Friday, March 6, 2009

ರೇಣು - ಬೈಕು

ನನ್ನ ಮೊಬೈಲಿನಲ್ಲಿ ಈತನ ಹೆಸರನ್ನು ಸೇವ್ ಮಾಡಿಕೊಂಡಿರುವುದೇ "ಬೈಕ್ ರೇಣು" ಎಂದು. ನನಗೆ ಟ್ರೆಕ್ಕಿಂಗ್ ಹೇಗೋ ಇವರಿಗೆ ಬೈಕು ಹಾಗೆಯೇ.

ಕೆಲವು ದಿನಗಳ ಹಿಂದೆ ಅಚಾನಕ್ಕಾಗಿ ಗಾಂಧಿಬಜಾರಿನಲ್ಲಿ ನಾನು ಮತ್ತು ಶ್ರೀಕಾಂತ ಅಲೆದಾಡುತ್ತಿದ್ದಾಗ ನಮ್ಮಿಬ್ಬರಿಗೂ ಗೆಳೆಯರಾದ ರೇಣು ಮತ್ತು ಸಂಜಯ್ ಸಿಕ್ಕರು. ಸಾಮಾನ್ಯವಾಗಿ ನಾನು ಮತ್ತು ಶ್ರೀಕಾಂತ ಮಾಡುವ ಚರ್ಚೆಯ ವ್ಯಾಪ್ತಿ ಬಹಳ ದೊಡ್ಡದು. "ಶಂಕರಾಚಾರ್ಯರಿಂದ ಹಿಡಿದು ಶ್ರೀಧರನವರೆಗೆ" - ಎಂದು ಶ್ರೀಕಾಂತನೇ ಹಾಸ್ಯ ಮಾಡಿದ್ದ. ಅಂದು ದಾರಿಯಲ್ಲಿ ಸಿಕ್ಕ ಗೆಳೆಯರೊಡನೆ ಗಾಂಧೀಬಜಾರಿನಿಂದ ಚಾಮರಾಜಪೇಟೆಯ ಬ್ರಾಹ್ಮಣರ ಕಾಫಿ ಬಾರಿನತ್ತ ನಮ್ಮ ವಾಕಿಂಗ್ ಪಯಣ ಸಾಗಿತು. ದಾರಿಯಲ್ಲಿ ಶಂಕರ ಮಠದ ಬಳಿ ನಿಂತಿದ್ದ ಟೆಂಪೋ ಟ್ರ್ಯಾವಲರ್ ಒಂದನ್ನು ತೋರಿಸಿದ ರೇಣು, ಅದರ ಕಂಪೆನಿಯ ಬಗ್ಗೆ ವಿವರಿಸ ತೊಡಗಿದರು. ನನಗೆ ಎಳ್ಳಷ್ಟೂ ತಲೆಗೆ ಹೋಗಲಿಲ್ಲ. ಶ್ರೀಕಾಂತ ಮತ್ತು ನನ್ನ ಚರ್ಚೆಯ ವ್ಯಾಪ್ತಿಯನ್ನು ಮೀರಿದ ವಿಷಯವಿದಾಗಿತ್ತು. ಅದರ ಮಡ್‍ಗಾರ್ಡು ಹೀಗಿದೆ, ಅದರ ಗೇರು ವಿನ್ಯಾಸ ಇಂತಿದೆ, ಈ ಥರ ತಂತ್ರಜ್ಞಾನ, ಆ ಥರ ಪ್ರಯೋಜನ ಹೀಗೆಲ್ಲಾ ವಿವರಿಸಿದ ನಂತರ ನಾನು, "ನನಗೆ ಅವೆಲ್ಲ ಗೊತ್ತಾಗೋದಿಲ್ಲ, ಏನು ಟೆಕ್ನಾಲಜಿ ಇದ್ದರೇನು, ಹೇಳಿದ ಟೈಮಿಗೆ ಡ್ರೈವರುಗಳು ಬರದಿದ್ದರೆ!!" ಎಂದಿದ್ದೆ.ರೇಣು ಈಗ ಒಂದು ನೂತನ ದಾಖಲೆ ಮಾಡಿಬಿಟ್ಟಿದ್ದಾರೆ. 1750 ಕಿ.ಮೀ. ದೂರವನ್ನು, ಇಪ್ಪತ್ನಾಲ್ಕು ಗಂಟೆಗಳಲ್ಲಿ ಪುಣೆ ವರೆಗೂ ಹೋಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ತಮ್ಮ ಯಮಹಾ ಬೈಕಿನಲ್ಲಿ. 'ಮಿಡ್ ಡೇ' ಓದುವಾಗ ಗೆಳೆಯ ರೇಣು ಚಿತ್ರ, ವರದಿ ನೋಡಿ ಹರ್ಷಗೊಂಡೆ. ಹೇಗಿತ್ತು ಎಂದು ಪತ್ರಕರ್ತರು ಕೇಳಿದ್ದಕ್ಕೆ "ತುಂಬಾ ಹುಳುಗಳು ಕಣ್ಣಿಗೆ ಹೊಡೆಯುತ್ತಿತ್ತು..." ಎಂದು ಉತ್ತರಿಸಿರುವುದನ್ನು ನೋಡಿ "ಒಳ್ಳೇ ರೇಣು...." ಎಂದುಕೊಂಡೆ. ಕಾಫಿಸೇವನೆಯಲ್ಲಿ ಶ್ರೀಧರನನ್ನು ಮೀರಿಸುವ ರೇಣುವಿಗೆ ಗೆಲುವು ಸಿಗುತ್ತಿರಲೆಂದು ಹಾರೈಸುತ್ತೇನೆ. ಪ್ರಪಂಚವೆಲ್ಲ ಸುತ್ತಿಬರಲಿ..

ಆಲ್ ದಿ ಬೆಸ್ಟ್ ರೇಣು..

http://renukumarsphotos.fotopic.net/

-ಅ
06.03.2009
11.50PM

1 comment:

  1. ನಿಮ್ಮ ಮುಖಾಂತರ ನನ್ನದೂ ಸಂದೇಶ: All the best, Renu!

    ReplyDelete