Wednesday, October 29, 2008

ಕವಿಯ ಮನೆಯ ಹಾದಿಯಲ್ಲಿ

ಕವಿಯ ಮನೆಯ ಹಾದಿಯಲ್ಲಿ
ಬಾನ ಪರದೆ ತುಂಬ
ತಾರೆಯು;
ಇರುಳು ಚೆಲುವಿರದು ಇಷ್ಟೊಂದು ಎಂದೂ!
ಇಂದು ಸ್ವರ್ಗ,
ಸುಖದ ಸರ್ಗ
ನಗುತಲಿರಲು ಎಲ್ಲ ತಾರೆಯಲ್ಲು ನನ್ನ
ನೀರೆಯು!

-ಅ
27.10.2008
10PM

Thursday, October 23, 2008

ಹುಟ್ಟುಹಬ್ಬ

ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕು - ಎಷ್ಟೇ ವಯಸ್ಸಾದರೂ! "ಶುಭಾಶಯಗಳು" ಬಹಳ ಸಂತೋಷವನ್ನು ನೀಡುತ್ತೆ. ಉಡುಗೊರೆಗಳೂ ಕೂಡ!!

-ಅ
23.10.2008
5AM

Monday, October 20, 2008

ನೀ ಮುಂದೆ

ಬೆಟ್ಟದ ಮೇಲಿನ ಮಂಜಿನೊಳಗಿನಾಕೃತಿಯಂತೆ
ಕಣ್ಣ ಮುಂದೆ ಮಂಜು ಮಂಜು ನೆನಪು ನಿನ್ನದು
ಎಂದೋ ಎಲ್ಲೋ ನೋಡಿದಂತೆ!

ಕಿವಿಯ ತುಂಬಿಲ್ಲ ದನಿಯು, ಸ್ಪರ್ಶ ತೋಳನು, ನೋಟ ಕಣ್ಣನು.
ಕೈ ಹಿಡಿದು ಆಟವಾಡುವ ಮುನ್ನವೇ ಹೊಕ್ಕೆ ನೀ ಮಣ್ಣನು
ಗಿಡದೊಳೇ ಹೂ ಬಾಡಿ ಉದುರಿದಂತೆ!
ನುಡಿಯಲೆಂಬ ತವಕ ನಾಲಿಗೆಗೆ, ಆಲಿಸಲು ಕಿವಿಗೆ.
ನೋಡಬಯಸಿದ ಕಣ್ಣಿಗೇನು ಉತ್ತರ ಹೇಳಲಿ?
ಚಿತ್ರಪಟವೇನೋ ಮುಂದಿದೆ, ಚಿತ್ರವೇ ಕಲ್ಪನೆ.

ನಾ ಬಂದೆ, ನೀ ಹೋದೆ
ಇಷ್ಟೆ ನನಗೆ ತಿಳಿದುದು.
ನೀನಿರದೆ ಇಂದು ಇಲ್ಲಿ
ಇಷ್ಟೆ ನಾನು ಬೆಳೆದುದು.

ಹೇಳುವರು ಹಿರಿಯರು
ನೂಲಿನಂತೆ ಸೀರೆ, ತಂದೆಯಂತೆ ಮಗನು.
ಉಳಿಸಿಲ್ಲ ನೀನೆನಗೊಂದೂ ಆದರ್ಶವನು
ಬೆಳೆಸಿರಬಹುದು ರಕ್ತದಲಿ, ಅರಿಯೆನು!

ದೇವರು ದಿಂಡರು ಸಾಸಿರ ಜಗಕೆ, ಜನಕೆ
ನಾನು ನಿನ್ನ ಕಲ್ಪಿಸುವಂತೆ!
ಕಾಲುಶತಮಾನ, ಬಂದು ನಾನು ಇಂದಿಗೆ!
ನೀನೆನಗೆ ಮಂಜಿನೊಳಗಿನಾಕೃತಿಯು
ಮಂಜಿನೊಳಗೇ ಮರೆಯಾಗಿ ಹದಿನೆಂಟಾಗಿ ಹೋಯಿತೇ?
ಕಾಲವು ಮುಂದೆ ಮುಂದೆ ಮುಂದೆ ಮುಂದೆ!!!
ನೀ ಮುಂದೆ, ನಾ ಹಿಂದೆ - ಎಂದೋ ಗೊತ್ತಿಲ್ಲವಷ್ಟೆ!

-ಅ
20.10.2008
7.20PM

Sunday, October 12, 2008

ಭುವಿಯೇನು, ಬದುಕೇನು?

ಸಹನೆ, ದಹನೆ ಎರಡೂ ಒಡಲಿನೊಳಗೆ
ನೆಲ ಮಾತ್ರ ಸಮವಿಲ್ಲ.
ಜಲವುಕ್ಕಿ ಹರಿವ ಪ್ರವಾಹವೊಂದೆಡೆ,
ತಳಬಿರಿದು ಬರಿದಿನ್ನೊಂದೆಡೆ
ಭುವಿಯೇನು, ಬದುಕೇನು?

ಭುವಿಯು ಕಂಪಿಸಿ ಕಾಲ ಕಾಲಕೆ
ಇಟ್ಟಿಗಿಟ್ಟಿಗೆ ಜೋಡಿಸಿ ಕಟ್ಟಿದ
ಬೃಹತ್ ಕಟ್ಟಡವನ್ನೆಲ್ಲಾ ಕೆಡವಿ,
ತಲೆಹೊತ್ತು ದೆಸೆಗೆಟ್ಟ ಬಾಳ್ಬಡವಿ.
ನಡುಮಧ್ಯದಲೇ ಮೆರೆದಾಡುತಿಹ
ಕ್ರಿಮಿಕೀಟ ಸರ್ಪಾದಿಗಳ ನೆಲೆಯು
ಕಂಗೊಳಿಸಿ ಕಂಗೆಡಿಸಬಲ್ಲ ದಟ್ಟಡವಿ.

ಹೆಜ್ಜೆಯೊಂದರಲಿ ಹಳ್ಳಕೊಳ್ಳ
ಮರುಹೆಜ್ಜೆ ಬಯಲು ಹಾದಿ.
ಇನ್ನಾವ ಹೆಜ್ಜೆಗಿಹುದೋ ಆಳದ ಬಾವಿಯ ಬುನಾದಿ?
ಬಿರುಕು ನೆಲವೆಂದು ಸಿಡಿಯುವುದೋ ಚೂರು ಚೂರಾಗಿ?
ಭುವಿಯೇನು, ಬದುಕೇನು?
ಎಷ್ಟು ಜೀವವುಳಿವುದೋ ಪಾರಾಗಿ!?!

ಒಣಗಿದೊಂದು ಜಾಲಿಮರದ ಕೆಳಗೆ, ಆರೀತು ದಣಿವೆಂದು ಭ್ರಮಿಸಿ
ಬಳಿಯಲಿರುವ ಹೊಂಗೆಯ ಮರೆವುದೇನು ಬದುಕೇ?
ಜಾಲಿಯೋ ಹೊಂಗೆಯೋ ತಿಳಿಯದೊಂದೂ ದಣಿವಿಗೆ
ಹೆಜ್ಜೆಗೇನು ಸಿಗುವುದೋ ಅದೇ ಆಸರೆ.
ಪುಷ್ಪವೋ ಪರ್ಣವೋ ಮುಳ್ಳೋ ಬಿದ್ದುದ ಸಹಿಸುತ
ಮೌನದಿಂದಿರುವ ಭುವಿಯೇನು, ಬದುಕೇನು!!

-ಅ
12.10.2008
6PM

Tuesday, October 7, 2008

ಶಂಕೆ

ಮಾತು ಮಾತು, ಏನು ಸಾರ?
ಮಾತಿನ ಶಬ್ದದಿ ಹುಟ್ಟುವುದೇ ಕಾವ್ಯ?
ಮೌನದೊಳು ಜೀವದ ಜತೆ
ಕಾವ್ಯ ಬೆರೆವುದೇ ಭಾವದ ಕತೆ
ಎದೆತೆರೆದು,
ಕಣ್ಮುಚ್ಚಿ
ಮನದೊಳಗುದಿಸಿದ ಹಾಡೇ ದಿವ್ಯ.

ಅಲೆಯಲೆಯಾಗಲೆಯುತ್ತಿದ್ದ
ಸಾಗರದೊಡಲಿನಂತೆ ಶಾಂತವಾದ ಚಿತ್ತಕೆ
ದಡದ ಮರಳ ಮೇಲೆ ತೆರೆಯು ಸದ್ದೆಸಗಿದಂತೆ
ತಿಳಿಯಾಗಸದಿಂದ ಮರುಭೂಮಿಗೆ
ಅನಾಮತ್ತು ಮಳೆ ಸುರಿದಂತೆ
ಹರ್ಷವೋ,
ವರ್ಷವೋ?
ಅರಿಯದಾದೆನೊಂದನೂ ಮಿಂಚಿನ ಕಾಲವೇಗದಲಿ.

ನೆನ್ನೆ ವರೆಗೂ ಕನಲ
ಕುದುರೆ ಸವಾರ
ಇಂದು, ಚರ್ಚೆ ಸಂಸಾರ?
ಕಾನನದಿ ಅಲೆವ ಜಿಂಕೆ
ಕುಪ್ಪಳಿಸುತ,
ಸಪ್ಪಳಿಸುತ
ದಿಕ್ಕು ಬದಲಿಪ ಶಂಕೆ.

-ಅ
08.10.2008
1AM

Thursday, October 2, 2008

ಕಗ್ಗಕ್ಕೊಂದು..

ಶ್ರೀನಿವಾಸ ಏನಾದರೂ ಬರೆಯುತ್ತಾನೆಂದರೆ ಅದರಲ್ಲಿ ಕಡೇ ಪಕ್ಷ ಒಂದಾದರೂ ಡಿವಿಜಿಯವರ ಕಗ್ಗದ ಉಲ್ಲೇಖ ಕೊಟ್ಟೇ ಇರುತ್ತಾನೆ. ಅವನಿಗೆ ಕಗ್ಗದ ಮೇಲೆ ಅಷ್ಟು ಒಲವು, ಭಕ್ತಿ.

ಇದುವರೆಗೂ ಇರುವ ಕಗ್ಗದ ವಿವರಣೆ, ವ್ಯಾಖ್ಯಾನ ಇರುವ ಪುಸ್ತಕಗಳನ್ನು ನೋಡಿದರೆ ಹಿರಿಯರು, ಮಹನೀಯರು ಬರೆದಿರುವುದೇ ಇದೆ. ಎಚ್.ಎಸ್. ಲಕ್ಷ್ಮೀನಾರಾಯಣ ಭಟ್ಟರು, ಶ್ರೀಕಾಂತ್, ಡಾ.ವೆಂಕಟರಮಣನ್, - ಹೀಗೆ ದೊಡ್ಡದೊಡ್ಡವರೇ. ಆದರೆ, ಕಗ್ಗವು ನಮ್ಮಂಥ ಸಾಮಾನ್ಯರಿಗೂ, ಪಾಮರರಿಗೂ ತಲುಪುವ 'ವಸ್ತು'ವಲ್ಲವೇ ಎಂದು ಶ್ರೀನಿವಾಸ ಮತ್ತು ನಾನು ಯೋಚಿಸಿ 2007 ಹೊಸವರ್ಷಕ್ಕೇ ಕಗ್ಗದ ಬ್ಲಾಗನ್ನು ತೆರೆದೆವು. ಇನ್ನೂ ಈಗ ಪ್ರಪಂಚವನ್ನು ನೋಡುತ್ತಿರುವ ನಮ್ಮಂಥವರಿಗೆ ಕಗ್ಗ ಹೇಗೆ ಅರ್ಥ ಆಗುತ್ತೆ ಅಂತ ಬರೆದುಕೊಳ್ಳೋದು ಅಂತ ನಮ್ಮ ಉದ್ದಿಶ್ಯ.

ಶ್ರೀನಿವಾಸನಂತೆ ನನಗೂ ಕಗ್ಗ ಬದುಕಿನಲ್ಲಿ ಅನೇಕ ಹಂತದಲ್ಲಿ ಕುಸಿದು ಬಿದ್ದಾಗ ಕೈ ಹಿಡಿದು ಎತ್ತಿದೆ, ದಿಕ್ಕು ಕಾಣದಾದಾಗ ದಾರಿದೀಪವಾಗಿದೆ, ಭಾರ ಹೊರುವುದು ಹೇಗೆಂಬುದನ್ನು ಕಲಿಸಿದೆ. ಕಗ್ಗದ ಬಗ್ಗೆ 'ಹಿರಿಯರು' ಹೇಳಿದ ವಿವರಣೆಗಳೆಲ್ಲಾ ನನಗಂತೂ ಅನೇಕ ಸಲ ನನ್ನ ಪರಿಧಿಯನ್ನು ಮೀರಿದೆಯೆಂದೇ ಅನ್ನಿಸಿದೆ. ಅವರು ಯಾವುದೋ ತತ್ತ್ವ ಹೇಳುತ್ತಿದ್ದಾರೆ, ನನ್ನ ಕೈಗೆ ನಿಲುಕದ್ದು ಎಂದೇ ಅನ್ನಿಸುತ್ತೆ. ಹಾಗಾಗಿ, ನನ್ನ ಕಿಂಚಿತ್ ಅನುಭವಕ್ಕೆ ತಕ್ಕ ಹಾಗೇನೇ ಕಗ್ಗವನ್ನು ಹೇಗೆ ಅರ್ಥೈಸಿಕೊಳ್ಳಬಲ್ಲೆ ಎಂಬುದನ್ನು ಬರೆದಿಟ್ಟುಕೊಳ್ಳುವ ಹಂಬಲ ನನಗೂ ಇತ್ತು.

ಶ್ರೀನಿವಾಸನೊಡನೆ ಕೈ ಸೇರಿಸಿದೆ.

ಈ ಕೃತ್ಯದ ಬಗ್ಗೆ ದಟ್ಸ್ ಕನ್ನಡಕ್ಕೆ 'ಹೋಗಿ'ಬಿಟ್ಟು ಬ್ಲಾಗಿನಲ್ಲಿ ನಾಪತ್ತೆಯಾಗಿರುವ ಶ್ರೀನಿಧಿಯದು ಬಹಳ ದೊಡ್ಡ ಟೀಕೆಯಿತ್ತು ಆಗ. "ರೀ, ಕಗ್ಗಕ್ಕೆಲ್ಲಾ ಯಾರಾದರೂ ಬ್ಲಾಗು ಮಾಡ್ತಾರೇನ್ರೀ, ಅದಕ್ಕೆ ವಿವರಣೆ ಬರೆಯೋದೇ ಅಪರಾಧ" ಎಂದಿದ್ದ. ನನಗೆ ಇದರ ಬಗ್ಗೆ ಸಂಪೂರ್ಣ ಒಪ್ಪಿಗೆಯಿದೆ. ವಿವರಣೆಯು ಇನ್ನೊಬ್ಬರ "reference"ಗೆ ಎಂಬುದಾದರೆ ಕಗ್ಗಕ್ಕೋ, ಗೀತೆಗೋ, ಉಪನಿಷತ್ತಿಗೋ ಹೀಗೆ ವಿವರಣೆಗಳನ್ನು ಬರೆಯಬಾರದು ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಶ್ರೀನಿವಾಸ ಮತ್ತು ನಾನು ಇಲ್ಲಿ ನಮ್ಮ ಅನುಭವವನ್ನು, ಅದಕ್ಕೆ ತಕ್ಕ ಅರಿವನ್ನು ಬರೆದಿಟ್ಟುಕೊಳ್ಳಬೇಕೆಂಬುದೊಂದೇ ಉದ್ದೇಶವಿರುವುದು, ಇದು ಖಂಡಿತ ಯಾವುದೇ ಒಂದು ಮುಕ್ತಕಕ್ಕೆ 'ವಿವರಣೆ' ಅಲ್ಲ ಎಂಬುದನ್ನು ಅವನಿಗೆ ಹೇಳಿದ ಮೇಲೆ, "ಏನೋ ಮಾಡಿ!!" ಅಂದಿದ್ದ.

ಶ್ರೀನಿವಾಸನ ಪ್ರಕಾರ ಕಗ್ಗವು ಕನ್ನಡದ ಭಗವದ್ಗೀತೆ. ನನ್ನ ವಯಕ್ತಿಕ ಅಭಿಪ್ರಾಯದಲ್ಲಿ ಕಗ್ಗವು ಒಮ್ಮೊಮ್ಮೆ ಗೀತೆಯನ್ನೂ ಮೀರಿಸುತ್ತೆ. ವಾಸ್ತವವನ್ನು ಹೆಚ್ಚು ಪ್ರತಿಪಾದಿಸುತ್ತೆ ಎಂಬುದು ನನ್ನ ಅನಿಸಿಕೆ.

ಕೆಲ ಕಾಲ ಅದ್ಯಾವ ದುರ್ವಿಧಿಯಿಂದಲೋ, ಸೋಮಾರಿತನದಿಂದಲೋ, ನಿರ್ಲಕ್ಷ್ಯದಿಂದಲೋ, ಎಂಥದೋ ಹೋಪ್‍ಲೆಸ್‍ ಕಾರಣದಿಂದಲೋ ಕಗ್ಗದ ಬ್ಲಾಗಿನತ್ತ ಸುಳಿದೇ ಇರಲಿಲ್ಲ. ಜಡವಾಗಿದ್ದ ಬ್ಲಾಗಿಗೆ ಮತ್ತೆ ಚಾಲನೆ ಮಾಡಲು ಹೊರಟಿದ್ದೇವೆ. ಕಗ್ಗವನ್ನು ಓದುವುದು ಒಂದು ಸಂತಸವಾದರೆ, ನಮಗಿರುವ ಅಲ್ಪ ಸ್ವಲ್ಪ ಅನುಭವದೊಂದಿಗೆ ಅದನ್ನು ಬೆಸೆದುಕೊಂಡು "ಆಹ್..." ಎಂದು ಆಸ್ವಾದಿಸುವ ಮಜವೇ ಬೇರೆ. ದುಃಖವೂ, ನೋವೂ ಸಹ ಸಂತಸವಾಗಿಬಿಡುತ್ತೆ!

ನೆನ್ನೆ ಥಟ್ಟನೆ ಹೊಳೆದು orkutನಲ್ಲಿ ಕಗ್ಗಕ್ಕೊಂದು ಸಮುದಾಯವನ್ನೂ ಮಾಡಿದೆವು. ನಾನು, ಶ್ರೀನಿವಾಸ - ನಮ್ಮರಿವಿನ ಕಗ್ಗವನ್ನು ಚರ್ಚಿಸಿಕೊಳ್ಳುವಂತೆ, ನಮ್ಮಂತಿರುವವರು ನಮ್ಮ ಜೊತೆ ಸೇರಿ ಆರೋಗ್ಯಪೂರ್ಣ ಚರ್ಚೆ ಮಾಡಿದರೆ 'ಹರಟೆ'ಗೂ ಬೆಲೆಯಿರುತ್ತೆ ಅಲ್ಲವೇ?

-ಅ
02.10.2008
12.40PM