Wednesday, December 16, 2009

ಬಾಳಿಗೊಂದು ನಂಬಿಕೆ ;-)

ಬಸ್ ಸ್ಟಾಪಿನಲ್ಲಿದ್ದಾಗ ಲೇಟಾಗಿ ಬಸ್ ಬಂತು ಅಥವಾ ಬಾರದೆಯೇ ಇತ್ತು. ಆಟೋ ಕೂಡ ಸಿಗುವುದಿಲ್ಲ! ಹಾಳಾಗ್ ಹೋಗ್ಲಿ, ನಡೆದುಕೊಂಡು ಹೋಗೋಣ ಅಂದುಕೊಂಡರೆ ಚಪ್ಪಲಿಯೂ ಕಿತ್ತು ಹೋಗುತ್ತೆ. ಬರಿಗಾಲಲ್ಲಿಯೇ ನಡೆಯುತ್ತೇನೆಂದರೆ ಆ ಕಾಲಿಗೆ ಮುಳ್ಳು ಚುಚ್ಚಿಕೊಳ್ಳುತ್ತೆ!! ಇದಕ್ಕೆ ಕಿಸೆಯೊಳಗೆ ಇಪ್ಪತ್ತು ರೂಪಾಯಿ ನೋಟಿರುವುದಲ್ಲದೆ ಬೇರೆ ಏನು ಕಾರಣ ತಾನೆ ಇದೆ?

ಹೊಟೆಲಿನಲ್ಲಿ ಬೇಕಾದ ತಿಂಡಿ ಸಿಗುವುದಿಲ್ಲ, ಸಿಕ್ಕರೆ ತಿಂದದ್ದು ಜೀರ್ಣವಾಗುವುದಿಲ್ಲ. ಸಾಮಾನ್ಯವಲ್ಲ ಈ ನೋಟು! ದೇಶದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಹುಟ್ಟು ಹಾಕಿದ್ದೇ ಈ ನೋಟು ಎಂದು ದೈವವಾಣಿಯೇ ಇದೆ! ಬಡತನ, ಭ್ರಷ್ಟಾಚಾರ, ಸ್ವೇಚ್ಛಾಚಾರ, ಡಂಬಾಚಾರ, ಅನಾಚಾರ, ಬಾಲಾಚಾರ, ಸಮಾಚಾರ - ಇನ್ನೂ ಏನೇನು ಆಚಾರಗಳಿಗೆ ಬುನಾದಿಯಾಗಿದೆಯೋ ಯಾರಿಗೆ ಗೊತ್ತು! ಬ್ರಿಟಿಷರನ್ನು "ಭಾರತ ಬಿಟ್ಟು ತೊಲಗಿ"ಸಿದಾಗಲೇ ಈ ನೋಟನ್ನೂ ಉಚ್ಚಾಟಿಸಬೇಕಿತ್ತು - ಯಾಕೊ ಆಗಿನ ವಿತ್ತ ಸಚಿವರು ಮನಸ್ಸು ಮಾಡಲಿಲ್ಲ. ಅವರು ಮಾಡಿದ ತಪ್ಪಿಗೆ ನಾವು ಈಗಲೂ ಅನುಭವಿಸುತ್ತಿದ್ದೇವೆ - ಹಣೆಬರಹ!

ಸಮಸ್ಯೆಯನ್ನು ಹೇಳಿದರೆ ಸಾಲದು, ಪರಿಹಾರವೂ ಹೇಳಬೇಕಲ್ಲವೆ? ಬಹಳ ಸುಲಭ. ಯಾರು ಈ ನೋಟನ್ನು ಕೊಡುತ್ತಾರೋ ಅವರಿಗೇ ಹಿಂದಿರುಗಿಸಿ ಚಿಲ್ಲರೆ ಪಡೆದುಬಿಡುವುದು ಸುರಕ್ಷಿತ ಮಾರ್ಗ. ಇದನ್ನು ಮನುಸ್ಮೃತಿಯಲ್ಲೂ ಹೇಳಿದೆ. ಈಗಿನ ಕಾಲದಲ್ಲಿ ಶ್ರುತಿ-ಶಾಸ್ತ್ರ-ಸ್ಮೃತಿ-ಪುರಾಣಗಳನ್ನು ಯಾರು ತಾನೆ ಓದುತ್ತಾರೆ, ದುರಂತ!ಹೇಳೋದೆಲ್ಲ ಹೇಳಿಯಾಗಿದೆ, ಇನ್ನಾದರೂ ತಿದ್ದುಕೊಂಡು ಎಚ್ಚೆತ್ತುಕೊಳ್ಳುವುದು ಒಳ್ಳೇದು. ಆದರೆ ನರಕವನ್ನು ಬಯಸಿ ಬಯಸಿ ಹೊಗುತ್ತಾರಲ್ಲಾ ಜನ?

ಅಯ್ಯೋ, ಇವತ್ತು ಬ್ಯಾಂಕಿನಲ್ಲೊಬ್ಬರು ಕಂತೆ ಕಂತೆ ಹಣವನ್ನು ಡ್ರಾ ಮಾಡಿ, ಎಣಿಸಿಕೊಂಡು ಒಂದು ಸಾವಿರ ರೂಪಾಯಿಗೆ "ಇಪ್ಪತ್ತು ರೂಪಾಯಿ ನೋಟುಗಳನ್ನು ಕೊಡಿ" ಎಂದು ಪಡೆದರು! ಅಗೆದಿರುವ ಹೊಂಡದೊಳಕ್ಕೆ ಹೀಗೂ ಬೀಳುತ್ತಾರಾ ಅಂತ ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದೆ!! ಅಲ್ಲ, ಒಂದು ನೋಟಿಟ್ಟುಕೊಂಡೇ ಕೆಲಸ ಕೆಡುತ್ತೆ, ಇನ್ನು ಒಂದು ಸಾವಿರ ರೂಪಾಯಿಗೆ - ಅಂದರೆ ಐವತ್ತು ನೋಟುಗಳು. ತಲೆ ಗಟ್ಟಿಯಿದೆ ಅಂತ ಬಂಡೆಗೆ ಚಚ್ಚಿಕೊಳ್ಳುವಂತಹ ದುಸ್ಸಾಹಸ ಇದು!

ಮೊನ್ನೆ ಹೀಗೇ ಪುತ್ತೂರಿನ ಬಸ್ ಸ್ಟಾಂಡಿನಲ್ಲಿ ನಿಂತಿದ್ದೇವೆ - ಮಂಗಳೂರಿಗೆ ಹೋಗಲು ಒಂದು ರಾಜಹಂಸವೂ ಇಲ್ಲ, ಒಂದು ಕರ್ನಾಟಕ ಸಾರಿಗೆಯೂ ಇಲ್ಲ! ಬರ್ರೀ ಸೆಮಿ-ಡಿಲಕ್ಸೇ! ಅದಕ್ಕೆ ಬೇರೇನೂ ಕಾರಣವಿಲ್ಲ, ಎರಡು ದಿನವಾದ ಮೇಲೆ ಗೊತ್ತಾಯಿತು ಚೀಲದೊಳಕ್ಕೆ ಯಾವಾಗಲೋ ಒಂದು ಇಪ್ಪತ್ತು ರೂಪಾಯಿ ನೋಟು ನುಸುಳಿಕೊಂಡುಬಿಟ್ಟಿದೆ. ಈ ’ಸೆಮಿ ಡಿಲಕ್ಸ್’ ಹೆಸರನ್ನು ಕೇಳಿದರೇ ಸಾಕು, ಶ್ರೀಕಾಂತ ಸ್ನಾನ ಮಾಡುವನು. ನಾನು ತಲೆ ಮರೆಸಿಕೊಳ್ಳುವೆನು! ಜೀವನದಲ್ಲಿ ಒಮ್ಮೆ ಕೆ.ಎಸ್.ಆರ್.ಟಿ.ಸಿ.ಯ ಸೆಮಿ ಡಿಲಕ್ಸಿನಲ್ಲಿ ಪ್ರಯಾಣ ಮಾಡಿಬಿಟ್ಟರೆ ಸಾಕು - ಹತ್ತು ಇಪ್ಪತ್ತು ರೂಪಾಯಿ ನೋಟನ್ನು ಹೊಂದಿದ ಪಾಪ ಕರ್ಮವು ನಮ್ಮನ್ನು ಲೇಪಿಸಿಕೊಳ್ಳುತ್ತೆ. ಈ ಕರ್ಮವನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ - ಪ್ರಯಾಣದ ಮೇಲೆ ಪ್ರಯಾಣ ಮಾಡುತ್ತಲೇ ಇರಬೇಕು - ಕರ್ನಾಟಕ ಸಾರಿಗೆಯಲ್ಲೋ, ರಾಜಹಂಸದಲ್ಲೋ. ಮತ್ತೊಮ್ಮೆ ಅಪ್ಪಿತಪ್ಪಿ ಸೆಮಿ-ಡಿಲಕ್ಸೇ ಸಿಕ್ಕೀತೆಂದರೆ ಕಥೆ ಮುಗಿಯಿತು! ಪುನರಪಿ ಜನನಂ ಪುನರಪಿ ಮರಣಂ...

ಈಗ ಮೆಜೆಸ್ಟಿಕ್ಕಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ತನ್ನ ಸ್ಥಾನವನ್ನು ಮೆಟ್ರೋಗೆ ಬಿಟ್ಟುಕೊಡುತ್ತಿರಲು ಮುಖ್ಯಕಾರಣಗಳು - (೧) ದೇಶದಲ್ಲಿ ಎಲ್ಲೆಡೆಯೂ ಇಪ್ಪತ್ತು ರೂಪಾಯಿ ನೋಟು ಚಲಾವಣೆಯಲ್ಲಿರುವುದು - ಮತ್ತು ಆ ನೋಟನ್ನು ಕೆ.ಎಸ್.ಆರ್.ಟಿ.ಸಿ.ಯವರೂ ಸಹ ಬಳಸುವುದು (೨) ಸೆಮಿ-ಡಿಲಕ್ಸ್ ಬಸ್ಸನ್ನು ಓಡಿಸುತ್ತಿರುವುದು. ಏನು ಮಾಡೋಕಾಗುತ್ತೆ ಈಗ - ಅನುಭವಿಸಲೇ ಬೇಕು. ಇವೆರಡೂ ಇಲ್ಲದಿದ್ದರೆ ಮೆಜೆಸ್ಟಿಕ್ಕಿನಲ್ಲೇ ಬಸ್ ನಿಲ್ದಾಣ ಉಳಿದುಕೊಳ್ಳುತ್ತಿತ್ತು!

ಇದನ್ನೆಲ್ಲ ಬರೆದು ಅಪ್‍ಲೋಡ್ ಮಾಡೋಕೆ ಸದ್ಯ ಇಂಟರ್ನೆಟ್ ಇದೆಯಲ್ಲಾ ಅಂತ ಸಂತೋಷ. ಸಮಾಧಾನವೆಂದರೆ ಬಿ.ಎಸ್.ಎನ್.ಎಲ್. ಇಲ್ಲವಲ್ಲ ಎನ್ನುವುದು!

-ಅ
16.12.2009
9.30PM

Thursday, December 10, 2009

ಗ್ರಹಣ

ಶಶಿಯ ಮೈಯ ತುಂಬ ಹಲವು ಕೊರತೆಭರಿತ ಕಪ್ಪಿನೊಲವು
ಒಂದು ದಿನದ ಚಿಕ್ಕ ಗೆಲುವು - ಅದುವೆ ರವಿಯ ಬೇಟೆಯು.
ಜಗಕೆ ಬೆಳಕನೀವ ರವಿಯ ಮೊಗಕೆ ಶಶಿಯ ಕೋಟೆಯು!

ಕತ್ತಲಿಗೆ ನೂರೆಂಟು ಕತೆ, ಬೆಳಕಿಗೊಂದು ತಮಸಿಗೊಂದು,
ಹುಟ್ಟಿಗೊಂದು ಸಾವಿಗೊಂದು - ಏನಿರುವುದಿದಕೆ ಕೊರತೆ?
ಸಾಸಿರವೇ ಮೀರಿದಷ್ಟು ಕತೆಗಳ ಹರಸ್ಥಿರತೆ!

ಕತೆಯ ಹೇಳುವವನ ಕಣ್ಣು ಸತ್ಯವನ್ನೆ ಕಂಡ ಹಣ್ಣು!
ಉಳಿದ ನಾಕವೆಲ್ಲ ಮಣ್ಣು - ತನ್ನ ದೃಷ್ಟಿ ಶಕ್ತಿಗೆ.
ಶಶಿಯ ಬೆಳಕೊ? ರವಿಯ ಬೆಳಕೊ? ಹೊಳೆವುದಿಲ್ಲ ಯುಕ್ತಿಗೆ.

ಸೂರ್ಯಚಂದಿರವೆರಡು ನಮ್ಮಲಿ
ಹೊನ್ನು ಮಣ್ಣುಗಳಂತೆ ಕೂಡಿರೆ
ಭಿನ್ನ ನೋಟಗಳನ್ನು ತೋರುತ
ಒಂದನೊಂದನು ಮೀರಿದೆ.
ಎದೆಯ ಪೃಥಿವಿಗೆ ಹಗಲು ಇರುಳನು
ತನ್ನ ಬಯಕೆಗಳಂತೆ ಕರುಣಿಸಿ
ಸೃಷ್ಟಿ ಸೊಬಗನು ಬೀರಿದೆ.

-ಅ
10.12.2009
11.10AM

Monday, December 7, 2009

ಪಾ

ಅಂತೂ ಏನೇನೋ ಪ್ರಯೋಗಗಳು ನಡೆಯುತ್ತಿದೆ ಚಿತ್ರರಂಗದಲ್ಲಿ. ಹೋದ ವರ್ಷ ಡಿಸ್ಲೆಕ್ಸಿಯಾ ಆಯಿತು, ಈಗ ಪ್ರೊಜೇರಿಯಾ. ಅಮಿತಾಭ್ ಬಚ್ಚನ್‍ಗಿಂತ ಒಳ್ಳೆಯ ನಟ ಇಂಥ ಪಾತ್ರಕ್ಕೆ ಎಲ್ಲಿ ಸಿಕ್ಕಾರು? ಏನೇ ಆಗಲೀ, ಎಲ್ಲದಕ್ಕೂ ಸೈ ಎನ್ನುವ ಅಮಿತಾಭ್ ಕಂಡರೆ ಅದಕ್ಕೇ ಎಲ್ಲರಿಗೂ ಅಷ್ಟು ಇಷ್ಟವಾಗುವುದು. ಐದು ನಿಮಿಷದ ಪಾತ್ರವಿರಲಿ, ಸುಮ್ಮನೆ ಹಿನ್ನೆಲೆ ಕಾಮೆಂಟರಿ ಇರಲಿ ಅಚ್ಚುಕಟ್ಟಾಗಿ ಪ್ರಾಮಾಣಿಕವಾಗಿ ಯಶಸ್ವಿಯಾಗಿ ನಡೆಸಿಕೊಡಬಲ್ಲ ತಾಕತ್ತು ಅಮಿತಾಭ್‍ಗೆ ಇರುವುದನ್ನು ನಾವೆಲ್ಲ ಅದೆಷ್ಟು ಸಲ ಪ್ರತ್ಯಕ್ಷ ಕಂಡಿಲ್ಲ?

ಪಾ-ನಲ್ಲಿ ಪ್ರೊಜೇರಿಯಾ ಜೊತೆ ಇನ್ನೂ ಎರಡು ಮೂರು ಪ್ರಕರಣಗಳು ಬೆರೆತುಕೊಂಡು ಸ್ವಲ್ಪ ಕಲಸು ಮೇಲೋಗರವಾದರೂ, ತಕ್ಕಮಟ್ಟಿಗೆ ಸುಲಭವಾಗಿ ನಿಭಾಯಿಸಿದ್ದಾರೆ ನಿರ್ದೇಶಕರು. ಮಾಧ್ಯಮದವರನ್ನು ಟೀಕೆ ಮಾಡುವ ರೀತಿಯ ದೃಶ್ಯವು ಬಿಸಿರಕ್ತದವರನ್ನು ನಿಜಕ್ಕೂ ಪುಲಕಿತಗೊಳ್ಳಿಸುತ್ತದೆ. ನನಗಂತೂ ಇಷ್ಟವಾಯಿತು. ಹಾಗೆಯೇ ಅಮಿತಾಭ್ ಬಚ್ಚನ್ ಚಿತ್ರದಲ್ಲಿ ಅರುಂಧತಿ ನಾಗ್‍ರನ್ನು ನೋಡಿ ವಿಶೇಷವಾದ ಸಂತೋಷವೂ ಆಯಿತು (ಹಿಂದೆ ಸ್ವದೇಸ್ ಚಿತ್ರದಲ್ಲಿ ಕಿಶೋರೀ ಬಲ್ಲಾಳ್‍ರನ್ನು ನೋಡಿದಾಗ ಆದ ಸಂತೋಷದಂತೆಯೇ) - ಎಷ್ಟು natural ಆಗಿ ನಟಿಸುತ್ತಾರಲ್ಲಾ ಎಂದು ಹುಬ್ಬೇರಿಸುವಂತೆಯೂ ಆಯಿತು ಎಂದು ಹೇಳಬೇಕಿಲ್ಲ.ಆರಂಭದ ಕೆಲವು ಕಾಲ ಡಾಕ್ಯುಮೆಂಟರಿಯಂತೆ ತೋರುವ ಪಾ ಶಾಲಾ ಮಕ್ಕಳ ಸಂಭಾಷಣೆಗಳಲ್ಲಿ ಕಮರ್ಷಿಯಲ್ ಚಲನ ಚಿತ್ರದ ಛಾಪನ್ನು ಎತ್ತಿಹಿಡಿಯುವುದರಲ್ಲಿ ಯಶಸ್ವಿಯಾಗಿದೆ. ಮಕ್ಕಳಂತೂ ಅದ್ಭುತ!! ಮಕ್ಕಳೆಲ್ಲ ಥಿಯೇಟರಿಗೆ ಬರುತ್ತಾರೆಂದೇ ಕೆಲವು ಡೈಲಾಗುಗಳನ್ನೂ ಮಕ್ಕಳಿಗಾಗಿಯೇ ಮಾಡಿದ್ದಾರೆಂಬುದು ಗೋಚರಿಸುತ್ತೆ. ಎಂ.ಪಿ.ಯಾದವನು ಸ್ಪೈಡರ್ ಮ್ಯಾನ್ ಬಗ್ಗೆ ಮಾತನಾಡುವುದು ಸ್ವಲ್ಪ ಭಿನ್ನವಾಗಿದೆ. ರಾಜಕೀಯ ಆದರ್ಶಗಳು ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಚಲನಚಿತ್ರದಲ್ಲಾದರೂ ಆದರ್ಶವಾದಿಗಳಿದ್ದಾರಲ್ಲ ಎಂಬ ಸಮಾಧಾನವು, ಮತ್ತು "ಮತ್ತೊಮ್ಮೆ ಗಂಗೆಯು ಹರಿದು ಬರುವುದು.." ಎಂಬ ನಂಬಿಕೆಯನ್ನೂ ಮೂಡಿಸುವ ಪ್ರಯತ್ನವನ್ನು ಸಹ ಮಾಡಿದ್ದಾರೆ ಪಾ ಚಿತ್ರದಲ್ಲಿ.
ಜೊತೆಗೆ ಒಂದೇ ಹಾಡಿನಲ್ಲಿ ಫ್ಲಾಶ್‍ಬ್ಯಾಕ್‍ನ ಮುಕ್ಕಾಲು ಭಾಗಕ್ಕೂ ಹೆಚ್ಚು ಮುಗಿಸಿ ಗೋಳನ್ನು ಬದಿಗಿಟ್ಟು ವಾಸ್ತವವನ್ನು ಚೆನ್ನಾಗಿ ಪ್ರದರ್ಶಿಸಿದ್ದಾರೆ. ವಿದ್ಯಾ ಬಾಲನ್‍ರಂಥವರ ಚೆಲುವೆಯಿರುವಾಗ ಗೋಳಿಗೆ ಹೆಚ್ಚು ಸ್ಥಳವಿರುವುದಿಲ್ಲವಷ್ಟೆ? ಪಾಪ, ಗೋಳಾದರೂ ಚೆನ್ನಾಗಿ ನಡೆಸುತ್ತೆ ಅದು. ;-) ಪಾರೇಶ್ ರಾವಲ್‍ಗೆ ಮಾತ್ರ ಎಲ್ಲ ಚಿತ್ರಗಳಲ್ಲಿಯೂ ತಮಗೆ ಹೇಳಿ ಮಾಡಿಸಿದ ಪಾತ್ರ ಸಿಕ್ಕುವುದು ಅವರ ಭಾಗ್ಯವೋ ನೋಡುಗರ ಭಾಗ್ಯವೋ ಗೊತ್ತಿಲ್ಲ! ಇಳೆಯರಾಜರಂಥ ಜೀನಿಯಸ್‍ರ ಸಂಗೀತವೂ ಸಹ ಕ್ಲೀಷೆಯಾಗಬಲ್ಲುದು ಎಂಬುದು ಪಾ-‍ನಲ್ಲಿ ತಿಳಿದುಬರುತ್ತೆ. "ನಗುವ, ನಯನ..." ಈ ಸ್ವರಸಂಯೋಜನೆಯು ಇಳೆಯರಾಜರಿಗೆ ಅದೆಷ್ಟು ಇಷ್ಟವೆಂಬುದನ್ನು ಗಮನಿಸಬಹುದು.

ಇವೆಲ್ಲಾ ಏನೇ ಇರಲಿ, ಇಡೀ ಚಿತ್ರವನ್ನು ಆಳುವುದು ಅಮಿತಾಭ್‍ರ ವಿಭಿನ್ನ, ವಿಶೇಷ ವೇಷ ಭೂಷಣ - ಮತ್ತು ಅದನ್ನು ಅವರು ಬಳಸಿಕೊಂಡು ನಟಿಸಿರುವ ಸೊಗಸಾದ ರೀತಿ. ಕಾಯಿಲೆಯಿಂದ ನರಳುವ, ಕ್ಲೈಮ್ಯಾಕ್ಸಿನಲ್ಲಿ ಕೊನೆಯುಸಿರೆಳೆಯುವ ಅಮಿತಾಭ್‍ರನ್ನು ಪರದೆಯ ಮೇಲೆ ಎಷ್ಟೊಂದು ಸಲ ನೋಡಿದ್ದೇವೆ - ಆದರೆ ಹದಿಮೂರು ವರ್ಷದ ಅಮಿತಾಭ್‍ರನ್ನು ಇದೇ ಮೊದಲ ಬಾರಿಗೆ ನೋಡಿದ್ದು. ಚೆನ್ನಾಗಿತ್ತು ಅನುಭವ. ಕೊನೆಯಲ್ಲಿ ಸ್ವಲ್ಪ "ಎಳೆದಂತೆ" ಅನ್ನಿಸಿದರೂ ಸಹ, ಒಟ್ಟಾರೆ ಒಳ್ಳೆಯ ಚಿತ್ರವನ್ನು, ಸದಭಿರುಚಿಯ ಚಿತ್ರವನ್ನು ಕೊಟ್ಟಿದ್ದಾರೆ.

ನನ್ನ ಪಾಲಿಗೆ ಮೂರು ಗುಟ್ಟು, ಒಂದು ಸುಳ್ಳು, ಒಂದು ನಿಜ, ಮತ್ತೊಂದು ಇದು, ಮಗದೊಂದು ಅದು - ಈ ಚಿತ್ರ ನೋಡಿ ತಲೆಕೆಟ್ಟಿದ್ದಕ್ಕೆ ಪಾ ಚಿತ್ರವು ಒಳ್ಳೆಯ ಔಷಧಿಯಂತಿತ್ತು.

-ಅ
07.12.2009
11AM

Tuesday, November 24, 2009

ಮನವು ನಲಿಯಲಿ

ಗಗನ ಸೂರನು
ನಂಬಿ ಕನಲನು
ಹೆಣೆವ ಹೊಳೆಯುವ ಕಂಗಳೇ,
ಎತ್ತ ಸೃಷ್ಟಿಯೊ ಅತ್ತ ದೃಷ್ಟಿಯು
ಮರೆಯು ನಭದಲಿ ತಿಂಗಳೇ.

ಮುಖವ ತೋಯಲು
ಸುಖಕೆ ಕಾಯಲು
ಸಖಿಯ ವಿರಹದ ಹನಿಗಳು.
ಅಚಲದಿರುಳಿಗೆ ಕೇಳಿಸುವುದೇ
ವಿರಹದೆದೆಯಾ ದನಿಗಳು?

ಹನಿಗಳಂತೆಯೆ
ತನಿಗಳಿರುವುದು
ಇನಿದು ಎಲ್ಲವು ಎದುರಲಿ.
ಮುನಿದ ಎದೆಯದು ತಣಿದು ತಣಿಸಲಿ
ಕನಲ ಸಿರಿಗರಿಗೆದರಲಿ.
ಹೊನಲಿನನುರಾಗ ತಾ ಹರಿಯುತ
ಮನವು ಮುದದಲಿ ನಲಿಯಲಿ.

-ಅ
23.11.2009

Thursday, November 19, 2009

ಹಗೆಯ ಹೊನಲು ಹರಿದಿದೆ

ಹಗೆಯ ಹೊನಲು ಹರಿದಿದೆ,
ಬಗೆಯ ಕೋಟೆ ಮುರಿದಿದೆ.
ಕಿಚ್ಚು ಹೊಗೆಯನಾಡಿಸುತ್ತ
ರೊಚ್ಚು ನಗೆಯ ಮೂಡಿಸುತ್ತ
ಎಚ್ಚರವನೆ ಮರೆಸಿದೆ.

ವಿಷದ ಮರದ ಬೇರಿದು
ಕುಶದಿ ಬೆರೆತು ಹೋಗಿದೆ.
ಕಡಿವ ಪರಿಯ ಕಾಣದಾಯ್ತು
ಮೊಳಕೆ ಚಿಗುರು ಬಲಿತ ಮೇಲೆ
ನೆಳಲದೆಲ್ಲಿ ಹುದುಗಿದೆ?

ಹಗೆಯ ಹೊನಲು ಹರಿದಿದೆ,
ಬಗೆಯಿದು ವೈತರಣಿಯು.
ನಿಜದ ನೋಟ ತೋರು, ಶಕ್ತಿ,
ಪಾಪವನ್ನು ಪುಣ್ಯ ಮಾಡಿ
ಕತ್ತಲೆಡೆಗೆ ಬೆಳಕ ತೋರಿ
ಬರಡಿನಲ್ಲಿ ಚಿಗುರ ಬೀರಿ
ನಗೆಯ ಹೊನಲು ಹರಿಸುತ,
ತೊಳೆಯುವಂತೆ ಕೊಳೆಯನೆಲ್ಲ
ಗಂಗೆಯನವತರಿಸುತ.

-ಅ
19.11.2009
9.15AM

Tuesday, November 17, 2009

ನೀನು - ನಾನು

ಏನೂ ಆಗಿರದ, ಎಲ್ಲದರಿಂದಲೂ ದೂರಾದ
ಬಡಕಾಯದ ಜಡಜೀವವು ಅಲೆಯುತಿರೆ,
ಬರಗಾಲದ ಒಣ ಎಲೆಯು.
ಎಲ್ಲವೂ ಆಗುವ ಆಸೆ,
ಎಲ್ಲದರಿಂದಲೂ ಸೆಳೆವ ಕನಲು ಹುಟ್ಟಿಸಿ, ಬೆಳೆಸಲು - ನನಗಾಯ್ತು
ಸುಖಸ್ವಪ್ನದ ಹಿತ ನೆಲೆಯು.
ಅದುವೆ ನೀನು - ಕನಲ ಸೆಲೆಯು.
ಇದುವೆ ನಾನು - ಚಿಗುರಿದೆಲೆಯು!

-ಅ
24.07.2008
11.30PM

Friday, November 13, 2009

ಮಕ್ಕಳೊಂದಿಗೆ...

ಕಂಪ್ಯೂಟರ್ ಲ್ಯಾಬಿಗೆ ಬಂದು ಹತ್ತು ನಿಮಿಷವಾಗಿತ್ತು. ಒಂದನೇ ಕ್ಲಾಸಿನ ಭೃಗುಮತಿ (ಎಂಥ ಅದ್ಭುತವಾದ ಹೆಸರು) ಎಂಬ ಹುಡುಗಿಯ ಚಾಡಿ ಹೀಗಿತ್ತು: "Sir, from one hour, he is only playing, and not leaving me to play...." ಚಾಡಿ ಹೇಳಿಸಿಕೊಂಡವನು ಸುಮ್ಮನಿರುತ್ತಾನೆಯೇ? "No, saar... she is not letting me to play from one month." ಎಂದ. ಇದು ವಾಸಿ, ಎರಡನೆಯ ತರಗತಿಯ ಹುಡುಗನೊಬ್ಬ "sir, i did not "got" chance from the 1st standard!!!!" ಎಂದು ಆರೋಪಿಸಿದ್ದ. ಚಿಕ್ಕಮಕ್ಕಳು ಬಹಳ ಸಂತೋಷವಾಗಿರುವುದು ತಾವು "play" ಮಾಡುವಾಗ. ಅರ್ಥಾತ್ ಆಡುವಾಗ. ಕಂಪ್ಯೂಟರಿನಲ್ಲಿ ಕೆಲಸ ಮಾಡುವುದನ್ನು "play" ಎಂದು ಕರೆಯುತ್ತಾರೆಂದು ನನಗೆ ಖುಷಿಯಾಗುತ್ತೆ.

.....................

ನನ್ನ ಹುಟ್ಟುಹಬ್ಬವನ್ನು ಹೇಗೋ ಪತ್ತೆ ಮಾಡಿಕೊಂಡುಬಿಟ್ಟ ನಾಲ್ಕನೆಯ ಕ್ಲಾಸಿನ ಮಕ್ಕಳು ಕ್ಲಾಸಿಗೆ ಹೋದ ತತ್‍ಕ್ಷಣವೇ ವಿಷ್ ಮಾಡಿದ್ದರು. ಒಬ್ಬ ಹುಡುಗ ನನಗೊಂದು ಗ್ರೀಟಿಂಗ್ ಕೊಟ್ಟ. "Happy Birthday .............. Sir" ಎಂದಿತ್ತು. ಆ ........ ಜಾಗ ಖಾಲಿ ಇರಲಿಲ್ಲ. ಅಲ್ಲೊಂದು ಕಂಪ್ಯೂಟರ್ ಚಿತ್ರವಿತ್ತು. ನಾನು ಅದನ್ನು Happy Birthday, Computer Sir ಎಂದು ಓದಿಕೊಳ್ಳಬೇಕಂತೆ!!

......................

ನಮ್ಮನ್ನು ಎಷ್ಟು ಸೊಗಸಾಗಿ ಗಮನಿಸುತ್ತಿರುತ್ತಾರೆಂದರೆ, ನಮ್ಮ ಚಲನವಲನಗಳು, ನಾವು ಪದೇ ಪದೇ ಉಪಯೋಗಿಸುವ ಪದಗಳು, ಎಲ್ಲವೂ ಗೊತ್ತು. ಮತ್ತು ಅದನ್ನು ಪ್ರದರ್ಶಿಸಲು ಕಾತುರರಾಗಿರುತ್ತಾರೆ. "ಗುಮ್ಮಣ್ಣ" ಮೇಷ್ಟ್ರ ಥರ ಇದ್ದರೆ ಮಾತ್ರ ಹೆದರಿಕೊಂಡಿದ್ದರೂ ಹಿಂದೆ ಆಡಿಕೊಳ್ಳುತ್ತಾರೆ. ಯಾವಾಗ ನಮ್ಮನ್ನು ನಾವೇ ತಮಾಷೆ ಮಾಡಿಕೊಳ್ಳುತ್ತೀವೋ ಆಗ ಮಕ್ಕಳು ನಮಗೆ ತುಂಬ ಹತ್ತಿರವಾಗುತ್ತಾರೆ. ನನ್ನ ಸಹೋದ್ಯೋಗಿಯೊಬ್ಬರು ಒಂದು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಾಗ ಯಾವುದೋ ಸಂದೇಹವನ್ನು ಪರಿಹಾರ ಮಾಡಿಕೊಳ್ಳಲು ಅವರಿದ್ದಲ್ಲಿಗೆ ಹೋಗಿದ್ದೆ. ಅದೇ ಸಮಯಕ್ಕೆ ಪ್ರಾಂಶುಪಾಲರಿಗಿಂತಲೂ ಹಿರಿಯಾರದ (ಖಾಸಗಿ ಶಾಲೆಗಳಲ್ಲಿ ಇವೆಲ್ಲ ಸಾಧ್ಯ) ಅಲ್ಲಿಗೆ ಬಂದು ನನ್ನ ಸಹೋದ್ಯೋಗಿ ಮಾಡಿದ್ದ ಏನೋ ತಪ್ಪನ್ನು ಎತ್ತಾಡಿ ರೇಗತೊಡಗಿದರು - ಮಕ್ಕಳ ಮುಂದೆಯೇ. ಮಾತು ವಾದವಾಗಿ ತಿರುಗಿತು. ಸರಿ, ಇಬ್ಬರೂ ತೆಲುಗರಾದ್ದರಿಂದ ಮಾತು ಇಂಗ್ಲೀಷಿನಿಂದ ತೆಲುಗಿಗೆ ಇಬ್ಬರೂ ಭಾಷಾಂತರಗೊಂಡರು. ಮಕ್ಕಳು ಮಿಕಮಿಕ ಅಂತ ನೋಡುತ್ತಿದ್ದರು. ನನ್ನ ಸಂದೇಹವು ಇನ್ನೂ ಬಗೆಹರಿಯದಿದ್ದ ಕಾರಣ ನಾನು ಅವರ ತೆಲುಗಿನ ಜಗಳವನ್ನೇ ನೋಡುತ್ತ ಮಿಕಮಿಕ ಅಂತ ನಿಂತಿದ್ದೆ. ಆ "ಹಿರಿಯರು" ಸಿಟ್ಟು ಮಾಡಿಕೊಂಡು ಹೋಗಿದ್ದೇ ತಡ, ಅನೇಕ ಮಕ್ಕಳು, "Ma'am you speak Telugu??????!!!!!" ಎಂದು ಹರ್ಷೋದ್ಗಾರ ಮಾಡಿಬಿಟ್ಟರು!! ಇವರ ಬೇಸರವು ಕ್ಷಣ ಮಾತ್ರದಲ್ಲೇ ಕಡಿಮೆಯಾಯಿತಷ್ಟೆ?

......................

ನಮ್ಮ ಪಿ.ಟಿ. ಮಾಸ್ತರಿಗಂತೂ ದಿನಪ್ರತಿಕ್ಷಣವೂ ನಲಿವೇ. ಒಂದು ದಿನ ಎರಡನೇ ತರಗತಿಯ ಮಕ್ಕಳನ್ನೆಲ್ಲ ಮೈದಾನದಲ್ಲಿ ಕಲೆ ಹಾಕಿಕೊಂಡು ಕ್ರಿಕೆಟ್ ಆಡಿಸುತ್ತಿದ್ದರು. ನಾನೂ ಕೂಡ ಯಾವ ಕ್ಲಾಸೂ ಇಲ್ಲದೇ ಇದ್ದಿದ್ದರಿಂದ ಮೈದಾನಕ್ಕೆ ಹೋಗಿದ್ದೆ. ಶಾಲೆಯಲ್ಲಿ ಇದು ನನ್ನ ಹವ್ಯಾಸಗಳಲ್ಲೊಂದು. ಆಟ ಶುರು ಆಗೋಗಿತ್ತು. ಪಿ.ಟಿ.ಮಾಸ್ತರು "ಸಾರ್, ಈ ಮಕ್ಕಳನ್ನು ಸ್ಕೋರ್ ಎಷ್ಟು ಅಂತ ಕೇಳಿ?" ಎಂದರು. ಇದೇನು ದೊಡ್ಡ ವಿಷಯ, ಈ ಮಕ್ಕಳು ಎಷ್ಟು ಮಹಾ ಹೊಡೆದಿರುತ್ತಾರೆ? ಹದಿನೈದೋ ಇಪ್ಪತ್ತೋ ಇರಬಹುದು. "Hey, what is the score?" ಎಂದೆ. ಆ ಹುಡುಗ, "one minute saar" ಎಂದಿದ್ದೆ, ತನ್ನ ಕೈ ಬೆರಳುಗಳನ್ನು, ಕಾಲ್ಬೆರಳುಗಳನ್ನೆಲ್ಲ ಎಣಿಸತೊಡಗಿದನು. ಅವನ ಲೆಕ್ಕಾಚಾರ ಕೇಳುತ್ತಲೇ ನನಗೆ ದಿಗ್ಭ್ರಾಂತಿಯಾಯಿತು! "four hundred + thirty two + ninty eight.... saar, seven hundred and eighty six" ಅಂದ... !!!!!!!!!!!!!! ಪಿ.ಟಿ.ಮಾಸ್ತರು, "ಇನ್ನು ಹತ್ತು ನಿಮಿಷ ಬಿಟ್ಕೊಂಡ್ ಬನ್ನಿ, ಒಂದು ಸಾವಿರ ಆಗಿರುತ್ತೆ!" ಎಂದು ನಕ್ಕರು.

........................

ಶಾಲೆಯಲ್ಲಿ ಮಕ್ಕಳೊಂದಿಗೆ ಇದ್ದರೆ ಅದಕ್ಕಿಂತ ಸ್ವರ್ಗ ಬೇರೇನಿದೆ? ಹೊರಗೆ ಎಷ್ಟು ರಾಜಕೀಯ, ಎಷ್ಟು ಕಲ್ಮಶ, ಎಷ್ಟು ಹಿಂಸೆ, ಎಷ್ಟು ಕಷ್ಟ... ಮಕ್ಕಳಿಗೆ ಇವು ಯಾವುವೂ ಇಲ್ಲ!! ಮಕ್ಕಳೊಂದಿಗೆ ಇದ್ದರೆ ನಾವೂ ಮಕ್ಕಳಂತೆ ಖುಷಿ ಖುಷಿಯಾಗಿರುತ್ತೇವೆ. ನಾನು ಬದುಕಿರುವವರೆಗೂ ಸ್ಕೂಲ್ ಮೇಷ್ಟ್ರೇ ಆಗಿರಲಿ ಎಂಬುದು ನನ್ನ ಪ್ರಾರ್ಥನೆ!

ಶಾಲೆಯಿಂದ ಮನೆಗೆ ಹೋದ ಮೇಲೆ ಇನ್ನೊಂದು ಮಗುವನ್ನು ನೋಡಲು ನನ್ನ ಮನಸ್ಸು ಉತ್ಸುಕದಿಂದಿರುತ್ತೆ. ಹಿರಿಯ ಮಿತ್ರ ಸತ್ಯಪ್ರಾಕಾಶ್ ಮನೆಗೆ ಹೋಗುತ್ತೇನೆ. ಅಲ್ಲಿ ಹಾಸಿಗೆಯ ಮೇಲೆ ಮಲಗಿರುತ್ತೆ ಆ ಮಗು. ಹೋದ ಕೂಡಲೆ ನನ್ನ ಹೆಂಡತಿಯು ರಾಘವೇಂದ್ರ ಸ್ವಾಮಿ ಮಠದಲ್ಲಿ ಕೊಟ್ಟ ಮಂತ್ರಾಕ್ಷತೆಯನ್ನು ಆ ಮಗುವಿನ ಕೈಗೆ ಕೊಡುತ್ತಾಳೆ. "ಮಠಕ್ಕೆ ಹೋಗಿದ್ರಾ? ಚೆನ್ನಪಟ್ಟಣದ ಮಠಕ್ಕಾ.. ಸಂತೋಷ" ಎನ್ನುತ್ತೆ. ಮರುಘಳಿಗೆಯೇ "ರಾಜಲಕ್ಷ್ಮೀ, ಇವರು ಯಾರು?" ಎನ್ನುತ್ತೆ. "ಮೊನ್ನೆ ಬಂದಿದ್ರಲ್ಲಾ, ಅರುಣ ಮತ್ತು ರೇಖಾ..." ಎಂಬ ಉತ್ತರ ಬರುತ್ತೆ. "ಸಂತೋಷ! ಕಾಫಿ ಕೊಡು.." ಎನ್ನುತ್ತೆ ಮಗು. ಕಾಫಿ ಮಾಡಿಕೊಂಡು ಬರುವ ಹೊತ್ತಿಗೆ ಮುಂಚೆಯೇ "ಮೀನಾಕ್ಷಿ, ಎಷ್ಟ್ ಹೊತ್ತು?" ಎಂದು ಅವರನ್ನೇ ಕೇಳುತ್ತೆ. "ಎಲ್ಲೋ ಹೋಗ್ಬಿಡ್ತಾಳೆ! ಎಷ್ಟ್ ಹೊತ್ತು ನೋಡು.." ಎಂದು ನನಗೆ ಹೇಳಿ "ನೀನ್ ಏನ್ ಮಾಡ್ತಿದ್ದೀಯಾ?" ಎಂದು ಕೇಳುತ್ತೆ. ನಾನು "ನಿನ್ನೆ ಹೇಳಿದ್ನಲ್ಲಾ, ಟೀಚರ್ರು.." ಎಂದು ಜ್ಞಾಪಿಸುತ್ತೇನೆ. ಕಾಫಿ ಬರುತ್ತೆ. "ಎಷ್ಟ್ ಹೊತ್ತು ಕಾಫಿ ಕೊಡೋದು?" ಎನ್ನುತ್ತೆ ಮಗು. "ಫ್ರೆಂಡ್ ಎಲ್ಲಿ?" ಮತ್ತೆ ನನ್ನ ಹೆಂಡತಿಗೊಂದು ಪ್ರಶ್ನೆ. ಅವಳು ಕೈಯಾಡಿಸುತ್ತಾಳೆ. "ಫ್ರೆಂಡ್ ಇದ್ಯಂತಾ ಇವರ ಮನೇಲಿ?" ಎಂದು ಪಕ್ಕದಲ್ಲಿರುವವರನ್ನು ಕೇಳುತ್ತೆ ಮಗು. ನಾನು, "ನಾಲ್ಕು" ಎಂದು ಕೈ ತೋರಿಸುತ್ತೇನೆ. "ನಾಲ್ಕು ಫ್ರೆಂಡ್ ಇದ್ಯಾ ನಿಮ್ ಮನೇಲಿ?, ಅಬ್ಬಾಹ್!!" ಎನ್ನುತ್ತಲೇ, "ನಾನು ಈಗ ಮಲಗಿಕೊಳ್ಳಲಾ?" ಎನ್ನುತ್ತೆ. ಮಲಗಿ, ಐದೇ ನಿಮಿಷಕ್ಕೆ ಮತ್ತೆ ಎದ್ದು, "ಯಾವಾಗ್ ಬಂದೆ?" ಎನ್ನುತ್ತೆ ನನ್ನತ್ತ ನೋಡಿ. "ಆಗಲೇ!!" ಎಂದಾಗ, "ಓಹ್, ಯಾರು ಇವನು, ವಿಶಾಲಾಕ್ಷೀ?" ಎಂದು ಕೇಳುತ್ತೆ!

ಈ ಮಗು ಮಿತ್ರರಾದ ಸತ್ಯಪ್ರಕಾಶರ ತಾಯಿ.

ಮಕ್ಕಳ ದಿನಾಚರಣೆಯ ಶುಭಾಶಯಗಳು!

-ಅ
13.11.2009
10.40AM

Monday, November 9, 2009

ಕಪ್ಪು ಮೋಡದ ಹೊಟ್ಟೆ ತುಂಬಿದೆ

ಕಪ್ಪು ಮೋಡದ ಹೊಟ್ಟೆ ತುಂಬಿದೆ
ಅಪ್ಪುಗಡಲನೆ ಒಡಲು ನುಂಗಿದೆ
ಕತ್ತಲೊಳು ಚುಕ್ಕಿಗಳೆ ಕಾಣದೆ
ಚಿತ್ತದೊಳಗಡೆ ಪ್ರಾರ್ಥನೆ
ಸುತ್ತ ಕತ್ತಲ ಸ್ಥಾಪನೆ!

ಗೂಡು ಸೇರುವ ಹಕ್ಕಿ ಗುಂಪಿಗೆ
ಜಾಡು ಹುಡುಕುವ ಕಾಲ ಬಂದಿದೆ!
ಅಷ್ಟು ಕತ್ತಲನೇಕೆ ಕರುಣಿಸಿ
ಸೃಷ್ಟಿ ಕಷ್ಟವನುಳಿಸಿತು?
ತುಷ್ಟ ನಿಷ್ಠೆಯನಳಿಸಿತು?

-ಅ
09.11.2009
3.15PM

Monday, November 2, 2009

ನೋಟ

ಬಣ್ಣಗಳನೊಡಗೂಡಿ ಬೆಳಕು,
ಬೇಗೆಯನು ತರುವ ನೇಸರನ ತೆರದಿ
ಕಣ್ಣೊಳಗೆ ನೆಲೆಸಿರುವ ಮುನಿಸು,
ಕನಸುಗಳನು ನಗೆ ಮೊಗದೊಳಗೆ ತೋರಿ
ನಿಜವೆಂಬುದು ಮರೆತಿದೆ.

ಹೃದಯದೊಳಗಡಗಿರುವ ಗುಟ್ಟು -
ನಾಲಗೆಯ ಮೇಲೆ ಬರದಿರುವ ಹಾಗೆ
ಭಾವಪದರದಲ್ಲಿ ಮುಚ್ಚಿಟ್ಟು
ಮೌನವೊಂದನೆ ಬಗೆ ಬಗೆಯಾಗಿ ಹರಿಸಿ
ಕ್ಷಿತಿಜದೆದುರು ನಿಂತಿದೆ.

ಕಡಲುಗಳನೆಲ್ಲ ತಳ ಬಿರಿದು
ತುಂಬಿಸಿದ ಮಳೆಯ ಮೋಡಗಳ ಒಳಗೆ
ಶಕ್ತಿಯೊದಗಿ ನೆಲಕಿಳಿದು ಬರೆ
ತೆರೆದ ಕಣ್ಣಿನ ನೋಟ ಹಿರಿದು ಅಷ್ಟೆ!
ಕಣ್ಮುಚ್ಚಿದರೆ ಸಕಲವು!

-ಅ
02.11.2009
1PM

Friday, October 30, 2009

ಚಾಕ್ಲೇಟು

ಚಾಕ್ಲೇಟಿನ ಬಗ್ಗೆ ಪೋಷಕರಿಗೆ, ಅಧ್ಯಾಕಪಕರುಗಳಿಗೆ ಗೊತ್ತೋ ಇಲ್ಲವೋ, ಮಕ್ಕಳಂತೂ ಪಾಪ, ನಂಬಿದ್ದಾರೆ - ಚಾಕ್ಲೇಟು ಒಳ್ಳೇದಲ್ಲ ಅಂತ. ಆದರೂ ಆಸೆ ಕೇಳಬೇಕಲ್ಲ, ಚಾಕ್ಲೇಟನ್ನು Beg, Borrow or Steal ತಿನ್ನಲೇ ಬೇಕು.

ನಾನೂ ಚಾಕ್ಲೇಟ್ ಪ್ರಿಯನೇ ಆದ್ದರಿಂದ ಚಾಕ್ಲೇಟಿನ ಬಗ್ಗೆ ಕೆಟ್ಟದಾಗಿ, ತಿರಸ್ಕಾರದ ಮಾತನಾಡುವವರ ಬಗ್ಗೆ ನನ್ನದೂ ಧಿಕ್ಕಾರ ಇದೆ - ಮಕ್ಕಳೊಂದಿಗೆ.

ಚಾಕ್ಲೇಟಿನ ಈ ವಿಷಯದ ಬಗ್ಗೆ ಮಕ್ಕಳೊಂದಿಗೆ ಚರ್ಚೆ ಏನೋ ಮಾಡಿಬಿಟ್ಟೆ. ಆದರೆ ಮುಂದಿನ parents - teachers meet ಅಲ್ಲಿ ಯಾವ ಯಾವ ತಂದೆ ತಾಯಿ ನನ್ನ ಮೇಲೆ ಯುದ್ಧಕ್ಕೆ ಬರುತ್ತಾರೋ ಗೊತ್ತಿಲ್ಲ. ಅವರೇನೋ ಮಕ್ಕಳಿಗೆ ಸುಳ್ಳು ಹೇಳಿ "ಚಾಕ್ಲೇಟು ತಿಂದ್ರೆ ಹಲ್ಲು ಹಾಳಾಗುತ್ತೆ, ಇನ್ನೊಂದ್ ಆಗುತ್ತೆ, ಮತ್ತೊಂದ್ ಆಗುತ್ತೆ" ಎಂದು ದುಡ್ಡು ಉಳಿಸಿರುತ್ತಾರೆ. ಮಕ್ಕಳ ಕಾಟದಿಂದ ದೂರವಾಗಿರುತ್ತಾರೆ.. ಈಗ ಎಷ್ಟು ಜನರಿಗೆ ನಾನು ವೈರಿಯಾಗಿದ್ದೇನೋ ಏನೊ - ಆದರೂ ಪೋಷಕರಿಗೆ ತಾನೆ, ಮಕ್ಕಳಿಗಂತೂ ಅಲ್ಲವಲ್ಲ!!

-ಅ
29.10.2009
12.45PM

Tuesday, October 27, 2009

ನೆರೆ

ಎಲ್ಲೆಡೆಯೂ ನೆರೆಯ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ, ರಾಜಕಾರಣಿಗಳ ಭಾಷಣಗಳಲ್ಲಿ, ಮಂತ್ರಾಲಯದ ಅಭಿಮಾನಿ ಬ್ರಾಹ್ಮಣರ ಬಾಯಲ್ಲಿ(ಯೂ) ’ನೆರೆ’ಯ ಜೊತೆ ’ಹಾವಳಿ’ ಎಂಬ ಪದವೂ ಬೆರೆತು ಹೊರಡುತ್ತಲೇ ಇದೆ. ಈ ’ನೆರೆ’ ಪದದ ಸುತ್ತ ಒಂದು ಸುತ್ತು ಹಾಕಿಕೊಂಡು ಬರೋಣವೆನ್ನಿಸಿತು.

ನೆರೆಗೆ ಕಾರಣ ನೀರು ತಾನೆ? ನೀರು ಯಾವಯಾವುದಕ್ಕೋ ಕಾರಣವಾಗಿದೆ. ಮಳೆಯಾಗಿ ಅನ್ನ ಕೊಡುತ್ತೆ, ಕೆರೆಯಾಗಿ ತಂಪು ಕೊಡುತ್ತೆ, ಕಡಲಾಗಿ ರತ್ನ ಕೊಡುತ್ತೆ. ಭೂಗ್ರಹದ ಅಸ್ತಿತ್ವಕ್ಕೂ ನೀರೇ ಕಾರಣ. ನಾವು ಇಂದು ಇಲ್ಲಿರುವುದಕ್ಕೂ, ಇದ್ದು ಉಸಿರಾಡುತ್ತಿರುವುದಕ್ಕೂ ನೀರೇ ಕಾರಣವಷ್ಟೆ? ಅಷ್ಟೇ ಯಾಕೆ, ವಿಷ್ಣುವಿಗೆ ನಾರಾಯಣ ಎಂಬ ಹೆಸರು ಬಂದಿದ್ದೂ ನೀರಿನಿಂದಲೇ!

ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ |
ತಾ ಯದ್ ಅಸ್ಯಯನಂ ಪೂರ್ವಂ ತೇನ ನಾರಾಯಣಃ ಸ್ಮೃತಃ ||


ನೀರಿಗೆ ನಾರಾ ಎಂದೂ ಅನ್ನುತ್ತಾರಾದ್ದರಿಂದ ಅಲ್ಲಿ ’ಅಯನ’ ಮಾಡುವವನು ನಾರಾಯಣ! ಇರಲಿ.

ಹೀಗಿರುವ ನಾರಾ, ನೆರೆ ಆಗಿದ್ದು ಹೇಗೆ?

ಬೆಂಗಳೂರಿನಲ್ಲಿ ಎಂದೂ ನೆರೆಯಾಗಲೀ ಬರವಾಗಲೀ ಬಂದೇ ಇಲ್ಲ. ಬೆಂಗಳೂರಿಗರು ಅಂತಹ ಕಷ್ಟಗಳನ್ನು ಮಾಧ್ಯಮದಲ್ಲಿ ಬಿಟ್ಟರೆ ಬೇರೆಲ್ಲೂ ನೋಡೇ ಇಲ್ಲ. ಆದರೆ ಇತ್ತೀಚೆಗೆ ಬೆಂಗಳೂರಿನ ಮೋರಿಗಳೂ ಉಕ್ಕಿ ಹರಿಯುವುದು, ಮನೆಗಳೊಳಗೆ ನೀರು ನುಗ್ಗುವುದು, ಮರಗಳು ಬೀಳುವುದು, ಎಲ್ಲವೂ ಆಗುತ್ತಿದೆ. ಕೆರೆಗಳೆಲ್ಲವನ್ನೂ ಬತ್ತಿಸಿದ ಬೆಂಗಳೂರಿಗರು, ಕೆರೆಗಳ ಮೇಲೆ ವಾಸ ಮಾಡುತ್ತಿರಲು, ಮಳೆ ಬಂದಾಗ ಕೆರೆ ತುಂಬಿದಂತೆ ಮನೆ ತುಂಬುತ್ತೆ ಅಷ್ಟೆ. ಬೆಂಗಳೂರಿನ ನೆರೆಗೆ ಇದೇ ಕಾರಣವೆನ್ನಬಹುದು.

ಈ ನೆರೆ ಎಂಬ ಪದಕ್ಕೆ ಅಕ್ಕಪಕ್ಕದವರು ಎಂಬ ಅರ್ಥವೂ ಇದೆಯಲ್ಲವೆ? "ನೆರೆಮನೆಯವರು" - ಎಂದು ಬಳಸುವುದು ಇದೇ ಅರ್ಥದಲ್ಲಿ ತಾನೆ?
ಬೆಂಗಳೂರಿನಲ್ಲಿ ನೆರೆ ಹಾವಳಿ ಎಂದು ವಾರ್ತೆ ಪ್ರಸಾರವಾದರೆ ಅದರ ಅರ್ಥ ಏನೆಂದು ತಿಳಿದುಕೊಳ್ಳೋಣ? ನೆರೆಯ ಜೊತೆ ಜೋಡಿಯಾಗಿ ಇನ್ನೊಂದು ಪದ ಬಂದು ಕುಳಿತುಕೊಳ್ಳುತ್ತೆ - ಹೊರೆ! ಎಂಥ ವಿಪರ್ಯಾಸ. "ನೆರೆಹೊರೆಯವರು" - ಅಕ್ಕಪಕ್ಕದ ಮನೆಯವರ ಬಗ್ಗೆ ನಮಗಿರುವ ಗೌರವ ಎಂಥದ್ದು ಎಂಬುದು ಈ ಪದದಲ್ಲೇ ಗೊತ್ತಾಗುತ್ತೆ!

ಅಂತೂ ನಾರಾಯಣನಿಂದ ಪಕ್ಕದ ಮನೆಯವರೆಗೂ ಬಂದೆವು.

ಇದೇ ತರಹದ ಚಿಂತನೆಯನ್ನು ಒಬ್ಬ ರಾಜಕಾರಣಿಯು ತಮ್ಮ ಗುಂಪಿನವರನ್ನೆಲ್ಲ ಕಲೆ ಹಾಕಿಕೊಂಡು ವಿಷಯವನ್ನು ಮಂಡಿಸುವುದಕ್ಕಿಂತ ಮುಂಚೆ ಆರಂಭಿಕ ಭಾಷಣ ಮಾಡಿದರಂತೆ. "ಇಲ್ಲಿ ನೆರೆದಿರತಕ್ಕಂತ ಸಭಿಕರೇ.." ಎನ್ನುತ್ತಿದ್ದಂತೆ ಮೋಟುಗೋಡೆಯ ಅಭಿಮಾನಿಯೊಬ್ಬ "ಸ್ವಾಮಿ, ಈ ಸಭೆಯಲ್ಲಿ ಇರುವವರೆಲ್ಲರೂ ಗಂಡಸರೇ.." ಎಂದನಂತೆ!

ಒಳ್ಳೇ ನೆರೆ!

-ಅ
27.10.2009
8.30PM

Wednesday, October 21, 2009

ಸಾವಿನ ಎದುರು

ವರ್ಷ ವರ್ಷಗಳು ಜೊತೆಗೆ ಇದ್ದು, ಜೊತೆಗೆ ನಡೆದು,
ನಕ್ಕು ನಲಿದು, ಅತ್ತು ಕರೆದು, ಬಿದ್ದು ಎದ್ದರೇನು?
ಹಣ್ಣು ಮುದಿತನದಲ್ಲಿ ಕೂಡ, ನಿನ್ನೆವರೆಗೂ ಕನಸ ಕಟ್ಟಿ
ಇಂದು ಇಲ್ಲವಾದೆಯಾ?

"ಇಲ್ಲ, ಇಲ್ಲ, ಸಿದ್ಧವಿಲ್ಲ, ಇನ್ನೂ ನಾನು ನಿನ್ನ ಅಗಲಿಕೆಗೆ"
ಎಷ್ಟು ಕೊರಗಿದರೇನು ಫಲ? ಏನು ಕೂಗಿದರೇನು ಸುಖ?
ನಾನೇ ನೀನು ಎಂಬ ಭ್ರಮೆಯೊಳಿದ್ದೆ ಇಷ್ಟು ದಿನಗಳು - ನಿನ್ನೆವರೆಗೂ!!
ಇಂದು ಅನಿವಾರ‍್ಯವು ತಾನೆ?
ದೈವ, ಜೀವ, ಆತ್ಮ, ಜನುಮ - ಸಮಾಧಾನದ ನುಡಿಗಳು.
ಆದರೇನು ಫಲ? ಆದರೇನು ಸುಖ?
ನಂಟು ಇದ್ದುದು ದೇಹದೊಂದಿಗೆ.

-ಅ
21.10.2009
2.45PM

Thursday, October 15, 2009

ಮನ್ನಣೆಯ ದಾಹ - ಕಗ್ಗವೊಂದನ್ನು ಓದಿದಾಗ..

ಪ್ರಕೃತಿಯ ನಿಯಮದಂತೆ ಪ್ರತಿಯೊಂದು ಜೀವಿಯ ಬದುಕಿನ ಪ್ರಥಮ ಉದ್ದೇಶ ಹೊಟ್ಟೆಯನ್ನು ಭರಿಸಿಕೊಳ್ಳುವುದಾಗಿರುತ್ತೆ. ಮನುಷ್ಯನ ವಿನಾ ಬೇರೆ ಪ್ರಾಣಿಗಳೆಲ್ಲಕ್ಕೂ ಹೊಟ್ಟೆಯೇ ಪ್ರಥಮ ಹಾಗೂ ಅತ್ಯಂತ ಮುಖ್ಯ. ಅದು ಬಿಟ್ಟರೆ ಸಂತತಿಯನ್ನು ಬೆಳೆಸುವುದು. ನಮ್ಮ ಬದುಕು ಇವುಗಳಿಗಿಂತ ಒಂದು ಹೆಜ್ಜೆ ಮುಂದೆ.

"ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ"

ನಾಯಿಗಳು ಕೊಂಚ ಭಿನ್ನ. ಇತ್ತ ಮನುಷ್ಯನ ಹಾಗೂ ಅಲ್ಲ, ಅತ್ತ ಬೇರೆ ಪ್ರಾಣಿಗಳ ಹಾಗೂ ಅಲ್ಲ. ಸಹವಾಸದಿಂದ ಸಂನ್ಯಾಸಿ ಕೆಟ್ಟನೆಂಬಂತೆ ನಾಯಿಯೂ ಸಹ ಮನುಷ್ಯನ ಸಹವಾಸ ಮಾಡಿ ಪಕ್ಕಾ ಪರಾವಲಂಬಿಯಾಗಿಬಿಟ್ಟಿದೆ. ತನ್ನ ಊಟವನ್ನು ತಾನು ಬೇಟೆಯಾಡಿ ಸಂಪಾದಿಸಿದ ಕಾಲವೊಂದಿತ್ತೆಂಬುದನ್ನು ಅಕ್ಷರಶಃ ಮರೆತಿದೆ. ಮನುಷ್ಯನು ಊಟ ಕೊಟ್ಟರೆ ಹೊಟ್ಟೆ ತುಂಬಿತು, ಇಲ್ಲವೆಂದರೆ ಖಾಲಿ ಹೊಟ್ಟೆ. ಬೀದಿ ನಾಯಿಗಳೋ ನಾವು ತಿಂದೆಸೆದ ಹಳಸಿದ ಊಟವನ್ನೋ, ಎಂಜಲೆಲೆಯನ್ನೋ, ಸೆಗಣಿಯನ್ನೋ ತನ್ನ ನೆರೆ ನಾಯಿಗಳೊಡನೆ ಜಗಳವಾಡಿಕೊಂಡು ತಿನ್ನುವ ಪರಿಸ್ಥಿತಿಯನ್ನು ತಲುಪಿಬಿಟ್ಟಿದೆ. ಯಾರೋ ಕವಿಗಳು ನಾಯಿಗಳನ್ನು ನೀಯತ್ತಿಗೆ ಹೋಲಿಸಿ ತಾವು ದಾರಿ ತಪ್ಪಿದ್ದಲ್ಲದೆ ನಮ್ಮನ್ನೂ ದಾರಿ ತಪ್ಪಿಸಿದ್ದಾರೆ. ಕೋಗಿಲೆಯ ಕಥೆಯಂತೆ! ;-)

ಪ್ರತಿ ದಿನವೂ ಎರಡು ಹೊತ್ತು ನಮ್ಮ ಮನೆಯ ಬಾಗಿಲನ್ನು ತೆರೆದರೆ ಸಾಕೆಂದು ಗೇಟಿನ ಮುಂದೆಯೇ ಕಾದು ಕುಳಿತಿದ್ದ ’ಬಿಳಿಯ’ ಎಂಬ ನಾಯಿಯು, ನಾನು ಹಾಕುತ್ತಿದ್ದ ರುಚಿ ರುಚಿ ಕವಳವನ್ನು ಚಪ್ಪರಿಸಿ ತನ್ನ ಬಾಲವು ಎಲ್ಲಿ ಬಿದ್ದು ಹೋಗುತ್ತೋ ಎಂಬಂತೆ ಅಲ್ಲಾಡಿಸುತ್ತಿತ್ತು. ನಾನೆಂದರೆ ಅದಕ್ಕೆ ಎಲ್ಲಿಲ್ಲದ ಪ್ರೀತಿ, ಯಾಕೆಂದರೆ ದಿನಕ್ಕೆ ಎರಡು ಹೊತ್ತು ನಾನು ಊಟ ಹಾಕುತ್ತೀನಿ - ಎಂದು ಭ್ರಮಿಸಿದ್ದೆ. ಆ ಮನೆಯನ್ನು ಖಾಲಿ ಮಾಡಿ ಒಂದು ವರ್ಷದ ನಂತರ ಅದೇ ರಸ್ತೆಗೆ ಹೋದ ದಿನವೊಂದು ನನಗೆ ಗಾಬರಿಯಾದದ್ದು, ಆ ಬಿಳಿಯ, ಅದೇ ಸಾಕ್ಷಾತ್ ಬಿಳಿಯ ನನ್ನನ್ನು ಗುರುತು ಸಹ ಹಿಡಿಯಲಿಲ್ಲ. ನಾನು ಕರೆದಾಗ ಬಾಲ ಮುದುರಿಕೊಂಡು ಪೊದೆಯೊಳಗೆ ನುಗ್ಗಿಬಿಟ್ಟಿತು. ವಯಸ್ಸಾದ ಈ ನಾಯಿಗೆ alzeihmer's ಬಂದಿರಬಹುದೆಂದುಕೊಂಡಿದ್ದೆ. ಆದರೆ ಕೆಲವು ದಿನಗಳ ನಂತರ ಗೊತ್ತಾಯಿತು, ನಾಯಿಯ ಜೊತೆಗೇ ಇದ್ದು, ಅದಕ್ಕೆ ಊಟ ತಿಂಡಿಗಳನ್ನು ಕೊಡುತ್ತಿದ್ದರೆ ಅದು ಖಂಡಿತ ನಮ್ಮ ಹಿಂದೆಯೇ ಬಾಲ ಅಲ್ಲಾಡಿಸಿಕೊಂಡು ಗೆಳೆಯನಂತೆ ಇರುತ್ತೆ. ಒಂದಿಷ್ಟು ಕಾಲ ದೂರವಿದ್ದರೆ ಯಾರು ಅದಕ್ಕೆ ಊಟ ಕೊಡುತ್ತಾರೋ ಅವರನ್ನು "ನೀನೇ ಇಂದ್ರ, ನೀನೇ ಚಂದ್ರ" ಎನ್ನುತ್ತ ಅವರ ಹಿಂದೆ ಬಾಲ ಅಲ್ಲಾಡಿಸಿಕೊಂಡಿರುತ್ತೆ ಎಂದು.

ನಾಯಿಯ ವಿಷಯಕ್ಕೆ ಮತ್ತೆ ಯಾವಾಗಲಾದರೂ ಬರೋಣ. ಆಗಲೇ ಕನಕದಾಸರ ಪದವೊಂದನ್ನು ನೆನೆದೆವಷ್ಟೆ? ಎಲ್ಲರೂ ಮಾಡುವುದು ಮೊದಲಿಗೆ ಹೊಟ್ಟೆಯ ಸಲುವಾಗಿಯಾದರೂ ಅನೇಕರು ಅದನ್ನು ಮರೆತುಬಿಟ್ಟಿರುತ್ತಾರೆ. ಅವರು ಕೆಲಸದಲ್ಲಿ ಎಷ್ಟು ಮಗ್ನರಾಗಿರುತ್ತಾರೆಂದರೆ, ಮಧ್ಯಾಹ್ನದ ಊಟದ ಸಮಯ ಬಂದಿರುತ್ತಾದರೂ ಕೆಲಸ ಮುಗಿಸದೇ ಊಟ ಮಾಡುವುದೇ ಇಲ್ಲ. ಮೇಲುನೋಟಕ್ಕೆ ಒಳ್ಳೆಯದೇ ಎನ್ನಿಸುತ್ತೆ. ಅವರ ಪಾಲಿಗೆ "ಕರ್ತವ್ಯವೇ ದೇವರು" ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಊಟವನ್ನು ಬಿಟ್ಟು ಕೆಲಸ ಮಾಡುವುದರಿಂದ ತಮ್ಮದೇ ದೇಹದ ಮೇಲಾಗುವ ದುಷ್ಪರಿಣಾಮವನ್ನು ನಿರ್ಲಕ್ಷಿಸುವುದರಿಂದ ನಾಳಿನ ದಿನ ತಮ್ಮದೇ ಕರ್ತವ್ಯಕ್ಕೆ ದ್ರೋಹ ಬಗೆಯುವ ಪರಿಸ್ಥಿತಿ ಒದಗೀತು ಎಂಬ ಕಲ್ಪನೆಯೇ ಇರುವುದಿಲ್ಲ. ದೇಹವನ್ನು ಪ್ರಕೃತಿಯ ವಿರುದ್ಧವಾಗಿ ದಂಡಿಸಿ ದುಡಿಯುವುದಾದರೂ ಏತಕ್ಕೆ? ಹೊಟ್ಟೆಯ ಸಲುವಾಗಿ ಮಾಡಿದ್ದಾಯಿತು, ಇನ್ನು ಮುಂದಿನದು ಬೇಕಲ್ಲ - ಬಟ್ಟೆಗಾಗಿ! ’ಗೇಣು’ ಬಟ್ಟೆಗಾಗಿ ಎಂಬುದು ಉತ್ಪ್ರೇಕ್ಷದ ಪರಮಾವಧಿಯೆನ್ನಿಸುತ್ತೆ. ಎಲ್ಲರೂ ಗಾಂಧೀಜಿಯಂತಾಗಲು ಸಾಧ್ಯವೇ? ಗಾಂಧೀಜಿಯ ಲಕ್ಷಾಂತರ ಅನುಯಾಯಿಗಳಿಗೇ ಆಗಲಿಲ್ಲ ಅದು. ಗೇಣು ಬಟ್ಟೆಯೆಂದರೆ ಹೊಟ್ಟೆ ತುಂಬಿದ ನಂತರ ನಮಗೆ ಬೇಕಾದ ಪ್ರತಿಯೊಂದು ವಸ್ತುವೂ ಎಂದು ಅರ್ಥವಾಗುತ್ತೆ. ಪಾಪ, ಕನಕದಾಸರ ಪಾಲಿಗೆ ’ಗೇಣು’ ಬಟ್ಟೆಯು ಸತ್ಯವಾಗಿತ್ತೇನೊ. ಆದರೆ ನಮ್ಮ ಪಾಲಿಗಂತೂ ಅದು ಉತ್ಪ್ರೇಕ್ಷೆಯೇ ಸರಿ. ಮಾನ ಮುಚ್ಚುವ ಬಟ್ಟೆಯಿಂದ ಹಿಡಿದು ಥಳುಕಿನ ವಸ್ತ್ರಗಳು, ಆಭರಣಗಳು, ಸೈಟು, ಕಾರು, ಬಂಗಲೆ, ಆಸ್ತಿ - ಪಾಸ್ತಿ ಎಲ್ಲವನ್ನೂ ಈ ’ಗೇಣು’ ಬಟ್ಟೆಯ ಗುಂಪಿಗೆ ಸೇರಿಸಿಕೊಳ್ಳಬೇಕಿದೆ. ಸುಭಾಷಿತಗಳಲ್ಲಿ ಬರುವ ’ಚಿನ್ನ’ವನ್ನು ’ಹಣ’ ಎಂದು ಅರ್ಥೈಸುವುದಿಲ್ಲವೇ, ಹಾಗೆ. ದುರಂತದ ಹಾದಿಯೆಂದರೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು!

ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ - ಸಾಲ ಮಾಡಿಯಾದರೂ ತಿತಿ ಮಾಡುವವರನ್ನು, ಹಬ್ಬ ಮಾಡುವವರನ್ನು. ಇದರ ಟೀಕೆಯಂತೂ ಕ್ಲೀಷೆಯಾಗಿಬಿಟ್ಟಿದೆ. ಆದರೂ ಈ ಕೆಲಸಗಳು ಇನ್ನೂ ನಡೆಯುತ್ತಲೇ ಇವೆ. ಹಬ್ಬವೆಂದರೆ ಸಂತೋಷ ಪಡಲು ಸಿಗುವ ಒಂದು ಕಾರಣವಷ್ಟೆ? ಕಷ್ಟಕ್ಕೆ ಸಿಲುಕಿಯಾದರೂ ಹಬ್ಬ ಮಾಡಬೇಕೆಂಬ ಕುರುಡು ನಂಬಿಕೆಯಾದರೂ ಏತಕ್ಕೆ? ಇನ್ನು ತಿತಿಗಳನ್ನು ಯಾವ ಕಾರಣಕ್ಕಾಗಿ ಮಾಡುತ್ತಾರೋ ಗೊತ್ತಿಲ್ಲ - ನನ್ನ ಪ್ರಕಾರ ಸತ್ತವರನ್ನು ನೆನೆಸಿಕೊಳ್ಳುವುದಕ್ಕೆ ಮೀಸಲಾದ ಒಂದು ದಿನವಷ್ಟೆ. ಹುಟ್ಟುಹಬ್ಬವೋ ತಿತಿಯೋ ಒಟ್ಟಿನಲ್ಲಿ ರುಚಿರುಚಿಯಾದ ಊಟವಂತೂ ಸಿಗುತ್ತೆ. ಬಟ್ಟೆಯಿಂದ ಮತ್ತೆ ಹೊಟ್ಟೆಗೆ ಹೋಗುವುದು ಬೇಡ.

’ಬಟ್ಟೆ’ ಎಂಬ ಪದಕ್ಕೆ ಕನ್ನಡದಲ್ಲಿ ’ದಾರಿ’ ಎಂಬ ಅರ್ಥವೂ ಉಂಟು. (ಭಕುತಿ ರಸಕೆ ಒಮ್ಮೆ ಬಟ್ಟೆದೋರುವ ಮಂತ್ರ - ರಾಮ ಮಂತ್ರವ ಜಪಿಸೋ). ಗೇಣು ಬಟ್ಟೆಯನ್ನು ಇದಕ್ಕೆ ಹೊಂದಿಸಬಹುದೋ ಎಂದು ಯೋಚಿಸಬಹುದು. ಏಕೆಂದರೆ ಮೈಮೇಲೆ ಹಾಕಿಕೊಳ್ಳುವ ಬಟ್ಟೆ (ವಸ್ತ್ರ) ಗಿಂತ ಬದುಕುವ ಒಂದಿಷ್ಟು ದಾರಿಗಾಗಿಯೇ ಎಲ್ಲರೂ ’ಮಾಡುವುದು’ ಎಂದುಕೊಂಡರೆ ಹೆಚ್ಚು ಸರಿ ಎನ್ನಿಸುತ್ತೆ. ಹೇಗೂ ಇರಲಿ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತ ನಮಗೆ ಮುಖ್ಯವೆನ್ನಿಸುವುದು ಮೇಲೆ ಹೇಳಿರುವ ’ಮಲ್ಲಿಗೆ ಹೂವಿನ ಬಟ್ಟೆಯೇ’. ಹೊಟ್ಟೆ ಪಾಡಿಗೆ ನಾನಾ ಕೆಲಸ ಕಾರ್ಯಗಳನ್ನು ಮಾಡುವ ಹಾಗೆ ಹಣದ ಸಲುವಾಗಿ ಏನೇನೆಲ್ಲ ಮಾಡುತ್ತೇವೆಂಬುದನ್ನು ಬಲ್ಲೆವು. ಎಲ್ಲರೂ ಬರೀ ಹೊಟ್ಟೆಪಾಡಿಗಾಗಿಯೇ ದುಡಿಯುತ್ತಾರೆಂದರೆ ಅದು ಶುದ್ಧ ಸುಳ್ಳಾಗುತ್ತೆ. ’ಉದರನಿಮಿತ್ತಮ್ ಬಹುಕೃತವೇಶಃ’ ಎಂಬುದು ಕೇವಲ ಉದರ ನಿಮಿತ್ತವಲ್ಲ. ಹಣಕ್ಕಾಗಿಯೇ ದುಡಿಯುತ್ತೇವೆಂಬುದನ್ನು ಒಪ್ಪಿಕೊಳ್ಳಲೇ ಬೇಕು.

ಎಷ್ಟೇ ತಿನ್ನಲಿ, ಎಷ್ಟೇ ಸಂಪಾದಿಸಲಿ, ಮನುಷ್ಯ ಒಬ್ಬನೇ ಅಂತೂ ಇರುವುದಕ್ಕೆ ಆಗುವುದಿಲ್ಲ. ಸಂಸಾರ ಬೇಕಲ್ಲ! ಸಂನ್ಯಾಸಿಯಾದರೋ ಬದುಕುವುದಕ್ಕಾಗಿ ತಿನ್ನುತ್ತಾನೆ. ಅವನಿಗೆ ಕಾರು, ಬಂಗಲೆ, ಬಗೆಬಗೆಯ ಉಡುಗೆತೊಡುಗೆಗಳು ವ್ಯರ್ಥ. ಸಂಸಾರಕ್ಕೆ ಬರೀ ಕಾರು ಬಂಗಲೆ ಬಟ್ಟೆ ಸಾಲದು.

ಒಂದು ಹೆಣ್ಣಿಗೊಂದು ಗಂಡು - ಹೇಗೊ ಸೇರಿ ಹೊಂದಿಕೊಂಡು

ಹೊಟ್ಟೆಪಾಡು ಪ್ರಕೃತಿ - ಅಲ್ಲಿಂದ ಒಂದು ಹೆಜ್ಜೆ ಬೇರೆ ಕಡೆ ಹೋಗುತ್ತೇವೆ - ಅದು ಬಟ್ಟೆಪಾಡು, ಪ್ರಕೃತಿಯಲ್ಲ. ಸಂಸ್ಕೃತಿಯೆನ್ನೋಣ. ಕೆಲವರ ಪಾಲಿಗೆ ಅದು ಸುಸಂಸ್ಕೃತವಾಗಿರುತ್ತೆ, ಮತ್ತೆ ಕೆಲವರಿಗೆ ಅಸಂಸ್ಕೃತವಾಗಿರುತ್ತೆ. ಮತ್ತೆ ಬಟ್ಟೆಯಿಂದ ಪ್ರಕೃತಿಗೆ ಹಿಂದಿರುಗುತ್ತೇವೆ. ಮನುಷ್ಯರಾಗಿರುವುದರಿಂದ ಮೇಲಿನ ಸಂಸ್ಕೃತಿಯ ಪದ್ಯವೂ ಸಹ ಪ್ರಕೃತಿಯೇ ಆಗಿದೆ. ಪ್ರಾಣಿಗಳಾದರೋ ಗಂಡು-ಹೆಣ್ಣು ಸೇರುವುದು ಸಂತಾನೋತ್ಪತ್ತಿಗಾಗಿಯೇ ವಿನಾ ಅಲ್ಲಿ ಪ್ರೇಮವಾಗಲೀ, ಮೋಹವಾಗಲೀ ಇರುವುದಿಲ್ಲ. ಮನುಷ್ಯರಲ್ಲಿ ಈ ಎರಡು ಬಗೆಯ ಭಾವನೆಗಳೂ ಇರುತ್ತವೆ. ಸಂತಾನಾಭಿವೃದ್ಧಿಯ ಬಯಕೆಯೂ ಇರುತ್ತೆ, ಪ್ರೇಮ ಮೋಹಗಳೂ ಇರುತ್ತೆ. ಅತ್ಯಂತ ಬಡವನಾಗಿದ್ದರೂ ಸರಿ, ಒಂದು ಹೊತ್ತು ಗಂಜಿಗೆ ಪರದಾಡುತ್ತಿದ್ದರೂ ಸಹ ವಯಸ್ಸಿಗೆ ಬಂದ ಮೇಲೆ ಮದುವೆಯ ಹಂಬಲ ಅವನನ್ನು ಕಾಡದೆ ಇರುವುದಿಲ್ಲ. ಬೇಕಾದರೆ ಮದುವೆಯಾಗಿ ಹೆಂಡತಿಯನ್ನೂ ಕಷ್ಟಕ್ಕೆ ಸಿಲುಕಿಸಿ, ಮಕ್ಕಳನ್ನೂ ಉಪವಾಸ ಕೆಡವಿಯಾನು.

ಇವೆಲ್ಲದರ ತುಡಿತದೊಂದಿಗೆ ನಾವು ಈ ಪ್ರಪಂಚದಲ್ಲಿ ಬದುಕಬೇಕು. ಈ ಎಲ್ಲವೂ ಇದ್ದರೆ ಸಂತೋಷದಿಂದ ಇರಬೇಕಲ್ಲವೆ? ಹಸಿವಾದಾಗ ಊಟ, ಬೇಕು ಎಂದದ್ದನ್ನು ಕೊಂಡುಕೊಳ್ಳಲು ಹಣ, ಭಾವನೆಗಳನ್ನು ಹಂಚಿಕೊಳ್ಳುವ ಪ್ರೀತಿಯ ಸಂಗಾತಿ - ಇವೆಲ್ಲ ಇದ್ದರೂ ಕೊರತೆಯೊಂದು ಕಾಡುತ್ತೆ! ನಮ್ಮನ್ನು ನಾವು ಈ ಎಲ್ಲದರೊಡನೆ ಗುರುತಿಸಿಕೊಳ್ಳದೇ, ನಮಗೇ ಭಿನ್ನವಾದ ಗುರುತು ಸಿಗಬೇಕೆಂದು ಚಡಪಡಿಸುವುದು. Identity! "ನನಗೆ ಒಂದು ಐಡೆಂಟಿಟಿ ಇಲ್ಲವೆ? ಇವರು ಹೇಳಿದ ಹಾಗೆ ಕೇಳಿಕೊಂಡು ಬಿದ್ದುಕೊಂಡಿರಬೇಕೆ?" ಎಂಬುದು ಎಷ್ಟು ಸಹಸ್ರ ಕೋಟಿ ಜನರ ಪ್ರಶ್ನೆ? ಚಿಕ್ಕ ಮಗುವಿಗೂ ತಾನು ಮಾಡಿದ ಕೆಲಸವನ್ನು "ತಾನೇ ಮಾಡಿದ್ದು" ಎಂದು ಹೇಳಿಕೊಂಡು ಪ್ರದರ್ಶಿಸುವ ಹಂಬಲವಿರುತ್ತೆ. ಮಗುವೊಂದು ಚಿತ್ರ ಬರೆದಿದೆಯೆಂದಿಟ್ಟುಕೊಳ್ಳೋಣ. ಮುಗಿದ ತತ್‍ಕ್ಷಣ ತಂದು ನಮಗೆ (ಹಿರಿಯರಿಗೆ) ತೋರಿಸುತ್ತೆ. ಒಂದು ವೇಳೆ ಹಿರಿಯರಾದ ನಾವು ಅದನ್ನು ಗುರುತಿಸದೆ ಇದ್ದೋ, ಅಥವಾ ಸುಮ್ಮನೆ "ಓಕೆ" ಎಂದು ಉಪೇಕ್ಷಿಸಿದ್ದೋ ಆದರೆ ಆ ಮಗುವಿನ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿಯೇ ತೀರುತ್ತೆ ಎಂಬುದು ಮನಸ್‍ಶಾಸ್ತ್ರದ ಅಂಬೋಣ. ಆದರೆ ಆ ಮಗು ದೊಡ್ಡದಾದ ಮೇಲೆ ಜಗತ್ತು ತನ್ನ ಕೃತಿಯನ್ನು ಗುರುತಿಸದೇ ಇರುವ ಕಾಲವೂ ಸಂಭವಿಸಬಹುದು. ಮಗುವಾಗಿದ್ದಾಗ ಎಲ್ಲರೂ ಪ್ರೋತ್ಸಾಹ ಕೊಡುತ್ತಿದ್ದು, ದೊಡ್ಡವನಾದ ಮೇಲೆ ಯಾರೂ ಕೂಡ ’ಭೇಷ್’ ಎನ್ನುತ್ತಲೂ ಇಲ್ಲವಲ್ಲ ಎಂದೆನಿಸುವುದು. ’ಮಗುವು ನೀಂ ಪೆತ್ತರ್ಗೆ - ಲೋಕಕ್ಕೆ ಸ್ಪರ್ಧಿ!’

ಸ್ಪರ್ಧಾತ್ಮಕ ಜಗತ್ತಿನಲ್ಲಿ, ಹೌದು, ದುರಂತದಲ್ಲಿ ದುರಂತವೆಂದರೆ - "ನಾನು ಇಂತಿಂಥ ಕೆಲಸಗಳನ್ನು ಮಾಡಿದ್ದೇನೆ, ಮಾಡುತ್ತಿದ್ದೇನೆ" ಎಂದು ಹೇಳಿಕೊಂಡರೇನೇ ಗುರುತಿಸುವುದು. ಮತ್ತೆ ಆ ಗುರುತು ಅಗತ್ಯವಾಗಿಬಿಟ್ಟಿದೆ! ಏನಿದ್ದರೇನಂತೆ, ಯಾರೂ ನಮಗೆ ಮನ್ನಣೆ ಕೊಡದಿದ್ದರೆ ಎಂಬಂತಾಗಿಬಿಟ್ಟಿದೆ. By hook or crook ಮನ್ನಣೆಯನ್ನು ಸಂಪಾದಿಸುವುದು ಇಂದಿನ ಬದುಕಾಗಿದೆ. ’ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸು’ವಂತೆ ನಾವು ಬದುಕಲು ಆಗುತ್ತಿಲ್ಲ. Attention Seeking ಅನ್ನುವುದು ಮನೋರೋಗವೆಂದು ವೈದ್ಯರು ಹೇಳುತ್ತಾರೆ. ಏನಾದರೂ ಮಾಡಿ ನನ್ನನ್ನು ಗಮನಿಸಲಿ ಎಂದು ಹಾತೊರೆಯುವವರು ನಮ್ಮ ಸುತ್ತಮುತ್ತಲೂ ಇದ್ದೇ ಇದ್ದಾರೆ. ಈ ಹಾತೊರೆತವು ನಮ್ಮನ್ನು ಬಿಟ್ಟು ತೊಲಗುವ ತನಕ ನಾವು ಸಂತೋಷವಾಗಿರಲಾರೆವು. ಈ ಹಾತೊರೆತವು ನಮ್ಮನ್ನೇ ಸರ್ವನಾಶ ಮಾಡೀತು ಎಂದರೂ ಅದು ಅತಿಶಯೋಕ್ತಿಯಾಗಲಾರದು.

ನಾನು ಸಂತೋಷದಿಂದಿದ್ದರೆ ಅದೇ ಕಂಪನವನ್ನು ಹರಡುತ್ತೇನೆ. ಶುಭವಾದ ಮಾತುಗಳನ್ನಾಡುತ್ತೇನೆ. ಅದು ಇನ್ನೊಬ್ಬರ ಮೇಲೆ ಸತ್ಪರಿಣಾಮ ಬೀರುತ್ತೆ. ಆ ಇನ್ನೊಬ್ಬ ಈ ಪರಿಣಾಮದಿಂದ ಶುಭವಾದದ್ದನ್ನು ಮಾತನಾಡುತ್ತಾನೆ. ಇಂಥ ಕಂಪನಗಳು ಭೂವ್ಯೋಮದುದ್ದಕ್ಕೂ ಹರಡುತ್ತೆ. ಅದೇ ನಾನು ಇಂದು ಒಬ್ಬನಿಗೆ ಬೈದೆನೆಂದರೆ ನಾನು ನಕಾರಾತ್ಮಕ (negative) ಕಂಪನಗಳನ್ನು ಹೊರಹೊಮ್ಮಿಸುತ್ತೇನೆ. ಅದರ ಕಾರಣದಿಂದ ಆ ಇನ್ನೊಬ್ಬನೂ ಸಹ ತನ್ನ ಕಂಪನಗಳನ್ನೂ ಸೇರಿಸಿ ಇನ್ನಷ್ಟು ದುಷ್ಪರಿಣಾಮ ಬೀರುವಂತಹ ಕಂಪನಗಳನ್ನು ಹರಡುತ್ತಾನೆ. ಹೀಗೆ ಈ ನಕಾರಾತ್ಮಕ ಕಂಪನಗಳು ಭೂವ್ಯೋಮದುದ್ದಕ್ಕೂ ಹರಡುತ್ತೆ. ಈಗ ಹರಡಿರುವುದು ಇಂಥ ಕಂಪನವೇ. ಈ ಕಂಪನದ ಮಧ್ಯದಲ್ಲೇ ನಾವು ವಾಸಿಸುತ್ತಿದ್ದೇವೆ. ಅದಕ್ಕಾಗಿಯೇ ಬೆಳಿಗ್ಗೆ ಎದ್ದು ದೇವಸ್ಥಾನಕ್ಕೆ ಹೋದಾಗ, (ಅಥವಾ ಅಷ್ಟೇ ಶಾಂತವಾದ ಪ್ರದೇಶದಲ್ಲಿ ಕುಳಿತು ಪ್ರಾರ್ಥನೆ ಮಾಡಿದಾಗ) ನಮ್ಮ ಮನಸ್ಸು ನಿರ್ಮಲವೆನ್ನಿಸುವುದು. ಆದರೆ ಅಲ್ಲಿಂದ ಗಾಡಿ ಓಡಿಸಿಕೊಂಡು ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಬಂದರೆ ನಕಾರಾತ್ಮಕ ಕಂಪನಗಳ ಅನುಭವವಾಗಿಯೇ ತೀರುತ್ತೆ.

ಇವಿಷ್ಟೂ ಯೋಚನೆಗಳು ನನಗೆ ಒಂದು ಕಗ್ಗವನ್ನು ಓದಿದಾಗ ಮೂಡಿತು. ಅವಷ್ಟನ್ನೂ ಬರೆದಿಟ್ಟೆ.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹಮೀಯೆಲ್ಲಕುಂ ತೀಕ್ಷ್ಣ ತಮ
ತಿನ್ನುವುದು ಆತ್ಮವನೆ - ಮಂಕುತಿಮ್ಮ

-ಅ
15.10.2009
1.30PM

Wednesday, September 30, 2009

ಕಲಿಗಾಲದ ಅಂಕಿ-ಅಂಶ

--> ವರ್ಷಕ್ಕೆ ಎಂಟೂವರೆ ಲಕ್ಷ ಕ್ಯಾನ್ಸರ್ ರೋಗದ ವರದಿಯಾಗುತ್ತಂತೆ ನಮ್ಮ ದೇಶದಲ್ಲಿ. ಅದರಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಸಾಯುತ್ತಾರಂತೆ ಕ್ಯಾನ್ಸರ್ ಇಂದ.

http://cancerindia.net/cancerstatistics.aspx

--> ಅರವತ್ತು ಮಿಲಿಯನ್‍ಗಿಂತ ಹೆಚ್ಚು ಜನ ಹೃದಯಘಾತದಿಂದ ತೀರಿಕೊಳ್ಳುತ್ತಾರಂತೆ.

http://www.rediff.com/news/2007/nov/29heart.htm

--> ಹಳೇ ನ್ಯೂಸು, ಆದರೂ ಇಲ್ಲಿ ಪ್ರಸ್ತುತ. ಒಂದೇ ವರ್ಷದಲ್ಲಿ ನಾಲ್ಕು ಲಕ್ಷ ಜನ AIDS ನಿಂದ ಭಾರತದಲ್ಲಿ ಸತ್ತರು. ಈ ವರ್ಷ ಎಷ್ಟು ವರದಿಯಾಗಿದೆಯೋ ಗೊತ್ತಿಲ್ಲ.

http://www.indianexpress.com/news/4-lakh-aids-deaths-in-india-last-year-high/6453/


--> ರಸ್ತೆ ಅಪಘಾತಗಳೂ ಏನು ಕಮ್ಮಿ ಇಲ್ಲ. ಹೆಚ್ಚು ಕಮ್ಮಿ ಒಂದೂಕಾಲು ಲಕ್ಷ ಜನ ರಸ್ತೆಯ ಮೇಲೆ ಸಾಯುತ್ತಾರಂತೆ.

http://www.india-server.com/news/india-has-highest-number-of-road-4241.html


--> ಈಗ ಭಾರತದ ಜನಸಂಖ್ಯೆ - 1,147,995,904 ಅಂತೆ.

ಕಲಿಗಾಲವಯ್ಯ ಕಲಿಗಾಲ...

-ಅ
30.09.2009
12.10PM

Thursday, September 24, 2009

ಕಾಗೆ V/S ಕೋಗಿಲೆ

ಕವಿಗಳು ಯಾಕೊ ಕೋಗಿಲೆಯ ಪಕ್ಷಪಾತಿಗಳು.

ಕದ್ದು ಮೊಟ್ಟೆ ಇಡುತ್ತಂತೆ ಕಾಗೆ ಗೂಡಲ್ಲಿ. ಪಾಪ ಮುಗ್ಧ ಕಾಗೆ, ಸಾಕಿ ಸಲಹುತ್ತೆ ಕೋಗಿಲೆಯನ್ನು. ಬೆಳೆದ ಮೇಲೆ ಕೃತಜ್ಞತೆಯೂ ಇಲ್ಲದಂತೆ ಸಾಕುತಾಯಿ ಹೇಳಿಕೊಟ್ಟ ’ಕಾ, ಕಾ’ ಭಾಷೆಯನ್ನು ಬಿಟ್ಟು ದುರಹಂಕಾರದಿಂದ ’ಕುಹೂ ಕುಹೂ’ ಎನ್ನುವ ಕೋಗಿಲೆಯೇನು ಮಹಾ! ಇಂಥಾ ಕೃತಘ್ನತೆಯನ್ನು ತೋರುವುದಕ್ಕೆ ಕಾಗೆಯಂತೆ ವೇಷ ಬೇರೆ ಮರೆಸಿಕೊಳ್ಳುತ್ತೆ ಈ ಗೋಮುಖ ವ್ಯಾಘ್ರ ಅಥವಾ ಕಾಕಮುಖ ಪಿಕ !!

ಇಷ್ಟಕ್ಕೂ ಕವಿಗಳಿಗೆ ಕೋಗಿಲೆಯ ಬಗ್ಗೆ ಯಾಕೆ ಇಷ್ಟೊಂದು ಒಲವು?

’ಮಳೆಗಾಲದೊಳು ನೀ ಹಾಡುವುದಿಲ್ಲವೆ?’
ಕೇಳಿತು ಪಿಕವನು ಬಕವು.
’ಕಪ್ಪೆಗಳೊಟಗುಟುವೆಡೆಯಲಿ ಮೌನವೇ
ಲೇಸೆಂದಿತು’ ಪಿಕವು.

ಚುಟುಕಬ್ರಹ್ಮರು ಹೀಗೆ ಹೇಳಿದ್ದಾರೆ.

ಬೇಸಿಗೆಯಲ್ಲಿ ಮಾತ್ರ ಕೂಗುವ ಕೋಗಿಲೆಗಳು ಶೆಖೆ ತಾಳಲಾರದೆ ಇರುವ ಕವಿಗಳ ಕಿವಿಗಳಿಗೆ ಬಹುಶಃ ಅಪರೂಪವೆಂದೆನಿಸಿರಬೇಕು. ಬೇರೆ ಕಾಲಗಳಲ್ಲಿ ಕವನ ಬರೆಯಲು ಬೇರೆ ಬೇರೆ ವಿಷಯಗಳಿರುತ್ತವಲ್ಲಾ. ಮಳೆಹನಿ, ಎಳೆ ಬಿಸಿಲು, ಅರಳಿದ ಹೂವು, ಮೋಡ, ಪ್ರಣಯ ಪ್ರಸಂಗಗಳು, ಇತ್ಯಾದಿಗಳಾವುವೂ ಬೇಸಗೆಯಲ್ಲಿ ಸಿಗುವುದಿಲ್ಲವಲ್ಲ! ಬೇಸಗೆಯ ಸರಸವನ್ನು ಯಾರೂ ಬರೆದಿರುವುದು ಕಾಣೆ. ಚಳಿಯ ಬಗ್ಗೆ ಕೋಟಿ ಕೋಟಿ ಇದೆ.

ಇನ್ನೊಂದು ಕಾರಣ, ಅದು ಮರೆಯಲ್ಲಿ ಕೂಗುವುದರಿಂದಿರಬೇಕು. ಸಾಮಾನ್ಯವಾಗಿ ಕವಿಗಳು ನೋಡುವುದು ಹೃದಯದ ಕಣ್ಣಿಂದಲೇ ಹೊರೆತು ಬೈನಾಕ್ಯುಲರ್‌ಗಳಿಂದಲ್ಲ. ಅದಕ್ಕೇ ಯಾರೂ ಬಾರ್ಬೆಟ್ ಬಗ್ಗೆಯಾಗಲೀ, ಕಾಪರ್ ಸ್ಮಿತ್ ಬಗ್ಗೆಯಾಗಲೀ, ವೀವರ್ ಬರ್ಡ್ ಬಗ್ಗೆಯಾಗಲೀ ಕವನ ಬರೆದಿಲ್ಲ. ಅದೇ ನವಿಲಿನ ಬಗ್ಗೆ, ಕೋಗಿಲೆಯ ಬಗ್ಗೆ ಲೆಕ್ಕವಿಲ್ಲದಷ್ಟು ಕವನಗಳು! ಪಾಪ ಮಿಕ್ಕ ಪಕ್ಷಿಗಳು! ಮರೆಯಲ್ಲಿ ಕೂಗುವ ಕೋಗಿಲೆಯಲ್ಲಿ? ರಾಜಾರೋಷವಾಗಿ ಹಾಡುವ ಕಾಗೆಯೆಲ್ಲಿ?

ಹಾಗೆ ನೋಡಿದರೆ (ಕೇಳಿದರೆ) ಕೋಗಿಲೆಯೇನು ಅಂಥಾ ಗ್ರೇಟ್ ಸಿಂಗರ್ ಅಲ್ಲ ಅನ್ನಿಸುತ್ತೆ ನನಗಂತೂ. ಕವಿಗಳು ಕೋಗಿಲೆಯ ಧ್ವನಿಯನ್ನು ಸುಮ್ಮಸುಮ್ಮನೆ ಅಟ್ಟಕ್ಕೆ ಏರಿಸಿದ್ದಾರೆ. ಒಂಥರಾ hype ಮಾಡಿಸಿಕೊಂಡು ಮೇಲೆ ಬಂದಿರುವ ಚಿತ್ರನಟರ ಹಾಗೆ! ಪಂಚಮ ಸ್ವರದಲ್ಲಿ ಹಾಡುತ್ತಂತೆ ಕೋಗಿಲೆ. ಕಾಗೆಗಿಂಥ ಏನು ಮಹಾ ಇದು? ನಮ್ಮ ಕಾಗೆಯು ಸ-ಪ-ಸ ಮೂರೂ ಹಾಡುತ್ತೆ! ಇದಕ್ಕೆ ಪಂಚಮವೂ ಗೊತ್ತು, ಷಡ್ಜವೂ ಗೊತ್ತು. ಮಂದ್ರವೂ ಗೊತ್ತು, ತಾರವೂ ಗೊತ್ತು. ಅಲ್ಲದೆ ಹದಿನೆಂಟು ಬೇರೆ ಬೇರೆ ಪಕ್ಷಿಗಳ ಹಾಗೆ ಮಿಮಿಕ್ರಿ ಮಾಡುತ್ತೆ. ಕೋಗಿಲೆಗೆ ಕೋಗಿಲೆಯ ಧ್ವನಿ ಮಾತ್ರ.

ಆದ್ದರಿಂದ ಕವಿಗಳು ಇನ್ನು ಮುಂದಾದರೂ ದೊಡ್ಡ ಮನಸ್ಸು ಮಾಡತಕ್ಕದ್ದು.

-ಅ
25.09.2009
9PM

Monday, September 14, 2009

ಅಕಾಲಮೃತ್ಯು

ಅಕಾಲಮೃತ್ಯು - ಇದರ ಅರ್ಥವೇನು? ಇದು ಸಾಧ್ಯವೇ?

-ಅ
1.15PM

Monday, September 7, 2009

ಮೈಸೂರಿನ ಗೆಳೆಯನ ಜನ್ಮದಿನ

ಎಂದೋ ಆರ್ಕುಟ್ಟಿನಲ್ಲಿ ಭೇಟಿಯಾದ ಗೆಳೆಯನೊಬ್ಬನ ಹುಟ್ಟುಹಬ್ಬ ಇಂದು.
ಶುಭಾಶಯವನ್ನು ತಿಳಿಸಿದೆ ಆರ್ಕುಟ್ಟಿನಲ್ಲೇ.

ಅಂದು ನಾನು ಅಲ್ಲಿಗೆ ಹೊಸಬ. ಅವನೂ ಹೊಸಬ.
ಪರಿಚಯವಾಯ್ತು - ಚಾರಣದ ನಿಮಿತ್ತ.
ಗೆಳೆತನವೂ ಬೆಳೆಯಿತು - ಕಾಫಿಯ ಅನುಗ್ರಹ!
ಮಧ್ಯರಾತ್ರಿಯೂ ಸಹ ಗಂಟೆಗಟ್ಟಲೆ ಹರಟೆ ಅಂತರ್ಜಾಲದಲ್ಲಿ.
ಮೈಸೂರಿಗೆ ಹೋದಾಗಲೆಲ್ಲ ಅವರ ಮನೆಗೊಂದು ಭೇಟಿ, ಜೊತೆಗೊಂದು ಕಾಫಿ.
ಶಾಸ್ತ್ರೀಯ ಸಂಗೀತ, ಸುಗಮ ಸಂಗೀತಕ್ಕೇ ನೇಣು ಹಾಕಿಕೊಂಡಿದ್ದ ನನಗೆ
ಇಂಗ್ಲೀಷಿನ ಮಾಧುರ್ಯವನ್ನೂ ಪರಿಚಯಿಸಿದನು!

ಮೂರು ವರ್ಷವಾಗಿತ್ತು!
ಆತ ಹಾರಿದ್ದ ಅಮೇರಿಕಕ್ಕೆ - ಓದಲು!
ಇನ್ನೂ ಹಿಂತಿರುಗಿಲ್ಲ ಮೈಸೂರಿಗೆ.
ಬಂದ ಬಳಿಕವೇ ಚಾರಣ - ಎಲ್ಲಿಗೆ?
"ನೀವೆಲ್ಲಿ ಕರೆದುಕೊಂಡು ಹೋಗುತ್ತೀರೋ ಅಲ್ಲಿಗೆ!" ಎಂದಿದ್ದ!

ಇಂದು ಶುಭಾಶಯವ ತಿಳಿಸಿದೆ ಆರ್ಕುಟ್ಟಿನಲ್ಲೇ.
ಎಂದು ಬರುವೆ ಪುನಃ ಮೈಸೂರಿಗೆಂದು ಪ್ರಶ್ನಿಸಿದೆ.
ಉತ್ತರವು ಅವನ ಹತ್ತಿರದ ಸ್ನೇಹಿತನಿಂದ ಬಂದಿತು.
ಮತ್ತೆಂದೂ ಮೈಸೂರಿಗೆ ಹಿಂದಿರುಗಲಾರನೆಂದು ಮನವು ನೊಂದಿತು!

ಆತನ ಸ್ಕ್ರಾಪ್ ಬುಕ್ ತುಂಬ ಶುಭಾಶಯಗಳು!
ನನ್ನದೂ ಒಂದು!
ಧನ್ಯವಾದವನ್ನು ಹೇಳುವವನು ಮಾತ್ರ ಇಲ್ಲ.

-ಅ
07.09.2009
12.15PM

Saturday, September 5, 2009

ಶುಭಾಶಯ

ನಮ್ಮ ದೇಶಕ್ಕೆ ಇನ್ನೂ ಹೆಚ್ಚು ಶಿಕ್ಷಕರು ದೊರೆಯಲಿ ಎಂದು ಹಾರೈಸುತ್ತೇನೆ. ಅವಶ್ಯಕತೆಯಿದೆ.

ಶಿಕ್ಷಕರ ದಿನಾಚರಣೆಯ ಶುಭಾಶಯಗಳು.. :-)
-ಅ
05.09.2009
8.50AM

Friday, August 28, 2009

ಫೇಸ್ ಬುಕ್

ಆರ್ಕುಟ್ ಒಂದನ್ನು ಹೊರೆತು ಬೇರೆ ಯಾವ ನೆಟ್‍ವರ್ಕ್ ಸೈಟುಗಳಲ್ಲೂ ನಾನು ರಿಜಿಸ್ಟರ್ ಆಗಿರಲಿಲ್ಲ. ಫೇಸ್ ಬುಕ್ಕಿನಲ್ಲಿ ಬಹಳ ಬಹಳ ಹಿಂದೆ ಅಕೌಂಟ್ ಏನೋ ಸೃಷ್ಟಿಸಿಕೊಂಡಿದ್ದೆ. ಫ್ರೆಂಡ್ ರಿಕ್‍ವೆಸ್ಟುಗಳು ಇನ್‍ಬಾಕ್ಸಿಗೆ ಬರುತ್ತಲೇ ಇದ್ದವು.

ಇಂದು, ಅಂತೂ ಇಂತೂ ಮನಸ್ಸು ಮಾಡಿ, ಲಾಗಿನ್ ಆಗೇಬಿಟ್ಟೆ. ಪಾಸ್‍ವರ್ಡ್ ಕೂಡ ಮರೆತು ಹೋಗಿತ್ತು. ಅದನ್ನೂ ಬದಲಿಸಿಕೊಂಡು ಲಾಗಿನ್ ಆದರೆ ತೊಂಭತ್ತೊಂಭತ್ತು ರಿಕ್‍ವೆಸ್ಟುಗಳಿದ್ದವು!

ನಿನ್ನೆ ವರೆಗೂ ಒಬ್ಬರೋ ಇಬ್ಬರೋ ಇದ್ದ ನನ್ನ ಫ್ರೆಂಡ್ ಲಿಸ್ಟಲ್ಲಿ ಧಿಡೀರನೆ ನೂರು ಜನರನ್ನು ನೋಡಿದ ನನ್ನ "ಆ ಕಾಲದ" ಫೇಸ್ ಬುಕ್ ಗೆಳೆಯನಿಗೆ ಆಶ್ಚರ್ಯ ಮತ್ತು ಆನಂದ!

-ಅ
28.08.2009
9.45PM

Monday, August 24, 2009

ಚಂದಿರ

ತಿಳಿ ತಿಳಿ ಹಾಲಿನ ಮೋಡದ ತೆರೆಯಲಿ
ಒಳಗೊಳಗಡಗಿಹ ಶಶಿಯು ಮರೆ.
ಏನು ಚಂದವೋ, ಏನು ಅಂದವೋ
ಇಣುಕುತ ಕೆಣಕುವ ಒಲವ ಕರೆ,
ಮರೆತಂತೆ ತಿರೆ!

ಹಗಲಿನ ಬೇಗೆಯನಾರಿಸೆ ಹನಿಗಳ
ಹೂಮಳೆಗರೆದಿಹ ಬಾಂದಳದಿ
ಚುಕ್ಕಿಗಳೆಲ್ಲವು ಅಡಗಿ ಕುಳಿತಿಹವು
ತಿಂಗಳ ಸೊಬಗಿಗೆ ನಾಚುತಲಿ,
ಕೈ ಚಾಚುತಲಿ!

ಹೊಸ ಹೊಸ ನೋಟದೆ ನೂತನ ದಾರಿಯ
ಹೊಸ ಕನಸನು ಶಶಿ ತೋರುವನು.
ಚಂದಿರನು, ಅಯ್ಯೋ! ಇವನಲ್ಲವೆ?
ನಾಲ್ಕನೆ ದಿನ ಭಾದ್ರಪದದಲಿ
ಹೊಳೆಯುತ ಸೆಳೆಯುತ ಕಳೆಯೊಳು ಬಂದಿಹ
ಶತ್ರುವು ಮಿತ್ರನ ವೇಷದಲಿ,
ಹುಸಿ ಪಾಶದಲಿ!

-ಅ
24.08.2009
1.30 AM

Tuesday, August 18, 2009

ಮಂಗಳಗೌರೀ ವ್ರತ ಪೌರೋಹಿತ್ಯಅಥಾ ಶ್ರೀ ಮಂಗಳಗೌರೀ ವ್ರತ ಪೂಜಾವಿಧಿಃ ಸಂಪೂರ್ಣಂ!

ಎಂದು ನಾನು ಓದಿದಾಗ ಎಷ್ಟೊಂದು ತೃಪ್ತಿ, ಸಂತೋಷ - ಬೆಳಿಗ್ಗೆ. ಆಮೇಲೆ ಗೊತ್ತಾಯಿತು ಈ ವ್ರತವನ್ನು ಐದು ವರ್ಷಗಳು ಮಾಡಬೇಕೆಂದು.

ಗಂಡಸಿಗೆ ಯಾಕೆ ಗೌರಿ ದುಕ್ಕ? ಯಾಕೆಂದರೆ ಈ ಗಂಡಸು ಪುರೋಹಿತ. ಪೂಜೆ ಮಾಡಿಸಿದ್ದಕ್ಕೆ ವಾಯನದಾನವೇನೋ ಸಿಕ್ಕಿತು. ಆದರೆ ಬೆಳಿಗ್ಗೆ ನಾಲ್ಕುವರೆಗೆ ಏಳುವುದೇ ಚಿಂತೆ! ಅಷ್ಟೆಲ್ಲ ಒಳ್ಳೆಯ ಅಭ್ಯಾಸವೆಲ್ಲಿಂದ ಬರಬೇಕು! ವಿದ್ಯಾರ್ಥಿ ದಿನದಲ್ಲೇ ಬೆಳಿಗ್ಗೆ ಬೇಗ ಏಳುವ ಕರ್ಮ ಕಳೆದುಕೊಂಡಾಗಿದ್ದ ನನ್ನ ಜಡ ದೇಹವು ಈಗ ಎದ್ದೇಳು ಎಂದರೆ ಗೊಣಗಾಡದೇ ಇರುತ್ತದೆಯೇ? ಅದೂ ಪೂಜೆಗೆ!

ಶಾಲೆಯಲ್ಲಿ ಪಾಠ ಮಾಡುವವನು ಮನೆಯಲ್ಲಿ ಪುರೋಹಿತನೂ ಆಗುತ್ತಾನೆ ನನ್ನ ಪ್ರಸಂಗದಲ್ಲಿ. ಆದಕಾರಣ ಶಾಲೆಯಲ್ಲಿ ರಜೆಯನ್ನೂ ಕೊಡುತ್ತಾರೆ ಹೆಡ್ಮೇಡಮ್ಮು! "ಗೌರೀ ಪೂಜೆ ’ಅವರು’ ಮಾಡ್ಕೋತಾರೆ, ನಿಮಗ್ಯಾಕೆ ರಜಾ?" ಎಂದು ಮೊದಲಿಗೆ ಕೇಳಿದರೂ ನಂತರ "ಮೊದಲ ಮಂಗಳಗೌರೀ ಪೂಜೆ, ಚೆನ್ನಾಗಿ ಪೂಜೆ ಮಾಡ್ಸಿ" ಎಂದು ರಜೆ ದಯಪಾಲಿಸಿದ ಪ್ರಾಂಶುಪಾಲರಿಗೆ ಮೊದಲ ವಂದನೆಗಳು.

ನನಗೆ ಈ ವ್ರತಗಳಲ್ಲೆಲ್ಲ ನಂಬಿಕೆಯಿಲ್ಲ. ಮುಖ್ಯ ಕಾರಣವೇನೆಂದರೆ ವ್ರತಗಳೆಲ್ಲವೂ ಕಾಮ್ಯವೆಂದು. ಈ ವ್ರತ ಮಾಡುತ್ತೇನೆ, ನನಗೆ ಇಂಥಿಂಥದ್ದು ಆಗಲಿ ಎಂಬ ಭಾವನೆಯನ್ನು ಇಟ್ಟುಕೊಂಡು ಮಾಡುವಂಥದ್ದು. ದೇವರನ್ನು "ನನಗೆ ಅದು ಕೊಡು, ಇದು ಕೊಡು" ಎಂದು ಕೇಳಿಕೊಳ್ಳುವುದು ನನ್ನ ಪ್ರಕಾರ ವ್ಯರ್ಥ. ಜೊತೆಗೆ "ನಾನು ಇಂಥಿಂಥ ಪೂಜೆ ಮಾಡುತ್ತೇನೆ, ನೀನು ಸಂತುಷ್ಟನಾಗಿ ನನಗೆ ಬೇಕಾದ್ದನ್ನು ಕೊಡು" ಎಂದು ಕೇಳುವುದು ನ್ಯಾಯವೇ ಅಲ್ಲ. ನನಗೆ ಏನೇನು ಅರ್ಹತೆಯಿದೆಯೋ ಅವೆಲ್ಲವನ್ನೂ ದೇವರು ಕರುಣಿಸದೇ ಇರುತ್ತಾನೆಯೇ? ಆದರೂ ನಮ್ಮ ಮನೆಯಲ್ಲಿ ಸಾಕ್ಷಾತ್ ಆತ್ರೇಯಸನ ಕಾಲದಿಂದಲೂ ವ್ರತಗಳು ನಡೆದುಕೊಂಡು ಬಂದಿರುವಂತೆ ತೋರುತ್ತೆ. ಆ ಪರಂಪರೆಯು ಮುಂದುವರೆಸುವ ಸೌಭಾಗ್ಯ ನನ್ನದು, ಅಮ್ಮನದು ಮತ್ತು ನನ್ನ ಮಡದಿಯದು. ಅಮ್ಮ ಮತ್ತು ರೇಖಾರದು ನಂಬಿಕೆಯ ಉದ್ದಿಶ್ಯವಾದರೆ ನನ್ನ ಉದ್ದಿಶ್ಯವು "ಶುಭ ಕಾರ್ಯೇಷು ಸಂತೋಷಮ್". ಹಾಗಾಗಿ ನಾನು ಪುರೋಹಿತನ ಸ್ಥಾನಕ್ಕೆ ನೇಮಕನಾದೆ! ನನ್ನನ್ನು ನಾನೇ ನೇಮಿಸಿಕೊಂಡೆ. ಬೇರೆ ಪುರೋಹಿತರಿಗೆ ಹೇಳಿದರೆ ಅವರು ಹಣ ಸುಲಿಯುವ ವೃತ್ತಿ ಧರ್ಮವನ್ನು ಬಿಡುವುದಿಲ್ಲವಲ್ಲ ಎಂದು.ವ್ರತದ ಕ್ಯಾಸೆಟ್ ಹಾಕಿಬಿಟ್ಟರೆ ಕೆಲಸ ಸಲೀಸು. ಆದರೆ ಮನಸ್ಸೇಕೋ ಒಪ್ಪುವುದಿಲ್ಲ. ನನ್ನಂಥ ನಾಸ್ತಿಕನಿಗೂ ಸಹ ಹೀಗೆ ಯಾಕೆ ಅನ್ನಿಸಿತೊ ಗೊತ್ತಿಲ್ಲ. ಆಗಲೇ ಹೇಳಿದ ಹಾಗೆ ಶುಭಕಾರ್ಯೇಷು ಸಿಗುವ ಸಂತೋಷವು ಕ್ಯಾಸೆಟ್ ಪೂಜೆಗಿಂತಲೂ ನಾವೇ ಮಾಡುವ ಪೂಜೆಯಿಂದ ಸಿಗುತ್ತೆಂಬ ನಂಬಿಕೆ ನನಗೆ. ತಪ್ಪೋ ನೆಪ್ಪೋ, ಲೋಪವೋ ದೋಷವೋ ನಾವು - ನಾವೇ ಮಾಡಿದರೇನೇ ನೆಮ್ಮದಿ. ನಾನು ಪುರೋಹಿತನಾದರೆ ಅದರಲ್ಲಿ ಬರೀ ಲೋಪದೋಷಗಳೇ ಎಂದು ಪ್ರತ್ಯೇಕವಾಗಿ ಹೇಳಬೇಕೆ? ಶ್ರೀಕಾಂತ, ಶ್ರೀನಿವಾಸನ ಮಾರ್ಗದರ್ಶನದಲ್ಲಿ ಕಲಿತ ಕೆಲವೇ ಕೆಲವು ಸಂಸ್ಕೃತ ಪದಗಳು ಅರ್ಥವಾಗಿಬಿಟ್ಟು ಅಲ್ಲಲ್ಲಿ ನಿಲ್ಲಿಸುವಂತಾಗುತ್ತೆ. ಏನು ಓದುತ್ತಿದ್ದೀನೋ ಅದನ್ನು ಅರ್ಥ ಮಾಡಿಕೊಂಡು ಮುಂದಕ್ಕೆ ಹೋಗೋಣ ಎನ್ನಿಸುತ್ತೆ. ಆದರೂ ಅಲ್ಲಲ್ಲಿ ಪಾಪ ಮಂಗಳಗೌರೀಗೆ ನಮ್ಮವರು ಮೋಸ ಮಾಡುವುದು ಗೋಚರಿಸುತ್ತೆ. ಅಕ್ಷತಾನ್ ಕಿರೀಟಹಾರ ಕೇಯೂರ ಕಂಕಣಾದಿ ವಿಭೂಷಣೈಃ ಅಲಂಕಾರೋಮಿತ್ವಾಂ ಭಕ್ತ್ಯಾ - ಸರ್ವಾಲಂಕಾರಕಾರಿಣಿ - ||ಆಭರಣಾನಿ|| ಎಂದು ಹೇಳಿಯೂ ಅಕ್ಷತೆಯಲ್ಲಿಯೇ ಮುಗಿಸಿಬಿಡುತ್ತಾರೆ! ಸಂಸ್ಕೃತದಲ್ಲಿ ನೂರಾರು ಹೂವುಗಳ ಹೆಸರುಗಳನ್ನು ಹೇಳಿ ಇರುವ ಎರಡು ಹೂವಿನಲ್ಲೇ ಸವರಿಸಿಬಿಡುತ್ತಾರೆ. ದೇವರು ಕರುಣಾಮಯಿಯಷ್ಟೆ? ಕೊನೆಯಲ್ಲಿ ಇದ್ದೇ ಇದೆಯಲ್ಲ - ಅಚ್ಯುತಾನಂತ-ಗೋವಿಂದ ಜಪ - ಮಾಡಿಬಿಟ್ಟರೆ ಮುಗಿಯಿತು, ಏನೂ ಲೋಪ ಬಾರದು.ಅನೇಕ ಸಲ "ಯಾಕಾದರೂ ಈ ಪೂಜೆಯ ಮಂತ್ರಗಳು ಸಂಸ್ಕೃತದಲ್ಲಿ ಇದೆಯೋ, ಕರ್ಮ" ಎಂದೆನಿಸದೆ ಇಲ್ಲ. ಕೆಲವು ಕಡೆ ದೊಡ್ಡ ದೊಡ್ಡ ಪದಗಳ ಅರ್ಥವಾಗುವುದಿರಲಿ, ಓದುವುದಕ್ಕೂ ಬರುವುದಿಲ್ಲ. ತೊದಲಿ ತೊದಲಿ, ಮಧ್ಯೇ ಮಧ್ಯೇ "ಥೂ! ಥೂ!!" ಎಂದು ನನ್ನನ್ನು ನಾನೇ ಬೈದುಕೊಂಡು, "ಪೂಜೆ ಮಾಡುವಾಗ ಇದೇನು ಥೂ ಅಂತೀಯಾ, ಘನ ಗಾಂಭೀರ್ಯ ಇಲ್ಲ, ಥೂ!!" ಎಂದು ಹೆಂಡತಿ, ಅಮ್ಮನಿಂದ ಬಯ್ಯಿಸಿಕೊಂಡು, ತಪ್ಪೋ ನೆಪ್ಪೋ ನನಗೆ ಸರಿಯೆನ್ನಿಸಿದ ಹಾಗೆ ಪದಗಳನ್ನು ಬಿಡಿಸಿಕೊಂಡು ಓದುವುದೊಂದೇ ನನಗೆ ಉಳಿದಿದ್ದ ಮಾರ್ಗ. ಮೊದಲ ವಾರದಂದು ನಮ್ಮ ಮನೆಯಲ್ಲಿದ್ದ "ವ್ರತರತ್ನಮಾಲಾ" ಓದಿಕೊಂಡೇ ಪೂಜೆ ಮಾಡಿದ್ದು ಬಹಳ ಪ್ರಯಾಸ ಪಡುವಂತಾಗಿತ್ತು. ಯಾಕೆಂದರೆ ಆ ಪುಸ್ತಕವು ಸ್ವತಃ ವ್ಯಾಸರೇ ಬಿಡುಗಡೆ ಮಾಡಿದ್ದು ಎನ್ನುವಷ್ಟು ಹಳೆಯದು. ಪುಟಗಳು ಹರಿಯುವುದಿಲ್ಲ, ಮುರಿಯುತ್ತೆ! ಒಂದು ವಾಕ್ಯ ಓದುವಷ್ಟರಲ್ಲಿ ಎಂಟನೇ ಪುಟ ನೋಡಿ ಎನ್ನುತ್ತಾರೆ. ಎಂಟನೇ ಪುಟದಲ್ಲಿ ಮತ್ತೆ ಹತ್ತನೇ ಪುಟಕ್ಕೆ ಕೊಂಡಿ. ನನ್ನ ತಾತನ ಕಾಲದ್ದು ಆ ಪುಸ್ತಕ. ಅದೆಷ್ಟು ಪೂಜೆ, ವ್ರತಗಳಲ್ಲಿ ಭಾಗಿಯಾಗಿದೆಯೋ! ಆದರೂ ಈ ಪುಸ್ತಕದಲ್ಲಿ ಬರೀ hyperlink ರೀತಿ ಈ ಪುಟದಿಂದ ಆ ಪುಟಕ್ಕೆ, ಅಲ್ಲಿಂದ ಇಲ್ಲಿಗೆ ಕೊಂಡಿಗಳಿರುವುದು ನನಗೆ ಕೊಂಚವೂ ಸರಿ ಬರಲಿಲ್ಲ. ಅದೂ ಅಲ್ಲದೆ, ’ಮುರುಕಲು’ ಪುಟಗಳು ಬೇರೆ! ಆ ಪುಸ್ತಕವು antique piece ರೀತಿ ಇದ್ದು, ಅದಕ್ಕೆ ನಿವೃತ್ತಿಯನ್ನು ಕೊಡುವುದು ಒಳಿತೆಂದು ನಿರ್ಧರಿಸಿ ಅಮ್ಮ ಹೊಸ "ವ್ರತರತ್ನ"ವನ್ನು ತಂದರು. ಜೊತೆಗೆ ಮಂಗಳಗೌರೀ ವ್ರತದ್ದೇ ಪುಟ್ಟ ಪುಸ್ತಕವನ್ನೂ ತಂದರು. ನನಗೆ ಉಸುರು ಬಿಡುವಷ್ಟು ನಿರಾಳವಾಯಿತು.

ಹಬ್ಬಗಳಲ್ಲೆಲ್ಲಾ ನನಗೆ ಬಹಳ ಇಷ್ಟವಾಗುವುದು ವ್ರತಕಥೆಯನ್ನು ಓದುವ ಸಮಯದಲ್ಲಿ. ಮಂಗಳಗೌರೀ ವ್ರತಕಥೆಯನ್ನು ಇಲ್ಲಿ ಹೇಳುವುದಿಲ್ಲ. ಆದರೂ ಪೂಜೆ ಮಾಡಿ ದಣಿದಿರುತ್ತೀರಿ, ಒಂದು ಮನರಂಜನಾ ಕಥೆಯನ್ನು ಕೇಳಿ ಎನ್ನುವಂತಿರುತ್ತೆ ವ್ರತಕಥೆಗಳು. ನನಗೆ ಚಂದಮಾಮ, ಬಾಲಮಿತ್ರವನ್ನೆಲ್ಲ ನೆನಪು ಮಾಡಿಕೊಡುತ್ತೆ. ಮಂಗಳಗೌರೀ ವ್ರತದಲ್ಲಿ ಗೊತ್ತಿರುವ ಕಥೆಯನ್ನೇ ಪ್ರತೀ ವಾರವೂ ಓದಬೇಕೆಂಬುದು ಸ್ವಲ್ಪ ಬೋರು ಹೊಡೆಸುವ ವಿಚಾರ. ವಾರವಾರಕ್ಕೂ ಬೇರೆ ಬೇರೆ ಕಥೆಗಳಾದರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ ಎನ್ನಿಸುತ್ತೆ.ನಂತರದ ವಾರಗಳ ಪೂಜೆಗಳು ಸಾಂಗವಾಗಿ ನಡೆದವು. ಒಂದು ವಾರದಲ್ಲಿ ಅಜ್ಜಿ ಅತಿಥಿಯಾಗಿದ್ದರು. ಅವರ ಹಾಡು ಪೂಜೆಗೆ ಮತ್ತಷ್ಟು ಬೆರಗು ನೀಡಿತ್ತು. ನೂರನ್ನೂ ದಾಟಿದ ಹಿರಿಯರೊಬ್ಬರು ಮನೆಯ ಶುಭಕಾರ್ಯದಲ್ಲಿ ಪಾಲ್ಗೊಳ್ಳುವುದೇ ಸಂತಸದ ಸಂಗತಿಯಲ್ಲವೆ? ಇನ್ನೊಂದು ವಾರದಲ್ಲಿ ಅತ್ತೆ ಮಾವಂದಿರಿಬ್ಬರೂ ನಮ್ಮ ಜೊತೆಗೂಡಿದ್ದರು. ಅಮ್ಮನಂತೂ ಪ್ರತಿವಾರವೂ ಸಂತೋಷದಿಂದಲೇ, "ನನ್ನ ಮಗ ಅಂತೂ ಪಂಚೆ ಉಟ್ಟುಕೊಂಡು ’ದೇವರ’ ಮುಂದೆ ಕುಳಿತುಕೊಳ್ಳುತ್ತಿದ್ದಾನೆ" ಎಂದು ಪೂಜೆಗೆ ಬೇಕಾದ ಸರ್ವ ಸಿದ್ಧತೆಯನ್ನು ಮಾಡುತ್ತಿದ್ದರು. ಇನ್ನು ನನ್ನ ಮಡದಿಯೋ ಕೋಳೂರ ಕೊಡಗೂಸು! ಶಾರದಾ ಅತ್ತೆಯೂ ಒಮ್ಮೆ ಗೌರವಾಧ್ಯಕ್ಷತೆಯನ್ನು ವಹಿಸಿದ್ದರು, ಹಿರಿಯರ ಆಶೀರ್ವಾದ! ವಿಜಯಾ ಇರದೆ ಹಬ್ಬಕ್ಕೆ ಕಳೆಯೆಲ್ಲಿಯದು? ಹಬ್ಬವನ್ನು ರಂಗಾಗಿಸಿದಳು! ನಾಲ್ಕು ವಾರಗಳ ಮಂಗಳಗೌರೀ ವ್ರತದ ನಡುವೆ ಬಂದಿದ್ದ ನಾಗರ ಪಂಚಮಿ ಮತ್ತು ಭೀಮೇಶ್ವರ ಅಮಾವಾಸ್ಯೆಗೂ ನಾನೇ ಪುರೋಹಿತನೆಂಬುದು ನನ್ನ ಪೌರೋಹಿತ್ಯ ರೆಸ್ಯೂಮೆಗೆ ಅನುಭವದ ಕಾಲಮ್ಮನ್ನು ಭರ‍್ತಿ ಮಾಡುತ್ತೆ. ಈ ಎರಡು ಹಬ್ಬಗಳನ್ನು ಮತ್ತಷ್ಟು ಬೆರಗುಗೊಳಿಸಿದವರು ಪಾಲ್ಗೊಂಡಿದ್ದ ಪ್ರಸಾದಿ, ಶ್ರೀನಿಧಿ ಮತ್ತು ಪವನ. ಇನ್ನು ಉಳಿದಿರುವವನು ನಾನೊಬ್ಬನೇ! ಎಲ್ಲರದೂ ಒಂದು ದಾರಿಯೆಂದರೆ ಅಡ್ಡಕಸುಬಿದೇ ಒಂದು ದಾರಿಯಂತೆ!! ದಾರಿ ಯಾವುದಾದರೇನು?


ತಿಳಿಯದೆ "ದೀಪಂ" ಎಂದು ಹೇಳುವಾಗ ನೀರಾಜನವನ್ನು ಮಾಡಿಸಿರುವುದು, "ನೀರಾಜನಂ" ಎನ್ನುವಾಗ ನೈವೇದ್ಯವನ್ನು ಮಾಡಿಸಿರುವುದು, ’ವಾತಾಜವೈರ್ಬಲವರ‍್ಬಿರ‍್ಮನೋಜವೈರಾಯಾಹಿಶೀಘ್ರಂ’ ಎಂಬ ಪದವನ್ನು ಓದಲು ಶತಾಯಗತಾಯ ಬರದೇ ಇರುವುದು - ಎಲ್ಲವೂ ನಡೆಯಿತು. ಆದರೇನು? ’ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನ’ ಎಂದು ಮಂಗಳಗೌರೀ ಪೂಜೆಯ ಸಮಯದಲ್ಲೂ ಜನಾರ್ದನನ ಕ್ಷಮಾಪಣೆಯನ್ನು ಕೇಳಿದ್ದೂ ಆಯಿತು. ಯಾರೋ ಮೂರನೇ ಪುರೋಹಿತರು ದುಡ್ಡು ಕಾಸು ಎಲೆ ಅಡಿಕೆ ಹಣ್ಣು ಪಂಚೆಗಳನ್ನು ದೋಚುವುದನ್ನು ಕೂಡ ತಪ್ಪಿಸಿ, ನಾನೇ ಅಷ್ಟನ್ನೂ ದೋಚಿಕೊಂಡೆ - ನಮ್ಮ ಮನೆಯಲ್ಲೇ! ಇನ್ನು ಮುಂದಿನ ವರ್ಷದ ಹೊತ್ತಿಗೆ ಆ ದೊಡ್ಡ ಪದವನ್ನು ಉಚ್ಚರಿಸುವ ಬಗೆಯನ್ನು ಕಂಡುಕೊಳ್ಳಬೇಕು - beg, borrow or steal ತಂತ್ರದಿಂದ.

ಈ ವಾರ ಮತ್ತೆ ಗೌರೀ ಪೂಜೆ. ಬೇರೆ version of Gowri. ಈ ಸಲ ಮಂಗಳಗೌರೀಯಲ್ಲ, ಸ್ವರ್ಣಗೌರೀ!

-ಅ
18.08.2009
9.45PM

Friday, August 14, 2009

ಸೋತೆನು

ಹೃದಯವೊಂದು
ಗೀತೆಯಿಂದು
ನೋವೆ ಅದರ ರಾಗವು.
ಇದುವೆ ಹಾಡು
ನಿನಗೆ ಎಂದು
ನೀನೆ ಇದಕೆ ನಾದವು.

ಬದುಕು ಹೀಗೆ
ಬೆಳೆದು ನಿಂತು
ನಗುತಲಿಹುದೆ ಅಂದವು
ನಗುವಿಗಳುವೆ
ಸ್ಫೂರ್ತಿ ಕೇಳು
ಪ್ರೀತಿಯಗ್ನಿಕುಂಡವು.

ಸಾಟಿ ಸರಿಯು
ಪ್ರೀತಿಗಿರದು
ನನ್ನ ಎದೆಯೊಳೆಂಬೆನು.
ಜಗದ ಎದುರು
ಜಯವ ಗಳಿಸಿ
ನಿನ್ನ ಮುಂದೆ ಸೋತೆನು!

-ಅ
13.08.2009
2PM

Wednesday, August 12, 2009

ವಿಂಡೋಸ್ ಸೆವೆನ್

ಒಂದು ವರ್ಷಕ್ಕೂ ಹಿಂದೆ ಪ್ರಿಸಾರಿಯೋ ನನ್ನ ಕೈಗೆ ಬಂದ ಹೊಸತರಲ್ಲಿ ಏನೇನು ಸರ್ಕಸ್ ಮಾಡಿದ್ದೆನೋ ಅದನ್ನು ಮೀರಿಸಿದ ಪಾಡನ್ನು ಈಗ ಮತ್ತೆ ಪಟ್ಟೆ.

ಭಗವದ್ಕೃಪೆಯಿಂದ ನನ್ನ ಪ್ರಿಸಾರಿಯೋ ವೈರಸ್ ಪೀಡಿತವಾಯಿತು. ದೇಶದಲ್ಲೆಲ್ಲೆಡೆ H1N1 ಇಲ್ಲವೆ? ಅದರ ಪ್ರಭಾವವೋ ಏನೋ. ಈ ವೈರಸ್ಗರಳಿಗೆ ಮರ್ಯಾದೆಯೇ ಇರುವುದಿಲ್ಲ. ಕಾಯಿಲೆಗಾದರೋ ಹೋಮಿಯೋಪತಿ, ಆಲೋಪತಿ, ನ್ಯಾಚುರೋಪತಿ, ವೆಂಕಟಾಚಲಪತಿ - ಮುಂತಾದ ಚಿಕಿತ್ಸಾಕ್ರಮಗಳೇನೋ ಇವೆ. ಆದರೆ ಇಲ್ಲೋ, ಇರುವ ಆಂಟಿವೈರಸ್ ಮೊರೆ ಹೋಗುವುದೊಂದೇ ಮಾರ್ಗ.

ಅಂತೂ ನನ್ನ ಪ್ರಿಸಾರಿಯೋ ವೈರಸ್ಗೆಾ ಗುರಿಯಾಗಿ, ನರಳಿ ನರಳಿ, ರಕ್ತಕಾರಿ ಅಸುನೀಗಿ, ಈಗ ಪುನರ್ಜನ್ಮ ತಾಳಿದೆ. ಕುಬೇರಾಂಶದಲ್ಲಿ ತೀರಿಕೊಂಡಿತೇನೋ, ಒಳ್ಳೆಯ ಭಾಗ್ಯದಲ್ಲೇ ಒಳ್ಳೆಯ ದಶೆ-ಭುಕ್ತಿಯಲ್ಲೇ ಹೊಸ ಜನ್ಮ ಸಿಕ್ಕಿದೆ. ನೋಡೋಣ, ಮುಂದೇನಾಗುತ್ತೋ ಎಂದು.

ಈ ಜನ್ಮ ಸಿಗಲು ಪಾಪ, ತುಂಬ ಕಷ್ಟ ಪಟ್ಟಿರುವುದಂತೂ ನಿಜ. ಯಾವಾಗ ಕಾಯಿಲೆ ಬಂತೋ ತೀವ್ರ ಅಸ್ವಸ್ಥವಾಗಿಬಿಟ್ಟಿತು ಪ್ರಿಸಾರಿಯೋ. ಹೇಳಿಕೊಳ್ಳಲು ಗೊತ್ತಾಗುತ್ತಿಲ್ಲ. LAN connection ಅಲ್ಲಿ 10MBPS ಅಲ್ಲಿ connect ಆಗುತ್ತೆ, 100MBPS ಅಲ್ಲಿ ಆಗುವುದಿಲ್ಲ, ಪ್ರತಿ ಸಲ restart ಆದಾಗಲೂ LAN settings ಬದಲಾಯಿಸಬೇಕು. ಸುಮ್ಮಸುಮ್ಮನೆ restart ಆಗೋದು. ನರಸಿಂಹ ಯುದ್ಧಂ ನೋಡಬೇಕೆಂದರೆ ನರಸಿಂಹನ ಅವತಾರವೇ ಎತ್ತಿದಂತಾಗುವುದು. "ಓಹೋ, ಕೊನೆಗಾಲ ಬಂದಿದೆ, ಇದಕ್ಕೆ ಗಂಗೋದಕ ಬಿಡುವುದೇ ಸರಿ" ಎಂದು ಅರ್ಥವಾಯಿತು.

ಆದರೆ ಅಷ್ಟು ಧೈರ್ಯವಿಲ್ಲ. ಇನ್ನೊಂದು ಡ್ರೈವ್ನyಲ್ಲಿ ಹೊಸ ಡಿಜಿಟಲ್ ಕ್ಯಾಮೆರಾದಲ್ಲಿ ತೆಗೆದ ಚಿತ್ರಗಳು ವಿಡಿಯೋಗಳೆಲ್ಲ ಇವೆ. ಅವನ್ನು backup ತೆಗೆದುಕೊಳ್ಳಲು ಹೊರಟೆ. ಕಾಯಿಲೆ ಅದಕ್ಕೂ ತಗುಲಿಬಿಟ್ಟಿತ್ತು. ಏನೇನೂ ಕಾಪಿ ಆಗಲಿಲ್ಲ. ಖಿನ್ನತೆಯ ಹಾದಿಯಲ್ಲಿ ಚಲಿಸಬೇಕಾಗಿ ಬರುವುದೇನೋ ಎಂದು ಭಯಪಟ್ಟೆ.

ಪ್ರಸಾದಿ ಕೃಪೆಯಿಂದ Windows XP Dark Edition ಸಿ.ಡಿ. ದೊರಕಿತು. "Dark Edition ಎಂದರೆ ಸಾಮಾನ್ಯವಲ್ಲ, Vista ಥರಾನೇ" ಎಂದು ಬೇರೆ ಹೇಳಿದ. ವಿಸ್ಟಾ ಬಗ್ಗೆ ಮೊದಲಿನಿಂದಲೂ ಗೊತ್ತಿಲ್ಲದ ಹಗೆ. ಇನ್ನು ಅದೇ ರೀತಿಯ ಎಕ್ಸ್.ಪಿ. ಹೇಗಿರುತ್ತೋ ಎಂಬ ಆತಂಕದಲ್ಲೇ ಆ ಸಿ.ಡಿ.ಯನ್ನು ಪ್ರಯತ್ನಿಸಿದರೆ, ಅದರಿಂದ boot ಆಗಲೇ ಇಲ್ಲ. ಇನ್ನೇನು ಮಾಡುವುದು? ಹಳೇ ಗಂಡನ ಪಾದವೇ ಗತಿ ಎನ್ನುವಂತೆ ಇದ್ದಿದ್ದ XP ನೇ install ಮಾಡುವುದು! ಸರಿ, ಆ ಕೆಲಸ ಅಷ್ಟು ಸುಲಭವೇ? ಬೇರೆ ಯಾವ ಕಂಪ್ಯೂಟರ್ ಆದರೂ ಸಲೀಸಾಗಿ ವಿಂಡೋಸ್ ಎಕ್ಸ್.ಪಿ.ಗೆ ಸ್ವಾಗತ ಮಾಡಬಹುದು, ಆದರೆ ಇದು ಪ್ರಿಸಾರಿಯೋ. ನನ್ನ ಪ್ರಿಸಾರಿಯೋ. ಹಿಂದೆ ವಿಂಡೋಸ್ ಬೇಡವೆಂದು ಹೇಳಿ, ತಿರಸ್ಕರಿಸಿ ಉಬುಂಟು ಹಾಕಿದ್ದರ ದ್ವೇಷೇನೋ! ವೃತ್ತಿ ಮಾತ್ಸರ್ಯ.

BIOS ಅಲ್ಲಿ ಬೇಡದ ಸೆಟ್ಟಿಂಗ್ ಎಲ್ಲ ಪರಿಶೀಲಿಸುವಂತೆ ಆದೇಶಿಸಿತು. Hard disk ನೇ ಅಪರಿಚಿತ ಎಂದುಬಿಟ್ಟಿತು!! ಇನ್ನೇನು ಮಾಡುವುದು, ಹ್ಯಾಪ್ ಮೋರೆ ಹಾಕಿಕೊಳ್ಳುವುದನ್ನು ಬಿಟ್ಟರೆ! ತಲೆ ಮೇಲೆ ಕೈ ಹೊತ್ತು ಕುಳಿತಿರುವಾಗ, ಏನೋ ಕೃಪೆ ತೋರಿದಂತೆ ಪ್ರಿಸಾರಿಯೋ ಯಾವುದೋ ಬೇರೆ ಸಿ.ಡಿ.ಯೊಂದಿಗೆ ಕೆಲಸ ಮಾಡಿತು. XP ಹಾಕಿದೆ. ಆದರೆ ಎಲ್ಲ data ನೂ ಕಳೆದುಕೊಂಡೆ! ನಮ್ಮ ಹನಿಮೂನಿನ ಫೋಟೋಗಳು, ಚಾರಣದ ಚಿತ್ರಗಳು, ಅಜ್ಜಿ ಹಾಡಿದ್ದ ವಿಡಿಯೋಗಳು - ಎಲ್ಲವೂ ಅವಸಾನವಾದುವು. ಮತ್ತೆ ಹ್ಯಾಪ್ ಮೋರೆ.

ಎಕ್ಸ್.ಪಿ.ಯನ್ನು ಶಪಿಸತೊಡಗಿದೆ. ಎತ್ತಿಗೆ H1N1 ಬಂದ್ರೆ ಎಮ್ಮೆಗೆ Penicillin ಕೊಡಿಸಿದಂತೆ! ಈ XPಗೆ ಪ್ರಿಸಾರಿಯೋದಲ್ಲಿ ಯಾವ ಸೂಕ್ಷ್ಮ ಡ್ರೈವರುಗಳೂ ಇಲ್ಲವೆಂದು ಕಳೆದ ವರ್ಷವೇ ಪ್ರಿಸಾರಿಯೋ ಸರ್ಕಸ್ಸಿನಲ್ಲಿ ಹೇಳಿದೆನಷ್ಟೆ? ಆದರೆ, ಯಾವುದೋ ಬ್ಲಾಗಿನಲ್ಲಿ ದೊರೆತ ಲಿಂಕುಗಳನ್ನು ಉಳಿಸಿಕೊಂಡಿದ್ದಾದ್ದರಿಂದ ಅದರ ಡ್ರೈವರುಗಳನ್ನೆಲ್ಲ ಮತ್ತೆ ಡೌನ್ಲೋಡ್ ಮಾಡಿದೆ. ನನ್ನ ಕರ್ಮಕ್ಕೆ sound ಡ್ರೈವರುಗಳನ್ನು ಅಲ್ಲಿಂದ ತೆಗೆದು ಹಾಕಿಬಿಟ್ಟಿದ್ದರು. ಮತ್ತೆ ಮೂಕ ಸಿಸ್ಟಮ್ಮು! ಒಂದು ವಾರ ಕಂಪ್ಯೂಟರಿಗೆ ಮಾತಿಲ್ಲ ಕತೆಯಿಲ್ಲ. ಬರೀ ದೃಶ್ಯ. ನರಸಿಂಹ ಯುದ್ಧಂ ಕೂಡ ನೋಡಿಲ್ಲ ಇನ್ನು!

ಪ್ರಸಾದಿಯ ದೆಸೆಯಿಂದ ಆಗಲೇ ನನಗೆ ವಿಂಡೋಸ್ ಸೆವೆನ್ ಬಗ್ಗೆ ಮಾಹಿತಿ ದೊರಕಿತ್ತು. ಆದರೆ ಅವನು ಡೌನ್ಲೋಡ್ ಮಾಡಿಕೊಡುತ್ತೇನೆಂದಿದ್ದ. ಕೆಲಸದ ಒತ್ತಡದಿಂದ ಅವನಿಗೆ ಪುರುಸೊತ್ತಾಗಲಿಲ್ಲ. ನನ್ನ ಪುಣ್ಯ, ನನಗೆ ಅಮರ, ಹರ್ಷರಂತಹ ಮಿತ್ರರು ಕಂಪ್ಯೂಟರಿನ ಬಗ್ಗೆ ಹಲವಾರು ಪಾಠಗಳನ್ನು ಹೇಳಿಕೊಡುತ್ತಾರೆ. ಕೊನೆಗೆ ಹರ್ಷನ ಮನೆಯಿಂದ ವಿಂಡೋಸ್ ಸೆವೆನ್ ಸಿಸ್ಟಮಿನ ISO file ತೆಗೆದುಕೊಂಡು ಬಂದು, ಅದನ್ನು ಹೇಗೆ DVD ಗೆ ಬರೆಯಬೇಕೆಂದು ತಿಳಿಯದೆ, ಒದ್ದಾಡಿ, ಮೂರು ತಾಸುಗಳಷ್ಟು ಕಷ್ಟ ಪಟ್ಟ ನಂತರ ಗೊತ್ತಾಯಿತು. ಈಗ ನನ್ನ ಪ್ರಿಸಾರಿಯೋಗೆ ಹೊಸ ಜನ್ಮ ಸಿಕ್ಕಿದೆ. ವಿಂಡೋಸ್ ಸೆವೆನ್ ಧರಿಸಿಕೊಂಡು ರಾರಾಜಿಸುತ್ತಿದೆ.

ವಿಂಡೋಸ್ 95 ಬಿಟ್ಟರೆ, ಬಹುಶಃ ಇದೇ ಅನ್ನಿಸುತ್ತೆ ಚೆನ್ನಾಗಿರುವುದು, fast ಆಗಿರುವುದು. ನೋಡೋಣ, ಈ ಜನ್ಮದಲ್ಲಿ ಏನೇನು ಆಗುತ್ತೋ ಪ್ರಿಸಾರಿಯೋಗೆ ಅಂತ.

-ಅ
12.08.2009
4PM

Sunday, August 9, 2009

ವಯಸ್ಸು

"ಚಿಕ್ಕಿ, ಈಗ ನಿನ್ನ ವಯಸ್ಸೆಷ್ಟು?"
"ಗೊತ್ತಿಲ್ಲ.
ಐನೋರು ಹೊಲಕ್ಕೆ ಹೋಗುತ್ತಿದ್ದ ಕಾಲ
ಅಂತೆ - ಆಗೆನಗಿನ್ನೂ ಐದು!
ಇಲ್ಲೇ ಸಮಯವ ತಳ್ಳಿರುವೆ ನಾನು
ಇಲ್ಲೆ - ನಿಮ್ಮ ಮನೆಯೊಳಗೆ ಗೇಯ್ದು!"

"ಅಪ್ಪ, ಈಗ ಚಿಕ್ಕಿಯ ವಯಸ್ಸೆಷ್ಟು?"
"ಐನೋರೆಂದರೆ ನಮ್ಮಪ್ಪ.
ಹೊಲಕ್ಕೆ ಹೋಗುತ್ತಿದ್ದಾಗ ಅವರಿಗಿಪ್ಪತ್ತು!
ಸತ್ತಾಯ್ತಾಗಲೆ ಇಪ್ಪತ್ತು; ಸತ್ತಾಗಾಗಿತ್ತು ತೊಂಭತ್ತು!
ಭೇಷ್!
ತನ್ನ ಗಂಡನು ಹೋಗಿ ನಲವತ್ತಾದರೂ,
ಈ ವಯಸ್ಸಿನಲ್ಲೂ ಚಿಕ್ಕಿಯ ಉತ್ಸಾಹ,
ಬಾಳಿ ಬದುಕಬೇಕೆಂಬ ಸಾತ್ವಿಕ ದಾಹ!
ಅಜ್ಜಿಯಂತೆ ಜಗದೊಂದಿಗೆ ಈಕೆಯ ನೇಹ."

"ಅಜ್ಜಿ, ಈಗ ನಿನ್ನ ವಯಸ್ಸೆಷ್ಟು?"
"ಗೊತ್ತಿಲ್ಲ.
ಮದುವೆಯ ದಿನಕೆ ನನಗೆ ಎಂಟು,
ಇನ್ನೂ ಚಿಕ್ಕವಳಾಗ!
ಹನ್ನೆರಡಕ್ಕೆ ಮೈದಂಟು,
ನಾ ದೊಡ್ಡವಳಾದಾಗ!
ಹದಿನೈದಕ್ಕೆ ಮೊದಲ ಮಗು!
ಆಗಲೆ ಹುಟ್ಟಿತು ಬದುಕ ನಗು.
ಅವಳೇ ನಿನ್ನತ್ತೆ."

"ಅತ್ತೆ, ಈಗ ನಿನ್ನ ವಯಸ್ಸೆಷ್ಟು?"
"ನನಗೀಗೆಂಭತ್ತೈದು!"

-ಅ
04.08.2009
1.20PM

Monday, August 3, 2009

ಪ್ರಣತಿಯಿಂದ ಮತ್ತೆರಡು ಪುಸ್ತಕಗಳ ಬಿಡುಗಡೆ

ಶಬರಿಗೆ ದಾಶರಥಿಯು ಅತಿಥಿಯಾಗಿ ಬಂದದ್ದು ಆಯಿತಷ್ಟೆ? ಅದರ ಚಿತ್ರಗಳನ್ನು ಸುಶ್ರುತ ಪ್ರಕಟಿಸಿದ್ದಾನೆ. ಸುಮಧುರವಾಗಿಯೂ, ಸುಲಲಿತವಾಗಿಯೂ ಇದ್ದ ಕಾರ್ಯಕ್ರಮವು ನಮ್ಮ ಪ್ರಣತಿಯಿಂದ ಆಯೋಜಿಸಲ್ಪಟ್ಟಿತ್ತೆಂಬುದೇ ಖುಷಿಯ ವಿಷಯ.

ರಾಮನಿಗಾಗಿ ಶಬರಿಯು ಕಾದಂತೆಯೇ ನಾವುಗಳೆಲ್ಲರೂ ನಮ್ಮ ಮುಂದಿನ ಪುಸ್ತಕಗಳ ಬಿಡುಗಡೆಗೆ ಕಾದಿರುವುದು ಅಕ್ಷರಶಃ ಸತ್ಯ. ಹೇಗೆ ಕಾದೆವೆಂಬ ಕಥೆಯನ್ನು ಸುಚಿತ್ರಾದಲ್ಲಿ ಕೇಳಬಹುದು! ಅಂತೂ ಅನೇಕ ದಿನಗಳ ನಂತರ ವಿಘ್ನಗಳನ್ನೆಲ್ಲ ಮೆಟ್ಟಿ ನಾಳೆ ಭಾನುವಾರ ಸುಚಿತ್ರಾದಲ್ಲಿ ಶ್ರೀನಿಧಿ ಮತ್ತು ಸುಶ್ರುತರ ಬಿಡುಗಡೆ.... ಅಲ್ಲಲ್ಲ.... ಅವರ ಪುಸ್ತಕಗಳ ಬಿಡುಗಡೆಯನ್ನು ನಾವು, ಎಂದರೆ ’ಪ್ರಣತಿ’ಯು ಮಾಡಲಿದೆ.

ಬ್ಲಾಗಿಗರಿಗೆ ಶ್ರೀನಿಧಿ ಮತ್ತು ಸುಶ್ರುತ ಗೊತ್ತಿರುವ ಕಾಲು ಪಾಲೂ ಸಹ ನಾನು ಗೊತ್ತಿರಲಾರೆನೆಂದು ಘೋಷಿಸಬಲ್ಲೆ. ಆದರೂ ನನ್ನ ಪರವಾಗಿ ಓದುಗ ಮಿತ್ರರನ್ನೆಲ್ಲರನ್ನೂ ನಾನು ಕರೆಯುತ್ತಿದ್ದೇನೆ.

ಬನ್ನಿ.-ಅ
03.08.2009
9PM

Thursday, July 23, 2009

ವಿಶೇಷತ್ರಯ ಮತ್ತು ಗ್ರಹಣ

ಮೈಕಲ್ ಜಾಕ್ಸನ್ ಸಂಗೀತವನ್ನು ನಾನು ಹೆಚ್ಚಾಗಿ ಕೇಳೇ ಇಲ್ಲ. ನಾನು ಎರಡನೆಯ ತರಗತಿಯಲ್ಲಿದ್ದಾಗ ಜಯಮ್ಮ ಮಿಸ್ ಮಗಳು ನಮ್ಮ ಸ್ಕೂಲ್ ಡೇ‍ ಸಲುವಾಗಿ ಜಾಕ್ಸನನ ಒಂದು ಹಾಡಿಗೆ ನೃತ್ಯ ಹೇಳಿಕೊಟ್ಟಿದ್ದರು, ಅಷ್ಟು ನೆನಪಿದೆಯಷ್ಟೆ, ಆ ಹಾಡೂ ಸಹ ಯಾವುದೆಂದು ಗೊತ್ತಿಲ್ಲ. ಆತ ಸತ್ತಾಗ ಮಾಧ್ಯಮದಲ್ಲಿ - ವಿಶೇಷವಾಗಿ ಟಿ.ವಿ.ಯಲ್ಲಿ - ಎಲ್ಲಿ ನೋಡಿದರಲ್ಲಿ ಕಾಣಿಸಿಕೊಂಡ ಜಾಕ್ಸನನು what a great figure he "was"! ಎಂಬ ಭಾವನೆಯನ್ನುಂಟು ಮಾಡಿದ.ವಿದುಷಿ ಗಂಗೂಬಾಯಿ ಹಾನಗಲ್ಲರ ಸಂಗೀತವನ್ನೂ ನಾನು ಹೆಚ್ಚಾಗಿ ಕೇಳಿಲ್ಲ. ಮೊನ್ನೆ ಅವರ ನಿಧನದ ದಿನವೇ ಚಂದನದಲ್ಲಿ ಪ್ರಸಾರವಾದ ಕಾರ್ಯಕ್ರಮವನ್ನು ನೋಡಿದೆನಷ್ಟೆ. ಹಿಂದೂಸ್ಥಾನಿ ಸಂಗೀತ ಅಷ್ಟಾಗಿ ತಲೆಯೊಳಗೆ ಹೋಗುವುದಿಲ್ಲ. ಕೆ.ಎಲ್.ಸೈಗಲ್ಲನು ತನ್ನ ಚಲನಚಿತ್ರಗಳಲ್ಲಿ ಹಾಡಿರುವ ಹಾಡುಗಳನ್ನು ಕೇಳಿ ಅರ್ಥ ಮಾಡಿಕೊಳ್ಳುವುದು ಎಷ್ಟು ಕಷ್ಟವೋ ಅದಕ್ಕಿಂತಲೂ ಕಷ್ಟ ನನಗೆ ಹಿಂದೂಸ್ಥಾನಿ ಸಂಗೀತವನ್ನು ಜೀರ್ಣಿಸಿಕೊಳ್ಳಲು.

ಪಂ.ಭೀಮಸೇನ ಜೋಷಿಯವರ ಹಿಂದೂಸ್ಥಾನಿ ಶೈಲಿಯ ದೇವರನಾಮಗಳು ಇಷ್ಟವಾಗುತ್ತೇ ಹೊರೆತು, ಅವರು ಸಂಪೂರ್ಣ ಶಾಸ್ತ್ರೀಯ ಸಂಗೀತ ಕಚೇರಿ ಮಾಡಿದರೆಂದರೆ ಕಿವಿಯೊಳಗಿಂದ ಮಿದುಳಿನವರೆಗೂ ಹೋಗುವುದೇ ಇಲ್ಲ. ಹರಿಪ್ರಸಾದ್ ಚೌರಾಸಿಯಾ ಅವರ ಬಾನ್ಸುರಿ, ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ ಮಾತ್ರ ಯಾವುದೋ ಗಂಧರ್ವ ಲೋಕಕ್ಕೆ ಕರೆದೊಯ್ಯುವುದಂತೂ ಸತ್ಯ. ಹಿಂದೂಸ್ಥಾನಿ ಹಾಡುಗಾರಿಕೆಯು ಯಾಕೆ ಈ ಪ್ರಭಾವವನ್ನು ನನ್ನ ಮೇಲೆ ಇನ್ನೂ ಬೀರಿಲ್ಲವೋ ಇನ್ನೂ ಗೊತ್ತಿಲ್ಲ.

ಆದರೂ ಮೊನ್ನೆ ಚಂದನದಲ್ಲಿ ಪ್ರಸಾರವಾದಾಗ ಗಂಗೂಬಾಯಿ ಹಾನಗಲ್ಲರು ನಮ್ಮವರೇ ಎಂಬ ಕಾರಣದಿಂದಲೋ, ಹೆಮ್ಮೆ ಪಟ್ಟುಕೊಳ್ಳುತ್ತ ಕಾರ್ಯಕ್ರಮವನ್ನು ನೋಡಿದೆ. ಸಂಗೀತವು ನಿರೀಕ್ಷಣೆಯನ್ನು ಮೀರಿಯೇ ಇಷ್ಟವಾಯಿತು. What a great singer she "IS"! ಎನ್ನಿಸಿತು!ಇದೇ ವಾರದಲ್ಲಿ ವಿದುಷಿ ಡಿ.ಕೆ.ಪಟ್ಟಮ್ಮಾಳ್ ಕೂಡ ನಿಧನ ಹೊಂದಿದ ಸುದ್ದಿಯನ್ನು ಕೇಳಿ ಬೇಸರವಾಯಿತು. ಪಟ್ಟಮ್ಮಾಳ್ ಸಂಗೀತವನ್ನು ಸಾಕಷ್ಟು ಕೇಳಿದ್ದೇನೆ. ಕೇಳಿ ಸವಿದಿದ್ದೇನೆ. ಸವಿದು ನಲಿದಿದ್ದೇನೆ. ವಯಸ್ಸಾದ ನಂತರದ ಗಂಗೂಬಾಯಿ ಹಾನಗಲ್ಲರಂತೆಯೇ ಪಟ್ಟಮ್ಮಾಳ್ ಅವರ ಧ್ವನಿಯೂ ಸಹ ಸ್ವಲ್ಪ ಗಡುಸಾಗಿಯೇ ಇತ್ತು. ಗಂಡಸು ಧ್ವನಿಯಂತೆಯೇ ಎಂದರೂ ತಪ್ಪಾಗುವುದಿಲ್ಲ.ಅವರ ಸೋದರ ಡಿ.ಕೆ.ಜಯರಾಮನ್ ಅವರದು ಇದರ ತದ್ವಿರುದ್ಧ. ಮೃದುವಾದ ಕಂಠ. ಇವರಿಬ್ಬರೂ ಕಚೇರಿಯನ್ನು ಯುಗಳವಾಗಿ ಮಾಡುತ್ತಿದ್ದರಂತೆ! ಪತ್ರಿಕೆಗಳಲ್ಲಿ ಪಟ್ಟಮ್ಮಾಳ್ ಅವರ ಭೈರವಿ ರಾಗದ ಪ್ರಚಾರದ ಬಗ್ಗೆ ಏನೇ ಓದಿದರೂ ನನಗೆ ಅವರ ಖರಹರಪ್ರಿಯವೇ ಪ್ರಿಯವಾದದ್ದು. "ಚಕ್ಕನಿ ರಾಜ...." ಎಂದು ಪಟ್ಟಮ್ಮಾಳ್ ಹಾಡುವಾಗ ವಿದ್ವಾನ್ ಶ್ರೀ ಶೆಮ್ಮಂಗುಡಿಯವರಷ್ಟೇ ಗತ್ತು ಕೇಳಿಬರುವುದಂತೂ ದಿಟ. What a great musician she was, she is, and she will be! ಎಂದು ಎನ್ನಿಸುತ್ತಲೇ ಇರುತ್ತೆ. ಈಗಲೂ ಚಕ್ಕನಿ ರಾಜವನ್ನೇ ಕೇಳುತ್ತಿದ್ದೇನೆ.ಈ ಮೂರೂ ಸಾವಿಗೆ ಮೊನ್ನೆ ಕನ್ನಡ ಚಾನೆಲ್ಲೊಂದರಲ್ಲಿ ಗಡ್ಡದ ಜ್ಯೋತಿಷಿಯೊಬ್ಬರು ಗ್ರಹಣದ ಕಾರಣ ಕೊಟ್ಟು ತಾವು ಎಷ್ಟು ಅವೈಜ್ಞಾನಿಕರೆಂದು ಹೇಳಿಕೊಂಡರು.

ಮೂರೂ ಮಹನೀಯರು ಕೇಳುಗ ರಸಿಕರಿಗೆ, ಕಲಿಯುವವರಿಗೆ, ಸಾಧಿಸುವವರಿಗೆ, ಬದುಕುವವರಿಗೆ ಸಾಕಷ್ಟು ಕೊಟ್ಟು ಹೋಗಿದ್ದಾರೆ. ಇವರ ಹೆಸರುಗಳು ಚಿರವಾಗುವುದರಲ್ಲಿ ಸಂಶಯವಿಲ್ಲ. ಇಂತಹ ಸಾಧಕರು ಹೆಚ್ಚು ಹೆಚ್ಚು ಹುಟ್ಟಿ ಬರಲಿ.

-ಅ
23.07.2009
10PM

Saturday, July 18, 2009

ಸತ್ಯಾಗ್ರಹ ಮುಗಿಯಿತು

"ಈ ಮನೆಯಲ್ಲೇನೋ ಋಣವಿದೆ" ಎಂದು ನನಗೆ ಬಲವಾಗಿ ಅನ್ನಿಸಲು ಅಂದು ಏನು ಕಾರಣವೂ ನನಗೆ ತೋಚಿರಲಿಲ್ಲ. ಮೊನ್ನೆ ಮೊನ್ನೆ ಕೀಚು ಮತ್ತು ಕಟೀನಾ ಇಬ್ಬರನ್ನೂ ಅವರ ಮನೆಗೆ ಕರೆದುಕೊಂಡು ಹೋಗುವವರೆಗೂ, ಏನು ಋಣವಿರಬಹುದು ಎಂಬುದು ನನ್ನ ಊಹೆಯನ್ನೂ ಮೀರಿತ್ತು. ನನಗೆ ಅಂದು ಯಾಕೆ ಹಾಗೆನ್ನಿಸಿತು ಎಂದು ಇಂದಿಗೂ ಗೊತ್ತಿಲ್ಲ. ಮದುವೆಗೆ ಎರಡು ತಿಂಗಳು ಮುಂಚೆ ಮಾವನವರು ತಮ್ಮ ಸಂಬಂಧಿಕರ ಮನೆಗಳಿಗೆಲ್ಲ ನನ್ನನ್ನು ಕರೆದುಕೊಂಡು ಹೋಗಿ, "ನನ್ನ ಅಳಿಯ!" ಎಂದು ನನ್ನನ್ನು ಪರಿಚಯಿಸುವಾಗ ಎಲ್ಲರನ್ನೂ ಬಿಟ್ಟು ಇವರ ಮನೆಯಲ್ಲೇ ಹಾಗೆ ಏಕೆನ್ನಿಸಿತೋ ಇಂದಿಗೂ ಗೊತ್ತಿಲ್ಲ.

ವಿಶಾಲವಾದ ಹಳ್ಳಿ. ಹಳ್ಳಿಗೆ ಎರಡೇ ಮನೆ. ಸುಮಾರು ಐವತ್ತು ಎಕರೆ ಜಮೀನು. ಜಮೀನಿಗೆ ಅಂಟಿಕೊಂಡಂತೆಯೇ ಸ್ವಚ್ಛಂದವಾಗಿ ನಿರಂತರವಾಗಿ ಹರಿಯುವ ಚೆಲುವಾದ ಹೇಮಾವತಿ! ಇನ್ನೊಂದು ದಡದಲ್ಲಿ ದಟ್ಟವಲ್ಲದಿದ್ದರೂ ಸುಮಾರಾದ ಕಾಡು. ಹೊಳೆನರಸಿಪುರದ ಬಳಿ ಏನೆಲ್ಲ ಇದೆ!! ನನಗೆ ಜಾಗವು ಇಷ್ಟವಾಗದೆ ಇರಲು ಸಾಧ್ಯವೆ? ಇಷ್ಟ ಪಡುವುದಕ್ಕೂ ಅಲ್ಲಿರುವ ಋಣದ ಬಗ್ಗೆ ಚಿಂತಿಸುವುದಕ್ಕೂ ವ್ಯತ್ಯಾಸವಿದೆ.

ನಮ್ಮ ಮನೆಯಲ್ಲೇ ಜನಿಸಿದ ಕೀಚು ವನವಾಸಕ್ಕೆಂದು ಹೋದ ಪಾಂಡವರಂತೆ ಪದ್ಮನಾಭನಗರಕ್ಕೆ ಹೋಯಿತು. ಕೀಚುವಿನ ಆಪ್ತ ಕಡ್ಲಿ ಕಾರಣಾಂತರದಿಂದ ತುಂಬ ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಿತು. ಕೀಚುವಿಗೆ ಕಟೀನಾ ಎಂಬ ಸಂಗಾತಿ ಸಿಕ್ಕಿತು. ವಿರಾಟರಾಜನಂಥವರು ಅಲ್ಲಿ ಇದ್ದರೂ, ಸಕಲ ವೈಭೋಗಗಳು ದೊರಕುವಂತಿದ್ದರೂ ವನವಾಸದಲ್ಲಿ ಕಷ್ಟ ತಪ್ಪಿದ್ದಲ್ಲವಲ್ಲವೇ? ಹೀಗೆ ಅನೇಕ ತೊಂದರೆಗಳೊಂದಿಗೆ ಕೀಚು ಮತ್ತು ಕಟೀನಾ ಇಬ್ಬರ ಒಂದು ವರ್ಷದ ವನವಾಸ ಮುಗಿದ ನಂತರ ನಮ್ಮ ಮನೆಯಲ್ಲಿ ಒಂದು ವಾರ ಅಜ್ಞಾತವಾಸವನ್ನು ಅನುಭವಿಸಿತು. ಆರು ವರ್ಷಗಳ ಕಾಲ ನಮ್ಮ ರಸ್ತೆಯಲ್ಲಿ ಯಾರಿದ್ದಾರೆಂಬುದು ನನಗೆ ಗೊತ್ತಿರಲಿಲ್ಲ, ನಾನು ಎಂಬುವವನು ನಮ್ಮ ರಸ್ತೆಯಲ್ಲಿದ್ದೇನೆಂಬುದು ನಮ್ಮ ರಸ್ತೆಯ ಜನಕ್ಕೆ ಗೊತ್ತಿರಲಿಲ್ಲ. ಕೀಚು-ಕಟೀನಾ ದೆಸೆಯಿಂದ ನಮ್ಮ ರಸ್ತೆಯವರಿಗೆಲ್ಲರಿಗೂ ನಾನು, ನನ್ನ ಹೆಂಡತಿ, ನಮ್ಮಮ್ಮ ಗೊತ್ತಾದೆವು. ನಮ್ಮನ್ನು ಶಪಿಸದವರೇ ಇಲ್ಲವೆನಿಸುತ್ತೆ. ನಮ್ಮ ಮನೆಯ ಸ್ವೀಟಿ ಕೂಡ! ಅದೇನು ಸದ್ದು! ಅದೇನು ಧ್ವನಿ!! ಅದೇನು ಕಂಠ!!!

ಸ್ವೀಟಿಯಂತೂ ಒಂದು ವಾರದ ಕಾಲ ಗಾಂಧೀಜಿಯಂತೆ ಉಪವಾಸ ಸತ್ಯಾಗ್ರಹವನ್ನು ಕೈಗೊಂಡುಬಿಟ್ಟಿತು. ಶನಿವಾರ ಯಾವಾಗ ಬರುತ್ತೋ ಎಂದು ಹಪಹಪಿಸುತ್ತಿತ್ತು. ಅಂತೂ ಶನಿವಾರ, ತನ್ನ ಉಪವಾಸ ಸತ್ಯಾಗ್ರಹಕ್ಕೆ ಹಾಲನ್ನ ತಿನ್ನುವುದರ ಮೂಲಕ ಮಂಗಳ ಹಾಡಿತು.

ಕ್ವಾಲಿಸ್ಸಿನ ಹಿಂಬದಿಯಲ್ಲಿ ರಾಜ ರಾಣಿಯರಂತೆ ಐದು ಗಂಟೆಗಳ ಕಾಲ ಪ್ರಯಾಣ ಮಾಡಿದವು. ಮೊದಲರ್ಧ ಗಂಟೆ ಸ್ವಲ್ಪ ಕಷ್ಟವಾದರೂ ನಂತರ ಹೊಂದಿಕೊಂಡವು. ಮಧ್ಯೆ ಹಿರಿಸಾವೆಯಲ್ಲಿ ಚಹ ಕುಡಿಯಲು ಕಾರನ್ನು ನಿಲ್ಲಿಸಿದಾಗ ಕಾರೊಳಗಿನಿಂದಲೇ ಹೊರಗಿರುವ ತಮ್ಮ ಶತ್ರುಗಳನ್ನು ಗದರಿಸುತ್ತಿದ್ದವು. ಆ ಶತ್ರುಗಳೇನು ಸಾಮಾನ್ಯವಲ್ಲ, "ನಮ್ಮೂರಿಗೆ ಬಂದು ನಮ್ಮನ್ನೇ ಗದರಿಸುತ್ತಿದ್ದೀರ?" ಎಂದು ಅವಾಚ್ಯಗಳನ್ನು ಕೀಚು-ಕಟೀನಾ ಮೇಲೆ ಎಸೆದವು. ಹೇಗೋ ವಾಸು ಮಾವನ ಮನೆ ತಲುಪಿದೆವು.

ನಮ್ಮ ಮನೆಯಲ್ಲಿದ್ದ ಸ್ವೀಟಿಯಂತೆ ಅವರ ಮನೆಯಲ್ಲಿರುವ ಜರ್ಸಿಯು ಏನು ತಿಳಿದುಕೊಳ್ಳುತ್ತೋ ಏನೋ ಎಂಬ ಭೀತಿಯು ನನ್ನಲ್ಲಿತ್ತಾದರೂ ಸ್ವಜಾತಿ ವ್ಯಾಮೋಹವು ಅದಕ್ಕೆಡೆ ಮಾಡಿಕೊಡಲಾರದೆಂದು ತಿಳಿದಿದ್ದೆ. ಅದಲ್ಲದೆ ನಮ್ಮ ಜೊತೆಗೆ ಹಲವಾರು ಕೀಚು ಕಟೀನಾ ಜರ್ಸಿ ಸ್ವೀಟಿಗಳನ್ನು ಕಂಡರಿತ ಪ್ರಸಾದಿ ಇದ್ದ. ಅವುಗಳ ಸೈಕಾಲಜಿಯನ್ನು ಕಾಲಕಾಲಕ್ಕೆ ವಿವರಿಸುತ್ತಿದ್ದ. ರೇಖಾ ಮತ್ತು ನಾನು ಪ್ರಸಾದಿ ಹೇಳುತ್ತಿದ್ದುದನ್ನೆಲ್ಲ ಬಹಳ ಉತ್ಸುಕದಿಂದ ಕೇಳುತ್ತಿದ್ದೆವು. ಅವನ ಪ್ರಕಾರ ಜರ್ಸಿಯು ಕೀಚು ಮತ್ತು ಕಟೀನಾ ಇಬ್ಬರನ್ನೂ ತಿದ್ದಿ ಸತ್ಪ್ರಜೆಗಳನ್ನಾಗಿಸುತ್ತೆ! ಇನ್ನೂ ಕಾಯಬೇಕು. ಇವೆರಡೋ ರೌಡಿಗಳು!!

ಜರ್ಸಿಯೊಡನೆ ಸ್ನೇಹ ಮಾಡಿಕೊಳ್ಳಬೇಕೋ, ವೈರತ್ವ ಕಟ್ಟಿಕೊಳ್ಳಬೇಕೋ ಇನ್ನೂ ಗೊತ್ತಾಗಿರಲಿಲ್ಲ. ಹಾಗಾಗಿ ಇನ್ನೂ ಒಟ್ಟಿಗೆ ಬಿಟ್ಟಿರಲಿಲ್ಲ. ಬಹುಶಃ ಇಷ್ಟು ಹೊತ್ತಿಗೆ ಜರ್ಸಿಯೊಡನೆ ಸ್ನೇಹ ಸೌಹಾರ್ದತೆಯಿಂದ ಇರುತ್ತೆನಿಸುತ್ತೆ. ಕಾರಿನಿಂದ ಇಳಿದ ಮರುಕ್ಷಣವೇ ಶಾಲೆಯಿಂದ ಹೊರಗೆ ಬಂದ ಪ್ರೈಮರಿ ಸ್ಕೂಲ್ ಹುಡುಗರಂತೆ, ಪಂಜರದಿಂದ ಹೊರಬಂದ ಗಿಳಿಯಂತೆ, ಸಿಕ್ಕ ಸಿಕ್ಕ ಕಡೆ ಎರಡೂ ಓಡಿದವು. ನಾಲೆಯಲ್ಲಿ ಇಳಿದವು. ಹುಲ್ಲಿನ ಮೇಲೆ ಹೊರಳಾಡಿದವು. ದನಗಳ ಹತ್ತಿರ ಹೋಗಿ ಅವನ್ನು ಕೆಣಕಿ ಅವುಗಳು ಹಾಯಲು ಬಂದಾಗ ಹೆದರಿ ಓಡಿ ಕಾಲ್ಕಿತ್ತವು. ಮತ್ತೆ ಕಟ್ಟಿದ್ದ ಜರ್ಸಿಯ ಬಳಿ ಹೋಗಿ ಪರಿಚಯ ಮಾಡಿಕೊಂಡವು. ನನ್ನ ಮೈಮೇಲೆ, ರೇಖಾಳ ಮೈಮೇಲೆ, ಪ್ರಸಾದಿಯ ಮೈ ಮೇಲೆಲ್ಲ ಎಗರಿದವು. ಮುಖದಲ್ಲಿ ಅದೆಷ್ಟು ಖುಷಿಯ ಭಾವನೆ!!! ಆದರೆ ಬಾಗಿಲಲ್ಲಿ ಕಟ್ಟಿ ಹಾಕಿದ ಕ್ಷಣದಿಂದ ಮತ್ತೆ ಅದೇ ಚಿಂತೆ! "ಎಲ್ಲೋ ಕಟ್ಟುಬಿಟ್ಟಿದ್ದಾರೆ ನಮ್ಮನ್ನು. ಯಾವುದೋ ಊರಿಗೆ ಕರೆದುಕೊಂಡು ಬಂದಿದ್ದಾರೆ!! ಏನಾದರಾಗಲಿ, ಇವರು ಇದ್ದಾರಲ್ಲ ಇಲ್ಲೇ" ಎಂಬ ಸಮಾಧಾನವೂ ಇತ್ತು.

ಮಾರನೆಯ ದಿನ ಮತ್ತೆ ಸರಪಳಿ ಬಿಚ್ಚಿದಾಗ ಹಿಗ್ಗೋ ಹಿಗ್ಗು. ಸ್ವರ್ಗವೆಂದರೆ ಇದೇ ಸರಿ! ಆದರೆ ಈ ಬಾರಿ ಹಿಂದಿನ ದಿನದಂತೆ ಸಿಕ್ಕ ಸಿಕ್ಕ ಕಡೆಯೆಲ್ಲ ಓಡಿ ದಣಿಯಲಿಲ್ಲ. ಸ್ವಲ್ಪ ಸಭ್ಯರಾಗಿದ್ದರು. ಹಳ್ಳಿಯ ವಾತಾವರಣ ಒಂದು ರಾತ್ರಿಗೆ ಏನೆಲ್ಲ ಬದಲಾವಣೆ ತಂದಿತ್ತು!! ವಾಕಿಂಗ್ ಮಾಡಿಕೊಂಡು ನಾನು, ರೇಖಾ, ಪ್ರಸಾದಿ ಮತ್ತು ವಾಸು ಮಾವನ ಮಗ ಪ್ರಜ್ವಲ್ ಹೇಮಾವತಿಯ ತಟಕ್ಕೆ ಬಂದೆವು. ಹೊಳೆಯನ್ನು ಕಂಡಾಕ್ಷಣವೇ ಕಟೀನಾಗೆ ಎಂಥದೋ ಭಯ. ಕೀಚುವಿಗೆ ಬೆರಗು! ಬೆಕ್ಕಸ ಬೆರಗು!! "ಇದೇನು ಇಷ್ಟೊಂದು ನೀರು!!!!!!!!!" ಎಂಬಂತೆ ಸುತ್ತಲೂ ನೋಡಿದ. ಬಳಿಕ ನನ್ನ ಮುಖ ನೋಡಿದ. ನೀರಿನೊಳಕ್ಕೆ ಮುಖವನ್ನದ್ದಿದ. ಮತ್ತೆ ನನ್ನ ನೋಡಿದ. ಸುತ್ತಲೂ ನೋಡಿದ! ಅವನ ಆನಂದವನ್ನು ಪದಗಳು ವರ್ಣಿಸುವ ಶಕ್ತಿಯನ್ನು ಹೊಂದಿಲ್ಲ. ಅವನ ಆನಂದವನ್ನು ನೋಡಿದ ನನ್ನ ಸಂತಸವನ್ನೂ ಸಹ!! ಮನೆಯಲ್ಲಿ ತನ್ನ ಊಟದ ಪಾತ್ರೆಗೆ ಕುಡಿಯಲು ನೀರನ್ನು ಹಾಕುತ್ತಿದ್ದಾಗ ಕಾಲಲ್ಲಿ ಚೆನ್ನಾಗಿ ಕೊಡವಿ ನೀರನ್ನೆಲ್ಲ ಚೆಲ್ಲುತ್ತ ಬೈಸಿಕೊಳ್ಳುತ್ತಿದ್ದ. ಈಗ ಹೊಳೆಯ ನೀರಿಗೆ ತನ್ನನ್ನು ಕರೆದುಕೊಂಡು ಬಂದಿದ್ದಾರೆ. ಸಂತೋಷ ಆಗದೇ ಇರುತ್ತಾ?

ಕಟೀನಾ ಮಾತ್ರ ನೀರನ್ನು ಶತ್ರುವೆಂದು ತಿಳಿದಿತ್ತು.

ನಾನು ನೀರೊಳಕ್ಕಿಳಿದಾಗ ಕೀಚುವಿಗೆ ಮತ್ತೂ ಖುಷಿಯಾಗಿ ಧುಮುಕಿದ. ಮನಸ್ಸಿಗೆ ತೃಪ್ತಿಯಾಗುವಷ್ಟು ಈಜಿದ. ಕಟೀನಾಳನ್ನೂ ಕರೆದ. ಅವಳು ಸುತರಾಂ ಒಪ್ಪಲಿಲ್ಲ. ನಾನು ಕರೆದೆ, ಬರಲಿಲ್ಲ. ಪ್ರಜ್ವಲ್ ಅಂತೂ ದನಗಳನ್ನು ಸೆಳೆಯುವಂತೆ ಕುತ್ತಿಗೆ ಹಿಡಿದು ಸೆಳೆದ. ಇಲ್ಲ, ಬರಲೇ ಇಲ್ಲ. ಇತ್ತ ಕೀಚು ಈಜುತ್ತ ಈಜುತ್ತ ಬಂಡೆಯ ಮೇಲೆ ಕುಳಿತಿದ್ದ ನನ್ನ ಬದಿಗೆ ಬಂದು ಒದ್ದೆ ಮೈಯನ್ನು ನನ್ನ ಬಟ್ಟೆಗೆ ಒರೆಸಿ ಹೋಗುತ್ತಿದ್ದ. "ಕಟೀನಾನೂ ಕಲಿತುಕೊಳ್ಳುತ್ತೆ, ಸ್ವಲ್ಪ ದಿನ" ಎಂದು ಪ್ರಸಾದಿ ಭರವಸೆಯಿತ್ತ. ಕಾರಿನಲ್ಲಿ ಜೊಲ್ಲು ಸುರಿಸುತ್ತೆಂಬ ಕಾರಣಕ್ಕೆ ರೇಖಾ ಕೀಚುವಿಗೆ "ನನ್ ಹತ್ರ ಬರಬೇಡ ಹೋಗು!" ಎಂದು ಗದರಿದ್ದಳು. ಹೊಳೆಯಲ್ಲಿ "ಫೋಟೋ ತೆಗೆಸಿಕೊಳ್ಳೋಣ ಬಾರೋ" ಎಂದು ಎಷ್ಟು ಕರೆದರೂ ಅವಳ ಹತ್ತಿರ ಬರಲೇ ಇಲ್ಲ ಕೀಚು. ಕೊನೆಗೆ ನಾನೇ ಹೋದೆ, ಫೋಟೊ ತೆಗೆಸಿಕೊಳ್ಳಲು!

ಕೀಚು ಮತ್ತು ಕಟೀನಾರ ಪಾಲಿಗೆ ಇದು ಅತ್ಯಂತ ರಮಣೀಯವಾದ, ಮನೋಹರವಾದ ’ಪ್ರವಾಸ’. ಹೌದು, ಅವು ತಾವು ಪ್ರವಾಸಕ್ಕೆ ಬಂದಿದ್ದೇವೆಂದೇ ನಂಬಿದ್ದವು. ಸಂಜೆ ಹೊರಡುವಾಗ ಅವು ಮಾಡಿದ ಗಲಾಟೆ ಅಷ್ಟಿಷ್ಟಲ್ಲ!!

ಕಟೀನಾ ಮನಸ್ಸಿನಲ್ಲೇ ಕೊರಗುವವಳು. ಗುಂಡಗೆ ಸುತ್ತುಕೊಂಡು ನೋವಿನ ಕಣ್ಣಲ್ಲಿ ಓರೆನೋಟದೊಂದಿಗೆ ನಾವು ಕಾರನ್ನೇರುವುದನ್ನು ನೋಡುತ್ತಿತ್ತು. ಕೀಚು "ನಮ್ಮನ್ನೂ ಕರೆದುಕೊಂಡು ಹೋಗಿ, ಪ್ಲೀಸ್...." ಎಂದು ಅಂಗಲಾಚುತ್ತಿತ್ತು. ನನ್ನ ಕಂಠ ಗದ್ಗದಿತವಾಗಿತ್ತು. ಅಳು ಬರುವುದರೊಳಗೆ ಕಾರೊಳಕ್ಕೆ ಕುಳಿತುಕೊಂಡುಬಿಟ್ಟೆ! ಕೀಚುವನ್ನು ನೋಡಿದಂತೆಯೇ ದುಃಖವು ಇಮ್ಮಡಿಸತೊಡಗಿತು. ರೇಖಾಳಿಗೂ ಹಾಗೆನ್ನಿಸಿತು. ಕೇವಲ ಒಂದು ವಾರ ಅಜ್ಞಾತವಾಸಕ್ಕೆಂದು ನಮ್ಮೊಡನಿದ್ದ ನಮಗೇ ಹೀಗಾಗಿರಬೇಕಾದರೆ ಇನ್ನು ಅಕ್ಕರೆಯಿಂದ ಪಾಲಿಸಿ, ಪೋಷಿಸಿ, ಮುದ್ದಿಸಿ, ಮೋಹಿಸಿ ಬೆಳೆಸಿದ ಆ ತಾಯಿಗೆ ಹೇಗಾಗಿರಬೇಡ!! ಇದನ್ನು ಬರೆಯುವಾಗಲೂ ನನಗೆ ಕಷ್ಟವಾಯಿತು. ವಿಜಯಾಳ ಗುಡ್‍ಬೈ ಲೇಖನವನ್ನು ನನಗೆ ಓದಲೂ ಸಹ ಆಗಲಿಲ್ಲ. ನನ್ನನ್ನು ಈ ಮೋಹಪಾಶಕ್ಕೆ ಸಿಲುಕಿಸಿದ ವಿಧಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಇಂಥ ಅನುಭವವು ನಮಗೆ ಬೇಕು! ನಾವು ಮನುಷ್ಯರು!!

ಏನು ಋಣವಿತ್ತೋ ಗೊತ್ತಿಲ್ಲ. ಅಂತೂ ವಾಸು ಮಾವನ ಮನೆ ಸೇರಿದವು ಕೀಚು ಮತ್ತು ಕಟೀನಾ. ವಾಸು ಮಾವನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನಾನು ಚಿರಋಣಿ. ಕತ್ತಲಿನಿಂದ ಬೆಳಕಿನೆಡೆಗೆ ಸಾಗಿವೆ!

ಇತ್ತ ಹನುಮಂತನಗರವು ನಿಶಬ್ದವಾಗಿದೆ. ಮೌನವಾಗಿದೆ. ಮನೆಯೆಲ್ಲ ಭಣ ಭಣ.

ಸ್ವೀಟಿಯ ಉಪವಾಸ ಸತ್ಯಾಗ್ರಹ ಮುಗಿದಿದೆ. ಆಳ್ವಿಕೆ ಮುಂದುವರೆದಿದೆ.

Keechu Kateena


-ಅ
15.07.2009
9PM

Monday, July 13, 2009

ಗಮಕ ಸುಧಾ ಧಾರೆ

"ಏನ್ ಬಂದುದೌ ತಂಗೆ?....."

ಹೈಸ್ಕೂಲಿನಲ್ಲಿ ನಮ್ಮ ಕನ್ನಡ ಮೇಡಮ್ಮು ಮಾಡಿದ ಪಾಠವನ್ನು ಹೇಗೆ ತಾನೆ ಮರೆಯಲಿ? ಹಳೆಗನ್ನಡ ಸಾಹಿತ್ಯವನ್ನೂ ಸಹ ಯಾವುದೇ ’ತರ್ಜುಮೆ’ಗಳಿಲ್ಲದೆ (ಕನ್ನಡವನ್ನು ಕನ್ನಡಕ್ಕೇ ತರ್ಜುಮೆ ಮಾಡುವುದೆಂದರೆ ಹಾಸ್ಯವಷ್ಟೆ?) ಓದಬಹುದು, ಓದಿ ಆನಂದಿಸಬಹುದೆಂದು ನಾನು ಕಲಿತದ್ದು, ನಮ್ಮ ಆಚಾರ್ಯ ಪಾಠಶಾಲೆಯ ಎಸ್.ಎ.ಪಿ ಮೇಡಮ್ಮು ಮಾಡಿದ ಶ್ರೀ ರಾಮಾಯಣ ದರ್ಶನಂ ಪಾಠದ ದೆಸೆಯಿಂದಲೇ. ವೈಯಕ್ತಿಕವಾಗಿ ಈಗಲೂ ನನಗೆ ಹಳೆಗನ್ನಡ ಸಾಹಿತ್ಯ ಕೊಡುವ ಆನಂದವನ್ನು ಹೊಸಗನ್ನಡ ಕಾವ್ಯವು ಕೊಡುತ್ತಿಲ್ಲ.

"ಗಮಕಕ್ಕೆ ಕುಮಾರವ್ಯಾಸ ಭಾರತವನ್ನು ಮಾಡೋಣವೇ, ಮಂಕುತಿಮ್ಮನ ಕಗ್ಗವನ್ನು ಮಾಡೋಣವೇ, ಅಥವಾ ಶ್ರೀ ರಾಮಾಯಣ ದರ್ಶನಂ ಮಾಡೋಣವೇ?" ಎಂದು ಲಕ್ಷ್ಮೀ ಆಯ್ಕೆಗಳನ್ನು ತೆರೆದಿಟ್ಟಾಗ ನಾನು ಯಾವ ಹಿಂದೇಟೂ ಇಲ್ಲದೆ ನನ್ನ ಮತವನ್ನು ಶ್ರೀ ರಾಮಾಯಣ ದರ್ಶನಂ‍-ಗೆ ನೀಡಿಬಿಟ್ಟೆ. ಮಿಕ್ಕೆಲ್ಲವು ಚೆನ್ನಾಗಿಲ್ಲವೆಂದಲ್ಲ, ಹಾಗೆ ಚೆನ್ನಾಗಿಲ್ಲ ಎಂದು ಹೇಳುವ ಎಂಟೆದೆಯು ತಾನೆ ಯಾರಿಗಿದೆ? ಆದರೆ ಶ್ರೀ ರಾಮಾಯಣ ದರ್ಶನಂ ಬಗ್ಗೆ ಏನೋ ವಿಶೇಷ ಒಲವು - ನನಗೆ!! ವೈಯಕ್ತಿಕ ವಿಷಯ ಬದಿಗಿಟ್ಟರೆ, ನಮ್ಮ ಪ್ರಣತಿ ತಂಡವೂ ಸಹ ಶ್ರೀ ರಾಮಾಯಣ ದರ್ಶನಂ-ಗೆ ಮತ ನೀಡಿ, ಅಂತೂ ಆಯೋಜಿಸಲು ಸರ್ವ ಸಿದ್ಧತೆಯನ್ನೂ ಮಾಡಿಕೊಂಡಿದೆ.

ಈ ಶನಿವಾರವೇ ನಮ್ಮ ಬಸವನಗುಡಿಯ ಐ.ಐ.ಡಬಲ್ಯೂ.ಸಿ.ಯಲ್ಲಿ ಪ್ರಣತಿಯ ನಾಲ್ಕನೆಯ ಕಾರ್ಯಕ್ರಮದ ಅಂಗವಾಗಿ ಗಮಕ ಸುಧಾಧಾರೆಯನ್ನು ನಮ್ಮೆಲರಿಗಾಗಿ ಹರಿಸಲಿದ್ದಾರೆ ಶ್ರೀಮತಿ ಶೋಭಾಶಶಿಧರ್ ಮತ್ತು ಶ್ರೀಮತಿ ಬಿ.ಜಿ.ಕುಸುಮಾ ಅವರು. ಎಲ್ಲರೂ ಐ.ಐ.ಡಬಲ್ಯೂ.ಸಿ.ಯಲ್ಲಿ ಭೇಟಿಯಾಗೋಣ. ಶಬರಿಗೆ ರಾಮನು ಹೇಗೆ ಅತಿಥಿಯಾದನೆಂದು ಕೇಳೋಣ!

ಎಲ್ಲರಿಗೂ ಒಳಿತಾಗಲಿ.-ಅ
13.07.2009
8.30PM

Monday, July 6, 2009

ಚಲಿಸದ ಕಾಲ

ನಂಬಿಕೆಯೊಂದನೆ
ಕಣ್ಣೊಳಗಿರಿಸಿ
ಚುಂಬಿಸಿ ಬಿಂಬಿಸಿ
ಬಾಷ್ಪವನೊರೆಸಿ,
ನಗುವಳೆ ಅರಸಿ?

ಚಲಿಸದ ಕಾಲದಿ
ಫಲಿಸದ ಬಯಕೆ
ನಲಿವ ಭ್ರಮೆಯಲಿ
ತಿಳಿಯದ ಬೆರಕೆ,
ಕಲಿಯುವ ಹರಕೆ.

ಎಲ್ಲಿಹುದೆಮ್ಮಯ
ಬದುಕಿನ ಗುರಿಯು?
ಒಬ್ಬರನೊಬ್ಬರು
ಮರೆಯುವ ಪರಿಯು,
ಭೀತಿಯ ಝರಿಯು.

ಅರಿಯದೆ ಸಿಲುಕಿರೆ
ವಿಧಿಯ ಹೊನಲಿಗೆ
ಹರಿಯುವ ಕಡೆಯೊಳೆ
ಹಾದಿ ಕವಲಿಗೆ,
ಎಡೆಯು ಕನಲಿಗೆ.

-ಅ
06.07.2009
10PM

Tuesday, June 30, 2009

ಕನಸಲೂ ನೀನೆ

ಕನಸಲ್ಲಿ ಹೆಣ ನೋಡಿದರೆ ಹಣ ಸಿಗುತ್ತಂತೆ. ಹೀಗೊಂದು ನಂಬಿಕೆ. ನಂಬಿಕೆಗಳಿಗೇನು, ಕೋಟ್ಯಂತರವಿದೆ! ಹೆಣದ ಬಗ್ಗೆಯೇ ಯೋಚಿಸುತ್ತಿರುವಾಗ ಹೆಣದ ಕನಸಲ್ಲದೆ ಇನ್ನೇನು ಬೀಳುತ್ತೆ ಎಂದು ಹೇಳಿ ತಪ್ಪಿಸಿಕೊಳ್ಳಬಹುದು. ಹಾಗೆಂದ ಮಾತ್ರಕ್ಕೆ, ನಾವು ಏನು ಯೋಚಿಸುತ್ತಿದ್ದೇವೋ ಅದರ ಕನಸೇ ಬೀಳುವುದೇ? ಸುಪ್ತ ಮನಸ್ಸಿನಲ್ಲಿರುವುದು ಕನಸಿನ ಪರದೆಯ ಮೇಲೆ ಬರುವುದು ಎಂದು ಮನಸ್‍ಶಾಸ್ತ್ರ ಹೇಳಿದರೆ ಕನಸೆಂಬುದು ವಾಸನಾಬಲದ ಪ್ರತಿಫಲವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ. ಅದೇನೇ ಆಗಲಿ. ಇಂತಿಂಥ ಕನಸು ಬಿದ್ದರೆ ಇಂತಿಥದ್ದು ಆಗುತ್ತೆ ಎಂಬ ನಂಬಿಕೆಯೂ ಹೇಗೋ ಬಂದುಬಿಟ್ಟಿದೆ. ಬೆಳಗಿನ ಜಾವದ ಕನಸು ನಿಜವಾಗುತ್ತೆಂದು ಹೇಳುವುದಿಲ್ಲವೇ? ಇವತ್ತು ಬೆಳಿಗ್ಗಿನ ಕನಸಿನಲ್ಲಿ ಹುಲಿಯೊಂದರ ಮೇಲೆ ಕುಳಿತು ಸವಾರಿ ಮಾಡುತ್ತಿದ್ದು, ಅದು ಇದ್ದಕ್ಕಿದ್ದ ಹಾಗೆ ಮೊಸಲೆಯಾಗಿ ಪರಿವರ್ತನೆಯಾಗಿದ್ದು, ನಾನು ಅದರ ಬೆನ್ನಿನಿಂದ ಥಟ್ಟನೆ ಕೆಳಗಿಳಿದು ಶಾಲೆಗೆ ಹೋಗಿ ಕನ್ನಡ ಪಾಠ ಮಾಡುತ್ತಿದ್ದುದು ಎಲ್ಲವೂ ನಿಜವಾಗಿಬಿಟ್ಟರೆ ಹೇಗೆಂದು ನಗು ಬರುತ್ತೆ.

ಕೆಟ್ಟ ಕನಸು ಬೀಳದೇ ಇರಲೆಂದು ಚಿಕ್ಕವನಿದ್ದಾಗ ಅಮ್ಮ ’ರಾಮಂ ಸ್ಕಂದಂ ಹನುಮಂತಂ’ ಹೇಳಿಕೊಡುತ್ತಿದ್ದರು. ಮಲಗುವ ವೇಳೆ ಒಳ್ಳೆಯದನ್ನು (ಅಂದರೆ ದೇವರ ನಾಮವನ್ನು) ಸ್ಮರಿಸಿದರೆ ಒಳ್ಳೆಯ ಕನಸು ಬೀಳುತ್ತೋ ಇಲ್ಲವೋ ಕೆಟ್ಟ ಕನಸಂತೂ ಬೀಳುವುದಿಲ್ಲವೆಂಬ ಮುಗ್ಧ ನಂಬಿಕೆ. ಆದರೆ ರಾಮನನ್ನು ಸ್ಕಂದನನ್ನು ಭೀಮನನ್ನು ನೆನೆಸಿಕೊಂಡು ಮಲಗಿದಾಗಲೂ ಕೆಟ್ಟ ಕ್ರೂರ ಕಠೋರ ಕನಸುಗಳು ಬಿದ್ದುದುಂಟು. ಕನಸಿನಲ್ಲಿ ಹಾವು ಬರುವುದಕ್ಕಿಂತ ಕೆಟ್ಟ ಕನಸ್ಸು ಬೇಕೆ? ಅಕಟಕಟಾ!

ಹಾವೇನಾದರೂ ಕನಸಿನಲ್ಲಿ ಬಂದರೆ ಏನೇನೋ ಶಾಂತಿ ಗೀಂತಿ ಮಾಡಿಸಿಕೊಳ್ಳಬೇಕಂತೆ. ಮೊದಲು ನನಗೆ ಭಯವಾಗುತ್ತಿತ್ತು ಕನಸಿನಲ್ಲಿ ಹಾವು ಬಂದರೆ. ಪೂಜೆ ಪುನಸ್ಕಾರ, ಸಂಧ್ಯಾವಂದನೆ, ದೇವರು ದಿಂಡಿರನ್ನೆಲ್ಲ ಪರಮಸತ್ಯವೆಂದು ನಂಬುತ್ತಿದ್ದ ಕಾಲದಲ್ಲಿ ಅವುಗಳ ಜೊತೆಗಿನ್ನೊಂದಿಷ್ಟು ಮೂಢನಂಬಿಕೆಗಳನ್ನೂ ಸಹ ರೂಢಿಸಿಕೊಂಡಿದ್ದೆ. ಬೆಕ್ಕು ಅಡ್ಡ ಹೋಗುವ ದುರದೃಷ್ಟ ಸಂದರ್ಭದಿಂದ ಹಿಡಿದು ಕನಸಿನಲ್ಲಿ ಹಾವು ಬರುವ ಪಾಪದಂತಹ ನಂಬಿಕೆಗಳು. ಕಾಳ ಸರ್ಪದೋಶವಿರದೆ ಇದ್ದಿದ್ದರೆ ಹಾವು ಕನಸಿನಲ್ಲಿ ಬರುತ್ತಿತ್ತೇ? ನಾನು ಹೋದ ಜನ್ಮದಲ್ಲಿ ಹಾವು ಕೊಂದಿರಬೇಕು! ಅಥವಾ ಸರ್ಪಸಂಭೋಗವನ್ನು ಕಣ್ಣಾರೆ ನೋಡಿರಬೇಕು. (ಈ ಜನ್ಮದಲ್ಲೂ ಅನೇಕ ಸಲ ನೋಡಿದ್ದೇನೆ.) ಇದರಿಂದ ನನಗೆ ’ಈ ಜನ್ಮದಲ್ಲಿ’ ತೊಂದರೆ ತಪ್ಪಿದ್ದಲ್ಲ. ಎಲ್ಲ ರೀತಿಯ ಸಂಕಷ್ಟಗಳೂ ನನ್ನದಾಗುತ್ತೆ. ಹೀಗೆಲ್ಲ ಹೆದರಿಸಿದ್ದರು. ನಾನು ಹೆದರಿದ್ದೆ.

ಯಾರ ಸುಪ್ತ ಮನಸ್ಸು ಸದಾ ಯಾವುದರಿಂದ ತುಂಬಿರುತ್ತೋ ಅದೇ ಕನಸಾಗಿ ಬರುತ್ತೆಂದು, ಕೆಲವೊಮ್ಮೆ ಎಚ್ಚರವಾಗಿದ್ದಾಗಲೂ ’ಭ್ರಮೆ’ಯ ರೂಪದಲ್ಲಿ ಕಾಣಿಸುತ್ತೆಂದು ಕನಸಿನ ಬಗ್ಗೆ ಅದ್ಭುತ ಚಿಂತನೆಯನ್ನು ನಡೆಸಿದ ಸಿಗ್ಮಂಡ್ ಫ್ರಾಡ್ ಹೇಳುತ್ತಾನೆ. ನನ್ನ ಸರ್ಪಪ್ರೇಮ ಶುರುವಾದಾಗಿನಿಂದಲೂ ನಾನು ಒಬ್ಬ ಉರಗತಜ್ಞನಾಗಬೇಕೆಂಬ ಹಂಬಲ, ಮತ್ತು ಆ ನಿಟ್ಟಿನಲ್ಲಿ ನಾನು ಓದುತ್ತಿದ್ದ ಪುಸ್ತಕಗಳು, ಟಿ.ವಿ.ಯಲ್ಲಿ ನೋಡುತ್ತಿದ್ದ ಕಾರ್ಯಕ್ರಮಗಳು, ಚರ್ಚಿಸುತ್ತಿದ್ದ ವಿಷಯಗಳು, ಸಂಪರ್ಕಿಸುತ್ತಿದ್ದ ಜನರು, ಬಹುಪಾಲು ಹಾವಿಗೆ ಸಂಬಂಧ ಪಟ್ಟಿರುವುದೇ. ಕನಕದಾಸರಿಗೆ ಕನಸಿನಲ್ಲಿ ಕೃಷ್ಣ ಬಂದು ’ನೀನು ಕನಕದಾಸನಾಗು’ ಎಂದು ಹೇಳಲಿಲ್ಲವೇ?

ನಿದ್ದೆಯಲ್ಲೇ ಏನು, ಅನೇಕ ಸಲ ಎಚ್ಚರವಾಗಿದ್ದಾಗಲೂ ನಮಗೆ ’ಕನಸು’ ಬೀಳುತ್ತೆ. ಮನಸ್ಸು ತುಂಬ involve ಆಗಿದ್ದಾಗ ಹೀಗಾಗುವುದು ಸರ್ವೇಸಾಮಾನ್ಯವಷ್ಟೆ. ಅತ್ತೆ ತೀರಿಕೊಂಡ ಹೊಸತು. ನಾನು ಕಂಪ್ಯೂಟರಿನ ಮುಂದೆ ಕುಳಿತು ಏನೋ ಹುಡುಕಾಟ ಮುಗಿಸಿಕೊಂಡು ನನ್ನ ಕೋಣೆಯಿಂದ ಎದ್ದು ಹಾಲ್‍ಗೆ ಹೋದೆ. ಅಡುಗೆಮನೆಯಿಂದ ’ಅರುಣ್..’ ಎಂಬ ಕೂಗು ಕೇಳಿಸಿದಂತಾಯಿತು, ಅತ್ತೆ ಕರೆದಂತೆ! ನಾನು ತಲೆಕೆಡವಿಕೊಂಡು ’ಒಳ್ಳೇ ಭ್ರಮೆ’ ಎಂದು ನಕ್ಕು ಮತ್ತೆ ರೂಮೊಳಕ್ಕೆ ಹೋದೆ. ಮನುಷ್ಯನ ಮನಸ್ಸು ಎಷ್ಟು ಶಕ್ತಿಶಾಲಿಯೋ ಅಷ್ಟೇ ದುರ್ಬಲ ಕೂಡ. ಸಂದರ್ಭಗಳು ಮನಸ್ಸನ್ನು ಹೇಗೆ ಬೇಕೋ ಹಾಗೆ ತಿರುಗಿಸಿ, ನಮಗೆ ಏನು ಬೇಕೋ ಅದನ್ನು ತೋರಿಸಿಬಿಡುತ್ತೆ. Hallucination! ಹಿಂದಿನ ಅನೇಕ ಮಹಾ ಮಹನೀಯರುಗಳಿಗೆಲ್ಲ ಕುದುರೆಯಾಗಿ, ಕಾಳಿಯಾಗಿ, ಹುಡುಗನಾಗಿ, ಮರವಾಗಿ, ಏನೇನೆಲ್ಲವಾಗಿ ದೇವರು ಕಾಣಿಸಿಕೊಂಡಿಲ್ಲವೇ? ಅದೇ ರೀತಿ ಕೋಟ್ಯಂತರ ಜನಕ್ಕೆ ದೆವ್ವ ಭೂತ ಪಿಶಾಚಿಗಳು ಬೆಂಕಿಯ ಸುತ್ತ ಕುಣಿಯುವಂತೆ, ಹುಣಸೆ ಮರದಲ್ಲಿ ನೇತಾಡುವಂತೆ, ಕಾಲು ಹಿಂದುಮುಂದು ಮಾಡಿಕೊಂಡಿರುವಂತೆ ಹೇಗೆ ಹೇಗೋ ವಿಕಾರವಾದ ರೂಪದಲ್ಲೆಲ್ಲಾ ಕಾಣಿಸಿಕೊಂಡಿಲ್ಲವೇ? ಇನ್ನು ನನ್ನದೇನು ಮಹಾ! ಒಂದು ಧ್ವನಿಯಷ್ಟೆ!

ಕನಸಿನ ಬಗ್ಗೆ ನಾನು ಏನೇನನ್ನೂ ಅಧ್ಯಯನ ಮಾಡಿಲ್ಲವಾದ್ದರಿಂದ ನನಗೆ ಅದರ ಬಗ್ಗೆ ಮಾತನಾಡುವ ಅರ್ಹತೆಯಿಲ್ಲ. ಆದರೆ ಅದು ವಾಸನಾಬಲ, ಹಿಂದಿನ ಜನ್ಮ ಮುಂದಿನ ಜನ್ಮದ ಸೂಚಿಯೆಂದರೆ ನಂಬುವಂತಹ ಅಪ್ರಬುದ್ಧನಂತೂ ಅಲ್ಲ. ಕನಸೆಂಬ ಪ್ರಕೃತಿಯ ವಿಸ್ಮಯಕ್ಕೆ ಬೆರಗನ್ನು ವ್ಯಕ್ತಪಡಿಸಿ ನಮಿಸುತ್ತೇನೆ.

ಶುಭಸ್ವಪ್ನಪ್ರಾಪ್ತಿರಸ್ತು!

-ಅ
30.06.2009
11PM

Friday, June 19, 2009

ನಾ ಸಖನು ನಿನಗೆ

ಹೂವರಳಿ ಖಗವುಲಿದು
ಬಾಳು ರಂಗೆನುವ
ಸಂತಸದ ಶಿಖರಕ್ಕೆ
ನಾ ಸಖನು ನಿನಗೆ;
ಹೂ ಬಾಡಿ ಮುದುರಲೆನಿತು ಬಾಳು?
ತೊಳಲ ಹೊನಲಿಗೆ
ಇರುಳ ಪಾತಾಳಕ್ಕೆ
ನಾ ಸಖನು ನಿನಗೆ!

-ಅ
19.06.2009
10PM

Sunday, June 14, 2009

ತುಂಬಿದ ಕೊಡ ತುಳುಕುವುದೇ?

"ತುಂಬಿದ ಕೊಡ ತುಳುಕುವುದೇ?"

ಯಾರು ಯಾರಿಗೆ ಹೇಳಿದರು? ಸಂದರ್ಭ ಸಹಿತ ವಿವರಿಸಿ. ---------------------------------- ೪ ಅಂಕಗಳು.

ಈ ಮಾತನ್ನು 'ಅರುಣ್' ಅವರು ತಮಗೆ ತಾವೇ ಹೇಳಿಕೊಂಡರು.

ಬಸವನಗುಡಿಯ ಕಾಮತ್ ಬ್ಯೂಗಲ್ ರಾಕಿನಲ್ಲಿ ತಮ್ಮ ತಾಯಿಯ ವೀಣೆ ಕಚೇರಿ ಮುಗಿದ ನಂತರ ಊಟಕ್ಕೆ ಕುಳಿತಿದ್ದಾಗ ಮೃದಂಗ ಮತ್ತು ಖಂಜರ ಕಲಾವಿದರೊಡನೆ ಮಾತನಾಡುತ್ತಿದ್ದಾಗ ಅರುಣ್ ಅವರಿಗೆ ಈ ಮಾತು ಹೇಳಿಕೊಳ್ಳುವ ಪ್ರಚೋದನೆಯಾಯಿತು. ಮೃದಂಗ ವಿದ್ವಾನ್ ವೆಂಕಟೇಶ್ ಅವರು "ಅರುಣ್ ಅವರ ಬಳಿ ಸಾಕಷ್ಟು ಶಾಸ್ತ್ರೀಯ ಸಂಗೀತದ MP3 ಇದೆ!" ಎಂದು ಖಂಜರ ವಿದ್ವಾನ್ ಭಾರ್ಗವ ಅವರಿಗೆ ಹೇಳಿದ್ದನ್ನು ಕೇಳಿ ವಿದ್ವಾನ್ ಭಾರ್ಗವ ಅವರು "ಓಹ್, ನಾನು ಒಂದು ಸಲ ನಿಮ್ಮ ಮನೆಗೆ ಬರುತ್ತೇನೆ, ನನಗೆ ಬೇಕಾಗಿರುವುದನ್ನು copy ಮಾಡಿಕೊಳ್ಳುತ್ತೇನೆ" ಎಂದರು. ಜೊತೆಗೆ, "ಎಷ್ಟಿದೆ?" ಎಂದು ಕೇಳಿದಾಗ ಅರುಣ್ ಅವರು "ಸುಮಾರು ಇಪ್ಪತ್ತು ಜಿ.ಬಿ." ಎಂದು ಹೆಮ್ಮೆಯಿಂದ, ಗರ್ವದಿಂದ ಅಕ್ಕಪಕ್ಕದವರಿಗೂ ಕೇಳುವಂತೆ ಹೇಳಿದರು. ಇದನ್ನು ಕೇಳಿದೊಡನೆಯೇ ಭಾರ್ಗವ ಅವರು ಬೆಕ್ಕಸ ಬೆರಗಾದವರಂತೆ ನಟಿಸಿ, "ಅದ್ಭುತ! ಹಾಗಾದರೆ ಬಂದೇ ಬರುತ್ತೇನೆ" ಎಂದು ಅರುಣ್‍ರವರ ಗರ್ವವನ್ನು ಹೆಚ್ಚಿಸಿದರು.

ಕೂಡಲೇ ಹಿಗ್ಗಿದ ಅರುಣ್ ಅವರು "ಖಂಡಿತ ಬನ್ನಿ" ಎಂದು, ಭಾರ್ಗವರಂತಹ ವಿದ್ವಾಂಸರು ತಮ್ಮಲ್ಲಿರುವ MP3ಗಳನ್ನು ಯಾಚಿಸುತ್ತಿದ್ದಾರೆಂಬ ಭಾವನೆಯಿಂದ ತಮ್ಮ ಹೆಮ್ಮೆಯನ್ನು ಇಮ್ಮಡಿಸಿಕೊಂಡದ್ದನ್ನು ಕಂಡ ವೆಂಕಟೇಶ್ ಅವರು "ಭಾರ್ಗವರ ಹತ್ತಿರವೂ ಸಾಕಷ್ಟು ಇದೆ." ಎಂದರು. ಅರುಣ್ ಅವರು ಕುತೂಹಲಕಾರಿಯಾಗಿ "ಓಹೋ, ಎಷ್ಟಿದೆ?" ಎಂದು ಕೇಳಿದ್ದಕ್ಕೆ ಭಾರ್ಗವ ಅವರು "ಹೆಚ್ಚೇನಿಲ್ಲ, ಏಳುನೂರು ಜಿ.ಬಿ. ಇದೆ ಅಷ್ಟೆ!" ಎಂದರು.

ಈ ಮಾತನ್ನು ಕೇಳಿದ ಅರುಣ್ ಅವರು ಕಕ್ಕಾಬಿಕ್ಕಿಯಾಗಿ, ಮುಖಭಂಗವಾಗಿಸಿಕೊಂಡು, empty vessels make more noise ಎಂಬ ಆಂಗ್ಲ ಗಾದೆಯನ್ನು ನೆನೆದು, ಕನ್ನಡದಲ್ಲಿ "ತುಂಬಿದ ಕೊಡ ತುಳುಕುವುದೇ?!" ಎಂದು ತಮ್ಮ ಮನಸ್ಸಿನಲ್ಲಿ ತಾವೇ ಅಂದುಕೊಂಡರು.

______________________________________________________________________________________

-ಅ
14.06.2009
9PM

Wednesday, June 10, 2009

ಹೊಸಕಬೇಕಿದೆ ಕೀಟವನ್ನು

ಹೊಸಕಬೇಕಿದೆ ಕೀಟವೊಂದನು
ರೋಗವಂಟುವ ಮೊದಲು.
ಕೀಟವಿದು ಸಾಮಾನ್ಯವಲ್ಲವೊ
ಹೂವ ರೂಪದ ಸಿಡಿಲು.

ಮಲದ ಮೇಲಿನ ನೊಣವೆ ಚೆಲುವೆಲೊ
ಮಲವುಣ್ಣುವ ಹಂದಿಯು!
ಮನುಜ ಕ್ರೂರವನ್ನೂ ಮೀರಿ
ಬಳಲಳಲೆಲ್ಲ ಮಂದಿಯು!

ಹೊಸಕಬೇಕಿದೆ ಕೀಟವೊಂದನು
ಕರುಣೆಯನ್ನು ತೋರದೆ.
ವಿಷದ ತರುವ ಮೊಳಕೆ ಚಿವುಟು
ಮಿತಿಯನೆಂದು ಮೀರದೆ.

ಕೊಚ್ಚಿ ಹೋಗಲಿ ಕೊಚ್ಚೆಯೊಳಗಡೆ
ಇಂಥ ಕೀಟವೆಲ್ಲವೂ.
ಸ್ವಚ್ಛ ಬದುಕದು ಬಡಿಗೆಯಿಂದಲೆ
ಎನುವ ಮಾಟವೆಲ್ಲವೂ.
ಚೆಲುವ ಬದುಕಿಗೆ ಚೆಲುವು ಎಲ್ಲವು
ಎದುರು ನೋಟವೆಲ್ಲವೂ!

-ಅ
11.06.2009
9PM

Thursday, June 4, 2009

ಇಂದಿನ ಭವಿಷ್ಯ

ಆರ್ಕುಟ್‍ನಲ್ಲಿ ನನ್ನ -
ಇಂದಿನ ಭವಿಷ್ಯ: ಇಂದು ಯಾರಿಗಾದರೂ ಏನನ್ನಾದರೂ ಒಳ್ಳೆಯದನ್ನು ಮಾಡಿ!

ಇದೆಂಥ ಭವಿಷ್ಯ? ಇದೇನು ಭವಿಷ್ಯವೋ ಆದೇಶವೋ? ಅಲ್ಲ, ಈ ಮಾತಿನ ಅರ್ಥ ಇಂದು ಮಾತ್ರ ಒಳ್ಳೇದು ಮಾಡಬೇಕೇ? ಅಥವಾ 'ಇಂದಾದರೂ ಒಳ್ಳೇದು ಮಾಡಿ ಸಾಯಿ, ಮಗನೆ...' ಎಂದೋ? ಅಥವಾ ಇಂದು ನಿನಗೆ ಕೆಲಸ ಇರುವುದಿಲ್ಲ, ಯಾರನ್ನಾದರೂ ಹುಡುಕಿಕೊಂಡು ಹೋಗಿ ಏನನ್ನಾದರೂ ಒಳ್ಳೆಯದನ್ನು ಮಾಡು, ಅವರಿಗೆ ಒಳ್ಳೇದು ಅನ್ನಿಸುವಂಥದ್ದು! ಕುಡುಕನಿಗೆ ಹೆಂಡ ಕೊಡಿಸಿದರೆ ಅವನಿಗೆ ನಾನು ಒಳ್ಳೆಯವನು!!

ಆರ್ಕುಟ್‍ನಲ್ಲಿ ಇಂಥ ಭವಿಷ್ಯಗಳು ಒಳ್ಳೇ ಮನರಂಜನಾಕಾರಿಯಾಗಿರುತ್ತವೆ. ಇದನ್ನು ನೆಚ್ಚಿಕೊಳ್ಳುವವರೂ ಇರುತ್ತಾರೆಂದು ನಾನು ಶತಾಯಗತಾಯ ಒಪ್ಪುವುದಿಲ್ಲ. ಇದನ್ನು ನೆಚ್ಚಿಕೊಂಡು ತಲೆಗೆ ಹಚ್ಚಿಕೊಳ್ಳುವವರಿಗಿಂತ ತಲೆ ಚಚ್ಚಿಕೊಳ್ಳುವವರೇ ಹೆಚ್ಚು! ಆದರೆ ಪತ್ರಿಕೆಗಳಲ್ಲಿ ಬರುವ ದಿನ ಭವಿಷ್ಯವನ್ನು ನೆಚ್ಚಿಕೊಳ್ಳುವವರು ಸಾಕಷ್ಟು ಜನ ಇದ್ದಾರೆ. ನಮ್ಮ ಮನೆಯಲ್ಲಿಯೇ ಇದ್ದಾರೆ! ನಾನೂ ಈ ದಿನಭವಿಷ್ಯವನ್ನು ನೋಡುತ್ತೇನೆ. ಪತ್ರಿಕೆಯ ಪುಟಗಳನ್ನು ತಿರುವು ಹಾಕಿದಾಗ, ನಾನು ಇವೆಲ್ಲ ಯಾವುದನ್ನೂ ನಂಬದೇ ಇದ್ದರೂ ಕಣ್ಣುಗಳಿಗೆ ಈ ದಿನಭವಿಷ್ಯದ ಕಡೆ ಏನೋ ಆಕರ್ಷಣೆ. ಇವತ್ತು ಆ 'ಗಡ್ಡದ ಜ್ಯೋತಿಷಿ ಏನು ಬರೀತಾನೆ? ಏನು ಬುರುಡೆ ಹೊಡೀತಾನೆ ನೋಡೋಣ' ಎಂದು ಮೇಲ್ನೋಟಕ್ಕೆ ಹೇಳಿದರೂ ಒಳಮನಸ್ಸು 'ಇಂದಿನ ದಿನ ಚೆನ್ನಾಗಿದೆಯಾ?' ಎಂಬುದನ್ನೇ ಅರಸುತ್ತಿರುತ್ತೆ. ನನ್ನ ದಿನ ಚೆನ್ನಾಗಿದೆಯೋ ಇಲ್ಲವೋ, ಚೆನ್ನಾಗಿರುತ್ತೋ ಇಲ್ಲವೋ ಎಂಬುದನ್ನು ಕಾಣದ ಸ್ಥಳದಲ್ಲಿ ಕುಳಿತು ಹೇಳಲು ಆ 'ಗಡ್ಡದ ಜ್ಯೋತಿಷಿ'ಯೇನು ಮಾಂತ್ರಿಕನೇ? ಬರೀ ನನ್ನ ದಿನವಲ್ಲ, ಧನುಸ್ಸು ರಾಶಿಯವರ ಎಲ್ಲರ ದಿನವನ್ನೂ ಒಂದೇ ವಾಕ್ಯದಲ್ಲಿ 'ಇದಮಿತ್ಥಮ್' ಎಂದು ಹೇಳಿ ಅನ್ಯಾಯವಾಗಿ ಪತ್ರಿಕೆಯಲ್ಲಿ ಎಷ್ಟೊಂದು ಸ್ಥಳವನ್ನು ವ್ಯರ್ಥ ಮಾಡುತ್ತಾನಲ್ಲ, ಮತ್ತು ಎಷ್ಟೊಂದು ಜನರ ತಲೆಯೊಳಗೆ ಹುಳು ಹೊಗಿಸುತ್ತಾನಲ್ಲ!!

ಬೆಳಗೆರೆಯವರ ಒಂದು ಅಂಕಣದಲ್ಲಿ ಓದಿದ್ದ ನೆನಪು. ಆತ ಸಂಯುಕ್ತ ಕರ್ನಾಟಕದಲ್ಲಿದ್ದಾಗಲೋ ಅಥವಾ ಪ್ರಜಾವಾಣಿಯಲ್ಲಿದ್ದಾಗಲೋ ಏನೋ, ಅನೇಕ ಸಲ ಪ್ರಕಟವಾಗುವ ಸಮಯ ಬಂದಿದ್ದರೂ ಜ್ಯೋತಿಷ್ಯ ಕಾಲಮ್ಮು ಇನ್ನೂ ಬಂದಿರದ ಕಾರಣ ತಾವೇ ಬರೆದು ಪ್ರಕಟಿಸಿದ್ದರಂತೆ. ಆತ ಬರೆಯುತ್ತಾರೆ, ಮೀನವನ್ನು ಮೇಷಕ್ಕೆ, ಮಿಥುನವನ್ನು ಧನುಸ್ಸಿಗೆ ಹಾಕಿ ಭವಿಷ್ಯವನ್ನು ಬರೆದಿದ್ದೆ ಎಂದು. ಆ ರೀತಿ ಎಷ್ಟು ಪತ್ರಿಕೆಗಳಲ್ಲಿ ಆಗಬಹುದು!ದುರಂತವೆಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೇ ಹೋದರೂ ಈ ರೀತಿ ರಾಶಿಯನ್ನನುಸರಿಸಿ ಬರೆಯುವ ದಿನಭವಿಷ್ಯಗಳು work ಆಗುವುದಿಲ್ಲ ಎಂಬುದು ಸತ್ಯವಷ್ಟೆ. ಹಾಗೊಮ್ಮೆ ಅದು ಸತ್ಯವಾದರೂ ಆ ರಾಶಿಯವರಿಗೆಲ್ಲರಿಗೂ 'ಮಗಳಿಗೆ ಮದುವೆ' ಆಗದೇ ಇರುವ ಕಾರಣ ಅದು ಕಾಕತಾಳೀಯವೆಂಬುದು ನಿರ್ವಿವಾದ. ಆದರೆ ಅದನ್ನೇ ನಂಬಿ ಕೆಲಸ ಆರಂಭಿಸುವವರು ಇನ್ನೂ ಇದ್ದಾರೆಂಬುದು ಆಶ್ಚರ್ಯದ ಸಂಗತಿ!

ದಿನಪತ್ರಿಕೆಯ ಜ್ಯೋತಿಷ್ಯಶಾಸ್ತ್ರ ಹಾಳಾಗಿ ಹೋಗಲಿ. ದೂರದರ್ಶನದಲ್ಲಂತೂ ಜ್ಯೋತಿಷ್ಯದ ಕಾರ್ಯಕ್ರಮವು ಮಕ್ಕಳ ಹಾಡುಗಾರಿಕೆ ಕಾರ್ಯಕ್ರಮಗಳಿಗೆ ಪ್ರತಿಸ್ಫರ್ಧಿಯಾಗಿಯೇ ನಿಂತಿದೆ. ಉದಯಾ ಟಿವಿ ಉದಯವಾದಾಗಿನಿಂದಲೂ ಮಾನ್ಯ ಜೈನರು ಹೇಳುವುದನ್ನು ನಮ್ಮ ಮನೆಯಲ್ಲಿಯೇ ಎಷ್ಟು ಸಲ ನೋಡಿದ್ದೇನೋ. ನಮ್ಮ ಮನೆಯವರಿಗಂತೂ ಯಾರೋ ಪತ್ರ ಬರೆದು ಅವರ ಮನೆ ಸೋರುವ ಸಮಸ್ಯೆಯನ್ನು ಜೈನರಿಗೆ ಹೇಳಿಕೊಂಡರೆ ಅದರ ಬಗ್ಗೆ ಯಾತರದ ಆಸಕ್ತಿಯೋ ನಾ ಕಾಣೆ. ಇನ್ನೊಂದು ವಾಹಿನಿಯಲ್ಲಿ ಸರಿಯಾಗಿ ಅಕಾರ ಹಕಾರಗಳನ್ನೇ ತಿಳಿಯದ ಪಂಡಿತರೊಬ್ಬರು ಮಾತೆತ್ತಿದರೆ ಹೆಸರು ಬದಲಿಸಿಕೊಳ್ಳಿ, ಮನೆ ಒಡೆದು ಮತ್ತೆ ಕಟ್ಟಿ ಎಂದು ಬುರುಡೆ ಹೊಡೆಯುತ್ತಿದ್ದರೆ ಅದನ್ನು ಕೇವಲ ನೋಡುವುದು ಮಾತ್ರವಲ್ಲದೆ ಏನೋ ನಮ್ಮ ಸಮಸ್ಯೆ ಬಗೆಹರೆಯುವುದೆಂದು ನಂಬಿಕೊಂಡು ಕರೆ ಮಾಡುವ ಮುಗ್ಧರೋ ಮೂಢರೋ ಆಗಿರುವ ಜನರ ಬಗ್ಗೆ ನನಗೆ ಅನುಕಂಪವಾಗುತ್ತೆ.

ಒಂದು ಚಾನೆಲ್ಲಿನ ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆ, ನಡೆದ ಸಂಭಾಷಣೆ ಹೀಗಿತ್ತು:

"ಗುರುಗಳೇ (ಯಾರಿಗೆ ಗುರುವೋ ಗೊತ್ತಿಲ್ಲ), ನಮ್ಮ ಮಗಳು ಬೇರೆ ಜಾತಿಯವನನ್ನು ಇಷ್ಟ ಪಟ್ಟಿದ್ದಾಳೆ. ನಮ್ಮ ಮನೆಯಲ್ಲಿ ಯಾರಿಗೂ ಒಪ್ಪಿಗೆ ಇಲ್ಲ. ಆದರೆ ಅವರು ಮದುವೆ ಮಾಡಿಕೊಳ್ಳುತ್ತೇವೆಂದು ಹಠ ಹೂಡಿದ್ದಾರೆ. ಮದುವೆ ಮಾಡ್ಬೋದಾ ನಾವು?"

"ಖಂಡಿತ ಮಾಡ್ಬೇಡಿ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ, 'ಸ್ವಧರ್ಮೇ ನಿಧನಮ್ ಶ್ರೇಯಃ, ಪರಧರ್ಮೋ ಭಯಾವಹಃ' ಅಂತ. ಹಾಗಾಗಿ ಬೇರೆ ಜಾತಿಯವರನ್ನು ಮದುವೆ ಮಾಡುವುದು ಸಂಪ್ರದಾಯವೂ ಅಲ್ಲ, ಅದು ಶ್ರೇಯಸ್ಸೂ ಅಲ್ಲ. ಜೊತೆಗೆ ನಿಮ್ಮ ಮಗಳಿಗೆ ಕುಜ ದೋಷವು ಅಧಿಕವಾಗಿರುವುದರಿಂದ ಅವಳಿಗೆ ಮದುವೆಯಾಗುವುದು ತುಂಬ ನಿಧಾನ. ಮದುವೆಯಾದರೂ ಡೈವರ್ಸ್ ಆಗುತ್ತೆ!"

ಮತ್ತೊಂದು ಕಡೆ ತಮ್ಮ ಕಷ್ಟವನ್ನು ಹೇಳಿಕೊಂಡ 'ಶಿಷ್ಯ'ರಿಗೆ 'ಗುರು'ಗಳೊಬ್ಬರು ಉಪದೇಶ ಮಾಡಿದ್ದು 'ದಿನವೂ ಶಂಕರಾಚಾರ್ಯರ ಸೌಂದರ್ಯ ಲಹರಿಯನ್ನು ಹೇಳಿಕೊಳ್ಳಿ. ನಿಮಗೆ ಕೆಲಸ ಸಿಗುತ್ತೆ. ಈಗ ನಿಮ್ಮ ಗ್ರಹಗತಿಗಳು ಚೆನ್ನಾಗಿಲ್ಲ.'

ಜ್ಯೋತಿಷ್ಯ ಶಾಸ್ತ್ರವು ಬಹಳ ಪ್ರಾಚೀನ ವಿದ್ಯೆ. ಬಹಳ ಕಷ್ಟವಾದ ವಿದ್ಯೆ. ಬಹಳ ಅಧ್ಯಯನ ಅಗತ್ಯವಿರುತ್ತೆ. ಟಿ.ವಿ.ಗಳಲ್ಲಿ ಬಿತ್ತರವಾಗುತ್ತಿರುವ ಜ್ಯೋತಿಷ್ಯ ಕಾರ್ಯಕ್ರಮಗಳಲ್ಲಿ ಬರುವ ಜ್ಯೋತಿಷಿಗಳ ಪಾಂಡಿತ್ಯದ ಬಗ್ಗೆ ನನ್ನ ತಕರಾರೇನೂ ಇಲ್ಲ. ಆದರೆ ಹೀಗೆ ತಪ್ಪುದಾರಿಗೆ ಎಳೆಯುವ ಜ್ಯೋತಿಷಿಗಳಿಗೆ ಗೊತ್ತಿರದ ಸಂಗತಿಯೇನಲ್ಲ. ಅವರಿಗೂ ಗೊತ್ತು, ಜ್ಯೋತಿಷ್ಯದ ಗ್ರಹಗಳು ಹೇಗೆ ಕೆಲಸ ಮಾಡುತ್ತವೆ, ಮತ್ತೆ ಕರ್ಮವನ್ನು ಕಳೆದುಕೊಳ್ಳದ ಹೊರೆತು ಯಾವ ಕಷ್ಟವಾಗಲೀ ಸುಖವಾಗಲೀ ನೀಗುವುದಿಲ್ಲವೆಂದು. ಪೂರ್ವಜನ್ಮದ ಕರ್ಮಗಳು, ವಾಸನಾಬಲಗಳು ಎಲ್ಲದರ ಬಗ್ಗೆ ಓದಿರುತ್ತಾರೆ. ದಶೆ-ಭುಕ್ತಿ ಲೆಕ್ಕಾಚಾರ ಹಾಕಿ ಇಂಥ ಕರ್ಮಗಳನ್ನು ಅನುಭವಿಸಲೇ ಬೇಕಾಗುತ್ತೆ ಎಂದೂ 'ಭವಿಷ್ಯವನ್ನು' ಊಹಿಸುತ್ತಾರೆ. ಆದರೆ ಮಧ್ಯೆ ಹಣಕ್ಕಾಗಿ ನಾಟಕವಾಡುತ್ತಾರೆ.

ಕುಜದೋಶದ ಬಗ್ಗೆ ಸುಳ್ಳು ಹೇಳುತ್ತಾರೆ. ಗುರು ಬಲಕ್ಕೂ ಮದುವೆಗೂ ಸಂಬಂಧ ಕಲ್ಪಿಸುತ್ತಾರೆ. ಪಂಚಾಂಗದಲ್ಲಿರುವ 'ಗಣ - ಗುಣ'ಗಳನ್ನು ಆಧಾರವನ್ನಾಗಿಟ್ಟುಕೊಂಡು ಮದುವೆ ಮುರಿಯುತ್ತಾರೆ. ಕಾಲ್ಗುಣ ಕೈಗುಣವೆಂಬ ಅಪ್ರಬುದ್ಧ ವಿಷಯಗಳನ್ನು ಸಾರುತ್ತಾರೆ. ಇವೆಲ್ಲವೂ ಅವೈಜ್ಞಾನಿಕವೆಂದು ನಾನು ಹೇಳುವುದಿಲ್ಲ. ಇವು ಜ್ಯೋತಿಷ್ಯವೂ ಸಹ ಅಲ್ಲ! ಇನ್ನು ವಿಜ್ಞಾನವೆಲ್ಲಿಂದ ಬಂತು!!

ನನಗೆ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಬಹಳ ಗೌರವವಿದೆ. ಸಂಪೂರ್ಣವಾಗಿಯಲ್ಲದಿದ್ದರೂ ಅನೇಕ ಸಲ ಸರಿಯಾದ ಉತ್ತರ ಕೊಟ್ಟಿರುವ ಜ್ಯೋತಿಷ್ಯದ ಬಗ್ಗೆ ವಿಸ್ಮಯ ಭಾವವಿದೆ. ಪುನರ್ಜನ್ಮ-ಕರ್ಮ ಇವುಗಳಲ್ಲಿ ಎಳ್ಳಷ್ಟೂ ನಂಬಿಕೆಯಿಲ್ಲದ ನನಗೆ intuition ಎಂಬುದರ ಬಗ್ಗೆ ಸಂಪೂರ್ಣ ನಂಬಿಕೆಯಿದೆ. ಅನೇಕ ಜನರು ನಮ್ಮ ಬದುಕಿನಲ್ಲಿ ಬಂದು ಹೋಗುತ್ತಾರೆ, ಕೆಲವರು ಹತ್ತಿರವಾಗುತ್ತಾರೆ, ಕೆಲವರು ಇದ್ದಕ್ಕಿದ್ದ ಹಾಗೆ ಮರೆಯಾಗುತ್ತಾರೆ, ಕೆಲವೊಮ್ಮೆ ಕುಣಿದು ಕುಪ್ಪಳಿಸುವ ಮನೋಭಾವನೆ, ಮತ್ತೆ ಕೆಲವೊಮ್ಮೆ ಕಾರಣವೇ ಇಲ್ಲದೆ ಖಿನ್ನತೆ, ಆರೋಗ್ಯವಾಗಿಯೇ ಇರುವ ವ್ಯಕ್ತಿ ಹಠಾತ್ತನೆ ರೋಗಗ್ರಸ್ತನಾಗುತ್ತಾನೆ, ಇದ್ದಕ್ಕಿದ್ದ ಹಾಗೇ ಸಾಯುತ್ತಾನೆ - ಇವೆಲ್ಲದರ ಬಗ್ಗೆ ನನಗೆ ಅಚ್ಚರಿಯಿದೆ, ಮತ್ತು ನನಗೆ ಇವೆಲ್ಲಕ್ಕೂ ಜ್ಯೋತಿಷ್ಯವು ತಕ್ಕ ಮಟ್ಟಿಗೆ convince ಆಗುವ ಉತ್ತರ ಕೊಟ್ಟಿದೆ. ಈ ಉತ್ತರಗಳನ್ನು ಕಂಡುಕೊಳ್ಳಲು ಅಗತ್ಯವಿರುವ ಶ್ರಮ, ಅದಕ್ಕೆ ಬೇಕಾದ ಗಣಿತಜ್ಞಾನವನ್ನು ತಿಳಿದುಕೊಳ್ಲಲು ಒಬ್ಬ ಜ್ಯೋತಿಷಿಯನ್ನೇ ಕೇಳಬೇಕು.ಇನ್ನೂ ಟೈಮ್ ಪಾಸ್ ಜ್ಯೋತಿಷ್ಯ - ಅಂದರೆ - ಪಾಕೆಟ್ ಕ್ಯಾಲೆಂಡರ್‍ನಲ್ಲಿ ಬರುವುದು (ದಿನಭವಿಷ್ಯದ್ದೇ longer format), ಎಸ್ಸೆಮ್ಮೆಸ್ಸುಗಳಲ್ಲಿ ಮೂರು ರೂಪಾಯಿ ದರೋಡೆ ಮಾಡಿ ಮೊಬೈಲಿನ ಸ್ಥಳವನ್ನು ಕಸಿದುಕೊಳ್ಳುವುದು, exhibition-ಗಳಲ್ಲಿ ಭವಿಷ್ಯವಾಣಿ ನುಡಿಯುವ ರೋಬೋಟು ಜ್ಯೋತಿಷ್ಯ, ಮನೆಯ ಮುಂದೆಯೇ ಬಂದು ನಮ್ಮ ಭವಿಷ್ಯವನ್ನು ತಿಳಿದುಕೊಳ್ಳುವಂತೆ ನಮಗೇ ಹೇಳುವ ಗಿಣಿ ಹಿಡಿದುಕೊಂಡಿರುವ ಗಿಡುಗನ ಜ್ಯೋತಿಷ್ಯ, ಕಲಾಸಿಪಾಳ್ಯದ ಕೊಚ್ಚೆ ಕೊಂಪೆಯಲ್ಲಿಯೂ 'ಕೈ ಮೇಲೆ ಕಾಶಿ' ಆಡುವವನಂತೆ ಕವಡೆ ಹಾಕಿ ಭವಿಷ್ಯ ಹೇಳುವುದು, ಬರವಣಿಗೆಯನ್ನು ಓದಿ prediction ಕೊಡುವ ಬರವಣಿಗೆ ತಜ್ಞನ ಭವಿಷ್ಯವಾಣಿ - ಒಂದೇ ಎರಡೇ!! ಇವೆಲ್ಲವನ್ನೂ ಮನರಂಜನೆಯೆಂದು ಪರಿಗಣಿಸಿ ನಕ್ಕು ಸುಮ್ಮನಾಗಬಹುದು. ಟಿ.ವಿ.ಯಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಮನರಂಜನಾ ಕಾರ್ಯಕ್ರಮಗಳು ಮಾತ್ರ ಮಕ್ಕಳ ಹಾಡುಗಾರಿಕೆ ಕಾರ್ಯಕ್ರಮಕ್ಕಿಂತ ಹೋಪ್‍ಲೆಸ್ಸು. ಅಕ್ಷಮ್ಯ. ಶೈಕ್ಷಣಿಕ ಕಾರ್ಯಕ್ರಮಗಳು, ಶಾಸ್ತ್ರೀಯ ಸಂಗೀತ, ಪ್ರವಾಸ, ರಸಪ್ರಶ್ನೆ, ಹಳೆಯ ಒಳ್ಳೆಯ ಚಲನಚಿತ್ರಗಳು, ಪರಿಸರದ ಕಾರ್ಯಕ್ರಮಗಳು - ಇವು ಯಾವುವೂ ತೋಚುವುದೇ ಇಲ್ಲ. ಮಕ್ಕಳ ಹಾಡುಗಾರಿಕೆ, ಸುಡುಗಾಡು ಧಾರಾವಾಹಿಗಳು, ಜ್ಯೋತಿಷ್ಯ ಕಾರ್ಯಕ್ರಮಗಳನ್ನು ಬಿಟ್ಟರೆ ಖಾಸಗಿ ಚಾನೆಲ್ಲುಗಳಲ್ಲಿ ಅಷ್ಟಾಗಿ ಬೇರೇನೂ ಬರುತ್ತಿಲ್ಲ. ಪಾಪ, ಚಂದನ ಹಾಗಲ್ಲ!

ಈ ಲೇಖನಕ್ಕಾಗಿ ನಾನು ಒಂಭತ್ತು ರೂಪಾಯಿ ಖರ್ಚು ಮಾಡಿದ್ದೇನೆ. ಇದುವರೆಗೂ ನಾನು ಕೆಲಸ ಮಾಡಿರುವ ಅತ್ಯಂತ ದುಬಾರಿ ಬ್ಲಾಗ್ ಲೇಖನವಿದು.

past arun ಎಂದು 51515 ಗೆ ಎಸ್ಸೆಮ್ಮೆಸ್ಸು ಕಳುಹಿಸಿದ್ದಕ್ಕೆ ಈ ಉತ್ತರದ ಸಂದೇಶ ಬಂದಿತು.

Dear Arun, ..........., in your previous lives you were born twice as humans and twice as animals. In your human phase, you were born as a person who had great interest in science and numbers. And in your animal phase, you were born once as a kangaroo and the second time as a penguin. There is a long list of qualities that can still be seen in you.

ನನ್ನಲ್ಲಿ ಕಾಂಗರೂ, ಪೆಂಗ್ವಿನ್ನಿನ ಗುಣಲಕ್ಷಣಗಳು ಏನಿವೆಯೋ ದೇವರಿಗೇ ಗೊತ್ತು!

ನನ್ನ ಹೆಂಡತಿಯ ಹೆಸರನ್ನು ಹಾಕಿ ಕಳುಹಿಸಿದಾಗ ಬೇರೆಯದೇ ಹೇಳಿದ. ಆದರೆ, ಅಮ್ಮನ ಹೆಸರು ಹಾಕಿ ಕಳುಹಿಸಿದಾಗ ನನ್ನ past life ಯಥಾವತ್ ಕೊಟ್ಟುಬಿಟ್ಟ. ಇರಬಹುದೇನೋ, ನಾನೂ ಕಾಂಗರೂ ಆಗಿದ್ದೆ, ಅಮ್ಮನೂ ಆಗಿದ್ದರೇನೋ. ಕಾಂಗರೂ ಹೊಟ್ಟೆಯಲ್ಲಿ ಕಾಂಗರೂ ಹುಟ್ಟಿದ ಹಾಗೆ!!

ಜ್ಯೋತಿಷಿಗಳ ಬಳಿ ಹೋಗುವ ಮುನ್ನ ನೆನಪಿಡಬೇಕಾದ ವಿಷಯಗಳು ಇವು ಎಂದು ನಾನು ಭಾವಿಸುತ್ತೇನೆ:

೧. ನಡೆಯಬೇಕಾಗಿರುವುದು ನಡೆದೇ ತೀರುತ್ತೆ. ಕುಕ್ಕೆಸುಬ್ರಹ್ಮಣ್ಯಕ್ಕೆ ಹೋಗಿ ಸಂಸ್ಕಾರ ಮಾಡಿಬಿಟ್ಟರೆ ನಡೆಯಬೇಕಾದ್ದು ತಪ್ಪುವುದಿಲ್ಲ. ಪೂಜೆ ಪುನಸ್ಕಾರಗಳು ಅನೇಕರಿಗೆ, ಅದರಲ್ಲೂ ಆಸ್ತಿಕರಿಗೆ ಮನಸ್ಸಿಗೆ ಸಮಾಧಾನ ಕೊಡಬಹುದು. ಆದರೆ ಎಚ್ಚರಿಕೆಯಿಂದಿರಬೇಕು, ಅವು ಮಾರಕವೂ ಆದೀತು. 'ಎಲ್ಲ ಪೂಜೆ ಮಾಡಿದರೂ ನನಗೆ ಒಳ್ಳೇದಾಗಲಿಲ್ಲ' ಎಂಬ ಭಾವನೆ ಬಂದು ದೇವರ ಬಗ್ಗೆಯೇ ತಿರಸ್ಕಾರ ಭಾವನೆ ಬರಬಹುದು.

೨. ರಾಹು - ಕೇತುಗಳೆಂಬ ಗ್ರಹಗಳಿಲ್ಲ. ಖಗೋಳತಜ್ಞರ ಗ್ರಹಗಳೇ ಬೇರೆ, ಜ್ಯೋತಿಷ್ಯಶಾಸ್ತ್ರದವರ ಗ್ರಹಗಳೇ ಬೇರೆ. ಇಲ್ಲಿ 'ಗ್ರಹ'ವೆಂಬುದು ಲೆಕ್ಕಾಚಾರದ ವಸ್ತುವಷ್ಟೆ. ಈ ಗ್ರಹಗಳಿಗೆ ಮಿತ್ರರೂ ಶತ್ರುಗಳೂ ಇರುತ್ತಾರೆ. ಮನುಷ್ಯನ ಬದುಕಿನ ಮೇಲೆ ಪರಿಣಾಮ ಬೀರುತ್ತವೆಂಬ ನಂಬಿಕೆಯು ಜ್ಯೋತಿಷ್ಯ ಶಾಸ್ತ್ರದ ಬುನಾದಿ.

೩. 'ನನ್ನ ಸಾವು ಯಾವಾಗ?' ಎಂಬ ಪ್ರಶ್ನೆಗೆ ಜ್ಯೋತಿಷ್ಯವು ಉತ್ತರ ಕೊಡಲು ಕಷ್ಟಸಾಧ್ಯ. ಈ ಪ್ರಶ್ನೆಯನ್ನು ಒಬ್ಬ ಜ್ಯೋತಿಷಿಯನ್ನು ಕೇಳುವುದು ಅನುಚಿತ.

೪. ಹೋಮ ಹವನಗಳಿಂದಾಗಲೀ, ಹೆಸರು ಬದಲಿಸುವುದರಿಂದಾಗಲೀ, ಮಂತ್ರಪಠಣದಿಂದಾಗಲೀ, ನವಗ್ರಹ ಸುತ್ತುವುದರಿಂದಾಗಲೀ, ಪೂಜೆ ಮಾಡುವುದರಿಂದಲೇ ಯಶಸ್ವಿ ಬರುವುದಾದರೆ ಶ್ರಮಕ್ಕೆ, ಶ್ರದ್ಧೆಗೆ ಬದುಕಿನಲ್ಲಿ ಸ್ಥಳವೆಲ್ಲಿ?

ಸ್ವಾಮಿ ವಿವೇಕಾನಂದರ ಈ ಮಾತುಗಳು ಅದೆಷ್ಟು ಅರ್ಥಪೂರ್ಣ! ಅದೆಷ್ಟು ಶುಭ ಪ್ರಚೋದನೀಯ!! "I am the maker of my destiny!"

ವಿಧಿವಾದವನ್ನೊಪ್ಪುವವರು ಈ ಮಾತುಗಳನ್ನು ಒಪ್ಪಲಾರರು. ನಾನೇ ಮೇಲೆ ಹೇಳಿರುವಂತೆ 'ನಡೆಯಬೇಕಾಗಿರುವುದು ನಡೆದೇ ತೀರುತ್ತೆ!' ಎಂಬ ಮಾತು ವಿವೇಕರ ಮಾತಿಗೆ ವಿರೋಧಾಭಾಸದಂತಿರುವಂತೆ ಮೇಲ್ನೋಟಕ್ಕೆ ತೋರುತ್ತೆ. ಆದರೆ ನಡೆಸಬೇಕಾಗಿರುವುದು ನಾವೇ. 'ಎಲ್ಲವೂ ದೈವೇಚ್ಛೆಯೆಂದು ಕೈ ಕಟ್ಟಿ ಕುಳಿತಿರುವುದು ಮೌಢ್ಯವಷ್ಟೆ!

-ಅ
04.06.2009
9.30PM

Tuesday, June 2, 2009

ಶಾಲೆ

ಶಾಲೆ ಪುನರಾರಂಭವಾಯಿತು. ಈ ವರ್ಷವು ಕಳೆದ ವರ್ಷಕ್ಕಿಂತ ಹೇಗೆ ಭಿನ್ನವಾಗಿಸಬಹುದೆಂಬ, ಹೇಗೆ ಉತ್ತಮವಾಗಿಸಬಹುದೆಂಬ ಚಿಂತನಾಕಾರ್ಯವು ಈ ವರ್ಷವೂ ಕಳೆಯುವುದರೊಳಗೆ ಮುಗಿಯುವುದೆಂದುಕೊಂಡಿದ್ದೇನೆ.

ನನ್ನ ಪ್ರೀತಿಯ ಮಕ್ಕಳಿಗೆ ಪುನಃ ಸ್ವಾಗತ.. ಅವರಿಗೆ ಮತ್ತು ನನಗೆ "all the best!"

-ಅ
03.06.2009
11.15PM

Friday, May 29, 2009

ಹುಟ್ಟುಹಬ್ಬದ ಶುಭಾಶಯಗಳು

ಪ್ರೀತಿಯ ವಿಜಯಾ,

ಹರಕೆಯೊಲುಮೆಯೊಂದನೇ
ಹರಿವ ನದಿಯ ಹೊನಲು ತರಲು
ಅಲ್ಲೆ ತಂಪು ಕೆಂಪು ಸೊಂಪು
ಎಲ್ಲ ಸುಖವು ಕಣ್ಣ ಹೊರಳು
ಸತ್ಯಮಿಥ್ಯವರಿಯದೇ.

ಪ್ರೀತಿಯ ಶ್ರೀಧರ,

ಇರುವನೊಬ್ಬ, ಜನ್ಮವಿರಲು ಮುಂದೆ ಮುಂದೆಯೇ
ಅವನೆ ಗಿಡಕೆ ಹೂವಿನಂತೆ ಬೆಳಗುವಂತೆಯೇ.
ಅಂಥ ಹೂವು ನಿನಗೆ ಕೊಡುಗೆ, ಎನ್ನ ಸೋದರ
ಜನ್ಮವಿರಲು ಮುಂದೆ, ನೀನೆ, ಗೆಳೆಯ, ಶ್ರೀಧರ.

-ಅ
29.05.2009
11PM

Sunday, May 24, 2009

ಜೈ ಬೆಂಗಳೂರು!
ನಾನೂ ಶ್ರೀಕಾಂತನೂ "ಯಾಕೋ ನಮ್ಮ ರಾಯಲ್ ಚಾಲೆಜರುಗಳು ರಾಯಲಿ ಚಾಲೆಂಜ್ಡ್ ಆಗಿಬಿಟ್ಟಿದ್ದಾರೆ" ಎಂದು ಕೊಡಗಿನ ಅಡವಿಯೊಳಗೆ ಮಾತನಾಡಿದ್ದು ಆಫ್ರಿಕಾವರೆಗೂ ಕೇಳಿಸಿಬಿಟ್ಟಿತೇನೋ.

ನಾನು 'ಇಂಥ' ಕ್ರಿಕೆಟ್ಟು ಮ್ಯಾಚುಗಳನ್ನು ನೋಡುವವನೇ ಅಲ್ಲ. ನೋಡಲು ಬಹುಮುಖ್ಯ ಕಾರಣ ರಾಹುಲ್ ದ್ರಾವಿಡ್ ಆಡುತ್ತಿದ್ದಾನೆಂಬುದು. ಎಷ್ಟೋ ಏಕದಿನ ಪಂದ್ಯಗಳನ್ನೇ ದ್ರಾವಿಡ್ ಔಟಾದ ಬಳಿಕ ಟಿ.ವಿ. ಆಫ್ ಮಾಡಿ ಬೇರೆ ಕೆಲಸ ಮಾಡಿದ್ದುಂಟು. ಈ ಸಲದ ಐಪಿಯೆಲ್ಲನ್ನೂ ಅಷ್ಟೆ. ಮಧ್ಯೆ ಅನೇಕ ಪಂದ್ಯಗಳನ್ನು ನೋಡಿಲ್ಲ ನಾನು. ದ್ರಾವಿಡ್ ಮರಳಿ ಬಂದಾಗಿನಿಂದ ನೋಡುತ್ತಿದ್ದೇನೆ. ಆದರೆ ಈ ಸಲ ದ್ರಾವಿಡ್ ಔಟಾದ ಬಳಿಕವೂ ನೋಡಿದ್ದು ನನ್ನ ಸಾಧನೆಯೇ ಸರಿ.ಬೆಂಗಳೂರು ತಂಡ ಬರೀ ಸೋಲುತ್ತೆ ಎಂಬ ಬೇಸರವೂ ಇತ್ತು ಪಂದ್ಯಗಳು ಆರಂಭವಾದಾಗ. "ಯಾವಾಗಲೂ ಹೀಗೆಯೇ. ನಾವು support ಮಾಡುವ ಟೀಮು ಸೋಲುತ್ತಿರುತ್ತಲ್ಲ?" ಎಂಬ ಕೊರಗಿಗೆ ಸ್ವಲ್ಪ ಕಾಲ ಅಪವಾದವುಂಟಾಯಿತು. ಫೈನಲ್ಲಿನಲ್ಲಿಯೂ ಈ ಅಪವಾದವು ಮುಂದುವರೆದಿದ್ದರೆ ಚೆನ್ನಾಗಿರುತ್ತಿತ್ತು. ಅಂತೂ ಮ್ಯಾಚುಗಳು ಮುಗಿದಿದೆ. ನಾವು support ಮಾಡುತ್ತಿದ್ದ ಟೀಮು ಗೆದ್ದಿಲ್ಲ. ಆದರೆ ಚೆನ್ನಾಗಿಯೇ ಆಡಿದರು. Better luck next time.

ಹಾಗೆಯೇ ಗೆದ್ದವರಿಗೆ ಶುಭಾಶಯ.ಮಲ್ಯಾಗೆ ನಷ್ಟವಾದ ಹಣದ ಚಿಂತೆ, ಕಟ್ರೀನಾಗೆ ತಮ್ಮ ಟೀಮು ಸೋತಿದ್ದರೂ ನೃತ್ಯವಾಡಬೇಕಾಯಿತಲ್ಲವೆಂಬ ಕರ್ಮದ ಚಿಂತೆ. ನನ್ನ ಚಿಂತೆಯೇ ಬೇರೆ. ಮುಂದಿನ ಸಲ ದ್ರಾವಿಡ್ ಇರುತ್ತಾನೋ ಇಲ್ಲವೋ! ಹಾಗಾಗಿ ನಾನು ನೋಡುತ್ತೇನೋ ಇಲ್ಲವೋ!

ಏನೇ ಆದರೂ ಟೆಸ್ಟ್ ಮ್ಯಾಚುಗಳನ್ನು ನೋಡುವ ಮಜ ಈ ಒನ್ ಡೇ ಆಗಲೀ ಐಪಿಯೆಲ್ಲಾಗಲೀ ಇರೋದಿಲ್ಲ! ಯಾಕೆಂದರೆ.....

-ಅ
24.05.2009
11.30PM

Friday, May 22, 2009

ನೆನಪಿನ ಬೆಳಕು

ಎಷ್ಟೋ ದಿನಗಳು ಸಂದರೂ
ಕಣ್ಣಿಗೆ ಕಟ್ಟಿದ ಹಾಗಿದೆ.
ಕಂಗಳು ಕೂಡಿದ ಗಳಿಗೆಯೇ
ಎದುರಿಗೆ ನಿಲ್ಲದೆ ಸಾಗಿದೆ!

ಕಣ್ಣು ಹೊಳೆಯುತ ಭಾವ ಮೊಳೆಯುತ
ಮೌನದಿಂದಲೆ ಮಾತನಾಡಿದ
ಆ ಕ್ಷಣಗಳ ಮರೆತೆನೆ?
ಒಲುಮೆ ಮೊಗದಲಿ ಪರುಶ ಸೊಗದಲಿ
ಮನದ ಮಾತುಗಳೆಲ್ಲ ಅಡಗಿದ
ನೆನಪಿನಂಗಳ ತೊರೆದೆನೆ?

ಜಗವನು ತೊರೆಯುವ ಹಂತದಲಿ
ಎದೆಯೊಳಗಡಗಿದ ಬೇಗೆ.
ಮರೆಯದ ಮಹದಾಲಿಂಗನವು
ಸೊಗವನು ಕೇಳಿದ ಭಕುತನಿಗೆ
ಸಗ್ಗವೆ ದೊರಕಿದ ಹಾಗೆ!

ಮನದೊಳಗಡಗಿದ ಪ್ರೀತಿಯ ಪರದೆಗೆ
ಮರೆಸಿತು ಎವೆಗಳ ಚುಂಬನವು!
ಪ್ರೀತಿಯ ಪರದೆಯು ನೆನಪಿನ ಬೆಳಕಿಗೆ
ಸೋಕುತ ಹರಿಯಿತು ಕಂಬನಿಯು.

-ಅ
23.05.2009
12.40AM

Wednesday, May 20, 2009

ಅರಿಯದೆ ಮೂಡಿದ ಕಮ್ಬನಿ

ಅರಿಯದ ಹಾಗೇ ಮೂಡಿತು ಕಣ್ಣಲಿ
ಬಿಂದುವಿನಂತೆ ಎರಡು ಹನಿ.
ಕೇಳಿಸದಾಯಿತು ಎದೆಯ ದನಿ.
ಎಲ್ಲಡಗಿತ್ತೋ ಸಲ್ಲದ ತಳದಲಿ
ಚೆಲ್ಲಿತು ಮೆಲ್ಲನೆ ಕಮ್ಬನಿ.

ಇರುಳಲಿ ಹಾಡಿದ ಗೀತೆಯ ರಾಗಕೆ
ಕೊರಳಿನ ನೋವಿನ ಮೇಳವು.
ಮೋಹವೆ ಹೊಸೆದಿಹ ಜಾಳವು.
ಕಾದಿಹ ಹೃದಯದ ಪ್ರೇಮದ ಹೂವಿನ
ಮಳೆಯಲಿ ಸಿಡಿಲಿನ ತಾಳವು.

ಅರ್ಧರಾತ್ರಿ ಅರ್ಧಚಂದ್ರ ಬೆಳಗನೆ?
ಅರ್ಧಬೆಳಕು - ಭಯದ ಬದುಕು!
ಎನಿತು ಸತ್ಯವೆನಿತು ಕೆಡುಕು?
ಬರಿಯೆ ಪ್ರಶ್ನೆಗಳಲ್ಲಿ ಅರಿಯದೆರಡು
ಹನಿಯು ಮೂಡೆ ಬದುಕಿನಳುಕು!

-ಅ
18.05.2009
3.30AM

Friday, May 15, 2009

ಅಂತೂ ಹಿಂದಿ ಬಾರದೆ...

ಮದುವೆಯ ನಂತರ 'ವಲಸೆ' ಹೋಗುವ ಪದ್ಧತಿ ಎಲ್ಲಿಂದ ಬಂದಿದೆಯೋ ಗೊತ್ತಿಲ್ಲ, ಆದರೆ ಪದ್ಧತಿಯಂತೂ ಪ್ರಶಂಸನೀಯ. ನಾವು ದಂಪತಿಗಳು ಉತ್ತರಭಾರತಕ್ಕೆ ಹೊರಟುಬಿಟ್ಟೆವು. ಮಜವೆಂದರೆ ಇಬ್ಬರಿಗೂ ಹಿಂದಿ ಬರೋದಿಲ್ಲ.

"ಹಾಂ"... "ನಹಿ".. "ಆಪ್ ಕಾ ನಾಮ್ ಕ್ಯಾ ಹೈ?".... "ಅಚ್ಛ ಅಚ್ಛ.." ಇಷ್ಟು ಬಿಟ್ಟರೆ ಹೆಚ್ಚೇನೂ ನನಗಾಗಲೀ ರೇಖಾಗಾಗಲೀ ಗೊತ್ತಿಲ್ಲ. ಹಿಂದೊಮ್ಮೆ ನನಗೆ ಹಿಂದಿ ಬರೋದಿಲ್ಲ ಎಂದು ಹೇಳಿ ಹತ್ತಾರು ಜನರಿಂದ ಏಕಕಾಲದಲ್ಲಿ ಉಗಿಸಿಕೊಂಡಿದ್ದೆ. "You are so careless!" ಎಂದು ಒಬ್ಬರು ಅಂದಿದ್ದರು. ಹಿಂದಿ ಕಲಿಯದೇ ಇರುವುದಕ್ಕೂ ಕೇರ್‍ಲೆಸ್‍ನೆಸ್‍ಗೂ ಏನು ಸಂಬಂಧ ಎಂದು ಅರ್ಥವಾಗಿರಲಿಲ್ಲ. ಇನ್ನೊಬ್ಬರು "You are neglecting the National Language" ಎಂದು ಬೈದಿದ್ದರು. ಅರ್ರೆ, ಹಿಂದಿಗೆ ರಾಷ್ಟ್ರೀಯ ಭಾಷೆಯಾಗುವ ಏನು ಅರ್ಹತೆಯೆಲ್ಲಿದೆ? ಇಷ್ಟಕ್ಕೂ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸಿದವರಾದರೂ ಯಾರು? ಎಲ್ಲ ರಾಜಕೀಯವಷ್ಟೆ. ಹೀಗೆಲ್ಲ ನನ್ನ ಸೋಮಾರಿ ಮನೋವೃತ್ತಿಯು ಸಮಝಾಯಿಷಿ ಕೊಡುತ್ತಿರುತ್ತಿತ್ತು. ಈಗಲೂ ಕೊಡುತ್ತಿರುತ್ತೆ.

ಹಾಗಂತ ಇಂಗ್ಲೀಷಿನಲ್ಲೇ 'ಹೊಡೆಯಬಹುದು' ಎಂಬ ಭ್ರಮೆಯೂ ನನಗಾಗಲೀ ರೇಖಾಗಾಗಲೀ ಇರಲಿಲ್ಲ. ಯಾಕೆಂದರೆ ಉತ್ತರ ಭಾರತದಲ್ಲಿ ಬೆಂಗಳೂರಿನ ಹಾಗೆ ಇಂಗ್ಲೀಷ್ ಗುಲಾಮಗಿರಿಯು ಅಧಿಕವಾಗಿಲ್ಲ. ದೊಡ್ಡ ದೊಡ್ಡ ಹೊಟೆಲುಗಳಲ್ಲೂ, ರೆಸಾರ್ಟುಗಳಲ್ಲೂ ತಮ್ಮ ತಮ್ಮ ಕ್ಲಯೆಂಟುಗಳನ್ನು ಅವರು ಹಿಂದಿಯಲ್ಲಿಯೇ ಸ್ವಾಗತಿಸುತ್ತಾರೆ, ಸಂಭಾಷಿಸುತ್ತಾರೆ. ಇದು ನಾಲ್ಕನೆಯ ಬಾರಿ ನಾನು ಉತ್ತರಕ್ಕೆ ಹೋಗುತ್ತಿರುವುದು. (ನಾಲ್ಕು ಸಲ ಹೋದರೂ ಹಿಂದಿ ಕಲಿಯದೆ ಇರುವ ನನ್ನ ಸಾಹಸಕ್ಕೆ ಪ್ರಶಸ್ತಿ ಕೊಡಬೇಕು). ಇವರುಗಳ ಸ್ವಭಾಷಾಪಕ್ಷಪಾತವನ್ನು ನೋಡಿ ಪ್ರತಿ ಸಲವೂ "ಬೆಂಗಳೂರಿಗರು ಬೇರೆಯವರಿಂದ ಕಲಿಯುವುದು ಸಾಕಷ್ಟಿದೆ" ಎಂದುಕೊಳ್ಳುವುದು ನನ್ನ ಹವ್ಯಾಸ.

ದೆಹಲಿಯ ಹೊಟೆಲಿನವನು ನಾವು ಪ್ರಯಾಣಿಕರೆಂದು ತಿಳಿದು ಟೋಪಿ ಹಾಕುತ್ತಿದ್ದಾನೇನೋ ಎಂಬ ಅನುಮಾನವಾಯಿತು. ದೆಹಲಿಯಲ್ಲಿರುವ ಗೆಳೆಯ ವೀರೇಶನನ್ನು ಸಂಪರ್ಕಿಸಿ ಖಚಿತ ಪಡಿಸಿಕೊಂಡೆ. ಅವನು ಹೇಳಿದ ರೇಟಿಗೂ ಹೊಟೆಲಿನವನು ಹೇಳಿದ ರೇಟಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲವಾಗಿದ್ದರಿಂದ ಸ್ವಲ್ಪ ಸಮಾಧಾನವಾಯಿತು. ಅದರಲ್ಲೂ ಆಟೋದವರು, ಅಂಗಡಿಯವರು, ಸೈಕಲ್ ರಿಕ್ಷಾದವರು ಸಂಖ್ಯೆಗಳನ್ನು ಹಿಂದಿಯಲ್ಲಿ ಹೇಳಿಬಿಟ್ಟರಂತೂ ಜೀವ ಬಾಯಿಗೆ ಬಂದು ಬಿಡುತ್ತೆ. ಬರೀ round figures ಒಂದಿಷ್ಟು ಮಾತ್ರ ಗೊತ್ತಷ್ಟೆ. ಹೊಟೆಲಿನವನು ತಾಜಮಹಲನ್ನು ನೋಡಲು ಹೊರಟಿರುವ ನಮಗೆ ಕಾರು ವ್ಯವಸ್ಥೆ ಮಾಡಿಕೊಟ್ಟ. ನಾವು ಬೆಂಗಳೂರಿನಿಂದ ಬಂದಿದ್ದೇವೆಂದು ಅರಿತ ನಂತರ ಆತನ ಹಿಂದಿಯು ಇಂಗ್ಲೀಷಾಯಿತು. ಆತನ ಇಂಗ್ಲೀಷು ಅಮೇರಿಕದವರ ಇಂಗ್ಲೀಷನ್ನು ಅಣಕಿಸುವಂತಿತ್ತು. ಆತನ ಹಿಂದಿಯೇ ಸುಲಭ ಸುಲಲಿತವಾಗಿತ್ತೆಂದೆನಿಸಿತು. ನಮಗೆ ಇಂಗ್ಲೀಷೂ ಸಹ 'ಚೆನ್ನಾಗಿ' ಏನೂ ಬಾರದ ಕಾರಣ ಅಷ್ಟೇನೂ ತಲೆ ಕೆಡಿಸಿಕೊಳ್ಳಲಿಲ್ಲ.

ತಾಜಮಹಲಿಗೆ ಕರೆದೊಯ್ದ ಡ್ರೈವರೋ, ಹರಟೆ ಮಲ್ಲ. ನಮಗೆ ಹರಟೆ ಹೊಡೆಯಲು ಬರುತ್ತೆ - ಕನ್ನಡದಲ್ಲಿ! ಆದರೆ ಅವನು ಏನು ಹೇಳುತ್ತಿದ್ದನೋ ಅದಕ್ಕೆ "ಹಾಂ..." "ಅಚ್ಛ.." ಎಂದೇ ಕಾಲ ಕಳೆಯುತ್ತಿದ್ದೆವು. ಆತ ಏನಾದರೂ ಮಾಹಿತಿ ಹೇಳಿದರೆ, rather, ಆತ ಏನಾದರೂ ಮಾಹಿತಿ ಹೇಳಿದ ಎಂದು ನಮಗೆ ಅನ್ನಿಸಿದರೆ ನಾವು ಇಬ್ಬರೂ ಮುಖ ಮುಖ ನೋಡಿಕೊಂಡು "ಹೀಗೆ ಹೇಳಿರಬೇಕು ಅವನು" ಎಂದು ಇಬ್ಬರೂ ಒಮ್ಮತ ನೀಡಿದರೆ ಮಾತ್ರ ತಲೆಯಾಡಿಸುತ್ತಿದ್ದೆವು. ದೊಡ್ಡ ದೊಡ್ಡ ಹೊಟೆಲುಗಳಲ್ಲಿ ಹಣ ಸುಲಿಯುತ್ತಾರೆ, ಧಾಬಾಗಳಲ್ಲಿ ಊಟ ಚೆನ್ನಾಗಿರುತ್ತೆ, ಕಡಿಮೆ ಹಣ ತೊಗೋತಾರೆ ಎಂದು ಹೇಳಿ ಅದ್ಭುತವಾದ ಊಟ ಕೊಡಿಸಿದ. ತಾಜಮಹಲಿನ ಆವರಣದಲ್ಲಿ ಸುಲಿಯುವವರಿರುತ್ತಾರೆ ಎಚ್ಚರದಿಂದಿರಿ ಎಂದೆಲ್ಲ ಹೇಳಿಕೊಟ್ಟ. ಅವನ ಮಾತಿನಂತೆಯೇ ಅಡಿಗೊಬ್ಬ ದರೋಡೆಕೋರ ತಾಜಮಹಲಿನ ಮುಂದೆ ಕಾಣಿಸಿಕೊಂಡರು. ಸೈಕಲ್ ರಿಕ್ಷಾದವನಿಗೆ ಹತ್ತು ರೂಪಾಯಿಗಿಂತ ಹೆಚ್ಚು ಹಣ ಕೊಡಬೇಡಿಯೆಂದು ಡ್ರೈವರು ಹೇಳಿದ್ದನಾದ್ದರಿಂದ ಸೈಕಲ್‍ನವನು ಏನೇ ಮಾತನಾಡಿದರೂ ನಾನು "ದಸ್.. ದಸ್.." ಎನ್ನುತ್ತಿದ್ದೆನಷ್ಟೆ. ಅವನು ಅದಕ್ಕಿಂತ ಕಡಿಮೆ offer ಮಾಡಿದ್ದನೋ ಏನೋ, ಅದೂ ಗೊತ್ತಿಲ್ಲ, ನಾನು ಒಂದೇ ಮಂತ್ರವನ್ನು ಜಪಿಸುತ್ತಿದ್ದೆ. "ಮಾರ್ಕೆಟ್ ತೋರ್ಸ್ತೀನಿ.. ಅದು ತೋರ್ಸ್ತೀನಿ.. ಇದು ತೋರ್ಸ್ತೀನಿ.." ಎಂದೆಲ್ಲ ಹೇಳಿದ, ನಾವು "ನಹಿ ನಹಿ..." ಎಂದು ತಾಜಮಹಲಿನ ಬಾಗಿಲಲ್ಲಿ ಇಳಿದುಬಿಟ್ಟೆವು. ಡ್ರೈವರು ರಾತ್ರಿಯ ರೈಲಿಗೆ ಆಟೋ ಮಾಡಿಕೊಂಡು ಹೋಗುವುದು ಹೇಗೆ, ಅವನಿಗೆ ಎಷ್ಟು ಕೊಡಬೇಕು ಎಂದೆಲ್ಲ ಹೇಳಿ ನಮ್ಮನ್ನು ಹೊಟೆಲಿಗೆ ಬಿಟ್ಟು ಮಾಯವಾಗಿಬಿಟ್ಟ.

ಮೊದಲಿನಿಂದಲೂ ಹಿಮಾಚಲಿ, ಉತ್ತರಾಂಚಲಿ ಜನಗಳ ಮೇಲೆ ನನಗೆ ಅಪಾರ ಗೌರವ. ಜನ ತುಂಬ ಒಳ್ಳೆಯವರು ಎಂದು ನನ್ನ ನಂಬಿಕೆ. ಮೋಸ, ಕಪಟ ಅವರನ್ನು ಸುಳಿಯದು ಎಂದು ನಾನು ಹೇಳುತ್ತಲೇ ಇದ್ದಿದ್ದು ರೇಖಾಗೆ ಬೋರು ಹೊಡೆಯಿತು. ಜಗಳಗಳೇ ಅಪರೂಪ. ಟ್ರಾಫಿಕ್ ಜ್ಯಾಮಿಗೆ ಸಿಟ್ಟಾಗುವುದಿಲ್ಲ. ಎದುರುಗಡೆಯೇ ಬಸ್ಸು ತಂದು ನಿಲ್ಲಿಸದವನ ಮೇಲೂ ಬೇಸರಗೊಳ್ಳುವುದಿಲ್ಲ. ಕಾರಿನವನೊಬ್ಬ ಹೈವೇನಲ್ಲೇ ತನ್ನ ಕಾರನ್ನು ನಿಲ್ಲಿಸಿ ಹೋಗಿದ್ದರೂ, ಅವನ ಕಾರಿನ ಹಿಂದೆ ನೂರಾರು ವಾಹನಗಳು ನಿಂತರೂ ಒಂದೂ ಹಾರನ್ ಮಾಡುತ್ತಿರಲಿಲ್ಲ, ಒಬ್ಬನೂ ಸಿಟ್ಟಾಗಿರಲಿಲ್ಲ. ಆ ಕಾರಿನವನು ಐದು ನಿಮಿಷದ ನಂತರ ಬಂದು ಸ್ಟಾರ್ಟ್ ಮಾಡಿ ಹೊರಟ, ಬಳಿಕ ಎಲ್ಲರೂ ಹೊರಟರು. ಪೋಲೀಸಿನವನೂ ಸಹ ಅಲ್ಲಿ ಇಲ್ಲಿ ನೋಡುತ್ತ ಆ ಕಾರಿನವನು ಎಲ್ಲೆಂದು ಹುಡುಕುತ್ತಿದ್ದ, ಅವನು ಬಂದ ಮೇಲೆ ಕೊಂಚವೂ ಬೈಯಲಿಲ್ಲ.

ಇವರುಗಳು ಒಳ್ಳೇ ಜನ ಎಂದಿರುವ ನನ್ನ ಅನಿಸಿಕೆಯು ದೃಢವಾಗಲು ಇನ್ನೊಂದು ಪ್ರಸಂಗ ನಡೆಯಿತು. ದಾರಿಯಲ್ಲಿ ಹೋಗುವಾಗ ಹಿಮಾಚಲಿ ಬಟ್ಟೆ ತೊಡಿಸಿ ಫೋಟೋ ತೆಗೆಯುತ್ತೇವೆಂದು ನಾಲ್ಕೈದು ಜನ ನಿಂತಿದ್ದರು. ಅದೇನೂ ಅಂಗಡಿಯಲ್ಲ. ಅವರೇನೂ ಪ್ರವಾಸೋದ್ಯಮದ ಕಾರ್ಯಕರ್ತರಲ್ಲ. ಘಟ್ಟದಲ್ಲಿ ನಿಂತಿರುವ ನಾಲ್ಕು ಜನರು. ಸರಿ, ನಾವೂ ಬಟ್ಟೆ ತೊಡಿಸಿಕೊಂಡು ಫೋಟೋ ತೆಗೆಸಿಕೊಂಡೆವು. ಮೂರು ಫೋಟೋಗೆ ಇನ್ನೂರು ರೂಪಾಯಿಯೆಂದಾಗ ಗಾಬರಿಯಾಗದೇ ಇರುತ್ತದೆಯೇ? ಹಣ ಕೊಟ್ಟಿದ್ದಕ್ಕೆ ರಸೀತಿಯೂ ಇಲ್ಲ! ನನ್ನ ಹೆಸರು ಬರೆದುಕೊಂಡ. "ಅರ್ರೆ! ಯಾವಾಗ ಕೊಡ್ತೀಯಾಪ್ಪ ಫೋಟೋನ?" ಎಂದು ಕೇಳೋದು ಹೇಗೆ ಹಿಂದಿಯಲ್ಲಿ? ನನ್ನ ಮುಖದ ಮೇಲಿನ ಪ್ರಶ್ನೆ ಅವನಿಗೇ ಅರ್ಥವಾಯಿತೇನೋ ಅನ್ನಿಸುತ್ತೆ, "ಶಿಮ್ಲಾದಲ್ಲಿ ನೀವು ಯಾವ ಹೊಟೆಲಿನಲ್ಲಿರೋದು ಹೇಳಿ, ಅಲ್ಲಿಗೇ ತಂದು ಕೊಡುತ್ತೇವೆ." ಎಂದ. "ನಾವು ಶಿಮ್ಲಾದಲ್ಲಿ ಉಳಿದುಕೊಳ್ಳುವುದಿಲ್ಲ, ನಾರ್ಕಂಡದಲ್ಲಿ ಇರುವುದು" ಎಂದು ಅವನಿಗೆ ತಿಳಿಸಲು ಸಾಕಾಗಿ ಹೋಯಿತು. ಅವನು " ಸರಿ, ವಾಪಸ್ ಬರುವಾಗ ಇಸ್ಕೊಂಡ್ ಹೋಗಿ" ಎನ್ನುವ ಅರ್ಥದಲ್ಲಿ ಹೇಳಿದ. ಬಾರದ ಭಾಷೆಯಲ್ಲಿ ಏನು ಪ್ರಶ್ನೆ ಮಾಡುವುದು ಎಂದು ತಿಳಿಯದೆ "ಸರಿ" ಎಂದು ಹೊರಟೆವು. "ಮೋಸ-ಗೀಸ ಇಲ್ವಾ ಇದರಲ್ಲಿ?" ಎಂದು ಹಿಂದಿಯಲ್ಲಿ ಪದಗಳನ್ನು ಹುಡುಕಿ ನಮ್ಮ ಡ್ರೈವರನ್ನು ಕೇಳಿ ತಿಳಿದುಕೊಳ್ಳುವಷ್ಟರಲ್ಲಿ ಮುಂದಿನ ಊರು ಬಂದೇ ಬಿಟ್ಟಿತ್ತು. ಡ್ರೈವರು ಹೇಳಿದ ಸಾರಾಂಶ ಇಂತಿತ್ತು: "ಜೀ, ಮೋಸ ಮಾಡಿದರೆ ಈ ಊರಿಗೆ ಜನ ಮತ್ತೆ ಬರುತ್ತಾರಾ?" ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯವಿಲ್ಲವೆಂದು ನಾರ್ಕಂಡದಲ್ಲಿ ಮೂರು ದಿನ ಕಳೆದು ವಾಪಸ್ ಬರುವಾಗ ಅದೇ ಹಾದಿಯ ಇನ್ನೊಂದು ಬದಿಯಲ್ಲಿ ಬನ್ನು, ಹಣ್ಣು, ಇತ್ಯಾದಿ ತಿಂಡಿ ಮಾಡುವವನ ಬಳಿ ಕಾರನ್ನು ನಿಲ್ಲಿಸಿದ. ನನ್ನ ಮುಖವನ್ನು ನೋಡಿದ ಆ ವರ್ತಕ "ಹಾಂಜೀ..." ಎಂದು ಹೇಳಿ ಒಂದು ಪೊಟ್ಟಣ ತೆಗೆದು ಕೊಟ್ಟ. ಅದರೊಳಗೆ ನಮ್ಮ ಫೋಟೋ ನೋಡಿ ಆನಂದವಾಯಿತು!

From Valase


ಕಸೋಲಿಯ ರೆಸಾರ್ಟಿನಲ್ಲಿ ಕೆಲಸ ಮಾಡುವ ಹುಡುಗರೂ ಅಷ್ಟೆ, ಹಿಂದಿ ಬಿಟ್ಟರೆ ಅವರಿಗೆ ಬರುತ್ತಿದ್ದುದು ಹಿಮಾಚಲಿ ಭಾಷೆ. ನಮಗೆ ಎರಡೂ ಕಬ್ಬಿಣದ ಕಡಲೆ! ನಾನು ಮಕ್ಕಳಿಗೆ ಪಾಠ ಮಾಡಿ ಅಭ್ಯಾಸವಿರುವುದರಿಂದ, Actions ಮಾಡಿಕೊಂಡು ಮಾತನಾಡುವುದು ಕಲಿತಿರುವುದರಿಂದ, ನಾನು ಏನು ಹೇಳಲು ಹೊರಟಿದ್ದೇನೆಂಬುದು ಅವರುಗಳಿಗೆ ಅರ್ಥವಾಗುತ್ತಿತ್ತೆನಿಸುತ್ತೆ. ಯಾಕೆಂದರೆ ನಾನು ಏನು ಬೇಕು ಎನ್ನುತ್ತಿದ್ದೆನೋ ಅದನ್ನೇ ತಂದುಕೊಡುತ್ತಿದ್ದರು. ಅಂತೂ ಎರಡು ದಿನ ಭಾಷೆ ಗೊತ್ತಿಲ್ಲದೆ ಕಸೋಲಿಯಲ್ಲಿ ಏನು ಬೇಕೋ ಅದೆಲ್ಲವನ್ನೂ ತರಿಸಿಕೊಂಡು, ವಿಚಾರಗಳನ್ನು ಮಾಹಿತಿಗಳನ್ನು ಪಡೆದುಕೊಂಡು ಕಳೆದೆವು. ನಾರ್ಕಂಡದ ರೆಸಾರ್ಟಿನ ಹುಡುಗರೂ ಅಷ್ಟೆ. "ಚಾಯ್?" ಎನ್ನುತ್ತಿದ್ದರು. ಬೇಡವೆಂದರೆ ಅಕ್ಬರನಿಗೆ ವಂದಿಸುತ್ತಿದ್ದ ಸೈನಿಕರಂತೆ ತಲೆಬಾಗಿಸಿ ಹೋಗುತ್ತಿದ್ದರು. ಇನ್ನು ಅಲ್ಲಿನ ಹಳ್ಳಿಯ ಜನರೋ ವಿಪರೀತ ಸ್ನೇಹಜೀವಿಗಳು. (ಸಾಮಾನ್ಯವಾಗಿ ಎಲ್ಲ ಕಡೆ ಹಳ್ಳಿಯವರು ಸ್ನೇಹಜೀವಿಗಳೇ. ತಮ್ಮ ಊರಿಗೆ ಯಾರಾದರೂ ಹೊಸಬರು ಬಂದರೆ, ಅವರು ತಮ್ಮ ಮನೆಗೂ ಅತಿಥಿಯಾಗಿ ಬರಲಿ ಎಂದು ಆಶಿಸುವವರು - ಇದು ನನ್ನ ಅನುಭವ). ನಾನೂ ರೇಖಾ ಇಬ್ಬರೂ ವಿಹಾರಕ್ಕೆಂದು ಹೋಗುತ್ತಿದ್ದಾಗ ಒಬ್ಬ ವೃದ್ಧ ಹೆಂಗಸು ಕಟ್ಟಿಗೆಯನ್ನು ಹೊತ್ತು ಹೋಗುತ್ತಿದ್ದಳು. "ನಮ್ಮ ಮನೆಗೆ ಬನ್ನಿ, ಚಾಯ್ ಕೊಡ್ತೀನಿ" ಎಂದು ಆಹ್ವಾನಿಸಿದಳು. ಆಕೆಯ ಮನೆ ನಾವಿದ್ದ ಜಾಗದಿಂದ ಸುಮಾರು ಮೂರು ಕಿಲೋಮೀಟರು ಇದ್ದಿದ್ದರಿಂದ, ಮತ್ತೆ ಬೆಟ್ಟವನ್ನು ಇಳಿದು ಹೋಗಬೇಕಾಗಿದ್ದರಿಂದ ಅವರ ಆಹ್ವಾನವೇ ಚಹಕ್ಕಿಂತ ರುಚಿಯಾಗಿತ್ತೆಂದು ಅಂಗೀಕರಿಸಿ "ಹೆ ಹ್ಹೆ ಹ್ಹೆ... ಥ್ಯಾಂಕ್ಸ್" ಎಂದೆವು.

From Valase


ಹಟು ಶಿಖರಕ್ಕೆ ಹೋಗುವ ಹಾದಿಯು ಬಹಳ ಸಾಹಸಮಯವಾಗಿದೆ. ಒಂದೇ ಕಾರು ಹೋಗುವಷ್ಟು ಜಾಗ. ಒಂಭತ್ತು ಸಾವಿರ ಅಡಿಯಿಂದ ಹನ್ನೊಂದು ಸಾವಿರ ಅಡಿಗೆ ಮುಕ್ಕಾಲುಗಂಟೆಯಲ್ಲಿ ಏರುವುದು. ಎದುರುಗಡೆಯಿಂದ ಇನ್ನೊಂದು ಕಾರು ಬಂತು. ಬಲಗಡೆ ಪ್ರಪಾತ. ಇಂಥ ರಸ್ತೆಯಲ್ಲಿ ನಮ್ಮ ಡ್ರೈವರು ಎದುರು ಬಂದ ಕಾರಿಗೆ ಜಾಗ ಕೊಡಲು ತಿರುವನ್ನು ಹುಡುಕಿಕೊಂಡು ಕಾರನ್ನು ರಿವರ್ಸ್ ಓಡಿಸಿದನು. ನಮ್ಮ ದಿಗಿಲನ್ನು ಅವನ ಬಳಿ ಹೇಳಿಕೊಳ್ಳುವಂತಿರಲಿಲ್ಲ. ಆ ಸಮಯದಲ್ಲಿ ನನಗೆ ರೇಖಾ, ರೇಖಾಗೆ ನಾನು ಅಷ್ಟೆ. "ಅಂಬಿಗ ನಾ ನಿನ್ನ ನಂಬಿದೆ..." ಎಂಬುವ ಪ್ರಾರ್ಥನೆಯು ನಮ್ಮ ಡ್ರೈವರನಿಗೆ ಮುಟ್ಟಿತೇನೋ, ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ವಾಪಸ್ಸು ಕರೆದುಕೊಂಡು ಬಂದನು. ಬರುವಾಗ "ಹೇಗಿತ್ತು ರಸ್ತೆ? ಭಯ ಆಗೋಯ್ತಾ?" ಎಂದು ನಕ್ಕು ಕೇಳಿದನು. ನಮ್ಮ ಭಯವು ಅವನಿಗೆ ಸಂತೋಷ ತರಿಸಿತ್ತೇನೋ.

From Valase


ಕುಫ್ರಿ ಜಾತ್ರೆಯಲ್ಲಿ ಎಲ್ಲ ಕಡೆ ಜನರು. ಪ್ರವಾಸಿಗರ ಸಮುದ್ರ! ಪಾರ್ಕಿಂಗಿನಿಂದ ಬೆಟ್ಟದ ಮೇಲಿನವರೆಗೂ ಕುದುರೆಯ ಮೇಲೆ ಹೋಗಬೇಕು. ಮೂತ್ರಕ್ಕೆ ಅವಸರವಾಗಿಬಿಟ್ಟಿತ್ತು. ಕುದುರೆಯ ಮೇಲೆ ಕುಳಿತಾಗ ಅದು ಕುಣಿಯುವ ರೀತಿ ಕಲ್ಪಿಸಿಕೊಂಡರೇನೇ ಪ್ಯಾಂಟು ಒದ್ದೆಯಾಗುವಂತಿತ್ತು. ಕುಫ್ರಿ ಶಿಖರದ ಮೇಲೆ ಜಾತ್ರೆ. ಟಾಯ್ಲೆಟ್ಟು ಕೂಡ ಶಿಖರದ ಮೇಲೆಯೇ. ಕುದುರೆಯ ಮಾಲೀಕನಿಗೆ ಟಾಯ್ಲೆಟ್ ಬಳಿ ನಿಲ್ಲಿಸು ಎಂದು ಕೇಳಲು ಹತ್ತು ನಿಮಿಷವಾಯಿತು. ಅವನೂ ಸಹ "ಟಾಯ್ಲೆಟ್ ಊಪರ್ ಹೈ.." ಎಂದಾಗ ಬಾಯಿ ಮುಚ್ಚಿಕೊಂಡು (ಬರೀ ಬಾಯಿಯೇನು?) ಕುಳಿತುಕೊಳ್ಳುವುದಷ್ಟೆ ನನ್ನ ಕೆಲಸವಾಗಿತ್ತು. ಕುದುರೆ ಸವಾರಿ ಬಹಳ ಸೊಗಸಾಗಿತ್ತು. ಸಹಸ್ರಾರು ಕುದುರೆಗಳು ಒಂದರ ಹಿಂದೊಂದು ಹೋಗುತ್ತಿದ್ದುದು, ಅದರ ಮೇಲೆ ಪ್ರವಾಸಿಗರು ಕುಳಿತಿದ್ದು ಈಜಿಪ್ತಿನ ಕಾಲದ ಗುಲಾಮರನ್ನು ಸಾಗಿಸುವ ದೃಶ್ಯವನ್ನು ಕಣ್ಣ ಮುಂದೆ ತಂದಿತು. ನಾವೂ ಸಹ slaves ರೀತಿಯೇ ಕಂಡೆವು. ಇಳಿಜಾರಿನಲ್ಲಿ ಚಿಕ್ಕ ಚಿಕ್ಕ ಹುಡುಗರು ನಾಲ್ಕು ನಾಲ್ಕು ಕುದುರೆಗಳನ್ನು ಓಡಿಸಿಕೊಂಡು ಬರುತ್ತಿದ್ದುದನ್ನು ಕಂಡು ಅಚ್ಚರಿಗೊಂಡೆವು.

From Valase


ಮೇಲೆ ಶಿಖರದಲ್ಲಿ ಒಬ್ಬಾಕೆ ಹಾವನ್ನು ಹೆಗಲ ಮೇಲೆ ಹಾಕಿಕೊಂಡು ಫೋಟೋ ತೆಗೆಸಿಕೊಳ್ಳಲು ಹೇಳುತ್ತಿದ್ದಳು. ಇನ್ನೊಬ್ಬ "ಯಾಕ್" ಮೇಲೆ ಕುಳ್ಳಿರಿಸಿ ಫೋಟೋ ತೆಗೆಸಿಕೊಳ್ಳಲು ಹೇಳುತ್ತಿದ್ದ. ಮತ್ತೊಬ್ಬ ಹಿಮಾಚಲಿ ಬಟ್ಟೆ ತೊಡಿಸಿ ಫೋಟೋ ತೆಗೆಸಿಕೊಳ್ಳಲು ಹೇಳುತ್ತಿದ್ದ. ಒಟ್ಟಿನಲ್ಲಿ ಫೋಟೋ ತೆಗೆಸಿಕೊಳ್ಳುವುದೂ ಸಹ ಈ ಊರಲ್ಲಿ ಒಂದು ವ್ಯಾಪಾರ. ಮತ್ತೆ ಎಲ್ಲ ಜಾತ್ರೆಗಳಲ್ಲೂ ಇರುವಂತೆ ನಾನಾ ಬಗೆಯ ತಿಂಡಿಗಳನ್ನು ಮಾರುತ್ತಿದ್ದರು. ಹಿಮಾಚಲ ಪ್ರದೇಶವು ಬೆಟ್ಟಗಳಿಂದಲೇ ಆವೃತವಾಗಿರುವ ಕಾರಣ ಜಾತ್ರೆಗಳೂ ಶಿಖರಗಳ ಮೇಲೆಯೇ! ವಾಪಸ್ಸು ಹೋಗುವಾಗ ಕುದುರೆಗಾಗಿ ಕಾಯುತ್ತ ಸುಮಾರು ಅರ್ಧ ಗಂಟೆ ಕಾದೆವು. ಕಾಯಲು ತಾಳ್ಮೆ ಕಳೆದುಕೊಂಡ ಇತರ ಪ್ರವಾಸಿಗರನೇಕರು ಕುದುರೆಯನ್ನು ಒದಗಿಸುವ ಮಾಲೀಕನ ಮೇಲೆ ರೇಗಾಡಲು ಆರಂಭಿಸಿದರು. ಆತ ಎಳ್ಳಷ್ಟೂ ಸಹನೆ ಕಳೆದುಕೊಳ್ಳದೆ ಉತ್ತರಿಸಿದ. ನಾವೂ ಏನೂ ಕೇಳಲಿಲ್ಲ. ಏನು ಕೇಳೋದು ಎಂದು ನಮಗೆ ಗೊತ್ತೇ ಇರಲಿಲ್ಲ. ಕುದುರೆ ಬಂದಾಗ ಹತ್ತುವುದು ಎಂದು ಸುಮ್ಮನೆ ನಿಂತಿದ್ದೆವು. ಕುದುರೆ ಬಂತು. ನಾವು ಹೊರಟೆವು! ತಾಳ್ಮೆ ಕಳೆದುಕೊಳ್ಳಬಾರದು ಎಂದು ಅದಕ್ಕೇ ಹೇಳೋದು ಹಿರಿಯರು!! ತಾಳಿದವನು ಬಾಳಿಯಾನು!

ಅಂತೂ ಹಿಂದಿ ಬಾರದೆ ಹಿಮಾಚಲ ಪ್ರದೇಶದಲ್ಲಿ ಐದು ದಿನ ಕಳೆದು ಮತ್ತೆ ದೆಹಲಿಗೆ ಹೋದೆವು. ದೆಹಲಿಯನ್ನು ಸುತ್ತುವ ಕಾರ್ಯಕ್ರಮವೊಂದಿತ್ತು. ಈ ಬಾರಿ ಅಷ್ಟು ತೊಂದರೆಯಾಗದು, ಯಾಕೆಂದರೆ ಗೆಳೆಯ ವೀರೇಶನು "ದೆಹಲಿ ಕರ್ನಾಟಕ ಸಂಘ"ದಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದಾನೆ, ಜೊತೆಗೆ ಕಾರನ್ನೂ ಸಿದ್ಧಪಡಿಸಿಕೊಟ್ಟಿದ್ದಾನೆ, ರೈಲ್ವೇ ಸ್ಟೇಷನ್ನಿನಿಂದ ದೆಹಲಿ ಕರ್ನಾಟಕ ಸಂಘಕ್ಕೆ ಹೋಗಲು ಮಾತ್ರ ಹಿಂದಿ ಬೇಕು, ಆಮೇಲೆ ಅಲ್ಲಿಂದ ವಾಪಸ್ಸು ಸ್ಟೇಷನ್ನಿಗೆ ಬರಲು ಬೇಕಾಗುತ್ತೆ. ಇಷ್ಟು ದಿನವೇ ಹಿಂದಿ ಬಾರದೆ ಯಶಸ್ವಿ(?)ಯಾಗಿದ್ದೇವೆ, ಇನ್ನು ಒಂದು ದಿನ ತಾನೆ? ಎಂದುಕೊಳ್ಳುವಷ್ಟರಲ್ಲಿ ದೆಹಲಿಯ ರೈಲ್ವೇ ಸ್ಟೇಷನ್ನಿನ ಮುಂದೆ ಆಟೋದವರು ನಮ್ಮ ಮೇಲೆ ದಾಳಿ ಮಾಡಿದರು. "ಥೂ, ಈ ಆಟೋದವರು, ಬೋಳಿಮಕ್ಳು, ಎಲ್ಲ ಊರಿನಲ್ಲೂ ಹೀಗೇ ಮೈ ಮೇಲೇ ಬೀಳ್ತಾರೆ, ಮೋಸಗಾರ ನನ್ ಮಕ್ಳು" ಎಂದು ಶಾಪ ಹಾಕುವಾಗ ಸ್ವಲ್ಪ ದಿಗಿಲಾಯಿತು. ಯಾವನಿಗಾದರೂ ಕನ್ನಡ ಗೊತ್ತಾಗಿ ನಮ್ಮನ್ನು ಕಿಡ್ನಾಪ್ ಮಾಡಿಸಿಬಿಟ್ಟರೆ? ತಲೆ ಕೊಡವಿಕೊಂಡು ಸ್ಟೇಷನ್ನಿನ ಹೊರಗಿರುವ ಆಟೋ ಒಂದರ ಬಳಿ ಹೋಗಿ ದೆಹಲಿ ಕರ್ನಾಟಕ ಸಂಘಕ್ಕೆ ಬರ್ತೀಯೇನಪ್ಪ ಎಂದು ಕೇಳಿದೆವು. ಅವನು "ಏಕ್ ಸೌ ಬೀಸ್" ಎಂದ. ನಾನು ಕೈ ಕಾಲು ಬೆರಳುಗಳನ್ನೆಲ್ಲ ಎಣಿಸಿ ಅದು ನೂರಿಪ್ಪತ್ತು ಎಂದು ಅರ್ಥವಾಗಿ "ಏಕ್ ಸೌ.." ಎಂದೆ. ಅವನು ಏನೋ ಹೇಳಿದ, ಅರ್ಥವಾಗಲಿಲ್ಲ. ನಾನು ಪುನಃ ಪುನಃ ಅದೇ ಮಂತ್ರ ಜಪಿಸಿದೆ. ಅವನು ಒಂದು ದೊಡ್ಡ ವಾಕ್ಯ ಹೇಳಿದ. ನನಗೆ ಅದು "ಸಿಂಹಾವಲೋಕನಕ್ರಮದಿನರಿಪಿದಂ ಕವಿರನ್ನಂ" ಎನ್ನುವುದಕ್ಕಿಂತ ಕ್ಲಿಷ್ಟವಾಗಿ ಕೇಳಿಸಿತು. ನಾನು ರೇಖಾಳ ಮುಖ ನೋಡಿದೆ. "ಏನಂತೆ?" ಎಂದೆ. ಅವಳು ಗೊತ್ತಿಲ್ಲವೆಂಬಂತೆ ತಲೆಯಾಡಿಸಿದಳು. ಇವನ ಸಹವಾಸವೇ ಬೇಡವೆಂದು ಮುಂದೆ ಸಾಗಿಬಿಟ್ಟೆವು. ಅವನು ಇನ್ನೂ ಏನೋ ಮಾತನಾಡುತ್ತಿದ್ದ. ಕೂಗಿದ. ನಾವು ಅವನ ಕಡೆ ತಿರುಗಿಯೂ ನೋಡಲಿಲ್ಲ. ಅವನೇನು ನಮ್ಮನ್ನು ವಾಚಾಮಗೋಚರವಾಗಿ ಬೈಯ್ಯುತ್ತಿದ್ದನೋ, ಅಥವಾ ನೂರಕ್ಕಿಂತ ಕಡಿಮೆಗೆ ಬರುತ್ತೇನೆನ್ನುತ್ತಿದ್ದನೋ ಗೊತ್ತೇ ಆಗಲಿಲ್ಲ. ಇನ್ನೂ ಅದು ಸಸ್ಪೆನ್ಸು ನಮಗೆ. ಬೇರೆ ಆಟೋದವನೊಬ್ಬ "ಸೌ" ಗೆ ಒಪ್ಪಿಕೊಂಡ. ಅಂತೂ ದೆಹಲಿ ಕರ್ನಾಟಕ ಸಂಘ ತಲುಪಿಕೊಂಡು ಬದುಕಿದೆವು.

ಅರ್ಧಗಂಟೆ ಸುತ್ತಿದರೂ ದೆ.ಕ.ಸಂ. ಸಿಗದ ಕಾರಣ ರೇಖಾಗೆ ತುಸು ಭೀತಿಯಾಯಿತು. ಇದೇನು ಎಲ್ಲಿಗೆ ಕರೆದುಕೊಂಡು ಹೋ್ಗುತ್ತಿದ್ದಾನೆ ಈತ? ದಿನಬೆಳಗಾದರೆ ಪೇಪರುಗಳಲ್ಲಿ ಓದುತ್ತಿರುತ್ತೇವೆ, ಪ್ರವಾಸಿಗರ ಮೇಲೆಸಗುವ ದೌರ್ಜನ್ಯದ ಬಗ್ಗೆ. ನಮಗೇನಾದರೂ..... ಎನ್ನುವ ಭಯ ಅವಳನ್ನು ಆವರಿಸಿತ್ತು. ಅದೇ ಭಯವು ನನ್ನಲ್ಲೂ ಇತ್ತು ಎನ್ನುವುದು ಪ್ರಾಮಾಣಿಕತೆ. ಆದರೆ ಹಾಗಾಗಲಿಲ್ಲ. ದೆ.ಕ.ಸಂ. ತಲುಪಿದ ನಂತರ ವೀರೇಶ ಮತ್ತು ಕೃಷ್ಣ ಇಬ್ಬರೂ ಸಿಕ್ಕು ನಮ್ಮೊಡನೆ ಕನ್ನಡದಲ್ಲಿ ಮಾತನಾಡಿದಾಗ ಒಳ್ಳೇ ಸಂತೋಷವಾಯಿತು. ಪಕ್ಕದಲ್ಲೇ ಇರುವ ಕರ್ನಾಟಕ ಫುಡ್ ಕಾರ್ಪೊರೇಷನ್ನಿನಲ್ಲಿ ತಿಂಡಿ ತಿಂದು ಹರಟಿ ಹೊರಟಾಗ ಇನ್ನೊಬ್ಬ ಕಾರು ಡ್ರೈವರು ಕಾದಿದ್ದ. ಅವನ ಜೊತೆಯೂ ಹಿಂದಿಯಲ್ಲಿ ಸವರಿಸಬೇಕಲ್ಲಪ್ಪ? ಸರಿ ನೋಡೇ ಬಿಡೋಣ, ಏನಾಗುತ್ತೋ ಆಗಲಿ ಎಂದು ಹೊರಟೆವು.

ಹೊರಟ ಮುಕ್ಕಾಲುಗಂಟೆ ನಾನಾಗಲೀ ರೇಖಾ ಆಗಲೀ ಡ್ರೈವರಿನ ಜೊತೆ ಏನೂ ಮಾತನಾಡಲಿಲ್ಲ. ಅವನೂ ನಮ್ಮನ್ನು ಏನೂ ಕೇಳಲಿಲ್ಲ. ಇಂದಿರಾಗಾಂಧಿ ಮ್ಯೂಸಿಯಮ್ಮಿನ ಮುಂದೆ ನಿಲ್ಲಿಸಿದಾಗ "ಆಪ್ ಕಾ ನಾಮ್?" ಎಂದೆ. ಆಗ ಶುರುವಾಯಿತು ಅವನ ಮಾತು. ದೆಹಲಿಯ ಡ್ರೈವರುಗಳೆಲ್ಲರೂ ಹರಟೆಮಲ್ಲರೇ ಎನ್ನಿಸಿತು. ನಾನು ಮಾತನಾಡಿಸಿದ್ದೇ ತಡ, ಪ್ರತಿಯೊಂದು ಜಾಗದ ಬಳಿಯೂ ಕರೆದೊಯ್ದು ಗೈಡುಗಳಿಗಿಂತಲೂ ಹೆಚ್ಚಾಗಿ ವಿವರಗಳನ್ನು ಕೊಡುತ್ತಿದ್ದ. ನಮಗೆ ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ ಅವನಿಗೆ ಬೇಕಾಗಿರಲಿಲ್ಲ.

ದೆಹಲಿಯ ಐಟಿಡಿಸಿ ಅಂಗಡಿಗೆ ಕರೆದುಕೊಂಡು ಹೋಗಿ ಸೀರೆ ಖರೀದಿಸಲು ಹೇಳಿದ. ಸೀರೆಯೇನೋ ಖರೀದಿಸಿದೆವು, ಅಂಗಡಿಯಲ್ಲಿ ಮೋಸ ಹೋದೆವೋ ಇಲ್ಲವೋ ಗೊತ್ತೇ ಇಲ್ಲ. ಹಾಗಾಗಿ ಅಷ್ಟು ಚಿಂತೆಯಿಲ್ಲ. ಅಂಗಡಿಯಿಂಡ ಹೊರ ಬಂದ ಮೇಲೆ ಏನೋ ಪ್ರಶ್ನೆ ಕೇಳಿದ ಡ್ರೈವರು. ನಾನು "ಓಹ್.. ಓಕೆ ಓಕೆ..." ಎಂದುಬಿಟ್ಟೆ. ಮತ್ತೆ ಅದನ್ನೇ ಕೇಳಿದ. ನಾನು ಪುನಃ "ಓಕೆ.." ಎಂದದ್ದು ಕೇಳಿ ಸುಮ್ಮನಾಗಿಬಿಟ್ಟ. ಆಮೇಲೆ ಸ್ವಲ್ಪ ಹೊತ್ತಾದ ಮೇಲೆ ರೇಖಾ "ಯಾವ ಸೀರೆ ತೊಗೊಂಡ್ರೀ ಅಂತ ಕೇಳಿದ್ದು ಅವನು" ಎಂದಾಗ ತಲೆ ಚಚ್ಚಿಕೊಂಡು ಏನೋ ಉತ್ತರಿಸಿದೆ. ಅವನು ಮುಗುಳ್ನಕ್ಕು, ಹಳೆಯ ಚಾಲಕನಂತೆಯೇ ಆಟೋದಲ್ಲಿ ರೈಲ್ವೇ ಸ್ಟೇಷನ್ನಿಗೆ ಹೇಗೆ ಹೋಗಬೇಕೆಂದು ಟಿಪ್ಸ್ ಕೊಟ್ಟು ಮರೆಯಾದನು. ನಾವು ಬೆಂಗಳೂರಿಗೆ ಬರುವಾಗ ಮತ್ತೊಂದು ವಿನೋದ ಘಟನೆ ನಡೆಯಿತು.

ರೈಲಿನಲ್ಲಿ ಉತ್ತರಭಾರತದ ವೃದ್ಧ ದಂಪತಿಗಳಿಬ್ಬರು ನಮ್ಮ ಕಂಪಾರ್ಟ್ಮೆಂಟಿನಲ್ಲೇ ಇದ್ದರು. ಸುಮಾರು ಇಪ್ಪತ್ತು ಬ್ಯಾಗುಗಳನ್ನು ತಂದಿದ್ದ ಅವರು ಎಲ್ಲ ಕಡೆಯೂ ಆವರಿಸಿಬಿಟ್ಟರು. ಒಂದೂಮುಕ್ಕಾಲು ದಿನ ಅವರು ಹೆಚ್ಚೇನೂ ಮಾಡಲಿಲ್ಲ. ದೊಡ್ಡ ಕವರೊಂದರಲ್ಲಿ ನೂರಾರು ಡೆಲ್ಲಿ ಸೌತೇಕಾಯಿ ಹಾಕಿಕೊಂಡು ಬಂದಿದ್ದನ್ನು ತಿನ್ನುತ್ತಿದ್ದರು. ಟೀ ಕುಡಿಯುತ್ತಿದ್ದರು. ಊಟ ಮಾಡುತ್ತಿದ್ದರು. ಪ್ರತಿಯೊಂದು ಸೇವನೆಯ ನಡುವೆಯೂ ನಿದ್ದೆ ಮಾಡುತ್ತಿದ್ದರು. ರೇಖಾ "ಏನು ಸಂಸಾರ ಮಾಡುತ್ತಾರೋ ಇವರು, ಬರೀ ನಿದ್ದೆ ಮಾಡ್ತಾರೆ.. ಕೂತ್ ಕೂತಲ್ಲಿ ಮಲಗುತ್ತಾರಲ್ಲ?" ಎಂದಳು. ಹೀಗೆ ಸಹಸ್ರಬಾರಿ ಕನ್ನಡದಲ್ಲಿ ಟೀಕೆ ಮಾಡಿದೆವು. ಆತ ನಮ್ಮ ಕಡೆ ತಿರುಗಿಯೂ ನೋಡಲಿಲ್ಲ. ಅವರವರೇ ಹಿಂದಿಯಲ್ಲೇ ಜೋರು ಜೋರಾಗಿ ಮಾತನಾಡಿಕೊಳ್ಳುತ್ತಿದ್ದರು. ಇದು ನಮಗೆ ಹಿಂಸೆಯಾಗುವಂತೆಯೂ ಇತ್ತು, ಹಾಸ್ಯಮಯವಾಗಿಯೂ ಇತ್ತು. ಬೋರಾಗುತ್ತಿದ್ದ ನಮಗೆ ಮನರಂಜನೆಗೆ ವಸ್ತುವೂ ಆಗುವಂತಿತ್ತು. ನಾವು ಬೈಯ್ಯುತ್ತಿದ್ದುದು ಅವರಿಗೆ ಸಲೀಸಾಗಿ ಕೇಳುವಂತಿತ್ತು. ಹೀಗೆ ಟೀಕಿಸುತ್ತಲೇ, ಅವರನ್ನು ಆಡಿಕೊಳ್ಳುತ್ತಲೇ, ದೊಡ್ಡಬಳ್ಳಾಪುರದವರೆಗೂ ಬಂದೆವು. ದೊಡ್ಡಬಳ್ಳಾಪುರದಲ್ಲಿ ಒಬ್ಬ ಹೆಂಗಸು ಹತ್ತಿಕೊಂಡಳು. ಖಾಲಿ ಜಾಗ ಇದ್ದುದರಿಂದ ನಮ್ಮ ಕಂಪಾರ್ಟ್ಮೆಂಟಿನಲ್ಲೇ ಕುಳಿತಳು. ಒಂದೈದು ನಿಮಿಷದ ನಂತರ ಆ ಉತ್ತರಭಾರತದ ಹಿಂದಿಯ ವ್ಯಕ್ತಿಯು "ಎಲ್ಲಿಂದ ಬರ್ತಿದ್ದೀಯಮ್ಮ?" ಎಂದು ಸ್ಪಷ್ಟ ಕನ್ನಡದಲ್ಲಿ ಮಾತನಾಡಿಬಿಟ್ಟರು! ನಾನು ಮತ್ತು ರೇಖಾ ಮುಖ ಮುಖ ನೋಡಿಕೊಂಡು ನಾಲಗೆ ಕಚ್ಚಿಕೊಂಡೆವು!!

ಅಂತೂ ಹಿಂದಿ ಬಾರದೆಯೇ ದೊಡ್ಡ ಪ್ರವಾಸವೊಂದನ್ನು ಮುಗಿಸಿಕೊಂಡು ಬಂದೆವು. ಇನ್ನು ಮುಂದಾದರೂ ಇನ್ನಷ್ಟು ಹಿಂದಿಯನ್ನು ಕಲಿಯಲು ಕೆಲಸ ಮಾಡಬೇಕು ನಾನು. ಅದು ರಾಷ್ಟ್ರಭಾಷೆಯೋ ಅಲ್ಲವೋ ಭಾಷೆ ಕಲಿಯುವುದು ಮುಖ್ಯ.

-ಅ
16.05.2009
12.45PM

Wednesday, May 13, 2009

ಎರಡು ವರ್ಷ ತುಂಬಿತು

ಇವತ್ತಿಗೆ ಎರಡು ವರ್ಷ ತುಂಬಿತು ಈ ನನ್ನ ಬ್ಲಾಗಿಗೆ. ಅದಕ್ಕಾಗಿ ವಿಷಾದಿಸುತ್ತೇನೆ. ಇದನ್ನೋದುವ ಎಲ್ಲರೂ ಒಂದು ನಿಮಿಷ ಕಾಲ ತಲೆ ಬಗ್ಗಿಸಿ ಮೌನಾಚರಣೆ ಮಾಡತಕ್ಕದ್ದು. RIP.

-ಅ
13.05.2009
9PM

Thursday, May 7, 2009

ಕಚೇರಿ

'ಕಚೇರಿ' ಸರಿಯೋ 'ಕಛೇರಿ' ಸರಿಯೋ ಅಷ್ಟಾಗಿ ಗೊತ್ತಿಲ್ಲ. ನನಗೆ 'ಕಚೇರಿ'ಯು ಶ್ಲಾಘನೀಯವಾಗಿದೆ. ನಾನು ಇಲ್ಲಿ ಹೇಳ ಹೊರಟಿರುವುದು ಸಂಗೀತ ಕಚೇರಿಯ ಬಗ್ಗೆ.

ನನ್ನಂತೆ ಅನೇಕರಿಗೆ ಸಂಗೀತದ ಕಾರ್ಯಕ್ರಮಗಳನ್ನು ಎಲ್ಲೆಂದರಲ್ಲಿ ನಡೆಸುವುದರ ಬಗ್ಗೆ ಅಸಮಾಧಾನವಿದೆ. ಅದರಲ್ಲೂ ಮದುವೆ ಮನೆಗಳಲ್ಲಿ ಸಂಗೀತದ ಕಚೇರಿಯನ್ನಿಟ್ಟುಕೊಳ್ಳುವುದು ನ್ಯಾಯವೇ ಎಂದೆನಿಸುತ್ತಿರುತ್ತೆ. ವಿದ್ವಾಂಸರಿಗೆ, ವಿದ್ವತ್ತಿಗೆ, ವಿದ್ಯೆಗೆ, ಮತ್ತು ಸಂಗೀತಕ್ಕೆ ಅನೇಕ ಸಲ ಇಂಥಾ ಕಡೆ ಅನ್ಯಾಯ, ಅವಮಾನ ಮಾಡಿದ ಹಾಗೆ ಆಗುತ್ತೆ ಎಂದೂ ಸಹ ಅನ್ನಿಸುತ್ತೆ.

"ಖಂಡಿತ ಮದುವೆಗೆ ಬರಬೇಕು, ಕಾಸರವಳ್ಳಿ ಸಿಸ್ಟರ್ಸ್ - ರೂಪ-ದೀಪ ಅವರ ಕಚೇರಿ ಇಟ್ಕೊಂಡ್ ಇದ್ದೀವಿ" ಎಂದು ಮನೆಗೆ ಬಂದು ಅತಿಥಿಯೊಬ್ಬರು ಕರೆದರು. ಮದುವೆಗೆ ಬರುವ ಎಷ್ಟು ಜನ ರೂಪ-ದೀಪ ಸಂಗೀತ ಕೇಳಲೆಂದು ಬರುತ್ತಾರೆ? ಹಾಗೆ ಸಂಗೀತ ಕೇಳಲೆಂದೇ ಬಂದರೆ ಮದುವೆಯ ಮಂಟಪವು ಕೇವಲ ನೆಪವಾದೀತಷ್ಟೆ? ಎರಡರಲ್ಲಿ ಒಂದಕ್ಕೆ ಮಾತ್ರ ನ್ಯಾಯ ಸಲ್ಲಿಸಬಹುದಲ್ಲವೆ? ಅಗ್ಗದ ತರ್ಕವೆನ್ನಿಸುತ್ತಿದೆ.

'ಸಂಗೀತ'ವೆನ್ನುವುದನ್ನು ಎರಡು ರೀತಿ 'ಬಳಸಿ'ಕೊಳ್ಳಲಾಗುತ್ತಿದೆ. (೧) ವಿದ್ಯೆ, ಸಾಧನೆ (೨) ಮನರಂಜನೆ. ಮನರಂಜನೆಗಾಗಿ ಸಂಗೀತವನ್ನು, ಅದರಲ್ಲೂ ಶಾಸ್ತ್ರೀಯ ಸಂಗೀತವನ್ನು 'ಬಳಸಿ'ಕೊಳ್ಳುವವರ ಬಗ್ಗೆ ಸಂಗೀತದ ಪಾವಿತ್ರ್ಯತೆಯನ್ನು ಆರಾಧಿಸುವವರು ಅಸಮಾಧಾನ ವ್ಯಕ್ತಪಡಿಸುವುದುಂಟು. ಹಾಗೆಂದ ಮಾತ್ರಕ್ಕೆ ಮನರಂಜನೆ ನೀಡುವ ಸಂಗೀತಗಾರರಿಗೆ ಸಂಗೀತದ ಬಗ್ಗೆ ಗೌರವವಿಲ್ಲವೆಂದಲ್ಲ. ಹಾಗೆ ನೋಡಿದರೆ, ಅವರುಗಳಿಗಿಂತ ಈ ಮನರಂಜನಾಕಾರರಿಗೇ ಹೆಚ್ಚು ಗೌರವವಿರಬಹುದು, ಯಾಕೆಂದರೆ, ಅನೇಕ ಸಲ ಇಂಥವರಿಗೆ ಸಂಗೀತ ಅನ್ನವನ್ನು ನೀಡುತ್ತಿರುತ್ತೆ.

ಸಾಮಾನ್ಯವಾಗಿ ಮದುವೆ ಮನೆಗಳಲ್ಲಿ ಕಚೇರಿಯನ್ನು ಕೇಳುವವರು ಯಾರು? "ನಿಮ್ಮ ಪಾಡಿಗೆ ನೀವು ಹಾಡಿ" ಎಂದು ಜನರೆಲ್ಲರೂ ತಂತಮ್ಮ ಹರಟೆಗಳಲ್ಲೋ, ಕೆಲಸ ಕಾರ್ಯಗಳಲ್ಲೋ ತೊಡಗಿಕೊಂಡಿರುತ್ತಾರೆ. ಹಾಡುಗಾರರೋ (ಅಥವಾ ಇನ್ಯಾವುದಾದರೂ ಸಂಗೀತ ವಾದ್ಯದವರೋ) 'ಆರಂಕುಸವಿಟ್ಟೊಡಂ' ಹಾಡುತ್ತಲೇ ಇರುತ್ತಾರೆ. ಅವರ ಮನೋಭಾವನೆಯು 'ಎಲ್ಲ ಕೇಳಲಿಯೆಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ..' ಎಂದೇ ಇರಬಹುದು. ಆದರೂ ಕೆಲವರು ಹಾಡು ಅರ್ಥವಾಗುತ್ತೋ ಇಲ್ಲವೋ ತಲೆದೂಗುತ್ತಲೇ ತಪ್ಪು ತಪ್ಪಾಗಿಯೇ ತಾಳ ಹಾಕುತ್ತಲೇ 'ಎಂಜಾಯ್' ಮಾಡುತ್ತಿರುತ್ತಾರೆ. ದೂರದರ್ಶನ, ರೇಡಿಯೋಗಳಲ್ಲಿ ಕೇಳಿರುವ ವಾತಾಪಿ, ರಘುವಂಶಸುಧಾ, ನಗುಮೋಮು, ಮೋಕ್ಷಮು ಗಲದಾ ಇವೆಲ್ಲ ಹಾಡಿಬಿಟ್ಟರೆ ತಾವೂ ವಿದ್ವಾಂಸರಂತೆಯೇ ದನಿಗೂಡಿಸುತ್ತಿರುತ್ತಾರೆ. ಒಟ್ಟಿನಲ್ಲಿ ಮುದಗೊಳ್ಳುತ್ತಾರೆ. ಮದುವೆಯ ಗಿಜಿಗಿಜಿಯು ಸಂಗೀತದ ಕಂಪನಗಳೊಂದಿಗೆ ಬೆರೆತುಕೊಂಡುಬಿಟ್ಟಿರುತ್ತೆ.

ಮೇಲೆ ಹೇಳಿದ ಎರಡು ರೀತಿ ಸಂಗೀತವನ್ನು 'ಬಳಸಿ'ಕೊಳ್ಳುವವರನ್ನು ಹೊರತುಪಡಿಸುವ ಇನ್ನೊಂದು ಗುಂಪೂ ಇದೆ. ಇವರಿಗೆ ಸಾಧನೆಯು ಮುಖ್ಯ. ಆದರೆ ಆ ಸಾಧನೆಗೆ ಇಂಥ ಕಚೇರಿಗಳು ಮೆಟ್ಟಿಲುಗಳಾಗಿರುತ್ತವೆ. ಅವರು ಮನರಂಜನೆ ನೀಡುವ ಉದ್ದಿಶ್ಯದಿಂದಿರುವುದಿಲ್ಲ. ತಮ್ಮ renderings-ನಿಂದ ಮನರಂಜನೆ ಸಿಕ್ಕರೆ ಒಳ್ಳೆಯದಷ್ಟೆ. ಶಾಸ್ತ್ರೀಯ ಸಂಗೀತ ಅರ್ಥವಾಗದೆ ಇರುವವರಿಗೆ 'ಕಾಮಾಕ್ಷಿ ಅಂಬಾ..., ರಾಮಕಥಾಸುಧಾ, ಕನಕನರುಚಿರಾ..' ಇವೆಲ್ಲ ಬೇಸರ ತಂದು ನೀರಸವೆನ್ನಿಸಬಹುದು. ನಿದ್ದೆಯೂ ತರಿಸಬಹುದು. ಆದರೆ ಸಂಗೀತಗಾರನ ಪ್ರಯೋಗವು, ಸಾಧನೆಯು ಶ್ರೋತೃವಿನ ಬಯಕೆಗಳನ್ನು ಅವಲಂಬಿಸಿರುವಂಥದ್ದಲ್ಲ, ಬದಲಿಗೆ ಶ್ರೋತೃವಿನ ಜ್ಞಾನವನ್ನು ಅವಲಂಬಿಸಿರುವುದು.

ನನ್ನ ತಾಯಿಯನ್ನೂ ಸೇರಿಸಿ ಅನೇಕ ಸಂಗೀತಗಾರರು ನಮ್ಮಲ್ಲಿ ಪಾಠ ಹೇಳಿಕೊಟ್ಟು ಕಚೇರಿಗಳನ್ನು ಕೊಡುವವರಾಗಿರುತ್ತಾರೆ. ಅಂಥವರ ಪಾಲಿಗೆ ಸಂಗೀತವು ಸರ್ವಸ್ವ. ಅನ್ನದಾತೆ. ಮದುವೆ ಮನೆ ಕಚೇರಿಗಳು ಇಂಥಾ ವಿದ್ವಾಂಸರುಗಳಿಗೆ ಮತ್ತವರ ಸಾಧನೆಗಳಿಗೆ ವೇದಿಕೆ ಕಲ್ಪಿಸಿಕೊಡುತ್ತೆಂಬುದು ಅವರ ಅಂಬೋಣ. ಜೊತೆಗೆ ಒಂದಷ್ಟು ಹಣವೂ ಸಿಗುತ್ತೆ. ಪೇಯ್ಡ್ ಪ್ರ್ಯಾಕ್ಟೀಸ್! ಕೆಲಕಾಲ ನಾನು ಇಂಥ ಕಚೇರಿಗಳನ್ನು ನಾನು ಖಂಡಿಸುತ್ತಿದ್ದೆ. ಈಗ ಅವುಗಳ ಬಗ್ಗೆ ನನಗೆ ಕಿಂಚಿತ್ತೂ ತಕರಾರಿಲ್ಲ. 'ಕೇಳುವವರಿಹರೆಂದು ನಾ ಬಲ್ಲೆನದರಿಂದ...'.

ವಿ.ಸೂ.: ಕಾಮತ್ ಬ್ಯೂಗಲ್ ರಾಕಿನಲ್ಲಿ ಪ್ರತಿದಿನವೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಾರೆ. ಊಟ ಮಾಡುವ ಜಾಗದಲ್ಲಿ, ಅದರಲ್ಲೂ ಹೋಟೆಲಿನಂಥ ವಾತಾವರಣದಲ್ಲಿ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳಿರುವುದು ಅನೇಕರಿಗೆ ಸರಿ ಕಾಣಿಸದಿದ್ದರೂ, ಅದೊಂದು ಸುಸಂಸ್ಕೃತ ಪರಿಸರವನ್ನು ಸೃಷ್ಟಿಸುತ್ತೆಂದು ಹಲವರ ನಂಬಿಕೆ. ನಾನೇ ಗಮನಿಸಿರುವ ಹಾಗೆ ಅಲ್ಲಿನ ಅಡುಗೆ ಮನೆಯವರು, ಅನ್ನ ಬಡಿಸುವವರೂ, ಕೊನೆಗೆ ಎಲೆಯೆತ್ತುವವರೂ ಸಹ ಅನೇಕಾನೇಕ ದಿನಗಳಿಂದ ಸಂಗೀತವನ್ನು ಕೇಳಿ ಕೇಳಿ ಕೆಲವು ಕೀರ್ತನೆಗಳನ್ನು ಕಲಿತುಬಿಟ್ಟಿದ್ದಾರೆ! ಗೊತ್ತಿರುವ ಕೃತಿಯೇನಾದರೂ ಹಾಡಿದರೆ ಅವರೂ ಸಹ ಬಾಯಿ ಆಡಿಸುತ್ತಾರೆ! ತಾಳ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ!!

-ಅ
07.05.2009
7.45PM

Saturday, April 25, 2009

ಒಂದು ವರ್ಷ ತುಂಬಿತು!ಎಲ್ಲರೂ ಬನ್ನಿಪ್ಪಾ....

-ಅ
25.04.2009
12PM

Sunday, April 12, 2009

ಮದುವೆಗೋ ಮಸಣಕೋ?

ಇಂದಿಗೊಂದು ವರ್ಷದ ಹಿಂದೆಯಿದ್ದ ಓಡಾಟವೇ ಬೇರೆ!
ವಿದ್ಯೆಗೋ, ಅಂಧನಿಗೋ, ರೋಗಿಗೋ, ವೈದ್ಯನಿಗೋ ಒಪ್ಪಿಸಲು -
ದೇಹವನ್ನು ಒಪ್ಪಿಸಲು -
ಅಲೆದಾಡುತ್ತ,
ಕೊನೆಗೆ ಕಲ್ಲೆದೆಯ ಶಿಲೆಯಾಗಿ ಅಗ್ನಿಒಪ್ಪಿಸಲು ಇದ್ದ ಓಡಾಟವೇ ಬೇರೆ!

ಓದ ಬಯಸುವವಗೆ ಪುಸ್ತಕದಿ ನೆರವಾಗಲು, ಹಸಿದವನಿಗೆ ಅನ್ನ ಬಡಿಸಲು, ದಣಿದವನಿಗೆ ಬೊಗಸೆ ನೀರುಣಿಸಲು
ಒಳಿತನ್ನೆಸಗಲು,
ಜನುಮದ, ಆತುಮದ ಹಂಗೇಕೆ? ಪಾಪ ಪುಣ್ಯದ ಭೀತಿಯೇಕೆ? ದೈವಾಧ್ಯಕ್ಷದ ಕಟ್ಟುಕಥೆಯೇಕೆ?
ಪುಣ್ಯವಿರಲಿ ಬಿಡಲಿ, ಜನುಮವಿರಲಿ ಬಿಡಲಿ ಒಳಿತನ್ನು ಮಾಡುವುದು ಧರ್ಮ!
ಪಾಪವಿರಲಿ ಬಿಡಲಿ ಹುಸಿಯ ಹಾದಿಯ ಪಯಣವು ಅಧರ್ಮ!!
ಬೂದಿಯೋ, ಮಣ್ಣೋ, ಆಹಾರವೋ ಆಗುವುದಷ್ಟೆ ನಮ್ಮ ಅಂತಿಮ ಭವಿಷ್ಯ
ಅಷ್ಟರೊಳಗೆ ಒಳಿತಿನ ಬದುಕೊಂದೆ ಅವಷ್ಯ.
ನಡತೆಯೊಂದರಲ್ಲೆ ಎಲ್ಲ ಪಾಠ ಹೇಳಿಕೊಟ್ಟ ಜೀವ ಮಲಗಿತ್ತು ಮೌನದಲ್ಲಿ.
ಆ ಓಡಾಟವೇ ಬೇರೆ.

ಕಾಲು ಶತಮಾನಗಳು, ಕಾಲ ಸರಿದಂತೆ
ನನ್ನ ಪ್ರಶ್ನೆಗಳಿಗೆ ಎಣೆಯಿಲ್ಲ.
ಪುರಾಣ, ಶಾಸ್ತ್ರ, ಶ್ರುತಿ, ರಾಜಕೀಯ,
ಜ್ಞಾನ, ವಿಜ್ಞಾನ, ಹಿಂದಿ ಸಿನಿಮಾ, ಬೆಂಗಳೂರಿನ ಗೂಂಡಾಗಿರಿ,
ಚರಿತ್ರೆ, ಪ್ರಯಾಣ, ಸಕ್ಕದ, ಸಾಹಿತ್ಯ - ಎಷ್ಟು ಪ್ರಶ್ನೆಗಳೋ ನನ್ನಲ್ಲಿ ಅಷ್ಟು ಉತ್ತರವಿತ್ತು ಅಲ್ಲಿ.
ಅಂದು ನನ್ನಲ್ಲಿದ್ದ ಒಂದೇ ಪ್ರಶ್ನೆ, ಇಷ್ಟು ಅವಸರವೇನಿತ್ತು?
ಅದಕ್ಕೂ ಮೌನದಲ್ಲೇ ಉತ್ತರ - ಯಾವಾಗ ಹೋಗಬೇಕೋ ಆಗ ನೀನೂ ಹೋಗಬೇಕು!
ಆ ಓಡಾಟವೇ ಬೇರೆ!

ಒಂಟಿಯೆಂದು ಜರಿದಿದ್ದರಂತೆ ಹಲವರು ಹಿಂದೆ.
ಬಿಡಿ ಬಿಡಿ ಸ್ವರಗಳನ್ನು ಕೂಡಿಸಿ ರಾಗ ಸಂಯೋಜಿಸುವಂತೆ
ಧಾರೆಯೆರೆದು ಸಕಲ ಚೈತನ್ಯವನ್ನು ನಮ್ಮೆಲ್ಲರಿಗೆ
ಬಾಳ ಪಯಣಕೆ ಹಾದಿ ತೋರಿರಲು
ಒಂಟಿ ಹೇಗೆ? ಬುದ್ಧಿಹೀನರು ಜನರು!!
ಇಂದು ನೀನಿಲ್ಲವಾದರೂ ನೀ ತೋರಿದ ದಾರಿಯಲ್ಲಿಯೇ ನಮ್ಮ ಪಯಣ!
ಅಂದಿನಾ ಓಡಾಟವೇ ಬೇರೆ!
ನೀ ತೋರಿದ ದಾರಿಯಲ್ಲಿಯೇ
ಇಂದಿನೀ ಓಡಾಟವೇ ಬೇರೆ!!

ಒಂದು ವರ್ಷ ಸಂದಿದೆ, ಮತ್ತೆ ವಸಂತ ಬಂದಿದೆ!
ಇಂದಿನೀ ಓಡಾಟವೇ ಬೇರೆ.
"ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು"
ಎಂದು ಓಡುತಿರುವೆನು.
ನಿನ್ನ ಹಾದಿಯಲ್ಲಿ.
ನಿನ್ನ ಬೆಳಕಿನ ಹಾದಿಯಲ್ಲಿ.

-ಅ
12.04.2009
12AM

Thursday, April 2, 2009

ಕೆಟ್ಟ ಕನಸು

"ಕೆಟ್ಟ ಕನಸು!" ಮುಗಿಯಿತೆಂದು
ಮರೆತುಬಿಡಲಿ ಹೇಗೆ?
ಹಗೆಯ ವಿಷವು ಕೊಲುವ ಬಡಿಗೆ
ಕಡಲಿನೊಳಗೆ ಅನಲನವಿತು
ಸುಡುತಲಿರಲು ಬೇಗೆ.

ಕನಸು ಹಗೆಯು ಮುಗಿವುದೊಂದೆ
ಚಣದಿ - ಅರಿತಿರುವೆನು;
ಕೆಂಪು ಕಣ್ಣು ಮುಚ್ಚಿದಾಗ!
ಹೊಳೆವ ನಯನವರಳಿದಾಗ
ಪ್ರೀತಿವೃಷ್ಟಿಗರೆದು!

ಹಗೆಯು ಒಲವು ಎರಡು ಕನಸೆ?
ಕೆಟ್ಟದೊಂದು ಒಳಿತಿ-
ನ್ನೊಂದು - ಈ ರೀತಿಯೇಕೆ?
ಭ್ರಮೆಯಲ್ಲ ಬದುಕು ತಾನೆ?
ಮುಗಿವುದೆಂದು ನಟನೆ?

ಮಾನಾವಮಾನಗಳನ್ನು
ಲೆಕ್ಕಿಸಿಲ್ಲ ಮನಸು.
ಬಿಸಿಲು ಮಳೆಯು ಮತ್ತೆ ಮತ್ತೆ
ಇಳೆಗೆ ಸುರಿದು ನಡೆಸುವಂತೆ
ಮುಗಿಯಲಿಲ್ಲ ಕನಸು.
ಅದುವೆ "ಕೆಟ್ಟ ಕನಸು"!
ತೀರದಂಥ ಬಯಕೆ ಹೊತ್ತು
ನಡೆವುದಷ್ಟೆ ನನಸು!

-ಅ
02.04.2009
7.40PM

Monday, March 30, 2009

ಮಾನಸ ಸಂಚರರೇ ಬ್ರಹ್ಮಣಿ

ಬ್ರಹ್ಮನಲ್ಲಿ ಸಂಚರಿಸು ಮನಸೇ ಎಂದು ಹೇಳುವ ಬಗೆಯೇ ಎಷ್ಟು ಸೊಗಸು! ಇದಕ್ಕೆ ಸಾಮರಾಗವೇ ಸೂಕ್ತವೆಂದು ಹೇಗೆ ಹೊಳೆಯಿತೋ, ಕೇಳುಗನ ಜನ್ಮ ಪಾವನ!

ಮಾನಸ ಸಂಚರರೇ.... ಬ್ರಹಣಿ - ಇಲ್ಲಿ |ರೀ; ;;| ;ಸ ಧ ಸ ರಿ| ಎಂಬ ಒತ್ತು "ಬ್ರಹ್ಮಣಿ"ಯ ಮೇಲೆ ಇರುವುದನ್ನು ಕೇಳುವಾಗ ಮೈ ಜುಮ್ಮೆನ್ನದೇ ಇರುವುದಿಲ್ಲ!

ಶಾಸ್ತ್ರೀಯ ಸಂಗೀತದ ವೈಶಿಷ್ಟ್ಯವೇ ಅದು.

ಉತ್ತಮವಾದ ಸಾಹಿತ್ಯವೇನೂ ಅಲ್ಲವೆಂದೆನಿಸುತ್ತೆ ಹಾಗೆಯೇ ಅದರ ಸಾಹಿತ್ಯವನ್ನು ಓದಿದಾಗ. (ಸಂಗೀತ ಪರಿಭಾಷೆಯಲ್ಲಿ ಸಾಹಿತ್ಯವೆಂದರೆ ಹಾಡಿನ/ಕೀರ್ತನೆಯ ಪದಗಳೆಂದಷ್ಟೇ). ಆದರೆ ಒಂದೊಂದು ಸಂಗತಿಗಳೂ ಸಹ ಒಂದೊಂದು ಅರ್ಥವನ್ನು ಕಲ್ಪಿಸಿಕೊಡುತ್ತೆಂಬುದನ್ನು ಅನುಭವ ಮಾತ್ರದಿಂದಲೇ ಮನಗಾಣಬೇಕು. (ಸಂಗತಿಗಳೆಂದರೆ ಒಂದೇ ಸಾಲನ್ನು ಬೇರೆ ಬೇರೆ ಸ್ವರ ಜೋಡಣೆಗಳಿಂದ ಹಾಡುವುದು).

ಮದಶಿಖಿಪಿಂಚಾಲಂಕೃತ ಚಿಕುರೇ ಎಂದಾಗ ಪರಬ್ರಹ್ಮ ಸ್ವರೂಪನಾದ ಶ್ರೀಮನ್ನಾರಾಯಣನ ಮುಖವೂ, ಮತ್ತೆ ಮದಶಿಖಿಪಿಂಚಾ..... ಎಂದು |ಸ ಸ ಧ ಪ....| ಎರಡನೆಯ ಸಂಗತಿ ಹೇಳುವಾಗ ಹೇಗೆ ಶಿಖೆಯು ಅಲಂಕೃತವಾಗಿದೆಯೆಂಬುದು ಕಣ್ಮುಂದೆ ಬರುವುದಷ್ಟೆ? ತದನಂತರ "ಚಿಕುರೇ...." ಎಂಬ ಆಲಾಪನೆಯು ಸಾಮಕ್ಕೆ ಶೋಭೆ ತರುವುದಲ್ಲದೆ, ನವಿಲಿನ (ಚಿಕುರೇ..) ನರ್ತನವೂ ಎದುರಿಗೆ ಕಂಡೀತು! ಸಾಹಿತ್ಯದಲ್ಲಿ ನವಿಲು ಗರಿಯಿಂದ ಅಲಂಕಾರವೆಂದಷ್ಟೆ ಹೇಳಿದ್ದರೂ ಸಂಗೀತವು ನಮಗೆ ಏನೆಲ್ಲ ಚಿತ್ರವನ್ನು ಕಲ್ಪಿಸಿಕೊಡಬಹುದು ಎಂಬುದಕ್ಕೆ ಇದು ಸಾಕ್ಷಿ.

ಅದೇ ರೀತಿ "ಪರಮಹಂಸ-ಮುಖ-ಚಂದ್ರಚಕೋರೇ...." ಎಂಬ ಸಾಲುಗಳು ಮತ್ತದರ ಸಂಗತಿಗಳು ಚಂದ್ರನ ಚೆಲುವನ್ನೆಲ್ಲ ತನ್ನ ಮುಖದಲ್ಲೇ ಹೊತ್ತಿದ್ದಾನೇನೋ ಪರಮಾತ್ಮನು ಎಂಬ ಭಾವನೆಯು ಬರುವುದು ಖಂಡಿತ. ಸಾಮ ರಾಗದ ವಿಶೇಷವೇ ಹಾಗೆ. ಹಾಡಿನ ಸಾಹಿತ್ಯಕ್ಕಿಂತಲೂ ಆಲಾಪನೆಗಳು ಹೆಚ್ಚು ಹೆಚ್ಚು ಅರ್ಥಗಳನ್ನು ಕಲ್ಪಿಸಿಕೊಡುತ್ತೆ. ಚಂದ್ರಚಕೋರೇ.... ಆದನಂತರ ಬರುವ ಒಂದೇ ಒಂದು ಸಾಲು ಹಾಡಿನ ಮುಕ್ತಾಯವೆಂಬುದು ಒಪ್ಪಿಕೊಳ್ಳಲೇ ಆಗುವುದಿಲ್ಲ. ಹಾಡು ಮುಗಿದ ನಂತರವೂ ಪರಿಪೂರಿತ ಮುರಲೀರವಕಾರೇ.... ಎಂಬ ರವವು ಮನದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತೆ.

ಸದಾಶಿವ ಬ್ರಹ್ಮೇಂದ್ರರ ಈ ರಚನೆಯನ್ನು ಶೆಮ್ಮಂಗುಡಿ, ಉನ್ನಿ ಕ್ರಿಷ್ಣನ್, ಅರಿಯಾಕುಡಿ, ಸಂತಾನಮ್, ಬಾಲಮುರಳಿ, ಬಾಂಬೇ ಜಯಶ್ರೀ, ಎಲ್ಲರ ಕಂಠಸಿರಿಯಲ್ಲೂ ಕೇಳಿದ್ದೇನೆ. ಒಂದೊಂದು ಕಛೇರಿಯೂ ಒಂದೊಂದು ಬಗೆಯ ಸೊಬಗು. ಒಂದೊಂದು ಕಂಠವೂ ಒಂದೊಂದು ಬಗೆಯ ಭಾವನಾಲಹರಿಯನ್ನು ಹರಿಸುತ್ತೆ. ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು - ಎಲ್ಲೆಲ್ಲು ಸಂಗೀತವೇ....

ಶಾಸ್ತ್ರೀಯ ಸಂಗೀತದಿಂದ ಮನಸ್ಸು ಆನಂದ ಸ್ಥಿತಿಗೆ ತಲುಪಲು ಸಾಹಿತ್ಯವು ನೆಪ ಮಾತ್ರವಷ್ಟೆ. ದೊಡ್ಡ ದೊಡ್ಡ ವಿದ್ವಾಂಸರುಗಳೂ ತಪ್ಪುಚ್ಚಾರಣೆ ಮಾಡುವುದನ್ನು ನಾವು ಕೇಳಿಯೇ ಇದ್ದೇವೆ. ಪದಗಳನ್ನು ಬಿಡಿಸುವುದರಲ್ಲೂ ಸಹ ತಪ್ಪಾಗಿರುತ್ತೆ. ಆದರೆ ಸಂಗೀತವು ಇವೆಲ್ಲ ತಪ್ಪುಗಳನ್ನೂ ತೊಳೆದು ಹಾಕಿಬಿಡುತ್ತೆ. ನೆರವಲ್ ಕೇಳುತ್ತಿದ್ದರೆ ಆಗುವ ರೋಮಾಂಚನವು ಅದೇ ಸಾಹಿತ್ಯವನ್ನು ಓದಿದಾಗ ತೀರ ಸಾಮಾನ್ಯವಾದ ಎರಡನೇ ತರಗತಿಯ ಹುಡುಗ ಬರೆದಿರೋ ಹಾಗಿದೆ ಎಂದು ಎನ್ನಿಸಿದರೂ ಅಚ್ಚರಿಯಿಲ್ಲ. ಕೇವಲ ಸಂಗತಿಗಳು, ಸ್ವರಗಳು, ರಾಗಗಳು, ಆಲಾಪನೆಗಳು ಹೇಗೆ ಅರ್ಥಗಳನ್ನು ಕೊಟ್ಟು ಮುದ ನೀಡುವುದೆಂಬುದನ್ನು ಅನುಭವಿಸಿಯೇ ತೀರಬೇಕು. "ಮಾತು, ಅರ್ಥ - ಎರಡೂ ವ್ಯರ್ಥ, ಸ್ವ-ಅರ್ಥವಿರದಿರೆ...".

ಮಾನಸ ಸಂಚರರೇ
ಬ್ರಹ್ಮಣಿ ಮಾನಸ ಸಂಚರರೇ ||ಪ||

ಮದಶಿಖಿಪಿಂಚಾಲಂಕೃತ ಚಿಕುರೇ
ಮಹನೀಯ ಕಪೋಲ ವಿಜಿತಮುಕುರೇ ||ಅ.ಪ.||

ಶ್ರೀರಮಣೀ ಕುಚದುರ್ಗ ವಿಹಾರೇ
ಸೇವಕಜನ ಮಂದಿರ ಮಂದಾರೇ
ಪರಮಹಂಸ ಮುಖಚಂದ್ರಚಕೋರೇ
ಪರಿಪೂರಿತ ಮುರಲೀರವಕಾರೇ ||ಚ||

(ಸದಾಶಿವ ಬ್ರಹ್ಮೇಂದ್ರ)

-ಅ
30.03.2009
11.35PM