Monday, January 26, 2009

ಗಾಂಧಿಬಜಾರಿನಲ್ಲಿ ಅಂದು..

ಶ್ರೀನಿಧಿಯ ಆಹಾರ ಕೇಂದ್ರಗಳ ಲೇಖನವನ್ನು ನೋಡಿದಾಗ ನನ್ನ ಬಾಲ್ಯದ ಗಾಂಧೀಬಜಾರು ಕಣ್ಮುಂದೆ ಸುಳಿಯಿತು.

ವಿಮೆನ್ಸ್ ಪೀಸ್ ಲೀಗ್‍ನ ಶಾಲೆಯಲ್ಲಿ ಓದುತ್ತಿದ್ದ ನಾನು ಶಾಲೆಯು ಮುಗಿದ ಕೂಡಲೆ ಅತ್ತೆಯ ಜೊತೆ ನಡೆದುಕೊಂಡು ಮಹಾಲಕ್ಷ್ಮಿ ಟಿಫನ್ ರೂಮಿನಲ್ಲಿ ಕೇಸರಿ ಭಾತು ಮತ್ತು ಕೋಲ್ಡ್ ಬಾದಾಮಿ ಹಾಲು ಕುಡಿದ ನಂತರವೇ ಆಟೋ ಹತ್ತಿ ಮನೆಗೆ ಹೋಗುತ್ತಿದ್ದುದು. ಮಹಾಲಕ್ಷ್ಮಿಯ ಖಾಲಿ ದೋಸೆ ಎಷ್ಟು ಫೇಮಸ್ಸೋ ಕೋಲ್ಡ್ ಬಾದಾಮಿ ಹಾಲು ಕೂಡ ಅಷ್ಟೇ ಫೇಮಸ್ಸು.

ಅದಿರಲಿ.

ಗಾಂಧೀಬಜಾರಿನಲ್ಲಿ ಒಂದಷ್ಟು "extinct" ತಾಣಗಳನ್ನು ನೆನಪು ಮಾಡಿಕೊಂಡಿದ್ದರ ಪ್ರತಿಫಲವೇ ಈ ಲೇಖನ.

ಮಹಾಲಕ್ಷ್ಮಿಯಿಂದ ಗಾಂಧಿಬಜಾರು ಸರ್ಕಲ್ಲಿನೆಡೆಗೆ ಕೆಲವು ಹೆಜ್ಜೆಗಳು ಮುಂದೆ ಬಂದರೆ ಎಡಕ್ಕೆ ಒಂದು "ಬೃಹತ್" ಶೌಚಾಲಯದ ಪಕ್ಕ ಮಾಡರ್ನ್ ಟಿಫನ್ ರೂಮ್ ಎಂಬ ವಿದ್ಯಾರ್ಥಿ ಭವನದ ಶೈಲಿಯ ಹೋಟೆಲಿತ್ತು. ಪ್ರತಿ ಶುಕ್ರವಾರವೂ (ಶುಕ್ರವಾರ ಮಾತ್ರ ಯಾಕೆ ಮಾಡುತ್ತಿದ್ದರೋ 'ಅಲ್ಲಾ'ನೇ ಬಲ್ಲ.) ಇಲ್ಲಿ ಸಿಗುತ್ತಿದ್ದ ದಮ್ರೋಟಿನ ನೆನಪು ಈಗಲೂ ಬಾಯಲ್ಲಿ ನೀರೂರಿಸುತ್ತೆ. ಅಂದ ಹಾಗೆ ಆ ಬೃಹತ್ ಶೌಚಾಲಯವು ಈಗ ಕನ್ನಡ ಸಂಘವೊಂದರ 'ಕಟ್ಟೆ' ಆಗಿದೆ. ತೀರ ಮೊನ್ನೆ ಮೊನ್ನೆ ಈ ಹೊಟೆಲು ಮಾಯವಾಗಿಬಿಟ್ಟಿತು.

ಈ ಮಾಡರ್ನ್ ಟಿಫಿನ್ ರೂಮ್ ಎಂಬ ಎಂ.ಟಿ.ಆರ್. ದಾಟಿ ಕೆಲವೇ ಹೆಜ್ಜೆ ಮುಂದೆ ಬಂದರೆ ಬಲಕ್ಕಿರುವ ಈಶ್ವರನ ದೇವಸ್ಥಾನದ ಪಕ್ಕ ಘಮ್ಮೆನೆ ಕಾಫಿ ಪರಿಮಳ ಬರುವುದಿಲ್ಲವೆ? ಅದರ ಪಕ್ಕದಲ್ಲಿ ಒಂದು ಖಾಲಿ ನಿವೇಷನದಲ್ಲಿ "ಸೇಲ್" ಹಾಕಿರುತ್ತಾರಲ್ಲಾ, ಆ ಜಾಗದಲ್ಲಿ ನೂರು ವರ್ಷದ ಹಳೆಯ ಗಣೇಶ್ ಭವನ ಎಂಬ ಹಳ್ಳಿ ಮಾದರಿಯ ಹೊಟೆಲೊಂದಿತ್ತು. ನಾನು ಪ್ರೈಮರಿ ಶಾಲೆಯಲ್ಲಿದ್ದಾಗಲೇ ಇದು ಎತ್ತಂಗಡಿಯಾಗಲು ಕಾರಣಗಳಿದ್ದವು. ಒಂದು, ಇದು ಯಾವುದೋ ಹಳ್ಳಿಯ ಬಸ್ ಸ್ಟಾಪಿನಲ್ಲಿರುವ ಗಾಳಿ ಬೆಳಕಿಲ್ಲದ ಹೊಟೆಲಿನಂತಿದ್ದು ಬಸವನಗುಡಿಯ ಬೆಳವಣಿಗೆಯನ್ನು ಸಹಿಸಲಾಗಲಿಲ್ಲ. ಎರಡು, ಶೋ ಕೇಸಿನಲ್ಲಿದ್ದ ವಡೆ ಬೋಂಡ ಬಿಟ್ಟರೆ ಅಂಥಾ ತಿಂಡಿಗಳೇನೂ ಸಿಗುತ್ತಿರಲಿಲ್ಲ. ಉಪಹಾರ ದರ್ಶಿನಿಯಂತಹ ಫಾಸ್ಟ್ ಫುಡ್ ಎದುರು ಎಷ್ಟೊಂದು ಹೊಟೆಲುಗಳು ನಿರ್ನಾಮವಾಗಿದ್ದು ನಿಜವಷ್ಟೆ.

ಈಗಿನ ಐಸ್ ಥಂಡರ್ ಸ್ಥಳದಲ್ಲಿ ಬಸವನಗುಡಿ ಕೋ-ಆಪರೇಟಿವ್ ಸೊಸೈಟಿಯಿತ್ತು. ಈಗಲೂ ಈ ಬಾಸ್ಕೋ ಎಂಬ ಹೆಸರಿನಲ್ಲಿರುವುದು ಇದೇ ತಾನೆ? ಆದರೆ, ಈ ಸೊಸೈಟಿಯಲ್ಲಿ ಶಾಲಾ ಪುಸ್ತಕಗಳನ್ನು ಸಹ ಕಡಿಮೆ ದರದಲ್ಲಿ ಮಾರುತ್ತಿದ್ದರು. ಗಂಟೆಗಟ್ಟಲೆ ಕ್ಯೂ ನಿಂತುಕೊಂಡು ಪಠ್ಯಪುಸ್ತಕಗಳು, ಸಮವಸ್ತ್ರಗಳು, ಅಕ್ಕಿ, ಬೇಳೆ ಏನೆಲ್ಲಾ ಖರೀದಿಸಿದ್ದೀವೋ ಏನೋ! ಅದು ಬಹುಮಹಡಿಯ ಕಟ್ಟಡವಾಗಿರಲಿಲ್ಲ. ಯಾವುದೋ ಹಳೇ ಮನೆಯಂತಿತ್ತಾದ್ದರಿಂದ ಕ್ಯೂ ಮಾತ್ರ ಗಣೇಶ ಫ್ರೂಟ್ ಜ್ಯೂಸ್‍ವರೆಗೂ ಹೋಗಿರುತ್ತಿತ್ತು. ಈ ಜ್ಯೂಸ್ ಅಂಗಡಿಯನ್ನು ನಾನು ಹುಟ್ಟಿದಾಗಿನಿಂದಲೂ ನೋಡುತ್ತಿದ್ದೇನೆ. ಇಲ್ಲಿ ಪ್ರತಿವರ್ಷವೂ ಮಾವಿನ ಜ್ಯೂಸನ್ನು ಸವಿಯುತ್ತಿದ್ದೇನೆ.

ಗಣೇಶನ ಎದುರು ಒಂದು ಕಟ್ಟಡವಿದೆಯಲ್ಲವೇ? ಬಟ್ಟೆ ಅಂಗಡಿ! ಅದಕ್ಕೆ ಡಿ.ವಿ.ಜಿ. ರಸ್ತೆಯ ಕಡೆಯಿಂದ ಒಂದು ಎಂಟ್ರೆನ್ಸು. ಅಲ್ಲಿ ಅಂಗಡಿಗಳಿರಲಿಲ್ಲ. ನಮ್ಮ ಅತ್ತೆಯ ಮನೆಯಿತ್ತು!! ನನ್ನ ಬಾಲ್ಯ ಕಳೆದ ಮನೆ. ಅಕ್ಕ ವಿಜಯಾ, ಕಝಿನ್ನುಗಳಾದ ಗುರು, ಗಿರೀಶ, ಅಶೋಕ ಇವರುಗಳು ನನಗಿಂತ ಹಿರಿಯರಾದ್ದರಿಂದ ಈ ನೆನಪುಗಳು ಅವರಿಗೆ ನನಗಿಂತಲೂ ಚೆನ್ನಾಗಿರುತ್ತೆ. ಒಮ್ಮೆ ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಸುರಿದು, ಇದೇ ಮನೆಯಲ್ಲಿದ್ದ ದಾಳಿಂಬೆ ಮರವು ಬಿದ್ದು ಹೋಗಿದ್ದರ ಬಗ್ಗೆ ಮಾಡಿದ ಚರ್ಚೆ ಕೂಡ ನಾನು ಮರೆತಿಲ್ಲ. ಅತ್ತೆ ಮನೆಯ ಓನರ್ರು ಆ ಕಟ್ಟಡವನ್ನು ಹತ್ತು ವರ್ಷದ ಕೆಳಗೇ ಒಂದು ಕೋಟಿ ರೂಪಾಯಿಗೆ ಮಾರಿದರಂತೆ! ಅದೇ ಕಟ್ಟಡದ ನೆಲಮಾಳಿಗೆಯಲ್ಲಿರುವ ಚೀಲದ ಅಂಗಡಿ "ಗೋವಿಂದನ ಅಂಗಡಿ"ಯೆಂದೇ ಪ್ರಸಿದ್ಧವಾಗಿದ್ದು, ಗಾಂಧಿಬಜಾರಿನ ಕೆಲವೇ ಚೀಲದ ಅಂಗಡಿಗಳಲ್ಲಿ ಬಹು ಮುಖ್ಯವಾಗಿತ್ತು.

ಈಗ ದೊಡ್ಡದೊಂದು ಬಟ್ಟೆ ಅಂಗಡಿಯಿದೆ, "Cosmozone" ಎಂದೋ ಏನೋ. ಇದೇ ಸ್ಥಳದಲ್ಲಿ ಹರ್ಷ ಸ್ಟೋರ್ಸ್ ಎಂಬ ಕಾಂಡಿಮೆಂಟ್ಸು ಸುಮಾರು ಐವತ್ತು ವರ್ಷವಿತ್ತು. ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾತ ಈಗ ಈ ಬಟ್ಟೆ ಅಂಗಡಿಯಲ್ಲಿ ಸೆಕ್ಯೂರಿಟಿಯಾಗಿದ್ದಾನೆ. ಹರ್ಷ ಸ್ಟೋರ್ಸ್ ಮಾಲೀಕರು ಮಾತ್ರ ನಾಪತ್ತೆ. ಆ ಕಾಂಪ್ಲೆಕ್ಸಿನ ಮಹಡಿಯಲ್ಲಿದ್ದ ಡಾ.ಧ್ರುವನಾರಾಯಣ್ ಆಸ್ಪತ್ರೆಯು ಅವರು ತೀರಿಕೊಂಡ ನಂತರ ಮುಚ್ಚಿದೆ.

ಹಬ್ಬ ಬಂತೆಂದರೆ ಗಾಂಧಿಬಜಾರಿನ ಕಳೆ ಮೆರೆಯುತ್ತಿತ್ತು. ಯಾವುದೇ ಹಿಂದೂ ಹಬ್ಬದ ಎರಡು ಮೂರು ದಿನದ ಮುನ್ನವೇ ಜನವೋ ಜನ. "ಹಬ್ಬದ ಕಳೆ ನೋಡಬೇಕೆಂದರೆ ಗಾಂಧಿಬಜಾರಿಗೆ ಬರಬೇಕು" ಎಂದು ವಿಜಯಾ ಅದೆಷ್ಟು ಸಲ ಹೇಳಿದ್ದಾಳೋ! ಬೇರೆ ದಿನಗಳಲ್ಲಿ ಅಷ್ಟು ಜನರೇನು ಇರುತ್ತಿರಲಿಲ್ಲ. ಸುಬ್ಬಮ್ಮ ಅಂಗಡಿಯ ಮುಂದೆ ಒಂದಷ್ಟು ಜನ, ವಿದ್ಯಾರ್ಥಿ ಭವನದ ಮುಂದೆ ಒಂದು ಗುಂಪು, ಈಶ್ವರನ ದೇವಸ್ಥಾನದ ಬಳಿ ಒಂದಷ್ಟು, ಗುರುವಾರ ಮಾತ್ರವೇ ರಾಯರ ಮಠದೆದುರು ಸಾಲಾಗಿ ಕುಳಿತ "ಒಂದು" ಗುಂಪು - ಇಷ್ಟು ಕಡೆ ಮಾತ್ರ ಜನಸಂದಣಿಯಿರುತ್ತಿತ್ತು. ಈಗ ಅವೆನ್ಯೂ ರೋಡನ್ನು ಮೀರಿಸುತ್ತೆ ಡಿ.ವಿ.ಜಿ. ರೋಡು.

ಕೆನೆರಾ ಬ್ಯಾಂಕ್ ಪಕ್ಕದಲ್ಲಿ ಒಂದು ಪಾರ್ಟಿ ಹಾಲ್ ಇದೆಯಲ್ಲಾ, ಅದು ಹದಿನೈದು ವರ್ಷದ ಮುಂಚೆ - ಹತ್ತಾರು ವರ್ಷಗಳಿಂದಲೂ ಸನ್ಮಾನ್ ಹೊಟೆಲ್ ಆಗಿತ್ತು. ಆ ಕಾಲದಲ್ಲಿ higher middle class ಜನರ ಹೊಟೆಲು ಇದಾಗಿತ್ತು. ಈಗಿನ ರೋಟಿ ಘರ್ರು, ಗೋಕುಲ್ಲು ಇದೆಯಲ್ಲಾ ಹಾಗೆ. ಅದೇ ಮಾದರಿಯ ಶಾನ್‍ಭಾಗ್ ಹೊಟೆಲು ಎಪ್ಪತ್ತು ವರ್ಷಕ್ಕೂ ಹಳೆಯದಾಗಿದ್ದು ಸುಮಾರು ಹದಿನೈದು ವರ್ಷದ ಕೆಳಗೆ ಮಾಯವಾಯಿತು. ಇದಿದ್ದಿದ್ದು ಅಂಕಿತ ಪುಸ್ತಕಕ್ಕಿಂತ ಸ್ವಲ್ಪ ಮುಂದೆ ನಡೆದರೆ ಸಿಗುವ ಒಂದು ರಿಲಯನ್ಸ್ ಫ್ರೆಶ್ ಅಂಗಡಿಯ ಸ್ಥಳದಲ್ಲೇ.

ಇದೇ ಜಾಗದಲ್ಲಿ ಒಬ್ಬ ಕುಡುಕನಿದ್ದ. ನಾನೇ ಸುಮಾರು ಏಳೆಂಟು ವರ್ಷ ನೋಡಿದ್ದೇನೆ ಈ ಕುಡುಕನನ್ನು. ಸಭ್ಯನಂತೆ ಹೋಗಿ ಬರುವವರನ್ನೆಲ್ಲಾ "ಸಾರ್, ಟೈಮ್ ಎಷ್ಟು?", "ಮೇಡಂ ಟೈಮ್ ಎಷ್ಟು?" ಎಂದು ಕೇಳುತ್ತಿದ್ದ. ಉತ್ತರ ಕೊಟ್ಟರೆಂದರೆ ಮುಗಿಯಿತು. ಅವರ ಮುಖಮೂತಿ ತುಂಬ ಪ್ರೋಕ್ಷಣೆ!! "ಖ್ವಾಷ್ ಖ್ವಾಷ್...... ಥೂ!!!" ಎಂದು ಉಗಿಯುತ್ತಿದ್ದ. ಯಾವಾಗ ಸತ್ತನೋ ಗೊತ್ತಿಲ್ಲ ಈ ಕುಡುಕ.

ಗೋವಿಂದಪ್ಪ ರಸ್ತೆಯ ಪಕ್ಕದ ರಸ್ತೆಯಲ್ಲಿರುವ ಟಿನ್ನಿಸ್ ಸ್ಕೂಲಿನ ಎದುರು ಒಬ್ಬ ಕುಳಿತಿರುತ್ತಾನೆ. ಇವನನ್ನು ನಾನು ಬಾಲ್ಯದಿಂದಲೂ ನೋಡುತ್ತಿದ್ದೇನೆ. ಒಂದು ಅಂಗಡಿಯ ಮುಚ್ಚಿದ ಕದದ ಎದುರು ಗಡ್ಡ ಬಿಟ್ಟುಕೊಂಡು ಕೊಳೆ ಬಟ್ಟೆ ಧರಿಸಿ ಹುಚ್ಚನಂತೆ ಕುಳಿತಿರುತ್ತಾನೆ, ಅಲ್ಲೇ ಮಲಗುತ್ತಾನೆ. ಯಾರಿಗೂ ಯಾವ ತೊಂದರೆಯನ್ನೂ ಮಾಡಿಲ್ಲ. ಅವನೆದುರು ನಡೆದು ಹೋಗುವವರನ್ನು ದುರುಗುಟ್ಟಿ ನೋಡುತ್ತಾನಷ್ಟೆ. ಇಂದೂ ನೋಡಿದೆ ಇವನನ್ನು. "ಈ ರೀತಿ ಎಷ್ಟೋ ವರ್ಷದಿಂದ ಇಲ್ಲಿದ್ದಾನಲ್ಲಾ ಇವನು, ಯಾವ ಪೋಲೀಸೂ ಏನೂ ಮಾಡಿಲ್ಲವಲ್ಲಾ ಇವನಿಗೆ?" ಎಂದು ಪ್ರಶ್ನಿಸಿಕೊಂಡೆ. ಹೀಗೆಲ್ಲಾ ಇದ್ದರೂ ಇನ್ನೂ ಜೀವಂತವಾಗಿದ್ದಾನಲ್ಲಾ ಏನು ಕರ್ಮ ಇವನದು? ಎಂದೂ ಅಭಿಪ್ರಾಯ ಪಟ್ಟೆ. ಗಾಂಧಿಬಜಾರಿನ ಅತ್ಯಂತ ಹಳೆಯ ತಲೆ ಬಹುಶಃ ಇವನೇ ಇರಬೇಕೆಂದೂ ಅನ್ನಿಸಿತು.

ಮನಸ್ಸು ಗಾಂಧಿಬಜಾರು!

-ಅ
26.01.2009
10.30PM

Friday, January 16, 2009

ಆನಂದ ಕೊಡುವ ಶೋಕಗೀತೆಗಳು

Zinda Hoon Is Tarah Ke Ghame Zindagi Nahin
Jalta Hua Diya Hoon Magar Roshni Nahin..

ಮೈ ಜುಮ್ಮೆನ್ನದೇ ಇರುತ್ತಾ?

ಮುಖೇಶನ ಹೊರೆತು ಇನ್ನಾರಿಗೆ ದೊರೆತೀತು ಇಂಥಾ ಹಾಡನ್ನು ಹಾಡುವ ಭಾಗ್ಯ!! ನಮಗಲ್ಲದೆ ಇನ್ನಾರಿಗೆ ದೊರೆತೀತು ಇದನ್ನು ಕೇಳುವ ಭಾಗ್ಯ!!

ಶೋಕಗೀತೆಗಳ ಜಾಯಮಾನವೇ ಹಾಗೆ, ಶೋಕರಸದಿಂದ ತುಂಬಿ ತುಳುಕುತ್ತಿದ್ದರೂ ಕೇಳಿದಾಗ ಮನಸ್ಸಿನ ಮೇಲೆ ಬೀರುವ ಪರಿಣಾಮವು ಆನಂದದಾಯಕವಾಗಿರುತ್ತೆ! ಏನ್ ಚೆನ್ನಾಗ್ ಬರ್ದಿದಾನೆ ಈ ಹಾಡನ್ನು ಎನ್ನುತ್ತೇವೆ!!

Barbaadiyon Ki Ajab Daastaan Hoon
Shabnam Bhi Roye Me Woh Aasmaan Hoon..

ಮುಖೇಶನ ಧ್ವನಿ ಶೋಕಗೀತೆಗಳಿಗೆ ಹೇಳಿ ಮಾಡಿಸಿದ್ದು ಎಂದು ಬಾಲಿವುಡ್ ತಜ್ಞರು ಅಭಿಪ್ರಾಯ ಪಡುತ್ತಾರೆ. ಇದನ್ನು ಸಮ್ಮತಿಸದವರು ಯಾರೂ ಇಲ್ಲ.

ಈಗಿನ ಹಾಡುಗಳಲ್ಲಿ ಶೋಕರಸವು ನಾಪತ್ತೆಯಾಗಿರುವುದು ಗೋಚರಿಸುತ್ತಾದರೂ "ಗೊಳೋ ಅನ್ನೋ ಹಾಡು ಯಾವನು ಕೇಳ್ತಾನೆ" ಎಂಬ ವಾದವನ್ನು ಈಗಿನವರು ಮುಂದಿಡುತ್ತಾರೆ. ಆದರೆ ಶೋಕಗೀತೆಯೆಂದ ಮಾತ್ರಕ್ಕೆ ಹಾಡು "ಗೊಳೋ" ಎನ್ನುವುದಿಲ್ಲ ಎಂಬ ಸತ್ಯವನ್ನು ಮರೆತಿರುತ್ತಾರೆ. ಆಗಿನವರ ಪದಜೋಡಣೆ, ಛಂದಸ್ಸು, ಗೀತರಚನೆ, ಸಂಗೀತ, ಹಾಡುಗಾರಿಕೆ ಈಗಿನವರಲ್ಲಿ ಹೆಚ್ಚಾಗಿ ಕಾಣಿಸುವುದಿಲ್ಲವೆಂಬುದು ನನ್ನ ದೃಢನಂಬಿಕೆ. ಅದು ಮತ್ತೆ ಬರಲಿ ಎಂಬ ಆಶಯ.

Tanhaayeee... Tanhaayee.. ಎಂದು ಸೋನು ನಿಗಮ್ ಹಾಡಿದರೆ ಅದು ಚೆನ್ನಾಗಿಲ್ಲವೆಂದೆನಿಸುವುದಿಲ್ಲ. ಚೆನ್ನಾಗೇ ಇದೆ. ಆದರೆ ಅದೇ ತನ್‍ಹಾಯೀ ಹಾಡು

Aankh Se Tapti Jo Chingaari
Har Aasoon Me Chabbi Tumhaari..

ಎಂಬ ರಫಿಯ ಹಾಡಿಗೆ ಸಾಟಿಯಾಗಬಲ್ಲುದೇ?

ಅಥವಾ

Aankh Bhar Aayi Agar
Ashkon Ko Mein Peeloonga
Aah Nikli Jo Kabhi
Hoton Ko Mein Seeloonga
Tujhse Waada Hai Kiya
Is Liye Mein Jeeloonga...

ಎಂಬ ಪವಿತ್ರ್ ಪಾಪಿ ಚಿತ್ರದ ಕಿಶೋರ್ ಹಾಡಿಗೆ ಹೋಲಿಕೆಯಾದೀತೆ??

ಮುಖೇಶನು ಶೋಕಗೀತೆಗಳ ರಾಜನೆಂಬುದನ್ನು ಒಪ್ಪಿಕೊಂಡರೂ ಸಹ, ರಫಿ ಮತ್ತು ಕಿಶೋರರೂ ಸಹ ಉಸ್ತಾದರು ಎಂಬುದು ಪರಮ ಸತ್ಯ.

Shaam Tanhaayi Ki Hai
Aayegi Manzil Kaise?
Jo Mujhe Raah Dikhaaye
Wohi Taara Na Raha..

ಈ ಗೀತೆಯನ್ನು ಕೇಳಿದವರ ಕಣ್ಣು ತೇವವಾಗದೇ ಇರದು!

ಲತಾ ಮಂಗೇಶ್ಕರ್ ಕೂಡ ಏನು ಕಮ್ಮಿಯಿಲ್ಲ. ಅರವತ್ತು ವರ್ಷಗಳ ಕಾಲ ಬಾಲಿವುಡ್ಡನ್ನು ಆಳಿದಾಕೆ!!

Rooth Gayi Re Sapne Saare
Toot Gayi Re Aasha
Nain Behre Ganga Moray
Phir Bhi Man Hai Pyaasa..

ಆಹ್.. ಬೇರೆಯವರ ಧ್ವನಿಯನ್ನು ಈ ಹಾಡಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವೆನ್ನಿಸುತ್ತೆ.

ಎಷ್ಟೋ ಬಾರಿ ಈ ಶೋಕಗೀತೆಗಳನ್ನು ಕೇಳುವಾಗ ಅನ್ನಿಸುತ್ತೆ, ಈ ಹಾಡನ್ನು ಹೇಗೆ ಬರೆದರು? ಬರೆಯಲು ಹೇಗೆ ಸಾಧ್ಯವಾಯಿತು? ಅವರ ಅನುಭವ ಎಂಥದ್ದಿರಬೇಕು?? ಅದಕ್ಕೆ ಇಷ್ಟು ಸೊಗಸಾದ ಜೀವ ಕೊಡಲು ಸಂಗೀತ ನಿರ್ದೇಶಕನ ಅನುಭವ ಎಂಥದ್ದಿರಬೇಕು? ಅದನ್ನು ಹಾಡಿದವನ ಅನುಭವ ಇನ್ನೆಂಥದ್ದಿರಬೇಕು??

Dil Ko Teri Hi Tamanna
Dil Ko Hai Tujhse Hi Pyaar
Chaahe Tu Aaye Na Aaye
Hum Karenge Intezar!!

ಕೇವಲ ಸಾಹಿತ್ಯ ಜ್ಞಾನದಿಂದ ಇಂಥಾ ಹಾಡುಗಳ ರಚನೆಯಾಗುವುದೇ? ಕೇವಲ ಸಂಗೀತ ಪರಿಣತಿಯಿಂದ ಇಂಥಾ ಅಮೋಘ ಸ್ವರ ಸಂಯೋಜನೆ ಸಾಧ್ಯವೇ? ಕೇವಲ ಹಾಡುಗಾರಿಕೆಯ ಅಭ್ಯಾಸದಿಂದ ಇಷ್ಟು ಚೆನ್ನಾಗಿ ಹಾಡಲು ಸಾಧ್ಯವೇ? ಆ ಬರೆಯುವ, ಆ ಸ್ವರ ಸಂಯೋಜಿಸುವ, ಆ ಹಾಡುವ ಹೃದಯದಲ್ಲಿ ನೋವಿಲ್ಲದೆ ಇದ್ದರೆ ಈ ಕೃತಿ ಸಾಧ್ಯವೇ ಇಲ್ಲವೆಂದು ದೃಢವಾಗಿ ನಂಬಿದ್ದೇನೆ.

Aake Zara Dekh Toh Teri Kaatir
Hum Kis Tarah Jeeye
Aasoon Ke Dhaage Se Seete Rahe Hum
Jo Zakhm Tu Ne Diye
Chaahat Ki Mehfil Me Gham Tera Lekar
Kismat Se Khela Jhua
Duniya Se Jeete Par Tujhse Haare
Yun Khel Apna Hua..

ಶ್ರೀಕಾಂತನು ಹಿಂದಿಯನ್ನು ಅರಿಯದಿದ್ದರೂ ಮುಖೇಶನ ಸಂಗೀತವನ್ನು ಆಸ್ವಾದಿಸುತ್ತಾನೆ. ಆ ಹಾಡಿನಲ್ಲೇ, ಆ ಧ್ವನಿಯಲ್ಲೇ, ಆ ಗೀತೆಯಲ್ಲೇ ಇರುವ ನೋವನ್ನು ತನ್ನದೆಂದು ಅನುಭವಿಸದಿದ್ದರೂ, ಅದಕ್ಕೆ ಸ್ಪಂದಿಸುತ್ತಾನೆ. ಇಂಥಾ ಸ್ಪಂದನವನ್ನುಂಟು ಮಾಡುವುದೇ ತಾನೆ ಸಂಗೀತದ ಉದ್ದಿಶ್ಯ?

Looto Na Mujhe Is Tarah
Do Raahe Pe Laake.. Do Raahe Pe Laake..
Aawaaz Na Do Ek Nayi
Raah Dikhaake.. Nayi Raah Dikhaake..
Sambhlaa Hoon Mein
Gir Girke Mujhe Phir Na Giraao..
Ab Chain Se Rehne Do
Mere Paas Na Aao
Bhuli Hui Yaadon
Mujhe Itna Na SataaO..

ಇಂಥಾ ಅದ್ಭುತ ಕೃತಿಯನ್ನು ನಿಸ್ಸಾರರು "ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನೆಪೇ" ಎಂದಾಗಿಸಲಿಲ್ಲವೇ?

ಈ ಕೃತಿಗಳು ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತೆಂದರೆ ಅತಿಶಯೋಕ್ತಿಯಲ್ಲ. ಆ ಪರಿಣಾಮವು ಆನಂದಮಯವಾಗಿರುತ್ತೆಂಬುದೂ ಅಷ್ಟೇ ಸತ್ಯ.

[ಕೃತಿಗಳ ರಚನಾಕಾರರಿಗೆ ಸಲ್ಲಬೇಕಾದ ಮನ್ನಣೆಯನ್ನು ನಾನು ಇಲ್ಲಿ ಗಾಯಕರಿಗೆ ಕೊಟ್ಟಿರುವುದು ಅಪರಾಧವಷ್ಟೆ. ಆದರೆ ಇದಕ್ಕೆ ಕಾರಣವಿದೆ. ನನ್ನನ್ನು ತಲುಪಿರುವುದು ಮುಖೇಶ್, ಕಿಶೋರ್, ರಫಿ, ಲತಾ, ಹೇಮಂತ್ ಕುಮಾರ್ - ಇವರುಗಳ ಧ್ವನಿಯು. ಇವರುಗಳ ಮೂಲಕ ಆ ಸಂಗೀತ ರಚನಾಕಾರರಿಗೆ, ಗೀತ ರಚನಾಕಾರರಿಗೆ ನಮಸ್ಕರಿಸುತ್ತೇನೆ. ಇಂಥಾ ಕರ್ತೃಗಳು ಮತ್ತೆ ಮತ್ತೆ ಹುಟ್ಟಿ ಬರಲಿ, ಸಂಗೀತ ಕದಿಯುವ ಅನು ಮಲ್ಲಿಕ್‍ನಂಥವರ ಜಾಗಕ್ಕೆ!]

-ಅ
16.01.2009
11.30PM

Friday, January 9, 2009

ಪ್ರೇಮರಾಗವನ್ನು ಕೇಳು

ಪ್ರೇಮರಾಗವನ್ನು ಕೇಳು
ಹಾಡುತಿರಲು ಎದೆಯ ದುಂಬಿ
ಪುಟ್ಟ ಹೃದಯವನ್ನು ತುಂಬಿ!

ಕೆಂಗುಲಾಬಿ ನೀನೆ ತಾನೆ?
ಅರಳಿ ನಿಂತ ಚೆಲುವನಂತ
ನಿನ್ನ ಮೊಗದಿ ನಿಜವಸಂತ!
ಪ್ರೇಮರಾಗವಾಯ್ತು ಕೇಳು
ಎದೆಯ ಗಣಿಯ ಚಿನ್ನವಿಂದು
ತುಟಿಯ ನಡುವೆ ಹೊಳೆಯಿತೆಂದು!

ನೊಂದ ಕಣ್ಣ ಹನಿಗಳಂತೆ
ಕುಸಿಯದಿರಲಿ ನೀನು ಧರೆಗೆ
ನಾನು ಹೋದರೇನು ಮರೆಗೆ?
ಪ್ರೇಮರಾಗವನ್ನು ಕೇಳು
ವಿರಹ ಗಗನವನ್ನೆ ದಾಟಿ
ಹುಟ್ಟಿಬರಲು ಏನು ಸಾಟಿ?

ತಣಿವ ಹಾದಿಯೊಳಗೆ ನಾನು
ದಣಿದು ಕೂರುವವನೆ? ಹೇಳು.
ನಿನ್ನ ಒಡನೆಯಿಹುದೆ ಬಾಳು!
ಹೃದಯದರಸಿ, ಪ್ರೇಮರಾಗ
ಇನಿದು ನೀನು ಜೊತೆಗೆ ಹಾಡೆ
ಕಣ್ಣು-ಕಣ್ಣು ಜೊತೆಗೆ ಕೂಡೆ!

ಬಾಳ ಹಂಬಲವನು ತರಲು
ನನಗೆ ನಿನ್ನ ಪ್ರೇಮನುಡಿಯು,
ಮೋಹಗೊಳಿಸುವಂಥ ನಡೆಯು,
ಕಣ್ಣನೋಟದಮೃತವುಣಿಸಿ
ಒಯ್ಯಲೆನ್ನನು ಪ್ರಣಯಕೆ
ಕೈಯ ಹಿಡಿದು ಹೊಸ ಪಯಣಕೆ!

ಹೃದಯದುಂಬಿ ಹಾಡುತಿಹುದು
ಪ್ರೇಮರಾಗವನ್ನು, ಕೇಳು.
ಇನಿದು ಸವಿಯು ನಮ್ಮ ಬಾಳು!

-ಅ
09.01.2009
2.40AM

Saturday, January 3, 2009

ಮರೆತ ಮುಖಗಳು

ಸೂಚನೆ: ಕೆಲವು ಚಿತ್ರಗಳು ನನಗೆ ದೊರೆಯಲಿಲ್ಲವಾದ್ದರಿಂದ ಆ ಚಲನಚಿತ್ರಗಳನ್ನು ನೋಡಿದ ನೆನಪಿನ ಚಿತ್ರವಷ್ಟೇ ಕಣ್ಮುಂದೆ ಉಳಿಯುತ್ತೆ.

ಹೊನ್ನಪ್ಪ ಭಾಗವತರ್ ಕಾಲದಿಂದಲೂ ಕನ್ನಡ ಚಿತ್ರರಂಗವು ಅನೇಕಾನೇಕ ಹೊಸ ಹೊಸ ಮುಖಗಳನ್ನು ಪರಿಚಯಿಸುತ್ತಲೇ ಬರುತ್ತಿದೆ. ನಾವೂ ನೋಡುತ್ತಲೇ ಇದ್ದೇವೆ. ರಾಜ್‍ಕುಮಾರ್, ವಿಷ್ಣುವರ್ಧನ, ಅಂಬರೀಶ್ ಇಂಥಾ ಮುಖಗಳು ಅಚ್ಚಳಿಯದೆ ಉಳಿದಿರುವುದು ಅವರ ಹಾಗೂ ನಮ್ಮ ಭಾಗ್ಯ. ಇವರಷ್ಟಲ್ಲದಿದ್ದರೂ ತಕ್ಕಮಟ್ಟಿಗೆ ಪ್ರಸಿದ್ಧಿ ಗಳಿಸಿದ ನಟ ನಟಿಯರ ಮುಖಗಳೂ ಸಹ, ಚಿತ್ರ ಪ್ರಸಾರವಾದಾಗ ನೆನಪಾಗೇ ಆಗುತ್ತೆ. ಶರಪಂಜರದ ಗಂಗಾಧರ, ಸೀತಾ-ದ ರಮೇಶ್, ಅಮೃತ ಘಳಿಗೆಯ ಶ್ರೀಧರ್, ರಾಮಕೃಷ್ಣ - ಇವರೆಲ್ಲಾ ಶಿಖರದ ಸ್ಥಾನಗಳಿಗೆ ತಲುಪದಿದ್ದರೂ ಕನ್ನಡ ಪ್ರೇಕ್ಷಕನ ಮನಸ್ಸಿನಿಂದ ಅಂತೂ ದೂರವಾಗಿಲ್ಲ.

ಆದರೆ ಕೆಲ ನಟರಿದ್ದರು. ಇಂದಿನ ಪ್ರೇಕ್ಷಕ ಆ ಹೆಸರುಗಳಿರಲಿ, ಮುಖಗಳನ್ನೂ ಮರೆತಿರಬಹುದು.

ಎಲ್ಲಾ ಕಲೆಯ ಬಲ್ಲೆ.. ನಿನಗೆಲ್ಲಾ ಕಲಿಸ ಬಲ್ಲೆ.. ಫೈಟ್ ಮಾಡುವೆ, ಡ್ಯಾನ್ಸ್ ಆಡುವೆ, ಡ್ಯುಯೆಟ್ ಹಾಡುವೆ....

ಹೀಗೊಂದು ಹಾಡು ಎಂಭತ್ತರ ದಶಕದಲ್ಲಿ ವಿಪರೀತ ಖ್ಯಾತಿ ಪಡೆದಿತ್ತೆಂದರೆ ನಂಬುವುದು ಕಷ್ಟ. ಆದರೆ ಅದು ಸತ್ಯ. ಗಾಯಕರು ಯೇಸುದಾಸ್ ಎನ್ನುವುದು ಇನ್ನೊಂದು ಸತ್ಯ. ಆ ಚಿತ್ರದ ನಾಯಕ ಕನ್ನಡದ ಸೂಪರ್ ಸ್ಟಾರ್ ಕೂಡ ಆಗಬಹುದೆಂದು ಆ ಕಾಲದ ಪ್ರೇಕ್ಷಕ ನಿರ್ಧರಿಸಿದ್ದರೂ ಅಚ್ಚರಿಯಿಲ್ಲ. ಆದರೆ ಈಗ ಆತ ಎಲ್ಲಿ? ಅವರ ಹೆಸರು ಮುರಳಿ ಎಂದು.ಸಾಮಾನ್ಯವಾಗಿ ಪ್ರಭಾಕರ್ ಚಿತ್ರಗಳಲ್ಲೆಲ್ಲಾ ಖಳನಾಯಕನಾಗಿರುತ್ತಿದ್ದುದು ವಜ್ರಮುನಿಯವರು. ವಯಸ್ಸಾದ ವಿಲ್ಲನ್ ಪಾತ್ರ ಇವರು ಮಾಡುತ್ತಿದ್ದರೆ, ಇನ್ನೊಬ್ಬ ಯಂಗ್ ವಿಲ್ಲನ್ ಇರುತ್ತಿದ್ದ. ಆತನ ಹೆಸರು ವಿಶ್ವವಿಜೇತ! (ಚಿತ್ರ ಸಿಗಲಿಲ್ಲ. :-( ) ವಿಶ್ವವಿಜೇತ ಎಂಬ ವಿಲ್ಲನ್ ತಮ್ಮ ಧ್ವನಿಗೆ ಎಷ್ಟು ಫೇಮಸ್ಸೋ, ಅಷ್ಟೇ ಸ್ಮಾರ್ಟ್ ಆಗಿ ಕೂಡ ಇದ್ದರು. ಯಾಕೆ ಹೀರೋ ಆಗಲಿಲ್ಲವೋ ಗೊತ್ತಿಲ್ಲ. ಪ್ರಭಾಕರ್ ಚಿತ್ರದಲ್ಲೆಲ್ಲಾ ಕಾಣಿಸಿಕೊಳ್ಳುತ್ತಿದ್ದ ವಿಶ್ವವಿಜೇತ ಅವರು, ಪ್ರಭಾಕರ್‍ರಂತೆಯೇ ವಿಪರೀತ ಕುಡುಕರಾಗಿದ್ದರಂತೆ. ಅವರ ಮರಣಕ್ಕೂ ಕುಡಿತವೇ ಕಾರಣವಂತೆ. ಪ್ರಭಾಕರ್‍ಗಿಂತ ಮುಂಚೆಯೇ ಅಪಘಾತದಲ್ಲಿ ಹೋಗಿಬಿಟ್ಟರು ಅವರು.

ಮತ್ತೊಂದು ಹೆಸರು, ಮುಖ - ಕನ್ನಡ ಪ್ರೇಕ್ಷಕ ಅಷ್ಟಾಗಿ ಗಮನ ಕೊಟ್ಟಿಲ್ಲದೆ ಇರುವುದು - ಅವರ ಹೆಸರು ಸತೀಶ್. ಸತೀಶ್ ಎಂಬಾತ ಕನ್ನಡ ನಟನೇ? ಎಂದು ಇಂದಿನ ಪ್ರೇಕ್ಷಕ ಕೇಳಿದರೆ ಅದು ಆಶ್ಚರ್ಯ ಪಡುವಂಥ ಪ್ರಶ್ನೆಯೇನಲ್ಲ. ಹೇಗೆ ಪ್ರಭಾಕರ್ ಚಿತ್ರಗಳಲ್ಲಿ ವಿಶ್ವವಿಜೇತ ಇರುತ್ತಿದ್ದರೋ ಹಾಗೆ ಎಂಭತ್ತರ ದಶಕದಲ್ಲಿ ಬರುತ್ತಿದ್ದ ರಾಜ್‍ಕುಮಾರ್ ಚಿತ್ರಗಳಲ್ಲಿ ಈ ಸತೀಶ್‍ಗೆ ಒಂದು ಪಾತ್ರ ಇದ್ದೇ ಇರುತ್ತಿತ್ತು. ಇವರ ಚಿತ್ರವೂ ನನ್ನ ಬಳಿ ಇಲ್ಲದೇ ಇರುವ ಕಾರಣ ಇವರ ನೆನಪು ತರಿಸುವಂಥ ಚಿತ್ರವನ್ನು ಇಲ್ಲಿ ಹೆಸರಿಸ ಬೇಕಿದೆ. ಅದೇ ಕಣ್ಣು ಚಿತ್ರದ ಪೋಲಿಸ್ ಇನ್‍ಸ್ಪೆಕ್ಟರ್‍ನನ್ನು ಯಾರು ತಾನೆ ಮರೆಯಲು ಸಾಧ್ಯ? ಬೆಕ್ಕಿನ ಕಣ್ಣಿನ ಪೋಲೀಸೇ ಈ ಸತೀಶ್. ಈಗ ಎಲ್ಲಿದ್ದಾರೆ?ನಮಗೆ ಮುಖಗಳೋ, ಸಾಹಿತ್ಯವೋ, ಸ್ಥಳಗಳೋ ನೆನಪಿರಬೇಕಾದರೆ ಅದಕ್ಕೆ ಮೊದಲ ಕಾರಣ ಸಂಗೀತವಾಗಿರುತ್ತೆ. ದರಿದ್ರ ಕಥೆಯುಳ್ಳ ಚಲನ ಚಿತ್ರವಾದರೂ ಒಳ್ಳೆಯ ಸಂಗೀತವಿದ್ದರೆ ಅದನ್ನು ನಾವು ಮರೆಯುವುದಿಲ್ಲ. ಆದರೆ ರೇಡಿಯೋ ಕಾಲದವರು ಹಾಡುಗಳನ್ನು ಕೇಳಿರುತ್ತಾರೆಯೇ ಹೊರೆತು, ನೋಡಿರುವುದು ಕಡಿಮೆ. ಟಿ.ವಿ.ಕಾಲದವರು ಇನ್ನೂ ಚೆನ್ನಾಗಿ ಮುಖಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಇಂಥಾ ರೇಡಿಯೋ ಕಾಲದ ಒಬ್ಬ ನಟ - ಕೋಕಿಲ ಮೋಹನ್ - ಬಹಳ ಪ್ರಸಿದ್ಧಿ ಪಡೆದಿದ್ದರು. ಕಮಲ್ ಹಾಸನ್ ರೀತಿಯೇ ಕಾಣಿಸುವ ಇವರು ಪ್ರಸಿದ್ಧಿಯಾಗಲು ಅಷ್ಟೇನು ಸಮಯ ಬೇಕಾಗಲಿಲ್ಲ. ಆದರೆ ಅಷ್ಟೇ ಬೇಗ ಮಾಯವೂ ಆಗಿಬಿಟ್ಟರು.ಊರಿಂದ ಬಂದನೋ ಮಿಸ್ಟರ್ ಮಾರನು.... ಬೆಂಗ್ಳೂರಿಂದ ಬಂದನೋ ಮಿಸ್ಟರ್ ಮಾರನು....

ಈಗ ಇವರುಗಳು ಮತ್ತೊಮ್ಮೆ ಬೆಂಗ್ಳೂರಿನ ಥಿಯೇಟರುಗಳಿಗೆ ಬರುವಂತಾಗಲಿ. ಮರೆತ ಮುಖಗಳನ್ನು ನಾವು ನೆನಪು ಮಾಡಿಕೊಳ್ಳುವಂತಾಗಲಿ.

(ನಟಿಯರ ಬಗ್ಗೆ ಬೇರೆ ಯಾವಾಗಲಾದರೂ ಹುಡುಕುತ್ತೇನೆ.)

-ಅ
03.01.2009
3PM