Sunday, August 31, 2008

ಚೆಂದದೂರು ಬೆಂಗಳೂರು

ಬೆಂಗಳೂರಿನ ಬಗ್ಗೆ ಟ್ರಾಫಿಕ್ಕು, ಹೊಗೆ, ಧೂಳು, ಕಟ್ಟಡದ ಕಾಡು, ಡ್ರೈನೇಜ್ ಸಮಸ್ಯೆ - ಹೀಗೆ ಸಾಕಷ್ಟು ಅಸಮಾಧಾನ ಇದ್ದರೂ ಒಂದು ವಿಶೇಷವಾದ ಒಲವು ನನ್ನಲ್ಲಿದೆ. ಬೆಂಗಳೂರು ಇಲ್ಲದೆ ಇರಲು ಸಾಧ್ಯವೇ ಇಲ್ಲವೇನೋ ಎಂಬ ಪ್ರೀತಿಯು ಇರುವುದರಿಂದಲೇ ಬಹುಶಃ ಇಷ್ಟೊಂದು "ಅಯ್ಯೋ ಹಾಳಾಗಿ ಹೋಗ್ತಿದೆಯಲ್ಲಪ್ಪಾ.." ಅಂತ ಬೇಸರ ಆಗುತ್ತೆ ಅನ್ನಿಸುತ್ತೆ.

ಇಂಥಾ ಬೆಂಗಳೂರಿನ ನಗರ ವಲಯದ ಒಳಗೆ ನಾನೊಂದಿಷ್ಟು ಜಾಗಗಳನ್ನು ಇಟ್ಟುಕೊಂಡಿದ್ದೇನೆ. ನನಗೆ ಇಷ್ಟವಾಗುವ, ನೋಡಲೇಬೇಕು ಎನ್ನಿಸುವ, ಸಂತಸ ಕೊಡುವ, ತೃಪ್ತಿ ಕೊಡುವ, ಅನೇಕ ಸಲ ಸಮಾಧಾನ ತಾತ್ಕಾಲಿಕವಾಗಿ ನೆಮ್ಮದಿಯನ್ನೂ ಕೊಡುವ ಹಲವು ಸ್ಥಳಗಳು. ಅದರ ಟಾಪ್ 10 ಇಲ್ಲಿ ಬರೆದುಕೊಂಡಿದ್ದೇನೆ. ಈ ರೀತಿ ಟಾಪ್ n ಗಳನ್ನು ಬರೆದುಕೊಂಡು ಬಹಳ ದಿನಗಳಾಗಿತ್ತು.

10 - ಹನುಮಂತ ನಗರ

ಮನೆಯಿರುವುದೂ ಅಲ್ಲಿಯೇ. ಮನೆಯ ಆಸುಪಾಸಿನಲ್ಲೇ ಹಲವು ಸ್ಥಳಗಳು ಮನಸೆಳೆದಿದೆ. ಬಾಲ್ಯವು ಇಲ್ಲೆಯೇ ಕಳೆದಿರುವುದರಿಂದ ಇದು ಹೇಗೆ ಬೆಳೆದಿದೆಯೆಂಬುದನ್ನು ಚೆನ್ನಾಗಿ ಬಲ್ಲೆ ಕೂಡ. ಬಂಡೆಗಳೇ ಇದ್ದ ರಾಮಾಂಜನೇಯ ಗುಡ್ಡ, ಬರೀ ಪೊದೆಗಳೇ ತುಂಬಿರುವ ನರಹರಿರಾಯರ ಗುಡ್ಡ (ಈಗಿನ ಕುಮಾರಸ್ವಾಮಿ ದೇವಸ್ಥಾನ), ಎ.ಬಿ.ಸಿ. ಪಾರ್ಕು, ಗವಿಗಂಗಾಧರೇಶ್ವರ ದೇವಸ್ಥಾನ - ಆಹ್, ಎಂಥಾ ಹಿತಕರ ಸ್ಥಳಗಳು.

ರಾಮಾಂಜನೇಯ ಗುಡ್ಡದಲ್ಲಿ ಬೀದಿನಾಟಕದವರು ಸಾಕ್ಷರತೆಯ ಬಗ್ಗೆ ಪ್ರದರ್ಶನವನ್ನು ಮಾಡುತ್ತಿದ್ದ ಕಾಲದಲ್ಲಿ ಹುಲ್ಲು ಹಾಸಾಗಲೀ, ಡಿಸೈನ್‍ಗಳ ಕಲ್ಲುಗಳಾಗಲೀ, ಬೇಲಿಗಳಾಗಲೀ ಇರಲೇ ಇಲ್ಲ. ಮೆಟ್ಟಿಲಿನ ಪಕ್ಕದಲ್ಲಿ ಬಂಡೆಗಳು, ಪೊದೆಗಳು. ಈ ವಾಕಿಂಗ್ ಸಂಸ್ಕೃತಿ ಬೆಂಗಳೂರಿಗೆ ಕಾಲಿಟ್ಟ ಘಳಿಗೆಯೋ ಏನೋ, ಪಾರ್ಕುಗಳೆಲ್ಲಾ ವಾಕಿಂಗ್ ತಾಣವಾಗಿಬಿಟ್ಟಿದೆ. ದೇವಸ್ಥಾನ ಬಸ್ ನಿಲ್ದಾಣದಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ಈ ನರಹರಿರಾಯರ ಗುಡ್ಡವಿದ್ದೂ, ಇದಕ್ಕೆ ಕೆಲವು ವರ್ಷಗಳಿಂದ ಕುಮಾರಸ್ವಾಮಿ ದೇವಸ್ಥಾನವೆಂದು ಮರುನಾಮಕರಣ ಮಾಡಿದ್ದಾರೆ. ದಕ್ಷಿಣ ಬೆಂಗಳೂರಿನ ಹರೋಹರ ಶುರುವಾಗುವುದು ಇಲ್ಲಿಂದಲೇ. ಇದರ ಹಿಂಭಾಗದ ಗೇಟನ್ನು ಈಗ ಬಂದ್ ಮಾಡಿದ್ದಾರೆ. ಈ ಬಾಗಿಲ ಆಸುಪಾಸಿನಲ್ಲೀಗ ಬರೀ ಪಾರ್ಥೇನಿಯಮ್. ಅಪರೂಪಕ್ಕೊಮ್ಮೆ ಈ ಎರಡು ತಾಣಗಳಲ್ಲಿ ಬಂದು ಕುಳಿತರೆ ಹಳೆಯ ನೆನಪುಗಳೆಲ್ಲಾ ಕಣ್ಣ ಮುಂದೆ ಬಂದು ಪ್ರತಿಷ್ಠಾಪಿಸಿಕೊಳ್ಳುತ್ತೆ.

ಎ.ಬಿ.ಸಿ. ಪಾರ್ಕು - ಇದು ಈಗ ಯಾವುದೋ ಕಾರ್ಪೊರೇಟರ್ ಹೆಸರಿನ ಪಾರ್ಕು ಆಗೋಗಿದೆ. ಇಲ್ಲಿ ಎಲ್ಲೆಲ್ಲೋ ಬೇಲಿಗಳು, ಮೆಟ್ಟಿಲುಗಳು, ಕಾರಂಜಿಗಳು ಇತ್ಯಾದಿಗಳು ವಕ್ಕರಿಸಿದರೂ ಒಂಥರಾ ಚೆಲುವಾಗಿದೆ. ಆದರೆ ಇಲ್ಲೂ ವಾಕರ್ಸ್ ಹಾವಳಿ. ಇಲ್ಲಿ ವಾಕರ್ಸ್ ಟ್ರಾಫಿಕ್ ಜ್ಯಾಮ್ ಆಗುವುದರಿಂದ ಈ ನಡುವೆ ಇಲ್ಲಿ ಹೋಗುವುದು ಬಿಟ್ಟುಬಿಟ್ಟಿದ್ದೇನೆ. ಆ ದಿನಗಳಲ್ಲಿ ನಾವು ಇಲ್ಲಿ ಬಾಡಿಗೆ ಸೈಕಲ್ ಹೊಡೆಯಲು ಬರುತ್ತಿದ್ದೆವು. ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಆಗ ನಿಜವಾಗಿಯೂ ಒಂದು ಗವಿಯಿತ್ತು. ಅದರೊಳಗೆ ಪ್ರದಕ್ಷಿಣೆ ಹಾಕಲು ಏನೋ ಆನಂದ. ಈಗ ಅಲ್ಲಿ ಬಚ್ಚಲು ಮನೆಯೊಳಗೆ ಹಾಕುವ ಟೈಲ್ಸ್ ಹಾಕಿಬಿಟ್ಟು, ಗವಿಯೊಳಗೆ ಟ್ಯೂಬ್ ಲೈಟುಗಳನ್ನು ಹಾಕಿರುವುದು ತೀರ ಕೆಟ್ಟದಾಗಿದ್ದರೂ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಕೂತು ಕೆಂಪೇಗೌಡನ ಕಾಲವನ್ನು ಊಹಿಸಿಕೊಂಡು, MNS ಸರ್ (ಸುರೇಶ್ ಮೂನ - ಬೆಂಗಳೂರು ತಜ್ಞರು) ಅವರ ಪಾಠವನ್ನೂ ನೆನೆಸಿಕೊಂಡು ಕುಳಿತರೆ ಮನೆಗೆ ಫ್ರೆಶ್ ಆಗಿ ಮರಳಬಹುದು. ಗವಿಗಂಗಾಧರೇಶ್ವರನ ಹಿಂಭಾಗದಲ್ಲೇ 400 ವರ್ಷಕ್ಕೂ ಹಳೆಯ ಕೆಂಪೇಗೌಡ ನಿರ್ಮಿತ ಗೋಪುರವೊಂದಿದ್ದು, ಅದರೊಳಗೆ ಕುಳಿತು ಆಟವಾಡಿದ್ದ ದಿನಗಳನ್ನು ನೆನೆಸಿಕೊಳ್ಳಲು ಇಂದು ಆ ಆವರಣದೊಳಕ್ಕೆ ಹೋಗದಂತೆ ಗೇಟು ಬೀಗ ಹಾಕಿರುವುದರಿಂದ ಅಲ್ಲಿಯೇ ನಿಂತು ನೋಡಬೇಕಾಗಿದೆ.

ಗವಿಪುರದ ಹತ್ತಿರವೂ ಒಂದು ಗೋಪರವಿದ್ದು ಕೆಲವರಿಗೆ ಮಾತ್ರ ಗೊತ್ತಿರುವುದಾಗಿದೆ. 400 ವರ್ಷದ ಹಳೆಯ ಸ್ಮಾರಕವು ಗೆದ್ದಲು ಹಿಡಿಯುತ್ತಿದೆ. ಅಲ್ಲಿಯೂ ಹೋಗಿ ಹತ್ತು ನಿಮಿಷ ಕುಳಿತರೆ ಐತಿಹಾಸಿಕ ಪಾತ್ರಗಳಲ್ಲೊಂದಾಗಿಬಿಡುತ್ತೇನೆ.

9 - ಕಬ್ಬನ್ ಪಾರ್ಕು/ ಮ್ಯೂಸಿಯಮ್ಮು

ಒಂದೊಂದು ಸಲ ಒಬ್ಬನೇ ಕಬ್ಬನ್ ಪಾರ್ಕಿನ ರೈಲಿನಲ್ಲಿ ಹೋಗುವುದಕ್ಕೋಸ್ಕರವಾಗಿಯೋ, ಬಾಲಭವನದ ಶೋ ನೋಡುವುದಕ್ಕಾಗಿಯೋ, ಜಯಂಟ್ ವ್ಹೀಲ್ (ಈಗಿಲ್ಲ)ನಲ್ಲಿ ಕೂರುವುದಕ್ಕಾಗಿಯೋ ಹೋಗಿಬಿಡುತ್ತಿದ್ದೆ. ದೋಣಿವಿಹಾರ ಆರಂಭಿಸಿದ ಕಾಲದಲ್ಲಿ ಅದಕ್ಕೆ ರಷ್ಷೋ ರಷ್ಷು. ಈಗ ಕೇಳೋರೇ ಗತಿಯಿಲ್ಲ. ಪಕ್ಕದಲ್ಲಿರುವ ವಸ್ತುಸಂಗ್ರಹಾಲಯದ ಆವರಣದಲ್ಲಿ ಸಿಗುವ ಕೆಂಪು ಸೀಬೆ (ಅದಕ್ಕೆ ಉಪ್ಪುಕಾರ ಹಾಕಿಕೊಡುವ ಪರಿ) ಆಹಾ! ಷಾಟ್ ಪುಟ್ ಚೆಂಡಿಗಿಂತ ದೊಡ್ಡದಾದ ಸೀಬೆಕಾಯಿಗಳು. ಈಗಲೂ ಸಿಗುತ್ತೆ. ಹೋಗಿ ತುಂಬಾ ದಿನವಾಯಿತು. ಹೋಗಲೇ ಬೇಕೆನಿಸುತ್ತೆ. ಯಾವುದೇ ಊರಿಗೆ ಹೋದರೂ ಅಲ್ಲಿಯ ಮ್ಯೂಸಿಯಮ್ಮನ್ನು ನೋಡದೆ ವಾಪಸ್ಸು ಬರಲು ಮನಸ್ಸಾಗುವುದಿಲ್ಲ. ಅಂತೆಯೇ ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಮ್ಮು ಇದುವರೆಗೂ ನೋಡಿರುವ ಎಲ್ಲಾ ಮ್ಯೂಸಿಯಮ್ಮುಗಳಿಗಿಂತ ಇಷ್ಟವಾಗಿದೆ. ಜ್ಞಾನ-ವಿಜ್ಞಾನಗಳು ಬೆರೆತಿದೆ. ಇತ್ತೀಚೆಗೆ ಇಲ್ಲಿ ಅದೆಂಥದೋ ತ್ರಿ-ಡಿ ಚಿತ್ರ ತೋರಿಸುವ ಹೊಸ ವಿಚಾರ ಬಹಳ ಕೆಟ್ಟದಾಗಿದೆ. ಆದರೆ ಇಡೀ ಮ್ಯೂಸಿಯಮ್ಮನ್ನು ಒಂದು ದಿನ ಪೂರ್ತಿ ನೋಡಲು ಮೀಸಲಿಟ್ಟರೆ ಸೀಬೇಕಾಯಿಯನ್ನೂ ನೆಮ್ಮದಿಯಿಂದ ಕಣಕಣವನ್ನೂ ಆಸ್ವಾದಿಸಬಹುದು.

8 - ಸಪ್ನ ಬುಕ್ ಸ್ಟಾಲ್

ಪುಸ್ತಕ ಪ್ರಿಯರಿಗೆ ಸಪ್ನ ಬುಕ್ ಸ್ಟಾಲ್‍ಗಿಂತ ಉತ್ತಮ ಅಂಗಡಿ ನಮ್ಮೂರಲ್ಲಿ ಸಿಗುವುದಿಲ್ಲ. ಗಾಂಧಿನಗರದ ಈ ಸಪ್ನ ಬುಕ್ ಸ್ಟಾಲ್ ತ್ರಿಭುವನ್ ಟಾಕೀಸ್ ಎದುರು ಇದ್ದಾಗ, ನಾನಿನ್ನೂ ಐದನೇ ತರಗತಿಯಲ್ಲಿದ್ದಾಗ ಬಸ್ ಹತ್ತಿಕೊಂಡು ಬಂದುಬಿಟ್ಟಿದ್ದೆ. ಆಗ ಆಲ್ಬರ್ಟ್ ಐನ್‍ಸ್ಟೈನ್ ಎಂದರೆ ನನ್ನ ಪಾಲಿಗೆ ದೇವರು. ಐನ್‍ಸ್ಟೈನ್ ಬಗ್ಗೆ ಅನೇಕ ಮಕ್ಕಳ ಪುಸ್ತಕಗಳನ್ನು ನನಗೆ ಗಣೇಶ ಹಬ್ಬದ್ದೋ, ಹುಟ್ಟು ಹಬ್ಬದ್ದೋ ಮತ್ತೊಂದೋ 'ಕಲೆಕ್ಷನ್' ಹಣದಿಂದ ಖರೀದಿಸುತ್ತಿದ್ದೆ. ಕನ್ನಡ ಪುಸ್ತಕಗಳನ್ನು ಓದಲು ಶುರು ಮಾಡಿದ್ದು ಹೈಸ್ಕೂಲು ಮುಗಿಯುವ ವೇಳೆಗೆ. ಅದಕ್ಕೂ ಮೊದಲು ಆಸರೆಯಾಗಿದ್ದು ಸಪ್ನ ಬುಕ್ ಸ್ಟಾಲೇ. ಮನೆಯ ಹತ್ತಿರವೇ ಅಂಕಿತ ಇದ್ದರೂ, ತಾತರಾಯನ ಕಾಲದ ವೇದಾಂತ ಬುಕ್ ಹೌಸು, ವಿ.ಎಸ್.ಎಂಡ್ ಸನ್ಸ್ ಇವೆಲ್ಲಾ ಇದ್ದರೂ ಸಪ್ನ ಬುಕ್ ಹೌಸ್‍ಗೆ ಹೋಗಿ ಪುಸ್ತಕ ಕೊಂಡರೆ ಏನೋ ಆನಂದ. ಭಾರತದಲ್ಲೇ ಅತಿ ದೊಡ್ದ ಪುಸ್ತಕದಂಗಡಿ ಎಂಬ ಹೆಗ್ಗಳಿಕೆಯಿರುವ ಇದು, ಅಷ್ಟಾದರೂ ಆನಂದ ನೀಡದಿದ್ದರೆ ಹೇಗೆ?

7 - ಕಲಾಸಿಪಾಳ್ಯ

ನಾನು ಹೀಗೆ ಹೇಳಿದಾಗ ಅನೇಕರಿಗೆ ಅಚ್ಚರಿಯೂ ಹಲವರಿಗೆ ಅಸಹ್ಯವೂ ಆದೀತು. ಆದರೆ ನನ್ನ ಪಾಲಿಗೆ ಮಾರ್ಕೆಟ್ಟು ಬಹಳ ಪ್ರಶಸ್ತ. ಬಸ್ ನಿಲ್ದಾಣದ ಎದುರೇ ಇರುವ ಕೋಟೆಗೆ ಮುನ್ನೂರು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದೂ ಟಿಪ್ಪು ಸುಲ್ತಾನ್ ನಿರ್ಮಿತ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇದು ನನ್ನನ್ನು ಆಕರ್ಷಿಸಿಲ್ಲ. ನನ್ನ ಆಕರ್ಷಣೆ ಕೋಟೆ ವೆಂಕಟರಮಣ ದೇವಸ್ಥಾನ ಮತ್ತು ಹಿಂದೆಯೇ ಇರುವ ಟಿಪ್ಪು ಸಮ್ಮರ್ ಪ್ಯಾಲೆಸ್. ಮರ (wood)ದಿಂದಲೇ ನೆಲವನ್ನು ಮಾಡಿರುವ ಮತ್ತು ಗೋಡೆಗಳ ಮೇಲೆ ಅತ್ಯುನ್ನತ ಚಿತ್ರಕಲೆಯನ್ನು ಹೊಂದಿರುವ, ಸದಾ ತಂಪಾಗಿ ಶಾಂತವಾಗಿರುವ ಈ ಅರಮನೆಯ ವಾಸ್ತವ್ಯವೇ ಅನೇಕರಿಗೆ ಗೊತ್ತಿಲ್ಲ. ಕೋಟೆ ವೆಂಕಟರಮಣ ದೇವಸ್ಥಾನದ ಮುಸ್ಲಿಮ್-ಹಿಂದು ಮಿಶ್ರಿತ ಶಿಲ್ಪಕಲೆ ನಿಜಕ್ಕೂ ಆಕರ್ಷಿತವಾದದ್ದು. ಕಟ್ಟಡದ ವಯಸ್ಸು ಹಿರಿದಾದಂತೆ ಅಲ್ಲಿ ಕಲೆಯ ನೈಪುಣ್ಯತೆಯೂ ಹೆಚ್ಚಾಗಿರುತ್ತೆ ಎಂಬುದು ನನ್ನ ಪಯಣದ ಅನುಭವವಷ್ಟೆ.

ಕಾಲಾಸಿಪಾಳ್ಯದ ಇನ್ನೊಂದು ಮೂಲೆಯಲ್ಲಿರುವ ಬೃಹತ್ ಕಟ್ಟಡವೊಂದು ಇಂದು ಪಾಳುಬಿದ್ದಿದೆ. ಕಾರ್ಪೊರೇಷನ್ ಸ್ಕೂಲಿನ ಹಿಂಭಾಗದಲ್ಲಿರುವ ಈ ಕಟ್ಟಡದಲ್ಲಿ, ಸುಮಾರು 200 X 200 ಜಾಗದಷ್ಟಿರುವ ಈ ಕಟ್ಟಡದಲ್ಲಿ, ಅಂದು ಟಿಪ್ಪು ತನ್ನ ಮದ್ದು-ಗುಂಡುಗಳನ್ನು ಶೇಖರಿಸಿಡುತ್ತಿದ್ದ. ಅದನ್ನು ರಕ್ಷಿಸಿಕೊಳ್ಳಲಾಗದವರು ಬೆಂಗಳೂರಿಗರಾದ ನಾವು. ಈ ಕಾರ್ಪೊರೇಷನ್ ಸ್ಕೂಲಿನಲ್ಲಿ ಅತ್ತೆ ಹದಿನೈದಕ್ಕೂ ಹೆಚ್ಚು ವರ್ಷಗಳ ಕಾಲ ಟೀಚರಾಗಿದ್ದರು. ನಾನು ಇನ್ನೂ ಶಾಲೆಗೆ ಸೇರಿರದ ಕಾಲದಲ್ಲಿ ಅತ್ತೆಯ ಜೊತೆ ಇಲ್ಲಿಗೆ ಬರುತ್ತಿದ್ದೆ. ಆಗಿನಿಂದಲೂ ಕಲಾಸಿಪಾಳ್ಯ ಒಂಥರಾ ವಿಸ್ಮಯದ ಜಗತ್ತಿನಂತೆ ನನಗೆ. ಚೋಟುದ್ದ ಹುಡುಗರು ಬಸ್ಸನ್ನು, ಕಾರನ್ನು ರಿಪೇರಿ ಮಾಡುತ್ತಿರುವುದನ್ನು ನೋಡುವುದು, ಶರ್ಮಾ ಟ್ರಾನ್ಸ್ಪೋರ್ಟ್ ಮುಂದೆ ಹೆಚ್ಚಿಟ್ಟಿರುವ ಕಲ್ಲಂಗಡಿ ಹಣ್ಣು, ಅನಾನಸ್ ತಿನ್ನುವುದು, ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ 35A ಗಾಗಿ ಗಂಟೆಗಟ್ಟಲೆ ಕಾಯುವುದು, ಇವೆಲ್ಲಾ ಒಂದು ಕಾಲದ ಹವ್ಯಾಸವಾಗಿತ್ತು. ಈಗಲೂ ಕಲಾಸಿಪಾಳ್ಯ ಸುಂದರವಾಗಿದೆಯೆಂದೇ ಅನ್ನಿಸುತ್ತೆ. ಮಳೆಗಾಲದಲ್ಲಿ ಮಾತ್ರ ಇದರ ಹೆಸರು ಕಛಡಾ ಪಾಳ್ಯ ಎಂದು ಬದಲಿಸಬೇಕಾಗುತ್ತೆ.

6 - ಲಾಲ್ ಬಾಗ್

ಲಾಲ್ ಬಾಗ್ ಎಂದರೆ ಕೆಂಪುತೋಟ. ಒಂದು ಕಾಲದಲ್ಲಿ ಇಲ್ಲಿರುವ ಹಸಿರುಗಿಡಗಳಲ್ಲಿ ಕೆಂಪು ಹೂಗಳು ಬಿಡುತ್ತಿದ್ದವು. ಈಗ ಇಲ್ಲಿ ಹೂಗಿಡಗಳೇ ಇಲ್ಲ. ರೋಸ್ ಗಾರ್ಡನ್‍ನಲ್ಲಿ ಪಾರ್ಥೇನಿಯಮ್ ಕೂಡ ಇಲ್ಲ. ಜಿಂಕೆಗೆ ಕ್ಯಾರೆಟ್, ಸೌತೇಕಾಯಿ ತಿನ್ನಿಸುತ್ತಿದ್ದ ಕಾಲವೂ ಇತ್ತು. ಈಗ ಇಲ್ಲಿ ಜಿಂಕೆಯೂ ಇಲ್ಲ, ಸೌತೇಕಾಯಿಯೂ ಇಲ್ಲ. ಬಂಡೆಯ ಮೇಲಿರುವ ಕೆಂಪೇಗೌಡನ ಮತ್ತೊಂದು ಗೋಪುರವನ್ನು ಹೊಕ್ಕರೆ ಗೋಳಗುಮ್ಮಟದೊಳಕ್ಕೇ ಹೋಗುವಂತೆ ಭಾಸವಾಗುತ್ತಿತ್ತು. ಉತ್ತರ ಬೆಂಗಳೂರೆಲ್ಲಾ ಕಾಣುತ್ತಿತ್ತು. ಈಗ ಅಲ್ಲಿಂದ ಡಬಲ್ ರೋಡಿನ ಬಸ್ ಸ್ಟಾಂಡ್ ಕಾಣಿಸುತ್ತೆ ಅಷ್ಟೆ. ಎತ್ತರದ ಯುಟಿಲಿಟಿ ಕಟ್ಟಡ ಕಾಣ್ಸುತ್ತೆ, ವಿಧಿ ಇಲ್ಲದೆ. ಸ್ವತಃ ಟಿಪ್ಪು ಸುಲ್ತಾನ್ ನೆಟ್ಟ ಬೃಹತ್ ಮರವೂ ಇನ್ನೂ ಜೀವಂತವಾಗಿದೆ. ಲಾಲ್‍ಬಾಗ್‍ಗೆ ಹೋದಾಗ ಈ ಮರವನ್ನು ನೋಡದೆ ಹಿಂದಿರುಗಲು ಸಾಧ್ಯವೇ ಇಲ್ಲ.

ಅದೆಷ್ಟು ಸಾವಿರ ಸಲ ಹೋಗಿದ್ದೀನೋ ಲಾಲ್‍ಬಾಗಿಗೆ, ಇಲ್ಲಿ ಏನಿರಲಿ, ಏನಿರದಿರಲಿ - ಮರಗಳಿವೆ, ತಂಪಿದೆ. ಗಾಜಿನ ಮನೆಯು ಬಾಲ್ಯದಲ್ಲಿ ಆಟವಾಡುತ್ತಿದ್ದ ಜಾಗವಾಗಿತ್ತು. ನಮ್ಮ ತಂದೆಯ ಕಾಲದಲ್ಲಿ ಲಾಲ್‍ಬಾಗ್ ತೋಟದಲ್ಲಿ ಮೃಗಾಲಯವೂ ಇತ್ತು. ಅದನ್ನು ಮೈಸೂರಿಗೆ ವರ್ಗಾಯಿಸಿ ಅಷ್ಟೇನೂ ಹೆಚ್ಚು ಕಾಲ ಸಂದಿಲ್ಲ. ಈಗ ಲಾಲ್‍ಬಾಗ್ ಒಳಕ್ಕೆ ಹೋಗಲು ಶುಲ್ಕ ತೆರಬೇಕಾಗಿದೆ. ಒಳ್ಳೇದೇ.. ಇಲ್ಲಿ ಬರುವ ಹದ್ದು ಮೀರಿದ 'ಪ್ರೇಮಿಗಳು' ಮತ್ತು ಅವರನ್ನು ವೀಕ್ಷಿಸಲೆಂದೇ ಬರುವ 'ಪ್ರೇಕ್ಷಕರು' ಒಳಕ್ಕೆ ಬರುವುದು ತಪ್ಪಿದೆ. ಆದರೆ ನನ್ನಂಥವರು, ಕೇವಲ ಹಾಪ್‍ಕಾಮ್ಸ್ ಹಣ್ಣಿನ ರಸವನ್ನು ಕುಡಿಯಲು,ಖಾರದ ಕಡಲೆ ಪುರಿ ತಿನ್ನಲು ಒಳಕ್ಕೆ ಹೋಗುವವರು ಸ್ವಲ್ಪ ಜೇಬಿನ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ. ಹತ್ತು ರುಪಾಯಿ ಮಾಡಿಬಿಟ್ಟಿದ್ದಾರೆ ಈಗ ಶುಲ್ಕವನ್ನು!! ಬೆಂಗಳೂರು ದಕ್ಷಿಣ ತಂಪಾಗಿದೆ, ಸುಂದರವಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಲಾಲ್‍ಬಾಗು ಎಂದು ನನ್ನ ಅನಿಸಿಕೆ.

5 - ಕಹಳೆ ಬಂಡೆ

ನನಗಿಂತ ನನ್ನ ಕಸಿನ್ ಗುರುನಾಥ, ಮತ್ತೆ ಅಕ್ಕ ಇವರ ಪಾಲಿಗೆ ಕಹಳೆ ಬಂಡೆ ಹೆಚ್ಚು ನೆನಪಿನಾಳದ ಸರೋವರಕ್ಕಿಳಿಸುತ್ತೆ. ಆದರೆ ನನ್ನ ಬಾಲ್ಯದ ಆಟವೂ ಇದೇ ಕಹಳೆ ಬಂಡೆಯ ಆವರಣದಲ್ಲೇ ಇತ್ತಾದ್ದರಿಂದ ಇದರ ಮೇಲಿನ ಒಲವು ಎಳ್ಳಷ್ಟೂ ಕುಂದಿಲ್ಲ. ಇಲ್ಲೊಂದು ಗೂಳಿಯಿತ್ತಂತೆ. ಬಹಳ ರೌಡಿ ಗೂಳಿ. ಹೋಗೋರ್-ಬರೋರಿಗೆಲ್ಲಾ ಕಾಟ ಕೊಡುತ್ತಿದ್ದ ಈ ಗೂಳಿಯ ಸಾವು ಬಸವನಗುಡಿ ನಿವಾಸಿಗಳಿಗೆ ಉಸಿರಾಡುವಂತಾಗಿತ್ತಂತೆ. ಆದರೂ ಗೂಳಿಯ ಮೇಲಿನ ಗೌರವಕ್ಕಾಗಿ ಅದಕ್ಕೊಂದು ಸಮಾಧಿ ಕೂಡ ಕಟ್ಟಿದ್ದಾರೆ. ಆ ಸಮಾಧಿ ಇಂದಿಗೂ ಬ್ಯೂಗಲ್ ರಾಕಿನಲ್ಲಿದೆ. ಸಮಾಧಿಯ ಮೇಲೆ ಒಂದು ಬಸವಣ್ಣನ ವಿಗ್ರಹವನ್ನೂ ಕೂರಿಸಿದ್ದಾರೆ.

ಇಲ್ಲೂ ಕೆಂಪೇಗೌಡನ ಗೋಪುರವಿದ್ದೂ, ಬೆಂಗಳೂರು ದಕ್ಷಿಣ ಪೂರ್ತಿ ಕಾಣಿಸುವಂತಿತ್ತು ಕೇವಲ ಹದಿನೈದು ವರ್ಷದ ಕೆಳಗೆ. ಇಂದು ಗೋಪುರ ಮಾತ್ರ ಇದೆ. ಏನೂ ಕಾಣಿಸುವುದಿಲ್ಲವಷ್ಟೆ. ಆ ಗೋಪುರದ ಕೆಳಗಿರುವ ಬಂಡೆಗಳ ಮೇಲೆ ಆ ಕಾಲದ ಸೈನಿಕರು ದೀಪಕ್ಕಾಗಿ ಬಳಸುತ್ತಿದ್ದ ಗುಳಿಗಳನ್ನು ನೋಡಬಹುದು. ಬಂಡೆಗಳ ಮೇಲೆ ಗುಳಿಗಳನ್ನು ಮಾಡಿ, ಅಲ್ಲಿ ಎಣ್ಣೆ ಸುರಿದು ದೀಪ ಹೊತ್ತಿಸುತ್ತಿದ್ದರಂತೆ. ಕೆಂಪೇಗೌಡನು ಬೆಂಗಳೂರಿನಲ್ಲಿ ನಿರ್ಮಿಸಿರುವ ಎಲ್ಲಾ ಎಂಟು ಗೋಪುರಗಳೂ 'ವಾಚ್ ಟವರ್'ಗಳಾಗಿದ್ದವು. ಅವು ನಾಲ್ಕೇ ಇದೆ, ಬೆಂಗಳೂರಿನ ಮಿತಿಯನ್ನು ಗುರುತಿಸಲು ಕೆಂಪೇಗೌಡ ಅವನ್ನು ನಿರ್ಮಿಸಿದನೆಂಬುದು ಹುಸಿನಂಬಿಕೆಯಷ್ಟೆ. ಬೆಂಗಳೂರಿಗೆ 'ಬೆಂದಕಾಳೂರು' ಎಂಬ ಹೆಸರಿತ್ತು ಎಂಬುದಕ್ಕೂ ಸರಿಯಾದ ಪುರಾವೆಗಳಿಲ್ಲ, ಪ್ರಚಾರಗಳಿವೆಯಷ್ಟೆ.

ಬ್ಯೂಗಲ್ ರಾಕಿನ ತುಂಬಾ ಬರೀ ಬಂಡೆಗಳದೇ ಆರ್ಭಟ. ಪೊದೆಗಳಲ್ಲಿ ಹಾವು ಚೇಳುಗಳಿಗೆ ಕೊರತೆಯೇ ಇರಲಿಲ್ಲ. ಸಂಜೆ ಆರರ ನಂತರ ಇದು ಮಾದಕವಸ್ತು ಮಾರಾಟಗಾರರ ತಾಣವಾಗಿಬಿಡುತ್ತಿತ್ತು. ವ್ಯಭಿಚಾರಕ್ಕೆ, ವ್ಯವಹಾರಕ್ಕೆ ನೆಲೆಯಾಗಿತ್ತು. ಈಗ ಇದು ಉದ್ಯಾನವಾಗಿದೆ. ಒಳ್ಳೆಯ ಬೆಳವಣಿಗೆ, ಆದರೂ ಬಂಡೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬ್ಯೂಗಲ್ ರಾಕಿನಲ್ಲಿ ದೆವ್ವ ಇದೆ ಎಂಬ ಪ್ರತೀತಿಯೂ ಇತ್ತು.

ಡಿ.ವಿ.ಜಿ. ಸ್ಟಾಚು ಮೊನ್ನೆ ಮೊನ್ನೆ ಅಲ್ಲಿ ನಿರ್ಮಿಸಿ, ಬಸವನಗುಡಿ ನಿವಾಸಿಗಳಾಗಿದ್ದ ಹಿರಿಯ ಕವಿಗೆ ಉತ್ತಮ ಗೌರವ ಸಲ್ಲಿಸುವ ಕೆಲಸವದಾಗಿದೆ. ಅದರ ಎದುರು ಸುಂದರ ಮೆಟ್ಟಿಲುಗಳನ್ನು ಮಾಡಿ, ಅದನ್ನು ವೇದಿಕೆಯೆದುರು ಕುಳಿತುಕೊಳ್ಳುವ ಸೀಟುಗಳಂತೆಯೂ ಬಳಸಬಹುದಾಗಿದ್ದು ಒಳ್ಳೆಯ ಯೋಜನೆಯಾಗಿದೆ. ಆಗ (ಕೇವಲ ಹದಿನೈದು ವರ್ಷಗಳ ಹಿಂದೆ) ಇಲ್ಲಿ ಬರೀ ಪೊದೆಗಳಿದ್ದವು.

ಬ್ಯೂಗಲ್ ರಾಕಿನ ಒಳಗೆ ದೊಡ್ಡ ಬಸವಣ್ಣನ ದೇವಸ್ಥಾನ, ದೇಶದಲ್ಲೇ ಐದನೇ ಅತಿ ದೊಡ್ಡ ನಂದಿಯೆಂದು ಖ್ಯಾತಿಯಾಗಿದ್ದಲ್ಲದೆ, ಋಷಭಾವತಿ ನದಿಯ ಉಗಮಸ್ಥಾನ ಕೂಡ ಆಗಿದೆ. ಈಗ ಅಂತರ್ಜಲವಾಗಿರುವ ಋಷಭಾವತಿಯು ಕೆಲವೇ ವರ್ಷಗಳ ಕೆಳಗೆ ಆಚಾರ್ಯ ಪಾಠಶಾಲೆಯ ಪಕ್ಕದಲ್ಲೇ ಇದ್ದ ಕಲ್ಯಾಣಿಯಲ್ಲಿ ಹುಟ್ಟುತ್ತಿತ್ತು. ಪ್ರತಿವರ್ಷವೂ ಆಚಾರ್ಯ ಪಾಠಶಾಲೆಯ ಗಣಪತಿ ಉತ್ಸವವು ಜೋರಾಗಿ ನಡೆದು, ಇಡೀ ಬಸವನಗುಡಿಯೆಲ್ಲಾ ಮೆರವಣಿಗೆಯಾದ ನಂತರ ವಿಸರ್ಜನೆಯನ್ನು ಇದೇ ಕಲ್ಯಾಣಿಯಲ್ಲಿ ಮಾಡುತ್ತಿದ್ದರು. ಈಗ ಆ ಕಲ್ಯಾಣಿ BWSSB ಕಚೇರಿ ಆಗಿದೆ.

ಒಂದು ಕಾಲದಲ್ಲಿ ಆಚಾರ್ಯ ಪಾಠಶಾಲೆ, ಬಿ.ಎಮ್.ಎಸ್. ಕಾಲೇಜು - ಇವಿಷ್ಟೂ ಬ್ಯೂಗಲ್ ರಾಕಿಗೆ ಸೇರಿದ ಆಸ್ತಿಯಾಗಿತ್ತು.

4 - ಆರ್ಮಿ ಸ್ಟೋರು

ಶಿವಾಜಿನಗರ ಎಷ್ಟೊಂದು ಜನರ ಶತ್ರು. ಗಲೀಜು, ಗೂಂಡಾಗಿರಿ, ಡ್ರಗ್ಸು - ಇಂಥದ್ದೇ ರಾರಾಜಿಸುತ್ತಿದ್ದ ಕಾಲವೂ ಇತ್ತು. ಬಹುಶಃ ಈಗಲೂ ಇದೆ. ಅದೇ ರೀತಿ, ಇಲ್ಲಿರುವ ಕಮರ್ಷಿಯಲ್ ಸ್ಟ್ರೀಟು ಬ್ರಿಟಿಷರ ಕಾಲದಿಂದಲೂ ಶಾಪಿಂಗ್‍ಗೆ ಹೇಳಿಮಾಡಿಸಿದ್ದ ಜಾಗ. ಆದರೆ ನನಗೆ ಎಂದೂ ರುಚಿಸಿಲ್ಲ. ಆದರೆ ನನಗೆ ಇಷ್ಟವಾಗಿರುವುದು ಅದರ ಸಮೀಪದಲ್ಲೇ ಇರುವ ಆರ್ಮಿ ಸ್ಟೋರು. ಶಿವಾಜಿನಗರದ ಇನ್ನೊಂದು ಬೀದಿಯಲ್ಲಿ ಮಿಲಿಟರಿ ಬಟ್ಟೆಗಳು, ಕಿಟ್ಟುಗಳು, ಚೀಲಗಳು, ಪೆಟ್ಟಿಗೆಗಳು ದೊರಕುವ ಅಂಗಡಿಗಳ ಸಾಲೇ ಇದೆ. ಈ ಸಾಲಿನಲ್ಲಿ ಶ್ರೇಷ್ಠವೆನಿಸಿರುವುದು ಆರ್ಮಿ ಸ್ಟೋರು.

ಹೈಸ್ಕೂಲಿನಲ್ಲಿ ಎನ್.ಸಿ.ಸಿ.ಯಲ್ಲಿದ್ದಾಗಿಲಿಂದಲೂ ಇಲ್ಲಿಗೆ ಭೇಟಿ ನೀಡುತ್ತಲೇ ಇದ್ದೇನೆ. ಅದು, ಬ್ಯಾಡ್ಜ್ ಖರೀದಿಗಾಗಲೀ, ಮಳೆಯ ಕೋಟಿಗಾಗಲೀ. ಆರ್ಮಿ ಸ್ಟೋರಿನಲ್ಲಿ ಚೌಕಾಸಿ ಮಾಡಿ ಕೊಂಡುಕೊಳ್ಳುವ ಮಜವೇ ಬೇರೆ! ಟ್ರೆಕ್ಕಿಂಗ್ ಶೂ ಕೂಡ (ಹಂಟರ್ ಶೂ) ಏಳುನೂರರಿಂದ ಇನ್ನೂರಕ್ಕೆ ಚೌಕಾಶಿ ಮಾಡಿ ಕೊಂಡಾಗ ಏನೋ ಆನಂದ!

ಶಿವಾಜಿನಗರದ ಬಸ್ ಸ್ಟಾಂಡು ಈಗ ಕೆಲವು ವರ್ಷಗಳಿಂದ ಬಹಳ ಸುಂದರವಾಗಿ ಸುಲಲಿತವಾಗಿ ಮಾಡಿಬಿಟ್ಟಿದ್ದಾರೆ. ಮೊದಲು ಹೀಗಿರಲಿಲ್ಲ. ವಿಪರೀತ ಗೊಂದಲಮಯವಾಗಿತ್ತು. ಕಲಾಸಿಪಾಳ್ಯಕ್ಕಿಂತಲೂ ಅಸಹ್ಯ ತರಿಸುವಂತಿತ್ತು. ಆದರೂ ಬಸ್ ಸ್ಟಾಂಡಿನಲ್ಲೇ ಇರುವ ಹೊಟೆಲು (ಹೆಸರು ಮರೆತುಬಿಟ್ಟಿದ್ದೇನೆ) ಇಡ್ಲಿ ವಡೆ ಕಾಫಿಗೆ ಬಹಳ ಜನಪ್ರಿಯ. ಸೊಗಸಾಗಿಯೂ ಇದೆ.

3 - ಜಿಂಕೆ ಪಾರ್ಕ್

ನಾನು ವಾಸ್ತವವಾಗಿ ಜಿಂಕೆ ಪಾರ್ಕ್ ಬಗ್ಗೆ ಮಾತನಾಡುತ್ತಿಲ್ಲ. ಆ ಪಾರ್ಕು ಈಗ ದರಿದ್ರ ಅಮ್ಯೂಸ್‍ಮೆಂಟ್ ಪಾರ್ಕೊಂದಾಗಿದೆ. ಅದರ ಬದಿಯಲ್ಲೇ ಇರುವುದು ಹಿಂದೂ ರುದ್ರಭೂಮಿ. ಹೆಚ್ಚಿಗೆ ಬರೆಯುವುದಿಲ್ಲ ಇದರ ಬಗ್ಗೆ.

2 - ಗಾಂಧಿ ಬಜಾರ್

ಗಾಂಧಿ ಬಜಾರಿನ ಬಗ್ಗೆ ಹಿರಿಯ ಸಾಹಿತಿಗಳೆಲ್ಲರೂ ಬರೆದುಬಿಟ್ಟಿದ್ದಾರೆ. ಡಿ.ವಿ.ಜಿ.ಯಿಂದ ಹಿಡಿದು ಕೈಲಾಸಂ ವರೆಗೆ, ಮಾಸ್ತಿಯಿಂದ ಹಿಡಿದು ನಿಸಾರ್ ಅಹಮದ್ ವರೆಗೆ, ಬೆಳಗೆರೆಯಿಂದ ಹಿಡಿದು ಶ್ರೀನಿಧಿಯವರೆಗೆ. ಇನ್ನು ನಾನೊಬ್ಬ ಬಾಕಿ. ಹಿರಿಯನೂ ಅಲ್ಲ, ಸಾಹಿತಿಯೂ ಅಲ್ಲ. ಆದರೂ ಗಾಂಧಿಬಜಾರಿನ ಅಭಿಮಾನಿಯಂತೂ ನಿಜ. ಏನೇ ಕೊಂಡುಕೊಳ್ಳಬೇಕಾದರೂ ಮೊದಲು ಗಾಂಧಿಬಜಾರಿಗೇ ಆದ್ಯತೆ. ಇಲ್ಲಿ ಸಿಗದೇ ಹೋದರೆ ನಂತರ ಬೇರೆ ಸ್ಥಳಗಳು. ಒಂದು ಮೊಳ ಹೂವು ಖರೀದಿಸಲೂ ಗಾಂಧೀಬಜಾರೇ ಬೇಕು. ಶೆಮ್ಮಂಗುಡಿ ಸಿ.ಡಿ.ಗೆ ಸಂಗೀತ್ ಸಾಗರ್ರೇ ಆಗಬೇಕು. ಕಾಫಿಗೆ ಬಾಲಾಜಿಯೇ ಆಗಬೇಕು, ಅತಿಮಧುರಕ್ಕೆ ಸರ್ಕಲ್ಲಿನ ಗ್ರಂಧಿಗೆ ಅಂಗಡಿಯೇ ಆಗಬೇಕು (ಮನೆಯ ಕೆಳಗಡೆ ರೆಸ್ತೆಯಲ್ಲೇ ಇದ್ದರೂ), ಫ್ರೂಟ್ ಜ್ಯೂಸಿಗೆ ಇಲ್ಲಿಯ ಗಣೇಶನೇ ಬೇಕು, ದೋಸೆಗೆ ಮಹಾಲಕ್ಷ್ಮಿಯೇ ಬೇಕು, ಲೇಖನಿಗೆ ಸರಸ್ವತಿಯೇ ಆಗಬೇಕು, ಕನ್ನಡ ಪುಸ್ತಕಕ್ಕೆ ಅಂಕಿತವೇ ಬೇಕು, ಬನಿಯನ್ನು ಒಳಚಡ್ಡಗಳಿಗೂ ಗಾಂಧಿಬಜಾರೇ ಆಗಬೇಕು!! (ಯಾವ ಅಂಗಡಿ ಅಂತೆಲ್ಲಾ ಹೇಳಲ್ಲ, ಸಾರಿ).

ಗಾಂಧಿ ಬಜಾರು ತ್ರಿಕರಣಶುದ್ಧವಾಗಿ ನನ್ನನ್ನು ಆಕ್ರಮಿಸಿಕೊಂಡುಬಿಟ್ಟಿದೆ. ಏಳನೇ ತರಗತಿಯವರೆಗೂ ಇಲ್ಲೇ ಇರುವ ವಿಮೆನ್ಸ್ ಪೀಸ್ ಲೀಗಿನಲ್ಲಿ ಓದಿದ ನಾನು ಮಗುವಿನಿಂದಲೂ ಡಿ.ವಿ.ಜಿ.ರಸ್ತೆಯಲ್ಲಿ ಅಡ್ಡಾಡಿದವನು. ಚಡಗನ ಅಂಗಡಿಯ ಬೆಣ್ಣೆ ಗುಲ್ಖನ್ ಮೆಲ್ಲಿದವನು. ಸುಬ್ಬಮ್ಮ ಅಂಗಡಿಯ ತೇಂಗೋಳ್ ಚಕ್ಕುಲಿಯನ್ನು ಕುರುಕಿದವನು. ವಿದ್ಯಾರ್ಥಿ ಭವನದ ಮಸಾಲೆ ದೋಸೆಯನ್ನು ಸವಿದವನು. ಮಾಡರ್ನ್ ಟಿಫನ್ ರೂಮಿನ ದಮ್ರೋಟನ್ನು ಚಪ್ಪರಿಸಿದವನು. ಈಶ್ವರನ ದೇವಸ್ಥಾನದ ಪಕ್ಕದಲ್ಲಿರುವ ಕಾಫಿಪುಡಿ ಅಂಗಡಿಯಿಂದ ಹೊರಹೊಮ್ಮುವ ಸುಗಂಧವನ್ನು ಮೈತುಂಬಿಕೊಂಡವನು. ಕೆನೆರಾ ಬ್ಯಾಂಕಿನ ದೆಸೆಯಿಂದ ನೋಟನ್ನು ಎಣಿಸಲು ಕಲಿತವನು. ಆರ್ಯಭವನದ ಸೋಹಂಪಾಪ್ಡಿಯನ್ನು ತಿಂದವನು. ವಿಟ್ಠಲ್ ಡ್ರೆಸ್ಸಸ್‍ನ ಬಟ್ಟೆಯನ್ನು ತೊಟ್ಟವನು. ವಿ.ಎಸ್. ಎಂಡ್ ಸನ್ಸ್‍ನ ನೋಟ್ ಪುಸ್ತಕಗಳಲ್ಲಿ ಬರೆದವನು. ಮಹಾಲಕ್ಷ್ಮಿಯ ಕಾಫಿಯನ್ನು ಹೀರಿದವನು! ಕಾಯಾ-ವಾಚಾ-ಮನಸಾ ಗಾಂಧಿಬಜಾರು ನನ್ನೊಳಕ್ಕೆ (ಅಥವಾ ತದ್ವಿರದ್ಧ) ಐಕ್ಯವಾಗಿಬಿಟ್ಟಿದೆ.


1 - ಮೆಜೆಸ್ಟಿಕ್ ಬಸ್ ನಿಲ್ದಾಣ


ಬಿ.ಎಂ.ಟಿ.ಸಿ ಬಸ್ ನಿಲ್ದಾಣವಲ್ಲ, ಆದರೆ ಕೆ.ಎಸ್.ಆರ್.ಟಿ.ಸಿ. ನಿಲ್ದಾಣ. ಮನಸ್ಸು ಜಡವಾದಾಗ ದೇಹ ಇಲ್ಲಿ ಬಂದು ಕುಳಿತುಬಿಡುತ್ತೆ. "ಆಸ್ಸನ್ ಬೇಲೂರ್ ಚಿಕ್‍ಮಳೂರ್.." ಅಂತ ಕಂಡಕ್ಟರ್ರು ಕೂಗುತ್ತಿರುವುದನ್ನು ಕೇಳುವುದೇ ಆನಂದ. "ಮಂಗ್ಳೂರ್.. ಉಡುಪಿ... ಕುಂದಾಪುರ" ಎಂದು ಕೇಳಿದೊಡನೆಯೇ ಹತ್ತುಬಿಡಲೇ ಎಂದೆನಿಸುತ್ತೆ. ಇಲ್ಲಾ, ಮನೇಲಿ ಹೇಳಿಲ್ಲ, ಅದೂ ಅಲ್ಲದೆ ನಾಳೆ ಶಾಲೆಗೆ ಹೋಗಬೇಕು. ಇನ್ಯಾವಾಗಲಾದರೂ ಹೋಗೋಣ ಅಂತ ನನಗೆ ನಾನೇ ಹೇಳಿಕೊಂಡು ಮುಂದಿನ ಪ್ಲಾಟ್ ಫಾರಮ್ಮಿನ ಕಡೆ ಹೆಜ್ಜೆ ಹಾಕುತ್ತೇನೆ. ಎಲ್ಲಾ ಊರಿನ ಬಸ್ಸುಗಳನ್ನೂ ಅವುಗಳ ಕಂಡಕ್ಟರುಗಳನ್ನೂ ನೋಡಿ ಅವರ ಬಾಯಿಂದ ಹೊರಡುವ ಊರಿನ ಸಹಸ್ರನಾಮಾರ್ಚನೆಯನ್ನೂ ಕೇಳಿ ಆನಂದಿಸಿ ಮತ್ತೆ ಮನೆಗೆ ಹಿಂದಿರುಗುವ ಹೊತ್ತಿಗೆ ನಾಳಿನ ಕೆಲಸಕ್ಕೆ ಚೈತನ್ಯ ಉಕ್ಕಿ ಬಂದಿರುತ್ತೆ. ಅಂತೆಯೇ ರೈಲ್ವೇ ನಿಲ್ದಾಣ ಕೂಡ. ಪ್ಲಾಟ್‍ಫಾರಂ ಟಿಕೆಟ್ ಖರೀದಿಸಿ, ಎಲ್ಲಾ ಪ್ಲಾಟ್‍ಫಾರಂ‍-ನೂ ನೋಡುತ್ತಾ, ಹತ್ತಿಬಿಡಲೇ ಎಂದೆನಿಸಿದರೂ ನೆಕ್ಸ್ಟ್ ಟೈಮ್ ಎಂದುಕೊಂಡು, ಎಲ್ಲಾ ರೈಲಿಗೂ ಟಾಟಾ ಮಾಡುತ್ತಾ ಒಂದು ಚಹ ಹೀರಿ ಮನೆಗೆ ಹಿಂದಿರುಗುವಾಗ ಅನ್ನಿಸುವುದು "ಆಹ್, ಬದುಕು ಸುಂದರ ಅಲ್ಲವೇ?"

-ಅ
01.09.2008
12AM

14 comments:

 1. bengalooru rounds bus nalli kotu rounds hoda haage aaytu. naanu gandhibazaar bagge blog kuTTuttidde...aadre neev kuTTbiTTiddeeri aagle...biDi nanna post na delete maaDbiDtini [hegoo innu draft nalle ide] .

  gurugaLe...kote venkataramana devasthanakke nam tande taayi karkond hogtini anta heLi heLi aata aadstidaare...neeveshtella heLidderi adara bagge andhmele ondh dina naau heLde keLde hogi bandhbiDtini !

  ella jaagagaLallu nimm experience ontharaa chennaagide, specially majestic !

  ReplyDelete
 2. :-) made me feel a little nostalgic ... bugle rock park nalli jaaru bande aadiddu, aa gul mohar hoovina uguru maadkotididdu ... beautiful memories.
  ninne dvg road ge hogidde ... habbada time nalli gandhi bazaar ge hogi alli rush nalli hoovu kondkolde idre, nange habba maaddhaage aagolla ... super alwa?

  Naanenaadru list maaddre shivajinagara khandita irolla ansutte ... monne banaswadi inda barbekaadre alli galligalalli kaldhogidde ... abba ... horage bandre saaksaaku ansbittittu :-)

  ReplyDelete
 3. ದೇವ್ರಾಣೆ ಬೆಂಗಳೂರಿನ ಮುಕ್ಕಾಲು ಜನರಿಗೆ ಇವೆಲ್ಲ ಗೊತಿರೋಲ್ಲ ಕಣ್ರೀ. ನಿಮ್ಮಂತ ಹಳೇ ತಲೆಗಳು ಹೇಳಿದ್ರೆ ಗೊತ್ತಾಗೋದು :)

  ಇಲ್ಲಾಂದ್ರೆ ಬರೋರೆಲ್ಲಾ ಫೋರಂ, ಗರುಡಾ ಮಾಲ್ ಗಳನ್ನೇ ಬೆಂಗಳೂರಿನ ಅಧ್ಬುತ ಸ್ಥಳಗಳು ಅನ್ಕೊಂಡು ಬಿಡ್ತಾರೆ .!

  ಥ್ಯಾಂಕ್ಸ್ ಬಹಳ.

  ಆದ್ರೂ ಗಾಂಧಿಬಜಾರು ಅನ್ನೋದು ’ಈಗ’ ಬೆಂಗಳೂರಿನ ಯಾವ ಬೇರೆ ಏರಿಯಾಗಳಿಗಿಂತಲೂ ಪೆಸಲ್ಲು ಏನಿಲ್ಲ ಅನ್ಸುತ್ತಪ್ಪ.:)

  ReplyDelete
 4. ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆ ಅರುಣ್ ನಮಸ್ಕಾರ..
  ತುಂಬಾ ಚೆನ್ನಾಗಿ ಬರೆಯುತ್ತಿರಿ, ಜೊತೆಗೆ ವಿಭಿನ್ನವಾಗಿದೆ. ನನ್ನ ಬ್ಲಾಗ್ ಗೆ ಕಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಸ್..
  ಆಗಾಗ ಸಮಯವಿದ್ದಾಗ. ಶರಧಿಯಲ್ಲಿ ಪುಟ್ಟ ಪಯಣ ನಿಮ್ಮದಾಗಿಸಿ.ಮತ್ತೆ ಮರಳುವೆ. ಶುಭವಾಗಲಿ..
  -ಚಿತ್ರಾ

  ReplyDelete
 5. "ಬೆಳಗೆರೆಯಿಂದ ಹಿಡಿದು ಶ್ರೀನಿಧಿಯವರೆಗೆ..."
  --> ha ha ha.. super-u.


  "ಏಳನೇ ತರಗತಿಯವರೆಗೂ ಇಲ್ಲೇ ಇರುವ ವಿಮೆನ್ಸ್ ಪೀಸ್ ಲೀಗಿನಲ್ಲಿ ಓದಿದ ನಾನು..."
  --> neenu ideally men's peace league alli Odbekittu. women's peace league yaake? haan?


  "ಆಸ್ಸನ್ ಬೇಲೂರ್ ಚಿಕ್‍ಮಳೂರ್.."
  --> sakkath... nanguu avru koogo reeti sakkat ishTa..


  overall, super write-up kaNappa.. heege kelsa maaDtaa maaDtaa mysore ge bandbiDu. aamele mysore bagge nu heege bardbiDu. :P

  ReplyDelete
 6. ಬೆಂಗಳೂರೆನ್ನೆಲ್ಲಾ ಸುತ್ತಾಡಿಸಿಬಿಟ್ಟಿರಿ, ಥ್ಯಾಂಕ್ಸ್.

  ReplyDelete
 7. [ಸುನಾಥ್] ಇಲ್ಲಾ ರೀ, ಕತ್ತರಿಗುಪ್ಪೆ, ಕೋರಮಂಗಲದಂತಹ ಘಟಾನುಘಟಿ ಏರಿಯಾಗಳನ್ನೇ ಬಿಟ್ಟುಬಿಟ್ಟಿದ್ದೇನೆ!! ಅವು ನನಗೆ ಇಷ್ಟ ಇಲ್ಲ ಅನ್ನೋದು ಬೇರೆ ವಿಷಯ ಬಿಡಿ... ;-)

  [ಗಂಡಭೇರುಂಡ] ಹೆಂಗಸರು ಸೇರಿಕೊಂಡು ಶಾಲೆ ಮಾಡಿದ್ದರು, ಅದಕ್ಕೆ ಹಾಗೆ ಹೆಸರು. ನಿನಗೆ ನಮ್ಮ ಶಾಲೆಯನ್ನು ತೋರಿಸಿಲ್ಲ ಅಲ್ವಾ? ಇಲ್ಲಿ ಬಂದಾಗ ತೋರಿಸುತ್ತೇನೆ. ಶ್ರೀಧರನಿಗೂ ತೋರಿಸಬೇಕಂತೆ, ಕೇಳುತ್ತಿದ್ದ ಮೊನ್ನೆ.

  ಮೈಸೂರಿಗೆ ಬರುವ ಭಾಗ್ಯ ಆದಷ್ಟು ಬೇಗ ಬರಲಿ.

  [ಚಿತ್ರಾಕರ್ಕೇರಾ] ಧನ್ಯವಾದಗಳು ಇವರೇ.. :-)

  [ವಿಕಾಸ ಹೆಗಡೆ] ಹೌದು, ಗಾಂಧಿ ಬಜಾರು ಯಾಕೋ ಹಾದಿ ತಪ್ಪುತ್ತಿದೆ.. :-(

  [ವಿಜಯಾ] ಶಿವಾಜಿನಗರದಲ್ಲಿ ಕಳೆದು ಹೋದೆಯಾ? ಯಪ್ಪಾ... ಅಲ್ಲಿನ ವಿಶೇಷ ಏನೆಂದರೆ ಶಿವಾಜಿಗೆ ಸಂಬಂಧ ಪಟ್ಟಿರೋದ್ ಒಂದ್ ಬಿಟ್ಟು ಮಿಕ್ಕಿದ್ ಎಲ್ಲಾ ಇದೆ. ಮಹಾತ್ಮಾ ಗಾಂಧಿ ರಸ್ತೆ ಥರಾ..

  [ಲಕುಮಿ] ನೀನೇನ್ ಮಗೂನಾ? ಕರ್ಕೊಂಡ್ ಹೋಗೋಕೆ.. ಬಸ್ ಹತ್ತು, ಮಾರ್ಕೆಟ್ ಇಳ್ಕೋ, ಹೋಗು, ವಾಪಸ್ ಬಾ ಮನೇಗೆ ಮರೀದೇ.

  ReplyDelete
 8. naanu manege barodanna marthogtini anta nimge heg gottaaytu ? ;-) sarvaantaryaami gurugaLE neevu !

  naan magu alla...:-) avru karkond hogtini anta heLidru anta somaari aag kootidde ashte !

  ReplyDelete
 9. lakshmi,

  nODoo, kuDeebaardu antha hELthilla; aadre ishtella - mane daari marth hogOShtu kudeebardappaa.. jaane aagbeku.. aaytha?

  ReplyDelete
 10. kahale bande nan list nalli first baratte :)

  ReplyDelete
 11. ಅರೇ! ಈ ಪೋಸ್ಟ್ ಇವತ್ ಓದಿದೆ! ಮಿಸ್ ಆಗ್ಬಿಟ್ಟಿತ್ತು!! ಸೂಪರ್ರು. ಬರೀ ಶ್ರೀನಿಧಿ ಅಲ್ಲ, ಒಂಬತ್ತನೇ.. :)

  ReplyDelete
 12. ನಿಮ್ಮ ಟಾಪ್ ೧೦ ಒಳಗೆ ನಮ್ಮ ಮಲ್ಲೇಶ್ವರ ರೈಲು ನಿಲ್ದಾಣ ಸೇರಿಸ್ರೀ ಸ್ವಾಮಿ. ಅದರೊಳಗೆ ಒಂದು ಮುಂಜಾನೆ, ಒಂದು ಮದ್ಯಾಹ್ನ ಒಂದು ಸಂಜೆ ಬಂದು ಒಂದೊಂದು ಗಂಟೆ ಇದ್ದು ನೋಡ್ರಿ, ನಿಮ್ಮ ಟಾಪ್ ೧ ನಲ್ಲಿ ಬರುತ್ತಾ ಇಲ್ವೋ ನೋಡ್ರಿ.
  ನಿಮ್ಮ ಲೇಖನ ಚೆನ್ನಾಗಿದೆ.
  ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
  http://chaayakannadi.blogspot.com

  ReplyDelete
 13. ನಿಜ ಹೇಳ್ಬಿಡ್ತೀನಿ.. ಇದ್ರಲ್ಲಿ ನೀವು ಹೇಳಿರೋ ಸ್ಥಳಗಳಲ್ಲಿ ನಾನು ಸರಿಯಾಗ್ ನೋಡಿರೋದು ಮೆಜೆಸ್ಟಿಕ್ ಒಂದೇ!!!!!

  ಬೆಂಗಳೂರಿಗೆ ಬಂದು ಒಂದು ವರ್ಷ ಆಯ್ತು ಅಂತ ಹೇಳ್ಕೊಳ್ಳಕ್ಕೆ ನಾಚಿಕೆ ಆಗುತ್ತೆ :-(

  ನೀವು ನಮ್ ಏರಿಯ ಸುತ್ತ ಮುತ್ತ ಇರೋ ITPL, BTP, ಕೆ.ಆರ್.ಪುರಂ ಕೇಬಲ್ ಬ್ರಿಜ್, ಹೆಬ್ಬಾಳ್ ಫ್ಲೈಓವರ್ ಬಗ್ಗೆ ಬರದ್ರೆ ನಾವೂ ಬೆಂಗಳೂರಲ್ಲೇ ಇದೀವಿ ಅನ್ನೋ ನಂಬಿಕೆ ಬರ್ತಿತ್ತು..

  ReplyDelete
 14. [ಹರೀಶ] ನೀವು ಹೇಳಿದ ಸ್ಥಳಗಳೆಲ್ಲಾ ಹತ್ತು ವರ್ಷಗಳ ಕೆಳಗೆ ಹಳ್ಳಿಯೋ, ಕಾಡೋ, ಹಾಳು ಕೊಂಪೆಯೋ ಆಗಿದ್ದವು.
  ಒಂದೇ ವರ್ಷಾನಾ? ಇನ್ನೂ, ಟೈಮಿದೆ ಸರ್, ತಿರುಗಾಡಿ.. :-)

  [ಶಿವು] ಮಲ್ಲೇಶ್ವರವು ಈಗ ವಿಪರೀತ ಟ್ರಾಫಿಕ್ಕಿನಿಂದ ಕೂಡಿದ್ದು ಮೊದಲಿನ ಹಾಗೆ ಮನಸೆಳೆಯುವುದಿಲ್ಲ, at least ನನಗೆ!!

  [ಶ್ರೀನಿಧಿ] ಎಂಟನೆಯವನು ನಾನಾ??? ;-)

  [ಸ್ನೇಹ] ಕಹಳೆ ಬಂಡೆಯಲ್ಲಿ ನಿಮ್ಮದೂ ಒಂದು ಸ್ಟಾಚೂ ಮಾಡೋಣ್ವಾ?? ;-)

  [ಸುಶ್ರುತ ದೊಡ್ಡೇರಿ] ಅವಳ ಮನೆಯಲ್ಲೇ ಕಳೆದು ಹೋಗುವವಳು ಅವಳು!

  [ಲಕುಮಿ] ನೀನು ಮಗು ಅಲ್ವಾ?? ಏನಾಶ್ಚರ್ಯ!!!!

  ReplyDelete