Saturday, January 3, 2009

ಮರೆತ ಮುಖಗಳು

ಸೂಚನೆ: ಕೆಲವು ಚಿತ್ರಗಳು ನನಗೆ ದೊರೆಯಲಿಲ್ಲವಾದ್ದರಿಂದ ಆ ಚಲನಚಿತ್ರಗಳನ್ನು ನೋಡಿದ ನೆನಪಿನ ಚಿತ್ರವಷ್ಟೇ ಕಣ್ಮುಂದೆ ಉಳಿಯುತ್ತೆ.

ಹೊನ್ನಪ್ಪ ಭಾಗವತರ್ ಕಾಲದಿಂದಲೂ ಕನ್ನಡ ಚಿತ್ರರಂಗವು ಅನೇಕಾನೇಕ ಹೊಸ ಹೊಸ ಮುಖಗಳನ್ನು ಪರಿಚಯಿಸುತ್ತಲೇ ಬರುತ್ತಿದೆ. ನಾವೂ ನೋಡುತ್ತಲೇ ಇದ್ದೇವೆ. ರಾಜ್‍ಕುಮಾರ್, ವಿಷ್ಣುವರ್ಧನ, ಅಂಬರೀಶ್ ಇಂಥಾ ಮುಖಗಳು ಅಚ್ಚಳಿಯದೆ ಉಳಿದಿರುವುದು ಅವರ ಹಾಗೂ ನಮ್ಮ ಭಾಗ್ಯ. ಇವರಷ್ಟಲ್ಲದಿದ್ದರೂ ತಕ್ಕಮಟ್ಟಿಗೆ ಪ್ರಸಿದ್ಧಿ ಗಳಿಸಿದ ನಟ ನಟಿಯರ ಮುಖಗಳೂ ಸಹ, ಚಿತ್ರ ಪ್ರಸಾರವಾದಾಗ ನೆನಪಾಗೇ ಆಗುತ್ತೆ. ಶರಪಂಜರದ ಗಂಗಾಧರ, ಸೀತಾ-ದ ರಮೇಶ್, ಅಮೃತ ಘಳಿಗೆಯ ಶ್ರೀಧರ್, ರಾಮಕೃಷ್ಣ - ಇವರೆಲ್ಲಾ ಶಿಖರದ ಸ್ಥಾನಗಳಿಗೆ ತಲುಪದಿದ್ದರೂ ಕನ್ನಡ ಪ್ರೇಕ್ಷಕನ ಮನಸ್ಸಿನಿಂದ ಅಂತೂ ದೂರವಾಗಿಲ್ಲ.

ಆದರೆ ಕೆಲ ನಟರಿದ್ದರು. ಇಂದಿನ ಪ್ರೇಕ್ಷಕ ಆ ಹೆಸರುಗಳಿರಲಿ, ಮುಖಗಳನ್ನೂ ಮರೆತಿರಬಹುದು.

ಎಲ್ಲಾ ಕಲೆಯ ಬಲ್ಲೆ.. ನಿನಗೆಲ್ಲಾ ಕಲಿಸ ಬಲ್ಲೆ.. ಫೈಟ್ ಮಾಡುವೆ, ಡ್ಯಾನ್ಸ್ ಆಡುವೆ, ಡ್ಯುಯೆಟ್ ಹಾಡುವೆ....

ಹೀಗೊಂದು ಹಾಡು ಎಂಭತ್ತರ ದಶಕದಲ್ಲಿ ವಿಪರೀತ ಖ್ಯಾತಿ ಪಡೆದಿತ್ತೆಂದರೆ ನಂಬುವುದು ಕಷ್ಟ. ಆದರೆ ಅದು ಸತ್ಯ. ಗಾಯಕರು ಯೇಸುದಾಸ್ ಎನ್ನುವುದು ಇನ್ನೊಂದು ಸತ್ಯ. ಆ ಚಿತ್ರದ ನಾಯಕ ಕನ್ನಡದ ಸೂಪರ್ ಸ್ಟಾರ್ ಕೂಡ ಆಗಬಹುದೆಂದು ಆ ಕಾಲದ ಪ್ರೇಕ್ಷಕ ನಿರ್ಧರಿಸಿದ್ದರೂ ಅಚ್ಚರಿಯಿಲ್ಲ. ಆದರೆ ಈಗ ಆತ ಎಲ್ಲಿ? ಅವರ ಹೆಸರು ಮುರಳಿ ಎಂದು.ಸಾಮಾನ್ಯವಾಗಿ ಪ್ರಭಾಕರ್ ಚಿತ್ರಗಳಲ್ಲೆಲ್ಲಾ ಖಳನಾಯಕನಾಗಿರುತ್ತಿದ್ದುದು ವಜ್ರಮುನಿಯವರು. ವಯಸ್ಸಾದ ವಿಲ್ಲನ್ ಪಾತ್ರ ಇವರು ಮಾಡುತ್ತಿದ್ದರೆ, ಇನ್ನೊಬ್ಬ ಯಂಗ್ ವಿಲ್ಲನ್ ಇರುತ್ತಿದ್ದ. ಆತನ ಹೆಸರು ವಿಶ್ವವಿಜೇತ! (ಚಿತ್ರ ಸಿಗಲಿಲ್ಲ. :-( ) ವಿಶ್ವವಿಜೇತ ಎಂಬ ವಿಲ್ಲನ್ ತಮ್ಮ ಧ್ವನಿಗೆ ಎಷ್ಟು ಫೇಮಸ್ಸೋ, ಅಷ್ಟೇ ಸ್ಮಾರ್ಟ್ ಆಗಿ ಕೂಡ ಇದ್ದರು. ಯಾಕೆ ಹೀರೋ ಆಗಲಿಲ್ಲವೋ ಗೊತ್ತಿಲ್ಲ. ಪ್ರಭಾಕರ್ ಚಿತ್ರದಲ್ಲೆಲ್ಲಾ ಕಾಣಿಸಿಕೊಳ್ಳುತ್ತಿದ್ದ ವಿಶ್ವವಿಜೇತ ಅವರು, ಪ್ರಭಾಕರ್‍ರಂತೆಯೇ ವಿಪರೀತ ಕುಡುಕರಾಗಿದ್ದರಂತೆ. ಅವರ ಮರಣಕ್ಕೂ ಕುಡಿತವೇ ಕಾರಣವಂತೆ. ಪ್ರಭಾಕರ್‍ಗಿಂತ ಮುಂಚೆಯೇ ಅಪಘಾತದಲ್ಲಿ ಹೋಗಿಬಿಟ್ಟರು ಅವರು.

ಮತ್ತೊಂದು ಹೆಸರು, ಮುಖ - ಕನ್ನಡ ಪ್ರೇಕ್ಷಕ ಅಷ್ಟಾಗಿ ಗಮನ ಕೊಟ್ಟಿಲ್ಲದೆ ಇರುವುದು - ಅವರ ಹೆಸರು ಸತೀಶ್. ಸತೀಶ್ ಎಂಬಾತ ಕನ್ನಡ ನಟನೇ? ಎಂದು ಇಂದಿನ ಪ್ರೇಕ್ಷಕ ಕೇಳಿದರೆ ಅದು ಆಶ್ಚರ್ಯ ಪಡುವಂಥ ಪ್ರಶ್ನೆಯೇನಲ್ಲ. ಹೇಗೆ ಪ್ರಭಾಕರ್ ಚಿತ್ರಗಳಲ್ಲಿ ವಿಶ್ವವಿಜೇತ ಇರುತ್ತಿದ್ದರೋ ಹಾಗೆ ಎಂಭತ್ತರ ದಶಕದಲ್ಲಿ ಬರುತ್ತಿದ್ದ ರಾಜ್‍ಕುಮಾರ್ ಚಿತ್ರಗಳಲ್ಲಿ ಈ ಸತೀಶ್‍ಗೆ ಒಂದು ಪಾತ್ರ ಇದ್ದೇ ಇರುತ್ತಿತ್ತು. ಇವರ ಚಿತ್ರವೂ ನನ್ನ ಬಳಿ ಇಲ್ಲದೇ ಇರುವ ಕಾರಣ ಇವರ ನೆನಪು ತರಿಸುವಂಥ ಚಿತ್ರವನ್ನು ಇಲ್ಲಿ ಹೆಸರಿಸ ಬೇಕಿದೆ. ಅದೇ ಕಣ್ಣು ಚಿತ್ರದ ಪೋಲಿಸ್ ಇನ್‍ಸ್ಪೆಕ್ಟರ್‍ನನ್ನು ಯಾರು ತಾನೆ ಮರೆಯಲು ಸಾಧ್ಯ? ಬೆಕ್ಕಿನ ಕಣ್ಣಿನ ಪೋಲೀಸೇ ಈ ಸತೀಶ್. ಈಗ ಎಲ್ಲಿದ್ದಾರೆ?ನಮಗೆ ಮುಖಗಳೋ, ಸಾಹಿತ್ಯವೋ, ಸ್ಥಳಗಳೋ ನೆನಪಿರಬೇಕಾದರೆ ಅದಕ್ಕೆ ಮೊದಲ ಕಾರಣ ಸಂಗೀತವಾಗಿರುತ್ತೆ. ದರಿದ್ರ ಕಥೆಯುಳ್ಳ ಚಲನ ಚಿತ್ರವಾದರೂ ಒಳ್ಳೆಯ ಸಂಗೀತವಿದ್ದರೆ ಅದನ್ನು ನಾವು ಮರೆಯುವುದಿಲ್ಲ. ಆದರೆ ರೇಡಿಯೋ ಕಾಲದವರು ಹಾಡುಗಳನ್ನು ಕೇಳಿರುತ್ತಾರೆಯೇ ಹೊರೆತು, ನೋಡಿರುವುದು ಕಡಿಮೆ. ಟಿ.ವಿ.ಕಾಲದವರು ಇನ್ನೂ ಚೆನ್ನಾಗಿ ಮುಖಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಇಂಥಾ ರೇಡಿಯೋ ಕಾಲದ ಒಬ್ಬ ನಟ - ಕೋಕಿಲ ಮೋಹನ್ - ಬಹಳ ಪ್ರಸಿದ್ಧಿ ಪಡೆದಿದ್ದರು. ಕಮಲ್ ಹಾಸನ್ ರೀತಿಯೇ ಕಾಣಿಸುವ ಇವರು ಪ್ರಸಿದ್ಧಿಯಾಗಲು ಅಷ್ಟೇನು ಸಮಯ ಬೇಕಾಗಲಿಲ್ಲ. ಆದರೆ ಅಷ್ಟೇ ಬೇಗ ಮಾಯವೂ ಆಗಿಬಿಟ್ಟರು.ಊರಿಂದ ಬಂದನೋ ಮಿಸ್ಟರ್ ಮಾರನು.... ಬೆಂಗ್ಳೂರಿಂದ ಬಂದನೋ ಮಿಸ್ಟರ್ ಮಾರನು....

ಈಗ ಇವರುಗಳು ಮತ್ತೊಮ್ಮೆ ಬೆಂಗ್ಳೂರಿನ ಥಿಯೇಟರುಗಳಿಗೆ ಬರುವಂತಾಗಲಿ. ಮರೆತ ಮುಖಗಳನ್ನು ನಾವು ನೆನಪು ಮಾಡಿಕೊಳ್ಳುವಂತಾಗಲಿ.

(ನಟಿಯರ ಬಗ್ಗೆ ಬೇರೆ ಯಾವಾಗಲಾದರೂ ಹುಡುಕುತ್ತೇನೆ.)

-ಅ
03.01.2009
3PM

4 comments:

 1. ಮರೆತು ಹೋದ ಮುಖಗಳನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು.
  R.N.R ಅವರ ಮಗ ಸುದರ್ಶನ ಸಹ ಒಬ್ಬ ಮರೆತುಹೋದ ಮುಖ. ಅವರು ವಿಜಯನಗರದ ವೀರಪುತ್ರ ಚಿತ್ರದಲ್ಲಿ ನಾಯಕರಾಗಿದ್ದರು.
  ಬಹುಶಃ ರಾಜಾಶಂಕರ ಅನ್ನುವ ನಟ 'ಕಪ್ಪು ಬಿಳುಪು'ಚಿತ್ರದಲ್ಲಿ ಕಲ್ಪನಾಗೆ ನಾಯಕರಾಗಿದ್ದರೇನೊ?
  'ಎಡಕಲ್ಲು ಗುಡ್ಡದ ಮೇಲಿ'ನ ನಾಯಕ ಚಂದ್ರಶೇಖರ ಸಹ ಮಾಯವಾಗಿಬಿಟ್ಟಿದ್ದಾರೆ.

  ReplyDelete
 2. [ಸುನಾಥ್] ಸುದರ್ಶನ್ ಅಂತೂ ಕೆಲವೇ ವರ್ಷಗಳ ಕಳಗೆ ಒಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಬಹುಶಃ "ಮನೆತನ" ಧಾರಾವಾಹಿ ಇರಬಹುದು. ರಾಜಾಶಂಕರ ಎಂದರೆ ನನಗೆ ನೆನಪಾಗುವುದು ಭಕ್ತ ಕುಂಬಾರದಲ್ಲಿ ಅವರಿಗಿರುವ ಪಾತ್ರ. "ಪವಡಿಸು ಪರಮಾತ್ಮ" ಹಾಡು ಇವರ ಮೇಲೆ ಚಿತ್ರಿತವಾಗಿದ್ದು, ಆ ಹಾಡು ಇಂದಿಗೂ ಖ್ಯಾತವಾಗಿದ್ದೂ, ಈ ರಾಜಾಶಂಕರ ಎಂಬ ಹೆಸರು ಮಾತ್ರ ಚಾಲ್ತಿಯಲ್ಲಿಲ್ಲ. ಮತ್ತೆ ಚಂದ್ರಶೇಖರರು ಮೊನ್ನೆ ಮೊನ್ನೆ ಒಂದು ಚಿತ್ರ ಕೂಡ ಮಾಡಿದರಲ್ಲವೇ? ಅಷ್ಟೇನೂ ಹಿಟ್ ಆಗಲಿಲ್ಲ.

  ReplyDelete
 3. ee post alli modalige haakiro hesaru muraLi -- aata tamiLina actor-u.. illi ondo erado chitra maaDirodu.. kaNmare aagde innen aagtaare, paapa! :D tamiLinalli innu nenpiTkonDiddare jana..

  ReplyDelete
 4. [ಗಂಭೇ] ಆ ತಮಿಳಿನ ಹೀರೋ ಕನ್ನಡದ ಸಿದ್ದಲಿಂಗಯ್ಯ ಅವರ ಮಗ. ಪ್ರಕಾಶ್ ರೈ, ಟೈಗರ್ ಪ್ರಭಾಕರ್, ರಮೇಶ್, ರಜನಿ ಕಾಂತ್ - ಇವರಂತೆ ವಲಸೆ ಹೋದ ನಟ.

  ReplyDelete