Thursday, August 28, 2008

ಇಂಗ್ಲೀಷು

ನ್ನಡ ಚಿತ್ರಗೀತೆಗಳಲ್ಲಿ ಇಂಗ್ಲೀಷು ಮೆರೆಯುತ್ತಿದೆ. ಕನ್ನಡ ಗೀತರಚನಾಕಾರರು 'ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು' ಎನ್ನುವುದರ ಬದಲು, 'ನಿನ್ನ ಲುಕ್ಕು ಬೇರೇನೇ, ನಿನ್ನ ಟಚ್ಚು ಬೇರೇನೇ..' ಅನ್ನೋಕೆ ಶುರು ಮಾಡಿದ್ದಾರೆ. ಕನ್ನಡ ಭಾಷೆಯನ್ನು ಹೊಗಳುವ ಗೀತೆಗಳಿಗೂ ಸಹ ಇಂಗ್ಲೀಷಿನ ಹಂಗು ಬಂದುಬಿಟ್ಟಿದೆ. ಉದಯಶಂಕರರು 'ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ' ಎಂದರೆ ಈಗಿನ ಮಹಾನ್ ಕವಿಯೊಬ್ಬರು 'ಸಿಂಪಲ್ ಆಗ್ ಹೇಳ್ತೀನ್ ಕೇಳೇ ನಮ್ಮೂರ ಭಾಷೆ..' ಅನ್ನುತ್ತಾರೆ.

ಇನ್ನು ಸ್ವಲ್ಪ ಕಾಲ ಆದಮೇಲೆ ಬಹುಶಃ ಈ ಅರ್ಧಂಬರ್ಧ ಇಂಗ್ಲೀಷ್ ಬೆರೆತ ಕನ್ನಡ ಹಾಡುಗಳೂ ಹೊರಟುಹೋಗಿ ಪೂರ್ತಿ ಇಂಗ್ಲೀಷೇ ಆಗಿಬಿಡುತ್ತೇನೋ. ಶ್ರೀನಿವಾಸ, ನಾನು ಆಗಾಗ್ಗೆ ಕನ್ನಡ ಹಾಡುಗಳನ್ನು ಹಾಸ್ಯಕ್ಕೆಂದು ಈ ರೀತಿ ಇಂಗ್ಲೀಷಿಗೆ (ಅರ್ಧಂಬರ್ಧ) ತರ್ಜುಮೆ ಸಹ ಮಾಡುತ್ತಾ ನಗುತ್ತಿರುತ್ತೇವೆ. ಆದರೆ ಚಿತ್ರರಂಗದಲ್ಲಿ ಆ ಕಾಲವೂ ಬಂದರೆ ಅಚ್ಚರಿಯಿಲ್ಲ.

What we speak is ಕನ್ನಡ language.... ಕನ್ನಡಾ language....
the place where we live is beautiful temple.. marvelous temple.. sandalwood temple...

ಈ ರೀತಿ ಹಾಡುಗಳನ್ನು ಬರೆಯುವ ಭೂಪರೂ ಜನಿಸಬಹುದೇನೋ.

sky-ಗೊಂದು limit ಎಲ್ಲಿದೆ?
ನಿನ್ desire-ಗೆಲ್ಲಿ end ಇದೆ?
ಏಕೆ dream ಕಾಣುವೆ?
slow down-ಉ, slow down-ಉ...

ಏನ್ ಮಾಡೋದು, forehead writings ಗೆ responsible ಯಾರು? ಅಂತ ಶ್ರೀನಿವಾಸನನ್ನು ಕೇಳಿದೆ. ಅವನೆಂದ, "ಇನ್ಯಾರು, author-ಏ responsible-ಉ.. " ಅಂತ.

ನಾನು, "ಹೌದು, ನಮ್ಮ forehead writings-ಗೆ ಆ four-headed forehead writer-ಏ responsible-ಉ" ಎಂದೆ.

ಶಾಲೆಯಲ್ಲಿ ಇನ್ನೂ ಒಂದನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ತಮಗೆ ಗೊತ್ತಿರುವ ಕೆಲವೇ ಪದಗಳನ್ನು ಬಳಸಿ ಮುದ್ದುಮುದ್ದಾಗಿ ಮಾತನಾಡುವುದನ್ನು ನೋಡಿದರೆ ಮೈಪುಳಕವಾಗುತ್ತೆ. ಆದರೆ ದೊಡ್ಡವರೂ ಹೀಗೆ ಮಾಡಿಬಿಟ್ಟರೆ ಮೈ ಪರಚಿಕೊಳ್ಳುವಂತಾಗುತ್ತೆ.

"ಸರ್, your lunch bag is ಸೋರಿಂಗ್" ಎಂದ ಒಬ್ಬ ಹುಡುಗ ನನ್ನ ಊಟದ ಚೀಲದಿಂದ ಸೋರುತ್ತಿದ್ದ ಮೊಸರನ್ನು ನೋಡಿ.

"that not sir, this.." ಎಂದು ಹೇಳುವ ಮಗುವಿನ ಭಾವಾರ್ಥ ತಿಳಿದರೆ ಸಾಕು, ಅದಕ್ಕೆ ಗೊತ್ತಿರುವುದು ಮೂರೋ ನಾಲ್ಕೋ ಪದ. ವಾಕ್ಯ ರಚನೆ ಮಾಡಲು ಯತ್ನಿಸುತ್ತವಲ್ಲಾ ಎಂಬ ಖುಷಿ. ತಿದ್ದಬಹುದು.

"ನಿನ್ನ ನಗುವು ಹೂವಂತೆ..." , "ನಗುವೇ ಸ್ನೇಹದ ಹಾಡು.." ತರಹದ ಹಾಡುಗಳು ಹುಟ್ಟಿದ ಈ ಚಿತ್ರರಂಗದಲ್ಲಿ "ವಾಟೆ ಸ್ಮೈಲ್, ವಾಟೆ ಸ್ಮೈಲ್.." ಅಂತ ಒಳ್ಳೇ ಮಾವಿನ ಕಾಯಿ ವಾಟೆ (ಓಟೆ)ಯನ್ನೆಲ್ಲಾ ರೂಪಕಾಲಂಕಾರಕ್ಕೆ ಬಳಸಿಕೊಂಡರೆ ಹೇಗೆ! ಇಂಥಾ ಗೀತರಚನಾಕಾರರಿಗಿಂತ ಒಂದನೇ ತರಗತಿಯ ಮಕ್ಕಳ ಇಂಗ್ಲೀಷ್ ಬೆರೆತ ಕನ್ನಡ ಮುದ್ದು ಮಾತುಗಳು ಸಾವಿರ ಪಾಲು ಮೇಲು.

ಕನ್ನಡ ಮೀಡಿಯಮ್ಮನ್ನು ಕಂಡರೆ ಸಿಡಿಮಿಡಿಗೊಳ್ಳುವ ಜನರು, ಕನ್ನಡ ಮೀಡಿಯಮ್ಮಿನಲ್ಲಿ ಓದುವವರು ಜಗತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲು ಅನರ್ಹರಾಗುತ್ತಾರೆಂಬ ಭ್ರಮೆಯುಳ್ಳ ಜನರು ಇರುವ ತನಕ, ಇಂಗ್ಲೀಷ್ ಹಾವಳಿ ಇದ್ದೇ ಇರುತ್ತೆ.

ಕುವೆಂಪು ಬರೆದ ಈ ಕವನವನ್ನು ಎಷ್ಟು ಸಲ ಓದಿಕೊಂಡು ನೊಂದಿದ್ದೇನೋ ಗೊತ್ತಿಲ್ಲ.

ಸಾಕು ಈ ಬಲಾತ್ಕಾರ

ಇಂಗಿಹೋಗುತಿದೆ ಇಂಗ್ಲಿಷಿನ ಮರುಭೂಮಿಯಲಿ
ನಿನ್ನ ಮಕ್ಕಳ ಶಕ್ತಿ - ಬುದ್ಧಿ - ಪ್ರತಿಭಾ;
ರಾಷ್ಟ್ರನಾಯಕ ಮನದಿ ವಿವೇಕರೂಪದಿ ಮೂಡಿ,
ಓ ರಸಮಯ ಸರಸ್ವತಿಯೆ, ಪೊರೆ ಬಾ!

ಕಲ್ಲ ಕುಂಡದಿ ನೆಟ್ಟ ಅಶ್ವತ್ಥಸಸಿಯಂತೆ
ಕಿಮುಳ್ಚಿ ಗುಜ್ಜಾಗುತಿದೆ ಮೊಳೆವ ಚೈತನ್ಯ;
ಭೂಮಿಯಲಿ ಬೇರೂರಿ, ಬಾನೆಡೆಗೆ ತಲೆಯೆತ್ತಿ
ನಿಲುವವರಿಗೇತಕೀ ದಾಸ್ಯದೈನ್ಯ?

ಗಾಂಧಿಯಿಂದಿಂಗ್ಲಿಷರ ದಾಸ್ಯದಿಂ ಪಾರಾದೆ;
ಅವನ ಕೊಂದಿಂಗ್ಲಿಷಿಗೆ ದಾಸಿಯಾದೆ.
ಓ ತಾಯಿ ಭಾರತಿಯೆ, ಚೀಣೀಯರನೆ ಮೀರಿ
ಹಿಂಡುತಿದೆ ಕಂದರನು ಇಂಗ್ಲಿಷಿನ ಮಾರಿ!

ಬಲಾತ್ಕಾರಕಾಗಿ ಮಾತ್ರವೆ ಹೊರತು ಈ ರೋಷ,
ಭಾಷೆಗಾಗಿಯೆ ನಮ್ಮ ದ್ವೇಷವೇನಿಲ್ಲ;
ತೆಗೆಯಿರಿ ಬಲಾತ್ಕಾರದಂಶವನು; ಆರಿಸಲಿ
ಸರ್ವರೂ ಇಂಗ್ಲಿಷನೆ, ಚಿಂತೆ ಇನಿತಿಲ್ಲ.

ಭಾವಜಲಮೂಲವನೆ ಹೀರುತಿದೆ ಮರುಭೂಮಿ,
ಹಿಂಡೆ ಜೀವವನು ಇಂಗ್ಲಿಷಿನ ಕಲ್ಗಾಣ;
ಕನ್ನಡದ ಕ್ರಿಸ್ತನದೊ ಇಂಗ್ಲಿಷಿನ ಶಿಲುಬೆಯಲಿ
ಸಿಲುಕಿ ಬಾಯ್ವಿಡುತಿಹನು ನೀರಡಸಿ ಪ್ರಾಣ!

ಹೆಣಭಾರ! ಹೆಣಭಾರ! ಸಾಕೀ ಬಲಾತ್ಕಾರ;
ಸಾಕು ನಿಲ್ಲಿಸಿ, ನಿಮಗೆ ಬೇಕಾದರುದ್ಧಾರ.
ಇಂಗ್ಲಿಷಿನ ಚಪ್ಪಡಿಯಡಿಯ ಹಸುಳೆಚೀತ್ಕಾರ
ಕೇಳಿಸದ ಕಿವುಡರಿರ, ನಿಮಗೇಕೆ ಅಧಿಕಾರ?
ಕೇಳಿಯೂ ಧಿಮ್ಮನಿರೆ, ಕೋಟಿ ಧಿಕ್ಕಾರ!

ಬೇಕಾದರಿಗೆ ಕೊಡಿರೊ, ಬೇಡವೆಂದವರಾರೊ?
ಹೇರಿ ಎಲ್ಲರ ಮೇಲೆ ಕೊಲೆಗೈವಿರೇಕೊ?
ಓ ಕಂದ, ಓ ತರುಣ, ಓ ಯುವಕ ಭಾರತೀಯ,
ಮೇಲೆ ಕುಳಿತವರಿಕ್ಕಿದುಕ್ಕುಬಲೆಯನು ಕಿತ್ತು,
ನಿನ್ನ ಸ್ವಾತಂತ್ರ್ಯವನು, ಓ, ನೀನೆ ರಕ್ಷಿಸಿಕೊ!

ಇಂಗ್ಲಿಷಿನ ಜಿಲೊಟಿನ್ನಿನಡಿ ನಿಮ್ಮ ಕೊರಳೊಡ್ಡಿ
ವರುಷವರುಷವು ಕೋಟಿ ಕೊಲೆಯಪ್ಪಿರೇಕೆ?
ನಿಮ್ಮ ಶಕ್ತಿಯ ಕುಂದದಲ್ಲ ಕಾರಣ ಕೊಲೆಗೆ:
ಪರಭಾಷೆ ಚಪ್ಪಡಿ! ಪರೀಕ್ಷೆಯ ನೆವಂ ಬೇಕೆ? -
ಏಳು ಎಚ್ಚರಗೊಳ್ಳು ಓ ಭಾರತಿಯ ಕಂದ,
ನಿನ್ನ ಸ್ವಾತಂತ್ರ್ಯವನು ನೀನೆ ರಕ್ಷಿಸಿಕೊ!

ದೂರದರ್ಶನದ ವಾರ್ತೆಗಳಲ್ಲೂ "ದೇವೇಗೌಡರು ಧಿಡೀರ್ ಅಂತ ಪ್ಲೇಟ್ ಚೇಂಜ್ ಮಾಡ್ಬಿಟ್ರು" ಅನ್ನೋ ಭಾಷೆ ಬಳಸಿದರೆ ಕನ್ನಡಕ್ಕೆಲ್ಲಿ ನೆಲೆ?

ಸಾಹಿತ್ಯವೂ, ಮಾಧ್ಯಮವೂ, ನಮ್ಮ ದೇಶದಲ್ಲಿ ಸಿನಿಮಾ ಕೂಡ ನಮ್ಮ ಮೇಲೆ, ನಮ್ಮ ಭಾಷೆಯ ಮೇಲೆ ಪ್ರಭಾವ ಬೀರುವುದರಿಂದ ನಮ್ಮೊಳಿತಿಗಾಗಿ ಎಲ್ಲಾ ಕಡೆ ನಮ್ಮ ಭಾಷೆಯ ಬಳಕೆ ಚೆನ್ನಾಗಿ ಆಗಲಿ ಎಂದು ಹಾರೈಸುತ್ತೇನೆ.

ಇಂಗ್ಲಿಷು ನನಗೆ ಅನ್ನವನ್ನು ಕೊಡುತ್ತಿದೆ. ಅದರ ಋಣಕ್ಕೆ ನಾನು ಸಿಕ್ಕಿಹಾಕಿಕೊಂಡುಬಿಟ್ಟಿದ್ದೇನೆ. ಈ ಋಣಮುಕ್ತಿ ಎಂದು ಸಿಗುತ್ತೋ ಏನೋ..
"ಲೆನ್ಸ್" ಅನ್ನೋಕೆ ಕನ್ನಡದಲ್ಲಿ ಏನಂತಾರೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿ ಗೂಗಲ್ ಮೊರೆ ಹೋಗುವಂತಾಗಿತ್ತು ಇಂದು ಕಣ್ಣುಗಳ ಬಗ್ಗೆ ಬರೆಯುವಾಗ. ಪರಾಗ ಸ್ಪರ್ಶ ಗೊತ್ತು, ಪರಾಗ ಗೊತ್ತಿಲ್ಲ ಅನ್ನುವಂತಾಗಿದ್ದೆ ಕಳೆದ ವಾರ. ನನ್ನ ಮುಂದಿನ ಪೀಳಿಗೆಯವರು ಹೀಗಾಗದಿರಲಿ ಎಂದು ಆಶಿಸುತ್ತೇನೆ.

-ಅ
28.06.2008
1AM

11 comments:

 1. kanglesh bagge supper writingu .....

  ReplyDelete
 2. kaalaaya tasmay namah :

  English bhaase na munditkondu kannadaana beLsbeku....English - u beku...kannada innu jaasthi bekoooo..

  ReplyDelete
 3. padya odokke aaglilla :(. English beku annodu bhrame alla ... english medium noru kannadakke bele kodolla annodu bhrame. maatru bhaashe bagge prema belsodu tandetaayiyara hone. international level nalli compete maadbeku anno aase inda nammatana na kalkotaare ashte ... kannada na saryaagi maathadodanna kaltkolokke naanu innoo "conscious effort" haakta ideeni :-) :-)

  ReplyDelete
 4. ಹಿಂಗೇ ಇನ್ನೂ ಏನೇನ್ ನೋಡ್ಬೇಕೋ ನಾವು .. ಹ್ಮ್..

  ReplyDelete
 5. ಬಹುಶಃ ಈ ಮಂತ್ರ ಈಗಿನ ಪರಿಸ್ಥಿತಿಗೆ ಹೇಳಿ ಮಾಡಿಸಿದ್ದು. ಕನ್ನಡದಲ್ಲಿ ವೇದ ಅಂತ ಒಂದಾದರೆ ಅದರ ಮೊದಲ ಸಾಲೇ ಇದಾಗಿರಲಿ ಎಂದು ಆಶಿಸುತ್ತೇನೆ.

  "ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ - ಕನ್ನಡ... ಕನ್ನಡ, ಕಸ್ತೂರಿ... ಕನ್ನಡ"

  ReplyDelete
 6. hmmm...en maaDOkaagatte. naave nam kannada na keeLaagi kaaNtivi. first adanna biDbEku. aaga sari hogatte.

  ReplyDelete
 7. naavu maatra ee americe nallu kannada ne maat aadtivappa...
  engleeshalli maat aad dre ad eno nammoru anta bhaavne ne baralla..

  anda haage nange waate smile waate smile tumbaaa ishta aaytu.. sikkapatte obboble nagtidde nodi..

  ReplyDelete
 8. english ಕಲಿಯೋದೂ ತಪ್ಪಲ್ಲ, ಅದರಲ್ಲಿ ವ್ಯವಹರಿಸೋದೂ ತಪ್ಪಲ್ಲ. ಆದರೆ ನಮ್ಮ ಭಾಷೆ ಮರೆತು ಬೇರೆ ಎಲ್ಲ ಕಲಿಯೋದು ಪ್ರಾರಬ್ಧ ಅಷ್ಟೆ ;)
  hmm.. ವಿಜಯ ಅಕ್ಕ ಹೇಳಿದಹಾಗೆ ಪೋಷಕರು ಮಕ್ಕಳಿಗೆ ಮೊದಲು ಮಾತೃಭಾಷೆಯಲ್ಲಿ ವ್ಯವಹರಿಸೋದನ್ನ ಹೇಳಿಕೊಡಬೇಕು. ಮನೆಯಲ್ಲಿ ಕಲಿಯದೆ ಇದ್ದರೆ ಬೇರೆ ಕಡೆ ಕಲಿಯೋದು ತೀರ ಕಡಿಮೆ. ಹಾಗೆಯೇ ಬೇರೆ ಭಾಷೆಗಳನ್ನೂ ಕಲಿತಿದ್ದರೆ ಒಳ್ಳೆಯದು ಅನ್ನೋದು ನನ್ನ ಸ್ಪಷ್ಟ ಅಭಿಪ್ರಾಯ. ಎಲ್ಲವನ್ನೂ ಕಲಿತು, ನಮ್ಮ ಭಾಷೆಗೆ ಆದ್ಯತೆ ಕೊಟ್ಟರೆ ಅದರಂಥ ಸ್ವರ್ಗ ಬೇರೆ ಇಲ್ಲ ಅಂತ ನನ್ನ ಅಭಿಪ್ರಾಯ.

  ReplyDelete
 9. [ಗಂಡಭೇರುಂಡ] ಶ್ಲಾಘನೀಯ ಕಣಯ್ಯಾ.. ಆದರೆ, ಪ್ರಾರಬ್ಧ ಎಂದು ಸುಮ್ಮನೆ ಕುಳಿತರೆ ಹೇಗೆ? ಎಲ್ಲವೂ ಪ್ರಾರಬ್ಧವೇ ಆಗಿಬಿಡುತ್ತಲ್ಲಾ? :-(

  [ಶ್ರೀ] ಈಗ್ಲಾದ್ರೂ ಕನ್ನಡ ಮಾತಾಡ್ತೀರಲ್ಲಾ, ಭೇಷ್.. ಅಂತೂ ವ್ಯವಹಾರಕ್ಕೆ ಇಂಗ್ಲಿಷು, ಭಾವನೆಗೆ ಕನ್ನಡ - ಭಲೆ ಭಲೆ! ಮೆಚ್ಚಿದೆ.. :-)

  [ಲಕುಮಿ] ಹೌದಾ, ಬಿಟ್ಬಿಡು ಆ ದುರಭ್ಯಾಸವನ್ನು, ಮತ್ತೆ!

  [ಶ್ರೀಕಾಂತ್] ಹೌದು, ಹಂಸಲೇಖಂಗೆ ಜೈ.. ಶ್ರೀಕಾಂತಂಗೂ ಒಂದು.. :-)

  [ವಿಕಾಸ ಹೆಗಡೆ] ಇನ್ನೂ ಏನೇನು ನೋಡಬೇಕೋ ಅನ್ನೋ ಅಳುಕು ನಿಜವಾಗುವ ಮುನ್ನ ಕಣ್ಣು ಹೋಗಿಬಿಡಲಿ ಅಂತ ಪ್ರಾರ್ಥಿಸಿಕೊಳ್ಳಬೇಕು ನೋಡಿ...

  [ವಿಜಯಾ] ಇಂಗ್ಲಿಷ್ ಬೇಕು ಅನ್ನೋದು ಭ್ರಮೆಯಲ್ಲ, ನಿಜ, ಆದರೆ ಇಂಗ್ಲೀಷೇ ಬೇಕು ಅನ್ನೋದು ಸರಿಯಲ್ಲ. ಕನ್ನಡ ಮೀಡಿಯಮ್ಮಿನಲ್ಲಿ ಪ್ರಾಥಮಿಕ ಶಿಕ್ಷಣ ಈಗಿನ ಪೋಷಕರಿಗೆ ರುಚಿಸುವುದಿಲ್ಲ, ಇಂಗ್ಲಿಷ್ ಮಾಧ್ಯಮವೇ ಬೇಕು. ಇದು ಸಲ್ಲದು.

  ಭಾಷೆ ಬಗ್ಗೆ ಪ್ರೀತಿ ಪ್ರೇಮ ಬೆಳೆಸೋದು ತಂದೆ ತಾಯಿಯರ ಹೊಣೆಯೊಂದಿಗೆ ಶಿಕ್ಷಣ ವ್ಯವಸ್ಥೆಯ ಹೊಣೆಯೂ ಸಹ. ತಂದೆ ತಾಯಿಯರಿಗೆ ಆ ಹೊಣೆ ನಿರ್ವಹಿಸುವ ಕಾಳಜಿಯಿದ್ದರೆ ಇಂಗ್ಲಿಷ್ ಗುಲಾಮಗಿರಿತನಕ್ಕೆ ಮಕ್ಕಳನ್ನೊಡ್ಡುವುದಿಲ್ಲ, ಮಾತೃ ಭಾಷೆಯನ್ನು ಅಲ್ಲಗಳೆಯುವಂತೆ ದೂಡುವುದಿಲ್ಲ.

  ಇಂಗ್ಲಿಷ್ ಅನ್ನು ಒಂದು ಭಾಷೆಯನ್ನಾಗಿ ಕಲಿಸುವುದಿಲ್ಲ ನಮ್ಮಲ್ಲಿ, ಅದನ್ನು ಮಕ್ಕಳ ಮೇಲೆ ಹೇರುತ್ತೇವೆ, ಶಾಲೆಗಳಲ್ಲಿ. ಎಲ್ಲಾ ವಿಷಯಗಳನ್ನೂ ಇಂಗ್ಲಿಷಿನಲ್ಲೇ ಬೋಧಿಸುತ್ತಾರಾದ್ದರಿಂದ ಈ ಬಲಾತ್ಕಾರದಿಂದ ಕನ್ನಡವು ನರಳುತ್ತಿದೆ. ಇಂಥಾ ಬಲಾತ್ಕಾರದ ಕೃತ್ಯದಲ್ಲಿ ನಾನೂ ಸಿಲುಕಿಕೊಂಡಿರುವುದು ನನ್ನ ವಿಪರ್ಯಾಸ. ಈ ವ್ಯವಸ್ಥೆ ಬದಲಾಗಲಿ ಎಂದು ಬಯಸುತ್ತೇನೆ.

  ಮತ್ತೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಜನರೆಲ್ಲರೂ ಆಂಗ್ಲಭಾಷೆಯನ್ನೇ ಹೇರಿಸಿಕೊಂಡು ಬಂದವರಲ್ಲ. ಜನ = ಜನಾಂಗ ಇಲ್ಲಿ. ಬಂಗಾಳಿಗಳು ತಮಿಳರೇ ನಮಗೆ ಉದಾಹರಣೆ. ಈ ಕಂಪ್ಯೂಟರ್ ಯುಗದಲ್ಲಿ, ವಿಂಡೋಸ್‍ನಲ್ಲಿ ತಮಿಳು ಭಾಷೆ, ಬಂಗಾಳಿ ಭಾಷೆ ಯಾವಾಗಲೋ ಸೇರ್ಪಡೆಯಾಯಿತು, ಕನ್ನಡ ಭಾಷೆಗೆ ಈಗಲೂ ಒದ್ದಾಡುತ್ತಿದ್ದಾರೆ, ನಮ್ಮ ಬ್ರೌಸರ್ ಸರಿ ಇಲ್ಲ, ಅದಿಲ್ಲ, ಇದಿಲ್ಲ ಅಂತ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಕನ್ನಡಿಗರಿಗೆ ಕನ್ನಡ ಮೊದಲು ಬೇಕೇ ಹೊರೆತು ಇಂಗ್ಲಿಷಲ್ಲ. ಇಂಗ್ಲಿಷನ್ನು ಕಲಿಯಬೇಕು - ಭಾಷೆಯಾಗಿ. ಅದರ ಅಮೋಘ ಸಾಹಿತ್ಯಕ್ಕಾಗಿ. ನಮ್ಮಲ್ಲಿ ಅದು ಉಸಿರಾಗಿಬಿಟ್ಟಿದೆ - ದುರಂತ.

  [ಶ್ರೀಧರ] ಹೋಪ್‍ಲೆಸ್ ಫೆಲೋ, ಸಿದ್ಧಾಂತ ಹೇಳೋದಲ್ಲ, ವಿವರಣೆ ಕೊಡು. ಹೇಗೆ ಇಂಗ್ಲಿಷ್‍ನ ಮುಂದಿಟ್ಟುಕೊಂಡು ಕನ್ನಡವನ್ನು ಬೆಳೆಸೋದು ಅಂತ. ನನ್ನ ಸಮಸ್ಯೆಯಾದರೂ ಕೊಂಚ ಬಗೆಹರಿಯುತ್ತೆ.

  [ಹರ್ಷ] ಒಳ್ಳೇ ಕಂಗ್ಲೀಷು. ಅಲ್ಲಾ, ಏನೋ ಹಾಸ್ಯ ಅಂತ ಬರೆಯೋಕೆ ಹೋಗಿ, ಏನೇನೋ ಸೀರಿಯಸ್ಸಾಗಿ ತಿರುಗಿಬಿಟ್ಟಿದೆ ನೋಡಿ, ಕರ್ಮಕಾಂಡ..

  ReplyDelete
 10. i agree :-) ... oops ... opkoteeni ande :-)

  ReplyDelete
 11. This is such a beautiful post!

  For a great website in Kannada, you might want to check out this site:

  ಕನ್ನಡ wiki browser

  ReplyDelete