Monday, January 26, 2009

ಗಾಂಧಿಬಜಾರಿನಲ್ಲಿ ಅಂದು..

ಶ್ರೀನಿಧಿಯ ಆಹಾರ ಕೇಂದ್ರಗಳ ಲೇಖನವನ್ನು ನೋಡಿದಾಗ ನನ್ನ ಬಾಲ್ಯದ ಗಾಂಧೀಬಜಾರು ಕಣ್ಮುಂದೆ ಸುಳಿಯಿತು.

ವಿಮೆನ್ಸ್ ಪೀಸ್ ಲೀಗ್‍ನ ಶಾಲೆಯಲ್ಲಿ ಓದುತ್ತಿದ್ದ ನಾನು ಶಾಲೆಯು ಮುಗಿದ ಕೂಡಲೆ ಅತ್ತೆಯ ಜೊತೆ ನಡೆದುಕೊಂಡು ಮಹಾಲಕ್ಷ್ಮಿ ಟಿಫನ್ ರೂಮಿನಲ್ಲಿ ಕೇಸರಿ ಭಾತು ಮತ್ತು ಕೋಲ್ಡ್ ಬಾದಾಮಿ ಹಾಲು ಕುಡಿದ ನಂತರವೇ ಆಟೋ ಹತ್ತಿ ಮನೆಗೆ ಹೋಗುತ್ತಿದ್ದುದು. ಮಹಾಲಕ್ಷ್ಮಿಯ ಖಾಲಿ ದೋಸೆ ಎಷ್ಟು ಫೇಮಸ್ಸೋ ಕೋಲ್ಡ್ ಬಾದಾಮಿ ಹಾಲು ಕೂಡ ಅಷ್ಟೇ ಫೇಮಸ್ಸು.

ಅದಿರಲಿ.

ಗಾಂಧೀಬಜಾರಿನಲ್ಲಿ ಒಂದಷ್ಟು "extinct" ತಾಣಗಳನ್ನು ನೆನಪು ಮಾಡಿಕೊಂಡಿದ್ದರ ಪ್ರತಿಫಲವೇ ಈ ಲೇಖನ.

ಮಹಾಲಕ್ಷ್ಮಿಯಿಂದ ಗಾಂಧಿಬಜಾರು ಸರ್ಕಲ್ಲಿನೆಡೆಗೆ ಕೆಲವು ಹೆಜ್ಜೆಗಳು ಮುಂದೆ ಬಂದರೆ ಎಡಕ್ಕೆ ಒಂದು "ಬೃಹತ್" ಶೌಚಾಲಯದ ಪಕ್ಕ ಮಾಡರ್ನ್ ಟಿಫನ್ ರೂಮ್ ಎಂಬ ವಿದ್ಯಾರ್ಥಿ ಭವನದ ಶೈಲಿಯ ಹೋಟೆಲಿತ್ತು. ಪ್ರತಿ ಶುಕ್ರವಾರವೂ (ಶುಕ್ರವಾರ ಮಾತ್ರ ಯಾಕೆ ಮಾಡುತ್ತಿದ್ದರೋ 'ಅಲ್ಲಾ'ನೇ ಬಲ್ಲ.) ಇಲ್ಲಿ ಸಿಗುತ್ತಿದ್ದ ದಮ್ರೋಟಿನ ನೆನಪು ಈಗಲೂ ಬಾಯಲ್ಲಿ ನೀರೂರಿಸುತ್ತೆ. ಅಂದ ಹಾಗೆ ಆ ಬೃಹತ್ ಶೌಚಾಲಯವು ಈಗ ಕನ್ನಡ ಸಂಘವೊಂದರ 'ಕಟ್ಟೆ' ಆಗಿದೆ. ತೀರ ಮೊನ್ನೆ ಮೊನ್ನೆ ಈ ಹೊಟೆಲು ಮಾಯವಾಗಿಬಿಟ್ಟಿತು.

ಈ ಮಾಡರ್ನ್ ಟಿಫಿನ್ ರೂಮ್ ಎಂಬ ಎಂ.ಟಿ.ಆರ್. ದಾಟಿ ಕೆಲವೇ ಹೆಜ್ಜೆ ಮುಂದೆ ಬಂದರೆ ಬಲಕ್ಕಿರುವ ಈಶ್ವರನ ದೇವಸ್ಥಾನದ ಪಕ್ಕ ಘಮ್ಮೆನೆ ಕಾಫಿ ಪರಿಮಳ ಬರುವುದಿಲ್ಲವೆ? ಅದರ ಪಕ್ಕದಲ್ಲಿ ಒಂದು ಖಾಲಿ ನಿವೇಷನದಲ್ಲಿ "ಸೇಲ್" ಹಾಕಿರುತ್ತಾರಲ್ಲಾ, ಆ ಜಾಗದಲ್ಲಿ ನೂರು ವರ್ಷದ ಹಳೆಯ ಗಣೇಶ್ ಭವನ ಎಂಬ ಹಳ್ಳಿ ಮಾದರಿಯ ಹೊಟೆಲೊಂದಿತ್ತು. ನಾನು ಪ್ರೈಮರಿ ಶಾಲೆಯಲ್ಲಿದ್ದಾಗಲೇ ಇದು ಎತ್ತಂಗಡಿಯಾಗಲು ಕಾರಣಗಳಿದ್ದವು. ಒಂದು, ಇದು ಯಾವುದೋ ಹಳ್ಳಿಯ ಬಸ್ ಸ್ಟಾಪಿನಲ್ಲಿರುವ ಗಾಳಿ ಬೆಳಕಿಲ್ಲದ ಹೊಟೆಲಿನಂತಿದ್ದು ಬಸವನಗುಡಿಯ ಬೆಳವಣಿಗೆಯನ್ನು ಸಹಿಸಲಾಗಲಿಲ್ಲ. ಎರಡು, ಶೋ ಕೇಸಿನಲ್ಲಿದ್ದ ವಡೆ ಬೋಂಡ ಬಿಟ್ಟರೆ ಅಂಥಾ ತಿಂಡಿಗಳೇನೂ ಸಿಗುತ್ತಿರಲಿಲ್ಲ. ಉಪಹಾರ ದರ್ಶಿನಿಯಂತಹ ಫಾಸ್ಟ್ ಫುಡ್ ಎದುರು ಎಷ್ಟೊಂದು ಹೊಟೆಲುಗಳು ನಿರ್ನಾಮವಾಗಿದ್ದು ನಿಜವಷ್ಟೆ.

ಈಗಿನ ಐಸ್ ಥಂಡರ್ ಸ್ಥಳದಲ್ಲಿ ಬಸವನಗುಡಿ ಕೋ-ಆಪರೇಟಿವ್ ಸೊಸೈಟಿಯಿತ್ತು. ಈಗಲೂ ಈ ಬಾಸ್ಕೋ ಎಂಬ ಹೆಸರಿನಲ್ಲಿರುವುದು ಇದೇ ತಾನೆ? ಆದರೆ, ಈ ಸೊಸೈಟಿಯಲ್ಲಿ ಶಾಲಾ ಪುಸ್ತಕಗಳನ್ನು ಸಹ ಕಡಿಮೆ ದರದಲ್ಲಿ ಮಾರುತ್ತಿದ್ದರು. ಗಂಟೆಗಟ್ಟಲೆ ಕ್ಯೂ ನಿಂತುಕೊಂಡು ಪಠ್ಯಪುಸ್ತಕಗಳು, ಸಮವಸ್ತ್ರಗಳು, ಅಕ್ಕಿ, ಬೇಳೆ ಏನೆಲ್ಲಾ ಖರೀದಿಸಿದ್ದೀವೋ ಏನೋ! ಅದು ಬಹುಮಹಡಿಯ ಕಟ್ಟಡವಾಗಿರಲಿಲ್ಲ. ಯಾವುದೋ ಹಳೇ ಮನೆಯಂತಿತ್ತಾದ್ದರಿಂದ ಕ್ಯೂ ಮಾತ್ರ ಗಣೇಶ ಫ್ರೂಟ್ ಜ್ಯೂಸ್‍ವರೆಗೂ ಹೋಗಿರುತ್ತಿತ್ತು. ಈ ಜ್ಯೂಸ್ ಅಂಗಡಿಯನ್ನು ನಾನು ಹುಟ್ಟಿದಾಗಿನಿಂದಲೂ ನೋಡುತ್ತಿದ್ದೇನೆ. ಇಲ್ಲಿ ಪ್ರತಿವರ್ಷವೂ ಮಾವಿನ ಜ್ಯೂಸನ್ನು ಸವಿಯುತ್ತಿದ್ದೇನೆ.

ಗಣೇಶನ ಎದುರು ಒಂದು ಕಟ್ಟಡವಿದೆಯಲ್ಲವೇ? ಬಟ್ಟೆ ಅಂಗಡಿ! ಅದಕ್ಕೆ ಡಿ.ವಿ.ಜಿ. ರಸ್ತೆಯ ಕಡೆಯಿಂದ ಒಂದು ಎಂಟ್ರೆನ್ಸು. ಅಲ್ಲಿ ಅಂಗಡಿಗಳಿರಲಿಲ್ಲ. ನಮ್ಮ ಅತ್ತೆಯ ಮನೆಯಿತ್ತು!! ನನ್ನ ಬಾಲ್ಯ ಕಳೆದ ಮನೆ. ಅಕ್ಕ ವಿಜಯಾ, ಕಝಿನ್ನುಗಳಾದ ಗುರು, ಗಿರೀಶ, ಅಶೋಕ ಇವರುಗಳು ನನಗಿಂತ ಹಿರಿಯರಾದ್ದರಿಂದ ಈ ನೆನಪುಗಳು ಅವರಿಗೆ ನನಗಿಂತಲೂ ಚೆನ್ನಾಗಿರುತ್ತೆ. ಒಮ್ಮೆ ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಸುರಿದು, ಇದೇ ಮನೆಯಲ್ಲಿದ್ದ ದಾಳಿಂಬೆ ಮರವು ಬಿದ್ದು ಹೋಗಿದ್ದರ ಬಗ್ಗೆ ಮಾಡಿದ ಚರ್ಚೆ ಕೂಡ ನಾನು ಮರೆತಿಲ್ಲ. ಅತ್ತೆ ಮನೆಯ ಓನರ್ರು ಆ ಕಟ್ಟಡವನ್ನು ಹತ್ತು ವರ್ಷದ ಕೆಳಗೇ ಒಂದು ಕೋಟಿ ರೂಪಾಯಿಗೆ ಮಾರಿದರಂತೆ! ಅದೇ ಕಟ್ಟಡದ ನೆಲಮಾಳಿಗೆಯಲ್ಲಿರುವ ಚೀಲದ ಅಂಗಡಿ "ಗೋವಿಂದನ ಅಂಗಡಿ"ಯೆಂದೇ ಪ್ರಸಿದ್ಧವಾಗಿದ್ದು, ಗಾಂಧಿಬಜಾರಿನ ಕೆಲವೇ ಚೀಲದ ಅಂಗಡಿಗಳಲ್ಲಿ ಬಹು ಮುಖ್ಯವಾಗಿತ್ತು.

ಈಗ ದೊಡ್ಡದೊಂದು ಬಟ್ಟೆ ಅಂಗಡಿಯಿದೆ, "Cosmozone" ಎಂದೋ ಏನೋ. ಇದೇ ಸ್ಥಳದಲ್ಲಿ ಹರ್ಷ ಸ್ಟೋರ್ಸ್ ಎಂಬ ಕಾಂಡಿಮೆಂಟ್ಸು ಸುಮಾರು ಐವತ್ತು ವರ್ಷವಿತ್ತು. ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾತ ಈಗ ಈ ಬಟ್ಟೆ ಅಂಗಡಿಯಲ್ಲಿ ಸೆಕ್ಯೂರಿಟಿಯಾಗಿದ್ದಾನೆ. ಹರ್ಷ ಸ್ಟೋರ್ಸ್ ಮಾಲೀಕರು ಮಾತ್ರ ನಾಪತ್ತೆ. ಆ ಕಾಂಪ್ಲೆಕ್ಸಿನ ಮಹಡಿಯಲ್ಲಿದ್ದ ಡಾ.ಧ್ರುವನಾರಾಯಣ್ ಆಸ್ಪತ್ರೆಯು ಅವರು ತೀರಿಕೊಂಡ ನಂತರ ಮುಚ್ಚಿದೆ.

ಹಬ್ಬ ಬಂತೆಂದರೆ ಗಾಂಧಿಬಜಾರಿನ ಕಳೆ ಮೆರೆಯುತ್ತಿತ್ತು. ಯಾವುದೇ ಹಿಂದೂ ಹಬ್ಬದ ಎರಡು ಮೂರು ದಿನದ ಮುನ್ನವೇ ಜನವೋ ಜನ. "ಹಬ್ಬದ ಕಳೆ ನೋಡಬೇಕೆಂದರೆ ಗಾಂಧಿಬಜಾರಿಗೆ ಬರಬೇಕು" ಎಂದು ವಿಜಯಾ ಅದೆಷ್ಟು ಸಲ ಹೇಳಿದ್ದಾಳೋ! ಬೇರೆ ದಿನಗಳಲ್ಲಿ ಅಷ್ಟು ಜನರೇನು ಇರುತ್ತಿರಲಿಲ್ಲ. ಸುಬ್ಬಮ್ಮ ಅಂಗಡಿಯ ಮುಂದೆ ಒಂದಷ್ಟು ಜನ, ವಿದ್ಯಾರ್ಥಿ ಭವನದ ಮುಂದೆ ಒಂದು ಗುಂಪು, ಈಶ್ವರನ ದೇವಸ್ಥಾನದ ಬಳಿ ಒಂದಷ್ಟು, ಗುರುವಾರ ಮಾತ್ರವೇ ರಾಯರ ಮಠದೆದುರು ಸಾಲಾಗಿ ಕುಳಿತ "ಒಂದು" ಗುಂಪು - ಇಷ್ಟು ಕಡೆ ಮಾತ್ರ ಜನಸಂದಣಿಯಿರುತ್ತಿತ್ತು. ಈಗ ಅವೆನ್ಯೂ ರೋಡನ್ನು ಮೀರಿಸುತ್ತೆ ಡಿ.ವಿ.ಜಿ. ರೋಡು.

ಕೆನೆರಾ ಬ್ಯಾಂಕ್ ಪಕ್ಕದಲ್ಲಿ ಒಂದು ಪಾರ್ಟಿ ಹಾಲ್ ಇದೆಯಲ್ಲಾ, ಅದು ಹದಿನೈದು ವರ್ಷದ ಮುಂಚೆ - ಹತ್ತಾರು ವರ್ಷಗಳಿಂದಲೂ ಸನ್ಮಾನ್ ಹೊಟೆಲ್ ಆಗಿತ್ತು. ಆ ಕಾಲದಲ್ಲಿ higher middle class ಜನರ ಹೊಟೆಲು ಇದಾಗಿತ್ತು. ಈಗಿನ ರೋಟಿ ಘರ್ರು, ಗೋಕುಲ್ಲು ಇದೆಯಲ್ಲಾ ಹಾಗೆ. ಅದೇ ಮಾದರಿಯ ಶಾನ್‍ಭಾಗ್ ಹೊಟೆಲು ಎಪ್ಪತ್ತು ವರ್ಷಕ್ಕೂ ಹಳೆಯದಾಗಿದ್ದು ಸುಮಾರು ಹದಿನೈದು ವರ್ಷದ ಕೆಳಗೆ ಮಾಯವಾಯಿತು. ಇದಿದ್ದಿದ್ದು ಅಂಕಿತ ಪುಸ್ತಕಕ್ಕಿಂತ ಸ್ವಲ್ಪ ಮುಂದೆ ನಡೆದರೆ ಸಿಗುವ ಒಂದು ರಿಲಯನ್ಸ್ ಫ್ರೆಶ್ ಅಂಗಡಿಯ ಸ್ಥಳದಲ್ಲೇ.

ಇದೇ ಜಾಗದಲ್ಲಿ ಒಬ್ಬ ಕುಡುಕನಿದ್ದ. ನಾನೇ ಸುಮಾರು ಏಳೆಂಟು ವರ್ಷ ನೋಡಿದ್ದೇನೆ ಈ ಕುಡುಕನನ್ನು. ಸಭ್ಯನಂತೆ ಹೋಗಿ ಬರುವವರನ್ನೆಲ್ಲಾ "ಸಾರ್, ಟೈಮ್ ಎಷ್ಟು?", "ಮೇಡಂ ಟೈಮ್ ಎಷ್ಟು?" ಎಂದು ಕೇಳುತ್ತಿದ್ದ. ಉತ್ತರ ಕೊಟ್ಟರೆಂದರೆ ಮುಗಿಯಿತು. ಅವರ ಮುಖಮೂತಿ ತುಂಬ ಪ್ರೋಕ್ಷಣೆ!! "ಖ್ವಾಷ್ ಖ್ವಾಷ್...... ಥೂ!!!" ಎಂದು ಉಗಿಯುತ್ತಿದ್ದ. ಯಾವಾಗ ಸತ್ತನೋ ಗೊತ್ತಿಲ್ಲ ಈ ಕುಡುಕ.

ಗೋವಿಂದಪ್ಪ ರಸ್ತೆಯ ಪಕ್ಕದ ರಸ್ತೆಯಲ್ಲಿರುವ ಟಿನ್ನಿಸ್ ಸ್ಕೂಲಿನ ಎದುರು ಒಬ್ಬ ಕುಳಿತಿರುತ್ತಾನೆ. ಇವನನ್ನು ನಾನು ಬಾಲ್ಯದಿಂದಲೂ ನೋಡುತ್ತಿದ್ದೇನೆ. ಒಂದು ಅಂಗಡಿಯ ಮುಚ್ಚಿದ ಕದದ ಎದುರು ಗಡ್ಡ ಬಿಟ್ಟುಕೊಂಡು ಕೊಳೆ ಬಟ್ಟೆ ಧರಿಸಿ ಹುಚ್ಚನಂತೆ ಕುಳಿತಿರುತ್ತಾನೆ, ಅಲ್ಲೇ ಮಲಗುತ್ತಾನೆ. ಯಾರಿಗೂ ಯಾವ ತೊಂದರೆಯನ್ನೂ ಮಾಡಿಲ್ಲ. ಅವನೆದುರು ನಡೆದು ಹೋಗುವವರನ್ನು ದುರುಗುಟ್ಟಿ ನೋಡುತ್ತಾನಷ್ಟೆ. ಇಂದೂ ನೋಡಿದೆ ಇವನನ್ನು. "ಈ ರೀತಿ ಎಷ್ಟೋ ವರ್ಷದಿಂದ ಇಲ್ಲಿದ್ದಾನಲ್ಲಾ ಇವನು, ಯಾವ ಪೋಲೀಸೂ ಏನೂ ಮಾಡಿಲ್ಲವಲ್ಲಾ ಇವನಿಗೆ?" ಎಂದು ಪ್ರಶ್ನಿಸಿಕೊಂಡೆ. ಹೀಗೆಲ್ಲಾ ಇದ್ದರೂ ಇನ್ನೂ ಜೀವಂತವಾಗಿದ್ದಾನಲ್ಲಾ ಏನು ಕರ್ಮ ಇವನದು? ಎಂದೂ ಅಭಿಪ್ರಾಯ ಪಟ್ಟೆ. ಗಾಂಧಿಬಜಾರಿನ ಅತ್ಯಂತ ಹಳೆಯ ತಲೆ ಬಹುಶಃ ಇವನೇ ಇರಬೇಕೆಂದೂ ಅನ್ನಿಸಿತು.

ಮನಸ್ಸು ಗಾಂಧಿಬಜಾರು!

-ಅ
26.01.2009
10.30PM

5 comments:

 1. ನೀವು ಹೇಳಿದ ಆ location ಗಳು ತಲೆಬುಡ ಅರ್ಥವಾಗದಿದ್ದರೂ (ನಾನು ನೋಡಿಲ್ಲದ ಕಾರಣ), ಒಂದು ವಿಚಾರ ಮಾತ್ರ ಸ್ಪಷ್ಟವಾಯಿತು. ನಾವು ಬಹುಶ: ನಮ್ಮನ್ನೇ ಒಂದು ದಿನ ಮರೆಯುತ್ತೇವೇನೊ, ಆದರೆ ಚಿಕ್ಕಂದಿನಲ್ಲಿ ನೋಡಿದ ಆ ’ಹುಚ್ಚ’, ’ಅರೆಹುಚ್ಚ’ ರನ್ನಂತೂ ಮರೆಯುವುದಿಲ್ಲ :) ಅವರು ನಿಜವಾಗಿಯೂ ಹುಚ್ಚರೇ? ಅಥವ ಸುಮ್ಮನೆ ಅಲೆಯುತ್ತಿದ್ದವರನ್ನು ಜನ ಹುಚ್ಚನೆಂದು ಭಾವಿಸಿ, ಹೇಳಿ ಹೇಳಿ ಅವನನ್ನು ಹುಚ್ಚನನ್ನಾಗಿ ಮಾಡಿರುತ್ತಾರೋ ಕಾಣೆ. ಆದರೆ ನಿಜವಾಗಿ ಹುಚ್ಚು ಎಂದರೇನು? ಹುಚ್ಚು ಮನಸ್ಸಿಗೋ? ಬುದ್ಧಿಗೋ? ಹುಚ್ಚು ಮನಸ್ಸಿನ ಆಸೆಗಳು, ಕಲ್ಪನೆಗಳು ಎನ್ನುತ್ತಾರಲ್ಲ? ಬಿಟ್ಟರೆ ಮುಂದಿನ ನೂರು ಶತಮಾನಗಳನ್ನು ತಲುಪಬಲ್ಲ, ಇದ್ದಕ್ಕಿದ್ದಂತೆಯೆ ಏಕಾಂಗಿಯಾಗುವ, ಭಾವಲೋಕದಲ್ಲಿ ಮುಳುಗುವ, ತರ್ಕದಲ್ಲಿ ತೇಲುವ ನಾವೆಲ್ಲರೂ ಹುಚ್ಚರೇ? ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ’ಹುಚ್ಚ’ರಾಗ್ತಿವೇನೋ? ಅಥವಾ ’ಹುಚ್ಚ’ರೆನಿಸಿಕೊಳ್ತೀವೇನೊ? :))

  ReplyDelete
 2. Nostalgiaದಷ್ಟು ಸುಂದರವಾದದ್ದು ಯಾವುದಿದೆ?

  ReplyDelete
 3. igloo nange gandhi bazaar gijibiji nalli odaadi, allinda hoov tandu pooje maaddrene habba anskolodu :-)
  bareeta hodre innondu blog post!!!

  ReplyDelete
 4. munchenoo helidde ... innondsala helteeni ... Prasanna helo haage, naan sathmele nann pretaatma dvg road nalle suttadtirutte!!!!

  ReplyDelete
 5. nange gandhi bazaaar nalli Ice thunder onde chennaag gnapaka irodu.....adh biT bere enu gottilla :-) :-)

  ReplyDelete