Tuesday, December 30, 2008

ಹೇಗೆ ಕಳೆಯಿತೋ?

ಬದುಕಿನ ಮೊದಲ ಇಪ್ಪತ್ತೈದು ವರ್ಷದ್ದು ಒಂದು ತೂಕವಾದರೆ ಈ ವರ್ಷದ್ದೇ ಬೇರೊಂದು ತೂಕ. ಅದುವರೆಗೂ ಪಯಣಿಸುತ್ತಿದ್ದ ಹಾದಿಯನ್ನು ಅಚಾನಕ್ಕಾಗಿ ನಿರ್ದಾಕ್ಷಿಣ್ಯವಾಗಿ ನಿರರ್ಗಳವಾಗಿ ಬದಲಿಸಿಬಿಟ್ಟ ಕೀರ್ತಿ ಈ ವರ್ಷಕ್ಕೆ ಸಲ್ಲಬೇಕು. ಶುಭಾಶುಭಗಳನ್ನು ತೋಲಿಸಲು ಕುಳಿತಿಲ್ಲ. ಹೀಗೇ, ನೆನಪು ಮಾಡಿಕೊಳ್ಳುತ್ತಾ ಕುಳಿತಿದ್ದೇನಷ್ಟೆ.

ಕೊಡಗಿನ ಶಿಖರವು ಮುನ್ನುಡಿಯ ಬರೆದಿರಲು
ಸಂತಸದ ಹೊನ್ನ ಕನಲು
ಒಡಲಿನ ಶಕುತಿಯು ಮಸಣದಲಿ ನೆರೆದಿರಲು
ಚಿತ್ರಿಸಿದ ಶಾಂತ ಕಡಲು
ಕಣ್ಣೆದುರೆ ಭ್ರಾಂತ ಸುಡಲು.

ಮಿತಿಯಿರದೆ ಚಿತೆಗೊಂದರ ತಾ ಹಿಂದೊಂದು
ಶಿಕ್ಷಕನ ಮೊರೆಯೇನಿಹುದು?
ಬೆನ್ನ ಹಿಂದೆಯೇ ಬೆಳಗಿರಲು ಮೊನೆಕಡುಗವು
ರಕ್ಷಕನ ಪೊರೆಯೆಲ್ಲಿಹುದು?
ಈ ಬಾಳು ಧರೆಯಲ್ಲಿಹುದು!

ಗುರಿಯಿರದ ಮಿತಿಯಿರದ ಕಪ್ಪು ಆಗಸದಲಿ
ಭವ್ಯ ತಾರೆಯೊಂದು ಹೊಳೆದು
ಮದುವೆಗೊಮ್ಮೆ ಜನನಕಿನ್ನೊಮ್ಮೆ ಸೆಳೆಯುತ
ರುದ್ರಭೂಮಿಯೆಡೆಗೆ ಬೆಳೆದು
ಮಾಯವಾಯಿತೆಲ್ಲಿ ಕಳೆದು?

ಅಲೆದಾಟ ತೊಳಲಾಟ ಭೀತಿ ಬೀಭತ್ಸದಲಿ
ಶಾಂತಿ ಸಮರಸದಲಿ ನಡೆದು
ಕಂಗೆಡದೆ ಧೃತಿಗೆಡದೆ ಪ್ರೀತಿ ಈ ವಕ್ಷದಲಿ
ಅಪಜಯದ ವರವ ಪಡೆದು
ಶಿರಬಾಗಿ ಸೋಲಗೊಡದು.

ಮುಂದಿರದೆ ಸಕಾಲವು ಹಿಂದೆ ಕಳೆದಂತೆ?
ಮತ್ತೆ ಬೆಳಗದೆ ಗಗನವು ಚಿತ್ರಚಾಪದಿ?
ಬೂದಿ ಭಸ್ಮವೇ ಬಾಳು ಬಿದಿಯ ತಾಪದಿ?
ನಿಜಭ್ರಮೆಯು ಇದು ಬರಿಯೆ.
ಬದುಕೆಂದೂ ಬಲು ಸಿರಿಯೆ!

-ಅ
30.12.2008
9.25AM

Monday, December 22, 2008

ಹಬ್ಬ - ವರದಿ

ಹಿಂದೆ, ಸುಮಾರು ಹದಿನೈದು ವರ್ಷಗಳ ಕೆಳಗೆ ಈ ಪಂಚಮುಖಿ ಛತ್ರದ ಸಮೀಪವೇ ನಾವು ಆರು ವರ್ಷಗಳ ಕಾಲ ಇದ್ದೆವು. ಆ ಮನೆಯನ್ನು ನೆಲಸಮ ಮಾಡುತ್ತಿದ್ದುದನ್ನು ನೋಡಿ ಸ್ವಲ್ಪ ಚುರುಕ್ಕೆಂದಿತು. ಆ ಮನೆಯಲ್ಲಿ ನನ್ನ ತಂದೆಯನ್ನು ನಾನು ಕೊನೆಯ ಬಾರಿಗೆ ನೋಡಿದ್ದು. ಸೆಕೆಂಡ್ ಸ್ಟೇಜು ಬಹಳ ಬದಲಾಗಿದೆ. ಬಿ.ಡಿ.ಎ. ಕಾಂಪ್ಲೆಕ್ಸು ಏಳುಗಂಟೆಗೆ ಕತ್ತಲಾಗಿಹೋಗುತ್ತಿತ್ತು. ಸಂಜೆ ಹೊತ್ತು ಪಾನಿ ಪುರಿ ತಿಂದು, ಒಂದು ಗುಟುಕು ಹಾಕಿ, ಕೈಯಲ್ಲಿ ಸಿಗರೇಟನ್ನು ಹೊತ್ತಿಸಿಕೊಂಡು ಅಡ್ಡಾಡುತ್ತಿದ್ದ ಪುಂಡ ಪೋಕರಿಗಳಿದ್ದ ಜಾಗದಲ್ಲಿ ಇಂದು "ಇದು ನಮ್ಮೂರಾ?" ಎನ್ನುವಷ್ಟರ ಮಟ್ಟಿಗೆ ಬದಲಾಗಿದೆ! ಕೈಯಲ್ಲಿ ಸಿಗರೇಟು, ಹೊಟ್ಟೆಯೊಳಗೆ ಪರಮಾತ್ಮನಿರುವವರನ್ನು ಈಗಲೂ ನೋಡುತ್ತೇವೆ. ಆದರೆ ಬೇರೆಯದೇ ರೀತಿಯಲ್ಲಿ. ಆಗ ಇಲ್ಲಿ ಓಡಾಡುತ್ತಿದ್ದ ಸಂಕೋಚಭರಿತ ಹೆಣ್ಣು ಮಕ್ಕಳನ್ನು ಚುಡಾಯಿಸಲು ನೆರೆದಿರುತ್ತಿದ್ದ ಫುಡಾರಿ ಹುಡುಗರ ಕೈಯಲ್ಲಿರುತ್ತಿತ್ತು. ಈಗ ಭಾರತವೋ ಎಂದೇ ಸಂದೇಹವುಂಟಾಗುವಂತೆ ಮೈಮೇಲೆ ಸಂಪೂರ್ಣ ಬಟ್ಟೆಯೂ ಇರದ ಹುಡುಗಿಯರ ಕೈಯಲ್ಲೇ ನೋಡಬಹುದು. ಇರಲಿ, ಬದಲಾವಣೆ ಅತ್ಯವಶ್ಯ - ಕಣ್ಣ ಮುಂದೆಯೇ ಬದಲಾಗಿದೆ ಈ ಸೆಕೆಂಡ್ ಸ್ಟೇಜು. ಇದರ ಬಗ್ಗೆ ಇನ್ನೊಮ್ಮೆ ನೋಡೋಣ.

ಅಂತೂ ನನ್ನನ್ನು ನನ್ನ ಮೊಮ್ಮಗಳು ಮೀರಿಸಿಬಿಟ್ಟಳು. ಕೊನೆಯ ಮೊಮ್ಮಗಳ ಮದುವೆ ನಿನ್ನೆ ಬನಶಂಕರಿ ಸೆಕೆಂಡ್ ಸ್ಟೇಜಿನ ಪಂಚಮುಖಿಯಲ್ಲಿ ಪೂರ್ಣಗೊಂಡಿತು. ಫೋಟೋಗಳಿಗೆ ಕಾಯುತ್ತಿದ್ದೇನೆ. ಸಿಂಧು ಮದುವೆಯು ಇಷ್ಟು ಬೇಗ ಜರುಗುತ್ತೆಂದು ಭಾವಿಸಿರಲಿಲ್ಲ. ನಮ್ಮ ಗುಂಪಿನಲ್ಲಿ ನಾನೇ ಮೊದಲೆಂದು ಎಲ್ಲರೂ ನಂಬಿದ್ದೆವು. ಸಡನ್ ಆಗಿ ಎಲ್ಲರಿಗೂ ಬೆರಗುಗೊಳಿಸಿದ ಸಿಂಧು ರೇಸಿನಲ್ಲಿ ಮುಂದಾದಳು. ಹಾಳೂ ಮೂಳು ಹೆಚ್ಚು ತಿನ್ನದ ನಾನು, ಗಣೇಶನ ಹಬ್ಬಕ್ಕೆ ಶೋಭಿಸುವ ಮೋದಕದಂತೆ, ಯುಗಾದಿಯ ಒಬ್ಬಟ್ಟಿನಂತೆ, ದೀಪಾವಳಿಯ ಕಜ್ಜಾಯದಂತೆ ಸಿಂಧೂ ಮದುವೆಯಲ್ಲಿದ್ದ ನಿಪ್ಪಟ್ಟನ್ನು ಸವಿದೆ. ನವದಂಪತಿಗಳು - ಸಿಂಧು ಮತ್ತು ಸಂಜೀವ ಸುಖವಾಗಿರಲಿ.

ರಾಹುಲ್ ದ್ರಾವಿಡ್ ಶತಕವನ್ನು ನೋಡಿ ಹಿಗ್ಗುವಂತಾಗಿತ್ತು. ಕಾಲೇಜಿನಲ್ಲಿದ್ದಾಗ ದ್ರಾವಿಡನ ಅಭಿಮಾನದಿಂದಾಗಿ ಸಂಗ್ರಹಿಸಿದ್ದ ಚಿತ್ರಗಳೆಲ್ಲಾ ಕಣ್ಮುಂದೆ ಬಂದವು. ಆದರೆ ಮತ್ತೆ ಇಂದು ಸೊನ್ನೆಗೆ ತೆರೆಳಿದ್ದು ಬೇಸರವುಂಟಾಯಿತು. ಆದರೂ ನಂಬಿಕೆಯಿದೆ, ಮತ್ತೆ ಬರುತ್ತಾನೆಂದು.

ನಿಮ್ಹಾನ್ಸ್ ಆವರಣದಲ್ಲಿ ಲಿಟ್ಲ್ ಫ್ಲವರ್ ಸ್ಕೂಲಿನ ವಾರ್ಷಿಕೋತ್ಸವವು ಇಂದು ಜರುಗಿತು. ನಮ್ಮ ಶಾಲೆಯ ಸೋದರ ಸಂಬಂಧ ಹೊಂದಿರುವ ಈ ಶಾಲೆಯ ಹಬ್ಬಕ್ಕೆ ನಾನೂ ಹೋಗಿದ್ದೆ. ಮಕ್ಕಳ ಪ್ರದರ್ಶನ absolutely brilliant! ಇಡೀ ಕಾರ್ಯಕ್ರಮದ theme "ವಿಕಾಸ". ಮನುಷ್ಯ ಜೀವಿಯ ಜನನ, ನಂತರ ಹೇಗೆ ಕಾಡು ಮನುಷ್ಯನು ನಾಗರಿಕನಾಗಿದ್ದು, ಪ್ರಾಚೀನ ಈಜಿಪ್ತ್ ನಾಗರಿಕತೆ, ಮೆಸಪೊಟಾಮಿಯಾ, ನಂತರ ಬಂದ ನಮ್ಮ ದೇಶದ ವೇದದ ಕಾಲ ಇವೆಲ್ಲವನ್ನೂ ಡೈಲಾಗುಗಳಿಲ್ಲದ ರಂಗಪ್ರದರ್ಶನವನ್ನು ಮಕ್ಕಳು ಅದ್ಭುತವಾಗಿ ಪ್ರದರ್ಶಿಸಿದರು. ರಾಮಾಯಣ ಮಹಾಭಾರತವನ್ನು, ಗೀತೋಪದೇಶವನ್ನೂ ಸಹ ನಿಮಿಷಗಳಲ್ಲೇ ಅಭಿನಯಿಸಿ ಮೈಜುಮ್ಮೆನಿಸಿದರು. ಕಳಿಂಗದ ಯುದ್ಧದ ನಂತರ ಪರಿವರ್ತನೆ ಹೊಂದಿದ ಅಶೋಕ ಚಕ್ರವರ್ತಿಯ ದೃಶ್ಯವು ಎಷ್ಟು ಮನೋಹರವಾಗಿತ್ತೋ, ಸುವರ್ಣಯುಗದ ವಿಜಯನಗರದ ಆಡಳಿತದ ಪ್ರದರ್ಶನವೂ ಅಷ್ಟೇ ಸೊಗಸಾಗಿತ್ತು. ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ನೈತಿಕವಾಗಿ ದಿನೇ ದಿನೇ ಮನುಷ್ಯನು ವಿಕಾಸ ಹೊಂದುತ್ತಿದ್ದರೂ ಆಧುನಿಕ ಯುಗದಲ್ಲಿ ಕೇಡು ಹೆಚ್ಚಾಗಿ ಕಾಣಿಸುತ್ತಿರುವುದು ದುರಂತವೆಂಬುದು ಈ ಪ್ರದರ್ಶನದ ಮೂಲ ಕಥಾವಸ್ತುವಾಗಿತ್ತು. ಆದರೆ, ಕೊನೆಗೆ "ಸರ್ವೇಶಾಂ ಸ್ವಸ್ತಿರ್ಭವತು..." ಎಂದು ಶುಭ ಕೋರಿ ಮುಗಿಸಿದ್ದು ಶ್ಲಾಘನೀಯವಾಗಿತ್ತು. ಮತ್ತೊಮ್ಮೆ - ಮಕ್ಕಳು ಉನ್ನತ ಮಟ್ಟದ ಪ್ರದರ್ಶನ ನೀಡಿದ್ದರೆಂದು ಹೇಳಲು ಹರ್ಷಿಸುತ್ತೇನೆ. ಇದರ ಜೊತೆಗೆ ಆರಂಭದಲ್ಲಿ ಇಪ್ಪತ್ತು ವರ್ಷದಿಂದ ನಡೆದುಕೊಂಡು ಬಂದು, ಯಶಸ್ಸನ್ನು ಗಳಿಸಿರುವ ಲಿಟ್ಲ್ ಫ್ಲವರ್ ಶಾಲೆಯ ಸುಂದರವಾದ ಒಂದು ಪ್ರೆಸೆಂಟೇಷನ್ ತೋರಿಸಿದರು. ಅತಿಥಿ ತಾರಾ ಅವರು ಯುವಕರ ಆಹಾರ ಪದ್ಧತಿ ಬಗ್ಗೆ ಹೇಳಿದಾಗ "ಸಧ್ಯ, ನನ್ನ ಆಹಾರ ಅಷ್ಟೊಂದು ಕೆಟ್ಟಿಲ್ಲ" ಎಂದೆನಿಸದೇ ಇರಲಿಲ್ಲ.

ಭಾರತದ ಸರ್ವ ಶ್ರೇಷ್ಠ ಗಾಯಕರಲ್ಲಿ ಪ್ರಮುಖರಾದ ಮೊಹಮ್ಮದ್ ರಫಿಯ ಎಂಭತ್ನಾಲ್ಕನೇ ಹುಟ್ಟು ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಸಹ ಒಳ್ಳೆಯ ಕಾರ್ಯಕ್ರಮಗಳು ಜರುಗಲಿವೆ. ಆಸಕ್ತರು ಭಾಗವಹಿಸಬಹುದು.

ನಮ್ಮ ಶಾಲೆಯ ಮಕ್ಕಳಿಗೆಲ್ಲಾ ಕ್ರಿಸ್‍ಮಸ್ ಖುಷಿ! ಹಬ್ಬ ಆಚರಿಸುತ್ತೇವೆಂದಲ್ಲ, ರಜೆ ಸಿಗುತ್ತೆಂದು!! ಎಲ್ಲರಿಗೂ ಕ್ರಿಸ್‍ಮಸ್ "ರಜೆಯ" ಶುಭಾಶಯಗಳು!! ನನಗೂ ಕೂಡ!!!

-ಅ
22.12.2008
10PM

Monday, December 15, 2008

ಅಯ್ಯಪ್ಪನ ಪಾಡು

ನಮ್ಮ ದೇಶದಲ್ಲಿ ಎಷ್ಟು ದೇವರುಗಳ ಸೃಷ್ಟಿಯಾಗಿದೆಯೋ ಅಷ್ಟೇ ಭಕ್ತರ ಸೃಷ್ಟಿಯೂ ಆಗಿದೆ. ಸತತವಾಗಿ ಈ ಕಾರ್ಯವು ಯಶಸ್ವಿಯಾಗಿ ನಡೆಯುತ್ತಲೇ ಇದೆ. ಪ್ಲೇಗಮ್ಮ ಮತ್ತು ಏಡ್ಸಮ್ಮ - ಈ ಎರಡು ದೇವತೆಗಳು ಅತ್ಯಂತ ಆಧುನಿಕವಾದವು. ಇವರಿಗೆ ಹೋಲಿಸಿದರೆ ಅಯ್ಯಪ್ಪ ಬಹಳ ಹಳಬ.

ವಿಷಯ ಅದಲ್ಲ.

ಹಿಂದಿನ ಕಾಲದಲ್ಲಿ ವೇದಘೋಶಗಳಿಂದಲೋ, ಹೋಮ ಹವನಗಳಿಂದಲೋ, ತಪಸ್ಸುಗಳಿಂದಲೋ ದೇವತೆಗಳನ್ನು ಒಲಿಸಿಕೊಳ್ಳುತ್ತಿದ್ದರು. ಭಜನೆಗಳು ಮನಸ್ಸಿಗೆ ಆಹ್ಲಾದಕರವಾಗುವಂತೆ ಸಾಗುತ್ತಿತ್ತು. ಈಗಲೂ ಅನೇಕ ಭಜನೆಗಳನ್ನು ಆನಂದಿಸಬಹುದು. ಮೀರಾ ಭಜನೆಯನ್ನು ಕೇಳುತ್ತಿದ್ದರೆ ಕಳೆದು ಹೋಗದೇ ಇರಲು ಸಾಧ್ಯವೇ? ರಾಮಕೃಷ್ಣಾಶ್ರಮದ ನಮ್ಮ ಕಿಟ್ಟಿ ಮೇಷ್ಟ್ರು ಹೇಳಿಕೊಟ್ಟ ಭಜನೆಗಳು ನಾನಿರುವವರೆಗೂ ನನ್ನಲ್ಲಿ ಪ್ರತಿಧ್ವನಿಸದೇ ಇರಲು ಸಾಧ್ಯವೇ? ಆದರೆ ಇಲ್ಲಿ ನಡೆಯುತ್ತಿರುವ ಪ್ರತಿಧ್ವನಿಯೇ ಬೇರೆ!

ಈತ ಬಹಳ ಬೇಗ ಪ್ರಸಿದ್ಧಿಯನ್ನು ಪಡೆದ ದೇವರು. ನೂರೈವತ್ತು ವರ್ಷ ಹಿಂದೆ ಹೋದರೆ ಈತನ ಹೆಸರು ಇಲ್ಲಿನ (ಕರ್ನಾಟಕದ) ದೇವಸ್ಥಾನದ ಚರಿತ್ರೆಗಳಲ್ಲಿ ಕಾಣಸಿಗುವುದಿಲ್ಲ. ಪುರಾಣಗಳಲ್ಲಂತೂ ಈತನ ಹೆಸರೇ ಬರುವುದಿಲ್ಲ. ಈತನೇ ಅಯ್ಯಪ್ಪ. ಅಯ್ಯಪ್ಪನ ಸೃಷ್ಟಿ ಹೇಗಾಯಿತು, ಏಕಾಯಿತು ಎಂಬುದು ಇಲ್ಲಿ ಅಪ್ರಸ್ತುತ. ಆದರೆ ಈತನಿಗಿರುವ ಪ್ರಸಿದ್ಧಿ ಎಷ್ಟರ ಮಟ್ಟಿಗೆ ಈತನಿಗೇ ವ್ಯಸನವಾಗುವಂತಿದೆಯೆಂದರೆ ಇಲ್ಲಿ ಮೈದಾನವೊಂದರಲ್ಲಿ ನಡೆಯುತ್ತಿರುವ ಪ್ರತಿಧ್ವನಿಯೇ ಸಾಕ್ಷಿ. ಇಂಥಾ "ಭಜನೆಗಳು" ನಗರದಲ್ಲಿ ಅದೆಷ್ಟು ಕಡೆ ಭರದಿಂದ ಸಾಗುತ್ತಿದೆಯೋ ಏನೋ..

ಅಯ್ಯಪ್ಪನು ಇನ್ನೂ ಏನೆಲ್ಲಾ ಅನುಭವಿಸಬೇಕೋ, ಆತನ ಪ್ರಾರಬ್ಧ.

ಒಂದಷ್ಟು ಧ್ವನಿಗಳು ಇಲ್ಲಿ....

ಒಂದು.
ಅಯ್ಯಾ ಅಯ್ಯಾ ನೋಡ್ದೆ ನೋಡ್ದೆ
ಅಯ್ಯಪ್ಪ ಸ್ವಾಮಿಯ ನಾನ್ ನೋಡ್ದೆ....

(ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರ್ದನ್ನ ನಾ ನೋಡ್ದೆ....)

ಎರಡು.
ಅಯ್ಯಪ ಸ್ವಾಮಿ, ಅಯ್ಯಪ ಸ್ವಾಮಿ [ಅಯ್ಯಪ್ಪ ಎಂದು ಒತ್ತಕ್ಷರವಿಲ್ಲ]
ಕಟ್ಟಿ ಬಂದೆ ಇರ್ಮುಡೀನ್ನಾ...
ಶಬರಿಮಲೇಗೇ ಹೋಗಲು ಬಂದೆ
ಹರಸು ನಿನ್ನ ಭಕ್ತ್ರನ್ನ...

(ಸುಂಟರಗಾಳಿ, ಸುಂಟರಗಾಳಿ....)

ಮೂರು.
ಹರಿಹರಸುತನೇ ಶಬ್ರಿಗಿರಿ ವಾಸನೇ
ಶರಣಮ್ ಅಯ್ಯಪ್ಪಾ....
ಈ ಮಾಲೆ ಧರಿಸಿ ಭಕ್ತಿಯಿಂದ ಬಂದೇವಪ್ಪಾ...

(ಹೊಡಿ ಮಗ ಹೊಡಿ ಮಗ...)

ನಾಲ್ಕು.
ಅಯ್ಯಪ್ಪಾ ಸ್ವಾಮಿ.. ರತ್ತೋ ರತ್ತೋ (ಇಲ್ಲಿ ರತ್ತೋ ರತ್ತೋ ಯಾಕೆ ಬಂತು ಅಂತ ಗೊತ್ತಿಲ್ಲ)
ಮಣಿಕಂಠ ಸ್ವಾಮಿ.. ಬಿತ್ತೋ ಬಿತ್ತೋ (ಇದಂತೂ ಕರ್ಮಕಾಂಡ)
ಪಂಪಾ ನದಿ, ಸ್ನಾನ ಆಯ್ತೋ
ಇರುಮುಡಿ, ಹೊತ್ತಾಯಿತೋ
ಹೊತ್ತಾಯಿತೋ, ನಡೆದಾಯಿತೋ
ನಾವೆಲ್ಲ ಮಾಲೆಯನ್ನು ಹಾಕಿಕೊಂಡು
ಜುಂ ಜುಂ ಜುಂ ಜು ಜುಂ ಜುಂ.....

(ಯಾವ ಹಾಡು ಅಂತ ಹೇಳಲೇ ಬೇಕಾ? ಸಂಕ್ರಾಂತೀ ಬಂತು....)

ಸ್ವಾಮಿಯೇ ಶರಣಂ ಅಯ್ಯಪ್ಪ.

-ಅ
16.12.2008
12AM

Friday, December 12, 2008

ಬೂಸ್ಟ್ ಈಸ್ ದಿ ಸೀಕ್ರೆಟ್ ಆಫ್....

ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಸೈಕಲ್ಲಿನ ಮೇಲೆ ಹೋಗುತ್ತಿದ್ದೆ ಕತ್ತರಿಗುಪ್ಪೆಯೆಂಬ ಕೊಂಪೆಯನ್ನೂ ದಾಟಿ ಇಟ್ಟುಮಡುವೆಂಬ ಮಡುವಿನಲ್ಲಿದ್ದ ಆಪ್ತ ಗೆಳೆಯ ವರುಣನ ಮನೆಗೆ. ಕತ್ತರಿಗುಪ್ಪೆ ಸ್ವಲ್ಪ ಬೆಳೆಯುವ ಸೂಚನೆಯನ್ನು ಹೊಂದಿದ್ದ ಹಳ್ಳಿಯಂತಿತ್ತು. ಇಟ್ಟುಮಡು ಸ್ವಲ್ಪ ಹಿಂದುಳಿದ ಹಳ್ಳಿಯಂತಿತ್ತು. ರಸ್ತೆಗಳಿಗೆ ದಾಂಬರೆಂದರೆ ಗೊತ್ತಿರಲಿಲ್ಲ. ಈ ಕಡೆ ನಗರಕ್ಕೆ ನಗರವಲ್ಲ, ಹಳ್ಳಿಗೆ ಹಳ್ಳಿಯಲ್ಲ, ಹಾಗಿತ್ತು. ಆದರೂ ಅಬ್ಬಾಯಿನಾಯುಡು ಸ್ಟುಡಿಯೋ ಮಾತ್ರ ಬಹಳ ಕಾಲದಿಂದಲೇ ಅಲ್ಲಿತ್ತು.

ನಾನು ಕಾಫಿಪ್ರಿಯನೆಂಬುವುದು ಕಾಫಿಗೂ ಗೊತ್ತು! ಹಾರ್ಲಿಕ್ಸು, ಬೂಸ್ಟ್, ಬೋರ್ನ್ವೀಟಾ, ವೀವಾ ಇವೆಲ್ಲಾ ವಿಷಪ್ರಾಷನದಂತೆ ನನಗೆ. ವರುಣನೋ ಕಾಫಿ ಕಂಡರೆ ದೂರ ಓಡುವವನು. ಅವರ ಮನೆಗೆ ಹೋದಾಗ ತಪ್ಪದೆ ಬೂಸ್ಟ್ ಕೊಡುತ್ತಿದ್ದರು. ನಾನು ಸಂಕೋಚದಿಂದ ವಿಷಪ್ರಾಷನವನ್ನೇ ಮಾಡುತ್ತಿದ್ದೆ - ಮುಖ ಗಂಟಿಕ್ಕಿಕೊಂಡು! ಅವರ ಮನೆಯಲ್ಲಿ "ಕಾಫಿ ಕೊಡ್ಲಾ?" ಅಂತಲೂ ಕೇಳುತ್ತಿರಲಿಲ್ಲ. "ಬೂಸ್ಟ್ ಕುಡಿ" ಅಂತ ಹೇಳಿ ಕೊಟ್ಟುಬಿಡುತ್ತಿದ್ದರು.

ವರುಣ ಈಗ ಆಸ್ಟ್ರೇಲಿಯಾದಲ್ಲಿದ್ದಾನೆ. ಮೊನ್ನೆ, ಬಹುಮುಖ್ಯ ಕಾರಣವೊಂದಕ್ಕೆ ಅವರ ಇಟ್ಟುಮಡುವಿನ ಮನೆಗೆ ಹೋಗಿದ್ದೆ. ಇಟ್ಟುಮಡು ಶಿವಾಜಿನಗರಕ್ಕಿಂತ ಹೆಚ್ಚು ಬದಲಾಗಿಬಿಟ್ಟಿದೆ. ಅವರ ಮನೆಗೆ ಹೋಗಲು ಹರಸಾಹಸ ಪಡಬೇಕಾಯಿತು. ಊರೆಲ್ಲಾ ಸುತ್ತಬೇಕಾಯಿತು. ಅದೇನೇ ಬದಲಾಗಿದ್ದರೂ ಅವರ ಮನೆಯು ಮಾತ್ರ ಬದಲಾಗಿಲ್ಲ. ಬಾಲ್ಯಗೆಳೆಯನ ನಿರ್ಮಲ ಮನಸ್ಸಿನಂತೆ ಅವನ ಮನೆಯವರ ಅಕ್ಕರೆಯೂ ಹಾಗೇ ಉಳಿದಿದೆ. ನನ್ನನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ಅವರನ್ನು ನೋಡಿ ಎಷ್ಟು ವರ್ಷಗಳಾಗಿದ್ದವೋ ನೆನಪಿಲ್ಲ. ಒಳ್ಳೇ ಹೋದ ಜನ್ಮ ನೆನಪಾದಂತಾಯಿತು ಅವರ ಮನೆಗೆ ಹೋಗಿದ್ದು. ಅದೇ ಮೌನ ವಾತಾವರಣ, ಟಿ.ವಿ. ಸೀರಿಯಲ್ಲುಗಳ ಪ್ರಸಾರ, ಅದೇ ಶೋ ಕೇಸು. ಸ್ವಲ್ಪ ಹೊತ್ತಾದ ಮೇಲೆ ಒಂದು ಸಣ್ಣ ಬದಲಾವಣೆ ಕಾಣಿಸಿತು. "ಕಾಫಿ ಕುಡೀತೀಯಾ?" ಎಂದು ಕೇಳಿದರು. ನಾನು ಮುಖವನ್ನರಳಿಸಿ ಹೌದೆನುವಷ್ಟರಲ್ಲಿ "ಬೂಸ್ಟ್ ಕೊಡ್ತೀನಿ ಇರು" ಎಂದುಬಿಟ್ಟರು. ನಾನು ಯಾಕೆ "ಬೇಡ, ಕಾಫೀನೇ ಕೊಡಿ" ಎನ್ನಲಿಲ್ಲವೋ ಗೊತ್ತೇ ಇಲ್ಲ. ನನ್ನ ಜೀವಮಾನದಲ್ಲೇ ನಾನು ಬೂಸ್ಟ್ ಕುಡಿದಿರುವುದು ಇವರ ಮನೆಯಲ್ಲಿ ಮಾತ್ರ. ಮತ್ತೆ ವರ್ಷಾನುಗಟ್ಟಲೆಯ ನಂತರ ಮೊನ್ನೆಯೂ ಕುಡಿದಾಗ ಬಾಲ್ಯದ ನೆನಪು ಮರುಕಳಿಸಿತು.

Missing ವರುಣ.

......................................................................................

ಸಂಗೀತದ ವಿದ್ಯಾರ್ಥಿಯಾಗಿರುವ ಗೆಳತಿ ಹಾಗೂ ನನ್ನ ಕಝಿನ್ ಭವ್ಯಾ ಹೊಸ ಬ್ಲಾಗನ್ನು ಆರಂಭಿಸಿ ಸಂಗೀತ ಸೇವೆಗೇ ಮುಡಿಪಾಗಿಟ್ಟಿರುವುದು ಬಹಳ ಸಂತಸಕರ ಸಂಗತಿ. ನನ್ನನ್ನೂ contributor ಪಟ್ಟಿಗೆ ಸೇರಿಸಿರುವುದರಿಂದ ನಾನೂ ಆಗಾಗ್ಗೆ ಏನಾದರೂ ಆಕೆಗೆ ಸಹಾಯವಾಗುವಂತಹ "ವಸ್ತು"ಗಳನ್ನು ಕೊಡಲು ಯತ್ನಿಸುತ್ತೇನೆ. ಸಂಗೀತದ ಬಗ್ಗೆ ಏನೇನು ಮಾಹಿತಿಗಳು, ಜ್ಞಾನವು, ಸೂಚನೆಗಳು, ವಿಮರ್ಶೆಗಳು ಹೊರಹೊಮ್ಮುತ್ತವೋ ಎದುರು ನೋಡುತ್ತಿದ್ದೇನೆ. ಸಂಗೀತ ಸುಧೆಯನ್ನು ಸವಿಯಲು ಉತ್ಸುಕನಾಗಿದ್ದೇನೆ.

ಆಲ್ ದಿ ಬೆಸ್ಟ್ ಭವ್ಯಾ..

http://sangeethasudhe.blogspot.com


-ಅ
12.12.2008
12PM

Tuesday, December 9, 2008

ಶುಭದ ಹೂವು

ಮಿನುಗುತಿರುವ ತಾರೆ ಹೊರೆತು
ಉಳಿದೆ ಇಲ್ಲವಿನ್ನಾವ ಬೆಳಕು.
ಶಶಿಯು ಬುವಿಯ ಕೆಳೆಯ ಮರೆತು
ಬುವಿಗೆ ಮಾತ್ರ ಬೆಳಕಿನಳುಕು.
ಜ್ಯೋತ್ಸ್ನೆ ನಕ್ಕು ಬೆಳಗದೇ?

ದಿಕ್ಕು ತೋರಿಸುತಿಹ ತಾರೆ
ತೋರದೇಕೆ ದಾರಿಯ?
ಕಪ್ಪನೊಂದೆ ಕಾಣುತಿದ್ದೂ
ಕಾಣದಿರುವ ಕುರುಡನು!
ಬೆಳಕು ಮೂಡಿ ಬರುವುದೇ?

ಗುರಿಯು ಗರಿಯು ಎಲ್ಲೊ
ಝರಿಗೆ ಸಿಕ್ಕ ಕೀಟವು.
ಹಿರಿದು ಶೂಲದಲ್ಲೆ
ಇರಿವ ಬಾಳು ಮಾಟವು!
ಚೇತನವು ಮೆಟ್ಟಿ ನಿಲುವುದೇ?

ಒಳಿತು ಭವಿಸಲಿ, ಬೆಳಕು ಹರಿಯಲಿ
ಎಂಬುದೊಂದೇ ಕನಲು ಕಣ್ಣಲಿ.
ಕೈಯ ಹಿಡಿದು ಎಡೆಗೆ ಸೆಳೆವ
ಮಿಗಿಲಿನೊಂದೇ ಅಂತ್ಯ ಮಣ್ಣಲಿ.
ಶುಭದ ಹೂವರಳುವುದೇ?

-ಅ
09.12.2008
3.25PM

Thursday, December 4, 2008

ಮೊಹಮ್ಮದ್ ರಫಿ - ಏಕೆ ಅತ್ಯುತ್ತಮ?

ಕೈಯಲ್ಲೊಂದು ತೇಜಸ್ವಿ ಪುಸ್ತಕ, ಬಿಸಿ ಬಿಸಿ ಚಹಾ, ರಫಿಯ ಸಂಗೀತ - ಸ್ವರ್ಗವೆಂದರೆ ಇದೇ!(ಚಿತ್ರ ಕೃಪೆ: ಗೆಳೆಯ ನಾಗೇಶ್)

ರಫಿ ಅಭಿಮಾನಿ ಬಳಗದ ಗುರುಮೂರ್ತಿಯವರು ಯಾಕೆ ಮೊಹಮ್ಮದ್ ರಫಿಯು ಸಮಕಾಲೀನರೆಲ್ಲರಿಗಿಂತಲೂ ಮಿಗಿಲು ಎಂಬುದಕ್ಕೆ ಸೊಗಸಾದ ಸಮರ್ಥನೆಗಳನ್ನೂ ನಿದರ್ಶನಗಳನ್ನೂ ಕೊಡುತ್ತಾರೆ. ಅವರ ಚಿತ್ರಣದೊಂದಿಗೆ ನನ್ನ ಅನಿಸಿಕೆಗಳನ್ನೂ ಇಲ್ಲಿ ಸೇರಿಸಿಕೊಂಡಿದ್ದೇನೆ.* ಕಿಶೋರ್ ಕುಮಾರ್ --> ಬಹುಮುಖ ಪ್ರತಿಭೆ, ಅದ್ಭುತ "ಸಿಹಿ" ಕಂಠ, ಯೂಡಲಿಯ ದೈವ - ಆದರೆ ತಾರಸ್ಥಾಯಿಯಲ್ಲಿ ಹಾಡಲಾಗುತ್ತಿರಲಿಲ್ಲ, ಶಾಸ್ತ್ರೀಯ ಸಂಗೀತ, ಕವ್ವಾಲಿಗಳಿಗೆ ಕಿಶೋರ್ ಧ್ವನಿ ಹೊಂದುತ್ತಿರಲಿಲ್ಲ.
* ಮುಖೇಶ್ --> ಮಂದ್ರಸ್ಥಾಯಿಯಲ್ಲಿ ಶೋಕ ಗೀತೆಗಳಿಗೆ ಹೇಳಿ ಮಾಡಿಸಿದ ಧ್ವನಿ - ಎತ್ತರದ ಶ್ರುತಿಗೆ ಮುಖೇಶ್ ಕಂಠ ಒಗ್ಗುತ್ತಿರಲಿಲ್ಲ, ಶಾಸ್ತ್ರೀಯ ಸಂಗೀತದ ಶೈಲಿ, ಕವ್ವಾಲಿ ಮುಖೇಶನಿಗೆ ಒಪ್ಪುವುದೇ ಇಲ್ಲ.* ಹೇಮಂತ್ ಕುಮಾರ್ --> ಆ ಕಾಲದ ಅತ್ಯುನ್ನತ ಸಂಗೀತ ನಿರ್ದೇಶಕ, ಬಂಗಾಳಿ ಶೈಲಿಯ ಹಾಡುಗಳಲ್ಲಿ ಎತ್ತಿದ ಕೈ - ಎತ್ತರದ ಶ್ರುತಿ, ಶಾಸ್ತ್ರೀಯ ಸಂಗೀತ ಶೈಲಿ, ಕವ್ವಾಲಿ ಉಹ್ಞೂಂ.* ತಲತ್ ಮೆಹ್ಮೂದ್ --> ರಫಿಯ ದನಿಗೆ ಅತ್ಯಂತ ಸನಿಹ. ಆದರೆ ಧ್ವನಿಯು ನಡುಗುತ್ತೆ. ಗಜಲ್‍ಗಳ ಒಡೆಯ. ಆದರೆ ಈತ ಕೂಡ ತಾರಸ್ಥಾಯಿಯಲ್ಲಿ ರಫಿಯೆದುರು ಸೋಲುತ್ತಾರೆ.

* ಆಶಾ ಭೋನ್‍ಸ್ಲೆ --> ಕವ್ವಾಲಿ ಹಾಡುಗಳಲ್ಲಿ ಸೊಗಸಾದ ಪ್ರತಿಭೆ, ಧ್ವನಿಯ ಹಿಡಿತದ ಉನ್ನತ ಸಾಮರ್ಥ್ಯ. ಆದರೆ ಭಾವನಾತ್ಮಕ ಹಾಡುಗಳಲ್ಲಿ ಲತಾ ಮಂಗೇಶ್ಕರ್‍ರನ್ನು ಮೀರಿಸಲಾಗಲಿಲ್ಲ ಆಶಾಗೆ.* ಲತಾ ಮಂಗೇಶ್ಕರ್ --> ಕಂಠವು ಕೋಗಿಲೆಗೇ ಸ್ಪರ್ಧಿಸಬಲ್ಲುದು, ಶಾಸ್ತ್ರೀಯ ಶೈಲಿ, ಭಾವನಾತ್ಮಕ ಗೀತೆಗಳಲ್ಲಿ ಮಿಂಚುವುದು ಲತಾ ಮಂಗೇಶ್ಕರ್ ಧ್ವನಿ. ಆದರೆ ತಾರಸ್ಥಾಯಿಯಲ್ಲಿ ಕೀರಲು ಧ್ವನಿ ಬಂದುಬಿಡುತ್ತೆ.* ಮನ್ನಾ ಡೇ --> ಕಂಠದ ಮೇಲೆ ಅಮೋಘ ಹಿಡಿತ, ಶಾಸ್ತ್ರೀಯ ಸಂಗೀತ, ಕವ್ವಾಲಿಗೆ ಹೇಳಿ ಮಾಡಿಸಿದ ಧ್ವನಿ, ಆದರೆ ನಾಯಕ ನಟರುಗಳಿಗೆ ಮನ್ನಾ ಡೇ ಕಂಠ ಹೊಂದುತ್ತಿರಲಿಲ್ಲ.* ಮಹೇಂದ್ರ ಕಪೂರ್ --> ತಾರಸ್ಥಾಯಿಯಲ್ಲಿ ರಫಿಗೆ ಸಾಟಿಯಾಗಬಲ್ಲ ಗಾಯಕ. ದೇಶಭಕ್ತಿಗೀತೆಗಳೆಂದರೆ ಮಹೇಂದ್ರ ಕಪೂರ್ ಎಂಬಂತೆ. ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಮಾತ್ರ ರಫಿಯ ಮುಂದೆ ಬಹಳ ಎಳೆಸೆಂಬುದಕ್ಕೆ ನವರಂಗ್ ಚಿತ್ರದ ಗೀತೆಗಳನ್ನು ಕೇಳಬಹುದು.

ಮೇಲಿನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದ ಮೊಹಮ್ಮದ್ ರಫಿಯನ್ನು ಅದಕ್ಕೇ ಅತ್ಯುನ್ನತ ಗಾಯಕ ಎನ್ನುವುದು!!

ರಫಿಯ ಎಷ್ಟೋ ಅದ್ಭುತ ಹಾಡುಗಳಲ್ಲಿ ಒಂದನ್ನು ಮಾತ್ರ ಇಲ್ಲಿರಿಸಿದ್ದೇನೆ..-ಅ
04.12.2008
9.45PM