Tuesday, June 30, 2009

ಕನಸಲೂ ನೀನೆ

ಕನಸಲ್ಲಿ ಹೆಣ ನೋಡಿದರೆ ಹಣ ಸಿಗುತ್ತಂತೆ. ಹೀಗೊಂದು ನಂಬಿಕೆ. ನಂಬಿಕೆಗಳಿಗೇನು, ಕೋಟ್ಯಂತರವಿದೆ! ಹೆಣದ ಬಗ್ಗೆಯೇ ಯೋಚಿಸುತ್ತಿರುವಾಗ ಹೆಣದ ಕನಸಲ್ಲದೆ ಇನ್ನೇನು ಬೀಳುತ್ತೆ ಎಂದು ಹೇಳಿ ತಪ್ಪಿಸಿಕೊಳ್ಳಬಹುದು. ಹಾಗೆಂದ ಮಾತ್ರಕ್ಕೆ, ನಾವು ಏನು ಯೋಚಿಸುತ್ತಿದ್ದೇವೋ ಅದರ ಕನಸೇ ಬೀಳುವುದೇ? ಸುಪ್ತ ಮನಸ್ಸಿನಲ್ಲಿರುವುದು ಕನಸಿನ ಪರದೆಯ ಮೇಲೆ ಬರುವುದು ಎಂದು ಮನಸ್‍ಶಾಸ್ತ್ರ ಹೇಳಿದರೆ ಕನಸೆಂಬುದು ವಾಸನಾಬಲದ ಪ್ರತಿಫಲವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ. ಅದೇನೇ ಆಗಲಿ. ಇಂತಿಂಥ ಕನಸು ಬಿದ್ದರೆ ಇಂತಿಥದ್ದು ಆಗುತ್ತೆ ಎಂಬ ನಂಬಿಕೆಯೂ ಹೇಗೋ ಬಂದುಬಿಟ್ಟಿದೆ. ಬೆಳಗಿನ ಜಾವದ ಕನಸು ನಿಜವಾಗುತ್ತೆಂದು ಹೇಳುವುದಿಲ್ಲವೇ? ಇವತ್ತು ಬೆಳಿಗ್ಗಿನ ಕನಸಿನಲ್ಲಿ ಹುಲಿಯೊಂದರ ಮೇಲೆ ಕುಳಿತು ಸವಾರಿ ಮಾಡುತ್ತಿದ್ದು, ಅದು ಇದ್ದಕ್ಕಿದ್ದ ಹಾಗೆ ಮೊಸಲೆಯಾಗಿ ಪರಿವರ್ತನೆಯಾಗಿದ್ದು, ನಾನು ಅದರ ಬೆನ್ನಿನಿಂದ ಥಟ್ಟನೆ ಕೆಳಗಿಳಿದು ಶಾಲೆಗೆ ಹೋಗಿ ಕನ್ನಡ ಪಾಠ ಮಾಡುತ್ತಿದ್ದುದು ಎಲ್ಲವೂ ನಿಜವಾಗಿಬಿಟ್ಟರೆ ಹೇಗೆಂದು ನಗು ಬರುತ್ತೆ.

ಕೆಟ್ಟ ಕನಸು ಬೀಳದೇ ಇರಲೆಂದು ಚಿಕ್ಕವನಿದ್ದಾಗ ಅಮ್ಮ ’ರಾಮಂ ಸ್ಕಂದಂ ಹನುಮಂತಂ’ ಹೇಳಿಕೊಡುತ್ತಿದ್ದರು. ಮಲಗುವ ವೇಳೆ ಒಳ್ಳೆಯದನ್ನು (ಅಂದರೆ ದೇವರ ನಾಮವನ್ನು) ಸ್ಮರಿಸಿದರೆ ಒಳ್ಳೆಯ ಕನಸು ಬೀಳುತ್ತೋ ಇಲ್ಲವೋ ಕೆಟ್ಟ ಕನಸಂತೂ ಬೀಳುವುದಿಲ್ಲವೆಂಬ ಮುಗ್ಧ ನಂಬಿಕೆ. ಆದರೆ ರಾಮನನ್ನು ಸ್ಕಂದನನ್ನು ಭೀಮನನ್ನು ನೆನೆಸಿಕೊಂಡು ಮಲಗಿದಾಗಲೂ ಕೆಟ್ಟ ಕ್ರೂರ ಕಠೋರ ಕನಸುಗಳು ಬಿದ್ದುದುಂಟು. ಕನಸಿನಲ್ಲಿ ಹಾವು ಬರುವುದಕ್ಕಿಂತ ಕೆಟ್ಟ ಕನಸ್ಸು ಬೇಕೆ? ಅಕಟಕಟಾ!

ಹಾವೇನಾದರೂ ಕನಸಿನಲ್ಲಿ ಬಂದರೆ ಏನೇನೋ ಶಾಂತಿ ಗೀಂತಿ ಮಾಡಿಸಿಕೊಳ್ಳಬೇಕಂತೆ. ಮೊದಲು ನನಗೆ ಭಯವಾಗುತ್ತಿತ್ತು ಕನಸಿನಲ್ಲಿ ಹಾವು ಬಂದರೆ. ಪೂಜೆ ಪುನಸ್ಕಾರ, ಸಂಧ್ಯಾವಂದನೆ, ದೇವರು ದಿಂಡಿರನ್ನೆಲ್ಲ ಪರಮಸತ್ಯವೆಂದು ನಂಬುತ್ತಿದ್ದ ಕಾಲದಲ್ಲಿ ಅವುಗಳ ಜೊತೆಗಿನ್ನೊಂದಿಷ್ಟು ಮೂಢನಂಬಿಕೆಗಳನ್ನೂ ಸಹ ರೂಢಿಸಿಕೊಂಡಿದ್ದೆ. ಬೆಕ್ಕು ಅಡ್ಡ ಹೋಗುವ ದುರದೃಷ್ಟ ಸಂದರ್ಭದಿಂದ ಹಿಡಿದು ಕನಸಿನಲ್ಲಿ ಹಾವು ಬರುವ ಪಾಪದಂತಹ ನಂಬಿಕೆಗಳು. ಕಾಳ ಸರ್ಪದೋಶವಿರದೆ ಇದ್ದಿದ್ದರೆ ಹಾವು ಕನಸಿನಲ್ಲಿ ಬರುತ್ತಿತ್ತೇ? ನಾನು ಹೋದ ಜನ್ಮದಲ್ಲಿ ಹಾವು ಕೊಂದಿರಬೇಕು! ಅಥವಾ ಸರ್ಪಸಂಭೋಗವನ್ನು ಕಣ್ಣಾರೆ ನೋಡಿರಬೇಕು. (ಈ ಜನ್ಮದಲ್ಲೂ ಅನೇಕ ಸಲ ನೋಡಿದ್ದೇನೆ.) ಇದರಿಂದ ನನಗೆ ’ಈ ಜನ್ಮದಲ್ಲಿ’ ತೊಂದರೆ ತಪ್ಪಿದ್ದಲ್ಲ. ಎಲ್ಲ ರೀತಿಯ ಸಂಕಷ್ಟಗಳೂ ನನ್ನದಾಗುತ್ತೆ. ಹೀಗೆಲ್ಲ ಹೆದರಿಸಿದ್ದರು. ನಾನು ಹೆದರಿದ್ದೆ.

ಯಾರ ಸುಪ್ತ ಮನಸ್ಸು ಸದಾ ಯಾವುದರಿಂದ ತುಂಬಿರುತ್ತೋ ಅದೇ ಕನಸಾಗಿ ಬರುತ್ತೆಂದು, ಕೆಲವೊಮ್ಮೆ ಎಚ್ಚರವಾಗಿದ್ದಾಗಲೂ ’ಭ್ರಮೆ’ಯ ರೂಪದಲ್ಲಿ ಕಾಣಿಸುತ್ತೆಂದು ಕನಸಿನ ಬಗ್ಗೆ ಅದ್ಭುತ ಚಿಂತನೆಯನ್ನು ನಡೆಸಿದ ಸಿಗ್ಮಂಡ್ ಫ್ರಾಡ್ ಹೇಳುತ್ತಾನೆ. ನನ್ನ ಸರ್ಪಪ್ರೇಮ ಶುರುವಾದಾಗಿನಿಂದಲೂ ನಾನು ಒಬ್ಬ ಉರಗತಜ್ಞನಾಗಬೇಕೆಂಬ ಹಂಬಲ, ಮತ್ತು ಆ ನಿಟ್ಟಿನಲ್ಲಿ ನಾನು ಓದುತ್ತಿದ್ದ ಪುಸ್ತಕಗಳು, ಟಿ.ವಿ.ಯಲ್ಲಿ ನೋಡುತ್ತಿದ್ದ ಕಾರ್ಯಕ್ರಮಗಳು, ಚರ್ಚಿಸುತ್ತಿದ್ದ ವಿಷಯಗಳು, ಸಂಪರ್ಕಿಸುತ್ತಿದ್ದ ಜನರು, ಬಹುಪಾಲು ಹಾವಿಗೆ ಸಂಬಂಧ ಪಟ್ಟಿರುವುದೇ. ಕನಕದಾಸರಿಗೆ ಕನಸಿನಲ್ಲಿ ಕೃಷ್ಣ ಬಂದು ’ನೀನು ಕನಕದಾಸನಾಗು’ ಎಂದು ಹೇಳಲಿಲ್ಲವೇ?

ನಿದ್ದೆಯಲ್ಲೇ ಏನು, ಅನೇಕ ಸಲ ಎಚ್ಚರವಾಗಿದ್ದಾಗಲೂ ನಮಗೆ ’ಕನಸು’ ಬೀಳುತ್ತೆ. ಮನಸ್ಸು ತುಂಬ involve ಆಗಿದ್ದಾಗ ಹೀಗಾಗುವುದು ಸರ್ವೇಸಾಮಾನ್ಯವಷ್ಟೆ. ಅತ್ತೆ ತೀರಿಕೊಂಡ ಹೊಸತು. ನಾನು ಕಂಪ್ಯೂಟರಿನ ಮುಂದೆ ಕುಳಿತು ಏನೋ ಹುಡುಕಾಟ ಮುಗಿಸಿಕೊಂಡು ನನ್ನ ಕೋಣೆಯಿಂದ ಎದ್ದು ಹಾಲ್‍ಗೆ ಹೋದೆ. ಅಡುಗೆಮನೆಯಿಂದ ’ಅರುಣ್..’ ಎಂಬ ಕೂಗು ಕೇಳಿಸಿದಂತಾಯಿತು, ಅತ್ತೆ ಕರೆದಂತೆ! ನಾನು ತಲೆಕೆಡವಿಕೊಂಡು ’ಒಳ್ಳೇ ಭ್ರಮೆ’ ಎಂದು ನಕ್ಕು ಮತ್ತೆ ರೂಮೊಳಕ್ಕೆ ಹೋದೆ. ಮನುಷ್ಯನ ಮನಸ್ಸು ಎಷ್ಟು ಶಕ್ತಿಶಾಲಿಯೋ ಅಷ್ಟೇ ದುರ್ಬಲ ಕೂಡ. ಸಂದರ್ಭಗಳು ಮನಸ್ಸನ್ನು ಹೇಗೆ ಬೇಕೋ ಹಾಗೆ ತಿರುಗಿಸಿ, ನಮಗೆ ಏನು ಬೇಕೋ ಅದನ್ನು ತೋರಿಸಿಬಿಡುತ್ತೆ. Hallucination! ಹಿಂದಿನ ಅನೇಕ ಮಹಾ ಮಹನೀಯರುಗಳಿಗೆಲ್ಲ ಕುದುರೆಯಾಗಿ, ಕಾಳಿಯಾಗಿ, ಹುಡುಗನಾಗಿ, ಮರವಾಗಿ, ಏನೇನೆಲ್ಲವಾಗಿ ದೇವರು ಕಾಣಿಸಿಕೊಂಡಿಲ್ಲವೇ? ಅದೇ ರೀತಿ ಕೋಟ್ಯಂತರ ಜನಕ್ಕೆ ದೆವ್ವ ಭೂತ ಪಿಶಾಚಿಗಳು ಬೆಂಕಿಯ ಸುತ್ತ ಕುಣಿಯುವಂತೆ, ಹುಣಸೆ ಮರದಲ್ಲಿ ನೇತಾಡುವಂತೆ, ಕಾಲು ಹಿಂದುಮುಂದು ಮಾಡಿಕೊಂಡಿರುವಂತೆ ಹೇಗೆ ಹೇಗೋ ವಿಕಾರವಾದ ರೂಪದಲ್ಲೆಲ್ಲಾ ಕಾಣಿಸಿಕೊಂಡಿಲ್ಲವೇ? ಇನ್ನು ನನ್ನದೇನು ಮಹಾ! ಒಂದು ಧ್ವನಿಯಷ್ಟೆ!

ಕನಸಿನ ಬಗ್ಗೆ ನಾನು ಏನೇನನ್ನೂ ಅಧ್ಯಯನ ಮಾಡಿಲ್ಲವಾದ್ದರಿಂದ ನನಗೆ ಅದರ ಬಗ್ಗೆ ಮಾತನಾಡುವ ಅರ್ಹತೆಯಿಲ್ಲ. ಆದರೆ ಅದು ವಾಸನಾಬಲ, ಹಿಂದಿನ ಜನ್ಮ ಮುಂದಿನ ಜನ್ಮದ ಸೂಚಿಯೆಂದರೆ ನಂಬುವಂತಹ ಅಪ್ರಬುದ್ಧನಂತೂ ಅಲ್ಲ. ಕನಸೆಂಬ ಪ್ರಕೃತಿಯ ವಿಸ್ಮಯಕ್ಕೆ ಬೆರಗನ್ನು ವ್ಯಕ್ತಪಡಿಸಿ ನಮಿಸುತ್ತೇನೆ.

ಶುಭಸ್ವಪ್ನಪ್ರಾಪ್ತಿರಸ್ತು!

-ಅ
30.06.2009
11PM

Friday, June 19, 2009

ನಾ ಸಖನು ನಿನಗೆ

ಹೂವರಳಿ ಖಗವುಲಿದು
ಬಾಳು ರಂಗೆನುವ
ಸಂತಸದ ಶಿಖರಕ್ಕೆ
ನಾ ಸಖನು ನಿನಗೆ;
ಹೂ ಬಾಡಿ ಮುದುರಲೆನಿತು ಬಾಳು?
ತೊಳಲ ಹೊನಲಿಗೆ
ಇರುಳ ಪಾತಾಳಕ್ಕೆ
ನಾ ಸಖನು ನಿನಗೆ!

-ಅ
19.06.2009
10PM

Sunday, June 14, 2009

ತುಂಬಿದ ಕೊಡ ತುಳುಕುವುದೇ?

"ತುಂಬಿದ ಕೊಡ ತುಳುಕುವುದೇ?"

ಯಾರು ಯಾರಿಗೆ ಹೇಳಿದರು? ಸಂದರ್ಭ ಸಹಿತ ವಿವರಿಸಿ. ---------------------------------- ೪ ಅಂಕಗಳು.

ಈ ಮಾತನ್ನು 'ಅರುಣ್' ಅವರು ತಮಗೆ ತಾವೇ ಹೇಳಿಕೊಂಡರು.

ಬಸವನಗುಡಿಯ ಕಾಮತ್ ಬ್ಯೂಗಲ್ ರಾಕಿನಲ್ಲಿ ತಮ್ಮ ತಾಯಿಯ ವೀಣೆ ಕಚೇರಿ ಮುಗಿದ ನಂತರ ಊಟಕ್ಕೆ ಕುಳಿತಿದ್ದಾಗ ಮೃದಂಗ ಮತ್ತು ಖಂಜರ ಕಲಾವಿದರೊಡನೆ ಮಾತನಾಡುತ್ತಿದ್ದಾಗ ಅರುಣ್ ಅವರಿಗೆ ಈ ಮಾತು ಹೇಳಿಕೊಳ್ಳುವ ಪ್ರಚೋದನೆಯಾಯಿತು. ಮೃದಂಗ ವಿದ್ವಾನ್ ವೆಂಕಟೇಶ್ ಅವರು "ಅರುಣ್ ಅವರ ಬಳಿ ಸಾಕಷ್ಟು ಶಾಸ್ತ್ರೀಯ ಸಂಗೀತದ MP3 ಇದೆ!" ಎಂದು ಖಂಜರ ವಿದ್ವಾನ್ ಭಾರ್ಗವ ಅವರಿಗೆ ಹೇಳಿದ್ದನ್ನು ಕೇಳಿ ವಿದ್ವಾನ್ ಭಾರ್ಗವ ಅವರು "ಓಹ್, ನಾನು ಒಂದು ಸಲ ನಿಮ್ಮ ಮನೆಗೆ ಬರುತ್ತೇನೆ, ನನಗೆ ಬೇಕಾಗಿರುವುದನ್ನು copy ಮಾಡಿಕೊಳ್ಳುತ್ತೇನೆ" ಎಂದರು. ಜೊತೆಗೆ, "ಎಷ್ಟಿದೆ?" ಎಂದು ಕೇಳಿದಾಗ ಅರುಣ್ ಅವರು "ಸುಮಾರು ಇಪ್ಪತ್ತು ಜಿ.ಬಿ." ಎಂದು ಹೆಮ್ಮೆಯಿಂದ, ಗರ್ವದಿಂದ ಅಕ್ಕಪಕ್ಕದವರಿಗೂ ಕೇಳುವಂತೆ ಹೇಳಿದರು. ಇದನ್ನು ಕೇಳಿದೊಡನೆಯೇ ಭಾರ್ಗವ ಅವರು ಬೆಕ್ಕಸ ಬೆರಗಾದವರಂತೆ ನಟಿಸಿ, "ಅದ್ಭುತ! ಹಾಗಾದರೆ ಬಂದೇ ಬರುತ್ತೇನೆ" ಎಂದು ಅರುಣ್‍ರವರ ಗರ್ವವನ್ನು ಹೆಚ್ಚಿಸಿದರು.

ಕೂಡಲೇ ಹಿಗ್ಗಿದ ಅರುಣ್ ಅವರು "ಖಂಡಿತ ಬನ್ನಿ" ಎಂದು, ಭಾರ್ಗವರಂತಹ ವಿದ್ವಾಂಸರು ತಮ್ಮಲ್ಲಿರುವ MP3ಗಳನ್ನು ಯಾಚಿಸುತ್ತಿದ್ದಾರೆಂಬ ಭಾವನೆಯಿಂದ ತಮ್ಮ ಹೆಮ್ಮೆಯನ್ನು ಇಮ್ಮಡಿಸಿಕೊಂಡದ್ದನ್ನು ಕಂಡ ವೆಂಕಟೇಶ್ ಅವರು "ಭಾರ್ಗವರ ಹತ್ತಿರವೂ ಸಾಕಷ್ಟು ಇದೆ." ಎಂದರು. ಅರುಣ್ ಅವರು ಕುತೂಹಲಕಾರಿಯಾಗಿ "ಓಹೋ, ಎಷ್ಟಿದೆ?" ಎಂದು ಕೇಳಿದ್ದಕ್ಕೆ ಭಾರ್ಗವ ಅವರು "ಹೆಚ್ಚೇನಿಲ್ಲ, ಏಳುನೂರು ಜಿ.ಬಿ. ಇದೆ ಅಷ್ಟೆ!" ಎಂದರು.

ಈ ಮಾತನ್ನು ಕೇಳಿದ ಅರುಣ್ ಅವರು ಕಕ್ಕಾಬಿಕ್ಕಿಯಾಗಿ, ಮುಖಭಂಗವಾಗಿಸಿಕೊಂಡು, empty vessels make more noise ಎಂಬ ಆಂಗ್ಲ ಗಾದೆಯನ್ನು ನೆನೆದು, ಕನ್ನಡದಲ್ಲಿ "ತುಂಬಿದ ಕೊಡ ತುಳುಕುವುದೇ?!" ಎಂದು ತಮ್ಮ ಮನಸ್ಸಿನಲ್ಲಿ ತಾವೇ ಅಂದುಕೊಂಡರು.

______________________________________________________________________________________

-ಅ
14.06.2009
9PM

Wednesday, June 10, 2009

ಹೊಸಕಬೇಕಿದೆ ಕೀಟವನ್ನು

ಹೊಸಕಬೇಕಿದೆ ಕೀಟವೊಂದನು
ರೋಗವಂಟುವ ಮೊದಲು.
ಕೀಟವಿದು ಸಾಮಾನ್ಯವಲ್ಲವೊ
ಹೂವ ರೂಪದ ಸಿಡಿಲು.

ಮಲದ ಮೇಲಿನ ನೊಣವೆ ಚೆಲುವೆಲೊ
ಮಲವುಣ್ಣುವ ಹಂದಿಯು!
ಮನುಜ ಕ್ರೂರವನ್ನೂ ಮೀರಿ
ಬಳಲಳಲೆಲ್ಲ ಮಂದಿಯು!

ಹೊಸಕಬೇಕಿದೆ ಕೀಟವೊಂದನು
ಕರುಣೆಯನ್ನು ತೋರದೆ.
ವಿಷದ ತರುವ ಮೊಳಕೆ ಚಿವುಟು
ಮಿತಿಯನೆಂದು ಮೀರದೆ.

ಕೊಚ್ಚಿ ಹೋಗಲಿ ಕೊಚ್ಚೆಯೊಳಗಡೆ
ಇಂಥ ಕೀಟವೆಲ್ಲವೂ.
ಸ್ವಚ್ಛ ಬದುಕದು ಬಡಿಗೆಯಿಂದಲೆ
ಎನುವ ಮಾಟವೆಲ್ಲವೂ.
ಚೆಲುವ ಬದುಕಿಗೆ ಚೆಲುವು ಎಲ್ಲವು
ಎದುರು ನೋಟವೆಲ್ಲವೂ!

-ಅ
11.06.2009
9PM

Thursday, June 4, 2009

ಇಂದಿನ ಭವಿಷ್ಯ

ಆರ್ಕುಟ್‍ನಲ್ಲಿ ನನ್ನ -
ಇಂದಿನ ಭವಿಷ್ಯ: ಇಂದು ಯಾರಿಗಾದರೂ ಏನನ್ನಾದರೂ ಒಳ್ಳೆಯದನ್ನು ಮಾಡಿ!

ಇದೆಂಥ ಭವಿಷ್ಯ? ಇದೇನು ಭವಿಷ್ಯವೋ ಆದೇಶವೋ? ಅಲ್ಲ, ಈ ಮಾತಿನ ಅರ್ಥ ಇಂದು ಮಾತ್ರ ಒಳ್ಳೇದು ಮಾಡಬೇಕೇ? ಅಥವಾ 'ಇಂದಾದರೂ ಒಳ್ಳೇದು ಮಾಡಿ ಸಾಯಿ, ಮಗನೆ...' ಎಂದೋ? ಅಥವಾ ಇಂದು ನಿನಗೆ ಕೆಲಸ ಇರುವುದಿಲ್ಲ, ಯಾರನ್ನಾದರೂ ಹುಡುಕಿಕೊಂಡು ಹೋಗಿ ಏನನ್ನಾದರೂ ಒಳ್ಳೆಯದನ್ನು ಮಾಡು, ಅವರಿಗೆ ಒಳ್ಳೇದು ಅನ್ನಿಸುವಂಥದ್ದು! ಕುಡುಕನಿಗೆ ಹೆಂಡ ಕೊಡಿಸಿದರೆ ಅವನಿಗೆ ನಾನು ಒಳ್ಳೆಯವನು!!

ಆರ್ಕುಟ್‍ನಲ್ಲಿ ಇಂಥ ಭವಿಷ್ಯಗಳು ಒಳ್ಳೇ ಮನರಂಜನಾಕಾರಿಯಾಗಿರುತ್ತವೆ. ಇದನ್ನು ನೆಚ್ಚಿಕೊಳ್ಳುವವರೂ ಇರುತ್ತಾರೆಂದು ನಾನು ಶತಾಯಗತಾಯ ಒಪ್ಪುವುದಿಲ್ಲ. ಇದನ್ನು ನೆಚ್ಚಿಕೊಂಡು ತಲೆಗೆ ಹಚ್ಚಿಕೊಳ್ಳುವವರಿಗಿಂತ ತಲೆ ಚಚ್ಚಿಕೊಳ್ಳುವವರೇ ಹೆಚ್ಚು! ಆದರೆ ಪತ್ರಿಕೆಗಳಲ್ಲಿ ಬರುವ ದಿನ ಭವಿಷ್ಯವನ್ನು ನೆಚ್ಚಿಕೊಳ್ಳುವವರು ಸಾಕಷ್ಟು ಜನ ಇದ್ದಾರೆ. ನಮ್ಮ ಮನೆಯಲ್ಲಿಯೇ ಇದ್ದಾರೆ! ನಾನೂ ಈ ದಿನಭವಿಷ್ಯವನ್ನು ನೋಡುತ್ತೇನೆ. ಪತ್ರಿಕೆಯ ಪುಟಗಳನ್ನು ತಿರುವು ಹಾಕಿದಾಗ, ನಾನು ಇವೆಲ್ಲ ಯಾವುದನ್ನೂ ನಂಬದೇ ಇದ್ದರೂ ಕಣ್ಣುಗಳಿಗೆ ಈ ದಿನಭವಿಷ್ಯದ ಕಡೆ ಏನೋ ಆಕರ್ಷಣೆ. ಇವತ್ತು ಆ 'ಗಡ್ಡದ ಜ್ಯೋತಿಷಿ ಏನು ಬರೀತಾನೆ? ಏನು ಬುರುಡೆ ಹೊಡೀತಾನೆ ನೋಡೋಣ' ಎಂದು ಮೇಲ್ನೋಟಕ್ಕೆ ಹೇಳಿದರೂ ಒಳಮನಸ್ಸು 'ಇಂದಿನ ದಿನ ಚೆನ್ನಾಗಿದೆಯಾ?' ಎಂಬುದನ್ನೇ ಅರಸುತ್ತಿರುತ್ತೆ. ನನ್ನ ದಿನ ಚೆನ್ನಾಗಿದೆಯೋ ಇಲ್ಲವೋ, ಚೆನ್ನಾಗಿರುತ್ತೋ ಇಲ್ಲವೋ ಎಂಬುದನ್ನು ಕಾಣದ ಸ್ಥಳದಲ್ಲಿ ಕುಳಿತು ಹೇಳಲು ಆ 'ಗಡ್ಡದ ಜ್ಯೋತಿಷಿ'ಯೇನು ಮಾಂತ್ರಿಕನೇ? ಬರೀ ನನ್ನ ದಿನವಲ್ಲ, ಧನುಸ್ಸು ರಾಶಿಯವರ ಎಲ್ಲರ ದಿನವನ್ನೂ ಒಂದೇ ವಾಕ್ಯದಲ್ಲಿ 'ಇದಮಿತ್ಥಮ್' ಎಂದು ಹೇಳಿ ಅನ್ಯಾಯವಾಗಿ ಪತ್ರಿಕೆಯಲ್ಲಿ ಎಷ್ಟೊಂದು ಸ್ಥಳವನ್ನು ವ್ಯರ್ಥ ಮಾಡುತ್ತಾನಲ್ಲ, ಮತ್ತು ಎಷ್ಟೊಂದು ಜನರ ತಲೆಯೊಳಗೆ ಹುಳು ಹೊಗಿಸುತ್ತಾನಲ್ಲ!!

ಬೆಳಗೆರೆಯವರ ಒಂದು ಅಂಕಣದಲ್ಲಿ ಓದಿದ್ದ ನೆನಪು. ಆತ ಸಂಯುಕ್ತ ಕರ್ನಾಟಕದಲ್ಲಿದ್ದಾಗಲೋ ಅಥವಾ ಪ್ರಜಾವಾಣಿಯಲ್ಲಿದ್ದಾಗಲೋ ಏನೋ, ಅನೇಕ ಸಲ ಪ್ರಕಟವಾಗುವ ಸಮಯ ಬಂದಿದ್ದರೂ ಜ್ಯೋತಿಷ್ಯ ಕಾಲಮ್ಮು ಇನ್ನೂ ಬಂದಿರದ ಕಾರಣ ತಾವೇ ಬರೆದು ಪ್ರಕಟಿಸಿದ್ದರಂತೆ. ಆತ ಬರೆಯುತ್ತಾರೆ, ಮೀನವನ್ನು ಮೇಷಕ್ಕೆ, ಮಿಥುನವನ್ನು ಧನುಸ್ಸಿಗೆ ಹಾಕಿ ಭವಿಷ್ಯವನ್ನು ಬರೆದಿದ್ದೆ ಎಂದು. ಆ ರೀತಿ ಎಷ್ಟು ಪತ್ರಿಕೆಗಳಲ್ಲಿ ಆಗಬಹುದು!ದುರಂತವೆಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೇ ಹೋದರೂ ಈ ರೀತಿ ರಾಶಿಯನ್ನನುಸರಿಸಿ ಬರೆಯುವ ದಿನಭವಿಷ್ಯಗಳು work ಆಗುವುದಿಲ್ಲ ಎಂಬುದು ಸತ್ಯವಷ್ಟೆ. ಹಾಗೊಮ್ಮೆ ಅದು ಸತ್ಯವಾದರೂ ಆ ರಾಶಿಯವರಿಗೆಲ್ಲರಿಗೂ 'ಮಗಳಿಗೆ ಮದುವೆ' ಆಗದೇ ಇರುವ ಕಾರಣ ಅದು ಕಾಕತಾಳೀಯವೆಂಬುದು ನಿರ್ವಿವಾದ. ಆದರೆ ಅದನ್ನೇ ನಂಬಿ ಕೆಲಸ ಆರಂಭಿಸುವವರು ಇನ್ನೂ ಇದ್ದಾರೆಂಬುದು ಆಶ್ಚರ್ಯದ ಸಂಗತಿ!

ದಿನಪತ್ರಿಕೆಯ ಜ್ಯೋತಿಷ್ಯಶಾಸ್ತ್ರ ಹಾಳಾಗಿ ಹೋಗಲಿ. ದೂರದರ್ಶನದಲ್ಲಂತೂ ಜ್ಯೋತಿಷ್ಯದ ಕಾರ್ಯಕ್ರಮವು ಮಕ್ಕಳ ಹಾಡುಗಾರಿಕೆ ಕಾರ್ಯಕ್ರಮಗಳಿಗೆ ಪ್ರತಿಸ್ಫರ್ಧಿಯಾಗಿಯೇ ನಿಂತಿದೆ. ಉದಯಾ ಟಿವಿ ಉದಯವಾದಾಗಿನಿಂದಲೂ ಮಾನ್ಯ ಜೈನರು ಹೇಳುವುದನ್ನು ನಮ್ಮ ಮನೆಯಲ್ಲಿಯೇ ಎಷ್ಟು ಸಲ ನೋಡಿದ್ದೇನೋ. ನಮ್ಮ ಮನೆಯವರಿಗಂತೂ ಯಾರೋ ಪತ್ರ ಬರೆದು ಅವರ ಮನೆ ಸೋರುವ ಸಮಸ್ಯೆಯನ್ನು ಜೈನರಿಗೆ ಹೇಳಿಕೊಂಡರೆ ಅದರ ಬಗ್ಗೆ ಯಾತರದ ಆಸಕ್ತಿಯೋ ನಾ ಕಾಣೆ. ಇನ್ನೊಂದು ವಾಹಿನಿಯಲ್ಲಿ ಸರಿಯಾಗಿ ಅಕಾರ ಹಕಾರಗಳನ್ನೇ ತಿಳಿಯದ ಪಂಡಿತರೊಬ್ಬರು ಮಾತೆತ್ತಿದರೆ ಹೆಸರು ಬದಲಿಸಿಕೊಳ್ಳಿ, ಮನೆ ಒಡೆದು ಮತ್ತೆ ಕಟ್ಟಿ ಎಂದು ಬುರುಡೆ ಹೊಡೆಯುತ್ತಿದ್ದರೆ ಅದನ್ನು ಕೇವಲ ನೋಡುವುದು ಮಾತ್ರವಲ್ಲದೆ ಏನೋ ನಮ್ಮ ಸಮಸ್ಯೆ ಬಗೆಹರೆಯುವುದೆಂದು ನಂಬಿಕೊಂಡು ಕರೆ ಮಾಡುವ ಮುಗ್ಧರೋ ಮೂಢರೋ ಆಗಿರುವ ಜನರ ಬಗ್ಗೆ ನನಗೆ ಅನುಕಂಪವಾಗುತ್ತೆ.

ಒಂದು ಚಾನೆಲ್ಲಿನ ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆ, ನಡೆದ ಸಂಭಾಷಣೆ ಹೀಗಿತ್ತು:

"ಗುರುಗಳೇ (ಯಾರಿಗೆ ಗುರುವೋ ಗೊತ್ತಿಲ್ಲ), ನಮ್ಮ ಮಗಳು ಬೇರೆ ಜಾತಿಯವನನ್ನು ಇಷ್ಟ ಪಟ್ಟಿದ್ದಾಳೆ. ನಮ್ಮ ಮನೆಯಲ್ಲಿ ಯಾರಿಗೂ ಒಪ್ಪಿಗೆ ಇಲ್ಲ. ಆದರೆ ಅವರು ಮದುವೆ ಮಾಡಿಕೊಳ್ಳುತ್ತೇವೆಂದು ಹಠ ಹೂಡಿದ್ದಾರೆ. ಮದುವೆ ಮಾಡ್ಬೋದಾ ನಾವು?"

"ಖಂಡಿತ ಮಾಡ್ಬೇಡಿ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ, 'ಸ್ವಧರ್ಮೇ ನಿಧನಮ್ ಶ್ರೇಯಃ, ಪರಧರ್ಮೋ ಭಯಾವಹಃ' ಅಂತ. ಹಾಗಾಗಿ ಬೇರೆ ಜಾತಿಯವರನ್ನು ಮದುವೆ ಮಾಡುವುದು ಸಂಪ್ರದಾಯವೂ ಅಲ್ಲ, ಅದು ಶ್ರೇಯಸ್ಸೂ ಅಲ್ಲ. ಜೊತೆಗೆ ನಿಮ್ಮ ಮಗಳಿಗೆ ಕುಜ ದೋಷವು ಅಧಿಕವಾಗಿರುವುದರಿಂದ ಅವಳಿಗೆ ಮದುವೆಯಾಗುವುದು ತುಂಬ ನಿಧಾನ. ಮದುವೆಯಾದರೂ ಡೈವರ್ಸ್ ಆಗುತ್ತೆ!"

ಮತ್ತೊಂದು ಕಡೆ ತಮ್ಮ ಕಷ್ಟವನ್ನು ಹೇಳಿಕೊಂಡ 'ಶಿಷ್ಯ'ರಿಗೆ 'ಗುರು'ಗಳೊಬ್ಬರು ಉಪದೇಶ ಮಾಡಿದ್ದು 'ದಿನವೂ ಶಂಕರಾಚಾರ್ಯರ ಸೌಂದರ್ಯ ಲಹರಿಯನ್ನು ಹೇಳಿಕೊಳ್ಳಿ. ನಿಮಗೆ ಕೆಲಸ ಸಿಗುತ್ತೆ. ಈಗ ನಿಮ್ಮ ಗ್ರಹಗತಿಗಳು ಚೆನ್ನಾಗಿಲ್ಲ.'

ಜ್ಯೋತಿಷ್ಯ ಶಾಸ್ತ್ರವು ಬಹಳ ಪ್ರಾಚೀನ ವಿದ್ಯೆ. ಬಹಳ ಕಷ್ಟವಾದ ವಿದ್ಯೆ. ಬಹಳ ಅಧ್ಯಯನ ಅಗತ್ಯವಿರುತ್ತೆ. ಟಿ.ವಿ.ಗಳಲ್ಲಿ ಬಿತ್ತರವಾಗುತ್ತಿರುವ ಜ್ಯೋತಿಷ್ಯ ಕಾರ್ಯಕ್ರಮಗಳಲ್ಲಿ ಬರುವ ಜ್ಯೋತಿಷಿಗಳ ಪಾಂಡಿತ್ಯದ ಬಗ್ಗೆ ನನ್ನ ತಕರಾರೇನೂ ಇಲ್ಲ. ಆದರೆ ಹೀಗೆ ತಪ್ಪುದಾರಿಗೆ ಎಳೆಯುವ ಜ್ಯೋತಿಷಿಗಳಿಗೆ ಗೊತ್ತಿರದ ಸಂಗತಿಯೇನಲ್ಲ. ಅವರಿಗೂ ಗೊತ್ತು, ಜ್ಯೋತಿಷ್ಯದ ಗ್ರಹಗಳು ಹೇಗೆ ಕೆಲಸ ಮಾಡುತ್ತವೆ, ಮತ್ತೆ ಕರ್ಮವನ್ನು ಕಳೆದುಕೊಳ್ಳದ ಹೊರೆತು ಯಾವ ಕಷ್ಟವಾಗಲೀ ಸುಖವಾಗಲೀ ನೀಗುವುದಿಲ್ಲವೆಂದು. ಪೂರ್ವಜನ್ಮದ ಕರ್ಮಗಳು, ವಾಸನಾಬಲಗಳು ಎಲ್ಲದರ ಬಗ್ಗೆ ಓದಿರುತ್ತಾರೆ. ದಶೆ-ಭುಕ್ತಿ ಲೆಕ್ಕಾಚಾರ ಹಾಕಿ ಇಂಥ ಕರ್ಮಗಳನ್ನು ಅನುಭವಿಸಲೇ ಬೇಕಾಗುತ್ತೆ ಎಂದೂ 'ಭವಿಷ್ಯವನ್ನು' ಊಹಿಸುತ್ತಾರೆ. ಆದರೆ ಮಧ್ಯೆ ಹಣಕ್ಕಾಗಿ ನಾಟಕವಾಡುತ್ತಾರೆ.

ಕುಜದೋಶದ ಬಗ್ಗೆ ಸುಳ್ಳು ಹೇಳುತ್ತಾರೆ. ಗುರು ಬಲಕ್ಕೂ ಮದುವೆಗೂ ಸಂಬಂಧ ಕಲ್ಪಿಸುತ್ತಾರೆ. ಪಂಚಾಂಗದಲ್ಲಿರುವ 'ಗಣ - ಗುಣ'ಗಳನ್ನು ಆಧಾರವನ್ನಾಗಿಟ್ಟುಕೊಂಡು ಮದುವೆ ಮುರಿಯುತ್ತಾರೆ. ಕಾಲ್ಗುಣ ಕೈಗುಣವೆಂಬ ಅಪ್ರಬುದ್ಧ ವಿಷಯಗಳನ್ನು ಸಾರುತ್ತಾರೆ. ಇವೆಲ್ಲವೂ ಅವೈಜ್ಞಾನಿಕವೆಂದು ನಾನು ಹೇಳುವುದಿಲ್ಲ. ಇವು ಜ್ಯೋತಿಷ್ಯವೂ ಸಹ ಅಲ್ಲ! ಇನ್ನು ವಿಜ್ಞಾನವೆಲ್ಲಿಂದ ಬಂತು!!

ನನಗೆ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಬಹಳ ಗೌರವವಿದೆ. ಸಂಪೂರ್ಣವಾಗಿಯಲ್ಲದಿದ್ದರೂ ಅನೇಕ ಸಲ ಸರಿಯಾದ ಉತ್ತರ ಕೊಟ್ಟಿರುವ ಜ್ಯೋತಿಷ್ಯದ ಬಗ್ಗೆ ವಿಸ್ಮಯ ಭಾವವಿದೆ. ಪುನರ್ಜನ್ಮ-ಕರ್ಮ ಇವುಗಳಲ್ಲಿ ಎಳ್ಳಷ್ಟೂ ನಂಬಿಕೆಯಿಲ್ಲದ ನನಗೆ intuition ಎಂಬುದರ ಬಗ್ಗೆ ಸಂಪೂರ್ಣ ನಂಬಿಕೆಯಿದೆ. ಅನೇಕ ಜನರು ನಮ್ಮ ಬದುಕಿನಲ್ಲಿ ಬಂದು ಹೋಗುತ್ತಾರೆ, ಕೆಲವರು ಹತ್ತಿರವಾಗುತ್ತಾರೆ, ಕೆಲವರು ಇದ್ದಕ್ಕಿದ್ದ ಹಾಗೆ ಮರೆಯಾಗುತ್ತಾರೆ, ಕೆಲವೊಮ್ಮೆ ಕುಣಿದು ಕುಪ್ಪಳಿಸುವ ಮನೋಭಾವನೆ, ಮತ್ತೆ ಕೆಲವೊಮ್ಮೆ ಕಾರಣವೇ ಇಲ್ಲದೆ ಖಿನ್ನತೆ, ಆರೋಗ್ಯವಾಗಿಯೇ ಇರುವ ವ್ಯಕ್ತಿ ಹಠಾತ್ತನೆ ರೋಗಗ್ರಸ್ತನಾಗುತ್ತಾನೆ, ಇದ್ದಕ್ಕಿದ್ದ ಹಾಗೇ ಸಾಯುತ್ತಾನೆ - ಇವೆಲ್ಲದರ ಬಗ್ಗೆ ನನಗೆ ಅಚ್ಚರಿಯಿದೆ, ಮತ್ತು ನನಗೆ ಇವೆಲ್ಲಕ್ಕೂ ಜ್ಯೋತಿಷ್ಯವು ತಕ್ಕ ಮಟ್ಟಿಗೆ convince ಆಗುವ ಉತ್ತರ ಕೊಟ್ಟಿದೆ. ಈ ಉತ್ತರಗಳನ್ನು ಕಂಡುಕೊಳ್ಳಲು ಅಗತ್ಯವಿರುವ ಶ್ರಮ, ಅದಕ್ಕೆ ಬೇಕಾದ ಗಣಿತಜ್ಞಾನವನ್ನು ತಿಳಿದುಕೊಳ್ಲಲು ಒಬ್ಬ ಜ್ಯೋತಿಷಿಯನ್ನೇ ಕೇಳಬೇಕು.ಇನ್ನೂ ಟೈಮ್ ಪಾಸ್ ಜ್ಯೋತಿಷ್ಯ - ಅಂದರೆ - ಪಾಕೆಟ್ ಕ್ಯಾಲೆಂಡರ್‍ನಲ್ಲಿ ಬರುವುದು (ದಿನಭವಿಷ್ಯದ್ದೇ longer format), ಎಸ್ಸೆಮ್ಮೆಸ್ಸುಗಳಲ್ಲಿ ಮೂರು ರೂಪಾಯಿ ದರೋಡೆ ಮಾಡಿ ಮೊಬೈಲಿನ ಸ್ಥಳವನ್ನು ಕಸಿದುಕೊಳ್ಳುವುದು, exhibition-ಗಳಲ್ಲಿ ಭವಿಷ್ಯವಾಣಿ ನುಡಿಯುವ ರೋಬೋಟು ಜ್ಯೋತಿಷ್ಯ, ಮನೆಯ ಮುಂದೆಯೇ ಬಂದು ನಮ್ಮ ಭವಿಷ್ಯವನ್ನು ತಿಳಿದುಕೊಳ್ಳುವಂತೆ ನಮಗೇ ಹೇಳುವ ಗಿಣಿ ಹಿಡಿದುಕೊಂಡಿರುವ ಗಿಡುಗನ ಜ್ಯೋತಿಷ್ಯ, ಕಲಾಸಿಪಾಳ್ಯದ ಕೊಚ್ಚೆ ಕೊಂಪೆಯಲ್ಲಿಯೂ 'ಕೈ ಮೇಲೆ ಕಾಶಿ' ಆಡುವವನಂತೆ ಕವಡೆ ಹಾಕಿ ಭವಿಷ್ಯ ಹೇಳುವುದು, ಬರವಣಿಗೆಯನ್ನು ಓದಿ prediction ಕೊಡುವ ಬರವಣಿಗೆ ತಜ್ಞನ ಭವಿಷ್ಯವಾಣಿ - ಒಂದೇ ಎರಡೇ!! ಇವೆಲ್ಲವನ್ನೂ ಮನರಂಜನೆಯೆಂದು ಪರಿಗಣಿಸಿ ನಕ್ಕು ಸುಮ್ಮನಾಗಬಹುದು. ಟಿ.ವಿ.ಯಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಮನರಂಜನಾ ಕಾರ್ಯಕ್ರಮಗಳು ಮಾತ್ರ ಮಕ್ಕಳ ಹಾಡುಗಾರಿಕೆ ಕಾರ್ಯಕ್ರಮಕ್ಕಿಂತ ಹೋಪ್‍ಲೆಸ್ಸು. ಅಕ್ಷಮ್ಯ. ಶೈಕ್ಷಣಿಕ ಕಾರ್ಯಕ್ರಮಗಳು, ಶಾಸ್ತ್ರೀಯ ಸಂಗೀತ, ಪ್ರವಾಸ, ರಸಪ್ರಶ್ನೆ, ಹಳೆಯ ಒಳ್ಳೆಯ ಚಲನಚಿತ್ರಗಳು, ಪರಿಸರದ ಕಾರ್ಯಕ್ರಮಗಳು - ಇವು ಯಾವುವೂ ತೋಚುವುದೇ ಇಲ್ಲ. ಮಕ್ಕಳ ಹಾಡುಗಾರಿಕೆ, ಸುಡುಗಾಡು ಧಾರಾವಾಹಿಗಳು, ಜ್ಯೋತಿಷ್ಯ ಕಾರ್ಯಕ್ರಮಗಳನ್ನು ಬಿಟ್ಟರೆ ಖಾಸಗಿ ಚಾನೆಲ್ಲುಗಳಲ್ಲಿ ಅಷ್ಟಾಗಿ ಬೇರೇನೂ ಬರುತ್ತಿಲ್ಲ. ಪಾಪ, ಚಂದನ ಹಾಗಲ್ಲ!

ಈ ಲೇಖನಕ್ಕಾಗಿ ನಾನು ಒಂಭತ್ತು ರೂಪಾಯಿ ಖರ್ಚು ಮಾಡಿದ್ದೇನೆ. ಇದುವರೆಗೂ ನಾನು ಕೆಲಸ ಮಾಡಿರುವ ಅತ್ಯಂತ ದುಬಾರಿ ಬ್ಲಾಗ್ ಲೇಖನವಿದು.

past arun ಎಂದು 51515 ಗೆ ಎಸ್ಸೆಮ್ಮೆಸ್ಸು ಕಳುಹಿಸಿದ್ದಕ್ಕೆ ಈ ಉತ್ತರದ ಸಂದೇಶ ಬಂದಿತು.

Dear Arun, ..........., in your previous lives you were born twice as humans and twice as animals. In your human phase, you were born as a person who had great interest in science and numbers. And in your animal phase, you were born once as a kangaroo and the second time as a penguin. There is a long list of qualities that can still be seen in you.

ನನ್ನಲ್ಲಿ ಕಾಂಗರೂ, ಪೆಂಗ್ವಿನ್ನಿನ ಗುಣಲಕ್ಷಣಗಳು ಏನಿವೆಯೋ ದೇವರಿಗೇ ಗೊತ್ತು!

ನನ್ನ ಹೆಂಡತಿಯ ಹೆಸರನ್ನು ಹಾಕಿ ಕಳುಹಿಸಿದಾಗ ಬೇರೆಯದೇ ಹೇಳಿದ. ಆದರೆ, ಅಮ್ಮನ ಹೆಸರು ಹಾಕಿ ಕಳುಹಿಸಿದಾಗ ನನ್ನ past life ಯಥಾವತ್ ಕೊಟ್ಟುಬಿಟ್ಟ. ಇರಬಹುದೇನೋ, ನಾನೂ ಕಾಂಗರೂ ಆಗಿದ್ದೆ, ಅಮ್ಮನೂ ಆಗಿದ್ದರೇನೋ. ಕಾಂಗರೂ ಹೊಟ್ಟೆಯಲ್ಲಿ ಕಾಂಗರೂ ಹುಟ್ಟಿದ ಹಾಗೆ!!

ಜ್ಯೋತಿಷಿಗಳ ಬಳಿ ಹೋಗುವ ಮುನ್ನ ನೆನಪಿಡಬೇಕಾದ ವಿಷಯಗಳು ಇವು ಎಂದು ನಾನು ಭಾವಿಸುತ್ತೇನೆ:

೧. ನಡೆಯಬೇಕಾಗಿರುವುದು ನಡೆದೇ ತೀರುತ್ತೆ. ಕುಕ್ಕೆಸುಬ್ರಹ್ಮಣ್ಯಕ್ಕೆ ಹೋಗಿ ಸಂಸ್ಕಾರ ಮಾಡಿಬಿಟ್ಟರೆ ನಡೆಯಬೇಕಾದ್ದು ತಪ್ಪುವುದಿಲ್ಲ. ಪೂಜೆ ಪುನಸ್ಕಾರಗಳು ಅನೇಕರಿಗೆ, ಅದರಲ್ಲೂ ಆಸ್ತಿಕರಿಗೆ ಮನಸ್ಸಿಗೆ ಸಮಾಧಾನ ಕೊಡಬಹುದು. ಆದರೆ ಎಚ್ಚರಿಕೆಯಿಂದಿರಬೇಕು, ಅವು ಮಾರಕವೂ ಆದೀತು. 'ಎಲ್ಲ ಪೂಜೆ ಮಾಡಿದರೂ ನನಗೆ ಒಳ್ಳೇದಾಗಲಿಲ್ಲ' ಎಂಬ ಭಾವನೆ ಬಂದು ದೇವರ ಬಗ್ಗೆಯೇ ತಿರಸ್ಕಾರ ಭಾವನೆ ಬರಬಹುದು.

೨. ರಾಹು - ಕೇತುಗಳೆಂಬ ಗ್ರಹಗಳಿಲ್ಲ. ಖಗೋಳತಜ್ಞರ ಗ್ರಹಗಳೇ ಬೇರೆ, ಜ್ಯೋತಿಷ್ಯಶಾಸ್ತ್ರದವರ ಗ್ರಹಗಳೇ ಬೇರೆ. ಇಲ್ಲಿ 'ಗ್ರಹ'ವೆಂಬುದು ಲೆಕ್ಕಾಚಾರದ ವಸ್ತುವಷ್ಟೆ. ಈ ಗ್ರಹಗಳಿಗೆ ಮಿತ್ರರೂ ಶತ್ರುಗಳೂ ಇರುತ್ತಾರೆ. ಮನುಷ್ಯನ ಬದುಕಿನ ಮೇಲೆ ಪರಿಣಾಮ ಬೀರುತ್ತವೆಂಬ ನಂಬಿಕೆಯು ಜ್ಯೋತಿಷ್ಯ ಶಾಸ್ತ್ರದ ಬುನಾದಿ.

೩. 'ನನ್ನ ಸಾವು ಯಾವಾಗ?' ಎಂಬ ಪ್ರಶ್ನೆಗೆ ಜ್ಯೋತಿಷ್ಯವು ಉತ್ತರ ಕೊಡಲು ಕಷ್ಟಸಾಧ್ಯ. ಈ ಪ್ರಶ್ನೆಯನ್ನು ಒಬ್ಬ ಜ್ಯೋತಿಷಿಯನ್ನು ಕೇಳುವುದು ಅನುಚಿತ.

೪. ಹೋಮ ಹವನಗಳಿಂದಾಗಲೀ, ಹೆಸರು ಬದಲಿಸುವುದರಿಂದಾಗಲೀ, ಮಂತ್ರಪಠಣದಿಂದಾಗಲೀ, ನವಗ್ರಹ ಸುತ್ತುವುದರಿಂದಾಗಲೀ, ಪೂಜೆ ಮಾಡುವುದರಿಂದಲೇ ಯಶಸ್ವಿ ಬರುವುದಾದರೆ ಶ್ರಮಕ್ಕೆ, ಶ್ರದ್ಧೆಗೆ ಬದುಕಿನಲ್ಲಿ ಸ್ಥಳವೆಲ್ಲಿ?

ಸ್ವಾಮಿ ವಿವೇಕಾನಂದರ ಈ ಮಾತುಗಳು ಅದೆಷ್ಟು ಅರ್ಥಪೂರ್ಣ! ಅದೆಷ್ಟು ಶುಭ ಪ್ರಚೋದನೀಯ!! "I am the maker of my destiny!"

ವಿಧಿವಾದವನ್ನೊಪ್ಪುವವರು ಈ ಮಾತುಗಳನ್ನು ಒಪ್ಪಲಾರರು. ನಾನೇ ಮೇಲೆ ಹೇಳಿರುವಂತೆ 'ನಡೆಯಬೇಕಾಗಿರುವುದು ನಡೆದೇ ತೀರುತ್ತೆ!' ಎಂಬ ಮಾತು ವಿವೇಕರ ಮಾತಿಗೆ ವಿರೋಧಾಭಾಸದಂತಿರುವಂತೆ ಮೇಲ್ನೋಟಕ್ಕೆ ತೋರುತ್ತೆ. ಆದರೆ ನಡೆಸಬೇಕಾಗಿರುವುದು ನಾವೇ. 'ಎಲ್ಲವೂ ದೈವೇಚ್ಛೆಯೆಂದು ಕೈ ಕಟ್ಟಿ ಕುಳಿತಿರುವುದು ಮೌಢ್ಯವಷ್ಟೆ!

-ಅ
04.06.2009
9.30PM

Tuesday, June 2, 2009

ಶಾಲೆ

ಶಾಲೆ ಪುನರಾರಂಭವಾಯಿತು. ಈ ವರ್ಷವು ಕಳೆದ ವರ್ಷಕ್ಕಿಂತ ಹೇಗೆ ಭಿನ್ನವಾಗಿಸಬಹುದೆಂಬ, ಹೇಗೆ ಉತ್ತಮವಾಗಿಸಬಹುದೆಂಬ ಚಿಂತನಾಕಾರ್ಯವು ಈ ವರ್ಷವೂ ಕಳೆಯುವುದರೊಳಗೆ ಮುಗಿಯುವುದೆಂದುಕೊಂಡಿದ್ದೇನೆ.

ನನ್ನ ಪ್ರೀತಿಯ ಮಕ್ಕಳಿಗೆ ಪುನಃ ಸ್ವಾಗತ.. ಅವರಿಗೆ ಮತ್ತು ನನಗೆ "all the best!"

-ಅ
03.06.2009
11.15PM