Monday, March 30, 2009

ಮಾನಸ ಸಂಚರರೇ ಬ್ರಹ್ಮಣಿ

ಬ್ರಹ್ಮನಲ್ಲಿ ಸಂಚರಿಸು ಮನಸೇ ಎಂದು ಹೇಳುವ ಬಗೆಯೇ ಎಷ್ಟು ಸೊಗಸು! ಇದಕ್ಕೆ ಸಾಮರಾಗವೇ ಸೂಕ್ತವೆಂದು ಹೇಗೆ ಹೊಳೆಯಿತೋ, ಕೇಳುಗನ ಜನ್ಮ ಪಾವನ!

ಮಾನಸ ಸಂಚರರೇ.... ಬ್ರಹಣಿ - ಇಲ್ಲಿ |ರೀ; ;;| ;ಸ ಧ ಸ ರಿ| ಎಂಬ ಒತ್ತು "ಬ್ರಹ್ಮಣಿ"ಯ ಮೇಲೆ ಇರುವುದನ್ನು ಕೇಳುವಾಗ ಮೈ ಜುಮ್ಮೆನ್ನದೇ ಇರುವುದಿಲ್ಲ!

ಶಾಸ್ತ್ರೀಯ ಸಂಗೀತದ ವೈಶಿಷ್ಟ್ಯವೇ ಅದು.

ಉತ್ತಮವಾದ ಸಾಹಿತ್ಯವೇನೂ ಅಲ್ಲವೆಂದೆನಿಸುತ್ತೆ ಹಾಗೆಯೇ ಅದರ ಸಾಹಿತ್ಯವನ್ನು ಓದಿದಾಗ. (ಸಂಗೀತ ಪರಿಭಾಷೆಯಲ್ಲಿ ಸಾಹಿತ್ಯವೆಂದರೆ ಹಾಡಿನ/ಕೀರ್ತನೆಯ ಪದಗಳೆಂದಷ್ಟೇ). ಆದರೆ ಒಂದೊಂದು ಸಂಗತಿಗಳೂ ಸಹ ಒಂದೊಂದು ಅರ್ಥವನ್ನು ಕಲ್ಪಿಸಿಕೊಡುತ್ತೆಂಬುದನ್ನು ಅನುಭವ ಮಾತ್ರದಿಂದಲೇ ಮನಗಾಣಬೇಕು. (ಸಂಗತಿಗಳೆಂದರೆ ಒಂದೇ ಸಾಲನ್ನು ಬೇರೆ ಬೇರೆ ಸ್ವರ ಜೋಡಣೆಗಳಿಂದ ಹಾಡುವುದು).

ಮದಶಿಖಿಪಿಂಚಾಲಂಕೃತ ಚಿಕುರೇ ಎಂದಾಗ ಪರಬ್ರಹ್ಮ ಸ್ವರೂಪನಾದ ಶ್ರೀಮನ್ನಾರಾಯಣನ ಮುಖವೂ, ಮತ್ತೆ ಮದಶಿಖಿಪಿಂಚಾ..... ಎಂದು |ಸ ಸ ಧ ಪ....| ಎರಡನೆಯ ಸಂಗತಿ ಹೇಳುವಾಗ ಹೇಗೆ ಶಿಖೆಯು ಅಲಂಕೃತವಾಗಿದೆಯೆಂಬುದು ಕಣ್ಮುಂದೆ ಬರುವುದಷ್ಟೆ? ತದನಂತರ "ಚಿಕುರೇ...." ಎಂಬ ಆಲಾಪನೆಯು ಸಾಮಕ್ಕೆ ಶೋಭೆ ತರುವುದಲ್ಲದೆ, ನವಿಲಿನ (ಚಿಕುರೇ..) ನರ್ತನವೂ ಎದುರಿಗೆ ಕಂಡೀತು! ಸಾಹಿತ್ಯದಲ್ಲಿ ನವಿಲು ಗರಿಯಿಂದ ಅಲಂಕಾರವೆಂದಷ್ಟೆ ಹೇಳಿದ್ದರೂ ಸಂಗೀತವು ನಮಗೆ ಏನೆಲ್ಲ ಚಿತ್ರವನ್ನು ಕಲ್ಪಿಸಿಕೊಡಬಹುದು ಎಂಬುದಕ್ಕೆ ಇದು ಸಾಕ್ಷಿ.

ಅದೇ ರೀತಿ "ಪರಮಹಂಸ-ಮುಖ-ಚಂದ್ರಚಕೋರೇ...." ಎಂಬ ಸಾಲುಗಳು ಮತ್ತದರ ಸಂಗತಿಗಳು ಚಂದ್ರನ ಚೆಲುವನ್ನೆಲ್ಲ ತನ್ನ ಮುಖದಲ್ಲೇ ಹೊತ್ತಿದ್ದಾನೇನೋ ಪರಮಾತ್ಮನು ಎಂಬ ಭಾವನೆಯು ಬರುವುದು ಖಂಡಿತ. ಸಾಮ ರಾಗದ ವಿಶೇಷವೇ ಹಾಗೆ. ಹಾಡಿನ ಸಾಹಿತ್ಯಕ್ಕಿಂತಲೂ ಆಲಾಪನೆಗಳು ಹೆಚ್ಚು ಹೆಚ್ಚು ಅರ್ಥಗಳನ್ನು ಕಲ್ಪಿಸಿಕೊಡುತ್ತೆ. ಚಂದ್ರಚಕೋರೇ.... ಆದನಂತರ ಬರುವ ಒಂದೇ ಒಂದು ಸಾಲು ಹಾಡಿನ ಮುಕ್ತಾಯವೆಂಬುದು ಒಪ್ಪಿಕೊಳ್ಳಲೇ ಆಗುವುದಿಲ್ಲ. ಹಾಡು ಮುಗಿದ ನಂತರವೂ ಪರಿಪೂರಿತ ಮುರಲೀರವಕಾರೇ.... ಎಂಬ ರವವು ಮನದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತೆ.

ಸದಾಶಿವ ಬ್ರಹ್ಮೇಂದ್ರರ ಈ ರಚನೆಯನ್ನು ಶೆಮ್ಮಂಗುಡಿ, ಉನ್ನಿ ಕ್ರಿಷ್ಣನ್, ಅರಿಯಾಕುಡಿ, ಸಂತಾನಮ್, ಬಾಲಮುರಳಿ, ಬಾಂಬೇ ಜಯಶ್ರೀ, ಎಲ್ಲರ ಕಂಠಸಿರಿಯಲ್ಲೂ ಕೇಳಿದ್ದೇನೆ. ಒಂದೊಂದು ಕಛೇರಿಯೂ ಒಂದೊಂದು ಬಗೆಯ ಸೊಬಗು. ಒಂದೊಂದು ಕಂಠವೂ ಒಂದೊಂದು ಬಗೆಯ ಭಾವನಾಲಹರಿಯನ್ನು ಹರಿಸುತ್ತೆ. ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು - ಎಲ್ಲೆಲ್ಲು ಸಂಗೀತವೇ....

ಶಾಸ್ತ್ರೀಯ ಸಂಗೀತದಿಂದ ಮನಸ್ಸು ಆನಂದ ಸ್ಥಿತಿಗೆ ತಲುಪಲು ಸಾಹಿತ್ಯವು ನೆಪ ಮಾತ್ರವಷ್ಟೆ. ದೊಡ್ಡ ದೊಡ್ಡ ವಿದ್ವಾಂಸರುಗಳೂ ತಪ್ಪುಚ್ಚಾರಣೆ ಮಾಡುವುದನ್ನು ನಾವು ಕೇಳಿಯೇ ಇದ್ದೇವೆ. ಪದಗಳನ್ನು ಬಿಡಿಸುವುದರಲ್ಲೂ ಸಹ ತಪ್ಪಾಗಿರುತ್ತೆ. ಆದರೆ ಸಂಗೀತವು ಇವೆಲ್ಲ ತಪ್ಪುಗಳನ್ನೂ ತೊಳೆದು ಹಾಕಿಬಿಡುತ್ತೆ. ನೆರವಲ್ ಕೇಳುತ್ತಿದ್ದರೆ ಆಗುವ ರೋಮಾಂಚನವು ಅದೇ ಸಾಹಿತ್ಯವನ್ನು ಓದಿದಾಗ ತೀರ ಸಾಮಾನ್ಯವಾದ ಎರಡನೇ ತರಗತಿಯ ಹುಡುಗ ಬರೆದಿರೋ ಹಾಗಿದೆ ಎಂದು ಎನ್ನಿಸಿದರೂ ಅಚ್ಚರಿಯಿಲ್ಲ. ಕೇವಲ ಸಂಗತಿಗಳು, ಸ್ವರಗಳು, ರಾಗಗಳು, ಆಲಾಪನೆಗಳು ಹೇಗೆ ಅರ್ಥಗಳನ್ನು ಕೊಟ್ಟು ಮುದ ನೀಡುವುದೆಂಬುದನ್ನು ಅನುಭವಿಸಿಯೇ ತೀರಬೇಕು. "ಮಾತು, ಅರ್ಥ - ಎರಡೂ ವ್ಯರ್ಥ, ಸ್ವ-ಅರ್ಥವಿರದಿರೆ...".

ಮಾನಸ ಸಂಚರರೇ
ಬ್ರಹ್ಮಣಿ ಮಾನಸ ಸಂಚರರೇ ||ಪ||

ಮದಶಿಖಿಪಿಂಚಾಲಂಕೃತ ಚಿಕುರೇ
ಮಹನೀಯ ಕಪೋಲ ವಿಜಿತಮುಕುರೇ ||ಅ.ಪ.||

ಶ್ರೀರಮಣೀ ಕುಚದುರ್ಗ ವಿಹಾರೇ
ಸೇವಕಜನ ಮಂದಿರ ಮಂದಾರೇ
ಪರಮಹಂಸ ಮುಖಚಂದ್ರಚಕೋರೇ
ಪರಿಪೂರಿತ ಮುರಲೀರವಕಾರೇ ||ಚ||

(ಸದಾಶಿವ ಬ್ರಹ್ಮೇಂದ್ರ)

-ಅ
30.03.2009
11.35PM

9 comments:

 1. ಬ್ರಹಣಿ - ಇಲ್ಲಿ |ರೀ; ;;| ;ಸ ಧ ಸ ರಿ| ಎಂಬ ಒತ್ತು "ಬ್ರಹ್ಮಣಿ"ಯ ಮೇಲೆ ಇರುವುದನ್ನು ಕೇಳುವಾಗ ಮೈ ಜುಮ್ಮೆನ್ನದೇ ಇರುವುದಿಲ್ಲ!
  "ಬ್ರಹ್ಮಣಿ"ಯ ಮೇಲೆ enide??? anyways article chennagide.. idaralli maanasa sancharare brahmaNi ishtak maatra artha gottididdu......eega full gottaytu. illu firstu shemmangudi hesre bardidya........hmmm..

  ReplyDelete
 2. :-) naanu Santhanam rendition maatra kelirodu ... idanna odid mele eega kelo maja ne bere :-).

  ReplyDelete
 3. Nice one!! olle information kottideeri

  thnx..

  ReplyDelete
 4. nanna assignment ardha ille mugitu :)

  ReplyDelete
 5. >>ಶಾಸ್ತ್ರೀಯ ಸಂಗೀತದಿಂದ ಮನಸ್ಸು ಆನಂದ ಸ್ಥಿತಿಗೆ ತಲುಪಲು ಸಾಹಿತ್ಯವು ನೆಪ ಮಾತ್ರವಷ್ಟೆ.

  ಇದು ಬಹುಪಾಲು ನಿಜ - ಆದರೆ ಸಂಗೀತವನ್ನು ಅರಿಯುವ ಪ್ರಯತ್ನ ಮಾಡುವ ಮೊದಲ ದಿನಗಳಲ್ಲಿ ಸಾಹಿತ್ಯ ಮುಖ್ಯ ಅನ್ನುವುದು ನನ್ನನಿಸಿಕೆ.


  >>ದೊಡ್ಡ ದೊಡ್ಡ ವಿದ್ವಾಂಸರುಗಳೂ ತಪ್ಪುಚ್ಚಾರಣೆ ಮಾಡುವುದನ್ನು ನಾವು ಕೇಳಿಯೇ ಇದ್ದೇವೆ. ಪದಗಳನ್ನು ಬಿಡಿಸುವುದರಲ್ಲೂ ಸಹ ತಪ್ಪಾಗಿರುತ್ತೆ.

  ಆದರೆ ಇದಕ್ಕೆ ಕ್ಷಮೆ ಏನೂ ಕೊಡಬೇಕಿಲ್ಲ -ಸರಿಯಾಗಿ ತಿದ್ದಿಕೊಂಡು ಹಾಡುವುದು ಅಂತಹ ಕಷ್ಟದ ಮಾತಲ್ಲ. ಅದೂ, ಸಂಗೀತವೇ ಎಲ್ಲವೂ ಆಗಿರುವಂತಹವರಿಗೆ!

  >>ಆದರೆ ಸಂಗೀತವು ಇವೆಲ್ಲ ತಪ್ಪುಗಳನ್ನೂ ತೊಳೆದು ಹಾಕಿಬಿಡುತ್ತೆ.
  ಕೆಲವು ಸಲ ಮಾತ್ರ *ನಮಗೆ ಆ ಹಾಡು ಅರ್ಥವಾಗದೇ ಇರುವ ತನಕ ಎಂದುಕೊಳ್ಳಿ :)

  ReplyDelete
 6. [ಹಂಸಾನಂದಿ] ಸಾಹಿತ್ಯವನ್ನು ಅಲಕ್ಷ್ಯ ಮಾಡುವುದು ಸರಿಯೆಂದು ನಾನು ಸಮರ್ಥಿಸಿಕೊಂಡಿಲ್ಲ, ಆದರೆ, ಸಾಹಿತ್ಯವಿಲ್ಲದಿದ್ದರೂ ಸಹ ನಮ್ಮನ್ನು ಮುದಗೊಳಿಸಬಹುದು ಸಂಗೀತ.

  ಉದಾಹರಣೆಗೆ ತ್ಯಾಗರಾಜರ ಒಂದು ಕೀರ್ತನೆ: "ದ್ವತಮು ಸುಖಮಾ? ಅದ್ವೈತಮು ಸುಖಮಾ?" ಇದರ ಸಾಹಿತ್ಯದ ಪ್ರಕಾರ ತ್ಯಾಗರಾಜರು ಸಂದೇಹದಿಂದ ಯಾವುದು ಒಳ್ಳೇದು ಎಂದು ಪ್ರಶ್ನಿಸುತ್ತಾರೆ. ಆದರೆ, ಕೀರ್ತನೆ ಮುಗಿಸಿದ ಹಾಡುಗಾರ ನೆರವಲ್ಲೋ ಸ್ವರವೋ ಹಾಕುವಾಗ "ದ್ವೈತಮು..." ಎಂದು ನಿಲ್ಲಿಸಿಬಿಟ್ಟರೂ ನಮಗೆ ಸಾಹಿತ್ಯದ ಕಡೆ ಗಮನ ಹೋಗದೆ, ತಾಳ ಮತ್ತು ಸ್ವರದ ಕಡೆ ಮನಸ್ಸು ಎಳೆಯುತ್ತೆ. ಪಂಚರತ್ನಗಳಲ್ಲೊಂದಾದ "ಎಂದರೋ ಮಹಾನುಭಾವುಲು.." ಕೀರ್ತನೆಯಲ್ಲೂ ಇದೇ ರೀತಿ, "ಎಂದರೋ.." ಎಂದು ಕೊನೆಯ ಸ್ವರಗಳಲ್ಲಿ ನಿಲ್ಲಿಸುವುದುಂಟು.

  ತಪ್ಪುಚ್ಚಾರಣೆಯು ಎಂದೂ ಕ್ಷಮ್ಯವಲ್ಲ. ಆದರೆ ಅರಿಯದ ಭಾಷೆಯಲ್ಲಿ ತಪ್ಪು ಮಾಡುವುದು ಸಹಜ. ನೀವು ಹೇಳಿದ ಹಾಗೆ ತಪ್ಪನ್ನು ತಿದ್ದುಕೊಂಡು ಹಾಡಬೇಕಾದ್ದು ಧರ್ಮ. ಆದರೆ ತಾವು ಹಾಡುವುದು "ತಪ್ಪು" ಎಂದು ತಮಗೆ ಅರ್ಥವಾಗಬೇಕು. ಉದಾಹರಣೆಗೆ ಸುಬ್ಬುಲಕ್ಷ್ಮಿಯವರು "ಜಗದೋದ್ಧಾರನ.." ಹಾಡುವಾಗ "ಮಘನೆಂದು ತಿಳಿಯುತ..." ಎಂದೂ, ಸಂತಾನಂ ಅವರು "ನಾರಾಯಣ.. ನಿನ್ನ ನಾಮದ..." ಹಾಡುವಾಗ "ಎಂತೋ ಪುರಂದರ ವಿಠಲ ರಾಯನೇ ಅಂತ್ಯಕಾಲದಲ್ಲಿ ಚಿಂತಿಸೋ ಹಾಗೆ.." ಎನ್ನುತ್ತಾರೆ. ಸಾಹಿತ್ಯದ ಪ್ರಕಾರ ಎಂಥ ಆಭಾಸ. ಆದರೆ ತಾವು ಮಾಡಿರುವುದು "ತಪ್ಪು" ಎಂದು ತಮಗೆ ಅರಿವಾದಾಗ ಮಾತ್ರ ತಿದ್ದುಕೊಳ್ಳಬಹುದು. ಸಂಗೀತಗಾರರು ಎಲ್ಲ ಭಾಷೆಗಳ ಕೃತಿಗಳನ್ನೂ ಬಳಸಿಕೊಳ್ಳುವಾಗ ಸಾಹಿತ್ಯದಲ್ಲಿ ಈ ತಪ್ಪುಗಳು ಸಹಜ. ಆದರೆ ಇದರಿಂದ ಸಂಗೀತಕ್ಕೆ ಎಳ್ಳಷ್ಟೂ ದೋಷ ಬರುವುದಿಲ್ಲವೆಂದು ನನ್ನ ಅನಿಸಿಕೆ. ಕೆಲವು ಸಲ ಸಾಹಿತ್ಯ ಮರೆತುಬಿಟ್ಟರೂ ಬರೀ "ಅಕಾರ" ದಿಂದಲೇ ಮುದಗೊಳ್ಳಬಹುದು. ಇದನ್ನೇ ನಾನು ಹೇಳಹೊರಟಿದ್ದು.

  ನಿಜ. ಹಾಡು ನಮಗೆ ಅರ್ಥವಾದರಷ್ಟೆ ನಮಗೆ "ಆಭಾಸ" ಗೊತ್ತಾಗುವುದು. ಅಲ್ಲಿಯವರೆಗೂ ನಾವು ಆನಂದಿಸುತ್ತಿರುತ್ತೇವೆ. :-)

  [ಲಕುಮಿ] ಆಹ್ಹಾ. ಸರಿಯಾಗಿ ಹೋಮ್‍ವರ್ಕ್ ಮಾಡ್ಬೇಕು. ಇಲ್ಲಾಂದ್ರೆ ಆಚೆ ಕಳಿಸ್ಬಿಡ್ತೀನಿ. ಗೊತ್ತಲ್ಲ?

  [ಮನಸು] ಧನ್ಯವಾದಗಳು.

  [ವಿಜಯಾ] ನೀನು ಬಿಗ್‍ಬಾಸ್ ಹಾಡಿರೋದನ್ನು ಕೇಳು. ಅದ್ಭುತವಾಗಿದೆ!!

  ReplyDelete
 7. [ಭವ್ಯಾ] ಬ್ರಹ್ಮಣಿಯ ಮೇಲೆ "ಒತ್ತು" ಇದೆ. ಶೆಮ್ಮಂಗುಡಿ ಹೆಸರು ಯಾವಾಗಲೂ ಮೊದಲೇ ಬರೋದು ನೋಡು.

  ReplyDelete
 8. sahitya vs sangeeta nanna pet peeve annbahudu! neraval/akaara etc overtaking sahitya - nann voteU nim kaDene:) namma shaastreeya sangeeta dhaatupradhaana andmele sahityakke shtu bele anta chance sikkaglella charchege iLeeteeni:p gvn that it wz interesting to read what u say abt this particular composition...saahitya-sangeetada sambandhada bagge innondishtu yochisO haage maaDtu

  ReplyDelete
 9. very true.sangeeta swaragaLallirodu padagaLu namamaatra. swaragaLanna kELodE ond ananda.

  ReplyDelete