Friday, May 15, 2009

ಅಂತೂ ಹಿಂದಿ ಬಾರದೆ...

ಮದುವೆಯ ನಂತರ 'ವಲಸೆ' ಹೋಗುವ ಪದ್ಧತಿ ಎಲ್ಲಿಂದ ಬಂದಿದೆಯೋ ಗೊತ್ತಿಲ್ಲ, ಆದರೆ ಪದ್ಧತಿಯಂತೂ ಪ್ರಶಂಸನೀಯ. ನಾವು ದಂಪತಿಗಳು ಉತ್ತರಭಾರತಕ್ಕೆ ಹೊರಟುಬಿಟ್ಟೆವು. ಮಜವೆಂದರೆ ಇಬ್ಬರಿಗೂ ಹಿಂದಿ ಬರೋದಿಲ್ಲ.

"ಹಾಂ"... "ನಹಿ".. "ಆಪ್ ಕಾ ನಾಮ್ ಕ್ಯಾ ಹೈ?".... "ಅಚ್ಛ ಅಚ್ಛ.." ಇಷ್ಟು ಬಿಟ್ಟರೆ ಹೆಚ್ಚೇನೂ ನನಗಾಗಲೀ ರೇಖಾಗಾಗಲೀ ಗೊತ್ತಿಲ್ಲ. ಹಿಂದೊಮ್ಮೆ ನನಗೆ ಹಿಂದಿ ಬರೋದಿಲ್ಲ ಎಂದು ಹೇಳಿ ಹತ್ತಾರು ಜನರಿಂದ ಏಕಕಾಲದಲ್ಲಿ ಉಗಿಸಿಕೊಂಡಿದ್ದೆ. "You are so careless!" ಎಂದು ಒಬ್ಬರು ಅಂದಿದ್ದರು. ಹಿಂದಿ ಕಲಿಯದೇ ಇರುವುದಕ್ಕೂ ಕೇರ್‍ಲೆಸ್‍ನೆಸ್‍ಗೂ ಏನು ಸಂಬಂಧ ಎಂದು ಅರ್ಥವಾಗಿರಲಿಲ್ಲ. ಇನ್ನೊಬ್ಬರು "You are neglecting the National Language" ಎಂದು ಬೈದಿದ್ದರು. ಅರ್ರೆ, ಹಿಂದಿಗೆ ರಾಷ್ಟ್ರೀಯ ಭಾಷೆಯಾಗುವ ಏನು ಅರ್ಹತೆಯೆಲ್ಲಿದೆ? ಇಷ್ಟಕ್ಕೂ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸಿದವರಾದರೂ ಯಾರು? ಎಲ್ಲ ರಾಜಕೀಯವಷ್ಟೆ. ಹೀಗೆಲ್ಲ ನನ್ನ ಸೋಮಾರಿ ಮನೋವೃತ್ತಿಯು ಸಮಝಾಯಿಷಿ ಕೊಡುತ್ತಿರುತ್ತಿತ್ತು. ಈಗಲೂ ಕೊಡುತ್ತಿರುತ್ತೆ.

ಹಾಗಂತ ಇಂಗ್ಲೀಷಿನಲ್ಲೇ 'ಹೊಡೆಯಬಹುದು' ಎಂಬ ಭ್ರಮೆಯೂ ನನಗಾಗಲೀ ರೇಖಾಗಾಗಲೀ ಇರಲಿಲ್ಲ. ಯಾಕೆಂದರೆ ಉತ್ತರ ಭಾರತದಲ್ಲಿ ಬೆಂಗಳೂರಿನ ಹಾಗೆ ಇಂಗ್ಲೀಷ್ ಗುಲಾಮಗಿರಿಯು ಅಧಿಕವಾಗಿಲ್ಲ. ದೊಡ್ಡ ದೊಡ್ಡ ಹೊಟೆಲುಗಳಲ್ಲೂ, ರೆಸಾರ್ಟುಗಳಲ್ಲೂ ತಮ್ಮ ತಮ್ಮ ಕ್ಲಯೆಂಟುಗಳನ್ನು ಅವರು ಹಿಂದಿಯಲ್ಲಿಯೇ ಸ್ವಾಗತಿಸುತ್ತಾರೆ, ಸಂಭಾಷಿಸುತ್ತಾರೆ. ಇದು ನಾಲ್ಕನೆಯ ಬಾರಿ ನಾನು ಉತ್ತರಕ್ಕೆ ಹೋಗುತ್ತಿರುವುದು. (ನಾಲ್ಕು ಸಲ ಹೋದರೂ ಹಿಂದಿ ಕಲಿಯದೆ ಇರುವ ನನ್ನ ಸಾಹಸಕ್ಕೆ ಪ್ರಶಸ್ತಿ ಕೊಡಬೇಕು). ಇವರುಗಳ ಸ್ವಭಾಷಾಪಕ್ಷಪಾತವನ್ನು ನೋಡಿ ಪ್ರತಿ ಸಲವೂ "ಬೆಂಗಳೂರಿಗರು ಬೇರೆಯವರಿಂದ ಕಲಿಯುವುದು ಸಾಕಷ್ಟಿದೆ" ಎಂದುಕೊಳ್ಳುವುದು ನನ್ನ ಹವ್ಯಾಸ.

ದೆಹಲಿಯ ಹೊಟೆಲಿನವನು ನಾವು ಪ್ರಯಾಣಿಕರೆಂದು ತಿಳಿದು ಟೋಪಿ ಹಾಕುತ್ತಿದ್ದಾನೇನೋ ಎಂಬ ಅನುಮಾನವಾಯಿತು. ದೆಹಲಿಯಲ್ಲಿರುವ ಗೆಳೆಯ ವೀರೇಶನನ್ನು ಸಂಪರ್ಕಿಸಿ ಖಚಿತ ಪಡಿಸಿಕೊಂಡೆ. ಅವನು ಹೇಳಿದ ರೇಟಿಗೂ ಹೊಟೆಲಿನವನು ಹೇಳಿದ ರೇಟಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲವಾಗಿದ್ದರಿಂದ ಸ್ವಲ್ಪ ಸಮಾಧಾನವಾಯಿತು. ಅದರಲ್ಲೂ ಆಟೋದವರು, ಅಂಗಡಿಯವರು, ಸೈಕಲ್ ರಿಕ್ಷಾದವರು ಸಂಖ್ಯೆಗಳನ್ನು ಹಿಂದಿಯಲ್ಲಿ ಹೇಳಿಬಿಟ್ಟರಂತೂ ಜೀವ ಬಾಯಿಗೆ ಬಂದು ಬಿಡುತ್ತೆ. ಬರೀ round figures ಒಂದಿಷ್ಟು ಮಾತ್ರ ಗೊತ್ತಷ್ಟೆ. ಹೊಟೆಲಿನವನು ತಾಜಮಹಲನ್ನು ನೋಡಲು ಹೊರಟಿರುವ ನಮಗೆ ಕಾರು ವ್ಯವಸ್ಥೆ ಮಾಡಿಕೊಟ್ಟ. ನಾವು ಬೆಂಗಳೂರಿನಿಂದ ಬಂದಿದ್ದೇವೆಂದು ಅರಿತ ನಂತರ ಆತನ ಹಿಂದಿಯು ಇಂಗ್ಲೀಷಾಯಿತು. ಆತನ ಇಂಗ್ಲೀಷು ಅಮೇರಿಕದವರ ಇಂಗ್ಲೀಷನ್ನು ಅಣಕಿಸುವಂತಿತ್ತು. ಆತನ ಹಿಂದಿಯೇ ಸುಲಭ ಸುಲಲಿತವಾಗಿತ್ತೆಂದೆನಿಸಿತು. ನಮಗೆ ಇಂಗ್ಲೀಷೂ ಸಹ 'ಚೆನ್ನಾಗಿ' ಏನೂ ಬಾರದ ಕಾರಣ ಅಷ್ಟೇನೂ ತಲೆ ಕೆಡಿಸಿಕೊಳ್ಳಲಿಲ್ಲ.

ತಾಜಮಹಲಿಗೆ ಕರೆದೊಯ್ದ ಡ್ರೈವರೋ, ಹರಟೆ ಮಲ್ಲ. ನಮಗೆ ಹರಟೆ ಹೊಡೆಯಲು ಬರುತ್ತೆ - ಕನ್ನಡದಲ್ಲಿ! ಆದರೆ ಅವನು ಏನು ಹೇಳುತ್ತಿದ್ದನೋ ಅದಕ್ಕೆ "ಹಾಂ..." "ಅಚ್ಛ.." ಎಂದೇ ಕಾಲ ಕಳೆಯುತ್ತಿದ್ದೆವು. ಆತ ಏನಾದರೂ ಮಾಹಿತಿ ಹೇಳಿದರೆ, rather, ಆತ ಏನಾದರೂ ಮಾಹಿತಿ ಹೇಳಿದ ಎಂದು ನಮಗೆ ಅನ್ನಿಸಿದರೆ ನಾವು ಇಬ್ಬರೂ ಮುಖ ಮುಖ ನೋಡಿಕೊಂಡು "ಹೀಗೆ ಹೇಳಿರಬೇಕು ಅವನು" ಎಂದು ಇಬ್ಬರೂ ಒಮ್ಮತ ನೀಡಿದರೆ ಮಾತ್ರ ತಲೆಯಾಡಿಸುತ್ತಿದ್ದೆವು. ದೊಡ್ಡ ದೊಡ್ಡ ಹೊಟೆಲುಗಳಲ್ಲಿ ಹಣ ಸುಲಿಯುತ್ತಾರೆ, ಧಾಬಾಗಳಲ್ಲಿ ಊಟ ಚೆನ್ನಾಗಿರುತ್ತೆ, ಕಡಿಮೆ ಹಣ ತೊಗೋತಾರೆ ಎಂದು ಹೇಳಿ ಅದ್ಭುತವಾದ ಊಟ ಕೊಡಿಸಿದ. ತಾಜಮಹಲಿನ ಆವರಣದಲ್ಲಿ ಸುಲಿಯುವವರಿರುತ್ತಾರೆ ಎಚ್ಚರದಿಂದಿರಿ ಎಂದೆಲ್ಲ ಹೇಳಿಕೊಟ್ಟ. ಅವನ ಮಾತಿನಂತೆಯೇ ಅಡಿಗೊಬ್ಬ ದರೋಡೆಕೋರ ತಾಜಮಹಲಿನ ಮುಂದೆ ಕಾಣಿಸಿಕೊಂಡರು. ಸೈಕಲ್ ರಿಕ್ಷಾದವನಿಗೆ ಹತ್ತು ರೂಪಾಯಿಗಿಂತ ಹೆಚ್ಚು ಹಣ ಕೊಡಬೇಡಿಯೆಂದು ಡ್ರೈವರು ಹೇಳಿದ್ದನಾದ್ದರಿಂದ ಸೈಕಲ್‍ನವನು ಏನೇ ಮಾತನಾಡಿದರೂ ನಾನು "ದಸ್.. ದಸ್.." ಎನ್ನುತ್ತಿದ್ದೆನಷ್ಟೆ. ಅವನು ಅದಕ್ಕಿಂತ ಕಡಿಮೆ offer ಮಾಡಿದ್ದನೋ ಏನೋ, ಅದೂ ಗೊತ್ತಿಲ್ಲ, ನಾನು ಒಂದೇ ಮಂತ್ರವನ್ನು ಜಪಿಸುತ್ತಿದ್ದೆ. "ಮಾರ್ಕೆಟ್ ತೋರ್ಸ್ತೀನಿ.. ಅದು ತೋರ್ಸ್ತೀನಿ.. ಇದು ತೋರ್ಸ್ತೀನಿ.." ಎಂದೆಲ್ಲ ಹೇಳಿದ, ನಾವು "ನಹಿ ನಹಿ..." ಎಂದು ತಾಜಮಹಲಿನ ಬಾಗಿಲಲ್ಲಿ ಇಳಿದುಬಿಟ್ಟೆವು. ಡ್ರೈವರು ರಾತ್ರಿಯ ರೈಲಿಗೆ ಆಟೋ ಮಾಡಿಕೊಂಡು ಹೋಗುವುದು ಹೇಗೆ, ಅವನಿಗೆ ಎಷ್ಟು ಕೊಡಬೇಕು ಎಂದೆಲ್ಲ ಹೇಳಿ ನಮ್ಮನ್ನು ಹೊಟೆಲಿಗೆ ಬಿಟ್ಟು ಮಾಯವಾಗಿಬಿಟ್ಟ.

ಮೊದಲಿನಿಂದಲೂ ಹಿಮಾಚಲಿ, ಉತ್ತರಾಂಚಲಿ ಜನಗಳ ಮೇಲೆ ನನಗೆ ಅಪಾರ ಗೌರವ. ಜನ ತುಂಬ ಒಳ್ಳೆಯವರು ಎಂದು ನನ್ನ ನಂಬಿಕೆ. ಮೋಸ, ಕಪಟ ಅವರನ್ನು ಸುಳಿಯದು ಎಂದು ನಾನು ಹೇಳುತ್ತಲೇ ಇದ್ದಿದ್ದು ರೇಖಾಗೆ ಬೋರು ಹೊಡೆಯಿತು. ಜಗಳಗಳೇ ಅಪರೂಪ. ಟ್ರಾಫಿಕ್ ಜ್ಯಾಮಿಗೆ ಸಿಟ್ಟಾಗುವುದಿಲ್ಲ. ಎದುರುಗಡೆಯೇ ಬಸ್ಸು ತಂದು ನಿಲ್ಲಿಸದವನ ಮೇಲೂ ಬೇಸರಗೊಳ್ಳುವುದಿಲ್ಲ. ಕಾರಿನವನೊಬ್ಬ ಹೈವೇನಲ್ಲೇ ತನ್ನ ಕಾರನ್ನು ನಿಲ್ಲಿಸಿ ಹೋಗಿದ್ದರೂ, ಅವನ ಕಾರಿನ ಹಿಂದೆ ನೂರಾರು ವಾಹನಗಳು ನಿಂತರೂ ಒಂದೂ ಹಾರನ್ ಮಾಡುತ್ತಿರಲಿಲ್ಲ, ಒಬ್ಬನೂ ಸಿಟ್ಟಾಗಿರಲಿಲ್ಲ. ಆ ಕಾರಿನವನು ಐದು ನಿಮಿಷದ ನಂತರ ಬಂದು ಸ್ಟಾರ್ಟ್ ಮಾಡಿ ಹೊರಟ, ಬಳಿಕ ಎಲ್ಲರೂ ಹೊರಟರು. ಪೋಲೀಸಿನವನೂ ಸಹ ಅಲ್ಲಿ ಇಲ್ಲಿ ನೋಡುತ್ತ ಆ ಕಾರಿನವನು ಎಲ್ಲೆಂದು ಹುಡುಕುತ್ತಿದ್ದ, ಅವನು ಬಂದ ಮೇಲೆ ಕೊಂಚವೂ ಬೈಯಲಿಲ್ಲ.

ಇವರುಗಳು ಒಳ್ಳೇ ಜನ ಎಂದಿರುವ ನನ್ನ ಅನಿಸಿಕೆಯು ದೃಢವಾಗಲು ಇನ್ನೊಂದು ಪ್ರಸಂಗ ನಡೆಯಿತು. ದಾರಿಯಲ್ಲಿ ಹೋಗುವಾಗ ಹಿಮಾಚಲಿ ಬಟ್ಟೆ ತೊಡಿಸಿ ಫೋಟೋ ತೆಗೆಯುತ್ತೇವೆಂದು ನಾಲ್ಕೈದು ಜನ ನಿಂತಿದ್ದರು. ಅದೇನೂ ಅಂಗಡಿಯಲ್ಲ. ಅವರೇನೂ ಪ್ರವಾಸೋದ್ಯಮದ ಕಾರ್ಯಕರ್ತರಲ್ಲ. ಘಟ್ಟದಲ್ಲಿ ನಿಂತಿರುವ ನಾಲ್ಕು ಜನರು. ಸರಿ, ನಾವೂ ಬಟ್ಟೆ ತೊಡಿಸಿಕೊಂಡು ಫೋಟೋ ತೆಗೆಸಿಕೊಂಡೆವು. ಮೂರು ಫೋಟೋಗೆ ಇನ್ನೂರು ರೂಪಾಯಿಯೆಂದಾಗ ಗಾಬರಿಯಾಗದೇ ಇರುತ್ತದೆಯೇ? ಹಣ ಕೊಟ್ಟಿದ್ದಕ್ಕೆ ರಸೀತಿಯೂ ಇಲ್ಲ! ನನ್ನ ಹೆಸರು ಬರೆದುಕೊಂಡ. "ಅರ್ರೆ! ಯಾವಾಗ ಕೊಡ್ತೀಯಾಪ್ಪ ಫೋಟೋನ?" ಎಂದು ಕೇಳೋದು ಹೇಗೆ ಹಿಂದಿಯಲ್ಲಿ? ನನ್ನ ಮುಖದ ಮೇಲಿನ ಪ್ರಶ್ನೆ ಅವನಿಗೇ ಅರ್ಥವಾಯಿತೇನೋ ಅನ್ನಿಸುತ್ತೆ, "ಶಿಮ್ಲಾದಲ್ಲಿ ನೀವು ಯಾವ ಹೊಟೆಲಿನಲ್ಲಿರೋದು ಹೇಳಿ, ಅಲ್ಲಿಗೇ ತಂದು ಕೊಡುತ್ತೇವೆ." ಎಂದ. "ನಾವು ಶಿಮ್ಲಾದಲ್ಲಿ ಉಳಿದುಕೊಳ್ಳುವುದಿಲ್ಲ, ನಾರ್ಕಂಡದಲ್ಲಿ ಇರುವುದು" ಎಂದು ಅವನಿಗೆ ತಿಳಿಸಲು ಸಾಕಾಗಿ ಹೋಯಿತು. ಅವನು " ಸರಿ, ವಾಪಸ್ ಬರುವಾಗ ಇಸ್ಕೊಂಡ್ ಹೋಗಿ" ಎನ್ನುವ ಅರ್ಥದಲ್ಲಿ ಹೇಳಿದ. ಬಾರದ ಭಾಷೆಯಲ್ಲಿ ಏನು ಪ್ರಶ್ನೆ ಮಾಡುವುದು ಎಂದು ತಿಳಿಯದೆ "ಸರಿ" ಎಂದು ಹೊರಟೆವು. "ಮೋಸ-ಗೀಸ ಇಲ್ವಾ ಇದರಲ್ಲಿ?" ಎಂದು ಹಿಂದಿಯಲ್ಲಿ ಪದಗಳನ್ನು ಹುಡುಕಿ ನಮ್ಮ ಡ್ರೈವರನ್ನು ಕೇಳಿ ತಿಳಿದುಕೊಳ್ಳುವಷ್ಟರಲ್ಲಿ ಮುಂದಿನ ಊರು ಬಂದೇ ಬಿಟ್ಟಿತ್ತು. ಡ್ರೈವರು ಹೇಳಿದ ಸಾರಾಂಶ ಇಂತಿತ್ತು: "ಜೀ, ಮೋಸ ಮಾಡಿದರೆ ಈ ಊರಿಗೆ ಜನ ಮತ್ತೆ ಬರುತ್ತಾರಾ?" ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯವಿಲ್ಲವೆಂದು ನಾರ್ಕಂಡದಲ್ಲಿ ಮೂರು ದಿನ ಕಳೆದು ವಾಪಸ್ ಬರುವಾಗ ಅದೇ ಹಾದಿಯ ಇನ್ನೊಂದು ಬದಿಯಲ್ಲಿ ಬನ್ನು, ಹಣ್ಣು, ಇತ್ಯಾದಿ ತಿಂಡಿ ಮಾಡುವವನ ಬಳಿ ಕಾರನ್ನು ನಿಲ್ಲಿಸಿದ. ನನ್ನ ಮುಖವನ್ನು ನೋಡಿದ ಆ ವರ್ತಕ "ಹಾಂಜೀ..." ಎಂದು ಹೇಳಿ ಒಂದು ಪೊಟ್ಟಣ ತೆಗೆದು ಕೊಟ್ಟ. ಅದರೊಳಗೆ ನಮ್ಮ ಫೋಟೋ ನೋಡಿ ಆನಂದವಾಯಿತು!

From Valase


ಕಸೋಲಿಯ ರೆಸಾರ್ಟಿನಲ್ಲಿ ಕೆಲಸ ಮಾಡುವ ಹುಡುಗರೂ ಅಷ್ಟೆ, ಹಿಂದಿ ಬಿಟ್ಟರೆ ಅವರಿಗೆ ಬರುತ್ತಿದ್ದುದು ಹಿಮಾಚಲಿ ಭಾಷೆ. ನಮಗೆ ಎರಡೂ ಕಬ್ಬಿಣದ ಕಡಲೆ! ನಾನು ಮಕ್ಕಳಿಗೆ ಪಾಠ ಮಾಡಿ ಅಭ್ಯಾಸವಿರುವುದರಿಂದ, Actions ಮಾಡಿಕೊಂಡು ಮಾತನಾಡುವುದು ಕಲಿತಿರುವುದರಿಂದ, ನಾನು ಏನು ಹೇಳಲು ಹೊರಟಿದ್ದೇನೆಂಬುದು ಅವರುಗಳಿಗೆ ಅರ್ಥವಾಗುತ್ತಿತ್ತೆನಿಸುತ್ತೆ. ಯಾಕೆಂದರೆ ನಾನು ಏನು ಬೇಕು ಎನ್ನುತ್ತಿದ್ದೆನೋ ಅದನ್ನೇ ತಂದುಕೊಡುತ್ತಿದ್ದರು. ಅಂತೂ ಎರಡು ದಿನ ಭಾಷೆ ಗೊತ್ತಿಲ್ಲದೆ ಕಸೋಲಿಯಲ್ಲಿ ಏನು ಬೇಕೋ ಅದೆಲ್ಲವನ್ನೂ ತರಿಸಿಕೊಂಡು, ವಿಚಾರಗಳನ್ನು ಮಾಹಿತಿಗಳನ್ನು ಪಡೆದುಕೊಂಡು ಕಳೆದೆವು. ನಾರ್ಕಂಡದ ರೆಸಾರ್ಟಿನ ಹುಡುಗರೂ ಅಷ್ಟೆ. "ಚಾಯ್?" ಎನ್ನುತ್ತಿದ್ದರು. ಬೇಡವೆಂದರೆ ಅಕ್ಬರನಿಗೆ ವಂದಿಸುತ್ತಿದ್ದ ಸೈನಿಕರಂತೆ ತಲೆಬಾಗಿಸಿ ಹೋಗುತ್ತಿದ್ದರು. ಇನ್ನು ಅಲ್ಲಿನ ಹಳ್ಳಿಯ ಜನರೋ ವಿಪರೀತ ಸ್ನೇಹಜೀವಿಗಳು. (ಸಾಮಾನ್ಯವಾಗಿ ಎಲ್ಲ ಕಡೆ ಹಳ್ಳಿಯವರು ಸ್ನೇಹಜೀವಿಗಳೇ. ತಮ್ಮ ಊರಿಗೆ ಯಾರಾದರೂ ಹೊಸಬರು ಬಂದರೆ, ಅವರು ತಮ್ಮ ಮನೆಗೂ ಅತಿಥಿಯಾಗಿ ಬರಲಿ ಎಂದು ಆಶಿಸುವವರು - ಇದು ನನ್ನ ಅನುಭವ). ನಾನೂ ರೇಖಾ ಇಬ್ಬರೂ ವಿಹಾರಕ್ಕೆಂದು ಹೋಗುತ್ತಿದ್ದಾಗ ಒಬ್ಬ ವೃದ್ಧ ಹೆಂಗಸು ಕಟ್ಟಿಗೆಯನ್ನು ಹೊತ್ತು ಹೋಗುತ್ತಿದ್ದಳು. "ನಮ್ಮ ಮನೆಗೆ ಬನ್ನಿ, ಚಾಯ್ ಕೊಡ್ತೀನಿ" ಎಂದು ಆಹ್ವಾನಿಸಿದಳು. ಆಕೆಯ ಮನೆ ನಾವಿದ್ದ ಜಾಗದಿಂದ ಸುಮಾರು ಮೂರು ಕಿಲೋಮೀಟರು ಇದ್ದಿದ್ದರಿಂದ, ಮತ್ತೆ ಬೆಟ್ಟವನ್ನು ಇಳಿದು ಹೋಗಬೇಕಾಗಿದ್ದರಿಂದ ಅವರ ಆಹ್ವಾನವೇ ಚಹಕ್ಕಿಂತ ರುಚಿಯಾಗಿತ್ತೆಂದು ಅಂಗೀಕರಿಸಿ "ಹೆ ಹ್ಹೆ ಹ್ಹೆ... ಥ್ಯಾಂಕ್ಸ್" ಎಂದೆವು.

From Valase


ಹಟು ಶಿಖರಕ್ಕೆ ಹೋಗುವ ಹಾದಿಯು ಬಹಳ ಸಾಹಸಮಯವಾಗಿದೆ. ಒಂದೇ ಕಾರು ಹೋಗುವಷ್ಟು ಜಾಗ. ಒಂಭತ್ತು ಸಾವಿರ ಅಡಿಯಿಂದ ಹನ್ನೊಂದು ಸಾವಿರ ಅಡಿಗೆ ಮುಕ್ಕಾಲುಗಂಟೆಯಲ್ಲಿ ಏರುವುದು. ಎದುರುಗಡೆಯಿಂದ ಇನ್ನೊಂದು ಕಾರು ಬಂತು. ಬಲಗಡೆ ಪ್ರಪಾತ. ಇಂಥ ರಸ್ತೆಯಲ್ಲಿ ನಮ್ಮ ಡ್ರೈವರು ಎದುರು ಬಂದ ಕಾರಿಗೆ ಜಾಗ ಕೊಡಲು ತಿರುವನ್ನು ಹುಡುಕಿಕೊಂಡು ಕಾರನ್ನು ರಿವರ್ಸ್ ಓಡಿಸಿದನು. ನಮ್ಮ ದಿಗಿಲನ್ನು ಅವನ ಬಳಿ ಹೇಳಿಕೊಳ್ಳುವಂತಿರಲಿಲ್ಲ. ಆ ಸಮಯದಲ್ಲಿ ನನಗೆ ರೇಖಾ, ರೇಖಾಗೆ ನಾನು ಅಷ್ಟೆ. "ಅಂಬಿಗ ನಾ ನಿನ್ನ ನಂಬಿದೆ..." ಎಂಬುವ ಪ್ರಾರ್ಥನೆಯು ನಮ್ಮ ಡ್ರೈವರನಿಗೆ ಮುಟ್ಟಿತೇನೋ, ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ವಾಪಸ್ಸು ಕರೆದುಕೊಂಡು ಬಂದನು. ಬರುವಾಗ "ಹೇಗಿತ್ತು ರಸ್ತೆ? ಭಯ ಆಗೋಯ್ತಾ?" ಎಂದು ನಕ್ಕು ಕೇಳಿದನು. ನಮ್ಮ ಭಯವು ಅವನಿಗೆ ಸಂತೋಷ ತರಿಸಿತ್ತೇನೋ.

From Valase


ಕುಫ್ರಿ ಜಾತ್ರೆಯಲ್ಲಿ ಎಲ್ಲ ಕಡೆ ಜನರು. ಪ್ರವಾಸಿಗರ ಸಮುದ್ರ! ಪಾರ್ಕಿಂಗಿನಿಂದ ಬೆಟ್ಟದ ಮೇಲಿನವರೆಗೂ ಕುದುರೆಯ ಮೇಲೆ ಹೋಗಬೇಕು. ಮೂತ್ರಕ್ಕೆ ಅವಸರವಾಗಿಬಿಟ್ಟಿತ್ತು. ಕುದುರೆಯ ಮೇಲೆ ಕುಳಿತಾಗ ಅದು ಕುಣಿಯುವ ರೀತಿ ಕಲ್ಪಿಸಿಕೊಂಡರೇನೇ ಪ್ಯಾಂಟು ಒದ್ದೆಯಾಗುವಂತಿತ್ತು. ಕುಫ್ರಿ ಶಿಖರದ ಮೇಲೆ ಜಾತ್ರೆ. ಟಾಯ್ಲೆಟ್ಟು ಕೂಡ ಶಿಖರದ ಮೇಲೆಯೇ. ಕುದುರೆಯ ಮಾಲೀಕನಿಗೆ ಟಾಯ್ಲೆಟ್ ಬಳಿ ನಿಲ್ಲಿಸು ಎಂದು ಕೇಳಲು ಹತ್ತು ನಿಮಿಷವಾಯಿತು. ಅವನೂ ಸಹ "ಟಾಯ್ಲೆಟ್ ಊಪರ್ ಹೈ.." ಎಂದಾಗ ಬಾಯಿ ಮುಚ್ಚಿಕೊಂಡು (ಬರೀ ಬಾಯಿಯೇನು?) ಕುಳಿತುಕೊಳ್ಳುವುದಷ್ಟೆ ನನ್ನ ಕೆಲಸವಾಗಿತ್ತು. ಕುದುರೆ ಸವಾರಿ ಬಹಳ ಸೊಗಸಾಗಿತ್ತು. ಸಹಸ್ರಾರು ಕುದುರೆಗಳು ಒಂದರ ಹಿಂದೊಂದು ಹೋಗುತ್ತಿದ್ದುದು, ಅದರ ಮೇಲೆ ಪ್ರವಾಸಿಗರು ಕುಳಿತಿದ್ದು ಈಜಿಪ್ತಿನ ಕಾಲದ ಗುಲಾಮರನ್ನು ಸಾಗಿಸುವ ದೃಶ್ಯವನ್ನು ಕಣ್ಣ ಮುಂದೆ ತಂದಿತು. ನಾವೂ ಸಹ slaves ರೀತಿಯೇ ಕಂಡೆವು. ಇಳಿಜಾರಿನಲ್ಲಿ ಚಿಕ್ಕ ಚಿಕ್ಕ ಹುಡುಗರು ನಾಲ್ಕು ನಾಲ್ಕು ಕುದುರೆಗಳನ್ನು ಓಡಿಸಿಕೊಂಡು ಬರುತ್ತಿದ್ದುದನ್ನು ಕಂಡು ಅಚ್ಚರಿಗೊಂಡೆವು.

From Valase


ಮೇಲೆ ಶಿಖರದಲ್ಲಿ ಒಬ್ಬಾಕೆ ಹಾವನ್ನು ಹೆಗಲ ಮೇಲೆ ಹಾಕಿಕೊಂಡು ಫೋಟೋ ತೆಗೆಸಿಕೊಳ್ಳಲು ಹೇಳುತ್ತಿದ್ದಳು. ಇನ್ನೊಬ್ಬ "ಯಾಕ್" ಮೇಲೆ ಕುಳ್ಳಿರಿಸಿ ಫೋಟೋ ತೆಗೆಸಿಕೊಳ್ಳಲು ಹೇಳುತ್ತಿದ್ದ. ಮತ್ತೊಬ್ಬ ಹಿಮಾಚಲಿ ಬಟ್ಟೆ ತೊಡಿಸಿ ಫೋಟೋ ತೆಗೆಸಿಕೊಳ್ಳಲು ಹೇಳುತ್ತಿದ್ದ. ಒಟ್ಟಿನಲ್ಲಿ ಫೋಟೋ ತೆಗೆಸಿಕೊಳ್ಳುವುದೂ ಸಹ ಈ ಊರಲ್ಲಿ ಒಂದು ವ್ಯಾಪಾರ. ಮತ್ತೆ ಎಲ್ಲ ಜಾತ್ರೆಗಳಲ್ಲೂ ಇರುವಂತೆ ನಾನಾ ಬಗೆಯ ತಿಂಡಿಗಳನ್ನು ಮಾರುತ್ತಿದ್ದರು. ಹಿಮಾಚಲ ಪ್ರದೇಶವು ಬೆಟ್ಟಗಳಿಂದಲೇ ಆವೃತವಾಗಿರುವ ಕಾರಣ ಜಾತ್ರೆಗಳೂ ಶಿಖರಗಳ ಮೇಲೆಯೇ! ವಾಪಸ್ಸು ಹೋಗುವಾಗ ಕುದುರೆಗಾಗಿ ಕಾಯುತ್ತ ಸುಮಾರು ಅರ್ಧ ಗಂಟೆ ಕಾದೆವು. ಕಾಯಲು ತಾಳ್ಮೆ ಕಳೆದುಕೊಂಡ ಇತರ ಪ್ರವಾಸಿಗರನೇಕರು ಕುದುರೆಯನ್ನು ಒದಗಿಸುವ ಮಾಲೀಕನ ಮೇಲೆ ರೇಗಾಡಲು ಆರಂಭಿಸಿದರು. ಆತ ಎಳ್ಳಷ್ಟೂ ಸಹನೆ ಕಳೆದುಕೊಳ್ಳದೆ ಉತ್ತರಿಸಿದ. ನಾವೂ ಏನೂ ಕೇಳಲಿಲ್ಲ. ಏನು ಕೇಳೋದು ಎಂದು ನಮಗೆ ಗೊತ್ತೇ ಇರಲಿಲ್ಲ. ಕುದುರೆ ಬಂದಾಗ ಹತ್ತುವುದು ಎಂದು ಸುಮ್ಮನೆ ನಿಂತಿದ್ದೆವು. ಕುದುರೆ ಬಂತು. ನಾವು ಹೊರಟೆವು! ತಾಳ್ಮೆ ಕಳೆದುಕೊಳ್ಳಬಾರದು ಎಂದು ಅದಕ್ಕೇ ಹೇಳೋದು ಹಿರಿಯರು!! ತಾಳಿದವನು ಬಾಳಿಯಾನು!

ಅಂತೂ ಹಿಂದಿ ಬಾರದೆ ಹಿಮಾಚಲ ಪ್ರದೇಶದಲ್ಲಿ ಐದು ದಿನ ಕಳೆದು ಮತ್ತೆ ದೆಹಲಿಗೆ ಹೋದೆವು. ದೆಹಲಿಯನ್ನು ಸುತ್ತುವ ಕಾರ್ಯಕ್ರಮವೊಂದಿತ್ತು. ಈ ಬಾರಿ ಅಷ್ಟು ತೊಂದರೆಯಾಗದು, ಯಾಕೆಂದರೆ ಗೆಳೆಯ ವೀರೇಶನು "ದೆಹಲಿ ಕರ್ನಾಟಕ ಸಂಘ"ದಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದಾನೆ, ಜೊತೆಗೆ ಕಾರನ್ನೂ ಸಿದ್ಧಪಡಿಸಿಕೊಟ್ಟಿದ್ದಾನೆ, ರೈಲ್ವೇ ಸ್ಟೇಷನ್ನಿನಿಂದ ದೆಹಲಿ ಕರ್ನಾಟಕ ಸಂಘಕ್ಕೆ ಹೋಗಲು ಮಾತ್ರ ಹಿಂದಿ ಬೇಕು, ಆಮೇಲೆ ಅಲ್ಲಿಂದ ವಾಪಸ್ಸು ಸ್ಟೇಷನ್ನಿಗೆ ಬರಲು ಬೇಕಾಗುತ್ತೆ. ಇಷ್ಟು ದಿನವೇ ಹಿಂದಿ ಬಾರದೆ ಯಶಸ್ವಿ(?)ಯಾಗಿದ್ದೇವೆ, ಇನ್ನು ಒಂದು ದಿನ ತಾನೆ? ಎಂದುಕೊಳ್ಳುವಷ್ಟರಲ್ಲಿ ದೆಹಲಿಯ ರೈಲ್ವೇ ಸ್ಟೇಷನ್ನಿನ ಮುಂದೆ ಆಟೋದವರು ನಮ್ಮ ಮೇಲೆ ದಾಳಿ ಮಾಡಿದರು. "ಥೂ, ಈ ಆಟೋದವರು, ಬೋಳಿಮಕ್ಳು, ಎಲ್ಲ ಊರಿನಲ್ಲೂ ಹೀಗೇ ಮೈ ಮೇಲೇ ಬೀಳ್ತಾರೆ, ಮೋಸಗಾರ ನನ್ ಮಕ್ಳು" ಎಂದು ಶಾಪ ಹಾಕುವಾಗ ಸ್ವಲ್ಪ ದಿಗಿಲಾಯಿತು. ಯಾವನಿಗಾದರೂ ಕನ್ನಡ ಗೊತ್ತಾಗಿ ನಮ್ಮನ್ನು ಕಿಡ್ನಾಪ್ ಮಾಡಿಸಿಬಿಟ್ಟರೆ? ತಲೆ ಕೊಡವಿಕೊಂಡು ಸ್ಟೇಷನ್ನಿನ ಹೊರಗಿರುವ ಆಟೋ ಒಂದರ ಬಳಿ ಹೋಗಿ ದೆಹಲಿ ಕರ್ನಾಟಕ ಸಂಘಕ್ಕೆ ಬರ್ತೀಯೇನಪ್ಪ ಎಂದು ಕೇಳಿದೆವು. ಅವನು "ಏಕ್ ಸೌ ಬೀಸ್" ಎಂದ. ನಾನು ಕೈ ಕಾಲು ಬೆರಳುಗಳನ್ನೆಲ್ಲ ಎಣಿಸಿ ಅದು ನೂರಿಪ್ಪತ್ತು ಎಂದು ಅರ್ಥವಾಗಿ "ಏಕ್ ಸೌ.." ಎಂದೆ. ಅವನು ಏನೋ ಹೇಳಿದ, ಅರ್ಥವಾಗಲಿಲ್ಲ. ನಾನು ಪುನಃ ಪುನಃ ಅದೇ ಮಂತ್ರ ಜಪಿಸಿದೆ. ಅವನು ಒಂದು ದೊಡ್ಡ ವಾಕ್ಯ ಹೇಳಿದ. ನನಗೆ ಅದು "ಸಿಂಹಾವಲೋಕನಕ್ರಮದಿನರಿಪಿದಂ ಕವಿರನ್ನಂ" ಎನ್ನುವುದಕ್ಕಿಂತ ಕ್ಲಿಷ್ಟವಾಗಿ ಕೇಳಿಸಿತು. ನಾನು ರೇಖಾಳ ಮುಖ ನೋಡಿದೆ. "ಏನಂತೆ?" ಎಂದೆ. ಅವಳು ಗೊತ್ತಿಲ್ಲವೆಂಬಂತೆ ತಲೆಯಾಡಿಸಿದಳು. ಇವನ ಸಹವಾಸವೇ ಬೇಡವೆಂದು ಮುಂದೆ ಸಾಗಿಬಿಟ್ಟೆವು. ಅವನು ಇನ್ನೂ ಏನೋ ಮಾತನಾಡುತ್ತಿದ್ದ. ಕೂಗಿದ. ನಾವು ಅವನ ಕಡೆ ತಿರುಗಿಯೂ ನೋಡಲಿಲ್ಲ. ಅವನೇನು ನಮ್ಮನ್ನು ವಾಚಾಮಗೋಚರವಾಗಿ ಬೈಯ್ಯುತ್ತಿದ್ದನೋ, ಅಥವಾ ನೂರಕ್ಕಿಂತ ಕಡಿಮೆಗೆ ಬರುತ್ತೇನೆನ್ನುತ್ತಿದ್ದನೋ ಗೊತ್ತೇ ಆಗಲಿಲ್ಲ. ಇನ್ನೂ ಅದು ಸಸ್ಪೆನ್ಸು ನಮಗೆ. ಬೇರೆ ಆಟೋದವನೊಬ್ಬ "ಸೌ" ಗೆ ಒಪ್ಪಿಕೊಂಡ. ಅಂತೂ ದೆಹಲಿ ಕರ್ನಾಟಕ ಸಂಘ ತಲುಪಿಕೊಂಡು ಬದುಕಿದೆವು.

ಅರ್ಧಗಂಟೆ ಸುತ್ತಿದರೂ ದೆ.ಕ.ಸಂ. ಸಿಗದ ಕಾರಣ ರೇಖಾಗೆ ತುಸು ಭೀತಿಯಾಯಿತು. ಇದೇನು ಎಲ್ಲಿಗೆ ಕರೆದುಕೊಂಡು ಹೋ್ಗುತ್ತಿದ್ದಾನೆ ಈತ? ದಿನಬೆಳಗಾದರೆ ಪೇಪರುಗಳಲ್ಲಿ ಓದುತ್ತಿರುತ್ತೇವೆ, ಪ್ರವಾಸಿಗರ ಮೇಲೆಸಗುವ ದೌರ್ಜನ್ಯದ ಬಗ್ಗೆ. ನಮಗೇನಾದರೂ..... ಎನ್ನುವ ಭಯ ಅವಳನ್ನು ಆವರಿಸಿತ್ತು. ಅದೇ ಭಯವು ನನ್ನಲ್ಲೂ ಇತ್ತು ಎನ್ನುವುದು ಪ್ರಾಮಾಣಿಕತೆ. ಆದರೆ ಹಾಗಾಗಲಿಲ್ಲ. ದೆ.ಕ.ಸಂ. ತಲುಪಿದ ನಂತರ ವೀರೇಶ ಮತ್ತು ಕೃಷ್ಣ ಇಬ್ಬರೂ ಸಿಕ್ಕು ನಮ್ಮೊಡನೆ ಕನ್ನಡದಲ್ಲಿ ಮಾತನಾಡಿದಾಗ ಒಳ್ಳೇ ಸಂತೋಷವಾಯಿತು. ಪಕ್ಕದಲ್ಲೇ ಇರುವ ಕರ್ನಾಟಕ ಫುಡ್ ಕಾರ್ಪೊರೇಷನ್ನಿನಲ್ಲಿ ತಿಂಡಿ ತಿಂದು ಹರಟಿ ಹೊರಟಾಗ ಇನ್ನೊಬ್ಬ ಕಾರು ಡ್ರೈವರು ಕಾದಿದ್ದ. ಅವನ ಜೊತೆಯೂ ಹಿಂದಿಯಲ್ಲಿ ಸವರಿಸಬೇಕಲ್ಲಪ್ಪ? ಸರಿ ನೋಡೇ ಬಿಡೋಣ, ಏನಾಗುತ್ತೋ ಆಗಲಿ ಎಂದು ಹೊರಟೆವು.

ಹೊರಟ ಮುಕ್ಕಾಲುಗಂಟೆ ನಾನಾಗಲೀ ರೇಖಾ ಆಗಲೀ ಡ್ರೈವರಿನ ಜೊತೆ ಏನೂ ಮಾತನಾಡಲಿಲ್ಲ. ಅವನೂ ನಮ್ಮನ್ನು ಏನೂ ಕೇಳಲಿಲ್ಲ. ಇಂದಿರಾಗಾಂಧಿ ಮ್ಯೂಸಿಯಮ್ಮಿನ ಮುಂದೆ ನಿಲ್ಲಿಸಿದಾಗ "ಆಪ್ ಕಾ ನಾಮ್?" ಎಂದೆ. ಆಗ ಶುರುವಾಯಿತು ಅವನ ಮಾತು. ದೆಹಲಿಯ ಡ್ರೈವರುಗಳೆಲ್ಲರೂ ಹರಟೆಮಲ್ಲರೇ ಎನ್ನಿಸಿತು. ನಾನು ಮಾತನಾಡಿಸಿದ್ದೇ ತಡ, ಪ್ರತಿಯೊಂದು ಜಾಗದ ಬಳಿಯೂ ಕರೆದೊಯ್ದು ಗೈಡುಗಳಿಗಿಂತಲೂ ಹೆಚ್ಚಾಗಿ ವಿವರಗಳನ್ನು ಕೊಡುತ್ತಿದ್ದ. ನಮಗೆ ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ ಅವನಿಗೆ ಬೇಕಾಗಿರಲಿಲ್ಲ.

ದೆಹಲಿಯ ಐಟಿಡಿಸಿ ಅಂಗಡಿಗೆ ಕರೆದುಕೊಂಡು ಹೋಗಿ ಸೀರೆ ಖರೀದಿಸಲು ಹೇಳಿದ. ಸೀರೆಯೇನೋ ಖರೀದಿಸಿದೆವು, ಅಂಗಡಿಯಲ್ಲಿ ಮೋಸ ಹೋದೆವೋ ಇಲ್ಲವೋ ಗೊತ್ತೇ ಇಲ್ಲ. ಹಾಗಾಗಿ ಅಷ್ಟು ಚಿಂತೆಯಿಲ್ಲ. ಅಂಗಡಿಯಿಂಡ ಹೊರ ಬಂದ ಮೇಲೆ ಏನೋ ಪ್ರಶ್ನೆ ಕೇಳಿದ ಡ್ರೈವರು. ನಾನು "ಓಹ್.. ಓಕೆ ಓಕೆ..." ಎಂದುಬಿಟ್ಟೆ. ಮತ್ತೆ ಅದನ್ನೇ ಕೇಳಿದ. ನಾನು ಪುನಃ "ಓಕೆ.." ಎಂದದ್ದು ಕೇಳಿ ಸುಮ್ಮನಾಗಿಬಿಟ್ಟ. ಆಮೇಲೆ ಸ್ವಲ್ಪ ಹೊತ್ತಾದ ಮೇಲೆ ರೇಖಾ "ಯಾವ ಸೀರೆ ತೊಗೊಂಡ್ರೀ ಅಂತ ಕೇಳಿದ್ದು ಅವನು" ಎಂದಾಗ ತಲೆ ಚಚ್ಚಿಕೊಂಡು ಏನೋ ಉತ್ತರಿಸಿದೆ. ಅವನು ಮುಗುಳ್ನಕ್ಕು, ಹಳೆಯ ಚಾಲಕನಂತೆಯೇ ಆಟೋದಲ್ಲಿ ರೈಲ್ವೇ ಸ್ಟೇಷನ್ನಿಗೆ ಹೇಗೆ ಹೋಗಬೇಕೆಂದು ಟಿಪ್ಸ್ ಕೊಟ್ಟು ಮರೆಯಾದನು. ನಾವು ಬೆಂಗಳೂರಿಗೆ ಬರುವಾಗ ಮತ್ತೊಂದು ವಿನೋದ ಘಟನೆ ನಡೆಯಿತು.

ರೈಲಿನಲ್ಲಿ ಉತ್ತರಭಾರತದ ವೃದ್ಧ ದಂಪತಿಗಳಿಬ್ಬರು ನಮ್ಮ ಕಂಪಾರ್ಟ್ಮೆಂಟಿನಲ್ಲೇ ಇದ್ದರು. ಸುಮಾರು ಇಪ್ಪತ್ತು ಬ್ಯಾಗುಗಳನ್ನು ತಂದಿದ್ದ ಅವರು ಎಲ್ಲ ಕಡೆಯೂ ಆವರಿಸಿಬಿಟ್ಟರು. ಒಂದೂಮುಕ್ಕಾಲು ದಿನ ಅವರು ಹೆಚ್ಚೇನೂ ಮಾಡಲಿಲ್ಲ. ದೊಡ್ಡ ಕವರೊಂದರಲ್ಲಿ ನೂರಾರು ಡೆಲ್ಲಿ ಸೌತೇಕಾಯಿ ಹಾಕಿಕೊಂಡು ಬಂದಿದ್ದನ್ನು ತಿನ್ನುತ್ತಿದ್ದರು. ಟೀ ಕುಡಿಯುತ್ತಿದ್ದರು. ಊಟ ಮಾಡುತ್ತಿದ್ದರು. ಪ್ರತಿಯೊಂದು ಸೇವನೆಯ ನಡುವೆಯೂ ನಿದ್ದೆ ಮಾಡುತ್ತಿದ್ದರು. ರೇಖಾ "ಏನು ಸಂಸಾರ ಮಾಡುತ್ತಾರೋ ಇವರು, ಬರೀ ನಿದ್ದೆ ಮಾಡ್ತಾರೆ.. ಕೂತ್ ಕೂತಲ್ಲಿ ಮಲಗುತ್ತಾರಲ್ಲ?" ಎಂದಳು. ಹೀಗೆ ಸಹಸ್ರಬಾರಿ ಕನ್ನಡದಲ್ಲಿ ಟೀಕೆ ಮಾಡಿದೆವು. ಆತ ನಮ್ಮ ಕಡೆ ತಿರುಗಿಯೂ ನೋಡಲಿಲ್ಲ. ಅವರವರೇ ಹಿಂದಿಯಲ್ಲೇ ಜೋರು ಜೋರಾಗಿ ಮಾತನಾಡಿಕೊಳ್ಳುತ್ತಿದ್ದರು. ಇದು ನಮಗೆ ಹಿಂಸೆಯಾಗುವಂತೆಯೂ ಇತ್ತು, ಹಾಸ್ಯಮಯವಾಗಿಯೂ ಇತ್ತು. ಬೋರಾಗುತ್ತಿದ್ದ ನಮಗೆ ಮನರಂಜನೆಗೆ ವಸ್ತುವೂ ಆಗುವಂತಿತ್ತು. ನಾವು ಬೈಯ್ಯುತ್ತಿದ್ದುದು ಅವರಿಗೆ ಸಲೀಸಾಗಿ ಕೇಳುವಂತಿತ್ತು. ಹೀಗೆ ಟೀಕಿಸುತ್ತಲೇ, ಅವರನ್ನು ಆಡಿಕೊಳ್ಳುತ್ತಲೇ, ದೊಡ್ಡಬಳ್ಳಾಪುರದವರೆಗೂ ಬಂದೆವು. ದೊಡ್ಡಬಳ್ಳಾಪುರದಲ್ಲಿ ಒಬ್ಬ ಹೆಂಗಸು ಹತ್ತಿಕೊಂಡಳು. ಖಾಲಿ ಜಾಗ ಇದ್ದುದರಿಂದ ನಮ್ಮ ಕಂಪಾರ್ಟ್ಮೆಂಟಿನಲ್ಲೇ ಕುಳಿತಳು. ಒಂದೈದು ನಿಮಿಷದ ನಂತರ ಆ ಉತ್ತರಭಾರತದ ಹಿಂದಿಯ ವ್ಯಕ್ತಿಯು "ಎಲ್ಲಿಂದ ಬರ್ತಿದ್ದೀಯಮ್ಮ?" ಎಂದು ಸ್ಪಷ್ಟ ಕನ್ನಡದಲ್ಲಿ ಮಾತನಾಡಿಬಿಟ್ಟರು! ನಾನು ಮತ್ತು ರೇಖಾ ಮುಖ ಮುಖ ನೋಡಿಕೊಂಡು ನಾಲಗೆ ಕಚ್ಚಿಕೊಂಡೆವು!!

ಅಂತೂ ಹಿಂದಿ ಬಾರದೆಯೇ ದೊಡ್ಡ ಪ್ರವಾಸವೊಂದನ್ನು ಮುಗಿಸಿಕೊಂಡು ಬಂದೆವು. ಇನ್ನು ಮುಂದಾದರೂ ಇನ್ನಷ್ಟು ಹಿಂದಿಯನ್ನು ಕಲಿಯಲು ಕೆಲಸ ಮಾಡಬೇಕು ನಾನು. ಅದು ರಾಷ್ಟ್ರಭಾಷೆಯೋ ಅಲ್ಲವೋ ಭಾಷೆ ಕಲಿಯುವುದು ಮುಖ್ಯ.

-ಅ
16.05.2009
12.45PM

15 comments:

 1. hehehehe!!! bombaaaat comedy!! idunna nam shuddatarle blog alli haakbekittu ansthu!
  "shuddatarles honeymoon express" anta title-u koTTu..
  ee article-u "saNdu" anta ansle illa!! alli irorgu entertainment koTTu neevu entertain aagi bandideera! :-)
  nice nice....

  ReplyDelete
 2. ಇದಕ್ಕಂತಾರಪ್ಪ ಸಾಹಸ ಎಂದು!

  ReplyDelete
 3. ಇಲ್ಲೂ ಸಾಹಸವೆ?! ನಿಮ್ಮ ಜೀವನದಲ್ಲಿ ಸಾಹಸವಿಲ್ಲದೆ ಏನೂ ಆಗುದಿಲ್ವೆನೋ. ಲಕ್ಕಿ!

  ReplyDelete
 4. ಚೆನ್ನಾಗಿ ಬರೆದಿದ್ದೀರಿ. ಹೇಗೋ ಒಟ್ಟಲ್ಲಿ ಸಾಹಸಮಯ ಪ್ರವಾಸ ಅಗಿದೆ. ಫೋಟೋಗಳು ತುಂಬಾ ಚೆನ್ನಾಗಿವೆ.

  ReplyDelete
 5. chennagi bareeteeri neevu....

  ReplyDelete
 6. hindi kaltidre ninge ee maja sigtirlilla... ;-)

  chennagide nimma comedy valase..

  ReplyDelete
 7. yavaglo nalku sala hogtivi anta agatya ildidrU hindi kaltidre ee maja sigtitta? both namgu nimgu :)

  ReplyDelete
 8. aa taj mahal avanige das das annodu chennaagittu. haasya.

  ReplyDelete
 9. naanu train nalli yaar melooo kanadadalli comment maadlilla .... hordokke munche nin episode kelidnalla ... haagagi hushaaragi idde :-)

  ReplyDelete
 10. [ವಿಜಯಾ] ನಾನೂ, ಶ್ರೀಕಾಂತನೂ, ಶ್ರೀನಿವಾಸನೂ ಸಂಸ್ಕೃತ ಭಾಷಯನ್ನು ಕಲೀತಾ ಇರೋದು ಒಳ್ಳೆಯದಕ್ಕೇ. ಸಹಾಯವಾದೀತು.

  [ಹರೀಶ್ ಭಾಯ್] ಅದು ಗಿಣಿ ಪಾಠ. ಅರ್ಥಾತ್ ಗಿಣಿ ಹಾಸ್ಯ.

  [ವಿಕಾಸ್] ಅದೂ ಸರೀನೇ. ಮುಂದಿನ ಪ್ಲ್ಯಾನು ಅಂಡಮಾನ್‍ಗೆ. ತಮಿಳು ಬರುವುದಿಲ್ಲ. ಅಲ್ಲಿ ಏನಾಗುತ್ತೋ ನೋಡಬೇಕು.

  [ಶ್ರೀಧರ] ಅದೊಂಥರಾ ಕಾಮಿಡಿ ಥ್ರಿಲ್ಲರ್ ಟ್ರ್ಯಾಜಿಕ್ ಅಡ್ವೆಂಚರಸ್ ಆಕ್ಷನ್ ರೊಮ್ಯಾಂಟಿಕ್ ಟ್ರಿಪ್ಪು.

  [ಆನನ್ (ಹೆ ಹ್ಹೆ..)] ಧನ್ಯವಾದಗಳು, ಇವ್ರೇ.

  [ಮನಸು] ಒಳ್ಳೇ ಸಾಹಸ. ಎಲ್ಲ ಫೋಟೋಗಳನ್ನು ನೋಡಿದಿರಾ? ಧನ್ಯವಾದಗಳು.

  [ರಾಜೇಶ್ ನಾಯ್ಕ] ಹುಟ್ಟು ಗುಣ ಸುಟ್ರೂ ಹೋಗಲ್ಲ ಅಂತಾರೆ ನೋಡಿ.

  [ಸುನಾಥ್] ನೋಡಿ ಹೇಗಿದೆ ವಿಧಿಲೀಲೆ.

  ReplyDelete
 11. [ಡೈನಮಿಕ್] ಸಾರಿ, ರಿಪ್ಲೈ ಮಾಡೋದು ಮರೆತು ಹೋಯಿತು. ನಿನ್ ಕರ್ಮ.

  ReplyDelete
 12. This comment has been removed by the author.

  ReplyDelete
 13. Hindi illade ODaadodu irli... intha besigeyalli hodralla uttharakke, mechchde...

  "raaj"bhaashegu, "raashtra"bhaashegu vethyaasa thiLeede iro ollparigenu maadodu heLi....

  (melindu nannade post aagiththu, adyeno hesarirodrinda, thegedbitto, nammappa amma ittid hesarna haakide)

  ReplyDelete
 14. ಲೋ! ನಿನಗೆ ಹಿಂದಿ ಬರೊಲ್ಲ ಅಂದ್ರೆ ನನಗೆ ಆಶ್ಚರ್ಯ ಆಗುತ್ತೆ.. ನನಗೆ ಎಲ್ಲ ಹಿಂದಿ ಹಾಡುಗಳ್ನ ಕನ್ನಡಕ್ಕೆ ಭಾಷಾಂತರಿಸಿ ಹೇಳ್ತಿದ್ಯಲ್ಲೋ! ಎಲ್ಲಾ ಸುಳ್ಳಾ? ಎಲ್ಲಾ ಮರ ಹತ್ತಿಸಿದ್ದಾ? ಥು ನಿನ್ನ... ಅಲ್ಲ ಅಲ್ಲ.. ಥು ನನ್ನ (ನಿನ್ ಮಾತು ನಂಬಿದ್ದಕ್ಕೆ) :D

  ಅಂದ ಹಾಗೆ, ಬಹಳ ಕಾಲದ ನಂತರ ನಿನ್ನ ಈ ಸುದೀರ್ಘ ಲೇಖನ ಓದಿ ಖುಷಿಯಾಯಿತು.. ಅದಕ್ಕಿಂತ ಹೆಚ್ಚಾಗಿ ಈ ನಡುವೆ ಇಷ್ಟು ದೊಡ್ಡ ಲೇಖನಗಳನ್ನ ಓದಿಲ್ಲವಾದ್ದರಿಂದ ಸ್ವಲ್ಪ ಹೆಚ್ಚು ಸಮಯವೂ ಹಿಡಿಸಿತು... :D
  ಆ ಟ್ರೆಕ್ಕೇಶ್ವರ-ಸಾಹಸೇಶ್ವರಿ ದಂಪತಿಗಳು ನಿಮಗೆ (ದಂಪತಿಗಳಿಗೆ) ಅನಂತಕಾಲಕ್ಕೂ ಜೀವನ ಸಾಹಸಮಯವಾಗಿರುವ ಹಾಗೆ ಅನುಗ್ರಹ ಮಾಡಲಿ ಅಂತ ಆ ಟ್ರೆ-ಸಾ ದಂಪತಿಗಳ ನಿಯಾಮಕನಲ್ಲಿ ಕೇಳ್ಕೋತೀನಿ (ಒಳ್ಳೇ ಸೀತಾರಾಮ್ ತನ್ನ ಸೀರಿಯಲ್ಲಲ್ಲಿ 'ಇವರಿಗೆ ಹೀಗಾಗಬೇಕು ಅಂತ ಕೇಳ್ಕೋತೀನಿ ಯುವರಾನರ್..' ಅಂದ ಹಾಗೆ) :-)

  ReplyDelete
 15. ಬಹಳ ಚೆನ್ನಾಗಿದೆ, ಆದರೆ ಸಾಹಸ ಸಾಲದು. ಇನ್ನೂ ಹೆಚ್ಚಿನ ಸಾಹಸ ಬೇಕಾದರೆ ಪಕ್ಕದ ತಮಿಳುನಾಡಿಗೆ ಹೋಗಿ. ಜೊಗೆತೆ ನಾನು, ಶ್ರೀನಿವಾಸ, ಶ್ರೀಧರ ಇತ್ಯಾದಿಗಳೂ ಬರುತ್ತೇವೆ... ಮಜಾ ನೋಡಕ್ಕೆ

  [ವಿ.ಸೂ. - ಶ್ರೀನಿವಾಸನ ಬಾಯಿಗೆ ಬಟ್ಟೆ ಕಟ್ಟದಿದ್ದರೆ ಸಾಹಸವೇನೂ ಇರುವುದಿಲ್ಲ]

  ReplyDelete