗಳಿಂದ ಕುಮಾರಸ್ವಾಮಿ ದೇವಸ್ಥಾನವೆಂದು ಮರುನಾಮಕರಣ ಮಾಡಿದ್ದಾರೆ. ದಕ್ಷಿಣ ಬೆಂಗಳೂರಿನ ಹರೋಹರ ಶುರುವಾಗುವುದು ಇಲ್ಲಿಂದಲೇ. ಇದರ ಹಿಂಭಾಗದ ಗೇಟನ್ನು ಈಗ ಬಂದ್ ಮಾಡಿದ್ದಾರೆ. ಈ ಬಾಗಿಲ ಆಸುಪಾಸಿನಲ್ಲೀಗ ಬರೀ ಪಾರ್ಥೇನಿಯಮ್. ಅಪರೂಪಕ್ಕೊಮ್ಮೆ ಈ ಎರಡು ತಾಣಗಳಲ್ಲಿ ಬಂದು ಕುಳಿತರೆ ಹಳೆಯ ನೆನಪುಗಳೆಲ್ಲಾ ಕಣ್ಣ ಮುಂದೆ ಬಂದು ಪ್ರತಿಷ್ಠಾಪಿಸಿಕೊಳ್ಳುತ್ತೆ.

ಎ.ಬಿ.ಸಿ. ಪಾರ್ಕು - ಇದು ಈಗ ಯಾವುದೋ ಕಾರ್ಪೊರೇಟರ್ ಹೆಸರಿನ ಪಾರ್ಕು ಆಗೋಗಿದೆ. ಇಲ್ಲಿ ಎಲ್ಲೆಲ್ಲೋ ಬೇಲಿಗಳು, ಮೆಟ್ಟಿಲುಗಳು, ಕಾರಂಜಿಗಳು ಇತ್ಯಾದಿಗಳು ವಕ್ಕರಿಸಿದರೂ ಒಂಥರಾ ಚೆಲುವಾಗಿದೆ. ಆದರೆ ಇಲ್ಲೂ ವಾಕರ್ಸ್ ಹಾವಳಿ. ಇಲ್ಲಿ ವಾಕರ್ಸ್ ಟ್ರಾಫಿಕ್ ಜ್ಯಾಮ್ ಆಗುವುದರಿಂದ ಈ ನಡುವೆ ಇಲ್ಲಿ ಹೋಗುವುದು ಬಿಟ್ಟುಬಿಟ್ಟಿದ್ದೇನೆ. ಆ ದಿನಗಳಲ್ಲಿ ನಾವು ಇಲ್ಲಿ ಬಾಡಿಗೆ ಸೈಕಲ್ ಹೊಡೆಯಲು ಬರುತ್ತಿದ್ದೆವು. ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಆಗ ನಿಜವಾಗಿಯೂ ಒಂದು ಗವಿಯಿತ್ತು. ಅದರೊಳಗೆ ಪ್ರದಕ್ಷಿಣೆ ಹಾಕಲು ಏನೋ ಆನಂದ. ಈಗ ಅಲ್ಲಿ ಬಚ್ಚಲು ಮನೆಯೊಳಗೆ ಹಾಕುವ ಟೈಲ್ಸ್ ಹಾಕಿಬಿಟ್ಟು, ಗವಿಯೊಳಗೆ ಟ್ಯೂಬ್ ಲೈಟುಗಳನ್ನು ಹಾಕಿರುವುದು ತೀರ ಕೆಟ್ಟದಾಗಿದ್ದರೂ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಕೂತು ಕೆಂಪೇಗೌಡನ ಕಾಲವನ್ನು ಊಹಿಸಿಕೊಂಡು, MNS ಸರ್ (ಸುರೇಶ್ ಮೂನ - ಬೆಂಗಳೂರು ತಜ್ಞರು) ಅವರ ಪಾಠವನ್ನೂ ನೆನೆಸಿಕೊಂಡು ಕುಳಿತರೆ ಮನೆಗೆ ಫ್ರೆಶ್ ಆಗಿ ಮರಳಬಹುದು. ಗವಿಗಂಗಾಧರೇಶ್ವರನ ಹಿಂಭಾಗದಲ್ಲೇ 400 ವರ್ಷಕ್ಕೂ ಹಳೆಯ ಕೆಂಪೇಗೌಡ ನಿರ್ಮಿತ ಗೋಪುರವೊಂದಿದ್ದು, ಅದರೊಳಗೆ ಕುಳಿತು ಆಟವಾಡಿದ್ದ ದಿನಗಳನ್ನು ನೆನೆಸಿಕೊಳ್ಳಲು ಇಂದು ಆ ಆವರಣದೊಳಕ್ಕೆ ಹೋಗದಂತೆ ಗೇಟು ಬೀಗ ಹಾಕಿರುವುದರಿಂದ ಅಲ್ಲಿಯೇ ನಿಂತು ನೋಡಬೇಕಾಗಿದೆ.

ಗವಿಪುರದ ಹತ್ತಿರವೂ ಒಂದು ಗೋಪರವಿದ್ದು ಕೆಲವರಿಗೆ ಮಾತ್ರ ಗೊತ್ತಿರುವುದಾಗಿದೆ. 400 ವರ್ಷದ ಹಳೆಯ ಸ್ಮಾರಕವು ಗೆದ್ದಲು ಹಿಡಿಯುತ್ತಿದೆ. ಅಲ್ಲಿಯೂ ಹೋಗಿ ಹತ್ತು ನಿಮಿಷ ಕುಳಿತರೆ ಐತಿಹಾಸಿಕ ಪಾತ್ರಗಳಲ್ಲೊಂದಾಗಿಬಿಡುತ್ತೇನೆ.

9 - ಕಬ್ಬನ್ ಪಾರ್ಕು/ ಮ್ಯೂಸಿಯಮ್ಮು

ಒಂದೊಂದು ಸಲ ಒಬ್ಬನೇ ಕಬ್ಬನ್ ಪಾರ್ಕಿನ ರೈಲಿನಲ್ಲಿ ಹೋಗುವುದಕ್ಕೋಸ್ಕರವಾಗಿಯೋ, ಬಾಲಭವನದ ಶೋ ನೋಡುವುದಕ್ಕಾಗಿಯೋ, ಜಯಂಟ್ ವ್ಹೀಲ್ (ಈಗಿಲ್ಲ)ನಲ್ಲಿ ಕೂರುವುದಕ್ಕಾಗಿಯೋ ಹೋಗಿಬಿಡುತ್ತಿದ್ದೆ. ದೋಣಿವಿಹಾರ ಆರಂಭಿಸಿದ ಕಾಲದಲ್ಲಿ ಅದಕ್ಕೆ ರಷ್ಷೋ ರಷ್ಷು. ಈಗ ಕೇಳೋರೇ ಗತಿಯಿಲ್ಲ. ಪಕ್ಕದಲ್ಲಿರುವ ವಸ್ತುಸಂಗ್ರಹಾಲಯದ ಆವರಣದಲ್ಲಿ ಸಿಗುವ ಕೆಂಪು ಸೀಬೆ (ಅದಕ್ಕೆ ಉಪ್ಪುಕಾರ ಹಾಕಿಕೊಡುವ ಪರಿ) ಆಹಾ! ಷಾಟ್ ಪುಟ್ ಚೆಂಡಿಗಿಂತ ದೊಡ್ಡದಾದ ಸೀಬೆಕಾಯಿಗಳು. ಈಗಲೂ ಸಿಗುತ್ತೆ. ಹೋಗಿ ತುಂಬಾ ದಿನವಾಯಿತು. ಹೋಗಲೇ ಬೇಕೆನಿಸುತ್ತೆ. ಯಾವುದೇ ಊರಿಗೆ ಹೋದರೂ ಅಲ್ಲಿಯ ಮ್ಯೂಸಿಯಮ್ಮನ್ನು ನೋಡದೆ ವಾಪಸ್ಸು ಬರಲು ಮನಸ್ಸಾಗುವುದಿಲ್ಲ. ಅಂತೆಯೇ ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಮ್ಮು ಇದುವರೆಗೂ ನೋಡಿರುವ ಎಲ್ಲಾ ಮ್ಯೂಸಿಯಮ್ಮುಗಳಿಗಿಂತ ಇಷ್ಟವಾಗಿದೆ. ಜ್ಞಾನ-ವಿಜ್ಞಾನಗಳು ಬೆರೆತಿದೆ. ಇತ್ತೀಚೆಗೆ ಇಲ್ಲಿ ಅದೆಂಥದೋ ತ್ರಿ-ಡಿ ಚಿತ್ರ ತೋರಿಸುವ ಹೊಸ ವಿಚಾರ ಬಹಳ ಕೆಟ್ಟದಾಗಿದೆ. ಆದರೆ ಇಡೀ ಮ್ಯೂಸಿಯಮ್ಮನ್ನು ಒಂದು ದಿನ ಪೂರ್ತಿ ನೋಡಲು ಮೀಸಲಿಟ್ಟರೆ ಸೀಬೇಕಾಯಿಯನ್ನೂ ನೆಮ್ಮದಿಯಿಂದ ಕಣಕಣವನ್ನೂ ಆಸ್ವಾದಿಸಬಹುದು.

8 - ಸಪ್ನ ಬುಕ್ ಸ್ಟಾಲ್

ಪುಸ್ತಕ ಪ್ರಿಯರಿಗೆ ಸಪ್ನ ಬುಕ್ ಸ್ಟಾಲ್‍ಗಿಂತ ಉತ್ತಮ ಅಂಗಡಿ ನಮ್ಮೂರಲ್ಲಿ ಸಿಗುವುದಿಲ್ಲ. ಗಾಂಧಿನಗರದ ಈ ಸಪ್ನ ಬುಕ್ ಸ್ಟಾಲ್ ತ್ರಿಭುವನ್ ಟಾಕೀಸ್ ಎದುರು ಇದ್ದಾಗ, ನಾನಿನ್ನೂ ಐದನೇ ತರಗತಿಯಲ್ಲಿದ್ದಾಗ ಬಸ್ ಹತ್ತಿಕೊಂಡು ಬಂದುಬಿಟ್ಟಿದ್ದೆ. ಆಗ ಆಲ್ಬರ್ಟ್ ಐನ್‍ಸ್ಟೈನ್ ಎಂದರೆ ನನ್ನ ಪಾಲಿಗೆ ದೇವರು. ಐನ್‍ಸ್ಟೈನ್ ಬಗ್ಗೆ ಅನೇಕ ಮಕ್ಕಳ ಪುಸ್ತಕಗಳನ್ನು ನನಗೆ ಗಣೇಶ ಹಬ್ಬದ್ದೋ, ಹುಟ್ಟು ಹಬ್ಬದ್ದೋ ಮತ್ತೊಂದೋ 'ಕಲೆಕ್ಷನ್' ಹಣದಿಂದ ಖರೀದಿಸುತ್ತಿದ್ದೆ. ಕನ್ನಡ ಪುಸ್ತಕಗಳನ್ನು ಓದಲು ಶುರು ಮಾಡಿದ್ದು ಹೈಸ್ಕೂಲು ಮುಗಿಯುವ ವೇಳೆಗೆ. ಅದಕ್ಕೂ ಮೊದಲು ಆಸರೆಯಾಗಿದ್ದು ಸಪ್ನ ಬುಕ್ ಸ್ಟಾಲೇ. ಮನೆಯ ಹತ್ತಿರವೇ ಅಂಕಿತ ಇದ್ದರೂ, ತಾತರಾಯನ ಕಾಲದ ವೇದಾಂತ ಬುಕ್ ಹೌಸು, ವಿ.ಎಸ್.ಎಂಡ್ ಸನ್ಸ್ ಇವೆಲ್ಲಾ ಇದ್ದರೂ ಸಪ್ನ ಬುಕ್ ಹೌಸ್‍ಗೆ ಹೋಗಿ ಪುಸ್ತಕ ಕೊಂಡರೆ ಏನೋ ಆನಂದ. ಭಾರತದಲ್ಲೇ ಅತಿ ದೊಡ್ದ ಪುಸ್ತಕದಂಗಡಿ ಎಂಬ ಹೆಗ್ಗಳಿಕೆಯಿರುವ ಇದು, ಅಷ್ಟಾದರೂ ಆನಂದ ನೀಡದಿದ್ದರೆ ಹೇಗೆ?

7 - ಕಲಾಸಿಪಾಳ್ಯ

ನಾನು ಹೀಗೆ ಹೇಳಿದಾಗ ಅನೇಕರಿಗೆ ಅಚ್ಚರಿಯೂ ಹಲವರಿಗೆ ಅಸಹ್ಯವೂ ಆದೀತು. ಆದರೆ ನನ್ನ ಪಾಲಿಗೆ ಮಾರ್ಕೆಟ್ಟು ಬಹಳ ಪ್ರಶಸ್ತ. ಬಸ್ ನಿಲ್ದಾಣದ ಎದುರೇ ಇರುವ ಕೋಟೆಗೆ ಮುನ್ನೂರು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದೂ ಟಿಪ್ಪು ಸುಲ್ತಾನ್ ನಿರ್ಮಿತ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇದು ನನ್ನನ್ನು ಆಕರ್ಷಿಸಿಲ್ಲ. ನನ್ನ ಆಕರ್ಷಣೆ ಕೋಟೆ ವೆಂಕಟರಮಣ ದೇವಸ್ಥಾನ ಮತ್ತು ಹಿಂದೆಯೇ ಇರುವ ಟಿಪ್ಪು ಸಮ್ಮರ್ ಪ್ಯಾಲೆಸ್. ಮರ (wood)ದಿಂದಲೇ ನೆಲವನ್ನು ಮಾಡಿರುವ ಮತ್ತು ಗೋಡೆಗಳ ಮೇಲೆ ಅತ್ಯುನ್ನತ ಚಿತ್ರಕಲೆಯನ್ನು ಹೊಂದಿರುವ, ಸದಾ ತಂಪಾಗಿ ಶಾಂತವಾಗಿರುವ ಈ ಅರಮನೆಯ ವಾಸ್ತವ್ಯವೇ ಅನೇಕರಿಗೆ ಗೊತ್ತಿಲ್ಲ. ಕೋಟೆ ವೆಂಕಟರಮಣ ದೇವಸ್ಥಾನದ ಮುಸ್ಲಿಮ್-ಹಿಂದು ಮಿಶ್ರಿತ ಶಿಲ್ಪಕಲೆ ನಿಜಕ್ಕೂ ಆಕರ್ಷಿತವಾದದ್ದು. ಕಟ್ಟಡದ ವಯಸ್ಸು ಹಿರಿದಾದಂತೆ ಅಲ್ಲಿ ಕಲೆಯ ನೈಪುಣ್ಯತೆಯೂ ಹೆಚ್ಚಾಗಿರುತ್ತೆ ಎಂಬುದು ನನ್ನ ಪಯಣದ ಅನುಭವವಷ್ಟೆ.

ಕಾಲಾಸಿಪಾಳ್ಯದ ಇನ್ನೊಂದು ಮೂಲೆಯಲ್ಲಿರುವ ಬೃಹತ್ ಕಟ್ಟಡವೊಂದು ಇಂದು ಪಾಳುಬಿದ್ದಿದೆ. ಕಾರ್ಪೊರೇಷನ್ ಸ್ಕೂಲಿನ ಹಿಂಭಾಗದಲ್ಲಿರುವ ಈ ಕಟ್ಟಡದಲ್ಲಿ, ಸುಮಾರು 200 X 200 ಜಾಗದಷ್ಟಿರುವ ಈ ಕಟ್ಟಡದಲ್ಲಿ, ಅಂದು ಟಿಪ್ಪು ತನ್ನ ಮದ್ದು-ಗುಂಡುಗಳನ್ನು ಶೇಖರಿಸಿಡುತ್ತಿದ್ದ. ಅದನ್ನು ರಕ್ಷಿಸಿಕೊಳ್ಳಲಾಗದವರು ಬೆಂಗಳೂರಿಗರಾದ ನಾವು. ಈ ಕಾರ್ಪೊರೇಷನ್ ಸ್ಕೂಲಿನಲ್ಲಿ ಅತ್ತೆ ಹದಿನೈದಕ್ಕೂ ಹೆಚ್ಚು ವರ್ಷಗಳ ಕಾಲ ಟೀಚರಾಗಿದ್ದರು. ನಾನು ಇನ್ನೂ ಶಾಲೆಗೆ ಸೇರಿರದ ಕಾಲದಲ್ಲಿ ಅತ್ತೆಯ ಜೊತೆ ಇಲ್ಲಿಗೆ ಬರುತ್ತಿದ್ದೆ. ಆಗಿನಿಂದಲೂ ಕಲಾಸಿಪಾಳ್ಯ ಒಂಥರಾ ವಿಸ್ಮಯದ ಜಗತ್ತಿನಂತೆ ನನಗೆ. ಚೋಟುದ್ದ ಹುಡುಗರು ಬಸ್ಸನ್ನು, ಕಾರನ್ನು ರಿಪೇರಿ ಮಾಡುತ್ತಿರುವುದನ್ನು ನೋಡುವುದು, ಶರ್ಮಾ ಟ್ರಾನ್ಸ್ಪೋರ್ಟ್ ಮುಂದೆ ಹೆಚ್ಚಿಟ್ಟಿರುವ ಕಲ್ಲಂಗಡಿ ಹಣ್ಣು, ಅನಾನಸ್ ತಿನ್ನುವುದು, ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ 35A ಗಾಗಿ ಗಂಟೆಗಟ್ಟಲೆ ಕಾಯುವುದು, ಇವೆಲ್ಲಾ ಒಂದು ಕಾಲದ ಹವ್ಯಾಸವಾಗಿತ್ತು. ಈಗಲೂ ಕಲಾಸಿಪಾಳ್ಯ ಸುಂದರವಾಗಿದೆಯೆಂದೇ ಅನ್ನಿಸುತ್ತೆ. ಮಳೆಗಾಲದಲ್ಲಿ ಮಾತ್ರ ಇದರ ಹೆಸರು ಕಛಡಾ ಪಾಳ್ಯ ಎಂದು ಬದಲಿಸಬೇಕಾಗುತ್ತೆ.

6 - ಲಾಲ್ ಬಾಗ್

ಲಾಲ್ ಬಾಗ್ ಎಂದರೆ ಕೆಂಪುತೋಟ. ಒಂದು ಕಾಲದಲ್ಲಿ ಇಲ್ಲಿರುವ ಹಸಿರುಗಿಡಗಳಲ್ಲಿ ಕೆಂಪು ಹೂಗಳು ಬಿಡುತ್ತಿದ್ದವು. ಈಗ ಇಲ್ಲಿ ಹೂಗಿಡಗಳೇ ಇಲ್ಲ. ರೋಸ್ ಗಾರ್ಡನ್‍ನಲ್ಲಿ ಪಾರ್ಥೇನಿಯಮ್ ಕೂಡ ಇಲ್ಲ. ಜಿಂಕೆಗೆ ಕ್ಯಾರೆಟ್, ಸೌತೇಕಾಯಿ ತಿನ್ನಿಸುತ್ತಿದ್ದ ಕಾಲವೂ ಇತ್ತು. ಈಗ ಇಲ್ಲಿ ಜಿಂಕೆಯೂ ಇಲ್ಲ, ಸೌತೇಕಾಯಿಯೂ ಇಲ್ಲ. ಬಂಡೆಯ ಮೇಲಿರುವ ಕೆಂಪೇಗೌಡನ ಮತ್ತೊಂದು ಗೋಪುರವನ್ನು ಹೊಕ್ಕರೆ ಗೋಳಗುಮ್ಮಟದೊಳಕ್ಕೇ ಹೋಗುವಂತೆ ಭಾಸವಾಗುತ್ತಿತ್ತು. ಉತ್ತರ ಬೆಂಗಳೂರೆಲ್ಲಾ ಕಾಣುತ್ತಿತ್ತು. ಈಗ ಅಲ್ಲಿಂದ ಡಬಲ್ ರೋಡಿನ ಬಸ್ ಸ್ಟಾಂಡ್ ಕಾಣಿಸುತ್ತೆ ಅಷ್ಟೆ. ಎತ್ತರದ ಯುಟಿಲಿಟಿ ಕಟ್ಟಡ ಕಾಣ್ಸುತ್ತೆ, ವಿಧಿ ಇಲ್ಲದೆ. ಸ್ವತಃ ಟಿಪ್ಪು ಸುಲ್ತಾನ್ ನೆಟ್ಟ ಬೃಹತ್ ಮರವೂ ಇನ್ನೂ ಜೀವಂತವಾಗಿದೆ. ಲಾಲ್‍ಬಾಗ್‍ಗೆ ಹೋದಾಗ ಈ ಮರವನ್ನು ನೋಡದೆ ಹಿಂದಿರುಗಲು ಸಾಧ್ಯವೇ ಇಲ್ಲ.

ಅದೆಷ್ಟು ಸಾವಿರ ಸಲ ಹೋಗಿದ್ದೀನೋ ಲಾಲ್‍ಬಾಗಿಗೆ, ಇಲ್ಲಿ ಏನಿರಲಿ, ಏನಿರದಿರಲಿ - ಮರಗಳಿವೆ, ತಂಪಿದೆ. ಗಾಜಿನ ಮನೆಯು ಬಾಲ್ಯದಲ್ಲಿ ಆಟವಾಡುತ್ತಿದ್ದ ಜಾಗವಾಗಿತ್ತು. ನಮ್ಮ ತಂದೆಯ ಕಾಲದಲ್ಲಿ ಲಾಲ್‍ಬಾಗ್ ತೋಟದಲ್ಲಿ ಮೃಗಾಲಯವೂ ಇತ್ತು. ಅದನ್ನು ಮೈಸೂರಿಗೆ ವರ್ಗಾಯಿಸಿ ಅಷ್ಟೇನೂ ಹೆಚ್ಚು ಕಾಲ ಸಂದಿಲ್ಲ. ಈಗ ಲಾಲ್‍ಬಾಗ್ ಒಳಕ್ಕೆ ಹೋಗಲು ಶುಲ್ಕ ತೆರಬೇಕಾಗಿದೆ. ಒಳ್ಳೇದೇ.. ಇಲ್ಲಿ ಬರುವ ಹದ್ದು ಮೀರಿದ 'ಪ್ರೇಮಿಗಳು' ಮತ್ತು ಅವರನ್ನು ವೀಕ್ಷಿಸಲೆಂದೇ ಬರುವ 'ಪ್ರೇಕ್ಷಕರು' ಒಳಕ್ಕೆ ಬರುವುದು ತಪ್ಪಿದೆ. ಆದರೆ ನನ್ನಂಥವರು, ಕೇವಲ ಹಾಪ್‍ಕಾಮ್ಸ್ ಹಣ್ಣಿನ ರಸವನ್ನು ಕುಡಿಯಲು,ಖಾರದ ಕಡಲೆ ಪುರಿ ತಿನ್ನಲು ಒಳಕ್ಕೆ ಹೋಗುವವರು ಸ್ವಲ್ಪ ಜೇಬಿನ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ. ಹತ್ತು ರುಪಾಯಿ ಮಾಡಿಬಿಟ್ಟಿದ್ದಾರೆ ಈಗ ಶುಲ್ಕವನ್ನು!! ಬೆಂಗಳೂರು ದಕ್ಷಿಣ ತಂಪಾಗಿದೆ, ಸುಂದರವಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಲಾಲ್‍ಬಾಗು ಎಂದು ನನ್ನ ಅನಿಸಿಕೆ.

5 - ಕಹಳೆ ಬಂಡೆ

ನನಗಿಂತ ನನ್ನ ಕಸಿನ್ ಗುರುನಾಥ, ಮತ್ತೆ ಅಕ್ಕ ಇವರ ಪಾಲಿಗೆ ಕಹಳೆ ಬಂಡೆ ಹೆಚ್ಚು ನೆನಪಿನಾಳದ ಸರೋವರಕ್ಕಿಳಿಸುತ್ತೆ. ಆದರೆ ನನ್ನ ಬಾಲ್ಯದ ಆಟವೂ ಇದೇ ಕಹಳೆ ಬಂಡೆಯ ಆವರಣದಲ್ಲೇ ಇತ್ತಾದ್ದರಿಂದ ಇದರ ಮೇಲಿನ ಒಲವು ಎಳ್ಳಷ್ಟೂ ಕುಂದಿಲ್ಲ. ಇಲ್ಲೊಂದು ಗೂಳಿಯಿತ್ತಂತೆ. ಬಹಳ ರೌಡಿ ಗೂಳಿ. ಹೋಗೋರ್-ಬರೋರಿಗೆಲ್ಲಾ ಕಾಟ ಕೊಡುತ್ತಿದ್ದ ಈ ಗೂಳಿಯ ಸಾವು ಬಸವನಗುಡಿ ನಿವಾಸಿಗಳಿಗೆ ಉಸಿರಾಡುವಂತಾಗಿತ್ತಂತೆ. ಆದರೂ ಗೂಳಿಯ ಮೇಲಿನ ಗೌರವಕ್ಕಾಗಿ ಅದಕ್ಕೊಂದು ಸಮಾಧಿ ಕೂಡ ಕಟ್ಟಿದ್ದಾರೆ. ಆ ಸಮಾಧಿ ಇಂದಿಗೂ ಬ್ಯೂಗಲ್ ರಾಕಿನಲ್ಲಿದೆ. ಸಮಾಧಿಯ ಮೇಲೆ ಒಂದು ಬಸವಣ್ಣನ ವಿಗ್ರಹವನ್ನೂ ಕೂರಿಸಿದ್ದಾರೆ.

ಇಲ್ಲೂ ಕೆಂಪೇಗೌಡನ ಗೋಪುರವಿದ್ದೂ, ಬೆಂಗಳೂರು ದಕ್ಷಿಣ ಪೂರ್ತಿ ಕಾಣಿಸುವಂತಿತ್ತು ಕೇವಲ ಹದಿನೈದು ವರ್ಷದ ಕೆಳಗೆ. ಇಂದು ಗೋಪುರ ಮಾತ್ರ ಇದೆ. ಏನೂ ಕಾಣಿಸುವುದಿಲ್ಲವಷ್ಟೆ. ಆ ಗೋಪುರದ ಕೆಳಗಿರುವ ಬಂಡೆಗಳ ಮೇಲೆ ಆ ಕಾಲದ ಸೈನಿಕರು ದೀಪಕ್ಕಾಗಿ ಬಳಸುತ್ತಿದ್ದ ಗುಳಿಗಳನ್ನು ನೋಡಬಹುದು. ಬಂಡೆಗಳ ಮೇಲೆ ಗುಳಿಗಳನ್ನು ಮಾಡಿ, ಅಲ್ಲಿ ಎಣ್ಣೆ ಸುರಿದು ದೀಪ ಹೊತ್ತಿಸುತ್ತಿದ್ದರಂತೆ. ಕೆಂಪೇಗೌಡನು ಬೆಂಗಳೂರಿನಲ್ಲಿ ನಿರ್ಮಿಸಿರುವ ಎಲ್ಲಾ ಎಂಟು ಗೋಪುರಗಳೂ 'ವಾಚ್ ಟವರ್'ಗಳಾಗಿದ್ದವು. ಅವು ನಾಲ್ಕೇ ಇದೆ, ಬೆಂಗಳೂರಿನ ಮಿತಿಯನ್ನು ಗುರುತಿಸಲು ಕೆಂಪೇಗೌಡ ಅವನ್ನು ನಿರ್ಮಿಸಿದನೆಂಬುದು ಹುಸಿನಂಬಿಕೆಯಷ್ಟೆ. ಬೆಂಗಳೂರಿಗೆ 'ಬೆಂದಕಾಳೂರು' ಎಂಬ ಹೆಸರಿತ್ತು ಎಂಬುದಕ್ಕೂ ಸರಿಯಾದ ಪುರಾವೆಗಳಿಲ್ಲ, ಪ್ರಚಾರಗಳಿವೆಯಷ್ಟೆ.

ಬ್ಯೂಗಲ್ ರಾಕಿನ ತುಂಬಾ ಬರೀ ಬಂಡೆಗಳದೇ ಆರ್ಭಟ. ಪೊದೆಗಳಲ್ಲಿ ಹಾವು ಚೇಳುಗಳಿಗೆ ಕೊರತೆಯೇ ಇರಲಿಲ್ಲ. ಸಂಜೆ ಆರರ ನಂತರ ಇದು ಮಾದಕವಸ್ತು ಮಾರಾಟಗಾರರ ತಾಣವಾಗಿಬಿಡುತ್ತಿತ್ತು. ವ್ಯಭಿಚಾರಕ್ಕೆ, ವ್ಯವಹಾರಕ್ಕೆ ನೆಲೆಯಾಗಿತ್ತು. ಈಗ ಇದು ಉದ್ಯಾನವಾಗಿದೆ. ಒಳ್ಳೆಯ ಬೆಳವಣಿಗೆ, ಆದರೂ ಬಂಡೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬ್ಯೂಗಲ್ ರಾಕಿನಲ್ಲಿ ದೆವ್ವ ಇದೆ ಎಂಬ ಪ್ರತೀತಿಯೂ ಇತ್ತು.

ಡಿ.ವಿ.ಜಿ. ಸ್ಟಾಚು ಮೊನ್ನೆ ಮೊನ್ನೆ ಅಲ್ಲಿ ನಿರ್ಮಿಸಿ, ಬಸವನಗುಡಿ ನಿವಾಸಿಗಳಾಗಿದ್ದ ಹಿರಿಯ ಕವಿಗೆ ಉತ್ತಮ ಗೌರವ ಸಲ್ಲಿಸುವ ಕೆಲಸವದಾಗಿದೆ. ಅದರ ಎದುರು ಸುಂದರ ಮೆಟ್ಟಿಲುಗಳನ್ನು ಮಾಡಿ, ಅದನ್ನು ವೇದಿಕೆಯೆದುರು ಕುಳಿತುಕೊಳ್ಳುವ ಸೀಟುಗಳಂತೆಯೂ ಬಳಸಬಹುದಾಗಿದ್ದು ಒಳ್ಳೆಯ ಯೋಜನೆಯಾಗಿದೆ. ಆಗ (ಕೇವಲ ಹದಿನೈದು ವರ್ಷಗಳ ಹಿಂದೆ) ಇಲ್ಲಿ ಬರೀ ಪೊದೆಗಳಿದ್ದವು.

ಬ್ಯೂಗಲ್ ರಾಕಿನ ಒಳಗೆ ದೊಡ್ಡ ಬಸವಣ್ಣನ ದೇವಸ್ಥಾನ, ದೇಶದಲ್ಲೇ ಐದನೇ ಅತಿ ದೊಡ್ಡ ನಂದಿಯೆಂದು ಖ್ಯಾತಿಯಾಗಿದ್ದಲ್ಲದೆ, ಋಷಭಾವತಿ ನದಿಯ ಉಗಮಸ್ಥಾನ ಕೂಡ ಆಗಿದೆ. ಈಗ ಅಂತರ್ಜಲವಾಗಿರುವ ಋಷಭಾವತಿಯು ಕೆಲವೇ ವರ್ಷಗಳ ಕೆಳಗೆ ಆಚಾರ್ಯ ಪಾಠಶಾಲೆಯ ಪಕ್ಕದಲ್ಲೇ ಇದ್ದ ಕಲ್ಯಾಣಿಯಲ್ಲಿ ಹುಟ್ಟುತ್ತಿತ್ತು. ಪ್ರತಿವರ್ಷವೂ ಆಚಾರ್ಯ ಪಾಠಶಾಲೆಯ ಗಣಪತಿ ಉತ್ಸವವು ಜೋರಾಗಿ ನಡೆದು, ಇಡೀ ಬಸವನಗುಡಿಯೆಲ್ಲಾ ಮೆರವಣಿಗೆಯಾದ ನಂತರ ವಿಸರ್ಜನೆಯನ್ನು ಇದೇ ಕಲ್ಯಾಣಿಯಲ್ಲಿ ಮಾಡುತ್ತಿದ್ದರು. ಈಗ ಆ ಕಲ್ಯಾಣಿ BWSSB ಕಚೇರಿ ಆಗಿದೆ.

ಒಂದು ಕಾಲದಲ್ಲಿ ಆಚಾರ್ಯ ಪಾಠಶಾಲೆ, ಬಿ.ಎಮ್.ಎಸ್. ಕಾಲೇಜು - ಇವಿಷ್ಟೂ ಬ್ಯೂಗಲ್ ರಾಕಿಗೆ ಸೇರಿದ ಆಸ್ತಿಯಾಗಿತ್ತು.

4 - ಆರ್ಮಿ ಸ್ಟೋರು

ಶಿವಾಜಿನಗರ ಎಷ್ಟೊಂದು ಜನರ ಶತ್ರು. ಗಲೀಜು, ಗೂಂಡಾಗಿರಿ, ಡ್ರಗ್ಸು - ಇಂಥದ್ದೇ ರಾರಾಜಿಸುತ್ತಿದ್ದ ಕಾಲವೂ ಇತ್ತು. ಬಹುಶಃ ಈಗಲೂ ಇದೆ. ಅದೇ ರೀತಿ, ಇಲ್ಲಿರುವ ಕಮರ್ಷಿಯಲ್ ಸ್ಟ್ರೀಟು ಬ್ರಿಟಿಷರ ಕಾಲದಿಂದಲೂ ಶಾಪಿಂಗ್‍ಗೆ ಹೇಳಿಮಾಡಿಸಿದ್ದ ಜಾಗ. ಆದರೆ ನನಗೆ ಎಂದೂ ರುಚಿಸಿಲ್ಲ. ಆದರೆ ನನಗೆ ಇಷ್ಟವಾಗಿರುವುದು ಅದರ ಸಮೀಪದಲ್ಲೇ ಇರುವ ಆರ್ಮಿ ಸ್ಟೋರು. ಶಿವಾಜಿನಗರದ ಇನ್ನೊಂದು ಬೀದಿಯಲ್ಲಿ ಮಿಲಿಟರಿ ಬಟ್ಟೆಗಳು, ಕಿಟ್ಟುಗಳು, ಚೀಲಗಳು, ಪೆಟ್ಟಿಗೆಗಳು ದೊರಕುವ ಅಂಗಡಿಗಳ ಸಾಲೇ ಇದೆ. ಈ ಸಾಲಿನಲ್ಲಿ ಶ್ರೇಷ್ಠವೆನಿಸಿರುವುದು ಆರ್ಮಿ ಸ್ಟೋರು.

ಹೈಸ್ಕೂಲಿನಲ್ಲಿ ಎನ್.ಸಿ.ಸಿ.ಯಲ್ಲಿದ್ದಾಗಿಲಿಂದಲೂ ಇಲ್ಲಿಗೆ ಭೇಟಿ ನೀಡುತ್ತಲೇ ಇದ್ದೇನೆ. ಅದು, ಬ್ಯಾಡ್ಜ್ ಖರೀದಿಗಾಗಲೀ, ಮಳೆಯ ಕೋಟಿಗಾಗಲೀ. ಆರ್ಮಿ ಸ್ಟೋರಿನಲ್ಲಿ ಚೌಕಾಸಿ ಮಾಡಿ ಕೊಂಡುಕೊಳ್ಳುವ ಮಜವೇ ಬೇರೆ! ಟ್ರೆಕ್ಕಿಂಗ್ ಶೂ ಕೂಡ (ಹಂಟರ್ ಶೂ) ಏಳುನೂರರಿಂದ ಇನ್ನೂರಕ್ಕೆ ಚೌಕಾಶಿ ಮಾಡಿ ಕೊಂಡಾಗ ಏನೋ ಆನಂದ!

ಶಿವಾಜಿನಗರದ ಬಸ್ ಸ್ಟಾಂಡು ಈಗ ಕೆಲವು ವರ್ಷಗಳಿಂದ ಬಹಳ ಸುಂದರವಾಗಿ ಸುಲಲಿತವಾಗಿ ಮಾಡಿಬಿಟ್ಟಿದ್ದಾರೆ. ಮೊದಲು ಹೀಗಿರಲಿಲ್ಲ. ವಿಪರೀತ ಗೊಂದಲಮಯವಾಗಿತ್ತು. ಕಲಾಸಿಪಾಳ್ಯಕ್ಕಿಂತಲೂ ಅಸಹ್ಯ ತರಿಸುವಂತಿತ್ತು. ಆದರೂ ಬಸ್ ಸ್ಟಾಂಡಿನಲ್ಲೇ ಇರುವ ಹೊಟೆಲು (ಹೆಸರು ಮರೆತುಬಿಟ್ಟಿದ್ದೇನೆ) ಇಡ್ಲಿ ವಡೆ ಕಾಫಿಗೆ ಬಹಳ ಜನಪ್ರಿಯ. ಸೊಗಸಾಗಿಯೂ ಇದೆ.

3 - ಜಿಂಕೆ ಪಾರ್ಕ್

ನಾನು ವಾಸ್ತವವಾಗಿ ಜಿಂಕೆ ಪಾರ್ಕ್ ಬಗ್ಗೆ ಮಾತನಾಡುತ್ತಿಲ್ಲ. ಆ ಪಾರ್ಕು ಈಗ ದರಿದ್ರ ಅಮ್ಯೂಸ್‍ಮೆಂಟ್ ಪಾರ್ಕೊಂದಾಗಿದೆ. ಅದರ ಬದಿಯಲ್ಲೇ ಇರುವುದು ಹಿಂದೂ ರುದ್ರಭೂಮಿ. ಹೆಚ್ಚಿಗೆ ಬರೆಯುವುದಿಲ್ಲ ಇದರ ಬಗ್ಗೆ.

2 - ಗಾಂಧಿ ಬಜಾರ್

ಗಾಂಧಿ ಬಜಾರಿನ ಬಗ್ಗೆ ಹಿರಿಯ ಸಾಹಿತಿಗಳೆಲ್ಲರೂ ಬರೆದುಬಿಟ್ಟಿದ್ದಾರೆ. ಡಿ.ವಿ.ಜಿ.ಯಿಂದ ಹಿಡಿದು ಕೈಲಾಸಂ ವರೆಗೆ, ಮಾಸ್ತಿಯಿಂದ ಹಿಡಿದು ನಿಸಾರ್ ಅಹಮದ್ ವರೆಗೆ, ಬೆಳಗೆರೆಯಿಂದ ಹಿಡಿದು ಶ್ರೀನಿಧಿಯವರೆಗೆ. ಇನ್ನು ನಾನೊಬ್ಬ ಬಾಕಿ. ಹಿರಿಯನೂ ಅಲ್ಲ, ಸಾಹಿತಿಯೂ ಅಲ್ಲ. ಆದರೂ ಗಾಂಧಿಬಜಾರಿನ ಅಭಿಮಾನಿಯಂತೂ ನಿಜ. ಏನೇ ಕೊಂಡುಕೊಳ್ಳಬೇಕಾದರೂ ಮೊದಲು ಗಾಂಧಿಬಜಾರಿಗೇ ಆದ್ಯತೆ. ಇಲ್ಲಿ ಸಿಗದೇ ಹೋದರೆ ನಂತರ ಬೇರೆ ಸ್ಥಳಗಳು. ಒಂದು ಮೊಳ ಹೂವು ಖರೀದಿಸಲೂ ಗಾಂಧೀಬಜಾರೇ ಬೇಕು. ಶೆಮ್ಮಂಗುಡಿ ಸಿ.ಡಿ.ಗೆ ಸಂಗೀತ್ ಸಾಗರ್ರೇ ಆಗಬೇಕು. ಕಾಫಿಗೆ ಬಾಲಾಜಿಯೇ ಆಗಬೇಕು, ಅತಿಮಧುರಕ್ಕೆ ಸರ್ಕಲ್ಲಿನ ಗ್ರಂಧಿಗೆ ಅಂಗಡಿಯೇ ಆಗಬೇಕು (ಮನೆಯ ಕೆಳಗಡೆ ರೆಸ್ತೆಯಲ್ಲೇ ಇದ್ದರೂ), ಫ್ರೂಟ್ ಜ್ಯೂಸಿಗೆ ಇಲ್ಲಿಯ ಗಣೇಶನೇ ಬೇಕು, ದೋಸೆಗೆ ಮಹಾಲಕ್ಷ್ಮಿಯೇ ಬೇಕು, ಲೇಖನಿಗೆ ಸರಸ್ವತಿಯೇ ಆಗಬೇಕು, ಕನ್ನಡ ಪುಸ್ತಕಕ್ಕೆ ಅಂಕಿತವೇ ಬೇಕು, ಬನಿಯನ್ನು ಒಳಚಡ್ಡಗಳಿಗೂ ಗಾಂಧಿಬಜಾರೇ ಆಗಬೇಕು!! (ಯಾವ ಅಂಗಡಿ ಅಂತೆಲ್ಲಾ ಹೇಳಲ್ಲ, ಸಾರಿ).

ಗಾಂಧಿ ಬಜಾರು ತ್ರಿಕರಣಶುದ್ಧವಾಗಿ ನನ್ನನ್ನು ಆಕ್ರಮಿಸಿಕೊಂಡುಬಿಟ್ಟಿದೆ. ಏಳನೇ ತರಗತಿಯವರೆಗೂ ಇಲ್ಲೇ ಇರುವ ವಿಮೆನ್ಸ್ ಪೀಸ್ ಲೀಗಿನಲ್ಲಿ ಓದಿದ ನಾನು ಮಗುವಿನಿಂದಲೂ ಡಿ.ವಿ.ಜಿ.ರಸ್ತೆಯಲ್ಲಿ ಅಡ್ಡಾಡಿದವನು. ಚಡಗನ ಅಂಗಡಿಯ ಬೆಣ್ಣೆ ಗುಲ್ಖನ್ ಮೆಲ್ಲಿದವನು. ಸುಬ್ಬಮ್ಮ ಅಂಗಡಿಯ ತೇಂಗೋಳ್ ಚಕ್ಕುಲಿಯನ್ನು ಕುರುಕಿದವನು. ವಿದ್ಯಾರ್ಥಿ ಭವನದ ಮಸಾಲೆ ದೋಸೆಯನ್ನು ಸವಿದವನು. ಮಾಡರ್ನ್ ಟಿಫನ್ ರೂಮಿನ ದಮ್ರೋಟನ್ನು ಚಪ್ಪರಿಸಿದವನು. ಈಶ್ವರನ ದೇವಸ್ಥಾನದ ಪಕ್ಕದಲ್ಲಿರುವ ಕಾಫಿಪುಡಿ ಅಂಗಡಿಯಿಂದ ಹೊರಹೊಮ್ಮುವ ಸುಗಂಧವನ್ನು ಮೈತುಂಬಿಕೊಂಡವನು. ಕೆನೆರಾ ಬ್ಯಾಂಕಿನ ದೆಸೆಯಿಂದ ನೋಟನ್ನು ಎಣಿಸಲು ಕಲಿತವನು. ಆರ್ಯಭವನದ ಸೋಹಂಪಾಪ್ಡಿಯನ್ನು ತಿಂದವನು. ವಿಟ್ಠಲ್ ಡ್ರೆಸ್ಸಸ್‍ನ ಬಟ್ಟೆಯನ್ನು ತೊಟ್ಟವನು. ವಿ.ಎಸ್. ಎಂಡ್ ಸನ್ಸ್‍ನ ನೋಟ್ ಪುಸ್ತಕಗಳಲ್ಲಿ ಬರೆದವನು. ಮಹಾಲಕ್ಷ್ಮಿಯ ಕಾಫಿಯನ್ನು ಹೀರಿದವನು! ಕಾಯಾ-ವಾಚಾ-ಮನಸಾ ಗಾಂಧಿಬಜಾರು ನನ್ನೊಳಕ್ಕೆ (ಅಥವಾ ತದ್ವಿರದ್ಧ) ಐಕ್ಯವಾಗಿಬಿಟ್ಟಿದೆ.


1 - ಮೆಜೆಸ್ಟಿಕ್ ಬಸ್ ನಿಲ್ದಾಣ


ಬಿ.ಎಂ.ಟಿ.ಸಿ ಬಸ್ ನಿಲ್ದಾಣವಲ್ಲ, ಆದರೆ ಕೆ.ಎಸ್.ಆರ್.ಟಿ.ಸಿ. ನಿಲ್ದಾಣ. ಮನಸ್ಸು ಜಡವಾದಾಗ ದೇಹ ಇಲ್ಲಿ ಬಂದು ಕುಳಿತುಬಿಡುತ್ತೆ. "ಆಸ್ಸನ್ ಬೇಲೂರ್ ಚಿಕ್‍ಮಳೂರ್.." ಅಂತ ಕಂಡಕ್ಟರ್ರು ಕೂಗುತ್ತಿರುವುದನ್ನು ಕೇಳುವುದೇ ಆನಂದ. "ಮಂಗ್ಳೂರ್.. ಉಡುಪಿ... ಕುಂದಾಪುರ" ಎಂದು ಕೇಳಿದೊಡನೆಯೇ ಹತ್ತುಬಿಡಲೇ ಎಂದೆನಿಸುತ್ತೆ. ಇಲ್ಲಾ, ಮನೇಲಿ ಹೇಳಿಲ್ಲ, ಅದೂ ಅಲ್ಲದೆ ನಾಳೆ ಶಾಲೆಗೆ ಹೋಗಬೇಕು. ಇನ್ಯಾವಾಗಲಾದರೂ ಹೋಗೋಣ ಅಂತ ನನಗೆ ನಾನೇ ಹೇಳಿಕೊಂಡು ಮುಂದಿನ ಪ್ಲಾಟ್ ಫಾರಮ್ಮಿನ ಕಡೆ ಹೆಜ್ಜೆ ಹಾಕುತ್ತೇನೆ. ಎಲ್ಲಾ ಊರಿನ ಬಸ್ಸುಗಳನ್ನೂ ಅವುಗಳ ಕಂಡಕ್ಟರುಗಳನ್ನೂ ನೋಡಿ ಅವರ ಬಾಯಿಂದ ಹೊರಡುವ ಊರಿನ ಸಹಸ್ರನಾಮಾರ್ಚನೆಯನ್ನೂ ಕೇಳಿ ಆನಂದಿಸಿ ಮತ್ತೆ ಮನೆಗೆ ಹಿಂದಿರುಗುವ ಹೊತ್ತಿಗೆ ನಾಳಿನ ಕೆಲಸಕ್ಕೆ ಚೈತನ್ಯ ಉಕ್ಕಿ ಬಂದಿರುತ್ತೆ. ಅಂತೆಯೇ ರೈಲ್ವೇ ನಿಲ್ದಾಣ ಕೂಡ. ಪ್ಲಾಟ್‍ಫಾರಂ ಟಿಕೆಟ್ ಖರೀದಿಸಿ, ಎಲ್ಲಾ ಪ್ಲಾಟ್‍ಫಾರಂ‍-ನೂ ನೋಡುತ್ತಾ, ಹತ್ತಿಬಿಡಲೇ ಎಂದೆನಿಸಿದರೂ ನೆಕ್ಸ್ಟ್ ಟೈಮ್ ಎಂದುಕೊಂಡು, ಎಲ್ಲಾ ರೈಲಿಗೂ ಟಾಟಾ ಮಾಡುತ್ತಾ ಒಂದು ಚಹ ಹೀರಿ ಮನೆಗೆ ಹಿಂದಿರುಗುವಾಗ ಅನ್ನಿಸುವುದು "ಆಹ್, ಬದುಕು ಸುಂದರ ಅಲ್ಲವೇ?"

-ಅ
01.09.2008
12AM

Thursday, August 28, 2008

ಇಂಗ್ಲೀಷು

ನ್ನಡ ಚಿತ್ರಗೀತೆಗಳಲ್ಲಿ ಇಂಗ್ಲೀಷು ಮೆರೆಯುತ್ತಿದೆ. ಕನ್ನಡ ಗೀತರಚನಾಕಾರರು 'ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು' ಎನ್ನುವುದರ ಬದಲು, 'ನಿನ್ನ ಲುಕ್ಕು ಬೇರೇನೇ, ನಿನ್ನ ಟಚ್ಚು ಬೇರೇನೇ..' ಅನ್ನೋಕೆ ಶುರು ಮಾಡಿದ್ದಾರೆ. ಕನ್ನಡ ಭಾಷೆಯನ್ನು ಹೊಗಳುವ ಗೀತೆಗಳಿಗೂ ಸಹ ಇಂಗ್ಲೀಷಿನ ಹಂಗು ಬಂದುಬಿಟ್ಟಿದೆ. ಉದಯಶಂಕರರು 'ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ' ಎಂದರೆ ಈಗಿನ ಮಹಾನ್ ಕವಿಯೊಬ್ಬರು 'ಸಿಂಪಲ್ ಆಗ್ ಹೇಳ್ತೀನ್ ಕೇಳೇ ನಮ್ಮೂರ ಭಾಷೆ..' ಅನ್ನುತ್ತಾರೆ.

ಇನ್ನು ಸ್ವಲ್ಪ ಕಾಲ ಆದಮೇಲೆ ಬಹುಶಃ ಈ ಅರ್ಧಂಬರ್ಧ ಇಂಗ್ಲೀಷ್ ಬೆರೆತ ಕನ್ನಡ ಹಾಡುಗಳೂ ಹೊರಟುಹೋಗಿ ಪೂರ್ತಿ ಇಂಗ್ಲೀಷೇ ಆಗಿಬಿಡುತ್ತೇನೋ. ಶ್ರೀನಿವಾಸ, ನಾನು ಆಗಾಗ್ಗೆ ಕನ್ನಡ ಹಾಡುಗಳನ್ನು ಹಾಸ್ಯಕ್ಕೆಂದು ಈ ರೀತಿ ಇಂಗ್ಲೀಷಿಗೆ (ಅರ್ಧಂಬರ್ಧ) ತರ್ಜುಮೆ ಸಹ ಮಾಡುತ್ತಾ ನಗುತ್ತಿರುತ್ತೇವೆ. ಆದರೆ ಚಿತ್ರರಂಗದಲ್ಲಿ ಆ ಕಾಲವೂ ಬಂದರೆ ಅಚ್ಚರಿಯಿಲ್ಲ.

What we speak is ಕನ್ನಡ language.... ಕನ್ನಡಾ language....
the place where we live is beautiful temple.. marvelous temple.. sandalwood temple...

ಈ ರೀತಿ ಹಾಡುಗಳನ್ನು ಬರೆಯುವ ಭೂಪರೂ ಜನಿಸಬಹುದೇನೋ.

sky-ಗೊಂದು limit ಎಲ್ಲಿದೆ?
ನಿನ್ desire-ಗೆಲ್ಲಿ end ಇದೆ?
ಏಕೆ dream ಕಾಣುವೆ?
slow down-ಉ, slow down-ಉ...

ಏನ್ ಮಾಡೋದು, forehead writings ಗೆ responsible ಯಾರು? ಅಂತ ಶ್ರೀನಿವಾಸನನ್ನು ಕೇಳಿದೆ. ಅವನೆಂದ, "ಇನ್ಯಾರು, author-ಏ responsible-ಉ.. " ಅಂತ.

ನಾನು, "ಹೌದು, ನಮ್ಮ forehead writings-ಗೆ ಆ four-headed forehead writer-ಏ responsible-ಉ" ಎಂದೆ.

ಶಾಲೆಯಲ್ಲಿ ಇನ್ನೂ ಒಂದನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ತಮಗೆ ಗೊತ್ತಿರುವ ಕೆಲವೇ ಪದಗಳನ್ನು ಬಳಸಿ ಮುದ್ದುಮುದ್ದಾಗಿ ಮಾತನಾಡುವುದನ್ನು ನೋಡಿದರೆ ಮೈಪುಳಕವಾಗುತ್ತೆ. ಆದರೆ ದೊಡ್ಡವರೂ ಹೀಗೆ ಮಾಡಿಬಿಟ್ಟರೆ ಮೈ ಪರಚಿಕೊಳ್ಳುವಂತಾಗುತ್ತೆ.

"ಸರ್, your lunch bag is ಸೋರಿಂಗ್" ಎಂದ ಒಬ್ಬ ಹುಡುಗ ನನ್ನ ಊಟದ ಚೀಲದಿಂದ ಸೋರುತ್ತಿದ್ದ ಮೊಸರನ್ನು ನೋಡಿ.

"that not sir, this.." ಎಂದು ಹೇಳುವ ಮಗುವಿನ ಭಾವಾರ್ಥ ತಿಳಿದರೆ ಸಾಕು, ಅದಕ್ಕೆ ಗೊತ್ತಿರುವುದು ಮೂರೋ ನಾಲ್ಕೋ ಪದ. ವಾಕ್ಯ ರಚನೆ ಮಾಡಲು ಯತ್ನಿಸುತ್ತವಲ್ಲಾ ಎಂಬ ಖುಷಿ. ತಿದ್ದಬಹುದು.

"ನಿನ್ನ ನಗುವು ಹೂವಂತೆ..." , "ನಗುವೇ ಸ್ನೇಹದ ಹಾಡು.." ತರಹದ ಹಾಡುಗಳು ಹುಟ್ಟಿದ ಈ ಚಿತ್ರರಂಗದಲ್ಲಿ "ವಾಟೆ ಸ್ಮೈಲ್, ವಾಟೆ ಸ್ಮೈಲ್.." ಅಂತ ಒಳ್ಳೇ ಮಾವಿನ ಕಾಯಿ ವಾಟೆ (ಓಟೆ)ಯನ್ನೆಲ್ಲಾ ರೂಪಕಾಲಂಕಾರಕ್ಕೆ ಬಳಸಿಕೊಂಡರೆ ಹೇಗೆ! ಇಂಥಾ ಗೀತರಚನಾಕಾರರಿಗಿಂತ ಒಂದನೇ ತರಗತಿಯ ಮಕ್ಕಳ ಇಂಗ್ಲೀಷ್ ಬೆರೆತ ಕನ್ನಡ ಮುದ್ದು ಮಾತುಗಳು ಸಾವಿರ ಪಾಲು ಮೇಲು.

ಕನ್ನಡ ಮೀಡಿಯಮ್ಮನ್ನು ಕಂಡರೆ ಸಿಡಿಮಿಡಿಗೊಳ್ಳುವ ಜನರು, ಕನ್ನಡ ಮೀಡಿಯಮ್ಮಿನಲ್ಲಿ ಓದುವವರು ಜಗತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲು ಅನರ್ಹರಾಗುತ್ತಾರೆಂಬ ಭ್ರಮೆಯುಳ್ಳ ಜನರು ಇರುವ ತನಕ, ಇಂಗ್ಲೀಷ್ ಹಾವಳಿ ಇದ್ದೇ ಇರುತ್ತೆ.

ಕುವೆಂಪು ಬರೆದ ಈ ಕವನವನ್ನು ಎಷ್ಟು ಸಲ ಓದಿಕೊಂಡು ನೊಂದಿದ್ದೇನೋ ಗೊತ್ತಿಲ್ಲ.

ಸಾಕು ಈ ಬಲಾತ್ಕಾರ

ಇಂಗಿಹೋಗುತಿದೆ ಇಂಗ್ಲಿಷಿನ ಮರುಭೂಮಿಯಲಿ
ನಿನ್ನ ಮಕ್ಕಳ ಶಕ್ತಿ - ಬುದ್ಧಿ - ಪ್ರತಿಭಾ;
ರಾಷ್ಟ್ರನಾಯಕ ಮನದಿ ವಿವೇಕರೂಪದಿ ಮೂಡಿ,
ಓ ರಸಮಯ ಸರಸ್ವತಿಯೆ, ಪೊರೆ ಬಾ!

ಕಲ್ಲ ಕುಂಡದಿ ನೆಟ್ಟ ಅಶ್ವತ್ಥಸಸಿಯಂತೆ
ಕಿಮುಳ್ಚಿ ಗುಜ್ಜಾಗುತಿದೆ ಮೊಳೆವ ಚೈತನ್ಯ;
ಭೂಮಿಯಲಿ ಬೇರೂರಿ, ಬಾನೆಡೆಗೆ ತಲೆಯೆತ್ತಿ
ನಿಲುವವರಿಗೇತಕೀ ದಾಸ್ಯದೈನ್ಯ?

ಗಾಂಧಿಯಿಂದಿಂಗ್ಲಿಷರ ದಾಸ್ಯದಿಂ ಪಾರಾದೆ;
ಅವನ ಕೊಂದಿಂಗ್ಲಿಷಿಗೆ ದಾಸಿಯಾದೆ.
ಓ ತಾಯಿ ಭಾರತಿಯೆ, ಚೀಣೀಯರನೆ ಮೀರಿ
ಹಿಂಡುತಿದೆ ಕಂದರನು ಇಂಗ್ಲಿಷಿನ ಮಾರಿ!

ಬಲಾತ್ಕಾರಕಾಗಿ ಮಾತ್ರವೆ ಹೊರತು ಈ ರೋಷ,
ಭಾಷೆಗಾಗಿಯೆ ನಮ್ಮ ದ್ವೇಷವೇನಿಲ್ಲ;
ತೆಗೆಯಿರಿ ಬಲಾತ್ಕಾರದಂಶವನು; ಆರಿಸಲಿ
ಸರ್ವರೂ ಇಂಗ್ಲಿಷನೆ, ಚಿಂತೆ ಇನಿತಿಲ್ಲ.

ಭಾವಜಲಮೂಲವನೆ ಹೀರುತಿದೆ ಮರುಭೂಮಿ,
ಹಿಂಡೆ ಜೀವವನು ಇಂಗ್ಲಿಷಿನ ಕಲ್ಗಾಣ;
ಕನ್ನಡದ ಕ್ರಿಸ್ತನದೊ ಇಂಗ್ಲಿಷಿನ ಶಿಲುಬೆಯಲಿ
ಸಿಲುಕಿ ಬಾಯ್ವಿಡುತಿಹನು ನೀರಡಸಿ ಪ್ರಾಣ!

ಹೆಣಭಾರ! ಹೆಣಭಾರ! ಸಾಕೀ ಬಲಾತ್ಕಾರ;
ಸಾಕು ನಿಲ್ಲಿಸಿ, ನಿಮಗೆ ಬೇಕಾದರುದ್ಧಾರ.
ಇಂಗ್ಲಿಷಿನ ಚಪ್ಪಡಿಯಡಿಯ ಹಸುಳೆಚೀತ್ಕಾರ
ಕೇಳಿಸದ ಕಿವುಡರಿರ, ನಿಮಗೇಕೆ ಅಧಿಕಾರ?
ಕೇಳಿಯೂ ಧಿಮ್ಮನಿರೆ, ಕೋಟಿ ಧಿಕ್ಕಾರ!

ಬೇಕಾದರಿಗೆ ಕೊಡಿರೊ, ಬೇಡವೆಂದವರಾರೊ?
ಹೇರಿ ಎಲ್ಲರ ಮೇಲೆ ಕೊಲೆಗೈವಿರೇಕೊ?
ಓ ಕಂದ, ಓ ತರುಣ, ಓ ಯುವಕ ಭಾರತೀಯ,
ಮೇಲೆ ಕುಳಿತವರಿಕ್ಕಿದುಕ್ಕುಬಲೆಯನು ಕಿತ್ತು,
ನಿನ್ನ ಸ್ವಾತಂತ್ರ್ಯವನು, ಓ, ನೀನೆ ರಕ್ಷಿಸಿಕೊ!

ಇಂಗ್ಲಿಷಿನ ಜಿಲೊಟಿನ್ನಿನಡಿ ನಿಮ್ಮ ಕೊರಳೊಡ್ಡಿ
ವರುಷವರುಷವು ಕೋಟಿ ಕೊಲೆಯಪ್ಪಿರೇಕೆ?
ನಿಮ್ಮ ಶಕ್ತಿಯ ಕುಂದದಲ್ಲ ಕಾರಣ ಕೊಲೆಗೆ:
ಪರಭಾಷೆ ಚಪ್ಪಡಿ! ಪರೀಕ್ಷೆಯ ನೆವಂ ಬೇಕೆ? -
ಏಳು ಎಚ್ಚರಗೊಳ್ಳು ಓ ಭಾರತಿಯ ಕಂದ,
ನಿನ್ನ ಸ್ವಾತಂತ್ರ್ಯವನು ನೀನೆ ರಕ್ಷಿಸಿಕೊ!

ದೂರದರ್ಶನದ ವಾರ್ತೆಗಳಲ್ಲೂ "ದೇವೇಗೌಡರು ಧಿಡೀರ್ ಅಂತ ಪ್ಲೇಟ್ ಚೇಂಜ್ ಮಾಡ್ಬಿಟ್ರು" ಅನ್ನೋ ಭಾಷೆ ಬಳಸಿದರೆ ಕನ್ನಡಕ್ಕೆಲ್ಲಿ ನೆಲೆ?

ಸಾಹಿತ್ಯವೂ, ಮಾಧ್ಯಮವೂ, ನಮ್ಮ ದೇಶದಲ್ಲಿ ಸಿನಿಮಾ ಕೂಡ ನಮ್ಮ ಮೇಲೆ, ನಮ್ಮ ಭಾಷೆಯ ಮೇಲೆ ಪ್ರಭಾವ ಬೀರುವುದರಿಂದ ನಮ್ಮೊಳಿತಿಗಾಗಿ ಎಲ್ಲಾ ಕಡೆ ನಮ್ಮ ಭಾಷೆಯ ಬಳಕೆ ಚೆನ್ನಾಗಿ ಆಗಲಿ ಎಂದು ಹಾರೈಸುತ್ತೇನೆ.

ಇಂಗ್ಲಿಷು ನನಗೆ ಅನ್ನವನ್ನು ಕೊಡುತ್ತಿದೆ. ಅದರ ಋಣಕ್ಕೆ ನಾನು ಸಿಕ್ಕಿಹಾಕಿಕೊಂಡುಬಿಟ್ಟಿದ್ದೇನೆ. ಈ ಋಣಮುಕ್ತಿ ಎಂದು ಸಿಗುತ್ತೋ ಏನೋ..
"ಲೆನ್ಸ್" ಅನ್ನೋಕೆ ಕನ್ನಡದಲ್ಲಿ ಏನಂತಾರೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿ ಗೂಗಲ್ ಮೊರೆ ಹೋಗುವಂತಾಗಿತ್ತು ಇಂದು ಕಣ್ಣುಗಳ ಬಗ್ಗೆ ಬರೆಯುವಾಗ. ಪರಾಗ ಸ್ಪರ್ಶ ಗೊತ್ತು, ಪರಾಗ ಗೊತ್ತಿಲ್ಲ ಅನ್ನುವಂತಾಗಿದ್ದೆ ಕಳೆದ ವಾರ. ನನ್ನ ಮುಂದಿನ ಪೀಳಿಗೆಯವರು ಹೀಗಾಗದಿರಲಿ ಎಂದು ಆಶಿಸುತ್ತೇನೆ.

-ಅ
28.06.2008
1AM

Friday, August 22, 2008

ಉಪನಿಷತ್ತು - ಭಾಷ್ಯ - ದೇವುಡು

ಮಗೆ ದ್ವೈತಾದ್ವೈತವಿಶಿಷ್ಟಾದ್ವೈತಗಳ ಹೋರಾಟ ಬೇಕಿಲ್ಲ. ಜಗತ್ತೆಲ್ಲವೂ ಒಂದಾಗಬೇಕೆಂಬ ಈ ಕಾಲದಲ್ಲಿ ಗೋಡೆಗಳನ್ನು ಎಬ್ಬಿಸುವುದಕ್ಕಿಂತ ಗೋಡೆಗಳನ್ನು ತೆಗೆಯಬೇಕು ಎಂಬ ಮಾತು ನಮಗೆ ಪ್ರಿಯ; ಹಿತ. ಈ ದೃಷ್ಟಿಯಿಂದ ನೋಡುವಾಗ 'ನಮ್ಮ ತಂದೆಯ ಸಿದ್ಧಾಂತ ನಮ್ಮದು' ಎಂದು ಹೋರಾಡುವುದಕ್ಕಿಂತ 'ನಾವು ಅಧ್ಯಯನ ಮಾಡೋಣ. ಅನಂತರ ಶುದ್ಧವಾದ ಮನೋಬುದ್ಧಿಗಳು ಆತ್ಮಪ್ರೇರಣೆಯಿಂದ ಯಾವ ದಾರಿಯನ್ನು ಹಿಡಿದರೆ, ಆ ಮಾರ್ಗದಲ್ಲಿ ಹೋಗಿ ಗುರು-ದೇವ-ಕೃಪೆಯನ್ನು ಸಂಪಾದಿಸಿ ಕೃತಾರ್ಥರಾಗೋಣ ಎನ್ನುವುದೇ ಸರಿ' ಎಂದು ತೋರುತ್ತದೆ.

-ದೇವುಡು ನರಸಿಂಹಶಾಸ್ತ್ರಿ

('ಉಪನಿಷತ್ತು' ಪುಸ್ತಕದಲ್ಲಿ)

-ಅ
22.08.2008
4AM

Friday, August 15, 2008

ಗಿರೀಶ

ಬನಶಂಕರಿ ಸೆಕೆಂಡ್ ಸ್ಟೇಜು ಆಗ ಇನ್ನೂ ಕಾಡಿನ ಹಾಗಿತ್ತು. ಮಿನಿ ಝೂ ಸ್ಟಾಪಿನಲ್ಲಿ ನಿಂತರೆ ಬೆಟ್ಟಗುಡ್ಡಗಳು, ಸುಬ್ರಹ್ಮಣ್ಯ ದೇವಸ್ಥಾನ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆ ದೇವಸ್ಥಾನದ ಹತ್ತಿರ ಹೋಗಬೇಕೆಂದರೆ ಸಂಜೆ ಐದರೊಳಗೆ ಹೋಗಿ ಬಂದುಬಿಡಬೇಕು. ಯಾಕೆಂದರೆ ಯಾರೂ ಓಡಾಡದ ಜಾಗ ಅದು. ಕತ್ತರಿಗುಪ್ಪೆ ಇನ್ನೂ ಹಳ್ಳಿಯಾಗಿತ್ತು. ಕಾಮಾಕ್ಯ ಟೆಂಟ್ ಆಗಿತ್ತು. ಆ ದಿನಗಳಲ್ಲಿ ನಾವು ಬನಶಂಕರಿ ಸೆಕೆಂಡ್ ಸ್ಟೇಜಿನಲ್ಲಿದ್ದೆವು.

ನನಗಿಂತಲೂ ನಾಲ್ಕು ವರ್ಷ ಹಿರಿಯನಾದ ಗಿರೀಶನ ಜೊತೆ ಈ ಕಾಡಿನಲ್ಲಿ ಅಡ್ಡಾಡುತ್ತಿರುವಾಗ ಮಾತಿಗೆ ಮಾತು ತಿರುಗಿ ವಾಗ್ವಾದ ಶುರುವಾಯಿತು. ನಾನು ಕೈಯಲ್ಲಿ ಕಲ್ಲು ಹಿಡಿದು, ಬೇಡ ನೋಡು ಎಸೆದು ಬಿಡ್ತೀನಿ.. ಎಂದೆ. ಎಸಿ ನೋಡೋಣ? ಎಂದು ಅವನು ಹೇಳಿದ ಮರುಕ್ಷಣವೇ ರೊಯ್ಯನೆ ಬೀಸಿ, ಅವನ ಹಣೆ ಚೂರಾಗಿದ್ದು ನೆನಪಿದೆ ಇನ್ನೂ. ಆಗ ನನಗೆ ಬಹುಶಃ ಏಳು ವರ್ಷ. ಆಮೇಲೆ ನನಗೆ ಬಿದ್ದ ಒದೆಗಳ ಕಥೆ ಬೇರೇನೇ.
........................................................................................

ಬಾಬಾ ಸೆಹ್‍ಗಲ್ ಎಂಬ ಹಾಡುಗಾರ "ಠಂಡಾ ಠಂಡಾ ಪಾನಿ.." ಎಂದು ವಿಖ್ಯಾತನಾದ ಕಾಲದಲ್ಲಿ ಅವನ ಕ್ಯಾಸೆಟ್ಟುಗಳನ್ನೆಲ್ಲಾ ತಂದಿರಿಸಿಕೊಂಡಿದ್ದ ಗಿರೀಶ ನನಗೆ ವಿಪರೀತ ಹೊಟ್ಟೆ ಉರಿಸುತ್ತಿದ್ದ. ಆ ಹಾಡುಗಳನ್ನು ಕೇಳುವುದಕ್ಕೋಸ್ಕರವಾಗಿಯೇ ಅವರ ಮನೆಗೆ ಎಷ್ಟೊಂದು ಸಲ ಹೋಗಿದ್ದುಂಟು ನಾನು. ಇನ್ಯಾವಯಾವುದೋ ಇಂಗ್ಲೀಷ್ ಕ್ಯಾಸೆಟ್ಟುಗಳನ್ನೆಲ್ಲಾ ಖರೀದಿಸಿದ್ದ. ಡಾಕ್ಟರ್ ಆಲ್ಬನ್ ಅಂತೆ, ಇನ್ನೊಂದಂತೆ ಮತ್ತೊಂದಂತೆ. ನನ್ನ ತಲೆಗೆ ಹೋಗುತ್ತಿರಲಿಲ್ಲ. ಆದರೆ ಅದರ ಬಗ್ಗೆ ಬಹಳ ಹೇಳುತ್ತಿದ್ದ. ಇಂಗ್ಲೀಷ್ ಪುಸ್ತಕಗಳನ್ನೂ ವಿಪರೀತ ಓದುತ್ತಿದ್ದ. 'ಗಾಡ್ ಫಾದರ್' ಓದಿಬಿಟ್ಟು ನನಗೆ ಹಲವಾರು ಸಲ ಓದು ಓದು ಎಂದು ಹೇಳಿದ್ದ. ನಾನು ಓದಲು ಯತ್ನಿಸಿ ಸುಸ್ತಾಗಿದ್ದ ಕಥೆ ಬೇರೇನೇ..

......................................................................................

ಮ್ಯಾಡ್ ಸಿಟಿ ಎಂಬ ಒಂದು ಇಂಗ್ಲೀಷ್ ಪಿಚ್ಚರ್‍ಗೆ ಅಂತ ಹೋಗಿ, ಇನ್ನೂ ಸಮಯಾವಕಾಶವಿದ್ದು ಪುಸ್ತಕ ಖರೀದಿಸಲು ಎಂ.ಜಿ.ರಸ್ತೆ ಎಲ್ಲಾ ಸುತ್ತಿದ ನಂತರ ಊಟ ಮಾಡಬೇಕೆಂಬುದನ್ನೇ ಮರೆತುಬಿಟ್ಟಿದ್ದೆವು. ಅಲ್ಲಿ ಸಿಕ್ಕ ಫ್ರೈಡ್ ರೈಸನ್ನೇ ಗಬಗಬ ತಿಂದೆವು. ನಂತರ ರೆಕ್ಸ್ ಥಿಯೇಟರಿಗೆ ಧಾವಿಸಿದೆವು. ರೆಕ್ಸ್ ಥಿಯೇಟರಿನ ಆವರಣದಲ್ಲಿರುವ ಅಂಗಡಿಯಲ್ಲಿ ಚಿಕ್ಕವರಾಗಿದ್ದಾಗ ತಿನ್ನುತ್ತಿದ್ದ ರೋಸ್ ಮಿಂಟು, ಥಿಯೇಟರಿನ ಎದುರೇ ಕೋತಿ ಆಡಿಸುವವನು ಕುಳಿತುಕೊಳ್ಳುತ್ತಿದ್ದುದು ಎಲ್ಲವನ್ನೂ ಕ್ಷಣಮಾತ್ರದಲ್ಲೇ ನೆನಪಿಸಿಕೊಂಡು ಒಳ ಹೊಕ್ಕೊಡನೆಯೇ ನಾನು ನಿದ್ರಾವಶನಾಗಿಬಿಟ್ಟ ಕಥೆ ಬೇರೇನೇ..

.......................................................................................

ಅತಿ ಚಿಕ್ಕ ಬಾಣತಿ ಮಾರಿ ಬೆಟ್ಟ ಟ್ರೆಕ್ಕಿಂಗ್‍ಗೆ ಹೋಗಿ ಬಂದು ಮಾರನೆಯ ದಿನ ರಜೆ ಹಾಕಿದ್ದೂ ಅಲ್ಲದೆ ಸಿಕ್ಕಾಪಟ್ಟೆ ಸುಸ್ತು ಸುಸ್ತು ಎನ್ನುತ್ತಿದ್ದ ಗಿರೀಶನನ್ನು 'ವನಸುಮ'ದಂತೆ ಬಾಡಿ ಹೋಗುತ್ತಾನೆ, ನೀರು ಚುಮುಕ್ಸ್ತಾ ಇರ್ಬೇಕು ಅಂತ ರೇಗಿಸದ ದಿನವೇ ಇಲ್ಲ. ಇದ್ದಕ್ಕಿದ್ದ ಹಾಗೆ ಮಧ್ಯಾಹ್ನ ನಾಲ್ಕುವರೆಗೆ ಒಂದು ಸಲ ಅವರ ಮನೆಯಿಂದ ಬೈಕಿನಲ್ಲಿ ಮೇಕೆದಾಟಿಗೆ ಹೊರಟುಬಿಟ್ಟೆವು. ಅಂದೂ ಹಿಂದಿನ ಸೀಟಿನಲ್ಲಿ ಕುಳಿತುಕೊಂಡೇ ಸುಸ್ತಾಗಿದ್ದ. ಒಂದು ಗಂಟೆಗಳ ಕಾಲ ಟ್ರಾಫಿಕ್ ಅಲ್ಲಿ ನಿಂತು ಬಂದರೆ, "ನಿಂಗೆ ಗೊತ್ತಿಲ್ಲ, ಎಷ್ಟು ಟ್ರಾಫಿಕ್ ಅಂತ.. ಆಗೋದೇ ಇಲ್ಲ.." ಅಂತ ಮಲಗಿಬಿಟ್ಟಿದ್ದನ್ನು ನಾವೆಲ್ಲರೂ ಹಾಸ್ಯ ಮಾಡುತ್ತಲೇ ಇದ್ದೆವು. ಮತ್ತೆ ಮತ್ತೆ ರೇಗಿಸಿಕೊಂಡೂ ಅವನನ್ನೂ ಸೇರಿ ಎಲ್ಲರೂ ನಗುತ್ತಿದ್ದ ಕಥೆ ಬೇರೇನೇ..

.......................................................................................

ಆಚಾರ್ಯ ಪಾಠಶಾಲೆಗೆ ಸೇರಿಕೊಳ್ಳುತ್ತೇನೆಂದಾಗ ಸೂಪರ್ ಸ್ಕೂಲು ಸೇರ್ಕೋ, ಎಂದು ಅಲ್ಲಿ ಹೈಸ್ಕೂಲು ಕಾಲೇಜು ಓದಿದ್ದ ಗಿರೀಶ ನನ್ನನ್ನು ಉತ್ತೇಜಿಸಿದ್ದ. ಇದೊಂದು ಕಡೆ ಮಾತ್ರವಲ್ಲ. ಅವನ ಉತ್ತೇಜನ ನನ್ನ ಎಷ್ಟೊಂದು ನಿರ್ಣಯಗಳಿಗೆ ಹಾದಿಯಾಗಿದೆ. ಹೈಸ್ಕೂಲಿಗೆ ಸೇರಿಕೊಳ್ಳುವುದರಿಂದ ಹಿಡಿದು, ಓದಿ ಐ.ಎ.ಎಸ್. ಆಗು ಅನ್ನುವಷ್ಟು ಮಟ್ಟಿಗೆ ಉತ್ತೇಜಿಸುತ್ತಲೇ ಇದ್ದ. ಅಂದರೆ ನೈಜ ಸಂಗತಿಯಿಂದ ಕಾಲ್ಪನಿಕ ಸಂಗತಿಯವರೆಗೂ!! ಮೊನ್ನೆ ಮೊನ್ನೆ ಬೈಕು ತೊಗೊಂಡಾಗ ಅಪಾಚೆ ಸಕ್ಕತ್ ಬೈಕು ಅಂತ ಅದೆಷ್ಟು ಸಲ ಹೇಳಿದನೋ ಅದರ ಹತ್ತರಷ್ಟು ಸಲ ನಾನು ಹೀರೋಜೆಟ್ ಸೈಕಲ್ ತಗೊಂಡಾಗ ಸೂಪರ್ ಸೈಕಲ್ಲು, ಸೂಪರ್ ಸೈಕಲ್ಲು ಅಂತ ಹೇಳಿದ್ದ. ಎನ್.ಸಿ.ಸಿ.ಗೆ ಸೇರಿಕೊಂಡಾಗ ಮೇಷ್ಟ್ರು ಎಂ.ಎನ್.ಎಸ್ ಬಗ್ಗೆ ಸಾಕಷ್ಟು ಹೇಳಿ ಪ್ರೋತ್ಸಾಹ ಕೊಟ್ಟಿದ್ದ. ಎಂ.ಎನ್.ಎಸ್. ನನ್ನ ಇಂದಿನ ಬದುಕಿನ ಮೇಲೂ ಪರಿಣಾಮ ಬೀರಿರುವುದು ಬೇರೆಯದೇ ಕಥೆ. ಪತ್ರಿಕೆಗೆ ಬರೆಯುತ್ತೇನೆಂದಾಗ ಜ್ವಾಲಾಮುಖಿಯಲ್ಲಿ ಕೇಳುತ್ತೇನೆ, ಅವರ ಜೊತೆ ಮಾತನಾಡುತ್ತೇನೆ ಎಂದು ಇನ್ನಷ್ಟು ಪ್ರೋತ್ಸಾಹ ಕೊಟ್ಟಿದ್ದ.

ಬಿ.ಸಿ.ಎ. ಓದುತ್ತಿದ್ದ ಕಾಲದಲ್ಲಿ ಅವರ ಮನೆಗೆ ಹೋಗಿ C language ಪಾಠ ಹೇಳಿಕೊಡುತ್ತಿದ್ದಾಗ "ನೀನು ಒಳ್ಳೇ ಟೀಚರ್ ಆಗಬಹುದು" ಎಂದು ಆಗ ಅವನು ಹೇಳದಿದ್ದರೆ ಬಹುಶಃ ನಾನು ಟೀಚರ್ ಆಗುವ ವಿಷಯವನ್ನು ಪರಿಗಣಿಸುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಈಗ ನಾನು ಕಂಪ್ಯೂಟರ್ ಅಧ್ಯಾಪಕನಾಗಿರುವ ಕಥೆ ಬೇರೇನೇ..

......................................................................................

ನಮ್ಮನ್ನೆಲ್ಲರನ್ನೂ ಬೆಳೆಸಿದ ಅತ್ತೆ ಆಸ್ಪತ್ರೆಯಲ್ಲಿ ತನ್ನ ಕೊನೆಯ ಉಸುರನ್ನೆಳೆದಾಗ ಅಂದಷ್ಟೇ ಬೆಂಗಳೂರಿಗೆ ಬಂದ ಗಿರೀಶನು ಅತ್ತೆ ನಮ್ಮೆಲ್ಲರನ್ನೂ ಕೆನ್ನೆ ತಟ್ಟಿ ಎಬ್ಬಿಸುತಿದ್ದುದನ್ನು ಥಟ್ಟನೆ ನೆನೆದು, ಉಸುರು ನಿಂತ ಅತ್ತೆಯ ಕೆನ್ನೆ ತಟ್ಟುತ್ತಾ "ದೊಡ್ಡಮ್ಮಾ... (ಗಿರೀಶನಿಗೆ ದೊಡ್ಡಮ್ಮ, ನನಗೆ ಅತ್ತೆ) ದೊಡ್ಡಮ್ಮಾ.." ಎಂದು ನನ್ನ ಕಡೆ ತಿರುಗಿ ಕಣ್ಣೀರ್ಗರೆದ ದೃಶ್ಯ ಹೇಗೆ ತಾನೆ ಮಾಸೀತು? ಅತ್ತೆಯ ಶಾಶ್ವತ ಆಶೀರ್ವಾದ ಗಿರೀಶನ ಮೇಲಿರುತ್ತೆ ಅನ್ನುವ ಕಥೆ ಬೇರೇನೇ...

......................................................................................

ಆಪ್ತಗೆಳತಿ ದೀಪ್ತಿ ಈಗ ಗಿರೀಶನ ಪತ್ನಿಯೆಂಬುದು ಸಂತಸದ ರಸದೌತಣದಂತೆ. ಕಾಲೇಜಿನಲ್ಲಿ ಎಲ್ಲರನ್ನೂ ಬಿಟ್ಟು ಹೊರಹೋಗಬೇಕೆಂಬ ಸಲುವಾಗಿ ಬಿಕ್ಕಿಬಿಕ್ಕಿ ಅತ್ತಿದ್ದಳವಳು. ಇಂದು ಹೊಸ ಹಾದಿ ಹಿಡಿದು ಗಂಡ ಹೆಂಡತಿ ಇಬ್ಬರೂ ಹೊರದೇಶದತ್ತ ನಡೆದು ಸಾಗುತ್ತಿದ್ದಾರೆ. ಬದುಕು ನಿರಂತರ ನದಿಯಂತೆ ಹರಿಯುತ್ತಲಿರುತ್ತೆ. ಗೆಲುವು ಇವರದಾಗಲಿ ಎಂದು ಪ್ರೀತಿಯಿಂದ ಹರಸುತ್ತೇನೆ.

ನೆನ್ನೆ ಗಿರೀಶ ಅಮೆರಿಕೆಗೆ ಹೋಗುತ್ತಿದ್ದೇನೆಂದು ಬೈ ಹೇಳಲು ಮನೆಗೆ ಬಂದಾಗ ಇವೆಲ್ಲವೂ ನೆನಪಾಯಿತು. "ಸೆಂಡ್ ಆಫ್ ಪಾರ್ಟಿ" ಬೇರೆ ಇತ್ತು. ಯಾಕೋ ಅವನಿಗೆ ಬೈ ಹೇಳಲು ಮನಸ್ಸಿರಲಿಲ್ಲ. ಆದರೆ ಅವನು ಯಶಸ್ಸಾಗುವುದರ ಹರಕೆಯಿತ್ತು. ಹರಸಿದೆ. ನನ್ನ ಕಣ್ಣು ಸಣ್ಣದಾಗಿ ಒದ್ದೆಯಾಗಿತ್ತು. ಎಡಬಿಡದೆ ಸುರಿಯುತ್ತಿದ್ದ ಸುದೀರ್ಘ ಮಳೆಯು ಭೂಮಿಯನ್ನೂ ಒದ್ದೆ ಮಾಡಿತ್ತು.

ಆಲ್ ದಿ ಬೆಸ್ಟ್, ಗಿರೀಶ.. :-)

-ಅ
15.08.2008
7PM

Friday, August 8, 2008

ಕಪ್ಪು ಕವಿವುದು

ಭುವಿಯ ಜ್ಯೋತಿಯೆಲ್ಲವ ನುಂಗುವ ತವಕದಿ
ಹೊಂಚು ಹಾಕುತಿಹ ಕರಿ ಮುಗಿಲೇ,
ಅವಳು ಮುನಿದಿಹಳು,
ನನ್ನ ಕಂಬನಿಯ ಹೊತ್ತು ಅವಳು ನೆನೆವೆಡೆ ಮಳೆಯಾಗಿಸು, ಓ ಮುಗಿಲೇ!
ಅವಳಿಗಿಂತ ನನಗೆ ಜಗವು ಮಿಗಿಲೇ?
ಕಪ್ಪು ಕವಿದಿದೆ ಇಲ್ಲಿ, ನನ್ನೆದೆಯೊಳಗೂ,
ಹಾಡು ಹಗಲೇ!

ಪಾಪ ಪುಣ್ಯಗಳೆಂಬ ನನ್ನೆರಡು ಕೈ ಹಿಡಿದವಳು
ಭೀತಿ ನೀತಿಗಳ ಮೀರಿ ಪ್ರೀತಿಯೆದೆ ಮಿಡಿದವಳು
ಅವಳು,
ನಗು ತೊರೆದರೆ
ಹಗೆ ಮೆರೆದರೆ
ಮಿಗೆ ನೊಂದರೆ
ನನಗೆ,
ಕಪ್ಪು ಕವಿವುದು ಹಾಡು ಹಗಲು
ಬೆಪ್ಪು ನಿಲುವುದು ಬಾಳ ಹೆಗಲು.

-ಅ
08.08.2008
12.30AM

Friday, August 1, 2008

ಜ್ವರ - ಸಂಭಾಷಣೆ

Weather ಸಖತ್ತಾಗಿದೆ. ಆದರೆ ನನಗೆ immunity ಇಲ್ಲ. ಅರ್ಥಾತ್ ಯೋಗ್ಯತೆ ಇಲ್ಲ.

"ಮಳೆಯಲ್ಲಿ ನೆಂದೆಯಾ, ಜ್ವರ ಬರೆಸಿಕೊಳ್ಳೋಕೆ?"

"ಮಳೆಯಲ್ಲಿ ನೆಂದಿದ್ದರೆ ಜ್ವರ ಬರುತ್ತಲೇ ಇರಲಿಲ್ಲ."

"ದಕ್ಷಿಣ ಕನ್ನಡ ಜಿಲ್ಲೆಯಲ್ಲೇನಾದರೂ ಟ್ರೆಕ್ಕಿಂಗ್ ಹೋಗಿದ್ದ್ಯಾ?"

"ಹೋಗಿದ್ದಿದ್ದ್ರೆ ಹೀಗ್ಯಾಕೆ ಜ್ವರ ಅಂತ ಮಲಗ್ತಿದ್ದೆ?"

"ಏನ್ ಅರುಣ್ ನೀವು, ಶನಿವಾರ ರಜ ತೊಗೋಬಾರ್ದಿತ್ತಾ?"

"ಏನ್ ಮಾಡ್ಲಿ ಮೇಡಂ, ಜ್ವರಕ್ಕೆ ವಾರಗಳ ಪಾಠ ಹೇಳ್ಕೊಟ್ಟಿಲ್ಲ ಯಾರೂನೂ...."

"ಒಂದು ಮಸಾಲೆ ದೋಸೆ, ಬಜ್ಜಿ ತಿಂದ್ಬಿಡು ಎಲ್ಲಾ ಸರಿ ಹೋಗುತ್ತೆ!"

"ಹೌದು, ಇನ್ನೊಂದ್ ಸಲ ಜ್ವರ ಬರೋದೇ ಇಲ್ಲ. ಯಾಕೆಂದರೆ ನಾನೇ ಇರುವುದಿಲ್ಲ!"

-ಅ
01.08.2008
4PM