Thursday, February 12, 2009

ಒಳ್ಳೇ ಬಹುಮಾನ

ಮೇಷ್ಟ್ರಾಗಿ ಕೆಲವೇ ಕಾಲ ಸಂದಿದ್ದರೂ ವಿದ್ಯಾರ್ಥಿಗಳಿಂದ ಒಳ್ಳೆಯ ಮಾತುಗಳನ್ನು ಕೇಳಲು ಸಂತೋಷವಾಗುತ್ತೆ. ವರ್ಷಾನುಗಟ್ಟಲೆ ಅನುಭವವಿರುವವರಿಗೆ ಈ ಪರಮಾನಂದದ ಬೆಲೆ ಚೆನ್ನಾಗಿ ಗೊತ್ತಿರುತ್ತೆ.

ಬಸ್ ಸ್ಟಾಂಡಿನಲ್ಲಿ ನಿಂತಿದ್ದ ನನ್ನನ್ನು ಕರೆದು, "ಸರ್, ಹೇಗಿದ್ದೀರ?" ಎಂದಾತ ಯಾರೆಂದೂ ತಿಳಿಯಲಿಲ್ಲ ನನಗೆ. "ಯಾರೋ ಗೊತ್ತಾಗಲಿಲ್ಲವಲ್ಲ?" ಎಂದೆ. ನೋಡೋಕೆ ಅವನೇ ನನಗಿಂತ ವಯಸ್ಸಾದವನಂತೆ ಕಾಣುತ್ತಿದ್ದ. ಮುಖದ ತುಂಬ ಮೀಸೆ ಗಡ್ಡ. ಇಸ್ತ್ರಿ ಮಾಡಿದ ಅಂಗಿ, ಶುಭ್ರ ಪ್ಯಾಂಟು. ನಾನೋ, ಜೀನ್ಸು ಧರಿಸಿದ್ದೆ. ಅವನು, "ನಾನು ನಿಮ್ ಸ್ಟೂಡೆಂಟು ಸಾರ್, ಪ್ರಮೋದ್... ಕನಕ ಕಾಲೇಜು.... ಬೀಕಾಂ.... ". ನನಗೆ ನೆನಪಾಗದಿದ್ದರೂ, "ಓಹ್.. ಹೇಗಿದ್ದೀಯಾಪ್ಪಾ?" ಎಂದು ಮಾತನಾಡಿಸಿದೆ. ಅವನು ಹರ್ಷನಾದ. ವಾಸ್ತವವಾಗಿ ನಾನು ಅವನಿಗಿಂತ ಹರ್ಷಿತನಾಗಿದ್ದೆ. ಈ ಅನುಭವ ಬಹುಶಃ ಎಲ್ಲ ಮೇಷ್ಟ್ರಿಗೂ ಆಗಿರುತ್ತೆ! ಅದರ ಆನಂದವನ್ನು ಅವರಷ್ಟೆ ಬಲ್ಲರು.

"ಸಾರ್, ನೀವು ನನಗೆ ಒಂಥರಾ ಇನ್‍ಸ್ಪಿರೇಷನ್ನು" ಎಂದೂ ಒಮ್ಮೆ ಒಬ್ಬ ಹುಡುಗ ನನಗೆ ಹೇಳಿರುವುದುಂಟು. "ಥ್ಯಾಂಕ್ಸ್" ಎಂದು ಅವನಿಗೆ ಹೇಳಿದೆನಾದರೂ ಮನದೊಳಗೇ ಹಿಗ್ಗಿದ್ದೆ.

ಪ್ರೋಗ್ರಾಮ್ ಬಗ್ಗೆ ಏನೋ ವಿವರಿಸುವಾಗ ಗಣಿತದ ಒಂದು ವಿಷಯವನ್ನು ವಿವರಿಸಬೇಕಾಯಿತು. ಲೆಕ್ಕ ಪೂರ್ತಿ ಮಾಡಿದ ಮೇಲೆ, ಆ ಮಕ್ಕಳು, "ಸರ್, ನೀವೇ ನಮಗೆ ಗಣಿತವನ್ನೂ ತೊಗೊಳಿ ಸರ್.." ಎಂದಾಗ ಒಂಥರಾ ನನ್ನ ಬಗ್ಗೆಯೇ ನನಗೆ ಹೆಮ್ಮೆಯಾಗದೇ ಇರಲಿಲ್ಲ.

ಮಕ್ಕಳಿಂದ ಇಂಥ ಪುರಸ್ಕಾರ, ಪ್ರಶಸ್ತಿ ಸಿಗುವಾಗ ಯಾವ ಮ್ಯಾನೇಜ್‍ಮೆಂಟಾಗಲೀ, ಸಂಘ ಸಂಸ್ಥೆಗಳಾಗಲೀ ಗುರುತಿಸಲೆಂದು ಯಾವ ಶಿಕ್ಷಕನೂ ಬಯಸುವುದಿಲ್ಲ. ಮೇಷ್ಟ್ರಿಗೆ ಮಕ್ಕಳೇ ಸರ್ವಸ್ವ.

ಹೀಗಿರುವಾಗ ಒಂದನೇ ತರಗತಿಯಲ್ಲೊಮ್ಮೆ ಪಾಠ ಮಾಡುತ್ತ, ಕಂಪ್ಯೂಟರ್ ಲ್ಯಾಬಿಗೆ ಕರೆದೊಯ್ಯಲು ಸಿದ್ಧವಾಗಿದ್ದಾಗ ಒಬ್ಬ ಹುಡುಗ ಎದ್ದು ನಿಂತು, ಮಡಚಿದ ಮುಷ್ಟಿಯೊಡನೆ ತನ್ನ ಮಧ್ಯದ ಬೆರಳನ್ನು ನನ್ನತ್ತ ತೋರಿಸಿದ. ಎಲಾ ಬೋಳಿಮಗನೆ, ನನಗೇ ಹೀಗೆ ಬೆರಳು ತೋರಿಸುವ ಧೈರ್ಯವೇ ನಿನಗೆ ಎಂದು ಮನಸ್ಸಿನಲ್ಲಿ ಅಂದುಕೊಂಡೆನಾದರೂ, ಜೋರಾಗಿ ಹೇಳಲಿಲ್ಲ. ವಿದ್ಯಾರ್ಥಿಗಳಿಂದ ಒಳ್ಳೊಳ್ಳೇ ಕಾಂಪ್ಲಿಮೆಂಟನ್ನು ತೆಗೆದುಕೊಂಡಿದ್ದ ನಾನು, ಇಂದು ತುಂಬಿದ ತರಗತಿಯಲ್ಲಿ ಒಬ್ಬ ಹುಡುಗ ನನ್ನೆಡೆಗೆ ತನ್ನ ಮಧ್ಯದ ಬೆರಳನ್ನು ತೋರಿಸುವಂತಾಗಿದ್ದಾನೆಂದರೆ ಏನು ನನ್ನ ಸ್ಥಿತಿ? ದಿಗ್ಭ್ರಮೆಯಾಗದೇ ಇರಲಿಲ್ಲ. "ಏನದು?????????????????" ಎಂದು ಗದರಿದೆ. ಅದಕ್ಕವನು "ಸರ್, ನನ್ನ ಬೆರಳಿಗೆ ಪೆಟ್ಟಾಗಿದೆ ಟೈಪ್ ಮಾಡೋಕೆ ಆಗಲ್ಲ" ಎಂದ!!

ನಿಟ್ಟುಸಿರು ಬಿಟ್ಟೆ.

-ಅ
12.02.2009
10.30PM

3 comments:

 1. ಮೇಷ್ಟ್ರಿಗೇ ಪಾಠ!
  ಹಹ್ಹಹ್ಹಾ!!

  ReplyDelete
 2. ಇಷ್ಟಪಡೋ ವೃತ್ತಿ ಮಾಡುತ್ತಿರುವ ನೀವೇ ಧನ್ಯರು..
  ಸೃಷ್ಟಿ ಮಾಡಿದಂತಾ ತೃಪ್ತಿ ಕಾಣಿಸುತ್ತದೆ ಅಂದ್ಕೋತೀನಿ.. ತಾಯಿ ತಂದೆಗಳ ತರಹ.


  [ಮಕ್ಳನ್ನ ಹಂಗೆಲ್ಲಾ ಬಯ್ಕೊತೀರಾ? :p ]

  ReplyDelete