Tuesday, February 17, 2009

ಸಶೇಷ

ಅಮೃತ ವರ್ಷದ ಸ್ಪರ್ಶಕೆ ಕಾದ ಹೂವ ಮೇಲೆ
ಹೊಯ್ದಂತೆ ಧಾರಾಕಾರ ಮಳೆಯು
ಮೃತ್ಯು ತಾನು ಬರುವ ಮುನ್ನವೇ ಸಾವನಪ್ಪಿ
ಉದುರಿ ಚದುರಿ ಮಂಕುಕಳೆಯು,
ಉಸುರು ಬಿಗಿದ ಬಾಳಿನಿಳೆಯು.

ಯಾರು ಹೊಣೆ, ಯಾರು ಕಾರಣ -
ಸುಮಧುರ ಗಾಯನದಿ ಅಪಶೃತಿಯ ಹಾಡಲು?
ಹುಡುಕಿದಷ್ಟು ವ್ಯಸನ, ದುಗುಡ, ಕುಸಿತಭಾವ.
ನಂಬುಗೆ ಹಸ್ತವೊಂದೆ ರಕ್ಷೆ, ಅದುವೆ ಸಂಜೀವ!
ಪುಣ್ಯಶಾಲಿ ದೈವಭಕ್ತ - ನೋವು ನಲಿವಿಗಿಹನು ದೈವ.

ಗರಿಯ ತೆರೆದು
ಗುರಿಯ ತೊರೆದು
ಎತ್ತ ತಾನೆ ಪಯಣವೋ?
ಒಂಟಿ ಬದುಕಿನೊಳಗೆ
ಕಹಿಯ ಕನಲ ಪ್ರಣಯವೋ?

-ಅ
18.02.2009
12AM

Thursday, February 12, 2009

ಒಳ್ಳೇ ಬಹುಮಾನ

ಮೇಷ್ಟ್ರಾಗಿ ಕೆಲವೇ ಕಾಲ ಸಂದಿದ್ದರೂ ವಿದ್ಯಾರ್ಥಿಗಳಿಂದ ಒಳ್ಳೆಯ ಮಾತುಗಳನ್ನು ಕೇಳಲು ಸಂತೋಷವಾಗುತ್ತೆ. ವರ್ಷಾನುಗಟ್ಟಲೆ ಅನುಭವವಿರುವವರಿಗೆ ಈ ಪರಮಾನಂದದ ಬೆಲೆ ಚೆನ್ನಾಗಿ ಗೊತ್ತಿರುತ್ತೆ.

ಬಸ್ ಸ್ಟಾಂಡಿನಲ್ಲಿ ನಿಂತಿದ್ದ ನನ್ನನ್ನು ಕರೆದು, "ಸರ್, ಹೇಗಿದ್ದೀರ?" ಎಂದಾತ ಯಾರೆಂದೂ ತಿಳಿಯಲಿಲ್ಲ ನನಗೆ. "ಯಾರೋ ಗೊತ್ತಾಗಲಿಲ್ಲವಲ್ಲ?" ಎಂದೆ. ನೋಡೋಕೆ ಅವನೇ ನನಗಿಂತ ವಯಸ್ಸಾದವನಂತೆ ಕಾಣುತ್ತಿದ್ದ. ಮುಖದ ತುಂಬ ಮೀಸೆ ಗಡ್ಡ. ಇಸ್ತ್ರಿ ಮಾಡಿದ ಅಂಗಿ, ಶುಭ್ರ ಪ್ಯಾಂಟು. ನಾನೋ, ಜೀನ್ಸು ಧರಿಸಿದ್ದೆ. ಅವನು, "ನಾನು ನಿಮ್ ಸ್ಟೂಡೆಂಟು ಸಾರ್, ಪ್ರಮೋದ್... ಕನಕ ಕಾಲೇಜು.... ಬೀಕಾಂ.... ". ನನಗೆ ನೆನಪಾಗದಿದ್ದರೂ, "ಓಹ್.. ಹೇಗಿದ್ದೀಯಾಪ್ಪಾ?" ಎಂದು ಮಾತನಾಡಿಸಿದೆ. ಅವನು ಹರ್ಷನಾದ. ವಾಸ್ತವವಾಗಿ ನಾನು ಅವನಿಗಿಂತ ಹರ್ಷಿತನಾಗಿದ್ದೆ. ಈ ಅನುಭವ ಬಹುಶಃ ಎಲ್ಲ ಮೇಷ್ಟ್ರಿಗೂ ಆಗಿರುತ್ತೆ! ಅದರ ಆನಂದವನ್ನು ಅವರಷ್ಟೆ ಬಲ್ಲರು.

"ಸಾರ್, ನೀವು ನನಗೆ ಒಂಥರಾ ಇನ್‍ಸ್ಪಿರೇಷನ್ನು" ಎಂದೂ ಒಮ್ಮೆ ಒಬ್ಬ ಹುಡುಗ ನನಗೆ ಹೇಳಿರುವುದುಂಟು. "ಥ್ಯಾಂಕ್ಸ್" ಎಂದು ಅವನಿಗೆ ಹೇಳಿದೆನಾದರೂ ಮನದೊಳಗೇ ಹಿಗ್ಗಿದ್ದೆ.

ಪ್ರೋಗ್ರಾಮ್ ಬಗ್ಗೆ ಏನೋ ವಿವರಿಸುವಾಗ ಗಣಿತದ ಒಂದು ವಿಷಯವನ್ನು ವಿವರಿಸಬೇಕಾಯಿತು. ಲೆಕ್ಕ ಪೂರ್ತಿ ಮಾಡಿದ ಮೇಲೆ, ಆ ಮಕ್ಕಳು, "ಸರ್, ನೀವೇ ನಮಗೆ ಗಣಿತವನ್ನೂ ತೊಗೊಳಿ ಸರ್.." ಎಂದಾಗ ಒಂಥರಾ ನನ್ನ ಬಗ್ಗೆಯೇ ನನಗೆ ಹೆಮ್ಮೆಯಾಗದೇ ಇರಲಿಲ್ಲ.

ಮಕ್ಕಳಿಂದ ಇಂಥ ಪುರಸ್ಕಾರ, ಪ್ರಶಸ್ತಿ ಸಿಗುವಾಗ ಯಾವ ಮ್ಯಾನೇಜ್‍ಮೆಂಟಾಗಲೀ, ಸಂಘ ಸಂಸ್ಥೆಗಳಾಗಲೀ ಗುರುತಿಸಲೆಂದು ಯಾವ ಶಿಕ್ಷಕನೂ ಬಯಸುವುದಿಲ್ಲ. ಮೇಷ್ಟ್ರಿಗೆ ಮಕ್ಕಳೇ ಸರ್ವಸ್ವ.

ಹೀಗಿರುವಾಗ ಒಂದನೇ ತರಗತಿಯಲ್ಲೊಮ್ಮೆ ಪಾಠ ಮಾಡುತ್ತ, ಕಂಪ್ಯೂಟರ್ ಲ್ಯಾಬಿಗೆ ಕರೆದೊಯ್ಯಲು ಸಿದ್ಧವಾಗಿದ್ದಾಗ ಒಬ್ಬ ಹುಡುಗ ಎದ್ದು ನಿಂತು, ಮಡಚಿದ ಮುಷ್ಟಿಯೊಡನೆ ತನ್ನ ಮಧ್ಯದ ಬೆರಳನ್ನು ನನ್ನತ್ತ ತೋರಿಸಿದ. ಎಲಾ ಬೋಳಿಮಗನೆ, ನನಗೇ ಹೀಗೆ ಬೆರಳು ತೋರಿಸುವ ಧೈರ್ಯವೇ ನಿನಗೆ ಎಂದು ಮನಸ್ಸಿನಲ್ಲಿ ಅಂದುಕೊಂಡೆನಾದರೂ, ಜೋರಾಗಿ ಹೇಳಲಿಲ್ಲ. ವಿದ್ಯಾರ್ಥಿಗಳಿಂದ ಒಳ್ಳೊಳ್ಳೇ ಕಾಂಪ್ಲಿಮೆಂಟನ್ನು ತೆಗೆದುಕೊಂಡಿದ್ದ ನಾನು, ಇಂದು ತುಂಬಿದ ತರಗತಿಯಲ್ಲಿ ಒಬ್ಬ ಹುಡುಗ ನನ್ನೆಡೆಗೆ ತನ್ನ ಮಧ್ಯದ ಬೆರಳನ್ನು ತೋರಿಸುವಂತಾಗಿದ್ದಾನೆಂದರೆ ಏನು ನನ್ನ ಸ್ಥಿತಿ? ದಿಗ್ಭ್ರಮೆಯಾಗದೇ ಇರಲಿಲ್ಲ. "ಏನದು?????????????????" ಎಂದು ಗದರಿದೆ. ಅದಕ್ಕವನು "ಸರ್, ನನ್ನ ಬೆರಳಿಗೆ ಪೆಟ್ಟಾಗಿದೆ ಟೈಪ್ ಮಾಡೋಕೆ ಆಗಲ್ಲ" ಎಂದ!!

ನಿಟ್ಟುಸಿರು ಬಿಟ್ಟೆ.

-ಅ
12.02.2009
10.30PM

Thursday, February 5, 2009

ನರ-ಸಿಂಹ ಯುದ್ಧಮ್ - ಒಂದು ಪ್ರೇಮದ ಕಥೆ

ರಾಜಕೀಯಕ್ಕೂ ನನಗೂ ಮೈಲಿಗಟ್ಟಲೆ ದೂರವೆಂದು ಗೊತ್ತಿದ್ದೂ ನನಗೊಂದು ಪಾತ್ರವನ್ನು ಕೊಟ್ಟಿದ್ದಾರೆ "ಮೈಂಡ್-ಡ್ರೈ" ಚಾನೆಲ್ಲಿನವರು! ರಾಜಕೀಯದಲ್ಲೂ ಪ್ರೇಮಕಥೆಯುಂಟು. ರಾಜಕೀಯ ಪ್ರೇಮಕಥೆಯಲ್ಲೂ ಹಾಸ್ಯವುಂಟು. ಹಾಸ್ಯದಲ್ಲಿ ನರ-ಸಿಂಹ ಯುದ್ಧವುಂಟು.

ನಾನೆಂದೂ ಸ್ಟೇಜನ್ನೇರಿದವನಲ್ಲ. ಸ್ಕೂಲಿನಲ್ಲಿ ಮಾಡಿದ ಅಕ್ಬರನ ಪಾತ್ರವೊಂದನ್ನು ಹೊರೆತು ಪಡಿಸಿ, ನಾಟಕ ಬೂಟಕ ಎಲ್ಲವನ್ನೂ ನಾನು ಪ್ರೇಕ್ಷಕನಾಗೇ ಸವಿದಿದ್ದೇನೆ. ಈ ಬಾರಿ ನನ್ನ ರಂಗಪ್ರವೇಶವಾಗಲಿದೆ. ನೋಡಬೇಕು, ಮೊದಲೇ ಮರೆಗುಳಿ ಮನುಜನಾದ ನಾನು ಹಾಸ್ಯವನ್ನು ಮಾಡುತ್ತೇನೋ ನಾನೇ ಹಾಸ್ಯವಾಗುತ್ತೇನೋ ಎಂಬ ಭೀತಿಯೂ ಒಮ್ಮೊಮ್ಮೆ ಕಾಡುತ್ತಿರುತ್ತೆ ನನ್ನನ್ನು. ಸಾವಿನ ಭೀತಿಗಿಂತ ಸ್ಟೇಜಿನ ಭೀತಿ ಅತಿ ಕ್ರೂರಿಯೆಂದು ಹಿರಿಯ ಕಲಾವಿದರೊಬ್ಬರು ಹೇಳಿದ್ದಾರಂತೆ.

ಕೆಲವು ತಿಂಗಳುಗಳ ಹಿಂದೆ ವಿಚಿತ್ರಮಂಜರಿಯೆಂಬ ನಗೆ ನಾಟಕದ ಮೂಲಕ ರಂಗ ಪ್ರವೇಶ ಮಾಡಿದ "ಮೈಂಡ್-ಡ್ರೈ" ಜೊತೆಗೆ ನಾನೂ ಇರಬೇಕಿತ್ತು. ಅದೇ ವೇಳೆಯಲ್ಲಿ ತೀರ ವಯಕ್ತಿಕ ಕಾರಣವಿದ್ದಿದ್ದರಿಂದ ನಾನು ಎರಡನೆಯ ಪ್ರಯತ್ನದಲ್ಲಿ ಕೈಗೂಡಿಸಿದ್ದೇನೆ.

ವಿಚಿತ್ರಮಂಜರಿಯ ಮೊದಲ ಪ್ರಯತ್ನ ಮುಗಿದ ನಂತರ "ನಾಟಕ ಹೇಗಾಯ್ತು?" ಎಂದು ಹರೀಶರನ್ನು ಕೇಳಿದೆ. "ಚೆನ್ನಾಗಾಯ್ತು ಅನ್ಸುತ್ತೆ, ನಾವು ಜೋಕ್ ಎಂದುಕೊಂಡ ಕಡೆಯೆಲ್ಲ ಜನ ನಕ್ರು. ಸೋ, ಚೆನ್ನಾಗಿತ್ತು ಎನ್ನಿಸುತ್ತೆ" ಎಂದು ಪ್ರಾಮಾಣಿಕವಾಗಿ ಹೇಳಿದರು. ಇನ್ನು ಅರ್ಜುನ್ ಶರ್ಮಾ ಅವರು "ಮುಂದಿನ ನಾಟಕಕ್ಕೆ ಸಿದ್ಧವಾಗಬೇಕಪ್ಪಾ" ಎಂದು ಹೇಳಿದಾಗ ಅವರ ಹುಮ್ಮಸ್ಸನ್ನು ಕಂಡು ಖುಷಿಯಾಯಿತು. ದೊಡ್ಡದಾಗಿ "ನಾನೂ ಇರ್ತೀನಿ.." ಎಂದು ಏನೋ ಒಳ್ಳೇ ಧೀರನ ಹಾಗೆ ಅಭಯವಿತ್ತೆ!

ಈ "ನರ-ಸಿಂಹ ಯುದ್ಧಮ್" ಬಗ್ಗೆ ಹೆಚ್ಚು ಬರೆಯುವುದಿಲ್ಲ. ನನಗೆ ಗೊತ್ತು, ನೋಡಿದವರು ಬರೆದೇ ಬರೆಯುತ್ತಾರೆಂದು, ಒಳಿತನ್ನು ಬರೆಯುವಂತಿರಲೆಂದು ಆಶಿಸುತ್ತೇನಷ್ಟೆ. ಅಭ್ಯಾಸ, ಪ್ರಯತ್ನ ಎರಡನ್ನೂ ಪ್ರಾಮಾಣಿಕವಾಗಿ ಮಾಡಿ ಯುದ್ಧದ ರಣರಂಗಕ್ಕಿಳಿಯುತ್ತಿದ್ದೇವೆ. ಪ್ರೋತ್ಸಾಹವನ್ನು ನೀಡಲು ಬಂಧು ಮಿತ್ರರ ಕೈಗಳು ಸಿದ್ಧವಾಗಿರುವಂತೆ, ಸ್ವೀಕರಿಸಲು ನಮ್ಮ ಬೆನ್ನುಗಳೂ ಸಿದ್ಧ! ಟಿಕೆಟ್ಟು ನಮ್ಮ ಗುಂಪಿನವರೆಲ್ಲರ ಹತ್ತಿರವೂ ಪಡೆದುಕೊಳ್ಳಬಹುದು. ಆರಂಭಿಕ "ಕಲಾವಿದ"ರಾಗಿರುವ, ಮುಂದೆ ಕಲಾವಿದರಾಗ ಹೊರಟಿರುವ ನಾವು ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ಮುಂದಿನ ಭಾನುವಾರ ಸಂಜೆ 6.15ಗೆ (ಹತ್ತು ನಿಮಿಷ ಮುಂಚೆಯೇ ಬಂದರೊಳಿತು), ಯುದ್ಧದ ಕಹಳೆ ಮೊಳಗಲಿದೆ. ಪ್ರೇಕ್ಷಕರು ನೀವು!ನನ್ನ ದೂರವಾಣಿ ಸಂಖ್ಯೆ: 98864-17252

ನಾನು ಶಾಲಾ ಮೇಷ್ಟ್ರಾದ ಕಾರಣ ಶಾಲೆಯ ಅವಧಿಯಲ್ಲಿ ಕರೆ ಮಾಡಿದರೆ ನಾನು ಉತ್ತರಿಸಲಾಗುವುದಿಲ್ಲ. ಫೋನ್ ಮಾಡಿ ಎಂದುಬಿಟ್ಟು, ಫೋನ್ ಎತ್ತದೇ ಇರುವ ನನ್ನ ಕುಕೃತ್ಯಕ್ಕೆ ಶಾಪ ಹಾಕುವುದರ ಬದಲು ನಮ್ಮ "ಮಂಡ್-ಡ್ರೈ" ತಂಡದ ಇತರರಿಗೆ ಕರೆ ಮಾಡಿದರೆ ಉತ್ತರ ಸಿಗುವುದು ಸುಲಭಸಾಧ್ಯವಾದೀತು!

ಹರೀಶ್: 99001-28840
ಅರ್ಜುನ್: 98867-03164

ಒಂದೇ ಒಂದು ಮಾತು. ಉದ್ಧಟತನವೆನ್ನಿಸಿದರೆ.......

ಏನೂ ಮಾಡೋಕಾಗಲ್ಲ.

ಟಿಕೆಟುಗಳನ್ನು ಮುಗಿದು ಹೋಗುವ ಮುನ್ನ ಪಡೆದುಕೊಳ್ಳಬೇಕಾಗಿ ವಿನಂತಿಯಷ್ಟೆ..

ಇಂತು

ಪ್ರೋತ್ಸಾಹಾರ್ಥಿ

-ಅ
05.02.2009
7PM