Monday, March 30, 2009

ಮಾನಸ ಸಂಚರರೇ ಬ್ರಹ್ಮಣಿ

ಬ್ರಹ್ಮನಲ್ಲಿ ಸಂಚರಿಸು ಮನಸೇ ಎಂದು ಹೇಳುವ ಬಗೆಯೇ ಎಷ್ಟು ಸೊಗಸು! ಇದಕ್ಕೆ ಸಾಮರಾಗವೇ ಸೂಕ್ತವೆಂದು ಹೇಗೆ ಹೊಳೆಯಿತೋ, ಕೇಳುಗನ ಜನ್ಮ ಪಾವನ!

ಮಾನಸ ಸಂಚರರೇ.... ಬ್ರಹಣಿ - ಇಲ್ಲಿ |ರೀ; ;;| ;ಸ ಧ ಸ ರಿ| ಎಂಬ ಒತ್ತು "ಬ್ರಹ್ಮಣಿ"ಯ ಮೇಲೆ ಇರುವುದನ್ನು ಕೇಳುವಾಗ ಮೈ ಜುಮ್ಮೆನ್ನದೇ ಇರುವುದಿಲ್ಲ!

ಶಾಸ್ತ್ರೀಯ ಸಂಗೀತದ ವೈಶಿಷ್ಟ್ಯವೇ ಅದು.

ಉತ್ತಮವಾದ ಸಾಹಿತ್ಯವೇನೂ ಅಲ್ಲವೆಂದೆನಿಸುತ್ತೆ ಹಾಗೆಯೇ ಅದರ ಸಾಹಿತ್ಯವನ್ನು ಓದಿದಾಗ. (ಸಂಗೀತ ಪರಿಭಾಷೆಯಲ್ಲಿ ಸಾಹಿತ್ಯವೆಂದರೆ ಹಾಡಿನ/ಕೀರ್ತನೆಯ ಪದಗಳೆಂದಷ್ಟೇ). ಆದರೆ ಒಂದೊಂದು ಸಂಗತಿಗಳೂ ಸಹ ಒಂದೊಂದು ಅರ್ಥವನ್ನು ಕಲ್ಪಿಸಿಕೊಡುತ್ತೆಂಬುದನ್ನು ಅನುಭವ ಮಾತ್ರದಿಂದಲೇ ಮನಗಾಣಬೇಕು. (ಸಂಗತಿಗಳೆಂದರೆ ಒಂದೇ ಸಾಲನ್ನು ಬೇರೆ ಬೇರೆ ಸ್ವರ ಜೋಡಣೆಗಳಿಂದ ಹಾಡುವುದು).

ಮದಶಿಖಿಪಿಂಚಾಲಂಕೃತ ಚಿಕುರೇ ಎಂದಾಗ ಪರಬ್ರಹ್ಮ ಸ್ವರೂಪನಾದ ಶ್ರೀಮನ್ನಾರಾಯಣನ ಮುಖವೂ, ಮತ್ತೆ ಮದಶಿಖಿಪಿಂಚಾ..... ಎಂದು |ಸ ಸ ಧ ಪ....| ಎರಡನೆಯ ಸಂಗತಿ ಹೇಳುವಾಗ ಹೇಗೆ ಶಿಖೆಯು ಅಲಂಕೃತವಾಗಿದೆಯೆಂಬುದು ಕಣ್ಮುಂದೆ ಬರುವುದಷ್ಟೆ? ತದನಂತರ "ಚಿಕುರೇ...." ಎಂಬ ಆಲಾಪನೆಯು ಸಾಮಕ್ಕೆ ಶೋಭೆ ತರುವುದಲ್ಲದೆ, ನವಿಲಿನ (ಚಿಕುರೇ..) ನರ್ತನವೂ ಎದುರಿಗೆ ಕಂಡೀತು! ಸಾಹಿತ್ಯದಲ್ಲಿ ನವಿಲು ಗರಿಯಿಂದ ಅಲಂಕಾರವೆಂದಷ್ಟೆ ಹೇಳಿದ್ದರೂ ಸಂಗೀತವು ನಮಗೆ ಏನೆಲ್ಲ ಚಿತ್ರವನ್ನು ಕಲ್ಪಿಸಿಕೊಡಬಹುದು ಎಂಬುದಕ್ಕೆ ಇದು ಸಾಕ್ಷಿ.

ಅದೇ ರೀತಿ "ಪರಮಹಂಸ-ಮುಖ-ಚಂದ್ರಚಕೋರೇ...." ಎಂಬ ಸಾಲುಗಳು ಮತ್ತದರ ಸಂಗತಿಗಳು ಚಂದ್ರನ ಚೆಲುವನ್ನೆಲ್ಲ ತನ್ನ ಮುಖದಲ್ಲೇ ಹೊತ್ತಿದ್ದಾನೇನೋ ಪರಮಾತ್ಮನು ಎಂಬ ಭಾವನೆಯು ಬರುವುದು ಖಂಡಿತ. ಸಾಮ ರಾಗದ ವಿಶೇಷವೇ ಹಾಗೆ. ಹಾಡಿನ ಸಾಹಿತ್ಯಕ್ಕಿಂತಲೂ ಆಲಾಪನೆಗಳು ಹೆಚ್ಚು ಹೆಚ್ಚು ಅರ್ಥಗಳನ್ನು ಕಲ್ಪಿಸಿಕೊಡುತ್ತೆ. ಚಂದ್ರಚಕೋರೇ.... ಆದನಂತರ ಬರುವ ಒಂದೇ ಒಂದು ಸಾಲು ಹಾಡಿನ ಮುಕ್ತಾಯವೆಂಬುದು ಒಪ್ಪಿಕೊಳ್ಳಲೇ ಆಗುವುದಿಲ್ಲ. ಹಾಡು ಮುಗಿದ ನಂತರವೂ ಪರಿಪೂರಿತ ಮುರಲೀರವಕಾರೇ.... ಎಂಬ ರವವು ಮನದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತೆ.

ಸದಾಶಿವ ಬ್ರಹ್ಮೇಂದ್ರರ ಈ ರಚನೆಯನ್ನು ಶೆಮ್ಮಂಗುಡಿ, ಉನ್ನಿ ಕ್ರಿಷ್ಣನ್, ಅರಿಯಾಕುಡಿ, ಸಂತಾನಮ್, ಬಾಲಮುರಳಿ, ಬಾಂಬೇ ಜಯಶ್ರೀ, ಎಲ್ಲರ ಕಂಠಸಿರಿಯಲ್ಲೂ ಕೇಳಿದ್ದೇನೆ. ಒಂದೊಂದು ಕಛೇರಿಯೂ ಒಂದೊಂದು ಬಗೆಯ ಸೊಬಗು. ಒಂದೊಂದು ಕಂಠವೂ ಒಂದೊಂದು ಬಗೆಯ ಭಾವನಾಲಹರಿಯನ್ನು ಹರಿಸುತ್ತೆ. ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು - ಎಲ್ಲೆಲ್ಲು ಸಂಗೀತವೇ....

ಶಾಸ್ತ್ರೀಯ ಸಂಗೀತದಿಂದ ಮನಸ್ಸು ಆನಂದ ಸ್ಥಿತಿಗೆ ತಲುಪಲು ಸಾಹಿತ್ಯವು ನೆಪ ಮಾತ್ರವಷ್ಟೆ. ದೊಡ್ಡ ದೊಡ್ಡ ವಿದ್ವಾಂಸರುಗಳೂ ತಪ್ಪುಚ್ಚಾರಣೆ ಮಾಡುವುದನ್ನು ನಾವು ಕೇಳಿಯೇ ಇದ್ದೇವೆ. ಪದಗಳನ್ನು ಬಿಡಿಸುವುದರಲ್ಲೂ ಸಹ ತಪ್ಪಾಗಿರುತ್ತೆ. ಆದರೆ ಸಂಗೀತವು ಇವೆಲ್ಲ ತಪ್ಪುಗಳನ್ನೂ ತೊಳೆದು ಹಾಕಿಬಿಡುತ್ತೆ. ನೆರವಲ್ ಕೇಳುತ್ತಿದ್ದರೆ ಆಗುವ ರೋಮಾಂಚನವು ಅದೇ ಸಾಹಿತ್ಯವನ್ನು ಓದಿದಾಗ ತೀರ ಸಾಮಾನ್ಯವಾದ ಎರಡನೇ ತರಗತಿಯ ಹುಡುಗ ಬರೆದಿರೋ ಹಾಗಿದೆ ಎಂದು ಎನ್ನಿಸಿದರೂ ಅಚ್ಚರಿಯಿಲ್ಲ. ಕೇವಲ ಸಂಗತಿಗಳು, ಸ್ವರಗಳು, ರಾಗಗಳು, ಆಲಾಪನೆಗಳು ಹೇಗೆ ಅರ್ಥಗಳನ್ನು ಕೊಟ್ಟು ಮುದ ನೀಡುವುದೆಂಬುದನ್ನು ಅನುಭವಿಸಿಯೇ ತೀರಬೇಕು. "ಮಾತು, ಅರ್ಥ - ಎರಡೂ ವ್ಯರ್ಥ, ಸ್ವ-ಅರ್ಥವಿರದಿರೆ...".

ಮಾನಸ ಸಂಚರರೇ
ಬ್ರಹ್ಮಣಿ ಮಾನಸ ಸಂಚರರೇ ||ಪ||

ಮದಶಿಖಿಪಿಂಚಾಲಂಕೃತ ಚಿಕುರೇ
ಮಹನೀಯ ಕಪೋಲ ವಿಜಿತಮುಕುರೇ ||ಅ.ಪ.||

ಶ್ರೀರಮಣೀ ಕುಚದುರ್ಗ ವಿಹಾರೇ
ಸೇವಕಜನ ಮಂದಿರ ಮಂದಾರೇ
ಪರಮಹಂಸ ಮುಖಚಂದ್ರಚಕೋರೇ
ಪರಿಪೂರಿತ ಮುರಲೀರವಕಾರೇ ||ಚ||

(ಸದಾಶಿವ ಬ್ರಹ್ಮೇಂದ್ರ)

-ಅ
30.03.2009
11.35PM

Friday, March 20, 2009

ರಿಕ್‍ವೈರ್‍ಮೆಂಟು!

ನಾನು ಸುಮ್ಮನೆ ಚಾರಣ ಮಾಡೋದು, ಪ್ರಯಾಣ ಮಾಡೋದು ಬಿಟ್ಟು ಊರೆಲ್ಲ ಹೇಳ್ಕೊಂಡು ತಿರುಗೋದು ಯಾಕೆ ಅಂತ ನನಗೆ ಅನೇಕ ಸಲ ಅನ್ನಿಸುತ್ತಿರುತ್ತೆ. ಆರ್‍.ಹೆಚ್.ಎಮ್ ಆದರೋ ಇಂಥದ್ದೇ ಕೆಲಸ ಮಾಡಿ ಅನ್ನವನ್ನು ದುಡಿಯುತ್ತಿರುವುದರಿಂದ "ಊರೆಲ್ಲ" ಹೇಳುವುದು ಅದರ ಧರ್ಮ. ಆದರೆ ಈ ಧರ್ಮದ ಸಲುವಾಗಿ ನಾನು ಅನುಭವಿಸಬೇಕಾದ ಕರ್ಮಗಳೂ ಒಂದಷ್ಟಿವೆ.

ನಮ್ಮ ಆರ್.ಹೆಚ್.ಎಮ್. ಧರ್ಮಕ್ಕೆ ಒಗ್ಗದವರು ಹಲವರು ತಾವೇ ಪ್ರಯಾಣ ಮಾಡಲು ಇಚ್ಛಿಸುತ್ತಾರೆ. ಹಣವನ್ನು ಉಳಿತಾಯ ಮಾಡುವುದು ಇವರ ಇರಾದೆಯಿದೆಯೆಂದು ನಾನು ಒಪ್ಪುವುದಿಲ್ಲ. ಕಾಡಲ್ಲಿ ಸಿಗರೇಟು ಸೇದಬಾರದು, ಕುಡೀಬಾರದು ಎಂದು ಹೇಳಿದರೆ ಈ ಸೋ-ಕಾಲ್ಡ್ "ಟ್ರಾವಲರ್ಸ್"ಗೆ ಬೇಸರವಾಗಿ "ಇವನ್ಯಾವನೋ ತಗಡು ಆರ್ಗನೈಸರ್ರು. ಮಜ ಮಾಡೋಕೆ ಪರ್ಮಿಷನ್ನ್ ಇಲ್ಲದೇ ಇದ್ರೆ ಇವನಿಗ್ಯಾಕೆ ದುಡ್ ಕೊಡ್ಬೇಕು?" ಎಂದು ಜರಿಯುವುದುಂಟು. ಇಂಥವರು ನನಗೆ ಬೇಡವೂ ಬೇಡ. ಇನ್ನೊಂದು ಬಗೆಯ ಜನರಿದ್ದಾರೆ. ಇವರು ಯಾವುದೇ ಸಂಸ್ಥೆಯ ಮೇಲೂ ಅವಲಂಬಿಸುವುದಿಲ್ಲ. ಹೀಗೆ ಬ್ಲಾಗುಗಳಲ್ಲೋ, ವೆಬ್‍ಸೈಟುಗಳಲ್ಲೋ, ಪತ್ರಿಕೆಗಳಲ್ಲೋ ಹುಡುಕಿ ನಿಜವಾದ ಗ್ರೌಂಡ್ ವರ್ಕ್ ಮಾಡಿ, ತಿಳಿದವರನ್ನು ಕೇಳಿ - ಎಲ್ಲಿ ಯಾರನ್ನು ಸಂಪರ್ಕಿಸಬೇಕು ಎಂದು ಅರಿತುಕೊಂಡು ಪ್ರಯಾಣ ಮಾಡುತ್ತಾರೆ. ನನಗೂ ಇಂಥವರಿಂದ ಕರೆಗಳು ಬರುತ್ತೆ, ಮತ್ತು ನಾನೂ ಸಹ ಇಂಥ ಕ್ಯಾಟಗರಿಗೇ ಸೇರಿದವನಾದ್ದರಿಂದ ನನಗಿಂತ ತಿಳಿದವರನ್ನು ಈ ವಿಷಯವಾಗಿ ಸಂಪರ್ಕಿಸುತ್ತಲೇ ಇರುತ್ತೇನೆ.

ಮೂರನೆಯ ಪೈಕಿ ಜನ ವಿಭಿನ್ನರು. ಇವರಿಗೆ ಪ್ರಯಾಣ ಬೇಕು. ಸಂಸ್ಥೆಗಳು ಬೇಡ. ಆದರೆ ತಾವೇ ಆಯೋಜಿಸಲು ತಿಳಿವಳಿಕೆಯಿರುವುದಿಲ್ಲ. ಇಂಥವರಿಗೆ ಒಳ್ಳೊಳ್ಳೇ ರಿಕ್‍ವೈರ್‍ಮೆಂಟುಗಳು ಇರುತ್ತೆ. ಬಹಳ ವಿನೋದಮಯವಾದ ರಿಕ್‍ವೈರ್‍ಮೆಂಟುಗಳು. ಇವರ ಫೋನುಕಾಲುಗಳೂ ಕೂಡ!!

......................................................................................

"ಅರುಣ್, ನಿಮ್ ಬಗ್ಗೆ ಇಂಟರ್ನೆಟ್‍ನಲ್ಲಿ ನೋಡಿದೆ. ನಾವೊಂದಿಷ್ಟು ಜನ "ವೀಕೆಂಡಿಗೆ" ಹೊರಗಡೆ ಹೋಗ್ಬೇಕು ಅಂತಿದೀವಿ."

"ಸರಿ, ಹೋಗಿಪ್ಪ, ಸಂತೋಷ." (ಹರಿಯೋ ನದಿಗೆ ದೊಣ್ಣೆನಾಯಕನ ಅಪ್ಪಣೆ ಬೇರೆ!)

"ಎಲ್ಲಿ ಹೋದರೆ ಒಳ್ಳೇದು ಅಂತ ಸ್ವಲ್ಪ ಹೇಳ್ತೀರ?"

"ಅರ್ರೆ? ನೀವು ಹೋಗೋರು? ನಾನ್ ಹೇಗೆ ಹೇಳಲಿ ಯಾವುದು ಒಳ್ಳೇದು ಅಂತ?"

"ನೀವು ಟ್ರೆಕ್ಕಿಂಗ್ ಎಲ್ಲ ಆಯೋಜಿಸ್ತೀರಲ್ಲ, ನಿಮಗೆ ಜಾಗಗಳು ಗೊತ್ತಿರುತ್ತೆ. ಒಂದಷ್ಟು ಜಾಗಗಳನ್ನು ನನ್ನ ಈಮೇಲ್‍ಗೆ ಕಳಿಸಿ. ನಾವು ಸೆಲೆಕ್ಟ್ ಮಾಡ್ಕೋತೀವಿ."

"ಓಕೆ."

......................................................................................

ಅನ್ನ ಕಲಿಸಿ ತುತ್ತನ್ನು ಬಾಯಿಗೆ ಕೂಡ ಇಡಬೇಕೇನೋ. ಔಟ್‍ಲುಕ್ಕಿನವರು "52 Getaway Destinations from Bangalore" ಎಂಬ ಪುಸ್ತಕವನ್ನು ಇಂಥವರಿಗೆಂದೇ ತಂದಿರಬೇಕು. ಆದರೂ ಅತೃಪ್ತರು.

ಮತ್ತೊಬ್ಬರ ಕರೆ ಹೀಗಿತ್ತು.

"Am I speaking to Arun?"

"ಹೌದು, ಹೇಳಿ."

"What is the charge for Bababudangiri Trek?"

"We are not organising that trek, right now."

"But I saw that in your website 3 months back. Why don't you give correct information to the people?"

"I am busy now, please call me after half an hour please."

ಮೂರು ತಿಂಗಳುಗಳ ಕೆಳಗೆ ನೋಡಿದ ಕಾರ್ಯಕ್ರಮವನ್ನು ಈಗ ವಿಚಾರಿಸಿದರೆ ನಾನು ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಾಗದು. ದಬಾಯಿಸೋದು ಬೇರೆ.

......................................................................................

ಬೇರೆ ಊರಿನಿಂದ ಬೆಂಗಳೂರಿಗೆ ಬಂದವರ ರಿಕ್‍ವೈರ್‍ಮೆಂಟ್ ಹಾವಳಿ ಅಷ್ಟಿಷ್ಟಲ್ಲ.

"Arun, please suggest any place to spend the weekend?"

"Go to Kemmangundi."

"ಬೆಂಗ್ಳೂರ್ ಇಂದ ಎರಡು ಗಂಟೆಗಳೊಳಗೆ ತಲುಪುವಂತಹ ಜಾಗ ಇರಬೇಕು."

"ಹಾಗಾದ್ರೆ, ಈ ಬೇಸಿಗೆಯಲ್ಲಿ, ಮುತ್ತತ್ತಿಗೆ ಹೋಗಿ."

"ಹೋಗಿದೀವಿ ಮುಂಚೇನೆ."

"ಕೋಲಾರದ ಅಂತರಗಂಗೆಗೆ ಹೋಗಿ."

"ನಮಗೆ Waterfalls ಬೇಕು."

"ಓಹ್. ಮತ್ತೆ ಇನ್ನೇನೇನು ಬೇಕು?"

"ಹೆಚ್ಚಿಗೆ ಟ್ರೆಕ್ ಬೇಡ. ಸಿಂಪಲ್ ಆಗಿರಬೇಕು. ಬಂಡೆ ಇರಬಾರದು. ಬಿಸಿಲು ಇರಬಾರದು. ಜಲಪಾತ ಇರಬೇಕು. ಕಡೇಪಕ್ಷ ಹೊಳೆಯಾದರೂ ಇರಬೇಕು. ಹತ್ತಿರದಲ್ಲಿ ಪ್ರಾಚೀನ ದೇವಸ್ಥಾನಗಳಿದ್ದರೆ ಇನ್ನೂ ಒಳ್ಳೆಯದು. ಬೆಂಗಳೂರಿಂದ ತುಂಬ ದೂರ ಇರಬಾರದು. ನೂರು ಕಿಲೋಮೀಟರ್ ಒಳಗಿರಬೇಕು."

"ಚೆನ್ನಾಗಿದೆ. Natureಗೆ application ಹಾಕ್ತೀನಿ. Sanction ಮಾಡಿದರೆ ನೋಡೋಣ."

.......................................................................................

ಒಬ್ಬ ಉತ್ತರ ಭಾರತೀಯನಿಗೆ ಒಂದು ಚಾರಣದ ಬಗ್ಗೆ ಫೋನಿನಲ್ಲಿ ವಿವರಿಸುತ್ತಿದ್ದೆ. ಆತ ಕೇಳಿದ ಪ್ರಶ್ನೆಗೆ ನಾನು ಕಂಗಾಲಾಗಿ ಹೋದೆ.

ನಾನು ಹೇಳುತ್ತಿದ್ದೆ - ".... And we will reach the peak by around 12.30PM and have our lunch on the peak..."

ಆತ ಥಟ್ಟನೆ ಕೇಳಿದ್ದು - "Are there good hygienic restaurants on the peak?"

!!!!!!!!!!!!!!!!!!!!!!!!!!!!

.......................................................................................

ಇಂಥಾ ಫೋನ್‍ಕಾಲುಗಳು ಆ ಕ್ಷಣ ಬೇಸರ ತರಿಸಿದರೂ ನಂತರ ನೆನಪು ಮಾಡಿಕೊಳ್ಳಲು ಬಹಳ ಹಾಸ್ಯಮಯವಾಗಿರುತ್ತೆ.

ಮಳೆಗಾಲದಲ್ಲಿ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಚಾರಣ ಮಾಡಬೇಕು, ಮಳೆ ಇಲ್ಲದ ಜಾಗವನ್ನು ಸಜೆಸ್ಟ್ ಮಾಡಿ
- ಚಾರಣ ಗೀರಣ ಎಲ್ಲ ಮರೆತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯೊಳಗೆ ಸೆಟ್ಲ್ ಆಗಿ.

ಜಾಸ್ತಿ ಜನ ಇರಬಾರದು, ಜಾಸ್ತಿ ದೂರ ಇರಬಾರದು ಆ ರೀತಿ ಯಾವುದಾದರೂ ಅಪರೂಪದ ಜಲಪಾತಕ್ಕೆ ಹೋಗಬೇಕು, ಯಾವುದಿದೆ?
- ಜಲಪಾತ ಇಲ್ಲ. ಆದರೆ ನೀರು ಹರಿಯುವ ಜಾಗ ಇದೆ. ಕೆಂಗೇರಿಯ ಹತ್ತಿರ.

ನಂದಿ ಬೆಟ್ಟ ಬೇಡ, ಇನ್ನೂ ಹತ್ತಿರದಲ್ಲೇ ಸುಮಾರು ಅರ್ಧ ಗಂಟೆಯೊಳಗೆ ತಲುಪುವಂತಹ ಜಾಗದಲ್ಲೆಲ್ಲಾದರೂ ಪ್ಯಾರಾಗ್ಲೈಡಿಂಗ್ ಆಯೋಜಿಸುತ್ತೀರ?
- ನಿಮ್ಮ ಮನೆ ಮೇಲಿಂದ ರೆಕ್ಕೆ ಕಟ್ಕೊಂಡ್ ಧುಮುಕಿ.

ಬೆಂಗ್ಳೂರ್ ಸಿಟಿಯಲ್ಲಿ ಎಲ್ಲಿ ರಿವರ್ ರಾಫ್ಟಿಂಗ್ ಮಾಡಿದರೆ ಚೆನ್ನಾಗಿರುತ್ತೆ?
- ಮೇಲಿನವರ ಜೊತೆ ಕೆಂಗೇರಿಗೆ ಹೋಗಿ. ಪ್ರಯತ್ನ ಮಾಡಿ ರಾಫ್ಟಿಂಗ್ ಹೇಗಿರುತ್ತೆ ಅಂತ. ನನಗೂ ಹೇಳಿ.

ನಂಗೆ ರಾಕ್ ಕ್ಲೈಂಬಿಂಗ್ ಇಷ್ಟ. ಆದರೆ ಬಂಡೆಗಳು ಇರುವ ಕಡೆ ಚಾರಣ ಆಗೋದಿಲ್ಲ. ಆರ್ಟಿಫಿಷಿಯಲ್ ಕ್ಲೈಂಬಿಂಗ್ ಬೇಡ. ಎಲ್ಲಿಗೆ ಹೋಗಲಿ?
- ರಾಗಿ ಗುಡ್ಡಕ್ಕೆ ಹೋಗಿ.

ಹೀಗೆಲ್ಲ ಉತ್ತರ ಕೊಡಬೇಕು ಇಂಥ ಪ್ರಶ್ನೆಗಳಿಗೆ ಎಂದೆನಿಸುತ್ತೆ. ಆದರೆ ತುಟಿಬಿಗಿದು ಉತ್ತರ ಕೊಡುವುದೂ ಸಹ ನನ್ನ ಧರ್ಮ. ಪಾಪ, ಅವರಿಗೆ ತಿಳಿದಿರುವುದಿಲ್ಲ ಎಂಬ ಕನಿಕರವೊಂದು ಕಡೆಯಾದರೆ, ಏನು ಅಷ್ಟು ಸಾಮಾನ್ಯ ಜ್ಞಾನವಿರುವುದಿಲ್ಲವೇ ಎಂಬ ಕೋಪವಿನ್ನೊಂದು ಕಡೆ. ನನ್ನ ಮೂಡು ಕೆಟ್ಟಿದ್ದರೆ ಈ ರೀತಿ ಉತ್ತರ ಕೊಟ್ಟರೂ ಕೊಟ್ಟೇನು!

-ಅ
20.03.2009
11PM

Tuesday, March 17, 2009

ಎಂದಿಗೆ?

ಕಾಮದಹನದ ಕಿಚ್ಚನಾರಿಸೆ
ಯಾಮದಿರುಳಲಿ ಧೋ ಎನ್ನುತ
ಭೂಮಿಗಿಳಿದಿಹ ಮಳೆಯ ಸ್ಪರ್ಶಕೆ
ಸೋಮನಡಗಿಹ ಮೇಘಪರದೆಯು
ಸರಿವುದೆಂದಿಗೆ ಬಾನಲಿ?

ಬೇಸಗೆಯ ಕಿರಣ ಹೊದಿಕೆಯ
ನೇಸರನು ಹೊದ್ದಿಸಿದ್ದರೂ
ಬೇಸರದ ಇರುಳ ಖಗಗಳು
ಆಸರೆಯ ಪೊದೆಯ ಮೊರೆಯನು
ತೊರೆವುದೆಂದಿಗೆ ಬದುಕಲಿ?

ನೀರ ಪತನವೊ,
ಕ್ಷೀರ ಮಥನವೊ?
ತೀರ ಸೇರುವ ಬಯಕೆಯೊ?
ದಾರಿ ಮುಳುಗಿದ, ವಾರಿ ಜಗದಲಿ
ಈಜಿ ಬದುಕುವುದೆಂದಿಗೆ?

-ಅ
17.03.2009
10.30PM

Monday, March 9, 2009

ಉಳಿತಾಯ

ಇಂಥ ಒಳ್ಳೆಯ ಕೆಲಸಗಳು ಇನ್ನಷ್ಟು ನಡೆಯಲಿ ಅಂತರ್ಜಾಲ ಜಗತ್ತಿನಲ್ಲಿ. ವಿದ್ಯುಚ್ಛಕ್ತಿಯುಳಿತಾಯಕ್ಕೆ ಹೊಸ ಹಾದಿ.

http://blackle.com/


-ಅ
09.03.2009
10.50PM

Friday, March 6, 2009

ರೇಣು - ಬೈಕು

ನನ್ನ ಮೊಬೈಲಿನಲ್ಲಿ ಈತನ ಹೆಸರನ್ನು ಸೇವ್ ಮಾಡಿಕೊಂಡಿರುವುದೇ "ಬೈಕ್ ರೇಣು" ಎಂದು. ನನಗೆ ಟ್ರೆಕ್ಕಿಂಗ್ ಹೇಗೋ ಇವರಿಗೆ ಬೈಕು ಹಾಗೆಯೇ.

ಕೆಲವು ದಿನಗಳ ಹಿಂದೆ ಅಚಾನಕ್ಕಾಗಿ ಗಾಂಧಿಬಜಾರಿನಲ್ಲಿ ನಾನು ಮತ್ತು ಶ್ರೀಕಾಂತ ಅಲೆದಾಡುತ್ತಿದ್ದಾಗ ನಮ್ಮಿಬ್ಬರಿಗೂ ಗೆಳೆಯರಾದ ರೇಣು ಮತ್ತು ಸಂಜಯ್ ಸಿಕ್ಕರು. ಸಾಮಾನ್ಯವಾಗಿ ನಾನು ಮತ್ತು ಶ್ರೀಕಾಂತ ಮಾಡುವ ಚರ್ಚೆಯ ವ್ಯಾಪ್ತಿ ಬಹಳ ದೊಡ್ಡದು. "ಶಂಕರಾಚಾರ್ಯರಿಂದ ಹಿಡಿದು ಶ್ರೀಧರನವರೆಗೆ" - ಎಂದು ಶ್ರೀಕಾಂತನೇ ಹಾಸ್ಯ ಮಾಡಿದ್ದ. ಅಂದು ದಾರಿಯಲ್ಲಿ ಸಿಕ್ಕ ಗೆಳೆಯರೊಡನೆ ಗಾಂಧೀಬಜಾರಿನಿಂದ ಚಾಮರಾಜಪೇಟೆಯ ಬ್ರಾಹ್ಮಣರ ಕಾಫಿ ಬಾರಿನತ್ತ ನಮ್ಮ ವಾಕಿಂಗ್ ಪಯಣ ಸಾಗಿತು. ದಾರಿಯಲ್ಲಿ ಶಂಕರ ಮಠದ ಬಳಿ ನಿಂತಿದ್ದ ಟೆಂಪೋ ಟ್ರ್ಯಾವಲರ್ ಒಂದನ್ನು ತೋರಿಸಿದ ರೇಣು, ಅದರ ಕಂಪೆನಿಯ ಬಗ್ಗೆ ವಿವರಿಸ ತೊಡಗಿದರು. ನನಗೆ ಎಳ್ಳಷ್ಟೂ ತಲೆಗೆ ಹೋಗಲಿಲ್ಲ. ಶ್ರೀಕಾಂತ ಮತ್ತು ನನ್ನ ಚರ್ಚೆಯ ವ್ಯಾಪ್ತಿಯನ್ನು ಮೀರಿದ ವಿಷಯವಿದಾಗಿತ್ತು. ಅದರ ಮಡ್‍ಗಾರ್ಡು ಹೀಗಿದೆ, ಅದರ ಗೇರು ವಿನ್ಯಾಸ ಇಂತಿದೆ, ಈ ಥರ ತಂತ್ರಜ್ಞಾನ, ಆ ಥರ ಪ್ರಯೋಜನ ಹೀಗೆಲ್ಲಾ ವಿವರಿಸಿದ ನಂತರ ನಾನು, "ನನಗೆ ಅವೆಲ್ಲ ಗೊತ್ತಾಗೋದಿಲ್ಲ, ಏನು ಟೆಕ್ನಾಲಜಿ ಇದ್ದರೇನು, ಹೇಳಿದ ಟೈಮಿಗೆ ಡ್ರೈವರುಗಳು ಬರದಿದ್ದರೆ!!" ಎಂದಿದ್ದೆ.ರೇಣು ಈಗ ಒಂದು ನೂತನ ದಾಖಲೆ ಮಾಡಿಬಿಟ್ಟಿದ್ದಾರೆ. 1750 ಕಿ.ಮೀ. ದೂರವನ್ನು, ಇಪ್ಪತ್ನಾಲ್ಕು ಗಂಟೆಗಳಲ್ಲಿ ಪುಣೆ ವರೆಗೂ ಹೋಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ತಮ್ಮ ಯಮಹಾ ಬೈಕಿನಲ್ಲಿ. 'ಮಿಡ್ ಡೇ' ಓದುವಾಗ ಗೆಳೆಯ ರೇಣು ಚಿತ್ರ, ವರದಿ ನೋಡಿ ಹರ್ಷಗೊಂಡೆ. ಹೇಗಿತ್ತು ಎಂದು ಪತ್ರಕರ್ತರು ಕೇಳಿದ್ದಕ್ಕೆ "ತುಂಬಾ ಹುಳುಗಳು ಕಣ್ಣಿಗೆ ಹೊಡೆಯುತ್ತಿತ್ತು..." ಎಂದು ಉತ್ತರಿಸಿರುವುದನ್ನು ನೋಡಿ "ಒಳ್ಳೇ ರೇಣು...." ಎಂದುಕೊಂಡೆ. ಕಾಫಿಸೇವನೆಯಲ್ಲಿ ಶ್ರೀಧರನನ್ನು ಮೀರಿಸುವ ರೇಣುವಿಗೆ ಗೆಲುವು ಸಿಗುತ್ತಿರಲೆಂದು ಹಾರೈಸುತ್ತೇನೆ. ಪ್ರಪಂಚವೆಲ್ಲ ಸುತ್ತಿಬರಲಿ..

ಆಲ್ ದಿ ಬೆಸ್ಟ್ ರೇಣು..

http://renukumarsphotos.fotopic.net/

-ಅ
06.03.2009
11.50PM