Wednesday, September 17, 2008

ಪರೀಕ್ಷೆ

ನಾವು ವಿದ್ಯಾರ್ಥಿಗಳಾಗಿದ್ದ ಕಾಲದಲ್ಲಿ ಸಿಕ್ಕಾಪಟ್ಟೆ ಸ್ಪರ್ಧೆ. ಹುಡುಗರಲ್ಲಿ ಹೆಚ್ಚಿರದಿದ್ದರೂ ಹುಡುಗಿಯರಂತೂ ಬೇರೆಯವರಿಗೆ ಅರ್ಧ ಅಂಕ ಹೆಚ್ಚು ಬಂದರೂ ಹೊಟ್ಟೆಯೊಳಗೆ ಸಂಕಟ ಪಟ್ಟುಕೊಳ್ಳುತ್ತಿದ್ದರು. ಹುಡುಗರೋ, "ನೀನೂ ತೂಕಾ? ಕೈ ಕೊಡು ಮಗ, ನಾನೂ ತೂಕು.." ಅನ್ನೋ ಜಾತಿಯವರು. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ rank ಬರುವವರು ನಮ್ಮ ಜೊತೆ ಸೇರುತ್ತಲೇ ಇರಲಿಲ್ಲ.

ತಿಂಗಳಾಯಿತೆಂದರೆ ಪರೀಕ್ಷೆ, ಆಮೇಲೆ ಅರ್ಧವಾರ್ಷಿಕ ಪರೀಕ್ಷೆ, ಮತ್ತು ವಾರ್ಷಿಕ ಪರೀಕ್ಷೆ. Rankಗಳಿಗೆ ಹೋರಾಟ. ಒಂದು ಅಂಕದಿಂದ ಒಂದು rank ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ವಾರಗಟ್ಟಲೆ ಸಪ್ಪಗಿರುತ್ತಿದ್ದರು ಸ್ಪರ್ಧಿಗಳು. ನಾನೂ ಒಂದು ಸಲ ಮೊದಲ rank ಬಂದುಬಿಟ್ಟಿದ್ದೆ, ಆರನೇ ತರಗತಿಯಲ್ಲಿ, ನೆನಪಿದೆ, ಒಂದೇ ಸಲ ಬಂದಿರೋದು ಇದುವರೆಗೂ. ಇಡೀ ಬೇಸಿಗೆ ರಜೆ ಎರಡು ತಿಂಗಳು ಪೂರ್ತಿ ಆಕಾಶದಲ್ಲೇ ಇದ್ದೆ. ಎಂಟನೇ ತರಗತಿಯಲ್ಲೇ ಇಂಗ್ಲಿಷಿನಲ್ಲಿ ಫೇಲಾಗಿದ್ದೆ, ಆಗ ಒಂದು ವಾರ ಉಪವಾಸ ಮಾಡಿದವರ ಹಾಗೆ ಬಡಕಲಾಗಿಬಿಟ್ಟಿದ್ದೆ.

ಬೆಳೆಬೆಳೆಯುತ್ತಾ ಪತ್ರಿಕೆಗಳಲ್ಲಿ "ಕಡಿಮೆ ಅಂಕ ತೆಗೆದುಕೊಂಡ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ" ಎಂಬ ವಾರ್ತೆ ಹೆಚ್ಚು ಹೆಚ್ಚು ಓದತೊಡಗಿದೆ. ಸರ್ಕಾರವೋ, ಇದಕ್ಕೆ ಕಾರಣ ಪರೀಕ್ಷಾವಿಧಾನವೇ ಎಂದು ತೀರ್ಮಾನಿಸಿ, ಈಗ ಮಕ್ಕಳಿಗೆ Rank ಕೊಡುವಂತೆಯೇ ಇಲ್ಲ. ನೂರಕ್ಕೆ ತೊಂಭತ್ತು ತೆಗೆದುಕೊಂಡರೂ A grade, ತೊಂಭತ್ತೊಂಭತ್ತು ತೆಗೆದುಕೊಂಡರೂ A grade-ಏ. ಯುದ್ಧಂ ತ್ಯಜತ... ಸ್ಪರ್ಧಾಂ ತ್ಯಜತ.... ಎಂಬುದನ್ನು ಸರ್ಕಾರದವರು ಹೀಗೆ ಅರ್ಥ ಮಾಡಿಕೊಂಡಂತಿದೆ. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಕಾರಣ ಬೇರೆಯದೇ ಸಿಗುತ್ತಲೇ ಇದೆ. ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಜೊತೆಗೆ ನಮ್ಮ ದೇಶದಲ್ಲಿ ವಿದ್ಯಾರ್ಥಿ ಪಡೆದುಕೊಂಡ ಅಂಕದ ಮೇಲೆ ಅವನ/ಅವಳ ಪ್ರತಿಭೆಯನ್ನು ಅಳೆಯುತ್ತಾರೆ. "ಅವನು ಬಿಡಿ ಬುದ್ಧಿವಂತ ಹುಡುಗ, ಎಲ್ಲಾದರಲ್ಲೂ 90 and above marks ತೊಗೋತಾನೆ." - ಇದು ಎಂಥಾ ಮೂರ್ಖತನ!! ಹಾಡಲು ಚೆನ್ನಾಗಿ ಬರುವವನು ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡರೆ, ಅವನ "ಗಾಯನ" ಪ್ರತಿಭೆಗೆ ಎಳ್ಳಷ್ಟೂ ಬೆಲೆಯಿರುವುದಿಲ್ಲ. ಕಲೆಗಾರನಿಗಂತೂ ಕೊಲೆಗಾರನಿಗಿಂತ ಕೀಳು ಬದುಕು! "ಸುಮ್ನೆ ಬಣ್ಣ ಬಳ್ಕೊಂಡ್ ಕೂತಿರ್ಬೇಡ, ಓದ್ಕೋ.." ಅಂತ ನಮ್ಮ ಮನೆಯಲ್ಲೇ ಬೈಗುಳಗಳನ್ನು ಕೇಳಿದ್ದೇನೆ. ಇನ್ನು, ಮಾರ್ಕ್ಸು ಇಲ್ಲದಿದ್ದರೆ ಹೈಸ್ಕೂಲಿಗೆ ಓಳ್ಳೇ ಕಡೆ ಸಿಗಲ್ಲ. ಎಸ್.ಎಸ್.ಎಲ್.ಸಿ. ಯಲ್ಲಿ ಕಡಿಮೆ ಅಂಕ ಬರದಿದ್ದರೆ "ಒಳ್ಳೇ" ಕಾಲೇಜಿನಲ್ಲಿ ಸೀಟು ಸಿಗುವುದಿಲ್ಲ. 95% ಪಡೆದುಕೊಂಡ ವಿದ್ಯಾರ್ಥಿಗಳನ್ನು ಮಾತ್ರವೇ admit ಮಾಡಿಕೊಂಡು ಆ ಶಾಲೆ/ಕಾಲೇಜು ಮಾಡುವ ಸಾಧನೆಯಾದರೂ ಏನೆಂಬುದು ನನಗೆ ಅರ್ಥವೇ ಆಗಿಲ್ಲ! ಎಲ್ಲೆಲ್ಲಿಂದಲೋ ಎಲ್ಲೆಲ್ಲಿಗೋ ಲಿಂಕುಗಳಿವೆ!!

ಇನ್ನು ಪಾಸು ಮಾಡುವ ವಿಧಾನ. ಕೆಲವು ಶಾಲೆಗಳಲ್ಲಿ ಈಗ ಪರೀಕ್ಷೆಯೇ ಮಾಡುವುದಿಲ್ಲ. ನನಗೆ ಈ ಪದ್ಧತಿ ಬಹಳ ಹಿಡಿಸಿತು. ಪರೀಕ್ಷೆಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ, ಅದನ್ನು ಮೌಲ್ಯ ಮಾಪನ ಮಾಡುವ, ಮತ್ತೆ ಫಲಿತಾಂಶವನ್ನು ದಾಖಲಿಸುವ ಗೋಜು ಇಲ್ಲವೆಂದಲ್ಲ. ಆದರೆ, ಇಂಥಾ ಪದ್ಧತಿಗಳಲ್ಲಿ, ದಿನೇ ದಿನೇ ಪರೀಕ್ಷೆ ಮಾಡಿ, ವಿದ್ಯಾರ್ಥಿಯ ಏಳಿಗೆಯನ್ನು ಪ್ರತಿದಿನ ಪರಿಗಣಿಸುತ್ತಾರೆ. ವರ್ಷವಿಡೀ ಪರೀಕ್ಷೆಯೇ. ಸುಮ್ಮನೆ ಪಾಠ ಹೇಳುವುದು, ನೋಟ್ಸು ಬರೆಸುವುದು, ತಾವು ಕೊಟ್ಟ ನೋಟ್ಸನ್ನು ತಾವೇ ತಿದ್ದುವುದು, ಮಕ್ಕಳು ಅದನ್ನು ಉರು ಹೊಡೆಯುವುದು, ರಿವಿಷನ್ ಅಂತ ಆ ನೋಟ್ಸನ್ನೇ ಓದಿಸುವುದು, ಪರೀಕ್ಷೆಯಲ್ಲಿ ಅದೇ ಪ್ರಶ್ನೆ ಕೇಳುವುದು, ಮಕ್ಕಳು ಉತ್ತರ ಬರೆಯುವುದು, ಮತ್ತೆ ತಾವು ಕೊಟ್ಟ ನೋಟ್ಸನ್ನೇ ಬರೆದ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದು - ಇದು ಪರೀಕ್ಷಾ ವಿಧಾನ ಇನ್ನೂ ಅನೇಕ ಶಾಲೆಗಳಲ್ಲಿ.. ಏಳನೇ ತರಗತಿಯವರೆಗೂ ಪರೀಕ್ಷೆಗಳ ಅವಶ್ಯಕತೆಯೇ ಇಲ್ಲ ಎಂದು ಒಂದು ಪದ್ಧತಿ ಹೇಳುತ್ತೆ, ಆ ಪದ್ಧತಿಗೆ ನನ್ನ ಮತ.

ಇಂಥಾ ಪದ್ಧತಿಗಳು ನಮ್ಮ ಕಾಲದಲ್ಲೂ ಇದ್ದಿದ್ದರೆ ಚೆನ್ನಿರುತ್ತಿತ್ತೆನಿಸುತ್ತೆ.

ಈಗ ನಮ್ಮ ಶಾಲೆಯಲ್ಲಿ ಅರ್ಧವಾರ್ಷಿಕ ಪರೀಕ್ಷೆ ಆರಂಭವಾಗಿದೆ. "ಸರ್, ಈ ಪ್ರಶ್ನೆ ಮುಖ್ಯಾನಾ, ಆ ವಾಕ್ಯ ಕೊಡ್ತೀರಾ, ಇದನ್ನು ಹೀಗೇ ಬರೀಬೇಕಾ.." ಅಂತ ಪರೀಕ್ಷಾ ಕೊಠಡಿಗೆ ಹೊರಡುವ ಕ್ಷಣದವರೆಗೂ ಮಕ್ಕಳು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. "ಅರ್ಥ ಆಗಿರೋದನ್ನು ನಿಮ್ಮ ವಾಕ್ಯಗಳಲ್ಲೆ ಬರೆಯಿರೋ, ಹೋಪ್‍ಲೆಸ್‍ ಫೆಲೋಗಳಾ..." ಅಂತ ಹೇಳಿ ಒಳಕ್ಕೆ ಕಳಿಸುವುದು ನನ್ನ ಸದ್ಯದ ಕೆಲಸವಾಗಿದೆ. ಹಾಳೆಯ ಮೇಲೆ ಎಷ್ಟು ಚೆನ್ನಾಗಿ ಬರೆದರೇನಂತೆ, ಅದನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಅರ್ಥ ಮಾಡಿಕೊಳ್ಳದಿದ್ದರೆ! ನನ್ನ ಪರೀಕ್ಷೆ, ಅವರು ಹೇಗೆ ಹೊರಗೆ ಅಳವಡಿಸುತ್ತಾರೆಂಬುದು. ನನ್ನ ಪುಣ್ಯ, ನನ್ನ ಮಕ್ಕಳು ದೇವರುಗಳು. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ರಾವಣ ಸಂಜಾತರು!

ಪಾಠವನ್ನು ಅರ್ಥ ಮಾಡಿಕೊಂಡು ಒಳ್ಳೇ ಮಾರ್ಕ್ಸು ತೆಗೆದುಕೊಳ್ಳಿ ಮಕ್ಕಳೇ.. All the best!!

-ಅ
17.09.2008
6PM

5 comments:

 1. excellent concept gurugaLe. manojna baraha.

  nanage kopa tarsodu andhre ee tuitionconcept-u. 95 percent ginta kelgade tagondavrige seat-e illa so called academygaLalli ! Infact, anthavarige ne alva tuition avashyakathe iradu ? maanadanDagaLe daNDa gurugaLE ! shudhdha daNDa !

  ReplyDelete
 2. ಏಳನೇ ತರಗತಿಯವರೆಗೂ ಪರೀಕ್ಷೆಗಳ ಅವಶ್ಯಕತೆಯೇ ಇಲ್ಲ ಎಂದು ಒಂದು ಪದ್ಧತಿ ಹೇಳುತ್ತೆ, hmm...aadre 7th standard wargu pareekshe anubhava ne ilde idre paapa aa makLge 8th standardalli kashta ansalwa....

  ReplyDelete
 3. ನಂಗೆ ಯಾವತ್ತೂ ಮೊದಲನೇ ರ್‍ಯಾಂಕು ಬಂದೇ ಇಲ್ಲ. ತೊಂಭತ್ತು ಚಿಲ್ಲರೆ ಪ್ರತಿಶತ ಅಂಕಗಳಂತೂ ದೂರವೇ! ಇದಲ್ಲದೇ ಗಣಿತದಲ್ಲಿ ಮತ್ತು ಕನ್ನಡದಲ್ಲಿ ಆಗಾಗ ತೂಕು. ಬಯಾಲಜಿ ಎಂದರೆ ಅಲರ್ಜಿ (ಪಾಠ ಮಾಡಿದ್ದು ಎಷ್ಟು ಚೆನ್ನಾಗಿರಬೇಡ), ಅದರಲ್ಲೂ ತೂಕೇ ಜಾಸ್ತಿ. ಹೈಸ್ಕೂಲಿಗೆ ಬಂದಮೇಲೆ ಇಂಗ್ಲೀಷು ಹೆಚ್ಚು ಕಲಿಯಲೇ ಇಲ್ಲ. ಆದರೂ ಭಗವಂತ ದೊಡ್ಡವನು... ಹೇಗೋ ಇಲ್ಲಿಯ ತನಕ ದಾಟಿಸಿಬಿಟ್ಟಿದ್ದಾನೆ. ಈಗಲೂ ಶಾಲೆಯ ಪರೀಕ್ಷೆಗಳನ್ನು ನೆನೆಸಿಕೊಂಡರೆ ಭಯವಿಲ್ಲದಿದ್ದರೂ ಜೀವನದಲ್ಲೇ ನಿರಾಸೆ ಬಂದುಬಿಡುತ್ತದೆ.

  ನಮ್ಮ ಅಧ್ಯಾಪಕರಿಗೆಲ್ಲಾ ಪಾಠ ಮಾಡುವುದು ಬರದಿದ್ದರೂ ಪರೀಕ್ಷೆ ಮಾಡಲು ಬರುತ್ತದೆ! ಹಾಗಾಗಿ ನನ್ನಂಥ ಧಡ್ದರ ಗತಿ ಅಧೋಗತಿ!

  ReplyDelete
 4. paarekshe andre agnipareekshe...
  naanu primary school nalli iruvaaga...pratibhaanvitha vidyaarthi...marks nalli... :-) :-)
  rank -o rank -u..

  ReplyDelete
 5. hmmm.. oLLe baraha.. aadre 7ne class varegu pareekshe ondu reeti, adaadmele innond reeti yaake? anta..

  "avnu jaasti togonDa. avnu ninginta buddhivanta" --> yes.. nangu heege baididdare maneli.. bejaan sala :D

  haan.. naanu life alli iduvaregu nu "rank student"-e.. :) heLkoLLokke hemme aagtide.. prati ondu test allu exam allu rank tegdiddini.. :) :) :)
  ***hindegaDe inda first rank-u***

  ReplyDelete